ಶ್ರೀಮದಮರಮಣಿಮಕುಟರಂಜಿತರತ್ನ | ಧಾಮಾಂಬುಧಾರಾಧೌತ
ತಾಮರಸಾಂಘ್ರಿಯುಗಲ ವೀರನಾಥನು | ದ್ದಾಮಸುಖವನೀವುದೆಮಗೆ  || ೧ ||

ಎಸಳ್ವಳೆಯಲ್ಲಾ ನುಡಿ ಸಿಂಗವಣೆ ಝಲ್ಲಿ | ಯಸುಗೆ ಮುಕ್ತಾವಳಿವೆಳಗು
ಮಿಸುಗುವಚ್ಛತ್ರವರೆಯೆಸೆವಭವನಪಾದ | ಬಿಸರುಹಕಾನೆಱಗುವೆನು  || ೨ ||

ಶ್ರೀಪಾದಾಬ್ಜಕೆಱಗುವೆನಾವನಧಟ | ನಪ್ಪಾಪುಷ್ಪಭಾಂಡಾಸನನ
ರೂಪುಗೆಡಿಸಿ ನಿತ್ಯಸುಖಪದವೀವ | ಳಾಪೆಣ್ಣನೊಲಿಸಿದವನ  || ೩ ||

ತಿಳಿವೆಳುದಿಂಗಳೊಳಾಗಸವಳುಕಿನ | ಪೊಳೆವ ಪುತ್ಥಳಿಯಿರ್ಪಂತೆ
ತೊಳಗುವ ಮುಕುತಿವನೆಯೊಳಿರ್ಪಾ ಸಿದ್ಧರಿ | ಗಲಘುಭಕ್ತಿಯೊಳೆಱಗುವೆನು  || ೪ ||

ಆಚರಿಸುತ ಪಂಚಾಚಾರದಿಂ ಸಚ | ರಾಚರದೊಳೆ ಕೀರ್ತಿವಡೆದ
ಆಚಾರ್ಯರ ಚಾರುಚರಣಯುಗಂಗಳ್ಗೆ | ಚಾಚುವನೆನ್ನಳಕವನು  || ೫ ||

ಎಱಗುವೆನಲರ್ವಕ್ಕಿಯೊಲು ಧರ್ಮಕರ್ಮದ | ತೆಱವನೆಲ್ಲವ ಭವ್ಯತತಿಗೆ
ಅಱಪಿ ಮುಕುತಿವಟ್ಟೆದೋಱುವುಪಾಧ್ಯರ | ಮಿಱುಪಂಘ್ರಿಯರುಣಾಂಬುಜಕೆ  || ೬ ||

ನೆಲಸುವಾಸುದೇಸಿದುಪ್ಪಟಿ ರತ್ನತ್ರಯ | ಲಲಿತಭೂಷಣ ಶ್ರುತದೇವಿ
ಲಲನೆಯೆನಲು ಭೋಗಿಪ ಸಾಧುಸಮಿತಿಗೆ | ಒಲವು ಮಿಗಲು ವಂದಿಸುವೆನು  || ೭ ||

ಅರಹಂತರಡಿ ಸಿದ್ಧರ ಪದ ಸೂರಿಗ | ಳರುಣಾಂಘ್ರಿಯುಪದೇಶಕರ
ಚರಣ ಸಾಧುಗಳ ಸಕ್ರಮವೆನ್ನ ಬಗೆದಾ | ಮರೆಯರಲೊಳು ನೆಲೆಗೊಳ್ಗೆ  || ೮ ||

ಮುಪ್ಪೊಡವಿಯೊಳುಳ್ಳ ಕೃತ್ರಿಮಾಕೃತ್ರಿಮ | ಮಪ್ಪಮಾಣಿಕಬಸದಿಗಳ
ಒಪ್ಪುವ ಚೈತ್ಯಬಿಂಬಗಳನೇವೊತ್ತು | ತಪ್ಪದೆಯಭಿವಂದಿಸುವೆನು  || ೯ ||

ಅವನಿಯೊಳರ್ಹಂತರೂಪಧರಿಸಿ ಮುಕ್ತಿ | ಯುವತಿಗೆ ಬೇಟವ ಮಾಳ್ಪ
ನವಕೋಟಿ ತಪಸಿಗಳ ಲತೆವಜ್ಜೆಗೆ | ತವಕದಿಂದಾನೆಱಗುವೆನು  || ೧೦ ||

ಜಿನಮುಖಕಮಲದೊಳುದಿಸಿ ನಮೋಸ್ತುಗ | ಳಿನಿದಪ್ಪ ನುಡಿಯೊಳು ಬಳೆದು
ಜನನುತೆ ಮುಕ್ತಿಗೆ ಸಖಿಯಾದ ಶಾರದೆಗ | ನುನಯದಿಂ ವಂದಿಸುವೆನು  || ೧೧ ||

ಭದ್ರಪದವಿ ನನಗಕ್ಕೆಂದೆಱಗಿ ಸು | ಭದ್ರನಿಃಕಲ ಪೂಜ್ಯಪಾದ
ಭದ್ರಬಾಹು ಬಾಹುಬಲಿ ಗೌತಮ ಗುಣ | ಭದ್ರಾದಿಯ ಮುನಿವರರ್ಗೆ  || ೧೨ ||

ಬಿತ್ತರದಿಂ ಮಹಿಮರ ಚರಿತವನೇಕ | ಚಿತ್ತದಿಂದವೆ ಮುಂಬರೆದ
ಉತ್ತಮ ಕವಿಪರಮೇಷ್ಠ್ಯಾದಿ ಕವಿಗಳ | ಮೊತ್ತಕೆ ಮುನ್ನೆಱಗುವೆನು  || ೧೩ ||

ಹೊನ್ನ ಹಂಪುಗ ಗುಣವರ್ಮನಗ್ಗಳ ನೇಮಿ | ಜನ್ನ ಮಧುರ ನಾಗಚಂದ್ರ
ರನ್ನ ಕನ್ನಪ ಬಂಧುವರ್ಮಾದಿ ಕವಿಗಳ | ಚೆನ್ನಾಗಿಯೆ ಸ್ತುತಿಸುವೆನು  || ೧೪ ||

ವಿನುತಮಪ್ಪುದ್ಭಟ ಕುಲಚೂಡಾಮಣಿ | ಘನತರ ಶಾರ್ದೂಲಾಂಕ
ವನಿಸಿ ರಂಜಿಪ ಹೊಸವೃತ್ತಿಯ ಪ್ರಭು ನವ | ಮನಸಿಜ ರವಿನಿಭತೇಜ || ೧೫ ||

ಸುರಭಿಸದೃಶ ದಾನಿ ಸುರುಚಿರಗುಣನಿಧಿ | ಯುರುತರ ಭೋಗಸಂಯುತನು
ಸುರಪುರಕೆಣೆಯೆನಿಸುವ ಕಲ್ಲಹಳ್ಳಿಯ | ಗರುವ ವಿಜಯಭೂವರನು  || ೧೬ ||

ಆತನ ನಿಜನಂದನನಭಿನವನಚಿತ್ತ | ಜಾತನುಜ್ವಲಕೀರ್ತಿಯುತನು
ಭೂತಳಪತಿ ಜಿನಭಕ್ತ ಮಂಗರಸ ನಾ | ನೋತು ಪೇಳಿದೆನೀ ಕೃತಿಯ  || ೧೭ ||

ಹೊಲ್ಲದಗತಿಯನೆಯ್ದಿಸುವ ಸಚ್ಚರಿತ್ರ | ವಲ್ಲದ ದುರ್ಭಾವದೊಳು
ಖುಲ್ಲಮಪ್ಪಿತು ಮನವಲ್ಲಾಹೊತ್ತಿನೊಳು ತಾ | ಸಲ್ಲೀಲೆಯಿಂದಿರುತಿಹದು  || ೧೮ ||

ಅನಿತಱಿಂದಾವ ಹೊತ್ತಿನೊಳೀ ಕವಿತೆಯ | ಮನದಿಂ ಗೆಲ್ಲವಡೆದರ
ನೆನೆಯೆ ಕೃತಾರ್ಥನಗುವೆನೆಂದುವೊರೆದೆನೀ | ಅನುನಯಮಪ್ಪ ಸಂಗತಿಯ  || ೧೯ ||

ಎಲ್ಲವರನು ಮೆಚ್ಚಿಸುವರೆ ನಾ ಪೇಳ್ದು | ದಿಲ್ಲ ನಿರ್ವಾಣವಲ್ಲಭಗೆ
ಬಲ್ಲಹನಾದ ಮಹಾತ್ಮನ ಕಥೆಯಿದ | ನುಲ್ಲಸದಿಂ ಕೇಳಿ ಜನರು  || ೨೦ ||

ದಿವ್ಯಾರ್ಚನೆಯವರೊಳಗೊರ್ವದಾರಿದ್ರ | ಭವ್ಯನಭವಗೊಂದಲರು
ಅವ್ಯಯಸುಖವ ಬಯಸಿಯೀವವೊಲು ಪೂರ್ವ | ಕಾವ್ಯಮಿರ್ದಂತಿದನೊರೆದೆ  || ೨೧ ||

ಎಲರೊಲಪಕೆ ನನೆವೋದೆಳಲತೆ ಮೆಲ್ಲ | ನೊಲೆವಂತೆವೊಲು ಪಳೆಗೊಱಡು
ಅಲುಗದು ಸಜ್ಜನರಾಲಿಸುವಂದದಿ | ವೊಲಿಯರೀ ಕೃತಿಗೆ ದುರ್ಜನರು  || ೨೨ ||

ಮುಸುಕುವ ಮುಂದಿಂಗಳ ಸವಿಗದಿರ್ಗಂ | ಡೊಸರ್ವಿಂದೂಪಲದಂತೆ
ರಸಿಕರೆನ್ನಯ ಸತ್ಕೃತಿಯನೆ ಕೇಳಿ ಸಂ | ತಸವನೆದೆಗೆ ತಾರದಿಹರೆ || ೨೩ ||

ವಿತತ ಶತೇಂದ್ರವಂದಿತ ಮುಕ್ತಿವನಿತಾ | ಪತಿಯ ಕೊಂಡಾಡುತಮಿರ್ಪಾ
ಕೃತಿಯಾದಿಯೊಳುಸುರುವೆನು ಮೂಲೋಕಾ | ಕೃತಿಯನೆನ್ನಱಿವಿನಿತಱೊಳು || ೨೪ ||

ಢಕ್ಕೆಯ ಮೇಲಿರ್ದ ಢಕ್ಕೆಯ ಮೊಗುಚಿತಂ | ದಿಕ್ಕಿದವೊಲು ರೂಪುದಳೆದು
ಮೊಕ್ಕಳಮಾಗಿರುವನೊಪ್ಪಿ ಜೀವನತ | ತ್ವಕೈಯಾಸ್ಪದಮಾಗಿಹುದು || ೨೫ ||

ಅದಱೊಳು ಷಂಡಾಕಾರದ ತ್ರಸನಾಳ | ವಿದಿತಾಸ್ಥಿಕಾಯ ಷಡ್ದ್ರವ್ಯ
ಸದಮಲ ತತ್ತ್ವಪದಾರ್ಥಂಗಳು ತೀವಿ | ಮೊದಲಿಂದ ತುದಿವರಮಿಹವು || ೨೬ ||

ಆ ನಾಳದೊಳೂರ್ಧ್ವಮಧ್ಯಧೋಲೋಕ | ಭೂನುತ ಸಿದ್ದರೇಱಿರ್ದ
ಮಾನಿತಮಾದ ಹರ್ಮ್ಯದ ಮೂಱು ನೆಲೆಯಂತೆ | ತಾನತಿ ಶೋಭೆವಡೆದುದು || ೨೭ ||

ನಡುವಣ ಲೋಕವ ತೀವಿ ಹಲವು ದಿವಿ | ಕಡಲಿರ್ಪವಾಮಧ್ಯದೊಳು
ಕಡು ಸೊಗಯಿಪುದು ಮಹಾಲವಣಾಂಬುಧಿ | ಪೊಡವಿ ಪೆಣ್ಣುಡೆವೋಲಂತೆ || ೨೮ ||

ತಿರೆತುಱುಗಿದ ತುಂತುರು ಸುಳಿ ಬೊಬ್ಬುಳಿ | ನೊರೆ ಪಾವಸೆ ಬಲ್ಮೊರೆಪು
ಭರತಮಿಳಿತದಿಂದಾನೀರಭಂಡಾರವು | ಪಿರಿದು ರಂಜನೆವಡೆದಿತ್ತು || ೨೯ ||

ಭರವಶದಿಂದಂದು ಬಲಿಮುಖತತಿ ತಂ | ದಿರಿಸಿದ ಗಿರಿಗಳೆಲ್ಲವನು
ಧರಣೀತಳಕೀಡಾಡುವವೊಲು ಬ | ಲ್ದೆರಗಳೊಪ್ಪಿದವಂಬುಧಿಯೊಳು || ೩೦ ||

ತೆರೆವೊಯ್ಯಲಿಂದುದುರ್ವಾತುಳಸೀಕರಮಲ್ಲಿ | ಶರನಿಧಿ ತನಗಾಣ್ಮನಾದ
ವರು ಪಲಗೈಯಿಂ ಬೀಸುವ ಚಾಮರದಂತೆ | ತೆರೆ ಕಣ್ಗೆ ರಂಜಿಸಿತ್ತು || ೩೧ ||

ಹರುಷದೆ ಹಲವು ನದಿನಾರಿಯರು ಬಂ | ದಿರದೆ ಕೂಡಲು ತಶ್ರಮದಿ
ಪಿರಿದುಸುರ್ವೊಯ್ವ ಮೆಯ್ಯೆನಲಾಶರಧಿಗೆ | ಭರತಮಿಳಿತಮೊಪ್ಪಿದುದು || ೩೨ ||

ಆ ಮುನ್ನೀರ ನಡುವೆ ಜಂಬೂದಿವಿಯು | ದ್ದಾಮತೆಯಿಂದೊಪ್ಪುತಿಹುದು
ರಾಮಣೀಯಕಾಮೋದನದಿಯ ನಡುವಣ ದ್ರೋ | ಣಾಮುಖವೆಂಬ ಮಾಳ್ಕೆಯೊಳು || ೩೩ ||

ಕುಲಭೂಧರ ಕುರುಧರೆ ರಜತಾಚಲ | ವಿಲಸಿತ ಕರ್ಮಕ್ಷೇತ್ರ
ಲಲಿತ ಮಹಾನದಿಯಿಂದಾ ದಿವಿ ಕ | ಣ್ಗೊಳಿಸಿತು ಕಡುಪಿರಿದಾಗಿ || ೩೪ ||

ಆ ಜಂಬೂದ್ವೀಪವ ನಿರ್ಮಿಸುವಂದು | ರಾಜೀವಸಂಭವನೊಸೆದು
ಓಜೆಯಿಂದಿಡಲೊಪ್ಪಿದ ಶಂಕೆಯಂತೆ ವಿ | ಭ್ರಾಜಿಸಿತಲ್ಲಿ ಹೇಮಾದ್ರಿ || ೩೫ ||

ವಸುಧಾರಮಣಿಯ ಮಸ್ತಕದೊಳಗೆ ರಂ | ಜಿಸುವ ಕಿರೀಟಮೆಂಬಂತೆ
ಮಿಸುಪ ರತ್ನದ ಕೋಡುಂಗಲ್ಗಳಿಂದಾ | ಮಿಸುನಿಹೊಂಬೆಟ್ಟ ರಂಜಿಪುದು || ೩೬ ||

ಪರುಷದ ನೆಲೆ ಸಿದ್ಧರಸದ ನಿರ್ಜರ ಕಲ್ಪ | ತರುವಿನಾರಣ್ಯವಮೃತದ
ಸರಸಿಜಾಕರ ಸುರಭಿಯ ಹಿಂಡಿನ ಮೃಗ | ವಿರಲೊಪ್ಪಿತಾ ಸುರಶಿಖರಿ || ೩೭ ||

ಬಿಜ್ಜಾಧರರಿಂದವೆ ಸಿದ್ಧ ಬಿಂಬದ | ಸೆಜ್ಜೆಗಳಿಂ ಭವಹರರ
ಮಜ್ಜನಪೀಠಗಳಿಂದಾ ಹೇಮಾದ್ರಿ | ಪಜ್ಜಳಿಸಿತು ಶೋಭೆಯಿಂದ || ೩೮ ||

ಆ ಗಿರಿಯೆಂಬ ದೇವನ ಪಜ್ಜೆಯಂತೆರ | ಡಾಗಿ ತಾ ನದಿಯಿಂದ
ಭಾಗವಡೆದು ಪೂರ್ವವಿದೇಹಮಿಹುದಾ | ಶ್ರೀಗೆ ನಿವಾಸವೆಂದೆನಿಸಿ || ೩೯ ||

ಅದಱೊಂದಕ್ಕೆಂಟೆಂಟು ದೇಶವು | ಸದಮಲಮಾಗಿರಲದಱ
ತುದಿಯೊಳೆಸೆವ ಪುಷ್ಕಳಾವತಿವಿಷಯ ಸು | ವಿದಿತಮಾಗಿಯೆ ಶೋಭಿಪುದು || ೪೦ ||

ಆ ವಿಷಯದ ನಡುವಣ ವಿಜಯಾರ್ಧನು | ಹೀವಲ್ಲಭೆಯಾಸ್ಯದಂತೆ
ಭಾವವಡೆದು ವಿದ್ಯಾಧರಜನಗಳಿ | ಗಾವಾಸಮಾಗಿರುತಿಹುದು || ೪೧ ||

ಆ ರಜತಾಚಲವೆಂಬ ಬೆಳ್ದುಂಬಿಯ | ಚಾರುಚರಣವೆಂಬಂತೆ
ಆರಯ್ಯಲಾಱುಖಾಂಡಗಳಿಂದಾಭೂಮಿ | ಸಾರತೆಯಿಂದೊಪ್ಪುತಿಹುದು || ೪೨ ||

ಅವಱ ದಕ್ಷಿಣಭಾಗದೊಳಾರ್ಯಖಾಂಡ | ಸುವಿದಿತಮಾಗಿರುತಿಹುದು
ದಿವಿಜಲೋಕದ ಸುಭಗತೆ ಬಿಂಬಿಸಿ ತೋರ್ಪ | ನವಮುಕುಱದ ಮಾಳ್ಕೆಯೊಳು || ೪೩ ||

ಸುತ್ತಿದೈವತ್ತಾಱುನಾಡ ನಡುವೆ ಸಂ | ಪತ್ತೇ ತನಗೊಡಲಾಗಿ
ಉತ್ತಮವಿಷಯವೆನಿಪ ಭೂಸುದತಿಯ | ಕತ್ತುರಿಬಟ್ಟಿನಂತಿಹುದು || ೪೪ ||

ಹತ್ತುದಿವಸಕ್ಕೊಮ್ಮೆ ಮಳೆಕೊಳುತಿಹುದಲ್ಲಿ | ಬಿತ್ತಿದ ಬೀಜ ಹುಸಿಯದು
ಒತ್ತಿಟ್ಟಹಸ್ತದವೊಲು ಸಗ್ಗಿಗರ ಬಾಯ | ತುತ್ತಾಗಿಯೇ ಫಲಿಸುವವು || ೪೫ ||

ಕಱೆವ ಹೈನುಗಳಲ್ಲದೆ ಬಂಜೆವೈನಿಲ್ಲ | ವಱನಲ್ಲದೆ ಪಾಪಮಿಲ್ಲ
ಮಱೆ ತೆರೆ ಬಿಱುವಾತಾಱಡಿಯನ್ನಯ | ಸೆಱೆಯೆಂಬುದಾನಾಡೊಳಿಲ್ಲ || ೪೬ ||

ಹೊಳೆವೆಣ್ಣ ನಳಿತೋಳ್ಗಳೆನಿಸುವ ಕಾಲುವೆ | ಗಳೊಳೊಪ್ಪದಿ ಬೆಳದಿರ್ದ
ಕಳವೆ ಕರ್ವಡಕೆಲೆ ಬಾಳೆ ಚೆಂದೆಂಗು ಕಂ | ಗೊಳಿಸಿದವಾದೇಶದೊಳು || ೪೭ ||

ವಸುಧಾರಮಣಿ ವಿಲಾಸದಿ ಕೈಗೆಯ್ದ | ಪಸುರ್ವಸದನವೆಂಬಂತೆ
ಮುಸುಕಿ ಬೆಳೆದ ಬೆಳೆಗೆಯ್ವನತತಿ ರಂ | ಜಿಸುತಿಹವಾದೇಶದೊಳು || ೪೮ ||

ಮೊಳೆಯಿಡುವಗೆಯ ನೆಡುವ ನೀರೂಡುವ | ಕಳೆಗೀಳ್ವ ಕೊಬ್ಬನಗ್ಗಿಸುವ
ಬೆಳೆಗಾಯಿದು ಪೊಱೆವ ಪಾಮರೀಜನ | ಬಳಸಿಹುದಾವ ಕಾಲದೊಳು || ೪೯ ||

ಕಳಮೆಯ ಕದಿರ ಮೀಸಲ ಕಂಪನುಣಲೆಂ | ದಳಿಶಿಶುಗಳು ಕೊನೆಯೇಱಿ
ಪೊಳೆದವು ಪೂಗಣೆಯನ ಪಸುರ್ಗಾವಿನ | ತೊಳಪ ನೀಲದ ಮಿಂಟೆಯಂತೆ || ೫೦ ||

ತೀವಿದ ಪಾಲ್ದೆನೆಗಳ ಕರ್ಚಿ ಪಾಱುತಿರ್ಪ | ಳೀವಱಿಗಿಳಿಗಳೊಪ್ಪಿದವು
ದಾವಣಿ ಝಲ್ಲಿವೂಗಟ್ಟಿ ವಿರಾಜಿಪ | ಕಾವನ ಕಾರ್ಮುಕದಂತೆ || ೫೧ ||

ಗುಂಡಿಟ್ಟ ಸತಿಯರ ಕೈಯ ಕತ್ತುರಿವಳೆ | ವಿಂಡು ಘಳಿರುಘಳಿರೆನಲು
ತೊಂಡೆವಾಯಿ ಹೋಹೋಯೆನೆ ಪಥಿಕರ ಕಿವಿ | ಯುಂಡುದಣಿಯವಾಸೊಗಸ || ೫೨ ||

ಪಿಂಡಿಗುಂಡಿಟ್ಟ ಕವಣೆಯಾಂತ ಸತಿಯರ | ನಿಡುತೋಳ್ಗಳೆಸೆದವಾಕಂತು
ಕಡುಮುಳಿಸಿಂ ಪಾಂಥರೆದೆಗೋಂಟೆಯ ಮುತ್ತಿ | ಇಡುವ ಡೆಂಕಣಿಕೈಗಳಂತೆ || ೫೩ ||

ನಳಿತೋಳೆತ್ತಿ ಸೋವುತ ನೋಡೆ ಕಡೆಗಣ್ಣ | ಬೆಳಗು ಪರಿಯೆ ಹಾಱಿಹೋಹ
ಗಿಳಿಯ ಸೆಳೆಯಲೆಂದು ಪಾಮರಿ ಪಳುಕಿನ | ಸೆಳೆಯೆತ್ತಿ ಪಿಡಿವಂತಾಯ್ತು || ೫೪ ||

ಕಡುಗಿ ಕಡುಗಿ ಬರ್ಪ ಕಾಡಮಿಗವ ಹುಯ್ಯೊ | ಪಿಡಿದು ಸೆಳೆಯೆ ಬೆಳೆಗಾಯ್ವ
ಕಡು ನೀಱೆಯರು ಕಣ್ಗೆಸೆದರು ಕಾವನ | ಪಡಿಯಱತಿಯರೆಂಬಂತೆ || ೫೫ ||

ತೊಡವೆಗಳಚ್ಚರಿಯಂ ನುಡಿಮೊಳಗು ಕ | ಣ್ಗಡೆಮಿಂಚಿನಿಂ ಕಾರಸಿರಿಗೆ
ಪಡಿಯಾದ ಘನಕುಚಿಯರು ಹಸ್ತದಿಂ ನೀ | ರ್ಗೊಡುವರದ್ದಗಜಾತಕಕೆ || ೫೬ ||

ಸುರಭಿಲತಾಂಗಿಯರುಗಳಂಬುವ ತೀವಿ | ಕರತಳದೊಳು ಪಿಡಿದಿರ್ದ
ಕರಗಮೊಪ್ಪಿತು ತಮ್ಮ ಮೈಸೊಕ್ಕು ಕೈಗಾ | ಸ್ಮರನಿಟ್ಟ ಘುಟಿಕೆಯಂದದೊಳು || ೫೭ ||

ತೋಳೆತ್ತಿ ತೋಳ ಮೊದಲ ತುಱುಗೆವೆಯೆತ್ತಿ | ಲೋಲದೃಷ್ಟಿಯ ಮೇಲುದೆತ್ತಿ
ಸ್ಥೂಲಕುಚವ ತೋಱುರಂತೆಱೆದರು ನೀರ | ಬಾಲಕಿಯರು ಬಟ್ಟೆಗರಿಗೆ || ೫೮ ||

ತಿಳಿನೀರೆಱೆವ ತನ್ವಂಗಿಯ ರೂಪು ಮಾ | ರ್ಪೊಳೆದುದೊರ್ವನ ಹಸ್ತಮೆಂಬ
ತೊಳಪ ತಾಮರೆವಸೆಯೊಳು ಕೃಷ್ಣದೇವರ | ಲಲನೆ ಮಹಾಲಕ್ಷ್ಮಿಯಂತೆ || ೫೯ ||

ಕಡಿದಱಿದುರಿಯೊಳಗಿಕ್ಕುವನೆಮ್ಮನೀ ಪಾಪಿ | ಗುಂಡಿಯರೆಂದಿಕ್ಷುಧನ್ವಗಳು
ಒಡೆಯಗೆ ಕೊಡುವ ಹುಯ್ಯಲರಸಗೂಗೆನೆ ಸರ | ಗೊಡುವಿಕ್ಷುಯಂತ್ರಮೊಪ್ಪಿದುದು || ೬೦ ||

ತುಂಬಿದ ಖೇಡ ಖರ್ವಡಮಾಗ್ರಾಮ ಮ | ಡಂಬ ಸಂವಾಹನ ನಗರಿ
ಇಂಬಿಂ ದ್ರೋಣಾಮುಖ ಪಟ್ಟಣಗಳೊ | ತ್ತಂಬದಿ ತೀವಿಹವಲ್ಲಿ || ೬೧ ||

ಮಂಡಲಕತಿ ಮಂಡನಮಾಗಿ ಮತ್ತಾ | ಖಂಡಳಪುರಕೆಣೆಯೆನಿಸಿ
ಪುಂಡರೀಕಿಣಿವೆಸರ್ವಡೆವಾನಗರಿಯೆ | ಖಂಡಿತೈಶ್ವರ್ಯವೆತ್ತಿಹುದು || ೬೨ ||

ಆ ಜನಪದಮಾಗಸಪಳ್ಳಿಗಳುಡುರಾಜಿ | ರಾಜಿಪ ರಂಜಿಪ ರಾಜಧಾನಿ
ರಾಜಬಿಂಬವ ಬಳಸಿದ ವನಮೆಸೆದುದು | ರಂಜಿಪ ಪರಿವೇಷದಂತೆ || ೬೩ ||

ಕಂದರ್ಪ ರತಿದೇವಿಯರ ಶಯ್ಯಾಗೃಹ | ಬಂದ ಬಸಂತನ ಬೀಡು
ಮಂದಮಾರುತನ ತಳಾಱೆಕೆಯೂರ್ಗಳೆಂ | ಬಂದದೊಳಾ ವನವಿಹುದು || ೬೪ ||

ಕಿಂಜಲ್ಕದಹುರಿ ಮಳಲಿಂದೆಸಳ್ಗಳ | ಹೊಂಜಬಳದ ಫಣಿತತಿಯಿಂ
ಕಂಜಾಸ್ತ್ರನ ವನದುರ್ಗದಂತಾಯ್ತಪ | ರಂಜಿಗೇದಗೆಯ ಬಲ್ವೇಲಿ || ೬೫ ||

ಅರೆಯೆಡೆಯೊಳಗೊಲವಿಂ ರತಿಮಾಡುತಿ | ರ್ಪ್ಪರರೆಯೆಡೆಯೊಳು ಪೂಗೊಯ್ವ
ಅರೆಯೆಡೆಯೊಳು ಗೊಟ್ಟಿಯಪ್ಪ ವಿಟೆವಿ | ಟರಿರಲೊಪ್ಪಿತಾಬಹಿರ್ವನವು || ೬೬ ||

ಕಂದರ್ಪ ತೋಮರಜನಿತಾಗ್ನಿಯನಲ್ಲಿ | ನಂದಿಪೆನೆಂದತಿ ಭರದಿಂ
ಬಂದ ವಿಯೋಗಜನದ ಬಲ್ಲಂದಣಿ | ಯಿಂದೊಪ್ಪಿತಾಬಹಿರ್ವನವು || ೬೭ ||

ಆ ವನವೆಂದೆಂಬ ಪಸುರ್ವಣಿಗಿಲನೆ | ತೀವಿ ಬಳಸಿ ಪಜ್ಜಳಿಪ
ಭೂವಲ್ಲಭೆಯ ಕೊರಲ ದೇವರ ಹೊನ್ನ | ಭಾ ಪಡೆದುದಾನಗರಿ || ೬೮ ||

ತುರಗದ ವೈಹಾಳಿ ಕರಿಗಳಂಕದ ಕಳ | ಗರುಡಿಯ ನೆಲೆ ಜಟ್ಟಿಗಳ
ಪಿರಿಯುಕೃಡಮಾಹೊಳಲ ಬಾಹಿಯೊಳು ಬಂ | ಧುರಮಾಗಿಯೆ ತೀವಿಹವು || ೬೯ ||

ಹರಿವಿರಂಚಿಗಳು ತಂತಮ್ಮಪೆಂಪಿಗೆ ಹೋರಿ | ಹರನಡಿಮುಡಿಗಾಣಲೆಂದು
ಇರದಿಟ್ಟ ಬಟ್ಟೆಗಳೆನಲಿಹವಾಪುರ | ಕುರುಖಾತಿಪ್ರಾಕಾರ || ೭೦ ||

ಬಿಗಿದ ಬಜ್ಜರ ಮುಂಡಿಗೆ ದಾಡೆಯಮಳ್ವಡಿ | ನಗೆದುಟಿಯೆನೆ ಬಾಗಿಲುಗಳು
ನಗರಿಯೆನಿಪ ಸರಸಿಜಸಂಭವನ ನಾ | ಲ್ಮೊಗದ ಬಾಯ್ದೆಱೆಯವೊಲಿಹುದು || ೭೧ ||

ಅಟ್ಟಲೆಯೇಱಿ ಕಣ್ಮುಚ್ಚಲೆಯೊಳು ತಮ್ಮ | ಮುಟ್ಟುವರೆಂದು ಮುಮ್ಮಿಗಿಲಾಗಿ
ನಟ್ಟನಡುವೆಯೊಲೆದಾಡುತಿರ್ಪಾಗಸ | ವಟ್ಟೆವೆಣ್ಗಳತಂಡಮಿಹುದು || ೭೨ ||

ಅರಿನೃಪರೆದೆಗೊಳನನು ಕಲಕುವ ಭೂ | ವರನಷ್ಟಮದವೆಂಬ ಗಜದ
ಭರಿಕೈಗಳೆಂದೆನಲೆಣ್ದೆಸೆಯೊಳಗಾ | ಪುರದ ಡೆಂಕಣಿಕೈಗಳಿಹವು || ೭೩ ||

ವಾಣಿಯ ಮಸ್ತಕಮಣಿಮಕುಟವೊ ನಿ | ಶ್ರೇಣಿಯೊಲಿಪವರ್ಗಾಪಥದ
ಪ್ರಾಣಿದಯಾಮೂಲಗಿರಿಯೆನಲಲ್ಲಿ | ಮಾಣಿಕಜಿನಗೃಹಮಿಹುದು || ೭೪ ||

ಮುಗುಳಿಲ್ಲವಾರತಿದೇವಿಯರಾಡುವ | ನಗರಜನದ ಸಾರಿಯಿರ್ಪ
ಪಗಡೆವಾಸೆಂದೆನೆ ರವಿಸೋಮವೀಧಿಗ | ಳ್ಸೊಗಸಿಹವಾ ನಗರಿಯೊಳು || ೭೫ ||

ದಂಡನಾಯಕರ ದುಗಾಧಿನಾಥರ ಪರ | ಮಂಡಲೇಶ್ವರರ ಮಂತ್ರಿಗಳ
ಮಂಡಲೀಕರ ರಾಜಾಧಿರಾಜರ ತಂಡ | ತಂಡದ ಕೇರಿಯೊಪ್ಪಿದವು || ೭೬ ||

ಮಡಿವಾಳ ಮಾಲೆವೂಗಾರ ಕುಂಬಾರ ಕಂಚು | ವಡಿಗ ಕಮ್ಮಾರವಟ್ಟೆಗಾಱ
ಅಡಪವಳವುಳ್ಳರ ಚೂಳಾಯತರ ಕೇರಿಗ | ಳೆಡೆವಿಡದೊಪ್ಪಿದವಲ್ಲಲ್ಲಿ || ೭೭ ||

ಅಲರ್ವಿಲ್ಲನೆಂಬ ಹರಿಯ ಹೂವಿನ ಚಕ್ರ | ಬಲದಿಂದವೆ ಸುಖವಡೆದು
ಗೆಲವಾಳ ಗೋಪಸ್ತ್ರೀರಾಜ್ಯಮೆಂದೆನೆ | ಬೆಲೆವೆಣ್ಣಕೇರಿಯೊಪ್ಪಿದವು || ೭೮ ||

ಪರಿಮಲದರ ಪಟ್ಟೆಗಾಱರ ತಾಂಬೂಲಿ | ಗರ ಶಿಲ್ಪಿಗರ ಗಂಧಿಗರ
ಅರಲ್ವಡಿಗಳ ನವಮಣಿಹಗಾಱರ ಹೊನ್ನ | ಹರದರಂಗಡಿಯಿರ್ಪವಲ್ಲಿ || ೭೯ ||

ಸ್ಮರಶರಣೆಂದೆಂಬ ಪಂಚಾಕ್ಷರಗಳ | ನಿರದೋದುತಕ್ಷಮಾಲೆಯನು
ವರಿಸಿದರೆನೆ ಬಿರಿಮುಗುಳಮಾಲೆಯನೆತ್ತಿ | ತರುಣೀಜನ ಮಾರುತಿಹರು || ೮೦ ||

ಪಡಲಿಗೆಯೊಳು ಸಂಪಗೆಯೊಳ್ಳಲರ್ಗಳ | ಪಿಡಿದು ಮಾಱುವ ಕೋಮಲೆಯರು
ಪೊಡೆಯರಲನಕುವರಗೆ ನೀರಾಂಜನವ | ಪಿಡಿದೆತ್ತುವ ತೆಱನಾಯ್ತು || ೮೧ ||

ಸಿರಿಗಂಪು ಸುಯ್ಗಂಪಿಗೆಡೆಯಾಡುವಳಿವಱಿ | ಪಿರಿದೊಪ್ಪಿದುವು ಗಂಧವಱೆವಾ
ತರುಣಿಯರಾಸ್ಯಾಬ್ಜಲಕ್ಷ್ಮಿಯ ನೀಲದ ಚೆಂಡ | ನಿರದೆ ಹೊಡೆವ ತೆಱನಾಗಿ || ೮೨ ||

ಕರುಮಾಡದ ಮೇಗಣ ಮಣಿಗುರುಜೇಱಿ | ಪರಿವ ಮೇಲಣ ಮುಗಿಲ್ಗೊನೆಯ
ಪೊರೆ ಮುತ್ತಾಯ್ದು ಕೇವಣಿಸಿ ಕೊರಳಲ್ಲಿಟ್ಟು | ಪುರವನಿತೆಯರಾಡುತಿಹರು || ೮೩ ||

ಬಿಡುವೆಣ್ಗಳ ಬೆಲೆವೆಣ್ಗಳ ಬೆಸವೆಣ್ಣ | ಳೆಡೆಯಾಡುವ ಪುರಜನದ
ತೊಡತೊಡವೊತ್ತೆಸುವರಜಕಾಮಾಗ್ನಿಯ | ಕಿಡಿಯೇಳುವಂತೇಳ್ವುದಲ್ಲಿ || ೮೪ ||

ಇಂಬಿನ ಹೇಮ ರಜತ ಹರ್ಮ್ಯಗೋತ್ರಾದಿ | ತುಂಬಿದ ಪುರವರಮಿರ್ಪ
ಜಂಬೂದ್ವೀಪದೊಳಗೆ ರಾಜಗೃಹಮಲ್ಲಿ | ಪೊಂಬೆಟ್ಟಿನಂತೆ ರಾಜಿಪುದು || ೮೫ ||

ಕರಮೆಸೆವಾಪುರಸುದತಿಯ ಬೈತಲೆ | ಇರವಾದ ರಾಜವೀಧಿಯೊಳು
ಪರಪಿದ ಪೂವಲಿಸರ ಮುತ್ತಾಗಲಂ | ದರಮನೆ ರನ್ನಬೊಟ್ಟಾಯ್ತು || ೮೬ ||

ಅರಸನ ಸಮಯಗಾಣದೆ ನಿಂದ ಪರದೇಶ | ದರಸುಮಕ್ಕಳು ನಿಯೋಗಿಗಳ
ಕರಿ ರಥ ತುರಗ ಪದಾತಿಯ ಸಂದಣಿ | ಪಿರಿದೊಪ್ಪಿತಾಬಾಗಿಲೊಳು || ೮೭ ||

ಸೊಗಯಿಪ ರಾಜಲಕ್ಷ್ಮಿಯಳಿಕದೊ | ಳೊಗೆದ ಬಣ್ಣದ ಬಾಸಿಗದ
ಬಗೆಯೆನೆ ಪಲವು ರನ್ನದ ಗೋಪುರ ಧಗ | ಧಗಿಸಿದುವಾಬಾಗಿಲೊಳು || ೮೮ ||

ವಾರಣಶಾಲೆ ಮಜ್ಜನಗೇಹ ಭಂಡಾ | ಗಾರ ಬಂಧುರ ಶಸ್ತ್ರಸದನ
ನಾರೀಜನಗೃಹ ನರ್ತನಭವನದಿಂದ | ದಾ ರಾಜಸದನಮೊಪ್ಪಿದುದು || ೮೯ ||

ಸಾರಸುಗಂಧದ ಸೊದೆಯಿಂ ಸಾದಿನ | ಸಾರಣೆಯಿಂ ಕುಂಕುಮದ
ಕಾರಣೆಯಿಂ ಕಂಪಿನ ಕರಡಗೆಯಂತೆ | ಚಾರುಗೃಹಂಗಳೊಪ್ಪಿದವು || ೯೦ ||

ಆ ರಾಜಗೃಹಸರಸಿಯೊಳಂತಃಪುರಮೆಂಬ | ವಾರಿಜವನದ ಮಧ್ಯದೊಳು
ಭೂರಮೆಗಧಿಪನಿಹನು ಗುಣಪಾಲನೆಂ | ಬಾರಾಯನಂಚಿಯಂದದೊಳು || ೯೧ ||

ಸಿರಿಯುರದೊಳು ಜಯಸತಿ ಧೈರ್ಯದೊಳು ಕೀರ್ತಿ | ಬೆರಲೊಳವನಿ ಬಾಹುವಿನೊಳು
ವರವಾಣಿಯೊಳುಡಿಯೊಳು ನೆಲೆಸಿದುದಱೆಂ | ದರಸನೈಸಿರಿಗಾಣ್ಮನಾದ || ೯೨ ||

ಪರನಾರೀಸಹೋದರನೆಂಬ ಬಿರುದಾಂ | ತರಿರಾಯರ ತೋಳೊಳಿರ್ಪ
ಧರಣಿಸತಿಯನಾಳ್ವುದು ಚಿತ್ರವೆಂದ | ಕ್ಕರಿಗರು ಪೊಗಳ್ವರಂದವನ || ೯೩ ||

ಧರೆಯರಸರ ಮಕುಟದ ಮಣಿಯಿಂ ಸಿಂ | ಗರ ಮಾಡಿದನು ತನ್ನ ನುಡಿಯ
ಉರುತರಮಪ್ಪ ವಿಕ್ರಮದಿಂದವೆ ಭೂ | ವರಕುಲಮಣಿಭೂಷಣನು || ೯೪ ||

ಇದು ಭಾಕಜನಕರ್ಣವಿಭೂಷಣ | ಮಿದು ರಸಿಕರ ಚಿತ್ತದೆಱಕ
ಇದು ವಾಣೀಮುಖಮಾಣಿಕಮುಕುರ ಮ | ತ್ತಿದು ಶೃಂಗಾರಸುಧಾಬ್ಧಿ || ೯೫ ||

ಒಂದನೆಯ ಸಂಧಿ ಸಂಪೂರ್ಣಂ