ಕನ್ನಡ ವಿಶ್ವವಿದ್ಯಾಲಯವು ಸಮಗ್ರ ಕನ್ನಡ ಜೈನಸಾಹಿತ್ಯ ಸಂಪುಟಗಳನ್ನು ಸಿದ್ಧಪಡಿಸುತ್ತಿರುವುದು ಸಂತೋಷದ ವಿಷಯ. ಇದು ಅಪೂರ್ವ ಸಂಗತಿಯೂ ಹೌದು! ಅಲಬ್ಧ ಜೈನಕಾವ್ಯಗಳ ಅಧ್ಯಯನ ಈಗ ಆಗಬೇಕಾಗಿದೆ. ಅನೇಕ ಆಲಬ್ದ ಜೈನಕವಿಗಳು ಹಸ್ತಪ್ರತಿಗಳಲ್ಲಿ ಇನ್ನೂ ಉಳಿದಿದ್ದಾರೆ. ಸಾಹಿತ್ಯ ಚರಿತ್ರೆಯಲ್ಲಿ ಮೂರನೇ ಮಂಗರಸನ ಸರಿಯಾದ ಸ್ಥಾನ ನಿಷ್ಕರ್ಷ ಆಗಿಲ್ಲ. ಅವನ ಕೃತಿಗಳು ಹೆಚ್ಚಾದ ಅಧ್ಯಯನಕ್ಕೆ ಇನ್ನೂ ಒಳಗಾಗಿಲ್ಲ. ಈ ಸಂಪುಟದ ಪ್ರಕಟಣೆಯ ಹಿನ್ನೆಲೆಯಲ್ಲಿ ಅದು ಆಗಲೆಂದು ಆಶಿಸುತ್ತೇನೆ.

೧. ನೇಮಿಜಿನೇಶ ಸಂಗತಿ ೧. ಸಂಪಾದಕರು: ಪಂ.ಎ. ಶಾಂತಿರಾಜಶಾಸ್ತ್ರೀ, ಎ. ಶಾಂತಿರಾಜಶಾಸ್ತ್ರಿ ಟ್ರಸ್ಟ್, ಬೆಂಗಳೂರು. ಪ್ರ. ಮು. ೧೯೩೧, ದ್ವಿ. ಮು. ೧೯೯೮.
೨. ಸಂಪಾದಕರು. ಶ್ರೀ ಬಿ.ಬಿ. ಮಹಿಶವಾಡಿ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೨೯.
೨. ಸಮ್ಯಕ್ತ್ವ ಕೌಮುದಿ ೧. ಸಂಪಾದಕರು. ಶ್ರೀ ದೇ.ಫ. ಚೌಗಲೆ, ಕರ್ನಾಟಕ ಜೈನ ಕಾವ್ಯಮಾಲಾ ಪುಷ್ಪ ೧, ಬೆಳಗಾವಿ, ೧೯೨೩.
೨. ಸಂಪಾದಕರು. ಶ್ರೀ ಬಿ.ಬಿ. ಮಹೀಶವಾಡಿ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ೧೯೭೬.
೩. ಜಯನೃಪಕಾವ್ಯ ೧. ಸಂಪಾದಕರು, ಶ್ರೀ ಎಂ.ಎ. ರಾಮಾನುಜಯ್ಯಂಗಾರ್, ಕರ್ಣಾಟಕ ಕಾವ್ಯ ಮಂಜರಿ, ಮೈಸೂರು.
೨. ಸಂಗ್ರಹ ಡಾ. ಹಂಪ ನಾಗರಾಜಯ್ಯ, ಹರ್ಷವರ್ಧನ ಪ್ರಕಾಶನ, ಬೆಂಗಳೂರು, ೧೯೬೭.
೪. ಶ್ರೀಪಾಲಚರಿತೆ ೧. ಸಂಪಾದಕರು. ಶ್ರೀ ಹ.ಕ. ರಾಜೇಗೌಡ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೭೭.
೫. ಸೂಪಶಾಸ್ತ್ರ ೧. ಸಂಪಾದಕರು. ಶ್ರೀ ಎಸ್‌. ಎನ್. ಕೃಷ್ಣಜೋಯಿಸ್, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ೧೯೬೯.

ಇವುಗಳ ನೆರವಿನೊಂದಿಗೆ ಈ ಮಹಾಸಂಪುಟವನ್ನು ಸಂಪಾದಿಸಲಾಗಿದೆ. ಅದಕ್ಕಾಗಿ ಈ ಎಲ್ಲ ಗ್ರಂಥಗಳ ಸಂಪಾದಕರುಗಳಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಪ್ರಭಂಜನಚರಿತೆ ಇಲ್ಲಿ ಮೊದಲಬಾರಿಗೆ ಬೆಳಕು ಕಾಣುತ್ತಿದೆ. ಇದರ ಒಂದು ಹಸ್ತಪ್ರತಿ ಮೈಸೂರು ವಿಶ್ವವಿದ್ಯಾಲಯದಲ್ಲಿದ್ದು (ನಂ.೨೦೧) ಅದನ್ನು ಬಳಸಿಕೊಳ್ಳಲು ಸಮ್ಮತಿಸಿದ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಿಗೆ ನನ್ನ ಧನ್ಯವಾದಗಳು ಸಲ್ಲುತ್ತವೆ.

ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಜೈನಸಾಹಿತ್ಯದ ಸಮಗ್ರ ಕಾವ್ಯಗಳ ಸಂಪಾದನೆಯ ಮಹತ್ವದ ಯೋಜನೆಯನ್ನು ಹಮ್ಮಿಕೊಂಡು, ಅದರಲ್ಲಿ ಮೂರನೆಯ ಮಂಗರಸನ ಕೃತಿಗಳನ್ನು ಸಂಪಾದಿಸುವ ಹೊಣೆಯನ್ನು ನನಗೆ ವಹಿಸಿರುವುದಕ್ಕಾಗಿ ತುಂಬಾ ಕೃತಜ್ಞನಾಗಿದ್ದೇನೆ. ಈ ಕೃತಿಗಳನ್ನು ಸಮರ್ಥ ರೀತಿಯಿಂದ ಸಂಪಾದಿಸುವಲ್ಲಿ ಸೂಕ್ತಮಾರ್ಗದರ್ಶನ ಮಾಡಿದ ಗುರುಗಳಾದ ಡಾ. ಎಂ.ಎಂ. ಕಲಬುರ್ಗಿ ಅವರಿಗೆ ನನ್ನ ಧನ್ಯವಾದಗಳು. ಮೂರನೇಯ ಮಂಗರಸನ ಸಂಪುಟವನ್ನು ಸಿದ್ಧಪಡಿಸಲು ಕೇಳಿ ಎಲ್ಲ ಬಗೆಯ ಒತ್ತಾಸೆಯನ್ನು ನೀಡಿದ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಡಾ. ಬಿ.ಎ. ವಿವೇಕ ರೈ ಅವರಿಗೆ ನನ್ನ ವಂದನೆಗಳು. ಈ ಸಂಪುಟ ಸಿದ್ಧಗೊಳ್ಳುವಲ್ಲಿ ಕಾಲಕಾಲಕ್ಕೆ ನನ್ನ ಉತ್ಸಾಹವನ್ನು ಕುಂದದಂತೆ ನೋಡಿಕೊಂಡು ಅಂದವಾಗಿ ಮುದ್ರಣಗೊಳ್ಳಲು ಕಾರಣರಾದ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರಿಗೆ ನನ್ನ ವಂದನೆಗಳು. ಈ ಕೃತಿಗಳ ಕರಡಚ್ಚುಪ್ರತಿಗಳನ್ನು ತಿದ್ದುವಲ್ಲಿ ನನ್ನ ವಿದ್ಯಾರ್ಥಿಗಳಾದ ಡಾ. ಸರಸ್ವತಿದೇವಿ ಭಗವತಿ ಮತ್ತು ಡಾ.ಹನುಮಂತ ಮೇಲಿನಮನಿ ಅವರು ವಿಶೇಷ ಶ್ರಮ ವಹಿಸಿದ್ದಾರೆ. ಅವರಿಗೂ ನನ್ನ ಧನ್ಯವಾದಗಳು ಸಲ್ಲುತ್ತವೆ.

ಈ ಕೃತಿಯನ್ನು ಅಲ್ಪ ಸಮಯದಲ್ಲಿ ಸುಂದರವಾಗಿ ಮುದ್ರಿಸಿದ ಬೆಂಗಳೂರಿನ ಶ್ರೀ ವೆಂಕಟೇಶ್ವರ ಪ್ರಿಂಟಿಂಗ್ ಪ್ರೆಸ್ಸಿನ ಮಾಲೀಕರಿಗೂ, ಅಕ್ಷರ ಸಂಯೋಜನೆಗೊಳಿಸಿದ ಶ್ರೀ ಮಂಜು ಮತ್ತು ಕುಮಾರಿ ವಿ. ರಾಧಾ ಅವರಿಗೂ ನನ್ನ ಕೃತಜ್ಞತೆಗಳು.

ಬಿ.ವ್ಹಿ. ಶಿರೂರ
ಧಾರವಾಡ
೦೧ – ೧೧ – ೨೦೦೬