ಶ್ರೀಮದಮರಮಣಿಮಕುಟರಂಜಿತರತ್ನ | ಧಾಮಾಂಬುಧಾರಾಧೌತ
ತಾಮರಸಾಂಘ್ರಿಯುಗಲ ವೀರನಾಥನು | ದ್ದಾಮ ಸುಖವನೀವುದೆಮಗೆ || ೧ ||

ಶ್ರೀನಾರೀನರ್ತನವಕ್ಷೋರಂಗ | ನಾನತಜನರಕ್ಷಕನು
ಮಾನವಲೋಕಾಧೀಶನೆನಿಸಿದದನಸ | ಮಾನನುಜ್ವಲಕೀರ್ತಿಯುತನು || ೨ ||

ಸುರಲೋಕವನು ಸುಪರ್ವಾದಿನಾಯಕ | ನುರಗಲೋಕವನಹಿರಾಜ
ಪರಿಪಾಲಿಸುವಂತಾಪರಿವೃಢನಾ | ನರಲೋಕವನಾಳಿದನು || ೩ ||

ಭೂವಲಯದ ಭೂಭುಜರ ತನುಜೆಯರು | ಕಾವನ ಕಾಂತೆಗೋಱಗೆಯ
ಭಾವವ ಹಡೆದವರಬಲೆಯರಾದರು | ಮೂವತ್ತೆರಡು ಸಾಸಿರವು || ೪ ||

ಬಿತ್ತರವಡೆದ ಬಿಜ್ಜಾಧರರಣುಗೆಯ | ರುತ್ತಮವತಿರೂಪೆಯರು
ವೃತ್ತಕುಚೆಯರಬಲೆಯರಾದರು ಮೂ | ವತ್ತಿರ್ಚಾಸಿರಮವಗೆ || ೫ ||

ಮ್ಲೇಚ್ಛಮಹೀಪರ ತನುಜೆಯರು ಕಣ್ಮನ | ಕಿಚ್ಚೈಪ ರೂಪವತಿಯರು
ಸ್ವಚ್ಛಸೊಬಗುಸಂಯುತೆಯರು ಮೂವ | ತ್ತಿಚ್ಛಾಸಿರಮಾದರವಗೆ || ೬ ||

ಅಂತು ತೊಂಬತ್ತಾಱುಸಾಸಿರ ಸೊಗಯಿಸು | ವಂತಃಪುರವಾನೃಪಗೆ
ಕಂತುರಾಜನ ಪಟ್ಟದ ರಾಣಿ ಬಹು ರೂ | ಪಂ ತಳೆದಂತೊಪ್ಪುತಿಹರು || ೭ ||

ತಿಳಿನೀರ್ತೀವಿದ ಪಲವು ಪಾತ್ರೆಯೊಳುಪ | ಜ್ವಳಿಪ ಚಂದ್ರನ ಬಿಂಬದಂತೆ
ವಿಲಸಿತರೂಪಪರಾವರ್ತನದಿನಾ | ಲಲನೆಯರೆಲ್ಲರೊಳಿಹನು || ೮ ||

ಅಂಗನೆಯರ ಚಿತ್ತವ್ಯಾಪಕನಾದಂ | ದಂಗಜನಂಗವಧರಿಸಿ
ಪಿಂಗದೆ ಕೂಡುವಂದದಿ ನೃಪನಾ ಪಲ | ವಂಗನೆಯರೊಳು ಕೂಡುವನು || ೯ ||

ಆ ರಮಣಿಯರೆಲ್ಲರೊಳತಿ ರತಿಸುಖ | ಪೂರಿಸದಾನೃಪವರಗೆ
ಸಾರಸುಖವನೊಲಿದೀವ ಜಯಾವತಿ | ನಾರೀರತನಮಾಗಿಹಳು || ೧೦ ||

ಅಱುವತ್ತುಸಾಸಿರ ಸುತರದರರ್ಥ | ಮಿಱುಗುವ ರೂಪವತಿಯರು
ನೆಱೆವೆಱೆಮೊಗದ ಕುಮಾರಿಯರಾ ನಾ | ಡೆಱೆಯಗೆ ಸಂಜನಿಸಿದರು || ೧೧ ||

ಮುಕ್ಕೋಟಿಯ ಮೇಲೆಣಿಸಿದೊಡೈವತ್ತು | ಲಕ್ಕಬಂಧುಗಳೋಲಯಿಸುವ
ಮಿಕ್ಕ ಸಿರಿಯ ಮೂವತ್ತಿಚ್ಛಾಸಿರ | ಲೆಕ್ಕದ ನೃಪರೊಪ್ಪುತಿಹರು || ೧೨ ||

ಬಿನ್ನಾಣದಡುಗೆಯ ಬಾಣಸಿಗರು ಬಿಜ್ಜ | ರುನ್ನತಿಕೆಯ ನಾಟ್ಯಶಾಲೆ
ಮುನ್ನೂರಱುವತ್ತಾಗಿ ಪ್ರತ್ಯೇಕಮು | ತ್ಪನ್ನಸುಕೃತಿಗೊಪ್ಪುತಿಹರು || ೧೩ ||

ಪರಿಪಾಲಿತ ಸಾಸಿರ ಯಕ್ಷರಂಜಿತ | ಮುರುಚಕ್ರಮಣಿ ಚರ್ಮದಂಡ
ಕರವಾಳು ಕಾಕಿಣಿಯುಷ್ಟವಾರಿಣವೆಂಬ | ವರರತ್ನನವೇಳಜೀವಗಳು || ೧೪ ||

ವಾಹಿನಿಪತಿ ಗೃಹಪತಿ ವಿಶ್ವಕರ್ಮ ಪು | ರೋಹಿತವಾಜಿವೇತಂಡ
ಆ ಹೆಮ್ಮಣಿಯೆಂಬ ಜೀವರತ್ನವು ಪುಣ್ಯ | ದೇಹಿಗೆ ಬೆಸಕೆಯ್ವುತಿಹವು || ೧೫ ||

ಋತುಯೋಗ್ಯ ವಸ್ತು ಭಾಜನ ಧಾನ್ಯಶಸ್ತ್ರ ಸಂ | ತತಿವಾದ್ಯಹರ್ಮ್ಯಸದ್ವಸನ
ನುತ ಭೂಷಣ ನವರತ್ನವನೀವವು | ನ್ನತಮಪ್ಪ ಕೋಶವೊಂಬತ್ತು || ೧೬ ||

ರಮಣೀಯಕರವಜ್ರವೃಷಭನಾರಾಚೋ | ಪಮ ಸಂಹನನಸಂಯುತನು
ಸಮಚತುರಸ್ರಸಂಸ್ಥಾಪನೋಪೇತನು | ತ್ತಮ ಚರಮಾಂಗಶೋಭಿತನು || ೧೭ ||

ನಿಷ್ಟಪ್ತಕನಕವರ್ಣ ಸ್ವಸ್ತಿಕಾದಿ ಚೌ | ಷಷ್ಟಿ ಸುಲಕ್ಷಣೋದರನು
ಸಿಷ್ಟತಿಲ್ಲಮಾಸುರಿಕಾದಿ ವ್ಯಂಜನ | ನಿಷ್ಟನಪ್ರತಿಮವೀರ್ಯನನು || ೧೮ ||

ಭಾವಿಸೆ ಭಾನುಮಂಡಲಪರಿಯಂತಿ | ರ್ದಾವಸ್ತುವನೀಕ್ಷಿಸುವನು
ಆವಾಗಮಾ ಕಿವಿಗೊಟ್ಟು ನಾಲ್ವತ್ತೆಂಟು | ಗಾವುದವನು ಕೇಳುವನು || ೧೯ ||

ಪೂರ್ವಕೋಟಿ ವರುಷಾಯುಸಂಪನ್ನನ | ಪೂರ್ವಚರಿತ್ರಸಂಯುತನು
ಪೂರ್ವದಿಶಾವರಸನ್ನಿಭವಿಭವನ | ಪೂರ್ವಪುಣ್ಯವಾರ್ಜಿತನು || ೨೦ ||

ಅಱವತ್ತುಸಾಸಿರ ವಿದ್ಯಾತತಿ ಸಂಯುತನು | ಕಿಱಿಯಂದು ಮೊದಲು ಸಾಧಿಸದೆ
ಅಱಿವನಾಗಿ ಮತ್ತಾ ಮಹೀಪತಿಮಾಡಿ | ದಱನನಿನ್ನೇನ ಬಣ್ಣಿಪೆನು || ೨೧ ||

ಧರೆಹುಟ್ಟಿದಂದಿಂದೀ ನೃಪನಂದದಿ | ನರಸುಗೆಯ್ದವರಿಲ್ಲವೆಂದು
ನರಲೋಕವೆಯ್ದಿ ಕೊಂಡಾಡಿದರಾ ಭೂ | ವರಕುಲಗಗನಭಾಸ್ಕರನ || ೨೨ ||

ಒಂದುಸಹಸ್ರಸಂವತ್ಸರದ ಕಡೆಯಾ | ದೊಂದಪೂರ್ವಕೋಟಿಮಾಯ
ಮಂದೇತರವೈಭವನೀ ರಾಜ್ಯಮನಾ | ನಂದದೊಳಾಳುತಮಿರ್ದ || ೨೩ ||

ಬಳಿಕೊಂದು ದಿನದ ರಾತ್ರಿಯೊಳತಿಮುದದಿಂ | ಲಲನಾಮಣಿಯೊಡಗೂಡಿ
ಅಲಸದನನ್ಯಜಕೇಳಿಯೊಳಾತಸಿ | ತಳಿವನ್ನೆವರ ಸುಖಮಿರ್ದು || ೨೪ ||

ಮುನ್ನೇಸರುಮೂಡುವ ಹೊತ್ತಿನೊಳೆದ್ದು | ಹೊನ್ನದಾಮರೆ ಮೊಗದೊಳೆದು
ರನ್ನದೊಡವುವಸ್ತ್ರಾನುಲೇಪನಮಿಟ್ಟು | ಕನ್ನಡಿಯನು ನೋಡುವಾಗ || ೨೫ ||

ಬೆಳೆವ ಬಲುಜವ್ವನವೆಂಬ ಗರ್ವದ ಗುಂಡ | ಹೊಳಚಲೆನುತ ಮೃತ್ಯುಪಿಡಿದ
ಕುಲಿಶದುಳಿಯ ಮೊನೆಯಂತೆ ಕೆನ್ನೆಯೊಳೊಂದು | ಮೊಳೆವ ನರೆಯ ಕಂಡನವನು || ೨೬ ||

ಕರಮೆಸೆವಾ ಭೋಗೋಪಭೋಗಕೆ ನೆರೆ | ಹರಿಯಮನದ ಕಾಲ್ಗಿಡುವ
ವರೃಜುಭಾವವೆಂದೆಂಬ ಸಂಕಲೆಯಕೀ | ಲಿರವಾದುದಾನರೆಯವಗೆ || ೨೭ ||

ಸರಸಲಾವಣ್ಯಸಂಯುತ ವರವದನಕೆ | ತೆರೆಯ ಹೊಲಿವೆನೆಂದೆನುತ
ಭರದಿ ಪಿಡಿದ ಕಾಲನ ಕೈಯಸೂಜಿಯ | ದೊರೆಯಾದುದಾ ನೆರಯವಗೆ || ೨೮ ||

ದುರಿತವಶನಿಮುಂಕಟ್ಟಿಕೊಂಡಾಯುವ | ನುರವಣಿಯಿಂದೆಮನೆಚ್ಚ
ಸರಳುಮುಳುಗಿ ಮಱುಮೊನೆಗಂಡಂದದ | ನೆರೆಯಂಕುರವ ಕಂಡನವನು || ೨೯ ||

ಆ ಮೂಡುವನೆರೆಗಂಡೆದೆಯಿಂ ಧೈರ್ಯ | ವಾ ಮಹೀಪತಿಗೆ ಪಾಱಿದುದು
ಕೌಮುದಿಗಂಡೆಣೆವಕ್ಕೆ ಚಕ್ರಿಯನುಳಿ | ದಾಮೇಲಕೆ ಪಾಱುವಂತೆ || ೩೦ ||

ಅಂತಕ ನೃಪನ ಕೀರ್ತಿಲತೆಯಂಕುರ | ದಂತೆ ತೋಱುವನರೆಗಂಡು
ಕಂತುಸದೃಶನಂಬುತಾಗಿದ ಬೆಳ್ಮಿಗ | ದಂತೆ ಹವ್ವನೆಹಾಱಿದುದು || ೩೧ ||

ಒಳ್ಳುಣಿಸೊಳ್ಪೆಂಡಿರ ಭೋಗಿಪೆನೆಂ | ಬೊಳ್ಳಿತಪ್ಪೆನ್ನೀತನುಗೆ
ಬಳ್ಳಿಗಂಟಕಮಾದುದೀ ಮುಪ್ಪೆಂದಾಗ | ತಳ್ಳಂಕವಡೆದನಾ ನೃಪತಿ || ೩೨ ||

ಬಾಲಕಿಯರನೀಕ್ಷಿಪೆನೆಂಬ ದೃಷ್ಟಿಗೆ | ಚಾಳೇಸವ ಪುಟ್ಟಿಪುದು
ಕೇಳುವೆನವರ ಲಲ್ಲೆಯನೆಂಬ ಕಿವಿಯನು | ಹೂಳುವುದೀಜರೆತನವು || ೩೩ ||

ಮಿಂಡಿವೆಣ್ಗಳನಪ್ಪುವೆನೆಂಬ ಮೆಯ್ಯೊಳು | ಹಿಂಡುದೆಱೆಯ ಪುಟ್ಟಿಸುವುದು
ಮುಂಡಾಡುವೆನೆನಲಳ್ಳಾಡಿಸುವುದು | ಮಂಡೆಯನೀ ಜರೆತನವು || ೩೪ ||

ನಡುಗುವ ಹಲ್ಲ ಕಟ್ಟಿದ ಹಾವಸೆಯಿಂ | ದಡಸಿದ ನಾರುವಾಯ್ಗೂಡಿ
ಕೂಡುವ ವೃದ್ಧನ ಚುಂಬನಕೆ ಬಾಯ್ಬಿಡುವರೆ | ಕಡುಹೇಸದೆ ನಾರಿಯರು || ೩೫ ||

ಸುರತಾಸಕ್ತವೃದ್ಧನ ಭೋಗದಾಸಕ್ತಿಯ | ಇರವು ಕಮಲಲೋಚನೆಯರ
ಕರಮೆಸೆವಾ ಬಡ್ಡಿದೊಡೆವಾಳೆಗೆ ಹಸ್ತಿ | ಇರವಲ್ಲವೆ ಭಾವಿಸಲು || ೩೬ ||

ಅರಸೆಂಬುದಕಂಜಿಯತಿ ವೃದ್ಧನ ಸಂಗ | ತರಮೆನೆಯೆಳೆವೆಂಡಿರುಗಳು
ತರಹರಿಸುವರೋಕರಿಕೆ ಬಂದಡೆ ಬಾಯ | ನಿರದೆ ಮುಚ್ಚುವರಂದದೊಳು || ೩೭ ||

ಅಕ್ಕಟಕ್ಕಟ ನಾನಾ ಚಿಕ್ಕಹರೆಯದ | ಸೊಕ್ಕಿನೊಳಗೆ ಮೈಮಱೆದು
ಲೆಕ್ಕವಿಲ್ಲದ ಪಾಪವ ಗಳಿಸಿದೆನೆಂದು | ಮಿಕ್ಕ ದುಃಖವ ತಾಳಿದನು || ೩೮ ||

ಮುಂದುಗಾಣಿಸಲೀಯದು ಪುಣ್ಯಪಾಪವಿ | ದೆಂದು ಹೇಳುವರ ನೀತಿಯನು
ಹಿಂದುಗಳೆದು ವಿಷಯದೊಳು ಮನವನಿರ | ದೊಂದಿಪುದಾಜವ್ವನವು || ೩೯ ||

ಮೊಱೆ ಧರ್ಮಗಳಿಲ್ಲ ಮೊಲಗಳ್ತಲೆಯಲ್ಲ | ದಱಿವೆಂಬುದೊಂದಿನಿತಿಲ್ಲ
ದುಱುದುಂಬಿತನವಲ್ಲದೆ ಜವ್ವನದೊಳ | ಗಱನೆಂಬುದೆಳ್ಳಿನಿತಿಲ್ಲ || ೪೦ ||

ಹಸುಳೆತನದೊಳೊಂದು ಹೊಸ ಹರೆಯದೊಳೊಂದು | ಹಸಗೆಟ್ಟ ಮುಪ್ಪಿನೊಳೊಂದು
ಮುಸುಕಿದ ಮೂಲವಣ್ಣವಡೆದು ಕಡೆದು ಮತ್ತೆ | ಮಸಿವಣ್ಣಹುದೀ ಒಡಲು || ೪೧ ||

ಸಾವಿಗೆ ಹುಟ್ಟಿ ಬೆಳೆದು ಜವ್ವನವಾಂ | ತೀವೊಡಲನು ನಿತ್ಯಮೆಂದು
ಓವುವವನು ಸಾಯ್ಗುದುರೆಗೆ ಹುಲ್ಲೀವ | ಗಾವಿಲನಂದವಡೆವನು || ೪೨ ||

ತಿಂಬವರುಗಳನಲ್ಲದೆಯಾ ಕುರಿಮೆಚ್ಚ | ವೆಂಬಂತೆಯಾಜವಪುರಕೆ
ಇಂಬುಮಾಡುವನಿಷ್ಟರ ಪರಿಗ್ರಹವನು | ನಂಬಿದೆ ನಾನಿಂದುವರ || ೪೩ ||

ನಾಡುಗರೆಲ್ಲ ನೆರೆದು ಪಿರಿದಚ್ಚರಿ | ಮಾಡುವರಿಂದ್ರಜಾಲವನು
ಹೂಡಿ ಶರೀರವೆಂದೆಂಬ ಚೋಹವನು ತೊ | ಟ್ಟಾಡುವ ಜೀವವಿರ್ದಂತೆ || ೪೪ ||

ಮಕ್ಕಳನೆರವಿ ಮಂಜಿನ ಪುಂಜವಾಹೆ | ಮ್ಮಕ್ಕಳೆಲ್ಲರು ಮಳಲೇಱಿ
ಮಿಕ್ಕ ನೆಂಟರು ಮುಗಿಲೊಡ್ಡು ವೈಭವಶಬ | ಕಿಕ್ಕಿದಪಗಲಶೃಂಗಾರ || ೪೫ ||

ದೇಹದಿರವು ದೇವಧನು ನವಯವ್ವನ | ಮೋಹರಿಸಿದ ಸಂಜೆಗೆಂಪು
ಊಹಿಸಲಕ್ಕು ಉನ್ನತಮಪ್ಪ ಯೀ ಸಿರಿ | ಯಾ ಹುಲ್ಲ ಹಿಡಿದುರಿಯೇಳ್ಗೆ || ೪೬ ||

ಅದರಿಂದೆ ತನು ನಿತ್ಯವಲ್ಲೆಂಬುದ | ನದಟರ ದೇವಚಿಂತಿಸುತ
ಸದಮಲಮಪ್ಪ ಸದ್ಗತಿಯ ಸಾಧಿಸಿ ಮುಕ್ತಿ | ಹೃದಯಾಸ್ತಮಾಗಲಿಂತೆಂದ || ೪೭ ||

ಬಾಲಕಾಲದ ವಿದ್ಯೆ ಬಲುಜವ್ವನದ ಭೋಗ | ಮೇಲಣ ಮುಪ್ಪಿನ ತಪಸು
ಕಾಲವ ಕಳೆದ ದಿನದ ಸನ್ಯಸನ ವಿ | ಶಾಲಿಸುಕೃತಿಗಲ್ಲದುಂಟೆ || ೪೮ ||

ಮೆಲುವುದಕಾಗದ ಹುಳಿತ ಹಣ್ಣನು ಬಿತ್ತಿ | ಫಲವ ಹಡೆವರಂದದೊಳು
ಹಲವು ಭೋಗಕೆ ಸಲ್ಲದೀತನುವಿಡಿದು | ಸಲ್ಲಲಿತಗತಿಯ ಸಾಧಿಪೆನು || ೪೯ ||

ಸರ್ವಪರಿಗ್ರಹಮೆಲ್ಲವಸ್ಥಿರಮೆಂದು | ನಿರ್ವೇಗಮಾನಸನಾಗಿ
ಸರ್ವಾವಸರಮೆಂಬೋಲಗಶಾಲೆಗೆ | ಯುರ್ವೀಪನೆಯ್ದಿ ಕುಳ್ಳಿರ್ದು || ೫೦ ||

ತನಗೆ ಜಯಾವತಿಯೆಂದೆಂಬ ಸುದತಿಗೆ | ಜನಿಯಿಸಿ ಜವ್ವನವಾಂತ
ಮನಸಿಜನಿಭ ಲಕ್ಷ್ಮೀಪಾಲನೆಂದೆಂಬ | ತನುಜಾತನ ಬರಿಸಿದನು || ೫೧ ||

ತನ್ನ ವೈರಾಗ್ಯವನಾ ನಿಜಸೂನುಗೆ | ಸನ್ನುತ ಗುಣಮಣಿ ಪೇಳ್ದು
ಇನ್ನು ನೀನರಸುತನವ ಕೈಕೊಳ್ಳೆಂದು | ಬಿನ್ನಣದಿಂದೊಡಂಬಡಿಸಿ || ೫೨ ||

ಆ ನರಲೋಕವೆಲ್ಲಚ್ಚರಿಗೊಂಬಂತೆ | ಮಾನಿತವಹವಿಭವದೊಳು
ಆನಂದದಿನಾಸುಕುಮಾರಗೆ ಯಜ | ಮಾನಪಟ್ಟವ ಕಟ್ಟಿದನು || ೫೩ ||

ಮಕ್ಕಳು ಪದಿನೆಣ್ಫಾಸಿರವಾಪೆ | ಣ್ಮಕ್ಕಳೊಂಬತ್ತು ಸಹಸ್ರ
ಯಕ್ಕತುಳದ ಪತ್ತುಸಾಸಿರರಿಕೆಯರ | ಮಕ್ಕಳು ಸಹಮಾಗಿ ನಡೆತಂದು || ೫೪ ||

ದಮವರರೆಂಬ ಮುನೀಶರ ಮೃದುಪದ | ಕಮಲಮೂಲದೊಳು ದೀಕ್ಷೆಯನು
ವಿಮಲಬೋಧನು ಕೈಗೊಂಡನು ಕೈವಲ್ಯ | ರಮಣಿಮೇಲಿಚ್ಛೈಸುವಂತೆ || ೫೫ ||

ವರದರುಶನ ಬೋಧ ಚಾರಿತ್ರವೆಂಬ ಬಂ | ಧುರ ಗುಣಮಣಿಭೂಷಣವನು
ಉರುಮುದದಿಂ ಕೊಟ್ಟು ತೆಗೆದನು ಮುನ್ನಿನ | ಚಿರ ಕೇವಲಭೂಷಣವನು || ೫೬ ||

ಬಳಿಕ ದಿಗಂಬರನಾಗಿ ಮುಂಪೊದೆದಾ | ಲಲಿತಾಂಬರವನು ಬಿಸುಟು
ಬೆಳೆವ ದುರಿತವಲ್ಲರಿಯ ಬೇರ ಕೀಳುವಂ | ತೆಳಸಿ ಕಿತ್ತನು ಕುಂತಳವನು || ೫೭ ||

ಆ ದೀಕ್ಷೆಯ ಕೊಂಡಸಮಯಕವಧಿಬೋಧ | ವಾದಿನವದೆಂಬುದಕ್ಕೆ
ಮೇದಿನಿಪೊಗಳ್ವಮನಃಪರಿಯದ ಬೋಧ | ವಾದರಿಸಿತು ಮುನ್ನೀರ್ವರೆಗೆ || ೫೮ ||

ಮತ್ತಾಮಱುವಗಲಿಗೆ ನಿರ್ಮಲಮ | ಪ್ಪುತ್ತಮಕೇವಲಬೋಧ
ಚಿತ್ತಸಂಭವ ಮದಹರನ ಮನದೊಳು | ತ್ಪತ್ತಿಯಾಯ್ತುಯಿಳೆ ಪೊಗಳೆ || ೫೯ ||

ಕರಮೆಸೆವಾ ಕೇವಲಬೋಧಮುದಯಿಸೆ | ಧರೆಯಿಂದಾಮೇಘಪಥಕೆ
ವರಧನುವೈಸಾಸಿರುತ್ಸೇದವನಂ | ದಿರದೆ ನೆಗೆದನಾ ಮುನಿಪ || ೬೦ ||

ವನಿತೆಯರುಗಳನುಳಿದು ಮತ್ತೆ ವಸುಧಾ | ವನಿತೆಯರ ಮೆಟ್ಟಿನಿಂದಿಹುದು
ಅನುಚಿತವೆಂದಾಗಸಕೆ ನೆಗೆದನೊ | ಮುನಿಕುಲಗಗನಚಂದ್ರಮನು || ೬೧ ||

ಅನಿತರೊಳನಿಮಿಷಪತಿಯನುಮತದಿಂ | ಮಿನುಗುವ ಗಂಧಕುಟಿಯನು
ಅನುರಾಗದಿಂ ಬಂದು ವಿರಚನೆಗೆಯ್ದನು | ಧನದನತ್ಯಂತ ಭಕ್ತಿಯೊಳು || ೬೨ ||

ಗಾವುದ ಒಂದಱ ವಿಸ್ತೀರ್ಣದೊಳು ನಾ | ನಾ ವಿಧ ನವರತ್ನದಿಂದ
ಸಾವಧಾನದ ಬಿನ್ನಣದಿಂ ಗೆಯ್ದನು | ಭಾವಜಾರಿಯ ಗಂಧಕುಟಿಯ || ೬೩ ||

ಕೈವಲ್ಯಕಾಂತೆಯೊಡನೆ ಕೈಗೂಡುವ | ದೇವನುದ್ವಹನಮಂಟಪವು
ಆ ವಾಯುಪಥವನಧಿಯನವಮಣಿಯ | ದೇವಿಯ ಸಮವಸರಣವೊ || ೬೪ ||

ಸುರುಚಿರಮಪ್ಪ ಸುಧಾರಸಪೂರಿತ | ಪರಿಖೆ ವಿರಾಜಿಸಲಲ್ಲಿ
ಸುರಭಿಸಮತಿಗಾಡುಂಬೊಲ ನಾನಾ | ಸುರತರುವನಮೊಪ್ಪಿದುದು || ೬೫ ||

ಪಸುರುವರಲ ಹಂಸೆ ಪಳುಕಿನೆಳೆಯ ಗಿಳಿ | ಪೊಸಮುತ್ತಿನ ಮಱಿದುಂಬಿ
ಮಿಸುಪ ವಜ್ರದ ಚಾಣಾಂಕಿವಸುಳೆ ರಂ | ಜಿಸುತಿಹವಾವನದೊಳಗೆ || ೬೬ ||

ಹಿಂದಣ ಮೂಱು ಮುಂದಣ ಮೂಱು ಜನ್ಮದೊ | ಳೊಂದಿದವಸ್ಥೆಯೆಲ್ಲವನು
ಇಂದು ಕಂಡಂತೆ ಕಾಣುವರಲ್ಲಿಯ ಕೊಳ | ದೊಂದು ನೆಲನ ನೋಡಿದವರು || ೬೭ ||

ಪಳುಕಿನ ಕೋಂಟೆ ಪಚ್ಚೆಯ ಮುಗಿಲಡ್ಡಳೆ | ತೊಳಪ ಮುತ್ತಿನ ಗೋಪುರಗಳು
ಕುಲಿಶದ ಬಾಗಿಲ್ವಾಡಮೊಪ್ಪಿಡುವಾ | ಕಲಿನಾರಿಯ ಗಂಧಕುಟಿಗೆ || ೬೮ ||

ಅಂಬರಶರಧಿಯೊಳಭವ ರಾಜಶ್ರೇಷ್ಠಿ | ಯಿಂಬಾಗಿ ಧರ್ಮವಿತ್ತವನು
ತುಂಬಿದ ಸಮವಸರಣಭೈತ್ರದ ಕೂವ | ಕಂಭ ಮಾನಸ್ತಂಭಮಾಯ್ತು || ೬೯ ||

ಮಿಸುಗುವ ಮೂಱು ರತ್ನವ ಕೊಂಡು ಬೆಲೆಗೊಡು | ವೆಸೆವೆಂಟು ತೆರದರ್ಚನೆಯ
ಹಸರಮಿಟ್ಟಾಸಂತೆಯೆನ ಸುರರೊಳಿ ರಂ | ಜಿಸಿತಾ ಗಂಧಕುಟಿಯೊಳು || ೭೦ ||

ತ್ರಿಜಗವೆಱಗಿಸುವ ಭವಚಕ್ರಿಯ ದಿ | ಗ್ವಿಜಯ ಬಲದ ಮುಂದೆ ನಡೆವ
ನಿಜಚಕ್ರವೆನೆ ಗಂಧಕುಟಿಯ ಮುಂದೆಯ್ದಿತು | ಸುಜನವಿನುತಧರ್ಮಚಕ್ರ || ೭೧ ||

ಆ ಸುರುಚಿರಗಂಧಕುಟಿಯ ನಡುವೆ | ಭಾಸಿಪ ಮಿಸುನಿದಾಮರೆಯ
ಸಾಸಿರೆಸಳ ಮಧ್ಯದ ಕರ್ಣಿಕೆಯ ಮೇ | ಲಾಸರ್ವೇಶನೊಪ್ಪಿದನು || ೭೨ ||

ಪರಮೌದಾರ್ಯವೀರ್ಯನು ಕೋಟಿಭಾಸ್ಕರ | ಸುರುಚಿತ ಕಿರಣಸಂಯುತನು
ನಿರುಪಮನಷ್ಟಮಂಗಲ ಸಂಯುತಬಂ | ಧುರ ಬೋಧರೂಪನೊಪ್ಪಿದನು || ೭೩ ||

ಸರಸಲಾವಣ್ಯನಿರ್ಮಲವಾರಿಯ ಜಿನ | ಚರಣಸರೋಜಕರ್ಚನೆಯ
ಉರುಭಕ್ತಿಯಿಂ ಮಾಡುವಂದದಿನೆಸೆದುದು | ಸುರಸುದತಿಯರ ಸಂತಾನ || ೭೪ ||

ದೆಸೆದೆಸೆಗಾವರಿಸುವ ತಮ್ಮ ಮೆಯ್ಯ ರಂ | ಜಿಸುವ ಸುಗಂಧವನೊಸೆದು
ಕುಸುಮಕೋದಂಡಮರ್ದನನ ಪೂಜಿಸುವಂ | ತೆಸೆದರುರಗವನಿತೆಯರು || ೭೫ ||

ಹಂತಿವಿಡಿದು ಹಸನಾಗಿ ತಮ್ಮ | ದಂತಮರೀಚಿಯಕ್ಷತೆಯ
ಕಂತುಮರ್ದನನ ಪೂಜಿಸುವಂತಾ ಯಕ್ಷ | ಕಾಂತೆಯರೊಗ್ಗು ರಂಜಿಸಿತು || ೭೬ ||

ಜೋಳಿಜೋಳಿಯೊಳು ಜೋತಿಷ್ಯ ಕಾಂತೆಯರ | ಕಾಲಕರ್ಮಾಪಹರಣಗೆ
ಲೋಲವಿಲೋಚನಾಂಬುವನರ್ಚನೆಗೆಯ್ವ | ಲೀಲೆಯೊಳೊಪ್ಪಿದರಂದಲ್ಲಿ || ೭೭ ||

ತೊಳತೊಳಗುವ ತೊಡವಿನ ಮಾಣಿಕಮಣಿ | ವೆಳಗಿನ ಸೊಡರಾರತಿಯನು
ಕಲ್ಲಿನ ವಿಜಯಗರ್ಚಿಪಂತೆ ಕಿಂಪುರುಷರ | ಲಲನೆಯರತಿ ರಂಜಿಸಿದರು || ೭೮ ||

ಅತಿಮೃದುತರಮಪ್ಪ ತಮ್ಮ ವಚನಾ | ಮೃತವನರುಹನಂಘ್ರಿಯುಗಕೆ
ನುತಿಯ ನೆವದಿ ಪೂಜಿಸುವಂತೆ ಕಿನ್ನರ | ಸತಿಯರೊಪ್ಪಿದರಂತಲ್ಲಿ || ೭೯ ||

ಕಡುಸೊಗಯಿಸುವ ಸುಗಂಧವುಣ್ಮುವ ತಮ್ಮ | ಬಡಸುಯ್ಯಲೆಂಬ ಧೂಪವನು
ತಡೆಯದಭವಗರ್ಚಿಪಂತೆಯಾಗರುಡರ | ಮಡದಿಯರೊಗ್ಗೊಪಿದುದು || ೮೦ ||

ದುರಿತವಿದೂರನಂಘ್ರಿಗೆ ನವಫಲಗಳ | ನುರು ಮುದದಿಂ ಪೂಜಿಸುವಂತೆ
ಅರುಣಾಧರಬಿಂಬದ ಗಾಂಧರ್ವರ | ತರುಣಿಯರೆಸೆದರಂದಲ್ಲಿ || ೮೧ ||

ಖೇಚರ ಭೂಚರ ಸತಿಯರ ಕಣ್ಣಮ | ರೀಚಿಯೊಪ್ಪಿದೊವೀಶ್ವರಗೆ |
ಲೋಚನಪುತ್ರಿಕೆಗಳ ಢಾಳಿಸುತಿ | ರ್ಪಾ ಚಮರಗಳೆಂಬಂತೆ || ೮೨ ||

ಹುಟ್ಟು ಹೊಂದುಗಳಿಲ್ಲ ಕಷ್ಟದುಷ್ಟಗಳಿಲ್ಲ | ಮುಟ್ಟಿದ ಹಗೆ ಕೆಳೆಯಿಲ್ಲ
ಕಟ್ಟರಸಾಳೆಂಬುದಿನಿತಿಲ್ಲ ಕರ್ಮಘ | ರಟ್ಟನ ಗಂಧಕುಟಿಯೊಳು || ೮೩ ||

ಪೂಜೆ ಮಾಡುವ ಪೂರ್ವಪುರುಷರ ಚರಿತವ | ನೋಜೆಯಿಂದವೆ ಲಾಲಿಸುವ
ರಾಜಿಪ ರತ್ನತ್ರಯವನಾನುವ ಭವ್ಯ | ರಾಜಿವಿರಾಜಿಸಿತಲ್ಲಿ || ೮೪ ||

ಕುರುವಿಂದವ ಕುಟ್ಟವನಿಕುಸುಮಸಾರ | ಸುರದುದುಭಿ ದಿವ್ಯಘೋಸ
ಸುರಭಿಸಮೀರವೆಂದೆಂಬೈದಚ್ಚರಿ | ಪರಿರಂಜಿಪುದಂತಲ್ಲಿ || ೮೫ ||

ದಿವ್ಯ ಭಾಷಾಮೃತವೃಷ್ಟಿಯನಾ ಸ | ದ್ಭವ್ಯಶಶ್ಯಕ್ಷೇತ್ರದೊಳು
ಸೇವ್ಯಮಪ್ಪಂದದಿ ಕರೆವುತೊಪ್ಪಿದನಾ | ಅವ್ಯಯಸುಖಸಂಯುತನು || ೮೬ ||

ಇಂತೊಪ್ಪುವ ಸಸಿರವತ್ಸರಪ | ಪರ್ಯಂತರಮಿರ್ದು ಲೋಕದೊಳು
ಚಿಂತಿತಫಲವರದಾಯಕನಾಮುಕ್ತಿ | ಕಾಂತೆಯರೊಡನೆ ಕೂಡಲೆಂದು || ೮೭ ||

ಗಗನದೊಳಾಗಂಧಕುಟಿಯನಿಳಿದು ನೆಲ | ಕೊಗೆಯಲಭವನೂರ್ಧ್ವಮಹಿಗೆ
ನೆಗೆಯಲೆನುತ ನಿಂದೆಡೆಯಿಂ ಪಿಂತಕೆ | ತೆಗೆದವಳಿಯ ತೆರನಾಯ್ತು || ೮೮ ||

ಈಯಂದದಿ ಸಮವಸೃತಿಯನು ಬಿಸು | ಟಾಯಲರ್ವಟ್ಟೆಯಿಂದಿಳಿದು
ಕಾಯಜಮದಮರ್ದನನೀಮಹಿಯೊಳು | ಕಾಯೋತ್ಸರ್ಗದಿ ನಿಂದು || ೮೯ ||

ದಂಡಕವಾಟಪ್ರತತಿಲೋಕಪೂರದಿ | ನಂಡಲೆವಾ ಕರ್ಮವನು
ಪಿಂಡೀಕೃತಮಾಡಿ ತನುವ ತವಿಲುಗೆಯ್ದು | ಗಂಡನಾದನು ಮುಕ್ತಿಸತಿಗೆ || ೯೦ ||

ಅಷ್ಟಾದಶದೋಷರಹಿತನನಂತಚ | ತುಷ್ಟಯನೇಕಪ್ರದೇಶಿ
ಅಷ್ಟಗುಣಾಲಂಕೃತನೆಯ್ದಿದನಾ | ಅಷ್ಟಮ ಭೂಮಿಯಗ್ರವನು || ೯೧ ||

ಶಂಬರರಿಪುಮರ್ದನನು ಮುಕ್ತಿಗೆ ಪೋದ | ನೆಂಬುದಱಿದು ಮೂಜಗವ
ತುಂಬಿದ ನಾಡುಬೀಡೆಲ್ಲ ತಂತಮ್ಮ ಕು | ಟುಂಬಸಹಿತ ಬಂದರಾಗ || ೯೨ ||

ಎಂಟು ತೆಱದ ಪೂಜಾದ್ರವ್ಯ ಕೂಡಿಯೀ | ರೆಂಟುಸಗ್ಗಿಗರ ಸತಿಯರು
ಉಂಟಾಗಿ ನಿರ್ವಾಣಪೂಜೆಯನಾನಿಃ | ಕಂಟಕಗೊಲಿದು ಮಾಡಿದರು || ೯೩ ||

ಬಟ್ಟೆ ಬಡಿಕ ಕರ್ಮಗಳು ಹೋದೆಡೆ ಹುಲ್ಲು | ಹುಟ್ಟದಂದದಿನರೆಯಟ್ಟಿ
ತುಟ್ಟಿದೆಡೆಗೆ ಪೋದವಗೆ ಮಾಡಿದರು ಮನ | ಮುಟ್ಟಿ ಪರೋಕ್ಷಪೂಜೆಯನು || ೯೪ ||

ಹೂಣಿ ಹಿಡಿದು ಮೋಹಮಲ್ಲನ ಕೆಡಹಿವಿಂ | ದಾಣಂಗೊಂಡುನೆಗ್ಗೊತ್ತಿ
ಗೋಣಮುಱಿದು ಹಾಕಿದ ಬಲ್ಲಿದನ ನಿ | ರ್ವಾಣ ಪೂಜೆಯ ಮಾಡಿದರು || ೯೫ ||

ಕ್ಷೋಣಿಯೊಳೆಲ್ಲಕಗ್ಗಳನೆನಿಸಿದ ಪಂಚ | ಬಾಣನ ಬಲವನೆಲ್ಲವನು
ಚೂಣಿಯೊಳಗೆ ಹರಿಗಡಿದನ ಕಡೆಯ ಕ | ಲ್ಯಾಣ ಪೂಜೆಯ ಮಾಡಿದರು || ೯೬ ||

ಮಿಳ್ತುಗೆ ಮಾರಿಯೆನಿಸಿಯಾಮಾರಿಗೆ | ಮಿಳ್ತುಯೆನಿಸಿಯಂತಕನ
ತೊಳ್ತುಳಿದನ ಪೂಜೆಯ ತಮ್ಮ ಮನದೊಳ | ಗಳ್ತಿ ಮಿಗಲು ಮಾಡಿದರು || ೯೭ ||

ದಿವ್ಯೋದಕ ದಿವ್ಯಗಂಧ ದಿವ್ಯಾಕ್ಷತೆ | ದಿವ್ಯಕುಸುಮ ದಿವ್ಯಾನ್ನ
ದಿವ್ಯರತ್ನಾರತ್ರಿಕ ದಿವ್ಯಾಗರು | ದಿವ್ಯಫಲದಿ ಪೂಜಿಸಿದರು || ೯೮ ||

ಹಲವು ಹೂವಿನ ಹನಿ ಹಲವು ರನ್ನದ ಮಳೆ | ಹಲಛಂದದ ದೇವಪಟಹ
ಹಲಗುಂಪುಗೂಡಿ ತೀಡುವ ಗಾಳಿಯಮರರ | ಪಲವು ಪೊಗಳ್ತೆಯೊಪ್ಪಿದುದು || ೯೯ ||

ರೂಢಿವಡೆದ ವೈಭವದಿಂದ ಮನಮುಟ್ಟಿ | ಮಾಡಿ ನಿರ್ವಾಣಪೂಜೆಯನು
ಹಾಡಿ ಹಲವು ತೆಱದಿಂ ನರ್ತಿಸಿ ಕೊಂ | ಡಾಡಿದರು ಸಗ್ಗದವರು || ೧೦೦ ||

ನವರತ್ನದ ಪಡಲಿಗೆಯೊಳಳಕನಿವ | ಹವನಿಟ್ಟು ನಾಲ್ದೆಱದ
ದಿವಿಜರ ಜಾತ್ರೆಯೆಲ್ಲವು ಮುದದಿಂ ಪೋಗಿ | ಸವಿಗಡಲೊಳು ಬಿಟ್ಟುದಾಗ || ೧೦೧ ||

ಜಯತು ಜರಾಂತಕ ದೋಷವಿವರ್ಜಿತ | ಜಯತು ಜಗತ್ರಯವಿನುತ
ಜಯತು ಜನನದೂರಾಯೆಂದು ನಿಳಿಂಪಸಂ | ಚಯವೆಯ್ದಿತು ತಮ್ಮ ನೆಲೆಗೆ || ೧೦೨ ||

ಈಯಂದದಿ ನಾಲ್ಕುತೆಱದ ಸುಪರ್ವನಿ | ಕಾಯ ಜಯತುಜಯಯೆನುತ
ಕಾಯಜಹರನ ಕೊಂಡಾಡುತ ನಿಜವಾಸ | ಕಾಯತಿಯಿಂದೆಯ್ದಿದರು || ೧೦೩ ||

ಅತ್ತಲೆಂಟನೆಯ ನೆಲೆಯ ನೆಜಿಗೆಂದೆಂಬ | ಬಿತ್ತರಮಪ್ಪ ಹರ್ಮ್ಯದೊಳು
ಉತ್ತಮ ಕೈವಲ್ಯಕಾಂತೆಯೊಡನೆ ಕೂಡಿ | ಚಿತ್ತಜರಿಪುವೊಪ್ಪಿದನು || ೧೦೪ ||

ಜಿನಮತವಾರ್ಧಿವರ್ಧನಚಂದ್ರನೆನಿಸಿದ | ವಿನುತ ವಿಜಯಭೂವರನ
ತನುಜ ಮಂಗರಸನಿಂತಿದನುಸುರಿದ ಭವ್ಯ | ಜನರು ಮುದದಿ ಕೇಳುವದು || ೧೦೫ ||

ಓದಿದವರು ಲಿಖಿಸಿದರಿದರರ್ಥವ | ಭೇದಿಸಿ ತಿಳಿಯಪೇಳ್ದವರು
ಸಾದರದಿಂದ ಕೇಳ್ದವರು ಬಾಳಲಿ ರವಿ | ಮೇದಿನಿಯುಳ್ಳನ್ನೆವರ || ೧೦೬ ||

ಇದು ಮುಕ್ತಿವನಿತೆಗೊಲವಿನ ವಲ್ಲಭನಾದ | ವಿದಿತ ವಿಮಲಮೂರ್ತಿಯುತನ
ಸದಮಲತರಮಪ್ಪ ಸಚ್ಚಾರಿತ್ರಮಿಂ | ತಿದನು ಸಜ್ಜನರು ಲಾಲಿಪುದು || ೧೦೭ ||

ಇದು ಭಾವಕಜನಕರ್ಣವಿಭೂಷಣ | ಮಿದು ರಸಿಕರ ಚಿತ್ತದೆಱಕ
ಇದು ವಾಣಿಯ ಮುಖಮಾಣಿಕ್ಯಮುಕುರ ಮ | ತ್ತಿದು ಶೃಂಗಾರಸುಧಾಬ್ಧಿ || ೧೦೮ ||

ಹದಿನಾಲ್ಕನೆಯ ಸಂಧಿ ಸಂಪೂರ್ಣಂ