ಶ್ರೀಮದಮರಮಣಿಮಕುಟ ರಂಜಿತರತ್ನ | ಧಾಮಾಂಬುಧಾರಾಧೌತ
ತಾಮರಸಾಂಘ್ರಿಯುಗಲ ವೀರನಾಥನು | ದ್ದಾಮ ಸುಖವನೀವುದೆಮಗೆ || ೧ ||

ಶ್ರೀವಿಷ್ಣುವಶಾಂಭವಿ ಶಂಭುವ ವಾಕ್‌ಶ್ರೀ | ದೇವನಳ್ಕಱಿ೦ದ
ಭಾವಿಸುವಂತೆ ನೋಡಿದಳಭಿನವರತಿ | ಭಾವೋದ್ಭವಸನ್ನಿಭವ  || ೨ ||

ತನ್ನಗ್ರತನುಜೆ ಜಯಾವತಿದೇವಿಗ | ತ್ಯುನ್ನತಮಪ್ಪವಸ್ಥೆಯೊಳು
ಭಿನ್ನಮಪ್ಪಸುವುಳಿದುದಕೆ ಖೇಚರಪತಿ | ತಾಂ ನೆಱೆಮುದವೆತ್ತನಾಗ  || ೩ ||

ಶ್ರೀಪಾಲನ ಸುಗುಣಕೂಪಾರನ | ಭೂಪಾಲಕುಲಶೇಖರನ
ರೂಪುಯವ್ವನದುನ್ನಗತಿಗಂಡು ಸಂತಸ | ಲೇಪಿಸಿತವನ ಚಿತ್ತದೊಳು  || ೪ ||

ರಸುಮಿಸುತಿರ್ಪ ರನ್ನಕೆಯಪರಂಜಿ ರಂ | ಜಿಸುವ ಪಾಂಗಿನೊಳೀಗಳೆನ್ನ
ಹಸುಳೆಗೆ ತಕ್ಕ ತದ್ವರನಾದನೆನುತ ಸಂ | ತಸವೆತ್ತನಾನೃಪವರನು  || ೫ ||

ಮತ್ತೆ ಮಜ್ಜನಭೋಜನತ್ಯುಪಚಾರವ | ನುತ್ತಮ ರೂಪಯುತಗೆ
ಚಿತ್ತಶುದ್ಧಿಯೊಳು ಮಾಡಿಸಿ ಖಗಪತಿ ಮುದ | ವೆತ್ತೊಪ್ಪಂಬಡೆದಿರ್ದ || ೬ ||

ಬಳಿಕ ಜೋಯಿಸನ ಕರೆಸಿ ಸುಮುಹೂರ್ತದ | ಘಳಿಕಗೆಯೇದಿನಕುಂಟೆಂದು
ವಿಲಸಿತಬಿಸರುಹವದನೆಯನಯ್ಯನು ಬೆಸ | ಗೊಳಲಾಗಲಿಂತೆಂದರವರು  || ೭ ||

ಇಂದಿನ ದಿನ ಮೂಱಕೆ ಶುಭಲಗ್ನವು | ಬಂದಪುದೆನೆ ಲೇಸೆನುತ
ಮಂದೇತರಮುದದಿಂದುಜ್ಜುಗಿಸಿದ | ನಂದು ಕಲ್ಯಾಣಕರ್ಮವನು  || ೮ ||

ಖಚರೇಶನು ತನ್ನ ಸೋಮಪ್ರಭೆನೆಂಬ | ಸಚಿವೋತ್ತಮನ ಮಂದಿರಕೆ
ಅಚಳಿತನಭಿನವಾಂಗನನು ಕಲ್ಯಾಣ | ರಚನೆಗೆನುತ ಕಳುಹಿದನು || ೯ ||

ಇಳೆಪೊಗಳ್ವಂತುದ್ವಹನದುದ್ಯೋಗವ | ವಿಲುಳಿತಮೆನೆ ಸಂತಸದಿಂ
ತಳುವದೆಸಗಿ ಬಿದ್ದಿನರಬರಿಸಿ ತನ್ನ | ಪೊಳಲ ಸಿಂಗರವಮಾಡಿದನು  || ೧೦ ||

ಚಳೆಯದನೇಕಬಣ್ಣ ಪುರದಂಗಣ ಪಲ | ಪಳಿಗುಡಿರನ್ನದೋರಣವ
ತಳೆದಬಾಗಿಲು ನವಚಿತ್ರವೆಸೆದ ಭಿತ್ತಿ | ಗಳಿನೊಪ್ಪಿತಾ ಪುರವರವು  || ೧೧ ||

ಇವು ಮೋಹಗೃಹದಬಾಗಿಲ ಮುಂಕಳಕೆಯೊ | ಇವು ಕಾಮನೃಪನಂತಃಪುರದ
ಯುವತಿಯರಾಡುವುಯ್ಯಲ ಕಂಬವೋಯೆನೆ | ನವತೋರನವೆದ್ದುವಾಗ || ೧೨ ||

ಒಸಗೆ ಕಾಲದ ಸುಗ್ಗಿವರೆ ತತ್ಪುರಮೆಂಬ | ಪೊಸಬನ ದಾಂಗುಡಿಯಿಟ್ಟು
ಕುಸುಮಿತಮಾದಂತತಿ ಫಲಗೂಡಿ ರಂ | ಜಿಸುರ್ದವೆಲ್ಲಿ ನೋಡಿದರು  || ೧೩ ||

ಪಸರ್ವಂದಲು ಪಲವರ್ಣದ ಮೇಲ್ಕಟ್ಟು | ಮಿಸುಪಚಿತ್ರದಮಣಿಭಿತ್ತಿ
ಮಿಸುನಿಗನ್ನಡಿದೋರಣವಾಗಿಲಿಂ ಹೊಸ | ಹಸನಾದುದಾ ರಾಜಭವನ  || ೧೪ ||

ಉರಿವ ಸೊಡರತಿಂಥಿಣಿಯಿಂ ತಱಗೊಂಡ | ಮರಕತಮಣಿಗಂಬಗಳಿಂ
ಪಿರಿದೊಪ್ಪಿತಾಪಂದಲು ಚೂತ ಚಂಪಕ | ತರುವನವೆಂಬಮಾಳ್ಕೆಯೊಳು || ೧೫ ||

ಪೊಳೆವ ಬಿಂಗದ ಪಾದುಕೆಯೊಳು ನೋಳ್ಪರಮೆಯ್ಯ | ನೆಳಲು ಮಾರ್ಪೊಳೆಯಲೊಪ್ಪಿದುದು
ತೊಳಗುವ ಮೇಲ್ಕಟ್ಟಿನ ಪಟದೊಳು ಕ | ಣ್ಗೊಳಿಸುವ ಚಿತ್ರದಂದದೊಳು  || ೧೬ ||

ಸಿರಿಗಂಪ ನೆರೆ ಸಿಂಪಿಸು ನೀರನೆಲಕೆ ಸಿಂ | ಗರಿಸು ಮನೆಯ ಮಾಲೆಗಟ್ಟು
ಹುರಿನೋಡಿ ಹೊಂಗುನೂಲ್ಗಳೆಂಬ ಸತಿಯಿಂ | ಚರಮೊಪ್ಪಿತಾ ಭವನದೊಳು  || ೧೭ ||

ಪೊಸತುಟ್ಟು ಪಲರನ್ನದ ಪಸದನಮಿ | ಟ್ಟೆಸಗೆ ಮರಳ್ಗೊಂಡಂತೆ
ಅಸವಸದಿಂ ಮಂಗಲಪರಿಕರವನಂ | ದೆಸಗಿದರಾ ಕೋಮಲೆಯರು  || ೧೮ ||

ಘನಕುಚೆಯರು ಚಳೆಯಂಗೊಡಲಾಹನಿ | ಹನಿಯೆಡೆಯೊಳು ಕೈಯುಗುರ
ತನಿವೆಳಗುಗಳೆಸೆದವು ತಿಳಿವಳೆಯೊಳು | ಮಿನುಗುವ ಮಿಂಚಿನಂದದೊಳು || ೧೯ ||

ಬಿತ್ತರದಿಂ ಮುತ್ತಿನ ವರ್ಣಪೂರಮ | ವೃತ್ತಕುಚೆಯರಿಡುತಿರಲು
ಚಿತ್ತಭವನ ಕೀರ್ತಿವಲ್ಲಿಯ ಬೀಜವ | ಬಿತ್ತುವಂದದೊಳೊಪ್ಪಿದವು  || ೨೦ ||

ಕಂಜವದನೆಯರ ಕಟ್ಟಿದ ಮಾಲೆಯ | ರಂಜನೆಯನು ನೋಡಲೆತ್ತಿ
ಸಿಂಜಿನಿ ಮಾಡಿದ ಕುಸುಮಕೋದಂಡವೆ | ಮಂಜುಳಮಾದಂತ್ತಾಯ್ತು  || ೨೧ ||

ಪಳುಕಿನ ಮಣಿಭಿತ್ತಿಯೊಳು ಚಿತ್ರಮಿಡಲೆಂದು | ತಳಿರ್ಗಯ್ಯಾಡೆ ತನ್ನೊಂದು
ನೆಳಲು ಬಿಂಬಿಸಿ ಚಿತ್ರಕೆ ಚಿತ್ರವೇಕೆನು | ತೆಳೆಯಳೊರ್ವಳು ನಿಂದಳಾಗ  || ೨೨ ||

ಪಳುಕಿನ ನೆಲ ಪದ್ಮರಾಗ ರನ್ನದ ಭಿತ್ತಿ | ಕುಲಿಶದ ತೊಲೆ ಪಸಿರ್ವಣೆಯ
ಫಲಿತ ವಿದ್ರುಮದ ಮೇಲ್ವೊದಿಕೆ | ನೇರಾಣಿಯ ಕಳಶಮೊಪ್ಪಿತು ಮಂಟಪಕೆ  || ೨೩ ||

ತೊಳಗುವ ಕಲ್ಪಲತೆಯ ಕಾವಣದೊಳು | ಮಿಳಿರ್ವಲರ್ದೊಂಗಲೆಂಬಂತೆ
ಸುಲಲಿತಮಪ್ಪ ಮಂಟಪದೊಳು ಪಲರನ್ನ | ಪಳವಿಗೆಗಳು ರಂಜಿಸಿದವು  || ೨೪ ||

ಮನಸಿಜನಿಟ್ಟ ದೇವಾಭಿಷೇಕವ ಮಾಡ | ಲೆನುತರ್ಚಿಸಿದ ಕಳಶಗಳೊ
ಎನೆ ಮಂಟಪದ ನಾಲ್ದೆಸೆಯೊಳಗಡಕಿಟ್ಟ | ಕನಕಭೃಂಗಾರಮೊಪ್ಪಿದವು  || ೨೫ ||

ತಳಿರ್ವೂಸೇಸೆಯೌಷಧಿರತ್ನ ಕುಶಮಾಲೆ | ನಳಿನ ಕುಂಕುಮ ಬಿಸಸೂತ್ರ
ಫಲಲಾಜೆ ಮೊಸರ್ಗಂಧ ಗೋರೋಚನ ದೂರ್ವೆ | ಕಲಶ ಕನ್ನಡಿಯಿಟ್ಟರಲ್ಲಿ || ೨೬ ||

ಈಸುತೆಱದೊಳಾ ಮಾಂಗಲ್ಯಮಂಟಪ | ಭಾಸುರಮಾಗಿರಲಿತ್ತ
ಆ ಸುಕುಮಾರನ ಮದುವಣಿಗನ | ತ್ಯಾಸಕ್ತಿಯಿಂ ಮಾಡಿದರು  || ೨೭ ||

ಕಾಮಗೆ ಸಾಮ್ರಾಜ್ಯಪಟ್ಟಾಭಿಷೇಕವ | ತಾಮೊಲ್ದು ಮಾಡುವಂದದೊಳು
ಕೋಮಲೆಯರು ಮಜ್ಜನಬೊಗಿಸಿದರು | ಭೂಮೀವರಗೊಲವಿಂದ || ೨೮ ||

ಜಳಕದ ಬಳಿಯೊಳತ್ಯುತ್ತಮಮಾಗಿ | ಪಜ್ಜಳಿಸುವ ಪಸದನದಿಂದ
ಲಲಿತಾಂಗನತಿ ಮುದದಿಂದ ಕೈಗೆಯ್ದುಕ | ಣ್ಗೊಳಿಸಿದನತಿರಮ್ಯಮಾಗಿ  || ೨೯ ||

ಅತ್ತ ಜಯಾವತಿದೇವಿಯ ಸಂತಸ | ವೆತ್ತವಳಾಳಿಯರೆಯ್ದಿ
ಬಿತ್ತರದಿಂ ಮಜ್ಜನ ಮಾಡಿಸಲ್ಕೆಳ | ಸುತ್ತಿದ್ದರು ಸಂಭ್ರಮದಿ || ೩೦ ||

ಅರುಣಾಂಬುಜದೊಳಗರಸಂಚೆಯ ತಂ | ದಿರಿಸಿದವೊಲು ಕೋಮಲೆಯರು
ಪಿರಿದೊಪ್ಪುವ ಪದ್ಮರಾಗದ ಪಸೆಯೊಳು | ತರುಣಿಯ ಕುಳ್ಳಿರಿಸಿದಳು  || ೩೧ ||

ತರುಣಭೃಂಗಗಳ ಸಮೂಹಕೆ ಕನ್ನೆಯ್ದಿ | ಲರಲತೈಲವನೆಱೆವಂತೆ
ತರುಣೀಮಣಿಯಳ ಕಕ್ಕೆಗೆ ಕಮ್ಮೆಣ್ಣೆಯ | ಹರುಷದಿಯೆಱೆದರಾಳಿಯರು  || ೩೨ ||

ತೊಳತೊಳಪೆಳೆಮಿಂಚಿನ ಮಱಿ ಕಾರ್ಮುಗಿ | ಲೊಳಹೊಕ್ಕುನಲಿದಾಡುವಂತೆ
ಲಲನೆಯ ತಲೆಯುಗುರಿಪ ಕೋಮಲೆಯರ | ಪೊಳೆವುಗುರ್ವೆಳಗೊಪ್ಪಿದವು || ೩೩ ||

ಒಲಿದುಗುರಿಪ ವನಿತೆಯ ಕೈಯಕಂಕಣ | ದುಲುಹೆಂಬ ಮೊಳಗು ಕೇಳುತವೆ
ಲಲನೆಯನಿಡುನವಿರೆಂಬ ಪಿರಿಯಸೋಗೆ | ನಲಿದು ನರ್ತಿಸುತ್ತಿದ್ದನಾಗ || ೩೪ ||

ಹೊಗರನೇಳಿಸಲೆಂದು ಹೊಗಣೆಯನ ಕೈಯೊ | ಳೊಗೆವ ಖಡ್ಗಕೆ ಪುಳಿದೊಡೆವ
ಬಗೆಯೆನ ಘುಸೃಣಪಂಕವನಾಕುವರಿಗೆ | ತಿಗುರಿದರಾಳಿಯರು  || ೩೫ ||

ರನ್ನದ ಕಾಲ್ವಣೆಯೊಳು ಮಂಡಿಸಿದ | ಚನ್ನೆಯಣುಗಿನಾಳಿಯರು
ಚಿನ್ನದ ಕೊಪ್ಪರಿಕೆಗಳೊಳು ವೆಱಕೆಯ | ಬೆನ್ನೀರೆಱೆದರಳ್ತಿಯೊಳು  || ೩೬ ||

ಕರಗಮನೆತ್ತಿ ನೀರೆಱೆಯ ಕೈಸುಂಡಿಲು | ಗುರುಕುಚಗಳಕುಂಭಮೆಸೆಯೆ
ತರುಣಿಯರೆಂಬ ಕರಿಣಿಯುಗಮೀಸಿಸು | ವರಸಿರಿಯಂತೊಪ್ಪಿದಳು || ೩೭ ||

ಜಳಕದೊಳಾದ ನಿರ್ಮಲ ದೇಹದಿಂಕ | ಣ್ಗೊಳಿಸಿದಳಾಕೋಮಲಾಂಗಿ
ತೊಳಪ ಕನಕ ಪುಷ್ಯರಾಗ ರತ್ನದ ಪು | ತ್ಥಳಿಗೊಪ್ಪವಿಟ್ಟಮಾಳ್ಕೆಯೊಳು || ೩೮ ||

ಮತ್ತೆ ಪಲವು ಮಣಿಕುಸುರಿವೆಸೆದೊಳ | ತ್ಯುತ್ತಮಮಪ್ಪ ಭೂಷಣವ
ತತ್ತತ್‌ಸ್ಥಾನವಱಿದು ತಂದು ಸಖಿಯರು | ವೃತ್ತಕುಚೆಗೆ ತೊಡಿಸಿದರು || ೩೯ ||

ಅಲರ್ವಿಲ್ಲನೆಂಬದೀವರನೊಲ್ಮೆಗರೆದಿಟ್ಟ | ಜಲಚರಗಳ ಬೀಸಿ ತೆಗೆವ
ಬಲೆ ನಿಱಿಗೊಂಡಂದದೆ ನಿಱಿಯೆಸೆದವಾ | ಲಲಿತಾಂಗಿಯುಟ್ಟಂಬರದ || ೪೦ ||

ಇಂದುಮುಖಕೆ ಬಾಸೆವಾವಿನ ಬಾಧೆಯುಂ | ಟೆಂದಾಳಿಯರು ಸೋಗೆನವಿಲ
ತಂದಿರಿಸಿದ ಮಾಳ್ಕೆಯೊಳಾ ಕೋಮಲೆ | ಗಂದಮಾದುದು ನುಣ್ದುಱುಬು || ೪೧ ||

ಕಂಡಿಂತು ನಿಟಲೆಯು ಕಬರಿಯೊಪ್ಪುವ | ತೊಂಡಿಲನಡುವಣೊಳ್ಳರಲ
ದಂಡೆಯೊಪ್ಪಿದುದಿಕ್ಷುಕೋದಂಡನೇಱುವ | ಬಂಡಿಯಚ್ಚಿನ ತೆಱನಾಗಿ || ೪೨ ||

ಶಶಿ ಬುಧ ಬಿಂಬವ ಪೆತ್ತೆರ್ದೆಯೊಳಗಿ | ಟ್ಟೊಸೆದು ಮುದ್ದಾಡಿಸುವಂತೆ
ಅಸಿಯಳ ಮುದ್ದುಮೊಗದ ನೊಸಲೊಳು ರಂ | ಜಿಸಿದುದು ಪಸುರ್ಗಲ್ಲ ಬೊಟ್ಟು || ೪೩ ||

ಮಿಸುನಿದಾಮರೆಯೊಳಂಗಜದೀವದ ಹಂಸೆ | ಯೊಸೆದು ತತ್ತಿಯನಿಟ್ಟಂತೆ
ಮಿಸುಗುವ ತೋಱಮುತ್ತಿನ ಮೂಕುತಿ ಮಣಿ | ಯೆಸೆದುದವಳ ವದನದೊಳು || ೪೪ ||

ಕೊರಲ ಸರದ ಕರ್ಣಾಭರಣಂಗಳ | ಸಿರಿಮುಡಿಗಿಟ್ಟು ಸೂಸಕದ
ಬೆರಕೆವಣೆಯ ಬೆಳಗಿನೊಳೊಪ್ಪಿತವಳಾಸ್ಯ | ಪರಿವೇಶಗೊಂಡಿಂದುವಂತೆ || ೪೫ ||

ಚಿತ್ತಭವನ ರತಿದೇವಿಯುದ್ವಹನದೊ | ಳೆತ್ತಿದೈರಣೆಗಲಶದೊಳು
ಒತ್ತಿಟ್ಟ ಅಕ್ಷತೆಯಂತೆ ಕಣ್ಗೆಸೆದವು | ಮುತ್ತಿನಸರ ಕುಚಗಳೊಳು || ೪೬ ||

ತಳಿರೆಳೆಮಿಡಿದೋಱೆಯಲಾಱಡಿಯಾಂತು | ಮಿಳಿರ್ವಂಗಜಕಲ್ಪಲತಿಕಂ
ಪೊಳೆವಂತೆ ಪಂಚರತ್ನಾಭರಣಂದೊಟ್ಟು | ನಳಿತೋಳೆಸೆದವಾ ಸತಿಗೆ || ೪೭ ||

ಜಲಶಾಸ್ತ್ರನ ಜಂಗಮದುರ್ಗದ ಪೊಱ | ವಲಯದೊಳಗೆ ರನ್ನವೆಸದ
ಪೊಳೆವ ಪೊಂಗೋಂಟೆಯಂದದೊಳು ನಿತಂಬದ | ಲಲಿತ ಮೇಖಲೆಯೊಪ್ಪಿತವಳ || ೪೮ ||

ಅಲರ್ವಿಂಡು ಪೊಱೆದ ಬಣ್ಣದಮೆಯ್ಯಳಿವಿಂಡು | ಜಲರುಹದೊಳು ಮಂಡಳಿಸಿ
ಪೊಳೆವಂತೆ ಮಣಿನೂಪುರರವಾಸತಿ | ಯಲತೆಗಾಲ್ಗಳೊಪ್ಪಿದವು || ೪೯ ||

ಆತನು ಮೋಹನ ರಾಜ್ಯಮೆನಲಗ್ರಹಾರವೂ | ಜಿತ ಪೀವರಕುಚಯುಗಲೆ
ಶತಪತ್ರಾಕಾರಮೆನೆ ಕಂಕಣಹಸ್ತೆ | ಯತಿರಂಜಿಸಿದಳಾ ತರುಣಿ || ೫೦ ||

ಬಳಿಕಾಮಱುವಗಲಿನೊಳಾಬ್ದಿಕವೆಂಬ | ವಿಲುಳಿತಮಪ್ಪ ಕರ್ಮವನು
ಳುವದೆ ಮಾಡಿ ಸಂತೋಷದೊಳಿರ್ಪನ್ನೆಗ | ಕಳೆದುಂದಂದಿನದೊಂದು ದಿವಸ || ೫೧ ||

ದಿವ ರಾತ್ರಿಯೆರಡರ ಸಂದಿನ ಸಮಯದ | ವಿವರವಱಿದು ಲಗ್ನಿಗರು
ನವಕಾಂಚನಘಟದೊಳು ಘಟಿಕಾಪಾ | ತ್ರವನಿರಿಸಿದರೊಲವಿಂದ || ೫೨ ||

ಮಿಸುನಿಯಪಾತ್ರೆಯೆನಿಪ ಗುಂಡಿಗೆರೆಯೊಳು | ಕುಸುಮಾಸ್ತ್ರನೇಱಲೆಂದಿಟ್ಟ
ಹೊಸ ಹಱಿಗೋಲೆಂಬಂತೆ ಘಳಿಗೆವಟ್ಟ | ಲೆಸೆದು ಕಣ್ಗೆರಂಜಿಸಿತು || ೫೩ ||

ಸನ್ನೆಯ ಘಂಟಾರವ ದೇಗುಲವತಿ | ರನ್ನಘಟದ ನಿರ್ಮಲಾಂಬು
ಮುನ್ನೀರೆನೆ ಮುಳುಗುವ ಘಟಿಕಾಪಾತ್ರೆ | ಚನ್ನೇಸಱಂತುಟೊಪ್ಪಿದುದು || ೫೪ ||

ತಡಮಾಡಬೇಡೇಳು ತರುಣ ಹಂಸಯಾನೆ | ಕಡು ನೀರನ ಯೋಗಕೆಂದು
ಬಿಡದುಲಿವಂತೆ ದೇಗುಲವಱೆಯೆಸೆದೊವಾ | ಕಡುವಗಲಿನಸಮಯದೊಳು || ೫೫ ||

ಅನಿತರೊಳತಿ ಹರುಷದೊಳೊರ್ವರ | ಮನೆಯಿಂದ ವಸ್ತುಕಾರವನು
ಅನುರಾಗದಿಂದಿತ್ತು ನೈಯೇಱಿಸಿ ಮತ್ತೆ | ವಿನುತ ಭೂಷಣವಿತ್ತರಾಗ || ೫೬ ||

ಆ ವೇಳೆಯೊಳು ಪಡಿಯುಱತಿಯರೈತಂದು | ಭಾವಜಶಕ್ತಿಯಂತೆಸೆವ
ಆ ವಿಧುವದನೆ ಜಯಾವತಿಸತಿಗೆ ಕೆಂ | ದಾವರೆಕೈಗಳ ಮುಗಿದು || ೫೭ ||

ಏಳಂಗಜಗಜಗಮನೆ ಮೂಹೂರ್ತದ | ವೇಳೆ ಸಮೀಪವಾಯ್ತೆನಲು
ಆಳಿಯರಂದಣದೊಳಗೆಯ್ದಿಸಿದರು | ಲೀಲೆಯಿಂದಾ ಕೋಮಲೆಯ || ೫೮ ||

ತ್ರಿದಶರನೆಸಲಂಗಭವನೂರ್ಧ್ವದೆಸೆಗಾಗಿ | ಪದಪಿಂ ತೆಗೆದಲರ್ವಿಲ್ಲ
ಪೆದೆಯೊಳು ಸಿಲ್ಕಿ ಪೊಳೆವ ಪೂಗಣೆಯತಂಎ | ಸುದತಿಯಂದಣದೊಳೊಪ್ಪಿದಳು || ೫೯ ||

ಬಾಲೆಯಂದಣವ ಬಳಸಿ ನಡೆದರು ಕುಂಚ | ಕಾಳಾಂಜಿ ಕರಗ ಬಿಜ್ಜಣಿಗೆ
ವೀಳೆಯ ಕೈಗನ್ನಡಿಗಳು ಮೊದಲಾ | ದೂಳಿಗವಂತಾಳಿಯರು || ೬೦ ||

ಕೊರಗದರಲಗಂಧದ ಕೋಮಲಾಂಗದ | ಅರೆನೇಱಿಲುದೋರೆದುಟಿಯಾ
ತರುಣಿ ಕುರಂಗಲೋಚನದಾಳಿಯರು ಕಡು | ಹರುಷದೊಳೊಡನೆಯ್ದಿದರು || ೬೧ ||

ಕಾಯಜನೃಪನಂತಃಪುರದಂತೆ ಮಧುವೆಂಬ | ರಾಯನ ರಾಣಿಯರಂತೆ
ತೋಯಜಗಂಧೆಯ ಕೆಲಬಲದೊಳು ಬ | ರ್ಪಾಯತಾಕ್ಷಿಯರೊಪ್ಪಿದರು || ೬೨ ||

ನುಲ್ಗಲ್ಲವೊ ಮಿಸುನಿಯ ಕನ್ನಡಿಯೊ | ಕಣ್ಗಡೆಯೊ ಕಾಮ ಪಿಡಿದ
ಗೇಣ್ಗಳ ಹೊಗರೊಯೆಂದೆನಲೊಪ್ಪಿದವಾ | ಪೆಣ್ಗಳ ಮಣಿಯಾಳಿಯರಿಗೆ || ೬೩ ||

ವಿಚಕಿಲಗಂಧ ವಿದ್ಯುತ್ಕೇಕಱಕುಂಭ | ಕುಚಯುಗ ಕಾಮಕಾಳಾಹಿ
ಕಚಕಮನೀಯ ಕಮಲಮುಖ ಶುಕ ಶಿಶು | ವಚನದಾಳಿಯರೆಯ್ದಿದರು || ೬೪ ||

ತಾರಾತರುಣಿಯರೊಡವಱೆ ಶಶಿಲೇಖೆ | ರಾರಾಜಿಪಂತೋಲೈಪ
ನಾರೀಜನಮಧ್ಯದೊಳಂದಣವೇಱಿ | ಚಾರುವದನೆ ಬರ್ಪ ಬಂದಳಾಗ || ೬೫ ||

ಇನಿತು ತೆಱದ ವೈಭವದಂದಣವೇಱಿ | ವನಿತೆ ಮಾಂಗಲ್ಯಮಂಟಪಕೆ
ಅನುರಾಗದಿಂ ಬಂದಳು ತಂಬೆಲರೇಱಿ | ತನಿಗಂಪು ಬರ್ಪ ಮಾಳ್ಕೆಯೊಳು || ೬೬ ||

ಸ್ಥಿರವ ಹಡೆದು ವಿದ್ಯುರ್ಲತೆ ಸುರಧನು | ತರುಣಿರೂಪವನಾಂತು
ಧರೆಗಿಳಿತಪ್ಪ ಪಾಂಗಿನೊಳಂದಳದಿಂ | ತರುಣಿಯಿಳಿವುತಿರ್ದಳಾಗ || ೬೭ ||

ನೆಲಮುಟ್ಟಿತೆಂದೆನಲಿಳಿವ ಜಯಾವತಿ | ಯಲತೆಗೆವಜ್ಜೆಮಾರ್ಪೊಳೆಯ
ಅಲರ್ದ ಕೆಂದಾವರೆಕೊಳದಂತೆ ಚಂದ್ರೋ | ಪಲದ ಕುಟ್ಟಿಮವೊಪ್ಪಿದುದು || ೬೮ ||

ಉಂಗುರವಿಡಿ ನಡುಗೆಣೆಯೆನಬಹುದೆಯೆಂ | ದಂಗಜನಡರ್ವ ಗರ್ದುಗೆಯ
ಸಿಂಗವಱಿಯ ತುಳಿವಂತೆ ಮುತ್ತಿನಪಾದು | ಕಂಗಳನವಳು ಮೆಟ್ಟಿದಳು || ೬೯ ||

ಅರಸಂಚೆಯಳವನಾಱಡಿಗೊಂಡ ಕಂದರ್ಪ | ಕರಿಯ ನಡೆಯ ಹಸಹರಿಸಿ
ಹರೆಯದ ಬಲುಸೊಕ್ಕಿಂ ಮೆಲ್ಲಮೆಲ್ಲನೆ | ತರುಣಿ ಬಂದಳು ಮಂಟಪಕೆ || ೭೦ ||

ಆ ಕುವರನ ಧೈರ್ಯಮಂ ಕವರ್ವ ವ | ಶೀಕರಣದ ತಾಯ್ಗರುವೊ
ಆಕರುಷಣದ ಪುತ್ರಿಕೆಯೊಯೆನೆ ಲಲಿ | ತಾಕಾಱೆ ನಡೆತಂದಳಾಗ || ೭೧ ||

ತೊಳತೊಳಪೆಳೆಮುತ್ತಿನಾಲವಾಲದಿ ಪುಟ್ಟಿ | ಬೆಳೆವಂಗಜಕಲ್ಪಲತಿಕೆ
ಜ್ವಲಿಸುವವೊಲು ಮೆಟ್ಟಕ್ಕಿಗೊಡೆಯೊಳು ಕ | ಣ್ಗೊಳಿಸಿದಳಾ ಕೋಮಲಾಂಗಿ || ೭೨ ||

ಸ್ಮರನಧಿದೇವಿಯ ಕಣ್ದೆರೆಯಿಸಲೆಂದು | ಸುರುಚಿರವಹಲಗ್ನಬರ್ಪ
ಪರಿಯಂತರಿಟ್ಟ ಕಣ್ಮರೆಯಂಬರವೆನೆ | ತೆರೆವಿಡಿದರು ಕೋಮಲೆಗೆ || ೭೩ ||

ಅನಿತಱೊಳಾ ಶ್ರೀಪಾಲಕುಮಾರನ | ಕನಕರಚಿತದಂದಣವ
ಅನುರಾಗದಿಂದೇಱಿಸಿ ಮಂಗಲವಾದ್ಯ | ನಿನದ ಘೂರ್ಣಿಸಿ ದಿಕ್ತಟವ || ೭೪ ||

ಧವಲ ದಿವ್ಯ ಮಂತ್ರಾಶೀರ್ವಾದದ | ವಿವಿಧ ವಂದಿಗಳ ನುಣ್ಚರದ
ಕವಿಗಳ ಕೊಂಡಾಟದ ಕಂಬಿಕಾಱರ | ರವಮೊಪ್ಪಿತಾ ಸಮಯದೊಳು || ೭೫ ||

ಪಿರಿದುಂಡಿರುಳೋಕರಿಸಿದ ಪಗಲೊ ಭೂ | ವರನ ತೇಜವೊ ಪೋದರವಿಯ
ಕಿರಣಗಳೊಸಗೆ ನೋಡಲು ಬಂದವೋಯೆನೆ | ಪರಿದವು ಪಲಪಂಜುವೆಳಗು || ೭೬ ||

ಉಲಿವಂಬುಜ ಮೋದವಪೂರ್ಣಶಶಿ ಮಾತ | ಕಲಿವ ಕನ್ನಡಿಗಳೆಂಬಂತೆ
ಸುಲಲಿತವಪ್ಪ ಶೋಭನವಾಡುವ ನವ | ಲಲನೆಯರಾಸ್ಯಮೊಪ್ಪಿದುದು || ೭೭ ||

ಒಡನೆ ಬರ್ಪರಸುಮಕ್ಕಳ ರನ್ನಗೊಡೆ ನಭ | ವಿಡಿದು ನಡೆಯೆ ಕಂತುನೃಪತಿ
ಗಡಣದೊಳಡಱಿ ದುರ್ಗವ ಮುತ್ತುತೆಸಗಿದ | ನಡೆಚಪ್ಪರದ ತೆಱನಾಯ್ತು || ೭೮ ||

ಸಸಿನೇಸಱುದಿಟ್ಟದೇವನೆಯ್ತಂದಾ | ಒಸಗೆ ನೋಡಲು ಪಲಗಣ್ಣ
ಎಸಗಿದನೆನಲೊಪ್ಪಿದವು ಬಾಲೆಯರಾಂತ | ಮಿಸುನಿಗನ್ನಡಿಕಳಶಗಳು || ೭೯ ||

ಎತ್ತಿದ ಕರಿಯಕಬ್ಬಿನ ಕೋಲಿಂ ಚ | ಲ್ವೆತ್ತುದಾನಡೆವ ದಿಬ್ಬಣವು
ಚಿತ್ತಜಚಕ್ರವರ್ತಿಯ ಬಲುಬಿಲ್ವಡೆ | ಯೊತ್ತಿನಡೆವ ಮಾಳ್ಕೆಯೊಳು || ೮೦ ||

ನಡೆತಂದುದು ನನೆವಿಲ್ಲನ ಬಲುದಂಡು | ನಡೆತಂದುದು ಚೈತ್ರರಥನ
ಪಡೆಯೆನಲರಮನೆಗಾಗಿ ದಿಬ್ಬಣವಂದು | ನಡೆತಂದುದು ಸಂಭ್ರಮದಿಂ || ೮೧ ||

ಕನ್ನಡಿ ಕಳಶವಿಡಿದು ಸಂತಸವಾಡ | ಬಿನ್ನಾಣದಿಂ ಪಾಡುತವೆ
ಕನ್ನೆಯರುಗಳಿದಿರ್ವಂದು ಶುಭ್ರಾಕ್ಷತೆ | ಯನ್ನೆಱೆಸೂಸಿದರು || ೮೨ ||

ಸ್ಮರನೊಡ್ಡಿನಣ್ಣವನೆಯಂಬಿನಸೋನೆ | ವಿರಹಿಜನದ ಮೇಲೆ ಸುರಿವ
ಪರಿಯೆನೆ ಪಲವೆಣ್ಗಳಿಡುವ ಸೇಸೆಯಮುತ್ತು | ಸುರಿತಂದವಾ ಸಮಯದೊಳು || ೮೩ ||

ನಂದನವನಕನುರಾಗದೊಳೆಯ್ತಪ್ಪ | ಮಂದಸಮೀರನಂದದೊಳು
ಹಂದಲವೊಕ್ಕು ವಿವಾಹಮಂಟಪಾ | ನಂದದಿ ಬಂದನಾನೃಪತಿ || ೮೪ ||

ಷೋಡಶತೆಱದ ಮಹೋಪಚಾರಂಗಳು | ಗೂಡಿದ ಮಧುಪರ್ಕವಿಧಿಯ
ಮಾಡಿ ಮಾಂಗಲ್ಯಮಂಟಪಕಾಗಿಯಾ | ಗಾಡಿಕಾಱನ ನಡೆಸಿದರು || ೮೫ ||

ಬರುತಾಮಂಟಪದೊಳು ಮುನ್ನಿಂದಿರ್ದ | ತರುಣಿಗೆ ಮೊಗ ಮಱೆಮಾಡಿ
ತೆರೆಯ ಮುಂದಣಱೆಮುತ್ತಿನಬೋರೆಯದೊಳ | ಗರಮಗನಂತೊಪ್ಪಿದನು || ೮೬ ||

ಮತ್ತಿನಿತರೊಳತಿ ಶುಭತಱವಹ ಲಗ್ನ | ವೊತ್ತಂಬರಿಸೆ ಲಗ್ನಿಗರ
ಮೊತ್ತವಾಗಳೆಯಾಯತವೆಂದು | ಬಿತ್ತರದಿಂ ಘೂರ್ಣಿಸಿದುದು || ೮೭ ||

ಜವನಿಕೆಯೋಸರಿಸುವ ತೆಱೆ ಗಂಟಾ | ರವದೊಳಂ ದಂಪತಿಗಳ
ತವಕಿಪ ಮಾಸಾಳೊರ್ವರೊರ್ವರ ನೋಟ | ನವನಿಸ್ತ್ರಿಂಶದಂತಾಯ್ತು || ೮೮ ||

ಸ್ಮರಕರಿದಂಪತಿ ಸುಂಡಿಲನೆತ್ತಿಸಿ | ಕರವನೊಂದೊಂದರ ಮೇಲೆ
ಹರುಷದಿ ಸೂಸುವಂದದಿ ಸೇಸೆಯ ಮುತ್ತ | ಸುರಿದರೋರೊರ್ವರ ಮೇಲೆ || ೮೯ ||

ತಳಿರೊಳು ತಳಿರನಿಟ್ಟಂತೆ ಜಾಮಾತೃಕರ | ತಳದೊಳು ಮಗಳ ಕೈಯಿಟ್ಟು
ಕಳಶೋದಕಧಾರೆಯೆಱೆದು ಸಂತಸವನೆ | ತಳೆದನಾವಿಮಲವಾಹನನು || ೯೦ ||

ಲಲಿತ ಕಾಂಚನ ಕಲಶದೊಳುಗಮದ ಮಿಶ್ರ | ಜಲಧಾರೆ ಸೂಸಲೊಪ್ಪಿದುದು
ತೊಳಪೆಳೆನೇಸರೊಳುದಯಿಸಿ ಭೂತಳ | ಕಿಳಿವೆಳೆಜಗುನೆಯೆಂಬಂತೆ || ೯೧ ||

ಲಲಿತಮೋಹನ ಪಾಶದಿಂ ಬೀಱುವವೊಲು | ಇಳೆಯಾಣ್ಮನ ಕಂದರಕೆ
ಅಲರ್ದಂಡೆಯನುರುಮುದದಿ ಹಾಕಿದಳಾ | ವಿಲಸಿತ ಬಿಸರುಹನೇತ್ರೆ || ೯೨ ||

ಬಿತ್ತರದಿಂ ಬಳಸಿದ ನೂಲಮುಂಗಯ್ಗೆ | ಸುತ್ತಲವರು ಕಂತುರತಿಯ
ಉತ್ತಮಮಪ್ಪ ರೂಪಿನ ಮೇಲೆ ತೊಡರ್ಗಳ | ನೊತ್ತಿ ಕಟ್ಟಿದವೋಲೊಪ್ಪಿದಳು || ೯೩ ||

ಹರುಷದಿಯೈರಣೆಗೊಡದಮುಂದಾವಧು | ವರರ ಕುಳ್ಳಿರಿಸಲೊಪ್ಪಿದರು
ಸ್ಮರನಿಧಿ ತೀವಿದ ಮುಗುಳ್ಗಳಂಶದ ಮುಂದೆ | ಇರಿಸಿದ ಮಣಿದೀಪದಂತೆ || ೯೪ ||

ಕೆಂದಳಿರೆಸೆವ ಮಂಟಪಕೆ ಬೆಳ್ಳಲರ್ಗಳ | ತಂದು ಸುರಿವ ಮಾಳ್ಕೆಯೊಳು
ಅಂದಾ ಹೋಮಕುಂಡಕೆ ನವಲಾಜೆಯ | ತಂದು ಬೆಳಗಿದರೊಲವಿಂದ || ೯೫ ||

ಹಿಡಿ ಹಿಡಿಯದೊಡಂಗಭವತಾನೆಮುಂದೆ | ಹಿಡಿಸುವನೆಂದಾಳಿಯರು
ನುಡಿದು ನಗಿಸಿಯವಳುಂಗುಷ್ಠವನಾಗ | ಹಿಡಿಸಿದರವನ ಕೈಯಿಂದ || ೯೬ ||

ಮಳಲೊಟ್ಟಿಲ ಮೆಟ್ಟಿ ಕಳಹಂಸಮಿಥುನ ಪೂ | ಗೊಳನ ಬಳಸುವಂದದೊಳು
ತೊಳಗುವ ಸಪ್ತಪದಿ ಮೆಟ್ಟಿ ಹೋಮವ | ಬಳಸಿದರಾ ದಂಪತಿಗಳು || ೯೭ ||

ಗುರುಜನಪೂಜೆ ಸಭಾಪೂಜೆ ಭೂಮಿ | ಸುರ ಪೂಜೆ ಗಣ್ಯಪೂಜೆಗಳ
ಉರುಮುದದಿಂ ಮಾಡಿ ಪೂರ್ಣಾಹುತಿಯ ಸ | ತ್ಕರಿಸಿದರಾ ದಂಪತಿಗಳು || ೯೮ ||

ಮುತ್ತೈದೆಯರೈತಂದಾರಾತ್ರಿಕರ | ವೆತ್ತಿ ಹರಸಿಯಳಿಕದೊಳು
ಮುತ್ತಿನಕ್ಷತೆಯಿಟ್ಟಾ ಮದವರ್ಕಳ | ಮತ್ತೆ ಮನೆಯ ತುಂಬಿಸಿದರು || ೯೯ ||

ಬಳಿಯೊಳೆಸೆವ ನಾಗವಲಿ ಕುಂಭವಲಿಯೆಂಬ | ವಿಲುಳಿತಮಪ್ಪ ಕರ್ಮವನು
ಇಳೆ ಪೊಗಳ್ವಂದದೊಳು ಮಾಡಿ ಸಂತಸ | ಜಲಧಿಯೊಳಳ್ದನಾ ಖಗನು || ೧೦೦ ||

ಮದುವೆಗೆ ಬಂದ ಬಿಜ್ಜಾಧರರಾಯರ್ಗೆ | ಸದಮಲಮಣಿ ಭೂಷಣಗಳ
ಮುದದಿಂ ಮುಯ್ಯಿತ್ತು ತಂತಮ್ಮ ಮನೆಗಳಿಗೆ | ಚದುರಿಂ ಬೀಳ್ಕೊಟ್ಟನಾಗ || ೧೦೧ ||

ಸುರತರು ಕೈದೊರೆದಂತೆ ಚಿಂತಾಮಣಿ | ಕರುಣಿಸಿದಂತಾನೃಪತಿ
ವರವಂದೀವೃಂದದ ಮನದಣಿವಂದದಿ | ದುರು ಮುದದಿಂ ಜಾಗವಿತ್ತ || ೧೦೨ ||

ಹರನ ಮಹಿಮೆ ಹರಿಯೈಸಿರಿ ವಾಣೀ | ವರನ ಬಲ್ಲವಿಕೆ ಮನ್ಮಥನ
ವರರೂಪಿನಿಂ ಕಣ್ಗೊಪ್ಪಿದನಾ ಭೂ | ವರಕುಲಮಣಿಭೂಷಣನು || ೧೦೩ ||

ಇದು ಭಾವಕಜನಕರ್ಣವಿಭೂಷಣ | ಮಿದು ರಸಿಕರ ಚಿತ್ತದೆಱಕ
ಇದು ವಾಣೀಮುಖಮಾಣಿಕ್ಯಮುಕುರ ಮ | ತ್ತಿದು ಶೃಂಗಾರಸುಧಾಬ್ದಿ || ೧೦೪ ||

ಹತ್ತನೆಯ ಸಂಧಿ ಸಂಪೂರ್ಣಂ