ಶ್ರೀಮದಮರಮಣಿಮಕುಟರಂಜಿತರತ್ನ | ಧಾಮಾಂಬುಧಾರಾಧೌತ
ತಾಮರಸಾಂಘ್ರಿಯುಗಲ ವೀರನಾಥನು | ದ್ದಾಮ ಸುಖವನೀವುದೆಮಗೆ || ೧ ||

ಧುರಧೀರ ವಿಮಲವಾಹನನಾಶ್ರೀಪಾಲ | ನರನಾಥನು ತನ್ನಣುಗಿ
ಗರುವೆ ಜಯಾವತಿ ಸಹಿತ ತತ್ಪುರವ ಪೊಕ್ಕು | ಉರುಹರುಷವ ತಾಳಿದನು  || ೨ ||

ಮಾನಿತಮಾದ ಮೂಹೂರ್ತದೊಳಾಖಗ | ಸೂನುಗಾದರದಿಂದ ನೃಪತಿ
ಸೇನಾಪತಿ ಪಟ್ಟವ ಕಟ್ಟಿದನ | ತ್ಯಾನಂದದಿಂದ ಭೂವರನು  || ೩ ||

ಮತ್ತಾಬಿಜ್ಜಾಧರನಾಡಿನ ನೂರು | ಹತ್ತು ಹೊಳಲ ಬಲ್ಲಿಹರು
ಉತ್ತಮಮಪ್ಪ ವಸ್ತುವನು ಪಾವುಡವ ತಂ | ದಿತ್ತು ಸಮ್ಮುಖವಾದರವರು || ೪ ||

ಬಳಿಕ ತಮ್ಮಯ ಪುರವರಕೆಯ್ದುವೆನೆನು | ತಲಘುವಿಕ್ರಮನಾತುರದೆ
ಬಲಯುತ ವಿಮಲವಾಹನನನುಮತದಿಂ | ದಲಸದೆ ತೆರಳಲುಜ್ಜುಗಿಸಿ || ೫ ||

ತಳುವದಾರಾಯರೆಲ್ಲರು ಕೂಡಿಕೊಂಡು ಭೂ | ಲಲನೇಶನಾ ಖಗಪುರವರನ
ತಳುವದೆ ಪೊರಟುವಂದನುರಾಗದಿಂ ಪೊರ | ವಳಲ ನಂದನಕೆಯ್ದಿದನು  || ೬ ||

ಮುನ್ನ ಚಕ್ರೋತ್ಪತ್ತಿಯನು ಮಾಡಿಕೊಟ್ಟಾ | ಚನ್ನೆ ಪದ್ಮಾವತಿಸತಿಯ
ರನ್ನದೇಗುಲವ ಪೊಕ್ಕವಳಡಿದಳಿರ್ಗ | ತ್ಯುನ್ನತದಿಂದೆಱಗಿದನು  || ೭ ||

ಬಳಿಕಾದೇವಿ ತನ್ನಯ ರೂಪವ | ನಲಘುವಿಕ್ರಮಿಗೆ ತೋಱುತವೆ
ಸುಲಲಿತವಹನವನಿಧಿಗಳನೀವುತ | ಕಳುಹಿ ಮೆಯ್ಗರೆಯೆ ಮತ್ತಿತ್ತ  || ೮ ||

ದೇವಿಯೊಲವ ಮನದೊಳಗಿಟ್ಟಾಡುವಂದ | ಭೂವರರೆಲ್ಲರು ಸಹಿತ
ಆ ವನದಿಂದನುರಾಗದಿಂ ಪೊಱಮಟ್ಟ | ನಾವಸುಧಾವಲ್ಲಭನು  || ೯ ||

ಅನ್ನೆಗಮಾಭೀಮಾಟವಿಯೊಳಗಿರ್ದು | ತನ್ನೊಳು ಹೊಕ್ಕುಳಿಗೊಂಡ
ಉನ್ನತಮಪ್ಪಗಜರತ್ನಮೆಯ್ದಿತು | ತನ್ನ ತಾನಾ ನೃಪನೆಡೆಗೆ  || ೧೦ ||

ಸೊಗಸುಗಡಲೊಳು ದೇವಕರಿ ಪೂರ್ವ | ದಿಗಧೀಶನೆಡೆಗೆಯ್ದುವಂತೆ
ಅಗಣಿತಮಹಿಮನ ಬಳಿಗಾ ವನಕರಿ | ಮಿಗೆ ಹರುಷದಿ ಬಂದುದಾಗ  || ೧೧ ||

ಆ ವನಗಜರತ್ನದ ಪಿಣಿಯೊಳು ವಿಜ | ಯಾವತಿ ಸತಿಸಹಮಾಗಿ
ತೀವಿದ ಹರುಷದಿಂದವೆ ಮಂಡಿಸಿದನು | ಭೂವರಕುಲಚಂದ್ರಮನು || ೧೨ ||

ಸಾನುರಾಗದೊಳಾ ವಿಮಲವಾಹನಗೂಡಿ | ಸೇನಾಧಿಪರತ್ನವೆರಸಿ
ಮಾನಿತಮಪ್ಪ ವಿಜಯಾರ್ಧಗಿರಿಯನಾ | ಭೂನಾಥನಿಳಿತಂದನಾಗ  || ೧೩ ||

ನರಲೋಕವನಾಳುವೆನೆಂದಾ ಸಗ್ಗ | ದರಸು ತನ್ನಯ ಬಲಸಹಿತ
ಭರದಿಂದಿಳಿವ ಮಾಳ್ಕೆಯೊಳಾ ಗಿರಿಯಿಂದ | ಧರೆಗಳಿದನು ಭೂವರನು  || ೧೪ ||

ವಾಜಿವಾರಣ ದಿವ್ಯಶಸ್ತ್ರವಿಭೂಷಣ | ರಾಜಿಯ ಕಾಣ್ಕೆಯನಿತ್ತು
ರಾಜಾಧಿರಾಜನ ಕಂಡರು ವಸುಧೆಯ | ರಾಜರೆಲ್ಲರು ಮುದದಿಂದ || ೧೫ ||

ಬಾನೊಳು ಸಗ್ಗವಟ್ಟೆಗ ನೆಲದೊಳು | ಮಾನವಬಲ ಕಿಕ್ಕಿಱಿದು
ಸಾನುರಾಗದೊಳೆಯ್ದಿತ್ತು ಪುಂಡರೀಕಿಣಿ | ಗಾನರನಾಥನೊಂದಾಗಿ  || ೧೬ ||

ರಾಜಹಂಸವಿತಾನದಿಂದ ಚತುಃಪದ | ರಾಜಿಗಳಿಂ ಖಳ್ಗಿಗಳಿಂ
ರಾಗಿಪ ಜಂಗಮವಿಪಿನದಂತಾ ರಾಜ | ರಾಜನ ಸೇನೆಯೆಯ್ದಿದುದು  || ೧೭ ||

ವಾರಣಘಟ ನೆಗಳ್ದಶ್ವಸಂತತಿ ವೀಚಿ | ತೇರತಿಂಥಿನಿಯಾವೆಯಾಗೆ
ಮೇರೆದಪ್ಪಿದವಾರಧಿಯಂತೆ ನಡೆದುದು | ಭೂರಮಣನ ನಿಜಸೇನ  || ೧೮ ||

ಧರೆಯ ರಾಯರ ಗರ್ವವೆಲ್ಲವ ಸುಟ್ಟು ಮ | ತ್ತಿರದೆ ಸಗ್ಗಕೆ ದಾಳಿಯಿಡುವ
ಅರಸನ ವಿಕ್ರಮಶಿಖಿಯೆನೆ ಪದರೇಣು | ಪರಿದುದಾಪಡೆ ನಡೆವಾಗ  || ೧೯ ||

ವಸುಧೀಶರಂತೆ ಪಬ್ಬವನೆಮ್ಮರಸಿಗೆ | ಪೊಸೆದಿತ್ತು ಬದುಕಿ ನೀವೆಂದು
ವಸುಧೆಯಾಳ್ವರೊಳೊಱೆವಂತೆ ಭೇರಿನಾದ | ಮುಸುಕಿತು ಸಕಲ ಭೂತಳವ  || ೨೦ ||

ಧರೆಯೊಳೆಮ್ಮರಸನ ತೇಜಕೆಣೆಯೆಂದು | ಪಿರಿದಾಡುವಿರೆಮತ್ತಿನನ
ಕಿರಣವ ಕಿಡೆ ಹೊಡೆವಂತಾಗಸದತ್ತ | ಪರಿದವಾಧ್ವಜಪಟನಿವಹ  || ೨೧ ||

ಸುತ್ತಿಬರ್ಪರಸುಮಕ್ಕಳ ಸತ್ತಿಗೆಗಳು ವಿ | ಯತ್ತಳವನು ಪಂದಲಿಸಲು
ಮತ್ತಾಗ ಜಯವೆಣ್ಣುದ್ವಹನದೊಳೊಲಿ | ದೆತ್ತಿದ ಪಂದಲಂತಾಯ್ತು  || ೨೨ ||

ಸುರುಚಿರಮಣಿಭೂಷಣಮಿಟ್ಟು ಬರ್ಪ ಭೂ | ವರರ ಶೃಂಗಾರರಸದೊಳು
ಅರಸೆಸೆದನು ರತ್ನಾಕರದ ಮಧ್ಯದ | ವರುಣದಿಶಾಧಿಪನಂತೆ  || ೨೩ ||

ಮಾನವಲೋಕಾಧೀಶ್ವರನಾ ಹೇ | ರಾನೆಯ ಬಲ್ವಿಣಿಲೇಱಿ
ಸಾನುರಾಗದಿ ಬಂದನಾಪುಂಡರೀಕಿಣಿ | ಗಾನರಪತಿ ಬಲಸಹಿತ  || ೨೪ ||

ಸ್ಮರರೂಪನಾಶ್ರೀಪಾಲರಾಜೇಂದ್ರನು | ತರುಣಿಮಣಿ ಚಕ್ರರತ್ನ
ಉರುತರಮಪ್ಪ ಖೇಚರ ಭೂಚರಬಲ | ವೆರಸಿ ಬಂದಪನೆಂಬ ವಾರ್ತೆ || ೨೫ ||

ಅಸವಸದಿಂ ಪುಂಡರೀಕಿಣಿಗೆಯ್ದಲು | ವಸೆಗೆ ಮರುಳ್ಗೊಂಡಂತೆ
ವಸುಪಾಲನು ತತ್ಪುರಪತಿಜನಸಹಿ | ತೊಸೆದಿದಿರ್ವಂದನಾತುರದಿ || ೨೬ ||

ಜನನಿ ಕುಬೇರಶ್ರೀ ಕೇಳ್ದಾಪುರ | ವನಿತಾಜನ ಸಹಮಾಗಿ
ಮನದನುರಾಗದಿನಿದಿರ್ವಂದು ಕಂಡಳು | ತನುಜಚಕ್ರಾಧೀಶ್ವರನ  || ೨೭ ||

ಜನನಿ ಕುಬೇರಶ್ರೀಯಂಘ್ರಿಗೆಱಗಿ ಮ | ತ್ತನುರಾಗದಿಂ ತನ್ನಪದಕೆ
ವಿನತನಾದಾ ವಸುಪಾಲನನೆತ್ತಿ ಸ | ದ್ವಿನಯದಿಂದವೆ ಪರಸಿದನು  || ೨೮ ||

ಸ್ಮರರೂಪನಿಭ ವಸುಪಾಲನೊಡನೆ ಬಂದ | ವರ ಸಖೀಜನ ಬಂಧುನಿವಹ
ಪರಿಜನ ಪುರಜನವೆಲ್ಲವ ಕಂಡಾ | ಹರುಷವಡೆದನಾ ನೃಪತಿ  || ೨೯ ||

ಅವರವರಿಗೆ ತಕ್ಕುತಕ್ಕುಪಚಾರವ | ನವನೀಭರ್ತಾರಕನು
ಸವಿನಯದಿಂ ಮಾಡುತ ಪುರವರಕಾಗಿ | ಯವತರಿಸಿದನು ಸಂಭ್ರಮದೆ || ೩೦ ||

ತನ್ನಯ ಸುತೆ ಸಿರಿಯಾಪಟ್ಟಣದೊಳು | ಚನ್ನಾಗಿರೆಬಂದು ನೋಡಿ
ಮುನ್ನಿರದಮರ್ದಪ್ಪಿದಂತಿರ್ಪಖಾತಿಯ | ನುನ್ನತಗುಣಿ ಕಂಡನಾಗ  || ೩೧ ||

ಅನುರಾಗದಿಂ ಕೋಂಟೆಯನೇಱಿನೋಡುವ | ವನಿತೆಯರಾಸ್ಯಮೊಪ್ಪಿದುದು
ಜನಪತಿ ಬರೆ ಪುರಸತಿ ತೋರಣಮಿಟ್ಟಾ | ಕನಕಮುಕುರವೆಂಬಂತೆ  || ೩೨ ||

ನಗರಸತಿಯ ನೊಸಲ ಬಣ್ಣದ ಬಾ | ಸಿಗವೆಂದೆಂಬ ಮಾಳ್ಕೆಯೊಳು
ಸೊಗಯಿಪ ಮಣಿಗೋಪುರದ ಪೆರ್ಬಾಗಿಲ | ನಗಣಿತಗುಣಿ ಕಂಡನಾಗ || ೩೩ ||

ಮದಿಲೊಳು ಮಣಿವಾಡದೊಳು ಪೊಂಬಾಗಿಲ | ತುದಿಯೊಳು ಪಟ್ಟಶಾಲೆಯೊಳು
ಮದನನ ಪೆಂಡವಾಸವೆನಲಾಪುರ | ಸುದತಿಯರವನ ನೋಡಿದರು || ೩೪ ||

ಮನೆಗೆಲಸವ ಬಿಟ್ಟು ಮಕ್ಕಳನೀಡಾಡಿ | ಕನಲುವತ್ತೆಯ ಮಾತಮೀಱಿ
ತನುವ ಮರೆದು ಬಾಗಿಲಿಗೆಯ್ದಿಯಾ ಪುರ | ವನಿತೆಯರವನ ನೋಡಿದರು || ೩೫ ||

ನಟ್ಟಕಣ್ನಿಮಿರ್ದ ಕೊರಲು ನಸುದೆಱೆ ಬಾ | ಯ್ವಿಟ್ಟು ಮೇಲುದು ಬೀಳ್ವಕೇಶ
ದಟ್ಟಡಿಯಿಟ್ಟು ಧೈರ್ಯದಿ ಸತಿಯರು ಮನ | ವಟ್ಟು ನೋಡಿದರು ಭೂವರನ || ೩೬ ||

ಸಿರಿವಂತರ ಸತಿಯರು ದಿವ್ಯಮಪ್ಪ ಸಿಂ | ಗರವ ತೆಗೆದು ಮಾಸಲುಟ್ಟು
ನೆರೆದ ಚೀಟಿಯರೊಳು ಚೀಟಿಯರಾಗಿ ಭೂ | ವರನ ಬಾಗಿಲೊಳು ನೋಡಿದರು || ೩೭ ||

ಸಿರಿಮುಡಿಯೆತ್ತುವ ತೆಱದಿ ಮೇಲುದ ತೆಱೆ | ದುರವ ಕಾಣಿಸಿ ಮೆಯ್ಮುಱಿದು
ಚರಣಸ್ವಸ್ತಿಕಗೊಟ್ಟು ನೋಡಿದಳು ಭೂ | ವರನೋರ್ವಳು ಪುರವನಿತೆ || ೩೮ ||

ಸೂತ್ರದ ಹಾವೆಯವೊಲು ನೋಳ್ಪ ಹೆಂಗಳ | ನೇತ್ರಪುತ್ರಿಕೆ ಬಿಂಬಿಸಲು
ಕ್ಷತ್ರಿಯಕುಲದೀಪಕನ ಗಾತ್ರಮೆಸೆದುದು | ಚಿತ್ರಾಂಗಿಯ ತೊಟ್ಟಿಲಂತೆ || ೩೯ ||

ಇಂತತಿ ಲೀಲೆಯೊಳಾಸರ್ವೋರ್ವಿ | ಕಾಂತ ಬಲಸಹಿತಮಾಗಿ
ಸಂತಸದಿಂದರಮನೆಯ ಬಾಗಿಲಿಗಾ | ಕಂತುಸದೃಶನೆಯ್ದಿದನು || ೪೦ ||

ಅರೆಬರರಸುಮಕ್ಕಳಿಗವನತನಾಗಿ | ಯರೆಬರನೆಱಗಿಸಿ ತನಗೆ
ಅರೆಬರಿಗತಿ ವಿನಯೋಪಚಾರಮಾಡಿ | ದರಸರರಸನೊಪ್ಪಿದನು || ೪೧ ||

ಕಡುನೇಹದಿಂದೊಡವಂದವರ್ಗಾನೆಲ | ದೊಡೆಯನತ್ಯುಪಚಾರವೆರಸಿ
ಸಡಗರದಿಂ ಮಣಿಮಯ ಬಿಡಾರವ | ಕೊಡಿಸಿ ನಡೆದನರಮನೆಗೆ || ೪೨ ||

ಬನವನಂಗಜ ರತಿದೇವಿ ಸಹಿತ ಮನ | ದನುರಾಗದಿಂ ಪೊಗುವಂತೆ
ವನಿತೆ ಜಯಾವತಿ ಸಹಿತಾ ನೈಪನರ | ಮನೆವೊಕ್ಕನತಿ ಲೀಲೆಯೊಳು || ೪೩ ||

ಶ್ರೀವೆರಸಾ ಶ್ರೀವಿಷ್ಣು ಕನಕಕಂ | ಜಾವಾಸದೊಳಿರ್ಪಂತೆ
ಆ ವಧುಸಹಿತರಮನೆಯೊಳೊಪ್ಪಿದನಾ | ಭೂವರಕುಲಶೇಖರನು || ೪೪ ||

ಬಳಿಕೊಂದು ಪಗಲೊಳೋಲಗಶಾಲೆಯೊಳಾ | ಬಳಸಿದ ನೃಪರ ಮಧ್ಯದೊಳು
ತೊಳಗುವ ಮಣಿಮಯ ಸಿಂಹಾಸನವೇಱಿ | ಯಲಘುವಿಕ್ರಮಿ ಕುಳ್ಳಿರಲು || ೪೫ ||

ಅಸದೃಶಬೋಧಸಂಯುತ ಬುದ್ಧಿಸಾಗರ | ವೆಸರಪುರೋಹಿತನೆಯ್ದಿ
ಕುಸುಮಕೋದಂಡಸಮಾನರೂಪನೊಳು | ಸಂತಸದಿಂ ನುಡಿದನಿಂತೆಂದು || ೪೬ ||

ವಿಕ್ರಮಯುತ ನಿನ್ನೀಕೋಟಿಭಾಸುರ | ಚಕ್ರಾಂಶುವನದಟಲೆವ
ಚಕ್ರವೆರಸಿ ದಂಡೆತ್ತಿ ನಡೆದು ಭೂ | ಚಕ್ರವ ಸಾಧಿಪುದೆನಲು || ೪೭ ||

ಆ ಜನಕಾಧಿನಾಯಕನತಿ ಮುದದಿನಾ | ಶ್ವೀಜಶುದ್ಧನವಮಿಯೊಳು
ಪೂಜೆಯ ಮಾಡಿದನು ಸಹಸ್ರಾಂಶು | ತೇಜೋಪಮಚಕ್ರವನು || ೪೮ ||

ತದನಂತರದೊಳುಳಿದರತ್ನಂಗಳ | ವಿದಿತ ಪರಾಕ್ರಮಯುತನು
ಸದಮಲಮಪ್ಪ ವಿಧಿಯೊಳು ಪೂಜಿಸಿಯರು | ಮುದದಿ ಮತ್ತಾ ಮಱುದಿನದ  || ೪೯ ||

ವಿಜಯದಶಮಿಉದಯದೊಳು ಬಾಜಿಸಲು ದಿ | ಗ್ವಿಜಯಕೆಂದು ಭೇರಿಯನು
ಭುಜಗನರಾಮರ ಭುವನವೆಲ್ಲವು ಗಜ | ಬಜಿಸಿದುದಾ ಬಲ್ದನಿಗೆ || ೫೦ ||

ಕಡೆಗಾಲದ ಸಿಡಿಲಕಾಲದೊಳು ಬಂದು | ಪೊಡೆವುದಾಕಸ್ಮಿಕವೆಂದು
ನಡನಡನಡುಗಿ ಹಮ್ಮೈಸಿತವನಿಯಂದು | ಪೊಡೆವ ನಿಸ್ಸಾಳದ ಧ್ವನಿಗೆ || ೫೧ ||

ಪರಿಪೂರಿತಮಾದ ಭೇರಿಯ ಬ | ಲ್ಸರದಿಜಾಂಡಮೊಪ್ಪಿದುದು
ಪರಮನ ಕಯ್ಯ ಶಕುಂತಿಯತಳಿರವ | ಭರಿತಾಬ್ಜಕುಟ್ಮಲಹಂತೆ || ೫೨ ||

ಆ ನಿಸ್ಸಾಳದ ದನಿಗೇಳಿ ಚತುರಂಗ | ಸೇನೆ ದಂಡಿನ ಸಂವರಣೆಯ
ಸಾನುರಾಗದಿ ಸಂವರಿದುದಿಂತನು | ಮಾನವಿಲ್ಲದೆ ಪಟ್ಟಣದೊಳು || ೫೩ ||

ಒಡೆ ವಿದಳವ ಹುರಿಯಲ್ಕೆಯಾಹುಡಿಯೊಳ | ಗೊಡೆವೆರೆಸೊಡೆದ ಮೆಣಸನು
ತಡೆಯದಕ್ಕಿಯ ತೊಳಸೆಂದೆಂಬನುಡಿಯೆಡೆ | ವಿಡದೊಪ್ಪಿತಾ ಪಟ್ಟಣದೊಳು || ೫೪ ||

ಗುಡಿಯ ಹೊಲಿವ ಗೂಟವ ಕೆತ್ತುವ ಕತ್ತಿ | ಕುಡುಗೋಲು ಕೊಡಲಿ ಹಾರೆಗಳ
ತಡೆಯದೆ ಹಸಮಾಡುವಬಲುಸಂದಣಿ | ಯೆಡೆಬಿಡದೊಪ್ಪಿತೆಲ್ಲಿ ನೋಡಿದರು || ೫೫ ||

ಹಿಂದು ಮುಂದಕೆ ಸಂದ ಹಣವ ಲೆಕ್ಕವಮಾಡಿ | ಮುಂದಣ ಕಾಲಾವಧಿಗೆ
ಸಂದುದಮಾಡಿ ರಾಣುವಿಗೆ ಜೀವಿತವೀವ | ಸಂದಣಿ ಸೋಗಯಿಸಿತಾಗ || ೫೬ ||

ಲೆಕ್ಕಿಸಿ ಮನೆಯ ಬೀಯಕೆ ತಕ್ಕ ಹಣವ ಹೆ | ಮ್ಮಕ್ಕಳ ಕೈಯೊಳಗಿತ್ತು
ಮಕ್ಕಳ ಮುದ್ದಾಡಿಸಿ ಪೊಱಮಡುತಿರ್ದ | ರೆಕ್ಕಟಿಗಳು ಮನೆಗಳನು || ೫೭ ||

ಮನೆಯ ಬಾಗಿಲ ಕಾವಲು ಬೀಗವನೊಂ | ದಿನಿಸು ಮರೆಯಬೇಡಬೇಡ
ಎನುತ ಸಜ್ಜನೆಯರೊಳುಸುರಿ ದಂಡಿಗೆ ಪೋಗ | ಲನುಗೆಯ್ವರೊಪ್ಪಿದರಲ್ಲಿ || ೫೮ ||

ನೀನಾ ದಂಡಿಂದ ತಿರುಗುವ ಪರಿಯಂತ | ನಾನೆಂತು ಜೀವಿಪೆನೆಂಬ
ಆ ನಾರಿಯರ ಕಣ್ನೀರ ತೊಡೆದು ಕೆಲ | ರಾನದೆ ಪೊಱಮಟ್ಟರಾಗ || ೫೯ ||

ನೀನಲ್ಲದೆಯನ್ನಿಗರೆನ್ನ ತಾಯ ಸ | ಮಾನವೆನುತ ಭಾಷೆಯ ಮಾಡಿ
ಮಾನಿನಿಗೊರ್ವ ಬೋಸರಿಗನಾಣೆಯನಿತ್ತು | ತಾನಂದು ಪೊಱಮಟ್ಟನಾಗ || ೬೦ ||

ಚುಂಬಿಸಿ ಚುಬುಕಾಗ್ರ ಬಾಯೊಳು ರಸ | ದಂಬುಲವಿತ್ತು ಮುದ್ದಾಡಿ
ತುಂಬಿಗುರುಳ ತಿರ್ದುತೊರ್ವನಬಲೆಯನು | ನಂಬಿಸಿ ಪೊಱಮಟ್ಟನಾಗ || ೬೧ ||

ಒಡನುಂಡೊಡನೆ ತಂಬುಲವಿತ್ತು ಬಿಗಿಯಪ್ಪಿ | ಮಡದಿಯ ಮೊಗವ ಮುದ್ದಾಡಿ
ಅಡಸಿದಕಣ್ಗಳ ನೀರತೊಡೆಯುತೊರ್ವ | ಕಡುಮೋಹಿ ಪೊಱಮಟ್ಟನಾಗ || ೬೨ ||

ಮಿಂದುಂಡು ಮಡಿಯ ಹೊದೆದು ಮಣಿದೊಡವನಾ | ನಂದದಿಂ ತೊಟ್ಟು ಪಲ್ಲಕಿಯ
ಅಂದದೇಱಿಯರಸುಮಕ್ಕಳ ಬಲು | ಸಂದಣಿ ಪೊಱಮಟ್ಟುದಾಗ || ೬೩ ||

ಪಾರುವಿಳಿಯ ಹೆಗಲೊಳು ಹೂಡಿ ನೊಗನನು | ಸಾರಥಿಗಳನ್ನು ಸತ್ಕರಿಸಿ
ಪೂರಿಸಿ ಪಲವು ಶಸ್ತ್ರವ ಪೊಱಮಟ್ಟರಂ | ದಾ ರಥಿಕರು ರಥವೇಱಿ || ೬೪ ||

ಹೊಕ್ಕುಳ ಗಂಟೆಯ ಕಟ್ಟಿ ಬೆನ್ನೊಳು ಗುಳ | ಮಿಕ್ಕಿ ಬಿಗಿದು ಹೊರಜೆಯನು
ಸೊಕ್ಕಾನೆಯ ತಲೆಯನೇಱಿ ಜೋಧರೋಳಿ | ಕಕ್ಕಿರಿಗೊಂಡೆಯ್ದಿದರು || ೬೫ ||

ಹಡಪದ ಹುಡುಗ ಸತ್ತಿಗೆಯಾಳುಬಲ್ಲೆಹ | ವಿಡಿದ ಪಾಡಿಗರೊಡವರಲು
ಪಿಡಿಗುದುರೆಯ ರಾಹುತರು ಪೊಳಲಪೊರ | ಮಡುತಿರ್ದರು ಸಂಭ್ರಮದೊಳು || ೬೬ ||

ಕಾಲುನಡೆಯ ಮೇಲುಮುಸುಕಿನ ಕುದುರೆಯ | ಮೇಲಣಭಯದಂಡಿಗೆಯ
ಸಾಲುವಿಡದ ಪನ್ನಗಪಲ್ಲಕಿಯಾ | ಬಾಲೆಯರೆಯ್ದಿದರಾಗ || ೬೭ ||

ತೇರಾಳಾನೆಕುದುರೆ ಕೊಟ್ಟಿಗೆ ಕೊ | ಲ್ಲಾರಕಱವು ಮೊದಲಾದ
ಧಾರುಣಿ ಪೊಱಲಱೆಯದ ಸೇನೆಪೊಱಮಟ್ಟು | ದಾ ರಾಜಧಾನಿಯನಿತ್ತ || ೬೮ ||

ಶುಭಲಗ್ನದೊಳಭವನ ಭವನವನೆಯ್ದಿ | ಯಭಿವಂದಿಸಿರುಹನನು
ಅಭಿನವದೇವೇಂದ್ರನು ಪೊಱಮಟ್ಟನಂ | ದಿಭರತ್ನದ ಪೆಗಲೇಱಿ || ೬೯ ||

ಕಂಚುಕಿಗಳ ಕೊಂಡಾಟ ಕೈವಾರಿಗ | ಳಿಂಚರ ಭೂರಿಭೂಸುರರ
ಮುಂಚುವಾಶೀರ್ವಾದಮೊಪ್ಪಿದುದಾ ನಿಃಪ್ರ | ಪಂಚನು ಪೊಱಮಡುವಾಗ || ೭೦ ||

ಮಂಡಲಿಕರ ಮಂತ್ರಿಗಳ ಸಾಮಂತರ | ದಂಡಾಧಿನಾಯಕರುಗಳ
ಮಂಡಲಿ ಪೊಱಮಟ್ಟುದು ಮದಗಜವೇಱಿ | ಮಂಡಲೇಶ್ವನೊಂದಾಗಿ || ೭೧ ||

ಅರಸುಗಳತಿರೇಕವ ನೋಡಿರೆ ತಮ್ಮ | ವರಭೂಷಣದ ಮುತ್ತುಕೆಂಪು
ಹರಿನೀಲದವೆಳಗಿಂ ಜೊನ್ನಯೆಳೆವಿಸಿ | ಲಿರುಳವೆಳಗ ಸಂಗಡಿಪರು || ೭೨ ||

ಕಡೆಯ ಪೆಂಡೆಯವಡ್ಡಿವಾಣುತ್ತರಿಗೆಲುಳಿ | ಹಿಡಿದ ಕಾಸೆಯ ಹೊನ್ನಹರಿಗೆ
ಜಡಿವ ಚಮರ ಮೆಯ್ಗಾವಲೆಕ್ಕಟಿಗರ | ಗಡಣ ನಡೆದು ಬಂದುದಾಗ || ೭೩ ||

ಕಡಿತಲೆ ಚೂಡಾಯತಕಾಗಿ ಕಾಳಿನಕಾಸೆ | ಉಡಿಯ ಬುದ್ದುಗೆಯ ಕಠಾರ
ಹಿಡಿದ ಹರಿಗೆಯಕ್ಕತುಳದ ತುಳುವರೊಗ್ಗು | ನಡೆತಂದುದರಸನೋಲೈಸಿ || ೭೪ ||

ಎತ್ತಿದ ಪಲಪಳಯಿಗೆ ವಾಯುಪಥವನು | ಕೆತ್ತಲುದ್ಭವಿಸಿದುಬ್ಬೆಯನು
ಮೊತ್ತದನೃಪರ್ಗೆ ಬೀಸುವ ಚಾಮರತತಿ | ಪೆತ್ತುದು ಪಸುಳೆ ಗಾಳಿಯನು || ೭೫ ||

ವೀರಸಗ್ಗವನೈದಿದ ವೀರಭಟರನು | ಸೇರಿ ತಿವಿವ ಮಾಳ್ಕೆಯಲಿ
ಭೂರಿಭುಜದ ಸಬಳಿಗರು ಸಬಳವಿಡಿ | ದೋರಣದಿಂ ಬಂದರಾಗ || ೭೬ ||

ಚಿನ್ನದ ಕಟ್ಟಿನ ಬಿಲ್ಲುಡಿಗೆಯ ಝಲ್ಲಿ | ಹೊನ್ನಮೋಹಳದ ಕಠಾರಿ
ಚಿನ್ನಮೂಡಿಗೆಯಂಬು ಬಿಲ್ಲಾಳು ನಡೆದುದು | ಪ್ಪನ್ನಪ್ರರಾಕ್ರಮಿಯೊಡನೆ || ೭೭ ||

ಒಡನೈದುವರಸುಮಕ್ಕಳ ಸಂದಳಿಯ ತಲೆ | ವಿಡಿದಸತ್ತಿಗೆ ಕಳ್ತಲೆಯನು
ಸಡಗರಿಸಿದೊವವರಿಕ್ಕುವ ಮಾಣಿಕ | ದೊಳವೆಳಗೆಳವಿಸಿಲಾಯ್ತು || ೭೮ ||

ಇಂತು ವಿರಾಜಿಸುವ ವಿಭವದೆ ಭೂ | ಕಾಂತಕದಂಬವಲ್ಲಭನು
ಸಂತಸದಿಂ ಪೊಱಮಟ್ಟು ತತ್ಪುರದ ವ | ನಾಂತದೊಳಗೆ ಬಿಟ್ಟನಾ || ೭೯ ||

ಆ ರಾತ್ರೆಯೊಳವನಿಪನೊಂದು ಜಾವವ | ತೀರಿಸಿ ಬಳಿಕ ನಿದ್ರೆಯೊಳು
ಸ್ತ್ರೀರತ್ನದೊಡಗೂಡಿಸುಖಮಿರೆ ಮೂಡಿದು | ದಾ ರವಿಯಮರದಿಕ್ಕಿನೊಳು || ೮೦ ||

ಆಶಾವನಿತೆಯರಂಗವ ನೆರೆಹತ್ತಿ | ಮಾಸಿ ಕೆಡಿಪ ತಿಮಿರವನು
ಸಾಸಿರ ಕರದಿಂ ತುರಿಸಿ ಕೆಡಿಸುತ ಮ | ತ್ತಾಸೂರ್ಯನಂದು ಮೂಡಿದನು || ೮೧ ||

ಆವುದಯದೊಳೆದ್ದಾ ಶ್ರೀಪಾಲಮ | ಹೀವರನಾಗ ಮೊಗದೊಳೆದು
ಭಾವಜಾರಿಗೆ ವಂದಿಸಿ ತೇರಿಯೇಱಿಮ | ಹಾವಿಭವದೊಳೆಯ್ದಲಾಗ || ೮೨ ||

ದೊರೆದೊರೆಗಳು ಹನಿವೊತ್ತಿಗೆ ಮುನ್ನೆಳ್ದು | ತುರುಗವನೇಱಿ ಭೂವರನ
ಪರಿವೇಷ್ಠಿಸಿದರುಡುಪತಿಯನು ಬಳಸಿದ | ವರತಾರಾಗಣದಂತೆ || ೮೩ ||

ತೇರಿಗೆ ತೇಜಿ ವಾಜಿಗೆ ಹಲ್ಲಣಮದ | ವಾರಣತತಿಗೆ ಗೂಳಯವ
ಸೇರಿಸಿ ತದ್ವಾಹಕರೆಯ್ತಂದಂ | ತಾ ರಾಯನಬಳಿವಿಡಿದು || ೮೪ ||

ಕರಿರಥಹಯಸಿಬಿಕೆಯನೇಱಿದರಮಕ್ಕ | ಳಿರದೊಪ್ಪಿತಾ ಬಹುರೂಪ
ಧರಿಸಿದಮರಪತಿ ದಿನಪತಿ ಧನಪತಿ | ನರವಾಹನರೆಂಬಂತೆ || ೮೫ ||

ಹರಿವ ಹಿಪ್ಪಲಿಕೆಗೆ ಮುನ್ನೆಳ್ದಟ್ಟುಂಡು | ಭರದಿಂದ ಹೋಱೆಹೂಡಗಟ್ಟಿ
ಹಿರಿದು ಸಂದಣಿಗೊಂಡಾ ಕೂಳಪಾಳೆಯ | ಮಿರದಲ್ಲಿ ಪೊಱಮಟ್ಟುದಾಗ || ೮೬ ||

ಕೊಟ್ಟಿಗೆ ಕೊಲ್ಲಾರದಬಂಡಿ ಬಟ್ಟಿತ್ತು | ಪೆಟ್ಟಿಗೆ ಹಾರೆಗುದ್ದಲಿಯ
ಕಟ್ಟಿದ ಹೊರೆಯ ಹೊತ್ತಾ ಕಮವಟ್ಟದ | ಬಿಟ್ಟಿಯಾಳುಗಳೆಯ್ದಿದರು || ೮೭ ||

ಬೊಕ್ಕಸಗಳು ಬೋನಗುಡಿಕೆಗಳಾಮುದ್ರೆ | ಯಿಕ್ಕಿದ ಚೀರಗಟ್ಟುಗಳ
ಇಕ್ಕಡೆಜೋಲ್ವಡ್ಡ ಹೊರೆಯನು ಹೆಗಲೊಳ | ಗಿಕ್ಕಿ ನಡೆವರೊಪ್ಪಿದರು || ೮೮ ||

ಗುಡಿ ಸರವತ್ತಿಗೆ ಹುರುಳಿಹುಲ್ಲ ಕಂಪಣ | ಕಡಲೆ ಕವಳ ಹಕ್ಕರಿಕೆಯ
ಹಿಡಿದ ಹೇರಿನ ಕೊಟ್ಟಿಗೆಯೆತ್ತುಗಳೆಡೆ | ವಿಡದೆ ನಡೆದವಂದಲ್ಲಿ || ೮೯ ||

ಹೇಱಿನೋಸರಗಳನೆತ್ತು ಬಲಿದು ಹಾರಿ | ಹೋಱ ಹಾಕುವ ಹೋರಿಗಳ
ಬೀಱುಹಗ್ಗವಬೆನ್ನಿಗಿಕ್ಕೆಂಬಾಹೇಱು | ಕಾಱರ ನುಡಿಯುಣ್ಮಿತಲ್ಲಿ || ೯೦ ||

ಲಾಳಬಂದಿಗಳಶ್ವವೈದ್ಯರುಗಳು ಹು | ಲ್ಲಾಳುಗಳಾಪಾಡಿಗಳ
ಉಳಿಗದವರಧ್ಯಕ್ಷಸಹಣಿಗ | ಳೋಳಿ ನಡೆದು ಬಂದುದಾಗ || ೯೧ ||

ಹೋಳಿಯ ಹುಡುಗನ ಮಂಡೆಯ ಮೇಲಣ | ಹೋಳಿಗೆ ಕಂಠಣಿಯಿತ್ತು
ಜೋಳಿಜೋಳಿಯೊಳೆಯ್ದುತಿರೆ ಕಾಲವ | ರೋಳಿ ನಡೆದು ಬಂದುದಾಗ || ೯೨ ||

ಎಡದೆಸೆವಾರಹರಿಗೆ ಕತ್ತಿಯುಗ್ಗದ | ಮಡಕೆ ಬಲದ ಕೈಯೊಳೆಸೆಯೆ
ಹಡಪದ ಹೊರೆ ಹೆಗಲೊಳು ಜೋಲುತ್ತಿರೆ | ನಡೆತಂದರಲ್ಲಿ ಕೆಲಬರು || ೯೩ ||

ಚೀರಗಟ್ಟದ ಹಡಪದ ಹಲ್ಲಣ ಹಿಂದೆ | ಹಾರಮಪ್ಪಂದದಿಹಾಕಿ
ಭೋರನೆ ಬರುತಿರ್ದರೊಂಟೆಯ ರಾವುತರಂ | ದಾರಯ್ಯದಾ ದಂಡಿನೊಳಗೆ || ೯೪ ||

ಭಂಜಿತ ರಿಪುನಿಕುರುಂಬ ಸೇನಾಪದ | ಸಂಜಾತಮಾದ ಕೆಂಧೂಳು
ರಂಜಿಸಿ ನಭಕೇಳಲಾ ವ್ಯೋಮಕೇಶಗೆ | ಕೆಂಜೆಡೆಯಾದುದಂದಿಂದ || ೯೫ ||

ಪಡೆಯ ಚರಣಹತಿಯಿಂದ ರಜೋರೂಪು | ವಡೆದು ಸಮೆಯಲಂದಿಂದ
ಕಡಲ ತಡಿಯ ಚೋಳ ಕೇರಳ ದೇಶದ | ಪೊಡವಿ ಕೀಳ್ನಾಡೆಂಬುದಾಯ್ತು || ೯೬ ||

ಇಂತುಪಜಲಧಿಯ ತಡಿಯೊಳೆಸವ ಜ | ನಾಂತವೆಲ್ಲವ ಸಾಧ್ಯಮಾಡಿ
ಅಂತಕನಿಭಕೋಪನಡಿಗೆಱಗಿದ ಭೂ | ಕಾಂತರೆಲ್ಲರು ಸಹಮಾಗಿ || ೯೭ ||

ವಿಭವದೊಳಾವಿಭುದೇಶನೆನಗೆ ಸ | ನ್ನಿಭನೆನಬಹುದೆಯೆಂದೆನುತ
ಪ್ರಭುಕುದೀಪನಾ ದೆಸೆಗೆ ಧಾಳಿಡುವಂತೆ | ಯಭಿಮುಖನಾಗಿ ನಡೆದನು || ೯೮ ||

ಎನಗಿದಿರಾಗಿ ದೇವರು ಬರ್ಪುದನುಚಿತ | ವೆನುತ ಬಂದರಸನ ಕಂಡು
ವಿನಯದಿ ಮುಂದೋಲೈಸಿ ನಡೆವ ಸೂರ್ಯ | ನೆನೆ ಚಕ್ರವೊಡನೆಯ್ದಿದುದು || ೯೯ ||

ಇಂತು ಮುಂಗಡೆಯೊಳೆಳ್ದುವ ಚಕ್ರರತ್ನದ | ಕಾಂತಿಯಂಬಿನರುಚಿಗಂಡು
ಮಂತಣಗೊಂಡಾನೆಲದ ನೃಪೋತ್ಪಲ | ಸಂತತಿ ತಲೆವಾಗಿದುದು || ೧೦೦ ||