ಜಯನ್ನಪಕಾವ್ಯ

ಆದಿತೀರ್ಥಂಕರ ಕಾಲದ ಗಣಧರರಲ್ಲಿ ಒಬ್ಬನಾದ ಮತ್ತು ಮಹಾಶೂರನಾದ ಜಯನೃಪನ ಕಥೆಯನ್ನು, ವಿಪುಲಾಚಲದ ವೀರೇಶನ ಸನ್ನಿಧಿಯಲ್ಲಿ ಗೌತಮಗಣಧರರು ಶ್ರೇಣಿಕರನಿಗೆ ಮೊದಲು ಹೇಳಿದರು. ಮಹಾಪುರಾಣದ ಪೂರ್ವಾರ್ಧವಾದ ಪೂರ್ವಪುರಾಣದಲ್ಲಿ ಈ ಕಥೆ ಇದೆ. ಮತ್ತೆ ಜಿನಸೇನಾಚಾರ್ಯರು ಇದನ್ನು ಒಂದು ಪ್ರತ್ಯೇಕ ಕೃತಿಯಾಗಿಯೂ ರಚಿಸಿದರು. ಮುಂದೆ ಬಂದ ಪಂಪ ತನ್ನ ಆದಿಪುರಾಣದಲ್ಲಿ ಈ ಕಥೆಯನ್ನು ಕೈ ಬಿಟಿದ್ದಾನೆ. ರತ್ನಾಕರವರ್ಣಿ ಮಾತ್ರ ತನ್ನ ಭರತೇಶವೈಭವದಲ್ಲಿ ಇದರ ಪ್ರಸ್ತಾಪಮಾಡಿದ್ದಾನೆ. ಕವಿ ಮಂಗರಸ ಇದನ್ನು “ಜಿನಸೇನಾರ್ಯಂ (೧ – ೧೫) ಮುದದಿ ವಿರಚನೆಗೆಯ್ದ ಲಸತ್ಕೃತಿಯಿದನಾ ಪುಣ್ಯನಿಮಿತ್ತಂ ಹಿರಿದುಂ ಹರಿಸದೊಳು” (೧ – ೨೭) “ನೂತನ ರಸವರ್ಧಿನಿಯಾದ ಪರಿವರ್ಧಿನಿಷಟ್ಪದಿ”ಯಲ್ಲಿ ರಚಿಸಿರುವುದಾಗಿ ಹೇಳಿಕೊಂಡಿದ್ದಾನೆ. ಇದರಲ್ಲಿ ೧೬ ಸಂಧಿ, ೧೧೪೫ ಪದ್ಯಗಳಿವೆ. “ಪಾಲೊಳಗಯಿದಾರೆ ಸಕ್ಕರೆಯ ಜಯನೃಪಚಾರಿತ್ರಮನೋತುಸಿರ್ದೆಂ” (೧ – ೨೩) ಎಂದಿದ್ದಾನೆ.

ಹಸ್ತಿನಾಪುರದ ದೊರೆಯಾದ ಸೋಮಪ್ರಭುನು ಲಕ್ಷ್ಮೀಮತಿಯೆಂಬ ರಾಣಿಯೊಂದಿಗೆ ಸುಖದಿಂದ ಇದ್ದು, ಜಯ, ವಿಜಯ ಮುಂತಾದ ೧೪ ಮಂದಿ ಮಕ್ಕಳನ್ನು ಪಡೆದನು. ಅನೇಕ ವರ್ಷ ರಾಜ್ಯಭಾರ ಮಾಡಿ, ಒಂದು ದಿನ ವೈರಾಗ್ಯ ತಾಳಿ, ಹಿರಿಯ ಮಗನಾದ ಜಯಕುಮಾರನಿಗೆ ರಾಜ್ಯವನ್ನು ಒಪ್ಪಿಸಿ, ಶೀಲಗುಪ್ತಮುನಿಗಳಿಂದ ದೀಕ್ಷೆ ಹೊಂದಿದನು. ಗುರುಗಳ ಬಳಿ ಧರ್ಮೋಪದೇಶ ಕೇಳುತ್ತಿರುವಾಗ ಎರಡು ಹಾವುಗಳು ಬಂದು, ಅವೂ ಧರ್ಮೋಪದೇಶ ಕೇಳಿದವು. ಅವುಗಳಲ್ಲಿ ಗಂಡುಹಾವು ಸಿಡಿಲ ಹೊಡೆತಕ್ಕೆ ಸಿಲುಕಿ ಸತ್ತು ನಾಗದೇವನಾಗಿ ಹುಟ್ಟಿತು. ಹೆಣ್ಣು ಹಾವು ಬೇರೊಂದು ಗಂಡು ಹಾವಿನ ಜೊತೆ ಇರುವುದನ್ನು ಜಯಕುಮಾರನು ಕಂಡು, ನೀಲಕಮಲದಿಂದ ಹೊಡೆಯಲು ಆಳುಗಳು ಅದನ್ನು ಕೊಂದುಬಿಟ್ಟರು. ಗಂಡುಹಾವು ಕಾಳಿ ಎಂಬ ನಾಗದೇವತೆಯಾಗಿ, ಹೆಣ್ಣುಹಾವು ನಾಗದೇವನ ಹೆಂಡತಿಯಾಗಿ ಹುಟ್ಟಿದವು. ಹೆಣ್ಣುಹಾವು ಜಯಕುಮಾರನು ತನಗೆ ಹೊಡೆದುದಾಗಿ ಹೇಳಲು ಹಿಂದು ಮುಂದು ಅರಿಯದ ನಾಗದೇನು ಅವನನ್ನು ಕಚ್ಚಲು ಹೋದನು. ಅದೇ ವೇಳೆಯಲ್ಲಿ ಜಯಕುಮಾರನು ತನ್ನ ಹೆಂಡತಿಯೊಂದಿಗೆ ಸಂಭಾಷಿಸುತ್ತ ಹೆಣ್ಣುಹಾವಿನ ನಡತೆಯನ್ನು ವಿವರಿಸುತ್ತಿದ್ದನು. ಅದನ್ನು ಕೇಳಿ ನಾಗದೇವನು ಸುಪ್ರೀತನಾಗಿ, ನೆನೆದಾಗ ಬಂದು ಸಹಾಯ ಮಾಡುವುದಾಗಿ ತಿಳಿಸಿ ತನ್ನ ಮನೆಗೆ ಮರಳಿದನು.

ವಾರಾಣಾಸಿಯ ಅಕಂಪನ – ಸುಪ್ರಭೆಯರಿಗೆ ಹೇಮಾಂಗ ಮುಂತಾಗಿ ಸಾವಿರ ಮಂದಿ ಗಂಡುಮಕ್ಕಳು. ಸುಲೋಚನ – ಲಕ್ಷ್ಮೀಮತಿ ಎಂಬ ಇಬ್ಬರು ಹೆಣ್ಣುಮಕ್ಕಳು. ಸುಲೋಚನದೇವಿಯ ಸ್ವಯಂವರ ಏರ್ಪಾಡಾಗಿ ಅವಳ ಮೆಚ್ಚುಗೆಯಂತೆ ಜಯಕುಮಾರನೊಂದಿಗ ಅವರ ವಿವಾಹ ನೆರವೇರಿತು. ಇದರಿಂದ ಅಪಮಾನಗೊಂಡ ದುರ್ಮರ್ಷನು ಭರತಚಕ್ರಢಶ್ವರನ ಮಗ ಆರ್ಕಕೀರ್ತಿಯನ್ನು ಎತ್ತಿಕಟ್ಟಿ, ಅಕಂಪನ ಮೇಲೆ ಏರಿಹೋಗುವಂತೆ ಮಾಡಿದನು. ಜಯಕುಮಾರನು ತನ್ನ ತಮ್ಮಂದಿರ ನೆರವಿನಿಂದ, ಸಾಗರದೇವನು ಕೊಟ್ಟ ಅರ್ಧಚಂದ್ರದಿಂದ, ಆರ್ಕಕೀರ್ತಿಯನ್ನು ವಿರಧನನ್ನಾಗಿಸಿ ನಾಗಪಾಶದಿಂದ ಬಂಧಿಸಿ ತಂದು ಅಕಂಪನನಿಗೆ ಒಪ್ಪಿಸಿದನು. ಅಂಕಪನನು ಆರ್ಕಕೀರ್ತಿಯನ್ನು ಕ್ಷಮಿಸಿ, ತನ್ನ ಎರಡನೆಯ ಮಗಳಾದ ಲಕ್ಷ್ಮೀಮತಿಯನ್ನು ಕೊಟ್ಟು ವಿವಾಹ ಮಾಡಿ, ಸತ್ಕರಿಸಿ ಕಳಿಸಿದನು. ಭರತಚಕ್ರವರ್ತಿ ಇದನ್ನೆಲ್ಲ ಕೇಳಿ ಅಕಂಪನ ಜಯಕುಮಾರರನ್ನು ಪ್ರಶಂಸೆ ಮಾಡಿದನು.

ಜಯಕುಮಾರನು ಅನೇಕ ವರ್ಷ ಸುಖದಿಂದ ಕಾಲ ಕಳೆದು, ಒಂದು ದಿನ ವೈರಾಗ್ಯ ಹೊಂದಿ ಹಿರಿಯಮಗನಾದ ಅನಂತವೀರ್ಯನಿಗೆ ಪಟ್ಟಗಟ್ಟಿ ವೃಷಭಸ್ವಾಮಿಗೆ ಗಣಧರನಾಗಲು, ಸುಲೋಚನೆ ಅಚ್ಯುತಕಲ್ಪದಲ್ಲಿ ದೇವರಾಗಿ ಹುಟ್ಟಿದಳು.

ಈ ಸಿದ್ಧಕಥಾಭಿತ್ತಿಯಲ್ಲಿ ಮೂಡಿಬಂದ ಮೂರನೆಯ ಮಂಗರಸನ “ಜಯನೃಪಕಾವ್ಯವು ಮಹಾಕಾವ್ಯವೂ ಅಲ್ಲ, ಖಂಡಕಾವ್ಯವೂ ಅಲ್ಲ; ಅದೊಂದು ಮಧ್ಯಮಕಾವ್ಯ; ಗುಣ – ಗಾತ್ರಗಳೆರಡಕ್ಕೂ ಈ ಮಾತು ಅನ್ವಯಿಸುತ್ತದೆ.” (ಹಂಪ. ನಾಗರಾಜ್ಯ, : ಜಯನೃಪ ಕಾವ್ಯ ಸಂಗ್ರಹ, ಪೀಠಕೆ ಪುಟ – ೪೭) ಎಂಬ ಮಾತು ಸತ್ಯವಾದುದು ಎನ್ನಿಸುತ್ತದೆ.

ಸಮ್ಯಕ್ತ್ವಕೌಮುದಿ :

ಸಮ್ಯಗ್‌ದರ್ಶನ, ಸಮ್ಮಗ್‌ಜ್ಞಾನ, ಸಮ್ಯಗ್‌ಚಾರಿತ್ರಗಳು ರತ್ನತ್ರಯಗಳೆಂದೂ, ಅವೇ ಮೋಕ್ಷಕ್ಕೆ ಕಾರಣವೆಂದೂ ಜೈನಧರ್ಮ ಹೇಳುತ್ತದೆ. ಅವುಗಳಲ್ಲಿ ಮೊದಲನೆಯದಾದ ಸಮ್ಯಗ್‌ದರ್ಶನವೇ ಸಮ್ಯಕ್ತ್ವ ಸಮ್ಯಕ್ತ್ವ ಎಂದರೆ ಧರ್ಮದಲ್ಲಿ ನಂಬಿಗೆ, ಶ್ರದ್ಧೆ, ಭಕ್ತಿ. ಅದು ಸಕಲಸದ್ಭಕ್ತಿಗೆ ಹಾಗೂ ಮೋಕ್ಷಕ್ಕೆ ಮೂಲ. ಈ ಸಮ್ಯಕ್ತ್ವವೆಂಬ ಕೌಮುದಿ (ಬೆಳದಿಂಗಳು) ಎಲ್ಲರ ಮನಸ್ಸಿಗೂ ಆಹ್ಲಾದವನ್ನುಂಟುಮಾಡುತ್ತಿದೆ. ಆದ್ದರಿಂದ ಈ ಕೃತಿಯ ಹೆಸರು ಸಮ್ಯಕ್ತ್ವಕೌಮುದು. ಇಲ್ಲಿ ಧರ್ಮದಲ್ಲಿ ಶ್ರದ್ಧೆ ಭಕ್ತಿಗಳು ನೆಲೆಯಾಗಿ ನಿಲ್ಲಲು ಕಾರಣವಾದ ಪ್ರಸಂಗಗಳನ್ನು ಒಂದೊಂದು ತತ್ತ್ವದ ಹಿನ್ನೆಲೆಯಲ್ಲಿ ಕಥೆಯ ರೂಪದಲ್ಲಿ ಹೇಳಲಾಗಿದೆ.

ಸಂಸ್ಕೃತ, ಪ್ರಾಕೃತ ಭಾಷೆಗಳಲ್ಲಿ ಸಮ್ಯಕ್ತ್ವಕೌಮುದಿ ಹೆಸರಿನ ಅನೇಕ ಗ್ರಂಥಗಳಿವೆ. ಇವೇ ಕನ್ನಡ ಗ್ರಂಥಗಳಿಗೆ ಮೂಲಾಧರ. ಚಿಕ್ಕಮಲ್ಲಣ್ಣ (೧೪೯೨), ಮೂರನೆಯ ಮಂಗರಸ (೧೫೦೯) ಪಾಯಣ್ಣವ್ರತಿ (೧೬೮೦) ಮತ್ತು ನೀಲಕಂಠ (?) ಈ ನಾಲ್ಕೂ ಕವಿಗಳು ಕನ್ನಡದಲ್ಲಿ “ಸಮ್ಯಕ್ತ್ವಕೌಮುದಿ” ಕಾವ್ಯ ರಚಿಸಿದ್ದಾರೆ. ಅದರಲ್ಲಿ ಮೂರನೆಯ ಮಂಗರಸನ ‘ಸಮ್ಯಕ್ತ್ವಕೌಮುದಿ ೧೨ ಸಂಧಿ, ೭೮೫ ವಾರ್ಧಕ ಷಟ್ಪದಿಗಳಿವೆ. ಕವಿ ತನ್ನ ಕಾವ್ಯದೃಷ್ಟಿ ಕುರಿತು “ಸಂದ ಸಕ್ಕದಗನ್ನಡವನೆರಡನೊಡವೆರಸಿ ಮಂದೇತಾರಾಮೋದದಿಂದ ಮೃದುಪಾಕಮಪ್ಪಂದದಿಂ ವಿರಚಿಸಿದೆನಾನಿದಂ ಸಜ್ಜನರ್ ಸಂತೋಷದಿಂ ಕೇಳುವುದು” (ಸಮ್ಯಕ್ತ್ವಕೌಮುದಿ, ೧೨ – ೪೫) ಎಂದೂ, ಸಮ್ಯಕ್ತ್ವಕೌಮುದಿಯನ್ನು “ಸಲ್ಲಲಿತಮಪ್ಪ ಸಕ್ಕದದಿ ಪೂರ್ವಾಚಾರ್ಯರುಲ್ಲಸದಿ ಪೇಳ್ದುದಂ ಕರ್ಣಾಟಕ ಬಂಧದಲ್ಲಿಯುದ್ದಂಡಷಟ್ಪದಮಾಗಿ ಬರೆದೆನಿಂತಿದನು” (೧ – ೯) ಎಂದೂ ಹೇಳಿಕೊಂಡಿದ್ದಾನೆ. ಇಲ್ಲಿ ಯಮದಂಡನು ಹೇಳಿದ ಎಂಟು ಕಥೆಗಳು, ಅರ್ಹದ್ದಾಸನ ಸತಿಯರು ಹೇಳಿದ ಎಂಟು ಕತೆಗಳು ಮತ್ತು ಅರ್ಹದ್ದಾಸ ಯಮದಂಡರು ಹೇಳಿದ ಒಂದೊಂದು ಕಥೆ ಹೀಗೆ ಒಟ್ಟು ೧೮ ಕತೆಗಳುಂಟು. ಅಂದರೆ ಸಮ್ಯಕ್ತ್ವಕೌಮುದಿಯು ಒಟ್ಟು ಹದಿನೆಂಟು ಕತೆಗಳ ಸಂಗ್ರಹವೆಂದು ಹೇಳಬಹುದು. ಸಮಗ್ರ ಗ್ರಂಥವು ಒಂದೇ ಕಥೆಯಂತೆ ಇದ್ದು, ಈ ಎಲ್ಲ ಕಥೆಗಳನ್ನು ಅದರ ಅಂಗಗಳೆಂಬಂತೆ ಜೋಡಿಸಿ ಹೇಳಲಾಗಿದೆ.

ಮಗಧದೇಶದ ಅರಸು ಶ್ರೇಣಿಕ, ಅವನ ಹೆಂಡತಿ ಚೇಳಿನಿ. ಅವರು ಗೌತಮಗಣಧರರಿಗೆ ವಂದಿಸಿ ಸಮ್ಯಕ್ತ್ವ ಹುಟ್ಟುವ ಕಥೆ ಹೇಳುವಂತೆ ವಿನಂತಿಸಲು ಅವರು ಈ ಕಥೆ ಹೇಳಿದರು :

ಮಧುರಾನಗರಿಯ ರಾಜ ಉದಿತೋದಯ, ರಾಣಿ ಉದಿತಮಹಾದೇವಿ, ಸಚಿವ ಸುಬುದ್ಧಿ, ಕೌಮುದಿಪರ್ವ ಬರಲು ಅರಸನ ಆಜ್ಞೆಯ ಮೇರೆಗೆ ಸ್ತ್ರೀಯರೆಲ್ಲರೂ ನಂದನಕ್ಕೆ ತೆರಳುವರು. ಅಲ್ಲಿಗೆ ಯಾವ ಪುರುಷನೂ ಹೋಗಬಾರದೆಂಬುದು ರಾಜಾಜ್ಞೆ, ಆದರೆ ಚಂದ್ರೋದಯ ನೋಡಿದ ರಾಜನೀಗೆ ನಂದನಕ್ಕೆ ಧಾವಿಸುವ ಆಸೆಯುಂಟಾಗುವುದು, “ರಾಜನೇ ರಾಜಾಜ್ಞೆ ಮುರಿದರೆ ಅಪಕೀರ್ತಿ” ಎಂದು ಮಂತ್ರಿ ಈ ಕಥೆ ಹೇಳುವನು :

ಹಸ್ತಿನಾಗಪುರದರಸು ಸುಯೋಧನ, ಹೆಂಡತಿ ಕೋಮಲೆ, ಮಗ ಗುಣಪಾಲ, ಮಂತ್ರಿ ಪುರುಷೋತ್ತಮ, ಪುರೋಹಿತ ಕಪಿಲ, ತಳಾರ ಯಮದಂಡ. ಪುಂಡರ ಹಾವಳಿ ಅಡಗಿಸ ಹೊರಟು ಅರಸು, ಯಮದಂಡನಿಗೆ ಆಡಳಿತಸೂತ್ರ ವಹಿಸುವನು. ಮರಳಿಬಂದು ಯಮದಂಡನಾಳಿಕೆಯಲ್ಲಿ ಪ್ರಜೆಗಳು ಸುಖವಾಗಿ ಇದ್ದುದನ್ನು ಕೇಳಿ, ಎಲ್ಲಿ ತನ್ನ ಅರಸುತನಕ್ಕೆ ಚ್ಯುತಿ ಬರುತ್ತದೋ ಎಂದು ಅಂಜಿ, ರಾಜ, ಮಂತ್ರಿ ಮತ್ತು ಪುರೋಹಿತ ಸೇರಿ, ಭಂಡಾರದ ವಸ್ತುಗಳನ್ನು ಬೇರೆಡೆ ಸಾಗಿಸಿ, “ಅವು ಕಳುವಾಗಿವೆ, ಎಂಟು ದಿನದಲ್ಲಿ ಆ ಕಳ್ಳರನ್ನು ಹಿಡಿಯದಿದ್ದರೆ ಯಮದಂಡನೆ ನಿನಗೆ ಮರಣದಂಡನೆ” ಎನ್ನುವನು. ಕಳುವಾದ ಸ್ಥಳದಲ್ಲಿ ಅರಸನ ಪಾದುಕೆ, ಮಂತ್ರಿಯ ಮುದ್ರೆಯುಂಗುರ, ಪುರೋಹಿತನ ಚಿನ್ನದ ಜನಿವಾರ ಸಿಕ್ಕು, ಇದು ಒಂದು ಕುತಂತ್ರ ಎಂದು ತಿಳಿದು ಯಮದಂಡ, ಉಪಾಯದಿಂದ ಅದನ್ನು ಬಯಲಿಗೆಳೆಯಲು ನಿಶ್ಚಯಿಸದನು. ಅರಸು ದಿನಾಲೂ ಯಮದಂಡವನ್ನು ಕರೆಸಿ “ಕಳ್ಳರನ್ನು ಹುಡುಕಿದೆಯಾ” ಎಂದು ಕೇಳಲು, ಅವನು “ಇಲ್ಲ” ಎಂದು, ಒಂದೊಂದು ದಿನ ಒಂದೊಂದು ಕಥೆ ಹೇಳುವನು.

ಮೊದಲನೆಯ ದಿನ, ಮರಕ್ಕೆ ಬಳ್ಳಿ ಹಬ್ಬಿಸಿ ಅದರ ಮೇಲಿದ್ದ ಮರಿಹಂಸಗಳನ್ನು ಹಿಡಿಯ ಬಂದ ಬೇಡನಿಂದ, ಅವು ಸತ್ತುಬಿದ್ದಂತೆ ನಟಿಸ ಹೇಳಿ ಪಾರುಮಾಡಿದ ಮುದಿಹಂಸದ ಕಥೆ ಹೇಳುವನು. ಎರಡನೆಯ ದಿನ ಮಡಿಕೆ ಮಾರಿ ಶ್ರೀಮಂತನಾಗಿದ್ದ ಕುಂಬಾರ, ಹೆಂಟೆ ಮೇಲೆ ಬಿದ್ದು, ಬೆನ್ನು ಮುರಿದು ಬಡವನಾದ ಕಥೆ ಹೇಳುವನು. ಮೂರನೆಯ ದಿನ ಬಿಸಿಲಬೇಗೆ, ಕಾಡಕಿಚ್ಚು, ಬೇಡರ ನಡುವೆ ಸಿಕ್ಕು ಒದ್ದಾಡುತ್ತಿದ್ದ ಜಿಂಕೆಯ ಸ್ಥಿತಿಯನ್ನು ವಿವರಿಸುವನು. ನಾಲ್ಕನೆಯ ದಿನ ಕೋಟೆಯನ್ನು ನಿಲ್ಲಿಸಲು ನಗುನಗುತ್ತ ಮಾರಿಗೆ ಬಲಿಯಾಗಲು ಸಿದ್ಧನಾದ ಬ್ರಾಹ್ಮಣನ ಮಗನು “ಮಕ್ಕಳನ್ನು ತಂದೆ, ತಾಯಿ, ಅರಸು ರಕ್ಷಿಸದಿದ್ದರೆ ದೇವರೇ ಗತಿ” ಎಂದುದನ್ನು ಕೇಳಿ ಅವನನ್ನು ಗ್ರಾಮದೇವತೆಗಳು ರಕ್ಷಿಸಿದವು ಎಂದು ಹೇಳುವನು.

ಐದನೆಯ ದಿನ ವ್ಯಾಪಾರಕ್ಕೆಂದು ಹೊರಟ ಯಶೋಭದ್ರ, ತಾಯಿಯ ಜಾರತನ ನೋಡಿ, ‘ಮನೆಯೊಡತಿಯೇ ಕಳ್ಳತನ ಮಾಡಿದರೆ ಮಾಡುವುದೇನು’ ಎಂದು ಹೊರಟುಹೋದ ಸಂಗತಿಯನ್ನು ಹೇಳುವನು. ಆರನೆಯ ದಿನ ವನವನ್ನೆಲ್ಲ ಹಾಳುಮಾಡುತ್ತಿದ್ದ ಕೋತಿಗಳಿಗೆ ಅರಮನೆಯ ವೃದ್ಧಕೋತಿಯಿಂದ ಬುದ್ಧಿ ಹೇಳಕಳಿಸಲು, ಅದೂ ಅವುಗಳ ಸಂಪರ್ಕದಿಂದ ಕೆಟ್ಟು ಹೋದುದಾಗಿ ಕೇಳಿ, ‘ಕೆಟ್ಟ ಅರಸನ ಆಳಿಕೆಯಲ್ಲಿ ಯಾರೂ ಬದುಕಲಾರರು’ ಎಂಬುದು ಇದರ ತಿರುಳು ಎನ್ನುವನು. ಏಳನೆಯ ದಿನ ಅರಸನು ತನ್ನ ಕಾವ್ಯದಲ್ಲಿ ತಪ್ಪು ತೋರಿಸಿದ ಮಂತ್ರಿಯನ್ನು ಹೊಳೆಯಲ್ಲಿ ಚೆಲ್ಲಿಸಲು ಅವನು ಹೇಗೋ ಪಾರಾಗಿಬಂದನು. ಊರಜನರು ಹೀಗೆ ಮಾಡಬಾರದಿತ್ತು ಎನ್ನಲು ಅರಸನು ಅವನನ್ನು ಕರೆದು ಗೌರವಿಸಿದನು. ‘ಉತ್ತಮರ ಕೋಪ ಕ್ಷಣಿಕ’ ಎಂಬುದು ಇದರ ತಾತ್ಪರ್ಯ ಎಂದು ಹೇಳಿದನು.

ಕಡೆಯ ದಿನ ರಾಜನು ಪುರಜನರೆದುರು ಯಮದಂಡವನ್ನು ಶಿಕ್ಷಿಸುವ ಉತ್ಸುಕತೆಯಲ್ಲಿರಲು, ಯಮದಂಡನು ಜನರಿಗೆ ಕೈಮುಗಿದು, ಪಾದುಕೆ, ಉಂಗುರ, ಜನಿವಾರಗಳನ್ನು ತೋರಿಸಿ, ಗುಟ್ಟನ್ನು ರಟ್ಟು ಮಾಡಿದನು. ಪುರಜನರು ಆ ಮೂವರನ್ನು ಹೊರಹಾಕಿ, ಅವರ ಮಕ್ಕಳಿಗೆ ಅಧಿಕಾರ ಕೊಟ್ಟು ಯಮದಂಡನನ್ನು ಸತ್ಕರಿಸಿದರು. ಹೀಗೆ “ಕೆಟ್ಟ ಮಂತ್ರಿಯಿಂದ ರಾಜ್ಯಕ್ಕೆ ಹಾನಿ, ಉತ್ತಮನಿಂದ ರಕ್ಷಣೆ” ಎಂದು ಮಂತ್ರಿ ಹೇಳಲು ಉದಿತೋದಯನಿಗೆ ಜ್ಞಾನೋದಯವಾಗುವದು, ಬೇಸರ ಕಳೆಯಲು ಇಬ್ಬರೂ ಬೆಳದಿಂಗಳಲ್ಲಿ ಸುತ್ತಾಡ ಹೊರಟರು. ಪುರಮಧ್ಯದಲ್ಲಿ ಸುವರ್ಣಖುರನೆಂಬ ಅಂಜನಚೋರ ಅಹರ್ದಾಸನೆಂಬ ವೈಶ್ಯನ ಮನೆಯ ಕತ್ತಲಲ್ಲಿ ಅಡಗಿಕೊಳ್ಳಲು, ಇವರೂ ಅಲ್ಲಿಯೇ ಮರೆಯಾಗಿ ನಿಂತರು.

ಕೌಮುದಿಮಹೋತ್ಸವದಲ್ಲಿ ಎಲ್ಲರೂ ಭಾಗವಹಿಸಬೇಕೆಂಬ ಅರಸನ ಆಜ್ಞೆ ಇದ್ದರೂ ಅರ್ಹದಾಸ ಮತ್ತು ಅವನ ಎಂಟು ಜನ ಹೆಂಡಂದಿರು ಜಿನಾಲಯಕ್ಕೆ ಬಂದು ನಂದೀಶ್ವರನೋಂಪಿಯಲ್ಲಿ ತೊಡಗಿದ್ದರು. ಅದು ಮುಗಿದನಂತರ ಅರ್ಹದಾಸ ತನ್ನ ಹೆಂಡಂದಿರ ಕೋರಿಕೆಯ ಮೇರೆಗೆ ತನಗೆ ಸಮ್ಯಕ್ತ್ವವುಂಟಾದ ಬಗೆಯನ್ನು ಹೇಳತೊಡಗುವನು. ಅದನ್ನು ಅರಸ, ಮಂತ್ರಿ ಮತ್ತು ಚೋರ ಮರೆಯಲ್ಲಿ ಅಡಗಿಕೊಂಡು ಕೇಳತೊಡಗಿದರು.

ರೂಪ್ಯಖುರನೆಂಬ ಚೋರನು ಜೂದಿನಲ್ಲಿ ಸಕಲ ಸಂಪತ್ತನೆಲ್ಲ ಸೋತು ಮನೆಗೆ ಹಿಂದಿರುಗುತ್ತಿದ್ದಾಗ, ಅಂಜನವಿದ್ಯೆಯಿಂದ ಅರಮನೆ ಪ್ರವೇಶಿಸಿ, ಅರಸನಿಗೆ ಬಡಿಸುತ್ತಿದ್ದ ಪಂಚಾಮೃತವನ್ನೆಲ್ಲ ಉಣ್ಣ ತೊಡಗಿದನು. ಆಹಾರವಿಲ್ಲದೆ ಅರಸು ಸೊರಗಿ ಬಡವಾದುದನ್ನು ನೈಮಿತ್ತಕರು ಕಂಡು, ಕಾರಣವನ್ನು ಪತ್ತೆಹಚ್ಚಿ, ರೂಪ್ಮಖುರನಿಗೆ ಶೂಲದ ಶಿಕ್ಷೆ ವಿಧಿಸಿದರು. ಅವನ್ನನ್ನು ನೋಡಬೇಕು ಎನ್ನುತ್ತ ಊರಕೇರಿಯ ಜನಗಳೆಲ್ಲ ಬಂದು “ಕೈವೊಯ್ದಟ್ಟಹಾಸದಿ ನಕ್ಕು ಕೋಳಿಯತತ್ತಿಯುರುಳಿಗೊಳಗಾಗಿನಿಂದಮಾಯ್ತೀಲಂಡನಿರವು” (೪ – ೨೧) ಎಂದು ತಾವೊಂದು ಕಥೆಯನ್ನು ಹೇಳಿದರು.

ದೊರೆಯ ಮಗಳನ್ನು ವಿದ್ಯಾಲಂಪಟನೆಂಬ ಜೋತಿಷಿ ಆಶಿಸಿ, “ಆಕೆಯನ್ನು ನದಿಗೆ ಬಿಟ್ಟಾಗ ಮಾತ್ರ, ಹಾಳಾಗುವ ಮನೆ ಉಳಿಯುತ್ತದೆ”ಯೆಂದು ಹೇಳುವನು. ಹಾಗೆ ಬಿಟ್ಟ ಆಕೆಯನ್ನು ಪಡೆಯಲು ನದಿಯ ದಂಡೆಯ ಮೇಲೆ ಕಾಯುತ್ತ ಕುಳಿತನು. ನಡುದಾರಿಯಲ್ಲಿ ಒಬ್ಬ ರಾಜಕುಮಾರ ತೇಲುತ್ತ ಬರುತ್ತಿದ್ದ ಪೆಟ್ಟಿಗೆಯನ್ನು ನೋಡಿ, ಅದರಲ್ಲಿದ್ದ ಕನ್ಯೆಯನ್ನು ತೆಗೆದು, ತಾನು ಬೇಟೆಯಲ್ಲಿ ತಂದಿದ್ದ ಹುಲಿಯನ್ನು ಆ ಪೆಟ್ಟಿಗೆಯಲ್ಲಿಯಿಟ್ಟು ತೇಲಿಬಿಟ್ಟನು. ವಿದ್ಯಾಲಂಪಟನು ಪೆಟ್ಟಿಗೆಯನ್ನು ಕಂಡು, ಹಿಗ್ಗಿನಿಂದ ತೆರೆಯಲು, ಅದರಲ್ಲಿದ್ದ ಹುಲಿ ಅವನನ್ನು ತಿಂದುಹಾಕಿತು. ರೂಪ್ಯಖುರನ ಬಾಳೂ ಸಹ ಇವನಂತಾಯಿತು ಎಂದರು. ಜಿನದತ್ತನು ಹೇಳಿದ ಮಂತ್ರದಿಂದ ರೂಪ್ಯಖುರ ವೈರಾಗ್ಯ ಹೊಂದಿದನು. ಅರಸು ರೂಪ್ಯಖುರನಿಗೆ ಸಹಾಯ ಮಾಡಿದ ಜಿನದತ್ತನನ್ನು ಶಿಕ್ಷಿಸಲು ಮುಂದಾದಾಗ ರೂಪ್ಯಖುರ ತಡೆಯಲು ಪಂಚಾಶ್ವರ್ಯ ಉಂಟಾದವು. ಅದನ್ನು ನೋಡಿ ಪದ್ಮೋದಯ ಮೊದಲಾದವರು ದೀಕ್ಷೆ ವಹಿಸಿದರು. ಅದರಿಂದ ನನಗೆ ಸಮ್ಯಕ್ತ್ವ ಉಂಟಾಯಿತು ಎನ್ನುವನು. ಎಲ್ಲರೂ ಅವನ ಮಾತಿಗೆ ಒಪ್ಪಿದರು. ಕಿರಿಯ ಹೆಂಡತಿ ಮಾತ್ರ ಒಪ್ಪಲಿಲ್ಲ. ಅರಸು ಮಂತ್ರಿಗಳು ‘ಬೆಳಗಾಲಿ, ಈ ಕುಂದಲತೆಗೆ ತಕ್ಕ ಶಿಕ್ಷೆ ವಿಧಿಸೋಣ’ ಎಂದರು. ಸುವರ್ಣಖುರನು ಇವನ್ನೆಲ್ಲ ಮರೆಯಲ್ಲಿ ನಿಂತು ಕೇಳಿ ನಗುತ್ತಿದ್ದನು.

ಮಿತಶ್ರೀ ಹೇಳಿದ ಕಥೆ :

ಜಿನದತ್ತೆಗೆ ಮಕ್ಕಳಿಲ್ಲದ್ದರಿಂದ ಮುನಿಗಳು ಆಹಾರ ಸ್ವೀಕರಿಸದೆ ಹೋಗುವರು. ಅವಳು ತನ್ನ ಗಂಡನಿಗೆ ತನ್ನ ಚಿಕ್ಕಮ್ಮ ಬಂಧುಶ್ರೀಯ ಮಗಳಾದ ಕನಕಶ್ರೀಯನ್ನು ತಂದು ಮದುವೆ ಮಾಡಿ ತಾನು ಜಿನಸೇವೆಯಲ್ಲಿ ತೊಡಗಿದಳು. ಗಂಡನೂ ಜಿನದತ್ತೆಯೊಂದಿಗೇ ಇರಹತ್ತಿದನು. ಇದನ್ನು ತಪ್ಪಿಸಲು ಬಂಧುಶ್ರೀ ಕಾಪಾಲಿಕನೊಬ್ಬನ ಬೇತಾಳನ ಮೂಲಕ ಜಿನಶ್ರೀಯನ್ನು ಕೊಲ್ಲಲ್ಲು ಕಳಿಸುವಳು. ಬೇತಾಳ ಆಕೆಯನ್ನು ಕೊಲ್ಲಲಾಗದೆ ದೋಷಿಯಾದ ಕನಕಶ್ರೀಯನ್ನೇ ಕೊಂದಿತು. ಬಂಧುಶ್ರೀ ಜಿನದತ್ತೆಯ ಮೇಲೆ ಅಪವಾದ ಹೊರಿಸಲು ನಗರದೇವತೆಗಳಿಂದ ಸತ್ಯ ಹೊರಬಿದ್ದಿತು. ಬಂಧುಶ್ರೀಯನ್ನು ಕತ್ತೆಯ ಮೇಲೆ ಮೆರೆಸಿದರು. ಇದನ್ನು ಕಂಡು ತನಗೆ ಸಮ್ಯಕ್ತ್ವ ಉಂಟಾಯಿತು ಎಂದು ಮಿತಶ್ರೀ ಹೇಳಿದಳು.

ಚಂದನಶ್ರೀ ಹೇಳಿದ ಕಥೆ:

ರುದ್ರದತ್ತನೆಂಬ ಬ್ರಾಹ್ಮಣ, ಗುಣಪಾಲನ ಮನೆಯಲ್ಲಿ ಬೆಳೆಯುತ್ತಿದ್ದ ಸೋಮೆಯನ್ನು ಉಪಾಯದಿಂದ ಮದುವೆಯಾಗಿ, ವಸುಮಿತ್ರೆಯೆಂಬ ಸೂಳೆಯ ಮಗಳಾದ ಕಾಮಲತೆಯಲ್ಲಿ ಕಾಲಕಳೆಯತೊಡಗಿದನು. ವಸುಮಿತ್ರೆ ಸೋಮೆಯನ್ನು ಕೊಲ್ಲಲು ಹೂಕುಂಡದಲ್ಲಿ ಸರ್ಪವೊಂದನ್ನಿಟ್ಟು ಕಾಮಲತೆಯ ಮೂಲಕ ಕಳುಹಿಸಿದಳು. ಅದನ್ನು ಸೋಮೆ ಮುಟ್ಟಲು ಹೂವಾಯಿತು. ಕಾಮಲತೆ ಮುಟ್ಟಲು ಹಾವಾಗಿ ಕಚ್ಚಿತು. ಸೋಮೆ ಕಾಮಲತೆಯ ವಿಷ ಕಳೆದು ದೀಕ್ಷೆ ತಳೆದಳು. ಅದನ್ನು ಕಂಡು ತನಗೆ ಸಮ್ಯಕ್ತ್ವವುಂಟಾಯಿತು ಎನ್ನುವಳು.

ವಿಷ್ಣುಶ್ರೀ ಹೇಳಿದ ಕಥೆ:

ವಿಶ್ವಭೂತಿಯು ಬೇಡಿತಂದ ಅಕ್ಕಿಯಲ್ಲಿ ಅಂಬಲಿಮಾಡಿ ಅಗ್ನಿಹೋತ್ರಿಗೆ, ಅತಿಥಿಗೆ, ತನಗೆ, ತನ್ನ ಹೆಂಡತಿಗೆ ಹಂಚುತ್ತಿದ್ದನು. ಪಿಹಿತಾಶ್ರವಮುನಿಗಳು ಬಂದಾಗ ಹೆಂಡತಿ ತನ್ನ ಪಾಲಿನ ಅಂಬಲಿ ದಾನ ನೀಡಲು ಪಂಚಾಶ್ಚರ್ಯವಾಯಿತು. ಮನೆಯ ಮುಂದೆ ಸುರಿದಿದ್ದ ರತ್ನರಾಶಿಯನ್ನು ಕಂಡು ಬ್ರಾಹ್ಮಣರು ದೊರೆಗೆ ದೂರುಕೊಟ್ಟರು. ರತ್ನರಾಶಿಯನ್ನು ದೊರೆಯ ಮುಂದೆ ಸುರಿಯಲು ಕೆಂಡದ ರಾಶಿಯಾಯಿತು. ಮುನಿಗಳು ದೊರೆಗೆ ಚತುರ್ವಿಧ ದಾನದ ಬಗ್ಗೆ ಹೇಳಲು, ಅವನು ದೀಕ್ಷೆವಹಿಸಿದನು. ಇದನ್ನು ಕಂಡು ತನಗೆ ರತ್ನತ್ರಯಸಂಜಾತವಾಯತೆನ್ನುವಳು.

ನಾಗಶ್ರೀ ಹೇಳಿದ ಕಥೆ:

ಮಣ್ಣುತಿಂದು ವಿಕೃತರೂಪ ಹೊಂದಿದ್ದ ಜಿತಶತ್ರುದೊರೆಯ ಮಗಳು ಮುಂಡಿಕೆ, ಮಣ್ಣುತಿನ್ನದ ವ್ರತಸ್ವೀಕರಿಸಿ ರೂಪಲಾವಣ್ಯ ಹೊಂದಿದಳು. ಅವಳನ್ನು ಭಗದತ್ತನು ಮದುವೆಯಾಗಬಯಸಿ ಏರಿಬರಲು, ಮುಂಡಿಕೆ ಉಪಸರ್ಗ ನಿವಾರಣೆಯಾಗುವವರೆಗೆ ಸನ್ಯಾಸ ಸ್ವೀಕರಿಸಿ ನದಿಯಲ್ಲಿ ಕುಳಿತಳು. ನಗರದೇವತೆಗಳು ಭಗದತ್ತನನ್ನು ಹಿಡಿತಂದು ಮುಂಡಿಕೆಯ ಚರಣಕ್ಕೆರಗಿಸಿದವು. ಇದನ್ನು ಕಂಡು ನನಗೆ ಸಮ್ಯಕ್ತ್ವವುಂಟಾಯಿತು.

ಪದ್ಮಲತೆ ಹೇಳಿದ ಕಥೆ:

ಬುದ್ಧಸಂಗನ ತಂದೆ ಬುದ್ಧವಾಸ. ಕಪಟತನದಿಂದ ವಿಮದಾಸನ ಮಗಳು ಪದ್ಮಶ್ರೀಯನ್ನು ತನ್ನ ಮಗನಿಗೆ ತಂದು ಕೊಂಡನು. ಒಮ್ಮೆ ಬುದ್ಧಗುರುಗಳು ಪದ್ಮಶ್ರೀಗೆ ‘ನಿನ್ನ ತಂದೆ ಜಿಂಕೆಯ ಹೊಟ್ಟೆಯಲ್ಲಿ ಹುಟ್ಟಿರುವುದನ್ನು ತ್ರಿಕಾಲಜ್ಞಾನದಿಮದ ತಿಳಿದು ಬಲ್ಲೆವು’ ಎನ್ನುವರು. ಸಂಘದ ಗುರುಗಳು ಒಮ್ಮೆ ಮನೆಗೆ ಬಂದಾಗ, ಅವರ ಕೆರವಿನ ಅಟ್ಟೆಯನ್ನು ಸೇರಿಸಿ ಅಡುಗೆ ಮಾಡಿ, ಅವು ಎಲ್ಲಿವೆ ಎಂಬುದನ್ನು ಕಂಡುಕೊಳ್ಳಿರಿ’ ಎನ್ನುವಳು. ಬೌದ್ಧರು ರಾಜನ ಬಳಿ ದೂರಿ ಅವಳನ್ನು ಊರು ಬಿಡಿಸಿದರು. ಬುದ್ಧಸಂಗನೂ ಅವಳ ಜೊತೆ ಹೊರಟು, ವಿಷದೂಟದಿಂದ ಸತ್ತುಹೋದನು. ಪದ್ಮದಾಸ ಪದ್ಮಶ್ರೀಯನ್ನು ಖಡ್ಗದಿಂದ ಇರಿಯ ಬರಲು ಅದು ಹೂಮಾಲೆಯಾಯಿತು. ಅದನ್ನು ನೋಡಿ ನನಗೆ ಸಮ್ಯಕ್ತ್ವವುಂಟಾಯಿತು ಎನ್ನುವಳು.

ಕನಕಲತೆ ಹೇಳಿದ ಕಥೆ:

ನಾಗದತ್ತನ ಮಗ ಉಮಯನು ಅರಸನ ಮನೆಗೆ ಕನ್ನ ಹಾಕಿ ಸಿಕ್ಕಿಬೀಳಲು ತಂದೆ ಅವನನ್ನು ಮನೆಬಿಟ್ಟು ಹೊರಹಾಕಿದನು. ತಂಗಿ ಜಿನದತ್ತೆಯ ಮನೆಗೆ ಬರಲು, ಅವಳೂ ಅವನನ್ನು ಸೇರಿಸಿಕೊಳ್ಳವುದಿಲ್ಲ. ಅವನು ಜಿನಮಂದಿರಕ್ಕೆ ಬಂದು ಶ್ರತಸಾಗರಮುನಿಗಳ ಹತ್ತಿರ ಹೆಸರು ಗೊತ್ತಿಲ್ಲದ ಹಣ್ಣು ತಿನ್ನದ ವ್ರತ ಸ್ವೀಕರಿಸಿ, ತಂಗಿ ಕೊಟ್ಟ ಹಣದಿಂದ ವ್ಯಾಪಾರಕ್ಕೆ ಹೊರಟನು. ಜೊತೆಯಲ್ಲಿದ್ದ ವ್ಯಾಪಾರಿಗಳು ಒಬ್ಬ ಮುದುಕಿ ಕೊಟ್ಟ ಹಣ್ಣು ತಿಂದು ಸತ್ತು ಹೋದರು. ಆದರೆ ಉಮಯ ಹೆಸರು ತಿಳಿಯದ ಆ ಹಣ್ಣುಗಳನ್ನು ತಿನ್ನದಿರಲು ಉಳಿದುಕೊಂಡನು. ಇದನ್ನು ನೋಡಿ ನನಗೆ ಸಮ್ಯಕ್ತ್ವವುಂಟಾಯಿತು.

ವಿದ್ಯುಲ್ಲತೆ ಹೇಳಿದ ಕತೆ:

ಸಮುದ್ರದತ್ತ ಅಶೋಕನ ಬಳಿ ಕುದುರೆಯ ಆಳಾಗಿ ನಿಂತನು. ಅವನನ್ನು ಅಶೋಕನ ಮಗಳು ಕಮಲೆ ಮೋಹಿಸಿದಳು. ಅವಳ ಹೇಳಿಕೆಯ ಮೇರೆಗೆ ಸಮುದ್ರದತ್ತ ಜಲಗಾಮಿನಿ ಆಕಾಶಗಾಮಿನಿ ಕುದುರೆಗಳನ್ನು ತನ್ನೂರಿಗೆ ತಂದು, ಆ ಊರ ದೊರೆ ಸುದಂಡನನಿಗೆ ಒಪ್ಪಿಸಿದನು. ಅದಕ್ಕೆ ಅವನು ತನ್ನ ರಾಜ್ಯದ ಅರ್ಧಭಾಗ ಮತ್ತು ತನ್ನ ಮಗಳನ್ನಿತ್ತನು. ಸುದಂಡನನು ವೃಷಭದಾಸನಿಗೆ ಅವನ್ನು ರಕ್ಷಿಸಿಕೊಂಡಿರುವಂತೆ ಹೇಳಿ ಕೊಟ್ಟನು. ಒಮ್ಮೆ ವೃಷಭದಾಸನು ಆ ಕುದುರೆಯನ್ನೇರಿ ವಿಜಯಾರ್ಧಪರ್ವತದ ಚೈತ್ಯಾಲಯ ಪ್ರದಕ್ಷಿಸಲು, ಆ ಕುದುರೆಯೂ ಹಾಗೆಯೇ ಮಾಡಿತು. ಒಮ್ಮೆ ಸುದಂಡನನ ಶತ್ರು ಜಿತಸತ್ಯ ಆ ಕುದುರೆಯನ್ನು ತಂದುಕೊಟ್ಟವರಿಗೆ ಅರ್ಧರಾಜ್ಯ ಎಂದು ಸಾರಿದನು. ಕುಂಡನು ಬ್ರಹ್ಮಚಾರಿವೇಷದಲ್ಲಿ ಬಂದು ಆ ಕುದುರೆಯನ್ನು ಕದ್ದೊಯ್ಯಲು, ಅದು ಅವನನ್ನು ಕೆಡವಿ ವಿಜಯಾರ್ಧಕ್ಕೆ ಹೊರಟುಹೋಯಿತು. ವೃಷಭದಾಸನಿಗೆ ಉಪಸರ್ಗವಾಗಿದೆ ಎಂದು ತಿಳಿದು, ಅಲ್ಲಿಯ ವಿದ್ಯಾಧರನೊಬ್ಬ ಆ ಕುದುರೆಯನ್ನೇರಿ ಬಂದು, ಅದನ್ನವನಿಗೆ ಒಪ್ಪಿಸಲು ಸುದಂಡರಾಜ ಮೊದಲಾದವರು ವೈರಾಗ್ಯಹೊಂದಿದರು. ಅದನ್ನು ನೋಡಿ ನನಗೆ ಸಮ್ಯಕ್ತ್ವವುಂಟಾಯಿತು.

ಕುಂದಲತೆಯ ಕಥೆ:

ಹೀಗೆ ಅಹರ್ದಾಸನು, ಅವನ ಹೆಂಡತಿಯರು ಹೇಳಿದ ಕಥೆಯನ್ನು ಮರೆಯಲ್ಲಿದ್ದುಕೊಂಡು ಅರಸ, ಮಂತ್ರಿ ಮತ್ತು ಕಳ್ಳ ಕೇಳಿ, ಸಂತೋಷ ಹೊಂದಿ, ತಮ್ಮ ತಮ್ಮ ಮನೆಗೆ ಹೋದರು. ಬೆಳಗಾದ ಮೇಲೆ ಅರಸ ಒಡ್ಡೋಲಗ ಹೂಡಿ “ಈ ಎಲ್ಲ ಕಥೆಗಳನ್ನು ಕುಂದಲತೆ ಒಪ್ಪದಿರುವುದು ಅಪರಾಧ, ಅವಳಿಗೆ ಶಿಕ್ಷೆಯಾಗಬೇಕೆ”೦ದನು. “ಆಕೆ ಒಪ್ಪದಿರುವುದಕ್ಕೆ ಕಾರಣಕೇಳಿ, ಶಿಕ್ಷಿಸು” ಎಂದು ಮಂತ್ರಿ ಹೇಳಲು, ಎಲ್ಲರೂ ಅಹರ್ದಾಸನ ಮನೆಗೆ ಬಂದು ಕೇಳಲು “ಹರಿಗೋಲ ಬಿಟ್ಟು ಹೊಳೆಯನ್ನು ದಾಟುವೆನೆಂದ ಹಾಗೆ, ಸಂಸಾರಸಾಗರವನ್ನು ತಪದಿಂದ ಮಾತ್ರ ದಾಟಲು ಸಾಧ್ಯ. ಇವರ ಸುಳ್ಳುಕಥೆ ಕೇಳಿ ಇಚ್ಛಾಮಿ ಎನ್ನಲು ಮನ ಒಪ್ಪಲಿಲ್ಲ “(೧೨ – ೨೧) ಎಂದಳು. ಅರಸು ಅವಳನ್ನು ಗೌರವಿಸಿ ದೀಕ್ಷೆ ಕೈಕೊಂಡನು. ಈ ಪ್ರಕಾರ ವೀರೇಶನ ಸಮವಸರಣದಲ್ಲಿ ಗೌತಮರು ಶ್ರೇಣಿಕರಾಜನಿಗೆ ಸಾತಶಯಮಪ್ಪ ಸಮ್ಯಕ್ತ್ವದ ಚಾರಿತ್ರವನ್ನು ಹೇಳಿದರು.

ಹೀಗೆ ಇದು ವೈರಾಗ್ಯ (ಸಮ್ಯಕ್ತ್ವ) ಉದಿಸಲು ಕಾರಣವಾದ ಧಾರ್ಮಿಕ ಕಥೆಗಳ ಸಂಗ್ರಹವಾಗಿ ರೂಪತಾಳಿದ ಕೃತಿ, ನಿಜ. ಆದರೆ “ಇದು ಮಂಗರಸನ ಪರಿಪಕ್ವ ಕೃತಿ. ಕವಿಯ ಕಥನಕೌಶಲ ಮೆಚ್ಚುವಂಥದು. ಉಪಕಥೆಗಳೂ ಮುಖ್ಯ ಕಥೆಯಲ್ಲಿ ಸೇರಿಕೊಂಡು ಇದೊಂದು ಕಥಾಮಾಲಿಕೆಯೇ ಆಗಿದೆ. ತಂತ್ರ ದೃಷ್ಟಿಯಿಂದಲೂ ಇದೊಂದು ಆಕರ್ಷಕ ಕೃತಿಯೆಂದು ಪರಿಗಣಿತವಾಗಿದೆ” (ಬಿ.ಬಿ. ಮಹೀಶವಾಡಿ, ಸಮ್ಯಕ್ತ್ವ ಕೌಮುದಿ, ಪ್ರಸ್ತಾವನೆ) ಎಂಬ ಮಾತನ್ನು ಮಾತ್ರ ಒಪ್ಪಲು ಸಾಧ್ಯವಿಲ್ಲ. ಏಕೆಂದರೆ ಕಥಾತಂತ್ರ ಮೊದಲಾದವು ಮೂಲಕರ್ತೃವಿಗೆ ಸಲ್ಲಬೇಕೇ ಹೊರತು ಅದನ್ನು ಮುಂದೆ ಅನುಸರಿಸಿದವರಿಗಲ್ಲ. ಆ ಸಿದ್ಧಮಾದರಿಯಲ್ಲಿಯೇ ಮಂಗರಸ ತನ್ನ ಕೃತಿ ರಚಿಸಿರುವದರಿಂದ ಅದರಲ್ಲಿ ಇವನ ಹೆಚ್ಚಳವೇನೋ ಕಾಣುತ್ತಿಲ್ಲ. ಈ ಮಾತು ಅವನ ಎಲ್ಲ ಕೃತಿಗಳಿಗೂ ಅನ್ವಯಿಸುತ್ತದೆ. ಆದರೆ ಮಂಗರಸನ ವಾಕ್‌ಪ್ರಗುಂಪನ, ಅವನ ಕೌಮುದಿಯ ಮಾತು ಮಾತ್ರ ಮೆಚ್ಚುವಂತಿವೆ. ಅವನು ತನ್ನ ಕಾವ್ಯದ ಸೊಗಸನ್ನು ಕುರಿತು “ ಅಸಿಯೊಳೊಡನಾಟದಂತೆ, ಮಾವಿನ ತನಿವಣ್ಣರಸದಂತೆ, ಅಮೃತದಂತೆ ಅತಿರುಚಿಯ ಪಡೆದುದು” (ಸಮ್ಯಕ್ತ್ವಕೌಮುದಿ ೧ – ೧೧). “ಕೋಗಿಲೆಯ ನವಪಂಚಮಂಬೊರೆದ ನುಣ್ಚರಂ ಪ್ರಭುರಾಜ ಮಂಗರಸನೊರೆದ ಕೌಮುದಿಯ ಮಾತು” (ಸಮ್ಯಕ್ತ್ವಕೌಮುದಿ ೧ – ೧೦) ಎಂಬ ಮಾತುಗಳು ಈ ದೃಷ್ಟಿಯಿಂದ ಸತ್ಯವಾದವು ಎನ್ನಿಸಿವೆ.