ಶ್ರೀಮದಮರಮಣಿಮಕುಟರಂಜಿತರತ್ನ | ಧಾಮಾಂಬುಧಾರಾಧೌತ
ತಾಮರಸಾಂಘ್ರಿಯುಗಲ ವೀರನಾಥನು | ದ್ದಾಮಸುಖವನೀವುದೆಮಗೆ  || ೧ ||

ಶ್ರೀರಮಣಿಸುತಸನ್ನಿಭರೂಪ ಮ | ಹಾರಜತಾಚಲಧೈರ್ಯ
ಕಾರುಣ್ಯನಿಧಿಯೊಪ್ಪಿದನಂಭೋಧಿಗಂ | ಭೀರನುಜ್ವಲಕೀರ್ತಿಯುತನು  || ೨ ||

ಒಂದಾನೊಂದು ದಿವಸಮಾ ಗುಣಪಾಲ | ನಂದನನಾಸ್ಥಾನದೊಳು
ಸಂದಣಿಸಿದ ಮಾಂಡಲೀಕರ ನಡುವೆಯಾ | ನಂದದಿಂದವೆ ಕುಳ್ಳಿರ್ದ  || ೩ ||

ಸಿರಿಗೆಣೆ ಸೊಬಗಿಗೆ ಸಮ ಚಲುವಿಗೆ ಸಾಟಿ | ಹರೆಯಕೋರಗೆವಿತರಣೆ ಕೇ
ಸರಿಕೀರ್ತಿಗೊಂದೊಱೆಯಾದ ಜೀವಸಖ | ರಿರಲೊಪ್ಪಿದನಾನೃಪತಿ  || ೪ ||

ತರುಣಿಯರಾಸ್ಯಾಂಬುಜಮಕ್ಷಿಯುತ್ಪಲ | ಕರದ ಕಂಕಣ ಖಗದುಲವು
ಪಿರಿಯಚಾಮರ ತೆಱೆಯೆನಲಾಸಭೆಯೆಂಬ | ಸರಸಿಗರಸಂಚೆಯಾದ  || ೫ ||

ಪಂತವಾಡುವ ಭಟರಳಿಗಿಳಿ ಪಡಿಯಱ | ತಿಂಥಿಣಿ ಕೋಗಿಲೆವಿಂಡು
ಹಂತಿವೆಣ್ಗಳ ತನುಲತೆವನಮೆನಲು ವ | ಸಂತನವೊಲು ನೃಪನೆಸೆದ  || ೬ ||

ಎಡಬಲದೊಳಗೋಲೈಪ ಕೋಮಲೆಯರು | ತೊಡೆದ ಲೇಪನವುಟ್ಟದುಗುಲ
ಮುಡಿಹೂದಂಬುಲಗಂಪಿನಕೆಂಪಿನ | ನಡುಸಂತೆಯಾದುದಾಸ್ಥಾನ  || ೭ ||

ವರಸನ್ಮಂಗಲ ಬುಧಗುರುಕವಿತತಿ | ಇರೆ ಕುಮುದಾಧೀಶನಾಗಿ
ಪರಿಜನವೆಂಬ ಚಕೋರಿಗೆ ಹರುಷೋ | ತ್ಕರನಾದನಾಭೂವರನು  || ೮ ||

ಪಡಿಯಱಗಳಪದಿಂದವೆಯೊರ್ವ ವನಪಾಲ | ನಡೆತಂದಾವೋಲಗವ
ಕಡುನೇಹದಿಂ ಹೊಕ್ಕ ಮಹಿಗೆ ಮೆಯ್ಯನುಸಾರ್ಚಿ | ಪೊಡವಟ್ಟನಾನೃಪವರಗೆ  || ೯ ||

ಏಳೆಲೆವಾಳೆವಗಿನುಕಲುಹಾರದ | ಮಾಲೆ ಬೆರಕೆ ತಂಪಿನೆಲರು
ಏಲಾಫಲ ಮೊದಲಾದ ವಸ್ತುವ ನರ | ಪಾಲಗತ್ತಿಂತೆಂದು ನುಡಿದ  || ೧೦ ||

ಎಲೆ ರಾಯರದೇವ ಬಿನ್ನಪವೆನ್ನ ಕಾ | ವಲಬೆಳಸಿನ ನಂದನದ
ಕೆಲದೊಳಗೊಂದು ಹೊಂಗೆಲಸದಟತರು | ನೆಲಸಿಹುದತಿ ಶೋಭೆಯಿಂದ  || ೧೧ ||

ಎಳೆಮೊಗ್ಗೆಯ ವಜ್ರಕಿಸಲಯಮಾಣಿಕ್ಯ | ಪಳೆಯೆಲೆಗಳ ವೈಡೂರ್ಯ
ಕಳಿವಣ್ಣ ವಿದೃಮದಿಂದಾ ತರು ಪ | ಜ್ವಳಿಸಿದುದತಿ ರಂಜಿಸುತ || ೧೨ ||

ಎಸೆವ ಸುಧಾಸೂತಿಯೊಡಲೊಳಿರ್ಪಾಲದ | ಸಸಿ ಸೈಂಹಿಕಾಸುತಗಳ್ಕಿ
ವಸುಧಾತಳಕವತರಿಸಿದುದೋಯೆಂ | ಬೆಸಕವಡೆದುದಾವೃಕ್ಷ || ೧೩ ||

ಅದಱಡಿಯೊಳು ನೆಲಮುಟ್ಟದೆ ಬಿಳಿಲು | ತುದಿಸಾಂತಕದಂತರಾಳದೊಳು
ಚದುರರೊಡನಿಂದೊರ್ವ ಬಾಲಪುರುಷ ಸ | ಮ್ಮದದಿಂದವೆ ಪಾಡುತಹನೆ  || ೧೪ ||

ಮೃಡನರೆಮೆಯ್ಯ ನಂಬಿಕೆಗೀಯೈತನಗಿ | ಪ್ಪೆಡೆಗಾಣದೆ ಯಡಗಿವಿಯ
ತೊಡವಿನೆಕ್ಕಲಗಾಣನಿಳೆಗಿಳಿದನೋಯೆಂಬ | ಪಡಿಯಾದನಾ ಪಾಡುಗಾರ || ೧೫ ||

ಅಂಗಸಂಭವನಾಱಡಿವಸುಳೆಯ ತಿರು | ವಿಂಗೋಲಿಗೇಱಿಸಿ ನೀವಿ
ಇಂಗೋಲ್ವಿಲ್ಲ ಜೇವಡೆದಂದಮೆನಲು ಬೆ | ಡಂಗಾದುದಾರಸಗೇಯ  || ೧೬ ||

ಎಂದಾತೋಟವಾಳಿಗ ಪೇಳಲಂದಾಬಿಸ | ವಂದವನೇ ನೋಳ್ಪೆನೆಂದು
ಕಂದರ್ಪನಿಭನಾತರುವಿನೆಡೆಗೆಯಾ | ನಂದದಿಂದವೆ ಪೊಱಮಟ್ಟ  || ೧೭ ||

ಸುಕವಿಗಳೊಡನುಗ್ಘಡಿಸುತ ಪುಣ್ಯಪಾ | ಠಕರ ಗಾನರ ಕಂಚುಕಿಗಳ
ಸಕಲ ಕಲಾಪ್ರೌಢರ ಲಾಲಿಸುತವೆ | ಮಕರಾಂಕನಿಭನೈದಿದನು  || ೧೮ ||

ಈ ತೆಱದಿಂದತಿ ಲೀಲೆಯೊಳೈತಪ್ಪ | ಭೂತಳಪತಿಯಾಕುಜದ
ಕೌತುಕವನು ನೋಡುತ ಬರೆ ಪಾಡುವ | ಗೀತವಚ್ಚರಿವಡಿಸಿದುದು  || ೧೯ ||

ಕರಮೆಸೆವಾಗಾನದ ಮಂದ್ರಮಧ್ಯಬಂ | ಧುರತಾರಾಸನಮೆಂಬ
ಸರದ ಮುಪ್ಪುರಿ ಕರ್ಣದ್ವಾರವನೆ ತೊಡ | ರ್ದರಮಗನನು ನಿಲಿಸಿದುದು  || ೨೦ ||

ಅನಿತಱೊಳಾಫಲರತ್ನದ ವಟತರು | ಜನನಾಥನು ನೋಡನೋಡ
ಘನದೊಡ್ಡಣದಂತೆ ತದ್ರೂಪಳಿದು ದಿವ್ಯ | ತನುವ ಹಡೆದು ಯಕ್ಷದನಾಯ್ತು || ೨೧ ||

ರನ್ನದ ತೊಡವು ರಂಜಿಸುವ ಮುಕುಟ ಹೊಸ | ಹೊನ್ನಬಣ್ಣದ ಮೈವೆಳಗು
ಚೆನ್ನೆಸೆದನು ಬಿಸಿಯಳಿದಿಳೆಗೆಯ್ತಂದ | ಮುನ್ನೇಸರೆಂಬ ಮಾಳ್ಕೆಯೊಳು || ೨೨ ||

ಆ ಪರಿಯನು ನಿಂದು ನೋಡಲೆಸೆದ ನೆಲ | ದೋಪನ ನಿಟ್ಟಿಸಿ ಕಂಡು
ಆ ಪಾಡ ಪಾಡುವ ಗಂಡಂದವಳಿದತಿ | ರೂಪುಳ್ಳ ಬಾಲಕಿಯಾಯ್ತು || ೨೩ ||

ಪುರುಷವೇಷವನುಳಿದಾ ಕೋಮಲೆ ಬಂ | ಧುರವಾದಳಂದಿನ ವಿಷ್ಣು
ಉರಿಗೈಯರಕ್ಕಸನನು ಕೊಲೆ ಹರಿ ಪೆ | ಣ್ಣರಿಜ ಕೈಕೊಂಡ ಮಾಳ್ಕೆಯೊಳು || ೨೪ ||

ತುಂಬುದಿಂಗಳಮೊಗ ತುಱುಗೆವೆಯಲರ್ಗಣ್ಣು | ತುಂಬಿಗುರುಳ ತೊಂಡೆವಾಯಿ
ಕೆಂಬಲ್ವಳೆವ ಕದಂಪುವೊಪ್ಪಿದೀನಡು | ವಿಂಬಾದವಾ ಬಾಲಕಿಗೆ || ೨೫ ||

ಸಿರಿಮುಡಿ ಸರದುಂಬಿಗುರುಳೆಳೆವೆಱಿನೊಸ | ಲರೆಗಿಳಿನುಡಿ ನಳಿತೋಳು
ಕರಡಿಗೆಮೊಲೆ ಬಾಳೆದೊಡೆಯಲತಗೆವಜ್ಜೆ | ಪಿರಿದೊಪ್ಪಿದವಾ ಕೋಮಲೆಗೆ || ೨೬ ||

ಈ ಯಚ್ಚರಿಯನಱಿವೆನೆಂದು ನರನಾಥ | ನಾ ಯಕ್ಷನೆಡೆಗೈತಂದು
ಒಯ್ಯಾರದಿಂ ಕೇಳಲು ಪೇಳ್ದನಿಂತೆಂ | ದಾಯಡೆಗೆಯ್ದಂದವನು || ೨೭ ||

ಧರಣೀಶ ಕೇಳೀ ಖಾಂಡವವಿಜಯಾರ್ಧ | ಗಿರಿತಟದೊಳು ನೂಱಹತ್ತು
ಉರುತರಮಪ್ಪ ವಿದ್ಯಾಧರದೇಶಮ | ತ್ತಾ ವಿಷಯದ ನಟ್ಟನಡುವೆ || ೨೮ ||

ಆ ವಿದ್ಯಾಧರದೇಶದರಸುಗಳೊ | ಳೀ ವಸುಧಾಚರರೊಳಗೆ
ಭೂವರ ಕೇಳ್ಕೊಳ್ಕೊಡೆಯಾಗಿಹುದು ಮ | ತ್ತಾ ವಿಷಯದ ನಟ್ಟನಡುವೆ || ೨೯ ||

ಎಸೆವ ಮನೋಹರಮೆಂಬ ದೇಶದೊಳು ರಂ | ಜಿಸುವ ಶಿವಂಕರಮೆಂಬ
ಹೆಸರುಳ್ಳ ಪೊಳಲ ವಿಮಲವಾಹನನೆಂ | ಬಸಮ ವಿಕ್ರಮನಾಳುತಿಹನು || ೩೦ ||

ಆ ರಾಯಗೆ ಕಾಂತಾವತಿಯೆಂದೆಂಬ | ವಾರಿಜಮುಖಿ ಸತಿಯಾಗೆ
ನೀರಜಭವಗೆ ವಲ್ಲಭೆಯಾದ ವಾಣಿಯ | ಓರಗೆಯಂತೊಪ್ಪಿದಳು || ೩೧ ||

ರತಿವಿದ್ರೂಪಗೊಲಿದಳು ಭಾರತಿ ತನ್ನ | ಪಿತನ ವರಿಸಿದಳಂಬುಧಿಯ
ಸುತೆಯನ್ಯಭೂಪತಿಗೊಲಿದಳೆಂದವರನಾ | ಸತಿ ಹಳಿವಳು ತನ್ನ ಗುಣದಿ || ೩೨ ||

ನಿಬಿಡಸ್ತನ ನೀಲಾಂಬುಜಲೇಖಾ | ಕಬರೀಕಳಭಮಂದಯಾನ
ಅಬುಜಲೋಚನವಕಲಂಕಚಂದ್ರಾನನ | ವಬಲಾಮಣಿಗೊಪ್ಪಿದವು || ೩೩ ||

ಆ ಪುಣ್ಯದಂಪತಿಗಳ ಗರ್ಭದೊಳು ಪುಷ್ಪ | ಚಾಪಗೆ ಸರಿಮಿಗಿಲೆನಿ
ರೂಪದರಸಿಯರವಿಂದವೆಸರಕುಲ | ದೀಪಕನುದ್ಭವಿಸಿದನು || ೩೪ ||

ಸ್ಮರನಿಭನರವಿಂದನ ಪೆತ್ತಾವಧುವ | ರರಿಗೊರ್ವಬಲೆ ಪುಟ್ಟಿದಳು
ಶರಧಿಯೊಳಗೆ ಪುಟ್ಟಿದ ಶಶಿಯೊಡನುರು | ತರ ಲಕ್ಷ್ಮಿಪುಟ್ಟಿದಂದದೊಳು || ೩೫ ||

ಮಲ್ಲೀವಲ್ಲೀವಸಂತ ವಿಟನ ಸೋಂಕಿ | ನಲ್ಲಿಯಲರ ಹಡೆವಂತೆ
ಸಲ್ಲಲಿತಾಂಗಿ ನೃಪನ ಕೂಟದೊಳಾ | ಫುಲ್ಲಗಂಧಿಯ ಪೆತ್ತಳೊಸೆದು || ೩೬ ||

ಆ ವಸುಧೀಶನನ್ವಯದೇವನಾ ವಿಜ | ಯಾವರ್ತನೆಂದೆಂಬ ಯಕ್ಷ
ದೇವನಾನವರಿಚ್ಚೈಸಿದ ವರವನೆ | ತೀವಿಯೊಲಿದು ಕೊಡುತಿಹನು || ೩೭ ||

ಅದಱಿಂ ಸದಮಲ ಶಶಿನಿಭಮಂಡಲ | ವದನೆ ನಿನ್ನಯ ನಾಮವನು
ಪುದಿದಭಕ್ತಿಯೊಳು ಜಯಾವತಿಯೆಂದುರು | ಮುದದಿಂ ಕರೆದರಳ್ತಿಯೊಳು || ೩೮ ||

ಚಿಣ್ಣಂಚೆ ನಡೆಚಿಕ್ಕಿ ಹೆಱೆವಣಿಮಱೆಯುಲ್ಲೆ | ಗಣ್ಗೆಳೆಯಲರುಣಿಗುಱುಳು
ಸಣ್ಣಸಿಂಗದನಡು ಶಿಶುಗಿಳಿಯೊಳ್ನುಡಿ | ಬಣ್ಣಿಸಲೊಪ್ಪಿದವವಳ್ಗೆ || ೩೯ ||

ಹರುಷದಿ ತಮ್ಮ ತಂದೆಯ ತೊಡೆಯೇಱುತ | ತ್ತರುಣಿ ಬೆಳದಳಳ್ತಿಯಿಂದ
ನರನಾರಾಯಣ ಋಷಿಯೂರಿಂಪುಟ್ಟಿ | ಕರಮೆಸೆಯೂರ್ವಸಿಯಂತೆ || ೪೦ ||

ಇಂತು ಶೈಶವದ ಸಂತಸದಿಮದಾಬಾಲೆ | ಸಂತತ ಬೆಳೆದು ಬಳಿಯೊಳು
ಕಂತುಪಿಡಿದ ಖಡ್ಗಕೆ ಬಾಸಟವೆಱು | ವಂತೆ ಜವ್ವನವೇಱಿದಳು || ೪೧ ||

ಮನಸಿಜಕರಿಗುನ್ಮದ ಕುಸುಮಾಸ್ತ್ರಕೆ | ಮೊನೆ ಪೂವಿಗೆ ತನಿಗಂಪು
ಜನಿಯಿಸುವಂತೆ ಕಮಲವದನೆಗೆ | ವ್ವನ ಪುಟ್ಟಿತತಿ ಶೋಭಯಿಂದ || ೪೨ ||

ವಿರಹಿಗಳೆರ್ದೆ ಗಾಢನಳುರ್ವಗ್ನಿಯೆಂದೆಂಬ | ತರುಣಿಯ ಪಿರಿಯಚಲ್ವಿಕೆಗೆ
ಕರಮೆ ಕಾಣಿಸಿತೇಱುಂಜವ್ವನಮಾ | ಸುರಭಿ ಸಮೀರನಂದದೊಳು || ೪೩ ||

ಇಂತೆಸೆವ ಜವ್ವನೆಗೀ ಗಂಡುರೂಪ | ವಂ ತಾಳಿ ಪೆಣ್ಬರಿಜಾಂತ
ಕಾಂತೆಯಿವಳು ಭಾವಕಿಯೆಂಬ ನಿಜಸಖಿ | ಕಂತುಸನ್ನಿಭ ಶ್ರೀಪಾಲ || ೪೪ ||

ಪೊಡವಿಯಾಣ್ಮನ ತನುಜಾತೆ ಜಯಾವತಿ | ಯೊಡನಂದೊಡನುಟ್ಟು ತೊಟ್ಟ
ಒಡನಾಡಿ ಬೆಳೆದ ಕೆಳದಿಯೆ ಭಾಕಿ | ಕಡುಜಾಣೆ ಕೇಳ್ಸುಕುಮಾರ || ೪೫ ||

ಮತ್ತೆ ಭಾವಕಿಯೊಡತಿ ಜಯಾವತಿ | ಯುತ್ತಮವಪ್ಪರೂಪವನು
ಬಿತ್ತರದಿಂ ಪೇಳುವೆ ಕೇಳೆನುತ ಮುದ | ವೆತ್ತು ಪೇಳಿದನಾದೇವ || ೪೬ ||

ಜಲಜದ ಸಿರಿ ಕುರುವಿಂದದ ಕಡುಗೆಂಪು | ತಳಿರ ಮಾದ್ರವ ವಲತಗೆಯ
ತಿಳಿರಸದೊಬ್ಬುಳಿಗೊಂಡಂದೊಳು ಪ | ಜ್ಜಳಿಸಿದವವಳಪಜ್ಜೆಗಳು || ೪೭ ||

ಕೊಡುಕೋಮಲೆ ನಿನ್ನಪಾಂಗರುಚಿಯನೆನು | ತಡಿಯ ಹಿಡಿದು ಬೇಡಿಕೊಂಬ
ಕುಡಿಮಿಂಚುಗಳೆನೆ ಕಾಲುಗುರ್ವೆಳಗಾ | ಕಡುನೀಱೆಗೆ ಸೊಗಸಿದವು || ೪೮ ||

ಗಾಡಿಕಾತಿಯ ಮೇಗಾಲ್ಗೆಣೆ ತಾವೆಂದು | ನಾಡುಮೆಚ್ಚಿದ ಪುಸಿವಾತ
ಆಡಿದ ಪಾಪದ ಫಲದಿಂ ಮೈ ಕೆ | ಟ್ಟೋಡಾದುದಾ ಕೂರ್ಮಗಳಿಗೆ || ೪೯ ||

ಸಲ್ಲಲಿತಾಂಗಿಯ ಜಂಘೆಗೆಲಿದೋಯಿನಿ | ವಿಲ್ಲನ ಬೀರಗಾಳಗದ
ಫುಲ್ಲಶರನ ಮೂಡಿಗೆಯ ಸನ್ಮೋಹನ | ಮಲ್ಲಿ ಪಿಡಿದ ಹೊನ್ನಗದೆಯ || ೫೦ ||

ಕಾಮುಕಪಶುಬಂಧನಯೂಪಸ್ತಂಬ | ಕಾಮಜಟ್ಟಿಯ ಕಟ್ಟುಕಂಬ
ಕಾಮಗೃಹದ ಪೊಂದುಡೆಯೆನಲೊಪ್ಪಿದೊ | ವಾ ಮುಗ್ಧೆಯೆಸೆವೊಳ್ದೊಡೆಗಳು || ೫೧ ||

ಧರೆಯ ವಿಟರ ಪೇರೆದೆಗಲ್ಲನಾರತಿ | ವರನೆಂಬೊರ್ವ ಕಲ್ಕುಟಿಕ
ಭರಿದಿಪೊಡೆವ ಕಟ್ಟಗುಂಡೆಂದೆನಲಾ | ತರುಣೆಗೊಪ್ಪಿದವು ನಿತಂಬ || ೫೨ ||

ನಿಂದವಲೋಕಿಸಿ ನೆನದವರ್ಗಳನು ತ | ನ್ನಂದದವೊಲು ಬಡಮಾಳ್ಪ
ಇಂದುಮುಖಿಯ ಬಡನಡುವೊಪ್ಪಿದುದಕ | ಡಂದುಱುವಿನ ತೆಱನಾಗಿ || ೫೩ ||

ನಿಂದು ನಿಟ್ಟಿಸಿ ತೊಲಗಿದರಳ್ಳೆರ್ದೆಯೊಳ | ಗೊಂದಿ ಮುಸುಕಿಯವಸ್ತೆಯನು
ಒಂದು ಹತ್ತ ಮಾಡಿ ತೋರುವ ಬಿಂದುವಿ | ನಂದಮಾದುದು ನಾಭಿಯವಳ || ೫೪ ||

ಒಲವಿನಾಗಮದ ಗಣಿತದ ಗುಣಿತವ ತಾ | ಕಲಿವೆನೆನುತ ಹರಿಸೂನು
ನೆಲಸಿದ ಮೊದಲ ಮೊಗ್ಗೆಯ ಮೂರೇಖೆಯ | ಗೆಲುವಂದವಾ ತ್ರಿವಳಿಗಳು || ೫೫ ||

ನಡೆನೋಡುವ ಕಾವನ ಕೈಯ ಬೊಂಬೆ ಪೊಂ | ಗೊಡಮೊಲೆಯಿಂ ನಾಭಿಗಾಗಿ
ಎಡೆಯಾಡುವ ಸಣ್ಣವಟ್ಟೆಯಿದೆನೆ ಬಾಸೆ | ಕಡುಸೊಗಸಿತು ಕೋಮಲೆಗೆ || ೫೬ ||

ಚಿನ್ನದ ಕಳಶ ಕುಂದಣದ ಬೋಗುಣಿ ಪೊಸ | ಪೊನ್ನದಾವರೆಗಳ ಮುಗುಳು
ಸೊನ್ನೆಯಮಿಂಟೆ ಮಿಸುನಿಗರಡಗೆಯಂತೆ | ಚೆನ್ನೆಯ ಕುಚಗಳೊಪ್ಪಿದವು || ೫೭ ||

ಹಲವು ಮುತ್ತುಗಳ ಹಡೆದು ಮುದದಿಂದೆರ್ದೆ | ಗೊಲಿದಿಟ್ಟ ಶಂಕದಂದೊಳು
ಸುಲಿತವಹ ಮಣಿಸರದೊಟ್ಟ ತತ್ಕೋ | ಮಲೆಯ ನುಣ್ಗೊರಲೊಪ್ಪಿದುದು || ೫೯ ||

ರಮಮೀಮಣಿಯಮೃತಾಧರನಿಧಿಗೆ | ಸಮನಪ್ಪೆನೆಂದು ಚಿಂತಿಸುತ
ಅಮೃತಾಬ್ಧಿಯೊಳೆಳೆಱೆಯೊಳು ತೇಲುತ | ಭ್ರಮಿಸುತಿಹುದು ನಿಚ್ಚನಿಚ್ಚ || ೬೦ ||

ಮಿಸುಪ ಕತ್ತುರಿಯ ಮಕರಿಕಾಪತ್ರಮೆಂ | ಬೆಸೆವ ಮೋಹನಯಂತ್ರವನು
ಒಸೆದು ಬರೆದ ತೆಳುದಗಡಂದದೊಳು ರಂ | ಜಿಸಿದೊವವಳ ಕದಪುಗಳು || ೬೧ ||

ಓಲೆ ಮನ್ಮಥನ ಮನೋರಥಕಿಕ್ಕಿದ | ಗಾಲಿಯಂತಾಗಲಂತದಱ
ಮೇಲಿಟ್ಟ ಮಿಸುನಿವತ್ತಿಗೆಯೆಂದೆನೆ ಕಿವಿ | ಯೋಲೆಯೊಪ್ಪಿದವಾಸತಿಗೆ || ೬೨ ||

ತರುಣಿಯ ವದನೇಂದುಗಾಬಿದಿಯರಲೆಯೆ | ಬರೆವುತದರ ಚಲ್ವುಗಂಡು
ಪರವಶನಾಗಿ ಮುಂಬರೆದ ಬರಿಯಕಣ್ಣ | ಪರಿಯಾದವವಳ ದಿಟ್ಟಿಗಳು || ೬೩ ||

ಕಾವನ ಕೈಯರಲೆಯ ಕೋಡಿಗೆಣೆಯಾದ | ಭಾವೆಯ ಕುಡಿವುರ್ವುಗಳಿಗೆ
ತಾವೆಣೆಯೆಂದು ಗರ್ವಿಸಿ ಕೈಪೆಮಾಡಿದ | ನಾ ವಿಧಿ ನಿಂಬಫಲಕೆ || ೬೪ ||

ಉದಯಿಸಲಾನೆನಗಿನಿಸಳ್ಕಿ ಮುಗಿಯದೆ | ವಿದಳಿತಮಾಗಿರ್ದಳೆಂದು
ವದನಕಂಜವ ಕರ್ಚಿದ ಬಾಲಶಶಿಯಂತೆ | ಸುದತಿಯ ನೊಸಲೊಪ್ಪಿದುದು || ೬೫ ||

ವಿರಹಿ ವಿಹಂಗದ ಕಾಲ್ಕಣ್ಣಿಗಳೊ | ಸ್ಮರ ಗುಣಿಸುವ ಶುದ್ಧಗೆಯೊ
ಕುರುಕುಗಳೋಯೆನಲೆಸೆದವಾಱಡಿವಱಿ | ಗುರುಳೋಳಿಯಾ ಕೋಮಲೆಗೆ || ೬೬ ||

ಮಾರೋರಗನಾಸ್ಯಶಶಿಯುಣಲೆಂದೆಯ್ದಿ | ನಾರಿಯ ನಗೆಗಣ್ಣ ಕಂಡು
ಸಾರಂಗದ ದೃಷ್ಟಿಯೆಂದೆನುತಂಜಿನಿಂದಂತೆ | ಚಾರುಕಬರಿಯೊಪ್ಪಿದುದು || ೬೭ ||

ವಱಮೆವಱಿಗೆಪಗೆಯಲ್ಲದ ಸಂಪಗೆ | ನಱುಗಂಪನಿರದೆ ಕೈಕೊಂಡ
ಮಿಱುಗುವ ಮಿಸುನಿಯೆಂದನೆ ರಂಜಿಸಿತಾ | ಕಿಱುವೆಣ್ಣ ರಮ್ಯನಾಸಿಕವು || ೬೮ ||

ಕಾವನ ಬನದ ವಸಂತಪಿಕನೊ ರತಿ | ದೇವಿಯ ಕೈಯರಗಿಳಿಯೊ
ಆ ವಾಣಿಯ ಕೈಯ ವೀಣೆಯಿಂಚರವೊಯೆನೆ | ಭಾವೆಯ ನುಡಿಯೊಪ್ಪಿದುದು || ೬೯ ||

ತಳಿರ್ವಾಳೆ ಪುಳಿನೆಳಲತೆ ಕೊಳನೆಣೆವಕ್ಕಿ | ತೊಳಪ ತಾಮರೆಯಲರಂಬು
ಎಳೆವಱಿವಳಿಸೋಗೆಗೂಡಿ ಪೆಣ್ಬರಿಜನೇ | ತಳದಂತಿರೆಯೆಸೆದಳಾ ತರುಣಿ || ೭೦ ||

ಹರನ ಹೆಟ್ಟುಗೆ ಹೂಪೊಡೆಯನೋಪಳನಜ | ನರಸಿಯನಂಗಸಂಭವನ
ತರುಣಿಯರನು ಗೆಲ್ದಳು ಗಾಡಿ ಸಿರಿಜಾಣ್ಮೆ | ಪರಿದಪ್ಪ ರೂಪಿನಿಂದವಳು || ೭೧ ||

ಗಿರಿಜೆಯ ಕಥನದಿಂ ಸತ್ತಾ ಮೃತ | ಧರೆಯಿಂದ ಮಱುಹುಟ್ಟು ಹಡೆದು
ಧುರಧೀರನಾಗಿರ್ದು ತಟ್ಟುವನಾಕಂತು | ಹರನನಿನ್ನೊಮ್ಮೆನೋಡೆಂದು || ೭೨ ||

ಸತಿಯರು ಪುರುಷರಿಗೊಲಿವರಲ್ಲದೆಯಾ | ಸತಿಯರು ಸತಿಗೆ ಮೋಹಿಪುದು
ಅತಿ ಚಿತ್ರವಾತನದೆಂತೆನೆಯವರೊಳು | ಮತಿ ಮಹಾಲಕ್ಷ್ಮಿಗಳಿರಲು || ೭೩ ||

ಇಂತತಿ ರೂಪು ಯೌವನದುನ್ನತಿಕೆಯ | ನಾಂತು ಮನೋಹರಮಾದ
ಕಾಂತಾರತ್ನವ ಕಂಡು ವಿಮಲಸೇನ | ತಾಂ ತಳೆದನು ಸಂತಸವ || ೭೪ ||

ಈ ಮಾನಿನಿಗೆ ವಲ್ಲಭನಾವನಪ್ಪನೆಂ | ದಾಮಹೀಪತಿಯಷ್ಟಾಂಗ
ನೈಮಿತ್ತಿಕನ ಕರೆದು ಬೆಸಗೊಳಲವ | ನಾಮಾತನೆ ಕೈಕೊಂಡು || ೭೫ ||

ಮಿನುಗುವ ಚಿಹ್ನ ಚೌಮಾಂತತಿಕ್ಷವ್ಯಂ | ಜನಲಕ್ಷಣಾಂಗಸ್ವಪ್ನ
ವಿನುತಸ್ವರಮೆಂಬೆಂಟು ನಿಮಿತ್ತವ | ನನುನಯದಿಂ ಬಲ್ಲನಾಗಿ || ೭೬ ||

ಸುದತೀಮಣಿ ಮುನ್ನವೆ ಸಂಜನಿಸಿದ | ಸದಮಲಮಪ್ಪಲಗ್ನವನು
ಮೊದಲು ತಾನಱಿವುಳ್ಳವನಾಗಿ ಜೋಯಿಸ | ಮುದದಿಂದವೆ ಪೇಳ್ದನಿಂತು || ೭೭ ||

ಧರೆಯೊಳು ಖ್ಯಾತಿವಡೆದ ಪುಂಡರೀಕಿಣಿ | ಪುರದ ಬಹಿರ್ಭಾಗದೊಳು
ತರುಣಿಯ ಕೆಳದಿ ಭಾವಕಿ ಪೋಗಿ ತಾಗಂಡು | ವರಿಜಕೊಂಡತಿಮುದದಿಂದ || ೭೮ ||

ಪಾಡುತಲಿರಲಾ ಬಾಲಕಿಯನು ನಡೆ | ನೋಡುವ ನೃಪನ ಚಲ್ವಿಕೆಯ
ನೀಡುಂ ಭಾವಿಸೆ ನಿಜರೂಪಹುದಾ | ರೂಢಿವಡೆದ ಮಾಳ್ಕೆಯೊಳು || ೭೯ ||

ಆ ನೃಪತಿಗೆ ಚಿತ್ರ ಬೆಸಗೆಯ್ವುದುಮತ್ತಾ | ವನಾತಗೆ ನಿನ್ನ ಕುಮಾರಿ
ಮಾನಿನಿಯಹಳು ನಿನ್ನಯ ಸುತನರವಿಂದ | ಸೇನಾಧಿಪರತ್ನವಹನು || ೮೦ ||

ಎಂದು ನುಡಿದ ಜೋಯಿಸನ ನುಡಿಯ ಕೊಂಡು | ಬಂದೆನ್ನೊಳೊರೆಯೆ ಖೇಚರನು
ಇಂದುಮುಖಿಯ ಕಾರಣದಿಂದ ನಾನೀ | ಯಂದವನುಜ್ಜುಗಿಸಿದೆನು || ೮೧ ||

ಆಕಸ್ಮಿಕದಾಲದ ರೂಪುವಡೆದೆನು | ಭೂಕಾಂತ ನೀ ನೋಡಲೆಂದು
ಈ ಕೌತುಕವ ಬಿಟ್ಟೆನು ನಿನ್ನನೇ ಕಂ | ಡಾಕುವರಿಯ ಕಜ್ಜಕಾಗಿ || ೮೨ ||

ಆ ನೈಮಿತ್ತಿಕನೊರೆದ ತೆಱದಿ ಭೂ | ಮೀನಾಥ ನಿನ್ನನು ಕಾಣುತವೆ
ಈ ನಳಿನಾಕ್ಷಿಗೆ ತನ್ನ ಮುನ್ನಿನ ನಿಜ | ತಾನತಿವೇಗದೊಳಾಯ್ತು || ೮೩ ||

ಅದಱಿಂದವೆ ನಿನಗಾ ಅಭಿನವರತಿ | ವಿದಲಿತ ನವಪಾರಿಜಾತ
ವದನೆ ವಲ್ಲಭೆಯಪ್ಪಳು ರೂಪಮಾನವ | ಮದನ ತರಣಿಸಮತೇಜ || ೮೪ ||

ನಿನಗೊಂದೆಡರಡಸಿದ ಕಾಲದೊಳೆನ್ನ | ನೆನೆದೊಡಾನೆಯ್ದಿ ಹಿಂಗಿಸುವೆ
ಎನುತಾಯಕ್ಷ ಭಾವಕಿಗೂಡಿ ತನ್ನತ್ತ | ಘನಪಥಕಡಱಿದನು || ೮೫ ||

ಅರವಿಂದಕನಚ್ಚಾಗೆಯಾಯಕ್ಷೇ | ಶ್ವರನಮೆಯ್ಯಸದಳಮಾಗೆ
ಸ್ಮರನಪರಂಜಿಯ ಸರಿಗೆಯ ತೆಗೆದಂತೆ | ಪರಿದುದವನ ಚಿತ್ತವತ್ತ || ೮೬ ||

ಪಿರಿದಪ್ಪೈಶ್ವರ್ಯವ ತೋರುತಾ ದಿವ್ಯ | ತರುಣಿ ಸೇರಿದಳೀತಗೆಂದು
ಪರಿಜನವೆಯ್ದಿ ಕೊಂಡಾಡಿದುದಾ ಭೂ | ವರಕುಲಗಗನಭಾಸ್ಕರನ || ೮೭ ||

ಕವಿಜನವಿತತಿಕೋಕಿಲ ಮಾತಂಗ ಭೂ | ಭುವನ ಜಂಬುಕ ಕೀರ್ತಿಯುತನು
ಯುವತೀಜನಚಿತ್ತಜಾಂತನೊಪ್ಪಿದನು | ಅವನಿಪಾಲಾನ್ವಯಕುಲದೀಪ || ೮೮ ||

ಇದು ಭಾವಕಜನಕರ್ಣವಿಭೂಷಣ | ಮಿದು ರಸಿಕರ ಚಿತ್ತದೆಱಕ
ಇದು ವಾಣಿಯ ಮುಖಮಾಣಿಕ್ಯಮುಕುರ ಮ | ತ್ತಿದು ಶೃಂಗಾರ್ಯಸುಧಾಬ್ಧಿ || ೮೯ ||

ಮೂರನೆಯ ಸಂಧಿ ಸಂಪೂರ್ಣಂ