ಶ್ರೀಮದಮರಮಣಿಮಕುಟರಂಜಿತರತ್ನ | ಧಾಮಾಂಬುಧಾರಾಧೌತ
ತಾಮರಸಾಂಘ್ರಿಯುಗಳವೀರನಾಥನು | ದ್ದಾಮಸುಖವನೀವುದೆಮಗೆ || ೧ ||

ಶ್ರೀಪತಿಧರನಿಭಧರಣೀರಕ್ಷಕ ವಾಕ್ | ಶ್ರೀಪತಿ ನಿಭಸಾಹಿತ್ಯ
ಭೂಪಾಲತಿಲಕನೊಪ್ಪಿದನಭಿನವ ಪುಷ್ಪ | ಚಾಪನುಜ್ವಲಕೀರ್ತಿಯುತನು || ೨ ||

ವನಿತೆಯ ನೆನಹ ತನ್ನಂತರಂಗದೊಳಿಟ್ಟು | ಜನನಾಥನಾ ಪುರಕೈಯ್ದಿ
ಅನುರಾಗದಿಂದರಮನೆಯೊಕ್ಕಾಮಱು | ದಿನ ತರಣಿಯುದಯದೊಳು || ೩ ||

ಭಾವಜಶರಸಂಜನಿತಾಗ್ನಿಯಂಗವ | ನಾವರಿಸಲು ತತ್ಪುರವ
ಆ ವಸುಧಾಧಿಪನಿರದೆ ಹೊರಟುಬಂ | ದಾವನದೊಳು ಪೊಕ್ಕನಾಗ || ೪ ||

ಬಳಿಕತಿ ಶಿಶಿರೋಪಚಾರದಿಂದವೆ ಪೊಳ್ತು | ಗಳೆದಾನಂದದಿಂದ ಬಂದು
ಪೊಳಲ ಪುಗುವೆನೆಂದೆಂಬರಸನ ಮುಂದೆ | ಸುಳಿದುದು ಜಾತ್ಯಶ್ವಮೊಂದು || ೫ ||

ಬಿಸಿಗದಿರನ ತೇರೊಳಗೊಂದು ಕುದುರೆಯಾ | ಗಸದೊಳು ತಿರಿತರಲರಸಿ
ವಸುಧಾತಳಕವತರಿಸಿದುದೋಯೆಂ | ಬೆಸಕವಡೆದುದಾತುರಗ || ೬ ||

ಸ್ಥೂಲನಿತಂಬವಲ್ಪಸ್ರವ ಲಲಿತವಿ | ಶಾಲೋಱು ಶುಭಲಕ್ಷಣಾಂಗ
ಶಾಲೀವದನ ಕೋಮಲವಾಲಮೃದುರೋ | ಮಾಳಿಯೊಪ್ಪಿದುದಾಹಯಕೆ || ೭ ||

ಆ ಹಯರತ್ನವನರಸನೊಡನೆ ಬರ್ಪ | ವಾಹಕನೊರ್ವನು ಪಿಡಿದು
ಲೋಹವನಿಕ್ಕಿ ಹಲ್ಲಣಿಸಿ ಬೇಗದೊಳಾ | ರೋಹಣವನೆ ಮಾಡಿದನು || ೮ ||

ಇನ್ನೇವೊಗಳ್ವೆನದಱ ಕಾಲ್ಮನವನು | ಕೆನ್ನೆದುರುಸಿ ಮೆಯ್ಯಲುಗಿ
ಪನ್ನೆಮಿಡುಕಿ ಪವಮಾನಪಥಕೆ ಖುರ | ವನ್ನಿಡುವುದು ಬೇಗದೊಳು || ೯ ||

ಕಾಲೇಳುಗೆಯ ಲವಣಿಕೆ ಕೋಟಿಕೆಯ ಶುದ್ಧ | ಬಾಲದದರು ಮನದೆಸಕ
ಮೇಲು ಹಗುರದಿಂದವೆ ಹಯಮಾಭೂ | ಪಾಲನ ಮನವ ಮೆಚ್ಚಿಸಿತು || ೧೦ ||

ವಿತತತಿಷ್ಠತಮೆಸೆವುದುವಾಲಿರಂ | ಜಿತಮಧ್ಯ ಜವೆ ಶೋಭೆವಡೆದ
ಅತಿವೇಗವೆಂದೆಂಬ ಪಂಚಧಾರೆಗಳೊಂದು | ಮತವಱಿದೇಱಿದನಾಗ || ೧೧ ||

ಭಂಜಳಿ ಮುರಳಿ ಝಳಂಪಿ ವಾಹಿಣಿರೂಪು | ರಂಜಿಪ ರೇಖೆಯೆಂದೆಂಬ
ಮಂಜುಳಮೋದಷಡಂಗದೊಳಾಹಯ | ರಂಜನೆವೊಡೆದುದತ್ತಾಗ || ೧೨ ||

ಭರದೀತೆರದಿರಿವಾತಿ ಹುರಿಯಮೇ | ಲಿರದಿಟ್ಟ ಕುಂಬರಗೋಲ
ಪರದೆಸೆಗಜವೆಡೆಯಾದಶ್ವನ ಮೇಲೆ | ಪಿರಿದೊಪ್ಪಿದನು ವಾಹಕನು || ೧೩ ||

ಪಿರಿಹದಿ ನೂಂಕಿ ಮೊಗುಚುವಾಗಲಾಹಯ | ವೆರಡು ತಲೆಯ ಪಡೆದಂತೆ
ಪರಿದೊಪ್ಪಿತು ಪಲ್ಯಯನಪಕ್ಷದೊಳು ಬಂ | ಧುರಮಾದ ಭೇರುಂಡನಂತೆ || ೧೪ ||

ಬಳಿಕಿಂತುಟೇಱಿಳಿದ ತುರುಗದ ಮೈಯ್ಯ | ಲಿಳಿವ ಬಲ್ಬೆಮರೊಪ್ಪಿದುದು
ಜಲಧಿಯೊಳುದಿಸಿದುಚ್ಚೈಶ್ರವನಂಗದಿ | ನಿಳಿವ ನೀರೆಂಬ ಮಾಳ್ಕೆಯೊಳು || ೧೫ ||

ಈಯಂದದೊಳು ವೈಹಾಳಿ ಮಾಡಿದವಗೆ ಪ | ಸಾಯನವಿತ್ತಾನೃಪತಿ
ಒಯ್ಯಾರದಿಂ ತಾನೇಱುವೆನೆಂದು ಕ | ಟ್ಟಾಯತಮಾದನಾನೃಪತಿ || ೧೬ ||

ವಾಜಿಯ ಮೊಗವ ತಡವಿಯಂಕವ ಮೆಟ್ಟಿ | ಓಜೆಯಿಂದವೆ ಲಂಘಿಸಿದ
ರಾಜಾಧಿರಾಜಾನೊಪ್ಪಿದನಂದಿನ ರಾಜ | ರಾಜನೆಂದೆಂಬ ಮಾಳ್ಕೆಯೊಳು || ೧೭ ||

ಪಿಡಿದ ವಾಘೆಯದೆಡಗೈಯನೆ ಸಡಲಿಸಿ | ಮಡವೊತ್ತಿ ಕದಲಿಸಲಾಗ
ಕಡುಜವದಿಂ ಕೇಳಲತಿ ವೇಗದಿಂ ನಭ | ಕಡರ್ದುದಂದಿನ ಕೃತಕಾಶ್ವ || ೧೮ ||

ಮೃಗಿಗಂ ಮುಳುದಕ್ಕುದಸಿತತಿಯಾಗಿರ | ದೊಗೆದು ಱಟ್ಟೆಯ ಬಲದಿಂದ
ಗಗನಕ್ಕೆ ಪಾಱುವಂದಿನ ವಾಜಿಯೆಂಬಂತೆ | ನೆಗೆದುದಾಗಸಕಾ ತುರಗ || ೧೯ ||

ಖುರಪುಟಧೂಳಿ ಮುಸುಕಿ ನೃಪತಿಯನಂ | ಬರಕೆ ಕೊಂಡೇಳ್ವ ತುರಗ
ಭರದಿಂದೇಳ್ವ ಸುಟ್ಟುರೆಯಱಿದ ಗಂ | ಡೆರಲೆಯನನುಕರಿಸಿದುದು || ೨೦ ||

ತರುಶಾಖಾಗ್ರಂಬರವನಿಲಾಧ್ವಂ | ಬರಮಂಬರ ಸಿಂಧುವರ
ತರಣಿ ಶಶಾಂಕಂಬರಮಿಂದ್ರಲೋಕಂ | ಬರೆಗಮೆಯಿದುದಾ ತುರಗ || ೨೧ ||

ಅಂಬರಕಡರ್ದರಮಗನ ದಿಟ್ಟಿಗೆ ನೋಡ | ಲಿಂಬಾದುದು ಭೂತಳವು
ತುಂಬವಣ್ಣದಂಬರ ಪದಪಟದೊಳಗಿರ್ದ | ಜಂಬೂದ್ವೀಪವೆಂಬಂತೆ || ೨೨ ||

ಪಾಱುವ ದುಷ್ಟಾಶ್ವನ ನಟ್ಟನಡುವೆ | ನ್ನೇಱಿದ ಕುವರನ ಧೈರ್ಯ
ಜಾಱದೆ ಜಱಿಯದೆ ನೋಳ್ಪರ ಕಣ್ಣ | ಮೀಱಿ ಪರಿದ ಮತ್ತಿತ್ತ || ೨೩ ||

ಎತ್ತಣಮೊರೆ ನೃಪನ ನೀರೂಪಿನೊ | ಳೆತ್ತಿ ಜವನ ಸವಿವಾಯ್ಗೆ
ತುತ್ತ ಮಾಡಿತೊ ವಿಧಿಯೆಂದು ದುಃಖದೊಳಳ | ಲುತ್ತಿರ್ದುದಾ ಪುರಜನವು || ೨೪ ||

ತಳವಳಗೊಂಬ ಪೌರರು ಬಲುಬೇವಸ | ಗೊಳುವ ಬಂಧುಗಳು ಹವ್ವಳಿಸಿ
ಕಳವಳಿಸುವ ಕಾಂತೆಯರು ತೀವಿದುದಾ | ಪೊಳಲೊಳಗೆಲ್ಲಿ ನೋಡಿದರು || ೨೫ ||

ಕೋಳಾಹಳಮಾದುದು ತತ್ಪುರಮಲ್ಲಿ | ಗೋಳಿಟ್ಟಿತು ಪೌರಜನವು
ತಾಳಬಾರದ ದುಃಖದ ನೋವಿಂ ವಸು | ಪಾಲ ಮೂರ್ಛೆಯನೆಯ್ದಿದನು || ೨೬ ||

ಉಪದೇಶಿಗಳಾರ್ಯರು ಬಂಧುಗಳು ನೀತಿ | ನಿಪುಣರು ದಾಕ್ಷಿಣ್ಯವಿದರು
ಅಪಗತಧೈರ್ಯರನೆಯ್ದಿ ನೀತಿಯನಾಡಿ | ಯುಪಚರಿಸಿದರು ಮತ್ತವನ || ೨೭ ||

ಆ ವೇಳೆಯೊಳೊರ್ವ ಶಕುನಿಗನೈತಂ | ದಾ ವಸುಪಾಲನನೆಯ
ಭೂವಲ್ಲಭಗೆ ಮುಂದಪ್ಪ ಕಾರ್ಯಂಗಳ | ನೋವದೆ ಪೇಳ್ದನಿಂತೆಂದು || ೨೮ ||

ನಾಳೆಗಳೇಳಕೆ ನಾನಾ ಬಾಧೆಯ | ತಾಳಿ ನೃಪತಿ ದಿವ್ಯಮಪ್ಪ
ಬಾಲಕಿಯನು ಕೂಡಿ ಚಕ್ರರತ್ನವ ಕೊಂಡು | ಲೀಲೆಯಿಂದಿಲ್ಲಿಗೆಯ್ದುವನು || ೨೯ ||

ವಸುಧೆಯೊಳಿಟ್ಟೀಕರಸ್ಥಳ ಬೆಟ್ಟೆ | ಚ್ಛೆಸುಗೆ ತಪ್ಪಿದೊಡೆನ್ನವಚನ
ಪುಸಿಯದೆನುತ ಶಕುನಿಗ ಸಂತವಡಿಸಿದ | ವಸುಪಾಲನನು ಮತ್ತಿತ್ತ || ೩೦ ||

ತಡೆದು ನಿಲಿಸುವೊಡೆ ಹದನ ಕಾಣದೆ ಮೇಲೆ | ಪಿಡಿವೊಡಾಧಾರವಡೆಯದೆ
ಕಡುಗಲಿ ತನ್ನಾಪತ್ತಿಗೆ ನೆನೆಯೆಂದು | ನುಡಿದ ಯಕ್ಷನ ಚಿಂತಿಸಿದನು || ೩೧ ||

ನೆನೆಯಲೊಡನೆ ಭೂವರನ ಮನದ ಹೆಜ್ಜೆ | ತನಗೆ ಹೊಲಬುದೋಱಿ ಯಕ್ಷ
ಇನಿಸುಪೊತ್ತಿನೊಳೆಯ್ದಿ ಬರುತವೆ ಮುಂಗಾರ | ಘನನಾದದಂತೆ ಘರ್ಜಿಸಿದ || ೩೨ ||

ಬಿಡುಬಿಡು ಸುಕುಮಾರನ ಬಿಡಿದಿರ್ದೊಡೆ | ಕಡಿಕಂಡವ ಮಾಳ್ಪೆನೆಂದು
ಜಡಿದು ನುಡಿದ ಯಕ್ಷನ ನುಡಿಗೇಳುತ | ಕೆಡಹಿಯೋಡಿತು ಕೃತಕಾಶ್ವ || ೩೩ ||

ಪಡುವೆಟ್ಟ ತುದಿಯೇಱಿ ಪಗಲಬಲ್ಲಹನಿಂ | ಗಡಲತ್ತ ಬೀಳ್ವಮಾಳ್ಕೆಯೊಳು
ಕಡುಗಲಿಯಪ್ಪವನಿಪನಾಗಸದಿಂದ | ಪೊಡವಿಗೆ ಬೀಳ್ತರುತಿರ್ದ || ೩೪ ||

ಅಗಸದಿಂ ನುಚ್ಚುನುಱಿಯಪ್ಪಂತೆವೊ | ಲಾಗ ಬೀಳ್ತಪ್ಪವನಿಪನ
ಬೇಗದೊಳೆತ್ತಿ ಮನ್ನಿಸಿ ಯಕ್ಷಪತಿಯನು | ರಾಗದಿಂ ಮೆಯ್ದಡವಿದನು || ೩೫ ||

ತಾನಾತಂಗೆ ಮುಂದಪ್ಪ ಕಾರ್ಯಂಗಳ | ನೇ ನೆರೆಬಲ್ಲವನಾಗಿ
ಮಾನವೇಂದ್ರನನು ರತ್ನಾವರ್ತಮೆಂಬ ಮ | ಹಾನಗದಗ್ರಕೆಯ್ತಂದ || ೩೬ ||

ಅಂಬರದಿಂ ಸಗ್ಗಮವನಿಗೆ ಬೀಳ್ತಪ್ಪು | ದೆಂಬ ಶಂಕೆಯೊಳಂದದಕೆ
ಅಂಬುಜಭವನಿಟ್ಟ ಮಣಿಗಂಬಮೆನೆ ಕ | ಣ್ಗಿಂಬಾದುದಾ ರತ್ನಶಿಖರಿ || ೩೭ ||

ನಡೆವರೆಡನ ಕಾಣದೆ ಕೆಲಬಲವಪ್ಪ | ಉಡುಪತಿ ರವಿಯೊಳು ಮೇಘದ
ಅಡರ್ದ ಕಾಡುರಿ ಕಣ್ಗೆಸೆದಿರಲಾಗಿ | ಪಡಿಯಾದುದಾ ತ್ರಿಣಯನಿಗೆ || ೩೮ ||

ಪಳಿಕುಗಮ್ಮತಿ ಪಚ್ಚೆಯಱುನೀಲದ ಗವಿ | ಕುಲಿಶದೊಣೆ ಮಾಣಿಕದ
ಪಳಿಕ ಬೀಡಾರ ರನ್ನದ ಕೋಡುಂಗ | ಲ್ತೊಳಗಿಹವಾ ಶಿಖರಿಯೊಳು || ೩೯ ||

ಕಡುಬೆಳೆದಾ ಬೆಟ್ಟ ಕೋಡುಗಲ್ಲನೆ ಮುಟ್ಟಿ | ನಡೆವೆಡೆಯೊಳು ಚಂದಿರನ
ಪೊಡೆತಱಿಯಲ್ಕೆ ಪುಣ್ಣಕಲೆಯ ಕಂಡು | ನುಡಿವರೆಲ್ಲರು ಮೃಗವಿದೆಂದು || ೪೦ ||

ಗರುಡ ಗಂಧರ್ವ ಕಿನ್ನರ ಕಿಂಪುರುಷ ತುಂ | ಬುರ ವಿದ್ಯಾಧರ ಯಕ್ಷ
ಸುರ ಪನ್ನಗ ಜೋತಿಷ್ಯ ವಿಟವಿಟಿಯಿರ | ಲಿರಲೊಪ್ಪಿತಾ ಶಿಖರಿ || ೪೧ ||

ಮಧುಕರಮಾಗಿರಿವರದ ಲತಾಪುಷ್ಪ | ಮಧುವನುಂಡು ಝೇಂಕರಿಪ
ಮಧುಕರ ಶ್ರುತಿಗೂಡಿಪಾಡುವ ಕಿನ್ನರ | ವಧುಗಳೊಪ್ಪಿದರಂದಲ್ಲಿ || ೪೨ ||

ಪಳಚ್ಚನೆಸವ ಬಾನವರು ಕೆನ್ನರೆಯಮೇಲೆ | ಹೊಳೆದು ಹರಿವ ತಿಳಿನೀರ
ಮುಳುಗಲೆಣಿಪರು ಬಾಂದೊಱೆಗೆತ್ತ ಸಗ್ಗ | ದೆಳೆವೆಣ್ಗಳಾ ಶಿಕರಿಯೊಳು || ೪೩ ||

ಮುಳಿದಿನಿಯರು ಗವಿಯೊಳು ಪೊಕ್ಕು ತೋರಿಯ | ಶಿಲೆಯ ಬಾಗಿಲಿಗಿಡೆ ಕಂಡು
ಬಳಿವಂದು ಗುಂಡಾಕ್ರೀಯ ಪಾಡಿ ಗಂಧರ್ವ | ಲಲನೆಯರೊಳಪೊಗುತಿರಲು || ೪೪ ||

ಆ ರತ್ನಾವರ್ತಾಚಲದಗ್ರದೊಳು | ರಾರಾಜಿಪನಾ ಯಕ್ಷ
ಕಾರಣ ಮುಂದೀತಗುಂಟೆಂದಿರಿಸಿ ಮ | ತ್ತಾರೈದು ನುಡಿದನಿಂತೆಂದು || ೪೫ ||

ನಿನಗೊಂದ ಪಲವು ಚಿತ್ರಾಂಬರವಿದ್ಯೆಯ | ನನುನಯದಿಂದೀವೆನದನು
ಅನುಕರಿಸೆಂದದಱೊಂದುನ್ನತಿಕೆಯ | ಮನಮೊಲಿದೊರೆದನಿಂತೆಂದು || ೪೬ ||

ಆವರಿಸಿಯೆ ನಿಶ್ಚೈಯಿಸಿದ ವಸ್ತ್ರವ | ನೀವುದೀ ವಿದ್ಯವೆಂದೆನುತ
ಭೂವಲ್ಲಭೆಗೆ ಕೊಟ್ಟು ಮತ್ತಾ | ದೇವನದೃಶ್ಯನಾದನಿತ್ತ || ೪೭ ||

ನಡುಬಾನೇಱಿದುಷ್ಣಾ ೦ಶುಮಂಡಲದಲ್ಲಿ | ಕಡುಸೊಗಸಿತು ಗಿರಿಯೆಂಬ
ನಿಡುಗಂಬದ ಕೊನೆಯೊಳು ಹೊತ್ತಿಸಿದ ಹೆ | ಜ್ಜೊಡರೆಂದೆಂಬ ಮಾಳ್ಕೆಯೊಳು || ೪೮ ||

ಅಂಬರಮೆಂಬವನಿಯ ಹೊತ್ತ ಭೂದರ | ಮೆಂಬ ಶೇಷನ ಮಸ್ತಕದ
ಕೆಂಬೆರಲೆನೆ ನಡುಬೊತ್ತಿನೊಳೆಸೆದುದು | ಬಿಂಬಮಂಭೋರುಹಸಖನ || ೪೯ ||

ತೊಳಗುವ ವರ ರತ್ನಾವರ್ತಪರ್ವತದಗ್ರ | ದೊಳು ಕಣ್ಗೊಳಿಪಿನಬಿಂಬ
ಥಳಥಳಿಸಿತು ಗೋಪುರದುಪರಿಮದೊಳು | ಪೊಳೆವ ಪೊಂಗಳಸಮೆಂಬಂತೆ || ೫೦ ||

ಬೆಂಗದಿರನನುರಿವಿನ ಕಾಂತಶಿಲೆಯಗ್ನಿ | ಸಿಂಗಿವಾವಿನ ಪಜ್ಜೆಗಳಾ
ಜಂಗುಳಿಮರಗೊಂಬಿನೊತ್ತುರಿಯಿಂದುಱು | ಲಿಂಗಂಬೋಲಾದುದಾ ಶಿಖರಿ || ೫೧ ||

ಒಲೆಗಲ್ಲಾದುದು ಗಿರಿ ಮೆಟ್ಟಿದ ನೆಲ | ಸಲೆ ಕಾದ ಕಾವಲಿಯಾಯ್ತು
ಜಲಜಾಕರಮುರಿ ನೀರ್ಗೊಡನಾದವು | ಬಲುಬಿಸಿಲ್ವಗಲಕಾಲದೊಳು || ೫೨ ||

ಬಾಡುವ ಮೊಗ ಬಸವಳಿದಂಗಹೋಳಿಗೆ | ಮೂಡುವ ಕಾಲ್ಬೀಸುವಾಂತು
ತೀಡುವ ಸುಯ್ಲುಬ್ಬೆಗೊಂಡೊಡಲಿಂದವೆ | ಪಾಡಳಿದನು ಸುಕುಮಾರ || ೫೩ ||

ಒಡಲಾಂತ ತನುವೀತನ ನೆವದಿಂದೆಂದು | ಕಡುಗಳಲ್ದಾಕಾಶಮೆಂಬ
ಮೃಡನುರಿಗಣ್ಣ ತೆಱೆದವೊಲು ನಡುನೇಸ | ಱಡಸಿದುದಂದು ಬಲ್ಬಿಸುಪ || ೫೪ ||

ಮಿಸುನಿಗಱುವ ಕಂಡರಸಿಯಂಗಜಶಿಲ್ಪಿ | ಮಿಸುನಿಬಣ್ಣವನಿಡಲೆಂದು
ಪೊಸೆದಗ್ನಿಯಂ ಕಾಸಿ ಬಿಸಿಯೇಱುವವೊಲು ಬಲು | ಬಿಸಿಲಳಲುರಿದುದು ಭೂವರನ || ೫೫ ||

ಗಿರಿಶಿಖರವನೇಱಿ ಬಳಲಿದನೀಪುಣ್ಯ | ಚರಿತನೆಂದೆಂಬ ಸಿಂಧು
ಕರುಣಿಸಿ ಮೈತಡವಿದಳೆನೆ ಬೆಮರ್ವನಿ | ಸುರಿತಂದವಾ ಭೂವರಗೆ || ೫೬ ||

ಬಳಲಿಕೆದೋಱಿ ಬಂಬಲುಬಾಡಿ ಮುಂದೊಂದು | ಪಳುಕಿನ ಕೋಡುಗಲ್ಲ ಕಂಡು
ತಳಱೆಯದಱ ತಣ್ಣೆಳಲೊಳಗೊಱಗಲೆಂ | ದೆಳಸಿದನಾ ನೃಪವರನು || ೫೭ ||

ನೆಲದೊಳಗೊಱಗುವುದುಚಿತಮಲ್ಲೆಂದು ಭೂ | ತಳಪತಿ ಬಗೆದಾ ಯಕ್ಷ
ಒಲಿದು ಮುನ್ನಿತ್ತ ವಿದ್ಯೆಯೊಳೊಂದು ರಕ್ತಗಂ | ಬಳವ ನಿರ್ಮಿಸಿದನಾಕ್ಷಣದಿ || ೫೮ ||

ಆಯತಮಾಗಿರ್ದಾ ಕಂಬಳವ ಕಂ | ಡಾಯಕ್ಷನುಸುರ್ದಂದದೊಳು
ಆಯಿತೆನುತ ಮತ್ತಾ ಕಲ್ಲಡಿಯೊಳ | ಗೊಯ್ಯಾರದಿಂ ಪಾಸಿದನು || ೫೯ ||

ನೆಱೆ ಕಾಯ್ವ ಬಲ್ವಿಸಿಲೊಳು ಕೋಮಲತನು | ತಱತಱನಾಗಲಂದಲ್ಲಿ
ಪಱಿಪಡಿಸುವೆನೆನುತವೆಯೊಂದು ಜಾವವ | ನೊಱಗಿ ಕಳೆದನಾ ನೃಪತಿ || ೬೦ ||

ನಿಡುಬೊತ್ತಿನ ಬಿಸಿಲೊಳು ನುಣ್ಮಯ್ಯನ | ನಡಸಿ ಪತ್ತಿದ ಜಡತೆಯನು
ಕಡೆವಗಲಿನ ತಂಪು ವರಮೆಯ್ಯೊಱಗಿ | ರ್ದಡಗಿಸಿದನು ಭೂಪಾಲ || ೬೧ ||

ಅಲಸಿಕೆ ಹಿಂಗೆ ಮೈಮುರಿದೆದ್ದಾಕಂ | ಬಳದಿಂದವೇನಿರುಳ
ನೆಲೆಗಾಣಲೆಂದು ನಾಲ್ದೆಸೆಯ ನೋಡಿದನಾ | ಇಳೆಯಾಣ್ಮನತಿಮುದೆದಿಂದ || ೬೨ ||

ಅಲ್ಲಿಗನತಿದೂರದೊಳು ಶಶಿಕಾಂತದ | ಕಲ್ಲಜಜ್ಜರಿಯೊಳುಜ್ವಲಿಪ
ಝಲ್ಲಿಸಿಪರಿವ ತಣ್ಣೀರ ಕಾಲುವೆಗಂಡು | ನಿಲ್ಲದೆಯ್ದಿದನಾ ನೃಪತಿ || ೬೩ ||

ಪರಿತಪ್ಪಾನೀರ್ಗಳ ಮೊಗೆಮೊಗೆದಾ | ಕರಮೆಂಬ ಕಮಲಗಳಿಂದ
ಸಿರಿಮೊಗಮೆಂಬ ಶಶಿಯ ಕರ್ಚಿಸಿದನಾ | ಅರಸುತನದೊಳವನಿಪನು  || ೬೪ ||

ಸಿರಿಗಂಪನರೆದು ಕತ್ತುರಿಯೊಯ್ವ ಕುಂಕುಮ | ದರಲ ತಿಱಿದು ಕರ್ಪೂರದ
ಪರಲೆತ್ತಿಪನಿದಿರಾಂತು ಪರುಷದೊಳ | ಗರೆದು ಪೂಸಿದ ತನ್ನ ಮೆಯ್ಗೆ || ೬೫ |

ಹಳಿಹಳಿಯೇಳ್ವ ಮುಗಿಲ ಹೊರೆಯೊಳು ಕೂಡು | ವೆಳೆವಾಂಬಟ್ಟೆಗಾದರಲ
ಲಲಿತಾಂಗ ಸೌರುಭ್ಯವ ತಲೆವೊಱೆವೊತ್ತು | ಸುಳಿವಗಾಳಿಗೆ ಮೈಯ್ಯನಿತ್ತ  || ೬೬ ||

ಗಿರಿಯನಡಱಿಮೇಲ್ನೆಲೆಯನೆಯ್ದಿದ ಭೂ | ವರನುದಯಾದ್ರಿಯಗ್ರದೊಳು
ಅರಿನೃಪಕುಲತಿಮಿರಾಪಹರಣಬಾಲ | ತರಣಿಯಂದದವೊಲೊಪ್ಪಿದನು  || ೬೭ ||

ಬಿನದದೊಳೊಂದು ಮಾಣಿಕದ ಕೋಡುಂಗಲ್ಲ | ಕೊನೆಯೇಱುತಾಗಿರಿವರದ
ಅನುಗಾಣಲೆಂದು ನಾಲ್ದೆಸೆಯನಾಲಿಸಿ ನೋಡು | ವನಿತಱೊಳಚ್ಚರಿಗಂಡ  || ೬೮ ||

ನೆಲೆವಣ್ಣಾ ಗಿರಿಯೆಂಬ ಮಸ್ತಕದೊಳ | ದೊಲಿದಿಟ್ಟ ಮಾಣಿಕಮಕುಟ
ಜ್ವಲಿಸುವವೊಲು ಮಣಿಯಗೋಪರುವೊಂದು | ನೆಲಸಿದುದತಿ ಶೋಭೆಯಿಂದ  || ೬೯ ||

ಏಕಾರಣಮೀ ಮಣಿಮಾಡಮಿರ್ದಪು | ದೀ ಕುಧರಾಗ್ರದೊಳೆಂದು
ಭೂಕಾಂತನು ವಿಸ್ಮಯಮಾನಸನಾಗು | ತಾಕಡೆಗಂದಡಱಿದನು  || ೭೦ ||

ಬರುಬರುತ ಕಂಡನು ಗೋಪುರದೊಳಾ | ತುರದಿಂ ನಿಂದು ನಿಟ್ಟಿಸುವ
ಹರೆಯಗಳೆದ ಮುದುಕಿಯನೋರ್ವಳನಾ | ಧರಣೀಶನತಿಮುದದಿಂದ  || ೭೧ ||

ನಡಗುವ ತಲೆ ನರೆಗೂದಲಳ್ಳಾಡುವ | ನಿಡುವಲ್ಲುಳಿದಬೆನ್ನೊಡಲು
ಬಡಿವ ಬಲ್ಮೊಲೆ ಜೊಲ್ಲುವಾಯ್ದೆರೆ ಮೊಗದಿಂ | ಕಡು ಸೊಗಸಿದಳಾ ಜರತಿ  || ೭೨ ||

ದಟ್ಟದ ಸೀರೆ ಬಟ್ಟಿನ ಬಟ್ಟುಂಗುರ | ಇಟ್ಟಾ ಕಿವಿಯ ಕಲ್ಲೊಲೆ
ಕಟ್ಟಿದ ಕಳಿಯಡಕೆಯ ಚೀರಸರಪಣಿ | ತೊಟ್ಟ ಜರತಿಯೊಪ್ಪಿದಳು  || ೭೩ ||

ನರಗೋಚರ ಮೆಲ್ಲಡಿಗಿರಿಯೊಳಗಿರ್ಪ | ಕರುಮಾಡದಗ್ರಶಾಲೆಯೊಳು
ಹರೆಯಗಳೆದ ಹೆಣ್ಣಿಹುದು ಚೋದ್ಯಮೆನು | ತರಸನಾಯೆಡೆಗೆಯ್ದಿದನು  || ೭೪ ||

ನಡೆದುದು ಲಾವಣ್ಯದ ಕರು ಚೈತನ್ಯ | ವಡೆದುದು ಚಲುವಿನ ಚಿತ್ರ
ಒಡಲಾಂತುದು ಮೋಹನಮೂರ್ತಿಯೆಂದಾ | ನಡೆನೋಡಿದಳಂದವನ || ೭೫ ||

ಆ ವೃದ್ಧತೆಯ ಬಿಭತ್ಸಾಕಾರ ಮ | ಹೀವಲ್ಲಭನ ಕಾಣುತವೆ
ಆ ವಹಿಲದೊಳು ಹರಿದು ನವಯವ್ವನ | ತೀವಿದುದತಿವೇಗದೊಳು  || ೭೬ ||

ಕುವರನ ಮೆಯ್ಯ ಲಾವಣ್ಯಾಮೃತವ ತುಱು | ಗೆವೆಕಣ್ಗಳಕರದಿಂದ
ಸವಿದು ಜರತ್ವಂಬಡೆದಂತಾವೃದ್ಧೆ | ಯುವತಿ ಯವ್ವನವೇಱಿದಳು  || ೭೭ ||

ಅಸಿಯಳ ಕೃತಕ ರೂಪೀ ಕುವರನ ಕಂ | ಡೆಸಗಿದ ಕಾಮಾಗ್ನಿಯೆಂದು
ಬಿಸಿಗಂಡ ಪೊನ್ನಪುತ್ಥಳಿಯ ಪೊಱೆದ ಪಾದ | ರಸವಾರಿದ ತೆರನಾಯ್ತು  || ೭೮ ||

ಹೆರೆಯನುಗಿದ ಮದನೋರಗನೊಱಗಿ | ರ್ಕರಲಂಬಿನ ಹೊನ್ನಸುರಗಿ
ಕರಮೆಸೆವಂತೆ ವೃದ್ಧತೆ ಹಿಂಗಿ ಹೊಸತಪ್ಪ | ಹರೆಯವೇಱಿದಳಾ ಸುದತಿ  || ೭೯ ||

ಆ ನವರತ್ನರಚಿತಹರ್ಮ್ಯದುಪ್ಪರಿಯೊ | ಳಾನೃಪತಿಯ ನಿಟ್ಟಿಸುತ
ಮಾನಿನಿ ಕಣ್ಗೆಸೆದಳು ಚಂದ್ರಲೇಖೆ ತ | ಳ್ತಾ ನಭದೊಳಗೆಸೆವಂತೆ  || ೮೦ ||

ಶ್ರೀಮುಖಚಂದ್ರನುತ್ತುಂಗಪಯೋಧರ | ಜೀಮೂತಮಧ್ಯಮಱಾಳ
ಕೋಮಲನಖವುಡವೆನಲೊಪ್ಪಿದಳು ತಾ | ರಾಮಾರ್ಗಲಕ್ಷ್ಮಿಯಂತವಳು || ೮೧ ||

ಅಡಿಯಂಚೆಯೊಲೆಯೆಣೆವಕ್ಕಿಯೊಳ್ನುಡಿಗಳಿ | ಕುಡಿತೆಗಣ್ಗಳೊಳ್ಜನ್ನವಕ್ಕಿ
ಮುಡಿಸೋಗೆ ಕುರುಳಳಿಯೆನೆ ಬಿಜ್ಜಾಧರೆ | ಪಡೆದಳು ಖಗಸಂಭವತೆಯ  || ೮೨ ||

ಕುರುಳೀಂದ್ರನೀಲಕುಲಿಶ ದಂತ ಚಂದುಟಿ | ಕುರುವಿಂದ ಮೆಯ್ಯಿ ಪುಷ್ಯರಾಗ
ಚರಣವಿದ್ರುಮನಖವೈಡೂರ್ಯಮೆನೆ ರನ್ನ | ಗರುವಿನಂತೆಸೆದಳಾರಮಣಿ  || ೮೩ ||

ಎಡೆವಿಡದಂಗಭವನ ಕೈಪಿಡಿಯೊಳ | ಗಡಗಿ ಬೆಳೆದ ಕಾರಣದಿ
ಕಡು ಸಣ್ಣನಾದುದೆಂದೆನಲುಂಗುರವಿಡಿ | ನಡುವೊಪ್ಪಿತಾ ಕೋಮಲೆಗೆ  || ೮೪ ||

ನೆಲದೊಳಗಿರ್ದ ನಿಕ್ಷೇಪದೆಡೆಗೆಡಿಪ | ಕಳಿಕೆಯೆಱಗುವಂದದೊಳು
ಲಲಿತಾಂಗನಿರ್ದೆಡೆಗಾಹರ್ಮ್ಯತಳದಿಂ | ಲಲನೆಯಿಳಿದು ಬಂದಳಾಗ  || ೮೫ ||

ವಳಿವೀಚಿ ವದನ ವಾರಿಜಜಲ ಲಾವಣ್ಯ | ಸುಳಿನಾಭಿ ಕಣ್ಮೀನಾಗೆ
ಲಲನೆಯುಪ್ಪರಿಕೆಯನಿಳಿದಳು ಶಂಭುವ | ತಲೆಯನಿಳಿವ ಗಂಗೆಯಂತೆ  || ೮೬ ||

ವಿಲಸದಂಭೋಜದಳಾಂಬಕವನು ತೆಱೆ | ದಲಘುಪ್ರಿಯ ತೆಱದಿಂದ
ಲಲನೆಮಣಿ ನೋಡಿದಳಾ ಭೂವರ | ಕುಲಮಂಡಲಭಾಸ್ಕರನ  || ೮೭ ||

ಮಂಡಿತ ಸಕಲ ಧರಾಮಂಡನ ಪುಷ್ಪ | ಖಾಂಡಾಸನ ಚಂಡತೇಜ
ಕಂಡನಾತುರದೊಳಖಂಡಕಲಾಭೃಂ | ನ್ಮಡಲ ಲಲಿತಾನನೆಯ  || ೮೮ ||

ನಂದನವನ ವನಿತೆಯನು ನಿರೀಕ್ಷಿಸಿ | ಬಂದ ಬಸಂತನಂದದೊಳು
ಕುಂದಣವಾಳೆದೊಡೆಯ ಚಂದಳಿರ್ಗಯ್ಯ | ಇಂದುಮುಖಿಯ ಕಂಡನವನು  || ೮೯ ||

ಅಲಘುಪಯೋಧರೆಯಲರ್ಗಣ್ಣಳ್ಕುಡಿಮಿಂಚಳಿ | ಕಾಳಿಯ ಕಾರ್ಮುಗಿಲ
ಲಲಿತಭೂಷಣದಿಂದ್ರಧನುಗಾಣುತವನಕ್ಷಿ | ನಲಿದವು ಚಾತಕದಂತೆ  || ೯೦ ||

ಕುಸುಮಗಂಧಿಯ ಕುಸುಮದಾಕ್ಷಿಯ ಬಂದುಗೆ | ಎಸಳ್ವಾಯ್ದೆಱೆಯ ಕೋಮಲೆಯ
ಮಿಸುನಿದಾಮರೆ ಮೊಗ್ಗೆಮೂಲೆಯೊಳವನ ದಿಟ್ಟಿ | ಹಸುಳೆದುಂಬಿಯೋಲೆಱಗಿದವು || ೯೧ ||

ಬಾಲಮೃಗಾಕ್ಷಿಯಮೃತನಿಭವಾಣಿಯ | ಆಲವಣ್ದುಟಿಯ ಕೋಮಲೆಯ
ಆ ಲಲಿತೇಂದುಮುಖದೊಳು ಚಕೋರಿಯ | ವೋಲೆಱಗಿದವವನಕ್ಷಿ  || ೯೨ ||

ಲಲಿತರೂಪನ ನೇತ್ರಪುತ್ರಿಕೆಯಾಮುಗ್ಧೆ | ಯಲಘುಕುಚಾದ್ರಿಯನೇಱೆ
ಬಳಲಿ ಬಾಸೆಯ ಬಟ್ಟೆಗಿಳಿದೆಯ್ದಿ ಪೊಕ್ಕುಳು | ಗೊಳದೊಳು ನೀರಾಡಿದವು  || ೯೩ ||

ತರುಣಿಯ ಕೈಯಕಂಕಣದ ರವವ ಕೇಳಿ | ಮರವಟ್ಟಾ ನೃಪವರನು
ಸ್ಮರನೆಂಬ ಬೇಂಟೆಗಾರನ ಗಂಟೆಯುಲಿಗೇಳ್ದ | ತರುಣಹರಿಣಮೆಂಬಂತೆ  || ೯೪ ||

ಆ ಲಲಿತಾಂಗಿಯಂಗವ ಸೋಂಕಿದ ತಂ | ಗಾಳಿ ಮೆಲ್ಲನೆ ತೀಡುತಿರಲು
ಲೀಲೆಯಿಂದಾಘ್ರಾಣಿಸಿದನು ಮದನ | ವ್ಯಾಲಿಯೆಂಬಂತಾನೃಪತಿ  || ೯೫ ||

ನೀರಾಡುವ ಮೊಗ ನಿಡುಸುಯ್ವ ನಾಸಿಕ | ತೇರೈಸುವ ತಳ್ಳಂಕ
ಧೀರತ್ವವಡಗಿದೆರ್ದೆಯೊಪ್ಪಿತವಗಾ | ನೀರಜಮುಖಿಯನು ಕಾಣುತವೆ  || ೯೬ ||

ಲಲಿತಲತಾಂಗಿಯ ಕೈಕಾಲ್ಚೆಂದುಟಿ | ದಳದುಳಿಯೆನೆ ಮರೆಗೊಂಡು
ಇಳೆಯಾಣ್ಮನ ಮನವೆಂಬ ಮೃಗವನಾ | ಜಲಜಾಸ್ತ್ರನು ಮುನಿದೆಚ್ಚ || ೯೭ ||

ಧರೆಗೆ ನೀ ಪಿರಿದಾದೆನ್ನರೂಪವನು ಮ | ಚ್ಚರದಿ ಗೆಲ್ದೆಯಲಾಯೆಂದು
ಪಿರಿದು ಸಕೋಪದೊಳರಸುಮಗನ ಕಾವ | ನರಲಸರಳ ತೆಗೆದೆಚ್ಚ  || ೯೮ ||

ಆ ನರನಾಥಚಂದ್ರನ ಘನತೇಜೋ | ಭಾನುವ ರಿಪುಗಜಹರಿಯ
ಮಾನಿನೀನಿವಹಾಂಗಜಾತನನಾಬಾಲೆ | ತಾನಂದು ನಡೆನೋಡಿದಳು  || ೯೯ ||

ಮನುಜಮಂಧಾತನ ಮಧುರಾಕಾರನ | ವನಿತೆಯ ನಿರ್ಮಲಮಪ್ಪ
ಮನಮೆಂಬ ಕೈಗನ್ನಡಿಯೊಳಹೊಱಗೆನಿಂ | ದನುರಾಗದಿಂದೊಪ್ಪಿದನು  || ೧೦೦ ||

ಲಲನೆಯ ನಡೆನೋಟದೊಳಾ ನೃಪಕುಲ | ತಿಲಕನ ನಿರ್ಮಲಮಪ್ಪ
ಪುಳಕಸಮಿತಿ ಜುಮ್ಮುಜುಮ್ಮೆನುತೇಳ್ದವು | ತಿಲಕದೊಳರಲೇಱುವಂತೆ  || ೧೦೧ ||

ಈ ಚಲ್ವಿಕೆಯಂತಪ್ಪ ನೃಪರು ಸಚ | ರಾಚರೋರ್ವಿಯೊಳಿಲ್ಲವೆಂದು
ಲೋಚನಪುತ್ರಿಕೆಗಳು ಕರ್ಣಕೆ ಪೇಳ್ವವೋ | ಲಾಚಂದ್ರವದನೆಗೊಪ್ಪಿದವು  || ೧೦೨ ||

ಮಕರಧ್ವಜನಿಭರೂಪನ ಕಾಣುತ | ಚಕಿತಮೃಗಾಕ್ಷಿಯಂಗದೊಳು
ಪ್ರಕಟಿಸಿದವು ಪರಿವಿಡಿಯಿಂದವೆ ಸಾ | ತ್ವಿಕಮೆಂಟುತೆಱನಾಗಿ  || ೧೦೩ ||

ಬಂಧನಮಿರ್ದಾ ತಾಣಕೆ ಭೂಮಿಸತಿ | ಯಂದು ನಯನಪುತ್ರಿಕೆಗಳು
ತಂದು ಹರುಷದೊಳರ್ಘ್ಯವನೀವಂತಾ | ನಂದಾಶ್ರು ಸುರಿತಂದವವಳ್ಗೆ  || ೧೦೪ ||

ಇನ್ನಿವನಿಂದಂಗಭವನ ಹುಯ್ಯಲು ಬಂ | ದೆನ್ನ ನೋಯಿಸಿ ಕೊಲ್ವುದೆಂದು
ಉನ್ನತಮಪ್ಪ ಭೀತಿಯೊಳು ನಡುಗುವಂತೆ | ಕನ್ನೆಯ ತನು ಕಂಪಿಸಿದುದು  || ೧೦೫ ||

ಸುದತಿಗವನ ಕಾಣುತ ಮೆಯ್ಯ ಪುಳಕವು | ಣ್ಮಿದವು ಸನ್ಮೋಹನರಸದ
ಹದನೀರಿಂ ಬೇಟದ ಬೀಜ ಧರೆಗೆ ಜುಮ್ಮ | ನುದಯಿಸಿತೆಂಬ ಮಾಳ್ಕೆಯೊಳು  || ೧೦೬ ||

ರಾಜೇಂದ್ರಚೂಡಾರತ್ನವ ಕಾಣುತ | ರಾಜಮುಖಿಗೆ ಕಿಱುಬೆಮರು
ರಾಜಿಸಿದವು ರೋಮರೋಮಕೂಪಗಳೊಳು | ಸೂಜಿ ಸೇರಿದ ಮುತ್ತಿನಂತೆ  || ೧೦೭ ||

ಸ್ಮರನರಸಿಯರೂಪ ತಾ ಕಳ್ದುದಿಲ್ಲೆಂ | ದರಸನ ಮುಂದಲರ್ಗಣೆಯ
ಭರದಿನುಸುಳುವಾಗ ಸೋಲ್ತು ನಿಂದಂತಾ | ತರುಣಿಯಾಸ್ಯ ವಿವರ್ಣವಾಯ್ತು  || ೧೦೮ ||

ಸೂತ್ರ ಹರಿದ ಕಾವನ ಕೈಯ ಜಂತ್ರದ | ಪುತ್ರಿಕೆ ನಿಂದಮಾಳ್ಕೆಯೊಳು
ಧಾತ್ರೀಪತಿಯ ಮೊಗವ ಕಾಣುತಾಮೃಗ | ನೇತ್ರನಿತಂಬಿನ ನಿಂದಳಾಗ  || ೧೦೯ ||

ಸರಸ್ವತಿ ಹಿಡಿದ ವೀಣೆಯ ತಂತಿ ಸಡಿಲೆ | ಸ್ವರ ಪಲ್ಲಟಿಸುವಂದದೊಳು
ಅರಸನ ಕಂಡು ಬಿಗುಹು ಸಡಿಲಲ್ಕಾ | ಸ್ವರಭೇದಮಾದುದಾ ಸತಿಗೆ  || ೧೧೦ ||

ರಸಿಕನಂಗದೊಳು ತೀವಿದ ನವಲಾವಣ್ಯ | ರಸವುಂಡು ಸೊಕ್ಕೇಱಿದುದೊ
ಕುಸುಮಶರದ ಘಾಯ ಸೊರಗಿದುದೋಯೆನೆ | ಮುಸುಕಿತು ಮೂರ್ಛೆ ಕೋಮಲೆಗೆ || ೧೧೧ ||

ಅನ್ನೆಗಮಾರತ್ನಗೋಪುರದೆಣ್ದೆಸೆ | ಗನ್ನೆಯರವಳಿದೋಳಂತೆ
ಹೊನ್ನಬಣ್ಣದ ಹದಿನಾಱೆಳೆಲತೆಗಳು | ಚೆನ್ನಾಗಿ ಬೆಳೆದೊಪ್ಪಿದವು || ೧೧೨ ||

ಕರಮೆಸೆದವು ಕೆಂದಳಿರಾಲತೆಯೊಳು | ವಿರಹಿಗಳೆದೆಯ ನೆಟ್ಟುರ್ಚಿ
ಅರುಣಾಂಬು ಪೊರೆದುಪೊಳೆವ ಪುಷ್ಪಧನ್ವನ | ಶರದಲಗಿನ ತೆಱನಾಗಿ || ೧೧೩ ||

ಅಂಗಜನೆಂಬ ದೀವರ ಮೋಹಿಗಳ ದಿಟ್ಟಿ | ಮೀಂಗಳ ಸೆಳೆಯಲು ಪಿಡಿದ
ಜೊಂಗಾಣದ ಕಡ್ಡಿಯೊಯೆನಲಾಲತೆಗಳು | ದಾಂಗುಡಿಗಳಿಂದೊಪ್ಪಿದವು || ೧೧೪ ||

ಮತ್ತಾ ಮಿಸುಪ ವಲ್ಲರಿಯೊಳು ತುಱುಗಿ ಚೆ | ಲ್ವೆತ್ತವು ಪೂದಡವಿಗಳು
ಚಿತ್ತಸಂಭವನಿಕ್ಷುಚಾಪದೊಳೊಪ್ಪುವ | ಮುತ್ತಿನ ಕುಚ್ಚಿನಂದದೊಳು || ೧೧೫ ||

ಮದ ಮಧುಕರ ಪಕ್ಷಪಾತದಿ ಪೂವಿಂ | ದುದುರ್ವ ಪರಾಗಮೊಪ್ಪಿದುದು
ಮದನಾಂಜನಚೋರ ಮೋಹಿಜನದಮೇಲೆ | ಕೆದರ್ವ ರಕ್ಕಿನ ಬೂದಿಯಂತೆ || ೧೧೬ ||

ಸುರುಚಿರಮಪ್ಪ ಲತೆಯ ಲತಾಂಮಂ | ಜರಿಯೊಳಿಪ್ಪಳಿಗಳೊಪ್ಪಿದವು
ಅರಲಂಬನ ಹೊನ್ನ ಜಾಳಿಗೆಯೊಳಗಿ | ಟ್ಟರಗಿನಮುದ್ರೆಯಂದದೊಳು || ೧೧೭ ||

ಆ ಲತೆಗಳು ಹದಿನಾಱುರೆ ವಿಕ್ರಮ | ಶಾಲಿಯ ಮೊಗವ ಕಾಣುತವೆ
ಲೀಲೆಯಿಂದವೆ ತಮ್ಮ ರೂಪನುಳಿದು ದಿವ್ಯ | ಬಾಲೆಯರಾಗಿವೊಪ್ಪದವು || ೧೧೮ ||

ವಿಧುಮಂಡಲದೊಡಲೊಳಿಪ್ಪಮೃತದ | ಪದಿನಾಱು ಕಲೆಗಳ ತೆಗೆದು
ಮುದದಿಂದವೆ ಲೆಪ್ಪವಿಟ್ಟಂದದೊಳಾ | ಮಧುರಾಕ್ಷಿಯರೊಪ್ಪದರು || ೧೧೯ ||

ಪದಿನಾಱು ಸಗ್ಗವಾಳ್ವರು ತಮ್ಮೊಳೊರ್ವ | ಸುದತೀರತ್ನಂಗಳನು
ಚದುರೆಯರೋಲೈಸಲೆಂದಟ್ಟಿದವೋಲಾ | ಮದಯವ್ವನೆಯರೊಪ್ಪಿದರು || ೧೨೦ ||

ತೊಂಡೆವಣ್ದುಟಿ ತುಱುಗೆವೆಗಣ್ಗೆಮೊಗ | ಬಂಡುಣಿಗುರುಳು ತೆಳ್ವಸಿಱ
ಗಂಡುಗೋಗಿಲೆಯಿಂಚರಮೊಪ್ಪಿದೊವಿಂದು | ಮಂಡಲಮುಖಿಯಾಳಿಯರಿಗೆ || ೧೨೧ ||

ಆ ವನಜಾನನೆಯರ ಮಧ್ಯದೊಳಗೋರ್ವ | ಭಾವಕಿಯೆಂದೆಂಬ ಕೆಳದಿ
ಆ ವಹಿಲದೊಳು ಮೂರ್ಛೆಯ ಮುಂ ಪಡೆದ ಜ | ಯಾವತಿಯೆಡೆಗೈದಿದಳು || ೧೨೨ ||

ಸುರಭಿಕುಸುಮಸಾರ ಶೀತಳೋದಕ ಮಲ | ಯರುಹಾಂಬು ಘನಸಾರದಿಂದ
ಅರಲಬಿಜ್ಜಣಿಗೆಯನಿಟ್ಟಾಭಾವಕಿ | ತರುಣಿಯನುಪಚರಿಸಿದಳು || ೧೨೩ ||

ಬಾಲೆ ಕಣ್ದೆಱೆಯಲೆಂದಾಸಖಿಯೆಯ್ತಂ | ದಾಲಿ ನೀರಿಡೆ ರತಿದೇವಿ
ಲೀಲೆಯಿಂ ಪೊಸ ಪುತ್ಥಳಿ ತಿರ್ದಿ ನಯನೋ | ನ್ಮೀಲನ ಮಾಡಿದಂತಾಯ್ತು || ೧೨೪ ||

ಲಲನೆ ನೋಡಿದೊಡಾಕಣ್ಣ ಮೂವಣ್ಣದ | ಪೊಳೆಪವನಂಗವನಡಱೆ
ತೊಳಪ ಮಾಣಿಕದ ಮುತ್ತಿನ ನೀಲದ ತೊಡ | ವೆಳಗೆನಲೊಪ್ಪಿದವಾಗ || ೧೨೫ ||

ನಿಟ್ಟಿಸಲೊರ್ವರ ನೇತ್ರದ ರುಚಿ | ತೊಟ್ಟನೆ ಪರಿದಡಱಿದವು
ದಿಟ್ಟಿ ಬೊಂಬೆಗಳು ವಸಂತದೊಳಗೆ ಕೋಲ | ನೆಟ್ಟಿನೆ ಪೊಡೆವಂದದೊಳು || ೧೨೬ ||

ಭೂಧವ ಭುಜಬಲಶಾಲಿ ವಿನೋದ | ವಿದ್ಯಾಧರವಿಲುಳಿತಮೂರ್ತಿ
ವೇದಸದೃಶ ಸಾಹಿತ್ಯ ಸಂಗೀತಗಂ | ಗಾಧರನೆನಿಸಿದನಾನೃಪತಿ || ೧೨೭ ||

ಇದು ಭಾವಕಜನಕರ್ಣವಿಭೂಷಣ | ಮಿದು ರಸಿಕರ ಚಿತ್ತದೆಱಕ
ಇದು ವಾಣೀಮುಖಮಾಣೀಕ್ಯಮುಕುರ | ಮತ್ತಿದು ಶೃಂಗಾರಸುಧಾಬ್ದಿ || ೧೨೮ ||

ನಾಲ್ಕನೆಯ ಸಂಧಿ ಸಂಪೂರ್ಣಂ