ಶ್ರೀಮದಮರಮಣಿಮಕುಟರಂಜಿತರತ್ನ | ಧಾಮಾಂಬುಧಾರಾಧೌತ
ತಾಮರಸಾಂಘ್ರಿಯುಗಲ ವೀರನಾಥನು | ದ್ದಾಮ ಸುಖವನೀವುದೆಮಗೆ || ೧ ||

ಶ್ರೀಮದವನೀಪಾಲಮಸ್ತಕಚೂ | ಡಾಮಣಿ ಪದಪಂಕಜಾತ
ಭಾಮಾಜನಚಿತ್ತಜಾತನೊಪ್ಪಿದನು | ದ್ದಾಮನುಜ್ವಲಕೀರ್ತಿಯುತನು || ೨ ||

ರುಚಿರತೆವಡೆದ ಸಿವಂಕರನಗರಿಯ | ರಚನೆಯ ನೋಡಬೇಕೆಂದು
ಸುಚರಿತ್ರನು ನಿರವಿಸೆ ಕೇಳಿ ಬಳಿಕಾ | ಖಚರನಂತೆಗೆಯ್ವೆನೆಂದು || ೩ ||

ಪಿಂದಿಕ್ಕಿ ನಡೆಪಿ ತದ್ಧೀರೋದ್ದಾತನ | ಮಂದೇತರಹರುಷದೊಳು
ಮುಂದೆ ತಾ ನಡೆದು ಬಿಜ್ಜಾಧರನಾಪೊಳ | ಲಂದವನಂದುತೋಱಿದನು || ೪ ||

ಕೇರಿ ಕೇರಿಯ ಸಿಂಗರದ ಸಿರಿಯ ತೋಱು | ತಾ ರತಿಪತಿಗಿಕ್ಕೆಯಾಗಿ
ರಾರಾಜಿಪ ಪಣ್ಯವೀಧಿಗೆ ತಂದು ಮ | ತ್ತಾ ರಾಯನ ಹೊಗಿಸಿದನು || ೫ ||

ಅಗಂಜಚಕ್ರೇಶನ ರಾಜಧಾನಿಯ | ನಂಗನ ಸಕಲಸಾಮ್ರಾಜ್ಯ
ಅಣಗಸಂಭವನ ಬೀಡುಂದಾಣವೆನಲು ಬೆ | ಡಂಗಾದುದಾಪಣ್ಯವೀಧಿ || ೬ ||

ಕಾವನ ಕೀರ್ತಿಲತಾಮಂಟಪಗಳೊ | ಕಾವನ ಕೃತಕಾದ್ರಿಗಳೊ
ಕಾವನ ಪುಣ್ಯದೊಟ್ಟಿಲೊಯೆನಲೊಪ್ಪಿದೊ | ವಾ ವಾರಸತಿಯರ ಗೃಹವು || ೭ ||

ಈಸು ಚಲ್ವಿಕೆಯುಂಟೆಮ್ಮೊಳಗಿರ್ಪ ವಿ | ಲಾಸಿನಿಯರ ಕುಚವೆಂದು
ವಾಸವನೊಳು ಪೇಳ್ವವೋಲುಪ್ಪರೀಕೆಯ | ಭಾಸುರಕಳಶಮೊಪ್ಪಿದುದು || ೮ ||

ಹರನ ವರದಿ ಹಲರೆದೆಯೊಳಂಗೋದ್ಭವ | ನಿರೆ ರತಿ ತಾನೊರ್ವಳೆಂದು
ಪಿರಿದಪ್ಪ ಬಹುರೂಪುವಡೆದವೋಲಾವಾರ | ತರುಣಿಯರುಗಳು ತೀವಿಹರು || ೯ ||

ಚಿಕ್ಕ ಹರೆಯ ಕಡು ಚಲುವಿಕೆ ಸಲೆಸಿರಿ | ಚೊಕ್ಕಳಿಕೆಯ ಬಲ್ಲವಿಕೆ
ಮಿಕ್ಕ ಸುಸಿಲ ಸುಭಗತೆಯಿಂದಲ್ಲಿಯ | ಕಕ್ಕಸಕುಚೆಯರೊಪ್ಪಿದರು || ೧೦ ||

ತೋರದುರುಬು ದುಂಬಿಗುರುಳರನೇಱಿಲ | ದೋರೆವಣ್ದುಟಿವೆಱೆನೊಸಲ
ಕಾರಮಿಂಚಲರ್ಗಣ್ಗಡೆಯೆನಲೆಸೆವ | ವಾರಾಂಗನೆಯರೊಪ್ಪಿದರು  || ೧೧ ||

ನಿಡಿಯಲರ್ಗಣ್ಣ ಬೆಳುತಿಗೆಗಣ್ಣ ಬ | ಕ್ಕುಡಿತೆಗಣ್ಣೆಳನಗೆಗಣ್ಣ
ಎಡೆನಿರಿದೆವೆಗಣ್ಣಮೀಂಬೊಣರ್ಗಣ್ಗಳ | ಕಡು ನೀರೆಯರೊಪ್ಪಿದರು  || ೧೨ ||

ಚಿತ್ತಜನಾರಾಧಿಸುವ ನೇರಾಣಿಯ | ಪುತ್ಥಳಿಯೆಂಬ ಮಾಳ್ಕೆಯೊಳು
ಒತ್ತಿಗೆ ನಿಂದು ರನ್ನದ ತೊಡವಿಟ್ಟ | ವೃತ್ತಕುಚೆಯರೊಪ್ಪಿದರು  || ೧೩ ||

ಸಲ್ಲಲಿಂತಾಗಿಯರಕ್ಷಿ ದೀಧಿತಿಯೆಂಬ | ಬೆಳ್ಳಾರವ ಬೀಸುತವೆ
ಎಲ್ಲಾ ವಿಟಮೃಗಂಗಳ ಬೇಂಟೆಯಾಡುವನಾ | ಪುಲ್ಲಾಸ್ತ್ರನೆಂಬ ಬಿಲ್ಗಾರ  || ೧೪ ||

ಪುರದ ಚಲ್ವಿಕೆಯ ನೋಡಲು ಬಂದ ಪರದೇಶ | ದರಸುಮಕ್ಕಳು ತಂತಮ್ಮ
ಸಿರಿಯನೊಪ್ಪಿಸಿ ಗಂಡುದೊಳ್ತಾಗುತಾ ವಾರ | ತರುಣಿಯರೊಳು ತಿಱಿತಹರು  || ೧೫ ||

ಉಯ್ಯಲನಾಡುತುಂಬ ಸ್ವರದಿಂದೊರ್ವ | ಳೊಯ್ಯಲುಲಿವ ಸವಿವಾಡು
ರಯ್ಯಮಾದುದು ರತಿಪತಿಗೆ ಕೊಡುವ ಬಲು | ಹುಯ್ಯಲಗೂಗೆಂಬಂತೆ  || ೧೬ ||

ಒಪ್ಪದೊಳುಯ್ಯಲನಾಡುತಾಳಾಪಿಸು | ತುಪ್ಪಡಿಸುವ ದಂಪತಿಗಳು
ಅಪ್ಪಿ ಝೇಂಕರಿಸಿಯಾಗಸಕೇಳುವಳಿಗಳ | ತಪ್ಪದೆ ಪೋಲ್ತರಂದಲ್ಲಿ  || ೧೭ ||

ಕಾಮನೆ ದೈವಕಕೋಕಮೆ ನಿಗಮ | ವ್ಯಾಮೋಹವೆ ಮುಕ್ತಿಯೆಂದು
ತಾಮರೆಮೊಗ್ಗೆಮೊಲೆಯ ಕೋಮಲೆಯರಿ | ಗಾ ಮಾನಿನಿಯರೊಪ್ಪಿದರು  || ೧೮ ||

ಬಾಲೆಯೊರ್ವಳ ಕಿವಿಗೆಂದೊರ್ವವಿಟನತಿ | ಲೀಲೆಯಿಂದವೆ ತಂದವೀಯೆ
ಸಾಲವನಾಂತು ಬರೆದು ಕೊಟ್ಟು ಸಾಧನ | ದೋಲೆಯನನುಕರಿಸಿದುದು  || ೧೯ ||

ಮೊಲೆಗೆ ಸೋರೆಯ ಬಡಬಾಸೆಗೆ ತಂತಿಯ | ಲಲಿತಮಪ್ಪಿಂಚರಕದಱ
ಉಲುಪಿನೊಪ್ಪುವ ನೋಡುವಂದದಿನಾವಳೊರ್ವ | ಲಲನೆ ವೀಣೆಯ ನುಡಿಸಿದಳು  || ೨೦ ||

ತೊಡವಿಟ್ಟೊರ್ವ ರಮಣಿ ಕುಳ್ಳಿರ್ದು ಕ | ನ್ನಡಿಯ ನೋಡಲಾಪ್ರತಿಬಿಂಬ
ಕಡುಸೊಗಸಿತು ಚಂದಿರನ ತೊಡೆಯನೊಲಿ | ದಡರ್ದ ರೋಹಿಣಿಯೆಂಬಂತೆ  || ೨೧ ||

ಮುಡಿದ ಹೂ ಬಾಡಲೀಡಾಡಲೊರ್ವಳು ತನ್ನ | ಕಡುಚಲ್ವಿಕೆಗೆ ನಿನ್ನ ರೂಪು
ಪಡಿಯಾದೊಡೆತ್ತೆಂದು ರತಿಯೊಳು | ಮುಂಡಿಗೆ ಇಡುವಂತೆ ಕಣ್ಗೊಪ್ಪಿದಳು  || ೨೨ ||

ಅರಳ್ದ ಕೆಂದಾವರೆಗೆಱಗುತೆಱಗುವೆಳೆ | ಯಳಿಗಳಿವೆಂಬ ಮಾಳ್ಕೆಯೊಳು
ಜ್ವಲಿಸುವ ಹರಿನೀಲದ ತಿರಿಕಲ್ಲೊರ್ವ | ಲಲನೆಯ ಕರದೊಳಾಡಿದವು  || ೨೩ ||

ಒಂದಿಂದ್ರಿಯಕೆ ನಿರ್ಜೀವಿ ಕಂತುಕ ಪೋ | ಗೆಂದು ಪೊಯ್ದಡೆ ಪೋದುದಿಲ್ಲ
ಸೌಂದರಿಯರ ಪಂಚೇಂದ್ರಿಯ ಸುಖವುಂ | ಡೊಂದಿನಿಸಗಲ್ವವರಾರು  || ೨೪ ||

ಲೋಲಾಕ್ಷಿಯ ಕುಚದೊಳಗೊರ್ವ ವಿಟನತಿ | ಲೀಲೆಯಿಂದಿಡಲು ಕಂಠಿಕೆಯ
ಕೀಲದೇವರ ಪೂಜಿಸಿ ಕಂತು ಮಂದಾರ | ಮಾಲೆಯನಿಟ್ಟಂತಾಯ್ತು  || ೨೫ ||

ಮೃಗಶಾಬಾಂಕಮುಖದ ಮುಗ್ಧೆಯೊರ್ವಳ | ನಗೆಗಣ್ಗೊಗೆದಚ್ಚಗದಿರ
ಸೊಗಸುಗೊನರು ಜೊನ್ನವಕ್ಕಿವಱಿಗಳಲ್ಲಿ | ಪಗಲುಣಲೆಂದೆಸಗುವವು  || ೨೬ ||

ಪರಭೃತವಾಣಿಯೊಳೊರ್ವಳು ತಾ ಸಲಹುವ | ತರುಣ ಜಾತಕಪಕ್ಷಿ ಪಸಿಯೆ
ಕರುಣದಿ ಮೇಘರಂಜಿಯ ಪಾಡಿ ಸುರಿವ ಬೆ | ಳ್ಸರಿಯ ಕುಟುಕನಿತ್ತಳಾಗ || ೨೭ ||

ತಡೆಯೆ ನಿಲ್ಲದೆ ಪೋಪಿನಿಯನ ಬಳಿಬಂದು | ಕಡು ಬಳಲ್ದವಳ ನಿಟ್ಟುಸುಱು
ಒಡಲ ಧೈರ್ಯವ ಪೊಱಗಡೆಗಸವಸದಿ ಪೊ | ತ್ತಡಕುವಂದದವೋಲೊಪ್ಪಿದುದು  || ೨೮ ||

ಅಸುಗೀಶನುಳಿದನೆಂದೊರ್ವ ಕೆಳದಿ ಬಂ | ದುಸುರಲು ಕೇಳ್ದೊರ್ವಳಾಸ್ಯ
ನಸು ಬಾಡಿತು ಧೂಳಿಂ ದೂಸರಮಾದ | ಮಿಸುನಿಗನ್ನಡಿಯೆಂಬಂತೆ  || ೨೯ ||

ಹರಣದೆಱೆಯ ಬರ್ಪನೊ ಬಾರನೊಯೆಂದು | ತರಳೆಯೊರ್ವಳು ಶಂಕೆಯಿಂದ
ಕೊರಳ ಕಟ್ಟಾಣಿಮುತ್ತಿನ ಮಣಿಸರ ಕಿತ್ತು | ಹರಳ ತೆಗೆದು ನೋಡಿದಳು  || ೩೦ ||

ತಡೆದಿನೆಯನ ತಂದೀಯೆಂದು ದೈನ್ಯವ | ನುಡಿದಕ್ಕನಡಿದಳಕೆಱಗಿ
ಕಡುನೀರೆ ಕಣ್ಗೆಡ್ಡಮಾದಳು ಬಲ್ಮೊಲೆ | ಮುಡಿಯಭಾರಕೆ ಬಾಗಿದಂತೆ  || ೩೧ ||

ತರುಣಿಯೊರ್ವಳು ಚಿಂತೆಯಿಂ ನಿಂದು ತಲೆವಾಗಿ | ಸುರಿವ ಕಣ್ಣಿರ ಧಾರೆಗಳು
ಕರಮೆಸೆದವು ಕಾವನೇಱಿಸಿ ಪಿಡಿದಿ | ರ್ದರಲ್ವಿಲ್ಲಮಳ್ವೆದೆಯಂತೆ || ೩೨ ||

ಮುನ್ನುಂಡ ಮೋಹರಸಾಜೀರ್ಣವ್ಯಾಧಿ | ತನ್ನೊಡಲೊಳಗುಬ್ಬರಿಸಿ
ಉನ್ನತಮಪ್ಪಮರ್ದುಂಡ ಮಾಳ್ಕೆಯೊಳೊರ್ವ | ಚನ್ನೆ ಮುನಿದಳೋಪನೊಡನೆ  || ೩೩ ||

ರನ್ನದ ಮತ್ತವಾರಣಕೆ ಮೈಯಿತ್ತೊರ್ವ | ಚನ್ನೆಯತ್ಯಂತ ಶ್ರಮವ
ಬಿನ್ನಾಣದಿಂದಾಱಿಸಿಕೊಳುತಿರ್ಪಳ | ನುನ್ನತಗುಣಿ ಕಂಡನಾಗ  || ೩೪ ||

ಸುಸಿಲಕಯ್ಯೆಡೆಯೊಳಾಕೆಯಮೆಯ್ಯೊಳ ಬೆಮ | ರೊಸರಿಸಿತು ಸುಖಶರಧಿಯೊಳು
ಒಸೆದು ತೇಂಕಾಡ ಪತ್ತಲು ತಜ್ಜಲಬಿಂದು | ಬಸಿವಂತೆ ಕಣ್ಗೆಡ್ಡಮಾಗಿ  || ೩೫ ||

ಮಸೆದುಗುರ್ವೊಯ್ಲ ಕೆಂಗಲೆಮದವತಿಗೆ ರಂ | ಜಿಸಿದವು ಕುಚಕಲಶಗಳು
ಕುಸುಮಕೋದಂಡನೆಱಗುವ ಗಜಕುಂಭಕಂ | ಕುಶದೇಱುಪೊಳೆವಂದದೊಳು  || ೩೬ ||

ಅಸುಗೀಶನಧರಾಮೃತವರ್ಣವಡಱಿತೊ | ಕುಸುಮಶರನ ಸತ್ಕೀರ್ತಿ
ಮುಸುಕಿದುದೋಯೆನೆ ಮುಗುದೆಯೊಳ್ದೊಡೆಗೆ ಬೆ | ಳ್ಪೆಸೆದುದು ಸುರತಾಂತ್ಯದೊಳು || ೩೭ ||

ವಿರಹಿಗಳೆರ್ದೆಗೆ ಮೊನೆಯನಿಕ್ಕಲರುಣಾಂಬು | ಪೊರೆದ ಕಾವನ ಖಡ್ಗದಂತೆ
ಸರಸಿಜಾಕ್ಷಿಗೆ ತತ್ಸುರತಾಂತ್ಯದ ಕೆಂಪು | ತೊಱೆದ ಕಣ್ಗಡೆಗಳೊಪ್ಪಿದವು || ೩೮ ||

ಮತ್ತೊಂದು ಪಳುಕಿನ ಪಟ್ಟಶಾಲೆಯೊಳ | ತ್ಯುತ್ತಮ ರೂಪಜೀವೆಯರು
ಮೊತ್ತದಿ ಕುಳಿತಾ ಸೂಳೆವಿನ್ನಾಣವ | ಬಿತ್ತರಿಸಿದರಿಂತೆಂದು || ೩೯ ||

ಒತ್ತೆಯ ಕಿಱಿದಿತ್ತನೆಂದು ಬಂದೋಪನ | ಚಿತ್ತಕೆ ಖತಿಯ ಪುಟ್ಟಿಸದೆ
ಮತ್ತೆ ಸದ್ಗುಣದೋಱುವವಳಿಗೆ ಹಣ ಕೈಯ | ಹತ್ತಿದ ಚಿಂತಾರತ್ನ  || ೪೦ ||

ಹಣವ ಹಿರಿದನಿತ್ತನಿವನೆನುತವೆ ಮನ | ದಣಿಯದೆ ತನ್ನ ಲೋಭತೆಯ
ಗುಣದಪ್ಪದೆ ಗೂಢನಾಗನವೊಲು ಜಾತಿ | ಗಣಿಕೆಯರುಗಳಿರಬೇಕು  || ೪೧ ||

ಹರದನ ಹೇಮತಾಟಕನ ವಿದ್ವಾಂಸನ | ಅರಸಿನ ತೇಜವಡೆದನ
ದುರುಳನ ಜೂಜುಗಾಱನ ಸಿರಿಯನೆ ನೋಡಿ | ಕರೆವರೆ ಜಾತಿವೇಶಿಯರು || ೪೨ ||

ಆವನಾಗಲಿ ಹಣವುಳ್ಳವನೆ ದಾನಿಯೆ | ಭಾವಜನಿಂದುಜಯಂತ
ದೇವೇಂದ್ರನವನ ಚಿತ್ತಕೆ ನೋವ ತಾಱದೆ | ಭಾಮೆಯರುಗಳಿರಬೇಕು  || ೪೩ ||

ಸಿರಿಯ ಚಲ್ವಿಕೆ ಜಾಣುಜವ್ವನ ಕೊಡುಗೈ | ಪಿರಿದಾದವನಿಗೊಲಿದವನ
ಕರಮೆ ಕೈವಶಮಾಡಿಕೊಂಡಾಕೆಗೆ ಪೂರ್ವ | ದುರುಸುಕೃತದ ಫಲವೈಸೆ  || ೪೪ ||

ಇಂತತಿ ಶೋಭಾಕರಮಾದ ವೇಶ್ಯಾ | ಕಾಂತೆಯರುಗಳ ನುಣ್ನುಡಿಯ
ಸಂತಸದಿಂ ಮನವಾರೆ ಕೇಳುತ ಭೂ | ಕಾಂತನೆಯ್ದಿದ ನಗೆಯಿಂದ  || ೪೫ ||

ಅವರ ಶೃಂಗಾರವನವರ ವಿಲಾಸವ | ನವರೇಱು೦ಜವ್ವನವ
ಅವರ ಕೈತವಕವನವರ ಜಾಣ್ಮೆಯನೋಡು | ತವನಿಪ ನಡೆತಂದನಾಗ  || ೪೬ ||

ಸೂಳೆಗೇರಿಯ ಪೊಱಮಟ್ಟಾ ಪೊಳಲ ವಿ | ಶಾಲವೆನಿಪ ಸೊಬಗತೆಯ
ಲೀಲೆಮಿಗಲು ನೋಡುತ ಬಂದನಾಭೂ | ಪಾಲಶೇಖರನಾಕ್ಷಣದೆ  || ೪೭ ||

ಮತ್ತಾ ಸೂಳೆಗೇರಿಯ ಶೃಂಗಾರದ | ಬಿತ್ತರವ ಪೊಗಳುತ್ತವೆ
ಚಿತ್ತಸಂಭವರೂಪರಾರಾಜಾಲಯ | ದತ್ತ ನಡೆಯಲೆಣಿಸಿದರು  || ೪೮ ||

ಅನಿತಱೊಳಾ ಶ್ರೀಪಾಲರಾಜೇಂದ್ರನ | ನನುರಾಗದಿಂದಾಖಗನು
ಅನುಜೆ ಜಯಾವತಿಯಿರ್ದೆಡೆಗೆಯ್ದಿಸ | ಲನುಮಾನಿಸಿದನಾತುರದಿ  || ೪೯ ||

ನವರತ್ನರಂಜಿತಮಪ್ಪ ವಿಮಾನದೊ | ಳವನಿಭರ್ತಾರನನು
ಸವಿನಯದಿಂದೆಯ್ದಿಸಿಯರವಿಂದನಾ | ಯುವತಿಯಿರ್ದೆಡೆಗೆ ಪಾರಿದನು  || ೫೦ ||

ವಾಮೇತರವಾಯುವಿಂ ಚೈತ್ರನಾವನ | ಭಾಮಿನಿಯೆಡೆಗೆಯ್ದುವಂತೆ
ವಾಮಲೋಚನೆಯಿರ್ದೆಡೆಗಲರ್ವಟ್ಟೆಯಿಂ | ದಾ ಮಹಿಮನು ಬಂದನಾಗ  || ೫೧ ||

ಆ ಪವಮಾನಪಥದೊಳಾಖಗನಾ | ಶ್ರೀಪಾಲರಾಜಶೇಖರನು
ಆ ಪೆಣ್ಮಣಿಯಿರ್ದ ಸುರುಚಿರಹರ್ಮ್ಯತ | ಳೋಪಮಕೆ ತಂದನಾಗ  || ೫೨ ||

ಸುದತಿ ರೋಹಿಣಿದೇವಿಯಿರ್ದ ವಿಮಾನಕೆ | ಪದೆದು ಪೂಣೇಂದು ಬಪ್ಪಂತೆ
ಮದವತಿ ಮೈಮರೆದಿರ್ದ ಮಾಡದ ತುತ್ತ | ತುದಿಯೆ ಮುಟ್ಟಿವರಿದನಾನೃಪತಿ || ೫೩ ||

ಇಂದುಮುಖಿಗೆ ಜೀವನ ಬರ್ಪತೆಱದಿನಾ | ಕಂದರ್ಪನಿಭ ಬರುತಹನೆ
ಎಂದು ಜಯಾವತಿಯಿರ್ದ ಹರ್ಮ್ಯದ ಮೇಲೆ | ನಿಂದು ನೋಡಿದರಾಳಿಯರು  || ೫೪ ||

ಒಲಿದು ನೋಡುವ ಭಾವೆಯರಕ್ಷಿರುಚಿ ಗಂಡು | ಗಲಿಯ ದಿಬ್ಬಣಕಿದಿರ್ವಂದು
ಮೊಲೆ ಮೊಗ ಕಳಶಕನ್ನಡಿಯೆತ್ತಿ ಶುಭ್ರತಂ | ಡುಲವ ನೀಡುವ ತೆಱನಾಯ್ತು  || ೫೫ ||

ಸಿರಿಮೊಗಗಳನೆತ್ತಿನೋಡುವ ಸಖೀಜನ | ಕರುಮಾಡದ ಮೇಲಡರ್ವ
ಅರಸೆಸೆದನು ಚಂದ್ರಲೋಕಕೆ ಪೋಪಿಂ | ದಿರೆಯಕುಮಾರನಂದದೊಳು || ೫೬ ||

ಬರುತಾಕರುಮಾಡದ ನೆಲೆಯೊಳು ಹೊ | ಕ್ಕರಲಂಬಿಗೀಡಾಗಿ ಬಿಳ್ದು
ಪೊರಳ್ವಜಯಾವತಿದೇವಿಯನಾ ಭೂ | ವರ ನಡೆನೋಡಿದನಾಗ  || ೫೭ ||

ಗರುಡಪಂಚಾಕ್ಷರಗೇಳ್ದುರಗನ ವಿಷ | ಹರಿವಂತಿನೆಯಬಂದನೆಂದು
ತರುಣಿಯೊರ್ವಳು ಪೇಳಲು ಕೇಳುತಾಕೆಯ | ವಿರಹಗ್ರಹ ಹಾಱಿದುದು  || ೫೮ ||

ನರನಾಥಚಂದ್ರ ನೂತನ ರವಿನಿಭತೇಜ | ಬರೆ ವಿರಹದೊಳೊಱಗಿರ್ದ
ಸರಸಿಜಮುಖಿ ಕೈರವನೇತ್ರನ ತೆಱೆ | ದುರು ಮುದದಿಂ ನೋಡಿದಳು  || ೫೯ ||

ವಾರಿಜದೊಳಗಾಱಡಿಜೋಡುಮಲಗಿರ್ದು | ತೀರಿದ ನಿದ್ದೆಯೊಳೆದ್ದು
ಚಾರುಪಕ್ಷವ ಬಿದಿರ್ವಂತೆ ಕಣ್ಬೊಣರೆವೆ | ನೀರೆದೆಗೆಯಲೊಪ್ಪಿದವು  || ೬೦ ||

ಮೀಂಗಳಮಱಿದುಂಬಿಯ ಜೊನ್ನವಕ್ಕಿಯ | ತಿಂಗಳ ಕದಿರ ಕೈರವದ
ಅಂಗಜಪಿಡಿದ ಸನ್ಮೋಹನಾಸ್ತ್ರವ ಗೆಲ್ದೊ | ವಂಗನೆಗೆಸೆವಕ್ಷಿಗಳು  || ೬೧ ||

ಮೊದಲ ನೋಟದೊಳೆನ್ನ ಬಗೆವೊಕ್ಕರೂಪನ | ಹೃದಯದ ವಿರಹಾಗ್ನಿಯಳುರೆ
ಬೆದರಿ ಪೊರಟು ನಿಂದುದೊ ಕಣ್ಣಮುಂದೆಂದು | ಸುದತಿ ನೋಡಿದಳು ಭೂವರನ  || ೬೨ ||

ತಲೆಯೆತ್ತುವ ಮೆಯ್ಯಪುಳಕಮುಣ್ಮುವ ಸೇದೆ | ಯಲರ್ಗಣ್ಗಳಾನಂದಾಶ್ರು
ಅಲುಗದೆವೆಯ ನೋಟವಾ ಕುವರನ ಕಂಡು | ಲಲನಾಮಣಿಗೊಪ್ಪಿದವು  || ೬೩ ||

ನೋಡುವಳೊಲಿದು ನೋಡಿದ ಬಳಿಕಾನಂದ | ಮಾಡುವಳಾನಂದಮಾಡಿ
ಕೂಡಲೆ ಲಜ್ಜಿಪಳು ಲಜ್ಜಿಸಿ ಬಾಗುವಳು | ಗಾಡಿಕಾಱನ ಕಾಣುತವಳು  || ೬೪ ||

ಒಸಗೆ ರಾಣೀವಾಸಕಾನಂದ ಬಗೆಗೆ ಸಂ | ತಸ ಸಖಿಯರ್ಗೆ ಕಣ್ಬೊಲ
ಅಸಿಯಳ್ಗತಿವರ್ತಿಸಿಂತಾ ನೃಪನಿಂ | ಶಶಿಗಂಡಶರಧಿಯಂತೆ || ೬೫ ||

ಬಳಸಿನೋಡುವ ಬಾಲೆ ಸಖಿಯರ ಕಣ್ಣ | ಬೆಳಗುಮಸುಕೆ ಭೂವರನು
ತೊಳಗಿದನಂಗಜನೃಪನನೀಪಂಜರ | ದೊಳು ಸೆರೆಯಿಟ್ಟ ಮಾಳ್ಕೆಯೊಳು  || ೬೬ ||

ಬಳಿಕ ವಿಮಲವಾಹನ ಬೆಸಗೊಳೆ ನೃಪ | ತಿಲಕ ತನ್ನಯ ಪುರದಿಂದ
ತಳರಿದವಸ್ಥೆಯೆಲ್ಲವನುಸುರಿದನಾ | ಬೆಳಗಾಗುವ ಪರಿಯಂತ  || ೬೭ ||

ಬಾಡುವ ತಾರಗೆ ಬೆಳಗುಗುಂದಿದ ಶಶಿ | ಓಡುವಿರುಳಗಲಿಪ
ಕಾಡಹಕ್ಕಿಗಳುಲಿದವು ಮುಮ್ಮೊಗದೊಳು | ಮೂಡುವ ಮುನ್ನೇಸರೊಡನೆ || ೬೮ ||

ಆ ಕಾದಲನವಳೆಡೆಗೆಯ್ದಿದವೊಲು | ಕೋಕಂಗಳೊಡಗೂಡಿದವು
ಆ ಕಾಮಿನಿ ಕಣ್ದೆಱೆದಂತೆಯಲರ್ದವು | ಕೋಕಕನಕದ ನಿಟ್ಟೆಸಳು  || ೬೯ ||

ಮಸಕದಿ ಕಾಳರಕ್ಕಸನ ಪರಸತಿ | ಎಸೆವ ಕುಂಡಲಿಕಕಾರ್ಮುಖದ
ವಿಕಸಮಾಯ್ತಾನೇಸರು ಶರತತಿಯೆನೆ | ಮುಸುಕಿತು ಕಿರನ ಭೂತಳವ || ೭೦ ||

ಧರಣೀರಕ್ಷಣೋಪಕ್ಷದಕ್ಷಿಣಭುಜಬಲ | ನುರುತರ ಕೀರ್ತಿಪತಾಕ
ಸುರಭಿಶರಾಸನದೃಶನೊಪ್ಪದನಾ | ನರನಾಥಕುಲಶೇಖರನು  || ೭೧ ||

ಇದು ಭಾವಕಜನ ಕರ್ಣವಿಭೂಷಣ | ಮಿದುರಸಿಕರ ಚಿತ್ತದೆಱಕ
ಇದು ವಾಣೀಮುಖಮಾಣಿಕ್ಯಮುಕುರ | ಮತ್ತಿದು ಶೃಂಗಾರಸುಧಾಬ್ಧಿ  || ೭೨ ||

ಒಂಬತ್ತನೆಯ ಸಂಧಿ ಸಂಪೂರ್ಣಂ