ನೇಮಿಜಿನೇಶ ಸಂಗತಿ:

೨೨ ನೆಯ ತೀರ್ಥಂಕರನಾದ ನೇಮಿನಾಥನ ಕಥೆಯನ್ನು ಕುರಿತು ಕನ್ನಡದಲ್ಲಿ ೨ನೆಯ ಗುಣವರ್ಮ (ಸು.೯೦೦) ನ ಹರಿವಂಶ, ಚಾವುಂಡರಾಯನ (೯೭೨)ನ ತ್ರಿಷಷ್ಟಿಶಲಾಕಾಪುರುಷ ಮಹಾಪುರಾಣ, ಕರ್ಣಪಾರ್ಯ (೧೧೪೦) ನ ನೇಮಿನಾಥಪುರಾಣ, ನೇಮಿಚಂದ್ರ (೧೧೭೦೦) ನ ಅರ್ಧನೇಮಿಪುರಾಣ, ಬಂಧುವರ್ಮನ (ಸು. ೧೨೦೦) ಹರಿವಂಶಪುರಾಣ, ಮಹಾಬಲ (೧೨೫೪) ನ ನೇಮಿನಾಥಪುರಾಣ, ಸಾಳ್ವ (ಸು. ೧೮೦೦) ನ ಭಾರತ, ಬ್ರಹ್ಮಣಾಂಕ (ಚಂದ್ರಸಾಗರವರ್ಣಿ, ಸು. ೧೮೦೦) ನ ಜಿನಭಾರತ, ರಾಯಣ್ಣ (ಅಭಿನವಮಂಗರಸ, ೧೮ನೆಯ ಶತಮಾನ)ನ ಮನ್ಮಥಮಣಿದರ್ಪಣ ಮೊದಲಾದ ಕೃತಿಗಳು ಬಂದಿವೆ. ಇವುಗಳಲ್ಲಿ ೩ನೆಯ ಮಂಗರಸನ ನೇಮಿಜಿನೇಶಸಂಗತಿಯೂ ಒಂದು.

ಇದು ಸಾಂಗತ್ಯಶೈಲಿಯ, ೩೫ ಸಂಧಿಗಳು, ಒಟ್ಟು ೩೧೩೮ ಪದ್ಯಗಳನ್ನೊಳಗೊಂಡ, ಹಿರಿಯ ಗಾತ್ರದ ಕೃತಿ. ಸಾಂಗತ್ಯಛಂದಸ್ಸಿನಲ್ಲಿ ರಚಿತವಾಗಿರುವ ಕನ್ನಡದ ಕಾವ್ಯಗಳಲ್ಲಿ ರತ್ನಾಕರವರ್ಣಿಯ ಭರತೇಶವೈಭವ, ನಂಜುಂಡಕವಿಯ ಕುಮಾರರಾಮನ ಸಾಂಗತ್ಯಗಳನ್ನು ಬಿಟ್ಟರೆ ಇದೇ ದೊಡ್ಡ ಕಾವ್ಯ. ಇಲ್ಲಿ ಹರಿವಂಶ – ಕುರುವಂಶಗಳ ಕಥೆ ಜೊತೆಜೊತೆಯಾಗಿಯೇ ಬರುವುದರಿಂದ ಇದನ್ನು “ಹರಿವಂಶಪುರಾಣ”ವೆಂದೂ ಕರೆದಿರುವರು. ಕೃಷ್ಣನಂತೆ ನೇಮಿನಾಥನೂ ಹರಿವಂಶದವನು. ಕೃಷ್ಣನ ದೊಡ್ಡಪ್ಪನ ಮಗನೇ ನೇಮಿನಾಥನು. ಆದ್ದರಿಂದಲೇ ಹರಿವಂಶದ ಕಥೆಯಲ್ಲಿ ನೇಮಿ – ಕೃಷ್ಣರ ಕಥೆ ಅನಿವಾರ್ಯವಾಗಿ ಕೂಡಿ ಬರುವುದು ಜೈನಮಹಾಭಾರತದ ವೈಶಿಷ್ಟ್ಯ. ನೇಮಿಜಿನೇಶಸಂಗತಿಯ ಕಥಾವಸ್ತು ಈ ರೀತಿ ಹರಡಿಕೊಂಡಿದೆ.

೧. ಹರಿವಂಶ – ಕುರುವಂಶದ ವಿವರ ೧ – ೭ನೆಯ ಸಂಧಿ
೨. ವಸುದೇವನ ವೃತ್ತಾಂತ ೮ – ೧೩ನೆಯ ಸಂಧಿ
೩. ಪಾಂಡವರ ವೃತ್ತಾಂತ ೨೩ – ೩೧ನೆಯ ಸಂಧಿ
೪. ನಾರಾಯಣನ ಕಥೆ ೧೪ – ೨೧ ಮತ್ತು ೩೩ ರಿಂದ ೩೫ನೆಯ ಸಂಧಿ
೫. ನೇಮಿನಾಥನ ಕಥೆ ೨೨ ಮತ್ತು ೩೨ನೆಯ ಸಂಧಿ, ೩೫ನೆಯ ಸಂಧಿಯ ಕೊನೆಯ ಭಾಗ.

ಕವಿ ಮಂಗರಸ ವ್ಯಾಸರ ಮಹಾಭಾರತದ ಕಥೆಯನ್ನೇ ಬಹಳಷ್ಟು ಅನುಸರಿಸಿದರೂ ಜೈನಧರ್ಮದ ಹಿನ್ನೆಲೆಯಲ್ಲಿ ಅಲ್ಲಲ್ಲಿ ಕೆಲವು ವ್ಯತ್ಯಾಸ ಮಾಡಿಕೊಂಡು ಈ ಕಾವ್ಯಕ್ಕೆ ಜೈನಧರ್ಮದ ದೀಕ್ಷೆಯನ್ನಿತ್ತಿದ್ದಾನೆ. ಈಗ ಈ ಕಾವ್ಯದಲ್ಲಿ ಮಡುಗಟ್ಟಿರುವ ಕಥಾಸಾರವನ್ನು ಈ ರೀತಿ ಶೇಖರಿಸಬಹುದು.

ಅಂಧಕವೃಷ್ಣಿಗೆ ಸಮುದ್ರವಿಜಯ, ವಸುದೇವ, ಕೊಂತಿ, ಮಾದ್ರಿ ಮೊದಲಾದ ಹನ್ನೆರಡು ಜನ ಮಕ್ಕಳು. ನರಪತಿವೃಷ್ಣಿಗೆ ಉಗ್ರಸೇನ, ದೇವಸೇನ, ಮಹಾಸೇನ, ಗಾಂಧಾರಿಯರೆಂಬ ಮಕ್ಕಳು. ಭೀಷ್ಮನು ಬ್ರಹ್ಮಚಾರಿಯಾಗಿ ನಿಂತು, ಕೌರವ ಪಾಂಡವರ ಪಾಲನೆ – ಪೋಷಣೆಯಲ್ಲಿ ತೊಡಗಿ, ಧೃತರಾಷ್ಟ್ರನಿಗೆ ಗಾಂಧಾರಿಯನ್ನೂ, ಪಾಂಡವನಿಗೆ – ಕೊಂತಿ – ಮಾದ್ರಿಯರನ್ನೂ ತಂದು ವಿವಾಹಮಾಡಿದನು. ಆ ಪೂರ್ವದಲ್ಲಿ ಪಾಂಡು – ಕೊಂತಿಯರ ಗಂಧರ್ವವಿವಾಹದಿಂದ ಕರ್ಣ ಜನಿಸಿದ್ದನು. ಅಪವಾದಕ್ಕೆ ಹೆದರಿ ಅವನನ್ನು ನದಿಯಲ್ಲಿ ಬಿಡಲಾಯಿತು. ಧೃತರಾಷ್ಟ್ರ – ಗಾಂಧಾರಿಯರಿಗೆ ದುರ್ಯೋಧನ ಮೊದಲಾದ ನೂರು ಜನ, ಪಾಂಡು – ಕೊಂತಿಯರಿಗೆ ಧರ್ಮರಾಜ, ಭೀಮ, ಅರ್ಜುನ; ಮಾದ್ರಿಯಲ್ಲಿ ನಕುಲ – ಸಹದೇವರು ಜನಿಸಿದರು. ಪಾಂಡವ – ಕೌರವರು ಪರಸ್ಪರ ಜಗಳವಾಡುತ್ತಲೆ ಇದ್ದರು.

ಸಮುದ್ರವಿಜಯ ಶೌರಿಪುರವನ್ನಾಳುತ್ತಿದ್ದಾಗ ಅವನ ತಮ್ಮ ವಸುದೇವ ಲಂಪಟನಾಗಿ ಜಯೆ – ವಿಜಯೆ ಮೊದಲಾದ ಏಳುನೂರಾತೊಂಬತ್ತೆಣ್ಪರು ಸ್ತ್ರೀಯರನ್ನು ವಿವಾಹವಾದನು. ರೋಹಿಣಿಯಲ್ಲಿ ಬಲಭದ್ರ ಜನಿಸಿದ. “ತನ್ನ ಗಂಡನ ತಂಗಿಯಾದ ದೇವಕಿಯಲ್ಲಿ ಎಂಥ ಮಗು ಜನಿಸುವನು?” ಎಂದು ಕಂಸನ ಹೆಂಡತಿ ಜೀವಂಜಸೆ ಮುನಿಗಳನ್ನು ಪೀಡಿಸಲು, “ನಿನ್ನ ಗಂಡನನ್ನೂ ತಂದೆಯನ್ನೂ ಕೊಲ್ಲುವ ಮಗನು ಹುಟ್ಟುವನು” ಎನ್ನುವರು. ದೇವಕಿಯಲ್ಲಿ ಹುಟ್ಟಿದ ಮಕ್ಕಳನ್ನು ಕೊಂದು ಕಂಸ, ಮುನಿಗಳು ಹೇಳಿದ ಮಾತು ಸುಳ್ಳಾಯಿತು ಎಂದು ಸಂತಸಬಿಟ್ಟನು. ಆದರೆ ವಸುದೇವನ ಮಗ ಕೃಷ್ಣ, ಸತತವಾಗಿ ಹೆಣ್ಣುಮಕ್ಕಳನ್ನಿತ್ತ ದೇವಿಗೆ ಅದೇ ಹುಟ್ಟಿದ ಹೆಣ್ಣುಕೂಸನ್ನು ಹಿಂದಿರುಗಿಸಲು ಬಂದ ನಂದನನಿಗೆ ದೊರೆತು, ಅವನ ಮನೆಯಲ್ಲಿ ಸುಖದಿಂದಿದ್ದನು. ಪೂತಿನಿ ಮೊದಲಾದ ರಾಕ್ಷಸರನ್ನು ಕೃಷ್ಣನು ಕೊಂದನು. ದ್ವಾರಾವತಿ ನಿರ್ಮಿಸಿ ಸತ್ಯಭಾಮೆ, ರುಕ್ಮಿಣಿ ಮೊದಲಾದವರಲ್ಲಿ ಸುಖವಾಗಿದ್ದನು. ಕಾಮದೇವನ ಜನನವಾಗಿ ಬೆಳೆದು ಅವನು ಕಾಂಚನಮಾಲೆಯನನು ವಿವಾಹವಾದನು. ಕೃಷ್ಣನ ದೊಡ್ಡಪ್ಪನಾದ ಸಮುದ್ರವಿಜಯ ಶಿವದೇವಿಯರ ಗರ್ಭದಲ್ಲಿ ನೇಮಿಶ್ವರನ ಜನನವಾಯಿತು. ಅವನು ಓರಗೆಯ ಮಕ್ಕಳೊಂದಿಗೆ ನಿರಾತಂಕವಾಗಿ ಬೆಳೆದನು.

ಭೀಷ್ಮರು, ಕೌರವ ಪಾಂಡವರಿಗೆ ವಿದ್ಯೆ ಕಲಿಸಲು ದ್ರೋಣಾಚಾರ್ಯರನ್ನು ನೇಮಿಸಿದರು. ಕೌರವ – ಪಾಂಡವರ ದ್ವೇಷ ಹೆಚ್ಚುತ್ತಲೆ ನಡೆಯಿತು. ಅರಗಿನಮನೆಯಲ್ಲಿ ಪಾಂಡವರನ್ನು ಕೊಲ್ಲಲು ಪ್ರಯತ್ನಿಸಲಾಯಿತು. ಅಲ್ಲಿಂದ ಪಾರಾಗಿ ಬಂದು ಧರ್ಮ – ಕುಸುಮಮಾಲೆಯನ್ನು, ಭೀಮ – ಹಿಡಂಬಿಯನ್ನು, ಅರ್ಜುನ ಸ್ವಯಂವರದಲ್ಲಿ ದ್ರೌಪದಿಯನ್ನು ವಿವಾಹವಾದರು. ಜೂಜಿನಲ್ಲಿ ಸೋತು ವನವಾಸಕ್ಕೆ ನಡೆದರು. ಕೌರವ – ದುಶ್ಯಾಸನರನ್ನು ಹಿಡಿದು ಕಟ್ಟಿದ ಇಂದ್ರರಥನಿಂದ ಅರ್ಜುನ ಅವರನ್ನು ಬಿಡಿಸಿಕೊಂಡು ಬಂದನು. ದ್ರೌಪದಿಯ ಸೌಂದರ್ಯಕ್ಕೆ ಮರುಳಾದ ಪದ್ಮರಥನು ಅವಳನ್ನು ಒಯ್ಯಲು ಅರ್ಜುನ ಅವಳನ್ನು ಬಿಡಿಸಿ ತಂದನು. ದ್ರೌಪದಿಯನ್ನು ದ್ರುಪದರಾಜನ ಬಳಿ ಬಿಟ್ಟು ವನವಾಸಕ್ಕೆ ಹೊರಟು, ವಿರಾಟನಗರಿಗೆ ಬಂದರು. ನಾಮಾಂತರದಿಂದ ವಿರಾಟನಗರಯಲ್ಲಿದ್ದು ಕೌರವನ ಗೋಗ್ರಹಣ ಪ್ರಸಂಗವನ್ನು ವಿಫಲಗೊಳಿಸಿದರು.

ಅಜ್ಞಾತವಾಸ ಮುಗಿಸಿ ಅನೇಕ ರಾಜಕನ್ಯೆಯರನ್ನು ವಿವಾಹವಾದರು. ಕೊಂತಿ ಕರ್ಣನನ್ನು ಸಂಧಿಸಿ, ಅನುಜರ ಮೇಲೆ ದಿವ್ಯಾಸ್ತ್ರ ಪ್ರಯೋಗಿಸದಂತೆ ವಚನ ಪಡೆದಳು.

ಒಂದು ದಿನ ಓರ್ವ ಹಡಗಿನ ವ್ಯಾಪಾರಿಗೆ ಕೃಷ್ಣ ಅನರ್ಘ್ಯರತ್ನಗಳನ್ನು ಕೊಡಲು, ಅವನು ಅವನ್ನೊಯ್ದು ಜರಾಸಂಧನಿಗೆ ತೋರಿಸಿದನು. ಅವನು ಅಚ್ಚರಿಪಟ್ಟು ದ್ವಾರಾವತಿಯಲ್ಲಿ ನೇಮಿನಾತ, ಸಮುದ್ರವಿಜಯ, ಕೃಷ್ಣ – ಬಲರಾಮರಿರುವುದನ್ನು ತಿಳಿದ ಏರಿಹೊರಟನು. ಅಷ್ಟರಲ್ಲಿ ಕೃಷ್ಣ – ಬಲರಾಮ – ಪಾಂಡವರು, ಕೃಷ್ಣನೆಂಬ ಸಜ್ಜನನನ್ನು ಕೌರವನ ಬಳಿ ಕಳುಹಿ, ಪಾಂಡವರ ರಾಜ್ಯವನ್ನು ಹಿಂದಿರುಗಿಸುವಂತೆ ಕೇಳಿದರು. ಅದಕ್ಕೆ ಕೌರವ ಒಪ್ಪದೆ ಜರಾಸಂಧನನ್ನು ಸೇರಿ – ಯುದ್ಧಕ್ಕೆ ತೊಡಗಿದನು. ಕೃಷ್ಣನು, ಶೂರನಾದ ಕೃಷ್ಣನೆಂಬ ಹೆಸರಿನ ಸಾರಥಿಯನ್ನು ಅರ್ಜುನನಿಗೆ ನೇಮಿಸಿದನು. ಅಭಿಮನ್ಯು, ಕರ್ಣರು ಹತರಾದರು. ಕೃಷ್ಣನ ಮೇಲೆ ಜರಾಸಂಧ ಚಕ್ರರತ್ನ ಪ್ರಯೋಗಿಸಲು ಅದು ಅವನ ಸುತ್ತು ಹಾಕಿ ಅವನ ವಶವಾಯಿತು. ಅದನ್ನೇ ಕೃಷ್ಣ ಪ್ರಯೋಗಿಸಿ ಜರಾಸಂಧನ ತಲೆ ಕತ್ತರಿಸಿದನು.

ನೇಮಿಶ್ವರನ ಬಲವನ್ನು ತಿಳಿಯಲು ಮುಂದಾದ ಕೃಷ್ಣ ಬಲರಾಮರು ಅವನ ಕೈಬೆರಳನ್ನೂ ಮಣಿಸಲಾಗಲಿಲ್ಲ. ಅವನು ಕೈಯೆತ್ತಲು ಕೃಷ್ಣ – ಬೆಂಡಿನ ಬೊಂಬೆಯಂತೆ ಜೋತಾಡಿದನು. ಕೃಷ್ಣನ ವಿನಂತಿಯ ಮೇರೆಗೆ ನೇಮಿನಾಥ ಜಲಕ್ರೀಡೆಗೆ ಹೋದನು. ಅವನ ಹಸಿಬಟ್ಟೆ ಒಗೆಯಲು ಕೃಷ್ಣ ಸತ್ಯಭಾಮೆಗೆ ಸೂಚಿಸಿದನು. ಸತ್ಯಭಾಮೆಗೆ ಅಭಿಮಾನ ಅಡ್ಡ ಬಂದು ಅದನ್ನು ಅವಳು ತಿರಸ್ಕರಿಸಲು, ರುಕ್ಮಿಣಿ ಅದನ್ನು ಒಗೆದು ಹಾಕಿದಳು. ಸತ್ಯಭಾಮೆಯ ಕೃತ್ಯದಿಂದ ನೇಮಿಶನು ಮನನೊಂದು ಸಿಟ್ಟನ್ನು ವ್ಯಕ್ತಗೊಳಿಸಿದನು. ಅವನ ಸಿಟ್ಟಿನ ಪ್ರಖರತೆಗೆ ಕೃಷ್ಣ ಬಲರಾಮರು ಅಚ್ಚರಿಬಟ್ಟು, “ನೇಮಿ ತಮ್ಮ ರಾಜ್ಯವನ್ನು ಸೆಳೆದುಕೊಂಡರೆ ತಡೆಯುವುದು ಅಸಾಧ್ಯ” ಎಂದು ಅವನಿಗೆ ವೈರಾಗ್ಯವುಂಟುಮಾಡುವ ಹಂಚಿಕೆ ಹೂಡಿದರು. ರಾಜಮತಿಯೊಂದಿಗೆ ನೇಮಿಶ್ವರನ ವಿವಾಹ ನಿಶ್ಚಯವಾಯಿತು. ನೇಮಿನಾಥನು ಆನೆಯ ಮೇಲೇರಿ ಬರುವಾಗ ದಾರಿಯಲ್ಲಿ ಆಕ್ರಂದನ ಮಾಡುತ್ತಿದ್ದ ಪ್ರಾಣಿಗಳು ಮದುವೆಯ ಆಹಾರಕ್ಕಾಗಿ ಎಂದು ಹೇಳಿ ವೈರಾಗ್ಯ ಉಂಟಾಗುವಂತೆ ಮಾಡಿ ಪರಿನಿಷ್ಕ್ರಮಣಕಲ್ಯಾಣ ಹೊಂದುವಂತೆ ಮಾಡಿದರು. ನೇಮಿಶ್ವರನು ಆರು ತಿಂಗಳು ತಪ್ಪಸ್ಸು ಮಾಡಿ ಕೇವಲಜ್ಞಾನ ಹೊಂದಿದನು. ಕೃಷ್ಣ ಬಲರಾಮರು ಸಮವಸರಣಮಂಟಪಕ್ಕೆ ಹೋಗಿ ಧರ್ಮವನ್ನು ಕೇಳಿದರು. ಕೃಷ್ಣನ ಹೆಂಡಂದಿರೆಲ್ಲ ತಮ್ಮ ಭವಾವಳಿ ಕೇಳಿ ತಿಳಿದುಕೊಂಡರು.

ನೇಮಿನಾಥನಲ್ಲಿ ಬಲರಾಮನು ದ್ವಾರಾವತಿಯ ಭವಿಷ್ಯದ ಬಗ್ಗೆ ಪ್ರಶ್ನಿಸಿದಾಗ “ಹೆಂಡದಿಂದಲೂ, ದೀಪಾಯನನು ಹಚ್ಚುವ ಬೆಂಕಿಯಿಂದಲೂ ದ್ವಾರವತಿಯು ಇನ್ನು ಹನ್ನೆರಡು ವರ್ಷಕ್ಕೆ ಸುಟ್ಟು ನಾಶವಾಗುವದು. ಜರತ್ಕುಮಾರನ ಬಾಣದಿಂದ ಕೃಷ್ಣನಿಗೆ ಸಾವು ಬರುವುದು. ಅವನು ಮೂರನೆಯ ನರಕದಲ್ಲಿ ಹುಟ್ಟಿ ಉತ್ಸರ್ಪಿಣಿಕಾಲದಲ್ಲಿ ಭವಿಷ್ಯತ್ಕಾಲದ ತೀರ್ಥಂಕರನಾಗುವನು. ಕೃಷ್ಣನ ಮರಣದಿಂದ ನಿನಗೆ ವೈರಾಗ್ಯವುಂಟಾಗಿ ಸತ್ತು ಐದನೆಯ ಸ್ವರ್ಗ ಹೊಂದುವೆ. ಕೃಷ್ಣನು ತೀರ್ಥಂಕರನಾಗಿ ಹೋದಮೇಲೆ ನಿನಗೆ ತೀರ್ಥಂಕರತ್ವ ಪ್ರಾಪ್ತವಾಗುವುದು” ಎಂದನು. ಹಾಗೆಯೇ ನಡೆಯಲು ಅಭಿಮನ್ಯು – ಉತ್ತರೆಯರ ಮಗ ಪರೋಕ್ಷತ ನೇಮಿಶ್ವರನ ಸಮವಸರಣಕ್ಕೆ ಬಂದು, ಉಳಿದವರೂ ತಪಗೈದು ಸದ್ಗತಿ ಹೊಂದಿದರು. ಸಮವಸರಣ ವಿಸರ್ಜಿಸಿ ನೇಮಿನಾಥರು ಊರ್ಜಂತಗಿರಿಯಲ್ಲಿ ಆಷಾಢಶುದ್ಧ ಸಪ್ತಮಿಯಂದು ಮೋಕ್ಷ ಹೊಂದಿದರು.

ನೇಮಿಜಿನೇಶಸಂಗತಿಯಲ್ಲಿ ಕವಿ ಮಾಡಿಕೊಂಡಿರುವ ಮಾರ್ಪಾಡುಗಳು :

೧. ಧರ್ಮರಾಯನಿಗೆ ಕುಸುಮಮಾಲಾ ಎಂಬ ಹೆಂಡತಿ. ೨. ಭೀಮನಿಗೆ ಸುಕೇಶಿ (ಹಿಡಂಬೆ)ಯೆಂಬ ಮಡದಿ. ೩. ಎಲ್ಲ ಜೈನಭಾರತಗಳಂತೆ ಇಲ್ಲಿಯೂ ದ್ರೌಪದಿ ಅರ್ಜುನನಿಗೊಬ್ಬನಿಗೇ ಮಡದಿ. ೪. ವಿರಾಟನ ಗೋವುಗಳನ್ನು ಹಿಡಿಯುವವರು ಕೌರವರಲ್ಲ, ಕೌರವ ತ್ರಗರ್ತರ ಸೇನೆ ೫. ಭಿಷ್ಮ, ಬೋಧಕರ ಉಪದೇಶ ಕೇಳಿ ವಿರಕ್ತನಾಗಿ ಶಸ್ತ್ರಸನ್ಯಾಸಗೈದು ಮಡಿದು ದೇವನಾಗುವನು. ೬. ದುರ್ಯೋಧನ ಚಕ್ರವರ್ತಿಯಲ್ಲ, ಒಬ್ಬ ಸಾಮಂತ ೭. ಜರಾಸಂಧ ಒಬ್ಬ ದೊಡ್ಡ ಚಕ್ರವರ್ತಿ ೮. ಕರ್ಣನಿಗೆ ರಣರಂಗದಲ್ಲಿ ಸಾವಿಲ್ಲ. ಆತ ಸುದರ್ಶನವನಕ್ಕೆ ಹೋಗಿ ಅಲ್ಲಿದ್ದ ದಮವರರೆಂಬಯತಿಗಳಿಂದ ದೀಕ್ಷೆ ಪಡೆದು ಮಡಿದು ಸ್ವರ್ಗದಲ್ಲಿ ದೇವನಾಗುವನು. ೯. ಕೊಂತಿ ಒಬ್ಬ ಮುನಿಯಿಂದ ಕರ್ಣ ತನ್ನ ಮಗನೆಂದು ತಿಳಿಯುವಳು. ೧೦. ಜ್ವಾಲಾಮಾಲಿನೀದೇವಿ ಇತ್ತಿದ್ದ ಅಗ್ನಿವಸ್ತ್ರದಿಂದ ಪರೀಕ್ಷಿಸಿ ಕೊಂತಿ ತನ್ನ ತಾಯಿಯೆಂದು ಕರ್ಣ ತಿಳಿಯುವನು. ೧೧. ಕರ್ಣನು ಕೊಂತಿ ಮತ್ತು ಪಾಂಡುಕುಮಾರರ ಗಾಂಧರ್ವವಿವಾಹದಿಂದ ಹುಟ್ಟಿದವನೇ ಹೊರತು ಮಂತ್ರಪಠನದಿಂದಲ್ಲ ೧೨. ಕೊಂತಿ ಮಂದಾಸಿನಲ್ಲಿ ಶಿಶು (ಕರ್ಣ)ವನ್ನು ಇಟ್ಟು ತೇಲಿಬಿಟ್ಟಾಗ ಅದು ಅಂಗದೇಶದ ಅಂಬಿಗನಿಗೆ ಸಿಕ್ಕಿ ಅವನು ಅದನ್ನು ಸಾಕುತ್ತಾನೆ. ಮುಂದೆ ಆ ದೇಶದ ದೊರೆಯಾದ ಸೂರ್ಯರಾಜನಿಗೆ ಸುದ್ದಿತಿಳಿದು ತನಗೆ ಮಕ್ಕಳಿಲ್ಲದಿರಲು ಆ ಕರ್ಣನನ್ನೇ ಸಾಕಿ ಬೆಳೆಸುತ್ತಾನೆ. ಸೂರ್ಯರಾಜನ ಹೆಂಡತಿಯ ಹೆಸರು ರಾಧೆ. ೧೩. ಸೂರ್ಯರಾಜ ಸತ್ತಮೇಲೆ ಕರ್ಣ ಅಂಗದೇಶಕ್ಕೆ ದೊರೆಯಾಗುತ್ತಾನೆ. ಅನಂತರ ಅವನು ಕುರುಪಾಂಡವರ ಕೀರ್ತಿ ಕೇಳಿ ಹಸ್ತಿನಾಪುರಕ್ಕೆ ಬರುವನು. ಅಲ್ಲಿ ಸುಯೋಧನ ರಾಧೇಯರ ಸ್ನೇಹ ಅನ್ಯಾದೃಶವಾಗಿ ಅರಳುವುದು. ೧೪. ಪಾಂಡವರ ಪರ ಸಂಧಾನದೌತ್ಯ ಹೊತ್ತು ಹಸ್ತಿನಾಪುರಕ್ಕೆ ಬಂದವನು ಶ್ರೀಕೃಷ್ಣನಲ್ಲ, ಕೃಷ್ಣನೆಂಬ ಹೆಸರಿನ ಒಬ್ಬ ಪರಾಕ್ರಮಿ; ಮುಂದೆ ಅರ್ಜುನನ ಸಾರಥಿಯಾದವನು ಇವನೇ. ಇವಿಷ್ಟು ಇಲ್ಲಿ ಎದ್ದುಕಾಣುವ ಕೆಲವು ಪ್ರಮುಖ ವ್ಯತ್ಯಾಸಗಳು.

ಇವಲ್ಲದೆ ಇತರ ಕೆಲವು ವ್ಯತ್ಯಾಸಗಳೂ ಇಂತಿವೆ. ಕೃಷ್ಣನು ಪಾಂಡವರಿಗೆ ಆತ್ಮೀಯ ಮಾತ್ರನಲ್ಲದೆ ಬಂಧುವೂ ಆಗಿದ್ದಾನೆ. ಅರ್ಜುನನಿಗೆ ತಂಗಿಯನ್ನೂ, ಅಭಿಮನ್ಯುವಿಗೆ ಮಗಳನ್ನೂ ಕೊಟ್ಟು ವಿವಾಹ ನಡೆಸಿದ್ದಾನೆ. ದ್ರೌಪದೀ ವಸ್ತ್ರಾಪಹಾರ ಸನ್ನಿವೇಶ್ನ್ನು ಚಮತ್ಕಾರವಾಗಿ ಕವಿಯು ತಪ್ಪಸಿಬಿಟ್ಟಿದ್ದಾನೆ. ಧರ್ಮರಾಯನು ಪಗಡೆಯ ಆಟಕ್ಕೆ ಪಣವಾಗಿ ದ್ರೌಪದಿಯನ್ನು ಒಡ್ಡುವುದೇ ಇಲ್ಲ. ಕೊಂತಿ – ದ್ರೌಪದಿಯರು ವನವಾಸಕ್ಕೆ ಪಾಂಡವರ ಜೊತೆಯಲ್ಲಿ ಕರೆದುಕೊಂಡು ಹೋಗುವರು. ಈ ಕಾವ್ಯದ ಇಪ್ಪತ್ತೈದನೆಯ ಸಂಧಿಯಲ್ಲಿ ಬರುವ ಒಂದು ಪ್ರಸಂಗ, ಮತ್ತೊಂದು ಸೀತಾಪಹರಣದ ಕಥೆಯ ಪುನರಾವೃತ್ತಿಯಂತೆ ಇದೆ. ಬಹಳ ಸ್ವಾರಸ್ಯವಾದ, ಮೂಲಭಾರತ ಕಥೆಗಳಿಗಿಂತ ಭಿನ್ನವಾದ ಅಂಶವೆಂದರೆ ದ್ರೌಪದಿಯ ಪಾಂಡವರ ಅಜ್ಞಾತವಾಸಕಾಲದಲ್ಲಿ ಅವರ ಜೊತೆಯಲ್ಲಿಯೇ ಇರದೆ ತನ್ನ ತೌರುಮನೆಯಲ್ಲಿ (ಪಾಂಡವರ ಅಪೇಕ್ಷೆಯಂತೆ) ಇರುವುದು. ಹೀಗಾಗಿ ವ್ಯಾಸಭಾರತದಲ್ಲಿ ಬರುವ ಕೀಚಕ – ಸೈರಂಧ್ರಿ ಪ್ರಕರಣದ ಹಗರಣ ತಪ್ಪಿದೆ. ಕರ್ಣನ ಪಾತ್ರವಂತೂ ಆಕರ್ಷಕವಾಗಿ ಬಂದಿದೆ.

ಈ ಕಾವ್ಯದ ಕೃಷ್ಣನಿಗೆ ಮೂವರು ಮುಖ್ಯ ಮಡದಿಯರು : ರುಕ್ಮಿಣಿ, ಸತ್ಯಭಾಮೆ ಜಂಬಾವತಿ, ಜಂಬಾವತಿಯಲ್ಲಿ ಹುಟ್ಟಿದವನು ಶಂಭುಕುಮಾರ, ಸತ್ಯಭಾಮೆಯ ಮಗ ಭಾನುಕುಮಾರ, ರುಕ್ಮಿಣಿಯ ಕುವರ ಪ್ರದ್ಯುಮ್ನಕುಮಾರ. ಮನ್ಮಥ, ಸ್ಮರ ಎಂಬ ಹೆಸರುಗಳಿಂದ ಮೆರೆಯುವ ಈ ಪ್ರದ್ಯುಮ್ನನ ಶೌರ್ಯ, ಪ್ರತಾಪ ಮತ್ತು ಪವಾಡಗಳು ಎರಡು ಸಂಧಿಗಳಲ್ಲಿ ಬಂದಿವೆ. ಕೃಷ್ಣನು ವೀರನಂತೆ ಜರಾಸಂಧ, ಶಿಶುಪಾಲರನ್ನು ಯುದ್ಧದಲ್ಲಿ ಕೊಲ್ಲುತ್ತಾನೆ. ಅವನು ನಡೆಸುವ ಪವಾಡಗಲೂ, ಅವನ ಮಹಿಮೆ ಪುಣ್ಯಗಳ ಪ್ರಭಾವವೂ ಕಾವ್ಯದಲ್ಲಿ ಬಹುವಾಗಿ ಪ್ರಕಾಶಗೊಂಡಿವೆ. “ನೇಮಿಜನೇಶಸಂಗತಿಯಲ್ಲಿ ಎಲ್ಲ ಮುಖ್ಯಪಾತ್ರಗಳ ಜನ್ಮಜನ್ಮಾಂತರಗಳ ಭವಾವಳಿಯೂ ಬರುವುದುಂಟು. ಹೀಗಾಗಿ ಕಾವ್ಯದ ಕಥೆಯ ಮೂಲಪ್ರವಾಹ ಮುಂದುವರಿದಂತೆಲ್ಲಾ ನೂರಾರು ಸಣ್ಣ, ದೊಡ್ಡ ಕಥೆಗಳ ಉಪನದಿಗಳು ಸೇರಿಕೊಂಡು ಕಾವ್ಯಪ್ರವಾಹ ನೂರ್ಮಡಿ ದೊಡ್ಡದಾಯಿತೇನೋ ನಿಜ, ಆದರೆ ಓದುಗನಿಗೆ ಒಮ್ಮೊಮ್ಮೆ ಮೂಲ ಪ್ರವಾಹದ ಹೊಲಬು ತಪ್ಪುವ ಸಂಭವವೂ ಉಂಟು” (ಹಂಪ ನಾಗರಾಜಯ್ಯ, ಜಯನೃಪಕಾವ್ಯ ಸಂಗ್ರಹ, ಪೀಠಿಕೆ, ಭಿಮ ದುರ್ಯೋಧನರ ಯುದ್ಧದ ಸನ್ನಿವೇಶ, ಕರ್ಣಾರ್ಜುನರ ಯುದ್ಧ ಪ್ರಸಂಗ, ದುರ್ಯೋಧನನನ್ನು ವೈಶಂಪಾಯನಸರೋವರದಿಂದ ಹೊರಹೊರಡಿಸುವ ಪ್ರಸಂಗ ಮೊದಲಾದವು ಬಹುನೀರಸವಾಗಿ ಮುಕ್ತಾಯಗೊಂಡು ಇಡೀಕಾವ್ಯ ಕಾವ್ಯಮನೀಯತೆಯಿಂದ ವಂಚನೆಗೊಂಡಿದೆಯೆಂದೇ ಹೇಳಬಹುದಾಗಿದೆ.

ಸೂಪಶಾಸ್ತ್ರ :

“ಸೂಪ” ಎಂದರೆ ವ್ಯಂಜನ ಅಥವಾ ಮೇಲೋಗರದ ಒಂದು ತೋವೆ – ತೋವ್ವೆ, ಆದರೆ ಕವಿ ಇದನ್ನು “ಪಾಕ” ಎಂಬರ್ಥದಲ್ಲಿ ಪ್ರಯೋಗಿಸಿ ಈ “ಪಾಕಶಾಸ್ತ್ರ”ವನ್ನು ರಚಿಸಿದ್ದಾನೆ. ಆರು ಅಧ್ಯಾಯ ೩.೫೮ ವಾರ್ಧಕಷಟ್ಪದಿ ಹೊಂದಿರುವ ಈ ಕೃತಿಯಲ್ಲಿ ಪ್ರತಿ ಅಧ್ಯಾಯದ ಕೊನೆಯಲ್ಲಿರುವ, ಅಧ್ಯಾಯಶಸ್ತ್ರ್ಯವನ್ನು ತಿಳಿಸುವ ಪದ್ಯ ಕೊನೆಯ ಅಧ್ಯಾಯದ ಅಂತ್ಯದಲ್ಲಿ ಇಲ್ಲ. ಅಲ್ಲದೆ ಆ ಅಧ್ಯಾಯಾರಂಭದ ಸೂಚನಾಪದ್ಯದಲ್ಲಿ ಸೂಚಿಸಿರುವ ಹಾಗಲ ಮೂಲಂಗಿ ಹಾಲೊಡೆ ಮೊಸರೊಡೆ ಪತ್ರದೊಡೆ ಹಲವು ವಿಧದ ಬಿಳಿಗೋದಿಹಿಟ್ಟಿನ ಹೋಳಿಗೆ ಇವುಗಳ ಅಡಿಗೆ ವಿಚಾರವೂ ಆ ಅಧ್ಯಾಯದಲ್ಲಿ ಇಲ್ಲ. ಆದಕಾರಣ ಈ ಗ್ರಂಥ ಅರ್ಧಕ್ಕೆ ನಿಂತಿರುವುದು ಸ್ಪಷ್ಟವಾಗುತ್ತಿದೆ.

ಪ್ರಾರಂಭದಲ್ಲಿ ನಳ ಭೀಮ ಗೌರೀ ಇವರನ್ನು ಸ್ಮರಿಸಿ ಈ ಮೂವರ ಪಾಕಕ್ರಮವನ್ನನುಸರಿಸಿ “ಅತಿಖ್ಯಾತಿಯಂ ಪಡೆದ ಸಂಸ್ಕೃತ ಸೂಪಶಾಸ್ರ್ರದೊಳ್ ಪ್ರೀತಿಯಿಂದರಿವನಿತ ತೆಗೆದು ಕನ್ನಡದಿ ವಾರ್ಧಕಮೆಂಬ ಷಟ್ಪದದೊಳು ಜಾತಿಪ್ರಮದೆಯರರಿದನುಗೆಯ್ವಮಾಳ್ಕೆಯೊಳು ಚಾತುರ್ಯವಿದರು ನೆರೆಲಾಲಿಸುವಮಾಳ್ಕೆಯೊಳಗೋತುಪೇಳ್ದೆಂ” (ಪೀಠಿಕೆ – ೪) ಎಂದಿದ್ದಾನೆ. ವಿಷಯಭೋಗೋಪ ಭೋಗಗಳಲ್ಲಿ ನಾಲಗೆಯು ತೃಪ್ತಿಪಡೆದರೆ ಇಹಪರಗಳೆರಡರಲ್ಲಿಯೂ ಸೌಖ್ಯವುಂಟಾಗುತ್ತದೆ. ಅದರಿಂದ ಭೋಜ್ಯವಸ್ತುಗಳನ್ನು ಚೆನ್ನಾಗಿ ಪಾಕಮಾಡುವ ಶಾಸ್ತ್ರವನ್ನು ಮನಸಿಟ್ಟು ಹೇಳುತ್ತೇನೆ ಎಂದಿದ್ದಾನೆ (ಪೀಠಿಕೆ – ೫). ಮುಂದುವರೆದು “ನೂತನ ಕವೀಶ್ವರರ ವಿಕಾಸಿತಾನನಘಟಗಳಲ್ಲಿ ನವರಸಗಳನ್ನು ಇಟ್ಟು, ಪರಿಣತೆ ಪ್ರೇಕ್ಷೆ ಮೊದಲಾದ ವಿವಿಧ ಪರಿಕರಗಳನ್ನು ಅದರೊಡನೆ ಕೂಡಿಸಿ, ಅವರ ನಾಲಗೆ ಎಂಬ ಸೌಟನ್ನು ಹಿಡಿದು ಚೆನ್ನಾಗಿ ಪಾಕಮಾಡಿ, ರಸಿಕ ಜನವೃಂದದ ಕಿವಿಗೆ ತುಂಬುವ ಭಾರತೀದೇವಿಯನ್ನು ನೆನೆದು ರುಚಿಕರವಾದ ಮಧುರ ಆಮ್ಲ ಕಟುಕ ತಿಕ್ತಕಷಾಯ ಲವಣ ಈ ಆರು ವಿಧದ ರಸಪಾಕಭೇದವನ್ನು ಹೇಳುತ್ತೇನೆ” (ಪೀಠಿಕೆ – ೨) ಎಂದಿದ್ದಾನೆ. ಈ ಕಾವ್ಯದ ಸೊಗಸುಗಾರಿಕೆ ಕುರಿತು

“ರಸದಾಳಿಯಂತೆ ರಮಣಿಯ ಚೆಂದುಟಿಯಂತೆ
ಪೊಸಜೇನಕೊಡದಂತೆ ಪೊಣ್ಮುವೆಳಜವ್ವನೆಯ
ರೊಸದೀವ ತಾಂಬೂಲದಂತೆ ಕಾದಿಳಿಪಿಯಾರಿದ ಬಟ್ಟವಾಲಿನಂತೆ
ಅಸಿಯೊಳೊಡನಾಟದಂತರಮಾವಿನಿನಿವಣ್ಣ
ರಸದಂತೆ ಅಮೃತದಂತತಿ ರುಚಿಯ ಪಡೆದುದತಿ
ರಸಿಕನತಿಪುಣ ಮಂಗರಸನುಸರಿದ ಸೂಪಶಾಸ್ತ್ರದ ಕವಿತೆಯ ಮಾತು” || ೧ – ೨

ಎಂದು ಮುಂತಾಗಿ ಬಣ್ಣಿಸಿದ್ದಾನೆ (ಪೀಠಿಕೆ – ೭, ೮). ೨ನೆಯ ಅಧ್ಯಾಯದಲ್ಲಿ ಪಾನಕಗಳ, ಮೂರನೆಯ ಅಧ್ಯಾಯದಲ್ಲಿ ಓಗರಗಳ, ಮುಂದಿನ ಮೂರು ಅಧ್ಯಾಯಗಳಲ್ಲಿ ಶಾಕಪಾಕಗಳ ವಿವರವಿದೆ. ಕವಿ ಅಲ್ಲಲ್ಲಿ ಬಳಸಿರುವ ಪಾರ್ವತಿ, ಕನ್ನಡಿಗರು, ಆರ್ಯರು, ತಿಗಳಾರು ಎಂಬ ಪದಗಳನ್ನು ಗಮನಿಸಿದರೆ, ಇವನು ಗೌರೀಪಾಕವನ್ನಲ್ಲದೆ ತಮಿಳು, ತುಳುವ, ಕನ್ನಡ, ಮರಾಠಿ ಜನಗಳಲ್ಲಿ ಬಳಕೆಯಲ್ಲಿರುವ ಅಡಿಗೆಯನ್ನೂ ಪರಿಚಯ ಮಾಡಿಕೊಂಡಿರಬಹುದು ಎನ್ನಿಸುತ್ತದೆ. ಈತನ ಪಾಕಪರಿಣತಿಗೆ ಉದಾಹರಣೆಯಾಗಿ ಶಾಕಪಾಕಾಧ್ಯಾಯದಲ್ಲಿ ಬೇರೆಬೇರೆ ರೀತಿಯಲ್ಲಿ ಬದನೆಕಾಯಿಯನ್ನು ತಯಾರಿಸುವ ವಿಧಗಳನ್ನು ಸುಮಾರು ೩೦ ಪದ್ಯಗಳಲ್ಲಿ ವಿವರಿಸಿದ್ದನ್ನು ನೋಡಬಹುದಾಗಿದೆ. ಅವುಗಳ ವಿವರ ಹೀಗಿದೆ : ದುಸ್ಯಾಯಬಂಗಿ, ತುಳುವ ಬದನೆಕಾಯಿ, ದಧಿಸಾರಬದನೆಕಾಯಿ, ದುಸ್ಸಾಯಬಂಗಿ – ೬, ತುಳುವಬದನೆ – ೭, ದಧಿಸಾರಬದನೆಕಾಯಿ – ೮, ಭಿನ್ನರುಚಿವೃಂತಾಕ – ೯, ನೆಲ್ಲಿಬದನೆಕಾಯಿ – ೧೦, ಬದನೆಹುಳಿಗಾಯಿ – ೧೧, ತುಂಬುಬದನೆಕಾಯಿ – ೧೨, ಎಣ್ಣೆಬದನೆಯಾಕಿ – ೧೩, ಮಧುರವೃಂತಾರ – ೧೪, ಪುಳಿಚ್ಚತಬದನೆಕಾಯಿ – ೧೫, ಶಾಕವಂಗಿ – ೧೬, ಭುಕ್ತವೃಂತಾಕ – ೧೭, ದೃಗ್ಧವೃಂತಾಕ – ೧೮, ಹೂರಣದ ವೃಂತಾಕ – ೧೯, ಪೂರಣಪಾಕ ವೃಂತಾಕ – ೨೦, ಹೂರಣಬದನೆಕಾಯಿ – ೨೧, ಪೂಡೆ – ೨೩, ಗೌರಬದನೆಕಾಯಿ – ೨೪, ಬಟ್ಟತ್ರಿಕಬದನೆಕಾಯಿ – ೨೫, ಸಾಸುವೆಬದನೆಕಾಯಿ – ೨೭, ಪಕ್ವಫಲವೃಂತಾಕ – ೩೦ ಮೊದಲಾದವು. ಆದರೆ ಇವನ್ನು ಎಷ್ಟರಮಟ್ಟಿಗೆ ನಿತ್ಯಜೀವನದಲ್ಲಿ ಮಾಡಿ ಉಣ್ಣಬಹುದು ಎಂಬುದೇ ಪ್ರಶ್ನೆ. ಈ ಅಧ್ಯಾಯದ ಕೊನೆಯಲ್ಲಿ “ಈ ಕೃತಿಯನ್ನು ಹರ್ಷದಿಂದ ಲಾಲಿಸಿ ಕೇಳಿದೆನೆಂದ ಹೇಳಿದೆನೆಂದ ಸುದತಿಯರ ಕಿವಿಗೆ ಹೊಸಮಾಣಿಕ್ಯದ ತಾಟಂಕ, ಈ ಪಾಕಕ್ರಮವನ್ನು ಕಲಿಯುತ್ತೇನೆಂದು ಈ ಕೃತಿಯನ್ನು ಓದುವ ಅಬಲೆಯರ ಬಣ್ಣವಾಯ್ದೆರೆಗೆ ಅಮೃತಪಿಂಡ, ಇದರಂತೆ ಪಾಕ ಮಾಡುತ್ತೇನೆಂದು ಉದ್ಯೋಗಿಸುವ ಚದುರೆಯರ ಕೈಗೆ ನವರತ್ನ ಮುದ್ರಿಕೆ” ಎಂದು ಬಣ್ಣಿಸಿದ್ದಾನೆ. ಇಲ್ಲಿಯ ಪ್ರತಿ ಪದ್ಯಗಳು ಸರಳವಾಗಿ ಸ್ವಾರಸ್ಯಪೂರ್ಣವಾಗಿ ನಿರೂಪಿತವಾಗಿರುವುದು ಮಂಗರಸನ ಶೈಲಿಯ ವಿಶೇಶತೆ ಎಂದು ಹೇಳಬಹುದು.

ವಿಮರ್ಶೆ :

ಒಟ್ಟಾರೆ ಈ ಆರೂ ಕೃತಿಗಳು ಆರು ಸಂಸ್ಕೃತ ಗ್ರಂಥಗಳನ್ನು ಆಧರಿಸಿ ರಚನೆಗೊಂಡಿವೆ. ಆದರೆ ಇವು ಅನುವಾದಗಳಲ್ಲ, ಸಂಸ್ಕೃತ ಮೂಲದಿಂದ ವಸ್ತುವನ್ನು ತೆಗೆದುಕೊಂಡು ಕನ್ನಡದಲ್ಲಿ ಸ್ವತಂತ್ರವಾಗಿ ರಚಿತವಾದವು ಎಂಬುದನ್ನು ಭಾಷೆ, ಶೈಲಿ ಮೊದಲಾದವುಗಳ ಹಿನ್ನೆಲೆಯಲ್ಲಿ ಒಪ್ಪಬಹುದಾಗಿದೆ.

“ಹದಮೀರಿದ ಶೃಂಗಾರದ ಆದಿಕ್ಯ ಮತ್ತು ಅತಿಯಾದ ಆಡಂಬರದ ಋತುವರ್ಣನೆ ಆತನು ಮಹಾಕವಿ ಪಟ್ಟಗಿಟ್ಟಿಸದಂತೆ ಮಾಡಿದ ದೋಷಗಳು” ಎಂದಿದ್ದಾರೆ ಡಾ. ಹಂಪ ನಾಗರಾಜಯ್ಯ ಅವರು (ಜ.ನೃ.ಕಾವ್ಯ ಸಂಗ್ರಹ, ಪೀಠಿಕೆ, ಪು.೫೦). ಆದರೆ ಇತರ ವರ್ಣನೆಗಳಲ್ಲಿ ಮಂಗರಸನ ತನ್ನ ಪ್ರತಿಭೆಯನ್ನು ಮರೆದಿದ್ದಾನೆ. ಪ್ರಸಂಗ ಯಾವುದೇ ಇದ್ದರೂ ಸರಿ, ಅದರ ವಿಸ್ತೃತವರ್ಣನೆ ಅವನನಿಗೆ ಬೇಕು. ಅವನ ದೃಷ್ಟಿಯಲ್ಲಿ ವೇಳೆ ಹೇಳುವ ಘಳಿಗೆವಟ್ಟಲು, ಕೇವಲ ಘಳಿಗೆವಟ್ಟಲಲ್ಲ. ಅದು ‘ಮಿಸುನಿಯ ಪಾತ್ರೆಯೆನಿಪ್ಪ ಗುಂಡಿಗೆರೆಯೊಳು ಕುಸುಮಾಸ್ತ್ರನೇರಲೆಂದಿಟ್ಟ ಹೊಸಹರಿ ಗೋಲು’ (ಶ್ರೀಪಾಲ ಚರಿತೆ ೧೦ – ೧೫). ಹೀಗೆಯೇ ಇದರ ವರ್ಣನೆ ೨ – ೩ ಪದ್ಯದಲ್ಲಿ ಸಾಗುತ್ತಿದೆ. ಹಾಗೆಯೇ ಕೆನ್ನೆಯಲ್ಲಿ ಮೂಡಿದ ನೆರೆ ‘ಬೆಳೆದ ಬಲುಜವ್ವನನೆಂಬ ಗರ್ವದ ಗುಂಡ ಹೊಳಚಲೆನುತ ಮೃತ್ಯು ಪಿಡಿದ ಕುಲಿಶದುಳಿಯ ಮೊನೆ’ (೧೪ – ೨೬). ಹೀಗೆಯೇ ಮೂರು ನಾಲ್ಕು ಪದ್ಯಗಳು ಕೆನ್ನೆಯ ನೆರೆಯನ್ನು ಬಣ್ಣಿಸುತ್ತಿವೆ (೧೪ – ೨೭, ೨೮, ೨೯, ೩೦, ೩೧).

ಸ್ತ್ರೀಯರ ವರ್ಣನೆಯಲ್ಲಂತೂ ಸರಿಯೇ. ಇಲ್ಲಿ, ಎಲ್ಲ ಸ್ತ್ರೀಯರು ಕಳಶ ಮೊಲೆ, ಕನ್ನಡಿ ಮೊಗದವರು. ಶ್ರೀಪಾಲಚರಿತೆಯ ಇಡೀ ಒಂದು ಸಂಧಿ (೯ನೆಯ ಸಂಧಿ) ಸ್ತ್ರೀವರ್ಣನೆಗೆ ಮೀಸಲಾಗಿದೆ. ಆದರೆ ಅಪರೂಪಕ್ಕೆಂಬಂತೆ ಆ ವರ್ಣನೆಯಲ್ಲಿ ಹಲವು ಮಿಂಚುಗಳನ್ನು ಕಾಣುತ್ತೇವೆ. ಉದಾಹರಣೆಗೆ ನೇಮಿಜಿನೇಶಸಂಗತಿಯಲ್ಲಿಯ ದ್ರೌಪದಿ ಸ್ವಯಂವರ ಸನ್ನಿವೇಶದ ವರ್ಣನೆ (೨೩ – ೨೮೭ – ೨೦೯) ಸಾಂಪ್ರದಾಯಿಕ ಅಲಂಕಾರಗಳಿಂದ ಕೂಡಿದ್ದರೂ ಆಕೆಯ ಸಹಜ ಸೌಂದರ್ಯವನ್ನು ಎತ್ತಿ ಹೇಳುವಲ್ಲಿ ಸಾರ್ಥಕ್ಕೆ ಪಡೆದಿದೆ.

ಇನ್ನು ಚಿಕ್ಕ ಚಿಕ್ಕ ಪಾತ್ರಗಳನ್ನು ಚಿತ್ರಿಸುವಲ್ಲಿಯೂ ಕವಿಯ ಪ್ರತಿಭೆ ಎದ್ದು ಕಾಣುತ್ತಿದೆ. ನೇಮಿಜಿನೇಶಸಂಗತಿಯ ವಾಮನ ಅವತಾರ ಪ್ರಸಂಗ ಸೊಗಸುಗಾರಿಕೆಯಿಂದ ಮನಸೆಳೆಯುತ್ತಿದೆ. ಅವುಗಳಲ್ಲಿ ಒಂದೆರಡು ಪದ್ಯಗಳನ್ನು ನಿದರ್ಶನಕ್ಕಾಗಿ ನೋಡಬಹುದು :

ರನ್ನನ ಕುಂಡಲದಿಂ ದರ್ಭೆಯಿಂ ಪೊಸ
ಪೊನ್ನುಂಗುರದಿ ಮುಂಜಿನಿಂದ |
ಜನ್ನಿವಾರದಿಂ ಶಿಖಿಯಿಂ ಧ್ರೋತ್ರದಿಂ ಕಡು
ಚೆನ್ನು ಹಡೆದು ನಡೆತಂದು || ೧೧ – ೬೧

ಎಳೆಯ ಮಾಣಿಕದ ಬೊಂಬೆಯೊ ಪವಳದ ಪು
ತ್ತಳಿಯೊಯೆಂಬ ಮಾಳ್ಕೆಯೊಳು |
ವಿಲಸಿತಮಪ್ಪ ವಾಮನರೂಪವನಾಂತು
ಬಲಿಯೆಡೆಗೆಯ್ತಂದನಾಗ || ೧೧ – ೬೨

ನೇಮಿಜಿನೇಶ ಸಂಗತಿಯ ಮದನ – ವಿದರ್ಭೆಯರ ಪ್ರಸಂಗದಲ್ಲಿಯ ಕೊರವಂಜಿಯ ಸನ್ನಿವೇಶವೂ ಕಣ್ಣಿಗೆ ಕಟ್ಟುವಹಾಗೆ ಚಿತ್ರಿತವಾಗಿದೆ. ಉದಾಹರಣೆಗೆ :

ಮುನ್ನ ಹೋದುದನೀಗ ಮನದೊಳಗಿರ್ದುದ
ನಿನ್ನುಮುಂದಕೆ ಬಪ್ಪುದನು |
ಚೆನ್ನಾಗಿ ಪೇಳುವೆವೆಂದೆಯ್ದುತಿರಲಾ
ಕನ್ನೆ ವಿದರ್ಭೆಯಾಳಿಯರು || ೨೧ – ೫೫

ವನಿತೆ ನೀನಿಂದಿನಿರುಳು ಕಾವನ ಕೈಯ
ನನೆವಿಲ್ಲನರಲಂಬುಗಳನು
ಕನಸಿನೊಳಗೆ ಕಂಡುದು ಹುಸಿಯಲ್ಲೆಂ
ದೆನುತವಳುಂಡೂಟವನು || ೨೧ – ೫೯
ಒಂದನಿಸುಳಿಯದೆ ಪೇಳೆ………..೨೧ – ೬೦

ಶ್ರೀಪಾಲ ಚರಿತೆಯಲ್ಲಿಯ ಶ್ರೀಪಾಲನು ಆನೆಯನ್ನು ಮಣಿಸಿದ ಪ್ರಸಂಗ (೭ – ೪೩ – ೬೫), ವಸುದೇವನ ಗಜಾರೋಹಣ ಪ್ರಸಂಗ (ನೇಮಿಜಿನೇಶ ಸಂಗತಿಯಲ್ಲಿಯ ೯ನೆಯ ಸಂಧಿ) ಮೈನವಿರೇಳುವಂತೆ ಚಿತ್ರಿತವಾಗಿದೆ. ಹಾಗೆಯೇ ಯುದ್ಧಕ್ಕೆ ಸಿದ್ಧತೆ ನಡೆಸಿದ ಸೈನಿಕರ ಚಿತ್ರ ಹೀಗಿದೆ:

ಕೂಲಿಗೆ ನೀರನಟ್ಟುವ ಕಳನಿಕ್ಕುವ
ಹಾಲುಮೊಸರು ಹಲತೆರದ
ಮೇಲೋಗರವ ಮಾರುವ ಹಸರಂಗಳ
ಸಾಲೊಪ್ಪಿತೆಲ್ಲಿ ನೋಡಿದರು (ಶ್ರೀಪಾಲಚರಿತೆ, ೧೩ – ೧೦೮)

ಯುದ್ಧಕ್ಕೆ ಹೊರಟಾಗ ಮಧ್ಯದಲ್ಲಿ ಬೀಡಾರ ಬಿಟ್ಟ ಸನ್ನಿವೇಶ ಶ್ರೀಪಾಲಚರಿತೆಯಲ್ಲಿ ಈ ರೀತಿ ಚಿತ್ರಿತವಾಗಿದೆ.

ಗುಡಿಯ ಹೊಲಿವ ಗೂಟವ ಕೆತ್ತುವ ಕತ್ತಿ
ಕುಡಗೋಲು ಕೊಡಲಿ ಹಾರೆಗಳ
ತಡೆಯದೆ ಹಸಮಾಡುವ ಬಲುಸಂದಣಿ
ಯೆಡೆಬಿಡದೊಪ್ಪಿತೆಲ್ಲಿ ನೋಡಿದರು || ೧೩ – ೫೫

ಹಿಂದುಮುಂದಕೆ ಸಂದ ಹಣವ ಲೆಕ್ಕಮಾಡಿ
ಮುಂದಣ ಕಾಲಾವಧಿಗೆ
ಸಂದುದ ಮಾಡಿ ರಾಣುವಿಗೆ ಜೀವತವೀವ
ಸಂದಣಿ ಸೊಗಯಿಸಿತಾಗ || ೧೩ – ೫೬

ಕೊಟ್ಟಿಗೆ ಕೊಲ್ಲಾರದ ಬಂಡಿ ಬಟ್ಟಿತ್ತು
ಪೆಟ್ಟಿಗೆ ಹಾರೆ ಗುದ್ದಲಿಯ |
ಕಟ್ಟಿದ ಹೊರೆಯ ಹೊತ್ತಾಕಮವಟ್ಟದ
ಬಿಟ್ಟಿಯಾಳುಗಳೆಯ್ದಿದರು || ೧೩ – ೮೭

ಬೊಕ್ಕಸಗಳು ಬೋನಗುಡಿಕೆಗಳಾ ಮುದ್ರೆ
ಇಕ್ಕಿದ ಚಿರಗಟ್ಟುಗಳ |
ಇಕ್ಕಡೆ ಜೋಲ್ವಡ್ಡಹೊರೆಯನು ಹೆಗಲೊಳ
ಗಿಕ್ಕಿ ನಡೆವರೊಪ್ಪಿದರು | . ೧೩ – ೮೮

ಅದೇ ರೀತಿ ಶ್ರೀಪಾಲನು ದಾಟಿಬಂದ ಶವಾಲಯವು “ನವರಸವನೆ ತೋರ್ಪ ಪರೇತವನ” (೮ – ೨೨)ವಾಗಿ ಕವಿಗೆ ಕಂಡಿದೆ. ಆ ಸನ್ನಿವೇಶದ ಒಂದು ಪದ್ಯ ಹೀಗಿದೆ :

ಮಾರಿಯ ಬಯಕೆಯ ಕಣಜ ಮಿಳ್ತುವಿನ ಭಂ
ಡಾರಮಂತಕನುಗ್ರಾಣ
ಸಾರಮೇಯಗಳ ಜೇವಣಶಾಲೆಯಂದೆನ
ಲಾ ರುದ್ರಭೂಮಿಯೊಪ್ಪಿದುದು || (೮ – ೧೧)

ಹೀಗೆಯೇ ಈ ವರ್ಣನೆ ಇಡೀ ಒಂದು ಸಂಧಿಯ ತುಂಬ ಸಾಗುತ್ತಿದೆ. ರನ್ನನ ಯುದ್ಧಭೂಮಿಯ, ರಾಘವಾಂಕನ ಸ್ಮಶಾನದ ವರ್ಣನೆಗೆ ಸರಿಮಿಗಿಲೆನ್ನುವಂತೆ ಇಲ್ಲಿಯ ವರ್ಣನೆಯಿರುವುದು ವಿಶೇಷವಾದುದಾಗಿದೆ.

ಮೂರನೆಯ ಮಂಗರಸನ ವಿಶೇಷತೆ ಕಾಣುವುದು ಅವನು ಬಳಸುವ ಉಪಮೆ – ರೂಪಕ ಅಲಂಕಾರಗಳಲ್ಲಿ, ಆಡು ನುಡಿ, ಗಾದೆಮಾತು ಮೊದಲಾದವುಗಳ ಪ್ರಯೊಗದಲ್ಲಿ.

೧. ಅದರಲ್ಲೂ ವಿಶೇಷವಾಗಿ ಶಿವನ ಕಥಾಪ್ರಸಂಗಗಳನ್ನು, ಅಲ್ಲಲ್ಲಿ ಶಿವ – ಹರಿಯರ ಕಥಾಪ್ರಸಂಗಗಳನ್ನು ತಂದು ತನ್ನ ಕಥಾಚೌಕಟ್ಟಿಗೆ ಹೆಚ್ಚಿನ ಮೇರಗನ್ನು ಒದಗಿರುವುದು.

೨. ಹಲವಾರು ಸೊಗಸಾದ ಪದ್ಯಗಳನ್ನು ಹೆಣೆದಿರುವುದು.

೩. ಆಡುನುಡಿ – ಗಾದೆಮಾತು ಮೊದಲಾದವನ್ನು ಬಳಸಿರುವುದು.

ಈಗ ಇವನ್ನು ವಿಸ್ತೃತವಾಗಿ ಅವಲೋಕಿಸಬಹುದು :

ಶಿವಪರವಾದ ಉಪಮೆ – ರೂಪಕಗಳು :

ಪ್ರಭಂಜನಚರಿತೆ :

೧. ಶೂಲಿ ಮುಪ್ಪುರಕೆ ದಾಳಿಡುವಂತೆ ಸೇನಾಜಾಲವೆಲ್ಲವ ಕೂಡಿಕೊಂಡು ೨ – ೧೭