ಕನ್ನಡಸಾಹಿತ್ಯ ಚರಿತ್ರೆಯಲ್ಲಿ ಹಲವು ಜನ ಮಂಗರಸರ ಪ್ರಸ್ತಾಪ ಬರುತ್ತಿದೆ. ಅವರ ವಿವರ ಹೀಗಿದೆ : ಮೊದಲನೆಯ ಮಂಗರಸನ ಜೈನಕವಿ. ಇವನು “ಖಗೇಂದ್ರಮಣಿದರ್ಪಣ”ದ ಕರ್ತೃ. ಇದು ಒಂದು ವೈದ್ಯ ಗ್ರಂಥ. ಇವನು ಹೊಯ್ಸಳದೇಶದ ದೇವಳಿಗೆಯ ನಾಡಿನಲ್ಲಿಯ ಮುಗುಳಿಯಪುರದ ಅಧಿಪನೆಂದೂ, ಪೂಜ್ಯಪಾದನ ಶಿಷ್ಯನೆಂದೂ ಹೇಳಿಕೊಂಡಿದ್ದಾನೆ. (೧-೧೧,೧೪,೧೫). ಸುಮಾರು ೬ನೆಯ ಶತಮಾನದಲ್ಲಿದ್ದ ಪೂಜ್ಯಪಾದಮುನಿ ೧೪ನೆಯ ಶತಮಾನದ ಮಂಗರಾಜನಿಗೆ ಗುರುವಾಗಿರುವುದು ಅಸಾಧ್ಯ. ಪೂಜ್ಯಪಾದರು ಔಷಧಶಾಸ್ತ್ರದಲ್ಲಿ ಬಲ್ಲಿದರು. ಅವರ ಸಂಸ್ಕೃತಕೃತಿಗಳಿಂದ ಮಂಗರಾಜನು ಅನೇಕ ವಿಷಯಗಳನ್ನು ಎತ್ತಿಕೊಂಡಿರುವುದರಿಂದ ಪೂಜ್ಯಪಾದರನ್ನು ಗುರುವೆಂದು ಸ್ವೀಕರಿಸಿ ಸುತ್ತಿಸಿರಬೇಕು. ಅಲ್ಲದೆ ಪ್ರತಿ ಅಶ್ವಾಸದ ಗದ್ಯದಲ್ಲಿಯ “ಧರೆಗನುರಾಗಮಂ ಹರಿಹರಕ್ಷಿತಿಪಂ ಕುಡುತಿರ್ಪನೊಲ್ಮೆಯಿಂ” ಎಂದು ಹೇಳಿಕೊಂಡಿರುವುದರಿಂದ ಇವನು ವಿಜಯನಗರದ ೨ನೆಯ ಹರಿಹರರಾಜನ ಕಾಲದಲ್ಲಿ ಇದ್ದಂತೆ ತೋರುತ್ತದೆ. ಇವನ ಕಾಲ ಸುಮಾರು ೧೩೮೦.

ಎರಡನೆಯ ಮಂಗರಸ ಬ್ರಾಹ್ಮಣಕವಿ, ಕಮ್ಮೆಕುಲದ ವಿಶ್ವಾಮಿತ್ರಗೋತ್ರದ ರೆಮ್ಮಾರ್ಯ ರಾಮರಸನ ಮಗನು. ಶಶಿಪುರದ ಸೋಮೇಶ್ವರನ ವರಪ್ರಸಾದದಿಂದ ತನ್ನ “ಅಭಿನವ ನಿಘಂಟು” ಅಥವಾ “ಕವಿಮಂಗಾಭಿಧಾನ” ಕೃತಿಯನ್ನು ಶಕ ೧೩೨೦ ಅಂದರೆ ಕ್ರಿ.ಶ. ೧೩೯೮ರಲ್ಲಿ ಬರೆದದ್ದಾಗಿ ತಿಳಿಸಿದ್ದಾನೆ. ಇವನು ನಾಗವರ್ಮನ “ಅಭಿದಾನ ವಸ್ತುಕೋಶ”ದ ನಂತರ, ಅದೇ ಮಾದರಿಯಲ್ಲಿ ಈ ಕೃತಿ ರಚಿಸಿರುವನಾದರೂ ತನ್ನ ನಾಮಾಂಕಿತವನ್ನು “ಅಭಿನವ ಮಂಗರಾಜ” ಎಂದಿಟ್ಟುಕೊಂಡಿರುವುದರಿಂದ “ಖಗೇಂದ್ರಮಣಿದರ್ಪಣ”ದ ಮಂಗರಾಜನೂ ಒಂದು ನಿಘಂಟನ್ನು ಬರೆದಿರಬಹುದೇ ಎಂದು ಊಹಿಸಲು ಆಸ್ಪದವುಂಟಾಗಿದೆ.

ಪ್ರಸ್ತುತ ಮೂರನೆಯ ಮಂಗರಸ ಜಯನೃಪಕಾವ್ಯ, ಸಮ್ಯಕ್ತ್ವಕೌಮುದಿ ಮುಂತಾದ ಆರು ಗ್ರಂಥಗಳನ್ನು ಬರೆದ ಕವಿ. ಈತನು ಹೊಯ್ಸಳದೇಶದ ಹೊಸವೃತ್ತಿಯ ನಾಡಿನಲ್ಲಿರುವ ಕಲ್ಲಹಳ್ಳಿಯ ಆಧಿಪನೆಂದೂ, ಮಹಾಮಂಡಲೇಶ್ವರ ಚೆಂಗಾಳ್ವಭೂಪಾಲನ ಸಚಿವರ ವಂಶದಲ್ಲಿ ಹುಟ್ಟಿದವನೆಂದೂ, ಕಲ್ಲಹಳ್ಳಿಯ ಪ್ರಭುವಾದ ವಿಜಯೇಂದ್ರನ ಮಗನೆಂದೂ ತನ್ನ ಗ್ರಂಥದಲ್ಲಿ ಹೇಳಿಕೊಂಡಿದ್ದಾನೆ.

ಕ್ರಿ.ಶ. ೧೪೩೨ರಲ್ಲಿಯ ಶ್ರವಣಗೆಳ್ಗೊಳದ ಒಂದು ಸಂಸ್ಕೃತಶಾಸನ (ನಂ.೨೫೮)ವನ್ನು ಒಬ್ಬ ಮಂಗರಾಜ ಬರೆದಂತೆ ಆ ಶಾಸನದ ಅಂತ್ಯಭಾಗದ ಪದ್ಯದಿಂದ ತಿಳಿಯುತ್ತದೆ. ಈತನೂ ಕನ್ನಡದಲ್ಲಿ ಬರೆದಿದ್ದರೂ ಬರೆದಿರಬಹುದು.

ಕವಿಚರಿತೆಕಾರರ ಕಣ್ಣಿಗೆ ಬೀಳದ ಇನ್ನೊಬ್ಬ ಮಂಗರಸನಿದ್ದಾನೆ. ಈತನ ಕೃತಿ “ಮನ್ಮಥಮಣಿ ದರ್ವಣ”, ಇದು ಭಾಮಿನಿಷಟ್ಪದಿಯಲ್ಲಿದೆ. ಆರಂಭದಿಂದ ೬೧ನೆಯ ಸಂಧಿಯ ೩೩ನೆಯ ಪದ್ಯದ ವರೆಗೆ ಮಾತ್ರ ದೊರೆತಿದೆ. ಪ್ರಥಮಾಶಾಸ್ವದ ಕೊನೆಯಲ್ಲಿ “ಬೊಮ್ಮಣ್ಣಕವಿಯ ಕುಮಾರ ರಾಯಣ್ಣ ಅಭಿನವಮಂಗರಸ ವಿರಚಿತಮಪ್ಪ ಹರಿವಂಶಕಥಾಪುರಾಣದೊಳು ಮನ್ಮಥಮಣಿದರ್ಪಣ ವನುಸುರಿದ ಪೀಠಿಕಾಪ್ರಸಂಗ ಪ್ರಥಮಾಶ್ವಾಸ” ಎಂದಿದೆ. ಈತನ ಕಾಲ ೧೭೫೫. ಇದಲ್ಲದೆ ಮೂಡಬಿದರೆಯ ಜೈನಮಠದ ಹಸ್ತಪ್ರತಿಭಂಡಾರ (ನಂ. ೩೬೭)ದಲ್ಲಿಯ “ಶೃಂಗಾರಸುಧಾಬ್ದಿ” ಎಂಬ ಕಾವ್ಯವು ಮಂಗರಸನಿಂದ ರಚಿತವಾದುದೆಂದು ಹೇಳಲಾಗಿದೆ. “ಈತನು ಈ ಮೊದಲೇ ತಿಳಿಸಿರುವ ಮಂಗರಸರಲ್ಲಿ ಒಬ್ಬನೋ ಅಥವಾ ಬೇರೆಯವನೋ ಗೊತ್ತಾಗುತ್ತಿಲ್ಲ” ಎಂದಿದ್ದಾರೆ ಎಸ್.ಎನ್. ಕೃಷ್ಣ ಜೋಯಿಸ ಅವರು.

[1] ಆದರೆ “ಶೃಂಗಾರಸುಧಾಬ್ಧಿ” ಎಂಬುದು ಶ್ರೀಪಾಲಚರಿತೆಯ ವಿಶೇಷಣವಾಗಿದ್ದು ಇದು ಪ್ರತ್ಯೇಕ ಕೃತಿಯಲ್ಲ. ಇಷ್ಟು ಚರ್ಚೆಯೊಂದಿಗೆ ಪ್ರಸ್ತುತ ಮೂರನೆಯ ಮಂಗರಸನ ಬಗ್ಗೆ ಈಗ ಸಮಾಲೋಚಿಸಬಹುದು.

ಮೂರನೆಯ ಮಂಗರಸ :

ಇವನು ತನ್ನ ಕೃತಿಗಳಾದ ನೇಮಿಜಿನೇಶಸಂಗತಿ, ಸಮ್ಯಕ್ತ್ವಕೌಮುದಿ, ಜಯನೃಪಕಾವ್ಯ, ಸೂಪಶಾಸ್ತ್ರದಲ್ಲಿ ತನ್ನನ್ನು ಕುರಿತು ಮತ್ತು ತನ್ನ ವಂಶಾವಳಿಯನ್ನು ಕುರಿತು ಹಲವಾರು ವಿಷಯಗಳನ್ನು ಹೇಳಿಕೊಂಡಿದ್ದಾನೆ. ಅಲ್ಲದೆ ಇವನನ್ನು ಕುರಿತ ಶಾಸನ ಮತ್ತಿರ ಕೆಲವು ಉಲ್ಲೇಖಗಳನ್ನು ಶ್ರೀ ಎ.ಶಾಂತಿರಾಜಶಾಸ್ತ್ರಿ ಅವರು ಕೊಟ್ಟಿದ್ದಾರೆ. ಅವೆಲ್ಲವುಗಳಲ್ಲಿ ಮೂಡಿನಿಂತ ಕವಿಯ ವ್ಯಕ್ತಿಚಿತ್ರಣ ಹೀಗಿದೆ :

ಮಂಗರಸನು ತನ್ನನ್ನು ಜಿನಪದಾಂಬುಜಭೃಂಗ, ಎಲ್ಲ ಕಲೆಯಲ್ಲಿ ಬಲ್ಲಿದ. ಇಂಪಾದ ಮಾತುಗಾರ, ಅತಿರಸಿಕ, ಅತಿನಿಪುಣ ಸಚಿವಾನ್ವಯಾಂಬರಹಂಸ, ಮದನಸಮರೂಪವುಳ್ಳ ಸುಂದರ, ಉತ್ತಮ ಗುಣಕರಂಡಕ, ಚದುರ, ಅಪ್ರತಿಮಗುಣಾನ್ವಿತ, ಕಾಮಧೇನುಸಮಶೋಭಿತ, ಸದಮಲಚರಿತ್ರ ಯುತ, ಪ್ರಭುರಾಜ, ಕಲ್ಲಹಳ್ಳಿಯ ದೊರೆ, ಸುಪ್ರಸಿದ್ಧ ರಾಜಕವಿ. ಪ್ರಭುಕುಲದೀಪ, ಪ್ರಮದ ರಾಜನಚಿತ್ತಭವ, ಪ್ರಜ್ವಲತೇಜಸ್ವಿ, ಸತ್ಕೀರ್ತಿಯುಳ್ಳವ ಎಂದು ಹೊಗಳಿಕೊಂಡಿದ್ದಾನೆ.

ಮಂಗರಸಕವಿ ವಿಜಯರಾಜ ಮತ್ತು ದೇವಿಲೆ ಅಥವಾ ಪದ್ಮಾಜಮ್ಮಣ್ಣಿಯರ ಪುತ್ರ. ತಂದೆಯಾದ ವಿಜಯೇಂದ್ರನು ದ್ವಾರಾವತೀ (ದ್ವಾರಸಮುದ್ರ? ಇಂದಿನ ಹಳೇಬಿಡು)ಯನ್ನು ಆಳುವ ಲಕ್ಷ್ಮೀರಮಣಾನ್ವಯದ ಚೆಂಗಾಳ್ವಭೂಪತಿಗಳಿಗೆ ಸಚಿವನಾಗಿದ್ದನು. ಸಚಿವಕುಲವೆಂಬ ಕ್ಷೀರಸಾಗರಕ್ಕೆ ಚಂದ್ರಮನಂತೆ ಇದ್ದನು. ಜಿನಪಾದಕಮಲಭೃಂಗನೂ, ಯಾಚಕಚಿಂತಾರತ್ನನೂ, ಚಿತ್ರಕಲಾಸದನೂ, ಸುದತಿಜನಮದನನೂ ಆಗಿದ್ದನು. ವಿನಯಶೀಲರ ಮನವನ್ನು ಉಕ್ಕೇರಿಸುವ ಚಂದ್ರನೂ, ವಿಜಯ ಎಂಬ ಹೆಸರನ್ನು ಸಾರ್ಥಕಪಡಿಸಲು ರಣಕ್ಕೆ ಅಭಿನವ ವಿಜಯನಾಗಿದ್ದನು. ವಿಜಯನಿಗೆ ಅಧಿರಾಜನಾಗಿದ್ದನು. ಆತನನ್ನು ಕವಿ “ಸುರಭಿಸದೃಶ್ಯದಾನಿ ಸುರಚಿರಗುಣನಿಧಿ ಯುರುತರಭೋಗ ಸಂಯುತನು ಸುರಪುರಕೆಣೆಯೆನಿಸುವ ಕಲ್ಲಹಳ್ಳಿಯ ಗುರವ ವಿಜಯ ಭೂವರನು….” (ಶ್ರೀಪಾಲ ಚರಿತ್ರೆ ೧ – ೧೬) ಎಂದೂ “ವಿಲುಳಿತ ವಿಶ್ವಂಭರೆಯೆಂಬಬಲೆಯ ಲಲಿತ ಶ್ರೀಮುಖವೆಂಬಂದದಿ ಕಣ್ಗೊಳಿಸುವ ಹೊಯ್ಸಳದೇಶದ ಮಧ್ಯದ ಹೊಸವೃತ್ತಿಯ ನಾಡಾ ಸದೃಶಂ ಮಾಧವಸುತ ವಿಜಯೇಂದ್ರಂ” (ಜಯನೃಪ ಕಾವ್ಯ ೧ – ೧೩) ಎಂದೂ ತನ್ನ ತಂದೆಯನ್ನು ಮನವಾರೆ ಹೊಗಳಿದ್ದಾನೆ. “ಧಾತುಪುರಾಧೀಶಂ” ಎಂದಿರುವುದರಿಂದ ಕಲ್ಲಹಳ್ಳಿಯ ಪ್ರಭು ಚೆಂಗಾಳ್ವ ಅರಸರಿಗೆ ಸಚಿವನಾಗಿದ್ದು ಸಾಹಸತೋರಿದ್ದರಿಂದ ಕಲ್ಲಹಳ್ಳಿಯ ಪ್ರಭು ದೊರೆತಿರಬಹುದು. ಕಲ್ಲಹಳ್ಳಿಯ ಸುತ್ತಮುತ್ತಲಿನ ಸಣ್ಣಪ್ರದೇಶಕ್ಕೆ ದೊರೆಯಾಗಿ ಮಾಧವನು ಮೊದಲ ಮರ್ಯಾದೆ ಹೊಂದಿದಂತೆ ತೋರುತ್ತದೆ. ಅವನಿಗಿಂತ ಹಿಂದಿನವರ ಹೆಸರನ್ನು ಕವಿ ಹೇಳಿಲ್ಲ. “ಕುಮಾರರಾಮನ ಸಾಂಗತ್ಯ”ವನ್ನು ಬರೆದ ಶೈವಕವಿ ನಂಜುಂಡ, ಮಂಗರಸನ ಸೋದರನ ಮಗ ಎಂಬುದು ಅವನ ಕೃತಿಯಿಂದ ಸ್ಪಷ್ಟವಾಗುತ್ತಿದೆ.

ಈ ಎಲ್ಲ ಆಧಾರಗಳಿಂದ ಮಂಗರಸನ ವಂಶಾವಳಿಯನ್ನು ಈ ರೀತಿ ಗುರುತಿಸಬಹುದು :

ಮಾಧವ – ೧
|
ವಿಜಯನೃಪಾಲ – ೧
|
ಮಂಗರಸ ಮಾಧವ – ೨ ವಿಜಯನೃಪಾಲ – ೨
|
ನಂಜುಂಡ

ಮಂಗರಸನ ವಂಶಜರೆಲ್ಲ ಜೈನ ಒಕ್ಕಲಾಗಿದ್ದು, ನಂಜುಂಡಕವಿ ಮಾತ್ರ ಶೈವ ಒಕ್ಕಲಾಗಿರುವುದು ವಿಶೇಷವಾದುದಾಗಿದೆ.

ಕಾಲ :

ಇವನ ಕೃತಿ ಸಮ್ಯಕ್ತಕೌಮುದಿಯ ಕೊನೆಯಲ್ಲಿ

“ಸಾಸಿರದ ಮೇಲೆ ನಾನೂರು ಮೂವತ್ತೊಂದು
ಭಾಸುರಂಬಡೆದ ಶಕವರ್ಷದಸೆವಾಶ್ವಯುಜ
ಮಾಸದಾ ಶುಕ್ಲಪಕ್ಷದ ಪಾಡ್ಯಮುಂ ಮಂದವಾರದೊಳಗೀಕೃತಿಯನು”

ಎಂಬ ಪದ್ಯಭಾಗವನ್ನವಲಂಬಿಸಿ ಎ. ಶಾಂತಿರಾಜಶಾಸ್ತ್ರಿಗಳವರು ಶಾಲಿವಾಹನಶಕ ೧೪೩೧ರಲ್ಲಿ ಅಂದರೆ ಕ್ರಿ.ಶ. ೧೫೦೮ರಲ್ಲಿ ಮಂಗರಸ ತನ್ನ ಸಮ್ಯಕ್ತ್ವಕೌಮುದಿ ಎಂಬ ಗ್ರಂಥ ಮುಗಿಸಿದಂತೆ ಹೇಳಿದ್ದಾನೆ ಎಂದಿದ್ದಾರೆ. ಆದರೆ ಕರ್ನಾಟಕ ವಿಶ್ವವಿದ್ಯಾನಿಲಯದ ಒಂದು ಪ್ರತಿಯಲ್ಲಿ

“ಸಾಸಿರದ ಮೇಲೆ ಮುಂನೂರ ಮೂವತ್ತೊಂದು
ಭಾಸುರಂಬಡೆದ ಶಕವರುಷವೆಸೆವಾಶ್ವೀಜ
ಮಾಸಮತಿಶುಕ್ಲಪಕ್ಷದ ………..ಕೃತಿಯನು”

ಎಂದಿರುವದರಿಂದ “ಮಂಗರಸಕವಿಯ ಕಾಲ ೧೪೦೯ ಎಂದು ನಿರಾತಂಕವಾಗಿ ನಿರ್ಧರಿಸಲ್ಪಡುತ್ತದೆ” ಎಂದಿದ್ದಾರೆ ಪ್ರೊ. ಬಿ.ಬಿ. ಮಹೀಶವಾಡಿಯವರು. ಇದಕ್ಕೆ ಪೂರಕವೆಂಬಂತೆ ಡಾ. ಹಂಪ ನಾಗರಾಜಯ್ಯ ಅವರ ಬಳಿ ಇರುವ ಒಂದು ಕಾಗದ ಪ್ರತಿಯಲ್ಲಿಯೂ ಇದೇ ಪದ್ಯ ದೊರೆತು ಅವರು “ಈ ಪಾಠಾಂತರ ಸರಿಯೆ ಎಂಬ ವಿಷಯದಲ್ಲಿ ಅನುಮಾನವಿದೆ. ಇದು ಸರಿಯಾಗಿದ್ದಲ್ಲಿ ಮೂರನೆಯ ಮಂಗರಸನ ಕಾಲ ಒಂದುನೂರು ವರ್ಷ ಹಿಂದೆ ಹೋಗುತ್ತದೆ” ಎಂದಿದ್ದಾರೆ. ಹೀಗಾಗಿ ಈತನ ಕಾಲ ೧೪೦೯ ರಿಂದ ೧೫೦೯ರವರೆಗೆ ತೂಗುಯ್ಯಾಲೆಯಾಡುತ್ತಿದೆ.

ಮತ :

ಪ್ರಾಚೀನ ಕರ್ನಾಟಕದ ಧರ್ಮಗಳು ಮೂರು – ವೈದಿಕ, ಜೈನ, ಶೈವ. ಇವುಗಳಲ್ಲಿ ಜೈನ, ಶೈವಗಳು ಬೇರೆ ಜಾತಿಯವರನ್ನು ಒಕ್ಕಲು ಮಾಡಿಕೊಳ್ಳುತ್ತಿದ್ದವು. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಯಾವುದೋ ಜಾತಿಯ ಮಂಗರಸನ ಕುಟುಂಬದಲ್ಲಿ ಮಿಕ್ಕವರು ಶೈವಕ್ಕೆ ಒಕ್ಕಲಾಗಿದ್ದರೆ, ಈ ಮಂಗರಸನು ಮಾತ್ರ ಜೈನಕ್ಕೆ ಒಕ್ಕಲಾಗಿದ್ದನು.

ಇದಕ್ಕೆ ಆತನು ಕಟ್ಟಿಸಿದ ಜಿನಾಲಯಗಳು, ಕೃತಿಗಳಿಗೆ ಆಯ್ದುಕೊಂಡಿರುವ ವಸ್ತು, ಗ್ರಂಥಗಳ ಆದಿಯಲ್ಲಿ ಬರುವ ಜಿನ, ಸಿದ್ಧರು, ಆಚಾರ್ಯರು, ಉಪಾಧ್ಯಾಯರು, ಸಾಧುಸಮಿತಿ (ಪಂಚಪರಮೇಷ್ಠಿಗಳು) ನವಕೋಟಿಮುನಿಗಳು, ಸರಸ್ವತಿ, ಯಕ್ಷ ಯಕ್ಷಿಯರು) ಮೊದಲಾದವರ ಸ್ತುತಿ, ಗೃದ್ಧಪಿಂಚಾಛಾರ್ಯ, ಕವಿಪರಮೇಷ್ಠಿ, ಪಂಪ, ಪೊನ್ನ, ರನ್ನ, ಗುಣವರ್ಮ, ಅಗ್ಗಳ, ನೇಮಿ, ಜನ್ನ, ಮಧುರ, ನಾಗಚಂದ್ರ, ಬಂಧುವರ್ಮ ಮೊದಲಾದವರ ಪ್ರಸ್ತಾಪ ಸಾಕ್ಷಿಯೊದಗಿಸುತ್ತಿವೆ. ಅಲ್ಲದೆ ಇವನು ಮೇಲಿಂದಮೇಲೆ ತನ್ನ ಗ್ರಂಥದಲ್ಲಿ ‘ಜಿನಪದ ಸರಸಿಜ ಮಧುಕರ, ಜಿನಮತಕ್ಷೀರಾವಾರಾಸಿಚಂದ್ರ, ಜಿನಪದವಾರಿಜಮಧುಕರ, ತ್ರಿಭುವನಪತಿಜಿನಭಕ್ತಂ, ಜಿನಪತಿಸರಸಿಜ ಮದಮಧುಕರಂ, ಜಿನಪದಾಂಬುಜಭೃಂಗಂ’ ಮುಂತಾಗಿ ಕರೆದುಕೊಂಡಿರುವುದರಿಂದ ಇವನು ಜೈನ ಒಕ್ಕಲುಯೆಂಬುದು ಸ್ಪಷ್ಟವಾಗುತ್ತಿದೆ. ಆದರೆ ಇವನ ಕೃತಿಗಳಲ್ಲಿ ಮೇಲಿಂದ ಮೇಲೆ ಉಪಮೆ ರೂಪಕ ಮೊದಲಾದ ಅಲಂಕಾರಗಳ ರೂಪದಲ್ಲಿ ಬರುವ ಶಿವನ ವರ್ಣನೆ ಮಾತ್ರ ಬೆರಗುಗೊಳಿಸುತ್ತದೆ.[2] ಇದಕ್ಕೆ ಮನೆಯಲ್ಲಿಯ ಇತರರು ಶೈವಕ್ಕೆ ಒಕ್ಕಲಿರುವುದೇ ಕಾರಣವಿರಬಹುದು.

ಗುರುಪರಂಪರೆ :

ನೇಮಿಜಿನೇಶಸಂಗತಿ, ಸಮ್ಯಕ್ತ್ವಕೌಮುದಿ, ಜಯನೃಪಕಾವ್ಯಗಳಲ್ಲಿ, ಗುರು ಪ್ರಭೇಂದುವಿನ ಸ್ತುತಿಯಿದೆ. ಆದರೆ ಪ್ರಭಂಜನಚರಿತೆಯಲ್ಲಿ “ಸಿಕ್ಕಿ ಭವಾಂಬುಧಿಯೊಳು ದುಃಖಿಸುವನ ಕೈಯಿಕ್ಕಿ ಸತ್ಪಥಕ್ಕೆತ್ತಿಪಿಡಿದಾ ಚಿಕ್ಕಪ್ರಭೇಂದುವಡಿಗೆ ನನ್ನ ಹಣೆಯ ತಂದಿಕ್ಕಿ ಪೇಳುವೆನು ಸಂಗತಿಯ” (೧ – ೯) ಎಂದಿದ್ದಾನೆ. ಪ್ರಭೇಂದುವಿನ ಪ್ರೀತಿಯ ಶಿಷ್ಯನಾದ ಶ್ರುತಮುನಿಯ ಪ್ರಸ್ತಾಪ ನೇಮಿಜಿನೇಶ ಸಂಗತಿ ಮತ್ತು ಜಯನೃಪಕಾವ್ಯಗಳಲ್ಲಿ ಮಾತ್ರ ಬಂದಿದೆ. ಶ್ರುತಮುನಿಯ ಸೋದರ ವಿಮಲಕೀರ್ತಿಯ ಹೆಸರು ನೇಮಿಜಿನೇಶಸಂಗತಿಯೊಂದರಲ್ಲಿ ಇದೆ. ಈ ಮೇಲಿನ ಅಂಶಗಳಿಂದ ಈ ಗುರುಪರಂಪರೆಯನ್ನು ಹೀಗೆ ಗುರುತಿಸಬಹುದು.

ಪ್ರಭೇಂದುಮುನಿ
|
ಶ್ರುತಮುನಿ ವಿಮಲಕೀರ್ತಿ ಮಂಗರಸ

ಕೃತಿಗಳು

ವೃತ್ತಿಯಿಂದ ರಾಜನಾಗಿದ್ದರೂ ಪ್ರವೃತ್ತಿಯಿಂದ ಕವಿಯಾಗಿರುವ ಮಂಗರಸನು ರಚಿಸಿರುವ ಕೃತಿಗಳನ್ನು ಕುರಿತು ಶಾಸನ “ಮಂಗರಾಜರಸನೆಸಗಿದ ಪುಸ್ತಕಂ ರಾಮಸಂಗೀತಂ, ಹರಿವಂಶಪುರಾಣಂ, ಪ್ರಭಂಜನಚರಿತಂ, ಜಯನೃಪಕಾವ್ಯಂ, ಸಮ್ಯಕ್ತ್ವಕೌಮುದಿಯುಂ” ಎಂದು ಹೇಳಿದೆ. ಇವುಗಳಲ್ಲಿ “ರಾಮಸಂಗೀತಂ” ಎಂಬುದು ಶ್ರೀಪಾಲಚರಿತೆಯೋ? ಭಿನ್ನಕೃತಿಯೋ? ತಿಳಿಯದು. ಇಲ್ಲಿ ಸೂಪಶಾಸ್ತ್ರದ ಪ್ರಸ್ತಾವಿಲ್ಲ. ಒಟ್ಟಾರೆ ೩ನೆಯ ಮಂಗರಸನ ಕೃತಿಗಳನ್ನು ಹೀಗೆ ಗುರುತಿಸಬಹುದು :

೧. ಪ್ರಭಂಜನಚರಿತೆ

೨. ಶ್ರೀಪಾಲಚರಿತೆ

೩. ಜಯನೃಪಕಾವ್ಯ

೪. ಸಮ್ಯಕ್ತ್ವಕೌಮುದಿ

೫. ಹರಿವಂಶಪುರಾಣ (ನೇಮಿನಾಥ ಪುರಾಣ)

೬. ಸೂಪಶಾಸ್ತ್ರ

ಇವುಗಳಲ್ಲಿ ಮೊದಲ ಐದು ಜೈನಧಾರ್ಮಿಕ ಕಾವ್ಯಗಳಾಗಿವೆ. ನಂಜುಂಡನಿಗೆ ಕುಮ್ಮಟದ ಬೇಡರ ರಾಮನ ಕಥೆಯನ್ನು ಕುರಿತ ಕುಮಾರರಾಮಸಾಂಗತ್ಯದ ರಚನೆಗೆ ಮಂಗರಸ ಸಹಾಯ ಮಾಡಿದುದರಿಂದ ಉಂಟಾದ ಪಾವಪರಿಹಾರಾರ್ಥವಾಗಿ ಸಂಸ್ಕೃತದಲ್ಲಿದ್ದ ಐದು ಕೃತಿಗಳನ್ನು ಕನ್ನಡದಲ್ಲಿ ಬರೆದನೆಂದು ದೇವಚಂದ್ರನು ಹೇಳಿದ್ದಾನೆ.  ಈ ಕಥೆಯು ಹರಿಶ್ಚಂದ್ರಕಾವ್ಯ ಬರೆದ ರಾಘವಾಂಕನ ಘಟನೆಯನ್ನು ನೆನಪಿಗೆ ತರುತ್ತದೆ. ಈಗ ಈ ಕೃತಿಗಳ ಸ್ಥೂಲಪರಿಚಯನ್ನು ಮಾಡಿಕೊಳ್ಳಬಹುದು.

ಪ್ರಭಂಜನಚರಿತೆ :

ಈ ಕೃತಿ ಅಪೂರ್ಣವಾಗಿದ್ದು ೫ನೆಯ ಸಂಧಿ ೬೭ನೆಯ ಪದ್ಯಕ್ಕೆ ಏಕೆ ನಿಂತು ಹೋಯಿತೊ ತಿಳಿಯದು. ಒಟ್ಟು ೬೦೯ ಸಾಂಗತ್ಯಪದ್ಯಗಳಿವೆ. ಇದರ ಶೈಲಿ, ಸ್ವರೂಪ ಮೊದಲಾದವನ್ನು ನೋಡಿದರೆ ಇದೇ ಕವಿಯ ಮೊದಲಕೃತಿಯಾಗಿರಬೇಕೆನ್ನಿಸುತ್ತಿದೆ. ಪ್ರತಿ ಸಂಧಿಯ ಆರಂಭದಲ್ಲಿ ಪಂಚಪರಮೇಷ್ಠಿಗಳ ಸ್ತುತಿ ಇದೆ. “ಹಗಲು ರಾತ್ರಿ ಕರ್ಮಾಟವಿಯಲ್ಲಿ ತೊಳಲುವ ಅಟಕೋಟಲೆ ಪಿಂಗಲೆಂದು” (೧ – ೧೫) “ ಹುಟ್ಟಿಯಳಿವ ಗುಂಗುದಿಯನೀಗಲೆಂದು” (೧ – ೧೬), “ಭವವೆಂಬಬಲುಬಿಂಜದೊಳು ಬಹುದಿನದಿಂ ಬವಣಿಪ್ಪಬೇಸರವನು ತವಿಸುವೆನೆಂದು “(೧ – ೧೭) ಈ ಕೃತಿ ಬರೆದುದಾಗಿ ಕವಿ ಹೇಳಿಕೊಂಡಿದ್ದಾನೆ. ಇದರಲ್ಲಿ ಶುಭದೇಶದ ಬಂಬಾಪುರದ ದೇವಸೇನನ ಪುತ್ರನಾದ ಪ್ರಭಂಜನನ ಚರಿತ್ರೆ ಇದೆ.

ಪ್ರಭಂಜನನ ರಾಣಿ ಪೃಥ್ವೀಮತಿ. ಅವಳು ಕುಮತಿಯೆಂಬ ಮಂತ್ರಿಗೆ ಸೋತು, ಮಗ ಸರಲಕುಮಾರನಿಗೆ ವಿಷ ಹಾಕಿ, ಮಂತ್ರಿಯ ಸಂಗಡ ರಾಜ್ಯ ಬಿಟ್ಟು ಓಡಿ ಹೋಗುತ್ತಾಳೆ. ಒಂದು ಊರ ನದಿಯ ಬಳಿ ಸ್ನಾನಕ್ಕಾಗಿ ಹೋದಾಗ, ಮಗನನ್ನು ಹುಡುಕುತ್ತಾ ಅಲ್ಲಿಗೆ ಬಂದ ಪ್ರಭಂಜನನನ್ನು ನೋಡಿ, ಅವನ ಮೇಲೆ ಕಳ್ಳತನದ ಆರೋಪ ಹೊರಿಸಿ, ನ್ಯಾಯಸ್ಥಾನಕ್ಕೆ ಎಳೆಯುತ್ತಾಳೆ. ಅವನನ್ನು ಶೂಲಕ್ಕೇರಿಸುವ ಸಮಯಕ್ಕೆ ಪ್ರಭಂಜನನನ್ನು ಅರಸನು ಕಾಣಹೋಗಿ, ಅವನು ತನ್ನ ತಂದೆ ಎಂದು ತಿಳಿದು ಕಾಲಿಗೆರಗುವನು. ಇದನ್ನು ಕೇಳಿ ಪೃಥ್ವೀಮತಿ ಮಾರಾರಿಯಮಂದಿರದಲ್ಲಿ ಅಡಗಿಕೊಳ್ಳುವಳು. ಅವಳನ್ನು ನೋಡಲೆಂದು ಸರಲಕುಮಾರ ಹೊರಟು, ದಾರಿಯಲ್ಲಿ ಎಂಟುಜನ ಮುನಿಗಳನ್ನು ಕಾಣುವನು. ಅವರ ಸುಲಕ್ಷಣವನ್ನು ನೋಡಿ, ನೀವು ಮುನಿವ್ರತವನ್ನು ಸ್ವೀಕರಿಸಲು ಕಾರಣವೇನು ಎಂದು ಕೇಳುವನು. ಅದಕ್ಕೆ ಅವರು ಈ ರೀತಿ ಉತ್ತರಿಸುವರು:

೧. ಅವರಲ್ಲಿ ಮುಖ್ಯನಾದ ಶ್ರೀದತ್ತಮುನೀಶ್ವರನು ‘ಕಾಂತಾಜನದ ಕಾಪಟ್ಯವನು ಪೇಳುವೆನು ಕೇಳು’ ಎಂದು ಹೇಳತೊಡಗುವನು. ನಂದಿವರ್ಧನ ಪಾಟಲೀಪುರದರಸು. ಅವನ ಹೆಂಡತಿ ನಂದೆ. ಮಗ ಶ್ರೀದತ್ತ. ಅವನು ಅರವತ್ತುನಾಲ್ಕು ಕಲೆಗಳಲ್ಲಿ ಪರಿಣತನಾದರೂ ತುರಷ್ಕರಾಜನ ಲೇಖವನ್ನು ಓದುವುದಾಗಲಿಲ್ಲ. ಆ ಲಿಪಿಯನ್ನು ಕಲಿತಲ್ಲದೆ ಊರಿಗೆ ಮರಳುವುದಿಲ್ಲ ಎಂದು ಹೊರಟು ವಲ್ಲಭಿಗೆ ಬಂದು ಗಾರ್ಗೋಪಾಧ್ಯಾಯರಲ್ಲಿ ಅಧ್ಯಯನಕ್ಕೆ ನಿಂತನು.

ಗಾರ್ಗೋಪಾಧ್ಯಾಯರ ಹೆಂಡತಿ ಸೋಮಶ್ರೀ “ರಾಣಿ ನಾಟಕ ನೋಡಲು ಕರೆದಿದ್ದಾಳೆ” ಎಂದು ಸುಳ್ಳು ಹೇಳಿ, ಸಂಕೇತಸ್ಥಾನಕ್ಕೆ ಹೋಗಿ ವಿಟನೊಂದಿಗೆ ಸುರತಸುಖದಲ್ಲಿದ್ದಳು. ಮಗುವಿಗೆ ಹಾಲು ಕೊಡುವ ನೆನಪಾಗಿ, ವಿಟನೊಂದಿಗೆ ಮನೆಗೆ ಬಂದು “ನಾವು ಆಗಂತುಕರು, ಇಂದು ರಾತ್ರಿ ಇಲ್ಲೇ ಇರುತ್ತೇವೆ” ಎಂದು ವಿಟನಿಂದ ಹೇಳಿಸುವಳು. ಸೋಮಶ್ರೀ ಮುಸುಕುಹಾಕಿಕೊಂಡು ಮನೆ ಪ್ರವೇಶಿಸುವಳು. ನಡುರಾತ್ರಿಯಲ್ಲಿ ಕೂಸು ಅಳತೊಡಗಲು, “ತನ್ನ ಹೆಂಡತಿಯ ಕೂಸು ಸತ್ತು ಮೊಲೆ ಬಿಗಿಯುತ್ತಿವೆ. ಈ ಕೂಸಿಸಾದರೂ ಮೊಲೆ ಕುಡಿಸುತ್ತಾಳೆ” ಎಂದು ಹೇಳಿ, ಕೂಸಿಗೆ ಮೊಲೆ ಕುಡಿಸಿ, ರಾತ್ರಿಯೆಲ್ಲ ಸುರತಸುಖದಲ್ಲಿ ಲೋಲಾಡಿ, ಬೆಳಗಾಗುವ ಮುನ್ನ ಮನೆಬಿಟ್ಟು ಹೊರಟು ಹೋಗುವರು. ಸ್ವಲ್ಪಹೊತ್ತು ತಡೆದು ಸೋಮಶ್ರೀ ಅರಮನೆಯಿಂದ ಬಂದವಳಂತೆ ನಟಿಸುತ್ತ, ನಡೆದುದನ್ನು ಏನೂ ಗೊತ್ತಿಲ್ಲದವಳ ಹಾಗೆ ಕೇಳಿ, “ಆ ಉತ್ತಮರನ್ನು ತಡೆದು ಭೋಜನವನ್ನಾದರೂ ಮಾಡಿಸಿ ಕಳುಹಬಾರದಿತ್ತೆ” ಎನ್ನುವಳು. ಶ್ರೀದತ್ತ ಅವಳ ಹಿಂದೆಯೇ ಹೋಗಿ ಇದನ್ನೆಲ್ಲ ನೋಡಿ, ವೈರಾಗ್ಯಹೃದಯನಾದನು. ಒಂದು ದಿನ ಉದಯದಲ್ಲಿ ಶ್ರೀದತ್ತ ಮುಖ ತೊಳೆಯಲೆಂದು ಮನೆಯ ಒಳಗೆ ಬಂದನು. ಸೋಮಶ್ರೀ ಅವನಿಗೆ ಸೋಲ್ತೆನೆನಲು “ಯಜಮಾನನ ಕಣ್ಣಮುಂದೆ ಕಳವನುಜ್ಜಗಿಸುವ ಅಂದವ ನಿನಗಾರು ಕಲಿಸಿದರು” ಎಂದು ಕೇಳುವನು. ಅದಕ್ಕವಳು ಈ ಕಥೆ ಹೇಳುವಳು:

ಅ. ಈ ಪುರದ ದುರ್ಗಹರಿ – ಭದ್ರೆಯರಿಗೆ ಏಳು ಗಂಡು, ಲಕ್ಷಣೆಯೆಂಬ ಮಗಳು ಜನಿಸಿದರು. ಲಕ್ಷಣೆ ಯವ್ವನೆಯಾಗುವಮೊದಲೇ ಗಂಡ ತೀರಿಹೋದನು. ಆಕೆಯ ಸತ್ಕರ್ಮ ಎಲ್ಲರ ಮನವನ್ನಾಕರ್ಷಿಸಿತು. ಒಂದು ದಿನ ಶ್ರೀಧರನೆಂಬುವವ ಅವಳಲ್ಲಿ ಮೋಹಗೊಳ್ಳಲು, ನದಿಯ ದಂಡೆಯ ಮೇಲಿನ ದೇವಾಲಯದಲ್ಲಿ ಅವರಿಬ್ಬರೂಈ ಕೂಡ ಹತ್ತಿದರು. ಸಲ್ಪದಿನದನಂತರ “ಹೀಗೆ ಕೂಡುವುದು ಸರಿಯಲ್ಲ. ಇಂದಿಗೆ ಎಂಟನೆಯ ದಿನ ನಾನು ನದಿಯಲ್ಲಿ ಸ್ನಾನ ಮಾಡುವಾಗ ನೀನು ಬಂದು ನನ್ನ ಕೈಹಿಡಿ” ಎನ್ನುವಳು. ಅವನು ಹಾಗೆಯೇ ಮಾಡಲು, ಆಕೆ ತನ್ನ ವ್ರತಕ್ಕೆ ಭಂಗಬಂದಿತೆಂದು ಅಗ್ನಿಕುಂಡ ಹೋಗುವಂತೆ ನಟಿಸುವಳು. ತಂದೆ ತಾಯಿಗಳು “ನೆಲಸಿದ ಪ್ರಾಯಶ್ಚಿತ್ತಕ್ಕೆ ಬೇರೆ ದಾರಿಗಳಿವೆ” ಎಂದು ಅವಳನ್ನು ಸಮಾಧಾನಪಡಿಸುವರು.

ಒಮ್ಮೆ ಜೋಗಿಣಿಯೋರ್ವಳು ಬರಲು “ಪ್ರಾಯಶ್ಚಿತ್ತ ನಿಮಿತ್ತ ಜೋಗಿಣಿನಿವಹಕ್ಕೆ ಮದ್ಯನೊಲಿದು ತುಂಬಿಸಬೇಕು. ಅದಕ್ಕಾಗಿ ಮದ್ಯವನ್ನು ತಂದುಕೊಡು” ಎಂದು ತಂದಿರಿಸಿ, ರಾತ್ರಿ ಅವಳನ್ನು ತನ್ನಲ್ಲಿಯೇ ಇಟ್ಟುಕೊಂಡು, ಗಂಟಲ್ವರ ಮದ್ಯ ಕುಡಿಸಿ, ಅವಳನ್ನು ಮನೆಯ ಹೊರಗಿನ ಮುಂಜೂರಿನಲ್ಲಿ ಮಲಗಿಸಿ, ಬೆಂಕಿ ಹಚ್ಚಿ ಜಾರನೊಂದಿಗೆ ಪಟ್ಟಣ ಬಿಟ್ಟು ಓಡಿ ಹೋಗುವಳು. ಉದಯವಾಗುತ್ತಿದ್ದಂತೆ ಅವಳ ತಂದೆ ತಾಯಿಗಳು ಸತ್ತಿರುವವಳು ತಮ್ಮ ಮಗಳೇ ಎಂದು ತಿಳಿದು “ತಾನು ನುಡಿದ ಭಾಷೆಗೆ ತಪ್ಪದೆ ಪ್ರಾಣತೆತ್ತಳೆ” ಎಂದು ಕೊಂಡಾಡಿ ಪಿಂಡಪ್ರಧಾನ ಮಾಡಿದರು.

ಲಕ್ಷಣೆ ತನ್ನ ಜಾರನೊಂದಿಗೆ ಉತ್ತರದೇಶದ ಶಬಪುರವೆಂಬ ಪಟ್ಟಣಕ್ಕೆ ಬಂದು, ಹತ್ತು ಮಕ್ಕಳನ್ನು ಪಡೆದು ಮುಪ್ಪಾವಸ್ಥೆ ಹೊಂದಿದಳು. ಒಮ್ಮೆ ತವರೂರಿಂದ ಅವಳ ಕಿರಿಯಣ್ಣ ವ್ಯಾಪಾರಕ್ಕೆಂದು ಬರಲು ಅವನನ್ನು ಸಿತಗನು ನೋಡಿ ಮನೆಗೆ ಕರೆತಂದನು. ಅವನು ಅವರ ಬಡತನ ನೋಡಿ ತನ್ನೂರಿಗೆ ಕರೆದೊಯ್ದು ಮಾತಾ ಪಿತೃಗಳೊಂದಿಗೆ ಸುಖದಿಂದಿರತೊಡಗಿದರು. ಅವಳು ನನಗೆ ಗುರು ಎಂದು ಸೋಮಶ್ರೀ ಹೇಳಿದಳು.

ಆ. ಆಕೆ ಮುಂದುವರೆದು ‘ಇನ್ನೊಂದು ಅನುಮಾನಚಿತ್ತಕಥನವನ್ನು ಹೇಳುವೆನು’ ಎನ್ನುವಳು: ಪ್ರಯಾಗಪಟ್ಟಣದಲ್ಲಿ ಯಮುನಾದತ್ತ ಗಂಗಶ್ರೀ ಎಂಬ ದಂಪತಿಗಳು. ಗಂಗಶ್ರೀ ಒಳ್ಳೆಯ ಚಾರಿತ್ರ್ಯವಂತೆ. ಅವಳನ್ನು ವಿಷ್ಣುದತ್ತ ಯಮುನಾದತ್ತನ ಅಂಗಡಿಗೆ ಹೋಗಿ ಒಳ್ಳೆಯ ಹಚ್ಚಡ ತಂದುಕೊಡಲು, ಅದರ ಒಂದೆಳೆಯನ್ನು ತೆಗೆದುಕೊಂಡು, ಉಣ್ಣುವ ನೆವದಲ್ಲಿ ಗಂಗಶ್ರೀಯ ಮನೆಗೆ ಬಂದು, ಅದನ್ನು ಅವಳ ದಿಂಬಿನ ಕೆಳಗೆ ಇಟ್ಟುಹೋಗುವಳು. ಗಂಡ ಬಂದು ಅದನ್ನು ನೋಡಿ, ಮನೆಯಲ್ಲಿರಬೇಡೆಂದು ಗಂಗಶ್ರೀಯನ್ನು ತವರುಮನೆಗೆ ಕಳಿಸುವನು.

ಇಂದುಕಿ ಗಂಗಶ್ರೀಯ ಮನೆಗೆ ಬಂದು, “ಆ ಊರ ದೇವಾವಾಸಕೆ ಹೋಗಿ ಪೂಜೆ ಮಾಡು. ಉಟ್ಟುದೆಲ್ಲವ ತೆಗೆದು, ದಿಟ್ಟೆದೆರೆಯದೆ ಆಕೆಯ ರೂಪ ನೆನೆಯಲೂ, ದೇವಿ ನಿನ್ನ ಭಕ್ತಿಗೆ ಮೆಚ್ಚಿ, ಪುರುಷರೂಪದಿಂದ ಬಂದು ಸುರತವಿಕಾರವ ಮಾಡುವಳು. ನೀನು ಸುಮ್ಮನಿದ್ದರೆ ಪುರುಷವಶೀಕರಣ ವಿದ್ಯೆಯನ್ನೀಯವಳು” ಎಂದು ಹೇಳುವಳು. ಆ ಪ್ರಕಾರ ಅವಳು ಪೂಜೆ ಮಾಡುತ್ತಿರಲು ಇಂದು ನಾಯಕಿಯ ಹೇಳಿಕೆಯ ಮೇರೆಗೆ ಮರೆಯಲ್ಲಿ ಅಡಗಿದ್ದ ವಿಷ್ಣುಶರ್ಮನು ಬಂದು ಅವಳನ್ನು ಅಪ್ಪಿ ಸುರತಕ್ರೀಡೆಯಲ್ಲಿ ತೊಡಗಿ ತನ್ನ ವಿವರ ಹೇಳುವನು. “ಎತ್ತ ಮೆಟ್ಟಿದಡೆ ಎತ್ತ ಚಪ್ಪಟೆಯಾಯಿತು” ಎನುತ ಅವಳು ಅವನಲ್ಲಿ ರಮಿಸಿದಳು. ಮುಂದೆ ಇಂದುಕಿ ಯಮುನಾದತ್ತನ ಮುಂದೆ ನಡೆದುದನ್ನು ಹೇಳಲು, ಅವನು ಅವಳನ್ನು ತವರುಮನೆಯಿಂದ ಕರೆತಂದನು. ‘ಗಂಗಶ್ರೀ ಗಂಡನ ಮನೆಯಲ್ಲಿ ಗಂಡನೊಂದಿಗೆ, ತವರುಮನೆಗೆ ಹೋದಾಗ ವಿಷ್ಣುದತ್ತನೊಂದಿಗೆ ಸೇರುವಳು’ ಎಂದು ಸೋಮಶ್ರೀ ಹೇಳುವಳು.

ಇವನ್ನೆಲ್ಲ ಕೇಳಿ ದತ್ತಕುಮಾರನು ವೈರಾಗ್ಯಹೊಂದಿದನು. ಏಕವಿಹಾರಿಯಾಗಿ ಪಲಾಸವೆಂಬ ಊರಿಗೆ ಬಂದು ಒಂದು ಹಾಳುಮನೆಯಲ್ಲಿ ಉಳಿದನು. ಆ ವೇಳೆಗೆ ಅಲ್ಲಿಗೆ ಸೋಮದತ್ತನ ಹೆಂಡತಿ ಸುಭದ್ರೆ ತನ್ನ ಖಳನೊಂದಿಗೆ ಬಂದು, ಪ್ರೇಮಸುಖಕ್ಕೆ ಅಡ್ಡಿಮಾಡಿದ ಕೂಸನ್ನುಕೊಂದು, ಅದನ್ನು ವಿರೋಧಿಸಿದ ನಲ್ಲನನ್ನೂ ಕೊಂದು, ಅಲ್ಲಿದ್ದ ಶ್ರೀದತ್ತನನ್ನು ಮೋಹಿಸಿ ಪೀಡಿಸತೊಡಗಿದಳು. ಅದಕ್ಕವನು ಜಗ್ಗದಿರಲು ತಾನು ಮಾಡಿದುದನ್ನು ಮುಚ್ಚಿಕೊಳ್ಳಲು ಅವನನ್ನೂ ಕೊಲ್ಲಲು ಮುಂದಾಗುವಳು. ಆಗ ಗೃಹದೇವತೆಗಲು ಆಕೆಯ ಎತ್ತಿಕೈಯನ್ನು ಬೆಳಗಾಗುವವರೆಗೆ ಹಾಗೆಯೇ ಇರುವಂತೆ ಮಾಡಿದರು. ಶ್ರೀದತ್ತನು ಅವಧಿಬೋಧೋಪೇತನಾಗಿ ಈ ಜೈನಮುನಿವಹವ ಕೂಡಿಕೊಂಡುದಾಗಿ ಹೇಳಿದನು.

೨. ಹಸ್ತಿನಾಪುರದರಸು ಶೌಂಡ, ತನ್ನ ಹೆಂಡತಿ ಮದನಾವಳಿಯೊಂದಿಗೆ ವನಕ್ರೀಡೆಯಾಡಲು ಹೋದಾಗ, ಒಂದು ಮರ್ಕಟ ಬಂದು ಮದನಾವಳಿಯೊಂದಿಗೆ ರತಿಚೇಷ್ಟೇಗೆ ಮುಂದಾಯಿತು. ಅದನ್ನು ಶೌಂಡ ನೋಡಿ ಆ ಮರ್ಕಟನನ್ನು ಕೊಂದುಹಾಕಿದನು. ಆ ಮರ್ಕಟ ಮದನಾಳಿಯ ಹಿಂದಿನ ಜನ್ಮದ ಗಂಡಾನಾದುದರಿಂದ ಅವಳು ಆ ಮರ್ಕಟನ ಶವ ಸಹಿತ ಹುಲ್ಮನೆಗೆ ಬೆಂಕಿ ಹಚ್ಚಿ ಅಸು ನೀಗಿದಳು. ಈ ರೀತಿ ಕಾಂತಾಜನರ ಕಪಟಕ್ಕಂಜಿ ದೀಕ್ಷೆಯ ತಾಳಿದ ಶೌಂಡಮಹಾಮುನಿ ತಾನು ಎನ್ನುತ್ತಲೇ ಮತ್ತೊಬ್ಬ ಮುನಿ ಈ ರೀತಿ ನುಡಿದನು:

೩. ಕೌಶಾಂಬಿಯಲ್ಲಿ ಅಪರಾಜಿತ – ಜಯಮಾಲೆಯರಿಗೆ ಪಾಲ ಶ್ರೀದೇವಿಯರೆಂಬ ಮಕ್ಕಳು. ಶ್ರೀದೇವಿಯನ್ನು ಜಯಭದ್ರನಿಗೆ ಮದುವೆ ಮಾಡಿಕೊಟ್ಟರು. ಆಕೆ ಜಾರತನ ಕಲಿತು ಓರ್ವ ಸುವ್ವಾರನೊಳಗೆ ಸ್ನೇಹ ಹೊಂದಿ ವಶೀಕರಣ ಅಂಜನವಿದ್ಯೆ ಕಲಿತಳು. ಆಕೆ ಬಸುರೆ ಎಂಬುದನ್ನು ಕೇಳಿ ಕರೆತರ ಹೋದ ಪಾಲ, ಅಡವಿ ಮಧ್ಯದಲ್ಲಿರುವಾಗ ಆಕೆ ಶಿಶುವನ್ನು ಹೆತ್ತು ಅದರ ಕೊರಳು ಮುರಿದು ಆಕಾಶಕ್ಕೆ ಹಾರಿದಳು, ಪಾಲ ಚಿಂತಾಕ್ರಾಂತನಾಗಿ ಬಂದು ನಡೆದುದನ್ನು ತಂದೆ ತಾಯಿಗಳಿಗೆ ಹೇಳಲು ವೈರಾಗ್ಯ ತಾಳಿ ದೀಕ್ಷೆ ಪಡೆದ ಆ ಪರಾಜಿತಮುನಿ ನಾನು ಎಂದು ಮತ್ತೊಬ್ಬ ಮುನಿ ಹೇಳಿದನು:

೪. ಇನ್ನೊಬ್ಬ ಜಯಮೇರುಮುನೀಶ್ವರ ಚಾರಿತ್ರದ ಕಥನವನ್ನೀರೀತಿ ಬರೆದನು:

ಕುಂತಳದರಸು ಜಿತಶತ್ರು, ಹೆಂಡತಿ ವಿಜಯಾವತಿ, ಮಂತ್ರಿ ಜಯ, ಅವನ ಹೆಂಡತಿ ಜಯಶ್ರೀ. ಅವರಿಗೆ ಈರ್ವರು ಮಕ್ಕಳು. ವಿಜಯಾವತಿ ಹಿಂದಣ ಜನ್ಮದಲ್ಲಿ ರಾಕ್ಷಸಿಯಾದುದರಿಂದ ಸುರವಿದ್ಯೆಯನ್ನು ಕೈವಶ ಮಾಡಿಕೊಂಡು, ಅದೇ ಮದುವೆಯಾದ ಮಗನನ್ನು ಕೊಂದುತಿಂದು, ಓರ್ವ ರಾಕ್ಷಸಿ ಹೀಗೆ ಮಾಡಿದಳೆಂದು ಅಳುವಳು. ಈ ರೀತಿ ಅವಳು ಮನುಷ್ಯರನ್ನು ಕೊಂದು ತಿನ್ನುವುದನ್ನು ಸಣ್ಣಮಗ ಅರಿತು, ತನ್ನನ್ನು ಕೊಲಬಂದ ಅವಳ ಯತ್ನವನ್ನು ವಿಫಲಗೊಳಿಸುವನು. ಹೆತ್ತಮಕ್ಕಳ ಕೊಂದು ತಿಂದ ಪಾತಕಿಯಿಂದ ನೊಂದು, ಜಯಮಂತ್ರಿ ಮೇರು ಜಿನದೀಕ್ಷೆ ವಹಿಸಿದುದಾಗಿ ಹೇಳುವನು.

ಇಲ್ಲಿಗೆ ಈ ಕೃತಿ ನಿಂತು ಹೋಗಿದೆ.

ಈ ಕಾವ್ಯವನ್ನು ಓದುತ್ತಿರುವಾಗ ಜನ್ನಕವಿಯ “ಯಶೋಧರಚರಿತೆ” ಮತ್ತು ಪದ್ಮನಾಭಕವಿಯ “ಜಿನದತ್ತರಾಯಚರಿತ”ಗಳು ನೆನಪಿಗೆ ಬರುತ್ತಿವೆ. ಯಶೋಧರಚರಿತೆಯ ಅಮೃತಮತಿ ಅಷ್ಟಾವಂಕನಿಗೆ ಒಲಿದಂತೆ, ಇಲ್ಲಿ ಪೃಥ್ವೀಮತಿ ಕುಮತಿಯೆಂಬ ಸಚಿವನೊಂದಿಗೆ ಓಡಿಹೋದ ಸನ್ನಿವೇಶವಿದೆ. ಅಮೃತಮತಿ ಗಂಡನಿಗೆ ವಿಷಹಾಕಿದಂತೆ, ಇಲ್ಲಿ ಪೃಥ್ವೀಮತಿ ಮಗನಿಗೆ ವಿಷಹಾಕಿದ್ದಾಳೆ. ಜೊತೆಗೆ ಗಂಡನನ್ನು ಕಳ್ಳನೆಂದು ಅರಸನಲ್ಲಿ ದೂರಿ ಅವನನ್ನು ಶಿಕ್ಷೆಗೆ ಗುರಿಪಡಿಸಲು ಪ್ರಯತ್ನಿಸಿದ್ದಾಳೆ.

ಹಾಗೆಯೇ ಜಿನದತ್ತರಾಯಚರಿತೆಯಲ್ಲಿ ಸವತಿಯ ಮಗನನ್ನು ಕೊಲ್ಲುವ ಪ್ರಯತ್ನ ನಡೆದರೆ, ಇಲ್ಲಿ ಹೆತ್ತತಾಯಿಯೇ ಮಗನನ್ನು ಕೊಲ್ಲಲು ಮುಂದಾಗಿದ್ದಾಳೆ. ಹೀಗೆ ಈ ಕಾವ್ಯ ಜಾರಜಾರೆಯರ ಕಥೆಯನ್ನೊಳಗೊಂಡಿದ್ದರೂ ಅವರೆಲ್ಲ ಕೊನೆಯಲ್ಲಿ ವೈರಾಗ್ಯಭಾವವನ್ನೊಳಗೊಂಡರು ಎಂಬುದನ್ನು ನಿರೂಪಿಸುವುದೆ ಕವಿಯ ಉದ್ದೇಶವಾಗಿದೆ.

ಶ್ರೀಪಾಲಚರಿತೆ: ಕನ್ನಡದಲ್ಲಿ ಮಂಗರಸನಲ್ಲದೆ ವರ್ಧಮಾನ ಮತ್ತು ದೇವರಸರು ಸಾಂಗತ್ಯದಲ್ಲಿ ಶ್ರೀಪಾಲಚರಿತೆಯನ್ನು ರಚಿಸಿದ್ದಾರೆ. ಅಲ್ಲದೆ ಸಂಸ್ಕೃತ ಪ್ರಾಕೃತಗಳಲ್ಲಿಯೂ ಅನೇಕ ಶ್ರೀಪಾಲಚರತೆಗಳಿವೆಯೆಂದು ತಿಳಿದುಬರುತ್ತಿದೆ. ಇವೆಲ್ಲಕ್ಕೆ ಮಹಾಪುರಾಣದಲ್ಲಿರುವ ಶ್ರೀಪಾಲಚರಿತೆಯೇ ಮೂಲವಾಗಿರುವಂತಿದೆ. ಬಹುಶಃ ಇವನ್ನೆಲ್ಲ ಅವಲಂಬಿಸಿ ಈ ಕೃತಿ ರಚಿಸಿರುವ ಮಂಗರಸ “ಪೂರ್ವಕಾವ್ಯಮಿರ್ದಂತಿದನೊರೆದೆ” (೧ – ೨೧) ಎಂದಿದ್ದಾನೆ. ಈ ಕೃತಿ ೧೪ ಸಂಧಿ, ೧೫೨೭ ಸಾಂಗತ್ಯ ಪದ್ಯಗಳನ್ನೊಳಗೂಡಿದೆ. ಕವಿ ಸಾಂಗತ್ಯಕ್ಕೆ “ಚರಿತೆರಾಗ ಎಂದು ಕರೆಯುವ ರೂಢಿಯಿದೆ” ಎಂದಿದ್ದಾನೆ. ಈ ಕಾವ್ಯವನ್ನು ಕವಿ “ಶೃಂಗಾರಸುಧಾಬ್ಧಿ” ಎಂದು ಕರೆದಿದ್ದಾನೆ. ಅಲ್ಲದೆ ಇದನ್ನು “ಓತು ಪೇಳಿದೆನೀ ಕೃತಿಯ” “ಕೃತಾರ್ಥನಾಗುವೆನೆಂದುವೊರೆದೆನೀ ಅನುನಯಮಪ್ಪ ಸಂಗತಿಯ” (೧ – ೧೬) ಎಂದಿದ್ದಾನೆ.

ಶ್ರೀಪಾಲಚರಿತೆಯ ನಾಯಕನಾದ ಶ್ರೀಪಾಲನು ತೀರ್ಥಂಕರನೂ ಅಲ್ಲ, ಬಲದೇವನೂ ಅಲ್ಲ. ವಾಸುದೇವ – ಪ್ರತಿವಾಸುದೇವನೂ ಅಲ್ಲ. ತ್ರಿಷಷ್ಠಿಶಲಾಕಾಪುರುಷರಲ್ಲಿ ಯಾರೊಬ್ಬನೂ ಅಲ್ಲದ ಶ್ರೀಪಾಲನನ್ನು ಕುರಿತು ಬರೆಯಲಾದ ಕಾವ್ಯ ಇದಾಗಿದೆ. ಜಿನಧರ್ಮದ ಅಗ್ಗಳಿಕೆಯನ್ನು ಕಥೆಯ ಮೂಲಕ ಹೇಳುವಾಗ ಜೈನಕವಿಗಳು ೬೩ ಮಹಾಪುರುಷರನ್ನೇ ಅಲ್ಲದೆ, ಪುರಾಣ ಪುರಷರ ಕಥೆಗಳನ್ನೂ ಕಟ್ಟಿದರು ಎನ್ನುವುದಕ್ಕೆ ಯಶೋಧರ, ಜೀವಂಧರ, ಜಿನದತ್ತರಾಯ ಚರಿತೆಗಳು ಸಾಕ್ಷಿಯಾಗಿವೆ. ಈ ಗುಂಪಿಗೆ ಸೇರತಕ್ಕುದಾಗಿದೆ ಶ್ರೀಪಾಲಚರಿತೆ.

ಪುಂಡರಿಕೀಣಿಪುರದಲ್ಲಿ ಪರನಾರಿಸಹೋದರ ಗುಣಪಾಲ – ಕುಬೇರಶ್ರೀಯರಿಗೆ ಮಕ್ಕಳಿಲ್ಲದ ಬಯಕೆ ತೀರಿಸುವ ದೃಷ್ಟಿಯಿಂದ ಶ್ರೀಪಾಲನು ಮಗನಾಗಿ ಹುಟ್ಟಿದನು. ಅವನು ಬೆಳೆದು ದೊಡ್ಡವನಾದ ಮೇಲೆ ಒಂದು ದಿನ ಚಂದ್ರಗ್ರಹಣ ನೋಡಿ ಗುಣಪಾಲನು ಮಗನಿಗೆ ರಾಜ್ಯವನ್ನು ಒಪ್ಪಿಸಿ ಸನ್ಯಾಸಿಯಾದನು. ಶ್ರೀಪಾಲನು ವನಪಾಲನ ಕೋರಿಕೆಯ ಮೇರೆಗೆ ವನವಿಹಾರಕ್ಕೆ ತೆರಳಿ, ಆ ವನದ ಹೊಂಗೆಮರದ ಕೆಳಗೆ ನೆಲಮುಟ್ಟದೆ ನಿಂತು ಹಾಡುತ್ತಿದ್ದ ಸಂಗೀತಗಾರನನ್ನು ನೋಡಲು, ಅವನು ಬಾಲಕಿಯ ರೂಪ ತಾಳಿ, ತನ್ನ ಚರಿತ್ರೆಯನ್ನು ಈ ರೀತಿ ಹೇಳಿದನು:

ಸವಿಮಲವಾಹನ – ಕಾಂತಾವತಿಯರಿಗೆ ಅರವಿಂದ ಮತ್ತು ಜಯಾವತಿಯರೆಂಬ ಮಕ್ಕಳಾದರು. ಜಯಾವತಿ ತಾರುಣ್ಯ ಹೊಂದಲು “ಜೋತಿಷಿ ಜಯಾವತಿಯ ಗೆಳತಿ ಭಾವಕಿಯು ಗಂಡು ವೇಷದಿಂದ ಪುಂಡರೀಕಿಣಿಪುರ ವನದಲ್ಲಿದ್ದು ಹಾಡುತ್ತಿರುವಾಗ ಯಾವನ ದೃಷ್ಟಿತಾಗಿದೊಡನೆ ಹೆಣ್ಣಾಗುತ್ತಾಳೊ ಅವನೇ ಜಯಾವತಿಯ ಗಂಡನಾಗುವನೆ”೦ದು ಹೇಳಿದನು. “ಹಾಗೆಯೇ ಈಗ ಘಟಿಸಿದೆ. ನಿನಗೆ ಜಯಾವತಿ ರಾಣಿಯಾಗಲಿದ್ದಾಳೆ. ನಾನು ಆಕೆಯ ಗೆಳತಿ ಭಾವಕಿ. ಜಯಾವತಿಯ ಅಣ್ಣ ನಿನಗೆ ಮಂತ್ರಿಯಾಗುವನು. ನಿನಗೆ ಚಕ್ರರತ್ನವು ಸಿಗುವುದು” ಎಂದು ಸೂಚಿಸಿ ಯಕ್ಷನೊಂದಿಗೆ ಅವಳು ಆಕಾಶಕ್ಕೆ ಅಡರಿದಳು.

ವನಿತೆಯ ನೆನಪನ್ನು ಹೃದಯದಲ್ಲಿಟ್ಟುಕೊಂಡು ಶ್ರೀಪಾಲನು ತನ್ನ ಪುರಕ್ಕೆ ಬರಲು ಒಂದು ಮಾಯಾಕುದುರೆಯು ಅವನನ್ನು ಹೊತ್ತುಕೊಂಡು ನಡೆಯಿತು. ಹಾದಿ ಮಧ್ಯದಲ್ಲಿ ಯಕ್ಷನಿಗೆ ಹೆದರಿ ಅವನನ್ನು ಅಲ್ಲಿಯೇ ಚೆಲ್ಲಿಹೋಯಿತು. ಆಕಾಶದಿಂದ ಬೀಳುತ್ತಿದ್ದ ಅವನನ್ನು ಯಕ್ಷನು ರತ್ನಾವರ್ತ ಎಂಬ ಪರ್ವತದ ತುದಿಗೆ ತಂದಿರಿಸಿದನು. ಅಲ್ಲಿಯ ಜಿನಾಲಯದಲ್ಲಿದ್ದ ಓರ್ವ ಮುದುಕಿಗೆ ಶ್ರೀಪಾಲನ ದೃಷ್ಟಿ ತಾಗಲು, ಅವಳು ಯುವಳಿಯಾದಳು. ಅವಳ ಜೊತೆ ೧೬ ಯುವತಿಯರಿರಲು ಅವರು ತಮ್ಮ ವೃತ್ತಾಂತವನ್ನು ಹೇಳುವರು: “ನಾನೇ ಭಾವಕಿ. ನಾನು ಹೇಳಿದ ಜಯಾವತಿ ಇವಳೇ. ನನ್ನೊಡನಿದ್ದ ಯಕ್ಷ ಜಯಾವತಿಯ ಅಣ್ಣ. ಆಶನಿಗವೇಗನೆಂಬುವನು ಜಯಾವತಿಗೆ ಸೋತು, ಒಲಿಸಿಕೊಳ್ಳಲು ವಿಫಲನಾಗಿ ಜಯಾವತಿಯನ್ನು ವೃದ್ಧೆಯನ್ನಾಗಿ ನಮ್ಮನ್ನೆಲ್ಲ ವೃಕ್ಷಗಳನ್ನಾಗಿ ಮಾಡಿ, ಕುದುರೆರೂಪದಿಂದ ನಿನ್ನನ್ನು ಹೊತ್ತು ಇಲ್ಲಿಗೆ ತಂದು ಕೊಲ್ಲುವ ಯತ್ನದಲ್ಲಿದ್ದನು. ಯಾಕೋ ನಿನ್ನನ್ನು ಇಲ್ಲಿ ಚೆಲ್ಲಿ ಮಾಯಾವಾದನು” ಒಂದು ಹೇಳಿದಳು. “ತಂದೆ ತಾಯಿಯರ ಅನುಮತವಲ್ಲದಬಲೆಯರೊಳೊಂದುವುದು ಅನುಮತವಲ್ಲ” ಎಂದು ಅವನು ಆಡುತ್ತಿದ್ದಂತೆ ಜಯಾವತಿ, ಶ್ರೀಪಾಲನು ಮತ್ತೆ ಎತ್ತಲೂ ಹೋಗಬಾರದೆಂದು ಅವನನ್ನು ಮೂರ್ಛೆಗೊಳಿಸಿ, ಅವನ ಮೇಲೆ ರತ್ನಗಂಬಳಿಯನ್ನು ಹೊದಿಸಿ, ಸಖಿಯರನ್ನು ಕಾವಲಿರಿಸಿ, ತಮ್ಮಿಬ್ಬರ ಮದುವೆಗೆ ತಂದೆ ತಾಯಿಗಳನ್ನು ಒಪ್ಪಿಸಲು ಹೊರಟುಹೋದಳು. ರತ್ನಗಂಬಳಿಯನ್ನು ಮಾಂಸವೆಂದು ಭಾವಿಸಿ ಗಂಡಭೇರುಂಡವೊಂದು ಎತ್ತಿ ಒಯ್ಯಲು, ಶರಭನಿಗೆ ಅದು ಹೆದರಿ, ಅದನ್ನು ಕಾಡಿನಲ್ಲಿ ಚೆಲ್ಲಿ ಮಾಯವಾಯಿತು. ರತ್ನಗಂಬಳಿಯಿಂದ ಹೊರಬಂದ ಶ್ರೀಪಾಲ ಅಲ್ಲಿ ಒಂದು ಜಿನಾಲಯ ಕಂಡು ಪೂಜಿಸಿ, ಪೇರಡವಿಯ ಮೂಲಕ ಬರುತ್ತಿರಲು, ಅವನನ್ನು ಕಂಡು ಬೇಡತಿಯರು, ವಿಶಾಲಾಕ್ಷಿಯರು ವಿಸ್ಮಯ ಬಡುವರು. ಹೀಗೆ ಬರುತ್ತಿರಲು ಮದವೇರಿದ ಆನೆಯೊಂದು ಎದುರಾಯಿತು. ಅದನ್ನು ಪಳಗಿಸಿ ಮುಂದೆ ಬರುತ್ತಿದ್ದಂತೆ ಗಗನಚರನಾದ ಜಯಾವತಿಯ ಅಣ್ಣ ಅರವಿಂದ ಕಾಣಿಸಿಕೊಂಡು “ತಂದೆಯ ಆಜ್ಞೆಯಂತೆ ನಾನು ನಿನ್ನನ್ನು ಕರೆತರಲು ಬಂದೆ”ನೆಂದು ಹೇಳಿ ಅವನನ್ನು ಹೇಗಲಮೇಲೇರಿಸಿಕೊಂಡು ಶಿವಶಂಖರನಗರಿಗೆ ತಂದುಬಿಟ್ಟು ಮಾಯವಾದನು.

ಶ್ರೀಪಾಲನು ಶವಾಲಯದಲ್ಲಿ ನಡೆದು ಬರುತ್ತಿದ್ದಾಗ ಎದುರಾದ ಭೂತಗಳಿಗೆ ಹೆದರದೆ ವರ್ತಿಸಿದುದರಿಂದ ದಿವ್ಯಪಾದುಕೆ, ಚಿಂತಾಮಣಿ, ಖಡ್ಗ ಮುಂತಾದವನ್ನು ಪಡೆದನು. ಅಷ್ಟರಲ್ಲಿ ಅರವಿಂದ ಕಾಣಿಸಿಕೊಳ್ಳಲು ಇಬ್ಬರೂ ಪಟ್ಟಣದ ವೇಶ್ಯಾವಾಟಿಕೆಯ ವೈಭವದ ಸಿರಿ ನೋಡುತ್ತ ಅರಮನೆಗೆ ಹೋಗಿ ಜಯಾವತಿಯನ್ನು ಕಂಡರು. ಇಬ್ಬರಿಗೂ ಲಗ್ನವಾಯಿತು. ಇಬ್ಬರೂ ವನವಿಹಾರದಲ್ಲಿ ತೊಡಗಿ ಸಿದ್ಧಕೂಟದ ಶಿಖರದಲ್ಲಿರುವಾಗ ಅಶನಿವೇಗನು ಇವರಿಬ್ಬರನ್ನು ಕೊಲ್ಲಲು ಯೋಚಿಸಿ ಹೊತ್ತೊಯ್ದು ಸರ್ಪಗೃಹಕ್ಕೆ ನೂಕಿಬಿಡುನು. ಪದ್ಮಾವತಿಯ ಪ್ರಭಾವದಿಂದ ಅವರಿಬ್ಬರೂ ಉಳಿದರು. ಕಾಕಿಣಿಮಣಿಯನ್ನು ಚಕ್ರರತ್ನವನ್ನು ವಶಮಾಡಿಕೊಂಡು ತನ್ನ ಪಟ್ಟಣಕ್ಕೆ ಬಂದನು. ಆತನನ್ನು ನೋಡಲು ಸಂಭ್ರಮಿಸಿ ಬಂದ ಜನರ ಸಡಗರವೇ ಸಡಗರ. ಶ್ರೀಪಾಲನು ದಿಗ್ವಿಜಯ ಕೈಕೊಂಡು ಮಗಧ, ಮಹಾಯಕ್ಷ, ಪ್ರಭುಸಾರ, ವಿಜಯಕುಮಾರ, ಕೃತಮಲ್ಲ ಮೊದಲಾದ ಮಕುಟವರ್ಧನರನ್ನು ಗೆದ್ದು ಚಕ್ರವರ್ತಿಯೆನ್ನಿಸಿದನು. ವೃಷಭಗಿರಿಯಲ್ಲಿ ತನ್ನಂಕಮಾಲೆಯನ್ನು ಬರೆಸಿದನು. ಒಂದುದಿನ ಕೆನ್ನೆಯ ನೆರೆಗೊದಲು ನೋಡಿ ಹಿರಿಯ ಮಗ ಲಕ್ಷ್ಮಣನಿಗೆ ರಾಜ್ಯ ಒಪ್ಪಿಸಿ ದೀಕ್ಷೆಗೊಂಡನು. ತಪದಿಂದ ಕೇವಲಜ್ಞಾನ ಪಡೆದನು.

ಪ್ರತಿ ಆಶ್ವಾಸದ ಅಂತ್ಯದಲ್ಲಿ “ಇದು ಭಾವಕಜನ ಕರ್ಣವಿಭೂಷಣವಿದು ರಸಿಕರ ಚಿತ್ತದೆರಕ ಇದು ವಾಣೀಮುಖಮಾಣಿಕಮುಕುರ ಮತ್ತಿದು ಶೃಂಗಾರಸುಧಾಬ್ದಿ” (೧ – ೯೫) ಎಂದಿರುವ ಮಾತು ಕೃತಿಯನ್ನು ಓದಿಮುಗಿಸಿದಾಗ ಅತಿಶಯೋಕ್ತಿಯಲ್ಲವೆನ್ನಿಸುತ್ತದೆ. ಮಂಗರಸನ ಮಾಗಿದ ಭಾಷಾಶೈಲಿ ಇಲ್ಲಿ ಎದ್ದು ಕಾಣುವುದರಿಂದ ಇದೇ ಕವಿಯ ಕೊನೆಯ ಕೃತಿ ಇದ್ದರೂ ಇರಬಹುದು.

 

[1] ಇವುಗಳನ್ನು ಈ ಪ್ರಸ್ತಾವನೆಯ ಅಂತ್ಯದಲ್ಲಿ ಕೊಡಲಾಗಿದೆ.

[2] ಇವುಗಳನ್ನು ಈ ಪ್ರಸ್ತಾವನೆಯ ಅಂತ್ಯದಲ್ಲಿ ಕೊಡಲಾಗಿದೆ.