ಶ್ರೀಮೃದುಪಾದಕೊಲಿದು ವಂದಿಪೆನು | ದ್ದಾಮ ಸದ್ಗತಿ ಪಡೆದವನ ||
ಪ್ರೇಮವನಾಕುವರಿಯ ಕಾಣಿಸಿದಾ | ಸ್ವಾಮಿಜಿನೇಂದ್ರಗೆ ವಂದಿಪೆನು || ೧ ||

ಅಡಿಯಣುಪಾದ ಮೇಲಣ ಕಾಳಿಕವನು | ಬಿಡಿಗೆ ಮಾಡಿದ ದ್ವಿಪದಂತೆ ||
ಕಡು ಸೊಗಯಿಸುವ ಪರಂಜ್ಯೋತಿರೂಪ | ನಡಿಗಳಿಗಾನೆರಗುವೆನು || ೨ ||

ಮಧ್ಯಭಾವವನು ಹಿತಾಹಿತಜನದೊಳು | ಸಾಧ್ಯಮಾಡಿ ಕಾಣದ ಕಾರಣದಿಂ ||
ಮಧ್ಯಮಗುರುವೆಂದೆನಿಸಿಕೊಂಡವರ ಶು | ಭದ್ಯಾನದಿಂದ ವಂದಿಪೆನು  || ೩ ||

ಕೊಲೆ ಹುಸಿ ಕಳವನ್ಯವಧುಕಾಂಕ್ಷೆಯೆಂಬವ | ನೆಲೆಯಾಗಿ ಬಿಡಹೇಳಬಲ್ಲ ||
ಸುಲಲಿತ ಬೋಧರುಪಾಧ್ಯಾಯರ ಪಾದ | ಕಲಘುಭಕ್ತಿಯೊಳೆರಗುವೆನು || ೪ ||

ಸತ್ಕೃತ್ಯದಿಂದ ಶ್ರೀಮುಕ್ತಿಮಾರ್ಗವ ಚ | ಮತ್ಕೃತಿಯಿಂದ ಕೈಗೊಂಡು ||
ಉತ್ಕೃಷ್ಟರಾದ ಸಾಧುಗಳ ನೆನೆದು ವಿಲ | ಸತ್ಕೃತಿಯನು ವಿರಚಿಪೆನು || ೫ ||

ಶಾರದೆಯನು ಸಂಗೀತ ಸಾಹಿತ್ಯ ವಿ | ಶಾರದೆಯನು ಭಿನ್ನಗುಣವ ||
ಸಾರದೆ ನುತಿಗೆಯ್ದಿ ಪಡೆವೆನು ಸಂಸಾರ | ಸಾರದೇಳ್ಗೆಯ ಬೋಧವನು || ೬ ||

ಸಮತೆಯಿಂದಲೇ ಜಿನಮತದ ಯಕ್ಷರನು ಸ | ತ್ಕ್ರಮದಿಂದ ನುತಿಸಿ ಪೇಳುವೆನು ||
ವಿಮಲಗುಣಾನ್ವಿತನಾಪ್ರಭಂಜನಭೂ | ರಮಣೇಶನ ಚರಿತೆಯನು || ೭ ||

ಮೇದಿನಿಯೊಳಗುಳ್ಳ ನವಕೋಟಿಮುನಿಗಳ | ಪಾದಮೂಲಕ್ಕಿರದೆರಗಿ ||
ಸಾದರದಿಂದೀಸತ್ಯವಿತೆಯನು ನಿ | ವೇದಿಸುವೆನು ಬಲ್ಲ ತೆರದಿ || ೮ ||

ಸಿಕ್ಕಿ ಭವಾಂಬುಧಿಯೊಳು ದುಃಖಿಸುವನ ಕೈ | ಯಿಕ್ಕಿ ಸತ್ಪಥಕೆತ್ತಿಪಿಡಿದಾ ||
ಚಿಕ್ಕಪ್ರಭೇಂದುವಡಿಗೆ ನನ್ನ ಹಣೆಯ ತಂ | ದಿಕ್ಕಿ ಪೇಳುವೆನು ಸಂಗತಿಯ || ೯ ||

ವೈಷಮ್ಯದಿಂದ ವಾಸವನಾಭನಾಂತದೊಂ | ದೈಸಿರಿಯನ್ನತಿಕೆಯನು ||
ಕೈಸೆಱೆವಿಡಿದಂದದಿನೊಪ್ಪಿಹುದಾ | ಹೊಯ್ಸಳವೆಂದೆಂಬ ವಿಷಯ || ೧೦ ||

ಅದಱೊಳು ಹೊಸವೃತ್ತಿಯೆಂಬಹೆಸರ ಜನ | ಪದವನೊಪ್ಪದಿ ಪಾಲಿಸುವನು ||
ವಿದಿತವಿನೋದಿವಿಕ್ರಮ ಕಲ್ಲಹಳ್ಳಿಯ | ಚದುರ ವಿಜಯಭೂವರನು  || ೧೧ ||

ಆ ಸುಜನೋತ್ತಂಸಗೆ ಸುರಚಿರ ಸದವಿ | ಲಾಸಾನ್ವಿತೆ ಪುಣ್ಯವಂತೆ ||
ಭಾಸುರಗುಣಭೂಷಿತೆ ದೇವಿಲೆಯೆಂ | ಬಾ ಸುದತೀಮಣಿಯಿಹಳು || ೧೨ ||

ಸುಕೃತಿಗಳವರುದರದೊಳುದಯಂಗೆಯ್ದು | ಸಕಲಕಲಾನ್ವಿತನಾಗಿ ||
ಪ್ರಕಟಿಸಿದನು ಪಾಲ್ಗಡಲೊಳಗುದಯಿಸಿ | ದಕಲಂಕಚಂದ್ರನಂದದೊಳು || ೧೩ ||

ಯದುಕುಲವಂಶಸಚಿವಾನ್ವಯಾಂಬರಭಾನು | ಸದಮಲಗುಣಭೂಷಣನು ||
ಮದನಸ್ವರೂಪ ಮಂಗರಸ ನಾನತಿಸ | ಮ್ಮದದಿನೊರೆದನೀಕೃತಿಯ || ೧೪ ||

ಱಾಟಾಳದಂತೆ ಪಲಪ್ರತಿಗಳಿಂ ಕ | ರ್ಮಾಟವಿಯೊಳಗೆ ತೊಳಲ್ವಾ ||
ಅಟಕೋಟಲೆ ಪಿಂಗಲೆಂದು ಬರೆದೆನು ಸ | ಘಾಟಿಕೆಯಿಂದೀ ಕೃತಿಯ || ೧೫ ||

ಪಿಂಗದೆ ಪಿರಿದು ದುಃಖವನೀವ ಯೋನಿಮು | ಖಂಗಳೊಳಗೆ ಹುಟ್ಟಿಯಳಿವ ||
ಗುಂಗುದಿಯನು ನೀಗಲೆಂದುಸುರಿದೆನು ಮ | ನಂಗೊಳಿಪೀಸಂಗತಿಯನು  || ೧೬ ||

ಭವವೆಂಬ ಬಲು ಬಿಂಜದೊಳು ಬಹುದಿನದಿಂ | ಬವಣಿಗೆ ಬಪ್ಪ ಬೇಸರನು ||
ತವಿಸುವೆನೆಂದು ಪೇಳಿದೆನೀ ಕೃತಿಯನೊ | ಲ್ದವಧಾರಿಸುವದು ಬಲ್ಲವರು || ೧೭ ||

ಬಲ್ಲರ ಬಗೆಯ ಬಂದಿಸಿನಿಂದಲ್ಲದೆ | ಸಲ್ಲದೆನ್ನೀಸತ್ಕವಿತೆ ||
ಉಲ್ಲಸಿತಂಬಡೆದಾರತ್ನವಪರಂಜಿ | ಯಲ್ಲಿ ರಂಜಿಪ ತೆಱನಾಗಿ || ೧೮ ||

ಮಕ್ಕಳ ಮುದ್ದುನುಡಿಯನು ಕೇಳ್ವ ಪಿತೃ ಮನ | ಮಿಕ್ಕಿ ಮಮತೆವಡೆದಂತೆ ||
ಚೊಕ್ಕಳಿಕೆಯ ಪಡೆದೆನ್ನ ಕೃತಿಯ ಭವ್ಯ | ರಕ್ಕರುಮಿಗೆ ಲಾಲಿಸುದು || ೧೯ ||

ಮಂದಗಮನೆಯರ ಮಧುರವಚನಕಾ | ಮಂದಾರಕುಜಕುಸುಮವನು ||
ಚಂದದಿ ಪಡೆವಂತೆ ಚದುರರಿದನು ಬಗೆ | ವಂದು ಲಾಲಿಸಿ ಕೇಳುವುದು || ೨೦ ||

ನೊಳನೆಱಗುವದಕಳುಕಿಯಮೃತಾನ್ನವ | ಕಳೆವರೆ ಕಪಟಮಾನಸರು ||
ಪಳಿವುದೆನುತ ಪಾವನತರಚರಿತೆಯ | ನೆಳಸಿ ಪೇಳದೆ ಸುಮ್ಮನಿಹೆನೆ || ೨೧ ||

ಉಂಟಾಗಿ ನೀರೆಱೆದೋವಿದರ ಕಾಲ | ಕುಂಟು ಮಾಡುವ ಬೇಲದಂತೆ ||
ಕಂಟಕವನು ಕಾಣಿಪರು ಕೆಲಂಬರು | ನಂಟು ಮಾಡುವ ಮಾನ್ಯರಿಗೆ || ೨೨ ||

ಮುಂದೆ ಕೇಳಿ ಮುಖದಾಕ್ಷಿಣ್ಯಕನುವಾಯಿ | ತೆಂದು ಪಿರಿದು ಕೊಂಡಾಡಿ ||
ಹಿಂದೆಯದೇತಱದೆಂದು ಹಳಿವ ಖಳ | ವೃಂದಕ್ಕೆ ನಾನಳುಕುವೆನು  || ೨೩ ||

ಅದು ತಾನೆಂತೆನಲವನೀವನಿತೆಯ | ವದನದಂದದಿ ಶೋಭೆವಡೆದು ||
ವಿದಿತಮೆನಿಸಿ ಪೂರ್ವವೆಂಬ ಹೆಸರ ಜನ | ಪದವೆಸೆದಿಹುದು ಚೆಲ್ವಾಗಿ || ೨೪ ||

ರಾಜಹಂಸೋದಿತಭೂಮಿಯಾದುದಱಿಂ | ಯೋಜಿಸಿ ಬುಧರ್ಹೆಸರಿಡಲು ||
ಆ ಜನಪದಮಾಪೂರ್ವವೆಸರನು ವಿ | ಭ್ರಾಜಿಸಿಹುದು ನೋಳ್ಪರಿಗೆ || ೨೫ ||

ಸಿರಿಯಿಕ್ಕೆದಾಣ ಸಿಂಗರಕೆ ತವರ್ಮನೆ | ಸುರಭಿಶರನ ಬೀಡುದಾಣ ||
ಗುರುವಿಕೆಯೆಂಬಗಾಡಿಯ ಭಂಡಾಗಾರ | ದಿರವಾದುದಾಜನಪದವು || ೨೬ ||

ಆ ಪೂರ್ವ(ವಿ)ದೇಹದ ಪುಣ್ಯನಗರಿಯೊಳು | ಶ್ರೀಪೂರ್ಣಭದ್ರನೆಂದೆಂಬ ||
ಭೂಪತಿಭುವನಭುಂಭುಕನು ಭಾಮಿನಿಯೆಂ | ಬಾ ಪೆಣ್ಮಣಿ ಸಹಿತಿಹನು || ೨೭ ||

ಇಂತಿರುತಾಪೂರ್ಣಭದ್ರಭೂವರನತಿ | ಸಂತೋಷದಿಂದೊಂದುಪಗಲು ||
ತಿಂಥಿಣಿಗೊಂಡು ವಿರಾಜಿಪನೃಪರ | ಸಭಾಂತರಾಳದೊಳು ಕುಳ್ಳಿರಲು || ೨೮ ||

ಆ ವೇಳೆಯೊಳೋರ್ವ ವನಪಾಲನೆಯ್ತಂದು | ಶ್ರೀವರ್ಧನಾಚಾರ್ಯರು ||
ದೇವ ಕೇಳಾನೋವುವ ವನಕೆ ಸ | ದ್ಭಾವನದಿ ಬಂದು ನಿಂದಿಹರು || ೨೯ ||

ಎಂದವಗಂಗಚಿತ್ತವನಿತ್ತು ಸುರಪತಿ | ನಂದನವನಕೆಯ್ದುವಂತೆ ||
ಅಂದವ ಹಡೆದಾನೆಯನೇಱಿಯತ್ಯಾ | ನಂದದಿನಾವನಕೆಯ್ದಿ || ೩೦ ||

ಆನೆಯನಿಳಿದೊಳಹೊಕ್ಕತಿ ಭರದಿಂ | ಭೂನಾಥನು ನಡೆತರುತ ||
ಮಾನಿತಮಪ್ಪೊಂದೆಡೆಯೊಳು ಮತ್ತೋರ್ವ | ಜೈನಮುನೀಶ್ವರನಿರಲು || ೩೧ ||

ಆತನರೂಪಾತನನವಲಾವಣ್ಯ | ವಾತನಗಂಡಗಾಡಿಯನು ||
ಭೂತಳಪತಿ ಕಂಡಾಶ್ಚರ್ಯಂಬ | ಟ್ಟಾ ತನ್ನ ತಲೆಯ ತೂಗಿದನು || ೩೨ ||

ದುರುಳತನದಿ ತನ್ನ ಕೆಣಕಿದಂಗಜನಿರ್ಪ | ವರ ವನದುರ್ಗವನಿರದೆ ||
ಹರಿದಾಳಿಯೊಳು ಕೋಳುಗೊಂಡೊಳಹೊಕ್ಕ | ಪರಿಯಲೊಪ್ಪಿದನಾಮುನಿಪಾ || ೩೩ ||

ನನೆಗಣೆಯನ ನವರೂಪವನೆಳೆತಂ | ದನುಮಾನಮಾಡದೆ ತನ್ನ ||
ತನುವೆಂಬ ಸೆಱೆವನೆಯೊಳಗಿಟ್ಟನೆವಲಾ | ಮುನಿಯ ಸೌಂದರ್ಯವೊಪ್ಪಿದುದು || ೩೪ ||

ಉಟ್ಟುದುತೊಟ್ಟುದೆಲ್ಲವು ಮುಕ್ತಿಯೆಂದೆಂಬ | ಬಟ್ಟಜವ್ವನೆಗೊತ್ತೆಯನು ||
ಅಟ್ಟಿ ನಿಂದಂತೆ ನಿಗ್ರಂಥಮಿರದೆಯಳ | ವಟ್ಟುದು ತನ್ಮುನಿಪತಿಗೆ || ೩೫ ||

ಸಂತಸದಿಂದ ಶರಣ್ಬೊಕ್ಕ ಸದ್ಭಕ್ತರ | ಸಂತತಿಯಘತಿಮಿರವನು ||
ಮುಂತುಗೆಡಿಪ ಮುನ್ನೇಸಱಂದದಿ ಮುನಿ | ಕಾಂತನಮೂರ್ತಿಯೊಪ್ಪಿದುದು || ೩೬ ||

ಅನುರಾಗದಿಂ ತಮಗೆಱಗಿದ ಭವ್ಯರಾ | ನನಮನೊಳ್ಪಭಿಲಾಸೆಯಿಂದ ||
ಮಿನುಗುವ ಕಣ್ಬಡೆದಂತುಗುರಿಸಿದವಾ | ಮುನಿಪನ ಪಾದಾಂಗುಲಿಯೊಳು || ೩೭ ||

ರೂಪಿನೊಳೆಗ್ಗಳಮಾದುದಱಿಂ ಪುಷ್ಪ | ಚಾಪನೆಂದಾಡುವರೈಸೆ ||
ಆ ಪುಷ್ಪಸರನಲ್ಲ ಮುನಿಯದಿರಿಂದಾ | ಭೂಪತಿ ಬಂದೆಱಗಿದನು || ೩೮ ||

ಅವಱೊಳು ತನಗತಿ ಮಮತೆ ಸಂಜನಿಸೆ | ಅವನತನಾಗಿ ಬೀಳ್ಕೊಂಡು ||
ತವಕದಿ ಮುಂದಕೆ ನಡೆದೊಂದು ಫಲತೀವಿ | ದವನೀರುಹದ ಮೂಲದೊಳು || ೩೯ ||

ಆ ವನಪಾಲಕ ತನ್ನೊಳಗುಸುರ್ದಾ | ಶ್ರೀವರ್ಧಮಾನರೆಂದೆಂಬಾ ||
ಭಾವೋದ್ಭವಮದಭಂಜನನು ತ | ದ್ಭೂವರನೀಕ್ಷಿಸಿ ಬಳಿಕ || ೪೦ ||

ಬಲಗೊಂಡು ಭಾವಶುದ್ಧಿಯೊಳರ್ಚನಂಗೆಯ್ದು | ತಲೆವಾಗಿ ತಳಿರಡಿದಳಕೆ ||
ಕಲಿನವಿಜಯನಿಂದ ಧರ್ಮಾಧರ್ಮದ | ಕಲೆಯನಱಿತು ನಲವೇಱಿ || ೪೧ ||

ಕಂಜೋಪಮಕರಯುಗಲವ ಮುಗಿದು ಸ | ಮಂಜಸಿಕೆಯೊಳು ಕುಳ್ಳಿದು ||
ರಂಜಿಸುವಾಮುನಿರಾಜಂಗಾನೃಪ | ಕುಂಜರನಿಂತು ನುಡಿದನು || ೪೨ ||

ವ್ರತಿಪತಿ ಕೇಳಾನು ಮೊದಲು ಕಂಡಾರಾಜ | ಯತಿಯಾಖ್ಮ ಮಾಡುವ ತಪಕೆ ||
ಮತಿಯಿತ್ತ ಕಾರಣಮಾವುದವನೊಳು | ನ್ನತಿಕೆಯ ನೇಹಮೆನ್ನೊಳಗೆ || ೪೩ ||

ಉದಯಂಗೈದ ಕಾರಣಮಾವುದು ಮ | ತ್ತಿದಱ ನೆಲೆಯ ವಿವರವನು ||
ಸಮದಲಗುಣಗಣರತ್ನವಿಭೂಷ | ಣ ಮುದದಿನೆನಗೆ ನಿರವಿಪುದು || ೪೪ |

ಎನೆ ಕೆಳುತಾಗ ಸುಜ್ಞಾನಶರಧಿಚಂದ್ರ | ರನುರಾಗವಂಗದೊಳೊಗೆದು ||
ಮನುಜೇಶ ನೀ ಕೇಳ್ದಾ ಮೂಱು ಪ್ರಶ್ನೆಯ | ನನುವದಿಸುವೆವು ಕೇಳೊಸೆದು || ೪೫ ||

ಎಂದು ಗಂಭೀರಮಹಾವಚನದಿ ಮುನಿ | ವೃಂದಾರಕನಿಂತು ನುಡಿದ ||
ಮಂದರಧೀರ ಪ್ರಭಂಜನನೃಪವರ | ನೊಂದು ಕಥೆಯನಾನೃಪಗೆ || ೪೬ ||

ಆ ಕಥೆಯೆಂತೆನೆ ನಾಕನರಕನರ | ಲೋಕಂಗಳಿಹವಾನಡುವೆ ||
ಆ ಕಡಲಾದ್ವೀಪಂಗಳು ನೋಡಲ | ನೇಕಮಾಗಿ ತುಂಬಿಹವು || ೪೭ ||

ಉರುತರಮೆನಿಸುವುರ್ವೀಮಂಡಲವೆಂಬ | ತರಣಿಬಿಂಬದ ಸುತ್ತಲೆಸೆವಾ ||
ಪರಿವೇಶವೆಂಬಂದದಿ ಲವಣಾಂಬುಧಿ | ಪಿರಿದು ಶೋಭಾಸ್ಪದಮಾಯ್ತು || ೪೮ ||

ಅಂಬುಧಿಯಂಬಂಬುಜಾಕರ ಮಧ್ಯದ | ಜಂಬೂದ್ವೀಪವೆಂದೆಂಬ ||
ಜಂಬಾಲಜಾತದ ಕರ್ನಿಕೆಯಂತೆ ಕ | ಣ್ಗಿಂಬಾದುದಾಮೇರುಶಿಖರ || ೪೯ ||

ಅಂಬರವೆಸರಸುದತಿ ನರಲೋಕವೆಂ | ದೆಂಬ ಹಂಚಿನೊಳಂಜನವನು ||
ಯಿಂಬಿನೊಳಿಡಲೆಂದಿಟ್ಟ ಹೆಜ್ಜೊಡರೆಂ | ದೆಂಬಂತೆ ಮೇರುವೊಪ್ಪಿದುದು || ೫೦ ||

ಬಿಸಿಗದಿರ್ವಟ್ಟೆಂಬ ಕಂಬಿಯಚ್ಚಿಂ ಕಾಲ | ವೆಸರ ಕಾರುಕನಾಪ್ರಭೆಯ ||
ಹೊಸಹೊನ್ನಸರಿಗೆದೆಗೆದ ಸುತ್ತುಗಂಭದೊಂ | ದೆಸಕಮಾಯಿತು ಮೇರುಶಿಖರಿ || ೫೧ ||

ಜೋತಿಷ್ಕರಿಂದೇ ಕಾಲವನೊಕ್ಕುದಿ | ಳಾತಳವೆಂಬ ಕಳದೊಳು ||
ವೋತು ವಿಲಯಕರ್ತೃ ನೆಡಸಿದ ಮೇಟಿಯ | ರೀತಿಯಾಯ್ತಾಕನಕಾದ್ರಿ || ೫೨ ||

ಆ ಕಂದರದಿ ತೆಂಕಮಱುವತ್ತುಮೂರುಶ | ಲಾಕಾಪುರುಷರುದ್ಭವಕೆ ||
ಆಕಾರಮಾಗಿಯಾರ್ಯಖಂಡವಿಹುದುವಿ | ಳಾಕಾಂತೆಯಾನನದಂತೆ || ೫೩ ||

ಅದಱೊಳೈವತ್ತಾರುದೇಶಕೆ ತಾನೆಯ | ಗ್ಗದ ಭಾಗ್ಯಮನನುಕರಿಸಿ ||
ವಿದಿತಮೆನಿಸಿ ಶುಂಭದಾಖ್ಯವಡೆದಜನ | ಪದಮತಿರಾಜಿಸುತಿಹುದು || ೫೪ ||

ಅಂಗಸಂಭವನಾಡುಂಬೊಲನಾಮಂಗ | ಲಾಂಗಿಯೊಸೆದು ಕ್ರೀಡಿಸುವಾ ||
ಅಂಗಣವೆನಲತಿ ರಾರಾಜಿಪುದು ಬೆ | ಡಗಿಂದಾಜನಪದವು || ೫೫ ||

ಬೆಳೆಯದವೊಲ ಬೆಳಸಾಗದ ತೆನೆ ತುಂಬಿ | ತುಳುಕದ ಕೆಱೆಕಾಲುವೆಗಳ ||
ತಳೆಯದ ತೊಱೆಗಳೆಂಬಿವು ಮತ್ತಮಾದೇಶ | ದೊಳಗೆ ಭಾವಿಸಿ ನೋಡಲಿಲ್ಲ || ೫೬ ||

ಅಳಿಗಳಿಲ್ಲದ ಪುಷ್ಪವಾಪುಷ್ಪತತಿಯಿಲ್ಲ | ದೆಳೆಲತೆಯಾ ಲತಿಕೆಗಳಾ ||
ತಳೆಯದಿಮ್ಮಾವು ಮತ್ತಾಮಾವುಗಳಿಲ್ಲ | ದಿಳೆಯಿಲ್ಲವಾದೇಶದೊಳು || ೫೭ ||

ಆ ಪಗಲೀಪಗಲೆನ್ನದೆ ನಾ | ನಾ ಪೆಸರ್ವಡೆದಶಾಲಿಗಳು ||
ವ್ಯಾಪಿಸಿ ಬೆಳೆದೊರಗಿದ ಕೈವಲದಿಂ | ದಾಪೃಥ್ವಿ ಕಣ್ಗೆಡ್ಡಮಾಯ್ತು || ೫೮ ||

ಪಡೆದ ತಾಯಿಗೆ ಪ್ರಣಮಿತರಾಗುವಂದದಿ | ನಡೆಸಿದ ಪಾಲ್ದೆನೆಯಿಂದ ||
ಪೊಡವಿಗೆರಗಿ ಗಂಧಶಾಲಿವನದೆಡೆ | ವಿಡದೆ ವಿರಾಜಿಸುತಿಹುದು || ೫೯ ||

ಮಾಗಿ ಬೇಸಗೆ ಮಳೆಗಾಲವೆಂದೆನ್ನದಾ | ವಾಗ ಕುಟುಂಬಿಕದಂಬ ||
ಭೋಗಿಗಳಿಗೆ ಸಲುವಿಕ್ಷುಯಂತ್ರವನು | ರಾಗದಿನಾಡಿಸುತಿಹುದು || ೬೦ ||

ಆ ನಾಡೊಳು ಹುಟ್ಟಿದ ನರರೆಲ್ಲರ | ನೂನಕಲಾಕೋವಿದರು ||
ದಾನಾನುಮೋದಿಗಳನುಪಮಗುಣಿಗಳ | ನೇನೆಂದು ಕೊಂಡಾಡುವೆನು  || ೬೧ ||

ಸಜ್ಜನರಲ್ಲದೆ ದುರ್ಜನರಿನಿತಿಲ್ಲ | ಲಜ್ಜಾಭಾವವೆರಸಿದಾ ||
ಕಜ್ಜಳಾಕ್ಷಿಯರಲ್ಲದೆ ಕಪಟಿಗಳಿಲ್ಲ | ತಜ್ಜನಪದದ ಮಧ್ಯದೊಳು || ೬೨ ||

ಹೊಡೆಯೆಂಬ ಶಬ್ದ ಹೊಂಬಾಳೆಯ ಬನದೊಳು | ಕೊಡನೆಂಬ ನುಡಿ ಕುಲಾಲರೊಳು ||
ಜಡಿಯೆಂಬ ನುಡಿ ಮಳೆಗಾಲದೊಳಲ್ಲದಾ | ಪೊಡವಿಯೊಳಗೆ ನೋಡಲಿಲ್ಲಾ || ೬೩ ||

ಕಾಲಕಟ್ಟೆಂಬುದು ಗಾಳಿಗೆತ್ತಿದ ಗಂಧ | ಶಾಲಿಯ ನವರಾಶಿಗಳೊಳು ||
ಬಾಲಾಶೋಕವೆಂಬುದು ನವನಂದ | ನಜಾಲದೊಳಲ್ಲದಲ್ಲಿಲ್ಲ || ೬೪ ||

ಚಂಡಾಳಿಗಳ ಚಲ್ಲಾಟದೇಳಿಗೆ ಕರ | ದಂಡ ಜಡಾಶ್ರಯದೇಳ್ಗೆ ||
ಬಂಡೆಂಬುಧಾನಾಡ ಕಾಸಾರಮಧ್ಯದ | ಪುಂಡರೀಕದೊಳಲ್ಲದಿಲ್ಲ || ೬೫ ||

ಕುಂದಣಮುಂಟೆಂಬುದಾಕುಂಭಿನಿಯ ಕುರು | ವಿಂದ ಮಾಣಿಕ್ಯಾಧರೆಯರಾ ||
ಸಂದೆಗವಡೆದ ಮಧ್ಯದೊಳಲ್ಲದೆ ವೈಶ್ಯ | ವೃಂದದೊಳಲ್ಲದಿಲ್ಲ || ೬೬ ||

ಮಿತ್ರನಾಗಿ ಮೊಗಗೆಡಿಪೆನೆಂಬುದು ಶತ | ಪತ್ರ ಸಂತತಿಯನೀಕ್ಷಿಸಿದಾ ||
ರಾತ್ರಿರಾತ್ರಿಗಳೊಳಗಲ್ಲದೆ ಮತ್ತಾ | ಧಾತ್ರಿವಲಯದೊಳಗಿಲ್ಲ || ೬೭ ||

ಆ ಜನಪದದೊಳುಳ್ಳಬಲಾಜನದ ಸ | ಮಾಜಕ್ಕೆ ರೂಪುಲಾವಣ್ಯಾ ||
ರಾಜಿಪಚತುರತೆಯೆಂದೆಂಬಿವೆಲ್ಲವು | ನೈಜಮಾಗಿ ಶೋಭಿಪವು || ೬೮ ||

ವಾರಿಜಮುಖಿಯರ ಕಕ್ಷದಂದಿನಗ್ರ | ಹಾರಶೋಭಿತ ಪುಷ್ಪದಂತೆ ||
ಚಾರುಕರಂಬಡೆದಾದ್ವಿರೇಪಗಳಿಂ | ದಾರಾಜ್ಯಮತಿರಂಜಿಪುದು || ೬೯ ||

ರಂಭಾರಮಣನ ರಾಜ್ಯದಂತೆಸೆವಾ | ಶುಂಭದೇಶದ ಮಧ್ಯದೊಳು ||
ಅಂಭೋರಾಶಿಯಣುಗೆಯಿಕೈವನೆಯಾಗಿ | ಭಂಭಾಪುರವೊಪ್ಪಿಹುದು || ೭೦ ||

ಆ ನಗರಿಗೆ ಆಶಾಂಗನೆಯರ ದಿಟ್ಟಿ | ತಾನುರೆತಾಗುವವೆಂದು ||
ಆ ನಳಿನಜನಿಟ್ಟ ಪಸುರ್ವಟ್ಟೆದೆರೆಯನಲಾ | ನಂದನಾಳಿಯೊಪ್ಪಿದುದು || ೭೧ ||

ತುಂಬಿದಟ್ಟಳೆಯಾಳ್ವೇರಿ ಕೋಂಟೆ ಕೊತ್ತಳ | ವೆಂಬಿದಂಗೊಪಾಂಗಮಾಗೆ ||
ಯಿಂಬಾದ ನಗರ ಸಿದ್ಧನ ಜೋಗವಟ್ಟೆಯಂ | ದೆಂಬಂತೆ ಖ್ಯಾತಿಯೊಪ್ಪಿದುದು || ೭೨ ||

ಕಾಲನೃಪನ ಕಾಲಾಳ್ಗಳ ಚೇಟಕ | ಜಾಲದಂತಾಪುರವರದಾ ||
ಸಾಲುವಿಡಿದ ಕೋಂಟೆಯ ಬಿಟ್ಟದೆನೆಯಾ | ಭೀಳಮಾಯ್ತರಿಸಮುದಾಯಕೆ || ೭೩ ||

ಪುರವೆಂಬ ಹೆಸರ ಪುರಂಧ್ರಿ ಸಿಂಗರಿಸಿದಾ | ಭರಣಸಮೂಹದಂತಾಯ್ತು ||
ಅರಸುಮಕ್ಕಳ ಕೇರಿಕೇರಿಯ ನವಮಣಿ | ಗರುಮಾಡವದನೇನನೆಂಬೆ || ೭೪ ||

ಆ ಪುರವನು ಪಾಲಿಷನಭಿನವಪುಷ್ಪ | ಚಾಪನುಜ್ವಲಕೀರ್ತ್ತಿಯುತನು ||
ಕೋಪಕೃತಾಂತನೆನಿಪ ದೇವಸೇನನೆಂ | ಬಾಪೃಥುದ್ವಿಪನೊಪ್ಪಿಹನು || ೭೫ ||

ಆ ನೃಪವರೆಗೆ ಜಯಾವತಿಯೆಂದೆಂಬ | ಮಾನಿನಿ ವಧುವಾಗಿಹಳು ||
ಆ ನನೆಗಣೆಯಗೆ ರತಿ ಸತಿಯಾದಂತೆ | ಮಾನಿತಮದಗಜಗಮನೆ || ೭೬ ||

ರತಿಯ ಚಲ್ವಿಕೆ ಭಾರತಿಯ ಬಲ್ಲವಿಕೆ ಪಾ | ರ್ವತಿಯ ಗುರುವಿಕೆಯಿಂದಿರೆಯಾ ||
ಅತಿಶಯಮಪ್ಪೈಸಿರಿಯಾಭೂವರ | ಸತಿವಪ್ಪಂಬಡೆದಿಹಳು || ೭೭ ||

ಅವರೀರ್ವರಿಗಿರ್ವರು ಸುಕುಮಾರರು | ದಿವಿಜೇಂದ್ರಗಾದಿಗಂಗನಕೆ ||
ರವಿಶಸಿಗಳು ಜನಿಯಿಸುವಂತೆ ಜನಿಯಿಸಿ | ಅವನಿಯೊಳಗೆ ರಂಜಿಸಿದರು || ೭೮ ||

ಅವರೊಳು ಮೊತ್ತಮೊದಲ ಸುಕುಮಾರಗೆ | ಪ್ರವರಸೇನಾಭಿಧಾನವು ||
ಸುವಿಧಾನದಿಂದ ಸುಲಗ್ನದೊಳೆಸೆದಿತ್ತ | ನವನಿಕೊಂಡಾಡುವಂದದೊಳು || ೭೯ ||

ಭಂಜಿತರಿಪುಬಾಹುಭೂಭುಜನಪ್ಪುದ || ಱಿಂ ಜನಪತಿಕೀರ್ತಿಯುತಗೆ ||
ರಂಜಿಸುವನ್ವರ್ಥನಾಮವಿಕ್ಕಿದನು ಪ್ರ | ಭಂಜನನೆಂದತಿಮುದದಿಂ || ೮೦ ||

ಹಿರಿಯತನೂಭವ ಪ್ರವರಸೇನಂಗೆ ಸುಂ | ದರಿಯೆಂಬ ಸುದತೀಮಣಿಗೆ ||
ಸುರಚಿರಕರಮೂರ್ತಿರುಜೆಯೆಂದೆಂಬೊರ್ವ | ವರಗುಣಮಣಿ ಪುಟ್ಟಿದನು || ೮೧ ||

ರತಿಪತಿಸದೃಶ ಪ್ರಭಂಜನಗವನಿಪ | ಸುತೆ ಪೃಥ್ವೀಮತಿಯೆಂಬಾ ||
ಶತದಳನೇತ್ರೆಯ ತಂದು ಮದುವೆಯನು || ನ್ನತ ವಿಭವದಿ ಮಾಡಿದನು || ೮೨ ||

ಅಂತವರೀರ್ವ್ವರ ಬಸಿರೊಳು ರೂಪಜ | ಯಂತಸರಲನೆಂದೆಂಬಾ ||
ಚಿಂತಾಮಣಿನಿಭದಾನಿ ಸಂಜನಿಯಿಸೆ | ಸಂತಸದಿಂದೊಪ್ಪಿದನು || ೮೩ ||

ಆ ಪುತ್ರಪೌತ್ರರೊಡನೆ ದೇವಸೇನಮಹೀ | ಪತಿ ಮೂಲೋಕವನು ||
ಶ್ರೀಸತಿಪತಿ ರಕ್ಷಿಸುವ ತೆರದಿತನ್ನಾ | ಪೃಥುವಿಯನಾಳುತಿರ್ದು || ೮೪ ||

ಒಂದಾನೊಂದು ದಿನದ ರಾತ್ರೆಯೊಳಾ | ನಂದದಿ ನಿಜಸತಿಯೊಡನೆ ||
ಮಂದೇತರಕೇಳಿಯೊಳಿರ್ದುಪ್ಪವ | ಡಂದಳೆದತಿ ಹರುಷದೊಳು || ೮೫ ||

ಮುನ್ನೇಸರ ಕಾಣುತ ಮೊಗದೊಳೆದಾ | ಕನ್ನಡಿಯನು ನೋಡುವಾಗಾ ||
ಕೆನ್ನೆಯೊಳಂಕುರಿಸಿದುದೊಂದು ನರೆಗಂ | ಡಿನ್ನೇಕೆಸಂಶಯವೆಂದು  || ೮೬ ||

ಪರಮವೈರಾಗ್ಯಪರಾಯಣನಾಗುತ | ಹರುಷದಿ ಹಿರಿಯನಂದನಗೆ ||
ಪಿರಿದು ರಂಜಿಪ ವೇಣಾತಟಾಕಾಖ್ಯದ | ಪುರವರವನು ಕೊಟ್ಟನಾಗಾ || ೮೭ ||

ಕಿರಿಯಕುಮಾರ ಪ್ರಭಂಜನಗಾ ತ | ನ್ನರಿಕೆಯ ಬಂಭಾಪುರವಾ ||
ಯೆರಕದಿನಿತ್ತು ವಿಮಲದೀಕ್ಷೆಯನು ನಾ | ಡೆರೆಯನು ಧರಿಸಿದನಂದು || ೮೮ ||

ಕಲಿಗಳರಸ ಕಾಮಿನೀಜನಮನ್ಮಥ | ನಲಘುಪರಾಕ್ರಮಯುತನು ||
ಚಲದಂಕನಾಪ್ರಭುಂಜನೆಸೆದು ಪ್ರಭು | ಕುಲನವರತ್ನದೀಪಕನು || ೮೯ ||

ಇದು ಜಿನಪದಭಕ್ತ ಪ್ರಭುರಾಜ ವಿರಚಿತ | ಸದಮಲನಾಪ್ರಭಂಜನನಾ ||
ವಿದತಮಪ್ಪಾಕಥೆಯೊಳು ಸಂಧಿಯೊಂದಾ | ಯ್ತಿದನು ಭವ್ಯರು ಲಾಲಿಪುದು || ೯೦ ||

ಅಂತು ಸಂಧಿ ೧ಕ್ಕಂ ಪದನು ೯೩ಕ್ಕಂ ಮಂಗಳಮಹಾ ಶ್ರೀ