ಶ್ರೀಮದಮರಮಣಿಮಕುಟರಂಜಿತರತ್ನ | ಧಾಮಾಂಬುಧಾರಾಧೌತ
ತಾಮರಸಾಂಘ್ರಿಯುಗಲ ವೀರನಾಥನು | ದ್ದಾಮಸುಖವನೀವುದೆಮಗೆ || ೧ ||

ಶ್ರೀಮತ್ಸರ್ವಭೂವಿಭುಜಲಲಿತಚೂ | ಡಾಮಣಿಯನಭಿನವಮದನ
ರಾಮಣೀಯಕಗುಣಭೂಷಿತನೆಸೆದನು | ದ್ದಾಮನುಜ್ವಲಕೀರ್ತಿಯುತನು || ೨ ||

ಆ ಜನಪತಿಗೆ ಪಲವು ರಾಣೀವಾಸವು | ರಾಜಬಿಂಬದ ತೆಱದಿಂದ
ರಾಜಿಪ ಕುವಲಯನಂದನಮೆನೆ ವಿ | ಭ್ರಾಜಿಸಿದುದು ಹರುಷದೊಳು || ೩ ||

ಅಂಗಣದೊಳಗಾಡುವ ಭೂಮೀವರ | ನಂಗನೆಯರ ದಿಟ್ಟಿವೆಳಗು
ದಾಂಗುಡಿಯಿಡಲಿಕ್ಕಿದ ಹೊಸಮುತ್ತಿನ | ರಂಗವಲ್ಲಿಯ ತೆಱನಹುದು || ೪ ||

ಅರಸನೆದೆಯ ರತ್ನದ ಪದಕದಂತೆಸೆ | ವರಸಿಯರುಗಳ ಮಧ್ಯದೊಳು
ಕರಮೆಸೆದಿಹ ನಾಯಕಮಣಿಯೆಂಬಂತೆ | ಪಿರಿಯವಲ್ಲಭೆಯೊಪ್ಪಿದಳು || ೫ ||

ಬಂಧುರಬಂಧೂಕಾಧರ ಬಿಸರುಹ | ಮಿಂದೀವರದಳನಯನ
ಸಿಂಧೂರಯಾನ ಕೋಮಲತನುಲತೆ ಕಂಬು | ಕಂಧರವೆಸೆದವಾಸತಿಗೆ || ೬ ||

ಕುಟಿಲಾಳಕ ಕುಂದಕುಟ್ಮಲನಿಭದಂತೆ | ಘಟಕುಚ ಖಂಡಶಶಾಂಕ
ನಿಟಿಲ ನವೀನಲತಾಂಗಮೊಪ್ಪಿದವಾ | ಚಟುಲಚಕೋರಲೋಚನೆಗೆ || ೭ ||

ಉತ್ತಮಗುಣತಾಯ್ಗರು ಕಡು ಚೆಲುವಿನ | ಚಿತ್ತಾರ ಸಲೆ ಸುಭಗತೆಯ
ಪುತ್ಥಳಿ ಪುರುಷಭಕ್ತಿಯ ಬೊಂಬೆಯೆಂದೆನೆ | ಮತ್ತಕಾಶಿನಿಯೊಪ್ಪಿದಳು || ೮ ||

ಉನ್ನತಮಪ್ಪ ಸತ್ಯದಿ ಮುನ್ನವೆ ಬಾಳ್ದ | ಚನ್ನೆಯರಿಗೀ ತಲೆದೊಡವು
ಇನ್ನಪ್ಪ ಸತಿಯರಿಗೆ ಮೇಲ್ಪಂತಿಯೆನೆ ಸಂ | ಪನ್ನೆವೆರಸು ಪಡೆದಿಹಳು || ೯ ||

ರತಿ ಕುಸುಮಾಯುಧನೊಳು ಸಾಗರಸುತೆ | ಶತಪತ್ರದಳನಯನನೊಳು
ಕ್ಷಿತಿಧರಸುತೆಯೈಮೊಗದನೊಳಿರ್ಪಂತೆ | ಸತಿ ಪತಿಯೊಳು ಸುಖಮಿಹಳು || ೧೦ ||

ಆ ವನಿತೆಯ ಬಟ್ಟಮೊಲೆವೆಟ್ಟೊಳುಮೊಗ | ದಾವರೆಯಲರ್ವಕ್ಕಿಯೊಳು
ಲಾವಣ್ಯಾಂಬುಧಿಯೊಳು ನೃಪನಕ್ಷಿಮೂ | ದೇವರಂದದವೊಲೊಪ್ಪಿದವು || ೧೧ ||

ಈಯಂದದೊಳು ಚಲ್ವುಪಡೆದು ಕುಬೇರ | ಶ್ರೀಯೆಂಬ ಪೆಸರ ಕೈಕೊಂಡು
ರಾಯನ ರಾಣಿಯೊಂದಾನೊಂದು ದಿವಸದ | ಸಾಯಂಕಾಲದ ವೇಳೆಯೊಳು || ೧೨ ||

ಮೇಳದ ಸಖಿಯರೆಲ್ಲರ ಕೂಡಿಕೊಂಡು ಮ | ತ್ತಾಲಲಿತಾಂಬುಜನೇತ್ರೆ
ಲೀಲೆಯಿಂದುಪ್ಪರಿಕೆಯನೇಱೆ ಪೊಳಲನಂ | ದಾಲೋಕನವ ಮಾಡಿದಳು || ೧೩ ||

ಎಡಬಲದೊಳಗೋಲೈಪಾಳಿಯರ ನಟ್ಟ | ನಡುವೆ ಕೌಳುಡೆಗೆ ಕೈಯೂರಿ
ಬಿಡುಮುತ್ತಿನ ಮಣಿಗದ್ದುಗೆಯೊಳಾಗ | ಕಡುನೀಱೆ ಕಣ್ಗೊಪ್ಪಿದಳು || ೧೪ ||

ಕ್ಷೀರಸಮುದ್ರದಮಳ್ದೆರೆಯೆಡೆಯೊಳು | ಚಾರುಚಂದ್ರಮನೊಪ್ಪುವಂತೆ
ನಾರಿಯರಿಕ್ಕುವ ಚಮರದ ನಡುವಿರ್ದು | ದಾ ರಮಣಿಯ ನಿಜವದನ || ೧೫ ||

ಮನಸಿಜ ಪಂಚಬಾಣಾಹಿ ಕೇತಕಿಯೆಂಬ | ನನೆಯ ಚುಂಬಿಸುವಂದದೊಳು
ಮಿನುಗುವ ತಾಂಬೂಲದೆಲೆವಿಡಿದಡಪದ | ವನಿತೆಯ ಹಸ್ತಮೊಪ್ಪಿದುದು || ೧೬ ||

ಎನ್ನ ಮೊಗಕೆ ಸರಿಯೆನ್ನಬಹುದೇಯೆಂದು | ಚೆನ್ನೆ ಮಿಸುನಿದಾಮರೆಯ
ತನ್ನ ಕೈಸೆಱೆವಿಡಿದಂತೆ ಪಿಡಿದಳೊಂದು | ಹೊನ್ನೊಳೆಸೆವ ಡವಕೆಯನು || ೧೭ ||

ಹರನ ಹೆಟ್ಟುಗೆ ಹೊಂಬೆಟ್ಟೇಱಿ ಕೈಲಾಸ | ದುರುವರ್ಣನ ನೋಡುವಂತೆ
ಅರಸನರಸಿ ಕರುಮಾಡವನಡರಿಯಾ | ಪುರದ ಚಲ್ವಿಕೆಯ ನೋಡಿದಳು || ೧೮ ||

ಓದುವ ಶಾಲೆ ಗರುಡಿವೆನೆಯನು ಹೊಕ್ಕು | ಸಾಧಿಸಿ ಮಗುಳ್ದರಮನೆಗೆ
ಆದರದಿಂ ಬರ್ಪರಸುಮಕ್ಕಳನಂ | ದಾ ದೇವಿ ನಡೆನೋಡಿದಳು || ೧೯ ||

ಕೇರಿಕೇರಿಯ ಮನೆಮನೆಯ ಮುಂದಣ ಸಿರಿ | ದಾರದ ಮೊಗಶಾಲೆಯೊಳು
ನೇರಾಣಿಯಬೊಂಬೆಯವೊಲು ರಾಜಕು | ಮಾರರಿರಲು ಕಂಡಳಾಗ || ೨೦ ||

ತನಗೆ ನಂದನರಿಲ್ಲದ ಕಾರಣದಿಂ ವನಿತೆ | ಮನದೊಳಗುಮ್ಮಳಿಸಿ

ಘನದೊಡ್ಡವ ಮುಂಬಯಸುವ ಚಾತಕ | ಮೆನೆ ಚಟುಲಾಕ್ಷಿಯೊಪ್ಪಿದಳು || ೨೧ ||

ಅನಿತಱೊಡನೆ ಸಂಧ್ಯಾಕಾಲವಾಗಲು | ಜನನುತೆ ನುಣ್ಮೊಗದೊಳೆದು
ಇನಿಸುಪೊತ್ತಿನೊಳೋಲಗಮಿರ್ದು ದುಗುಡದ | ಮನದಳವಳಿಂದೆದ್ದಳಾಗ || ೨೨ ||

ಇನಿಯನ ಸೂಳ್ಗೆಯಿತಂದು ಮೋಹಾಮೃತ | ದಿನಿದುಂಡು ಸೊಕ್ಕಿ ಮೃಮಱೆದು
ಘನವಪ್ಪ ನಿದ್ರಾವಸ್ಥೆಯೊಳಿರ್ದು ಕಾ | ಮಿನಿ ಕಂಡಳಿಂತು ಸ್ವಪ್ನವನು || ೨೩ ||

ತಿಳಿಜೊನ್ನದ ತನಿವಾಲ ಚಂಚುವಿನೆಸೆ | ಯೊಳಲೆಯೊಳಿಟ್ಟ ಚಂದಳಿರು
ಪೊಳೆವ ತೊಟ್ಟಿಲಮಱಿಗೆರೆದು ಜೋಗುಳೆಯಂತೆ | ಗಳಪಿದವಲ್ಲಿ ಚಕೋರೆ || ೨೪ ||

ಹೊತ್ತಹೊರೆಯೊಳು ಮರಾಳ ಹೆರುಗೆಯ | ಹೊತ್ತಿನೊಳಗಣ ಕಪೋತಿ
ಪೆತ್ತರಗಿಳಿ ಕುಟುಕೀವ ಪಱಮೆವಱೆ | ಒತ್ತಾಡಿ ಸೋಗೆಯೊಪ್ಪಿದವು || ೨೫ ||

ಹಾಲುಂಡ ಸೊಕ್ಕಿನೊಳಗೆ ಹರಿಹರಿದಾಡಿ | ಮೇಲೆ ಬಳಲಿದೆಳವಱೆಗೆ
ಕಾಲ ನೆಕ್ಕಿ ಮೊಲೆಯನೀವ ಹುಲ್ಲೆಯ | ಬಾಲೆ ಕಂಡಳು ಕನಸಿನೊಳು || ೨೬ ||

ಇಂತಪ್ಪ ಕನಸಿನೊಳಗೆ ಸುತದೋಹಳ | ಕಾಂತೆಯ ಮನದೊಳಾವರಿದು
ಭ್ರಾಂತಿಗೊಳಿಸಿ ಚಿಂತಿಸುವಾಗಲಾಯ್ತು ನಿ | ಶಾಂತಸಮಯ ವೇಗದೊಳು || ೨೭ ||

ಬಿಸುಗದಿರನ ಮುಂಬಸಿಱೊಳು ಮೂಡಣ | ದೆಸೆವೆಣ್ಣ ಸೀಮಂತದ
ವಸಗೆಯ ವಾದ್ಯಗಳೆನೆ ದೇಗುಲಗಳೊ | ಳೆಸೆದವು ಶಂಖನಿನಾದಂ || ೨೮ ||

ಅಕ್ಕ ನೀನೇಳೇಳು ನೇಸಱ ತಿಳಿವೆಳ | ಗುಕ್ಕುತಲಿದೆ ಮೂಡಲಾಗಿ
ಚಕ್ಕನೆ ಕಣ್ದೆಱೆಯೆಂಬ ಪವಳವಾಯ | ಪಕ್ಕಿ ನುಡಿಯಲೆಳ್ದಳವಳು || ೨೯ ||

ಸಿಂಗರಿಸದೆ ಸಿರಿಮುಡಿಗಟ್ಟದೆ ಮೊಗ | ದಿಂಗಳ ತೊಳೆದೊಪ್ಪವಿಡದೆ
ಹೊಂಗೈ ಪಿಡಿಗಲ್ಲದೊಳು ಚಂದಳೆರ್ಗಯ್ಯ | ನಂಗನೆಯಿಟ್ಟಣಿಸಿದಳು || ೩೦ ||

ಅಡಪ ಡವಕೆ ಬೆನ್ನೀರ್ಗೊಡೆ ಕೈಪಿಡಿ | ಮುಡಿವೂ ತೊಡವುದು ಸೀರೆ
ಪಡಿಗ ಪವಣಿಗೆಯವಸರದಾಳೆಯ್ಯದಿರೆ | ನುಡಿಸಲ್ಮಾಣದೆ ಸಾರಿದರು || ೩೧ ||

ಅನಿತಱೊಳವಳ ಕೆಳದಿ ಕುಮುದಿನಿಯೆಂಬ | ವನಜವದನೆ ಪರಿತಂದು
ಮನದಳ್ಕಱಿಂ ಮನುಜೇಶನ ಮಹಿಷಿಯ | ನನುನಯದಿಂ ಕೇಳ್ದಳಿಂತು || ೩೨ ||

ಮನದಾಸಱು ನುಡಿದಲ್ಲದೆ ಮಾಣದು | ವನಿತೆ ಮೌನವಿದೇಕೆ ನಿನಗೆ
ಎನಲಾಕನಸಿನೊಳಾದುಮ್ಮಳವನು | ಜನನುತೆ ಪೇಳ್ದಳಿಂತೆಂದು || ೩೩ ||

ಎನ್ನೋರಗೆಯ ಚನ್ನೆಯರೊಲವಿಂ ಮಣಿ | ಗನ್ನಡಿಯಂತಪ್ಪ ಸುತರ
ಮನ್ನಿಸಿ ಮೊಲೆಯೂಡುವ ಸಲೆಸಿರಿಗವ | ರೇಂ ನೋಂಪಿಯನೆಸಗಿದರೊ || ೩೪ ||

ಪೊಳೆಮುತ್ತೆನೆ ಪೊಳೆವೆಳೆವಲ್ಲ ಕಿಱುನಗೆ | ಗಳವಾಯ್ದೆಱೆಗೆದೆ ಮುತ್ತಿತ್ತು
ತೊಳಪಕದಪಂ ಚುಂಬಿಸಿ ಬೊಟ್ಟಾಡುತೆ | ನ್ನೆಳೆಯನನೆಂದೆತ್ತುವೆನೊ || ೩೫ ||

ಪಂಬಲಿಸುತ ಪಾಲ್ಮೊಲೆವೂಡುತೆಳೆವೆಟ್ಟು | ಚುಂಬಿಸುತವೆ ಮೊಗನೋಡಿ
ತುಂಬಿಗರೆವ ತೊಟ್ಟಿಲ ಹಸುಳೆಯನೆತ್ತ | ದಂಬುಜಮುಖಿಯ ಬಾಳೇನೊ || ೩೬ ||

ಕಾವನ ನಚ್ಚಿನ ಕಣೆಗಳಿಗಲಗದ | ಹೂವ ಹಡೆದು ಸತ್ಫಲವ
ತೀವಿದ ಮಲ್ಲೀಲತೆಯಂತೀ ತನು | ಹೂವಾಗಿ ಫಲವಿಲ್ಲದಾಯ್ತು || ೩೭ ||

ತೋಱದಿಟ್ಟಿಯ ತುದಿಯೊಳು ತೊಱೆದುದಕವ | ಕೂರುಗುರಿಂ ಮಿಡಿಮಿಡಿದು
ವಾರಿಜಮುಖಿ ನುಡಿಯಲು ಕೇಳಿ ಮತ್ತಾ | ನಾರಿಯಿಂತೆಂದಾಡಿದಳು || ೩೮ ||

ರೂಢಿವಡೆದ ಕಾರ್ಗಾಲದೊಳುದಯಿಪ | ವೈಡೂರ್ಯಮಣಿ ಮಾಗಿಯೊಳು
ಮೂಡಿ ತೋಱಿದೊಡೆ ವೈಡೂರ್ಯವ ನೀಗದು | ಕೋಡಿಯಪ್ಪುದೆ ಕೇಳಬಲೆ || ೩೯ ||

ಮಕ್ಕಳ ಹಡೆವ ದಿವಸ ಮುಂದೆ ನಿನಗುಂಟು | ಚಿಕ್ಕಹರೆಯಮೀಗ ನಿನಗೆ
ಮಿಕ್ಕ ನೋವೇಕೆ ಬೇಡೆಂದಲರ್ಗಣ್ಗಳೊ | ಳೊಕ್ಕುದಕವನೊಱಸುತವೆ || ೪೦ ||

ಅರಸನಲ್ಲಿಗೆ ಅರಸಿಯ ವೃತ್ತಾಂತವ | ನೊರೆಯೆಂದು ದಿಟ್ಟಿಸನ್ನೆಯೊಳು
ತರುಣಿಯೊರ್ವಳನಟ್ಟಲು ಪೋಗಿಪೇಳ್ದೊಡೆ | ಧರಣೀಶನಲ್ಲಿಗೆಯ್ದಿದನು || ೪೧ ||

ಪೊಳೆವ ಪೊಂಬಟ್ಟೆವಾಸಿನ ಮೇಲೆ ದುಗುಲವ | ನಿಳೆಮುಸುಗಿಟ್ಟೊಱಗಿರ್ದ
ಲಲನೆಯೆಸೆದಳು ವೈಡೂರ್ಯರತ್ನದ ಮೇಲೆ | ಪೊಳೆವ ಸೂತ್ರದ ತೆಱನಾಗಿ || ೪೨ ||

ಅಂತೊಱಗಿದ ನಲ್ಲಳನತಿಚದುರಿಂ | ಕಾಂತನೇಳಿಸಿ ಕೇಳೆ ಕೆಲದ
ಕಾಂತೆಯರುಗಳೊರೆದರು ಕನಸಿನ ವೃ | ತ್ತಾಂತವನಾನೃಪವರಗೆ || ೪೩ ||

ಕೇಳಿ ತನ್ನರಸಿಯುದರದೊಳು ಪುಟ್ಟುವ | ಬಾಲನ ವಾರ್ತೆಯನೊರ್ವ
ಕಾಲಜ್ಞಾನಿ ತನಗೆ ಒರೆದನೆಂದವ | ಪೇಳಿ ಸಂತೈಸಿದನೊಲಿದು || ೪೪ ||

ಆ ನಲ್ಲನ ನುಡಿಯೆಂಬ ಮೊಳಗುಗೇ | ಳ್ದಾನಂದದಕೇಕಿಯಂತೆ
ಮಾನಿನಿಯಿರೆ ಮೊಗದೊಳು ಮೊಡವಿಗಳೊಂ | ದಾನೊಂದುದಿನ ಮಿನುಗಿದವು || ೪೫ ||

ನಲ್ಲನ ಮನದಿಚ್ಛೆಯ ಸಲಿಸುವ ಕಲ್ಪ | ವಲ್ಲರಿ ನನೆಯೇಱುವಂತೆ
ಪಲ್ಲವಾಧರೆಯ ಕೋಮಲಸಲ್ಲಲಿತಾಂಗ | ದಲ್ಲಿ ಕುಸುಮವಂಕುರಿಸಿತು || ೪೬ ||

ಮಿಱುಗುವ ಮೈಯ ಸೊವಡಸೊಗಸಿಗೆ ಬಂ | ದೆಱಗುವಾಱಡಿವಸುಳೆಗಳ
ತೆಱನಱೆದು ಕರದೊಳು ಹೊನ್ನ ಸೆಳೆಗೊಟ್ಟ | ಳಱಕೆಯ ಸಖಿಯೇಂ ಚದುರೆಯೊ || ೪೭ ||

ಅರುಣಾಂಬರವುಟ್ಟಪರಂಜಿದೊಡಮಿಟ್ಟ | ಸರಸ ಕುಂಕುಮದ ಮೆಯ್ಗೊಱೆದು
ಅರಸನರಸಿಯೊಪ್ಪವಡೆದಳು ಸಂಧ್ಯಾ | ತರಣಿಯೋಯೆನೆ ಕೆಂಕಮಾಗಿ || ೪೮ ||

ಲಲನೆಗೆ ನಾಲ್ಪಗಲಾಗೆ ಕುಂದಣದ ಪು | ತ್ಥಳಿಯ ದೂಸಱ ಕೆಡಲೆಂದು
ಪುಳಿದೊಳೆವಂದದಿಂದವೆ ಕೋಮಲೆಯರು | ಜಳಕವ ಮಾಡಿಸಲೆಸಗಿದರು || ೪೯ ||

ಅಗೆಯೇಳ್ದ ಕರ್ದಳಲತೆಗೆ ನೀರೆಱೆವಂತೆ | ಮುಗುದೆಯ ತಲೆಗೆಣ್ಣೆಯನೆಱೆದು
ಮಘಮಘಿಸುವ ಬೆನ್ನೀರನೆಱೆದರಾ | ಬಗಸೆಗಂಗಳ ಭಾವೆಯರು || ೫೦ ||

ಜಳಕದ ಬಳಿಕ ದೇವಾಂಗವ ತೆಗೆದುಟ್ಟು | ತೊಳಪ ಮುತ್ತಿನ ತೊಡಮಿಟ್ಟು
ಮಲಯಜಮಿಕ್ಕಿ ಮಲ್ಲಿಗೆಪೂಮುಡಿದಾ | ಲಲನೆ ಕೈಗೆಯ್ದಳಳ್ತಿಯೊಳು || ೫೧ ||

ಕಾರಮಿಂಚಿನ ಬೊಂಬೆಯೊ ಅಮರ್ದಿನ ರೂ | ವಾರಮೊ ತಿಂಗಳ ಸಿರಿಯೊ
ಮಾರನ ಕೀರ್ತಿಕಾಂತೆಯೊಯೆಂದೆನಲಾ | ನಾರಿ ಪಳಚ್ಚನೊಪ್ಪಿದಳು || ೫೨ ||

ಸಿಂಗರಿಸಿದ ಬಳಿಕಿರುಳಾಗಲಾನೃಪ | ತುಂಗನ ಶಯ್ಯಾಗೃಹಕೆ
ಅಂಗನೆ ನಡೆತಂದಳು ಸಿರಿ ಹರಿಯಿ | ರ್ದಿಂಗಡಲಿಗೆ ಬರ್ಪಂತೆ || ೫೩ ||

ಸಿರಿಮಂಚದ ಕೆಲದೊಳು ನಿಂದಳನು ಕಂ | ಡರಸ ತೆಗೆಯೆ ಕೈವಿಡಿದು
ತರುಣಿತಲ್ಪವನೇಱಿದಳು ಬೆಳ್ಮುಗಿಲನಂ | ಬರಚರಿಯೇಱುವಂದದೊಳು || ೫೪ ||

ಜಗುಳುವ ಲಜ್ಜೆ ಜಾಱುವ ಧೈರ್ಯ ಕಿಂಕಿರಿ | ಯೊಗೆವ ವದನ ನಟ್ಟ ದಿಟ್ಟಿ
ನೆಗೆವ ಪುಳಕಮುಣ್ಮುವ ಸೇದೆ ಕರಗುವ | ಬಗೆಯೊಪ್ಪಿತಾಪ್ರಿಯತಮೆಗೆ || ೫೫ ||

ದಂಪತಿಗಳ ಸುರತಪ್ರಾರಂಭದ | ಲಂಪಿನ ಸೊಗಸು ಕಲೆಗಳ
ಪೊಂಪುಳಿ ನಿಶ್ಚೈಸುವ ನೇಮದಾಟಗ | ಳಿಂಪು ಕಾತರಗೊಳಿಸಿದವು || ೫೬ ||

ನಡೆ ನೋಟ ನೋಟದ ಸಾಲ ಸಾಲದ ಬಳಿ | ವಿಡಿದ ಚುಂಬನ ಚುಂಬನವ
ಬಿಡದಪ್ಪುಗೆಯಪ್ಪುಗೆಯ ಕೂಟದ ಸೊಗ | ಸಡಿಸಿದುದಾ ಕಾದಲರೊಳು || ೫೭ ||

ಸುರತಸುಖದೊಳೊರ್ವರೊರ್ವರ ಮನದಿಚ್ಛೆ | ಗಿರದೊದಗುವ ದೇಹದಾಟ
ಕರಮೆಸೆದುದು ಸೂಜಿಕಲ್ಲಪುತ್ಥಳಿಗಂಡ | ಕರುವಿನ ಕರ್ಬೊನ್ನತೆಱದಿ || ೫೮ ||

ಸುರತಾಮೃತರಸಪೂರಿತ ಲಲಿತಾಂಗ | ಸರಸಿಯೊಳಾಕೋಮಲೆಯ
ಗುರುಕುಚಗಳಗುಂಡಿಗೆಗೊಂಡಾನೃಪ | ವರನುರುಮುದದೊಳೀಜಿದನು || ೫೯ ||

ಸುರತಸುಖದ ಸೊಕ್ಕಿನೊಳು ಸುತ್ತಾರಿದಪ್ಪು | ವರೆಗಂಪಿನಿಂ ತೇಲುವಕ್ಷಿ
ತೊರೆದ ಬೆಮರು ಬಳಲುವ ಪುಳಕದ ಮೂರ್ಛೆ | ಗಿರದೆಯ್ದಿದರಾ ಪ್ರಿಯರು || ೬೦ ||

ಆ ರತಿಯಿಂ ಪುಟ್ಟಿದ ಬಳಲ್ಕೆಯ ಪನಿ | ನೀರಿಂದಲರ್ವಿಜ್ಜಣಿಗೆಯಿಂ
ತೀಱಿಸಿ ತಿಳಿನಿದ್ರೆಯೊಳೊಱಗಿರಲತ್ತ | ವಾರಿಜಸಖನುದಿಸಿದನು || ೬೧ ||

ಕಾಡುವ ಕೊರಲ ಹಾರದಮುತ್ತು ಮನದೊಳು | ಮೂಡುವೆಚ್ಚಱು ನಿಡುಸುಯ್ಲು
ಗಾಡಿಕಾಱನ ತೆಕ್ಕೆಗಿಚ್ಚೈಸುವ ತೋ | ಳೂಡಿ ಕೋಮಲೆ ಕಣ್ದೆಱೆದಳು || ೬೨ ||

ಪರಿವನಿದ್ರೆಯೊಳು ತಲ್ಪದಿನೊಯ್ಯನೆಳ್ದು ಮೈ | ಮುರಿಯಲಾ ಕನಕಲತಾಂಗಿ
ಪಿರಿದು ರಂಜನೆವಡೆದಳು ಕಾಮಪಾಶವ | ಹುರಿಯೇಱಿಸಿದ ಮಾಳ್ಕೆಯೊಳು || ೬೩ ||

ನಗೆಮೊಗಗನ್ನಡಿವೆಳಗಿ ಕನ್ನಡಿ ನೋಡಿ | ಸೊಗಸುಗೊಡುವ ಸಂತಸದಿಂದ
ಬಗೆಮಿಗೆದೊಟ್ಟ ರನ್ನದ ರಮಣಿಯವೊಲು | ಮುಗುದೆ ಬಂದಳು ರಾಯನೆಡಗೆ || ೬೪ ||

ಬಂದೆಡಗೆಲದಾಸನದೊಳು ಕುಳ್ಳಿ | ರ್ದಿಂದುವದನೆ ಹರುಷದೊಳು
ಅಂದಿನಿರುಳು ಕಂಡ ಕನಸನೆಲ್ಲವನಿಂ | ತೆಂದು ಬಿತ್ತರಿಸಿ ಪೇಳಿದಳು || ೬೫ ||

ಶರದ ಪೂರ್ಣಸುಧಾಸೂತಿಯ ಖರ | ಕಿರಣಬಿಂಬವ ಮತ್ತಗಜವ
ತರುಣ ಹರಿಯ ಕಡೆಯಿರುಳೊಳು ಕಂಡು ನಾ | ಹರುಷದಿಂದ ಕಣ್ದೆಱೆದೆನು || ೬೬ ||

ಕನಸನಿಂತೆಂದು ಪೇಳುವಳ ಬಂದುಗೆವಾಯ | ತನಿಗಂಪು ಸೊಸೆ ಝೇಂಕರಿಪ
ಅನುರಾಗಿಪಲರ್ವಕ್ಕಿಯೆನಲವನೀಪತಿ | ಮನಮೊಲಿದೊರೆದನಿಂತೆಂದು || ೬೭ ||

ಚೆಂದಿರನಿಂದ ಕಲಾಧರಮುನ್ನೇಸ | ಱಿಂದ ತೇಜೋಮಯ ಕರಿಯಿಂ
ಸಂದದಾನಿ ಹರಿಯಿಂದ ಪರಾಕ್ರಮಿ | ನಂದನ ನಿನಗೊರ್ವನಹನು || ೬೮ ||

ಎಂದೆಂಬ ನೃಪವಚನಸರಸಿಯೊ | ಳ್ಮಿಂದು ತೇಂಕಿಪ ಹಂಸೆಯಂತೆ
ಮಂದಗಮನೆ ಹರುಷದೊಳಿರೆ ಪರಿವಿಡಿ | ಯಿಂದ ತೆಳ್ವಸಿರ್ಪಿಣ್ಣಿದಾಯ್ತು || ೬೯ ||

ಮೊಳೆವಲಸಿಕೆ ಮೈಮುರಿದೇಳ್ವ ತೆಳುವಾಸೆ | ಬೆಳೆವ ಜಘನ ವೊಡಲಲೆವ
ವಳಿ ಕಡುಸೊಂಪಾಂತ ಕೋಮಲತನು ಕ | ಣ್ಗೊಳಿಸಿದವಾಕೋಮಲೆಗೆ || ೭೦ ||

ಪೊಸತೆನಿಸುವ ನಿಧಿಗಂಡ ನೂತನಪಲ್ಲಿ | ಬಸಿಱಿಟ್ಟು ಕೈನೀಡುವಂತೆ
ಶಿಶುವುದಯಿಸೆ ನಡುಬೆಳೆದು ತಲೆಯ ನವಿ | ರೊಸೆದುದ್ದವಾದುದಾ ಸತಿಗೆ || ೭೧ ||

ಕುವರನ ಕೀರ್ತಿಗರ್ಭದೊಳಡಗಿರದೆ ಭೂ | ಭುವನಕಡರ್ವೆನೆಂದೆನುತ
ತವಕದಿ ಪೊಱಮಡುವಂತೆ ಬೆಳ್ಪಾದುದು | ಯುವತಿಯ ನವಮುಕುರಾಸ್ಯ || ೭೨ ||

ಬಾಲಗೆಱೆಯಲೆಂದಪರಂಜಿಕೊಡದೊಳು | ಹಾಳ ಬೈತಿರಿಸಿದ ಬಳಿಕ
ನೀಲದಮಣಿ ಮುಚ್ಚಳಿಟ್ಟಂತೆ ಮೊಲೆ ಕಪ್ಪಾಗೆ | ಲೋಲಾಕ್ಷಿಗೊಪ್ಪಿದವಾಗ || ೭೩ ||

ಇಂತೊಪ್ಪುವ ಗರ್ಭದೊಳಾನೃಪವರ | ಕಾಂತೆ ಮಾಸವನೊಂಬತ್ತ
ಸಂತಸದಿಂ ಕಳೆಯಲ್ಕತಿಶುಭಲಗ್ನ | ವಂ ತಾಳಿದ ದಿನವಾಯ್ತು || ೭೪ ||

ಹೊಂದಾವರೆ ನಾಲ್ಮೊಗನ ಮುಂದೆಸೆವ | ಣ್ಣಿಂದುಬಿಂಬವ ಹಡೆವಂತೆ
ಸುಂದರಿ ಶುಭಮುಹೂರ್ತದೊಳು ಶಿಶುವನಾ | ನಂದದಿಂದವೆ ಪೆತ್ತಳಂದು || ೭೫ ||

ತಳಿರ್ಗುಡಿ ಪಸುರ್ದೋರಣ ಸಂತಸವತಿ | ತೊಳಪ ಮುತ್ತಿನ ವರ್ಣಪೂರ
ಎಳೆವೆಣ್ಗಳೊಸಗೆವಾಡುಗಳು ತೀವಿದವಾ | ಪೊಳಲೊಳಗೆಲ್ಲಿ ನೋಡಿದರು || ೭೬ ||

ಪುಟ್ಟಲೊಡನೆ ಪೊಕ್ಕುಳ್ಗೊಯ್ದು ಬೆನ್ನೀ | ರಟ್ಟಿ ಕನಕಕಿಸಲವ
ಪೊಟ್ಟೆಯೊಳಿರಿಸಿ ತೂಪಿರಿದು ಕೌರಿನ ಹೊಗೆ | ಗೊಟ್ಟೊವಿದರು ಬಾಲಕನು || ೭೭ ||

ಸುರಭೂರುಹದ ಬೆಳೆಯ ಸಲಹಲು ನೀರ | ಸುರನಾರಿಯರೆಱೆವಂತೆ
ತರುಣಗೆ ಬೆಚ್ಚುನೀರ್ಗಳೆಱೆದರು ಸರ | ಸಿರುಹಲಲಿತನೇತ್ರೆಯರು || ೭೮ ||

ಪನ್ನೆರಡನೆಯ ದಿನದೊಳಪ್ಪ ಕರ್ಮಗ | ಳನ್ನು ಮಾಡಿಸಿ ಗುಣಪಾಲ
ತನ್ನಣುಗಗೆ ನಾಮವನೆಂತುಟೊರೆವೆನೆಂ | ದುನ್ನತಮಯನೆಣಿಸಿದನು || ೭೯ ||

ಪಂಚಗ್ರಹದುಚ್ಚದೊಳು ಪುಟ್ಟಿದುದಱಿಂ | ದಂ ಚಕ್ರಿಯಾಗುವನೆಂದು
ತಾಂ ಚದುರಿಂ ಶ್ರೀಪಾಲವೆಸರನಾ | ಪಂಚೇಷುನಿಭಗಿಟ್ಟನಂದು || ೮೦ ||

ಅರಲತೊಡಂಬೆಯೊಳಿಟ್ಟು ಮಱಿಯ ಮೇಲೆ | ಮೊರೆವಾಱಡಿವೆಣ್ಗಳಂತೆ
ತರುಣನ ರನ್ನದೊಟ್ಟಿಲೊಳಿಟ್ಟು ಹರುಷದಿ | ತರಳೆಯರುಗಳು ಪಾಡಿದರು  || ೮೧ ||

ಉರುಳಿಟ್ಟಂಬೆಗಾಲಿಕ್ಕಿ ತೊದಲ್ನುಡಿ | ವೆರಸು ದಟ್ಟಡಿಗಳನಿಟ್ಟು
ಪರಿಪರಿಯಾಡಿ ಮಾತಾಪಿತೃಗಳಿಗಂದು | ಹರುಷವೈದಿಪುದಾಹಸುಳೆ  || ೮೨ ||

ಪೊಂಗವಡಿಕೆ ಸಿಂಗದುಗುರುಡೆವಣೆಗೆಜ್ಜೆ | ಮಾಂಗಾಯಿ ಬಂದಿ ಬೆಂಡೋಲೆ
ಉಂಗುರ ರನ್ನಗಡಗದ ಶೃಂಗಾರಕ್ಕೆ | ಸಿಂಗಾರವಾದ ಬಾಲಕನು  || ೮೩ ||

ಎಳಗನನೇಱಿಯೆಸೆವ ರನ್ನದೊಡವು ಪ | ಜ್ಜಳಿಪಾಮಗ ಮುಂದೆ ತನಗೆ
ಕೊಳುಗುಳದೊಳು ಮಾರ್ಮಲೆವ ಮನ್ನೆಯ ಗೌಡ | ನಳುರ್ವ ಬಾಲಾಗ್ನಿಯಂತೆಸೆವ || ೮೪ ||

ಪಳಿಕುವಳಿಕುವಾವರ್ತಿಯ ಘಳಿಲನೆ | ಕಳವಂತೆಯೊಲು ಚೌಷಷ್ಠಿ
ಕಲೆಯ ಧರಿಸಿ ಬಾಲಶಶಿ ಬೆಳೆವವೊಲು | ಬೆಳೆದೊಪ್ಪಿದನವನಿಂತು  || ೮೫ ||

ಸುರತರುವಿನ ಶಾಖೆ ಭುಜ ಪರುಷದಕಣಿ | ಕರತಳ ಸುರಭಿಸ್ತನಮೆ
ಬೆರಳೊಪ್ಪುವ ಚಿಂತಾಮಣಿ ಕೂರುಗು | ರಿರದಾದವಾ ಭೂವರಗೆ  || ೮೬ ||

ಭಾವೆಯರಾತನ ರೂಪಿಗೆ ತಮ್ಮಯ | ಭಾವವನೆ ರೂಪುಮಾಡಿ
ಭಾವಿಸುತಿರೆ ಭಾವಜಸನ್ನಿಭನೆಂದು | ಭಾವಜ್ಞರಿರದಾಡುವರು  || ೮೭ ||

ತನ್ನಂತರದೊಳು ವಸುಪಾಲನೆಂದೆಂ | ಬುನ್ನತಗುಣಿ ನೃಪಕುಲಕೆ
ರನ್ನವೆನಿಸಿ ಪುಟ್ಟಿದರವರಿರ್ವರು | ಮನ್ನಣೆ ಮಿಗೆ ಕೂಡಿಹರು  || ೮೮ ||

ಕೋಳಿ ತಗರು ಕಾಡುಕೋಣ ಕೂರಾನೆ ಮಾ | ಸಾಳು ಮಲ್ಲರು ಮೊದಲಾದ
ಮೇಳದಳ್ತಿಗಾಳಗದೊಳಗಾನೃಪ | ಬಾಲಕ (ರು) ದಿನವ ನೂಕುವರು  || ೮೯ ||

ಇಂತಪ್ಪ ಸುತರುವೆರಸಿ ಗುಣಪಾಲಭೂ | ಕಾಂತನೊಂದಾನೊಂದಿನಿರುಳು
ಕಾಂತಾಜನಸಹಿತುಪ್ಪರಿಗೆಯ ಮೇಲೆ | ಸಂತಸಮಿರ್ದನೋಲಗದೆ  || ೯೦ ||

ತುರಿಹದಿ ಪೊಡೆವಾಗಲಮರೇಂದ್ರ ತಾ | ತರುಣಿಯ ಕೈಯೋಱಗೆಯ
ಭರದಿಂದವೆ ಪುಟನೆಗೆದ ಮುತ್ತಿನ ಚಂಡಿ | ನಿರವಾದುದಾಚಂದ್ರಬಿಂಬ  || ೯೧ ||

ಪಿರಿದೊಪ್ಪುವ ರೋಹಿಣಿಯ ಪೆರ್ಮೊಲೆಯ ಕ | ತ್ತುರಿ ಹತ್ತಿತೊ ರಾಹುವಗಿಯೆ
ಕರಮೊಪ್ಪುವ ಹುಣ್ಣ ಕಗ್ಗಲೆಯೆನೆ ಬಂ | ಧುರಮಾದುದಾ ಶಶಿಯಾಂಕಾ  || ೯೨ ||

ಒಲುಮೆವಂಚಕರೆಲ್ಲಿದರೆಲ್ಲಿರೆಂ | ದಲರ್ಗೋಲಿಟ್ಟಂಗಭವನು
ನಲವಿಂದ ನಡಸುವವೇಳೆವಟ್ಟಲ | ವೊಲುಜ್ವಲಿಸಿ ನಡೆದುದಾಚಂದ್ರ  || ೯೩ ||

ಕಂದರ್ಪವಿಡಿದ ಕರ್ಪುರದ ಕರಂಡಕ | ದಂದದೊಳತಿ ಶೋಭೆವಡೆದ
ಇಂದಿಬಿಂಬವನಾಗ್ರಹದಿಂದವೆ ರಾಹು | ಬಂದು ತುಡುಕಿತಾಕ್ಷಣದಿ  || ೯೪ ||

ಎರಲೆಯ ನಡುವೆ ಪಟ್ಟಿರ್ದ ಪಳುಕಿನೆಱೆ | ವೆರಸಿ ನುಂಗುವೆನೆಂದೆನುತ
ಭರದಿಂದ ಪಾಯ್ವ ಪೆರ್ಬಾವಿನವೊಲಾಮೃಗ | ಧರನ ತುಡುಕಿತಾರಾಹು  || ೯೫ ||

ತಿಂಗಳ ಬಟ್ಟ ನಾಲ್ಕರೊಳೊಂದು ಭಾಗವ | ನುಂಗಿದುದುರಗನಿರುಳೆಂಬ
ಅಂಗನೆಯಮಾಲಾನನದೊಳೆಸೆವುತ್ತ | ಮಾಂಗದ ವೇಣಿಯಂತಾಯ್ತು  || ೯೬ ||

ನವಮುಕುರವನೊಳಗಿಟ್ಟ ಕರ್ವಟ್ಟೆಯ | ಗವಸಣಿಗೆಯದೆಂಬಂತೆ
ತವಕದೊಳಿಂದುಬಿಂಬವ ರಾಹುಮಂಡಲ | ತವೆನುಂಗಿ ಕಣ್ಗೆ ರಾಜಿಸಿತು  || ೯೭ ||

ಆ ವಿಧುಬಿಂಬಗ್ರಹಣವ ಕಾಣುತ | ಭೂವರನಿಂತೆಂದು ಬಗೆದ
ಈ ವಸುಧೆಯೊಳು ದೇಹವ ಹೊತ್ತ ಮನುಜ | ರ್ಗೀ ವಿಧಿ ನಿಶ್ಚಯಮೆಂದು  || ೯೮ ||

ಇಂತು ನಿರ್ವೇಗಪರಾಯಣನಾಗಿ ಭೂ | ಕಾಂತನಾರಾತ್ರಿಯ ಕಳೆದು
ಸಂತಸದಿಂ ಜಿನಭವನವನಿರದೆಯ್ದಿ | ಕಂತುಮರ್ದನನ ಪೂಜಿಸಿದ  || ೯೯ ||

ಮುನಿಗಳಿಗೆಱಗಿ ಧರ್ಮಾಧರ್ಮಂಗಳ | ನನುರಾಗದಿಂ ಕೇಳಿ ಬಳಿಕ
ತನುವಿಡಂಬವನೆಣಿಸಿ ದೀಕ್ಷೆಯ ಕೊಂಬೆನೆಂ | ದನುಮಾನಿಸಿದನಾರಾಯ  || ೧೦೦ ||

ಅಧಿರಾಜ ಯುವರಾಜಪದವಿಯನಣುಗೆರ್ಗೆ | ವಿದಿಪೂರ್ವಕದಿಂದಿತ್ತು
ಅಧಿಕವೇಷವ ತಾಳಿ ಗುಣಪಾಲ ಕೈವಲ್ಯ | ವಧುಗೆ ವಲ್ಲಭನಾದನಿತ್ತ  || ೧೦೧ ||

ಆವೆವೆನೋಡಾಮಾಕರಿ ಮಾತಂಗವ | ಹಾವಿನ ಮೈ ಹೊಲ್ಲವೆಂದು
ಭೂವಧು ಬಂದು ನೆಲಸಿದಳು ಶ್ರೀಪಾಲ | ದೇವನ ಬಾಹುಬಲದೊಳು  || ೧೦೨ ||

ಅರಿನೃಪವಿತತಿವೇತಂಡ ಪಂಚಾನನ | ತರುಣೀಜನವದನಮದನ
ತರುಣತರಣಿನಿಭತೇಜನೆನಸಿದನು ಬಂ | ಧುರಮೂರ್ತಿ ನೃಪಕುಲದೀಪ  || ೧೦೩ ||

ಇದು ಭಾವಕಜನಕರ್ಣವಿಭೂಷಣ | ಮಿದು ರಸಿಕರ ಚಿತ್ತದೆಱಕ
ಇದು ವಾಣೀಮುಖಮಾಣಿಕ್ಯಮುಕುರ ಮ | ತ್ತಿದು ಶೃಂಗಾರಸುಧಾಬ್ಧಿ  || ೧೦೪ ||

ಎರಡನೆಯ ಸಂಧಿ ಸಂಪೂರ್ಣಂ