ಶ್ರೀದಿವಿಜೇಂದ್ರ ಮಹಿಧರ ಮಸ್ತಕಪಾವನ(ನ) | ತ್ಯಂತೂರ್ಧ್ವಗತಿಯಾ ||
ಹಾದಿದೋರುವ ಶ್ರೀಮಜ್ಜಿನಭಾನುವ | ನಾದರದಿಂದ ವಂದಿಪೆನು || ೧ ||

ಕುಲಜಾತಿಗೆಟ್ಟು ಕೂಳುಣಲುಡಹಡೆಯದೆ | ಹೊಲೆಗೆಟ್ಟು ಹುಟ್ಟು ಹೊಂದಳಿದು ||
ನೆಲಹೊರದಾಮೆಯ್ಗಟ್ಟಿ ಸಿದ್ಧರ ಪಾದ | ಕಲಘುಭಕ್ತಿಯೊಳೆರಗುವೆನು || ೨ ||

ನಿನ್ನೆ ಮಾಡಿದ ಕಥನವನಾಚಾರ್ಯರ | ವುನ್ನತಿಕೆಯೊಳಿಂದುನುತಿಸಿ ||
ಭಿನ್ನಮಾಗದೆ ನಾಳೆ ಘಳಿಗೆಗೆ ಕೈವಲ್ಯ | ಮನ್ನೆರೆ ಸಾಧ್ಯಮಾಡುವೆನು || ೩ ||

ಪೂರ್ವಾಪರವೈರಮಿಲ್ಲದ ಶಾಸ್ತ್ರದ | ಪೂರ್ವಾರ್ಥವ ಭವ್ಯತತಿಗೆ ||
ನಿರ್ವದಿಪಂತುಸುರ್ವುಪದೇಶಕರಾದ | ಗರ್ವರನಭಿನುತಿಸುವೆನು  || ೪ ||

ಪದೆದು ಪರವಾವರ್ತನಪಂಚಕಮೆಂಬುದ | ನಿಧಿಯನು ದಾಂಟಲೆಂದು ||
ವಿಧಿತ ಸೂವ್ರತಮೆಂಬ ಹಡಗನೇರಿದ | ಸಾಧುಪದಕಿ ನಮೋಸ್ತು ಮಾಡುವೆನು || ೫ ||

ಶೃತಿಗೆ ಶೃತಾರ್ತ್ಥಕುಂಡಲಿದಲವಿಡಲೆಂದು | ವಿಶ್ರುತಗುಣರತ್ನಮೂರ್ತಿಯನು ||
ಶ್ರುತದೇವಿಯನನುರಾಗಮೊದವೆಯ | ನು ಶ್ರುತಮಿರದಭಿನುತಿಸುವೆನು || ೬ ||

ನಂದಿವರ್ಧನನೆಂಬನು ಪಾಟಳಿಪುತ್ರ | ವೆಂದೆಂಬ ರಾಜಧಾನಿಯೊಳು ||
ನಂದೆಯೆಂಬಬಲೆವೆರಸಿ ನಾಡನತ್ಯಾ | ನಂದದಿ ಪಾಲಿಸುತಿಹನು || ೭ ||

ಅವರೀರ್ವರಿಗಮರೇಂದ್ರನಿಂದ್ರಾಣಿಗು | ದ್ಭವಿಸಿದ ನಳಕೂಬರರಾ ||
ಸಮನಾಗಿ ಶ್ರೀದತ್ತವೆಸರ ಹಡೆದನೋರ್ವ | ಕುವರನುದಯಗೆಯ್ದು ಬಳಿಕಾ || ೮ ||

ಅರವತ್ತುನಾಲ್ಕು ಕಲೆಯನೆಲ್ಲವನು ಮನ | ವೆರಕದಿ ಕಲಿತು ಬೆಳೆದನು ||
ನೆರೆಯನೆರೆಯ ಕಲೆಗಳನು ಧರಿಸಿ ಚಿಕ್ಕ | ಹೆರೆ ದೊಡ್ಡಿತಪ್ಪಂದದೊಳು || ೯ ||

ಈ ಪರಿ ಬೆಳೆದು ಜವ್ವನವೇರಿ ಸಕಲಕ | ಲಾಪರಿಣತನಾಗಿ ಬಳಿಕಾ ||
ರೂಪು ಲಾವಣ್ಯ ವಿಕ್ರಮವಿತರಣ ಭೂಷ | ಣೋಪೇತನಾಗಿ ರಂಜಿಸುತ || ೧೦ ||

ಎಲ್ಲಾ ಜನಪದದೊಳಗುಳ್ಳ ಲಿಪಿಗಳ | ನುಲ್ಲಾಸದಿಂದೋದಿ ಕಲಿತು ||
ಬಲ್ಲರಬಲ್ಲವನಾಗಿ ತದ್ವಸುಧಾ | ವಲ್ಲಭಸುತನೊಪ್ಪಿದನು || ೧೧ ||

ಇಂತಿರುತಿರಲಾಸಮಯದಿ ತುರುಷ್ಯಜ | ನಾಂತದ ನೃಪನ ಲೇಖನವು ||
ಇಂತೆಂದು ದುದಿದರ ವಕ್ಕಣೆಯನೇ | ಕಾಂತದೊಳೋದಿಕೊಳ್ಳೆನುತ || ೧೨ ||

ಏಕಾಂತವಾಸದೊಳು ಕುಳ್ಳಿರ್ದು ಮ | ಹೀಕಾಂತವಲ್ಲಭನು ||
ಆ ಕುವರನ ಕರೆಯಿಸಿ ಇದರೊಳಗಿ | ರ್ದಾ ಕಾರ್ಯಮನೋದೆನಲು || ೧೩ ||

ಆ ದೇಶದ ಲಿಪಿಯನು ಮುನ್ನ ತನಗೊ | ಲಿದೋದಿಸಿದವರಿಲ್ಲವಾಗಿ ||
ಶ್ರೀದತ್ತಂಗಾವಾಲೆಯ ಬರಪವ | ನೋಡುವದಿನಿಸಾದುದಿಲ್ಲ || ೧೪ ||

ಅಂತದ ಕಂಡವನಿಪತಿ ನಾಚಿ | ಚಿಂತೆಯಿಂದಾ ಕುಮಾರಕನು ||
ಯಂತಾನೀ ವೊದುಗಲಿತಲ್ಲದೀವೂರ್ಗೆ | ನಾಂ ತಳರುವುದಿಲ್ಲವೆನುತ || ೧೫ ||

ಭಾಷೆಯ ಮಾಡಿ ಪೊಳಲಪೊರಮಟ್ಟುತ | ದ್ದೇಶ ತುರುಷ್ಕಾವನಿಯಾ ||
ಭಾಷಾಕ್ಷರವನು ಕಲಿವೆನೆಂಬೊಂದಭಿ | ಲಾಷೆಯೊಳಿರದೈತಂದು || ೧೬ ||

ಆ ನಾಡ ನಡುವಿರ್ಪವಲ್ಲಭಿಯಂಬಾ ರಾಜ | ಧಾನಿಗೆ ಬಂದತಿ ಮುದದಿ ||
ಭೂನುತಗಾರ್ಗೊಪಾಧ್ಯಾಯರೆಂಬ | ನಾನೃಪಸುತ ಕಾಣುತವೆ || ೧೭ ||

ಇಂದಿಂಗೆಂಟನೆ ದಿವಸಕೆ ನಿಮ್ಮಲ್ಲಿಪ್ಪೀವೋದ | ನೊಂದುಳಿಯದೆ ಕಲಿಸಿದೊಡೆ ||
ಮುಂದಕೆ ನಿಮ್ಮ ದಾರಿದ್ರವೆಲ್ಲವು ಜರಿ | ವಂದದ ವಿತ್ತಮನೀವೆ || ೧೮ ||

ಎಂದೊಡಂಬಿಡಿಸಿ ಕಿರಿದುವಸ್ತುವನಾ | ನಂದದಿನಿತ್ತರಮಗನು ||
ಮಂದೇತರಪ್ರೀತಿಯಿಂದಾಲಿಖಿತಮ | ನಂದು ಬರೆವುತೋದುತಿರಲು || ೧೯ ||

ಒಂದು ಪಗಲೊಳವನಾಸಂಜೆವರ ಮುದ | ದಿಂದೋದಿಸಿ ಮಕ್ಕಳನು ||
ಮಂದಿರಕೆಯಿತಪ್ಪಾಗ ಸೋಮಶ್ರೀಯೆಂ | ದೆಂಬಳಾತನ ಸುದತಿ || ೨೦ ||

ಜಾರನೆಡೆಗೆ ಬರುತಿರಲು ಕಿಟ್ಟಿದಿರೊಳ | ಗಾರಮಣನು ಕಂಡಿದೇಕೆ ||
ಈ ರಾತ್ರೆಯೊಬ್ಬಳೆಲ್ಲಿಗೆಯ್ದುವೆಯನ | ಲಾರಯದುನುಡಿದಳಿಂತೆಂದು || ೨೧ ||

ಅರಸಿನ ಮನೆಗೆ ನಾಟಕದವರೆಯಿಂದಿ || ನಿರುಳು ಬಂದಾಡುವಾಟವನು ||
ಹರುಷದಿ ನೋಡಬೇಕೆಂದೆನ್ನ ಬಳಿಗಾ | ಅರಸಿಯಾಳಿಯನಟ್ಟಿದಳು || ೨೨ ||

ಅಂತದರಿಂದಲ್ಲಿಗೆಯ್ದುವೆನು ಪೋಗ | ದಂತರವನು ಮಾಡುವೆನು ||
ಇಂತಿದ ನಿಮಗೆಯರಿಕೆ ಮಾಳ್ಪೆನೆಂದು ನಾ | ನಿಂತು ನಿಮ್ಮಲ್ಲಿಗೆಯ್ದಿದೆನು || ೨೩ ||

ಪೋಗೆನೆ ಪೋಪೆ ನಿಂತಿರು ಸುಮ್ಮನೆನೆ ನಾ | ನೀಗ ಮನೆಗೆ ತಿರುಗುವೆನು ||
ರಾಗದಿನುಸುರಿಮೆಂದೆಂಬ ನುಡಿಯ ಕೇ | ಳ್ದಾಗಾರ್ಗೋಪದೇಶಕರು || ೨೪ ||

ಅರಸಿ ಕರಸಲೆಯ್ದದೊಡೆಮಗಪರಾಧ | ಮಿರದಪ್ಪುದರು ಕಾರಣದಿ ||
ಭರದಿಂ ಪೋಗೆನಲಾನುಡಿಯನು ಕೇಳಿ | ಹರುಷದಿನಿಂತೆಂದಳಾಗ || ೨೫ ||

ನಾನರಮನೆಗೆಯ್ದಿ ಮಗುಳ್ವನ್ನಬರುಮತ್ತಾ | ನನ್ನ ಮೊಲೆವಾಲಬೇಡಿ ||
ತಾನಳುವಾಸಿಸುವನು ತಡದಿರಿಮೆನು | ತಾನಂದದಿಂದಾ ಸತಿಯು || ೨೬ ||

ಮನೆಗೆ ಕಳುಹಿ ಉಪಪರಿಯಿರ್ದೆಡೆಗಾ | ಮನದನುರಾಗದಿ ಪೋಪಾ ||
ಅನಿತರೊಳಾ ಶ್ರೀದತ್ತನಿಂತಿದನನು | ಮಾನಿಸಿನೋಳ್ಪೆನೆಂದು || ೨೭ ||

ಅವಳರಿಯದ ತೆರದಿಂ ಬೆಂಬಿಡದೆ ಬಂ | ದವನು ನಿರೀಕ್ಷಿಸುತಿರಲು ||
ಅವಳೊಂದು ಸಂಕೇತಸ್ಥಾನಕ್ಕಿರದೆಯ್ದಿ | ತವಕದಿನುಪಪತಿಯೊಡನೆ || ೨೮ ||

ಸುರತಸುಖದೊಲೋಲಾಡಿಯವನೊಳಿಂ | ತೊರೆದಳು ನಾನೆಮ್ಮ ಮನೆಗೆ ||
ಹರುಷದಿನೆಯ್ದಿ ಸಿಸುವಿಗೆ ಮೊಲೆಯನೀವವುಪಾಯಾಂ | ತರಮ ನಿನಗೆ ತೋರುವೆನು || ೨೯ ||

ಎಂದಾಯೆಡೆಯಿಂದೇಳ್ದು ಬಂದಾತನ | ಮಂದಿರಕೆಯ್ದಿ ಬಾಗಿಲೊಳು ||
ನಿಂದಾವುಪವಲ್ಲಭನಿಮ್ಮಾತನಿಂ | ತೆಂದಳುಕದೆ ನುಡಿಸಿದಳು || ೩೦ ||

ಎಲೆ ಗಾರ್ಗೊಪಾಧ್ಯಾಯರೆ ನಿಮ್ಮೀ | ನೆಲದ ಮಹೀಸುರರುಗಳಾ ||
ಕುಲದೊಳಗತಿಕರುಣಿಗಳು ದಯಾಪರರ | ರಲಘುಪ್ರಸಂಗಿಗಳು || ೩೧ ||

ಸರಸಕಲಾಕೋವಿದರು ಸಜ್ಜನರುರು | ತರಗುಣಗಣಭೂಷಿತರು ||
ಪರಪುರುಷಾರ್ಥನಮೇರುಮೆಂದಾ | ಪುರಮೆಲ್ಲಕೊಂಡಾಡುವುದನು || ೩೨ ||

ಕೇಳಿದೆನದರಿಂದ ಪರದೇಶಿ ನಾಣು ನಿ | ಮ್ಮಾಲಯಕಿಂದೀಗಲೆನ್ನಾ ||
ಬಾಲೆ ಸಹಿತ ಬಂದೆನೀವೂರೊಳಗಾರ | ಕೇಳಲು ಮಲಗುವುದಕ್ಕೆ  || ೩೩ ||

ತೆರಪನಿನಿಸುಕೊಡರದರಿಂ ನಿಮ್ಮೊಳು | ಮರುಕಮುಳ್ಳೊಡೆನಾಮಿಂದು ||
ವೊರಗುದಕ್ಕೆ ನಿಮ್ಮೀಯಾಲಯದೊಳು | ತೆರಪ ಪಾಲಿಸುವುದೆಂದೆನಲು || ೩೪ ||

ಕರುಣವೆದೆಯೊಳಂಕುರಿಸಿಮಳ್ತಿಯಿಂದಿ | ನಿರುಳು ಕಳವಿ ಪರಿಯಂತಾ ||
ಪರದೇಶಿಗಳಿರ ನೀವೆಮ್ಮ ಮನೆಗೆ ಬಂ | ದಿರಿಮೆನಲತಿಮುದದಿಂದಾ || ೩೫ ||

ಮುಸುಡುಗಾಣದ ತೆರದಿಂ ಮೇಲುದರಿಂ | ಮುಸುಕಿಟ್ಟಾ ಮನೆಗೆಯ್ದಿ ||
ಅಸವಸದಿಂ ಕಟ್ಟುವಂಚಿರದೊಳು ಹೊಕ್ಕು | ಸುಸೀಲಸುಖದೊಳೊರಗಿದರು || ೩೬ ||

ಆ ಸಮಯದೊಳು ಹಸಿದು ಮೊಲೆವಾಲಿಲ್ಲದ | ಸಿಸುವಾಕ್ರಂದಿಸುತಿರೆ ||
ಭೂಸುರನಿಂತೆಂದನೆಲೆವಾಸಿಯಾ ಹಸು | ಗೂಸನಗಲಿ ಪೋಗುವುದು || ೩೭ ||

ಹೆತ್ತಮಾತೆಗೆ ಧರ್ಮವೆಯೆಂದು ಬಗೆ ಬೈ | ವುತ್ತಿರಲಾನುಡಿಗೇಳಿ ||
ಮತ್ತಾ ಬಂಧಕಿಯುಪಪತಿಯಿಂದ ನಗು | ತ್ತಿಂತೆಂದಾಡಿಸಿದಳು || ೩೮ ||

ಎಲೆಯುಪದೇಶಿಕರೆ ನನ್ನೀ ನಿಜ | ಲಲನೆ ಹಡೆದ ಹಸುಗೂಸು ||
ಬಲುರೋಗದಿಂ ಸಾವಡರ್ದುದಂತರಿಂ | ಮೊಲೆಗಳೀಕೆಗೆ ಬಿಗಿಯುತಿವೆ || ೩೯ ||

ಅದು ಕಾರಣದಿಂದಾ ಮಗುವನು ಕೊಟ್ಟ | ರದಕೆ ತೊರೆದ ಮೊಲೆವಾಲ ||
ಮುದದಿಂ ಕುಡಿಸುವೆನೆಂಬಾ ನುಡಿಗೇಳು | ತದು ಲೇಸಾಯಿತೆಂದೆನುತ || ೪೦ ||

ಬಾಲಕನನು ಕೊಡಲೊಡನೆ ತೊರೆದ ಮೊಲೆ | ವಾಲನೂಡಿಸುವಾ ಕುಲಟೆ ||
ಲೀಲೆಯಿಂದಾ ಬೆಳಗುಂಜಾವಪರ್ಯಂತ | ರಾಳೊಚಿಸದೊರಗಿರ್ದು || ೪೧ ||

ಹನಿಹೊಗೆ ಮುನ್ನ ಹಸುಳೆಯನಾವುಪಾಧ್ಯ | ಕನ ಕೈಯ್ಯೊಳುಕೊಡುತಾಗಾ ||
ವಿನಯಪೂರ್ವಕದಿಂದಾತನವಜ್ಜೆಗೆ | ಬಿನಮಿತನಾಗಿ ಬೀಳ್ಕೊಂಡು || ೪೨ ||

ಸಾವಧಾನದಿ ಮನೆಯನು ಪೊರಮಟ್ಟು ಮ | ತ್ತಾವುಪಪತಿಯನು ಕಳುಹೀ ||
ಆ ವಧೂ ತನ್ನ ಮನೆಗೆ ಬರಲಿಂತೆಂದ | ನಾ ವಸುಧಾಮರನಾಗಾ || ೪೩ ||

ಎಲೆ ಲಂಡೆ ಹಸಿದ ಹಸುಳೆಮಗುವಿಗೆ ನನ್ನ | ಮೊಲೆಯನುಣಿಸಬೇಕೆಂದು ||
ನೆಲೆಯಾಗಿ ಮರುಕವಿನಿಸುಪುಟ್ಟಿ | ತಿಲ್ಲಾ ಖಳಮಾನಸೆ ಕೇಳ್ನಿನಗೆ || ೪೪ ||

ಎನಲವಳಿಂತೆಂದು ನುಡಿದಳೆನ್ನೊಳು ದೋಷ | ವಿನಿಸಿಲ್ಲವಾ ಭೂವರನಾ ||
ವನಿತೆಯೊಳಾನಿಂತೆಂದು ನುಡಿದೆನೆನ್ನ | ತನೆಯಗೆ ಮೊಲೆವಾಲನಿತ್ತು || ೪೫ ||

ಒಂದು ಸಮಯಮಾತ್ರಕೆ ಮಗಳುವೆನೆನ | ಲೆಂದಳು ನಿನ್ನ ಸಿಸುವನು ||
ತಂದುಕೊಡಿಸುವೆನು ಸೈರಿಸೆನುತ ತನ್ನ | ಸಂದಣಿಸಿದ ಸಖಿಯರೊಳು || ೪೬ ||

ಕರೆದೀರ್ವರನೀಮೀಕ್ಷಣದೊಳು ಪೋಗಿ | ಭರದಿಂದಾದ್ವಿಜಪತಿಯಾ ||
ತರುಣನ ತಂದೀವುದೆಂದು ಕಳುಹಲ | ವರಿರದೈದಿ ನಮ್ಮ ಬಾಗಿಲೊಳು || ೪೭ ||

ನಿಂದು ಬಾಲನ ಬೇಡುವ ವೇಳೆಗೆಮ್ಮೀ | ಮಂದಿರದೊಳಗತಿಥಿಗಳು ||
ಬಂದು ಮಲಗಿ ಮಗುವಿಗೆ ಮೊಲೆಯನು ಕೊಡು | ವಂದವೆಲ್ಲಮನಿರದರಿದು || ೪೮ ||

ಏಕಿನ್ನೀ ಮಗುವನು ಕೊಂಡು ಪೋಪೆವೆಂ | ದಾ ಕೆಳದಿಯರು ಮಗುಳ್ದು ||
ಭೂಕಾಂತನ ಭಾವೆಗೆ ವರೆಯಲು ಕೇ | ಳ್ದಾಕೆಯಂತರು ಲೇಸೆಂದು || ೪೯ ||

ನಿಲಿಸಿದ ಕಾರಣದಿಂ ನಿಂದೆನಲ್ಲದೆ | ನಿಲುವೆನೆ ನಿಜನಂದನನೇ ||
ಮೊಲೆಗೊಡದೆಂತು ಜೀವವ ಹಿಡಿದಪೆನೆಂದು | ಕುಲಟೆ ಪಿರಿದು ಮಾತನಾಡಿ || ೫೦ ||

ಮತ್ತಮಿಂತೆಂದಳೀ ಮಗುವಿಗೆ ಮೊಲೆವಾಲ | ನಿತ್ತು ಜೀವನವನು ಕಾದಾ ||
ವುತ್ತುಮರವರ ತಡೆದು ಭೋಜನವ ಮಾಡಿ | ಸುತ್ತಾ ಬೀಳ್ಕೊಡುವುದನುಳಿದು || ೫೧ ||

ಬರಿದೆ ಕಳುಹಬಹುದೆಯೆಂದು ನುಡಿದತಿ | ಮರುಕವುಳ್ಳವಳೆಂಬಂತೆ ||
ಮರುಕದಿನಾಮಗುವಿಗೆ ಮೊಲೆಗೊಡುತಿರೆ | ಕಿರಿದು ಹೊತ್ತಿಗೆ ಬೆಳಗಾಯ್ತು || ೫೨ ||

ಇಂತವಳೆಸಗಿದ ಕಾಪಟ್ಯಮನಾ | ದ್ಯಾಂತಮರಿದು ಬಳಿಕವಳಾ ||
ಪಿಂತನೆ ಬಂದು ಕಂಡಾ ಶ್ರೀದತ್ತನ | ತ್ಯಂತ ವಿಸ್ಮಯಚಿತ್ತನಾಗಿ || ೫೩ ||

ಪಿರಿದು ವೈರಾಗ್ಯಹೃದಯನಮೂಗಿಗೆ | ಬೆರಳನಿರಿಸಿ ತಲೆದೂಗಿ ||
ತರುಣೀಜನವೆಸಗುವ ಕಪಟ್ಯಕೆ | ಪಿರಿದು ಕೊಕ್ಕರಗೆಯ್ವುತಾಗಾ || ೫೪ ||

ಎಣಿಸಬಹುದು ಜಲಧಿಯ ವಾಳುಕವ ನಿಂ | ತೆಣಿಸಬಹುದು ಭಗಣವನು ||
ಎಣಿಸಬಾರದು ಸುದತಿಯರ ಕೌಟಿಲ್ಯದ | ಗಣನೆಯನೆಂತಪ್ಪವರು || ೫೫ ||

ಕಾಣಬಹುದು ಕಾಳಾಹಿಯ ಹೆಜ್ಜೆಯ | ಕಾಣಬಹುದು ಬಾಂಗಡೆಯ ||
ಕಾಣಬಾರದು ಕಾಂತೆಯರ ಚಿತ್ತವನಾ | ಕ್ಷೋಣಿಯೊಳೆಂತಪ್ಪವರು || ೫೬ ||

ಕರಿಯ ನರಿಯ ಮಾಳ್ಪರಾನರಿಯನು ಮದ | ಕರಿ ಮಾಳ್ಪಿರಾ ನರಶಿರವಾ ||
ಸೋರೆಗಾಯ ಮಾಳ್ಪಿರಾ ಸೋರೆಯ ತಲೆಯ ಮಾಡು | ವಿರವು ಸಹಜಮಾಸತಿಯರ್ಗ್ಗೆ || ೫೭ ||

ನೋಟವೊಬ್ಬನ ಮೇಲೆ ಬೇಟ ಒಬ್ಬನ ಮೇಲೆ | ಕೂಟ ಒಬ್ಬನ ಮೇಲಿಹುದು ||
ಕೌಟಿಲ್ಯಕರುವಾದ ಸತಿಯರಂತವರೊಡ | ನಾಟವಂತರು ಕಾಳಕೂಟಾ || ೫೮ ||

ಅಂತರಂಗದ ವಿಷ ಬಹಿರಂಗದ ಹಿತ | ವಂತರಿಪದೆ ಫಲಿಸಿಹುದು ||
ಕಾಂತಾನಿಕುರುಂಬಕೆ ಕಾಗೆದೊಂಡೆಯೆಂ | ಬಂತೆ ವಿಚಾರಿಸಿ ನೋಡೆ || ೫೯ ||

ಕಪಟದ ಹೊಲ ಕಾಪಟ್ಯದಾಗರಮಾ | ವಿಪರೀತ ವ್ಯಕ್ತಿಯಸೀಮೆ ||
ಅಪಗತಸಹಜಾಕಾರದಾಗರಮಾ | ಚಪಳಾಕ್ಷಿಯರು ಭಾವಿಸಲು || ೬೦ ||

ಮೊಲದ ಮಂಡೆಯ ಮೇಲೆ ಮೊಳೆಯಿಸುವರು ಕೊಂಬ | ನಲರನಾಗಸದೊಳಾಗಿಪರು ||
ಹುಲಿಯ ಮೊಲೆಯ ಹಿಡಿದಾ ಹಾಲ ಕರೆವರು | ಲಲನಾಜನಕರು ಸಹಜಾ || ೬೧ ||

ಮೈವೊಡ್ಡಬಹುದು ಮೃತ್ಯುವಿನಯಿರಿತಕ್ಕೆ | ಮೈವೊಯ್ದ ಹರನುರಿಗಣ್ಗೆ ||
ಮೈವೊಡ್ಡಬಹುದು ಬಂಧಕಿಯರ ಕೂಟಕ್ಕೆ | ಮೈವೊಡ್ಡುವುದಘಟಿತವು || ೬೨ ||

ಈ ಪರಿಯಿಂ ಕಾಂತೆಯರ ಕದಂಬದ | ಕಾಪಟ್ಯದ ಮಹಿಮೆಯನು ||
ಆ ಪೃಥುವಿಪೂಸುತನೆಣಿಕೆ ಮಾಡುತ್ತಿರ | ಲಾವಗಲಂಕುರಿಸಿದುದು || ೬೩ ||

ಕವಿದ ಕತ್ತಲೆಯೆಂಬ ಕಜ್ಜಳಾದ್ರಿಯನಾ | ದಿವಿಜೇಂದ್ರನಿಡುವೆನೆಂದೆನುತ್ತಾ ||
ತವಕದಿಂದಿಟ್ಟ ವಜ್ರದ ಗುಂಡೆನಲಾ | ರವಿ ಮೂಡಗಡೆಯುದಯಿಸಿದನು || ೬೪ ||

ಆವುದಯದೊಳು ಗಾರ್ಗೊಪಾಧ್ಯಾಯರ ವೋ | ದುವ ಮಟಕೆಯ್ದೆಲೆಂದು ||
ಆ ವಸುಧಿಪಸೂನು ಮುಖದೊಳೆಯಲೆಂದೆನು | ತವರಾವಾಸಮುನಿರದೆಯ್ದಿ || ೬೫ ||

ಮನೆಗೆ ಬರಲು ಕಂಡಾ ಸೋಮಶ್ರೀ | ಜನಕಾಧೀಶನಂದನನಾ ||
ಮಿನುಗುವ ರೂಪು ಲಾವಣ್ಯದಿರವ ಕಂಡು | ಮನದೆಗಂಡುರೆ ಸೋಲ್ತಳಾಗಾ || ೬೬ ||

ಗಂಡುಗಳರಸ ಶ್ರೀದತ್ತಕುಮಾರನ | ಪುಂಡರೀಕೋಪಮಾಕ್ಷಿಯೊಳು ||
ಚಂಡಾಳಿಯಾಸೋಮಶ್ರೀಯ ಕಣ್ಣೆಂಬ | ಚಾಂಡಾಳಿಗಳೆರಗಿದವು || ೬೭ ||

ಆ ರತಿಕಾಂತಿಯವಳ ಲೋಚನವೆಂ | ಬಾರಡಿವರಿಗಳೆಯ್ತಂದು ||
ನೀರನ ನಿಜವದನಾಂಬುಜದೋಳು ಕಾ | ಲೂರಿನಿಂದವು ಪೇಳ್ವನೇನಾ || ೬೮ ||

ಕಂಡ ಮಾತ್ರದೊಳಾ ಕುಲಟೆಯ ಕಣ್ಣೆಂಬ | ಭಂಡಾಟದ ಮಧುಪಗಳು ||
ಚಂಡಿಗೊಂಡವು ಕುವರನ ನಿಡುದೋಳೆಂಬ | ದುಂಡದಂಡೆಯ ಸರಿಗದೊಳು || ೬೯ ||

ಈ ತೆರದಿಂ ಸೋಲ್ತಾ ಬಂಧಕಿ ಧರ | ಣೀತಳೇಶ್ವರನ ನಂದನಗೆ ||
ಪ್ರೀತಿಯಿಂದಾ ಮುದ್ದುಮೊಗಕೆ ನೀರನು ಕೊಟ್ಟು | ಮಾತನಿಂತೆಂದಾಡಿದಳು || ೭೦ ||

ಎಲೆ ಸುಕಮಾರ ನಿನಗೆ ಮಿಗೆ ಸೋಲ್ತೆನೆ | ನ್ನೊಲವನರಿದು ಕೂಡೆಂಬಾ ||
ಖಳಮಾನಸೆಯ ನುಡಿಯ ಕೇಳ್ದಾಕರ | ತಳವ ಕರ್ನ್ನದ್ವಯಕಿಟ್ಟು || ೭೧ ||

ಎಲೆ ಮಾತೃವೆ ಎನ್ನೊಳಗಿನಿಸರಿಯದೆ | ಹೊಲೆ ಹೊದ್ದುವಂತಪ್ಪನುಡಿಯ ||
ಅಲಸಿಕೆಯಿಲ್ಲದಾಡುವರೆ ನಿಮ್ಮೊಳಗೋದು | ಗಲಿವೆನೆಂಬಾಶಿಷ್ಯನೊಳಗೆ || ೭೨ ||

ಗುರುವಿನ ಸತಿಗೆ ಪಿರಿದು ಸೋತೆನಾದೊಡೆ | ಧರಣಿ ಬಾಯ್ದೆರೆದು ನುಂಗುವುದು ||
ನರಕವಹುದು ಪೈಶೂನ್ಯವೊದಗುವುದೆ | ಮ್ಮರಸುಗುಲಕೆ ಹಾನಿಯಹುದು || ೭೩ ||

ನ್ಯಾಯವಿದೆಂದು ನಡೆಯಲು ಬಲ್ಲವರಿಗೆ | ತಾಯಿ ಬೇರೆ ತಂಗಿ ಬೇರೆ ||
ವೊಯ್ಯಾರದಿಂದೋದಗಲಿಸುವ ಗುರುವಿನ | ಜಾಯಾಜನಮಯ ಬೇರೆ || ೭೪ ||

ಎಂದು ಮೇರೆಯ ಮೀರದ ಮಾತನಾನೃಪ | ನಂದನನೊರೆಯಲು ಕೇಳಿ ||
ಬಂದುಗೆವಾಯಿದೆರೆದು ಬಂಧಕಿಯಿಂ | ತೆಂದುತ್ತರಂಗೊಟ್ಟಳಾಗಾ || ೭೫ ||

ನನಗೆ ನೀನೊಲಿದೊಡುಪಾಧ್ಯಾಯರಿಂದೋದ | ನಿನಿಗುಳಿಯದೆ ಕಲಿಸುವೆನು ||
ಎನಗೊಲಿಯದೊಡೋದ ಕಲಿಸುವುದಿಲ್ಲ ಕೇ | ಳನಿತರದಿಂದೊಲಿವುದಿನ್ನೆನಗೆ  || ೭೬ ||

ಓದಿನ ಮೇಗಳೊಲವು ನಿನಗುಳ್ಳೊಡೆ | ಆಧಾರವನು ಮಾಡೆನಗೆ ||
ಓದು ಬೇಡಾದೊಡೆನ್ನ ನುಡಿಯ ವಿಡಂಬಿ | ಸೆಂದಾದೈಕೆಗಿಂತಾಡಿದನು  || ೭೭ ||

ಪರಸತಿಯರ್ಗೆಳಸಲು ಮುನ್ನವೆ ಬಲ್ಲ | ವರ ವಿದ್ಯೆಯೆಲ್ಲ ಹಾರುವದು ||
ಸಿರಿಯಿರದಾಯು ಕುಂದುವದು ಮುಂದಣಗತಿ | ನಿರುತದಿಹಾರಿ ಹೋಗುವದು  || ೭೮ ||

ಅನ್ಯದಿಂದನ್ಯಾಂಗನೆಗೆಳಸಿದೊ | ಡಿನ್ನು ಕಲಿವೆನೆಂಬ ವಿದ್ಯೆ ||
ಭಿನ್ನಮಪ್ಪುದು ತಾಯೆ ಕೇಳಿನಿನ್ನೀನುಡಿ | ನನ್ನಿ ಕೇಳದು ಕಾರಣದಿ  || ೭೯ ||

ಆದೊಡಾಗಲಿದೆಂತಾಗಲಿನಿಂದಿನ | ಪೋದಿರುಳೊಳಜ್ಜುಗಿಸಿದಾ ||
ಪಾದರಮದು ಭೂತಳಕತಿ ಬಿನ್ನಣ | ಮಾದುದೆಲೆ ನಿಜಜನನಿ  || ೮೦ ||

ಒಂದು ಮನೆಯೊಳಿರ್ದ್ದು ಯಜಮಾನನ ಕಣ್ಣ | ಮುಂದೆ ಕಳವನುಜ್ಜುಗಿಸುವಾ ||
ಅಂದವ ನಿನಗಾರು ಕಲಿಸಿದರೆನಲಿಂ | ತೆಂದಾಡಿದಳಾ ಕುಲಟೆ  || ೮೧ ||

ನನಗೀ ವಿದ್ಯೆಯ ಕಲಿಸಿದ ನಿಜಗುರುವಿನ ಕ | ಥನವನುಸುರುವೆನು ||
ಅನುರಾಗದಿಂ ಕೇಳೆಂದಾ ಭೂಸುರ | ವನಿತೆಯಿಂತೆಂದಾಡಿದಳು  || ೮೨ ||

ಈ ಪುರದೊಳು ದುರ್ಗಹರಿಯೆಂಬ ಪೆಸರ್ವಡೆ | ದಾ ಪಾರ್ವನಿರೆ ಭದ್ರೆಯೆಂಬಾ ||
ಚಾಪಲನೇತ್ರೆಗೇಳ್ವರು ಗಂಡುಮಕ್ಕಳು | ರೂಪಯುತರು ಜನಿಸಿದರು  || ೮೩ ||

ಅವರಂತರದೊಳು ಲಕ್ಷಣೆಯೆಂದೆಂಬ | ಯುವತಿ ಯುದಯಗೈದು ಬಳಿಕಾ ||
ನವಯವ್ವನೆಯಾಗದ ಮುನ್ನ ಮದುವೆಯ | ನವಳ್ಗೆಮಾಡಿದರತಿಮುದದಿ  || ೮೪ ||

ಆ ಮದುವೆನು ಮಾಡಲೊಡನಾಕೆಯ ಪತಿ | ಸಾಮವಿಲ್ಲದೆ ಸತ್ತು ಪೋಗೆ ||
ಆ ಮಗಳಾದಿನದಿಂ ಮುಂಡೆಯಾಗಿಯು | ದ್ದಾಮದುಃಖಿತೆಯಾಗಿರ್ದು  || ೮೫ ||

ಅತಿ ಶುಚಿಯಾಗಿ ಅನುಶ್ರುತಸರಯಾ | ವತಿಯೆಂಬ ಹೊಳೆಯೊಳು ಮಿಂದು ||
ನುತಮಪ್ಪ ಸತ್ಕರ್ಮದೊಳಾಚರಿಸುತ | ಮತಿವಂತೆಯಾಗಿರುತಿಹಳು  || ೮೬ ||

ಮತ್ತೊಂದು ದಿನದೊಳಗಾಹೊಳೆಯೊಳು ಮೀ | ವುತ್ತಿರಲಾ ನೀರತಡಿಯ ||
ವೊತ್ತಿಗೆ ಶ್ರೀಧರನೆಂದೆಂಬ ಪಾರ್ವನೆ | ಯ್ದುತ್ತವಳನು ಕಂಡನಾಗಾ  || ೮೭ ||

ಮದವತಿಯವಳಾವಿಲಾಸಮನೀಕ್ಷಿಸಿ | ಮದನಾತುರಚಿತ್ತನಾಗಿ ||
ವದಗಿದ ವಿರಹಾವಸ್ಥೆಯೊಳಾಧೂರ್ತನದಿ | ರದೆ ನುಡಿದನಿಂತೆಂದು  || ೮೮ ||

ವಳಿವೀಚಿಗಳ ವದನದ ಪಾರಿಜಾತದ | ಸುಳಿನಾಭಿಯ ನೀರ್ಮೆಯ್ಯ ||
ಲಲಿತೋತ್ಪಲಗಂಧಿಯೆಂಬ ಕಾಸಾರದೊ | ಳೆಳಸಿ ಮಜ್ಜನವನು ಮಾಳ್ಪಾ  || ೮೯ ||

ಜಂಗಮವನದಂದದಿನೊಪ್ಪವಡೆದ ಲ | ತಾಂಗಿಯ ಯವ್ವನಮೆಂಬಾ ||
ಪಿಂಗದೆ ಬಂದ ಬಸಂತಮಾಸದೊಳು ಮ | ನಂಗೊಳಿಪಂತೆ ಕ್ರೀಡಿಸುವಾ  || ೯೦ ||

ಜನನುತಮಪ್ಪಸೈ | ಪಾವರ್ಗೆ ಕೂಡುವು | ದೆನಲವಳಿಂತು ನುಡಿದಳು ||
ಮನಸಿಜರೂಪಂಗಲ್ಲದೆ ಮನದೊಳು | ನೆನೆದುದು ಕೈಸಾರುವುದೆ  || ೯೧ ||

ಎಂದು ನುಡಿಯ ಕೇಳಿಯನ್ಯೋನ್ಯಪ್ರೀತಿ | ಯಿಂದವರತಿಕಾತರದಿ ||
ಕಂದರ್ಪನೆ ತನುಮನವನು ಮಾರುಗೊ | ಟ್ಟಂದು ನಿರ್ಲ್ಲಜ್ಜಿತರಾಗಿ  || ೯೨ ||

ಆ ಸಿಂಧುವಿನ ತೀರದೊಳೊಂದು ದೇವನಿ | ವಾಸವು ಇರಲಲ್ಲಿಗೆಯ್ದಿ ||
ಓಸರಿಸದೆ ರತಿಕೇಳಿಯೊಳಗೆ ಕೆಲವಾಸರಮ | ತಿ ಸುಖಿಯಿಸುತಾ  || ೯೩ ||

ಒಂದಾನೊಂದು ದಿನದೊಳಾಪಾಣ್ಬಗಿಂ | ತೆಂದು ನುಡಿದಳಾ ಕುಲಟೆ ||
ಯಿಂದುಮೊದಲು ನಾಮಿಲ್ಲಿ ಸುರತಗೆಯ್ವು | ದಂದವಡೆಯದೆಂದೆನಲು  || ೯೪ ||

ಈ ದೇವತೆಯ ಪೂಜೆಯ ಮಾಳ್ಪೆವೆಂದ | ತ್ಯಾದರದಿಂ ಪುರಜನವು ||
ಈ ದೇಗುಲಕೆಯ್ತಂದು ನಾವೆಸಗುವ | ಪಾದರವನು ಕಣ್ಣಾರೆ  || ೯೫ ||

ಕಂಡರಾದೊಡೆ ಕಂಟಕವೆಮಗಹುದು ಭೂ | ಮಂಡಲೇಶ್ವನು ಕೇಳಿದೊಡೆ ||
ದಂಡವನೆಮ್ಮವರೊಳು ಕೊಂಬನದರಿಂ | ಬಂಡಾಗುವುದೆಮ್ಮ ಕಾರ್ಯ  || ೯೬ ||

ಅಂತದರಿಂದಿಲ್ಲಿರದೆ ಮತ್ತೊಂದು ಜ | ನಾಂತರಕೆ ಪೋಗಬೇಕೆಂದು ||
ಮಂತಣವನು ಮಾಡಿ ಮುಂದಣ ಕಾರ್ಯಮ | ನಿಂತೆಂದವಳುಸುರಿದಳು  || ೯೭ ||

ಇಂದಿಗೆಂಟನೆಯ ದಿನಕೆ ನಾನು ಹೊಳೆಯೊಳು | ಬಂದು ಮನೆಗೆ ಮಗುಳ್ವಾಗಾ ||
ಬಂದೆನ್ನಪೆಂಡತಿಯೆಂದು ಹಸ್ತವ ಹಿಡಿ | ಯೆಂದವನನು ಬೀಳ್ಕೊಟ್ಟು  || ೯೮ ||

ಮನೆಗೆ ಬಂದಾ ಮಾತೃಪಿತೃಗಳರಿಕೆಯೊಳು | ನನಗೀ ಜನ್ಮಾಂತರಕೆ ||
ಕನಸು ಮನಸಿನೊಳು ಪುರುಷರನೀಕ್ಷಿಪು | ದನುಚಿತಮೆಂದಾಕುಲಟೆ  || ೯೯ ||

ನೆಟ್ಟನೆ ವ್ರತವ ಧರಿಸಿ ಮುಸುಡಿಗೆ ಮುಸು | ಕಿಟ್ಟಾ ಪುರುಷರು ನಡೆದಾ ||
ಬಟ್ಟೆಯ ಮೆಟ್ಟೆನೆನುತ ಕಕ್ಷದ ಕೂಡ | ಕಿಟ್ಟು ನೀರೊಳು ದರ್ಬೆಯನು  || ೧೦೦ ||

ಚಾರಿತ್ರವಂತೆಯಂದದೊಳಾವಾರಿಯದಾರಿ | ಗಿರದೆ ಚಿಮ್ಮಿಸುತ ||
ನೀರತಡಿಗೆ ಮನೆಗೆಯ್ದುವಳವಳಾ | ಧಾರಿಣಿ ಪೊಗಳುವಂದದೊಳು  || ೧೦೧ ||

ಕಂಡಕಂಡವರೆಲ್ಲಮಿಂತಪ್ಪ ವ್ರತವ ಕೈ | ಕೊಂಡ ಸಚ್ಚರಿತೆವಂತೆಯರಾ ||
ಕಂಡುಕೇಳಿದುದಿಲ್ಲವೆಂದಾಕುಲಟೆಯ | ಕೊಂಡಾಡುತಿರಲೊಂದು ಪಗಲು  || ೧೦೨ ||

ಪುರವರಮೆಲ್ಲಾಮರುಗುವಂದದೊಳುರೆ | ಮರುಳನವಳ ನುಡಿಯಿಂದಾ ||
ಮರುಳಾದವರಂತೆ ಮೈಮರೆದೆಲ್ಲೆಡೆ | ತಿರುಗಿ ತಿರುಗಿ ನಡೆತರುತ  || ೧೦೩ ||

ಹೊಳೆಯ ತಡಿಗೆ ಪೋಗಿ ಮಗಳ್ವದ ಕಂಡಾ | ಗಳೆ ತಾನವಳೆಡೆಗೆಯ್ದಿ ||
ತಳುವದೆ ಬಂದೆಲ್ಲರು ಕಾಣ್ಬಂತೆನ್ನ | ಲಲನೆ ನೀನಾವೆಡೆಗೆಯ್ದಿರ್ದೆ || ೧೦೪ ||

ಎನ್ನ ಮನೆಗೆ ನಡೆಯಂದತಿ ಭರದಿಂದ | ತನ್ನ ಹಸ್ತವನೊತ್ತಿ ಹಿಡಿಯೆ ||
ನನ್ನ ವ್ರತವ ಕೆಡಿಸಲುಬಹುದೆಯೆಂದ | ಗನ್ನಕಾತಿಯು ಮೊರೆಯಿಡಲು  || ೧೦೫ ||

ಆ ಮೊರೆಯನು ಕೇಳುತಾ ಪುರಜನಮೆಲ್ಲ | ಯೀಮಾನಿಯ ವ್ರತಯುತೆಯಾ ||
ಶ್ರೀಮದಖಿಲಚರಿತೆಯ ಕೈವಿಡಿಯಲು | ದ್ದಾಮಮಿದಚ್ಚರಿಯಾಯ್ತು  || ೧೦೬ ||

ಎಂದತಿಕೋಪದಿ ದಡಿಗುಂಡುಗೊಂಡ | ಲ್ಲಿಂದವನಿರದೋಡಿಪೋಗಿ ||
ಮಂದೇತರಭೀರುವಿಂದ ಬಂದಾದೇವ | ಮಂದಿರದೊಳಡಗಿರಲು  || ೧೦೭ ||

ಇತ್ತ ಲಕ್ಷಣೆ ತನ್ನ ತಂದೆ ತಾಯಾದಿಯ | ಮೊತ್ತದ ಬಂಧು ಜನಗಳಾ ||
ಹತ್ತಿರಕೆಯ್ದಿ ನನ್ನೀ ಸುವ್ರತಕೆ ಭಂಗ | ವೆತ್ತುದು ನಿಶ್ಚಯಮಾಗಿ  || ೧೦೮ ||

ಎನಗಿನ್ನೇಕೆ ಬರ್ದುಂಕಗ್ನಿಕುಂಡವ | ನನುಮಾನಿಸದೆ ಪೊಗುವೆನು ||
ಇನಿಸು ತಡೆಯದಂತದನು ರಚಿಸಿಯೆಂ | ದೆನಲವರಿಂತು ನುಡಿದರು  || ೧೦೯ ||

ಎಲೆ ಬ್ರಹ್ಮಚಾರಿ ಪ್ರಮಾದದೋಷದಿ ಬಂದು | ನೆಲಸಿದ ಪಾಪಕ್ಕೆ ತಕ್ಕಾ ||
ಪಲವು ಪರಿಯಪ್ರಾಯಶ್ಚಿತ್ತಮುಂಟದ | ನಲಸದೆ ನಾವೆಸಗುವೆವು  || ೧೧೦ ||

ಅಂತರಿಂದಗ್ನಿಕುಂಡಕೆಯ್ದುವೆನೆಂಬ | ಚಿಂತೆ ನಿನಗೆ ಬೇಡವೆಂದು ||
ಮಂತಣಗೊಂಡೆಲ್ಲರು ಪೇಳಲು ಕೇ | ಳ್ದಂತೆಗೆಯ್ವೆನೆಂದವಳು || ೧೧೧ ||

ಎಕ್ಕಟಿಯೊಳಗಿರ್ದೊಂದು ಮಂದಿರದೊಳು | ಹೊಕ್ಕಿರಲಾವೇಳೆಯೊಳು ||
ದಿಕ್ಕನೋರ್ವಳು ಜೋಗಿಣಿ ಬಂದು | ಭಿಕ್ಷವನಿಕ್ಕಿಯೆಂದೆನುತಂಗಣಕೆ  || ೧೧೨ ||

ಬರಲವಳು ಕಂಡಾಧೂರ್ತೆಯವಳೊಳಿಂ | ತೊರೆದಳೆಲೆ ಜೋಗಿಣಿತಿ ||
ಸುರುಚಿರಮಪ್ಪೆನ್ನೀ ಸುವ್ರತಕೆ ಭಂಗ | ಮಿರದಾಯ್ತಂತದರಿಂದಾ  || ೧೧೩ ||

ಪ್ರಾಯಶ್ಚಿತ್ತನಿಮಿತ್ತ ಜೋಗಿಗಳ ನಿ | ಕಾಯಕೊಲಿದು ಪಾತ್ರೆಯನು ||
ವೊಯ್ಯಾರದಿಂ ತುಂಬಿಸಬೇಕು ಮದ್ಯವ | ನೀಯಿರುಳೆಯ್ದದ ಮುನ್ನಾ  || ೧೧೪ ||

ತಂದುಕೊಡೆಂದು ಹತ್ತೆಂಟು ಹಣವನಾ | ನಂದದಿ ಕೊಡಲು ಜೋಗಿಣಿತಿ ||
ಅಂತಾ ಮಧ್ಯವಕೊಂಡು ಬರಲು ತನ್ನ | ಮಂದಿರದೊಳಗಿರಿಸುತವೆ  || ೧೧೫ ||

ನಾಳಿನುದಯಕೆ ನಿಮ್ಮಾ ಜೋಗಿಗಳ ನೀ ನ | ಮ್ಮಾಲಯಕೆಯ್ದಿಸಿ ಬಳಿಕಾ ||
ಹೇಳಲೇನು ಮದ್ಯವನಾಪಾತ್ರೆಯ | ನಾಳೋಚಿಸದೆ ತುಂಬಿಸುವೆನು  || ೧೧೬ ||

ಆ ನಾಳಿನುದಯಂಬರ ನಮ್ಮ ಮನೆಯೊಳು | ನೀನಿರು ಪೋಗಲು ಬೇಡಾ ||
ಆನಂದದಿಯವಳಿರಿಸಿಕೊಂಡು ಮ | ತ್ತಾನದವಳ್ಗೆ ಮಧ್ಯವನು  || ೧೧೭ ||

ಗಂಟಲ್ವರ ಹೊಟ್ಟೆತುಂಬುವ ತೆರದಿಂ | ದುಂಟಾಗಿಯೆರೆದಾಮನೆಯಾ ||
ಗೊಂಟಿನೊಳವಳ ಕೆಡಹಿ ನಡುವಿರುಳೊಳು | ತುಂಟೆ ಮನೆಯ ಪೊರಮಟ್ಟು  || ೧೧೮ ||

ಹೊರಕಟ್ಟಿತಟ್ಟಿ ಮತ್ತಾ ಮನೆಯವರಾ | ರರಿಯದಂದದಿನಾಗೃಹದಾ ||
ಹೊರಗಣ ಮಂಜೂರಿನ ನಾಲ್ದೆಸೆಯೊಳ | ಗರಿದೂದಿ ಬಲು ಗಿಚ್ಚನಿಕ್ಕಿ  || ೧೧೯ ||

ಆ ಪುರವನು ಪೊರಮಟ್ಟು ದೇಗುಲದೊಳಿ | ರ್ದಾಪಾಣ್ಬನ ಕೂಡಿಕೊಂಡು ||
ಆ ಪಗಲೊಗೆಯದ ಮುನ್ನನ್ಯದೇಶಕ್ಕೆ | ಆ ಪಾಣ್ಬೆಯಂಜದೆಯ್ದಿದಳು  || ೧೨೦ ||

ಇತ್ತಲುದಯವಾಗಲು ಮನೆಯೊಳು | ಸತ್ತಾಮಗಳಸ್ರವವೆಂದು ||
ಮತ್ತಲ್ಲಿಸುಡುಸುಣ್ಣವಾಗಿ ಬೆಂದಿರ್ದಾ | ಮುತ್ತಜೋಗಿಣಿತಿಯ ಪೆಣನಾ  || ೧೨೧ ||

ತಾನು ನುಡಿದ ಭಾಷೆಗೆ ತಪ್ಪದೆ ತನ್ನ ಪ್ರಾಣ | ವನೀಗಾಡಿದಳು ||
ಕ್ಷೋಣಿಯೊಳಿಂತಪ್ಪ ಸತ್ಯವಂತೆಯರನು | ಕಾಣೆವೆಂದವರು ಕೊಂಡಾಡಿ  || ೧೨೨ ||

ಜನನೀಜನಕರು ಪಿಂಡಪ್ರದಾನ | ಮನಾದಿನದೊಳೆಸಗಲಾಪುರದಾ ||
ಜನಮೆಲ್ಲವಳ ಕೌಟಿಲ್ಯದಸತ್ಯಕ್ಕೆ | ಮನಗೊಂಡು ಕೀರ್ತಿಸುತಿರಲು || ೧೨೩ ||

ಅತ್ತ ಲಕ್ಷಣೆ ತನ್ನಾ ಜಾರಸಹಮಾಗಿ | ವುತ್ತರದೇಶ ಮಧ್ಯದೊಳು ||
ಬಿತ್ತರವನು ಪಡೆದಾದಶಪುರವೆಂಬ | ಪತ್ತನವನು ವೊಕ್ಕು ಬಳಿಕಾ || ೧೨೪ ||

ಮಣಿಹವನಾಪುರದರಸಿನ ಕೈಯೊಳಗೆಣಿಕೆಯಿಲ್ಲದೆ ಮಾಡಿಕೊಂಡು ||
ಕ್ಷಣಮಗಲದೆ ಸುಖಿಯಿಸುತಿರಲಾ ಲ | ಕ್ಷಣೆ ಹಡೆದಳು ಹತ್ತುಸುತರಾ || ೧೨೫ ||

ಈ ತೆರದಿಂ ಹತ್ತು ಮಕ್ಕಳ ಹಡೆದ | ಪಾತಕಿ ಮುಪ್ಪಾಗುವನ್ನಾ ||
ಪ್ರೀತಿಯಿಂದವನೊಡಗೂಡಿ ರಮಿಸಲ | ತ್ತಾತವರೂರಿಂದ ತನ್ನಾ || ೧೨೬ ||

ಕಿರಿಯಂಣನರ್ಥೋಪಾರ್ಜನೆಯಿಂದ ಮನ | ದೆರಕದಿನಾದಶಪುರಕೆ ||
ತರವರನಾದ ಬೇಸಗೆಯೊಳು ಬಂದೊಂದು | ವಿರುಪದೈವದ ಶಾಲೆಯೊಳು || ೧೨೭ ||

ಮಲಗಿರಲಾವೇಳೆಯೊಳು ಶ್ರೀಧರನಾ | ನೆಲೆಗೆಯ್ತರೆ ಕಾಣುತವನು ||
ಬಲುದೂರ್ಥನೀನೆಂದಾ ನಮ್ಮೂರೊ | ಳಲಸದೆ ತನ್ನ ತಂಗಿಯನು || ೧೨೮ ||

ವ್ರತವ ಕೆಡಿಸಿ ಕೈವಿಡಿದ ಕಾರಣದಿಂ | ಹತವಾದಳವಳುರಿಯೊಳಗೆ ||
ಕ್ಷಿತಿಯರಿಕೆಯೊಳೆಂಬಾನುಡಿಗೇಳ್ದಾ | ಸಿತಗನಲಿ ತನ್ನ ಮನೆಯೊಳು || ೧೨೯ ||

ಬರುತೆಂದನೆಲೆ ಲಕ್ಷಣೆ ನಿನ್ನ ಕಿರಿಯಣ್ಣ | ನಿರುತದಿನೀ ಪಗಲೆಮ್ಮ ||
ಪುರಕೆ ಬಂದಹನೆಂಬಾನುಡಿಯನು ಕೇಳಿ | ಹರುಷದೊಳಿಂತೆಂದಳವಳು || ೧೩೦ ||

ನೀನೀಗಲೆ ಪೋಗಿ ನಿನ್ನ ತಂಗೆಯ ಕೈಯ್ಯ | ನಾನಂದು ಪಿಡಿದ ಕಾರಣದಿ ||
ನಾನಿಮ್ಮ ಮೈದುನಂತದರಿಂದೀಗ | ನೀನೆನ್ನ ಮನೆಗೆಯ್ದೆಂದು || ೧೩೧ ||

ಒಡಗೊಂಡು ಬರಹೇಳಿ ಕಳುಹಲವನು ತನ್ನ | ಮಡದಿ ಪೇಳಿದ ಮಾಳ್ಕೆಯೊಳು ||
ನುಡಿದಳಣ್ಣನ ತನ್ನ ನಿಜಾಲಯಕೊಡ | ಗೊಂಡು ಬರಲು ಕಾಣುತವೆ || ೧೩೨ ||

ಇದಿರಾಗಿ ಬಂದು ನಮಸ್ಕಾರಂಗೆಯ್ದು | ಪದುಳನೆಯ್ದಿಸಿ ಮನೆಗೆ ||
ಮುದದಿ ಮಜ್ಜನ ಭೋಜನವ ಮಾಡಿಸಿ | ತದನಂತರದೊಳಗವನು || ೧೩೩ ||

ತನ್ನನುಜಾತೆಯೆಂಬುದನರಿದಾಕೆಗೆ | ಮುನ್ನೊದವಿದ ಬಡತನಕೆ ||
ತನ್ನಂತಸ್ತದೊಳಗೆ ಮರುಕಗೊಂ | ಡುನ್ನತಿಕೆಯವಿನಯದೊಳು || ೧೩೪ ||

ಆ ತಂಗಿಯುಮಾ ಶ್ರೀಧರನಾ ನಿಜ | ಮಾತೃಗಳೆಲ್ಲರುವೆರಸಿ ||
ಪ್ರೀತಿಯಿಂದಾ ತಮ್ಮ ನಗರಿಗೆಯಾ ಅಗ್ರ | ಜಾತನು ಕೊಂಡೊಯ್ದನಾಗಾ || ೧೩೫ ||

ಇಂತು ಬಂದಾ ಮಾತೃಪಿತೃವರ್ಗಜಾತರ್ಗೆ | ಸಂತೋಷದಿನೆರಗಿದರು ||
ಪಿಂತಣ ಲಜ್ಜೆಯೆಂಬುದು ತೊರೆದಾನಿ | ಶ್ಚಿಂತದಿನಾಸೋಮಶ್ರೀಯು || ೧೩೬ ||

ಮನೆಯೊಳು ಮನೆಗಟ್ಟಿಕೊಂಡೆಮ್ಮೀ ನೆರೆ | ಮನೆಯೊಳು ಸುಖವಾಳುತಹಳೆ ||
ಅನಿತರಿಂದವಳೆ ನನಗೆ ಗುರು ಕಾಣಾ | ಮನಸಿಜಸನ್ನಿಭರೂಪಾ || ೧೩೭ ||

ಇನ್ನೊಂದುನುಮಾನಚಿತ್ರಕಥನದೊಂ | ದುನ್ನತಿಕೆಯನುಸುರುವೆನು ||
ಚೆನ್ನಾಗಿ ಕೇಳೆಂದಾದುಷ್ಟೆಯಾ ಸಂ | ಪನ್ನ ಸುಕೃತಿಗೆಂದಳಿಂತು || ೧೩೮ ||

ಅಭಿನವಭಾವೋದ್ಭವ ವಿಬುಧಾಧೀಶ | ವಿಭವ ತರಣಿನಿಭತೇಜಾ ||
ತ್ರಿಭುವನೈಕಗುಣಯುತ ವಿಕ್ರಮಗುಣಯುತ ಕೇಳ್ | ಪ್ರಭುಕುಲನವರತ್ನದೀಪ || ೧೩೯ ||

ಇದು ಜಿನಪದಭಕ್ತ ಪ್ರಭುರಾಜ ವಿರಚಿತ | ಸದಮಲನಾಪ್ರಭಂಜನನಾ ||
ವಿದಿತಮಪ್ಪಾಕಥೆಯೊಳು ಸಂಧಿ ಮೂರಾಯಿ | ತಿದನು ಭವ್ಯರು ಲಾಲಿಪುದು || ೧೪೦ ||

ಅಂತು ಸಂಧಿ ೩ಕ್ಕಂ ಪದನು ೪೩೪ಕ್ಕಂ ಮಂಗಳಮಹಾಶ್ರೀ