ಪಟ್ಟದರಸಿ ಪೃಥ್ವೀಮತಿಹೊರಗಾದ | ಹೆಟ್ಟುಗೆಯರು ಹರುಷದೊಳು ||
ಕಟ್ಟೊಲವಿಂದಾರತಿಯೆತ್ತುತಿರೆಕಂಡು | ಪುಟ್ಟಿತೆಣಿಕೆ ಭೂವರೆಗೆ || ೧೦೧ ||

ಆ ವೇಳೆಯೊಳಾಸುಕುಮಾರನ ದಾದಿ | ಭೂವರನನೆಡೆಗೆಯ್ತಂದು ||
ತಿವಿದ ಕಣ್ಗುಳುದಕದಿನಾವಾರ್ತೆಯ | ನೋವದೆ ಪೇಳ್ದಳಿಂತೆಂದು || ೧೦೨ ||

ದೇವ ಚಿತ್ತೈಸು ಲೆಪ್ಪದ ಸುಕುಮಾರನ | ದೇವಿ ಹತಿಸಿ ಮಂತ್ರಿಯೊಡನೆ ||
ತೀವಿದ ಕಳವಿನಿಂದವೆ ಜಾರೆ ಪೋದಳು | ಭಾವಿಸದುತ್ತಮಿಕೆಯನು || ೧೦೩ ||

ಎಂದು ನುಡಿದು ತಲೆವೊಂದೆಸೆಯಾಗಿ ಮುಂ | ಡೊಂದೆಸೆಯಾಗಿ ಬಿಳ್ದಿರ್ದಾ ||
ಕಂದನ ಪೋಲ್ವೆಯ ಪುತ್ಥಳಿಯನು ತೋರ | ಲಂದು ವಿಹ್ವಳಚಿತ್ತನಾಗಿ || ೧೦೪ ||

ಹಾಹಾಕ್ರಂದನಗೆಯ್ದು ಮೂರ್ಚ್ಛೆಯನೆಯ್ದ | ಲಾಹದದೊಳು ಮಂತ್ರಿಗಳಾ ||
ಯ್ಯಾಹಮೆಲ್ಲವು ಬಂದು ಶಿಶಿರೋಪಚಾರ | ಮೋಹಸಿರಿಯೆ ಮಾಡಿದರು || ೧೦೫ ||

ನರನಾಥ ನಿನ್ನ ನಂದನನಲ್ಲ ಲೆಪ್ಪದ | ಪರಿಜದು ತಿಳಿದು ನೋಡೆಂದು ||
ವರೆದ ಮಂತ್ರಿಗಳ ಮಾತನು ಕೇಳಿ ಪಿರಿದ | ಚ್ಚರಿವಡುತಿಂತೆಣಿಸಿದನು || ೧೦೬ ||

ಆರೈಯ್ಯದರಿವುಳ್ಳವರು ಭಾವಿಸಲು ಸಂ | ಸಾರಕೆ ಮಾನವ ಜನ್ಮ ||
ಸಾರಮಂತಲ್ಲಿ ಸದವರ್ನಮಂತದರೊಳು | ಸಾರ ಚತುಷ್ಫಲದೇಳಗ್ಗೆ || ೧೦೭ ||

ರಾಗದೋಷೋಪೇತರಾಜಧರ್ಮವು ವೀತ | ರಾಗಧರ್ಮಕೆ ವಿಪರೀತಾ ||
ಆಗಲಂದಾರಾಜಧರ್ಮದಿಂದಲ್ಲ | ದಾಗುವುದೆ ಸದ್ಧರ್ಮ || ೧೦೮ ||

ಅರ್ಥರೂಪಾರ್ಜನೆಯೆಂಬುದು ಲೋಭ | ಮರ್ತಿಕೆಯಂತದರಿಂದಾ ||
ಅರ್ತಿ ಮಾಡದೆ ಬಿಡಬೇಕು ಪಾರ್ತ್ಥಿವರು ನಿ | ರರ್ಥವೆಂಬರ್ತಸಾಧನವ || ೧೦೯ ||

ಕಮಸಾಧನಕೆ ಕಾರಣಮಾದ ನಿಜ | ಕಾಮಿನಿಗೀಯಿಷ್ಟಬುದ್ಧಿ ||
ಕಾಮಿತಮಾಯ್ತು ಭಾವಕರಿಗೆ ಭಾವಿಸಿ | ಕಾಮದಿನುಂಟೆ ಸದ್ಧರ್ಮ || ೧೧೦ ||

ಸಾಕ್ಷಾತಗ್ರನಂದನಗೆ ಪಟ್ಟವ ಕಟ್ಟಿ | ದೀಕ್ಷೆಯನಿರದವಧರಿಸಿ ||
ಮೋಕ್ಷವನೈದಲ್ಬೇಕದರಿಂದ ಪ್ರ | ತ್ಯಕ್ಷಮಾಸುತನಗಲಿದನು || ೧೧೧ ||

ಅದರಿಂದರ್ಮಾರ್ಥಕಾಮಮೋಕ್ಷಂಗಳೊಂ | ದೊಂದಾಗದಂತದರಿಂದಾ ||
ಮದಯುತಮಪ್ಪಾರಾಜ್ಯವೇಕೆಂದಾ | ವಿದಿತಗುಣಾಲಂಕೃತನು || ೧೧೨ ||

ಭಾವಿಸಿ ಬರಿಸಿ ಮಂತ್ರಿಗಳನಿಂತೆಂದ | ನೀ ವಸುಧಾಮಂಡಲವನು ||
ಯಿವುದೆನ್ನಗ್ರಜನಣುಗರ ರುಜುವಿಗೆಂದಾ | ವೂರ್ವಿಯ | ವಲ್ಲಭನು || ೧೧೩ ||

ವರಬಂಧುಜನ ಪರಿಜನಮೆಲ್ಲ | ಪಿರಿದು ಶೋಕಂಗೆಯ್ವುತಿರಲು ||
ಪುರವರವನು ಪೊರಮಟ್ಟು ತಾನೆಯಪ್ಪ | ಪರಿಯನಾರರಿವರೆಂದೆನುತಾ || ೧೧೪ ||

ದಾರಿಯೊಳಗೆ ನಡೆವುದನು ಬಿಟ್ಟಾನೃಪ | ಘೋರಾರಣ್ಯಗಿರಿಯೊಳು ||
ಕ್ರೂರಮೃಗಗಳ ಮಧ್ಯದೊಳಾಸುಕು | ಮಾರನನೀಕ್ಷಿಸುವಾಸೆಯೊಳು || ೧೧೫ ||

ಮಗನ ಮೊಗವನೀಕ್ಷಿಪನ್ನೆಗಮೀಕ್ರೂರ | ಮೃಗರಿಪುನಿಕರದ ಬಾಧೆ ||
ನೆಗಳಲಂತದನು ಸೈರಿಪೆನೆಂದು ಬಗೆದಾ | ಸುಗುಣನಿಧಾನನೆಯ್ದಿದನು || ೧೧೬ ||

ಮುನ್ನಿನ ಜನ್ಮದೊಳಾರ ಮಕ್ಕಳನಾ | ನನ್ಯಾಯದಿಂದಗಲಿಸಿದಾ ||
ಉನ್ನತಿಕೆಯ ಪಾಪದ ಫಲವೆನ್ನೀ | ಬೆನ್ನ ಬಿಡದೆ ಬಂದುದಲ್ಲಾ || ೧೧೭ ||

ಎಂದತಿದುಃಕೋಪೇತಮಾನಸನಾಗಿ | ಅಂದಾಭೂಮಿಪಾಲಕನು ||
ಯೆಂದಿಗೆ ಮೊಗಕಾಣ್ಬೆಯನ್ನಣುಗಿನ | ಕಂದನನೆನುತ ಕಾಡಿನೊಳು || ೧೧೮ ||

ನಡೆತಪ್ಪವರ ಕಂಡೆಲೆ ಬಟ್ಟೆಗರಿರಾ | ಪೊಡೆಯಲರನಪುತ್ರಗೆಣೆಯಾ ||
ಕಡುನೀರನೋರ್ವಬಾಲಕನ ಕಂಡಿರೆಯೆನು | ತಡಿಗಡಿಗೊರೆದು ಕೇಳುವನು || ೧೧೯ ||

ಶುಂಡಾಲಶುಂಡಾದಂಡೋಪಮಬಾಹು | ದಂಡನನತಿಬಲಯುತನಾ ||
ಕಂಡುದಿಲ್ಲವೆ ಪೇಳಿಮೆಂದೆನುತಾದಾರಿ | ಗೊಂಡು ಬಪ್ಪವರ ಕೇಳುವನು || ೧೨೦ ||

ಅಂಗದಿಯಾನೆಯಂತೆಸೆವ ಕುಮಾರೋ | ತ್ತುಂಗನೆಲ್ಲಿಗೆ ಪೋದನೆಂದು ||
ಮುಂಗಡೆಯೊಳು ನಡೆತಪ್ಪವೇತಂಡದ | ವಂಗಡವನು ಕೇಳುವನು || ೧೨೧ ||

ಸಿಂಗದ ಸುಳಿನಡುವನ ಸಿರಿಮುಖದ ಬೆ | ಡಂಗುವಡೆದ ಕುವರನನು ||
ಸಿಂಗದಂಗಡವೆ ಪೇಳಿಮೆಂದು ಮ | ನಂಗೊಂಡು ಕೇಳುತೆಯ್ದಿದನು || ೧೨೨ ||

ಈ ತೆರದಿ ದೇಶದೇಶವ ತೊಳಲಿ ವಿ | ಖ್ಯಾತವಿಶಾಲಾಖ್ಯಪುರಕೆ ||
ಈ ತನುಜನ ಮೇಲಣಾತುರದಿಂದ ವಿ | ನೂತನಿರದೆ ಬಂದನಾಗಾ || ೧೨೩ ||

ಆ ನಗರಿಯ ಮುಂಗಡೆಯೊಳು ಪರಿವ ಚಂ | ಪಾನದಿ ಅತಿರಂಜಿಸಿದುದು ||
ಭೂನಾರಿಯ ಮೆಯ್ಯೊಳೊಲಿದು ಲಾವಂಣ್ಯಾಂಬು | ಬಾನಲ್ಪರಿದುದೆಂಬಂತೆ || ೧೨೪ ||

ಗಗನಮಾರ್ಗದೊಳಾಧಾರವಡೆಯದಾ | ಜಗತೀತಳಕೆ ಜಗುಳ್ದು ||
ಸೊಗಯಿಸಿ ಪರಿವ ದೇವಾಪಗೆಯೆನೆ ಕಣ್ಬ | ಗೆಗೆ ಬಂದುದು ಚಂಪಾನದಿಯು || ೧೨೫ ||

ತೇರ ನೊಗಕೆ ಹೂಡುವ ತೇಜಿ ರಾಜಕು | ಮಾರ ತುರಗ ನೃಪವರರಾ
ವಾರುವನಾರಾವುತಗುದುರೆಗಳಾ | ನೀರುಣಲೆಂದೆಯ್ದಿದವು || ೧೨೬ ||

ಕಟ್ಟಿದಮೊಗದ ಮಾಸರಣಿ ಬೆಂಗೊಳಗಳ | ವಟ್ಟು ಪಟ್ಟೆಯ ಜೋಲಿಯೆಸೆಯೆ ||
ಮೆಟ್ಟಿಕೊಳುತ ರಾಜವಾಹನನತಿ ತಟ್ಟೆ | ತಟ್ಟೆಯೊಳೆಯ್ತಂದವಾಗಾ || ೧೨೭ ||

ಖುರವಿಟ್ಟು ಕೆರೆಯ ಮತ್ತಾಹುಡಿಮಳಲೊಳು | ಪೊರಳಿ ನೀರ್ಗುಟ್ಟು ಕಿಡಲೊಡನೆ ||
ಹರುಷದಿಂದಾನೀರ್ಗುಡಿವ ಜಾತ್ಯಶ್ವಗ | ಳಿರವಾ ತೊರೆಯೊಳೊಪ್ಪಿದವು || ೧೨೮ ||

ನೀರುಂಡಾನೀರ್ನ್ನೆಲೆಯಿಂದಿರದೇ | ಳ್ದರಾಜವಾಹನಮೊಪ್ಪಿದವು ||
ವಾರುನಿಧಿಯೊಳೊಗೆದೆಳ್ವವುಚ್ಛೈಶ್ರವ | ದೊರಗೆಯಂಬಂದದೊಳು || ೧೨೯ ||

ಅಂದನುಮಿಷಪತಿಯಾವಜ್ರಾಯುಧ | ದಿಂಡಿಡುವಾಸಮಯದೊಳು ||
ಬಂದುದಧಿಮರೆಹೊಕ್ಕದ್ರಿಯನೆ ಬಗೆ | ದಂದು ನೀರ್ವೊಕ್ಕವಾನೆಗಳು || ೧೩೦ ||

ನೀರೊಳಸುಳಿ ನಿಡುಗೈಯ್ಯನುದ್ದಕ್ಕೆತ್ತಿ | ದಾರದನೀರುಪುಷ್ಕರಮಾ ||
ಚಾರುತರಂಬಡೆದಾಬಿಸಲತೆಯ | ಸರೋರುಹಕುಟ್ಮಳಮಾಯ್ತು || ೧೩೧ ||

ಜಲದೇವತೆಯರಂದದಿ ಜಲನಾಡುವ | ಜಲರುಹಸದೃಶಾಂಬಕದಾ ||
ಜಲಜಾತಾಸ್ಯದ ಜಲರುಹಚರಣದ | ಜಲಜಗಂಧಿಯರಿರ್ದರಲ್ಲಿ || ೧೩೨ ||

ಉಟ್ಟುದುಕೊಟ್ಟುದೆಲ್ಲವನಾತಡಿಯೊಳ | ಗಿಟ್ಟು ನೀರ್ನ್ನೆಲೆಯನು ಹೊಕ್ಕು ||
ನೆಟ್ಟನೆ ನೀರಾಡುವ ನೃಪಸುತರಳ | ವಟ್ಟು ರಂಜಿಸುತಿರ್ದರಲ್ಲಿ || ೧೩೩ ||

ಭರದಿ ಕುಮಾರ್ಗವಿಡಿದ ಪಪಫಲವ ನಾ | ಗರನಿಧೀಯೊಳು ಸ್ವಪನವನು ||
ನಿರುತದಿನೆಸಗಿ ನೀಗುವೆನೆಂದಾ ನದಿ | ಪರಿದತ್ತಾದೆಸೆಗಾಗಿ || ೧೩೪ ||

ಆ ನದಿಯೊಂದು ವಿಲಾಸಮನೀಕ್ಷಿಸು | ತಾ ನರನಾಥಾಚಂದ್ರಮನು ||
ತಾನಂದು ನಡೆದ ಪಥಾಶ್ರಮವನು | ಮತ್ತಾ ನದಿಯೊಳು ನೀಗಲೆಂದು || ೧೩೫ ||

ಪೊದೆದ ದುಕೂಲಾಂಬರವನು ತೆಗೆದಾ | ನದಿಯ ತಡಿಯೊಳಿಟ್ಟು ಬಳಿಕಾ ||
ಮದಕರಿ ನೀರಾಟಮನೊಸೆದಾಡುವಂ | ದದೊಳು ಮಜ್ಜನ ಮಾಡುತಿರಲು || ೧೩೬ ||

ಅಲ್ಲಿಗೆ ಸಖುಯರು ಸಹಿತ ಪೃಥ್ವೀಮತಿ | ಪೊಲ್ಲಮಾನಸೆ ಮಿಯ್ಯಲೆಂದು ||
ಉಲ್ಲಸದಿಂ ನಡೆತಂದು ಕಂಡಳು ಭೂ | ವಲ್ಲಭನಾಪ್ರಭಂಜನನಾ || ೧೩೭ ||

ಸಿಂಗವ ಕಂಡ ಸಿಂಧುರದಂತೆ ಬೆದರಿಬೆ | ಡಂಗಳಿದವನ ಬರವಿಗೆ ||
ಅಂಗನೆಯತಿ ವಿಸ್ಮಯ ಬಟ್ಟು ಸಖಿಯರ | ವಂಗಡದೊಳಗಡೆನಿಂದು || ೧೩೮ ||

ಮುಸುಕಿಟ್ಟೊಂದು ಮರದ ಮರೆಗಡೆ ನಿಂದು | ಹಸಗೆಟ್ಟಿತೆನ್ನೀಕಾರ್ಯ ||
ವಸವಲ್ಲ ಕೆಟ್ಟೆನೆಂದಪೆನೆಂದಾಪಾಣ್ಬೆ ಬಿ | ಸುಸುಯ್ವುತೊರ್ವಸಖಿಯನು || ೧೩೯ ||

ಕರೆದು ಕೂರಲಕಟ್ಟಾಣಿಯ ಮುತ್ತಿನ | ಸರಮನವಳ ಕೈಯ್ಯಕೊಟ್ಟು ||
ಅರಮಗನಲ್ಲಿರಿಸಿದ ದಿವ್ಯವಸನದ | ಹೊರೆಯೊಳಗವಳಿರಿಸಿದಳು || ೧೪೦ ||

ಬಳಿಕೊಂದಿನಿಸು ಹೊತ್ತಿನ ಮೇಲೆ ನಾಮೀ | ಹೊಳೆಯೊಳು ಮೀದಾಡಲೆಂದು ||
ಕಳೆದಿರಿಸಿದ ಕಂಠಿಕೆಯ ಕಳ್ದರೆಂದು | ಅಳಲುತ ಮೊರೆಯಿಡಿಸಿದಳು || ೧೪೧ ||

ಅದ ನರನಾಥಪಾಲಕರು ಕೇಳುತ ಬಂ | ದೊದಗಿಯಿದೇನಿದೇನಿದರಾ ||
ಹದನಾವುದಾವ ತೆರದಿ ಹೊಯಿತೆಂದು | ಕದುಬಿ ಕದುಬಿ ಕೇಳುತವೆ || ೧೪೨ ||

ಹಿಡಿಹಿಡಿಯಿಲ್ಲಿಂದಾರುಹೋಗದ ಮುನ್ನ | ತಡೆತಡೆ ಮೈ ಕೈಗಳನು ||
ಬಿಡದೆ ಸೋಧಿಸು ಸೋಧಿಸೆಂಬಾ ಕಲಕಲ | ವಡಿಗಡಿಗಾದುದು ಬೇಗಾ || ೧೪೩ ||

ಬಳಿಕ ಹೊಳೆಯೊಳು ಮೀವವರೊಳಗೊಬ್ಬ | ರುಳಿಯದೆ ಕೈ ಮೈಗಳನು ||
ತಳುಮಾಡದೆ ಶೋಧಿಸಿಕೊಂಡು ಬರುತಲ್ಲಿ | ಜಲನಾಡುವ ಪ್ರಭಂಜನನಾ || ೧೪೪ ||

ಇರಿಸಿದ ದಿವ್ಯಾಂಬರದ ಹೊರೆಯೊಳಿರ್ದಾ | ವರಮಣಿಮಯಹಾರವನು ||
ಭರದಿಂ ತೆಗೆದುಕೊಂಡತಿಕೋಪದಿಂದೆ | ಲ್ಲರು ನೆರೆದಾತನ ಪಿಡಿತಂದು || ೧೪೫ ||

ಪೆಡಕಟ್ಟಕಟ್ಟಿ ಮಂಡೆಯ ಕೆದರಿಕೊಂಡು | ಕಡಿವೆವು ತಲೆಯನೆಂದನುತಾ ||
ಜಡಿವುತ ಖಡ್ಗವನಾಸ್ಥಾನಪಾಲಕ | ಗಡಣವೆಲ್ಲವು ಸುತ್ತಿಮುತ್ತಿ || ೧೪೬ ||

ಬರುತಿರೆ ಬಲ್ಲಾಳು ಘಾಯವ ಹಡೆವಂ | ತರಮಗನಾತನಗಾದಾ ||
ಉರುತರಮಪ್ಪ ಕಿಲ್ಬಿಸದೊಂದೊಡವಿಗೆ | ಅರಿದು ವಿಸ್ಮಯಚಿತ್ತನಾಗಿ || ೧೪೭ ||

ವರಸುತವದನಾವಲೋಕನಪರಿಯಂತ | ರುರುತರಮಪ್ಪುಪಸರ್ಗಾ ||
ಬರಲಂದದನು ಸೈರಿಪೆನೆಂದು ಭಾಷೆಯ | ಪರಿದಾಗಿ ಕೈಕೊಂಡನಾಗಾ || ೧೪೮ ||

ಆಡಿನ ಹಿಂಡಾನೆಯ ಹಿಡಿವಂತಾ | ರೂಢಿವಡೆದ ಬಲಯುತನಾ ||
ನಾಡುಗರೆಯ್ದಿ ಹಿಡಿಯೆ ಸೈರಣೆಯನು | ಮಾಡಿ ಮತ್ತಿಂತೆಂದನಾಗಾ || ೧೪೯ ||

ಪ್ರಾರಬ್ಧಪಾಪಕರ್ಮ್ಮದ ಫಲದೇಳ್ಗೆಯ | ನಾರುಮೀರುವರಾರದನು ||
ಬಾರಿಪ ಬಲ್ಲಿದರುಂಟೆಯೆಂದೆನುತಾ | ಧೀರಲಲಿತನೆಣಿಸುತವೆ || ೧೫೦ ||

ತಲ್ಲಣಿಸದೆ ತನ್ನಯ ಚಿತ್ತದೊಳು ಭೂ | ವಲ್ಲಭನೆಯ್ತೆರುತಿರಲು ||
ಅಲ್ಲಿ ಕೆಲಂಬರಾತನ ರೀತಿಯಾತನ | ಸಲ್ಲಲಿತಾಕಾರವನು || ೧೫೧ ||

ಕಂಡೀತಗೇಕೀದುಃಕೃತ್ಯವು ದೊರೆ | ಕೊಂಡುದು ವಿಸ್ಮಯವೆನುತಾ ||
ಮಂಡಳಿಗೊಂಡು ಮರುಗುತಿರಲಾತನ | ಕೊಂಡೊಯಿವಾಸಮಯದೊಳು || ೧೫೨ ||

ಇಳೆಯಾಧೀಶ ಪ್ರಭಂಜನನೃವರ | ತಿಲಕನೆಡೆಗೆ ಮುನ್ನಲೆಯ್ದಿ ||
ಬಳಿಕವನಿಂ ಬಹುತ್ಯಾಗವ ಪಡೆದಾ | ಕಳಶನೆಂಬೋರ್ವಕ್ಕರಿಗನು || ೧೫೩ ||

ಕಟ್ಟದಿರೊಳುಕಂಡು ಕಡು ಪಿರಿದಚ್ಚರಿ | ಪಟ್ಟಾನೃಪಕುಂಜರನು ||
ಕಟ್ಟಿಗೆ ಕೈಗೊಟ್ಟಾಕರ್ಮದಿರವನು | ಭಟ್ಟನವನ ಬಳಿಗೆಯ್ದಿ || ೧೫೪ ||

ತಲೆಯನು ತೂಗಿ ತನ್ನಯ ಮೂಗಿನ ಮೇಲೆ ಬೆ | ರಳಿಟ್ಟು ಕೊಲಬೇಡವಿವನಾ ||
ತಲೆಯನಿನಿಸುಹುಯ್ಯದೆ ತಡಮಾ | ಡಿಳೆಯಾಧಿಪ ಮೆಚ್ಚುವನು || ೧೫೫ ||

ಎನ್ನ ನುಡಿಯ ಮೀರಿ ತಲೆವೊಯ್ದಿರಾದೊಡೆ | ಬಿನ್ನವಪ್ಪುದು ನಿಮಗಿಂದು ||
ಸನ್ನುತನಿವನಿಂ ನಿಮ್ಮೀ ಸಂತತಿ | ಗುನ್ನತವಹ ಸಿರಿಯಹುದು || ೧೫೬ ||

ಬಡವನಲ್ಲಿವನು ಬಲ್ಲಿದನಿವನಿಗೆ ಬಂ | ದೆಡರು ಪೂರ್ವೋಪಾರ್ಜಿತವು ||
ಪಿಡಿದು ವಿಚಾರಿಸಲಿವನ ತಲೆಯ ಹರಿ | ಗಡಿವೆನೆಂಬುದನೊಂದಿನಿಸು || ೧೫೭ ||

ಧರಣೀಶ್ವರನೆಡೆಗೆಯ್ದಿ ಮಗುಳ್ವನ್ನ ತಡೆ | ಯದೊಡಾನೃಪವರನಾ ||
ಚರಣಯುಗಲದಾಣೆಯೆಂದಾಣೆಯಿಟ್ಟತಿ | ಭರವಶದಿಂ ಪರಿತಂದು || ೧೫೮ ||

ಸರಲಕುಮಾರನಾತನಸುತನೆಂಬುದ | ಪರಿದಾಗಿ ಬಲ್ಲವನಾಗಿ ||
ಪರಿತಂದು ಹಲವರಸುಗಳೋಲಗದೊಳ | ಗುರು ಮುದದಿಂ ಕುಳ್ಳಿರ್ದಾ || ೧೫೯ ||

ಅರಸನ ಕಂಡು ಪ್ರಭಂಜನಭೂಪನ | ವರಸುತ ಸರಲಕುಮಾರಾ ||
ತರುಣಿಚಿತ್ತಚಕೋರಿಚಂದ್ರಮ | ತರುಣ ಕರುಣಿನಿಭತೇಜಾ || ೧೬೦ ||

ಶುಭಕರಮೂರ್ತಿ ಸುರಭಿಸನ್ನಿಭದಾನಿ | ಪ್ರಭುಕುಲಾಂಬರರಾಜಹಂಸ ||
ಅಭಿನವ ಮದನನೆಂದಿಂತಿವು ಮೊದಲಾ | ದಭಿನುತಿಗಳನುತಿಯಿಸಲು || ೧೬೧ ||

ಆ ನುಡಿಗೆಳ್ದಾವೋಲಗದೊಳಿ | ರ್ದಾನರಪತಿನಿಕುರುಂಬಾ ||
ಈ ನೃಪತಿಯಹುಟ್ಟುಮೆಟ್ಟೆಂಬುದು ನಮ | ಗೇನೆಂದರಿಯಬಂದುದಿಲ್ಲ || ೧೬೨ ||

ಇಂದಿವನಿಂತೆರದವರುಸಾಯಿತೆಂದಾ | ಸಂದಣಿಸಿದ ಸಭೆಯಲ್ಲಾ ||
ಮಂದೇತರಮಮತೆಯೊಳೆನುತಿರಲಾ | ನಂದನನಾಭೂವರನು || ೧೬೩ ||

ಕೇಳಿ ಮನದೊಳತ್ಯಂತಾಮೋದವ | ತಾಳಿಯೆಲೆಯಕ್ಕರಿಗಾ ||
ಹೇಳಲೇನು ಮಚ್ಚಿದೆ ಬೇಡಿಕೊಳ್ಳೆಂಬ | ಲೀಲಾನಿಧಿ ನಿಂತು ನುಡಿದಾ || ೧೬೪ ||

ಎಲೆರಾಮ ಕೇಳಿಂದೀನೀರಹೊಳೆಯೊಳು | ಲಲಿತಾಂಗನನೋರ್ವನನು ||
ಬಲುಗಳ್ಳನೆಂದು ತಳಾರರು ಕೊಂಡೊಯ್ದು | ತಲೆವೊಯ್ವೆನೆನುತಿರ್ದವರು || ೧೬೫ ||

ಅವನ ತಲೆಯ ಹುಯಿಸಲು ಬೇಡವೆನಲಾ | ಕುವರನಿಂತೆಂದಾಡಿದನು ||
ಅವನೀಶ್ವರಗಾಜ್ಞಾಭಂಗಮೀ ನುಡಿಯ ವಿಚಾ | ರವಂತದರಿಂದ || ೧೬೬ ||

ಇದು ಹೊರಗಾಗಿ ಮತ್ತೇನ ಬೇಡಿದೊಡುರು | ಮುದದಿಂ ಕೊಡುವೆನೆಂದೆಂಬಾ ||
ವಿದಿತಗುಣಾಲಂಕೃತನ ನುಡಿಯ ಕೇಳಿ | ಚೆದುರನಿಂತೆಂದಾಡಿದನು || ೧೬೭ ||

ಅವನ ತಲೆಯ ಕಾಯ್ದೊಡೆ ದೇಶಕೋಶವೆಂ | ಬಿವು ನನಿಗರಿದಿಲ್ಲವಾಗಿ ||
ಭುವನೇಶ ನನ್ನಿಚ್ಛೆಯಗಲಿಸುವುದೆನೆ | ಸುವಿವೇಕಿಯದಕೊಡಂಬಟ್ಟು || ೧೬೮ ||

ಇಂತಿವನತಿ ಮಮತೆಯ ಮಾಳ್ಪ ಚೋರನಿ | ನ್ನೆಂತಪ್ಪನೊ ನೋಳ್ಪೆನೆಂದು ||
ಸಂತಸದಿಂದಾ ವಿಭು ದೂತರ ಕರೆ | ದಂತರಿಸದೆ ಪೋಗಿ ನೀವು || ೧೬೯ ||

ಆತನ ವಡಗೊಂಡು ಬನ್ನಿಯೆಂದೆನಲವ | ರಾತುರದಿಂ ಪರಿತಂದು ||
ಆ ತಲೆ ವೊಯ್ವುದ ಬಿಡಿಸಿತಂದರು ತ | ದ್ಭೂತಳೇಶ್ವರನೋಲಗಕೆ || ೧೭೦ ||

ಕಟ್ಟಿದಿರೊಳು ನಿಂದ ನಿಜ ಜನಕನನು | ನಿಟ್ಟಿಸುತಾ ನಂದನನು ||
ನೆಟ್ಟಗೆ ಸಿಂಹಾಸನದಿಂದೆಳ್ದಡಿ | ಯಿಟ್ಟಾಕಡೆಗೈತಂದು || ೧೭೧ ||

ಕಾಲೊಳುಕವಿದುಬೀಳ್ದಾಕಂದನ ಬೆನ್ನ | ಮೇಲೆ ಪ್ರಭಂಜನನೃಪತಿ ||
ಆಲೋಕನಂಗೈಯ್ಯಲಾಕಣ್ಣನೀರು | ಕಾದೊಗುವಂತೊಕ್ಕವಾಗ || ೧೭೨ ||

ಇಂತು ಬೀಳ್ದಾ ತನುಜಾತನನಾಭೂ | ಕಾಂತ ತೆಗೆದು ಬಿಗಿಯಪ್ಪಿ ||
ಮುಂತನೀಕ್ಷಿಸದಗಲುವರೆ ರೂಪಜ | ಯಂತ ಕೇಳ್ನೀನಿಂದುವರ || ೧೭೩ ||

ಎನುತ ಹಾಹಾಕ್ರಂದನಗೈವಾ ಭೂವನಿತೇ | ಶನನು ಮಂತ್ರಿಗಳು ||
ಮನದಕ್ಕರಿಂ ಸಂತೈಸಿದ ಬಳಿಕರ | ಮನೆಗೆ ಬಿಜಯಮಾಡಿಸಿದರು || ೧೭೪ ||

ತಂದೆಯ ತಲೆಯ ಕಾಯಿದಾಕಳಶಗೆ ಮನ | ಸಂದಾ ಸರಲಕುಮಾರ ||
ಮಂದಾರಕುಜದಂದನಿಷ್ಟವಸ್ತುವ | ನಂದುಕೊಟ್ಟನು ಧರೆ ಪೊಗಳೆ || ೧೭೫ ||

ಪುರದೊಳಷ್ಟಶೋಭೆಯ ಮಾಡಿಸುತಾ | ದರದಿ ಕಾರಾಗಾರದೊಳು ||
ನಿರುತದಿಂರ್ದಾಪಲಮೃಗ ಪರಭೂವ | ರರ ಸೆರೆಯ ಬಿಡಿಸಿದನು || ೧೭೬ ||

ಮನೆಗೆಯ್ದಿಯಾತಂದೆಯಾಮಗನೊಳು ದುಷ್ಟ | ವನಿಗೆ ಮಾಡಿದ ಕಪಟವನು ||
ಅನುವದಿಸುತ್ತಾತಳಾರರ ಬರಿಸಿ ನೀ | ವಿನಿಸು ತಡಂಗೆಯ್ಯದೆಯ್ದಿ || ೧೭೭ ||

ಮುತ್ತಿನಹಾರವ ಕಳ್ದರೆಂದೆಮಗಾ | ಪತ್ತನೆನಿಸಿದ ಢಾಳೆಯನು ||
ಅತ್ತಿತ್ತ ಹೋಗದಂದದಿ ಕಾದುಕೊಂಡಿರಿ | ದತ್ತಾವಧಾನದೊಳೆಂದು || ೧೭೮ ||

ಕಳುಹಲವರು ತದ್ವನಕೈದುವ ವೇಳೆ | ಯೊಳಾನೃಪವರಗಾದಾ ||
ಬಳಲಿಕೆವಂದು ವಾರತೆಯಾಪುರವರ | ದೊಳಗೆ ಪ್ರಜ್ವಲಮಾಗಲದನು || ೧೭೯ ||

ಜಾರೆಯವಳು ಕೇಳಿಯತ್ತಿತ್ತ ಜಾರಲು | ಬಾರದೆಯಾನಂದೆನದಾ ||
ಮಾರಾರಿಯಮಂದಿರ ಪೊಕ್ಕು ಗರ್ಭಾ | ಗಾರವ ಹೊಕ್ಕಿರುತಿರಲು || ೧೮೦ ||

ಅವಳಿರಲಲ್ಲಿಗೆ ಬಂದಾ ದೂತರ | ನಿವಹವೆಲ್ಲವು ಕಾವಲಿರ್ದು ||
ತವಕದಿನೋರ್ವನ ಕಳುಹಿ ತದ್ವಾರ್ತೆಯ | ನವನೀಶ್ವರಗೆ ಹೇಳಿಸಲು  || ೧೮೧ ||

ಸರಲಕುಮಾರ ನೋಡುವೆನೆಂದು ಪೊರಮ | ಟ್ಟರಮನೆಯನು ತದ್ವನಕೆ ||
ಭರದಿಂ ಬಂದದೊಳಹೋಗುತಿರಲಲ್ಲಿಯೆ | ಣ್ಬರು ಜಿನಮುನಿಪುಂಗವರು || ೧೮೨ ||

ದಿಗಧೀಶ್ವರರು ದಿಗಂಬರರೂಪವನೊಗು | ಮಿಗೆ ಧರಿಸಿಬಂದಂತೆ ||
ಅಗಣಿತಮಾದಾಲಂಕೃತರಾಯೋ | ಗಿಗಳೆಣ್ಬರು ರಂಜಿಸಿದರು || ೧೮೩ ||

ಭೂರಮಣನ ಕೋಪಸಿಖಿಯಾಮುನಿವೃಂ | ದಾರಕರಂಗದೊಳೊಗೆಯದು ||
ಚಾರುತರಂಬಡೆದಾಶಾಂತರಸವಾರಿ | ಪೂರದಿನಡಗಿದುದಾಗಾ || ೧೮೪ ||

ಅವರೊಳು ಮುಖ್ಯರಾಗಿರ್ದ ಶ್ರೀದತ್ತರೆಂ | ಬವಧಿಬೋಧಾಲಂಕೃತರ್ಗೆ ||
ಸವಿನಯದಿಂ ಕೈಮುಗಿದು ಬಿನ್ನಪವನಿಂ | ಪವನಿಪ ಮಾಡಿದನು || ೧೮೫ ||

ಎಲೆ ಮುನಿನಾಥ ನಿಮ್ಮೀಯೆಂಟು ತಂಡದ ಲಲಿತಲಾವಣ್ಯ ಸೌಂದರ್ಯ ||
ಸುಲಲಿತಮಪ್ಪೀ ಲಕ್ಷಣಮೀ ಭೂತಳಕೆ ಭಾವಿ | ಸಲಾಶ್ಚರ್ಯ || ೧೮೬ ||

ಈ ರೀತಿಯಿಂ ರಾರಾಜಿಸುರ್ವಸಿ | ಧಾರಾವ್ರತಕೆ ಕೈಸಾರ್ದಾ ||
ಕಾರಣವನು ನಿರವಿಸಬೇಕೆಂದು ಮ | ಹೀರಮಣನು ಕೇಳಲಾಗಾ || ೧೮೭ ||

ಇಂತೆಂದರಾಮುಖ್ಯಮುನಿವರರಾ | ಭೂಕಾಂತನೆಲೆನೃಪತಿಲಕಾ ||
ಅಂತರಮಾಡದೆ ಪೇಳ್ವೆವು ಲಾಲಿಸೀ | ಕಾಂತಾಜನದ ಕಪಟವ || ೧೮೮ ||

ಚೆನ್ನಾಗಿ ಕಂಡುದರಿಂ ನಮಗೆಲ್ಲಕ | ತ್ಯುನ್ನತಮಪ್ಪೀ ರೂಪು ||
ಸನ್ನಿದಮಾಯ್ತದರೊಳು ಮೊತ್ತಮೊದಲಾ | ಬಿನ್ನಣದಿಂದೀಕ್ಷಿಸಿದಾ || ೧೮೯ ||

ಶ್ರುತದ್ರುಷ್ಟಾನುಮಾನಾನುಭೂತದ | ವಿಶ್ರುತಮಪ್ಪಾಕಥನವನು ||
ಮತಿಯಿತ್ತು ಕೇಳು ಪೇಳ್ವೆವುಮೆಂದಾ | ಯತಿರಾಜನೊರೆದನಿಂತೆಂದು || ೧೯೦ ||

ಆ ಶ್ರೀದತ್ತಮುನೀಶ್ವರರುಸುರೆ ಮತ್ತಾ | ತಶ್ರುತಿಗೊಟ್ಟು ಕೇಳಿದನು ||
ಆಶ್ರಿತಜನರಕ್ಷಾಮಣಿವಿಮಲಯ | ಶಶ್ರೀಚಿತ್ತವಲ್ಲಭನು || ೧೯೧ ||

ಶುಭಕರಮೂರ್ತಿ ಸುರಭಿಸನ್ನಿಭದಾನಿ | ಯಭಿನವ ಭಾವೋದ್ಭವನು ||
ತ್ರಿಭುವನಪತಿ ಜಿನಭಕ್ತನೊಪ್ಪಿದನಾ | ಪ್ರಭುಕುಲಮಣಿದೀಪಕನು || ೧೯೨ ||

ಇದು ಜಿನಪದಭಕ್ತ ಪ್ರಭುರಾಜ ವಿರಚಿತ | ಸದಮಲನಾಪ್ರಭಂಜನನಾ ||
ವಿದಿತಮಪ್ಪಾಕಥೆಯೊಲು ಸಂಧಿಯೆರಡಾ | ಯ್ತಿದನು ಭವ್ಯರು ಲಾಲಿಪುದು || ೧೯೩ ||

ಅಂತು ಸಂಧಿ ೨ಕ್ಕಂ ಪದನು ೨೮೭ಕ್ಕಂ ಮಂಗಳಮಹಾಶ್ರೀ