ಹಸೆಯೊಳು ಹಾವು ಹರಿದು ಸತ್ತರೆಂದು ಮು | ನ್ನುಸುರುವ ನಾಣ್ಣುಡಿಯಿಂದು
ಹಸನಾಗಿ ಕಾಣಿಸಿತೆನ್ನೊಳಗೆಂದಾ | ಶಶಿಮೊಗದವಳಳಲಿದಳು || ೭೬ ||

ಪಿರಿದಾಗಿ ಹಸಿದವರಿಗೆಯಮೃತಾಹಾರ | ದೊರೆಕೊಳಲುಣಲೆಂದೆಳಸಿ
ಕರವಿಡುವನಿತಱೊಳಗೆ ಬಯಲಾಯ್ತೆಂಬ | ಪರಿಯಾಯಿತೆನಗಿಂದೆನ್ನಿರವ || ೭೭ ||

ಎಂದು ದುಃಖಿಸುವ ಜಯಾವತಿ ತಾ ಕೇ | ಳ್ವಂದದೊಳಾಕಾಶದೊಳು
ಒಂದಾನೊಂದಶರೀರವಚನ ಮುದ | ದಿಂದೀ ತೆಱದೊಳಾಡಿದುದು || ೭೮ ||

ತರಳೆ ಕೇಳೀ ಸಮಯದೊಳಾವಿಜಯಾರ್ಧ | ಗಿರಿಶಿಖರದ ದೇವಗೃಹಕೆ
ಭರದಿಂ ಪೋಗಿ ನಿನ್ನಯ ಜೀವಿತೇಶನ | ಇರವ ನೀನಱಿಯೆಂದೆನಲು || ೭೯ ||

ಇನಿತೆಂಬಶರೀರವಚನವನು ಕೇಳ್ದಾ | ವನರುಹದಳಲೋಚನೆಯ
ಜನನೀಜನಕರಂಧಕರಕ್ಷಿವಡೆದಂ | ತನುರಾಗವನು ತಾಳಿದರು || ೮೦ ||

ತನುಜೆ ಕೇಳಾ ನುಡಿ ದೇವವಚನಕದ | ಕಿನಿಸು ತೊಡರುವೊದ್ದದಾಗಿ
ಮನನೋಯಬೇಡೆಂದವರಾಯೆಡೆಯಿಂ | ದನಿಲಪಥಕೆ ಲಂಘಿಸಿದರು || ೮೧ ||

ಬರುತಾ ಕುವರಿ ಸಮನ್ವಿತ ವಿಜಯಾರ್ಧ | ಗಿರಿಶಿಖರದ ದೇವಗೃಹವ
ಹರಷದಿ ಪೊಕ್ಕರುಹನಚರಣಕೆ ಭಕ್ತಿ ಭರದಿಂದವೆಯೆಱಗಿದರು || ೮೨ ||

ಮುಕ್ತಿಗೆ ನಿಲುಕದ ನಿರ್ಮಲ ರೂಪನ | ಭಕ್ತಿಯಿಂದವೆಯಂಗಜನ
ಶಕ್ತಿಯಂತೆಸೆವ ಕೋಮಲೆ ತನ್ನ ಮನದನು | ರಕ್ತಿಯಿಂದಭಿವಂದಿಸಿದಳು || ೮೩ ||

ತಾವರೆಮೊಗದ ಕನೈದಿಲುಗಣ್ಣ ಬಂದುಗೆ | ಪೂವಾಯ್ದೆಱೆಯ ಲತಾಂಗಿ
ಭಾವಶುದ್ಧಿಯೊಳಡಿದಳಕೆಱಗಿದಳಾ | ದೇವಗರಲನರ್ಚಿಪಂತೆ || ೮೪ ||

ಶಂಬರರಿಪುಮರ್ದನನ ಬಂದಿಸಿ ಕನ | ಕಾಂಬುಜಮುಖಿಯಾ ಗೃಹದ
ಮುಂಬಾಗಿಲ ಗೋಪುರದ ಚಿತ್ರದಭಿತ್ತಿ | ಇಂಬಾಗಿರೆ ನೋಡಿದಳು || ೮೫ ||

ಸ್ಮರನಸಿಪತ್ರದ ಹೊರಗಂದದೊಳು ಬಂ | ಧುರವಡೆದಾ ಭಿತ್ತಿಯೊಳು
ಅರಸ ಕೇಳ್ನಿನ್ನಂಕಮಾಲಾಕ್ಷರಗಳು | ಬರೆದಿರಲೋದಿದಳವಳು || ೮೬ ||

ಇದು ಮೋಹನಯಂತ್ರದ ಬೀಜಾಕ್ಷರ | ಇದು ರತಿಶಾಸ್ತ್ರದ ಸೂತ್ರ
ಇದು ಕಾಮಶಾಸನದ ಲಿಪಿಯೋಯೆಂದೆನಲೊ | ಪ್ಪಿದವಲ್ಲಿ ಬರೆದಕ್ಕರಗಳು || ೮೭ ||

ಪಿರಿದೊಪ್ಪುವ ಪುಂಡರೀಕಪಟ್ಟಣದ ಭೂ | ವರ ಗುಣಪಾಲನಾತ್ಮಜನು
ಧುರಧೀರನಾ ಶ್ರೀಪಾಲನೀ ಗೃಹದ ಬಂ | ಧುರ ಕವಾಟವ ತೆಱೆಸಿದನು || ೮೮ ||

ಎಂದಾಕೇರೊಳು ಬರೆದಕ್ಕರಗಳ ಕಂ | ಡಿಂದೀವರದಳನಯನೆ
ಬಂದುಗೆವಾಯ್ದೆಱೆದರಗಿಳಿವಱಿಯುಸು | ರ್ವಂದದೊಳಾಡಿದಳಾಗ || ೮೯ ||

ಇನಿಯನಳಿದು ಪೋದುದಿಲ್ಲೆಂದು ನಿಶ್ಚಯ | ಮನೆಮಾಡಿ ಮುಂದೆ ನೋಳ್ಪಾಗ
ಅನಿತಱೊಳಾಮರನೊಳಗಿರ್ದ ಕಂಬಳ | ವನು ಕಂಡಳಾ ಕಮಲಾಕ್ಷಿ || ೯೦ ||

ಮತ್ತಾರಕ್ತಗಂಬಳದೆಡೆಗೆಯ್ದಿಬಂ | ದೆತ್ತಿ ಕೊಂಡಾಗಸಕಡಱೆ
ಉತ್ತಮ ರತ್ನವಿಮಾನವನೇಱಿ | ಬರುತಿರ್ದಳಾಪುರಕಾಗಿ || ೯೧ ||

ತಾರಗೆವಟ್ಟೆವಿಡಿದು ಕಡುವೇಗದಿ | ನೇರಾಣಿಯ ಹೊನ್ನಭಿಮಾನ
ಭೋರನೆಬರುತ ಕೀಲಿಸಿ ನಿಲಲಾಸುಕು | ಮಾರಿಯಚ್ಚರಿವಟ್ಟಳಾಗ || ೯೨ ||

ಕಾರಣಮಿಲ್ಲದಿಂತಿದು ನಿಲ್ಲದೆಂದು | ವಿಚಾರಿಸುತಾಗಸದಿಂದ
ಧಾರುಣಿಗಿಳಿದಾಯೆಡೆಯೊಳಗಿರ್ದ ಮ | ಹಾರುಷಿಯನು ಕಂಡಳಾಗ || ೯೩ ||

ಸರ್ವಾಂಗದೊಳೆಡೆದೆಱಪಿನಿಸಿಲ್ಲದೆ | ಪರ್ವಿದ ಮಯ್ಯಮಣ್ಣಿಂದ
ದುರ್ವೀಕರಗ್ರಹದಿಂದಾ ಮುನಿಪತಿ | ಉರ್ವೀಧರನಂತೆಸೆದನು || ೯೪ ||

ಅಂಗದೊಳಡರ್ದ ಹಾವಿನಹೆಡೆಯೊಳಿರ್ಪ | ಕೆಂಗಲ್ಲೆಸದೊಡಾ ತಪಸಿ
ಅಂಗಭವನ ಸುಡಲೆಂದಿಟ್ಟಾತಪ | ದಿಂಗಳಿವೆಂಬಮಾಳ್ಕೆಯೊಳು || ೯೫ ||

ನೆನೆದಂತಾಗುವೆನೆಂದು ಜಾನಿಸುತಿರ್ಪ | ಮುನಿಯಂಗದೊಳು ಮನೆಗಟ್ಟಿ
ಅನುದಿನಬೆಳೆದು ಕಡಂದುಱುವಾವಿ | ದೆನೆ ಸಾಧಿಸುತಿಹನಲ್ಲಿ || ೯೬ ||

ಮದನನ ಮೇಲಿಟ್ಟರೆಯೆನೆ ಕಾಲೊಳು | ಪುದಿದು ಲತಾಪುಷ್ಪಕೆಱಪ
ಮದಭೃಂಗರವನೊಪ್ಪಿತಾಜತಿಯದಟನೆಂ | ದೊದಱುವುಕ್ಕಡಗಾಳೆಯಂತೆ || ೯೭ ||

ತನ್ನಿಂದವೆ ತೆನ್ನ ತನುವನೆ ಬೇರ್ಕೆ | ಯ್ದುನ್ನತಮಪ್ಪತತ್ವವನು
ಚನ್ನಾಗಿಯೆ ಜಾನಿಸುತಿರ್ಪಾ ಜತಿ | ಯುನ್ನತಿಕೆಯ ಕಂಡನಾಗ || ೯೮ ||

ನಡೆನೋಡಿ ಕಾಣುವ ಶಶಿಕಂಪನಾರಯ್ಯ | ನುಡಿದ ನುಡಿಯ ಕೇಳಿ ಕೇಳಿ
ಪೊಡೆದೆಡೆನಿಂದು ಭಾವಿಪನಾ ಜತಿ ನಿಜ | ದೆಡೆಯೊಳು ನೆನಹನಿಟ್ಟದಱಿಂದ || ೯೯ ||

ಕಂದರ್ಪಮಡಭಂಜನನೆನಿಪಾಮಹಾ | ವೃಂದಾರಕನ ಕಾಣುತವೆ
ಕೆಂದಳಿರ್ವಜ್ಜೆಗೆ ಮಣಿದು ಬಳಿಯಲಿಂ | ತೆಂದು ಬಿನ್ನಪವ ಮಾಡಿದಳು || ೧೦೦ ||

ಜನತಾಧೀಶನಜೇಯನ ಶ್ರೀಪಾ | ಲನ ಮುದ್ದುಮೊಗದಾವರೆಗೆ
ಎನಗನುಸಂಧಾನವೆಂದಾದಪುದೆನೆ | ಮುನಿ ಕೇಳಿ ನಗುತಿಂತು ನುಡಿದ || ೧೦೧ ||

ಉಡುಪತಿವದನೆ ಕೇಳಿಂದಿನಿರುಳ ಕಟ್ಟ | ಕಡೆಯೊಳಗಾ ನೃಪವರನ
ಕಡುಪಿಂದೆಯ್ದಿ ನಿನ್ನೊಳು ನಿಲ್ವನೊಸಗೆಯ | ಪೊಡವಿಯಱಿವ ಮಾಳ್ಕೆಯೊಳು || ೧೦೨ ||

ಇಂತೆಂದು ನಿರವಿಸಿದಾ ಜತಿರಾಯಗೆ | ಕಾಂತೆಯೆಱಗಿ ಬೀಳ್ಕೊಂಡು
ಅಂತರಿಕ್ಷದ ಪಥದಿನೆಯ್ದಿದಳತಿ ಸಂತೋಷ | ದಿಂ ತಮ್ಮಯ ಪುರಕೆ || ೧೦೩ ||

ಬರುತ ವಿರಹದಿಂದವೆ ಬಾಲೆ ತನ್ನಯ | ಕರುಮಾಡವೇಱಿ ಬಳಿಕ
ಅರಸ ಕೇಳ್ನಿನ್ನ ಚಿತ್ರವ ಪಟದೊಳು ತಾ | ಬರೆದಳು ಬಿನ್ನಣದಿಂದ || ೧೦೪ ||

ಹೃದಯಾವಾಸದೊಳಡಗಿರ್ದ ಕಾಂತನ | ಸುದತಿ ನಿರೀಕ್ಷಿಪೆನೆಂದು
ತುದಿವೆರಲಿಂ ಪೊಱಮಡಿಸುವವೊಲು ಸಂ | ಮುದದಿಂದವೆ ಚಿತ್ರಿಸಿದಳು || ೧೦೫ ||

ಕೆಂಬಟ್ಟೆಯ ಹಾಸಿನ ಮೇಲೊಱಗಿರ್ದ | ಶಂಬರರಿಪುವಿನಂದದೊಳು
ತುಂಬಿದ ಶೋಣಾರುಚಿಯಪಟದೊಳು ಕ | ಣ್ಗಿಂಬಾದುದಾ ರಸಚಿತ್ರ || ೧೦೬ ||

ಕಂದರ್ಪರೂಪ ನಿನ್ನಯ ಭಾವಚಿತ್ತಾಂಗ | ದೊಂಡೆಡೆಯೊಳು ನೆಟ್ಟ ಕಣ್ಣ
ಒಂದೆಡೆಗೆಯ್ತಪ್ಪಾಗಲಲುಕಿ ಕೀ | ಳ್ವಂದಮಾಯ್ತವಳುತ್ತಮಾಂಗ || ೧೦೭ ||

ಲಲಿತಾಂಗ ನಿನ್ನ ಪೋಲ್ವಿಕೆಯ ಚಿತ್ರದ ಕಡು | ಚಲುವಿಕೆಯನೆ ನಡೆನೋಳ್ಪ
ಲಲನಾಮಣಿಯ ಕಾಣುತ ಮುನಿದಾಕಾವ | ನಲರ್ಗಣೆಗಳನೆಚ್ಚನಾಗ || ೧೦೮ ||

ಮನುಜೇಶನ ರೂಪಿಗೆ ಮೆಚ್ಚಿ ನಾನಿರ್ಪ | ಮನವನವಗೆ ಕೊಟ್ಟೆಯೆಂದು
ಮನಸಿಜ ಮುನಿದೆಚ್ಚನಾ ಕೋಮಲಾಂಗಿಯ | ನನೆಯುಂಬಿಗೀಡಾಗುವಂತೆ || ೧೦೯ ||

ಅಸುಗೆದಾಮರೆ ಮಾವು ಮಲ್ಲಿಗೆ ನೆಯ್ದಿಲೊ | ಳ್ವೆಸಳ ಬಾಣದಿ ಕಂತುಮವಳ
ಮಿಸುಪಕ್ಷಿಮುಖನಾಭಿಯುರುವಕ್ಷವ | ನೆಸೆದೊವೀರೈದವಸ್ಥೆಗಳು || ೧೧೦ ||

ಅರಸ ಕೇಳ್ನೋಟ ಚಿತ್ತ ಪ್ರೀತಿ ನಿಡುಸುಯ್ಲು | ಜ್ವರ ಬಡವನಶನ ವಿಕಲ
ವರಮೌನ ಮೂರ್ಛೆಯನೀತೆಱದಿಂದೆಯ್ದಿ | ಮರಣಕುಜ್ಜುಗ ಮಾಡುತಹಳೆ || ೧೧೧ ||

ಪಂಚವರ್ಣೋಪೇತ ಚಿತ್ರವ ಮಿಂಚಿ ಪ | ಳಂಚಲೆವಕ್ಷಿರುಚಿಗಳಿಂ
ಮಿಂಚುವ ಶಂಕಿನ ಪುತ್ಥಳಿಯೆನೆಮಾಡಿ | ಚಂಚಲನೇತ್ರೆ ನೋಡಿದಳು || ೧೧೨ ||

ಅರಸ ಕೇಳ್ನಿನ್ನಾಚಿತ್ತಾಕರುಷಣ ಮಾಳ್ಪ | ವರಯಂತ್ರವನು
ಪರಿಯೆನಲುಂಗುಟದಿಂ ಭೂತಳವನು | ಬರೆವುತಿರ್ದಳು ತಲೆವಾಗಿ || ೧೧೩ ||

ಕಡುನೇಹದಿಂದಂಗಜಾಗ್ನಿಯಗಿದು ಸಂ | ಗಡಿಸಿ ಪೆರ್ಚುಗೆ ಮಾಳ್ಪುದೆಂದು
ಒಡಲವಾಯುವ ಪೊಱಗಡಗೆ ತಗುಳ್ವಂತೆ | ನಿಡುಸುಯ್ದಳಾ ಕೋಮಲಾಂಗಿ || ೧೧೪ ||

ಮೊಱೆವೊಕ್ಕ ಕಾವನ ಕೊಡು ಕೊಲ್ವೆನಂದಾ | ಕಱೆಗೊರಲನ ದಿಟ್ಟಿಗಿಚ್ಚು
ತಱಿಸಂದು ಮುತ್ತಿಮೂವಳಿಸಿದವೊಲು ಜ್ವರ | ಉಱೆಕಾದವವಳಂಗದೊಳು || ೧೧೫ ||

ನೃಪನ ಬಯಸಿ ಪಂಚಬಾಣಾಗ್ನಿ ಮಧ್ಯದಿ | ಜಪಿಸುತಂಗಜಮಂತ್ರವನು
ತಪಮಾಡಿ ಕೃಶಮಾಯ್ತೆನೆ ಬಡವಾದಳು | ಚಪಲಾಕ್ಷಿ ತದ್ವಿರಹದೊಳು || ೧೧೬ ||

ಕಾರಕಾರ್ಮುಗಿಲನಿಶ್ಚೈಸಿ ಚಾದಗೆವಕ್ಕಿ | ನೀರುಣಲೊಲ್ಲದಂದದೊಳು
ಚಾರುಚಕೋರಾಕ್ಷಿ ನೃಪಚಂದ್ರ ನಿನ್ನನೆ | ಹಾರೈಸಿಯುಣಿಸುದೊಱೆದಳು || ೧೧೭ ||

ಪುರುಷರತ್ನವೆ ಚಿತ್ತೈಸು ನಿನನ್ಯದೊಂದು | ವಿರಹಗ್ರಹ ಸೋಂಕಿನಿಂದ
ಮರುಳಾದವೊಲು ಮಾತ ತಪ್ಪಿ ನುಡಿವಳಾ | ಪರಭೃತಲಲಿತಾಲಾಪೆ || ೧೧೮ ||

ಎಸೆವ ವಸಂತ ವಲ್ಲಭ ಹಿಂಗೆ ಬಾಯ್ಮು | ದ್ರಿಸಿದನ್ಯಭೃತನಮಾಳ್ಕೆಯೊಳು
ಅಸಮೇಷುನಿಭ ನಿನ್ನ ಬರವನಿಶ್ಚೈಸಿ ಮ | ತ್ತುಸುರದಿರ್ದಳು ಕೋಮಲಾಂಗಿ || ೧೧೯ ||

ಮನಸಿಜಚೋರನದೃಶ್ಯಾಕರನಾಗಿ | ಸ್ತನಮಧ್ಯದೊಳು ಕನ್ನಮೆಸೆದು
ಮನದ ಬಲ್ಮೆಯ ಕಳಲೆಂದುಠಕ್ಕಿಕ್ಕಿದ | ನೆನೆ ಮೂರ್ಛೆಯಾದುದಾ ಸತಿಗೆ || ೧೨೦ ||

ಇಂದೀಯಂಗವ ಬಿಡೆಯಾರಸಿಕನೊ | ಳೊಂದಿ ಸುಖವನುಣ್ಬುದಿಲ್ಲ
ಎಂದು ಮುಂದೆಣಿಸಿ ಪೋಗದೆಯಸುಕೊರಲೊಳು | ನಿಂದುದು ನಿನ್ನ ವಲ್ಲಭೆಗೆ || ೧೨೧ ||

ಅರಲಂಬ ಹೊತ್ತು ಹೊಮ್ಮಿಱಿದುರುಳ್ವಳಕಂಡ | ವರೆಲೆ ಶಿಶಿರೋಪಚಾರವನು
ಭರದಿಂದವೆ ಮಾಡಿಹೆವೆನುತಿರ್ದರು | ತರುಣಿಮಣಿಯಾಳಿಯರು || ೧೨೨ ||

ಪೂವು ಪಚ್ಚೆಲೇಪ ನೀನಿರಲಲರ್ವಿಜ್ಜಣ | ಮಾವಿನತಳಿರು ತಣ್ಗಱಗ
ಬಾವನ್ನ ಬಾಳೆವಗಿನಂ ತಂದಾಳಿಯ | ರಾವನಿತೆಯನುಪಚರಿಸೆ || ೧೨೩ ||

ಬೀಸುವ ಬಿಜ್ಜಣಿಗೆಯಗಾಳಿ ವಿರಹದ | ಕೇಸುರಿಯನು ಕಾಣುತವೆ
ಆ ಸಮಯದೊಳು ಮುನ್ನಿನಂಟು ಬಲಿದ | ತ್ತಾಸರಸಿಜಲೋಚನೆಗೆ || ೧೨೪ ||

ಪನಿನೀರಾಜ್ಯಾಹುತಿ ಪುಷ್ಪತತಿ ಸಮಿ | ತ್ತೆನೆ ವಿರಹಜ್ವಾಲೆಯಿಟ್ಟು
ಮನಸಿಜಾಧ್ವರಿಮಾಡುವ ಹೋಮದಂತಾ | ವನಿತೆಯ ತನುವುರಿದಿತ್ತು || ೧೨೫ ||

ಸೊಗಸುವ ಸಿರಿಗಂಪನಂಪಿಟ್ಟು ಹೊಸಹೊನ್ನ | ಹೊಗರನೇಳಿಪ ಕುಂಭಕುಚೆಯ
ನಿಗಿಲೆರ್ದೆಯೊಳಗಾವುಗೆಯ ಕೇಸುರಿಯಂತೆ | ಬಗೆವಱಿದು ದುಃಖಾಗ್ನಿ || ೧೨೬ ||

ಹಿತಮಲ್ಲದ ಶಶಿರುಚಿಯ ಸೂಸಲು | ಶತದಳಸನ್ನಿಭಮುಖದ
ಸತಿಯರುಗಳು ಮಾಳ್ಪುಪಚಾರಕಾರಜ | ಸುತೆ ಕಣ್ಣನಿನಿಸು ತೆಱೆದಳು || ೧೨೭ ||

ಲಲನೆಯರುಗಳಾಲಿನೀರ್ಗಳ ಸೇಸ | ನೊಲಿದು ಸೂಸುತ್ತಿರಲಾಗ
ಲಲಿತತನೂದರಿಯಳೆರ್ದೆ ಸುಣ್ಣಕ | ಲ್ಗಳಂದಮೆನೆ ಕೂಡಿತ್ತು || ೧೨೮ ||

ಕರ ಪದತಳ ಪಲ್ಲವವನಡಱೆ ಮೃದು | ತರಮಪ್ಪ ತನುಲತೆವಿಡಿದು
ಗುರುಕುಚಗಿರಿತಟದೊಳು ಪರಿದಳರ್ದುದು ತ | ತ್ತರುಣಿಯ ವಿರಹದಾವಾಗ್ನಿ || ೧೨೯ ||

ಪಿರಿದಳುರ್ವಾವಿರಹಾಗ್ನಿ ಪುರುಷನೊಳು | ನೆರವಿಲ್ಲದೆಯಮರ್ದಪ್ಪಿ
ಸುರಭಿನಿಶ್ವಾಸೆ ರಂಜಿಸಿದಳು ಸ್ವಾಹಾ | ತರುಣಿಯೆಂದೆಂಬ ಮಾಳ್ಕೆಯೊಳು || ೧೩೦ ||

ಏನೆಂಬೆನವಳ ವಿರಹದ ಮಾಹಾತ್ಮೆಯ | ನಾನಾತೆಱದುಪಚರವ
ಮಾನಿನಿಯರು ಮನದಳ್ಕರಿನ್ನೆಸಗಲು | ತಾನತಿ ವಿಪರೀತಮಾಯ್ತು || ೧೩೧ ||

ಕರಣಗುಣಂಗಳಡಗಿದವು ವಿರಹಾಗ್ನಿ | ಪರಿದುದಂಗೋಪಾಂಗದೊಳು
ಕೊರಲೊಳಗಸುಮಣಿಹಾರದಂತಾದುದು | ತರುಣಿಗೆ ತದ್ವಿರಹದೊಳು || ೧೩೩ ||

ಇಂತೊಱೆದ ಕುವರಿಯ ವಾರತೆಯನ | ತ್ಯಂತ ವೇಗದೊಳೊರ್ವ ಕೆಳದಿ
ಚಿಂತಾತುರೆಯಾಗಿ ಪೋಗಿ ತಮ್ಮಯ ಭೂ | ಕಾಂತಗಱುಪಿದಳಳಲುತ || ೧೩೪ ||

ಕೇಳಿ ಖಚರನಂತಃಪುರ ಸಹಿತವೆ ಬಂದು | ಬಾಲೆಯಿರವ ಕಾಣುತವೆ
ತಾಳಲಾರದ ದುಃಖದಿಂದಳಲುತಿರ್ದಾ | ಭೂಲಲನಾಪ್ರಾಣನಾಥ || ೧೩೫ ||

ಹರಕೆಗಟ್ಟಿಸಿ ಯಂತ್ರಮಂತ್ರೋಷಧಗಳ | ವರ ಕರ್ಮವನೆಸಗಿಸಲು
ಅರಗಿನಬೊಂಬೆ ಗುರಿಯ ತೋರಿದವೊಲು | ವಿರಹವತ್ಯುತ್ಕಟವಾಯ್ತು || ೧೩೬ ||

ಆ ವೇಳೆಯೊಳಷ್ಟಾಂಗನಿಮಿತ್ಯಜ್ಞ | ಆ ವಸುಧೀಶನೆಡೆಗೈದಿ
ಭಾವೆಯ ನೋವು ಹಿಂಗುವುದೊಂದು ಕಜ್ಜವ | ನೋವದೆಪೇಳ್ದನಿಂತೆಂದು || ೧೩೭ ||

ಭೂರಮಣನೆ ಕೇಳೀ ಘಳಿಗೆಯೊಳೆ | ಮ್ಮೀರಾಜ್ಯದ ಭೀಮವೆಂಬ
ಅರಣ್ಯದೊಳಗಾ ಶ್ರೀಪಾಲನೃಪಾಲನೊಂದು | ವಾರಣದೊಳು ಹೋಱೆ ಬಳಿಕ || ೧೩೮ ||

ಬಿನ್ನಣದಿಂದಳಲಿಸಿಯಾದಂತಿಯ | ಬೆನ್ನೇಱುತಹನೆ ಮತ್ತವನ
ಕನ್ನೆಯಿದ್ದೆಡೆಗೆ ತಂದೆಡೆ ಮತ್ತೀ ನೋವು | ಚನ್ನಾಗಿಯೆ ಹಿಂಗುವುದು || ೧೩೯ ||

ಎಂದೆಂಬ ಶಕುನಿಗ ನುಡಿದ ನುಡಿಯಕೊಂಡು | ಬಂದೆಮ್ಮ ವಿಮಲವಾಹನನು
ಕಂದರ್ಪನಿಭ ನಿನ್ನನೆ ನೋಡಲೆಂದೆನ್ನ | ನಿಂದೀಯೆಡೆಗಟ್ಟಿದನು || ೧೪೦ ||

ಕ್ಷಿತಿಪ ಚಿತ್ತೈಸು ನಾನಾ ಖಚರನೆ | ಸುತನೆನ್ನಪೆಸಱರವಿಂದ
ಶತಪತ್ರೋಪಮವದನೆ ಜಯಾವತಿ | ಸತಿಗಿಂ ಮುನ್ನುದಿಸಿದೆನು || ೧೪೧ ||

ಅದಱಿಂ ಬಂದು ಕಂಡೆನು ಶ್ರೀಪಾಲನಿಂ | ನದಟಕೇಳೆನ್ನ ತಂಗಿಯನು
ಮದನನಸೋಂಕಿಂ ಹಿರಿದುನೋಯಿಸುತದೆ | ಸದಯ ಚಿತ್ತೈಸು ಬಿನ್ನಪವ || ೧೪೨ ||

ಪಲವಾತೇಕೆನ್ನಿಱವೆ ಸಸಿನಗೆ ಸ | ತ್ಫಲವಾದುದು ನಿನ್ನಿಂದ
ಕಲಿಗಳರಸ ಬಿಜಯಂಗೈ ತಡಮಾಡ | ದಲಘುನಿತಂಬೆಯಿರ್ದೆಡೆಗೆ || ೧೪೩ ||

ಎನುತತ್ಯಾದರಮಪ್ಪ ನುಡಿಯ ನುಡಿ | ದನುರಾಗದಿಂದಾ ಖಗನು
ಮನುಜೇಶನ ತನ್ನಯ ಪಿಣಿಲೊಳಗಿಟ್ಟಾ | ಘನಮಾರ್ಗಕೆ ಲಂಘಿಸಿದನು || ೧೪೪ ||

ಮುಗಿಲ ಬಟ್ಟೆಗೇಱಿಪಾಱಿದ ಖಚರನ | ಪೆಗಲೇಱಿದ ಪರಿವೃಢನು
ಬಗೆವಂದವಾಮನುಜನ ಮಸ್ತಕವೇಱಿ | ಸೊಗಯಿಪ ಮಾರುತಿಯಂತೆ || ೧೪೫ ||

ಸುರುಚಿರಮಪ್ಪ ಶಿವಂಕರಪುರವರ | ಹರಿದಾಯಿ ಬನ್ನಬರ
ಮರುತಮಾರ್ಗದೊಳೆಯ್ತಂದಿಳುಹಿದನಾ | ಧರೆಗರಸನನಾ ಖಚರನು || ೧೪೬ ||

ಪೊಡವಿಗಿಳಿದು ಪಜ್ಜೆವಟ್ಟೆಯೊಳಿರ್ವರು | ತಡಮಾಡದನುರಾಗದಿಂದ
ನಡೆತಂದಾಬಿಜ್ಜಾಧರದೇಶದ | ಕಡುಚಲ್ವನೋಡುತೈದಿದರು || ೧೪೭ ||

ಹೂವಿನಬನ ಹಂಚಳಿಗೆಯ ಕೈದೋಟ | ಮಾವಿನಾರವೆ ಪಣ್ಗಾಯಿ
ತೀವಿದ ತೆಂಗಿನಾರವೆಗಳ ನೋಡುತ | ಭೂವರ ನಡೆತಂದನಾಗ || ೧೪೮ ||

ಕಳಮೆವೊಲನಪಾಯ್ದು ಕಾಳ್ಪುರಗಳದಾಂಟಿ | ಫಲಭಾರನಮ್ನಭೂರುಹದ
ನೆಳಲೊಳುನಿಂದೂರೂರ ಬಾಗಿಲಮುಂದೆ | ತಳಲಿದರಾ ನೃಪವರರು || ೧೪೯ ||

ತಿಳಿನೀರ್ಗೊಡಕೆ ಕೈಯಿಟ್ಟು ಹೊತ್ತಾ ನೀರ | ಹೊಳೆಯಳು ನಿಂದು ನಿಟ್ಟಿಸುವ
ಲಲನೆಯರಾಸ್ಯಮೊಪ್ಪದಿ ಗೆಲೆವಂದವು | ತಳಿರಿಟ್ಟ ಕಳಶಕನ್ನಡಿಯು || ೧೫೦ ||

ಜನಜಾತ್ರೆಯಾಗಿ ಕವ್ವರೆಗೊಂಡಾನಾಡ | ಜನವೆಲ್ಲವು ನೋಡುತಿರೆ
ಜನತಾಧಿಪ ನಡೆತರುತಿರ್ದನಭಿನವ | ಮನಸಿಜನೆಂಬ ಮಾಳ್ಕೆಯೊಳು || ೧೫೧ ||

ನಡೆತಂದಾಬಿಜ್ಜಾಧರಪೊಳಲ ತೆಂ | ಗಡೆಯ ಶಬಾಲಯಕಾಗಿ
ಕಡುನೀರರತಿಮುದದಿಂ ಪೋಗುತಿರೆ ಕಟ್ಟ | ಕಡೆವಗಲಿನ ವೇಳೆಯೊಳು || ೧೫೨ ||

ಅನಿತರೊಳೊಡವರುತಿರ್ಪ ವಿದ್ಯಾಧರ | ತನುಜನಾನೃಪನನಲ್ಲಿಱಿಸಿ
ಘನದೊಡ್ಡಿನ ಚಿತ್ರದಂತೆಯದೃಶ್ಯವ | ನನುರಾಗದಿಂ ತಾಳಿದನು || ೧೫೩ ||

ಉರಿಗಣ್ಣಿಂದುಗ್ರಮಾಸ್ತ್ರ ತನ್ನಯ ಸುರು | ಚಿರಮಪ್ಪ ಮೆಯ್ಗೆಟ್ಟವನ
ಭರದಿಂದವೆ ತನುತ್ವ ಪಡೆದಂತೆ ಖೇ | ಚರನದೃಶ್ಯತೆವೆತ್ತನಾಗ || ೧೫೪ ||

ಒಡವರುತಿರ್ದರವಿಂದ ವಂಚಿಸಿಯೀ | ಯೆಡೆಗೆ ಜಗುಳ್ದನೆಂದೆನುತ
ಕಡುಗಲಿ ನೋಡುವ ಸಮಯದೊಳಾ ರವಿ | ಪಡುವೆಟ್ಟಗೊನೆಗಡಱಿದನು || ೧೫೫ ||

ಅಂಭೋನಿಧಿಸನ್ನಿಭ ಗಂಭೀರ ವಿ | ಜೃಂಬಿತಗುಣಿ ಭೂಭುವನ
ಭುಂಬುಕನೆಸೆದೊಪ್ಪಿದನಲ್ಲಿ ಸಕಲವಿ | ಶ್ವಂಬರೇಶ್ವರಕುಲದೀಪ || ೧೫೬ ||

ಇದು ಭಾಕಜನಕರ್ಣವಿಭೂಷಣ | ಮಿದು ರಸಿಕರ ಚಿತ್ತದೆಱಕ
ಇದುವಾಣಿಮುಖಮಾಣಿಕ್ಯಮುಕುರ ಮ | ತ್ತಿದು ಶೃಂಗಾರಸುಧಾಬ್ದಿ || ೧೫೭ ||

ಏಳನೆಯ ಸಂಧಿ ಸಂಪೂರ್ಣ