ಐದನೆಯ ಸಂಧಿ

ಶ್ರೀಮದರಮಣಿಮಕುಟರಂಜಿತರ್ನ | ಧಾಮಾಂಬುಧಾರಾಧೌತ
ತಾಮರಸಾಂಘ್ರಿಯುಗಲ ವೀರನಾಥನು | ದ್ದಾಮ ಸುಖವನೀವುದೆಮಗೆ || ೧ ||

ಶ್ರೀರಾಮ ರಮಣಿಪದಕೋಮಲ | ನೀರೇರುಹನಿರ್ಮಲಾಂಗ
ಕಾರುಣ್ಯನಿಧಿ ಕಣ್ಗೊಪ್ತಿದನಾಧುರ | ಧೀರನುಜ್ವಲಕೀರ್ತಿಯುತನು || ೨ ||

ನೀರನಿಧಿಯ ತನುಜೆಯೊ ಮಂಜುವೆಟ್ಟಕು | ಮಾರಿಯೋ ಕಮಲಸಂಭವನ
ನಾರಿಯೋ ನನೆವಿಲ್ಲನ ಸತಿಯೊ ಯಾಱೆಂ | ದಾರೈದನಾನೃಪವರನು || ೩ ||

ಆವಲೋಕದ ಹೆಣ್ಣಾದೊಡಮಾಗಲಿ | ಯಾವೃದ್ಧತೆಯ ಕೈಕೊಂಡ
ಓವದೆಬಿಸುಟ ಕಾರಣವನ್ನಱಿವೆನೆಂದು | ಭೂವರ ಕೇಳಿದನಂದು || ೪ ||

ಚೆನ್ನೆಯ ನಿಜಸಖಿಯನು ನಿಟ್ಟಿಸುತ ಗು | ಣೋನ್ನತನತಿವಿಭವದೊಳು
ತನ್ನಾಗಿಬಂದ ವೃತ್ತಾಂತವನೆಲ್ಲವನಾಗ | ಚನ್ನಾಗಿ ಕೇಳ್ದನಿಂತೆಂದು || ೫ ||

ಆವುದು ದೇಶಮಾವುದು ನಿಮ್ಮಯ ಪೊಳ | ಲಾವ ನೃಪನ ಪುಗಳಿವಳು
ಈ ವೇಷಕೇನುಕಾರಣಮೆಂದು ಕೇಳಿದ | ಭಾವಕಿಯನು ಪೇಳೆಂದು || ೬ ||

ಆ ನರನಾಥ ನುಡಿದ ನುಡಿಯನು ಕೇಳಿ | ಮಾನಿನಿ ಕೈಗಳ ಮುಗಿದು
ಆ ನಾರಿ ಬಂದ ವೃತ್ತಾಂತವನ್ನೆಲ್ಲವ | ಸಾನುರಾಗದಿ ಪೇಳ್ದಳಿಂತು || ೭ ||

ರಾಜೇಂದ್ರ ಕೇಳು ಸಿವಂಕರನಗರಿಯ | ರಾಜ ವಿಮಲವಾಹನಗೆ
ರಾಜವದನೆ ಕಾಂತಾವತಿಗುದಿಸಿದ | ಳೀ ಜಯಾವತಿಯೆಂಬಕುವರಿ || ೮ ||

ನಿನ್ನೆ ನಿಮ್ಮೂರ ಮುಂದಣ ನಂದನದೊಳು | ಹೊನ್ನಾಲಮಾದಾದೇವ
ನಿನ್ನೊಡನತಿ ಮುದದಿಂ ಕೊಂಡಾಡಿದ | ಚನ್ನೆಯಿವಳು ಸುಕುಮಾರ || ೯ ||

ಬಾಲಪುರುಷರೂಪಾಂತು ಪಾಡುವ ನಿನ್ನ | ನಾಳೋಕಿಸಿ ನಿಜರೂಪ
ತಾಳಿದ ಭಾವಕಿಯೆಂಬ ಕೆಳದಿ ನಾನು | ಭೂಲಲನೇಶ ಚಿತ್ತೈಸು || ೧೦ ||

ಧರಣೀಶ ನಿನ್ನ ಕೈಯಲಿ ಬೀಳ್ಕೊಂಡೆಮ್ಮ | ಪುರವನಾಯಕ್ಷನು ಸಹಿತ
ಹರುಷದಿ ಪೊಕ್ಕು ತತ್ಕಥನವನೆಲ್ಲವ | ನೊರೆದನಾಗಿ ತಂಗಿಯೊಡನೆ || ೧೧ ||

ನಿನ್ನಯ ಚಲ್ವು ನಿನ್ನಯ ಜಾಣು ನಿನ್ನಯ | ನನ್ನಿ ನಿನ್ನ ಹೊಸಹರಯ
ನಿನ್ನಯ ಸೊಬಗನೆಲ್ಲವನೀ ಹೆಣ್ಗಳ | ರನ್ನೆಯೊಳೊಱೆದೆನಿರ್ದಂತೆ || ೧೨ ||

ಮರಳಿ ಮರಳಿ ನಿನ್ನಯ ಗುಣಕಥನವ | ನುರುಮುದದಿಂ ಕೇಳಿ ಕೇಳಿ
ಪಿರಿದಪ್ಪ ಸಂತಸದಿಂ ನಿನ್ನ ನೆನಹೆ | ಹರಣಮಾದುದು ಕೋಮಲೆಗೆ || ೧೩ ||

ಅಸುಗೆಯನರವಿಂದವನಿರವಂತಿಯ | ಪೊಸಮಾವನಿಂದೀವರವನು
ರಸಿಕನ ಬರಿಸೆನ್ನಲ್ಲಿಗೆನುತ ಮನ | ಮೊಸೆದು ಪೂಜಿಸಿ ನೋಂತಳಿವಳು || ೧೪ ||

ಇಂತಿರುತಿಂದಿನ ಮುಂಬಗಲೊಳಗೀ | ಕಾಂತೆ ನಾವೆಲ್ಲರು ಸಹಿತ
ಕಂತುನಿವಾಸವೆಂದೆಂಬ ನಂದನಕತಿ | ಸಂತೋಷದಿಂದೆಯ್ದಿದಳು || ೧೫ ||

ಎಳೆಗಾಳಿಯಾಡುವಂಗಣವೆಸಳ್ಗಣೆಗಳ | ಬೆಳಗಿನವಿನ್ನಾಣಶಾಲೆ
ಜಲಶಾಸ್ತ್ರನ ವನದುರ್ಗಮೆಂದೆನೆ ಕ | ಣ್ಗೊಳಿಸಿದುದಾ ನಂದನವು || ೧೬ ||

ಬಂದ ಬಸಂತರಾಯನ ರಾಜಧಾನಿಯ | ಕುಂದರ್ಪನ ನಿಜನಗರಿ
ಮಂದಸಮೀರನಾಡುಂಬೊಲನೆನೆ ಬಗೆ | ವಂದುದಾ ಸಿಂಗರದೋಟ || ೧೭ ||

ಆ ನಂದನಕೆ ನಾವೀ ಪದಿನಱುವರು | ಮಾನಿನಿಯರು ಸಹಮಾಗಿ
ಸಾನುರಾಗದಿ ಬಂದಳೀ ಹೆಣ್ಗಳರನ್ನೆ | ಮಾನವಲೋಕಾಧೀಶ || ೧೮ ||

ಆಗಳಿಗೆಯೊಳಾಗಶನಿವೇಗನೆಂದೆಂ | ಬಾಗಸವಟ್ಟೆಗನಿಳಿದು
ಪೂಗಣೆಯನ ರಾಣಿಗೆ ಸರಿಮಿಗಿಲೆನಿ | ಪೀ ಗರುವೆಯ ಕಂಡನವನು || ೧೯ ||

ಅಳಿಕುಂತಳಮಕ್ಷಿಕುಸುಮ ಪಲ್ಲವಪದ | ನಳಿತೋಳ್ಸೋಭೆ ಕಣ್ಗೊಳಿಪ
ಸುಳಿವ ಜಂಗಮಲತೆಯಂತೊಲೆದಾಡುವ | ಲಲಿತಾಂಗಿಯ ಕಂಡನವನು || ೨೦ ||

ಕಂಜಾಕ್ಷಿಯಿವಳೆನ್ನ ನೋಡಿ ಪೊಸಬನೆಂ | ದಂಜಿ ಲಜ್ಜಿಪಳೆಂದು ತನ್ನ
ರಂಜಿಪರೂಪಿನದೃಶ್ಯಾಕರಣವ | ತಾಂಜವದಿಂ ಮಾಡಿದನು || ೨೧ ||

ಪೊನ್ನದಾವರೆಯಲರನ್ನಮೊಗದ ಕಡು | ಚನ್ನೆಯರಾರ್ಗಾಣದಂತೆ
ತನ್ನ ರೂಪಿಗೆ ಮರೆಯಮಾಡಿಯಶನಿವೇಗ | ಕೆನ್ನಮೀಕ್ಷಿಸಿದನಾತುರದಿ || ೨೨ ||

ದುರುಳನಶನಿವೇಗನದೃಷ್ಯಾಕರಣದಿ | ತರುಣಿ ಪೋದೆಡೆಗೆಯ್ದುವನು
ಹರಿನೀಲದಮಣಿಪುತ್ರಿಕೆಯೊಡನೊಲ್ದು | ತಿರುಗುವ ಪುಲುಬೊಂಬೆಯಂತೆ || ೨೩ ||

ಈಯಂದದೊಳಾ ಖಳ ನೋಡುತ್ತಿರೆ | ಕಾಯಜನಂಗನೆಯಂತೆ
ತೋಯಜಗಂಧಿ ತದ್ವನವಿಹರಣವ ಮ | ತ್ತೀಯಂದೊಳು ಮಾಡಿದಳು || ೨೪ ||

ಪಱಮೆವದಕ್ಕಿ ಪಾಡಿವದಕುಡುಕು ಗುಬ್ಬಿ | ವಱೆಯಕೂಟದಲಾವುಗೆಯ
ಮಿಱುಗುವ ಬಣ್ಣಸರವ ಕೊಂಡಾಡುತ | ಕಱುವೆಣ್ಣಾಡಿದಳಲ್ಲಿ || ೨೫ ||

ಮೂಡುವೆಟ್ಟವನೇಱಿ ಮಳಲೊಳು ಬಗೆಗೆ | ಟ್ಟೋಡಿಯರಲಬಾಸಿಗವ
ಸೂಡಿ ಕೃತ್ತಿಮನದಿಯಂತೆ ಹರುಷಹೊ | ಕ್ಕಾಡಿದಳಾ ಸುಕುಮಾರಿ || ೨೬ ||

ಸುರಗಿಯೆಸಳ ಸಂಪಗೆಪೂವ ಪಾದರಿ | ಯರಲ ಜಾದಿಯ ಸಜ್ಜುಕವ
ಸುರಹೊನ್ನೆಯ ಬಿಱುಮುಗಳನಾಯ್ದರು | ಸರಸೀರುಹಲಲಿತನೇತ್ರೆಯರು || ೨೭ ||

ಕರ್ಪೂರತರುವನದೊಳು ಪನ್ನೀರ್ಗಳ | ಕಾಳ್ಪುರದೊಳು ಮಾಂಗೊನರ
ಸೀರ್ಪನಿಯೊಳು ಹಂಸನಿಭಯಾನೆಯರು ಕಡು | ಗೂರ್ಪಿಂದವೆ ಮಾಡಿದರು || ೨೮ ||

ತರುಣೀಮಣಿ ಮೊಲ್ಲೆಯ ಮೊಗ್ಗೆಯ ತನ್ನ | ಸಿರಿಮುಡಿಗಿಡಲೊಪ್ಪಿದುದು
ಹರಿನೀಲದ ಕರಡಿಗೆಯೊಳು ವಜ್ರದ | ಹರಳ ಸುರಿದ ತೆರನಾಯ್ತು || ೨೯ ||

ಲಲಿತ ತಮಾಲಲತಾಮಂಟಪವ ಹೊಕ್ಕ | ನಳಿನಾಕ್ಷಿಯ ಕಣ್ಣ ಢಾಳ
ಥಳಥಳಿಸಿತು ಕಾರಕಾರ್ಮುಗಿಲೆಡೆಯೊಳು | ಪೊಳೆವ ಮಿಂಚಿನ ತೆಱನಾಗಿ  || ೩೦ ||

ಭಾವೆಯೊರ್ವಳು ಸಣ್ಣ ಸೆಳೆಗೊಕ್ಕೆಯಿಂ ಕೊಯ್ವ | ಪೂವುದರಲುಮುಂದಲೆಗೆ
ಭಾವಜನೆಳಿದುಂಬಿಯ ಪಂತಿಗಿಕ್ಕುವ | ಜೇವಣಿಗೆಯ ತೆಱನಾಯ್ತು || ೩೧ ||

ಹದಿನಾಱುವರುಷದ ಹರೆಯದ ವಿಧುಮುಖಿ | ಮದದೊಳೇಱಿದ ಕೃತ್ತಿಮಾದ್ರಿ
ಒದವಿದ ಷೋಡಶಕಲೆಯ ಚಂದ್ರನ ಹೊ | ತ್ತುದಯಶಿಖರಿಯೆನಲಾಯ್ತು || ೩೨ ||

ಕಡುನೀರೆ ಪೂಗೊಯ್ಯಲೇಱುವಭರಕೆ ಮುಂ | ಗುಡಿವಿಡುವೆಳಲತೆ ಮರನ
ಬಿಡಲು ತನ್ನೋಪನ ಸತಿಯಪ್ಪಲು ಕಾಣು | ತೊಡನಗಲ್ವಬಲೆಯಂತಾಯ್ತು || ೩೩ ||

ಎಳೆಮಾವಿನೆಳೆಗೊಂಬಾಂತುಯ್ಯಲಲಾಡುತಿ | ಪ್ಪೆಳೆಯಳಿದ್ದಳು ಕಂತು ತನ್ನ
ಲಲನೆಯಂಗವ ಕಳ್ದೆ ನೀನೆನ್ನುತವೆ ಕಟ್ಟಿ | ಮುಳಿಸಿಂ ತೂಗುವಂದದೊಳು || ೩೪ ||

ಬಿರಿಮೊಗ್ಗೆಯ ಸಂಪಗೆಯಿಂದಾದೊರ್ವ | ತರುಣಿಯಾಘ್ರಾಣಿಸುತಿರಲು
ಕರಮೆಸೆದುದು ತನ್ನಯ ನಾಸಿಕದ ಹೂವ | ಸರಿನೋಡುವ ಮಾಳ್ಕೆಯೊಳು || ೩೫ ||

ಎಳೆನವಿಲಾತಡಿಯೊಳಾಡುತಿರಲೊರ್ವ | ಲಲನೆ ನೋಡಲು ಕೇಕರಾಂಶು
ಪೊಳೆದೆಯ್ದಿತು ತತ್ಕೃತ್ತಿಮ ನದಿಗಿಟ್ಟ | ಪಳುಕಿನ ಪಾಲದಂದೊಳು || ೩೬ ||

ವೃತ್ತಸ್ತನೆ ಹೊಸ ಹೊಂಗೇದಗೆಯೆಸ | ಳ್ಗಿತ್ತು ಕರದೊಳಾಂತಿರಲು
ಚಿತ್ತಜಾಗಮವ ಬರೆದು ಕಟ್ಟಿ ಪಿಡಿದಿರ್ದ | ಹೊತ್ತಗೆಯಂತುಟೊಪ್ಪಿದುದು || ೩೭ ||

ಒಲಿದೋಪಳ ಹಸ್ತಪರುಷನದಿಂ ಕಾ | ದಲನ ಮೈನವಿರೇಱುವಂತೆ
ಲಲಿತಲತಾಂಗಿಯ ಕೈಸೋಂಕಿನ ಸವಿ | ಯಲರಾದವಲ್ಲಿ ಪ್ರಿಯಂಗು || ೩೮ ||

ಎಲೆ ವಕುಲವೆ ತುಂಬಿವಱಿಗೀತೆಱದಿ ನಿಮ್ಮ | ರಲ ಮಧುವನೀವುದೆಂದು
ಕಲಿಸುವವೊಲು ಮಧುಗಂಡೂಷವನೊರ್ವ | ಲಲಿತವದನೆ ಮಾಡಿದಳು || ೩೯ ||

ಮೃದುಗುಣದಿಂ ನಿಮ್ಮ ತಳಿರನೆಮ್ಮರುಣಾಂಶು | ಪದಕೆಣೆಮಾಡಿದಿರೆಂದು
ಪುದಿದ ಕೋಪದೊಳೊದೆವಂತೊರ್ವಳಸುಗೆಯ | ನೊದೆದು ಕೆಂಬರಲೇಱಿಸಿದಳು || ೪೦ ||

ಲಲಿತೇಂದುಲೇಖೆಯ ನವಚಂದ್ರಿಕೆ ಸೂಪ | ಲಲರ್ವಿಂದೂಪಳದಂತೆ
ಲಲನೆಯೊರ್ವಳ ನಯನತ್ರಿಭಾಗದ ರುಚಿ | ಗಲರೇಱಿದುದೊಂದು ತಿಲಕ || ೪೧ ||

ತೆಂಕಣದಿಗ್ವಾಯ ಬಂದಮರ್ದಪ್ಪಲು | ತಾಂ ಕೊನರ್ವಂದದೊಳೊರ್ವ
ಪಂಕಜಮುಖಿಯ ತಳ್ಕೆಗೆ ಕುರುವಂಕದೊಳ | ಗಂಕುರಿಸಿದವು ಪುಷ್ಪಗಳು || ೪೨ ||

ಕಾರಮೊಳಗುಗೇಳ್ದು ವೈಢೂರ್ಯಮಣಿಯ ವಿ | ದೂರಾವನಿ ಪಡೆವಂತೆ
ನಾರಿಯೊರ್ವಳ ನರ್ಮಕಾರ್ಯಕೆ ನವಮಂ | ದಾರಮೊಳ್ಳರಲೇಱಿದುದು || ೪೩ ||

ವಿದಳಿತ ವಿಮಲಾಬ್ಜವ ಕಂಡು ಕಳಹಂಸಿ | ಮುದದಿಂ ಮೆಯ್ಬಿದಿರ್ವಂತೆ
ಸುದತಿಯೊಳೊರ್ವಳ ದರಹಸಿತಾಸ್ಯವ ಕಾಣು | ತೊದವೆ ಸಂಪಗೆ ಪುಷ್ಪವಾಯ್ತು || ೪೪ ||

ಲಲನೆಯ ವಕ್ತ್ರವಾಕ್ಯವ ಕೇಳಿ ತಳಿರೆಂಬ | ತಳವೊಯ್ದಟ್ಟ ಹಾಸವನು
ತಳೆಯಲದಱಶುಭ್ರರುಚಿಯುಣ್ಮಿತೆನೆ | ಯಲರ್ಗಳನಾಂತವು ಚೂತವಿಟ || ೪೫ ||

ಸರಸ ಪಿಕಲಾಪಿಯ ಸವಿವಾಡುಗೇ | ಳ್ದರಲೇಱಿದುದು ನವಮೇರು
ಹರಿಸದಿ ಮೇಘರಂಭೆಗೆ ಮೇಘಪುಷ್ಪವ | ತೊರೆದ ಮೇಘದ ತೆಱನಾಯ್ತು || ೪೬ ||

ಪಿರಿದೆನೆ ಸಿದ್ದಿವಡೆದ ಶಬ್ದವೇದಿಯ | ಸರಗೇಳಿ ಲೋಹ ಹೊನ್ನಪ್ಪ
ಪರಿಯಲೋರ್ವಳು ಕೊಂಡಾಡೆ ಮಿಸುನಿವಣ್ಣ | ದರಲಾಯಿತು ಕರ್ಣಿಕಾರ || ೪೭ ||

ಲಲನೆಯರೀಯನುವೀವನ ಕೇಳಿಯ | ನಲವಿಂದಾಡಿ ಬಳಿಕ
ಜಲಕೇಳಿಯನಾಡಲೆಂದೆಯ್ದಿದರೊಂದು | ನಳಿನಾಕರದೆಡೆಗಾಗಿ || ೪೮ ||

ಕಮಲ ಕುಮುದ ಕುವಲಯ ಕಲುಹಾರದ | ರಮಣೀಯ ಮಾದಲರ್ಗಳನು
ಮಮತೆಯಿಂದಲೆ ಪೋಗಲೆಂದೆಣಿಸಿದರಾ | ಭ್ರಮರಲಲಿತನೇತ್ರೆಯರು || ೪೯ ||

ತಡಿಯಾಗುವೆಡೆಯೊಳಗೊಂದಂಚೆ ಬೆದಱ | ಲೆಡೆಹಾಯಲಾಸಮಯದೊಳು
ಕಡುಜಾಣೆ ಕಣ್ಗೆಸದಳು ನಾಲ್ಮೊಗನ | ಮಡದಿ ಶಾರದೆಯೆಂಬಂತೆ || ೫೦ ||

ಕೊಳನ ತಡಿಯ ಮುಟ್ಟಿನಿಂದ ಕೋಮಲೆಯರ | ನೆಳಲವರಾಡಿದಂತಾಡೆ
ಪೊಳೆದರು ಜಲದೇವಿಯರು ಶಿಷ್ಯತ್ವವ | ತಳೆದವರೊಳಗಾಡುವಂತೆ || ೫೧ ||

ಅಳಿಕುಂತಳದಂಚೆನಡೆದಾವರೆಮೊಗ್ಗೆ | ಮೊಲೆಯನೀರ್ಮಯ್ಯ ಮೀಂಗಣ್ಣ
ಲಲಿತೋತ್ಪಲಗಂಧಿಯರು ನೀರಹೊಕ್ಕರು | ಕೊಳಕೆ ಪೂಗೊಳ ಬಂದಂತೆ || ೫೨ ||

ಮೊಗೆಮೊಗೆದು ಚಲ್ಲುವ ಮೇಲಕೆ ಪುಟ | ನೆಗೆವ ದುಡುಮ್ಮಿ ಱಿಲೊಯ್ವ
ಅಗುಳ್ವ ತೇಲುವ ನೀರಾಟವೆಸೆದರಾ | ಬಗಸೆಗಂಗಳ ಭಾವೆಯರು || ೫೩ ||

ನೀರೊಳು ಹುಟ್ಟಿ ಬೆಳೆದು ಮುನ್ನ ಮೆಯ್ಯುಂಡ | ನೀರಕಾಱನ ತೆಱನಾಗಿ
ನಾರಿಯೊರ್ವಳು ಮೊಗೆದುದಕವ ಚಲ್ಲುವ | ನೀರಜಹಸ್ತಮೊಪ್ಪಿದುದು || ೫೪ ||

ತೊಳಗುವ ತಿಳಿನೀರ್ಗೊಳದೊಳು ಚುಳ್ಯಾಡಿ | ಬಳಿಕ ಮುಳುಗಿ ಮೇಲಕೇಳ್ವ
ಲಲನೆಯ ಮುಖವೊಪ್ಪಿತು ಪಾಲ್ಗಡಲೊಳು | ಪೊಳೆದುದಯಿಪ ಚಂದ್ರನಂತೆ || ೫೫ ||

ಕೊಡು ಕೊಡು ನಿನ್ನ ರೂಪವನೆನ್ನ ಮಡದಿಗೆ | ಕೊಡು ಕೊಡದಂಗಜ ಕೊಲ್ವೆನೆಂದು
ಪಿಡಿದು ಹುಡುಕುನೀರನಳ್ಕುವಂದದೊಳೊರ್ವ | ಕಡುನೀರೆ ಮುಳುಗಿದಳಲ್ಲಿ || ೫೬ ||

ಪರಿಯಲೊರ್ವಳು ಹೊನ್ನಂಡೆಯೆತ್ತಿದ ಕೈಯ | ಭರಕೆ ತಿರುಗಿದಳವಳಾಸ್ಯ
ಉರಗಮುಖವ ಕಂಡು ಮುಡಿಸೋಗೆಯಮಱೆ | ಗಿರದೋಡಿದಂದವಂತಾಯ್ತು || ೫೭ ||

ಕೊರಳುದ್ದವಾದ ನೀರೊಳು ಹೊಕ್ಕಾಡುವ | ಸುರಭಿ ನಿಶ್ವಾಸಿಯರುಗಳು
ಕರಮೆಸೆವಲರ್ಗಣ್ಣ ಕೈರವವನವೆಂದು | ತರುಣಭೃಂಗಗಳೆಱಗುವವು || ೫೮ ||

ಅಂಬುಜಮುಖಿಯೆತ್ತುವ ಹೊನ್ನಜಲಯಂತ್ರ | ದಂಬುವೊಪ್ಪಿತು ತನ್ನ ಮೆಯ್ಯ
ತುಂಬಿದ ಲಲಿತಲಾವಣ್ಯತಟಾಕದ | ತೂಂಬ ತೆಱೆದ ತೆಱನಾಗಿ || ೫೯ ||

ಮೊಲೆ ಮೂಡದ ಮುಗ್ಧೆ ನಿಂದಾಲೀಢದಿ | ನಿಲಿಸಿ ಕೆನ್ನೆಗೆ ಚೀರ್ಗೊಳವಿಯ
ಬಲಿದೊತ್ತೆ ಕಂಡು ಶಿವನ ಕಣ್ಣುರಿಗಿಚ್ಚು | ಜಲಜಬಾಣನ ತೆಱನಾಯ್ತು || ೬೦ ||

ನಲವಿಂತವಿಲುರಿವತ್ತುವರೆಗಮಾ | ಜಲನಾಡಿದ ಬಳಿಯಲ್ಲಿ
ಅಲರ್ಗೊಳದಿಂ ಪೊಱಮಡುತಿರ್ದರಾ ಕರಿ | ಕಳಭ ಲಲಿತನೇತ್ರೆಯರು || ೬೧ ||

ಮಿಸುಪ ಸುಧಾಬ್ಧಿಸನ್ನಿಭಸರಸಿಯನಾ | ಶಶಿಮುಖದಮೃತಾಧರದ
ಪೊಸಸಿರಿಯಂತೊಪ್ಪುವ ಪೆಣ್ಮಣಿಗಳು ಸಂ | ತಸದಿಂ ಪೊಱಮಟ್ಟರಾಗ || ೬೨ ||

ಕನಕಕಳಶಕುಚಗಳ ಘನಕಟಿಗಳ | ಮಿನುಗುವ ಬಾಳೆದೊಡೆಗಳ
ನನೆದುಕೂಲ ಪತ್ತಿದವೋಪರಿನೆಯಳ | ನನುರಾಗದಿಂದಪ್ಪಿದಂತೆ || ೬೩ ||

ತರುಣಿಯೊರ್ವಳು ಪಾದಸ್ವಸ್ತಿಕದಿಂ ಮೆ | ಯ್ಮುರಿದು ಕೇಶವನಾರಿಸುತ
ತಿರಿದ ತ್ರಿಭಂಗಿಯೊಪ್ಪಿತು ಕಂತು ಝಳಪಿದ | ಭರಕೆ ಕೊಂಕಿದ ಖಡ್ಗದಂತೆ || ೬೪ ||

ಬಳಿಕೊಂದು ಬಳ್ಳಿವನೆಯ ಪೊಗುತವೆ ಪ | ಜ್ವಳಿಸುವ ಪಸದನಂಗಳನು
ತಳೆದೊಪ್ಪಿದರಂಗಜನಂತಃಪುರ | ವೆಳಸಿ ಸಿಂಗರದೊಡ್ಡಂತೆ || ೬೫ ||

ಈ ಯವನಿಯೊಳು ಸಿಂಗರಕೆ ಸಿಂಗರಮಾದ | ಈ ಯುವತಿಯ ಕಾಣುತವೆ
ಅಯಾಗಾಣಿಸಿ ತನ್ನಂತರಂಗವನಾ | ಕಾಯಜಕಣೆಗಾಖಳನು || ೬೬ ||

ಅದೃಶಾಕರನಾಗಿ ನಡೆನೋಡತಾ ರತಿ | ಸದೃಶೆಯನಾಖೇಚರನು
ಮದನಾಗ್ನಿಗೆ ತನ್ನಯ ತನುವನು ಸಂ | ಮದದಿಂದವೆಯೊಪ್ಪಿಸಿದನು || ೬೭ ||

ಪೂಸರಲನ ಪುಣ್ಯದೇವತೆಯಂತಿ | ರ್ಪೀ ಸಿಂಹನಿಭಮಧ್ಯೆಯನು
ಭಾಸುರವಪ್ಪ ಸಗ್ಗದ ರೂಪವತಿಯ | ತ್ಯಾಸಕ್ತಿಯಿಂ ನೋಡಿದನು || ೬೮ ||

ವನರುಹದಳಲಲಿತಾಕ್ಷಿಯ ಮೊಗಮೆಂಬ | ವನಜಾಕರದೊಳಗವನ
ಅನಿಮಿಷನೇತ್ರಾನಿಮಿಷ ಹೊಕ್ಕು ಹೊರಡುವ | ಡನುಗಾಣದೆ ತೊಳಲಿದನು || ೬೯ ||

ಅಶನಿವೇಗನ ಧೈರ್ಯಾದ್ರಿನವಶನಿ | ದಶನೆಯ ಕಡುಚಲುವೆಂಬ
ಅಶನೀಪಾತದಿ ನುಚ್ಚುನುಱಿಯಾದುದು ಪೂರ್ಣ | ಶಶಿಸನ್ನಿಭಸುಕುಮಾರ || ೭೦ ||

ಹಱಿಹಂಚಾದುದು ಬಗೆ ಹರವಱಿಯಾದು | ದಱಿವು ಭೀತುದು ಬಿಂಕದೇಳ್ಗೆ
ಬಿಱಿತುದು ಲಜ್ಜೆಯುಬ್ಬಿದುದಾಸೆಯವಗೀ | ಕಿಱುವೆಣ್ಣಮೊಗಗಾಣುತವೆ || ೭೧ ||

ಲವಲವಿಕೆಯೊಳು ನೋಡುವೆ ನುಡಿಸುವೆನೆಂದು | ತವಕಿಪ ತಳ್ಳಂಕಗೊಳ್ಳುವ
ಸವಿಗೂಟಕೆಡನಂಕಾಣದೆ ಕೊಂಡೆಯ್ದುವ | ಹವಣನೆಣಿಸಿ ಮುಟ್ಟವಂದ || ೭೨ ||

ಇಂತೆಯ್ದುತ ರಾಯ ಕೇಳೆಮ್ಮನೆಲ್ಲರ | ಕಾಂತಾಮಣಿಯೊಂದಾಗಿ
ಅಂತರಿಕ್ಷಕೆ ಕೊಂಡೊಯ್ವೆನೆಂದೆನುತ | ತ್ಯಂತಾತುರದಿ ಪಿಡಿದನು || ೭೩ ||

ಕಂದರ್ಪ ಕಾಳೋರಗ ವೇಣಿಯರಪ್ಪ | ಸುಂದರಿಯರನೆಮ್ಮಖಳನು
ದಂದಸೂಕಾರಿಯವೊಲು ಪೊಯ್ದೆತ್ತಿಕೊಂ | ಡಂದಾಗಸೆ ಪಾಱಿದನು || ೭೪ ||

ವಿಮಾನದೊಳಿಟ್ಟತಿ ಕಾತುರದಿಂದಾ | ವಿಮಲ ಶಶಾಂಕವಕ್ತ್ರೆಯನು
ರಮಣೀಯಮಪ್ಪೀಗಿರಿಯಗ್ರಕೆಯಾ | ಭ್ರಮಿತ ತಂದನತಿವೇಗದೊಳು || ೭೫ ||

ಭೂಪ ಚಿತ್ತೈಸು ತನ್ನಯ ವಿದ್ಯೆಯಿಂ ಮ | ತ್ತೀ ಪಂಚರತ್ನಹರ್ಮ್ಯವನು
ಈ ಪರ್ವತದಿ ನಿರ್ಮಿಸಿ ನಮ್ಮನಿರಿಸಿ ಮತ್ತಾ | ಪಾಪಚರಿತನಿಂತೆಂದ || ೭೬ ||

ಎಲೆ ಸುಕುಮಾರಿ ನಿನ್ನಯ ಕಡುಚಲುವಿಗೆ | ಸಲೆಸೋತೆನಂತದಱೆಂದ
ಅಲರ್ಗಣೆಗೊಳಗುಮಾಡದೆ ಕಾರುಣ್ಯದೊ | ಳೊಲಿದು ಕೂಡುವುದೆನ್ನೊಡನೆ || ೭೭ ||

ಕರುಣಕಟಾಕ್ಷವಿಕ್ಷೇಪಣದಿಂದೆನ್ನ | ಪಿರಿದು ಸಂತಸವನೆ ಮಾಡಿ
ಸುರತಾಮೃತದಿಂ ದಣಿಯಿಸು ನೀನೆಂ | ದುರುತರದೈನ್ಯದಿಂ ನುಡಿದ || ೭೮ ||

ಕುಲ ರೂಪು ಜಾತಿಯವ್ವನ ಭಾಗ್ಯ ಚೌಷಷ್ಟಿ | ಕಲೆ ವೀರವಿತರಣದಿಂದ
ಇಳೆಯೊಳಗೆ ನನಗೆಣೆಯಾರಿಲ್ಲವದಱಿಂ | ಲಲನೆ ವರಿಸು ನೀನೆಂದ || ೭೯ ||

ಪಲವು ತೆಱದ ನುಡಿಯಿಂದಾ ಸಂಚಲ | ನೊಲಿದು ಕೂಡುವೆನೆನುತಿರಲು
ಕಳಕಂಠಾಳಾಪದಿನೆಂದಳಿವಳು ನಿ | ರ್ಮಲತಱಮಪ್ಪ ಬುದ್ದಿಯೊಳು || ೮೦ ||

ಖಳ ಕೇಳಾನುದಯಿಸಿದ ಮುಹೂರ್ತದ | ಬಲವಱಿದೊರ್ವಜೋಯಿಸನು
ಬಳಿಕೆಮಯ್ಯನೊಳೊರೆದ ಮುಂದೆನಗಪ್ಪ | ಫಲವೆಲ್ಲವನಿಂತೆಂದು || ೮೧ ||

ಪುಂಡರೀಕಿಣಿಯಧಿಪತಿ ಶ್ರೀಪಾಲಷ | ಟ್ಖಂಡಾಧಿಪತಿಯಕ್ಕುಮವಗೆ
ಬಂಡುಣಿಗುಱಳ ಜಯಾವತಿ ಸಜ್ಜನ | ವೆಂಡತಿಯಹಳಂದನವನು || ೮೨ ||

ಎಂದು ನುಡಿದಾ ಜೋಯಿಸವಾತ ಕೇಳ್ದೆನ್ನ | ತಂದೆ ತಾಯ್ಗಳು ಗುಣಪಾಲ
ನಂದನನಪ್ಪ ಚಕ್ರಿಯ ಪಟ್ಟಮಾದೇವಿ | ಯೆಂದು ಕರೆದರಳ್ತಿಯೊಳು || ೮೩ ||

ಅದಱಿಂದಾಮಾತಾ ಪಿತೃಗಳು ಮೊತ್ತ | ಮೊದಲ ನೇಮದಿ ನಿಯಮಿಸಿದ
ಮದನಸ್ವರೂಪಗಲ್ಲದೆ ಮತ್ತುಳಿದರ್ಗೆ | ಸುದತಿಯಪ್ಪುದು ನನ್ನಿಯಹುದೆ || ೮೪ ||

ಕಡುನೀರೆ ಶ್ರೀಪಾಲಗೆಂದೆನ್ನೆರ್ದೆ | ಗೊಡದೊಳಗಾಸಕ್ತಿಯಿಂದ
ಹಿಡಿದ ಮನದ ಮೀಸಲನುಣಿಸಲೆಂದು | ಕೆಡಹುವುದುಚಿತವೆ ನಿನಗೆ || ೮೫ ||

ಗಂಡನೆನಗೆ ಗುಣಪಾಲನಂದನ | ಪೆಂಡತಿ ನಾನೆನಗುಳಿದ
ಗಂಡುಗಳೆಲ್ಲ ಸಹೋದರರೆಂದೀ | ತೊಂಡೆವಾಯಬಲೆ ನುಡಿದಳು || ೮೬ ||

ಅಳಿವುದೊಡಲು ಉಳಿವುದು ಕೀರ್ತಿಯದಱಿಂ | ದಳಿಯಾಸೆಗೆ ಮನದಂದು
ಇಳಿದಳು ನರಕದ ಕುಳಿಯೊಳು ಮುಳುಗಲೆಂ | ದೆಳೆಸುವುದದು ಮತವಲ್ಲ || ೮೭ ||

ಪಳಿಗಂಜದೆ ಪಾಳಿಯನುಲ್ಲಂಘಿಸಿ | ಇಳೆ ಹೊರದಂತೆ ಪಾತಕವ
ಗಳಿಯಿಸುವುದು ನೀತಿಯಹುದೆ ಪೇಳೆಂದಾ | ಲಲನಾಮಣಿಯಾಡಿದಳು || ೮೮ ||

ಮಾನನಿಧಾನ ಪುತ್ರಿಕೆ ಮೇರೆಯ ಮೀಱ | ದಾನುಡಿಯನು ಕೇಳುತವೆ
ಮಾನಭಂಗಿತನಾಗಿ ಕಡುಮುಳಿದಾ ಪಾಪಿ | ತಾನಿಂತೆಂದಾಡಿದನು || ೮೯ ||

ಹಿತವಚನವ ನಾನೇಸಾಡಿದೊಡವ | ಹಿತವಾಡಿದಡೆಯೆನ್ನೊಳೆಂದು
ಅತಿಕೋಪದಿಂದ ಮಹೋಪಸರ್ಗವನೀ | ಮತಿವಂತೆಗೆ ಮಾಡಿದನು || ೯೦ ||

ಜಡಿದುನುಡಿವ ಝಳಪಿಸಿ ಕೂರಿಸಿಯ ಮೆ | ಯ್ಯಿಡುವ ತನ್ನಯ ವಿದ್ಯದಿಂದ
ಸಿಡಿಲು ಸುಟ್ಟುರೆ ಕಲ್ಲುಮಳೆಯಱಳುವಹೊಂ | ಕಿಡಿಯ ತಂದಲ ಸೂಸಿದವು || ೯೧ ||

ಹಸಿದ ಹುಲಿಯ ಬೆಸಲಾದ ಕಾಳ್ಕರಡಿಯ | ವಿಷವನುಗುಳ್ವ ಕಾಳಿಂಗನ
ಮುಸುಱುವ ಸಿಂಗದ ಜಂಗುಳಿಯಿಂದವೆ | ಮುಸುಕಿಯಂಜಿಸಲೆನುತಿರ್ದ || ೯೨ ||

ಆ ವಿವಿಧೋಪಸರ್ಗಕೆ ಬಗೆದಂಜಿಕೆ | ಯಾವರಿಸದೆ ನಿಶ್ಚಲದಿ
ಭಾವಜಗಿರಿದುರ್ಗದಂತಿರ್ದ ಲಲನೆಯ | ನೋವದೆ ಕಂಡನಾಖಳನು || ೯೩ ||

ಭೂತಳವಾಱುಖಾಂಡಕೆ ಪತಿಯಹನೆಂ | ದಾತುರದಿಂ ಮುಂದಱಿಯದೆ
ಆತನೆ ಪತಿಯೆಂದೆನ್ನ ವಿಡಂಬಿಸಿ | ಮಾತ ಹಿರಿದನಾಡಿದೆಯ || ೯೪ ||

ಅದಱಿಂ ನೀ ನಿಶ್ಚೈಸುವ ನೀಱನ | ಪದಪಿಂದಿಲ್ಲಿಗೆ ತಂದು

ಸುದತಿ ನಿನ್ನ ಸಖಿಯರ ಕಣ್ಣ ಮುಂದೆ ಕೊ | ಲ್ಲದೆ ಮಾಣೆನೆಂದಾಖಳನು || ೯೫ ||

ವೈಕುರ್ವಣವೆಂಬ ವಿದ್ಯೆಯಿಂದವೆ ಮೂ | ಲೋಕವೆಲ್ಲವನು ಮೋಹಿಸುವ
ಈ ಕುವರಿಯ ರೂಪಿಗೆ ಜಱೆತನಮಂ | ದಾಕರ್ಮಿಯಿವಳಿಗೆ ನಿರ್ಮಿಸಿದ || ೯೬ ||

ಬಳಿಕೀರತ್ನಜಿತಹರ್ಮ್ಯದ ಹೊಱ | ವಳಯದೊಳೆಮ್ಮನೆಲ್ಲರನು
ವಿಲಸಿತಮಪ್ಪ ಲತಾಕಾರವನಾ | ಕಲುಹೃದಯನು ಮಾಡಿದನು || ೯೭ ||

ಅತಿ ಕೋಪದಿಂದವೆ ಭೂಪತಿ ನಿನ್ನನೆ | ಹತಿಸುವೆನೆಂದಾಕ್ಷಣದಿ
ಕೃತಕಬುದ್ದಿಯನೆಣಿಸುತ ಮುಂದಱಿಯದೆ | ಮತಿಹೀನನಡರ್ದನಾಗಸಕೆ || ೯೮ ||

ಕೊಲಲೆಂದು ಬಂದು ಕೊಲ್ಲದೆ ನಾಮಿರ್ಪೀ | ನೆಲೆಗೆ ತಂದೀ ಕಾರಣದೆ
ಲಲಿತಾಂಗ ನಿನ್ನನಿರಿಸಿ ಮೇಗಡೆಗಾ | ಖಳನಡಱಿದನೆಂದಳವಳು || ೯೯ ||

ಎನೆ ನುಡಿದಾಭಾವಕಿಗೆಂದನಾನೃಪ | ನನಿಲಮಾರ್ಗಕೆ ಕೃತಕಾಶ್ವ
ಮುನಿದೊಯ್ಯಲಾ ಯಕ್ಷ ಬಿಡಿಸಿದ ಕಥನವ | ನನುರಾಗದಿಂ ಪೇಳಿದನು || ೧೦೦ ||

ಆ ನುಡಿಗೇಳಿ ಭಾವಕಿಯಿಂತೆಂದಳು | ಭೂನಾಥ ನಿನಗಾಖಳನು
ತಾನೊಂದುಪಹತಿಯೆಂದೆಣಿಸಿದೊಡಾದಯವ | ತಾನೊಂದು ತೆಱನ ಮಾಡಿದುದು || ೧೦೧ ||

ಅಱಸುವ ಬಳ್ಳಿ ಕಾಲನು ತೊಡರಿತ್ತೆಂಬ | ತೆಱನಾಗಿ ನಾನಿಚ್ಛೆಪಡುವ
ಎಱೆಯನೀನೀಯೆಡಿಗೈದುದೀತಂಗೀ | ಎಱೆಯನಲ್ಲವೆ ಚಿತ್ತೈಸು || ೧೦೨ ||

ಅದು ಕಾರಣದಿ ರಾಜಾತ್ಮಜೆ | ಮೊದಲಾದ ಕೆಳದಿಯರು
ಮದನಸ್ವರೂಪ ನಿನ್ನಯ ಕಾರಣದಿಂ | ಪದೆದೆಯ್ದಿದರೀಯೆಡೆಗೆ || ೧೦೩ ||

ಕ್ಷಿತಿಪತಿ ಚಿತ್ತೈಸೀಗಿರಿಯೊಳಗೀ | ಸತಿಗೂಡಿ ನೀ ತಳುಗಿದೊಡೆ
ಸಿತಗನಶನಿವೇಗನು ಮುಗುಳೆಯ್ದಿಬಂ | ದತಿ ಕೋಪದಿಂ ಹತಿಸುವನು || ೧೦೪ ||

ಬಾಂಬಟ್ಟೆಯೊಳೀ ಸೊಗಪಿನೊಳಗೆ ರೋ | ಲಂಬಾಲಕಿ ಸಹಮಾಗಿ
ಇಂಬಿನಿ ನಿಮ್ಮೂರಿಗೆ ಪೋಗುವೆವೇ | ಳೆಂಬವಳ್ಗಿಂತೆಂದನವನು || ೧೦೫ ||

ಪಗೆವರು ಬಂದು ಕೊಂದಪರೆಂಬ ನುಡಿಗೇಳಿ | ಸುಗಿದು ಶ್ರೀಪಾಲಕುಮಾರ
ನಗರಿಗೋಡಿದನೆಂಬಪಕೀರ್ತಿಯ ಕೇಳಿ | ನಗರೆ ನನ್ನೋಱಗೆಯವರು || ೧೦೬ ||

ಆವುದುಮಾದೊಡೆ ಸಾವುದು ಮಾಣದು | ಜೀವ ಚಿರವೆ ಪಲಪಗಲು
ಭಾವಕಿ ಕೇಳದಱಿಂದಳ್ಕಿಬಾಳ್ವುದು | ಗಾವಿಲತನ ನೃಪವರರ್ಗೆ || ೧೦೭ ||

ಅಳುಕದಳಿದ ನೃಪತಿಗೆ ವೀರಸಗ್ಗದ | ಲಲನೆಯರುಗಳು ಮೋಹಿಪರು
ಉಳಿದನಾದಡೆ ಭೂತಳ ಬೆಸಕೆಯ್ವುದು | ಕೆಳದಿ ಕೇಳಿದು ರಾಜಧರ್ಮ || ೧೦೮ ||

ಸೂಜಿಯ ಮೊನೆಯು ತಾಗಿದ ಮೌಕ್ತಿಕ ವಿ | ಭ್ರಾಜಿಸಿತಬಲೆಯರೆರ್ದೆಗೆ
ರಾಜವದನೆ ಕೇಳ್ಕೂಱಸಿಗೊಡಲಿತ್ತಾ | ರಾಜ ರಾಜ್ಯಗೆ ಪೂಜ್ಯನಹನು || ೧೦೯ ||

ಹರನ ಜಡೆಯ ಮಱೆಯನ್ನು ಹೊಕ್ಕ ಹೆಱೆ | ಗುರುಗನ ಭಯ ಬಿಟ್ಟುದಿಲ್ಲ
ತರುಣಿ ಕೇಳಾವಾವೆಡೆ ಹೋಗೆ ಹಣೆಯೊಳು | ಬರೆದ ಲಿಪಿಯ ಮೀಱಬಹುದೆ || ೧೧೦ ||

ಇಂತೆಂದು ಮನದೊಳೊಂದಿನಿಸಂಜದೆಯಾ | ಕಂತುಸದೃಶನಿರವಿಸಲು
ಕಾಂತೆ ಕಮಲಕುಟ್ಮಲಕುಚೆ ಮನದೊಳು | ತಾಂ ತಾಳಿದಳು ಚಿಂತೆಯನು || ೧೧೧ ||

ಅಭಿನವಸುರಭಿಶಿಳೀಮುಖಾಸನ ಮೇಱು | ನಿಭ ಧೀರಗುಣಗಣನಿಳಯ
ಶುಭಲಕ್ಷಣ ಲಲಿತಾಂಗನೊಪ್ಪಿದನಾ | ಪ್ರಭುಕುಲಶರಧಿಶಶಾಂಕ || ೧೧೨ ||

ಇದು ಭಾವಕಜನಕರ್ಣವಿಭೂಷಣ | ಮಿದು ರಸಿಕರ ಚಿತ್ತದೆಱಕ
ಇದು ವಾಣೀಮುಖಮಾಣಿಕ್ಯಮುಕುರ ಮ | ತ್ತಿದು ಶೃಂಗಾರಸುಧಾಬ್ದಿ || ೧೧೩ ||

ಐದನೆಯ ಸಂಧಿ ಸಂಪೂರ್ಣಂ