ಶ್ರಿಮದಮರಮಣಿಮುಕುಟರಂಜಿತರತ್ನ | ಧಾಮಾಂಬುಧಾರಾಧೌತ
ತಾಮರಸಾಂಘ್ರಿಯುಗಲವೀರನಾಥನು | ದ್ದಾಮ ಸುಖವವೀವುದೆಮಗೆ || ೧ ||

ಶ್ರೀಪುರುಷೋತ್ತಮನಂದನಸನ್ನಿಭ | ರೂಪ ಮನುಜಮಂದಾರ
ಈ ಪೆಣ್ಮಣಿಯನೊಲಿಸು ಸಂತಸದಿಂ | ಶ್ರೀಪಾಲರಾಜಕುಮಾರ || ೨ ||

ಆ ದುಷ್ಟ ಖಗನೆಸಗಿದ ವಿದ್ಯೆಯಿಂ ಮುಂ | ಪೋದೆಲ್ಲಾವಿದ್ಯೆಗಳ
ಆದರದಿಂ ಪುಣ್ಯನಿಧಿ ನಿನ್ನ ಕಂಡು ಬಿ | ಜ್ಜಾದರಿಗೀಗಲೆಯ್ದಿದವು || ೩ ||

ಶಶಿಮಂಡಲನಿಭವದನೆಯ ದಾಡಿಮ | ದಶನೆಯನೀವಿದ್ಯೆಯನು
ವಶಮಾಡಿ ಪುಂಡರೀಕಿಣಿಗೆಯ್ದುವುದನು | ಕುಶಲ ನೀನೆಣಿಸು ಬೇಗದೊಳು || ೪ ||

ಎಂದಾಸಖಿ ಪಲತೆಱದೊಡಂಬಡಿಕೆಗ | ಳಿಂದ ಪೇಳಲು ನೃಪವರನು
ತಂದೆ ತಾಯನುಮತವಲ್ಲದಬಲೆಯರೊ | ಲೊಂದುವುದನುಮತವಹುದೆ || ೫ ||

ಉಪನಯನವ ಮಾಡುವ ಕಾಲದೊಳೆನ | ಗುಪದೇಶಕಱಂತಪ್ಪ
ವಿಪರೀತಾಚರಣೆಯ ಮಾಣೆಂ | ದುಪದೇಶಿಸಿದರೆಂದುಸುರ್ದ || ೬ ||

ಎಂದಾಸಖಿಯೊಳು ನೃಪನುಸುರಲು ಕೇಳು | ತೆಂದಳಾಖಚರಕುಮಾರಿ
ಮಂದೈಸಿದ ಲಜ್ಜೆಯಿಂದೈದಿ ನುಡಿದಳು | ಮುಂದಣ ಕಾರ್ಯದ ತೆಱನ || ೭ ||

ಈ ತರುಣಾರ್ಕಸನ್ನಿಭರೂಪನೆಡೆಗೆಮ್ಮ | ತಾತ ವಿಮಲವಾಹನನ
ಪ್ರೀತಿಯಿಂದವೆತಂದು ಕೊಂಡೊಯ್ವೆ ಕೇಳಭಿ | ಜಾತೆಯೆಂದಳು ಕೋಮಲಾಂಗಿ || ೮ ||

ನಗರಿಗೆ ನಾವೆಯ್ದಿ ಮಗುಳ್ವನ್ನಬರಮೀ | ವಿಗಡನೀಯೆಡೆಯೊಳಗಿಹನೊ
ಒಗೆವನೊ ಮತ್ತೊಂದೆಡೆಗೆನುತವೆ ಸಂ | ದೆಗಮಾಡಿ ಮತ್ತಾಕ್ಷಣದಿ || ೯ ||

ತೊಲಗದವೊಲು ತನ್ನಯ ವಿದ್ಯೆಯಿಂದಾ | ನೆಲದಾಣ್ಮಗೆ ಮೂರ್ಛೆಯನು
ನೆಲೆಮಾಡಿ ಪಳಿಕುಗಲ್ಲಡಿಯೊಳಗಿರ್ದ ಕಂ | ಬಳವ ಪೊದೆಸಿದಳಾ ಕುವರಿ || ೧೦ ||

ಯುವತಿಯಲರ್ಗಣ್ಗಳ ಪುತ್ಥಳಿಯಂ | ತವನೀಪತಿಮೂರ್ಛೆಯೊಳು
ತವೆಸಂದು ಕಂಬಳದೊಳು ಮೈಯೊಳೊಪ್ಪಿದ | ನೆವೆಮುಚ್ಚದ ದಿಟ್ಟಿಯಂತೆ || ೧೧ ||

ಆ ಪೆಣ್ಮಣಿ ತನ್ನಯ ನಿಜಸಖಿಯರನಾ | ಭೂಪಾಲಕುಲಶೇಖರಗೆ
ಕಾಪಿಟ್ಟಾಭಾವಕಿಗೂಡಿ ನಿಜಪುರ | ಕಾಪಗಲಿನೊಳೆಯ್ದಿದಳು || ೧೨ ||

ಆ ವೇಳೆಯೊಳು ಜಗತ್ಪಾಲಮುನಿಪನ | ಕೇವಲಬೋಧಪೂಜೆಯನು
ದೇವೇಂದ್ರನು ನಾಲ್ದೆಱದನಿಮಿಷರು ಮ | ಹಾವಿಭವದಿ ಮಾಡುತಿರಲು || ೧೩ ||

ಅಲ್ಲಿಗೆ ವಿಮಲವಾಹನನು ಬಿಜ್ಜಾಧರ | ರೆಲ್ಲಸಹಿತ ಪೋಗಲದನು
ಸಲ್ಲಲಿತಾಂಗಿ ಜಯಾವತಿ ಕೇಳ್ದು ತಾ | ನಿಲ್ಲದಾಯೆಡೆಗೆಯ್ದಿದಳು || ೧೪ ||

ಪಡುಗಡೆ ಪಗಲಾಣ್ಮನ ಪಕ್ಕೆವಾಡದೊ | ಳೊಡಱುವ ಮಣಿವಾಗಿಲೊಳು
ತೊಡದ ಮಾಣಿಕತೋರಣದ ಬೆಳಗಿನಂತೆ | ಒಡವರಿದುದು ಸಂಜೆಗೆಂಪು || ೧೫ ||

ಆ ರತ್ನಾವರ್ತಾಚಲವೆಂದೆಂಬ | ಭೂರುಹದೊಳಗುಳ್ಳಲರ್ದ
ಚಾರುಕುಸುಮಮಂಜರಿಯೆನಲೆಸೆದವು | ತಾರಾತತಿ ಗಗನದೊಳು || ೧೬ ||

ಅಗಲಿಜೀವಿಪರನಳುಱುವಂಗಜಾಗ್ನಿಯ | ಹೊಗೆಯ ಬೆಂಬಳಿಯುರಿವಂತೆ
ಮೊಗಗತ್ತಲೆಯೊಳಿಂದುವಿನುದಯರಾಗ | ಸೊಗಸಿದುದಿಂದ್ರದಿಕ್ಕಿನೊಳು || ೧೭ ||

ಅರುಣಛಾಯೆ ಪಱಿದು ಮೂಡುವ ಶಶಿ | ಸುರಪದಿಶಾವಲ್ಲಭೆಯ
ಕೊರಲೊಳಗಿಕ್ಕಿದ ಬಟ್ಟಮಾಣಿಕದಾಲಿಯ | ದೊರೆಯೆನೆ ಕಣ್ಗೆ ರಾಜಿಸಿತು || ೧೮ ||

ಉದಯಿಸಿದಿಂದ್ರಮಂಡಲದಿಂ ಕೆದರ್ವಕೆಂ | ಗದಿರ್ಗಳೊಪ್ಪಿದೊವೆಡ್ಡಮಾಗಿ
ಮದನಾಸ್ತ್ರವನೊತ್ತಿಮಸೆವ ಸಾಣೆಯೊಳು ಪು | ಟ್ಟಿದ ಹೊಂಕಿಡಿಯೆಂಬಂತೆ || ೧೯ ||

ಪಿಡಿದಂಗಜನಾಡಿಪ ಶಂಕಪಾಳನ | ಹೆಡೆಯ ನುಡುವೆ ಕಪ್ಪುವಡೆದ
ಪೊಡೆಯಲರನ ಪಾದದ ಪಜ್ಜೆಯೊಯೆನೆ | ಎಡಗಱೆಯೆಸೆದುದಾ ಶಶಿಗೆ || ೨೦ ||

ಖರಕಿರಣಬೆಂಕಿಯೊಳು ಸಸ್ಯಾದಿಗ | ಳುರಿಗೊಂಡವೆಂದೋಷಧಿಯ
ಪಿರಿದಪ್ಪ ಕರುಣದಿಬಂದು ಸುಧಾಂಬುವು | ಕರದಿಂದ ವೆರಸಿರಿಸಿದನು || ೨೧ ||

ಅಂದಿನಿರುಳು ಕೆಂದಾವರೆ ಪೂವತಾ | ಳ್ದಿಂದೀವರತತಿ ಬಳಸಿ
ನಿಂದಂತಾಕುವರನ ಸುತ್ತಿ ನಿರಿಗುಱು | ಳಿಂದುಮುಖಿಯರೊಪ್ಪಿದರು || ೨೨ ||

ಪಿಡಿದಹಿಯುಗುಳ್ದ ಬಳಿಕ ಶಶಿಮಂಡಲ | ದೊಡಲಮೃತವನುಂಬೆವೆಂದು
ಕಡುಹಸಿದನಿಮಿಷಾಂಗನೆಯರಿರ್ಪಂತೆವೆ | ಮಿಡುಕದಿರ್ಪರು ಕೋಮಲೆಯರು || ೨೩ ||

ಮೊಳೆತುದು ಮೂಡಗಡೆಯ ಕೆಂಪು ಮಸುಳಿತು | ಪೊಳೆವ ತಿಂಗಳ ತಿಳಿವೆಳಗು
ಕಳಿವೂವಿನಂತಾದವು ತಾರಗೆಗಳು | ಬೆಳಗಿನಿಸಿನಿಸು ತೋಱಿದುದು || ೨೪ ||

ಚರಿಸಿದನಿರುಳರಕ್ಕಸನಂತೆ ದೋಷಾ | ಕರನಾಡಿಸೀ ಪಾಪವನು
ಪರಿಹರಿಸುವೆನೆಂದಸ್ತಾದ್ರಿಯೇಱಿ ಕ | ಮ್ಮರಿಬೀಳ್ವವೊಲು ಬಿದ್ದನಿಂದು || ೨೫ ||

ಬೆಚ್ಚನಾದುವು ಶಶಿಕಾಂತೋತ್ಪಲ ಮೊಗ | ಮುಚ್ಚಿದೊವಿಂದೀವರಗಳು
ಬೆಚ್ಚಂಬುಜಲಮಲರ್ದವುಯಿನನುದಯಿಸೆ | ಳಚ್ಚನಾಯಿತು ದಿಶಾವಲಯ || ೨೬ ||

ಏಳ್ದವು ಪಕ್ಕಿ ಮೇಬೊಲದದೆಸೆಗೆಬೆಂ | ಬೀಳ್ದುದು ಕವಿದ ಕಾವಳವು
ಬಾಳ್ದವು ಜಕ್ಕವಕ್ಕಿಗಳತಿದುಃಖವ | ತಾಳ್ದವು ಜೊನ್ನವಕ್ಕಿಗಳು || ೨೭ ||

ಪಿರಿದಪ್ಪ ಕೋಪದಿ ತಮವೆಂಬಸುರನ | ತುರಿಹದಿ ಕೊಲೆ ಪಗಲೆಂಬ
ಹರಿಯಿಟ್ಟ ಪಾಱುಂಬಳೆಯೆಂಬವೋಲಾ | ತರಣಿವಂಡಲವೊಪ್ಪಿದುದು || ೨೮ ||

ಎಳನೇಸಱಿಂದೂಪಲಧರೆಯೊಳುಮಾ | ರ್ಪೊಳೆದೊಡೆಯಾ ರತ್ನಶಿಖರಿ
ಪೊಳೆದುದು ತಾ ಪಲರವಿಮೂಡುವುದಯಾ | ಚಲವೆಂಬಮಾಳ್ಕೆಯೊಳು || ೨೯ ||

ಖರಕಿರಣನ ಧಾಳಿಗೆ ಕಂಗೆಟ್ಟೋಡಿದ | ವಿರುಳಂಚೆ ಕೆಲವು ಕಾಲ್ಗೆಟ್ಟು
ಭರದಿ ಪುಲ್ಗಚ್ಚಿ ನಿಂದಂತೆ ತೃಣಗ್ರಾಹಿ | ಹರಿನೀಲದೊಡ್ಡುಗಲ್ಲಿಹವು || ೩೦ ||

ಆ ರವಿಯುದಯದೊಳಾಗಸದಿಂ ಮುಂ | ಗಾಱಸಿಡಿಲು ಧೂಮಕೇತು
ಆಱಭಟಿಯೊಳೊಡಗೂಡಿ ಬರ್ಪಂತೊಂದು | ಭೇಱುಂಡನಲ್ಲಿಗೆಯ್ದಿದುದು || ೩೧ ||

ಗಱಿಗೊನೆಯುರಿವ ಕೇಸುರಿ ಮೆಯ್ಯಕೆಂಬಣ್ಣ | ತಱಿಗೆಂಡ ಮೊಗವಮಳ್ದಲೆಯ
ತೆಱನಾಗಲಾ ಭೇರುಂಡನೆಂಟಡಿಗನ | ನುಱೆ ಸುಡುವಗ್ನಿಯಂತಾಯ್ತು || ೩೨ ||

ಉರುಳಿದೊ ಸೊಕ್ಕಾನೆಯ ಜಂಗುಳಿಯರ್ದೆ | ಬಿರಿದವು ಸಿಂಗದ ಹಿಂಡು
ಪೊರಳಿದೊ ಶರಭದ ಸಂಗಡಮಾಪಕ್ಕಿ | ಮೊರೆದೆಱಗುವ ರಭಸಕ್ಕೆ || ೩೩ ||

ಮುಂಬರಿಯುತ ಶರಭಂಗಳ ಸೀಳಿಸಿ | ಱುಂಬಳಾಡುತ ಬರೆಬಂದು
ಅಂಬುಜಾಕ್ಷಿಯರ ಕಾಪಿನೊಳಿದ್ದಾ ರಕ್ತ | ಗಂಬಳವನು ಕಂಡುದಾಗ || ೩೪ ||

ಮುತ್ತಿರಿಸಿದ ಮಣಿಗಱಡಗೆಯಂತೆ ನೃ | ಪೋತ್ತಮನೆಸೆವಂಗವನು
ಸುತ್ತಿದರಕ್ತಗಂಬಳವನಡಂಗೆನ | ಲೆತ್ತಲೆಳಸಿತಾವಿಹಗ || ೩೫ ||

ಪಿಶಿತಾಸಕ್ತಿಯಿಂದವೆ ಕಂಬಳದೊಳಗಿರ್ದ | ಕುಶಲನನಾಭೇರುಂಡ
ನಿಶಿತವಾದಾಚಂಚುವಿಂ ಕರ್ಚಿಯುತ್ತರ | ದೆಸೆಯತ್ತಲಾಗಿ ಸಾಱಿದುದು || ೩೬ ||

ಕಾಣುತ ಮಣಿಮಯಗೋಪುರದೊಳಗಿ | ದ್ದೇಣಾಂಕನಿಭವದನೆಯರು
ಪ್ರಾಣವಳಿದ ದೇಹದಂತೆ ಬೆಬ್ಬಳವೋಗಿ | ತ್ರಾಣವಡಗಿ ಮಱುಗಿದರು || ೩೭ ||

ಕೆಟ್ಟೆವಾವೆಲೆ ಸುಕುಮಾರ ನಿನಗೆ ಬಾಂ | ಬಟ್ಟೆಯೇಗತಿಯಾಯಿತೆಂದು
ದಿಟ್ಟಿಗಳೊಳಗಶ್ರುಕಣ ಬೊಟ್ಟಾಡಲು | ತೊಟ್ಟನೆ ಬಿಳ್ದಳಲಿದರು || ೩೮ ||

ಅತ್ತ ಪಾಱಿದ ವಿಹಗನು ವಿಜಯಾರ್ಧದ | ತುತ್ತ ತುದಿಯ ಮೇಲೆಸೆವ
ಬಿತ್ತರವಹ ಸಿದ್ಧಕೂಟಜಿನಾಲಯ | ದೊತ್ತಿನ ವೃಕ್ಷಕೆಯ್ದಿದುದು || ೩೯ ||

ತರುಶಾಖೆಯೊಳು ಕುಳ್ಳಿರ್ಪಾಗಲಾ ನೃಪ | ವರನ ಪುಣ್ಯವೆ ಬರ್ಪಂತೆ
ಶರಭನೊಂದೆಯ್ತರೆ ಕಂಡಾ ಭೇರುಂಡ | ನಿರದುಗುಳ್ದುದು ಕಂಬಳವನು || ೪೦ ||

ಆಗ್ರಹದಿಂ ನುಂಗಿಯುಗುಳ್ವ ರಾಹುವಿನ ಮು | ಖಾಗ್ರದಿ ಬಪ್ಪಿನನಂತೆ
ಉಗ್ರಭೇರುಂಡನುಗುಳೆ ಪೊಱಮಡುವ ನೃ | ಪಾಗ್ರೇಶ್ವರನೊಪ್ಪಿದನು || ೪೧ ||

ತಾವರೆಗಣ್ಣ ತೆಱೆದು ಮೆಯ್ಮುರಿದೆಳ್ದು | ಭಾವಜಾರಿಯ ರೂಪವನು
ಭಾವದೊಳಿಟ್ಟು ಭಾವಿಸಿ ಮರದಿಂ ನೆಲ | ಕಾವದಿನಿಳಿದನಿಳೆಯಾಣ್ಮ || ೪೨ ||

ಸರಸಿಯೊಳಗೆ ಸರಸೀರುಹ ಮಧ್ಯದೊ | ಳರಸಂಚೆಯಂತೆ ಸಂಜೆಯೊಳು
ತರುಣಿಯರೆಡೆಯಿರ್ದೆನಿಂದಿಲ್ಲಿಗೆ ಬಂದ | ಪರಿ ಹೊಸತೆಂದೆಣಿಸಿದನು || ೪೩ ||

ಹಿಂದಣ ಜನ್ಮದೊಳೆಸಗಿದ ಕಿಲ್ಬಿಷ | ದಿಂದುಗ್ರವಿಧಿಯೀಯೆಡೆಗೆ
ತಂದುದಲ್ಲದೆ ಮತ್ತೋರ್ವರಿದಾದುದಿ | ಲ್ಲೆಂದು ನಿಶ್ಚಯವ ಭಾವಿಸಿದ || ೪೪ ||

ಪಿರಿದಪ್ಪ ಕೊಳ್ಗೆಸಱೊಳು ಬಿದ್ದ ಕುಂಭಿಯ | ಕರದೊಳೆತ್ತುವರಿಲ್ಲದಂತೆ
ದುರಿತವಶದಿ ದುಃಖಂಬಡುವ ಜೀವಂಗಾಱು | ಶರಣಿಲ್ಲವೆಂದು ಚಿಂತಿಸಿದ || ೪೫ ||

ಸಿರಿ ಸಂಜೆಗೆಂಪು ಸೋದರರಿಂದ್ರಧನು ತನು | ಹರಿಮೇಖಲೆ ದೇಶ ಕೋಶ
ಮರುತನಿದಿರದೀಪದಂತೆಯದೃಷ್ಯವೀ | ಪಿರಿದುನೆಚ್ಚಲುಬೇಡವೆಂದ || ೪೬ ||

ದೇಹವಿಡಿದು ಮಾಡಿದ ಪುಣ್ಯಪಾಪ | ದೇಹಾಶ್ರಿತಮಾಗಿ ಬಂದ
ದೇಹಗಳಿಗೆ ಭವಹಿಂಗದೆನುತ ಮತ್ತೆ | ಮೋಹಿಗಳುಪದೇಶಿಸುವರು || ೪೭ ||

ಸುಖದುಃಖಂಗಳೆರಡ ತತ್ಸಮ ಮಾಡಿ | ಸುಖಮುಖರಾಗಿರಿಯೆಂದು
ಅಖಿಲಾಗಮಕೋವಿದರಿರದೊಱೆದಂತೆ | ನಿಖಿಲರಂತದನೆ ಭಾವಿಪುದು || ೪೮ ||

ಇಂತಪ್ಪ ನಿಶ್ಚಯಬುದ್ಧಿಯೊಳಪಗತ | ಚಿಂತಾತುರ ತನ್ನ ತಾನೆ
ಸಂತವಡಿಸಿ ನಾಲ್ದೆಸೆಯ ನೋಡುತ ಕಂಡ | ನಂತಲ್ಲಿರ್ದದೇಗುಲವ || ೪೯ ||

ಭೂಸುದತಿಯ ಮುದ್ದುಮೊಗಸಿರಿಗಾ ಗಿರಿ | ನಾಸಿಕಮಾಗಲಂತಲ್ಲಿ
ಭಾಸುರವಡೆದ ಮೂಗುತಿಯೆನಲೊಪ್ಪಿದು | ದಾ ಸರ್ವೇಶನಾಲಯವು || ೫೦ ||

ಪರಮನೆಂದೆಂಬ ಚಿಂತಾಮಣಿ ಬೈತಿರ್ದ | ಭರಣಿಯೆಂಬಂತೆ ದೇಗುಲವು
ಪಿರಿದೊಪ್ಪಿತದಱ ಶಿಖರಿ ಗುಬ್ಬಿಮುಚ್ಚುಳ | ದೊರೆಯೆನೆ ಕಣ್ಗೆರಂಜಿಸುತ || ೫೧ ||

ಪಲಬಣ್ಣವುರದಚಿತ್ರದ ಭಿತ್ತಿನೀಲದ | ನೆಲ ಮಾಣಿಕ ಮಣಿಗಂಬ
ಕುಲಿಶದ ಕುಮುದವಟ್ಟಿಗೆ ಪಸುರ್ಗಲ್ಲ ಮೇ | ಲ್ನೆಲೆಯ ಮುಚ್ಚುಳಗಳೊಪ್ಪಿದವು || ೫೨ ||

ಪಳುಕಿನ ಚಂಚು ಲೋವೆಯೊಳವಲಂಬಿಪ | ತೊಳಪಮುತ್ತಿನ ಲಂಬಣವನು
ಎಳೆಯ ಚಕೋರಿ ಕಣ್ಗದಿರ್ಗೆತ್ತು ಚುಂಬಿಸ | ಲೆಳಸಿ ನಗಿಪವಚ್ಚರಿಯೊ || ೫೩ ||

ಭಾವಜಾರಿಯ ಭವನವ ಬಲವರುತಿರ್ಪಾ | ದೇವಸಮಿತಿ ಭಕ್ತರಸವ
ಸೇವಿಸಿ ಮೈಮಱೆದಂತೆ ಭಿತ್ತಿಗಳೊಳು | ತೀವಿರ್ದೊ ಪೊಸಪುತ್ಥಳಿಗಳು || ೫೪ ||

ದೇವನ ಗೃಹದ ಚಲ್ವಿಕೆಯ ನೋಡುವೆನೆಂದು | ದೇವೇಂದ್ರನು ಹಲಗಣ್ಣ
ತೀವಿದೆವೆಯ ಮುಚ್ಚನದಱಿಂದನಿಮಿಷ | ದೇವವೆಸರು ಪೊತ್ತನಂದು || ೫೫ ||

ಆ ದೇಗುಲದ ಮುಂದೊಂದು ಸರೋವರ | ಮಾದರಿಭೃನ್ನಾಭಿಯಂತೆ
ಆದರದಿಂದಿರಲಂತಲ್ಲಿಗೆಯ್ದನ | ತ್ಯಾದರದಿಂದಾನೃಪತಿ || ೫೬ ||

ಪರಮೇಶ್ವರನ ಪಾದಾಭಿಷೇಕಮಂ ಮಾ | ಳ್ಪುರುತಱಭಕ್ತಿ ಕೈಮಿಕ್ಕು
ಹರುಷದಿ ಸಾನ್ನಿಧ್ಯಕಿಂಗಡಲದ್ದಿದ | ಪರಿಯಾದುದಾ ತಿಳಿಗೊಳನು || ೫೭ ||

ಪಲವು ಬಣ್ಣದ ನೀರ್ವೂವಿನಿಂದಾಕೊಳ | ನೆಲೆವೆಣ್ಣಾ ಜಿನಪತಿಗೆ
ಒಲಿದೆತ್ತುವ ಪಂಚರತ್ನದಾರತಿಯಂತೆ | ವಿಲುಳಿತಮಾಗಿ ರಂಜಿಸಿತು || ೫೮ ||

ಜಲಕುಸುಮಾಮೋದಂಗಳಿಗಾಂತೆಱವಳಿ | ಕಳಭದ ಜಂಗುಳಿಗಳು
ಪೊಳೆದವು ಕೊಳಮೆಂದೆಂಬ ಚಂದಿರನೊಡ | ಲೊಳಗಣ ಕರೆಯಂದದೊಳು || ೫೯ ||

ಅಳಿಯಂಚಿ ಕೊಂಚಿ ಪೊಳೆವ ಪೊಣರ್ವಕ್ಕಿ | ಗಳುಲಿಪಲ್ಲಿ ಜಲದೇವಿಯರು
ಕಲಿವಿಜಯನ ದಿವ್ಯಸ್ವನಂಗಳ | ಒಲಿದು ಬಾಜಿಪ ತೆಱನಾಯ್ತು || ೬೦ ||

ತಜ್ಜಲಜಾಕರದೊಳು ಪೊಕ್ಕು ತನ್ನ ಕೆಂ | ಬಜ್ಜೆದೊಳೆದು ಕೈಗರ್ಚಿ
ಪಜ್ಜಳಿಸುವ ತನ್ನಯ ನಿರ್ಮಲ ಮುಖ | ಮಜ್ಜನವನೆ ಮಾಡಿದನು || ೬೧ ||

ಕಡಲಹಾಲೊಳಮೆಯ್ಯೊಳುದಿಸಿ ಮೇಲಕ್ಕೆ ಪೊಱ | ಮಡುವ ನಿರ್ಜರಕಂಜದಂತೆ
ನಡೆದನು ದಾನವಿನೋದಿಯಾ ಸರಸಿಯ | ತಡಿಯಿಂದ ದೇಗುಲಕಾಗಿ || ೬೨ ||

ಹೇಮಾಚಲವನೋವದೆ ಬಲವರುತಿರ್ಪಾ | ಸೋಮಮಂಡಲದಂದದೊಳು
ಕಾಮಾರಿಯ ಭವನವ ಭಕ್ತಿಯ ಭರದಿಂ | ಮೂಮೆ ತಿರಿದನಾ ನೃಪತಿ || ೬೩ ||

ಬಲವಂದು ಮುಚ್ಚೂಲಿಂದವೆ ಧರಣಿ | ಲಲನೇಶನಾದೇಗುಲವ
ಪಲಪಗಲಿಂದವೆ ಕೀಲಿಸಿಕೆತ್ತಿರ್ದ | ಕುಲಿಶದ ಪಡಿಯ ನೋಡಿದನು || ೬೪ ||

ಸಿರಿಯರಮನೆಯ ಹೊಂದಾವರೆಯು ಮುನಿದಿರ್ದು | ಖರ ಕಿರಣೋದಯಮಾಗೆ
ಅರಳುವಂತಾ ಪುರುಷೋತ್ತಮನನು ಕಂಡು | ಬಿರಿದುವಾಗೃಹದ ಕವಾಟ || ೬೫ ||

ಸುಗುಣಿಯ ಮುಕ್ತಿಯ ದೂತಿಯೆಂಬ ಶಾರದೆಯೆವ | ಳಗಣಿತ ಗುಣವನಾನೃಪಗೆ
ಸೊಗಸುವಾಯ್ದೆಱೆದಾಡುವಂತೆ ಸರಂಗೊಟ್ಟು ತೆಗೆದವು ಪಡಿ ದೇಗಲದ || ೬೬ ||

ತೆಗೆದ ಪಡಿಯ ಕಾಣುತ ಭೂವರನೊಳ | ಪೊಗುತಂದತಿಭಕ್ತಿಯೊಳು
ನಿಗಮಕೆ ನಿಲುಕದ ನಿರ್ಮಲರೂಪನ ಕಂ | ಡಗಣಿತ ಸುಖವನೆಯ್ದಿದನು || ೬೭ ||

ಶಾಂತರಸದ ಪುತ್ಥಳಿ ಪಲನೇಸಱ | ಕಾಂತಿಯ ಕರು ಭಕ್ತಜನದ
ಚಿಂತಾರತ್ನದ ಪರಿಯೆನಲೆಸೆದತ್ತು | ಕಂತುಮರ್ದನನ ದಿವ್ಯಾಂಗ || ೬೮ ||

ಶ್ರುತಿಗೆಟ್ಟಿಕ್ಕಿ ಕಾಣದ ವೇದವಱಿಯದ | ಇತಿಹಾಸಕೆ ದೂರಮಾದ
ಶ್ರುತಿಗತಿಗೆಂಟೆನಿಸಿದ ಚಿದ್ರೂಪನ | ಪ್ರತಿರೂಪು ಕಣ್ಗೆ ರಾಜಿಸಿತು || ೬೯ ||

ತೊಳೆದಮರ್ದಿನ ತಿರುಳಮಿಂಚ ಬಾಂ | ಬಿಳಿವೆಳಗಿಂದವೆಪೊಱೆಯಿಟ್ಟ
ತಿಳಿಜೊನ್ನದೊಳು ಭಾವನೆಮಾಡಿದಂತೆ ಪ | ಜ್ಜಳಿಸಿದುದಭವನಕಾಂತಿ || ೭೦ ||

ಪರಮಜಿನೇಂದ್ರ ಚಂದ್ರಾವಲೋಕನದಿಂ | ಕರಮೊಸರ್ವಿಂದೂಪಳದ
ಕರುವಿಂದದೊಳು ಕಣ್ಗಳೊಳಾನಂದಾಶ್ರು | ಸುರಿತಂದವಾ ಭೂವರಗೆ || ೭೧ ||

ಮಾರವಿಜಯನ ಕಾಣುತ ಭಕ್ತಿ ತಲೆಗೇಱೆ | ಭಾರೈಸಿ ಬೀಳುವಂದದೊಳು
ಧಾರುಣಿಯೊಳು ಸಾಷ್ಟಾಂಗನಮಿತನಾದ | ನಾ ರಾಯರದೇವನಂದು || ೭೨ ||

ಪರಮೇಶಗೆ ಶರಣೆಂಬೊಂದುನೆವದಿಂ | ದಿರದೆ ಮಹೀಮಾನಿನಿಯ
ಪರಿರಂಭಣೆಯೊಳೊಪ್ಪಿದನಂದು ಭೂ | ವರ ಸಾಷ್ಟಾಂಗನಮಿತನು || ೭೩ ||

ಏಕಾಗ್ರದೊಳನೇಕ ಸುಖಾತ್ಮನ | ನೇ ಕುರುಹಿಟ್ಟು ಕೈಮುಗಿದು
ಸಾಕೆನಿಸದ ದಿವ್ಯನುತಿಗಳನಿಂತೆಂ | ದಾಕುವರನು ಮಾಡಿದನು || ೭೪ ||

ಪರಮಶರೀರಪ್ರಮದ ಚಿದ್ಘನಾಕಾರ | ದುರಿತಾರಣ್ಯದಾವಾರ್ಚಿ
ಸ್ಮರಸಂಹಾರಿ ಮಹಾಪುರುಷೋತ್ತಮ | ಪರಮಪಾವನ ಜಯಜಯತು || ೭೫ ||

ನಿರುಪಮ ನಿತ್ಯನಿರಘ ನಿರಹಂಕಾರ | ನಿರವದ್ಯ ನಿಜನಿರ್ಮೋಹ
ನಿರತ ನಿರ್ಮಲ ನಿರ್ಲೇಪ ನಿರ್ಮದ ಕಂತು | ಹರ ಪಾಪಜಿತ ಜಯಜಯತು || ೭೬ ||

ಪ್ರಣಿತಾತ್ಮ ಪರಮೇಷ್ಠಿ ಪರಂಜ್ಯೋತಿ | ಯಣಿಮಾದಿಗುಣಗಣವಿನುತ
ಪ್ರಣವಸ್ವರೂಪ ಪಾವನಮೂರ್ತಿಯಪಗತೋ | ಲ್ಬಣ ಕಿಲ್ಬಿಷ ಜಯಜಯತು || ೭೭ ||

ಜಿತಜನ್ಮ ಮರಣಜರಾಂತಕದ್ವೇಷ | ಜಿತಮೋಹಾದಿಕಷಾಯ
ಜಿತರಾಗ ಜಿತಮನಸಿಜ ಜಿತದೋಷ ಸ | ನ್ಮತಿ ಸರ್ವಗತ ಜಯಜಯತು || ೭೮ ||

ಶತಕೋಟಿಧರಣಿಮಣಿಮಕುಟರಂಜಿತಶೋಣ | ಶತದಳೋಪಮಪದಯುಗಲ
ಶತಕೋಟಿಶಶಿಸೂರ್ಯಸನ್ನಿಭ ಸರಿಕಾಶ | ಯುತ ಪಾಪಜಿತ ಜಯಜಯತು || ೭೯ ||

ಎಂದಾ ವಿಶ್ವೇದಿಯನಭಿವಂದಿಸಿ | ಮಂದೇತರಹರುಷದೊಳು ||
ಕಂದರ್ಪಸನ್ನಿಭನಾಗವೆ ಪೊರಮಟ್ಟು | ನಿಂದನು ಮಣಿಮಂಟಪದೊಳು || ೮೦ ||

ಶಂಬರರಿಪು ಸಿಂಗರಿಸಿ ಚಾಪವನವ | ಲಂಬಿಸಿ ನಿಂದ ಮಾಳ್ಕೆಯೊಳು
ತುಂಬಿದ ಕೊಡವನಿಟ್ಟಾನೃಪ ಪಳುಕಿನ | ಕಂಬವ ನೆಮ್ಮಿಯೊಪ್ಪಿದನು || ೮೧ ||

ಅರಸನ ಮುಂದಿಂದ್ರನೆಂಬಿಂದ್ರಜಾಲಿಗ | ಹರಿ ಮೇಖಲಾವಿದ್ಯವನು
ಕರಮೆ ಕಾಣಿಸಿದನೆಂಬಂತಂಬರದೊಳು | ನೆರೆದುದು ಸುರಸಂದೋಹ || ೮೨ ||

ಆ ವೇಳೆಯೊಳಾಕಾಶಮಂಡಲದೊಳು | ದೇವದೇವಿಯರೆಯ್ದಿ ಬರಲು
ದೇವದುಂದುಭಿ ಮೊದಲಾದೈದಚ್ಚರಿ | ತೀವಿದುದತಿವೇಗದೊಳು || ೮೩ ||

ಅರಲ್ಗೊಂದೆವನಿ ಹುವ್ವಿನ ಮಳೆಯೆಸಳ ಬ | ಲ್ಸರಿ ಸಜ್ಜುಕದ ಬಲುಸೇನೆ
ಬಿರಿಮೊಗ್ಗೆ ತಂದಲು ಸುರಿತಂದವಾ | ಪರಮನಗೃಹದ ಬಾಗಿಲೊಳು || ೮೪ ||

ಸುರಿವ ಮುಗುಳಗಳ ಮಳೆಯೊಳು ಕೂಡಿ ಪನಿತಪ್ಪ | ಕುವುವಿಂದ ಮಣಿಮೌಕ್ತಿಕದ
ಪರಲೊಪ್ಪಿದೊವಾಲಿಕಲ್ಲಿಂದ್ರಗೋಪದ | ದೊರೆಯೆನೆ ಕಣ್ಗೆಡ್ಡಮಾಗಿ || ೮೫ ||

ಇಂಬಾಗಿ ನೆಱೆದ ದೇವಿದೇವ ವಿತತೀ ತ | ದಂಬರಲಕ್ಷ್ಮಿತನ್ನುಱವ
ತುಂಬಿದ ಪೀನಪಯೋಧರಕಿಟ್ಟ ಚಿ | ತ್ರಂಬರೆದಂತೆ ರಂಜಿಸಿತು || ೮೬ ||

ಅರಲೇಱಿದೊವಂಬುದಿನಚಿರತೆಯನೆ | ಪರಿಹರಿಸಿತೊ ಕುಡಿಮಿಂಚು
ಸ್ಥಿರಮಾದುದೋ ಸುರಧನುವೆನೆ ನಭದೊಳು | ನೆರೆದುದಚ್ಚರಸರಸಿಯರಾಗ || ೮೭ ||

ಕೊರಗದರಲ ಸಿರಿಮುಡಿ ಮಾಸದ ಸೀರೆ | ಹರೆಯದ ಹರೆಯಲೇಪನವ
ಪೊರೆಯದ ಕಂಪಲತೆಗೆಯೂಡದಡಿಗೆಂಪು | ಪಿರಿದೊಪ್ಪಿತಾ ದೇವಿಯರಿಗೆ || ೮೮ ||

ನಡೆನೋಡುವ ದೇವಸತಿಯರಲರ್ಗಣ್ಣ | ಕುಡಿವೆಳಗವನಂಗವನು
ತೊಡರಿದೊಡಾ ಭೂಪತಿಯೊಪ್ಪಿದನು ಪೂ | ವಿಡಿದವಂಸಂತನೆಂಬಂತೆ || ೮೯ ||

ಅರಸನ ಗರಗರನಾದ ಚಲ್ವಿಕೆಯ ಕ | ವ್ವರೆಗೊಂಡು ನೋಡುತೆ ತಮ್ಮ
ಸುರರೂಪೀತನ ಮುಂದೇತಱದೆಂದು | ಪಿರಿದು ಹಳಿವರಾ ಸತಿಯರು || ೯೦ ||

ನರಜನ್ಮದೊಳು ಬಂದೀ ಸುಕುಮಾರನ | ಸುರತಕೊದಗುವ ಸಂಪದಕೆ
ಪಿರಿದಪ್ಪಱನಾನೆಸಗಿಲ್ಲವೆಂದಾ | ಸುರತರುಣಿಯರೇನಿಸುವರು || ೯೧ ||

ದೇವ ದಾನವ ಮಾನವರೊಳಗಿಂತಪ್ಪ | ಲಾವಣ್ಯಯುತರಿಲ್ಲವೆಂದು
ದೇವೀಜನವೆಯ್ದಿ ಕೊಂಡಾಡಿದುದಾ | ಭೂವರಕುಲಶೇಖರನ || ೯೨ ||

ಮಂಗಲಗುಣಭೂಷಣಸಮುದಯಭೂಷಿತನು | ತ್ತುಂಗ ಪರಾಕ್ರಮಯುತನ
ಪಿಂಗದೆ ಕೊಂಡಾಡಿದರಮರಿಯರಾ | ಶೃಂಗಾರಶರಧಿಚಂದ್ರಮನ || ೯೩ ||

ಇದು ಭಾವಕಜನಕರ್ಣ ವಿಭೂಷಣ | ಮಿದು ರಸಿಕರ ಚಿತ್ತದೆಱಕ
ಇದು ವಾಣೀಮುಖಮಾಣಿಕ್ಯಮುಕುರ ಮ | ತ್ತಿದು ಶೃಂಗಾರಸುಧಾಬ್ಧಿ || ೯೪ ||

ಆರನೆಯ ಸಂಧಿ ಸಂಪೂರ್ಣ