ಈ ತೆಱದಿಂ ಮಧ್ಯಖಾಂಡದಮಹಿಪ | ವ್ರಾತವನೆಱಗಿಸಿಕೊಂಡು
ಪ್ರೀತಿಯಿಂದವರಿತ್ತ ಕಪ್ಪವನಾಂತು ಗಂ | ಗಾತೀರವಿಡಿದೆಯ್ದಿದನು || ೧೦೧ ||

ಆ ಗಂಗಾತೀರದ ವನದೊಳಗನು | ರಾಗದಿನಂತಃಪುರದ
ಭೋಗಾಂಗನೆಯರ ಕೂಡಿ ಕ್ರೀಡಿಸಿ | ಬಳಿ | ಕಾ ಗಂಡುಗಲಿ ಮುಂದಕೆಯ್ದು || ೧೦೨ ||

ಆ ನದಿ ಬಂದು ಸೀತಾನದಿಯನು ಹೊಕ್ಕ | ನೂನವಜ್ರದವೇದಿಕೆಯ
ಮಾನಿತಮಪ್ಪಾ ದ್ವಾರದ ಕೆಲದೊಳು | ಸೇನೆಯ ಬಿಡಿಸಿದನಾಗ || ೧೦೩ ||

ಹಿಡಿದುಗ್ಗದ ನೀರಮಡಕೆಯ ಮಂಡೆಯಮೇಗ | ಣಡುಗಟ್ಟುಗೆ ಚೀರದಕ್ಕಿ
ಹೆಡೆತಲೆಯೊಳು ಜೋಲುತಿರಲುಸ್ಸೆನ್ನುತ | ನಡೆತಂದುದಲ್ಲಿ ಕೆಲಬರು || ೧೦೪ ||

ಗುಡಿಸರವತ್ತಿಗೆಯ ಬಿಡಿಗುಂಟವ ಬಲಿ | ನೆಡುಗೆರೆಯದ ಬೇಲಿಗಳ
ಕಡುವೇಗದಿಂ ಕಳ್ತಲೆಯಾಯಿತೆಂದೆಂಬ | ನುಡಿಯುಣ್ಮಿತೆಲ್ಲಿನೋಡಿದರು || ೧೦೫ ||

ಕಟ್ಟಿ ದಾವಣಿಯೊಳೆತ್ತನು ಹೇರು ಹೆಡಗೆಯ | ನೊಟ್ಟಿ ಹೊದ್ದಿಸು ಗುಡಿಲುಗಳ
ಅಟ್ಟುಂಬವರ ಸರವೆಲ್ಲಿನೋಡಿದೊಡಾ ಬಿಟ್ಟ | ಬೀಡಿನೊಳೊಪ್ಪಿದುದು || ೧೦೬ ||

ಬಿಟ್ಟುಗುಡಿಲನಿಕ್ಕದ ಮುನ್ನ ಹಸರವ | ನಿಟ್ಟಡಕೆಲೆಹಣ್ಣುಕಾಯಿ
ಕಟ್ಟಿದ ಹೂವು ಹಲವು ಕಜ್ಜಾಯವ | ನಿಟ್ಟು ಮಾರುವರೊಪ್ಪಿದರು || ೧೦೭ ||

ಕೂಲಿಗೆ ನೀರನಟ್ಟುವ ಕೂಳನಿಕ್ಕುವ | ಹಾಲು ಮೊಸರು ಹಲತೆಱದ
ಮೇಲೋಗರವ ಮಾರುವ ಹಸರಂಗಳ | ಸಾಲೊಪ್ಪಿತೆಲ್ಲಿ ನೋಡಿದರು || ೧೦೮ ||

ದಾವಣಿಗಟ್ಟಿದ ಕುದುರೆಗುತ್ತಮಮಪ್ಪ | ಜೇವಣಿಗೆಯನಿಕ್ಕಿ ಬಳಿಕ
ಓವದೆ ಹುಲ್ಲಪಲ್ಲಿಯ ಹಾಕಿಸುವ ರಾಯ | ರಾವುತರೊಪ್ಪಿದರಲ್ಲಿ || ೧೦೯ ||

ಸಂಜೋಗವನಿಳುಹುವ ಸೊಕ್ಕಾನೆಗೆ | ಜಿಂಜೀರಿಗಳ ಹೂಡಿಸುವ
ಸಂಜೆಯ ಕೂಳನಿಕ್ಕಿಸುವ ಜೋಧರರತಿ | ರಂಜಿಸುತಿರ್ದರಂತಲ್ಲಿ || ೧೧೦ ||

ಅಡಲೆನುತೆಲ್ಲೆಡೆಯೊಳಗೊಲೆಯನುತೋಡಿ | ಯಡುಹುರಿಗೆಂಡಮೊಪ್ಪಿದುದು
ಪಡೆಗೊಡೆಯನ ತೇಜೋವೃಕ್ಷದ ಬಿತ್ತ | ಎಡವಿಡದಿಕ್ಕುವಂದದೊಳು || ೧೧೧ ||

ಎಕ್ಕಟಿಗರ ಪಡಕಣದ ಸೇರುವೆಗಾಱ | ರುಕ್ಕಡತಲೆಗಾವಲುಗಳ
ತಕ್ಕಿನ ತಳವಾರರ ತಿಂಥಿಣಿ ಕಟ | ಕಕ್ಕೆ ರಕ್ಷಣೆಯಾಗಲಾಗ || ೧೧೨ ||

ನೇಹದ ರಾಣಿಯೊಳಾ ರಾತ್ರೆಯೊಳಿರ್ದು | ಮಾಹಗಲುದಯದೊಳೆರ್ದು
ಆ ಹೊಳೆಯೆರಡರ ಸಂಗಮದಲ್ಲಿ ಪು | ರೋಹಿತನನುಮತದಿಂದ || ೧೧೩ ||

ಗರ್ಭೀಕೃತ ಗಾಂಭೀರ್ಯನು ಬಹುರತ್ನ | ಗರ್ಭಾಧಿಪವಂದಿತನು
ದುರ್ಭಶಯನವನು ಮಾಡಿದನಂದು ಶು | ಚಿರ್ಭೂತಭುವನಭುಂಭುಕನು || ೧೧೪ ||

ಪಿರಿದೊಪ್ಪುವ ದರ್ಭಶಯನದ ನಡುವಾ | ಪುರುಷೋತ್ತಮರತ್ನವೊಱಗಿ
ಕರಮೆಸೆದನು ತೃಣತ್ಲಪವಿಡಿಸ ನವ | ಹರಿನೀಲಪುತ್ರಿಕೆಯಂತೆ || ೧೧೫ ||

ಆ ದರ್ಭಶಯನನಂತರದೊಳು ವಿಶ್ವಂಭ | ರಾದೇವತಾವಲ್ಲಭನು
ಸಾದರದಿಂದಜಿತಂಜಯಮೆಂದೆಂ | ಬಾ ದಿವ್ಯರಥವನೇಱಿದನು || ೧೧೬ ||

ಭೋಱನೆ ತೊರೆಯೊಳು ಪರಿಸುತಿರಲು ಈ | ರಾಱುಯೋಜನ ಪೋಗಿನಿಲಲು
ಆಱಿಲ್ಲಿ ನನ್ನ ರಥವನಿಲಿಸಿದರೆಂ | ದಾರಾಯನತಿ ಕೋಪವಾಂತ || ೧೧೭ ||

ಮಗಧನೆಂದೆಂಬ ಮಹಾಯಕ್ಷರಾಜನ | ನಗರಿಗೆಯಭಿಮುಖವಾಗಿ
ಗಗನಕೆ ಹಾರಲೆಳಸುವೆನಾತನನೆಂ | ದಗಣಿತವಿಕ್ರಮಾನ್ವಿತನು || ೧೧೮ ||

ವರವಜ್ರಕಾಂತವೆಂದೆಂಬ ಕೋದಂಡಕೆ | ಭರದಿನಮೋಘವೆಂದೆಂಬ
ಶರವನಿಟ್ಟರಸೆಸೆದನು ತ್ರಿಪುರಮನೆಸು | ವರವೆಱೆದಲೆಯನಂದದೊಳು || ೧೧೯ ||

ವನಧಿಯೊಳೊಗೆದುವರೂರ್ಥಮನಡರ್ದ | ಇನಬಿಂಬಮೆನೆ ತುಂಬಿ ತೆಗೆದ
ಧನುವೊಪ್ಪಿತಾ ನೀರೊಳು ತೇರನೇಱಿದ | ಮನುಜೇಶನ ಹಸ್ತದೊಳು || ೧೨೦ ||

ಬಿಲ್ಲಜೇವಡೆ ಬರಸಿಡಿಲು ಬಿಲ್ಲಪ್ಪರ | ವಿಲ್ಲದನಿಪನಭ್ರಮದೊಡ್ಡು
ನಿಲ್ಲದೆ ತೊಡಚಿ ಬಿಟ್ಟಾಕಣೆ ಕುಡಿಮಿಂ | ಚಲ್ಲಿಂದಪರಿವಂತಾಯ್ತು || ೧೨೧ ||

ಎಲವೋ ಮಗಧ ನಿನ್ನದಟನುಳಿದು ಬೇಗ | ಮಲಯದೆ ಬಂದು ಕಾಣದೊಡೆ
ತಲೆಯನಿರದೆ ಚಂಡಾಡುವೆನೆಂದಾ | ಅಲಘುಮಿಕ್ರಮಿಯೆಚ್ಚನಾಗ || ೧೨೨ ||

ಆ ಶರವಿರದೆ ಪರಿದು ಮಗಧನ ಭಾ | ಭಾಸಿಪಾಸ್ಥಾನಮಂಟಪದ
ಆ ಸುರುಚಿರನವರತ್ನಸ್ತಂಭವ | ನೋಸರಿಸದೆ ನೆಟ್ಟುದಾಗ || ೧೨೩ ||

ನಟ್ಟ ಕಣೆಯ ರಭಸಕೆ ನಡನಡುಕಂ | ಬಟ್ಟುದು ಮೈ ಮಗಧನ
ಪಟ್ಟಣವೆತ್ತಲೋಡುವೆವೆಂದು ಗುಜುಗುಜು | ಗಟ್ಟಿ ತಳ್ಳಂಕವಡೆದುದು || ೧೨೪ ||

ಅದನು ಕಂಡಾ ಮಾಗಧಾಮನತಿಕೋಪ | ಹೃದಯನೆನ್ನೂರಮುಂಗಡೆಗೆ
ಬೆದಱದೆ ಬಂದೆಯಿದೆಚ್ಚವನಾರೆಂ | ದೊದಱಲವನ ಮಂತ್ರಿಗಳು || ೧೨೫ ||

ಬಡವನಲ್ಲೀಯಂಬನೆಚ್ಚುವನೀಧರೆ | ಗೊಡೆಯ ಸಕಲಚಕ್ರವರ್ತಿ
ಕಡುಕೋಪನುಳಿ ದೇವದಾನವರವ | ನಡಿಗೆಱಗುವರನವರತ || ೧೨೬ ||

ಹಿಂದಣನಮ್ಮ ವಂಶದ ಯಕ್ಷದೇವರ್ಕ | ಳಿಂದಿನಂದದಿ ಬಂದವರನು
ಬಂದಿಸಿ ಪಾಗುಡವಿತ್ತು ಬಾಳುವರದ | ರಿಂದ ನೀನದ ಮೀಱಬೇಡ || ೧೨೭ ||

ಎಂದು ನುಡಿದ ಹಿತವಚನವ ಕೇಳ್ದಾ | ನಂದದಿನಾಬಾಣವನು
ಅಂದು ಪೂಜಿಸಿ ರನ್ನವಡಲಿಗೆಯೊಳಿಟ್ಟು | ಬಂದನು ಚಕ್ರಿಯಿದ್ದೆಡೆಗೆ || ೧೨೮ ||

ಉತ್ತಮ ರತ್ನಭೂಷಣವುತ್ತಮವಾಜಿ | ಉತ್ತಮ ಗಜರತ್ನವನು
ಇತ್ತು ಕಾಣ್ಕೆಯ ನಾ ಚಕ್ರಿಯೆಡೆಗೆ ತ | ನ್ನುತ್ತಮಾಂಗವ ಮಡಗಿದನು || ೧೨೯ ||

ಎಲೆ ಚಕ್ರಿ ನಿನ್ನ ಪಾದಾಂಭೋರುಹಂಗಳ | ನಲಘುಭಕ್ತಿಯೊಳಿಂದು ಮೊದಲು
ಅಲಸದೋಲೈಪೆನೆಂಬಾ ಮಗದೇಂದ್ರನ | ನಿಳೆಯಾಣ್ಮನು ಬೀಳ್ಕೊಟ್ಟು || ೧೩೦ ||

ಆ ಮಗಧನ ಸಾಧಿಸಿ ನೀರಬಟ್ಟೆಯೊ | ಳಾ ಮಹೀಪತಿ ತೇರನಡೆಸಿ
ಸಾಮವಿಲ್ಲದೆಯಾ ಸೀಮೆಯೊಳಿರ್ಪ ನಿ | ಸ್ಸೀಮರಿರ್ವರು ಯಕ್ಷರುಗಳು || ೧೩೧ ||

ವರತನು ಪ್ರಭುನಾಗರನೆಂಬಾ ಯಕ್ಷೇ | ಶ್ವರನಾ ಮಗಧಾಮರನ
ಚರಣಯುಗಲಕೆಱಗಿಸಿಕೊಂಡಂದತಿ | ಭರದಿನವರ ಸಾಧ್ಯಮಾಡಿ || ೧೩೨ ||

ಆ ಸೀತಾನದಿಯನು ಪೊಱಮಟ್ಟುತ್ತರ | ದಿಶಾಮುಖನಾಗಿ ಬಂದು
ಆ ಸಿಂಧೂನದಿಯ ಮೂಡಣಮನ್ನೆಯರುಗಳ | ನಾಸಾಸಿಗ ಸಾಧ್ಯಮಾಡಿ || ೧೩೩ ||

ಅವರಣುಗನ ತನುಜೆರಯನಶ್ವಗಜರತ್ನ | ನಿವಹನ ಕಪ್ಪಂಗೊಂಡು
ಸವಿನಯದಿಂ ವಿಜಯಾರ್ಧಗಿರಿಯಮುಟ್ಟಿ | ಯವನಿಪತಿ ಬೀಡಬಿಡಲು || ೧೩೪ ||

ನಿಜಭುಜವರ್ಗಬಲವನು ಬಿಸುಟು ತ | ದ್ವಿಜಯಾರ್ಧಾಚಲಾಧಿಪನು
ವಿಜಯಕುಮಾರನೆಂದೆಂಬ ಯಕ್ಷನ ತ | ದ್ವಿಜಗೀಷುವನು ಕಂಡನಾಗ || ೧೩೫ ||

ಅವನಿತ್ತ ರತ್ನಾಭರಣದ ಕಪ್ಪವ | ನವನೀಶನಿರದವಧರಿಸಿ
ಅವನ ಬೀಳ್ಕೊಡಲಾಗಲಾಕೃತಮಲನೆಂಬ | ದಿವಿಜೇಂದ್ರನಾ ಗಿರಿವರದ || ೧೩೬ ||

ಉರುತರಮಪ್ಪ ತಮಿಸ್ರಗುಹೆಯ ನನ | ವರತ ರಕ್ಷಿಸುತಿರ್ಪವನು
ಧರಣಿಪತಿಗೆ ವಿನಯವಿನಮಿತನಾಗಿ | ಕರಕಮಲಂಗಳ ಮುಗಿದು || ೧೩೭ ||

ಈ ವಿಜಯಾರ್ಧಗಿರಿಯ ಗುಹೆಯನು ಹೊ | ಕ್ಯಾವುತ್ತರಖಾಂಡಕಾಗಿ
ದೇವರೀ ತೆಱದಿಂದ ಬಿಜಯಂಗೆಯ್ವುದೆಂದಾ | ದೇವ ಬಿನ್ನಪವ ಮಾಡಿದನು || ೧೩೮ ||

ಆ ಯಕ್ಷನಿರದೊರೆದಂದವ ಸೇನಾ | ನಾಯಕಗಾನೃಪನೊರೆಯ
ಜೀಯ ಹಸಾದವೆನುತ ವಾಜಿರತ್ನವ | ನೊಯ್ಯಾರದಿಂದೇಱಿದನು || ೧೩೯ ||

ವಜ್ರದಂಡವ ಪಿಡಿದಶ್ವರತ್ನವನೇಱಿ | ವಜ್ರದ ಪಡಿಯ ಪರ್ವತದ
ವಜ್ರಾಯುಧವಕೊಂಡುಚ್ಚೈಶ್ರವವೇಱಿ | ವಜ್ರಿಯಿಂಟ್ಟಂತಿಟ್ಟನವನು || ೧೪೦ ||

ಇಡೆ ಚಕ್ರಿಯ ಬೆಸನೆಂದಾವಜ್ರದ | ಪಡಿಯೊಡೆದಾಗಿರಿಯೆಂಬ
ಕಡೆಗಾಲದಮೃಡನಾ ಗುಹೆಯೆಂದೆಂಬ | ಕಿಡಿಗಣ್ಣತೆರೆದಂತಾಯ್ತು || ೧೪೧ ||

ಆ ವಜ್ರದ ಪಡೆಇಯೊಳು ಜನಿಸಿದ ಕಿಚ್ಚು | ಗಾವುದವನು ಪನ್ನೆರಡ
ತೀವುವ ಸಮಯಕೆ ಮುಂಚೆ ಲಂಘಿಸಿತು ಮ | ನೋವೇಗಿಯೆಂಬಶ್ವರತ್ನ || ೧೪೨ ||

ಹಿಂದಣ ತಮ್ಮವಂಶದವಾಜಿಗಳೀ | ಯಂದದಿ ನಭಕೆ ಪಾಱುವವು
ಎಂದು ತೋಱುವವೋಲೀರಾಱುಗಾವುದವನೊಂ | ದಂದಿನಶ್ವ ಪಾಱಿದುದು || ೧೪೩ ||

ಆ ಉರಿಕೆಡುವಱುದಿಂಗಳು ಪರಿಯಂತ | ರೋವದೆ ಪಶ್ಚಿಮಾವನಿಯ
ಭೂವರರುಗಳ ಸೇವಿಸಿ ಸೇನಾಪತಿ | ಯಾವಿಭುಯೆಡೆಗೆಯ್ದಿದನು || ೧೪೪ ||

ಮತ್ತಾ ಮಕುಟವರ್ಧನರು ಕಾಣ್ಕೆಯ ತಂ | ದಿತ್ತವಸ್ತುವನವಧರಿಸಿ
ಬಿತ್ತಱಮಪ್ಪಾಗಿರಿಯಗುಹೆಗೆ ಭೂ | ಪೋತ್ತಂಸನು ನಡೆತರಲು || ೧೪೫ ||

ಆ ಗುಹೆಯೊಳು ತೀವಿದ ಕತ್ತಲೆಯೊಳು | ಹೋಗಬಾರದೆ ಪಡೆ ನಿಲಲು
ಆ ಗಂಡುಗಲಿ ಕಾಕಿಣಿಯೆಂಬ ರತ್ನದಿ | ನಾಗತರ್ಕ್ಷಕನ ಕೈಯಿಂದ || ೧೪೬ ||

ಒಂದೊಂದು ಗಾವುದಕೊಂಡೆಯೊಳಗರ | ವಿಂದಬಾಂಧವನ ಬಲ್ವೆರೆಯ
ಅಂದವ ಬರೆಯಿಸಲಲ್ಲಿ ಪರಿವಕಾಂತಿ | ಯಿಂದ ಬಲವ ನಡೆಸಿದನು || ೧೪೭ ||

ಅದರೊಳ್ಮಗ್ನನಿಮಗ್ನವೆಸರನಾಂತ | ನದಿಗಳಡಿಯನಿಡಲೊಡನೆ
ಅದು ಭೂತಮಾಗಿಯಂಬರಮಹಿಲೋಕದ | ತುದಿಮೊದಲಿಗೆ ನೂಂಕುತಿಹವು || ೧೪೮ ||

ಆ ಉಗ್ರಮಪ್ಪ ನದಿಯ ದಾಂಟಲಾಱದೆ | ಯಾವಾಹಿನಿ ನಿಂದಿರಲು
ದೇವಾರಣ್ಯದ ತರುವಿಂದ ಪಾಲವ | ನಾ ವಿಶ್ವಕರ್ಮ ಕಟ್ಟಿದನು || ೧೪೯ ||

ಆ ಪಾಲದ ಮೇಲೆಯೆ ಹೊತ್ತು ನಡೆದು ಬಿ | ಟ್ಟಾಪಾಳೆಯಕೆ ವಿಶ್ವಕರ್ಮ
ಭೂಪನ ಬೆಸದಿಂ ಮಾಟಕೂಟವನು ನಾ | ನಾಪರಿಮಾಡಿಕೊಡುವನು || ೧೫೦ ||

ಅಂತಮಿಲ್ಲದೆಮಾಡಿ ನಡೆವಾವಾಹಿನಿ | ಚಿಂತಿಸಿದಾ ವಸ್ತುವನು
ತಾಂ ತಳುವದೆ ಕೊಡುತಿರ್ಪುದು ತಡೆಯದೆ | ಚಿಂತಾಮಣಿಯೆಂಬ ರತ್ನ || ೧೫೧ ||

ಈ ಪರಿಯೊಳಗಱುದಿಂಗಳು ಪರಿಯಂತ || ರಾ ಪಡೆಯನು ಕೂಡಿಕೊಂಡು
ಶ್ರೀಪಾಲಚಕ್ರೇಶ್ವರ ಪೊರಮಟ್ಟನಂ | ದಾ ಪರ್ವತದ ಗುಹೆಯಿಂದ || ೧೫೨ ||

ಆ ವಿಜಯಾರ್ಧಮೆ ತನಗಂದು ನವಮಾಸ | ತೀವಿದ ಬಲು ಬಸುಱಾಗೆ
ಭೂವದು ಬೆಸಲಾದವೋಲಂದು ಪೊರಮಟ್ಟು | ದಾವಾಹಿನಿ ಗುಹೆಯಿಂದ || ೧೫೩ ||

ತುಂಬಿದ ಮಧ್ಯಮುಖಾಂಡತಟಾಕ | ಕಿಂಬುವಡೆದ ರಜತಾದ್ರಿ
ಎಂಬೆರೆಯ ತುಂಬುಗುಳ್ವಂಬುಮೆನೆ ಗುಹೆ | ಯಿಂ ಬಂದುದಾನೃಪಸೇನೆ || ೧೫೪ ||

ಈ ರೀತಿಯಿಂದಾಗುಹೆಯ ಪೊಱಮ | ಟ್ಟಾರಾಜೇಂದ್ರಶೇಖರನು
ಆ ರಜತಾದ್ರಿಯುತ್ತರತಟದೊತ್ತಿನೊ | ಳಾರಯ್ಯದೆ ಬಿಟ್ಟನಾಗ || ೧೫೫ ||

ಸಾರ್ತಂದುದು ನಮ್ಮೀ ನೆಲಕಾಚಕ್ರ | ವರ್ತಿಯ ಸೇನೆಯೆಂದೆಂಬ
ವಾರ್ತೆಯ ಕೇಳಿ ಚೀಲಾವರ್ತರೆಂಬವ | ರ್ಕೀಳ್ತರಮಪ್ಪ ಕೋಪದೊಳು || ೧೫೬ ||

ಅಱುದಿಂಗಳು ಪರಿಯಂತರನಿಲ್ಲದೆ | ಕಱೆಯಲು ಕಲ್ಲಮಳೆಯನು
ತಱಿಸಂದಾಚಕ್ರರತ್ನಮಿರದೆ ನಾ | ಡೆಱೆಯ ಬೆಸಸಲಾಕ್ಷಣವೆ || ೧೫೭ ||

ಆ ನಾಲ್ವತ್ತೆಂಟು ಗಾವುದವನು ಬಿಟ್ಟಾ | ಸೇನೆಯ ತಲೆಯನೆಲ್ಲವನು
ನೂನಮಿಲ್ಲದೆ ಪರಿಹರಿಸಿ ಕಾಯಲು ಕಂಡು | ಮಾನಾಪಹಾರಿಗಳಾಗಿ || ೧೫೮ ||

ಮದವನುಡುಗಿಯಾಯಕ್ಷರು ಚಕ್ರಿಯ | ಪದಯುಗಕವನತರಾಗಿ
ಸದಮಲಕರಿಣಿ ಭೂಷಣಗಳನುರು | ಮುದದಿ ಕಾಣ್ಕೆಯನೀಯಲಾಗ || ೧೫೯ ||

ಕಡುಗಲಿಯವನಾದರಿಸಿಯಾಯೆಡೆಯೊಳು | ತಡೆಯೆ ಸೇನಾಧಿನಾಯಕನು
ಪಡುವನಡೆದು ಮತ್ತಾಮ್ಲೇಚ್ಛಖಾಂಡದ | ಪೊಡವಿಗೊಯ್ದರೆಲ್ಲರನು || ೧೬೦ ||

ಕಂಡರಸುಗಳ ಕಾಣಿಸಿಕೊಂಡು ಕಾಣದು | ದ್ದಂಡರೂರನು ಧೂಳುಗೊಟ್ಟ
ಕೊಂಡವರೂರ್ಗೆ ಠಾಣೆಯಗಳನಿಟ್ಟಾ | ದಂಡಾಧಿಪತಿ ದಂಡು ನಡೆದ || ೧೬೧ ||

ನಡನಡನಡುಗಿಸಿ ತಂದಾ ಚಕ್ರೇಶ | ನಡಿದಳವನು ಕಾಣಿಸಲು
ಸಡಗರದಿಂದವರನು ಮನ್ನಿಸಿಯಾ | ಯೆಡೆಯಿಂದ ಮುಂದಕೆ ನಡೆದು || ೧೬೨ ||

ಆ ಮಧ್ಯಮಖಾಂಡದ ನೃಪರೆಲ್ಲರ | ನಾಮಹೀಪತಿಸಾಧ್ಯಮಾಡಿ
ಪ್ರೇಮದಿನವರಿತ್ತ ಕಪ್ಪವ ಕೈಕೊಂ | ಡಾಮಹಿಯೊಳು ದಂಡು ನಡೆದು || ೧೬೩ ||

ಸಿಂಧೂನದಿಯ ತಡಿಯೊಳು ಬೀಡುಬಿಡಲಾ | ಸಿಂಧುದೇವತೆ ನಡೆತಂದು
ಬಂಧುರಗುಣಭೂಷಣನನು ಮೋಹಾನು | ಬಂಧದಿ ಪೂಜೆಮಾಡಿದಳು || ೧೬೪ ||

ಹರಿಪೀಠವನು ಕಾಣ್ಕೆಯ ನೀಡಲದನವ | ಧರಿಸಿ ಮುಂದಕೆ ನಡೆತಂದು
ಧರೆಹೊರೆದಾವಾಹಿನಿಗೂಡಿ ನಿಷದಭೂ | ಧರದಡಿಯೊಳು ಬಂದು ಬಿಡಲು || ೧೬೫ ||

ಹರುಷಾಮೋದದೆ ಬಂದಾ ನಿಷಧಾಮರ | ನುರುಮುದದಿಂ ಪೂಜೆಗೆಯ್ದು
ಸುರುಚಿರಮಪ್ಪ ರತ್ನಾಭರಣಂಗಳ | ನರಸು ಮಗಗೆ ಕೊಡಲಾಗ || ೧೬೬ ||

ಅಲ್ಲಿಂ ಮುಂದಕೆ ನಡೆದು ವೃಷಭಗಿರಿ | ಯಲ್ಲಿ ತನ್ನಂಕಮಾಲೆಯನು
ಸಲ್ಲೀಲೆಯಿಂ ಬರೆಯಿಸಿ ಬಳಿಕಾನೃಪ | ವಲ್ಲಭ ಮುಂದಕೆಯ್ತಂದು || ೧೬೭ ||

ಗಂಗಾತೀರವಿಡಿದು ಬರುತಿರಲಾ | ಗಂಗಾದೇವತೆ ಬಂದು
ಪಿಂಗದೇಶದ ಸಿಂಹಾಸನವ ರಚಿಸಿ ನೃಪ | ತುಂಗನ ಪೂಜೆಮಾಡಿದಳು || ೧೬೮ ||

ಬಳಿಕಲ್ಲಿಂ ತೆರಳಿಸಿ ವಿಜಯಾರ್ಧಾ | ಚಲದುತ್ತರತಟದಲ್ಲಿ
ತಳತಂತ್ರಮಾರ್ಬಲವೆಲ್ಲವನಿರದಾ | ಬಳಿಯೊಳು ಬೀಡುದಾಣಗೊಳಿಸಿ || ೧೬೯ ||

ಬಿತ್ತರಮಪ್ಪಾ ವಿಜಯಾರ್ಧಾಚಲ | ದುತ್ತರ ದಿಕ್ತಟದಲ್ಲಿ
ಮತ್ತೊಂದು ಖಾಂಡಪ್ರತಾಪವೆಸರ ಗುಣ್ಪು | ವೆತ್ತಗಹ್ವರಮೊಪ್ಪಿದುದು || ೧೭೦ ||

ಹಿಂದೆ ತಮಿಸ್ರಗುಹೆಯ ಪಡಿಯನು ಬಡಿ | ದಂದದಿನದಱ ಪಡಿಯನು
ಸಂದ ಪರಾಕ್ರಮಿಯಾ ದಂಡಾಧಿಪ | ನಂದಿಟ್ಟ ನುಗ್ಗುಗುಟ್ಟಿದನು || ೧೭೧ ||

ಆ ಉರಿ ಕೆಡುವನ್ನಬರ ಮ್ಲೇಛಕಾಂಡದ | ಭೂವರರನು ಸಾಧ್ಯಮಾಡಿ
ಆ ವಿಕ್ರಮಚಕ್ರವರ್ತಿಯ ಮೆಲ್ಲಡಿ | ದಾವರೆಯನು ಕಾಣಿಸಿದನು || ೧೭೨ ||

ಬಳಿಕಾಬಾಂಬಟ್ಟೆಗನಾಡಿನ ನೃಪ | ತಿಲಕರೆಲ್ಲರು ಬಂದೆಱಗಿ
ಲಲನೆಯರುತ್ತಮವಾಜಿವಾರಣರತ್ನ | ಗಳ ಕಾಣ್ಕೆಯನಿತ್ತರಾಗ || ೧೭೩ ||

ಮುನ್ನಾಗುಹೆಯನು ಪೊಱಮಟ್ಟಾತುರದಿಂ | ಸನ್ನುತಗುಣಿ ಪೊಱಮಡಲು
ಅನ್ನೆಗಮಾನುಟ್ಯಮಾಲಾನಾಮದಯಕ್ಷ | ನುನ್ನತಮಪ್ಪ ವಸ್ತುವನು || ೧೭೪ ||

ತಂದು ಪಾಗುಡಮಿತ್ತು ಪದಕೆಱಗಿದೊಡಾ | ನಂದದೊಳವನ ಬೀಳ್ಕೊಟ್ಟು
ಸಂದಣಿಸಿದ ಸೇನೆಯನಾಬಳಿಯೊಳು | ತಂದು ಬಿಡಿಸಲಾಕ್ಷಣದೊಳು || ೧೭೫ ||

ವಿಕ್ರಮಯುತ ಸೇನಾಧಿನಾಯಕನಾ | ಚಕ್ರಿಗೆಱಗಿ ಬೀಳ್ಕೊಂಡು
ಶಕ್ರನದೆಸೆಯೊಳುಳ್ಳಾ ಮ್ಲೇಚ್ಛನೃಪರ ಪ | ರಾಕ್ರಮವನು ನುಗ್ಗುಗುಟ್ಟಿ || ೧೭೬ ||

ಬಳಿಕವರನು ಬಾಳ್ದಲೆವಿಡಿದಾ ನೃಪ | ತಿಲಕನ ಕಾಣಿಸಲಾಗ
ತಳುವದೆಯವರಿತ್ತ ಕಪ್ಪವ ಕೈಕೊಂ | ಡಲಘುವಿಕ್ರಮಿ ನಡೆತಂದ || ೧೭೭ ||

ಇಂತು ಷಟ್ಖಾಂಡದೊಳುಳ್ಳ ಮಹೀಶ್ವರ | ಸಂತತಿ ಬಿಜ್ಜಾಧರರ
ತಿಂಥಿಣಿಮ್ಲೇಚ್ಛನೃಪಾವಳಿಯಾಯಕ್ಷ | ಸಂತಾನವ ಸಾಧ್ಯಮಾಡಿ || ೧೭೮ ||

ಅಱುವತ್ತುಸಾಸಿರವರುಷಕ್ಕಾ ನಾ | ಡೆಱೆಯನು ನೆಲನೊಂದಿನಿಸು
ತೆಱವಿಲ್ಲದ ಬಲವೆರಸಿ ತಿರುಗಿದನು | ತುಱುಗಿದ ವೈಭವದಿಂದ || ೧೭೯ ||

ದಿಕ್ಕರಿಗೆಣೆಮಿಗಿಲೆನಿಸುವ ಚೌಶೀತಿ | ಲಕ್ಕಹಸ್ತಿಗಳದಱನಿತು
ತಕ್ಕಿನ ತೇರುಕ್ಕುವ ಮನಸಿನವಾಜಿ | ಲೆಕ್ಕಿಸಿ ಪದಿನೆಂಟು ಕೋಟಿ || ೧೮೦ ||

ಕೋಟಿಬಲಕ್ಕೋರೊರ್ವರೆಂದೆನಿಪ ಸ | ಘಾಟಿಯ ಸಾಹಸದಿಂದ
ತೋಟಿಗೆ ಜವನ ಕರೆವ ನಾಲ್ವತ್ತೆಂಟು | ಕೋಟಿಭಟರು ಬರುತಿರಲು || ೧೮೧ ||

ಅಣಿಮಾದ್ಯಷ್ಟಗುಣಾಲಂಕೃತರಪ್ಪ | ಗಣಬದ್ಧದೇವನಿಕಾಯ
ಎಣಿಸಿದೊಡೆರಡೆಂಟುಸಾಸಿರಮಾಗುಣ | ಗಣನೊಡನೆಯ್ದಿದುದಾಗ || ೧೮೨ ||

ಕಾಮರೂಪಿಣಿಯವಲೋಕಿನಿಯಾಕಾಶ | ಗಾಮಿಯಾದಿಯ ಮಹಿಮೆವಡೆದ
ಭೂಮಿಯೊಳ್ಳುಳ್ಳ ವಿದ್ಯಾದೇವತೆಗಳನಂ | ದಾ ಮಹೀಪತಿಯೊಡನೆಯ್ದೆ || ೧೮೩ ||

ಆನೆ ಕುದರೆ ಕೂರಾಳು ವರೂಥ ವಿ | ದ್ಯಾನಿಕುರುಂಬಮಪ್ಸರರ
ಭೂನುತಮಪ್ಪ ಷಡಂಗಸೇನೆಗಳಾ | ಭೂನಾಥನೊಡನೆಯ್ದಿದುದು || ೧೮೪ ||

ಮೀಟುವರಿದು ಚಂದ್ರಸೂರ್ಯರನಿರದೆ ನಿ | ರ್ದಾಟಿಪ ನಾಲ್ವತ್ತೆಂಟು
ಕೋಟಿ ಪತಾಕೆಗಳಾ ಸೇನೆಯೊಳು ಸ | ಘಾಟಿಯಿಂದೆತ್ತಿನಡೆದುದು || ೧೮೫ ||

ಮೋಹರಿಸಿದ ನಾಲ್ವತ್ತೆಂಟುಸಾಸಿರ | ಕ್ಷೋಹಿಣಿ ಬಲಸಹಮಾಗಿ
ಮೋಹರಿಸಿದ ಗಜರತ್ನಮನೇಱಿ | ಸಾಹಸಿ ನಡೆತಂದನಾಗ || ೧೮೬ ||

ಪ್ರಕಟಿತಮೆನಿಸುವುಭಯಕುಲಶುದ್ಧರು | ಸಕಲವಿಭವಸಂಯುತರು
ಮಕುಟವರ್ಧನರು ಮೂವತ್ತಿಚ್ಛಾಸಿರ | ವಕಳಂಕನೊಡನೆಯ್ದಿದರು || ೧೮೭ ||

ಹೆಣ್ಣಾನೆಯಮೇಲೆ ಮೂವತ್ತಿರ್ಚ್ಛಾಸಿರ | ಬಣ್ಣವಾಯ್ದೆಱಿಯಬಾಲೆಯರು
ಬಣ್ಣಿಸಿ ಚಮರವ ಢಾಳೈಸುತ ಬಂದ | ರುಣ್ಣದೂರಬಲೆಯರು || ೧೮೮ ||

ಈ ಪರಿ ಪೇಳ್ದ ಮಹಾವೈಭವದಿಂ | ದಾ ಪುರವರವನು ಹೊಕ್ಕು
ರೂಪಮನ್ಮಥನರಮನೆಗೆಯ್ದಿದನಾ | ಶ್ರೀಪಾಲಚಕ್ರೇಶ್ವರನು || ೧೮೯ ||

ಜನವಿನುತನು ಜಯಲಕ್ಷ್ಮೀಲೋಲನು | ವನಿತಾಜನಮನಸಿಜನು
ವಿನಯನಿಧಾನನೊಪ್ಪಿದನು ಸತ್ಯವಿಜನ | ವನರುಹನವಭಾಸ್ಕರನು || ೧೯೦ ||

ಇದು ಭಾವಕಜನ ಕರ್ಣವಿಭೂಷಣ | ಮಿದು ರಸಿಕರ ಚಿತ್ತದೆಱಕ
ಇದು ವಾಣೀಮುಖಮಾಣಿಕ್ಯ ಮ | ತ್ತಿದು ಶೃಂಗಾರಸುಧಾಬ್ಧಿ || ೧೯೧ ||

ಹದಿಮೂರನೆಯ ಸಂಧಿ ಸಂಪೂರ್ಣಂ