ಸಮ್ಯಕ್ತ್ವಕೌಮುದಿ :

೧.      ಹಲವು ಹುಲ್ಲ ಹುರಿಗೂಡಿ ಹಗ್ಗಮಂ ಮಾಡಲದು … ಮದಗಜೇಂದ್ರನ ಕಾಲಬಂಧನಂ ಮಾಡದೆ. ೧ – ೪೮

೨.      ವಿನಾಶ ಕಾಲೇ ವಿಪರೀತ ಬುದ್ಧಿ. ೧ – ೪೯

೩.      ಜಾತೆರಡು ಕೂರಸಿಗಳೊಂದೊರೆಯ ಹೊಗದಮತೆ. ೨ – ೪೮.

೪.      ತಾನೊಂದನೆಣುಸಿದೊಡೆ ದೈವ ತಾನೊಮದನೆಣಸಿತು. ೨ – ೩೭.

೫.      ಆಡುವುದು ಕಡು ದೊಡ್ಡ ಮಾತು ಕಂಡಾ ಅಂಜಿಯೋಡುವುದು ತಾಂ ಚೋರಕಂಡಿ ಯೆಂಬಂದಮಂ ಮಾಡಿದೆಯಲಾ ೫ – ೪೫.

೬.      ಮೊದಲು ತನ್ನಂ ತರಿದು ಕೊರೆದರಿದವರ್ಗೆ ಸಂಮುದದಿ ಬೆಲೆಗೊಂಡವರ್ಗೆ ಒಂದೇ ಸಮದ ಗಂಧವೀಯ ಚಂದನದ ತೆರದಿ ೬ – ೨೭.

೭.      ಪೊರಗೆ ಕೊಟ್ಟಾ ಕೂಸು ಕುಲಕಿಲ್ಲವೆಂದೆಂಬಾ ನಾಣ್ಣುಡಿಯುಂಟು – ೮ – ೪೨.

೮.      ಮದ್ದಳೆಯ ಹೊಕ್ಕಿಲಿಯಂತಿರತ್ತಿತ್ತ ಹುಡುಹುವುತಿರ್ದರಾಗ ೮ – ೫೩.

೯.      ನಳಿಗೆಯೊಳ್ ನಾಯ ಬಾಲವನು ಕಟ್ಟಲ್ತನ್ನ ನಳುಹ ಬಿಡಂತೆ. ೧೦ – ೧೨

೧೦.    ಗೇರ ಸವಿವಣ್ ನಿಷ್ಠುರಂಬಡೆದ ಬೀಜಮಂ ನೂಂಕುವಂತೆ. ೧೦ – ೧೮.

೧೧.    ಮುನ್ನಿನ ಪುಣ್ಯಮೇ ಪುರುಷ ರೂಪುಗೊಂಡೆಯ್ದುವಂತೆ ೧೧ – ೩.

ನೇಮಿಜಿನೇಶ ಸಂಗತಿ :

೧.      ಹಸೆಯೊಳು ಹಾವು ಹರಿಯಿತೆಂಬ ನಾಣ್ಣುಡಿ ಹಸನಾಯಿತು. ೩ – ೫೫

೨.      ಅಂತಕನೆಂಬದೇವಗೆ ಮಿಳ್ತು ಕಾರ್ತಿಕದೊಳಗೆತ್ತಿದ ದೀವಳಿಗೆಯ ತೆರನಾಯ್ತು ೮ – ೮೮.

೩.      ಅರಸುವ ಬಳ್ಳಿ ಕಾಲನುತೊಡರಿತ್ತೆಂಬ ತೆರ ೧೩ – ೫೩.

೪.      ಕಂಸಮನೆ ಮರೆಯೊಳು ಮಾಡಿಸಿದ ಮುನಿಸಗಿಚ್ಚು ಹೊರಹೊಮ್ಮಿದುದಡುಗೆಯಮನೆಯ ಕಿಚ್ಚಿನ ಹೊಗೆಯಂತೆ ೧೫ – ೯.

೫.      ಹದದ ನೆಲದ ಮೂಲಂಗಿಯ ಕೀಳ್ವಂತೆಯದರ ಕೊಂಬನು ಕಿಳ್ತುಕೊಂಡು ೧೬ – ೧೦೮.

೬.      ಬಳಸಿನಿಂದ ಸಾಸಿರ್ವರು…..ಜೇನುಹುಳು ಮುತ್ತುವ ಮಾಳ್ಕೆಯೊಳು ೧೬ – ೧೩೪.

೭.      ಮುತ್ತಿಹಿಡಿಯಲು ನೊರಜನಿರದೊರಸುವಂತೊತ್ತಿ ಹೊಸೆದು ಕೆಲಬರನು ಹತ್ತಿಯ ಹಿಸಿವಂತೆ ಹಿಸಿದ ೧೬ – ೧೩೫.

೮.      ನೆಲನೆ ಬೆಸಲೆಯಾದಂತೆ ಬಲಮೆಲ್ಲಮೇಲ್ವಾಯಲು ೧೬ – ೧೪೧.

೯.      ಆನು ಹೊತ್ತವು ಮೊಲೆಯ ಎಕ್ಕೆಯ ಕಾಯ್ಗಳೆಂದು ೧೯ – ೧೦೫.

೧೦.    ಹಸುವಿನ ಬಸಿರ ಬಂದಾ ಕರು ಬಲಿದಾ ಹಸುವಿನ ಮೇಲ್ವಾಯ್ವಂತೆ ೧೯ – ೧೦೨.

೧೧.    ಸುಮ್ಮನೆ ಕುಣಿವವರಿಗೆ ಹರೆಯನು ಹುಯ್ಯೆ ಸುಮಾನವೇಳುವಂದದೊಳು ೧೯ – ೧೧೩.

೧೨.    ಆ ಬಾಣನನಾಭೀಮ….. ಎಡಗಾಲಿಂದ ಹಂಜಿ ಹೊಸವಂದದಿ ಕೆಡಹಿ ಹೊಸೆದು ಕೊಂದನಾಗ ೨೩ – ೧೩೬.

೧೩.    ಒಂದೊರೆಯೊಳಗತಿ ನಿಸಿತಮಪ್ಪಸಿಯೆರಡೊಂದು ವಣಿಯವದರಂತೆ ಒಂದೊರೊಳಗೀರ್ವರರ ಸುತನವನಾಳ್ವುದಂದವಹುದೆ. ೨೩ – ೫೧.

೧೪.    ಕಲ್ಲು ತಾಗಿದ ನೆಲ್ಲಿಯಂತೆ ೨೫ – ೫೫.

೧೫.    ಬಡಿಗೆಯಿಂದುದುರ್ವ ನೆಲ್ಲಿಯ ಕಾಯಂದದಿ ೨೫ – ೭೧.

೧೬.    ಎಲ್ಲರ ತಲೆಗೊಳ್ಳದೊಡೆನಗಿವು ಮೀಸೆಯಲ್ಲ ೨೬ – ೨೧.

೧೭.    ಬೇಡಿದ ಕಾಡೊಳು ಮಳೆ ಹುಯ್ದಿಂತೆ – ೨೬ – ೧೧೫.

೧೮.    ವಿಷ್ಣುವಿನ ವೀರವನು ಲಾಗುಗೆಸಿಸದಿರ್ದೊಡೆ ಜೋಗಿಜಂಗಮರಾಗುವೆವರಸ ನಿನ್ನಾಣೆ ೨೬ – ೮೭.

೧೯.    ಬಲರಾಮನನು ಬಾಳ್ದಲೆಗೊಂಡವನ ಕರತಳದ ಹಲಾಯುಧಸಹಿತ ಛಲದಂಕ ಕೇಳ್ನಿನ್ನ ತೆರಿಗೆಯ ಹಳ್ಳಿಯೊಳುಳುವೊಕ್ಕಲಮಾಡುವೆವು ೨೬ – ೯೦.

೨೦.    ಅನು ಮಾಡಿದ ಪುಣ್ಯದ ಫಲದಿ ಬೇಡಿದ ಕಾಡೊಳು ಮಳೆ ಹೊಯ್ದಂತೆ ೨೬ – ೧೧೫.

೨೧.    ಮದ್ದಳೆಯ ಹೊಕ್ಕಿಲಿಯಂತೆ ೨೭ – ೧೩೯.

೨೨.    ಬೀರವಳ್ಳಿಯ ಬಿತ್ತಬಿತ್ತುವ ತೆರನಾಯ್ತು ೨೯ – ೨೮

೨೩.    ಮಾರಾಂತ ಮಂಡಳಿಕರ ಕೊಂದನಾ ಹೇನು ಕೂರೆಯನೊರಸುವಂದದೊಳು ೨೯ – ೨೯.

೨೪.    ತಿಗಣಿಯ ತಿಕ್ಕುವಂದದಿ ನೆಲಕಿಕ್ಕಿದ ೨೯ – ೩೧

೨೫     ರೋಗಿ ಎಳಸಿದುದನು ವಯದ್ಯನಿತ್ತಂತಾದುದು ೨೯ – ೧೮೦.

೨೬.    ಕರ್ಣನ ಪರಸ್ಥಿತಿ – ಎರಡಕ್ಕೆ ಬಿಟ್ಟ ಕರುವಿನಂದವ ೨೯ – ೧೮೪

೨೭.    ಬಿಲ್ಲಬಿನ್ನಾಣಿಗರೆಚ್ಚಾರುಂಡಗಳೆಡವಿಲ್ಲದೆ ನೆಗೆದು ಬೀಳ್ವಾಗ ಸಲ್ಲೀಲೆಯಿಂ ಧುರಧರಣೀಸತಿ ತಿರಿಕಲ್ಲಾಡುವ ತೆರನಾಯ್ತು ೩೦ – ೧೧.

೨೮.    ಭಾಂಡದ ಬೋನದ ಬಳಗಕ್ಕೆ ಬಲ್ದಡಿಗೊಂಡಂದದಿ ೩೦ – ೧೫.

೨೯.    ಮದಗಜ ಮಸ್ತಕವಡಿಯಾಗಲಾಮೇಗಣಧಟರುಗಳ ಸದೆಬಡಿವ ಗದೆಯ ಕೊಡತಿಯಾಗಲು ಭೀಮಸೇನನೊಪ್ಪಿದನಾ ಕಮ್ಮಾರನಂತೆ ೩೦ – ೨೦.

೩೦.    ಬೆದರಿದರು ಹಾವಡಿರದ ಹಂದೆಯಂತೆ ೩೦ – ೧೧೨.

೩೧.    ಬಿಸಿನೀರಹೊಕ್ಕ ಬೆಳ್ಳಿಲಿವಿಂಡು ಬೆದರ್ವಂತೆ ೩೧ – ೧೬.

೩೨.    ಕೈಯ ಕೂಸನು ನೆಲಕಿಕ್ಕುವಂದದಿ ೩೧ – ೨೦.

೩೩.    ಇರುಪೆಯ ಪಿಂಡು ಕೆಂಡವ ಕಂಡಂದದಿ ೩೧ – ೨೧.

೩೪.    ವಿಕ್ರಮಹೀನರಾದೊಡಮೇನೊ ಕೋವರಚಕ್ರಮುಳ್ಳಾಕುಂಬರರ ಚಕ್ರಿಯೆಂಬರು ೩೧ – ೩೭.

೩೫.    ಉಂಗುರವನು ನೋಡುವೊಡೆ ಕನ್ನಡಿಯ ಮನಗೊಂಡರಸಲೇಕೆ ೩೧ – ೩೮.

೩೬.    ಓರೋರ್ವರೆಚ್ಚಂಬುಗಳನೆಡವಳಿಯೊಳಗೋರೋರ್ವರು ಖಂಡಿಸಲು ಮಾರಿಯಡುವುದಕ್ಕೆ ಪುಳ್ಳಿಯ ಬಣಬೆಯ ಸೇರಿಸಿದಂತೊಪ್ಪಿದುದು ೩೧ – ೪೩.

೩೭.    ಪ್ರಥಮ ಚುಂಬನದೊಳು ಪಲ್ಲಮುರಿದಂತೆ ೩೨ – ೬೬.

೩೮.    ಉಂಡ ಬಾಯಂ ತೊಳೆವಂದದಿನಾ ೩೪ – ೧೧೧.

೩೯.    ಆ ರವಿಯನು ರಾಹು ಗ್ರಹಿಸಿದೊಡೊಳ್ಳೆ ನೀರೊಳು ತಲೆಯೆತ್ತುವಂತೆ ೩೪ – ೧೨೫.

೪೦.    ಬಲ್ಲಾಳಂದೆಸಗಿದ ಪಾಪವಶದಿಂ ಹುಲ್ಲಾಳಾದನೆಂದೆನುತ ೩೪ – ೧೪೬.

೪೧.    ಕರಗಿದ ಲೋಹರಸದುಷ್ಣ ನಂದುವಾಗಾನೀರೊಳಗೆ ಒಂದು ನಿಮಿಷ ಗುಳುಗುಳಿಪಂತೆ ೩೧ – ೭೦.

೪೨.    ಮಳೆಯ ಮುಗಿಲ ನೋಡಿ ಮನೆಯೊಳಿರ್ದುದಕವ ತುಳುಕುವ ಕಡುಹೆಡ್ಡರಂತೆ ೩೪ – ೩೨.

೪೩.    ಹರಿಗೋಲನೇರಿಸಿ ನಡೆತಂದು ತುಂಬಿದ ತೊರೆಯ ನಡುವೆ ಸಟ್ಟುಗವ ಹರಿದುಹಾಕು ವರಂದವನೆಣಿಸುವರೇ ೩೪ – ೪೬.

೪೪.    ಇರುವೆಯ ಗೂಡಿಗಿಕ್ಕಿದ ಕಿಚ್ಚಿನಂತಿ ೩೪ – ೧೦೮

ಶ್ರೀಪಾಲಚರಿತೆ :

೧.      ಭೂನಾತ ನಿನಗಾಖಳನು ತಾನೊಮದುಪಹತಿಯೆಂದೆಣಿಸಿದೊಡಾ ದೈವ | ತಾನೊಂದು ತೆರನ ಮಾಡಿದುದು ೫ – ೧೦೧.

೨.      ಅರಸುವ ಬಳ್ಳಿ ಕಾಲದ ತೊಡರಿತ್ತೆಂಬ ತೆರನಾಗಿ ೫ – ೧೦೨.

೩.      ಹಣೆಯೊಳು ಬರೆದ ಲಿಪಿಯ ಮೀರಬಹುದೆ ೫ – ೧೧೦.

೪.      ಹಸಿಯೊಳು ಹಾವು ಹರಿದು ಸತ್ತರೆಂದು ಮುನ್ನುಸುರುವ ನಾಣ್ಣುಡಿ ೭ – ೭೬.

೫.      ಒಡೆವಿದಳವ ಹುರಿಯಲೈಯಾಹುಡಿಯೊಳಗೊಡವೆರಸೊಡೆದ ಮೆಣಸು ತಡೆಯದಕ್ಕಿಯ ತೊಳಸೆಂದೆಂಬ ನುಡಿ ೧೩ – ೫೪.

೬.      ಹಿಡಿದುಗ್ಗದ ನೀರಮಡಕೆಯ ಮಂಡೆಯ ಮೇಗಣಡುಗಟ್ಟುಗೆ ಚೀರದಕ್ಕಿ ಹೆಡೆತಲೆಯೊಳು ಜೋಲುತಿರಲುಸ್ಸೆನುತ ನಡೆತಂದುದಲ್ಲಿ ಕೆಲಬರು ೧೩ – ೧೦೪.

ಪ್ರಭಂಜನಚರಿತೆ :

೧.      ಹುರಿಯನೊಡದ ಹಗ್ಗಮಾಮುನ್ನಿನಂತವೆ ಧರಿಸುವುದೆ ೨ – ೧೦.

೨.      ಎತ್ತಮೆಟ್ಟಿದೊಡೆತ್ತ ಚಪ್ಪಟೆಯಾದುದು ೪ – ೬೨.

ಜಯನೃಪಕಾವ್ಯ :

೧          ಅಳೆಸಗಿದುದಾಳ್ದಂಗೆಂಬಾನಾಣ್ಣುಡಿ ೧೦ – ೩೮.

೨.         ಅವಳ್ಗೆ ಅವನಿತದೊಳಗನಂಗನೆನಿಸಿದನ ಯುವತಿಯೆನಿಪ ರತಿಗಿತಿ ಬಿಡುವೆಣ್ಗಳ ದಿವಿಜ ಗಿವಿಜ ಸತಿಯರು ಪಾಸಟಿಯೇ ೧೩ – ೧೪.

ಇದು ಅಲ್ಲದೆ ಪ್ರಾಚೀನ ಕವಿವಾಣಿ ಈತನ ಎಲ್ಲ ಕೃತಿಗಳಲ್ಲೂ ಹೊಳಲಗೊಡುತ್ತದೆ – ನೇರವಾಗಿ ಇಲ್ಲವೆ ಅಲ್ಪಸಲ್ಪಮಾರ್ಪಾಡಿನ ಮಾರುವೇಷದಲ್ಲಿ. ಹಲವರ ವರ್ಣನೆಗಳಲ್ಲಿ, ವಾಕ್ಯಗಳಲ್ಲಿ, ವಾಕ್ಯವೇಷ್ಟನಗಳಲ್ಲಿ, ಪದಗಳಲ್ಲಿ, ಪದಪುಂಜಗಳಲ್ಲಿ ಪ್ರಾಚೀನ ಕವಿಗಣದ ಪ್ರಭಾವ ಪ್ರಕಟವಾಗಿದೆ (ಹಂಪ ನಾಗರಾಜಯ್ಯ, ಜಯನೃಪಕಾವ್ಯಸಂಗ್ರಹ. ಪು. ೪೯) ಉದಾಹರಣೆಗೆ –

ವಸುದೇವನ ಹಿಂದಿನ ಜನ್ಮದ ನಂದಿಯ ವಿಕಾರರೂಪವನ್ನು ವರ್ಣಿಸುವಲ್ಲಿ (ನೇ.ಮಿ.ಜಿ. ಸಂ. ೭ – ೧೦೨ – ೧೦೫) ಜನ್ನನ ಯಶೋಧರಚರಿತೆಯ ಪದ್ಯದ ಸಾಲುಗಳು ನೆನಪಿಗೆ ಬರುತ್ತವೆ.

ವಸುದೇವ ಗಾಂಧರ್ವದತ್ತೆಯರು ನೋಡಿದ ಚಾಂಡಾಲಕನ್ಯೆಯ ವೇಷದ ನೀಲಾಂಜನೆಯ ನೃತ್ಯ (ನೇ.ಮಿ.ಜಿ.ಸಂ. ೧೨ – ೧೪ – ೧೮) ಚಾಮರಸನ ಪ್ರಭುಲಿಂಗಲೀಲೆಯ ಮಾಯಾಪ್ರಸಂಗವನ್ನು ನೆನಪಿಗೆ ತರುತ್ತದೆ.

ಪದ್ಮನಾಭ ದ್ರೌಪದಿಯಲ್ಲಿ ಮೋಹಗೊಂಡು ಅವಳನ್ನು ಬಿಲ್ಲಹೆದೆಯೇರಿಸಿರಲು ಎದ್ದ ಅರ್ಜುನನನ್ನು ಬ್ರಾಹ್ಮಣರೇ ವಿಡಂಬಿಸುವ ರೀತಿ (ನೇ.ಮಿ.ಜಿ.ಸಂ. ೨೩ – ೨೬೮ – ೨೭೦, ೨೭೫ – ೨೮೦) ಕುಮಾರವ್ಯಾಸನಲ್ಲಿಯಂತೆಯೇ ಇದೆ.

ನೇಮಿನಾಥನ ಬಾಹುವಿನ ಬಲ್ಲತನವನೀಕ್ಷಿಸಬೇಕೆಂದು ಆತನ ಕಿರುಬೆರಲ ಬಗ್ಗಿಸಲು ಮಡಿದ ಪ್ರಯತ್ನ (ನೇಮಿಜಿಸಂ – ೩೦ – ೬ – ೮) ಭರತೇಶವೈಭವವನ್ನು ನೆನಪಿಗೆ ತರುತ್ತದೆ.

ಹಾಗೆಯೇ ಶ್ರೀಪಾಲಚರಿತೆಯ ಎರಡನೆಯ ಸಂಧಿಯಲ್ಲಿ ಬರುವ ನಂದನವನ, ಅಲ್ಲಿಯ ಗಿಡಮರಬಳಿ, ಅವುಗಳ ಮಧ್ಯ ನಲಿದಾಡುವ ಲಲನೆಯರು ಪಂಪನ ವನದ ವರ್ಣನೆಯನ್ನು ನೆನಪಿಗೆ ತರುತ್ತಿದ್ದಾರೆ.

ಅಲ್ಲದೆ ಪಂಪ ರನ್ನ ಮೊದಲಾದವರ ಹಲವು ಕಾವ್ಯಭಾಗಗಳನ್ನು ಮಂಗರಸ ತನ್ನ ಕಾವ್ಯದಲ್ಲಿ ವಿಶೇಷವಾಗಿ ಸಂದರ್ಭೋಚಿತವಾಗಿ ಬಳಸಿಕೊಂಡಿದ್ದಾನೆ. ಉದಾಹರಣೆಗೆ –

ಧುರದೊಳಗವರು ನೂರ್ವರು ನಾವೈವರು |
ಪರಬಾಧೆಯಾರಿಗೆಸಗಲು |
ನಿರುತದಿ ನಾವು ನೂರೈವರದರಿನಿದ
ಪರಿಹರಿಪುದು ಮತ || ನೇಮಿಜಿನೇಶ ಸಂಗತಿ – ೨೪ – ೧೨೬

ಎಂದು ಹೇಳುವಲ್ಲಿ, “ಎನಗೆ ನೀವೀರ್ವರೆರಡು ತೋಳೆರಡು ಕಣ್ಗಳ್” (ನೇಮಿಜಿಸಂ. ೨೯ – ೧೬೯) ಎನ್ನುವಲ್ಲಿ, ಕುಂತಿ ಕರ್ಣನಿಗೆ “ಪ್ರೀತಿಯಿಂದೋಲೈಸಿಕೊಂಡಿರು ನಿನ್ನುಜಾತಕರ” ಎಂದಾಗ ಕರ್ಣ “ಜನನಿ ಬಿನ್ನಪ ಕೌರವೇಶನ ಬಿಡುವುದು ಕನಸುಮನಸಿನೊಳಗಿಲ್ಲ” ಎನ್ನುವಲ್ಲಿ (ನೇಮಿಜಿನೇಸ ಸಂಗತಿ, ೨೫ – ೧೮೧ – ೧೮೨) ಪಂಪನ ಮಾತಿನ ವರಸೆ ಕಂಡುಬರುತ್ತದೆ.

“ತನುಜರ ಕೊಲೆಗೊಂದುಗೊಳ್ಳನುಜಾತರಮುನಿಸಿಗೆರಡುಗೊಳ್ಳೆನುತ ಅನಿಲಲಸುತನ ತೊಡೆಮುಡುಹುಗಾಣಿಸಿಹೊಯ್ದನುವಾಗಿಯೂ ಕೌರವನು ಅರಗಿನಮನೆಯರಿಗಿದು ಕೃತಕದ ಜೂದಿನಿರವಿಗಿದೆನುತತಿಭರದಿ ಮರುತನಂದನನಾ ಕುರುಭೂಪನ ಪೇರುರ ಪೆಗಲೆಡೆಯೊದನಾಗ” (ನೇಮಿಜಿನೇಶ ಸಂಗತಿ ೩೦ – ೧೦೬ – ೧೦೭) ಎಂಬಲ್ಲಿ ರನ್ನನ, “ಬಳಿಕಾತನಲೋಚನಪುತ್ರಿಕೆಗಳ್ ಲಲನೆಯ ತಲೆನವಿರೆಂಬ ತಮಾಲದ ತೊಳಪಾರವೆಯೊಳ್ತೊಳಲಿ ಪಯೋಧರಪರ್ವತಮಂ ಪತ್ತಿ ಬಳಲಿ ಕರಂ ಬಾಸೆಯಬಟ್ಟೆಯೊ | ಳಿಳಿದು ಹೊಳೆವ ಹೊರ್ಕುಳತಿಳಿಗೊಳದೊಳಗೆಳಸಿ ಮುಳುಂಗಿವಿನೋದದಿ ಜಲನಾಡಿದವು ಕೆಲಂಬೊಳ್ತು” ಜಯನೃಪಕಾವ್ಯ ೫ – ೫೭) ಎಂಬಲ್ಲಿ ಮತ್ತು “ಮರುತಮಾರ್ಗದೊಳು ಗುಡಿಯ ಕಟ್ಟಿವಸ್ತ್ರಮನಿರದೆ ನಾರದ ನಟಿಸಿದನು” (ನೇಮಿಜಿಸಂ ೩೧ – ೭೮) ಎಂಬಲ್ಲಿ ಹರಿಹರನ ಪ್ರಭಾವವನ್ನು ಕಾಣುತ್ತವೆ. ಪ್ರಭಂಜನಚರಿತೆಯಲ್ಲಿಯ ಯಮುನಾದತ್ತ ಗಂಗಶ್ರೀ ಮತ್ತು ವಿಷ್ಣುದತ್ತರ ಕಥೆ ಜಾನಪದ ಆಟ ಸಂಗ್ಯಾಬಾಳ್ಯಾವನು ನೆನಪಿಗೆ ತರುತ್ತದೆ.

ಹಾಗೆಯೇ ಮಂಗರಸಕವಿ ತನ್ನ ತರುವಾಯದ ಹಲವು ಕವಿಗಳ ಮೇಲೂ ಪ್ರಭಾವ ಬೀರಿದ್ದಾನೆ. ಇವನನ್ನು ಮೂರು – ನಾಲ್ಕು ಜನ ಕನ್ನಡದ ಮುಕ್ತಕಂಠದಿಂದ ಹೊಗಳಿದ್ದಾರೆ. ಅವರಲ್ಲಿ ಬ್ರಹ್ಮಣಾಂಕಕವಿಯೂ ಒಬ್ಬ. ಇವನು ೩ನೆಯ ಮಂಗರಸನ ಮಾರ್ಗದರ್ಶನದಲ್ಲಿ ಜಿನಭಾರತವನ್ನು ಬರೆದು.

ಆಡಿಕೃತಿಗಾಧಾರ ಮಂಗರ
ಸಾದಕವಿ ನೀನದರ ಜಾಣ್ಮೆಸು
ಬೋಧೆಗೊಳಿಸೆನಗೊಲಿದು ನಿನ್ನಂತೆನಿಸುಯನ್ನುವನೂ
ಭೇದವಿಡದಾ ಮಾರ್ಗಕನುಸರಿ
ಯಾದವನೆ ಸರಿಯೆಂದು ಸಮ್ಮತಿ
ಗಾದರದಿ ನೀ ನಿಲುವುದೀಕರ್ನಾಟಭಾರತಕೇ

ಎಂದು ಹೊಗಳಿರುವಲ್ಲಿ ಮೂರನೆಯ ಮಂಗರಸನ ಹಿರಿಮೆ ಎದ್ದು ಕಾಣುತ್ತಿದೆ.

ಒಟ್ಟಾರೆ ಮಂಗರಸನ “ಕೃತಿಗಳಲ್ಲಿ ಬಯಸಿದಾಗ ಬರುವ ಸಂಸ್ಕೃತದ ಬಿಗಿ, ನೆನಪಿಸಿದಾಗ ಸುಳಿಯುವ ಕನ್ನಡದ ಸರಳತೆ, ಕಾವ್ಯದಲ್ಲಿ ನಿರಂತರವಾಗಿ ಕಾಣುವ ಸಂಸ್ಕೃತ – ಕನ್ನಡಗಳ ಹದವರಿತ ಜೋಡಣೆ ಇವು ಅವನ ಶೈಲಿಯ ಹೆಚ್ಚಳವನ್ನು, ಸೊಗಸನ್ನು ಕನ್ನಡಿಸುತ್ತವೆ. ಅಲ್ಲದೆ ಆದಷ್ಟು ಕನ್ನಡನುಡಿಯ ಸೊಗಡನ್ನೂ ದೇಸಿಯ ಚೆಲುವನ್ನೂ ತೆರೆತೆರೆಯಾಗಿ ತೋರಿಸಿ ಎಲ್ಲ ಕೃತಿಗಳಲ್ಲೂ ಸಮೃದ್ಧವಾಗಿ ಹರಸಿದ್ದಾನೆ. ಕನ್ನಡಿಗರಿಗೆ ಚಿರಪರಿಚಿತವಾದ ಅನೇಕ ಗಾದೆಗಳೂ, ನಾಣ್ಣುಡಿಗಳೂ ಕಾವ್ಯದ ನಡುವೆ ಹೇರಳವಾಗಿ ಬರುವುದರ ಮೂಲಕ ಓದುಗರಿಗೆ ಆತ್ಮೀಯತೆಯನ್ನುಂಟು ಮಾಡಿದ್ದಾನೆ. ಯುದ್ಧವನ್ನೂ ಪ್ರಕೃತಿ – ಪ್ರಾಣಿ – ಪಕ್ಷಿಗಳನ್ನೂ ತುಂಬ ಸಹಜ ಹಾಗೂ ಆತ್ಮೀಯವಾಗಿ ಬಣ್ಣಿಸುತ್ತಾನೆ. ಇವಕ್ಕೆ ಸಂಬಂಧಿಸಿದಂತೆ ಆತ ಕೊಡುವ ಚಿತ್ರ ತೀರ ಕಣ್ಣಿಗೆ ಕಟ್ಟುತ್ತವೆ. ಇವೆಲ್ಲವುಗಳಿಂದ ಕನ್ನಡಕವಿ – ಕಾವ್ಯಗಳ ಹಿರಿಯ ಪರಂಪರೆಯಲ್ಲಿ ಮಂಗರಸನಿಗೂ, ಆತನ ಕೃತಿಗಳಿಗೂ ಒಂದು ವಿಶಿಷ್ಟ ಸ್ಥಾನವಿದೆ.” ಎಂದು ಹಂಪ, ನಾಗರಾಜಯ್ಯ ಅವರು ಹೇಳುವ ಮಾತುಗಳು ಒಟ್ಟಾರೆ ಒಪ್ಪಬಹುದಾಗಿದೆ.

ಬಿ.ವ್ಹಿ. ಶಿರೂರ

 

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)