ಶ್ರೀಮದಖಿಲಪುಷ್ಕರಾಂಕಿತಹಸ್ತನು | ದ್ದಾಮಸದ್ಗತಿವಡೆದವನಾ ||
ಸ್ವಾಮಿಜಿನೇಂದ್ರಕುಂಜರನಡಿದಳಕೆ ಸು | ಪ್ರೇಮದೊಳಭಿವಂದಿಸುವೆನು  || ೧ ||

ಮೆತ್ತಿದ ಮೃತ್ತಿಕೆಯೊಳಗಣ ಮಯಣದ | ಪುತ್ತಳಿ ಕರಗಲಗ್ನಿಯೊಳು ||
ಮತ್ತದರೊಳಗಣ ರೂಪು ತೋರ್ಪಂತೊಪ್ಪ | ವೆತ್ತ ಸಿದ್ಧರ ವಂದಿಸುವೆನು || ೨ ||

ಸೂರಿಗಳನು ಸುರುಚಿತರತರ ಶುದ್ಧಾ | ಚಾರ ಸಂಪನ್ನಸಂಯುತರಾ ||
ವಂಚಿಸದುಪದೇಶಿಪ ದೇಶಿಕರ್ಗಾನು | ಪಂಚಮುಷ್ಟಿಯೊಳೆರಗುವೆನು || ೩ ||

ಸಂಚಲಮಿಲ್ಲದೆ ಸಿದ್ಧಶಾಸ್ತ್ರದ ಪ್ರ | ಪಂಚಮೆಲ್ಲವ ಭವ್ಯತತಿಗೆ ||
ವಂಚಿಸದುಪದೇಶಿಪ ದೇಶಿಕರ್ಗಾನು | ಪಂಚಮುಷ್ಟಿಯೊಳೆರಗುವೆನು || ೪ ||

ಅಂಗದಿನಸುವ ಖಂಡಿಸಿ ವಿವಿಧೋಪನ | ರ್ಗಂಗಳನೋಪದೆ ತಳಿದು ||
ಪಿಂಗದೆ ತಪಸುಗೆಯ್ವಾಸಾಧುಗಳ ಪ | ದಂಗಳನೊಲಿದು ವಂದಿಪೆನು || ೫ ||

ಸರಸ್ವತಿಯನು ಸರ್ವಜ್ಞವದನ ಸು | ಸ್ವರಸಂಜಾತಮೂರ್ತಿಯನು ||
ವರಭವ್ಯತತಿಯ ಪೊರೆ ವಗುಣನಿಧಿಯನು | ಹರುಷಮಿಗಲು ವಂದಿಸುವೆನು || ೬ ||

ಶ್ರೀಗೆ ನಿವಾಸವೆಂದೆನಿಸಿ ಶೋಭಿಸುವ ಪ್ರ | ಸ್ವರಸಂಜಾತಮೂರ್ತಿಯನು ||
ರಾಗದಿ ಯಮುನಾದತ್ತನೆಂಬಾ ವೈಶ್ಯ | ಗಾಗಂಗಶ್ರೀಯೆಂಬಾ || ೭ ||

ಸತಿಯಿರ್ಪಳವಳ ಸಚ್ಚಾರಿತ್ರದು | ನ್ನತಿಕೆಗೆ ಸಮವೆಂದೆನಿಪಾ ||
ನುತಿಗುಣಿಗಳ ಕಾಣೆನೆಂದಾ ಪುರಜನ | ವತಿ ಕೀರ್ತನೆಗೆಯ್ಯುತಿಹುದು || ೮ ||

ಗಂಡನಲ್ಲದೆ ಅನ್ಯಪುರುಷರ ವದನವ | ಕಂಡೊಡೆ ತನ್ನ ಸೋದರರಾ ||
ಕಂಡಂದದಿ ಬಗೆಯೊಳಗೆ ಬಗೆವಳಾ | ಪೆಂಡಿರಕುಲಕೆ ಮಾಣಿಕವು || ೯ ||

ಅತಿಗುಣಿಯತಿಚಾರಿತ್ರವಿಭೂಷಣೆ | ಯತಿರೂಪವತಿಯತಿಮುಗ್ಧೆ ||
ಅತಿಶುಚಿಯತ್ಯಂತ ಸಜ್ಜನೆಯತಿಸತ್ಯ | ವತಿಯಾಗಿ ಶೋಭಿಸುತಿಹಳು || ೧೦ ||

ಆ ಗಂಗಶ್ರೀಯೊಂದು ಪಗಲು ಸಾನು | ರಾಗದಿ ಸಿಂಗರಗೆಯ್ದು ||
ಮೂಗಣೆಯನಸತಿಯಂತುಪ್ಪರಿಗೆಯ | ಮೇಗಡೆಯೊಳು ನಿಂದಿರಲು || ೧೧ ||

ಆ ಸುದತೀಮಣಿಯನು ಕಂಡು ವಿಷಯಾತುರ ನಿ | ಟ್ಟಿಸಿನಿಂದು ನೋಡುತವೆ ||
ಪೂಸರಿಲಿರಿತಕ್ಕಂಗವನಿತ್ತು ನಿ | ವಾಸಕೆ ನಿಲ್ಲದೆಯ್ದಿದನು || ೧೨ ||

ತಳಿರತಳ್ಪದ ಮೇಲೊರಗಿ ತಂಗದಿರ | ತಿಳಿನೀರನಂಗದ ಮೇಲೆ ||
ತಳಿವುತ ತಳಿರಲವಿರ್ಜಜ್ಜಳದಿಂ ಬೀಸಿ | ಕೊಳುತ ವಿರಹದೊಳಗಿರಲು || ೧೩ ||

ಆ ವಳೆಯೊಳತಿ ಬಿನ್ನಣಗಾತಿ ಕ | ಲಾವಿದೆಯತಿಶತವೃದ್ಧೆ ||
ಭಾವಕಿಯಿಂದುನಾಯಕಿಯೆಂದೆಂ | ಬವಳಾವಾಸಕೆ ನಡೆತಂದು || ೧೪ ||

ಆ ವಿಷ್ಣದತ್ತಗೆ ವಿರಹವೆಂಬುದನರಿ | ದಾ ವೃದ್ಧೆಯಿಂತಾಡಿದಳು ||
ಸ್ತ್ರೀವಶ್ಯವಂಗಜಾಗಮವೆಲ್ಲವಾಗಿ ಯ | ಥಾ ವಿದ್ಯೆಯೆನಗೆ ಸಂಪೂರ್ಣ || ೧೫ ||

ಅದರಿಂದ ನಿನ್ನ ಮನಸಿನಭೀಷ್ಯವನಿ | ರದೆ ಪೇಳೀಗ ನಾನು ||
ಪದುಳದಿ ನಿನಗೆ ಸಾಧ್ಯಂಮಾಡಿಕೊಡುವೆನಿಂ | ತಿದನುರೆನಂಬು ನೀನೆನಲು || ೧೬ ||

ಆ ವಚನಕೃತಿ ಹರ್ಷೋತ್ಕರ್ಷಾನಂ | ದಾ ವಿಷ್ಣದತ್ತನಿಂತೆಂದಾ ||
ಆ ವಧು ಗಂಗಶ್ರೀಯ ವಿಲಾಸಮ | ನೋವದೆ ನಾನೀಕ್ಷಿಸಿದೆನು || ೧೭ ||

ತಳರಡಿಗಳ ತಳತಳಿಪಲಕಾಂಗದ | ಪೊಳೆವ ಪೊಂಬಾಳೆ ಹೊಡೆಗಳಾ ||
ಎಳೆಯಂಚಿನಡೆಯ ಏರುಂ ಜವ್ವನದಾ | ಲಲನೆಯ ನಡೆನೋಡಿದೆನು || ೧೮ ||

ಹರಿಣಿಗಣ್ಗಳ ಬಂಡುಣಿಸುರುಳ್ಗಳ | ವರಪಿಕಾಲಾಪದ ಪೀಲಿದಲೆಯಾ ||
ಬಾಲಪಲ್ಲವವನೇಳಿಪ ಬಣ್ಣಿಗೆದುಟಿ | ಲಲನೆಯನೀಕ್ಷಿಸಿದೆನು || ೧೯ ||

ರತಿಯ ಚೆಲ್ವಿಕೆಯನಂಬುರುಹನಾಭನ ನಿಜ | ಸತಿಯಂದದಿ ಭಾಗ್ಯವಡೆದಾ ||
ಕ್ಷಿತಿಧರಾಸುತೆಯಂದದಿ ಗಾಡಿಯಾಂತಾ | ಶತದಳನೇತ್ರೆಯ ಕಂಡು || ೨೦ ||

ಮುಸುಕಿದ ವಿರಹಾವಸ್ಥೆಯಿಂತಿದ ನೀನು | ವಸೆದಾಸುದತಿಯನೆಲ್ಲಾ ||
ವಶಮಾಡಿಕೊಟ್ಟೆಡೆ ನಿನ್ನ ಮನಕೆ ಸಂ | ತಸಮುದಯಿಸುವಂದದೊಳು || ೨೧ ||

ಹೊನ್ನೇಸು ನಿನಗೆ ಬೇಕಾದೊಡಂತದ ನಾನು | ವುನ್ನತಿಯಿಂದೊಸೆದೀವೆ ||
ಇನ್ನು ನೀನಿದಕೆ ಸಂಶಯಮಾಡಬೇಡವೆಂ | ದುನ್ನತಿಕೆಯ ದೈನ್ಯದಿಂದ || ೨೨ ||

ಅವಳಡಿದಳಕವನತನಾಗಲು ಕಂ | ಡವಳಿದು ನನಗಾವ ಗಹನಾ ||
ವಿವರಿಸಿ ಕೇಳೆಂದೆಂಬ ನುಡಿಯ ಕೇಳು | ತವನಿಂತೆಂದಾಡಿನು || ೨೩ ||

ಆ ಗಂಗಶ್ರೀಯಧಿಕಪತಿವ್ರತೆ | ಯಾ ಗಂಡನಲ್ಲದನ್ನಿಗರಾ ||
ಭೋಗಕ್ಕೆ ಬಗೆಯಿವಳಲ್ಲೆಂಬುದು ಸಿದ್ಧ | ವಾಗಿಹುದುದು ಕಾರಣದಿ || ೨೪ ||

ಆ ವನರುಹಸಲ್ಲಲಿತಲೋಚನೆಯ ನೀ | ನಾವತೆರದೊಳೊಡಂಬಿಡಿಸಿ ||
ವೋವದೆ ನನ್ನೆಡೆಗೆಯ್ತಪ್ಪುದು ನಿನ | ಗಾವ ವಿಧದೊಳಘಟಿತವು || ೨೫ ||

ಎನಲವಳಿಂತೆಂದಳಾವಿಷ್ಣುದತ್ತಗೆ | ನ್ನನುಮಾನದ ಚತರುತೆಗೆ ||
ಘನತರವಲ್ಲಮಿಂತಿದನೀಕ್ಷಿಸೆಂದಾ | ವನಿತೆಯ ವಶಮಾಳ್ಪುದನು || ೨೬ ||

ಪ್ರೇರಿಸಲಾಗಿಯವಳ ಪ್ರೇರಣೆಯಿಂ | ದಾರಾಜವೈಶ್ಯನಂಗಡಿಗೆ ||
ಆರೈಯ್ಯದೆ ಪೋಗಿ ಬಲು ಜವಳಿಯಜೀವ | ಹಾರಮುಂಟೆ ನಿಮ್ಮೊಳೆಂದ || ೨೭ ||

ಒಂದೊಳ್ಳಿತಪ್ಪ ಹಚ್ಚಡವನು ಬೆಲೆಗೊಂಡು | ಬಂದಖಳ ವಿಷ್ಣುದತ್ತಾ ||
ಮಂದಿರಕೆಯ್ತಂದು ಹಚ್ಚಡವನು ತಾನು | ತಂದ ತೆರನನವಳ್ಗೊರೆಯೆ || ೨೮ ||

ಅದರೊಳೊಂದೆಳೆಯ ತೆಗೆದುಕೊಂಡಾ | ದೂತಿಯವಳಂದಾವೈಶ್ಯವರನಾ ||
ಸದನಕೆ ಭಿಕ್ಷೆಗೆನುತ ಬಂದಾವೈಶ್ಯ | ಸುದತಿಗಂಗಶ್ರೀಯ ಕಂಡು || ೨೯ ||

ಸತ್ಯಸದಾಚಾರಗುಣಭೂಷಣೆ ಕೃತ | ಕೃತ್ಯೆ ಪೆಣ್ಗುಲಕೆ ಮಾಣಿಕವೆ ||
ಅತ್ಯಂತ ಶುಚಿಯಭಿನವಲಕ್ಷ್ಮಿ ಭುವನ | ಸ್ತುತ್ಯೆನೀನಂತದರಿಂದ || ೩೦ ||

ಎಲೆ ಗಂಗಶ್ರೀಯೆ ನಿನ್ನ ಕೈಯ್ಯಾರೆನ | ಗೊಲಿದು ಬಡಿಸಿದನ್ನವನು ||
ಸಲೆಸವಿದೊಡೆ ನಾನೆಸಗಿದ ದೋಷಸಂ | ಕುಲ ಪೋಪುದದು ಕಾರಣದಿ || ೩೧ ||

ಆರೋಗಿಸಬೇಕೆನೆಯವಳತ್ಯಂತ | ಕಾರುಣ್ಯಮಾನಸೆಯಾಗಿ ||
ಭೋರನೆ ತನ್ನ ಶಯ್ಯಾಗೃಹದೊಳಗಡೆ | ಯಾರೈಯ್ಯದೆಕುಳ್ಳಿರಿಸಿ || ೩೨ ||

ಅಡುಗೆಯ ಮನೆಗನ್ನವ ತರಲೆಂದಾ | ಮಡದಿ ನಡೆದ ಮರೆಯೊಳಗೆ ||
ತಡೆಯದವರು ಮಲಗುವ ಮಂಚದ ಮೇ | ಗಡೆಯ ಹಾಸಿತ ಹೊರೆಯೊಳಗೆ || ೩೩ ||

ಇರಿಸಿ ಹಚ್ಚಡದೆಳೆಯನು ಸವಿಗೂಳುಂಡು | ಹರಸಿಯವಳ ಬೀಳ್ಕೊಂಡು ||
ಭರದೊಳು ಬಂದು ತಾನೆಸಗಿದ ಕಾರ್ಯದ | ಪರಿಯನೊರೆಯ ಬಳಿಕಿತ್ತಾ || ೩೪ ||

ಕರಿಕರನಸ್ತಂಗತನಾಗಲಾ ವೈಶ್ಯ | ನಿರದೆ ತನ್ನಾಲಯಕೆಯ್ದಿ ||
ಹರುಷದಿನೊರಗುವೆನೆಂಬಾಗ ಹಾಸಿನ | ಹೊರೆಯೊಳಗಾಹಚ್ಚಡದಾ || ೩೫ ||

ಒಂದೆಳೆಯನು ಕಂಡಾ ತನ್ನ ಸತಿಯೊಳಿಂ | ತೆಂದನಾವಿಷ್ಣುದತ್ತಂಗೆ ||
ಯಿಂದುದಯದೊಳು ಕೊಟ್ಟಾಹಚ್ಚಡದೆಳೆ | ಬಂದ ಕಾರಣವ ಪೇಳೆನಲು || ೩೬ ||

ನಾನಿದನೇನೆಂದರಿಯನೆನಲೆಂದಾನುಡಿ | ಯನು ಕೇಳುತವೆ ||
ನೀನವನೊಳು ನಂಟು ಮಾಡದೊಡೇಕಿಂ | ತೀನೆಲೆಗಿದು ಬಂದಪುದು || ೩೭ ||

ಎಲ್ಲ ಸತಿಯರಿರ್ದಂತೆ ನೀ ನಿಜ | ವಲ್ಲಭೆಯಾಗಿಯಿಂತಪ್ಪ ||
ಪೊಲ್ಲ ಕಾರ್ಯವಣೆನಿಸುವರೆಯಂದಾ ವೈಶ್ಯ | ವಲ್ಲಭನತಿಕೋಪದಿಂದ || ೩೮ ||

ಎನ್ನ ಮನೆಯೊಳಿರಬೇಡ ನೀನೆಲವೊ | ಅನ್ನೆಯಕಾತಿ ನೀನಿಗ ||
ನಿನ್ನ ತವುರುಮನೆಗೆಯ್ಯೆಂದು ಕಳುಹಿದ | ನುನ್ನತಿಕೆಯ ಮುನಿಸಿಂದ || ೩೯ ||

ಪಾತಕಿಯೆನ್ನ ಮನೆಯೊಳಿರಬೇಡವಎಂ | ದಾತುರದಿಂ ಪೊರಮಡಿಸಿ ||
ಆ ತರಳಾಕ್ಷಿ ತವುರುಮನೆಗೆಯ್ತಂದ | ಳೇತರಬದುಕೆನಗೆಂದು || ೪೦ ||

ಆ ಇರುಳೋದ ಮರುದಿನ | ತಾ ಇಂದುನಾಕಿಯಾ ಮನೆಗೆಯ್ದಿ ||
ಆಯತಗೆಟ್ಟು ಚಿಂತೆಯೊಳಿರ್ಪ್ಪಾ ಗಂಗ | ಶ್ರೀಯ ಮೊಗವನೀಕ್ಷಿಸುತ || ೪೧ ||

ಪಗಲಚಂದ್ರಮನಂದದಿ ನಿನ್ನೀ ಮುದ್ದು | ಮೊಗವೇತಕೆ ಬಾಡಿದುದು ||
ಮುಗುದೆ ನನಗೆ ಪೇಳೆನೆ ಕಂಗಳ ನೀರನು | ಗುರ್ಗೊನೆಯಿಂದ ಚಿಮ್ಮಿಸುತ || ೪೨ ||

ತನಗೆ ತನ್ನಾತನೆಸಗಿದ ಪ್ರಪಂಚದ | ನಿನಿಸುಳಿಯದೆ ಪೇಳಲವಳು ||
ವನಿತೆ ನೀನೆನ್ನ ನುಡಿಯ ಕೇಳ್ದೆಯಾದೊಡೆ | ನಿನಗೆ ಸಮ್ಮಂಧಮಾಡುವೆನು || ೪೩ ||

ನನ್ನ ತಂತ್ರಮ ನೀ ಕೇಳಿದೆಯಾದೊಡೆ | ನಿನ್ನ ವಲ್ಲಭ ನಿನಗೊಲಿದು ||
ಚೆನ್ನಾಗಿ ಕೂಡುವಾಕರ್ಷಣವಿದ್ಯೆಯನಿಂದು | ನಿನಗೇ ತೋರುವೆನು || ೪೪ ||

ಈ ವೂರ ನಂದನದೊಳಗೊಪ್ಪವಡೆದಾ | ದೇವಾವಾಸಕೆ ರಾತ್ರಿಯೊಳು ||
ವೋವದೆ ಪೋಗಿ ಮತ್ತಾದೇವಿಗೆರಗಿ ನಾ | ನಾ ವಿಧದಿಂ ಪೂಜೆಗೆಯ್ದುಂ || ೪೫ ||

ಉಟ್ಟುದನೆಲ್ಲವ ತೆಗೆದಾಕೆಲದೊಳ | ಗಿಟ್ಟು ಬತ್ತಲೆ ಕುಳ್ಳಿರ್ದು ||
ದಿಟ್ಟಿದೆರೆಯದಾಕೆಯ ರೂಪ ಮನದೊಳ | ಗಿಟ್ಟು ಮಂತ್ರವನುಚ್ಚರಿಸಲು || ೪೬ ||

ಆ ನಿನ್ನ ಮನದ ಭಕ್ತಿಗೆ ಮೆಚ್ಚುತಾದೇವಿ | ತಾನೊಂದು ಪುರುಷರೂಪವನು ||
ಸಾನಂದದಿಂದ ಧರಿಸಿ ನಿನ್ನಡೆಗೆಯ್ದಿ | ಯಾನದೆ ಬಂದಮರ್ದಪ್ಪಿ || ೪೭ ||

ಸುರತವಿಕಾರವ ಮಾಡಲಿದಕೆ ಸುಮ್ಮ | ನಿರಲೊಡನಾಗಲೆ ಮೆಚ್ಚಿ ||
ಪುರುಷವಶೀಕರಣದವಿದ್ಯೆಯನಾ | ದರದಂ ನಿನಗೆ ಪಾಲಿಪುದು || ೪೮ ||

ಎಂದವಳೊಂದುಪಮಂತ್ರವನುಪದೇಶಿಸಿ | ಯಿಂದಿನ ನಡುವಿರುಳಿನೊಳು ||
ಸಂದೇಗವನು ಮಾಡದೆ ಪೋಗೆಂದಾ | ಯಿಂದುನಾಯಕಿ ಮಾತನಾಡಿ || ೪೯ ||

ಆ ವಿಷ್ಣುದತ್ತನ ಮನೆಗೆಯ್ತಂದು ತಾ | ನಾವಧುಗುಪದೇಶಗೆಯ್ದ ||
ಆ ವಿವರವನೆಲ್ಲವ ಪೇಳಿ ನೀನು ಮ | ತ್ತಾ ಉದಯವುಪೋದ ಬಳಿಕಾ || ೫೦ ||

ಆ ದೇಗುಲಕಾರರಿಯದಂದದಿನೆಯ್ದಿ | ಯಾ ದೇವಿಯ ಬೆಂಗಡೆಯೊಳು ||
ಭೇದಿಸದಂದದೊಳಡಗಿರ್ದು ಬಳಿಕ ಮ | ತ್ತಾದರಹಸಿತಾನನೆಯೊಳು || ೫೧ ||

ನಿನ್ನ ಮನಕೆ ಬಂದಂದಿ ಕೂಡೆಂದಾ | ಗನ್ನಕಾತಿ ಮತ್ತೆ ಕೆಲವು ||
ಬಿನ್ನಣವನು ಹೇಳಿ ಬೀಳ್ಕೊಡಲವನು ಸಂ | ಪನ್ನಹರುಷಚಿತ್ತನಾಗಿ || ೫೨ ||

ಆ ದಿನವಳಿಯಲೊಡನೆ ದೇಗುಲದ ಹೊ | ಕ್ಕಾದೇವಿಯ ಬೆಂಗಡೆಯೊಳು ||
ಭೇದಿಸಬಾರದಂದದಿನಾಪಾಣ್ಬನಾ | ಮೋದದಿನಿರೆ ಬಳಿಕಿತ್ತ || ೫೩ ||

ಆ ಗಂಗಶ್ರೀಯು ಆ ಯಿಂದುನಾಯಕಿ | ರಾಗದಿ ತನಗುಸುರ್ದಂತೆ ||
ಬೇಗದಿ ಬಂದು ದಣಿಬವುಟ್ಟು ಪಲ್ಸುಲಿ (?) | ದಾಗರ್ಚನಾದ್ರವ್ಯವೆರಸಿ || ೫೪ ||

ನಟ್ಟಿರುಳೊಳು ಪೋಗಿಯಾದೇವಿಗೆ ಪೊಡ | ಮಟ್ಟು ಶುಚಿರ್ಭೂತೆಯಾಗಿ ||
ಮುಟ್ಟಿದ ಮನದಿಂದಲೆ ಪೂಜೆಗೆಯ್ದಾ | ಉಟ್ಟುದನಳಿದು ಕುಳ್ಳಿರ್ದು || ೫೫ ||

ಎಲೆ ದೇವಿಯನ್ನಚಿತ್ತೇಶ ನನ್ನೊಳ | ಗೊಲಿವಂದದಿ ಮಾಡಿದೊಡೆ ||
ಪಲವು ತೆರದ ಮಣಿಭೂಷಣಗಳ ನಾ | ನಲಸದೆ ನಿನಗಿಕ್ಕುವೆನು || ೫೬ ||

ಎಂದು ಕಣ್ಗಳ ಮುಚ್ಚಿ ಬೇಡಿಕೊಂಬಾಗಾ | ನಂದದಿನಾದೇವತೆಯಾ ||
ಪಿಂದುಗಡೆಯೊಳಿರ್ದಾವಿಷ್ಣುದತ್ತ ಮ | ತ್ತೊಂದು ಹೂವಿನ ಮಾಲೆಯನು || ೫೭ ||

ಆ ದೇವಿಯ ಮಂಡೆಯೊಳಿರ್ದುದ ತೆ | ಗೆದಾದರದಿಂಡಿಡಲಾಗಾ ||
ಆ ದೇವಿ ತನಗೆ ದಂಡೆಯನಿತ್ತುದೆಂದಾ | ಮೋದಮನುರೆತಾಳುತವೆ || ೫೮ ||

ಆ ಮಂತ್ರವನುಚ್ಚರಿಸುವ ಸಮಯ | ಕ್ಕಾಮರೆಗಡೆಯೊಳಗಿರ್ದಾ ||
ಆ ಮಾಯಕಾತಿ ಹೇಳಿದ ತೆರದಿಂ | ದಾ ಮದಕರಚಿತ್ತನಾಗಿ || ೫೯ ||

ರತಿಚೇಷ್ಟೆಯ ಮಾಡಲು ಸುಮ್ಮನಿರಲಾ | ಶತದಳನೇತ್ರೆಯೊಳೊಲಿದು ||
ಅತಿಕಾತರದಿಂದಲೆ ಕೂಡಿದನಾ | ಸಿತಗನಪ್ಪಾವಿಷ್ಣುದತ್ತ || ೬೦ ||

ಈ ತೆರದಿಂ ಕೂಡಿ ತನ್ನ ಪ್ರಪಂಚನು | ನಾ ತರಳಾಕ್ಷಿಗೊರೆಯಲು ||
ಪ್ರೀತಿಯಿಂ ಸಂದೇಗವನು ಪರಿದು ಮನ | ಸೋತವನೊಳು ಕೂಡಿದಳು || ೬೧ ||

ಚಿತ್ತೇಶನನೊಲಿಸುವೆನೆಂದು ಮಾಡಿದ | ತ್ಯುತ್ತಮ ಕೃತ್ಯಮಿಂತಾಯ್ತು ||
ಎತ್ತ ಮೆಟ್ಟಿದೊಡೆತ್ತ ಚಪ್ಪಟೆಯಾಯಿತೆಂದು ನ | ಗುತ್ತವನೊಳು ರಮಿಸಿದಳು || ೬೨ ||

ಪತ್ತೆಂಟು ಪಗಲೀಪರಿ ಪೋಗೆ ಯಮುನಾ | ದತ್ತನ ಮನೆಗಾದೂತಿ ||
ಮತ್ತೊಂದು ದಿನ ಬಂದೆಲೆ ಶೆಟ್ಟಿಯರೆ ತಮ್ಮ | ಚಿತ್ತವಲ್ಲಭೆ ನನಗೊಲಿದು || ೬೩ ||

ಉಣಲಿಕ್ಕುವಾಗೊಂದು ಹಚ್ಚಡವನು ನಿಮ್ಮ | ಮಣಿಮಂಚದ ಮೇಲಿರಿಸಿ ||
ದಣಿಯುಂಡಮದದಿವೊಂದೆಣೆಯನು ಮರೆದೊಂ | ದೆಣೆಯನು ನಾಣು ಕೊಂಡೊಯ್ದೆ || ೬೪ ||

ಅದನನುವಾಗಿ ತೊಳೆಯಲೆಂದು ರಜಕರ | ಸದನಕ್ಕಾವಿಷ್ಣುದತ್ತಾ ||
ಪದೆದುಕೊಟ್ಟಾಪಚ್ಚಡವದರಿಂದ ಲಗ್ಗೆ | ವದವಿದೆ ನನಗವನಿಂದಾ || ೬೫ ||

ಮನಕೆ ಬಂದೊಡೆ ಪಾಲಿಸಿ ಬಾರದಿರ್ದೊಡೆ | ನನಗೆ ಕೊಡಲ್ಬೇಡವದನು ||
ಎನಲವಳ್ಗಾಪಚ್ಚಡದೆಣೆಯನು ಕೊಟ್ಟು | ಮನದೊಳಗಿಂತೆಣಿಸಿದನು || ೬೬ ||

ಪಾಪಿಕರ್ಮಿಯಲ್ಲದ ಸಾಧ್ವಿಯೊಳಾ | ರೋಪಿಸಿ ಅಪರಾಧವನು ||
ಈಪರಿ ಮಾಡಿದೆನೆಂದು ಪಿರಿದು ಕರು | ಣೋಪೇತಮಾನಸನಾಗಿ || ೬೭ ||

ತನ್ನ ತವುರ್ಮನೆಯೊಳಗಿರ್ದಾಮಡದಿಯ | ನುನ್ನತಿಕೆಯವಿನಯದೊಳು ||
ಮನ್ನಿಸಿ ನಿಜನಿಲಯಕ್ಕೆ ಕೊಂಡೊಯ್ದನ | ತ್ಯುನ್ನತಿಕೆಯ ವಿನಯದೊಳು || ೬೮ ||

ಇಂತೆಯ್ದಿಸಲತಿ ಹರ್ಷದಿನಾ ನಿಜ | ಕಾಂತನೊಳೆರವಿಲ್ಲದಂತೆ ||
ಕಂತುಕಲಾಕೇಳಿಯೊಳನುದಿನಮತಿ | ಸಂತಸದಿಂದಿರುತಿಹಳು || ೬೯ ||

ಮತ್ತೆ ತವುರ್ಮನೆಗೆಯ್ದಲಾವಿಷ್ಣು | ದತ್ತನೊಳೊಲಿದು ಕೂಡುವಳು ||
ವುತ್ತಮತನದಿಂದಾ ಗಂಗಶ್ರೀ | ಯಿತ್ತೆರದಾಪತಿಗಳೊಳು || ೭೦ ||

ಬಾಳುತವಳೆಯಂಬ ಕಥೆಯನು ಸೋಮಶ್ರೀ | ಪೇಳೆ ಶ್ರೀದತ್ತಕುಮಾರಾ ||
ಕೇಳಿ ಬಳಿಕ ಬಗೆಯೊಳು ವೈರಾಗ್ಯವ | ತಾಳಿಯಚ್ಚರಿ ಪಟ್ಟನಾಗಾ || ೭೧ ||

ಈ ಪರಿಯಿಂದನುಮಾನದ ಕಥೆಯನು | ಭೂಪತಿಸುತನೆರೆ ಕೇಳ್ದು ||
ಆ ಪಾಪಿಯೆಸಗಿದ ಕೃತ್ಯಕ್ಕೆ ವೈರಾ | ಗ್ಯೋಪೇತಮಾನಸನಾಗಿ || ೭೨ ||

ಎಂಟೆರಡೆಂಬುದನರಿಯದ ಮುಗುದೆಗೆ | ತುಂಟತನದ ಬುದ್ಧಿಯನು ||
ವುಂಟುಮಾಡಿ ಬಿನ್ನಣದಿ ತೋರಿಸಿಕೊಟ್ಟ | ಕುಂಟಣಿಗಿನ್ನಾರುಪಾಟಿ || ೭೩ ||

ನಿಲ್ಲದೆ ಪರಿಯುತಿಪ್ಪಾ ಬಲುಸರ್ಪನ | ನಿಲ್ಲೆಂದು ನಿಲಿಸುವರಾಗಾ ||
ಬಲ್ಲಿದ ಸಿಂಗಮ ನಾಯನು ಮಾಡುವ | ಉಲ್ಲಾಸಮಾದೂತಿಯರಿಗೆ || ೭೪ ||

ಒಲಿಯದವರನೊಲಿಸುವರಾನೊಲಿದರ | ವೊಲಿಯದಂದದ ತಂತ್ರವನು ||
ನೆಲೆ ಮಾಡುವಿರವಾಗಳು ಕುಂಟಿಣಿಯರ್ಗೆ | ಸಲೆಸಂದುದಾಗಿರುತಿಹುದು || ೭೫ ||

ಆರವರಿರದೆಸಗುವದೊಂದ ಕಪಟಾ | ಚಾರಕೆ ಪಿರಿದು ಕೊಕ್ಕರಿಸಿ ||
ಬಾರಿಪ ಬಲ್ಲಿದರುಂಟೆಯಂದಾ | ಧೀರಲಲಿತನೆಣಿಸಿದನು || ೭೬ ||

ಈ ಸಂಸಾರವೆಲ್ಲ ಭೋಗಕೆ ಮುಖ್ಯ | ವಾ ಸುದತಿಯರೆ ವೈನಿಕದಾ ||
ವಾಸವುಕ್ಕೆ ವಗೆಯಿತದ ಬೆಳೆವಲನು | ವಿಶ್ವಾಸಹೀನನ ಭಂಗಾರ || ೭೭ ||

ಅಂತದರಿಂದಾ ಕಾಂತೆಯರನು ಬಿ | ಟ್ಟಂತರಂಗದ ಶುದ್ಧನಾಗಿ ||
ಮುಂತಣ ಸದ್ಗತಿಯನು ಸಾಧಿಸುವನೆಯ | ತ್ಯಂತ ಶುದ್ಧನಭಿಮಾನಿ || ೭೮ ||

ಎನುತ ವೈರಾಗ್ಯಮಾನಸನಾಗಿಯಾದ್ವಿಜ | ವನಿತೆಗಿಂತೆಂದಾಡಿದನು ||
ನಿನಗೆನ್ನ ಕೂಡುವೆನೆಂಬಭಿಲಾಸೆಯ | ನನುಕರಿಸುವುದಸೌಚಿತ್ಯ || ೭೯ ||

ಎಂದಾ ಮನೆಯಿಂದವೆ ಪೊರಮಟ್ಟಾ | ನಂದದಿ ಶ್ರೀದತ್ತಕುಮಾರಾ ||
ಮುಂದಣ ಸುಖಕೆ ಕಾರಣಮಾದ ಕಜ್ಜವ | ನಿಂದೆಸಗುವೆನೆಂದೆನುತ || ೮೦ ||

ಈ ರೀತಿಯಿಂದ ದೀಕ್ಷೆಯನಾಂತೇಕವಿ | ಹಾರಿಯಾಗಿ ನಡೆತರುತಾ ||
ಆ ರುಷಿಪುಂಗವನೊಂದು ಪಲಾಸವೆಂಬಾ | ವೂರನಿರದೆ ಸಾರಿದನು || ೮೧ ||

ಅದರೊಳಿರ್ದವರೆಲ್ಲ ಮಾಂಸಭಕ್ಷಕ | ರಾದುದರಿಂದಂಕಿತವ ಮಾಡಿದರು ||
ಅದಕೆ ಪಲಾಸವೆಂದೆಂಬ ಹೆಸರನುರು | ಮುದದಿಂದತಿ ಬಲ್ಲವರು || ೮೨ ||

ಆವೂರನೆಯ್ದಲೊಡನೆಯಳಿಯಲ್ಪಗ | ಲಾವರ್ನಿಯೊಂದು ಪಾಳ್ಮನೆಗೆ ||
ಆ ವೇಳೆಯೊಳೆಯ್ದಿ ಕಾಯೋತ್ಸರ್ಗದಿ | ಭಾವಶುದ್ಧಿಯೊಳು ನಿಂದಿರಲು || ೮೩ ||

ಆ ಮನೆಗಾವೇಳೆಯೊಳೆಯ್ದಿ ಗ್ರಾಮದ | ಸೋಮದತ್ಯಾಖ್ಯಭೂಸುರನಾ ||
ಭಾವೆ ಸುಭದ್ರೆವೆಸರ ಜಾರೆ ತನ್ನಸು | ಪ್ರೇಮದ ಖಳನೊಡಗೂಡಿ || ೮೪ ||

ತನ್ನ ತೊಟ್ಟಿಲ ಹಸುಳೆಯಕೊಂಡುಬಂದ | ತ್ಯುನ್ನತ ಹರುಷಭರದೊಳು ||
ನನ್ನಿಯಿಲ್ಲದೆ ಸುರತಂಗೆಯ್ಯುತ್ತಿ | ರ್ಪಂನೆಗಮಾಹಸುಗೂಸು || ೮೫ ||

ಹಸಿದಳುತಿರಲಾ ಸಿಸುವಿಗೊಂದೆರಡು ಸೂ | ಳೊಸಿದಿತ್ತಾತನ್ನಮೊಲೆಯಾ ||
ಅಸವಸದಿಂಕೊಟ್ಟು ಬಳಿಕ ಜಾರನೊ | ಳೊಸೆದು ಕೂಡುವ ಸಮಯದೊಳು || ೮೬ ||

ಮತ್ತಾಮೊಲೆಯ ಮಗುವು ಬೇಡಿ ಮಿಗೆಯ | ಳುತ್ತಿರಲದನು ಕಂಡವಳು ||
ಉತ್ತಮಮಪ್ಪ ಸುಖಕೆ ಮೃತ್ಯುವಾಯಿತೆ | ನುತ್ತಾಹಸುಳೆಮಗುವನು || ೮೭ ||

ಕೊರಲ ಮುರಿಯೆ ಕಂಡಾ ಜಾರನುತ್ಪನ್ನ | ಕರುಣಿಯಿಂತೆಂದಾಡಿದನು ||
ದುರುಳೆ ಕೇಳಲ್ಪಸುಖಕೆ ಬಾಲನ ಕೊಂದ | ಪರಿಲೇಸಾಯಿತೆಂದೆನುತ || ೮೮ ||

ಹೆತ್ತಮಗನ ಕೈಯ್ಯಾರೆ ಕೊಂದಾಪಾತ | ಗಿತ್ತಿ ನೀನಿನ್ನಾರ ಕೊಲ್ಲೆ ||
ಒತ್ತಿ ವಿಚಾರಿಸಲೆಂದಾ ನುಡಿಗೇ | ಳುತ್ತವನಿಗೆ ಕಡುಮುನಿದು || ೮೯ ||

ಸವಿನುಡಿಗಳ ನುಡಿದತಿ ಮೋಹದಿಂ ಕೂಡ | ಲವಿರಳಮಾದ ನಿದ್ರೆಯೊಳು ||
ತವಕದಿ ಕೆಲದ ಕೂರಿಸಿಗೊಂಡು ಕುಯಿದಳಂ | ದವನ ಕೊರಲನಾಕುಟಿಲೆ || ೯೦ ||

ಮತ್ತಾಯೆರಡು ಶಬವನೆತ್ತಿಕೊಂಡಾ | ಹಿತ್ತಿಲೊಳಗೆ ಹೂಳುತವೆ ||
ಮಿತ್ತುವಿನಂತೆ ಮನೆಗೆ ಬಂದಾಪಾತ | ಗಿತ್ತಿಯಾಪಾಳುಮಾಳಿಗೆಯಾ || ೯೧ ||

ಕಟ್ಟಪಂಜರದೊಳೊಂದು ಕಡೆಯೊಳಗಾ | ದಿಟ್ಟ ಕೈಯಿಕ್ಕಿನಿಂದಿರಲು ||
ದಿಟ್ಟಿಸಿಯಿವನೆಲ್ಲಿಯವನೆಂದು ಬೆಕ್ಕಸ | ಬಟ್ಟು ಮತ್ತವನೆಡೆಗೆಯ್ದಿ || ೯೨ ||

ಇವನಿಂ ಕೇಡೊದಗುವುದೆಂದಾದುಷ್ಟ | ಯುವತಿ ಕಟ್ಟಿದಿರೊಳು ನಿಂದು ||
ತವಕದಿ ಘಟದೀಪ್ತಿಯ ತೆಗೆದವನ | ಯವ್ವನದ ಮಿಲಾಸಮನೋಡಿ || ೯೩ ||

ಮೌನವನುಳಿ ಮದನಕ್ರೀಡೆಗೆಯನು | ಮಾನಿಸದಂಗವನೆಳೆಸು ||
ಸಾನುರಾಗದಿ ನಿಟ್ಟಿಸಿನೋಡೆಂದಾ | ಮಾನಿನಿ ಮಿಗೆ ಮಾತನಾಡಿ || ೯೪ ||

ನಿನ್ನ ಕಣ್ಗಳ ಜೊನ್ನಕೆ ನೆರೆ ಸಾಫಲ್ಯ | ವೆನ್ನರೂಪೆನ್ನಾಲಾವಣ್ಯಾ ||
ನಿನ್ನ ಜವ್ವನದೇಳ್ಗೆಯ ಮನಮೊಸೆದೀವೆ | ಯನ್ನಸುದೆರೆದು ನೋಡಿದೊಡೆ || ೯೫ ||

ಎನ್ನ ಸಲ್ಲಲಿತಾಂಗಸಂಗದನುವ ಬಿಡ | ಲಿನ್ನೀತಪದಿಂದ ನೆಗಳ್ವಾ ||
ಉನ್ನತಿಕೆಯ ಫಲಮಾವುದಂತದರಿಂ | ಮುನಿಸಿಂ ಮಾತುಗಳನು || ೯೬ ||

ಕಬ್ಬುವಿಲ್ಲುಗಳ ಕೊಂಕ ಪೇಳಿಸುವಾ ಕುಡು | ಹುಬ್ಬಿನದೊಂದಿಂಪುವಡೆದಾ ||
ಬೆಬ್ಬಿನಿಂದಾಮುನಿಕುಲತಿಲಕನ ಮನ | ಸುಬ್ಬಿಕಾಡಿದಳಾಕುಲಟೆ || ೯೭ ||

ಕುಸುಮಶರಂಗಳ ಕೂರಿದವೇಳಿಸು | ವೆಸಳ್ಗಣ್ಣಕಾಂತಿ ಬಾಸಣಿಗೆ ||
ಅಸಿಯಳವಳು ನಡೆನೋಡಿದಳಾಮನ | ಮೊಸೆದಾಸಂಯಮೇಶ್ವರನಾ || ೯೮ ||

ಆರನಂಗದೊಳಳವಡಿಸದ ಮುನಿಯ ಬೆ | ಳ್ಗರಿದುಮಬಿಗಣ್ಗಳ ಮುಂದೆ ||
ಮಿರುಗುವನವಚಂಪಕ ಧಾಮಾಂಗವ | ನೆರಕದಿ ನೋಡಿದಳವಳು || ೯೯ ||

ಬಾಲಕರೇಣುಕರಾನುಕಾರಿಗಳಪ್ಪ | ಬಾಲ ಮುನಿಯ ಬಾಹುವಿನೊಳು ||
ಹೇಳಲೇನು ಕಂಠೀರವನಿಭಮಧ್ಯೆ | ಲೀಲೆಯಿಂದುಗುರನಿಕ್ಕಿದಳು || ೧೦೦ ||

ಮೇರುಮಹೀಧರಕೆಣೆಮಿಗಿಲೆನಿಪಾ | ಧೀರೊದಾತ್ತನಂಗದೊಳು ||
ಚಾರುಕುಲಿಶಮಣಿಸನ್ನಿಭದಂತದ | ಜಾರೆ ಬಂದಮರ್ದಪ್ಪಿದಳು || ೧೦೧ ||

ಮದನಮದಾಪಹರಣನೂರುಗಳೆಂಬ | ಕದಳೀಸ್ತಂಭಂಗಳನು ||
ಮದನಮಾತಂಗಳಸತ್ಕುಂಬೋರೊಜೆ | ವೊದವಿ ಪಿಡಿದು ನೋಡಿದಳು  || ೧೦೨ ||

ಪಲ್ಲವಪಾಣಿಯನೆತ್ತಿ ಪಂಚಾಂಗುಲಿ | ಯುಲ್ಲಸಿತ ಪ್ರಯೋಗವನು ||
ಪುಲ್ಲಸರೋಜಾಕ್ಷಿ ಮಾಡಿದಳಾ ಮುನಿ | ವಲ್ಲಭನಳಿಕಚಂದ್ರನೊಳು  || ೧೦೩ ||

ಆ ಜಾರೆ ವಿಲಸಿತ ಕಂಬುಕಂದರದಿಂ | ಕೂಜಿಸಲಾಸ್ವರದಿಂಪು ||
ಶ್ರೀ ಜೈನಮುನಿರಾಜಹಂಸನ ಕಿವಿಗೆ ಪ್ರ | ಯೋಜನಮಿನಿಸಾಯಿತಿಲ್ಲ  || ೧೦೪ ||

ಈ ರೀತಿಯಿಂದಾಸುರತೋದ್ವೀಪನ | ಕಾರಣಮಪ್ಪ ತಂತ್ರವನು ||
ಚಾರುಕುಮುದನೇತ್ರೆಯಾಜಿನಭಾನುವ | ನಾರೈಯ್ಯದೆ ಮಾಡುತಿರಲು  || ೧೦೫ ||

ರಾಜಮಯೂರಸನ್ನಿಭ ಕೇಳಬಂಧನ | ವಾ ಜಾರೆ ಮಾಡಿದ ಕೃತ್ಯಾ ||
ರಾಜಿಸಿತಿಲ್ಲ ಮತ್ತಾಮುನಿಪನ ಫಣಿರಾಜ | ಪೂಜಿತ ಪದಯುಗಕೆ  || ೧೦೬ ||

ಅದನು ಕಂಡಾ ಬಂಧಕಿ ಕೋಪಂಗೆಯ್ದು ಪದು | ಳದಿ ನಾನು ಮಾಡಿದುದಾ ||
ಉದಯವಾಗದ ಮುನ್ನೀ ಊರೊಳು ಹರ | ಹದೆ ಸುಮ್ಮನಿರನಿವನೆಂದು  || ೧೦೭ ||

ಮುನ್ನಲವನ ಕೊಂದ ಕೊರಸಿಯನು ಪಿಡಿದುನ್ನತಿಕೆಯ ಮುನಿಸಿಂದಾ ||
ಸನ್ನುತಮುನಿಯ ಕೊಲುವೆನೆಂದು ಕೈಯೆತ್ತುವನ್ನಮಿಂತೆಂದು ಭಾವಿಸಿದಾ  || ೧೦೮ ||

ಕ್ರೂರಮಪ್ಪೀಬಾಧೆ ಹಿಂಗುವನ್ನ | ಬರಾಹಾರಶರೀರ ನಿವೃತ್ತಿ ||
ಆರಯ್ಯದೆಂದು ಬಗೆದು ಕೈಯೆತ್ತಿತ | ದ್ಧೀರೊದಾತ್ತ ನಿಂದಿರಲು  || ೧೦೯ ||

ಅಂತದ ಕಂಡಾ ಗೃಹದೇವತೆಗಳ | ತ್ಯಂತ ಕೋಪದಿನೆಯ್ತಂದು ||
ಕಾಂತೆಯ ಕೈಯ್ಯನುದಯವಾಗುವ ಪ | ರ್ಯಂತರ ನಿಲಿಸಿಕೊಂಡಿದ್ದು  || ೧೧೦ ||

ಅಪರಾಧಿಗಾಜ್ಞೆಯ ಮಾಡಲೆಂದಿರೆ ನಿಃ | ಕೃಪೆಯಿಂದಂತದನರಿದು ||
ಉಪಸರ್ಗಪರಿಹಾರದೆಂದು ಕೈಮುಗಿದಾ | ತಪಸಿಯ ಮೌನವ ಬಿಡಿಸಿ  || ೧೧೧ ||

ಅವಳಿಗಾಜ್ಞೆಯ ಮಾಡುವುದ ಬಿಡಿಸಿಯಾ | ಅವಧಿಬೋಧೋಪೇತರಾಗಿ ||
ಅವನಿಪ ಕೇಳೀ ಜೈನಮುನೀಶ್ವರನಿವ | ಹವೆಲ್ಲವ ಕೂಡಿಕೊಂಡು  || ೧೧೨ ||

ಬಂದಾಶ್ರೀದತ್ತರೆಂಬ ಮುನಿಗಳ್ನಾ | ವೆಂದು ಪ್ರಭಂಜನನೃಪಗೆ ||
ಅಂದಾ ಅನುಭೋಗದ ಕಥೆಯನು ಮನ | ಸಂದನುವದಿಸಿದರಾಗಾ  || ೧೧೩ ||

ಇಂತು ಪೇಳ್ದಾ ಕಥನವ ಕೇಳ್ದತ್ಯಂತ | ಸಂತೋಷಮಾನಸನಾದಾ ||
ಕಂತುಸದೃಶರೂಪನಾಭೂಲಲನಾ | ಕಾಂತನುತ್ತಮ ಗುಣಯುತನು  || ೧೧೪ ||

ಅಭಿರಾಮಗುಣಗಣಮಣಿಯುತನಂತಕ | ನಿಭಕೋಪನಂಗಜರೂಪಾ ||
ಇಭವಾಹನನಿಭವಿಭನೊಪ್ಪಿದನಾ | ಪ್ರಭುಕುಲರತ್ನದೀಪಕನು  || ೧೧೫ ||

ಇದು ಜಿನಪದಭಕ್ತ ಪ್ರಭುರಾಜ ವಿರಚಿತ | ಸದಮಲನಾಪ್ರಭಂಜನನಾ ||
ವಿದಿತಮಪ್ಪಾಕಥೆಯೊಳು ನಾಲ್ಕನೆಯ ಸಂಧಿ | ವದವಿಮನೋಹರಮಾಯ್ತು  || ೧೧೬ ||

ಅಂತು ಸಂಧಿ ೪ಕ್ಕಂ ಪದನು ೫೪೨ಕ್ಕಂ ಮಂಗಳ ಮಹಾಶ್ರೀ