ಶ್ರೀಮದಮರಮಣಿಮಕುಟುರಂಜಿತರತ್ನ | ಧಾಮಾಂಬುಧಾರಾಧೌತ
ತಾಮರಸಾಂಘ್ರಿಯುಗಲ ವೀರನಥನು | ದ್ದಾಮ ಸುಖವನೀವುದೆಮಗೆ || ೧ ||

ಶ್ರೀಸುತಸಮಸೌಂದರ್ಯನುನ್ನತಗುಣಿ | ಸಾಸಿರಗದಿರನೋರಗೆಯ
ಭಾಸುರತೇಜೋಪೇತನೊಪ್ಪಿದನು ವಿ | ಲಾಸರಸಾಬ್ಧಿಚಂದ್ರಮನು || ೨ ||

ಆದೇಶಕಲ್ಪನೆಯನು ಮೀಱುವರಾರು | ಮೇದಿನಿಯೊಳಗೆಂದೆನುತ
ಆ ದೇಶಾಧಿಪ ಚಿಂತಿಸಿ ಬಳಿಯೊಳು | ಚೋದಿಗಪಡುತ್ತಿದ್ದನಾಗ || ೩ ||

ನೀರನಿಳಿದು ನೆಲವೊಯ್ದು ಧೂಳೆತ್ತಿ ಹೆಂ | ಮಾರಿಯ ಶಪಿಸುತಳಲು
ತೋರದನಿಯ ಕಲಕದಿಂ ಮಸಣದ | ದಾರಿಯಳಲಪುಟ್ಟಿಸಿದುದು || ೪ ||

ಹಾಕಿದ ಹಲವು ಬಗ್ಗರೆ ಅರೆಗಡಿದಿರ್ದ | ಮೇಕನ ರುಂಡಮುಂಡಗಳಿಂ
ದಾ ಕುಣಪಾಲಯಕೆಯ್ತಂದಪಥವತಿ | ಭೀಕರಮನೆ ಪುಟ್ಟಿಸಿದುದು || ೫ ||

ಪಗಲೊಡ್ಡುಮುಱಿಯೆ ಕಳ್ತಲೆದಾಳಿಯಿಡೆ ಬೆಂ | ದಗುಳಲೆಡಬಲದಿಂದ
ಒಗೆತಂದ ಪದರೇಣುವಿನ ಪಾಂಗಿನವೊಲು | ನೆಗೆದುದಂದಿನ ಸಂಜೆಗೆಂಪು || ೬ ||

ಇನನಗಲ್ಗೃಹದೊಡನೊಡನೆ ಮೂಡಿತು ಶಶಿ | ಇನಿತು ದೋಷವು ಕೆಡಲೆಂದು
ಮನಮೊಸೆದಾನಭ ಪೊದೆದ ಕಾಗಿನವಸ್ತ್ರ | ಮೆನೆ ಕಪ್ಪಾದುದಾಗಸವು || ೭ ||

ಜಡರುಹ ಜನ್ಮಾಂಡವನೊಳಗಿಟ್ಟಲ | ರ್ವೊಡೆಯನ ಮೆಯ್ವಣ್ಣದಂತೆ
ಪೊಡವಿಯಾಗಸವೆಣ್ದೆಸೆಯೊಳಹೊಱಗೆ ಕ | ಪ್ಪಡಸಿದುದಾ ಸಂತಸವ || ೮ ||

ಕಾಳಿಂದಿಯ ಮಡುವಿನೊಳು ಮುಳುಗಿ ಪೋಪ | ಬಾಲ ಮರಾಳನಂದದೊಳು
ಕಾಳದೊಳುಜ್ವಲ ಕೀರ್ತಿಸಂಯುತ ನರ | ಪಾಲ ನಡೆದನಳ್ತಿಯೊಳು || ೯ ||

ಇಳೆಪೊಱೆದಂತದುಯಿಸಿದ ದೇಹಿಗಳು ಬ | ಲ್ವೆಳೆಗೊಯ್ತಂದು ಕೃತಾಂತ
ತಳುವದೊಕ್ಕುವ ಕಳದಂತೆ ಭೀಕರವೆನೆ | ತಳೆದೊಪ್ಪಿತಾರುದ್ರಭೂಮಿ || ೧೦ ||

ಮಾರಿಯ ಬಯಕೆಯ ಕಣಜ ಮಿಳ್ತುವಿನ ಭಂ | ಡಾರಮಂತಕನುಗ್ರಾಣ
ಸಾರಮೇಯಗಳ ಜೇವಣಸಾಲೆಯೆಮದೆನ | ಲಾ ರುದ್ರಭೂಮಿಯೊಪ್ಪಿದುದು || ೧೧ ||

ಹಲ ಹೆಣಮುರಿವ ಚಿತಾಗ್ನಿಯೆಲ್ಲಡೆಯೊಳು | ಜ್ವಲಿಸುತಿರಲು ದಂಡಧರನ
ನೆಲ ದಂಡು ಬಿಟ್ಟವರುಣಲೆಂದಡುವ ಪೇ | ರೊಲೆಗಳೆಂಬಂತೊಪ್ಪಿದವು || ೧೨ ||

ಪೆಣದೊಟ್ಟಿಲಟ್ಟೆಯ ರಾಸಿ ಹೆಮ್ಮೂಳೆಯ | ಬಣಬೆಯಡಗಿನ ಹೆಗ್ಗುಡೆ
ನೆಣದ ಹೆಮ್ಮೆದ ನೆತ್ತರ ಕೊಳನಿವ ಹೊ | ಕ್ಕುಣಪಾಲಯದ ಮಧ್ಯದೊಳು || ೧೩ ||

ಮನೆದೈವಮಪ್ಪ ಕೃತಾಂತನ ಪರ್ವದ | ದಿನದೊಳಗಾಮೃತ್ಯುದೇವಿ
ಮನಮೊಸೆದಿಟ್ಟ ಮೀಸಲ ಪತ್ತಳೆಗೂಳ | ನನುಕರಿಸಿದವು ಪಿಂಡಗಳು || ೧೪ ||

ನೆಣದ ನೆತ್ತರೊಳು ಕಲಸಿ ಸಂಡಗೆಯನಿಟ್ಟು | ತಣಿವ ತಾಳಸಿಯಗಳಟ್ಟು
ಒಣ ಬಾಡ ಬಾಳಕವಿಟ್ಟು ರಕ್ಕಸವೆಣ್ಗ | ಳುಣಿಬಡಿಸುವರು ತಮ್ಮವರ್ಗೆ || ೧೫ ||

ಕಣೆ ಕಾಲಿಡುವಡಿಯಿಂ ಸೊಣಗಂಗಳ | ಸೊಣವುತ ಮರುಳಗೂಗುಗಳು
ಒಣದಲೆವೋಡ ಹಿಡಿದು ರಕ್ಕಸರುಂಬ | ಹೆಣನ ಭಿಕ್ಷವ ಬೇಡುತಿಹರು || ೧೬ ||

ಪಿಡಿದು ಪಂದಲೆಯ ಶೂಲವ ನೆಮ್ಮಿನೆತ್ತರ | ಕುಡಿಯಲೆನುತ ತಲೆಯೋಡ
ಒಡನಾಂತು ನಾಯಿ ಪಿಂತರೆ ಕತ್ತಿಯಮರು | ಳ್ವಡಿಯಾದೊವಾಭೈರವನ || ೧೭ ||

ನೋಟಕೊಮ್ಮೊಮ್ಮೆಯಾಸುರಕಾಗಿ ಪಲತೆಱ | ದಾಟದ ರೂಪ ಕೈಗೊಂಡು
ಮಾಟದಿಂದಾಕುಣಪಾಲಯದೊಳು ಶತ | ಕೋಟಿ ಭೂತಗಳಾಡುತಿಹವು || ೧೮ ||

ಕೊರಲ ಶಂಕಿನ ಸರವೆರಲೆ ಗೊಂಬಿನಪಿಕೆ | ಸೆರೆಯೋಡು ಕೆಲದಱಿಮಾಗಿ
ಕರದ ತ್ರಿಶೂಲದ ಕಿಱು ಜಡೆವೊತ್ತ ಜೋಗಿಗ | ಳಿರಲೊಪ್ಪಿತಾ ರುದ್ರಭೂಮಿ || ೧೯ ||

ಕಾಱಕ್ಕಿದಳಿದು ಕೆಂಗೂಳಿಟ್ಟು ನರಗಿತ್ತು | ನಾಱೆಳೆಗಟ್ಟಿ ನೋನುತವೆ
ಆಱುತ ಕುಣಿವ ಬತ್ತಲೆ ಹುರುಕಾತಿಯ | ರಾ ರುದ್ರಧರೆಯೊಳೊಪ್ಪಿದರು || ೨೦ ||

ಕೂರಸಿಕೊಂಡು ಕಾದುವ ಮರುಳೊಳು ತಮ್ಮ | ತೋರಿಹ ತೋಲ್ವಲದಿಂದ
ಆರಿ ಬೊಬ್ಬಿಱಿದು ಕೆಡಹಿ ಮೆಟ್ಟಿ ಜಡೆಗೊಯ್ವ | ಕೂರಾಳಿರ್ದರಂದಲ್ಲಿ || ೨೧ ||

ಆ ರುದ್ರಧರೆಯೊಳಗಿಂತಪ್ಪ ಶೃಂಗಾರ | ವೀರ ಕರುಣ ಚೋದ್ಯ ಹಾಸ್ಯ
ಭೀರುತೆ ಭೀಭತ್ಸ ರೌದ್ರ ಶಾಂತಂಗಳ | ನಾ ರಾಯನೀಕ್ಷಿಸಿ ನಡೆದ || ೨೨ ||

ಬಂದ ಸೊಗಸಿಗನಾಗ ನಿರಿನಿಂಬಿವಣ್ಣಯ್ಯ | ನೆಂದಗ್ನಿಕುಂಡದಿನೆಳ್ದು
ನಿಂದ ಮಾಸತಿಯೆಸೆದಳು ದೃಪದಾತ್ಮಜೆ | ಯಂದುರಿಯಿಂ ಪುಟ್ಟಿದಂತೆ || ೨೩ ||

ಭಸಿತಾಂಗನಾದ ವೀರನದೊರ್ವನಾಲದ | ಸಸಿಯ ಕಿಳ್ತೆರ್ದೆಯೊಳಿಟ್ಟು
ಮಸಿಯ ತಿಲಕಮಿಟ್ಟಾ ನಟ್ಟಿರುಳೊಳು | ಶಶಿಯೆನೆ ನಡೆತಂದನಾಗ || ೨೪ ||

ತರುಶಾಖೆಯೊಳಡಿ ಮೇಲಾಗಿ ಬಾವಲ | ಪರಿಯೆನೆನಲ್ದು ಬೆಳ್ಗರೆವ
ಅರೆವೆಣಗಳ ಕಂಡು ಭೇತಾಳಗಳಲ್ಲಿ | ಕರುಣಿಸಿ ಮುಸುಕಿ ನೋಡಿದವು || ೨೫ ||

ಹೊಸ ಹೆಣದಂತೆ ಬಿದ್ದಿರೆ ಕಂಡೊರ್ವ ರ | ಕ್ಕಸಿ ನುಂಗಲಾರದುರ್ವುತೇಳ್ದು
ಬಸಿಱ ಬಗೆದು ಭೂತವದ್ಭುತವ ಪು | ಟ್ಟಿಸಿ ತಾವಾತಾಪಿಯಂತೆ || ೨೬ ||

ಪೊಡವಿಗಿಚ್ಚೊಳು ಬೇವ ಹೆಣನ ನೊಣೆಯಲದು | ವೊಡಲಸುಡಲು ಕುಣಿಕುಣಿದು
ಸಿಡಿಮಿಡಿಗೊಂಡು ಬಸುಱಪೊಸೆವುತ ಭೂತ | ಕಡು ನಗಿಸಿದುದು ಭೂವರನ || ೨೭ ||

ಸ್ನೇಹಿತನಿದ್ದ ಗೊಪ್ಪೆಯನುಪಪತಿಬಂದು | ನೇಹದಿನೋಡಲೆಂದೆಗೆಯೆ
ಆ ಹೆಣನೆಳ್ದಾಯೆನೆ ಹೆಪ್ಪುಳಿಸಿ ಬಿ | ಳ್ದಾ ಹಂದೆಯಸುವ ನೀಗಿದುದು || ೨೮ ||

ಪಿರಿದಂಡು ದಕ್ಕಿಸಲಾರದೋಕರಿಸುವ | ಮರುಳ ಬಾಯಿಂದವೆ ಸುರಿವ
ಕರುಳಬಳ್ಳಿಗಳೆಸೆದವು ಶುಷ್ಕವೃಕ್ಷಕೋ | ಟರದಿಬರ್ಪಹಿತತಿಯಂತೆ || ೨೯ ||

ಕುಣಿವಟ್ಟೆ ಕೂಗುವ ತಲೆ ಕೈ ಪಣೆವೊಯ್ವ | ಪೆಣವಾ ಪೆಣಗಳನಡಸಿ
ನೊಣೆದ ರಾಕ್ಷಸ ಭೂತ ಭೇತಾಳ ಪ್ರೇತ | ಗಣದಿಂದತಿ ರೌದ್ರಮಾಯ್ತು || ೩೦ ||

ಅರೆಯರೇಂ ಕುಳಿತವಸಾನ ಕಾಲದೆ | ನರನೋರ್ವನಿಷ್ಟದೈವವನು
ಸ್ಮರಿಯಿಪ ಶಾಂತರಸಕೆ ಮೆಚ್ಚಿತೆನೆ ಬಂದ | ಮರುಳು ಮುಸುರಿ ನೋಡಿದವು || ೩೧ ||

ಈ ತೆಱದಿಂ ನವರಸವನೆ ತೋರ್ಪ ಪ | ರೇತವನದ ಮಧ್ಯದೊಳು
ಪ್ರೇತಾಶ್ರಯವೆನಿಸುವದೊಂದು ವಟಭೂ | ಜಾತವೊಪ್ಪಿತು ಪಿರಿದಾಗಿ || ೩೨ ||

ಕಾಲೆತ್ತಿನೆಱೆದ ಹಲಹೆಣನೆಲ್ವೆಲು | ಮಾಲೆಗಟ್ಟಿದ ಬಳ್ಳಿಗರುಳು
ಸಾಲೇಱಿದ ಪಂದಲೆಯಿಂದ ಹೇ | ರಾಲಯ ಭಯಂಕರಮಾಯ್ತು || ೩೩ ||

ಮರಗೊಂಬಿನೊಳು ಬಳ್ಳಿಗರುಳ ಹಗ್ಗವಕಟ್ಟಿ | ಬರವಿಗರ್ದೊಟ್ಟಿಲನಿಟ್ಟು
ಮರುಳ್ಬಾಣತಿಯರು ಮಕ್ಕಳ ಮಲಗಿಸಿ | ಹರಸಿ ತೂಪಿರಿದು ತೂಗುವರು || ೩೪ ||

ಹಬ್ಬಿದಲಹ ಹಂಗಿಕಯಂಬುದುಱುಗಲ | ಮಬ್ಬಿನೊಳಗೆಯವಿದವಿದು
ಕೊಬ್ಬಿಕೊಱಿದು ಬಿದ್ದಾಡಿ ಹೆಗ್ಗರಗಳ | ಗುಬ್ಬಿಸುತಿರ್ಪವಂತಲ್ಲಿ || ೩೫ ||

ಹೊಳೆಹೊಳೆದಡಗುವ ಮೀಂಬುಳುಗಳ ಕಾ | ವಳಗೊಂಡ ಮರಗಾವಿನೊಳು
ಹೊಳೆವವು ಕಾರಕಾರ್ಮುಗಿಲೆಡೆಯೊಳು | ಥಳಥಳಿಪ ಮಿಂಚಿನ ತೆಱನಾಗಿ || ೩೬ ||

ಮಾರಿಯ ಮಂತಣಶಾಲೆಯೆಂದೆನಿಪ | ಘೋರಾಕಾರವನಾಂತ
ಹೇರಾಲದಡಿಯೊಳು ವಿಕೃತಾಕಾರದ | ಕೂರಾಳಿರ್ದನದೊರ್ವ || ೩೭ ||

ಉಟ್ಟದಣಿಬು ಸುಲಿಪಲ್ಟಿಟ್ಟನಿಡುಜಡೆ | ಇಟ್ಟವಿಭೂತಿಯ ಬೊಟ್ಟು
ಕಟ್ಟಿದಬಹುರಕ್ಷೆ ಪೊಸಪೊಂಜುರುಗೆಯ | ಕಟ್ಟಾಳು ಕಣ್ಗೆ ರಾಜಿಸಿದ || ೩೮ ||

ನರನವನೊಂದು ಬೀರದಿ ಸತ್ತಹೆಣನ ಕು | ಳ್ಳಿರಿಸಿವಸ್ತ್ರಾದಿ ಭೂಷಣವ
ಕರಮೆ ಚಲ್ವಡೆದು ಸಿಂಗರಮಾಡಿ ವಾಮೇ | ತರಹಸ್ತದೊಳು ಖಡ್ಗಮಿತ್ತು || ೩೯ ||

ದೆಸೆವಲಿಗೊಟ್ಟು ದಿಗ್ಬಂಧನವನೆ ಮಾಡಿ | ಎಸೆವ ನೀರ್ಗಂಪು ಸೇಸಕ್ಕಿ
ಎಸಳನ್ನವಾಲ್ತುಯ್ಯಲಾರತಿಯೊಳ್ವಗೆ | ಹೊಸಹಣ್ಗಳಿಂದರ್ಚಿಸಿದನು || ೪೦ ||

ಬಳಿಕವೆ ಬೀಜವರ್ಣೋಪೇತವಾಗಿ ಪ | ಜ್ವಳಿಪ ಮಹಾಯಂತ್ರಂಗಳ
ಗಳಪುವ ವೀರನನಾ ನೃಪವರನರೆ | ಯಳವಿಯೊಳಗೆ ಕಂಡನಾಗ || ೪೧ ||

ಈ ರುದ್ರಾವನಿಯೊಳಗೇಕಾಂಗದಿ | ಧೀರೋದಾತ್ತನು ತಾನಾಗಿ
ಕಾರಣಮಿಲ್ಲದಿಂತಿದನುಜ್ಜುಗಿಸಿದನೆಂ | ದಾರಯ್ಯೆ ನಡೆದನಾನೃಪತಿ || ೪೨ ||

ನೆತ್ತರನೀಂಟಿ ಸೊಕ್ಕಿದ ಪಾರ್ದಾ ಪುರು | ಷೋತ್ತಮನಡಿಗಾಲ್ವಾಯೆ
ಬಿತ್ತರಮಾದುದಂದಿನ ಹರಿಯೇಱಿದ | ಕರ್ತಾಕ್ಷನ ತೆಱನಾಗಿ || ೪೩ ||

ತಡಮೆಟ್ಟುತವೆ ಮೆಲ್ಲನೆ ಕಾಲ್ಗಳಸೊಪ್ಪು | ಳಿಡದಂದವೆ ನಡೆತಂದು
ಕಡುಗಲಿಯೊಂದು ಬೇತಾಳನ ನಡುಬೆನ್ನ | ಪೆಡಮೆಟ್ಟಿಗೆ ದಿಗಿಲ್ತಂದ || ೪೪ ||

ಕರಕಮಲಗಳನಂಜರದ ತನ್ನ ಪೆಗಲೊಳ್ | ಗಿರಿಸಿ ನೋಡುವ ಭೂವರನ
ಪಿರಿದಪ್ಪಕೋಪದೊಳ ವನಾರೆನುತ ಹಿಂ | ಮುರಿದು ನೋಡಿದುದು ಬೇತಾಳ || ೪೫ ||

ತಿರುಗಿ ನೋಡಿದ ಬೇತಾಳನ ಬೆರಟಿ ಪ | ಲ್ಮೊರೆದೌಡುಗರ್ಚಿಯಂಜಿಸುತ
ತರಹರದಿಂದ ನಿಟ್ಟಿಸುತಿರ್ದನಾ ಭೂ | ವರನನ್ನ ಧೀರರಾರೊಳರೆ || ೪೬ ||

ದಿಟ್ಟನಂದೀಕ್ಷಿಸುತಿರಲತ್ತ ಶಬ ತನ್ನ | ದಿಟ್ಟಿದೆಱೆದು ಮೈ ಮುಱಿದು
ನಿಟ್ಟುಸಿರಿಟ್ಟು ಮುನ್ನವೆ ತನ್ನ ಭಜಿಸುವ | ಕಟ್ಟಾಳೊಳಿಂತುಟಾಡಿದಿದುದು || ೪೭ ||

ನಿನ್ನಸಕ್ರಮ ನಿನ್ನಯ ವೀರತ್ವಮ | ನಿನ್ನ ಭಕ್ತಿಯನುಱೆನೋಡಿ
ಎನ್ನಯ ಮನಕತಿಪಿರಿದಾಗಿ ಮೆಚ್ಚಿದು | ದಿನ್ನೊಂದ ನಿನಗುಸುರುವೆನು || ೪೮ ||

ಎಲೆ ವೀರ ಕೇಳಾನು ಬಯಸಿದ ಬಯಕೆಯ | ನೊಲಿದಿತ್ತೆಯಾದೊಡೆ ನಿನಗೆ
ಹಲವು ತೆಱದೊಳೂಳಿಗಬೆಸದಿಂದಾನು | ಸಲಿಸುವೆ ನಿನ್ನಿಚ್ಚೆಯನು || ೪೯ ||

ಎನಲು ಕೇಳುತೆಂದನಾಭಟನದಱೊಳ | ಗೆನಗಾವುದುಂಟು ಮತ್ತದನು
ಮನಮೊಲಿದೀವೆನು ಬೇಡೆನೆ ಬೇಡಿದು | ದನಿತಱೊಳವನ ಹೆಗ್ಗರುಳ || ೫೦ ||

ಕರುಳಕೊಱೆದು ಕೊಟ್ಟು ಪಡೆವ ಫಲವಿದೇನು | ಮರಣವಡೆದು ರೂಹಳಿದು
ನರಿನಾಯುಣಿಸಿದ ಮೆಯ್ಗೆ ನೀ ಮಾಡುವ | ಪುರುಷಾರ್ಥವಿದೇನೆಂದ || ೫೧ ||

ಒಡಲಾಸೆವಿಡಿದಿಂತುಟಾಡಿದ ಮನುಜನ | ನುಡಿಗೇಳುತಾಮೃತಜೀವಿ
ಪೊಡವಿಯೊಳಗೆ ಕಲಿಗಳು ಸತ್ಕೀರ್ತಿಯ | ಪಡೆದಂದವ ಪೇಳಿದುದು || ೫೨ ||

ವಿಕ್ರಮ ಜೀಮೂತವಾಹನ ನರಪಾಲ | ರೀಕ್ರಮದೊಳು ಮೈಗೊಟ್ಟು
ಶಕ್ರಸ್ತುತರಾದುದಿಲ್ಲವೆ ಜಗತೀ | ಚಕ್ರವಱಿದ ಮಾಳ್ಕೆಯೊಳು || ೫೩ ||

ಪೊಡವಿಯೊಳಗೆ ರವಿತನುಜ ದಧೀಚಿಗ | ಳ್ನುಡಿಗೆ ತಪ್ಪದೆ ಬೇಡಿದವರ್ಗೆ
ಒಡಲೊಡವೆಯನಿತ್ತು ವೊಳ್ಳಿತೆಯ್ದಿದರೆಂಬ | ನುಡಿಹರಿದುದು ಕೇಳ್ದಱಿಯ || ೫೪ ||

ಶೂರತೆಯಿಂ ಮಣ್ಮುಳಿಗೊಂಡ ಸಾಸಿಗ | ಳಾ ರವಿಬಿಂಬವನೊದೆದು
ಬೀರವೆಣ್ಗಳಿಗೆ ಬಲ್ಲಹರಾಗಿ ಸಗ್ಗದ | ಸಾರಸುಖವನುಂಡದಱಿಯ || ೫೫ ||

ಇಳೆಯೊಳಗುಳ್ಳ ಮನುಜರೊಡಲೊಳಗಸು | ಪಲಪಗಲಿರದದಱಿಂದ
ಒಲಿದವರ್ಗೀಯದೆ ಲೋಭವಾಳುವೀ | ಹೊಲೆವದುಕಿಂ ಫಲವುಂಟೆ || ೫೬ ||

ಅದಱಿಂದಾನಿಚ್ಚೈವಡೆದು ಬೇಡಿದೊಡಾನೀ | ವುದು ಮತನಿನಗೆಂದೆನಲು
ಒದವಿದ ಭೀಱುತೆಯಿಂದಾ ಕಡುಹಂದೆ | ಬೆದಱಿನುಡಿಯಲಣ್ಮದಿರ್ದ || ೫೭ ||

ಕೊಡುವೆನೆನುತ ಮುಂ ಪುಸಿದೆನ್ನ ನಂಬಿಸಿ | ಕೊಡದಿರ್ದಡೆಲವೊ ನಿನ್ನೊಡಲ
ಕಡಿದು ಬಗೆದು ಕರುಳನು ತಂದು ಕೊರಲೊಳ | ಗಿಡದೆ ಬಿಡುವೆನಲ್ಲೆನುತ || ೫೮ ||

ಭೈರವ ಬೊಮ್ಮರಕ್ಕಸ ಕಾಳಜಟ್ಟಿಗ | ಬೀರ ಬೇತಾಳರಾರೊಳರು
ಬೀರತೆಯುಳ್ಳವರ್ಗಳು ನಿನ್ನಸುಗಾವೊ | ಡಾರಾದರುಮಡ್ಡಬರಲಿ || ೫೯ ||

ಕೆಡೆನುಡಿದಿಂತು ನಡೆದು ಮುಂದಲೆಗೊಂಡು | ಕೆಡಹಿ ಕೆಕ್ಕಳಗೆಳದೆರ್ದೆಗೆ
ಅಡಿಯಿಟ್ಟು ಕರುಳ ಸೀರುಂಬುಳಾಡುವೆನೆಂದು | ಪೊಡೆಗೆ ಕೂರಸಿಯಿತ್ತುದಾಗ || ೬೦ ||

ಸಿಡಿಲಹೊಡೆಪಕಂಚೆ ಸಿಂಗವಡಱಲಾನೆ | ಪಿಡಿದ ಪೆರ್ಬುಲಿಗೆಳವುಲ್ಲೆ
ಕಡಿದ ಹಾವಿಗೆ ಕಪಿ ಸುಗಿವಂತಾ ಹಂದೆ | ಕಡುಬೆರ್ಚಿ ಬೆಬ್ಬಳವೋದ || ೬೧ ||

ಬೆಬ್ಬಳಿಪಸು ಬೆಳ್ಗಱೆವ ಕೊರಲು ಮೆಯ್ಯ | ಹಬ್ಬಿದ ನಡುಕ ಹೊಯ್ವಳ್ಳೆ
ದಬ್ಬುದಲೆಯ ಮಾತು ದುರುದುರಗಣ್ಣಿಂ | ದುಬ್ಬಸಗೊಳುತಿದ್ದನವನು || ೬೨ ||

ದೆಸೆಯಾಳ್ವರು ದಿವಿಜರು ನೆಲದೆಱೆಯರಾ | ಗಸವಟ್ಟೆಗರು ಮೊದಲಾದ
ಅಸಮ ವಿಕ್ರಮರೆನ್ನಸುಗಾಯ್ವುದೆಂದಸ | ವಸದಿಂದಂ ಮೊರೆಯಿಟ್ಟನವನು || ೬೩ ||

ಎಂದೆಂಬ ಮೊಱೆಗೇಳುತ ಬೇತಾಳನ | ಪಿಂದಿರ್ದ ನರಪಾಲಕನು
ಮುಂದೈಸಿದ ಕಾರುಣ್ಯಹೃದಯನಿಂ | ತೆಂದನು ತನ್ನೊಳು ತಾನ || ೬೪ ||

ಮಂಡಳಿಕರು ಮೊಱೆಗೇಳಿ ಸೈತಿರ್ಪುದು | ಗಂಡುತನಕೆ ಖೋಡಿಯೆಂದು
ಚಂಡಭುಜಮಂಡಲನಖಿಲೋರ್ವಿ | ಮಂಡನನಲ್ಲಿಗೆಯ್ದಿದನು || ೬೫ ||

ಬಂದವನೊಡನೆಂದನೆಲೆ ಪಾತಕಿ ಕಡು | ಹಂದೆಯ ಕೊಂದು ಹೊಕ್ಕುಳಿಯ
ಗೊಂದಣದೊಳು ಹೊಕ್ಕು ಬಹು ದುಃಖವಡೆವುವ | ದಂದವಹುದೇ ಕಲಿಗಳಿಗೆ || ೬೬ ||

ಅಣ್ಮಣ್ಮೆಂದೆಂಬರ ನಂಬುವೊಕ್ಕರ | ಪೆಣ್ಮಕ್ಕಳ ಪುಲ್ವಿಡಿದಱಿ
ಮುಣ್ಮುಳಿಯನು ಮಾಳ್ಪುದರ ಭೀರತೆಯಿಂ | ಬೆಳ್ಮಾನಿಸರಪ್ಪವರ್ಗೆ || ೬೭ ||

ಮಱೆಪೊಕ್ಕವರ ಕಾಯದ ಮಾರಾಂ | ತಱನುರದಿಕ್ಕದೆ ಪುತ್ತೇಱಿ
ಮೊಱೆಯಿಟ್ಟವರ ಕಾಯದ ತುಳಿಲಾಳ್ಗದು | ನೆಱೆವಳಿಗೆಯೆ ಲೋಕವಱಿಯೆ || ೬೮ ||

ಅಯ್ಯಯ್ಯಾನಂಜುವೆನಂಜುವೆನೆಂದು | ಪುಯ್ಯಲ್ಬವನೆದೆಗರುಳ
ಕುಯ್ಯಲೆಣಿಸುವುದು ಮತವೆಯೆಂದಾ ಬ | ಲುಗಯ್ಯನ ನುಡಿಗೇಳಿದುದು || ೬೯ ||

ಇನಿತು ದಯಾಗುಣಮುಳ್ಳೊಡೆ ನಾ ಮುನ್ನ | ವಿನಯದಿ ಬೇಡಿದೊಡವೆಯ
ಮನಮೊಲಿದಿತ್ತು ಬಳಿಯೊಳವನಸುಗಾವು | ದನುಮತ ಬಲ್ಲಾಳುಗಳಿಗೆ || ೭೦ ||

ಎನೆ ನುಡಿದಾಮೃತಜೀವಿಗರಸನೆಂದ | ಮಿನುಗುವ ಕಿಱುನಗೆಯಿಂದ
ಎನಿತೊಡಮೆಯಿದೆಂದು ಬೇಡಿದೆಕೊಳ್ಳೆಂ | ದನುನಯವನೆ ತೋಱಿದನು || ೭೧ ||

ನಗುತಿಂತಾ ಹಂದೆಯ ಖಡ್ಗವ | ನುಗಿದು ತನ್ನಯ ತೆಳ್ಳೊಡಲ
ಬಿಗಿದ ಕರುಳನೀವೆನೆನುತಾಗಳಿಯೊಳು | ಬಗೆದನಾ ಕಲಿಗಳತಿಲಕ || ೭೨ ||

ಆ ವುಜ್ಜುಗವನು ಕಂಡಾಮೃತಜೀವಿ | ತೀವಿದ ತನ್ನ ರೌದ್ರತೆಯ
ಓವದೆ ಬಿಸುಟುಂ ಬೆಱಗುವಟ್ಟು ನೋಡಿದು | ದಾ ವಸುಧಾವಲ್ಲಭನ || ೭೩ ||

ನೋಡಿರೆ ಪರಪುರುಷಾರ್ಥಕುದಾರನ | ಮಾಡಿದ ಮಹಿಮನತೆಱನ
ನಾಡಿನೊಳಿಂತಪ್ಪವೀರರಿಲ್ಲೆನುತವೆ | ಮಾಡಿದುದತಿ ವಿಸ್ಮಯವ || ೭೪ ||

ತೂಗುವ ತಲೆ ತುಱುಗೆವೆಯಲುಗದನೋಟ | ಮೂಗಿಟ್ಟು ಸುಟ್ಟುಂಬೆ ಬೆರಲು
ಭೂಗಧಿಪನ ಕೊಂಡಾಡುವ ನುಡಿಯಿಂ | ರಾಗಿಸಿತಾಮೃತಜೀವಿ || ೭೫ ||

ಭೂಪನ ಕೈಯ ಕೂರಸಿಯನುಗಿದು ನಾ | ನಾ ಪರಿಯವನ ಸಾಹಸದ
ವ್ಯಾಪಕತೆಯ ಕೊಂಡಾಡಿ ತನ್ನಯ ದಿವ್ಯ | ರೂಪುದೋಱಿದನಾ ದೇವ || ೭೬ ||

ಒಪ್ಪುವ ದಿವ್ಯರೂಪವು ಪೂಱಮಡೆ ಹೇಯ | ಮಪ್ಪ ಹೆಣನ ಭೂತಳಕೆ
ತೊಪ್ಪನುರುಳ್ದುದು ತೊಟ್ಟಾಡಿ ಹಾಕಿದ | ಲೆಪ್ಪದ ಚೋಹದಂದದೊಳು || ೭೭ ||

ಮೊಗದ ಹೊಗರು ಮಿನುಗುವ ಕಣ್ಗಳ ಢಾಳ | ಸೊಗಯಿಸುವಿನಚ್ಚವೆಳಗು
ಬಗೆವಂದವಾದೇವನ ದೇಹದೊಳುಮಿಂಚ | ನಗೆವೊಯ್ದರೆಂಬಮಾಳ್ಕೆಯೊಳು || ೭೮ ||

ದಿವ್ಯವಿಭೂಷಣ ದಿವ್ಯಾನುಲೇಪನ | ದಿವ್ಯವಸನ ದಿವ್ಯಕುಸುಮ
ದಿವ್ಯಮಪ್ಪಧ್ವನಿ ದಿವ್ಯರೂಪಿಂದ | ದಿವ್ಯಪುರುಷನೊಪ್ಪಿದನು || ೭೯ ||

ಇಂತತಿ ಶೋಭೆಯನಾಂತ ತದ್ಭೂಮೀ | ಕಾಂತಶಿರೋಮಣಿಗಾಗ
ಕಂತುಸದೃಶರೂಪನ ಕಾಣುತ ಕಡು | ಸಂತಸಗಡಲೊಳಾಳಿದನು || ೮೦ ||

ಮೆಚ್ಚಿದೆನರಸ ನಿನ್ನಯ ವೀರವಿತರಣ | ಕೊಚ್ಚತಮನಮಾಱವೋದೆ
ಬಚ್ಚಣಿವಾತಲ್ಲ ಕೊಡುವೆನು ನಿನಗೆ ಕ | ಟ್ಟಚ್ಚರಿಯೆನಿಪ ರತ್ನವನು || ೮೧ ||

ಇದು ದಿವ್ಯ ಪಾದುಕಯಿದು ಚಿಂತಾಮಣಿ | ಇದು ಖಡ್ಗರತ್ನಮಿಂತಿದನು
ಮುದದಿಂ ಕೈಕೂಳ್ಳೆನುತತಿಕಾರುಣ್ಯ | ಒದವಿ ಸಂತಸದಿಂದಿತ್ತ || ೮೨ ||

ಕಂದರ್ಪನಿಭರೂಪಗಾದೇವ ರತ್ನಗ | ಳಿಂದಪ್ಪ ವಿವರವನೊಳಱೆದು
ಮುಂದಣ ಸಬ್ಬಕಜ್ಜವು ಸಿದ್ಧಿಯಕ್ಕೆಂ | ದಂದದೃಶ್ಯತೆವೆತ್ತನಾಗ || ೮೩ ||

ಅಂಜದಿರೆಲೆ ಸಾಧಕಯೆನುತಾಗ ಧ | ನಂಜಯಸನ್ನಿಭತೇಜ
ಕಂಜೋಪಮಕರದಿಂದ ಮೆಯ್ದಡವಿದ | ಮಂಜಿಸಿಕೆಯೊಳಿಂತು ನುಡಿದ || ೮೪ ||

ಪ್ರಿಯದಿಂದೆ ವಿದ್ಯೆಯ ಸಾಧಿಸುವೆನೆಂದು | ಭಯಮುತ್ತು ಬಿಟ್ಟೆ ನೀನೆನುತ
ನಯದಿಂ ತಾಂ ಮುಂ ಪಡೆದ ರತ್ನಗಳ | ನಿಶ್ಚಯದಿಂದೊಲಿದಿತ್ತ ನನಗೆ || ೮೫ ||

ಆ ರತ್ನವ ಕೈಕೊಂಡು ಮತ್ತವನೆಂದ | ನಾ ರತಿಪತಿಸನ್ನಿಭಗೆ
ಭೂರಮಣನೆ ಲಾಲಿಸೆನ್ನ ಬಿನ್ನಪವನೆಂ | ದಾ ರಾಯ ನುಡಿದನಿಂತೆಂದು || ೮೬ ||

ಸುಗುಣಮಣಿಯೆ ನಿನ್ನ ನಾ ಹಳುವಿಂದೆನ್ನ | ಪೆಗಲೊಳಗಿಟ್ಟು ಬಾಂಗಡೆಗೆ
ನೆಗೆದೆಯ್ದಿ ಬಂದೀಯೆಡೆಯೊಳು ಬಿಸುಟಾ | ಖಗಸುತನರವಿಂದ ನಾನು || ೮೭ ||

ಈ ರತ್ನಮೀತೆಱದಿಮದಲ್ಲದಾತಗೆ | ಸೇರವೆಂದೆಮ್ಮ ಜೋಯಿಸನು
ಆರೈದೆನ್ನೊಳಗುಸುರಿದನಂತದು | ಕಾರಣದಿಂದಿಂತುಟಾದೆ || ೮೮ ||

ಎನುತ ನುಡಿದ ಕೃತ್ರಿಮರೂಪನ | ನನುರಾಗದಿಂ ಬಿಟ್ಟು ತನ್ನ
ಮನಸಿಜಸದೃಶರೂಪವ ತೋಱಿದನಾ | ಜನನಾಥನರವಿಂದಗಾಗ || ೮೯ ||

ನಿನಗಲ್ಲದೀ ವಿದ್ಯಾರತ್ನವು ಬೆಸಕೆಯ್ಯ | ವೆನಲೆಂದನವನಾ ನೃಪತಿ
ಇನನುದಯದೊಳವಧರಿಸೆಯಂತಿರಲಿಯಂ | ಬನಿತರೊಳುದಿಸಿದನರ್ಧೇಂದು || ೯೦ ||

ಇಂದ್ರದಿಗ್ವಧುಗೆ ಬೈತಲೆಯೊಳೊಪ್ಪುವ ಚಂದ್ರಮಾದುದು ಮೂಡಗೆಂಪು
ಚಂದ್ರಾರ್ಧಮಡ್ಡಬಂದುದು ಬಳಿಕಾ | ಚಂದ್ರಿಕೆ ಬೆಳುನಗೆಯಾಯ್ತು || ೯೧ ||

ತೊಳಗಿದುದರ್ಧೇಂದುಮೀನೆಂಬಪುಷ್ಪಾ | ವಳಿಗಳಿನೆಸೆವಂಬರವನು
ಜಳಕನೆಮಿಂಚೆಡೆ ಕಾಲರಜಕನಾಂತ | ಬೆಳಗುವಡಿಕೆಯೆಂಬಂತೆ || ೯೨ ||

ಆ ವಸುಧಾರಮಣನ ಸತ್ಕೀರ್ತಿಯ | ಧಾವಲ್ಯವೆವುತ್ಕಟಿಸಿ
ಓವದೆ ಭುವನಭುಂಭುಕಮಾದವೊ | ಲಾವರಿಸಿದುದಾ ಕ್ಷಣದಿ || ೯೩ ||

ಜಂಗಮಕಲ್ಪಭೂಮೀರುಹ ಸಂಗರ | ರಂಗ ದಕ್ಷಿಣದಿಗಧೀಶ
ಮಂಗಲಮಣಿಯೊಪ್ಪಿದನು ನೃಪಾನ್ವಯ | ತುಂಗನಮಲ ಕೀರ್ತಿಯುತನು || ೯೪ ||

ಇದು ಭಾವಕಜನಕರ್ಣವಿಭೂಷಣ | ಮಿದುರಸಿಕರ ಚಿತ್ತದೆಱಕ
ಇದು ವಾಣಿಯ ಮುಖಮಾಣಿಕ್ಯಮುಕುರ ಮ | ತ್ತಿದು ಶೃಂಗಾರಸುಧಾಬ್ದಿ || ೯೫ ||

ಎಂಟನೆಯ ಸಂಧಿ ಸಂಪೂರ್ಣಂ