ಶ್ರಿಮದಮರಮಣಿಮುಕುಟರಂಜಿತರತ್ನ | ಧಾಮಾಂಬುಧಾರಾಧೌತ
ತಾಮರಸಾಂಘ್ರಿಯುಗಲವೀರನಾಥನು | ದ್ದಾಮ ಸುಖವವೀವುದೆಮಗೆ || ೧ ||

ಶ್ರೀಯುತ ಭಾಸುರಾರುಣನಾಮತಾಮರ | ಸಾಯತಪದನಮಲಾಂಗ
ಕಾಯಜಸನ್ನಿಭರೂಪನೆಸೆದನಾ | ರಾಯನುಜ್ವಲಕೀರ್ತಿಯುತನು  || ೨ ||

ಆ ದೇವವೃಂದ ಸಹಿತ ಕಣ್ಣಮೆಯ್ಯನ | ತ್ಯಾದರದಿಂದಿಳಿತಂದು
ಆ ದೇಗುಲಹೊಕ್ಕತಿಭರದಿಂ | ದಾ ದೇವನ ಪೂಜಿಸಿದನು  || ೩ ||

ಪರಮನ ಪದವ ಪೂಜಿಸಿ ಪೊಂಬಸದಿಯ | ನುರುಮುದದಿಂ ಪೊರಮಟ್ಟು
ಸುರಪತಿಯಾಶ್ರೀಪಾಲರಾಯನನಾ | ದರದಿಂ ಪೊಗಳ್ದನಿಂತೆಂದು  || ೪ ||

ಕುಲಗಿರಿಗಳೆಲ್ಲವನೊಂದು ನಿಮಿಷದಿ | ಹೊಳಕಿ ಹೊಳಕಿ ಬಿಡುವೆನ್ನ
ಕುಲಿಶದಂಡವ ಪಿಡಿದೀ ಸಗ್ಗಿಗರ ಜಂ | ಗುಳಿ ಸಹಿತವೆ ಬಲಿದೊತ್ತೆ  || ೫ ||

ಪಲ ಪಗಲಿಂ ಕೀಲಿಸಿ ನಿಂದೀ ದೇ | ಗುಲದ ಬಜ್ಜರದ ಕವಾಟ
ಲಲಿತಾಂಗ ನಿನ್ನ ಕಾಣುತವೆ ತೆಱೆಯಿತ್ತೆಂದು | ಪಲಸೂಳಿಂ ಪೊಗಳಿದನು  || ೬ ||

ಇಂತುರೆ ಪೊಗಳುತ ಪಲಗಣ್ಣನಾ ಭೂ | ಕಾಂತ ಶಿರೋಮಣಿಗಾಗ
ಸಂತಸದಿಂ ಕಾಮರೂಪಿನ ಮುದ್ರಿಕೆ | ಯಂ ತಳುವದೆ ಕೊಟ್ಟನಾಗ  || ೭ ||

ಆ ನವರತ್ನದೂರ್ವಿಕೆಗೊಟ್ಟು ಬಳಿಕ | ತಾನೇನೇನುಣಿಸನಿಶ್ಚೈಸಿ
ಸಾನುರಾಗದೊಳೀವಮೃತಪಾತ್ರವನಿ | ತ್ತಾ ನಾಕಪತಿ ಸಗ್ಗಕಡರ್ದ  || ೮ ||

ಇತ್ತಲಿಳಾಧಿನಾಯಕನೊಲವಿಂ ದೇ | ವೋತ್ತಮನಡಿದಳಕೆಱಗಿ
ಮತ್ತಾದೇಗುಲವನು ಪೊಱಮಟ್ಟುಬ | ರುತೊಂದು ಗಹನಕೈದಿದನು  || ೯ ||

ಮಂಡಲದೊಳಗುಳ್ಳರಿನೃಪಕುಲವೇ | ತಂಡಸಮಿತಿ ಮೃಗರಾಜ
ಚಂಡವಿಕ್ರಮನಾಗಹನದ ಕಿಱುವಟ್ಟೆ | ಗೊಂಡೆಯ್ದಿದನಾಕ್ಷಣದೊಳು  || ೧೦ ||

ಅಂಬರದಂತವನೀಶ್ವರಸಭೆಯಂ | ತಂಬುರುಹಾಕರದಂತೆ
ತುಂಬಿರಾಜಿಪ ರಾಜಹಂಸಗಳಿಂ ಕ | ಣ್ಗಿಂಬಾದುದಾ ಪೇರಡವಿ  || ೧೧ ||

ಶಶಿಯಂತೆ ಶಶಪಟವಲ್ಮೀಕಾಶ್ರಯ | ವಸುಧಾಧಿಪ ಬಲದಂತೆ
ಮುಸುಗಿದ ಖಡ್ಗ ಕರೀಂದ್ರಗಳಿಂ ಕ | ಣ್ಗೆಸೆದಿಹುದಾ ಬಲ್ಗಾಡು  || ೧೨ ||

ಬಿದಿರ್ವಿಂಡಿಲು ಮುಳ್ಳುಗಱುಚೆ ಬಲ್ಮೆಳೆ ಬೆತ್ತ | ಪುದಿದಡಲ್ಸೀಗೆ ಬಲ್ಪೊದರು
ಕದಡಿ ಕಸಕೆ ಕಣೆಗಾಡಾ ಹಳುವಿನೊ | ಳೊದವಿಹುದೆಲ್ಲಿ ನೋಡಿದರು  || ೧೩ ||

ನೊಸೆನೈಹಂಚಿ ಕಣಿಗಿಲೆ ನಾಲೆಗರುಗರ | ಕ್ಕಸಿದರ್ಭೆಕಾಱೆಕಱುಂಕೆ
ಕಸಕೆಕವಲ್ಗೊಟ್ಟಮರದಾರಕ್ಕೆವುಲ್ಲೆ | ಯೆಸೆದಿಹವಾ ವಿಪಿನದೊಳು  || ೧೪ ||

ಮಱೆಹೊಕ್ಕ ಕಳ್ತಲೆಗೊಡದೆಯಿನಾಂಶುವ | ಉಱೆಯರ್ಧಚಂದ್ರನನೀವ
ತೆಱವೆನೆ ನೆಗೆದ ಕವಲ್ಗೊಂಬುಗಳನಾಂತು | ತುಱುಗಿ ಬಲ್ಮರವಿಪ್ಪವಲ್ಲಿ  || ೧೫ ||

ಸೂಕರ ಶುನಕ ಶರಭ ಶಾರ್ದೂಲ ಭ | ಲ್ಲೂಕ ಲುಲಾಯ ಮದೇಭ
ಭೇಕರ ಕರಡಿ ಕೇಸರಿ ಭೇರುಂಡಗ | ಳಾಕಾನೊಳು ತುಱುಗಿದವು  || ೧೬ ||

ನರಿ ನಾಯ್ಪಂದಿ ಸಾರಂಗ ಕಡವೆಮುಂ | ಗುರಿ ಬೆಕ್ಕು ಕೋಡಗ ಕೂರಂಗಿ
ಮರಿಹುಲ್ಲೆ ಮೊಲ ಝಲ್ಲಿಮಿಗ ಮುಸು ತೋಳಗ | ಳಿರಲೊಪ್ಪಿತಾಬಲ್ಗಾಡು  || ೧೭ ||

ಹರಡೆ ಹಸುಬ ಮೆಳೆಗೆದಱ ಗೀಜಗ ಗುಬ್ಬಿ | ಪುರುಳಿ ನಿರಗ ನೀರ್ವಾಯ
ಮರಕೊಟ್ಟ ಚಿಟ್ಟೆ ಕೊಟ್ಟಿಕನಿಡೆಗಾಱ ಹೊಂ | ಗುರುವಕ್ಕಿಯೆಸೆದವಂದಲ್ಲಿ  || ೧೮ ||

ಮರೆಯನುರುಗನುರಗನ ದಂತಿ ದಂತಿಯ | ಹರಿಯು ಹರಿಯನು ಶರಭ
ಶರಭನ ಕರ್ಚಿ ಪಾರುವ ಭೇರುಂಡಗ | ಳಿರಲೊಪ್ಪಿತಾ ಪೇಱಡವಿ  || ೧೯ ||

ಮರ ಮೊದಲೊಳಗಾಗಿಳಿಸಿ ಮಱೆಯಗೆಯ್ದ | ಲ್ಲಿರೆ ಮೃಗವಲ್ಲಿಗೆಯ್ತಂದು
ಅರಸಿ ಪತ್ತಲು ಪಾಯ್ದುಗಿ ಬಗಿ ಮಾಳ್ಪ ಭೀ | ಕರದ ಪೆರ್ಬುಲಿಯಿರ್ಪವಲ್ಲಿ  || ೨೦ ||

ಮುಳಿದೊಂದು ಕರಿಯ ಕೇಸರಿ ಸೀಳೆ ಕುಂಭ | ಸ್ಥಳದ ರಕ್ತದಿ ಪೊರೆದಿರ್ದ
ತೊಳಪ ಮುತ್ತುಗಳೆಸೆದವು ಕಿಱುಸಂಜೆಯ | ಪೊಳೆವ ತಾರೆಗಳೆಂಬಂತೆ  || ೨೧ ||

ಕಡುದೊಡ್ಡಿತಪ್ಪ ಸೂಕರನೊಡ್ಡೆತ್ತಿದ | ನಿಡಿದಪ್ಪ ಕದಳಿಯ ಕಂಬ
ಪೊಡವಿಯನಿಡಿದಿಱಿದಾನೆಯ ಭರಿಕಯ್ಯ | ಪಡಿಯೆನೆ ಕಣ್ಗೆ ರಂಜಿಸಿತು  || ೨೨ ||

ಶರಭ ಸಿಂಗವ ಕರ್ಚಿ ಪಾಱಲದಱ ಬಾಯ | ಕರಿಬೀಳಲು ಭೀಮಸೇನ
ಕುರುಧರೆಯೊಳಂದಿಟ್ಟಾನೆ ನಭದಿಂ | ಧರೆಗುರುಳುವ ತೆಱನಾಯ್ತು  || ೨೩ ||

ತಳಿರ್ವತ್ತೆಗೆ ಕವಲ್ಗೊಂಬು ಠವಣಿ ಕೋ | ಲಳಿ ಶುಕ ವಟು ತತಿಯಾಗಿ
ಬಳಸಿರಲೊಂದು ಬಲ್ಮುಸು ನರೆಗಡ್ಡವ | ತಳೆದ ದೀಕ್ಷಿತನಂತಾಯ್ತು  || ೨೪ ||

ಬಳಸಿ ನೋಡುವ ಸಿಂಗಳೀಕ ಕೋಡಗ ಮುಸು | ಗಳ ಮಧ್ಯದೊಳಗಾ ನೃಪತಿ
ತೊಳಲಿದನಂದಿನ ವನದೊಳಗಣ ಕಪಿ | ಬಲದ ರಾಘವನೆಂಬಂತೆ  || ೨೫ ||

ಹೊಡೆಗಾಳಿಗುದುರ್ವ ಬಿದಿರ ಮುತ್ತು ಹಾವಿನ | ಹೆಡೆವಣಿವೆಳಗಾ ಬನದ
ಒಡತಿ ನೃಪತಿಗೆ ಸೇಸೆಯ ತಳಿದಾರತಿ | ವಿಡಿದೆತ್ತುವ ತೆ—ನಾಯ್ತು  || ೨೬ ||

ಬಿಯದರಾಡುವ ಬಲು ಬೇಟೆಯಾರ್ಭಟೆಗತಿ | ಭಯಮುತ್ತೊಂದು ಮಯೂರ
ಜಯವನಿತೇಶನ ಕಾಲೆಡೆ ಹಾಯೆ ಶೂ | ಲಿಯ ಸುಕುಮಾರನಂತೆಸೆದ  || ೨೭ ||

ಭರದಿಂದವೆ ಕೊಂಬುಕೊಂಬಿಗೆ ನೆಗೆದ ಪ | ಲ್ಕಿರಿದೌಡುಗಚ್ಚಿ ಠಱ್ರೆದು
ಬರಿಯ ಬೆರಂಟುತೇಡಿಸಿ ನಗಿಸಿತು ಭೂ | ವರನ ಬಲೀಮುಖನೊಂದು  || ೨೮ ||

ಜಪಿಯಿಪ ಜನ್ನಮಾಡುವ ವೇದವೋದುವ | ಉಪದೇಶಿಸುವ ಕಥೆವೇಳ್ವ
ಲಿಪಿಗಲಿಸುವ ನಿತ್ಯಕರ್ಮವನೆಸಗುವ | ತಪಸಿಯಾಲಯಮಿರ್ಪವಲ್ಲಿ  || ೨೯ ||

ಬಲೆದೊಡಚುವ ಬಿಲ್ಲನೊಱೆದಂಬುದಿರ್ದುವ | ಗೊಲೆಗಟ್ಟುವ ಗಾನೊ—ವ
ಹಲನಾಯಹಾಸಮಾಡುವ ಬೇಡವಳ್ಳಿಯ | ನಲಘವಿಕ್ರಮ ಕಂಡನಾಗ  || ೩೦ ||

ಅಳಿಗುರುಳೊಳ್ದುಱುಬಿನ ನಿಡಿದೋಳಿನ | ಬೆಳತಿಗೆಗಣ್ಣ ಬಲ್ಮೊಲೆಯ
ತೊಳಪಗಲ್ಲದ ತೋರಪೊಱವಾಱಬಿಯದಿಯ | ರೆಳಸಿನೋಡಿದರು ಭೂವರನ  || ೩೧ ||

ಕಾಮನ ಕೈಯ ಕರಿಯಕಬ್ಬಿನಬಿಲ್ಲ | ಕಾಮನೇಱುವ ಮದಕರಿಯ
ಕಾಮಕಾಳಾಹಿಯವರ್ಣದ ಬಿಯದಿಯ | ರಾ ಮಹಿಮನನು ನೋಡಿದರು  || ೩೨ ||

ಮಿಸುಪ ನೀಲದಬೊಂಬೆಯೊ ಮೃಗಮದರಂ | ಜಿಸುವ ಚಿತ್ರದ ಕರ್ಬೊನ್ನ
ಹೊಸಕಱುವೊ ಕಾಡಿಗೆಯ ರೂಹೋಯೆನ | ಲೆಸೆದರು ಕಾಳ್ಬೇಡತಿಯರು  || ೩೩ ||

ನೊಸಲ ನಾಮದ ಗೆರೆವಱೆಗಜಕುಂಭವ | ಪೊಸಮುತ್ತಿನ ಮಾಣಿಕದೊಡವೆ
ಎಸೆವ ತಾರಾಮಾಲೆಯೆನೆ ಬಿಯದಿಯರು ರಂ | ಜಿಸಿದರಿರುಳ್ವೆಣ್ಗಳಂತೆ  || ೩೪ ||

ಕಾಳಿಂದಿಯ ಮಡುವಿನೊಳು ರಾಜಿಸುವ ವಿ | ಲೋಲಾಂಬುಚರಗಳೆಂಬಂತೆ
ಬಾಲವನೇಚರವನಿತೆಯರುಗಳ ವಿ | ಶಾಲಾಕ್ಷಿಗಳೊಪ್ಪಿದವು  || ೩೫ ||

ಹಾವಿನ ಹೆಡೆವಣಿದೊಡವು ಮುಡಿದ ಕಾಡ | ಹೂವಮೆಯ್ಗೊಱೆದಾನೆಸೊಕ್ಕು
ಮಾವಿನ ಪಚ್ಚೆಲೆದುಪ್ಪಟಿಯುಡಿಗೆಯೂ | ಳಾ ವನಚರಿಯರೊಪ್ಪಿದರು  || ೩೬ ||

ಚಾರುಕಟಾಕ್ಷರುಚಿಯ ಮಿಂಚುವುಟ್ಟ ಮ | ಯೂರಪಿಂಚದ ಸುರಚಾಪ
ರಾರಾಜಿಸೆ ಬಿಯದಿಯರು ಕಣ್ಗೆಸೆದರು | ಕಾರಕಾರ್ಮುಗಿಲೊಡ್ಡನಂತೆ  || ೩೭ ||

ನಗೆಮಿನುಗುವ ಮುದ್ದುಮೊಗದ ತುಂಬಿದಮೆಯ್ಯ | ಹೊಗರನೇಳಿಪಕುಂಭಕುಚದ
ಮಿಗವಱಿಗಣ್ಣ ಬಲ್ಮೊಲೆಯ ಬೇಡಿತಿಯರು | ಬಗೆವಂದರಾ ವಿಪಿನದೊಳು  || ೩೮ ||

ಎಳೆಯುಲ್ಲೆಯೊಡನಾಡಿ ಕೆಲೆನೋಟನಮಱಿ | ಗಿಳಿಯೊಳು ನುಡಿದು ನುಣ್ನುಡಿಯ
ಕಳಭಂಗಳೊಳು ಮಂದಯಾನವ ಕಲಿತಾಡು | ವೆಳೆವೇಡಿತಿಯರಲ್ಲಿಹರು  || ೩೯ ||

ಬಿದಿರಕ್ಕಿಯ ಚಂದನದೊಳು ಪೊಯ್ದು | ಮದದಂತಿಯ ದಂತದೊನಕೆಯ
ಪದೆದೆತ್ತಿ ಸುವ್ವಿವಾಡಿಂದ ವನೇಚರ | ಮದವತಿಯರು ಥಳಿಸುವರು  || ೪೦ ||

ತನುಗಂಧಕೆಮಗೆಣೆಯಿಂದುಗರ್ವಿಸಿರಿಸಿ | ವೆನುತವೆಯೊರಲು ಚಂದನವ
ಒನಕೆಯಿಂ ಬಡಿದಕ್ಕಿ ತೊಳಸುವ ನೆವದಿ | ವನಚರಿಯರು ಕುಟ್ಟುತಿಹರು  || ೪೧ ||

ವನಚರಿಯಱಿಕ್ಕುತ ಸುವ್ವಿಸುವ್ವಿಯೆಂ | ದೆನುತ ಬಿಡುವ ನಿಡುಸುಯ್ಯ
ತನಿಗಂಪು ಸೋಂಕಲೊಡನೆ ಸಿಂಧುವಾರದೊಂ | ದೊನಕೆ ಕೊನರ್ತುದಾಕ್ಷಣದಿ  || ೪೨ ||

ಇಂತೆಸವಾ ಬೇಡವಳ್ಳಿಯನಾ ಭೂ | ಕಾಂತ ನರೀಕ್ಷಿಸಿ ಬರುತ
ಮುಂತೊಂದು ತದುಕುಗಾನೊಳು ಹೇರಾನೆಯ | ತಿಂಥಿಣಿಯನು ಕಂಡನಾಗ  || ೪೩ ||

ಅರೆಯೆಡೆಯೊಳಗೆಕ್ಕೆಯಿಂದವೆ ಹೋರು | ತರೆಯೆಡೆಯೊಳು ತಱಹರದಿ
ಪಿರಿದಪ್ಪರತಿಯ ಮಾಡುವವನ ಕರಿ | ಯಿರಲೊಪ್ಪಿತಾ ಬಲ್ಗಾನು  || ೪೪ ||

ಮೆಯ್ಯಿಕ್ಕಿ ಮೆಯ್ಯನೆ ತುಱಿಸಿ ನಾಣೆಡೆಗಯ್ಯ | ಮೋಹಿಸಿ ಕಾತರಗೊಳಿಸಿ
ನೇಹದಿ ಕೂಡಿ ಹೆಣ್ಣಾನೆಯೊಳಾನೆಗ | ಳಾ ಹಳುವಿನೊಳು ತೀವಿದವು  || ೪೫ ||

ಬಳಸಿದ ಗಂಧ ಶೈಲದ ಮಧ್ಯದೊಳು ಪೊಸ | ತಳೆದಂಜನಗಿರಿಯಂತೆ
ಉಳಿದಾನೆಯ ಮಧ್ಯದೊಳಗೊಂದು ಕರಿ | ಕಣ್ಗೊಳಿಸಿದುದತಿ ಪಿರಿದಾಗೆ || ೪೬ ||

ಕಟ್ಟಾನೆಯ ಮೊಗದೊಳು ಕರ್ಣಯುಗದಳ | ವಟ್ಟವು ಕಡುದೊಡ್ಡಿತಾಗಿ
ನೆಟ್ಟನೆ ಪಾಱುವಂದಿನ ಬಲುವೆಟ್ಟದ | ಱಟ್ಟೆಗಳೆಂಬ ಮಾಳ್ಕೆಯೊಳು  || ೪೭ ||

ಉರುತಱಕರ್ಣದ್ವಯಪಕ್ಷದಮುಖ | ಗರುಡನೋವದೆ ಪಿಡಿದಿರ್ದ
ಪಿರಿಯ ಕಾಳೋರಗನೆನಲಾದಂತಿಯ | ಭರಿಕೈ ಕಣ್ಗೆರಂಜಿಸಿತು  || ೪೮ ||

ಭರಿಕೈಯನುಡುಗಿ ಭೂಮಿಯನಿಡಿದಱೆದ ಮದ | ಕರಿಯದಂತಿಗಳಂದು ಧರೆಯ
ಹರಹಲುದ್ಯೋಗಿಸುವಾ ದಿವರಾಜನ | ಪಿರಿಯ ದಾಡೆಯವೋಲೊಪ್ಪಿದವು  || ೪೯ ||

ಕರಿಯುರುಕಱತಟದಿಂದವೆ ಮದಧಾರೆ | ಸುರಿಯೆ ನೀಲಾದ್ರಿಯೊಳೆಸೆವ
ಎರಡು ತಟಂಗಳೊಳುದಯಿಸಿ ಬೀಳ್ವ ನಿ | ರ್ಝರವಂತೆ ಕಣ್ಗೆರಂಜಿಸಿತು  || ೫೦ ||

ಮೊಗವಿಟ್ಟು ವಿಸಟಂಬರಿದು ದೆಸೆಗೆಮೇಹ | ನುಗುಳಿದುದಾ ದಿಗ್ಗಜವನು
ಜಗಳಕ್ಕೆ ತಂಬುಲವಿಟ್ಟವಗಡಿಸುವ | ಬಗೆಯಾದುದಾಭದ್ರಹಸ್ತಿ  || ೫೧ ||

ಲೋಕವನಿರದೆ ನೊಣೆವೆನೆಂಬ ಹೆಮ್ಮಾರಿ | ಯಾಕಾರಮೆನೆ ನಡೆತಪ್ಪ
ಆ ಕುಂಭಿಯು ಕಾನೊಳು ನಡೆತರುತಿರ್ಪಾ | ಭೂಕಾಂತನ ಕಂಡುದಾಗ  || ೫೨ ||

ಕಂಡು ಕಾಲನಕೋಣ ಮುನಿದವೋಲಾವೇ | ತಂಡನಾಗ್ರಹದಿಂದೈದಿ
ಸುಂಡಿಲನೆತ್ತಿಪೊಡೆಯಲು ಕುಂಭಿನಿಗೆ ಭೂ | ಮಂಡಲಾಧಿಕಪನುರುಳಿದನು  || ೫೩ ||

ಧರೆಗುರುಳಿದ ನೃಪತಿಯ ಕಂಡಾ ಕರಿ | ಇರದೆ ಕೊಂಬುಗಳಿಂ ತಿವಿಯೆ
ಕುರುಧರೆಯೊಳು ಭಗದತ್ತೇಭ ಭೀಮನ | ಭರದಿ ತಿವಿದ ತೆಱನಾಯಿತು  || ೫೪ ||

ತಿವಿದಾನೆಯ ದಂತದ್ವಯ ಮಧ್ಯದಿ | ಯವನಿಪ ಜಗುಳಿಕ್ಕಿದೊಡೆ
ತವಕದಿ ಪಿಡಿದಾ ರಾಹುವಿನ ದಾಡೊಯೊಳೊ | ಪ್ಪುವ ಚಂದ್ರಮನಂತೆಸೆದ  || ೫೫ ||

ಎರಡು ಕೋಡೆಡೆ ಸಿಲ್ಕಿದರಸನೊಪ್ಪಿದನಾ | ಕರಿಯೆಂದೆಂಬ ಕಮ್ಮಱನ
ಕರದೊಳಗಣ ಸಮದಳವೇಱಿದ ಹೊನ್ನ | ಸುರಗಿ ತಾನೆಂಬಂತೆ  || ೫೬ ||

ಅಯ್ಯಯ್ಯೊ ನೃಪನಳಿದನಳಿದ ಕೊಲೆ | ಗಯ್ಯನಪ್ಪಾನೆಯೊಳೆಂದು
ಕಯ್ಯಬೆಱಲ ಪೊಸೆವುತ ಬಿಯದಿಯರಲ್ಲಿ | ಪುಯ್ಯಲಿಟ್ಟಳಲಿದರು || ೫೭ ||

ಚಂಡವಿಕ್ರಮ ದಂತದಿಂ ಸಾಯದಿರ್ದೊಡೆ | ಕಂಡು ಕೋಪದೊಳೀಡಾಡಿ
ಚೆಂಡನೊದೆವ ತೆಱದಿಂದಾ ಮದಕರಿ | ತಂಡನೊದೆದುದಡಿಯಿಂದ || ೫೮ ||

ಒದೆಯಲೊಡನೆ ಕಾಲ ಬಾಯಿಗೆ ಸಿಲ್ಕದೆ | ಪದಪಿಂದುರುಳಿ ಬಳಿಕ
ಮದದಂತಿಯ ನಾಲ್ವಜ್ಜೆಯ ನಡುವೆ ಭೂ | ಸುದತಿಪತಿ ನಿಂತನಾಗ || ೫೯ ||

ಮತ್ತಹಸ್ತಿಯ ತೊಡೆಯೆಡೆಯೊಳು ನಿಂ | ದುತ್ತಮ ಸತ್ವನೊಪ್ಪಿದನು
ಬಿತ್ತರಮಾದುದಂದಿನ ಬಿಣ್ಪಿನ ಬೆಟ್ಟ | ವೆತ್ತಿದ ಹರಿಯೆಂಬಂತೆ || ೬೦ ||

ಏನೆಂಬೆನಾ ಸೊಗಸಿನ ಬೀರಮನಾ | ಆನೆಬಿಟ್ಟೊಡೆ ತಾನು ಬಿಡದೆ
ನಾನಾತೆಱದೊಳದಱ ಕೂಡೆ ಮಿಗೆ ಹೋರಿ | ತಾನತಿಕೀರ್ತಿವಡೆದನು || ೬೧ ||

ಬತ್ತೀಸತೆಱದ ಬಿನ್ನಣದಿಂದಾ ಭೂ | ಪೋತ್ತಮನತ್ಯುಗ್ರಮಪ್ಪ
ಮತ್ತಹಸ್ತಿಯ ಬಳಲಿಸಿ ಬಳಿಯೊಳು ಬೆನ್ನ | ಹತ್ತುವೆನೆಂದೆಣಿಸಿದನು || ೬೨ ||

ಕಡುದೊಡ್ಡಿತಪ್ಪೊಂದು ಸರಿಯ ಬೆಟ್ಟನೆಕಾಣು | ತಡರ್ವೆಳೆವಳ್ಳಿಯಂದದೊಳು
ತಡಮಾಡದೆ ತತ್ಕರಿಯ ಬೆಂಗಡೆಗಂದು | ಕಡುಗಲಿಯುಣ್ಮುತೇಱಿದನು || ೬೩ ||

ಹರಿನೀಲದ ಮಾಣಿಕ್ಯಮಾಡದ ಮೇಲೆ | ಸುರುಚಿರಮಪ್ಪ ಹೊಂಗಳಸ
ಕರಮೆಸೆವಂತಾ ಕರಿಯಮಸ್ತಕದೊಳು | ನರನಾಥಚಂದ್ರನೊಪ್ಪಿದನು || ೬೪ ||

ಮುಗಿಲೊಡ್ಡಿನ ಕೊನೆಯೊಳು ಕೆನ್ನೇಸಱು | ಸೊಗಯಿಸುವಂತಾ ಗಜನ
ಪೆಗಲೇಱಿದ ಪರಿವೃತನೃಪನೆಡೆಗೊರ್ವ | ಗಗನಚರನೆಯಿದ್ದನು || ೬೫ ||

ಬಂದಾ ಬಾಂಬಟ್ಟೆಗನಾಗಸದೊಳು | ನಿಂದು ನೃಪತಿಗೆ ತುಳಿಲ್ಗೆಯ್ದು
ಮಂದೇತರಮುದದಿಂ ತಾನಲ್ಲಿಗೆ | ಯ್ತಂದ ತೆಱನ ಪೇಳ್ದನಿಂತು || ೬೬ ||

ನರನಾಥ ಚಿತ್ತೈಸೆಮ್ಮ ಸಿವಂಕರ | ಪುರದ ವಿಮಲವಾಹನನು
ತರುಣಿಕಾಂತಾವತಿಯವರಿರ್ವರಸುತೆ | ತರಳೆ ಜಯಾವತಿದೇವಿ || ೬೭ ||

ನಿನ್ನೆ ರತ್ನಾಕರಕುಧರಾಗ್ರದೊಳು ಗು | ಣೋನ್ನತ ನಿಮಗೆ ಮೂರ್ಛೆಯನು
ತಾಂ ನೆಲೆಯನು ಮಾಡಿ ರಕ್ತಗಂಬಳವನು | ತಾಂ ನೆರೆ ಬಿನ್ನಾಣದಿಂ ಪೊದಿಸಿದಳು || ೬೮ ||

ಬಳಿಕವೆ ತನ್ನೊಡನೆಯ್ತಂದ ಮೇಳದ | ಕೆಳದಿಯರನು ಕಾಪಿರಿಸಿ
ಲಲನಾಮಣಿ ತಮ್ಮಯ್ಯನ ತರಲೆಂದು | ಪೊಳಲನೆಯ್ದಿದಳು ಮತ್ತಿತ್ತ || ೬೯ ||

ರವಿಯುದಯದೊಳಮಳ್ದಲೆವಕ್ಕಿಯೆಯ್ತಂ | ದವನಿಪ ನೀ ಪೊದೆದಿರ್ದ
ನವಕಂಬಳವನಡಂಗೆನುತವೆ ಕರ್ಚಿ | ತವಕದಿನಡರ್ದುದಾಗಸಕೆ || ೭೦ ||

ಅನಿತರೊಳತ್ತ ಜಯಾವತಿಸತಿ ತನ್ನ | ಜನಕ ಜನನಿಯರುವೆರಸಿ
ಘನಮಾರ್ಗದಿಂ ಬಂದು ನಿನ್ನ ಕಾಣದೆ ಸಖಿ | ಜನವ ಕೇಳಿದಳಿಂತೆಂದು || ೭೧ ||

ಆವೆಡೆಯಿರ್ದಪನೆನ್ನಿನಿಯನುಸುರಿಯನ | ಲಾವನಿತೆಯರ್ಭಯಮುತ್ತು
ಭೂವರನೆಯ್ದಿದಂದವನೊಱೆದರು ರಾ | ಜೀವಾಕ್ಷಿಯರು ದುಃಖಿಸುತ || ೭೨ ||

ಧೀರಲಲಿತ ನಿನ್ನ ವಾರತೆಗೇಳಿ ಕು | ಮಾರಿ ಹೆಗ್ಗರ ಹೊಡೆದಂತೆ
ಆರೊಯ್ದರೋ ನಿನ್ನನೆಂದು ಹಮ್ಮೈಸುತ | ಧಾರುಣಿಯೊಳು ಪೊರಳಿದಳು || ೭೩ ||

ಇಟ್ಟಣಿಸಿದ ದುಃಖದ ಕಡುಗಿಚ್ಚಿಂ | ತೊಟ್ಟನೆ ಬಿಳ್ದಳಾಲತಾಂಗಿ
ಸುಟ್ಟುರೆಯಿಂದೊಲೆದಿಳೆಯೊಳು ಲತೆಮೆ | ಯ್ಬಿಟ್ಟುರಳುವ ತೆರನಾಯ್ತು || ೭೪ ||

ಕೆದರಿದ ಕೇಶ ಕೆಂಪಡಱಿದ ನಾಸಿಕ ನೀ | ರುದುರ್ವಲರ್ಗಣ್ಣು ಬೆಬ್ಬಳಿಪ
ವದನವೇಱುವ ಸೇದೆ ಪೊರಲಿಂದಾ ರಾಜ | ಸುದತಿಮಣಿಯಳಲಿದಳು || ೭೫ ||