ಶ್ರೀಮದಮರಗುಣಭಾಷಿಯಚಲನು | ದ್ದಾಮಮನುತ್ತಮವರ್ಣಯುತಗೆ ||
ಸೀಮೆಗೆಣೆಯೆನಿಸುವ ಜಿನರಾಜಗು | ದ್ದಾಮಭಕ್ತಿಯೊಳೆರಗುವೆನು  || ೧ ||

ದುಷ್ಟದುರಿತದೂರೀಕೃತರುಲ್ಲಸಿ | ತಷ್ಟಗುಣಾಲಂಕೃತರಿಗೆ ||
ಸಾಷ್ಟಾಂಗವೆರಗಿ ವಂದಿನಿಸುಕೇಡಿಲ್ಲದ | ಭಿಷ್ಟಸುಖವನೆಯ್ದುವೆನು  || ೨ ||

ಐದು ಮಿಸುಗುವಾಚಾರದೊಳಗೆ ನೆಗ | ಳ್ದೈದು ಕುಸುಮಮಾರ್ಗಣನಾ ||
ಕೈದ ಮುರಿದು ಮೈಮೆವಡೆದಾಚಾರ್ಯರ್ಗೆ | ಮೈದೆಗೆಯದೆ ವಂದಿಪೆನು  || ೩ ||

ವಿಪರೀತ ವಿಧಿಯನೆಲ್ಲವ ಬಿಟ್ಟು ಕೈಕೊಳ್ಳಿ | ಯಪವರ್ಗಚರಿತಮನೆಂದು ||
ಉಪದೇಶವ ಮಾಡುವ ದೇಶಿಕರ ನಿ | ಶ್ಚಪಲತೆಯಿಂ ವಂದಿಸುವೆನು  || ೪ ||

ಸಾಧುಗಳಿಗೆ ಸಮ್ಯಗ್ದರ್ಶನವನು | ಬೋಧಚಾರಿತ್ರರಿಗೆರಗಿ ||
ಸಾದರವಿನಿಸಿಲ್ಲದ ಮೋಕ್ಷಮಾರ್ಗಕೆ | ಸಾಧಕನಾನಿರದಹೆನು  || ೫ ||

ಜಿನಮುಖಕಮಲಜನಿತೆ ಜಿತದೋಷೆ ಸ | ಜ್ಜನಸನ್ನುತೆ ಸತ್ಯವಾಣಿ ||
ಅನುಪಗುಣಭೂಷಣೆ ಶಾರದೆಯನು | ನೆನೆದು ಕೋವಿದನಾಗುವೆನು  || ೬ ||

ಕುರುಜಾಂಗಣವಿಷಯದ ಹಸ್ತಿನಾಪುರ | ವರದೊಳು ಕಾಂಡನೆಂದೆಂಬಾ ||
ಧರಣೀಪತಿ ಮದನಾವಳಿಯೆಂಬೋರ್ವ | ಗರಣಿಸಹಿತ ಸುಖಮಿಹನು  || ೭ ||

ಒಂದಾನೊಂದು ದಿನದೊಳೊಪ್ಪುವಡೆದಾ | ಬಂದ ಬಸಂತಮಾಸದೊಳು ||
ನಂದನವನಕೆಣೆಮಿಗಿಲೆನಿಸಿದ ನಿಜ | ನಂದನವನಕತಿ ಮುದದಿ  || ೮ ||

ತರುಣೀಜನಮೆಡಬಲದೊಳು ಬರಲಾ | ಅರಸಿ ಸಮನ್ವಿತಮಾಗಿ ||
ಹರುಷದಿನೆಯ್ದಂದು ತದ್ವನದೊಳಗಾ | ತುರದಿಂ ಮಿಗೆ ಕ್ರೀಡಿಸಿದರು  || ೯ ||

ಇಂತು ವನಕ್ರೀಡೆಯೊಳಿರ್ದು ಬಳಲಿ ಲ | ತಾಂತಮಂಟಪವನಕೆಯ್ದಿ ||
ಕಂತುಕಲಾಕೇಳಿಯೊಳಿರ್ದಾಸುರ | ತಾಂತದೊಳುದ್ಭವಮಾದಾ  || ೧೦ ||

ನಸು ನಿದ್ರೆಯೊಳು ನಲ್ಲಳೊರಗಿರಲೇಳ್ದಾ | ವಸುಧೀಶನಾನಂದನದಾ ||
ಕುಸುಮಿತಮಾದಕುಜಚ್ಛಾಯೆಯೊಳು ಸಂ | ತಸದಿಂ ವಿಹರಿಸುತಿರಲು  || ೧೧ ||

ಆವೇಳೆಯೊಳೊಂದು ಮರ್ಕಟನಾಮದ | ನಾವಳಿ (ಯಿಂ) ಮೈಮರೆದಿರ್ದಾ ||
ಹೂವಿನ ಮಂಟಪಕೆಯ್ತಂದವಳೊಳ | ಗಾವರಿಸಿದ ನೇಹದಿಂದಾ  || ೧೨ ||

ರತಿಚೇಷ್ಟೆಯ ಮಾಡುತ್ತಿರಲಾ ಭೂ | ಪತಿ ಕಂಡಾಶ್ಚರಿವಟ್ಟು ||
ಅರಿಕೋಪದಿಂದ ವಿಟಪೀಚರನನಂದು | ಗತಜೀವನವ ಮಾಡಿದನು  || ೧೩ ||

ಅಂತದ ಕಂಡಾ ಅಬಲೆ ಮರ್ಕಟನ ತನ್ನ | ಪಿಂತಣ ಜನ್ಮಾಂತರದೊಳು ||
ಕಾಂತನಾಗಿರ್ದ ಕಾರಣದಿ ತನಗೆ ಕಡು | ಚಿಂತೆ ಮನವಾವರಿಸೆ  || ೧೪ ||

ಮನೆಗೆ ನಡೆದು ಬಂದಾಸಂಜೆಯೊಳಾ | ಜನಪತಿಯರಿಯದಂದದೊಳು ||
ತನಗತಿಹಿತವೆಯೋರ್ವಳ ಕೈಯಿಂದಾ | ವನಚರಶಬವನು ತರಿಸಿ  || ೧೫ ||

ಎಕ್ಕಟಿಯೊಳಿರ್ದೊಂದು ಪುಲ್ಮನೆಯೊಳ | ಹೊಕ್ಕದು ಸಹಿತ ಕುಳ್ಳಿರ್ದು ||
ಮಿಕ್ಕವಾತಕಿಯಾರರಿಯದಂದದಿ ಕಿಚ್ಚ | ನಿಕ್ಕಿಕೊಂಡಸುವನೀಗಿದಳು  || ೧೬ ||

ಅಂತದಕಂಡಾ ಧರಣಿಪತಿಯ | ತ್ಯಂತವಿಸ್ಮಯಚಿತ್ತನಾಗಿ ||
ಕಾಂತಾಜನದ ಕಪಟಕಂಜಿ ದೀಕ್ಷೆಯ | ತಾಂ ತಳುವದೆ ಧರಿಸಿದನು  || ೧೭ ||

ಈ ರೀತಿಯಿಂ ದೀಕ್ಷೆವಡೆದಾಶೌಂಡಮ | ಹಾರುಷಿಯೀತನೆಂದೆನುತಾ ||
ಆ ರಾಜೇಂದ್ರಚಂದ್ರಂಗಾಮುನಿವೃಂ | ದಾರಕನಿಂತು ನುಡಿದನು  || ೧೮ ||

ಭರತಾರ್ಯಾಖಂಡದ ಕೌಶಂಬಿ | ಪುರದ ಪಲಾಧಿಪನೆಂಬಾ ||
ಅರಸ ಜ್ವಾಲಾವತಿಯೆಂಬ ಸುದತಿಗೂಡಿ | ಧರೆಯ ಪಾಲಿಸುತೊಪ್ಪುತಿಹನು  || ೧೯ ||

ಅಲ್ಲಿ ಪುರೋಹಿತನಪರಾಜಿತಗೆ ಉ | ತ್ಫುಲಾಕ್ಷಿ ಜಯಮಾಲೆಯೆಂಬ ||
ವಲ್ಲಭೆಗುದಯಿಸಿದನು ಪಾಲನೆಂದೆಂಬ | ಸಲ್ಲಲಿತಾಕಾರಯುತನು  || ೨೦ ||

ಅವನಂತರದೊಳು ಶ್ರೀದೇವಿಯೆಂದೆಂಬ | ಯುವತಿ ಜನಿಸಿ ನೆರೆ ಬೆಳೆದು ||
ನವಯವ್ವನೆಯಾಗಲು ಕಂಡಾಪಿತೃ ನ | ವವಿಧ ವೈಭವದಿಂದ  || ೨೧ ||

ಮಗಧದೇಶದ ಮಧ್ಯದೊಳು ರಾಜಗೃಹವೆಂಬ | ನಗರಿಯ ಜಯಭದ್ರನೆಂಬಾ ||
ಸುಗುಣಗೆ ಶುಭಲಗ್ನದೊಳು ಮದುವೆಯನೊಗು | ಮಿಗೆ ಸಂಭ್ರಮದಿ ಮಾಡಿದನು  || ೨೨ ||

ಈ ರೀತಿಯಿಂದಿರುತಿರಲು ಮತ್ತವಳಂದು | ಜಾರತನವ ನೆರೆಕಲಿತು ||
ಆ ರಾಜಧಾನಿಯೊಳಾದುಷ್ಟೆ ವೋರ್ವ ಸು | ವ್ವಾರನೊಳಗೆ ಸ್ನೇಹಮಾಡಿ  || ೨೩ ||

ವರವಶೀಕರಣದವಿದ್ಯೆಯಂಬರ | ಚರವಿದ್ಯೆಯೆಂಬಿವೆರಡು ||
ವರಸುತಮಾಂಸಭಕ್ಷಣ ಸಮಯದೊಳು | ಚ್ಚರಿಸಲೊಡನೆಸಾಧ್ಯಮಹುದು  || ೨೪ ||

ಮುದದಿಂದಾರಾಗ ಬಯಸಿದಳಾ ಬಳಿ | ಗೊದವಿ ಪರಿದು ಬಳಿಕವರಾ ||
ಮುದದಿಂ ತನ್ನ ವಶವ ಮಾಡಿ ಮಿಗೆ ಕೂಡಿ | ಯದಿರದೆ ಸುಖಿಯಿಸಬಹುದು  || ೨೫ ||

ಎಂದು ನಿವೇದಿಸಿಯಾ ಕಾಮಚಾಂಡಾಳಿ | ಯೆಂದೆಂಬಾ ಮಂತ್ರವನು ||
ಅಂದಾಸುವ್ವಾರನುಪದೇಶಿಸಲಾ | ನಂದಮೊದವೆ ಪಠಿಸಿದಳು  || ೨೬ ||

ತಾನು ಕಂಡಾ ಮಂತ್ರವನ್ನೋದಿ ತುಂಬಿರ್ದ | ಮನೆಯೊಳುಸುತಮಾಂಸಾ ||
ತನಗೆ ದೊರಕದಿರಲಾದುಷ್ಟೆಗೆ ಚಿಂತೆ | ಮನದೊಳಂಕುರಿಸಿಕೊಂಡಿಹುದು  || ೨೭ ||

ಈ ಪರಿಯಿಂದೆಣಿಸುತ ಗರ್ಭವಡೆಯಲಂ | ದಾಪುಂಶ್ಚಳಿಯಗ್ರಜಾತ ||
ಆ ಪಾಲನಾಕೌಶಂಬಿಪುರದಿಂ | ದಾ ಪಟ್ಟಣಕೆಯ್ತಂದು  || ೨೮ ||

ಅನುಜಾತೆ ತವುರ್ಮನೆಯೊಳು ಹೆರಬೇಕೆಂ | ದೆನುತೊಡಗೊಂಡು ಮತ್ತವಳಾ ||
ಅನುರಾಗದಿಂದೊಂದುಪಗಲಾನಗರಿಯ | ಜನನುತಗುಣಿಪೊರಮಟ್ಟು  || ೨೯ ||

ಕೆಲದೂರ ಬಂದಾದಾರಿಯ ನಡೆದೊಂ | ದಲಸಿಕೆ ಹೆರಹಿಂಗಲೆನುತ ||
ಯಲರ್ವಟ್ಟೆಯನುರೆ ಚುಂಬಿಪ ವಿಂದ್ಯಾ | ಚಲದ ತಪ್ಪಲಕಾಡಿನೊಳು  || ೩೦ ||

ಹಲಹಣ್ಣುಕಾಯಿಪರ್ಬಿದಾಲದಮರದ ಸ | ಲ್ಲಲಿತಮಪ್ಪಾಚ್ಛಾಯೆಯೊಳು ||
ಮಲಗಿರಲಲ್ಲಿ ಮತ್ತವ ತನ್ನ ಮೈಮರೆದೊಂ | ದು ಲತೆವನೆಯೊಳಗೆ  || ೩೧ ||

ಬೇನೆ ಕೆರಳಿ ಗಂಡು ಮಗುವನು ಹಡೆದಂದು | ತಾನೋದುವ ಮಂತ್ರವನು ||
ಅವಳುಚ್ಚರಿಸುತ ಮುಂದಣ ಸೂನುವ ಕೊರ | ಳನಿರದೆನೌಕಿದಳು  || ೩೨ ||

ಆ ಕೊಲೆಯಿಂ ಸತ್ತಾಸಿಸುವಿನ ಮೇಲೆ | ಯಾಕಾಮಚಾಂಡಾಳಿ ಬಂದು ||
ಸ್ವೀಕಾರಂಗೆಯ್ದುರು ಜೀವವನಂದಾಕಾ | ಮುಕಿ ಕಾಣುತವೆ  || ೩೩ ||

ವನಿತೆ ವೇಗದಿ ಮತ್ತೊಮ್ಮೆ ಕೊರಲಮುರಿ | ದಿನಿಸು ತಡೆಯಿಂದಾಶಿಶುವಾ ||
ಮನದೊಳಗಿನಿಸು ಹೇಸಿಕೆಯೆಂಬುದಿಲ್ಲದೆ | ಘನ ಕುಕ್ಕುಟಸರ್ಪನಂತೆ  || ೩೪ ||

ಆಕಾಶಕೆ ಪಾರಲಾತ ನಿರೀಕ್ಷಿಸು | ತೀ ಕುಂಭಿನಿಯೊಳಿಂತಪ್ಪಾ ||
ಆಕಸ್ಮಿಕವುಂಟೆಯಂದು ನಾಸಿಕಕಾ | ತಾಕೈಯ್ಯನಿಟ್ಟು ಚಿಂತಿಸುತ || ೩೫ ||

ಘನಕೋಪದಿಂ ತಂಗಿಯೆಸಗಿದ ಕೃತ್ಯವ | ನನುವದಿಸಲ್ಕೇಳುತವೆ ||
ಜನನಿ ಜಯಶ್ರೀಯಿಂತೆಂದಳಾ ನಿಜ | ತನುಜಾತನಾಪಾಲನೊಳು  || ೩೬ ||

ತರುಣಿ ನೀನೊಡಗೊಂದು ಬರದೆ ಸುಮ್ಮನೆ ನಡೆತಹುದನುಚಿತವು ||
ನಿರುತಮಲ್ಲಿದು ತಾನೆಂಬ ಮಾತೆಯ ನುಡಿ | ಗಿರದೆ ಪಿರಿದು ಕೊಕ್ಕರಿಸಿ  || ೩೭ ||

ತಂದೆಯಕೂಡೆ ನಿವೇದಿಸಲವನಿಂ | ತೆಂದೆಣಿಕೆಯ ಮಾಡಿದನು ||
ಸಂದ ಪಾತಕಿಯಾ ವಿದ್ಯೆಯನಾಮಗ | ಳಿಂದ ಕಲಿತು ಸುಮ್ಮನಿರದೆ  || ೩೮ ||

ಎಲ್ಲವ ತಿಂದು ತೇಕುವದಕ್ಕೆ ಹೇಸುವ | ಳಲ್ಲವೆಂದಾಸುದತಿಯರಾ ||
ಪೊಲ್ಲಮಪ್ಪಾಮಾಯೆಗೆ ನೊಂದಾದ್ವಿಜ | ವಲ್ಲಭನಶ್ಚರಿವಟ್ಟು  || ೩೯ ||

ರಕ್ಕಸಿಯರು ಮೊದಲಾಗಿ ಹಡೆದ ಹಸು | ಮಕ್ಕಳ ತಿಂದವರಿಲ್ಲ ||
ಉಕ್ಕೇವದಿಂದವಳೆಸಗಿದ ಬಲುಪಾತ | ಕಕ್ಕಿಳೆಯೊಳು ಪಡಿಯುಂಟೆ  || ೪೦ ||

ಅಪರಾಜಿತನಣುಗಿನ ಸುತೆಯಂತಪ್ಪ | ವಿಪರೀತ ಚರಿತವ ಕಲಿತು ||
ಅಪಗತಸುಕ್ರುತಸಂಯುತೆಯಾದಳೆಂದೆಂ | ಬಪಕೀರ್ತಿಯನೆಂತು ಕಳೆಯಬಹುದು || ೪೧ ||

ಮಗಳು ಮಾಡಿದ ದೋಷಕೆ ಮಿಗೆ ಪೇಸದೆ | ಬಗೆಗೊಂಡಳಾನಿಜಜನನಿ ||
ಅಗಣಿತದೋಷಾಲಂಕೃತೆಯಾದಳೆಂ | ದೊಗುಮಿಗೆ ಮನದಿ ಕೊಕ್ಕರಿಸಿ  || ೪೨ ||

ವೈರಾಗ್ಯವನುರೆ ತಳೆದಾ ಪಾಲಕು | ಮಾರವೆರಸಿ ದೀಕ್ಷೆಯನು ||
ವೀರಾಚಾರ್ಯರೆಂಬರ ಪಾದಮೂಲದೊ | ಳಾರಯ್ಯದೆ ಧರಿಸಿದನು  || ೪೩ ||

ಈ ತೆರದಿಂ ದೀಕ್ಷೆವಡೆದಪರಾಜಿತ | ನೀತ ತಾನೆಯವನೀಶ ||
ಈತನೆಂದವರ ಪ್ರಪಂಚವ ನಯಕಿತಿ | ಯಾತುಳಿಲಾಳ್ಗುಸುರಿದನು  || ೪೪ ||

ಈ ರೀತಿಯಿಂದಾ ಕಥೆಯನುಸುರೆ ಜಯ | ಮೇರುಮುನೀಶ್ವರರೊಂದು ||
ಚಾರಿತ್ರದ ಕಥನವನ್ನೊರೆದನು ಗಂ | ಭೀರತರಸ್ವರದಿಂದ  || ೪೫ ||

ಎಂತೆನಲಾಕಥೆ ಮೇರುಮಹೀಧರ | ದಂತಕದೆಶೆಯಭರತದಾ ||
ಸಂತತಮೆಸೆವವಿನೀತಾಖಾಂಡದ | ಕುಂತಳಮೆಂಬ ದೇಶದೊಳು  || ೪೬ ||

ಜಿತಶತ್ರುವೆಂಬಮಹೀಪತಿ ವಿಜಯಾ | ವತಿಯೆಂಬ ವಲ್ಲಭೆಗೂಡಿ ||
ಕ್ಷಿತಿತಳವನು ಕೀರ್ತಿನಗರವೆಂಬುದನು | ನ್ನತವಿಭವದಿನಾಳುತಿಹನು  || ೪೭ ||

ಅವಗತಿಹಿತ ಜಯನೆಂಬ ಸಚಿವನಾ | ದಿವಿಜಧಿಪಗೆ ಮಂತ್ರಿಯಾಗಿ ||
ಸುವಿದಿತನಾಗಿ ಬೃಹಸ್ಪತಿಯಂತವ | ನವನಿಯೊಳತಿಕೀರ್ತಿ ಪಡೆದು  || ೪೮ ||

ಅವಗೆ ಜಯಶ್ರೀಯೆಂಬ ಹೆಸರನಾಂತ | ಯುವತಿ ವಲ್ಲಭೆಯಾಗಿಹಳು ||
ಅವರೀರ್ವಗೀರ್ವರು ತನುಜಾತರು | ದ್ಭವಿಸಿದರತಿರೂಪಯುತರು  || ೪೯ ||

ಅಂತವರೀರ್ವರು ಬೆಳೆದು ಸದ್ವಿದ್ಯಾ | ಸಂತತಿಯನು ಮನಮೊಸೆದು ||
ಅಂತರಿಸದೆ ಅಭ್ಯಾಸಂಗೆಯಿದತಿ | ಸಂತಸದಿಂದಿರುತಿರಲು  || ೫೦ ||

ಹಿಂದಳಭವದೊಳು ರಾಕ್ಷಸಿಯಾದುದ | ರಿಂದಾಮಕ್ಕಳ ತಾಯ್ಗೆ ||
ಅಂದಿನ ರಾಕ್ಷಸವಿದ್ಯೆಯನೊಂದಾ | ನೊಂದು ದಿನದೊಳೆಯಿತಂದು  || ೫೧ ||

ಬೆಸನನೆನಗೆ ಬೇಗದೊಳೀವುದೆಂದಾ | ಅಸುರವಿದ್ಯಾದೇವತೆಯನು ||
ವಸೆದು ತನ್ನಯ ಕೈವಶ ಮಾಡಿಕೊಂಡು ಸಂ | ತಸದೇಳ್ಗೆಯಿನಿರುತಿರಲು  || ೫೨ ||

ನರಮಾಂಸಭಕ್ಷಾಪೇಕ್ಷೆ ಮನವನಾ | ವರಿಸಲ್ಕಾಮಂತ್ರಿಯಬಲೆ ||
ನಿರವದ್ಯಮಪ್ಪಾಹಾರಕೆ ಮನವನು | ತರದೆ ಮೌನಂಗೊಂಡಿಹಳು  || ೫೩ ||

ಇಂತಿರಲಾ ಮಕ್ಕಳು ತನ್ನಯ ಜ | ನ್ಮಾಂತರದೊಳಗರಿತನಕೆ ||
ಅಂತರಿಸದೆ ವೈರಿಗಳಾದ ಕಾರಣ | ದಿಂ ತಾನವರನೀಕ್ಷಿಸುತ  || ೫೪ ||

ಮುನಿಸಂಕುರಿಸಿಕೊಂಡಿರುತಿರಲಾ ನಿಜ | ಜನಕ ತನ್ನಗ್ರನಂದನಗೆ ||
ಜನನುತಮಪ್ಪ ವೈಭವದಿಂದ ಮದುವೆಯ | ನನುರಾಗದಿಂ ಮಾಡಿದ  || ೫೫ ||

ಆ ಮದುವೆಯ ಮಾಡಿದ ರಾತ್ರೆಯೊಳು ಬಂ | ದಾಮದವಳಿಗಿತ್ತಿಸಹಿತ ||
ಕಾಮದೆಯೆಯ್ದಿ ನಂದನನು ನಿದ್ರೆಯೊಳಗಿ | ರ್ದಾಮನೆಗಿರದೆಯಿತಂದು  || ೫೬ ||

ಕರಶಾಖಾನಖದಿಂದೊಡಲನು ಬಗೆದುರು | ತರಮಪ್ಪರೌದ್ರದೊಳು ||
ಕರುಣಮಿಲ್ಲದೆ ಕೊಂದು ತಿಂದು ಬಳಿಕ್ಕಾ | ಕರಕಿರಣೋದಯದಲ್ಲಿ  || ೫೭ ||

ಎನ್ನ ಮಗನನೀ ರಾತ್ರೆಯೊಳಗೆ ಬಂ | ದುನ್ನತಿಕೆಯ ಮುನಿಸಿಂದಾ ||
ಮುನ್ನಿನ ಪಳುವಗೆಯಿಂ ರಕ್ಕಸಿ ಬಂದು | ತನ್ನುದರವ ಪೋಷಿಸಿದಳು  || ೫೮ ||

ಎಂದಾಕ್ರಂದಿಸುತಿರ್ದು ಮತ್ತೀತೆರ | ದಿಂದಾ ನಿಜನಂದನರಾ ||
ಮಂದೇತರಕೋಪದೊಳಿರದೆಯಿತಂದು | ಕೊಂದು ಕೊರೆದು ತಿನುತಿಹಳು  || ೫೯ ||

ಈ ತೆರದಿಂ ಕೊಂದು ತಿನುತಿರೆ ಬಳಿಕ ತ | ನ್ನಾತನುಜಾತರಿಂ ಕಿರಿಯಾ ||
ಖ್ಯಾತಿವಿದನು ಮೇರುವೆಂಬನಧಿಕಸಂ | ಪ್ರೀತಯಿನೊಂದು ರಾತ್ರಿಯೊಳು  || ೬೦ ||

ಇಂದು ರಕ್ಕಸಿ ಬರೆ ಕೊಲ್ಲದೆ ಮಾಣನೆಂ | ದೊಂದು ಕೂರಿಸಿಯನು ಹಿಡಿದು ||
ಬಂದು ತಾನೊರಗುವ ಮಂಚದ ಮೇಲೆ ತಾ | ನಂದು ಮದುವೆಯಾದವಳನು  || ೬೧ ||

ಕೂಡೆ ಮಲಗಿ ಕಣ್ಣೆವೆ ಮುಚ್ಚದಿರಲಾ | ಕಡಾಳಿಯ ಮಾಳಿಗೆಯಾ ||
ಗೋಡೆಯದೊಂದು ಗವಾಕ್ಷದೊಳಗೆ ಕೈಯ | ನೀಡಿದತ್ತಾವಧಾನದೊಳು  || ೬೨ ||

ತನುಜನೆದೆಯ ಸೀಳಲೆಂದಾ ಕೂರುಗು | ರ್ಗೊನೆಯನಂಗದ ಮೇಲಿಡುವಾ ||
ಅನಿತರೊಳಾಖಡ್ಗದಿನಸುರೆಯ ಕೈಯ | ನನುಮಾನಿಸದೆ ಖಂಡಿಸಿದನು  || ೬೩ ||

ಆಹುಯ್ಗಳಿಂದವಳಲ್ಲಿಯಸುವನೀಗ | ಲಾಹದದೊಳಗದನೆಯ್ದಿ ||
ತಾಂ ಹೆತ್ತತಾಯಿವಳೆಂಬುದನರಿದಾ | ದ್ರೋಹಕ್ಕೆ ಬೆಕ್ಕಸಬಟ್ಟು  || ೬೪ ||

ಇನನುದಯದೊಳೆದ್ದಾಕಾರ್ಯಮನಾ | ಜನಕನೊಳಗೆ ಪೇಳಲಾಗಾ ||
ವನಿತೆಯಸಗಿದನ್ವರ್ತ್ಥಕ್ಕೆ ವಿಸ್ಮಯ | ವನುಕರಿಸಿದ ಚಿತ್ತದಿಂದ  || ೬೫ ||

ಹೆತ್ತ ಮಕ್ಕಳ ಕೊಂದು ತಿಂದಳೆಂಬಾ ಪಾತ | ಕಿತ್ತಿಯಂಬಾ ದ್ರೋಹವನು ||
ಮತ್ತೀಲೋಕದೊಳಗೆ ಕಂಡುದಿಲ್ಲವೆ | ನುತ್ತ ವೈರಾಗ್ಯಮಾನಸನು  || ೬೬ ||

ಜಯಮಂತ್ರಿಯು ಮೇರುವೆಂಬ ಮಗನಗೂಡಿ | ಭಯಮುತ್ತು ಬದ್ಧಕಿಲ್ವಿಷಕೆ ||
ಜಯಜಯವೆನೆ ಜಗತೀಮಂಡಳವೆಲ್ಲ | ನಯದಿ ಯಶೋಧರರೆಂಬಾ  || ೬೭ ||

ಮುಂದೆ ಗ್ರಂಥವಿಲ್ಲ