ಹನ್ನೊಂದನೆಯ ಸಂಧಿ

ಶ್ರೀಮದಮರಮಣಿಮಕುಟರಂಜಿತರತ್ನ | ಧಾಮಾಂಬುಧಾರಾಧೌತ
ತಾಮರಸಾಂಘ್ರಿಯುಗಲ ವೀರನಾಥನು | ದ್ದಾಮ ಸುಖವನೀವುದೆಮಗೆ || ೧ ||

ಶ್ರೀಮುಖದೊಳುವಾಣಿಯನುರುಭುಜದೊಳು | ಭೂಮಿಯನುರೆಸೈತಿರಿಸಿ
ಕಾಮಿನೀಜನಮನಸಿಜನು ಕಣ್ಗೆಸೆದನು | ದ್ದಾಮನುಜ್ವಲಕೀರ್ತಿಯುತನು || ೨ ||

ಈ ತೆಱದೊಳು ವಿವಾಹವಿಧಿಯನಾ | ಭೂತಳ ಪೊಗಳ್ವಂದದೊಳು
ಖ್ಯಾತರವರು ತೀರಿಸಿ ಸಂತಸಮಿರೆ | ಬೀತುದು ನೇಸಱಬಿಂಕ || ೩ ||

ಮಗುಳ್ದವು ಮುನ್ನೀರಣುಗೆಯ ಸೆಜ್ಜೆಗ | ಳಗಳ್ದವು ಜಕ್ಕವಕ್ಕಿಗಳು
ನಗುತಿರ್ದವಿಂದೀವರನಸ್ತಮಿಸುವಾ | ಪಗಲಬಲ್ಲಹನ ಕಾಲದೊಳು || ೪ ||

ಆ ವೇಳೆಯ ಕರ್ಮವನಾ ಶ್ರೀಪಾಲ | ಭೂವನಿತಾಪತಿ ಮಾಡಿ
ಜಾವಗಳೆಯಲೋಲಗಮಿರ್ದು ಬಳಿಕ ಶ | ಯ್ಯಾವಾಸವನೆಯ್ದಿದನು || ೫ ||

ಅರಗಿಳಿದೇರನೇಱುವ ಮನ್ಮಥನಂತೆ | ಸುರುಚಿರಮಣಿಮಂಚದೊಳು
ಕರಮೆಸೆದಿಹ ಹಂಸತೂಳತಳ್ಪವನಾ | ಅರಸನೇಱಲು ಬಳಿಕಿತ್ತ || ೬ ||

ಲಜ್ಜಿತೆಯಾದಬಲೆಯನಾಳಿಯರು ಗುಜ್ಜು | ವಜ್ಜೆಯಿಡಿಸಿ ಕೈವಿಡಿದು
ಪಜ್ಜಳಿಸುವ ರನ್ನವೇಶದಿಂದಿಪ್ಪುವ | ಸಜ್ಜೆವನೆಗೆ ತಂದರಾಗ || ೭ ||

ಪನಿನೀರು ಪೂ ಪಳಿಕರ್ಪೂರ ವೀಳೆಯ | ವನುಲೇಪನ ಪತ್ರಗಳ
ವನರುಹಮುಖಿಯಾಳಿಯರಿರಿಸುತ ಮನ | ದನುರಾಗದಿಂತೊಲಗಿದರು || ೮ ||

ಮಂಚವ ಸಾರಿನಿಂದಬಲೆಯನಾನೃಪ | ತಾಂಚದುರಿಂದೇಱೆಸಲು
ಮಿಂಚುವಪೂವಿಲ್ಲೆದೆಯನಡರ್ವ | ಪಂಚಬಾಣದವೊಲೇಱಿದಳು || ೯ ||

ಅರಸನ ಕೈಸೋಮಕಲವಳುಟ್ಟಸಿರಿಕಾಂಚಿ | ವೆರಸಿ ನಿತಂಬದಿನಿಳಿಯೆ
ಸುರಧನು ಬಳಸಿದ ಹಿಮಗದಿರ್ಗಂಡು | ಗಿರಿಯನಿಳಿವ ತೆಱನಾಯ್ತು || ೧೦ ||

ನಿಱಿದೆಗೆಯಲು ನವಸತಿ ನಿಜರೂಪದೊ | ಳೆಱೆಯನ ಕಣ್ಗೊಪ್ಪಿದಳು
ವಱೆಯಿಂದುರ್ಚಿಪಿಡಿದ ಕಾವನ ಕೈಯ | ಮಿಱುಗುವ ಕೂರಸಿಯಂತೆ || ೧೧ ||

ಅನಿತರೊಳಾ ನಾಣಮುಚ್ಚುವ ನೆವದಿಂ | ವನಿತೆ ವಲ್ಲಭನನಪ್ಪಿದಳು
ನನೆಯೇಱಿದ ನವಲತೆ ಸುರಭೂಜವ | ನನುರಾಗದಿಂದಪ್ಪುವಂತೆ || ೧೨ ||

ಉರುಮುದಿಂದಂಗೋಪಾಂಗದೊಳಿನಿ | ಸೆರವಿಲ್ಲದೆ ಗಾಢವೆತ್ತ
ಪರಿರಂಭಣಮೊಪ್ಪಿದುದರ್ಧನಾರೀ | ಶ್ವರನ ತೆಱನನುಕರಿಸಿ || ೧೩ ||

ಎನಗಿರ್ವರು ನೀವು ಬೇಕು ನಿಮ್ಮೊಳಗೇಕೆ | ಮುನಿಸೆಂದಾ ಮನ್ಮಥನು
ವನಜವನಾ ಸಸಿಯೊಳು ಸಂತಸಮಾಡಿದ | ರೆನೆ ಮುಂಡಾಡಿದರವು || ೧೪ ||

ಪೊಸಬಂದುಗೆಯೊಳಲರೊಳಗಣ ಮಧು | ರಸವನಾಱಡಿ ಪೀರುವಂತೆ
ಅಸಿಯಳ ರಂಗಾಧರವನೊಸೆದು ಚುಂ | ಬಿಸಿದನವನು ನಲ್ಮೆಯಿಂದ || ೧೫ ||

ಅಂಗೈಯ್ಗಳನಾಕೆಯ ಬಲ್ಮೊಲೆಗಳಿ | ಗಂಗಜಸನ್ನಿಭನಿಡಲು
ಹೊಂಗಳಸದ ಮೇಲೆ ಪೊಸದಳಿರ್ಗಳ ತಂದು | ಸಂಗಡಿಸಿದವೋಲೊಪ್ಪಿದವು || ೧೬ ||

ಕೊನೆಯುಗುರ್ವೊಯ್ಯೆ ಲೆಕ್ಕವನ್ನಿಟ್ಟು ಸವಿದುಟಿ | ಇನಿದೋರ್ವರೋರ್ವರ ಬಾಯ್ಗೆ
ಅನುರಾಗದಿಂ ಬಡ್ಡಿಗೊಟ್ಟಾಡಿದರಾ | ನನೆಗಣೆಯನ ಸಾಕ್ಷಿಯೊಳು || ೧೭ ||

ಮುಸುಗಿದ ನಾಣ್ಗದ ತೆಗೆದನುರಾಗದ | ರಸದಿಂದ ಪೂಜಿಸಿ ಚಲ್ವಡೆದ
ಅಸಿಯಳಳ್ಳೆರ್ದೆವನೆಗಾಕಂತು ರತಿಸಹಿ | ತೊಸೆದೊಕ್ಕಲೇಱಿದನಾಗ || ೧೮ ||

ಹುಟ್ಟಿದ ದಿನ ಮೊದಲಾಗಿ ನನ್ನೊಳಲಂಪು | ಬಿಟ್ಟುದೆಲ್ಲವನೋಡದೊರ್ವ
ಬಟ್ಟಜವ್ವನೆಯ ಕೂಡಿದನೆಂದರಸನ | ಬಿಟ್ಟಳು ನಿದ್ರಾತರುಣಿ || ೧೯ ||

ಅನುರಾಗರಸದಿಂ ಮೀಸಿಸಿಯಮೃತಾಧಾರ | ದಿನಿದನಾರೋಗಣೆಗೆಯ್ಸಿ
ಮೊನೆಯುಗುರೇಱಭೂಷಣವಿತ್ತವಳಾಗ | ವನರುಹಮುಖಿ ಸುರತದೊಳು || ೨೦ ||

ಅಲರ್ಗಣ್ಣೋಟ ಪೂವಲಿಜವನಿಕೆ ಲಜ್ಜೆ | ಗಳರುತ್ಗೀತ ನೇವುರದ
ಉಲಿ ತಾಳಮೆನೆ ಕಾದಲನಂಗರಂಗದೊ | ಳೊಲವಿಂ ನಟಿಸಿದಳವಳು || ೨೧ ||

ಸೆಳೆಮಂಚದಕ್ಕಡದೊಳು ಕುಂಕುಮಗಂಧ | ದೊಳುವುಡಿಗಳನಂಗದೊಳು
ತಳಿದು ಸನ್ಮೋಹನಮಲ್ಲಯುದ್ಧವನು ಕ | ಣ್ಗೊಳಿಸಿದರಾದಂಪತಿಗಲು || ೨೨ ||

ಮೊಗ ಮೊಗ ನೋಡಿ ಮುದ್ದಿಸಿ ಲಲ್ಲೆಗೆಯ್ತದಿ | ಸೊಗಸುದುಟಿಗೆ ತುಟಿಯಿತ್ತು
ಬಿಗಿ ಬಿಗಿಯಪ್ಪಿ ಮುಂಡಾಡಿ ಕೂಡಿದರಾ | ಬಗೆಬಗೆವೆರಸುವಂದದೊಳು || ೨೩ ||

ತನ್ನಿನಿಯನ ತನುವನೆ ಪತ್ತಿ ಬಿಡದಾ | ಚನ್ನೆಕೂಡಿದಳೊಲವಿಂದ
ಹೊನ್ನಾಳದ ಕೂರಸಿಗಂಡು ಪತ್ತಿದ | ಸೊನ್ನೆಯ ಟೆಕ್ಕೆಯದಂದದೊಳು || ೨೪ ||

ಪಂಕಜಾಕ್ಷಿವಾಮಪದಘಾತ ಸೌಖ್ಯದೆ | ಭೋಂಕೆನರಾ ಬಲ್ಲಹಗೆ
ಆಂಕುರಿಸಿದುದನುರಾಗವಂಗದೊಳಾ | ಕಂಕೆಲ್ಲಿಯಮಾಳ್ಕೆಯೊಳು || ೨೫ ||

ನವಿರ ನನೆಯನಾಗಿಸಿ ನುಂಗೊರಲ ಪಿಕ | ರವವನೆಬ್ಬಿಸಿ ನಲ್ಲಳೆಂಬ
ನವನಂದನವನಾತುರದಿ ಕೂಡಿದನಭಿ | ನವಚೈತ್ರನಂತೆ ನೃಪತಿ || ೨೬ ||

ಕಿವಿಗಿಂಚರವಕ್ಷಿಗೆರೂಪು ಮೈಗವ | ಯವ ಸುಯ್ಯಲರ್ಗೆಮೈಗಂಪು
ಸವಿದುಟಿಗಧರದ ಸೊಗಸಿತ್ತು ಕೂಡಿದ | ರವರಾರತಿಸಮಯದೊಳು || ೨೭ ||

ಅತಿಮೋಹದಿಂ ಮದನಾಗಮತಂತ್ರದ | ಮತವನಱಿದು ಮಮತೆಯೊಳು
ರತಿಪತಿಕೂಡುವಂದದಿ ಕೂಡಿದರಾ | ಸತಿಪತಿಗಳು ಸಂಭ್ರಮದೆ || ೨೮ ||

ಪ್ರಣಯದ ಪರಿಪೂರ್ಣತೆಯಿಂದವೆ ಮನ | ದಣಿಯದವರು ಮೇಲೆಮೇಲೆ
ಕ್ಷಣವುಳಿಯದೆ ಲವಲವಿಸಿ ಕೂಡಿದರಾ | ಎಣೆಗುಬ್ಬಿಯ ಮಾಳ್ಕೆಯೊಳು || ೨೯ ||

ಇದು ಕೂಟಾದಿಮಧ್ಯಾವಸಾನದ ಸೌಖ್ಯ | ಒದವಿತೆನ್ನದೆ ಕಾದಲರು
ಮುದದಿಂ ಕಂತು ಪುರೆಪುರೆಯನೆ ಕಡು | ಚದುರಿಂ ಕೂಡಿದರವರು || ೩೦ ||

ಮುರಿದವು ಬಳೆಯುದುರ್ದದು ಮೆಯ್‌ಸಿರಿಗಂಪು | ಪರಿವಱಿಯಾಯ್ತು ಕಂಟಿಕೆಯು
ಹರಿಹಂಚಾಯ್ತು ನುಣ್ದುರುಬಿನ ಪೂಮಾಲೆ | ವಿರುಪರತಿಯ ಸಮಯದೊಳು || ೩೧ ||

ಬೆಮರ್ವಂಗ ಬೆಂಡುನೆಗೆವದಿಟ್ಟಿಮುಗ್ಗುವ | ನಮಿರಣೀತಛಾಯೆವಡೆದ
ಅಮೃತಾಧರವಳಿಗಪ್ಪುರ ರಂಜಿಸಿದವು | ಸಮಸುರತಾಂತ್ಯದೊಳವರ್ಗೆ || ೩೨ ||

ಕಡೆಯಸುಸಿಲಸುಖರಸ ಮೊದಲೊಳುತೀವಿ | ಮಡುಗಟ್ಟಲಲ್ಲಲ್ಲಿ ತಮ್ಮಱಿವು
ಕಡುಮುಳುಗಿದ ಮಾಳ್ಕೆಯೊಳು ಮೋಹನಮೂರ್ಛೆ | ಯಡಸಿದುದಾಪ್ರಿಯತಮರ್ಗೆ || ೩೩ ||

ಲಲಿತರತ್ಯಂತಶ್ರಮದಿನವರತನು | ಬಳಲೆಯಂತದನಾಱಿಸಲು
ತಳುವದೆ ತೀಡುವವೊಲು ಸುಪ್ರಭಾತಾ | ನಿಲ ತೀಡಿತಾಸಮಯದೊಳು || ೩೪ ||

ಹರವ ಹಿಪ್ಪುಲಿಕೆ ಹಲುಂಬುವ ಖಗತತಿ | ಯರಲುವಂಬುಜ ಬೆಳುಪಮರ್ದ
ಸುರಪದಿಶಾಮುಖಮೊಪ್ಪಿದುದಾ ಬಾಲ | ಕಾಲ ತರಣಿಯುದದೊಳು || ೩೫ ||

ಬಳಿಕಾರವಿಯುದಯದೊಳೆಳ್ದವರು ಕ | ಣ್ಗೊಳಿಸುವ ಸಿರಿಮುಖಗಳನು
ಬೆಳಗಿ ತದ್ದಿವಸನಿತ್ಯಕರ್ಮಂಗಳ | ವಿಲುಳಿತಮೆನೆ ಮಾಡಿದರು || ೩೬ ||

ಮುನ್ನೀರಣುಗಿಮುರಾರಿ ಬಲ್ಮೊರಡಿಯ | ಕನ್ನೆಕಪರ್ದಿ ವಾಗ್ದೇವಿ
ಸನ್ನುತ ಬಿದಿಗಳೊಪ್ಪಿದವೋಲೊಪ್ಪಿದರ | ತ್ಯುನ್ನತಿಕೆಯೊಳಾ ಪ್ರಿಯರು || ೩೭ ||

ಅರಲುಣಿ ಜೋಡಲರ್ದೊಂಗಲನಮಳ್ಗಿಳಿ | ಯರಸು ಚೂತಕವೇಱುವಂತೆ
ಅರಸಿ ಸಮೇತ ನೃಪವರ ಕರುಮಾಡದ | ಕುರುಜೇಱಿ ಕಣ್ಗೊಪ್ಪಿದನು || ೩೮ ||

ಇಂದ್ರಾಣಿ ಸಹಿತಾ ವೈಜಯಂತವನು ದೇ | ವೇಂದ್ರನಡಱುವಂದದೊಳು
ರುಂದ್ರಹರ್ಮ್ಯವನು ಜಯಾವತಿಸಹಿತ ನ | ರೇಂದ್ರನಡಱಿ ಹೊತ್ತುಗಳೆದ || ೩೯ ||

ಮೊದಲೆಣೆದಲೆವಕ್ಕಿ ತರೆ ಬಂದು ತಾನಾ | ಪುದಿದ ಪಡಿಯ ತೆಱೆಯಿಸಿದ
ಮದನಾರಿಯಮಂದಿರವನು ನೋಡುವೆನೆಂದು | ಚದುರರನ್ನನು ಚಿಂತಿಸಿದನು || ೪೦ ||

ಇಂತು ಚಿಂತಿಸಿದ ಕಜ್ಜವನು ಜಯಾವತಿ | ಕಾಂತೆಗುಸುರಲು ಲೇಸೆನುತ
ಸಂತಸದಿಂ ಮಣಿಮಯಪುಷ್ಪಕವನು | ತಾಂತಳುವದೆ ತರಿಸಿದಳು || ೪೧ ||

ಆ ರನ್ನವಿಮಾನವನೇಱಿ ತಾಮಿರ್ವರು | ಮಾರಾರಿಯ ಮನೆಗಾಗಿ
ಮಾರುತಪಥದಿಯೈದಿದರು ರೋಹಿಣಿವೆರ | ಸಾರಾಜನೆಯ್ದುವಂದದೊಳು || ೪೨ ||

ಬಂದಾಶಿಖರಿಯ ಸಿದ್ಧಕೂಟವನಾ | ನಂದದಿಂದವೆ ಮೂವಳಿಸಿ
ಕುಂದದ ಭಕ್ತಿಯಿಂದವೆಯೊಳಪೊಕ್ಕು | ಕಂದರ್ಪರಿಪುಗೆಱಗಿದರು || ೪೩ ||

ಪನಿನೀರು ಪಲವು ಸತ್ಫಲ ನವರಸ ಘೃತ | ತನಿವಾಲ್ಕೆನೆಮೊಸರ್ಗಳನು
ಮಿನುಗುವ ಪಲರನ್ನಗೊಡದೊಳು ತೀವಿ ಮ | ಜ್ಜನವ ಮಾಡಿಸಿದರಭವನಿಗೆ || ೪೪ ||

ಪರಿಮಳಜಲ ಮಲಯಜ ಮುತ್ತಿನಕ್ಷತೆ | ಸುರಭಿ ಕುಸುಮವಮೃತಾನ್ನ
ವರಮಣಿದೀಪ ಕಾಲಾಗರುಫಲಗಳ | ನರುಹನಪದಕರ್ಚಿಸಿದರು || ೪೫ ||

ಬಳಿಕರ್ಘ್ಯವೆತ್ತಿ ಬಂದಿಸಿ ರನ್ನವಸತಿಯ | ನಲಘುಪಯೋಧರೆಸಹಿತ
ಇಳೆಯಾಣ್ಮನು ಪೊಱಮಟ್ಟು ಬಂದೊಪ್ಪುವ | ಕೊಳನ ನೋಡುವ ಸಮಯದೊಳು || ೪೬ ||

ಅಂದಾ ಸ್ತ್ರೀರತ್ನವನಾಳಿಯರುಗೂಡಿ | ತಂದು ಗಿರಿಯೊಳಿಟ್ಟ ನೃಪನ
ಬಂದು ಮಾಯದ ಹಯಮಾಗಿ ಕೊಂಡೊಯ್ದ | ನಂದಶನಿವೇಗಖಳನು || ೪೭ ||

ಮಗುಳೆ ಬಂದದೃಶ್ಯಾಕರಣದಿ | ನಾಗರಿಮನನಾಸತಿಯ
ಬೇಗದೊಳೆತ್ತಿಕೊಂಡೊಯ್ದ ಕಱುತ್ತು ಮ | ತ್ತಾಗಸಕ್ಕಾಗಿ ಪಾಱಿದನು || ೪೮ ||

ಬಿಸಜೋಪಮಲಲಿತಾನನೆ ಸಹಿತಾ | ಸುಷುಮನು ಶ್ರೀಪಾಲನು
ವಿಷಮನವನು ಕೊಂಡೊಯ್ದಂದು ನಿಷ್ಠುರ | ವಿಷದಗೃಹಕೆ ನೂಂಕಿದನು || ೪೯ ||

ಆ ವಿಷಧರಗೃಹಮುಖವನು ಪೊಗುತಾ | ಜೀವಿತೇಶ್ವರನೊಂದಾಗಿ
ಭಾವೋದ್ಭವರಿಪುಗತಿಯೆಂದೆನುತಾ ಜ | ಯಾವತಿಯಿಂತೆಣಿಸಿದಳು || ೫೦ ||

ಗಂಡನಳಿವ ಕಂಡು ಸಾವ ಹೆಂಗಳ ಕಂಡು | ಮಂಡಲಮಾಗಿರುತಿಹರು
ಗಂಡಗೆ ಮುನ್ನ ತನ್ನ ಸುವನೀಡಾಡುವ | ಪೆಂಡಿರಪೂರ್ವ ಪೃಥ್ವಿಯೊಳು || ೫೧ ||

ಪುರುಷನಳಿದ ಬಳಿಯೊಳು ಸಹಗಮನವ | ಪಿರಿದು ಸಂತಸದಿಂದ ಮಾಡಿ
ತರುಣಿಯರುಗಳು ಮಾಸತಿವೆಸರನೆಪೊತ್ತು | ಧರೆಯೊಳು ಕೀರ್ತಿವಡೆದರು || ೫೨ ||

ತನ್ನೆಱೆಯಳ ಮುಂದೋಪನಳಿವುದಕ್ಕೆ | ಮುನ್ನ ತನ್ನಸುವನು ಬಿಸುಟಾ
ಚನ್ನೆಗಿನ್ನೆಂತಪ್ಪ ಸೈಪಹುದೋಯೆಂ | ದುನ್ನತಮಣಿಯೆಣಿಸಿದಳು || ೫೩ ||

ಈ ವಿಧದಿಂ ನಿಶ್ಚಯವ ಭಾವಿಸುವ ಜ | ಯಾವತಿಸತಿಸಹಮಾಗಿ
ಭೂವನಿತಾಭರ್ತಾರನುಣ್ಮುತ ಪೊಕ್ಕ | ನಾವಿಷಧರಗೃಹಮುಖವ || ೫೪ ||

ಹಿರಿದು ಹಸಿದ ಮಾರಿಯ ಬಾಯ್ದೆಱೆಯೊ | ಧರೆಯನೊಣೆವೆನೆಂಬ ಜವನ
ಪುರದ ಕೋಟೆಯ ಹುಲಿಮುಖದ ಬಾಗಿಲೊಯೆನೆ | ಯುರಗಗೃಹಾಸ್ಯಮೊಪ್ಪಿದುದು || ೫೫ ||

ಹಾಲಾಹಲನ ಕೇಸುರಿಯೆಳ್ದಾ ನಾ | ಗಾಲಯಾನನಮೊಪ್ಪಿದುದು
ಕಾಲಾಗ್ನಿರುದ್ರನೋವದೆ ಎವೆದೆಱೆವಾ | ಭಾಳಾಂಬಕದಂದದೊಳು || ೫೬ ||

ಆ ಕಾಳಾಹಿಗುಹೆಯನು ಸೋಕಿದಗಾಳಿ | ಯೇಕಡೆಮೊಗಮಾಗಿ ತೀವೆ
ಆ ಕಡೆಯವನಿತಳಭೂತಳವೆಲ್ಲಾ | ಚೀಕರಿಯಾಗುತಲಿಹದು || ೫೭ ||

ಸುಟ್ಟು ತೋಱಿದ ಬೆರಳುರಿವುದಾದೆಸೆಯತ್ತ | ಮೆಟ್ಟಿದ ಕಾಲ್ಮುರುಟುವುದು
ದಿಟ್ಟಿಸಲೆವೆಸೀವುದಾ ಫಣಿಗುಹೆಯೊಂದು | ಕಟ್ಟುಗ್ಗರವನೇನೆಂಬೆ || ೫೮ ||

ಮುಟ್ಟದಮುಂ ಕೊಲ್ವಹಿದೃಷ್ಟಿವಿಷಕಾಗ | ಮೆಟ್ಟಿದೆಡೆಯೊಳು ಪಾವಕನ
ಮುಟ್ಟೆ ಫಣಿಕುಕ್ಕುಟಸರ್ಪ ಸಂತತಿ | ಇಟ್ಟಣಿಸಿದವಂತಲ್ಲಿ || ೫೯ ||

ಹರನ ಕೊರಲೊಳು ಹಗ್ಗಿತು ದೇವನಿವಹ | ನಿರದಟ್ಟಿ ಕೊಲಲಾಯ್ತೆಂದು
ಪಿರಿದು ನಗುವವಂದಿನ ಕಾಲಕೂಟವ | ಭರದಿಂದಾಫನಿವಿತತಿ || ೬೦ ||

ಭರದಿಂದವೆ ಬಂದಾರವಿಶಶಿಗಳಾ | ನೆರೆಗೊಂಡಕ್ಕೆಸೆದಾಯ್ತು
ಧರೆಯಱಿವಂತೆಯೆಂದಾಸೈಂಹಿಕೆಯ | ನುರಗವಿತತಿ ನುಂಗುತಿಹವು || ೬೧ ||

ಭರದಿ ಪಾಱುವ ಪಕ್ಕಿಯದಱ ವಿಷಜ್ವಾಲೆ | ಹರಿವಾನೀರಂತೆಸೆದು
ಧರೆಗುರುಳಲು ಕಂಡಾಗುಹೆಯಹಿತತಿ | ಯೆರೆಗೊಂಡು ಜೀವಿಸುತಿಹವು || ೬೨ ||

ಇಂತೆಸೆವಾಫಣಿಪಾಲಯದೊಳು ಭೂ | ಕಾಂತ ಧೀರೋದಾತ್ತನಾಗಿ
ಕಾಂತೆಸಹಿತ ಪುಗಲದರ ಮುಖ್ಯೋರಗ | ತಾಂ ತಾಳಿತು ಕೋಪವನು || ೬೩ ||

ಸುರುಚಿರಮಪ್ಪ ಸುಧಾಮೂರ್ತಿಯೆನೆ ಬರ್ಪ | ಧರಣೀಶನ ಕಾಣುತವೆ
ಉರಗನಗರಳದುಗ್ಗರ ಹಾರಿತಾತನ | ಹಿರಿಯಪುಣ್ಯವನೇನೆಂಬೆ || ೬೪ ||

ನೋಡಿರೆಯಿವನ ಬೀರವನವನಿಯೊಳೆಮ್ಮ | ಗೂಡಿನದೆಸೆಮೊಗಮಾಡಿ
ಆಡಿ ಬರ್ದುಂಕಿದರಿಲ್ಲೆಂದಾ ಫಣಿ | ಮಾಡಿದುದತಿ ವಿಸ್ಮಯವ || ೬೫ ||

ಕಣೆಯನುಗಿದ ಭಟ ಬಿಲ್ಲನೊಕ್ಕೈಗೊಂಡು | ರಣರಂಗವ ಪೊಗುವಂತೆ
ಫಣಿ ತನ್ನ ಗರಳದುಗ್ಗರ ಹಾರಿತೆಂದಿನಿ | ಸೆಣಿಸದೆ ನೃಪನನೆಯ್ದಿದುದು || ೬೬ ||

ಬಿಸುಸುಯ್ಲಿಂ ರೇಚಕ ಪೂರಕವ ಮಾಳ್ಪ | ಮಸಿವಣ್ಣದ ಫಣಿಯಂಗ
ಎಸೆದುದಂತಕನೆಂದೆಂಬೋಜನ ಕಯ್ಯ | ಹೊಸ ತಿದಿಯೆಂಬ ಮಾಳ್ಕೆಯೊಳು || ೬೭ ||

ನಂಜು ಮುತ್ತಾನಾಗರು ನಡೆವೆಡೆಯೊಳು | ಸಂಜೀವಿನಿಪುರಿಯೊಪ್ಪಿದುದು
ರಂಜಿಪ ಜಗುನೆಯಿತ್ತಡಿಯೊಳೆಸೆವ ರಕ್ತ | ಕಂಜವನದ ಮಾಳ್ಕೆಯೊಳು || ೬೮ ||

ಉರಗನ ಹೆಡೆಯ ಮಾಣಿಕವೊಪ್ಪಿತಾಹರ | ನುರಿಗೈಯ್ಯವರವ ಕೊಂಡ
ದುರುಳರಕ್ಕಸನ ವಾಮೇತರಹಸ್ತದ | ಬೆರಲುಂಗುರರನ್ನದಂತೆ || ೬೯ ||

ಅರಸನ ಕಂಡು ಕೋಪದೊಳೆಯ್ದಿ ತಿಱ್ರನೆ | ತಿರುಗಿದ ಫಣಿಲೋಕವನು
ಅರೆದುನುಂಗುವೆನೆಂದೆಂಬ ಮಾರಿಯ ಗಾಣದ | ಕರಿಯ ಕೊಂತದವೋಲೊಪ್ಪಿದುದು || ೭೦ ||

ಆರಭಟೆಯೊಳರಸನ ಕಂಡು ಪಾಯ್ದಸಿ | ತೋರಗನಂಗಮೊಪ್ಪಿದುದು
ವೀರಕೃತಾಂತನು ಸ್ಫೋಟಿಸಿಪೊಯ್ದಾ | ಭಾರಿಯಗದೆಯೆಂಬಂತೆ || ೭೧ ||

ಪೊಡೆಯಲೊಡನೆ ಪೊಳೆಯಲು ಕೃಷ್ಣಾಹಿಯ | ಹೆಡೆ ಪೊಡವಿಯೊಳಪ್ಪಳಿಸಿ
ಕಡುಗಲಿ ಕಂಡಾಕ್ಷಣದೊಳೆ ತನ್ನ ಕೇ | ಸಡಿಯಿಂದವೆ ಮೆಟ್ಟಿದನು || ೭೨ ||

ಒತ್ತಿತೊತ್ತುಳಿವ ಧೀರೋದಾತ್ತನಂಗವ | ಪತ್ತಿದ ಫಣಿಪತಿಯಂಗ
ಬಿತ್ತರಮಾದುದಿಂಗಡಲ ಕಡೆವ ಬೆಟ್ಟ | ಸುತ್ತಿದ ಶೇಷನಂದದೊಳು || ೭೩ ||

ಬಿಗಿದ ಹಾವಿನ ಸುತ್ತಳಿದು ವಿಕ್ರಮಶಾಲಿ | ನಿಗರ ತೆಗೆದು ನೋಯಿಸಲು
ಬಗೆವಂದನುದಿನ ಹರಿ ಕಾಳಿಂಗನ | ಮಿಗೆ ಮರ್ದಿಸಿದ ಮಾಳ್ಕೆಯೊಳು || ೭೪ ||

ಆ ಸರ್ಪನತ್ಯುಗ್ರತೆಯನೆ ನೆಗ್ಗೊತ್ತಿದಾ | ಸಾಸಿಗನ ಕಾಣುತವೆ
ಆಸುರದಿಂ ಕೆಲಬಲದೊಳಿರ್ದಹಿತತಿ | ಮಾಸಂಕದಿಂ ಮುತ್ತಿದವು || ೭೫ ||

ಸಿರವನಡಱುವವೋಲ್ಕೈಕಾಲ್ಬೆರ | ಲ್ಕೊರಲನುರಗ ತತಿ ಸುತ್ತೆ
ಧರಣಿಪತಿಯೊಪ್ಪಿದನಂದಿನುರಗಾ | ಭರಣನೆಂದೆಂಬ ಮಾಳ್ಕೆಯೊಳು || ೭೬ ||

ಆ ಸಾಸಿಗನುಗ್ರಮಪ್ಪ ಬೀರವ ಕಂಡು | ವಾಸುಗಿ ಹಿತಮೃದುಮಪ್ಪ
ಭಾಸುರಮಣಿ ದೀಧಿತಿಗಳ ಸೂಸಿ ತಾ | ನೇ ಸುರುಚಿರ ಶಯ್ಯೆಯಾಯ್ತು || ೭೭ ||

ಮತ್ತಂಗೋಪಾಂಗವ ಸುತ್ತಿದಹಿತತಿ | ಚಿತ್ತೋದ್ಭವಸನ್ನಿಭಗೆ
ಉತ್ತಮಮಪ್ಪ ದಿವ್ಯಾಭರಣಗಳಾಗಿ | ತತ್ತತ್‌ಸ್ಥಾನಕೊಪ್ಪಿದವು || ೭೮ ||

ಕರಮೆಸೆವಾ ಕೃಷ್ಣೋರಗ ಶಯ್ಯೆಯೊ | ಳರಮಗನೊಱಗಿಯೊಪ್ಪಿದನು
ಒರೆಗಲ್ಲೊಳು ಕಡೆಯಾಣಿಯ ಚಿನ್ನವ | ನೊರೆದ ರೇಖೆಯ ತೆಱನಾಗಿ || ೭೯ ||

ಹರಿಯ ವಕ್ಷದ ಕೌಸ್ತುಭಮಣಿಯೊ ದಿವ್ಯ | ತರುಣಿಯ ಕೇಶಬಂಧನದ
ಅರಲಬಾಸಿಗವೋಯೆಂದೆನಲೊಪ್ಪಿದನಂ | ದರಸಸಿತಾಹಿತಳ್ಪದೊಳು || ೮೦ ||

ಸುರುಚಿರಮಪ್ಪಹಿತಳ್ಪದೊಳೊಱಗಿದ | ಧರಣೀಶನಡಿದಾಮರೆಯ
ತರುಣಿಜಯಾವತಿ ಕೆಂದಳಿರ್ಗಯ್ಯಿಂ | ದುರುಮುದದಿಂದೊತ್ತಿದಳು || ೮೧ ||

ಕರಿಯ ಕಂಜದ ಕಾಡೊಳು ರಾರಾಜಿಪ | ಅರಸಂಚೆಯ ಜೋಡಿನಂತೆ
ಸುರುಚಿರಮಪ್ಪಸಿತಾಹಿತಳ್ಪದೊಳು ಬಂ | ಧುರಮಾದುದಾ ದಂಪತಿಗಳು || ೮೨ ||

ಇಂದಿರದೆಸೆಯ ಹೊರೆಯೊಳೆಯ್ತಪ್ಪನ | ವೇಂದುಲೇಖೆಯ ತೆಱನಾಗಿ
ಬಂದಳದೊರ್ವದೇವಾಂಗನೆಯಾ ಬಿಲ | ದೊಂದು ಕಡೆಯ ಕೋಣೆಯಿಂದ || ೮೩ ||

ಸಂತಪ್ತಾರ್ಜುನ ವರ್ಣವಿದ್ಯುರ್ಲತೆ | ಯಂ ತೆಗಳುವ ಕೇಕರಾಂಶು
ಕಾಂತಕಲಾಭೃದ್ಬಿಂಬವದನೆ ದೇವ | ಕಾಂತೆ ಕಣ್ಗತಿರಂಜಿಸಿದಳು || ೮೪ ||

ಭುವನದೊಳುಳ್ಳಬಲಾಜನತತಿರೂಪು | ಕುವರಿಯನನ್ಯಜಶಿಲ್ಪಿ
ಕವಳಿಗೆಗಟ್ಟಿ ಕನ್ನಡಿಸಿದವೊಲು ದೇವಿ | ಯವಯವಶೋಭೆಯೊಪ್ಪಿದುದು || ೮೫ ||

ಸುರುಚಿರಮಣಿದೊಡವಿನ ಕಡೆಗಣ್ಗಳ | ಕರಪದತಳನಖತತಿಯ
ಬೆರಕೆವೆಳಗ ಸೂಸುತ ಬಂದಾಳಾದೇವ | ತರುಣಿ ಭೂವರನಿರ್ದೆಡೆಗೆ || ೮೬ ||

ಕಳಶವೆ ಮೊಲೆ ಕನ್ನಡಿಮೊಗ ಗುಡಿಮುಡಿ | ತಳಿರ್ಗೈದಳ ಲಾಜೆರದನ
ಸುಳಿಗುರುಳ್ಗಳ ತೋರಣದಿಂದಾದೇವಿಮಂ | ಗಲೆಯಂತೊಪ್ಪಿದಳಲ್ಲಿ || ೮೭ ||

ಮುನ್ನಿನ ಜನ್ಮದೊಳಾದೇವಿ ಕಾಮಿನಿ | ತನ್ನ ಸಂಬಂಧವಪ್ಪುದಱಿಂ
ಉನ್ನತ ಮತಿಗೆ ಜಾತಿಸ್ಮರಣತ್ವವು | ಚನ್ನಾಗಿಯೆ ಪುಟ್ಟಿದುದು || ೮೮ ||

ದೇವಿಯಬರವ ಕಂಡಾ ಫಣಿತಳ್ಪದ | ಭೂವರನೆಳ್ದಡಿಯಿಟ್ಟು
ಭಾವೆ ಸಹಿತ ಭಕ್ತಿಯೊಳೆಱಗಿದ ಕೆಂ | ದಾವರೆಯೆಸಳ್ವಜ್ಜೆಗಳಿಗೆ || ೮೯ ||

ಕಂಜೋಪಮಾಂಘ್ರಿನಖಾವಳಿ ದೀಧಿತಿ | ಮಂಜರಿಯಳಿಕುಂತಳವನು
ರಂಜನೆಗೆಯ್ದ ದಂಪತಿಗಳ ಹರಸಿ ಚಿ | ರಂಜೀವಿಯೆನುತ್ತೆತ್ತಿದಳು || ೯೦ ||

ಬಡಬಡಾದುದು ನಿನ್ನಂಗವಲ್ಲಿರಿಯೀ | ಕೆಡಕುಪಾವಿನ ಪೋರಟೆಯಿಂ
ಕಡುಗಲಿಯೆನುತ ಕಾರುಣ್ಯದಿ ದೇವಿ ಮೆ | ಯ್ದಡವಿ ನುಡಿದಳಿಂತೆಂದು || ೯೧ ||

ಹಿಂದಣ ಜನ್ಮದೊಳೆನಗೆ ನೀನಣುಗಿನ | ಕಂದನಾಗಿರ್ದೆ ಕುಮಾರ
ಹೊಂದಾವರೆ ಮೊಗದೀ ಕೋಮಲೆ ನಿನ | ಗಂದು ವಲ್ಲಭೆಯಾದಳೊಲಿದು || ೯೨ ||

ಕೃತಪುಣ್ಯೋಲದಿಂದವೆ ನಾಕಲೋಕದ | ಪತಿಗೆ ವಲ್ಲಭೆಯಾಗಿ ನಾನು
ಅತಿಶಯಮಪ್ಪ ಸಿರಿಯನಾಂತು ಪದ್ಮಾ | ವತಿವೆಸರನೆ ತಾಳಿದೆನು || ೯೩ ||

ಕಂದ ಕೇಳ್ನಿನ್ನ ನೋಡುವೆನೆಂಬಭಿಲಾಷೆ | ಯಿಂದೆನ್ನ ಪತಿಯ ಬೀಳ್ಕೊಂಡು
ಬಂದೆ ನಾನಿಮ್ಮ ಕೀಳ್ನೆಲದ ನಾಡಿಂ ಮನ | ಸಂದು ಬಂದೆನು ಭೂತಳಕಾಗಿ || ೯೪ ||

ಭೂಸುರಮಪ್ಪೀ ದಿವ್ಯವಿಭೂಷಣ | ವೀ ಸರ್ಪಶಯನಂಗಳನು
ಭೂಸುದತೀಪತಿ ನಿನಗೀವೆನೆಂಬೊಂ | ದಾಸಕ್ತಿಯಿಂದೆಯ್ತಂದೆ ನಾನು || ೯೫ ||

ನೀನೀಯೆಡೆಗೆಯ್ದುವನೆಂಬುದನು ಮ | ತ್ತಾನುಱೆ ಬಲ್ಲವಳಾಗಿ
ಈ ನಾಗಗುಹೆಯ ನಿರ್ಮಿಸಿಕೊಂಡಿರ್ದೆನು | ಮಾನಿತ ಮದನಸ್ವರೂಪ || ೯೬ ||

ಸತಿಪತಿಗಳ ನಿಮ್ಮೀರ್ವರನೀಯಹಿ | ತತಿಯ ಗುಹೆಗೆ ಹಾಕಲೆಂದು
ಸಿತಗನಶನಿವೇಗನಂಬರಚರನ ದು | ರ್ಮತಿಗೆ ಪ್ರೇರಣೆ ಮಾಡಿದೆನು || ೯೭ ||

ಆದರಮಪ್ಪ ವಚನಗಳ ನುಡಿದು ಮ | ತ್ತಾ ದೇವಿಯತಿ ಹರುಷದೊಳು
ಕಾದಲರವರಿರ್ವರ ಹರಸಿದಳು ಶು | ಭೋದಯಮಕ್ಕೆಂದಾಗ || ೯೮ ||

ಧರೆಯೆಲ್ಲವನಾಳು ದಿವ್ಯಾಂಗನೆಯರ | ವರಿಸು ವಿರೋಧಿವರ್ಗಗಳ
ಧುರದಿ ಭಂಗಿಸು ಪಲಪಗಲೆಂದಾದೇವಿ | ಹರಸಿ ಸೇಸೆಯ ಸೂಸಿದಳು || ೯೯ ||

ಮುತ್ತಿನಕ್ಷತೆಯಿಟ್ಟು ದೇವಿ ನೃಪನ ಚ | ಲ್ವೆತ್ತು ನೋಡಲು ಕಣ್ಣಕಾಂತಿ
ಬಿತ್ತರಿಸಿದುದಾಲಿವರಲಪುಂಜದ ಮೇಲೆ | ಹತ್ತಿದಮಿಂಚಿನಂದದೊಳು || ೧೦೦ ||

ಆ ನೆಲದಿಂ ಮುಂದಕೆಯ್ತಂದವರ ಮ | ನೋನುರಾಗದೊಳಾದೇವಿ
ಮಾನಿತಮಾದ ಸಿವಂಕರನಗರಿಯು | ದ್ಯಾನದೊಳಗೆ ಹೊಗಿಸಿದಳು || ೧೦೧ ||

ಕವಿಜನಕಲ್ಪಭೂಜಾತ ನೂತನಚಿತ್ತ | ಭವಮೇರುಸನ್ನಿಭಧೀರ
ನವಚೈತ್ರನಂತೆಯ್ದಿದನಾವನವನಂ | ದವನಿಪಾನ್ವಯಕುಲದೀಪ || ೧೦೨ ||

ಇದು ಭಾವಕಜನಕರ್ಣವಿಭೂಷಣ | ಮಿದು ರಸಿಕರಚಿತ್ತದೆಱಕ
ಇದು ವಾಣೀಮುಖಮಾಣಿಕ್ಯಮುಕುರ | ಮತ್ತಿದು ಶೃಂಗಾರಸುಧಾಬ್ದಿ || ೧೦೩ ||

ಹನ್ನೊಂದನೆಯ ಸಂಧಿ ಸಂಪೂರ್ಣಂ