ಶ್ರೀಮದಮರಮಣಿಮಕುಟರಂಜಿತರತ್ನ | ಧಾಮಾಂಬುಧಾರಾಧೌತ
ತಾಮರಸಾಂಘ್ರಿಯುಗಲ ವೀರನಾಥನು | ದ್ದಾಮ ಸುಖವನೀವುದೆಮಗೆ || ೧ ||

ಅರಗಿಳಿಯೋದುವ ಮಟವಳಿಯಾವಾಸ | ವರಲಂಬನ ಶಸ್ತ್ರಸದನ
ಪರಪುಟ್ಟನ ಜನ್ಮಭೂಮಿಯೆಂದೆನೆ ಬಂ | ಧುರಮಾದುದಾ ಬಹಿರ್ವನವು || ೨ ||

ಪರಿವ ಪನ್ನೀರಕಾಲುವೆಯಿಂದ ಬೆಳೆದ ಕ | ರ್ಪುರವಾಳೆಯಲರ್ದ ಕುಂಕುಮದ
ಮರಗಾಡು ಮೂಡುವೆಟ್ಟದೊಳು ಜವಾದಿ ಕ | ತ್ತುರಿಮೃಗ ಮಸೆದಾಡುತಿಹವು || ೩ ||

ತುಂಬಿಯುಣಿಸುವಿರಹಿಗಳೆರ್ದೆಯೊಳು ಹೊಳೆ | ವಂಬು ತೆಂಬೆಲರಾಭರಣ
ಅಂಬುಜಾಕ್ಷಿಯ ನಿಡುಮುಡಿಸಿರಿಯೆನೆ ಕ | ಣ್ಗಿಂಬಾದುದಾ ಬಹಿರ್ವನವು || ೪ ||

ಅರಗಿಳಿ ಪಠಿಸಲರ್ಥೈಸುವ ಚಾಣಾಂಕಿ | ಪರಭೃತಗಾನಶ್ರುತಿಗೆ
ಸರಗೊಡುವಳಿ ತಳಿರ್ವೊಯ್ಲವಾದ್ಯಕೆ ನಲಿ | ದಿರದೆನರ್ತಿಪ ನವಿಲಿಹವು || ೫ ||

ಇಮ್ಮಾವಿನ ತಳಿರುಳಿಮುಱಿದಾ ಕಂತು | ಕಮ್ಮಿದನಪ್ಪ ಬಿಲ್ಗೊಂಡು
ಸುಮ್ಮಾನದಿಂದೆಸುವನು ವಿರಹಿಗಳನು | ಸಮ್ಮೋಹನಶರದಿಂದ || ೬ ||

ಬನದ ಬಂಧುರತೆಯ ಕಂಡಾ ಸಗ್ಗದ | ವನಿತೆಯರುಗಳು ತಂತಮ್ಮ
ಮನದಾಣ್ಮರುಗೂಡಿ ವನಜಲಕೇಳಿಯ | ನನುರಾಗದಿಂ ಮಾಡುತಿಹರು || ೭ ||

ಸುರಭೂರುಹದ ಬೀಜವನಗೆಹೊಯ್ದು | ಸುರರು ಸುಧಾಂಬುವನೆಱೆದು
ಹರುಷದಿಂದವೆ ಸಲಹುತಮಿಹರಾಸುರು | ಚಿರಮಪ್ಪುದ್ಯಾನದೊಳು || ೮ ||

ವನಕೇಳಿಯನಿರದಾಡುವ ನಿರ್ಜರ | ವನಿತೆಯರುಗಳಲರ್ಮುಡಿಯ
ತನಿಗಂಪುಂಡು ಜರತ್ವಂಬಡೆದನು | ದಿನ ಸುಖಿಪಳಿಯಿರ್ಪವಲ್ಲಿ || ೯ ||

ಬಂದ ಬಸಂತನ ಮೀಸಲಾಶ್ರಮ ಕೆಡ | ಲೆಂದರ್ವಿಜ್ಜಣಿಗೆಯೊಳು
ನಂದನವಧು ಬೀಸಿಕೊಳೆ ಪುಟ್ಟಿದೆಲರೆನೆ | ಮಂದಮಾರುತನೂದುತಿಹುದು || ೧೦ ||

ಮುಗುಳ್ವಿಲ್ಲನಮಂತಣಶಾಲೆಯಿಂತಿದ | ನಗಲಿ ಜೀವಿಪರೀಬನಕೆ
ಪುಗಲೆಂಬ ಪಡಿಯರವಕ್ಕಿವಾತನೆ ಮೀಱಿ | ನಗುತ ನಡೆದನಾನೃಪತಿ || ೧೧ ||

ಮನುಜವಸಂತಮಹಾಕರಣಿಕನಾ | ಬನವನಾಕಾಲದೊಳೆಯ್ದಿ
ನನೆಗೊನೆ ತಳಿರೆಳೆ ಮಿಡಿಗಾಯಿದೋರೆವ | ಣ್ಗೊನೆವೊತ್ತವಾತರುನಿಕರ || ೧೨ ||

ಆ ವನವೆಂಬ ತಾವರೆಯ ಕರ್ಣಿಕೆಯಂತೆ | ಪೂವಿನಕೊಳನೊಂದಿರಲು
ಭಾವೆಸಹಿತ ದೇವಿಯ ಬೆಂಬಳಿವಂದು | ಭೂವಲ್ಲಭ ಕಂಡನಾಗ || ೧೩ ||

ಕಾವನ ಜಯಶಾಲೆಯ ರಾಯಂಚೆಯ | ಚಾವಡಿಯಲರ್ವಕ್ಕಿಗಳ
ಜೇವಣಶಾಲೆಯೆಂದೆನಲೊಪ್ಪಿತಲ್ಲಿ ರಾ | ಜೀವಾಕರಮೊಂದರಲ್ಲಿ || ೧೪ ||

ಅರುಣಾಂಬುಜಮಗ್ನಿಜಲಪಕ್ಷಿಯಿಂ | ಚರಮಂತ್ರವೆನೆ ವಿರಹಿಗಳ
ಕೊರಲಿಟ್ಟ ಕಾಮಧ್ವರಿ ಮುಖಕುಂಡದ | ಸಿರಿವಂದುದಾತಿಳಿಗೊಳನು || ೧೫ ||

ಅಳಿಯಾಟಕೆ ವನದೊಡತಿ ಹೇಮಾಂಬುಜ | ದಲರ್ಗಳ ಕೆಲದಟ್ಟೆ ಸಹಿತ
ಒಲಿದಿಟ್ಟ ಬೆಳ್ಳಿಯ ಪರಿಯಾಣದಂತೆ ಪ | ಜ್ಜಳಿಸಿದುದಾಕಾಸಾರ || ೧೬ ||

ಪೊಳೆಪುದೋಱುವ ಪೊಡೆಮಗುಚುವ ಸುಳಿಗೊಂಡು | ಸುಳಿವ ತೇಲ್ವಕ್ಕಿಗಳ್ನಡುಗೆ
ಇಳಿವ ಮೇಲಕೆ ಪುಟನೆಗೆವ ಹಲವು ಮೀಂ | ಗಳಿನೊಪ್ಪಿತಾತಿಳಿಗೊಳನು || ೧೭ ||

ಆ ತಿಳಿಗೊಳದ ಚಲ್ವನೆ ನೋಡುತ ತನ್ನ | ಮಾತೆ ಸಹಿತ ಹರುಷದೊಳು
ಶ್ರೀತನುಜಾತಸನ್ನಿಭರೂಪನಂದು ಸ | ತ್ಪ್ರೀತಿಯಿಂದವೆ ನಿಂದನಾಗ || ೧೮ ||

ಅನಿತರೊಳಪರದಿಗ್ವದು ನೋಳ್ಪಪಳುಕಿನ | ಘನಮುಕುರವನಾನೃಪನ
ಘನತೇಜವಡೆಱೆ ಕೆಂಪಾಯ್ತೆನೆ ಪಡುವೆಟ್ಟ | ಗೊನೆಯರುಣಾರ್ಕನೊಪ್ಪಿದನು || ೧೯ ||

ನಡೆವ ಸಹಸ್ರಪಾದವನಂದಾಸುರ | ಕಡಿಯಲಂಬುಧಿಯೊಳಗುಡಿದು
ಕೆಡೆವರ್ಕನಿಂದೊಕ್ಕುಪರಿದರಕ್ತವಿದೆನೆ | ಕಡುಸೊಗಸಿತು ಸಂಜೆಗೆಂಪು || ೨೦ ||

ಪ್ರಿಯಮಿತ್ರನ ಕಾಣ್ಬನ್ನೆವರುರುಮುದ | ಶಯನಾಬ್ರಹ್ಮಚಾರಿತ್ರ
ನಿಯಮವೆಂದೆಣೆವೊಡೆವವೋಲೊಡೆದವು ರಾ | ತ್ರಿಯಮುಖದೊಳಗೆಣೆವಕ್ಕಿ || ೨೧ ||

ಸರಸಿಜಗೃಹದ ಸಿರಿಯ ಸೂಳಾ ಹರಿ | ಯಿರದೆ ಬಂದೆಸಳ್ವಡಿಗೆತ್ತು
ಪಿರಿದು ರಮಿಸುವಂತೆ ವರ ಕುಟ್ಮಳದೊಳ | ವರಿದುದಾಗವೆ ಕೃಷ್ಣಕಾಂತಿ || ೨೨ ||

ಅಲರ್ವಿಂಡಿಗೆಱಗಿ ಝೇಂಕರಿಪಳಿಶಿಶುಗಳಿ | ನ್ನೊಲೆವ ನೈದಿಲ ನಿಡಿದಂಟು
ಜಲದೇವಿಯರಂಗಜವೀರವನೋದು | ತೊಲೆವ ಮೋಹರಿಯಂತಾಯ್ತು || ೨೩ ||

ಪೊಡವಿವೆಣ್ಣಾದಿತ್ಯಮಂಡಲವೆಂದೆಂಬ | ಸೊಡರ್ಗುಡಿಯಿಂ ಕಜ್ಜಳವನು
ಹಿಡಿದ ಹೆಂಚಿನತೆಱನೆಂದೆನೆ ಕಾವಳ | ವಡಿಸಿ ಕಪ್ಪಾದುದಾಗಸವು || ೨೪ ||

ಆ ಪಗಲಳಿಯೆ ಸಂಧಯಾಕರ್ಮಂಗಳ | ನಾಪೂಗೊಳನೊಕ್ಕು ಮಾಡಿ
ಆ ಪೆಣ್ಮಣಿಗೂಡಿ ದೇವಿಯೊಡನೆ ಭೂ | ಮೀಪತಿ ಪಿರಿದೊಪ್ಪಿದನು || ೨೫ ||

ಆ ಸರಸಿಯ ತೀರದೊಳೊಂದು ದೇವನಿ | ವಾಸಮೊಪ್ಪಿರಲಾಯೆಡೆಗೆ
ಆ ಸರ್ಪರಾಜವಲ್ಲಭೆಯಿಂತವರ್ಗಳ | ನಾಸಕ್ತಿಯಿಂ ನಡೆಸಿದಳು || ೨೬ ||

ನಂದನವನಿತೆ ದಿಗಾವಲೋಕನ ಮಾಡ | ಲೆಂದು ವಸಂತ ಮಾಡಿಸಿದ
ಸುಂದರಮಾದಪರಂಜಿಯ ಕರುಮಾಡ | ದಂದಮಾಯ್ತಾದೇವದಾಸ || ೨೭ ||

ಆ ಸುರುಚಿರಮಪ್ಪ ದೇಗುಲದೊಳಗೊಂದು | ಭಾಸುವ ಮೂರ್ತಿಯೊಪ್ಪಿದುದು
ಆ ಸರ್ಪಲೋಕಾಧಿಪನವಲ್ಲಭೆಯ ವಿ | ಲಾಸವನಚ್ಚೊತ್ತಿದಂತೆ || ೨೮ ||

ದೇವಿಯ ಮುಂದೆ ತತ್ಪ್ರತಿಮೂರ್ತಿ ಪಳುಕಿನ | ದೇವಕೂಟದೊಳೊಪ್ಪಿದುದು
ಭಾವಿಸಿ ನಡೆನೋಡುವ ಕೈಪಿಡಿಯೊಳು | ತೀವಿದ ಪ್ರತಿಬಿಂಬದಂತೆ || ೨೯ ||

ಕಡುಸೊಗಯಿಪ ದೇವಿಯ ಮೂರ್ತಿಯಿರ್ಪೊಳ | ಗೆಡದೆ ದೇವಿಯ ಬೆಂಬಳಿಯ
ನಡೆವ ನರೇಂದ್ರಚಂದ್ರನು ತನ್ನ ಕಾಲಿಂ | ದೆಡಹಿ ಕಂಡನು ಒಂದು ಮಣಿಯ || ೩೦ ||

ಉಂಗುಟಮೆಡಹಿ ಹಡೆದ ಮಾಮಣಿಯ ದೇ | ವಾಂಗನೆ ಕಂಡು ಸಂತಸದಿಂ
ತುಂಗವಿಕ್ರಮನೊಡನಿಂತು ನುಡಿದಳು ಮ | ನಂಗೊಳಿಸದರಾಗದಿಂದ || ೩೧ ||

ಇದರ ಹೆಸರು ಕಾಕಿಣಿಯೆಂಬ ಮಾಮಣಿ | ಇದು ಚಕ್ರೇಶ್ವರ ನಿನಗೆ
ಸದಮಲ ಶಶಿಸೂರ್ಯರ ಸತ್ಕಾಂತಿಯ | ನೊದಗಿಸುವದು ರಾತ್ರಿಯೊಳು || ೩೨ ||

ಎನುತ ನುಡಿದು ದೇಗುಲದೊಳು ನೆಲಸಿದ | ವಿನುತಮಪ್ಪಾ ದಿವ್ಯಮೂರ್ತಿ
ಕನಕದ ಪ್ರತಿಬಿಂಬವಾದುದರಿಂ ದೇವ | ವನಿತೆಯಂಡಗಿದಳಲ್ಲಿ || ೩೩ ||

ತನ್ನುತ್ತಮಮೂರ್ತಿಯಲ್ಲಿ ತಾನಡಗಿದ | ಸನ್ನುತೆ ಪದ್ಮಾವತಿಯ
ಬಿನ್ನಣದಿಂ ನುತಿಯಿಸಿದರಂತವರಂ | ದುನ್ನತಮಪ್ಪ ಭಕ್ತಿಯೊಳು || ೩೪ ||

ಮನದಳ್ಕರಿಂದಾ ದೇವಿಯಮಹಿಮೆಯ | ಜನನುತರೊಸೆದು ಕೊಂಡಾಡಿ
ವನಜಾಕರದ ನೀರ್ವೂಗಳ ತಿರಿತಂದು | ವಿನಯದಿಂ ಪೂಜಿಸಿದರು || ೩೫ ||

ಕೆಂಜಾಜಿ ನಾಗಸಂಪಿಗೆ ಬಂದುಗೆಯಪ | ರಂಜಿ ಕೇದಗೆಯೊಳ್ಳಲರ
ಮಂಜೀರಗಳನರ್ಚಿಸಿದರಾ ದೇವಿಯ | ಕಂಜನಿಭಾಂಘ್ರಿದ್ವಯಕೆ || ೩೬ ||

ಆ ರನ್ನದ ಬಲ್ವೆಳಗಿಂದವೆ ಮ | ತ್ತಾರಾತ್ರಿಯಳಿವನ್ನಬರ
ನಾರಿಸಹಿತ ಪೂಜಸಿದನು ದೇವಿಯ | ರಾರಾಜಿಪಡಿದಳಿರ್ಗಳನು || ೩೭ ||

ಜಲಕುಸುಮವ ತಿರಿತಂದು ದೇವಿಯಪಾದ | ತಳವನರ್ಚನೆ ಮಾಳ್ಪೆನೆಂದು
ಲಲನೆ ಸಹಿತ ನಡೆತಂದನರಸನಾ | ನಳಿನಾಕರದೆಡೆಗಾಗಿ || ೩೮ ||

ಜಲದೇವತೆಯಪ್ಪ ಮಣಿಗರುಮಾಡದ | ಕಳಶವೆಂದೆಂಬ ಮಾಳ್ಕೆಯೊಳು
ಕೊಳದಮಧ್ಯದೊಳೊಂದು ಹೊನ್ನಬಣ್ಣದ ಚಲ್ವ | ನಳಿನ ಕುಟ್ಮಲವೊಪ್ಪಿದುದು || ೩೯ ||

ಆ ಸರಸಿಜಕುಟ್ಮಲಮರಸನ ಕಂಡು | ಸಾಸಿರೆಸಳ ಕೆದಱುತವೆ
ಆ ಸಮಯದೊಳೊಪ್ಪಿತು ಜಲದೇವಿಯ | ಹಾಸಯುಗವೆನೆ ಮೊಗದಂತೆ || ೪೦ ||

ಪಿರಿದೊಪ್ಪುವಸಿತೋತ್ಪಲವರ್ಣದಿ ಚಕ್ರ | ಮುರುಶಂಖದಿರಂಜಿಸುವ
ಸರಸಿಯೊಳಾ ಹೇಮಾಬ್ಜವೆಸೆಯಿತಾ | ಹರಿಯ ಹೊಕ್ಕುಳಕಂಜದಂತೆ || ೪೧ ||

ಭುವನಪೊತ್ತ ಬೊಮ್ಮನ ತಂದೆ ಲಕ್ಷ್ಮಿಯ | ಭವನಂಗಜನ ಕೈಯಂಬು
ರವಿಯ ಬಿದ್ದಿನಯಂದಾ ಕಂಜವ ಪೊಗ | ಳುವವೋಲುಲಿದವಂದಾಕವಿವಿತತಿ || ೪೨ ||

ಈ ಸಾಸಿರೆಸಳತಾಮರೆಯಾದೇವಿಯ | ಕೇಸಡಿಗಳನರ್ಚಿಸುವಡೆ
ಭಾಸುರಮಾಗಿದೆಯೆನುತ ತಿರಿವೆನೆಂದು | ಆ ಸುಚರಿತನೇಣಿಸಿದನು || ೪೩ ||

ಮೊಳಕಾಲ್ವರ ಕೊಳದೊಳು ಹೊಕ್ಕು ಮದಕೆರ | ಪಳಿವಱಿಗಳ ಸೋಹುತವೆ
ಪೊಳೆವಪೊಂದಾಮರೆಯರಲ ತಿರಿದನಾ | ಇಳೆಯಾಣ್ಮನತಿ ಮುದದಿಂದ || ೪೪ ||

ತಿರಿಯಲನಿತರೊಳಗೆಯಾತಾಮರೆ | ನೆರೆಪುಣ್ಯನಿಧಿಯ ಕೈಯಲ್ಲಿ
ಮಿರುಗುವ ಚಕ್ರಮಾದುದು ಮತ್ತಮಾಡಿ | ದರನನಿನ್ನೇನ ಬಣ್ಣಿಪೆನು || ೪೫ ||

ಕೊಳದೊಳಗಣ ಜಲದೇವಿಯ ಭೂವರ | ಕುಲತಿಲಕನ ರೂಪಿಗೆ ಸೋತು
ತಳುವದಟ್ಟಿದ ರನ್ನತೋಳ್ವಳೆಯೆಂಬಂತೆ | ತೊಳಗಿದುದಾ ಚಕ್ರರತ್ನ || ೪೬ ||

ಚಿರಕಾಲದಿಂದೂರಣಸ್ನೇಹವೆ ನಮಗೆಂದು | ತರಣಿತಾಮರೆಯೆಡೆಗೆಯ್ದಿ
ಹರುಷದೊಳೊಪ್ಪಿತೆಂದೆನೆ ಚಕ್ರವರನಾ | ಕರಕಮಲದೊಳೊಪ್ಪಿದುದು || ೪೭ ||

ಪೂವಿಗೆ ಘುಟಿಕೆಯನೀವೆನೆಂದಾಗ ಜ | ಯಾವತಿಯತಿಹರುಷದೊಳು
ಆ ವನರುಹದೊಂದೆಲೆಗೊಯ್ಯೆ ಬೆಳ್ಗೊಡೆ | ಯಾ ವಸುಧಾಪತಿಗಾಯ್ತು || ೪೮ ||

ಪಗೆತನದಿಂದ ಮೃಣಾಳವ ಶಶಿಯುಗಿ | ಬಗೆವೆನೆನುತ ಕಚ್ಚಿಸೆಳೆವ
ಬಗೆಯೆನೆ ಪಸುರ್ಗಾವಿನ ಮುತ್ತಿನ ತಳೆ | ಸೊಗಸಿದುದವನಹಸ್ತದೊಳು || ೪೯ ||

ಕರಿಯಮಲ್ಲಿಗೆ ಸುರಿದವಾಸಗ್ಗವರಮೇಲೆ | ಮೆರೆದವು ಬನದ ಕನ್ನೆಯರು
ಹರಸಿ ಮುತ್ತಿನ ಸೇಸೆಯನಿಕ್ಕಿದರಾ | ಅರಸಗುದಿಸೆ ಚಕ್ರರತ್ನ || ೫೦ ||

ರಕ್ಷಿತಯಕ್ಷ ಸಹಸ್ರರಂಜಿತ ಚಕ್ರ | ಮಕ್ಷೋಣಿಪತಿಗುದಿಸೆ
ದಕ್ಷಿಣಹಸ್ತದೊಳೆಸೆವ ವೇಳೆಗೆ ಲೋಕ | ಚಕ್ಷುಗುದಯಕಾಲಮಾಯ್ತು || ೫೧ ||

ಕರಗುವ ತಾರೆ ಕಣ್ಮುಚ್ಚುವ ನೆಯ್ದಿಲು | ಬಿರಿವ ಬಿಸಜ ಬಿಣ್ಪನಾದ
ಸುರಪದಿಶಾಮುಖಮೊಪ್ಪಿದುದಾತೆ | ಮರಳುವಿರುಳಕಾಲದೊಳು || ೫೨ ||

ನುಡಿವ ಕನ್ನಡವಕ್ಕಿಗೆಡವ ಕೋಗಿಲೆಮಾತ | ಗೊಡಸುವಗೊಱವ ಜಿನುಗುವ
ಅಡಿಯಾರರವಕ್ಕಿಯಾವನದೊಳು ಪಗ | ಲೊಡೆಯನುದಯಕಾಲದೊಳು || ೫೩ ||

ಅದಟನಪ್ಪರಿನೃಪತಿಯ ಧಾಳಿಬರ್ಪುದ | ಮೊದಲೆಯಱಿದು ಬಡನಾಡು
ಬೆದಱುವವೊಲು ಖರಕರನುದಯಕೆ ಮುಂಚೆ | ಬೆದರಿದುದಾ ವಸಂತಮಾಡ || ೫೪ ||

ಇರುಳ್ವೆಣ್ಣೊಲಿದು ತನ್ನೊಡನೆ ಕೂಡಲು ತ | ತ್ಸುರತಾಂತ್ಯ ಸ್ವೇದಬಿಂದು
ಭರದಿನುದಯವಾಯ್ತು ಸ್ವೇದವಾರುವವೊಲು | ಕರಗಿದೊವುಡುವಂಬರದೊಳು || ೫೫ ||

ಇರುಳೊಡತಲೆಮುರಿಯಿಡಲಿಂದ್ರನುದಯ ಭೂ | ಧರಮೆಂಬ ಪೆಟಲ್ಗೋವೆಯಿಂದ
ಉರಿಗೂಡಿನೆಗೆದ ಬಲ್ಗುಂಡೆನಲರುಣಾಂಶು | ವೆರಸಿ ಮೂಡಿದುದಿನಬಿಂಬ || ೫೬ ||

ತುರುಗಿದತಾವರೆಗಾಡೊಳವಿದು ಕಂಡು | ಗರಿಬಾಡಿ ಚಲ್ವ ಮೇಳದೊಳು
ನೆರೆನೇಹದಿಂ ಕೂಡಿ ರಮಿಸಿದೊವಾಪಗ | ಲೆರೆಯನುದಯದೆಣೆವಕ್ಕಿ || ೫೭ ||

ರವಿಬಿಂಬೋದಯಮಾಗೆ ತದ್ಧಿದಿತಿ | ಭುವನಭುಂಜಕಮಪ್ಪಂತೆ
ಕುವರನಚಕ್ರೋತ್ಪತ್ತಿಯೊಳಾ ಕೀರ್ತಿ | ಯವನಿಯೆಲ್ಲವನಾವರಿಸಿತು || ೫೮ ||

ಆ ಕ್ಷಣದೊಳಗಾತರುಣ ಕುರುಂಗಲೋ | ಲಾಕ್ಷಿಯಗ್ರಜನರವಿಂದ
ಅಕ್ಷೂಣಬಲಸಹಿತವೆ ಬಂದ ಶುಭ | ಲಕ್ಷಣನನು ಕಂಡನಾಗ || ೫೯ ||

ಆ ರುದ್ರಧರೆಯೊಳು ಪಡೆದ ಪಾದುಕ ಚಿಂ | ತಾರತ್ನ ದಿವ್ಯಖಡ್ಗವನು
ಆ ರಾಯರದೇವಗೆ ಕಾಣ್ಕೆಯನಿತ್ತು | ಚಾರುಚರಣಕೆಱಗಿದನು || ೬೦ ||

ಇನಿದಪ್ಪೊಸಗೆವಾರತೆಗೇಳಿ ಕುವರಿಯ | ಜನಕ ವಿಮಲವಾಹನನು
ಅನಿಮಿಷಪತಿಯ ವೈಭವದಿಂದವೆ ಬಂದ | ನನುರಾಗದಿಂದಾ ಬನಕೆ || ೬೧ ||

ಚತುರಂಗಬಲಸಹಿತವೆ ಬಂದಾಖಗ | ಪತಿ ಸಂತಸದಂತನೆಯ್ದಿ
ಅತಿಮಮತೆಯೊಳು ಸನ್ಮುಖವಾದನಾ | ರತಿಪತಿಸನ್ನಿಭರೂಪನನು || ೬೨ ||

ಜನನುತ ಜಯಲಕ್ಷ್ಮೀಕಾಂತನವನೀ | ವನಿತಾನೀಕಮನ್ಮಥನ
ಅನುರಾಗದಿಂ ಕಂಡನಾಖೇಚರಪತಿ | ವಿನಯವನಧಿಚಂದ್ರಮನು || ೬೩ ||

ಸಾಹಿತ್ಯಾರ್ಣವ ಶಶಿಸುಜನೋತ್ತಂಸ | ನಾಹವರಂಗರಕ್ಕಸನು
ಮೋಹನಮೂರ್ತಿಯೊಪ್ಪಿದನು ಸತ್ಕವಿಚಿತ್ತ | ಗೇಹಮಾಣಿಕ್ಯದೀಪಕನು || ೬೪ ||

ಇದು ಭಾವಕಜನಕರ್ಣವಿಭೂಷಣ | ಮಿದುರಸಿಕರ ಚಿತ್ತದೆಱಕ
ಇದು ವಾಣೀಮುಖಮಾಣಿಕ್ಯಮುಕುರ ಮ | ತ್ತಿದು ಶೃಂಗಾರಸುಧಾಬ್ದಿ || ೬೫ ||

ಹನ್ನೆರಡನೆಯ ಸಂಧಿ ಸಂಪೂರ್ಣಂ