ಶ್ರೀಮಹರ್ದದ್ದಾಸವೈಶ್ಯವಿಭು ಕೇಳಲಾ |
ತಾಮರಸವದನೆ ವಿಷ್ಣುಶ್ರೀ ಕರಂಗಳಂ |
ಪ್ರೇಮದಿಂ ಮುಗಿದು ತನಗಾದ ಸಮ್ಯಕ್ತ್ವಮಂ ಬಿನ್ನಪಂಗೆಯ್ದಳಿಂತು || ಪಲ್ಲ ||

ಕೌಶಂಬಿಯೆಂಬ ನಗರಂ ಮಹಾಲಕ್ಷ್ಮೀಪ್ರ |
ವೇಶಕ್ಕೆ ತಾನೇ ನಿವಾಸಮೆನಿಸಿದ ವತ್ಸ |
ದೇಶವೇ ತನ್ನ ಬಳಸಿನೊಳೊಪ್ಪುತ್ತಿರೆ ಕನಕಸರಸಿರುಹದಳಮಧ್ಯದಾ ||
ಕೋಶದಂದದೊಳೆಸೆಯಲದರೊಳಜಿತಂಜಯಮ |
ಹೇಶನತಿರೂಪವತಿ ಸುಪ್ರಭೆವೆಸರ ಮತ್ತ |
ಕಾಶಿನಿಯೊಳೊಡಗೂಡಿ ಸುಖಸಂಕಥಾವಿನೋದದೊಳರಸುಗೆಯ್ಯುತಿಹನು || ೧ ||

ಆತಗತಿಹಿತಮಂತ್ರಿ ಸೋಮಶರ್ಮಂ ಜನವಿ |
ನೂತ ಗುಣಭೂಷಣಂ ಮಿತ್ರಪರಿಣಾಮಿ ಜನವಿ |
ಪ್ರೀತಿಯಿಂದನುದಿನ ಕೃಪಾತ್ರದಾನಂ ಮಾಡುತಿರಲಾ ಪುರದ ಬನದೊಳು ||
ಭೂತಹಿತಪರನಾ ಸಮಾಧಿಗುಪ್ತಾಚಾರ್ಯ |
ಜಾತರೂಪನುಮೊಂದು ಮಾಸೋಪವಾಸಮಂ |
ಪ್ರೀತಿಯಿಂ ಕೈಕೊಂಡು ನಿರ್ಜಂತುಕಪ್ರದೇಶದೊಳೇಕಚಿತ್ತದಿಂದಾ || ೨ ||

ಈ ತಿಂಗಳೀ ತಾಣದಿಂದಾವುದುಪಸರ್ಗ |
ಮೇತೆರದಿ ಬಂದೊಡಂ ಕೆಯ್ಯೆತ್ತೆವೆಂದೆನು |
ತ್ತಾ ತನುವಿನಿಂದಸುವ ಬೇರ್ಕೆಯ್ದು ತನ್ನಿಂದ ತನ್ನನೇ ಭಾವಿಸುತ್ತ ||
ಆ ತಪೋನಿಧಿ ಶಾಂತರಸದ ಪುತ್ತಳಿಯಂತೆ |
ಭೂತಳಂ ಪೊಗಳೆ ಕಾಯೋತ್ಸರ್ಗದಿಂ ನಿಲಲ್ |
ಜಾತಿವೈರಂದೊರೆದು ಖಗಮೃಗಾವಳಿ ನಿಂದು ನೋಡುತ್ತುಮಿರ್ದುವಾಗ || ೩ | \

ಕಾಲವಲ್ಲದಕಾಲದಲ್ಲಿ ನವಖರ್ಜುರ |
ಬಾಳೆ ವಕುಳಂ ಕಕ್ಕೆ ಜಂಬುಜಂಬೀರ ಕಿ |
ತ್ತೀಳೆ ಮಾಕಂದ ಮಾದಲ ಪೂಗ ಪುನ್ನಾಗ ನಾಗ ಚಂಪಕ ಪಾಟಲಿ ||
ನಾಳಿಕೇರಾಶೋಕ ಮಂದಾರಕುರವಕಂ |
ದಾಳಿಂಬ ನಾಗಕೇಸರಿ ಶಿರೀಷದ ವೃಕ್ಷ |
ಜಾಲಮೆಲ್ಲಂ ತಳಿರ್ನನೆಪಚ್ಚೆಗಾಯ್ದೋರೆವಣ್ಗಳಂ ಪಡೆದುವಾಗ || ೪ ||

ನೀರರತನೀರೇರುಹಾಕರಗಳೆಲ್ಲ ಪರಿ |
ಪೂರಿತಜಲಂಬಡೆದುವಂಬುರುಹ ಕುಮುದ ಕ |
ಲ್ಹಾರ ಕುವಲಯಮೆಲ್ಲವಲರೇರಿದುವು ತೆಂಕಣಾಸೆಯಿಂ ತಣ್ಪುವೆರಸಿ ||
ಸೌರಭ್ಯವಾಯು ಮೆತ್ತನೆ ಮೆತ್ತನೂದಿದುದು |
ಚಾರು ಕೋಕಿಲದ ಕೊರಲೊಳು ಮುನ್ನ ಸಪ್ತಸರ |
ಭೋರನುದಯಿಸಿ ಕಂತುವಂ ಪುಗಲ್ಪುಗಲೆಂದುವಾ ತಪಸಿಯಿರ್ದ ಬನಕೆ || ೫ ||

ಈ ತೆರದ ಮಾಸೋಪವಾಸಾಂತರದೊಳು ಮ |
ತ್ತಾ ತಪಸಿನಭಿವೃದ್ಧಿಗಿರಬೇಕು ತನುವೆಂದು |
ಜಾತರೂಪಂ ಬನವ ಪೊರಮಟ್ಟು ಪುರಕೆಯ್ದ ಭಾವರಿಯನಿಡಲು ಕಂಡು ||
ಪೇತನಾ ಸೋಮಶರ್ಮಂ ಬಂದು ಪದಕೆ ತ |
ನ್ನಾ ತಲೆಯನಿಟ್ಟು ಪೂಜಿಸಿ ಬಳಿಕ ತಿಷ್ಠತಿಷ್ಠಾಯೆಂದು ಬಲವರುತವೆ || ೬ ||

ಬಳಿಕ ಭವನಕ್ಕೆ ಕೊಂಡೊಯ್ಯುತಾಸ್ಥಾಪನೋ |
ಜ್ವಲ ಪೀಠ ಪಾದೋದಕಂ ಪೂಜೆವಂದನಂ |
ಸಲೆ ಮನೋವಾಕ್ಕಾಯಶುದ್ಧಿ ಏಷಣಶುದ್ಧಿಯೆಂಬ ನವವಿಧ ಪುಣ್ಯದಿ ||
ಸುಲಲಿತ ಶ್ರದ್ಧೆ ವಿನುತಕ್ಷಮಾಭಕ್ತಿ ನಿ |
ರ್ಮಲಬೋಧಮಲುಬ್ಧತೆ ಸಂತುಷ್ಟಿ ಶಕ್ತಿಯಂ |
ತಳೆದೇಳುಗುಣಗಳಿಂದಾ ತಪೋನಿಧಿಗೆ ಮತ್ತಾ ಮಂತ್ರಿಕುಲತಿಲಕನು || ೭ ||

ಸಾಕ್ಷಾತ್ಸುಬೋಧಯುತನೇ ಸ್ವರೂಪನೆ ಭುವನ |
ರಕ್ಷಾಮಣಿಯೆ ಎನುತ್ತಾ ಪಾಣಿಪಾತ್ರಗತಿ |
ಸುಕ್ಷೇತ್ರದಲ್ಲಿಯುತ್ತಮಮಪ್ಪ ಬೀಜಮಂ ಬಿತ್ತುವಂದದೊಳಿಕ್ಕಿದಾ ||
ಭಿಕ್ಷೆಯಂ ಕೊಂಡು ಕೆಯ್ಯಂದೊಳೆದು ಬಳಿಕಾ ಮು |
ಮುಕ್ಷುವಕ್ಷಯದಾನಮೆಂಬಾ ಕ್ಷಣದೊಳಂತ |
ರಿಕ್ಷದೊಳಗಪ್ಸರರ್ನೆರೆದು ಪಂಚಾಶ್ಚರ್ಯಮಂ ಮಾಡೆ ಮನದೆಗೊಂಡು || ೮ ||

ಅದನು ಕಂಡಾ ಮಂತ್ರಿಯೆಂದನೆಲೆ ಮುನಿನಾಥ |
ಸದಮಲಮೆನಿಪ್ಪ ವೈಷ್ಣವ ಶೈವ ವೈದಿಕಂ
ಮೊದಲಾದ ಸಮಯದೇಕದ್ವಿತ್ರಿದಂಡಿ ಸದ್ ಬ್ರಾಹ್ಮಣಬ್ರಹ್ಮಚಾರಿ ||
ವಿದಿತಾಗ್ನಿಗೋತ್ರ್ಯಾದಿ ಮಖಕರ್ತುದೀಕ್ಷಿತ |
ರ್ಗೊದವಿ ಬಹು ಕನಕತಿಲನಾಗಮಹಿದಾಸಿರಥ |
ಸದನಕನ್ಯಾಕಪಿಲಧೇನುವೆಂದೆಂಬ ದಶವಿಧಮಪ್ಪ ದಾನಗಳನು || ೯ ||

ಮನವಾರೆ ಮಾಡೆಯೀ ಅಚ್ಚರಿಯ ಕಂಡುದಿ |
ಲ್ಲೆನೆ ಮಗನೆ ಕೇಳು ರಾಗದ್ವೇಷಬೋಧಯುತ |
ರೆನಿಸಿದ ಕುಪಾತ್ರಕ್ಕೆ ಮಾಡಿದ ದಾನಫಲ ಕರಲುನೆಲೆದೊಳು ಬೀಜವಾ ||
ಎನಿತು ವಿಧದಿಂಗೆಯ್ದು ಬಿತ್ತಿಯುಂ ಸತ್ಫಲಮ |
ನಿನಿಸು ಹಡೆಯದ ತೆರದಿನುತ್ತರೋತ್ತರ ಪದಂ |
ಕನಸುಮನಸಿನೊಳಿಲ್ಲಮದರಿಂದ ಸತ್ಪಾತ್ರಮುಖ್ಯಮದು ತಾನೆಂತೆನೆ || ೧೦ ||

ಸ್ವೇದ ಸಂಕ್ಲೇಶ ರುಜೆ ರತಿ ಮೃತಿ ಜರೆ ಪಸಿವು ವಿ |
ಷಾದ ಜನನ ಸುಷುಪ್ತಿ ಕಾಂಕ್ಷೆ ಭೀರುತೆ ಚಿಂತೆ |
ಖೇದ ರಾಗದ್ವೇಷ ತೃಷೆ ಮೋಹಮೆಂಬ ಪದಿನೆಂಟು ದೋಷಂ ಪೊರ್ದದಾ ||
ಆದಿಮಧ್ಯಾಂತವಿರಹಿತನನುಪಮ ವಿಶ್ವ |
ವೇದಿಯೇ ದೈವವಾತನ ಮುಖದೊಳೊಗೆದುದೇ |
ವೇದಮದನರಿದು ಕೊಲೆ ಹುಸಿ ಕಳವು ಪರಸತಿಯರತಿಕಾಂಕ್ಷೆಯಂ ಬಿಟ್ಟು ಬಳಿಕ || ೧೧ ||

ಮನೆಮಕ್ಕಳಾದಿಯ ಕುಟುಂಬ ನಾಡುಂ ಬೀಡು |
ಧನಧಾನ್ಯಪಂಚೇಂದ್ರಿಯಂಗಳಿಚ್ಛೆಯಭೋಗ |
ತನುವಿನಾಸಕ್ತಿ ರತಿಯರತಿ ಭೀರುತೆ ಹಾಸ್ಯಶೋಕಬೀಭತ್ಸರಾಗ ||
ಘನತರದ್ವೇಷ ಮಿಥ್ಯಾಮಾರ್ಗ ವೇದ ಬಲು |
ಹೆನಿಸುವಾ ಕ್ರೋಧಮಾನಂ ಮಾಯೆ ಲೋಭಮೆಂ |
ಬಿನಿತಂ ಮನೋವಚನಕಾಯದೊಳ್ಮರೆದು ಸಚ್ಚಾರಿತ್ರದೊಳು ನೆಗಳುವಾ || ೧೨ ||

ಗುರುವೆ ಉತ್ತಮಪಾತ್ರಮಾ ಗುರುನಿರೂಪಮಂ |
ಧರಿಸಿ ಪಂಚಾಣುವ್ರತವನು ಕೈಕೊಂಡು ಬಂ |
ಧುರಜಿನಾರ್ಚನೆ ಗುರೂಪಾಸ್ತೆಯಾ ಸ್ವಾಧ್ಯಾಯಸಂಯಮತಪೋದಾನಮಂ ||
ನಿರವಧಿಯೊಳಂ ಬಿಡದೆ ಮಾಡುವುತ್ತಮಮಪ್ಪ |
ಚರಿತದೊಳ್ನೆಗಳ್ವ ಶ್ರಾವಕನು ಮಧ್ಯಮಪಾತ್ರ |
ವರುಹನೇ ದೈವವೆಂದೆಂಬ ಸದ್ದರ್ಶನಿಕನಾತಂ ಜಘನ್ಯಪಾತ್ರಂ || ೧೩ ||

ನಿರುತದಿಂದೀ ಮೂರುತೆರದ ಸತ್ಪಾತ್ರಕ್ಕೆ |
ನಿರವದ್ಯಮಪ್ಪನ್ಯಮಭಯಭೈಷಜ್ಯ ಬಂ |
ಧುರಶಾಸ್ತ್ರದಾನಮಂ ಮಾಡಲಾ ಸ್ವರ್ಗಾಪವರ್ಗಮಂ ಪಡೆಯಬಹುದು ||
ವರಮಂತ್ರಿ ಕೇಳು ಮತ್ತೀ ದಾನಗಳೊಳು ಸುರು |
ಚಿರವೆನಿಸುವನ್ನದಾನವೇ ಮುಖ್ಯಮಾದಾನದುರು |
ಮಹಿಮೆಯಂ ಪೇಳ್ದಪೆವು ಲಾಲಿಸೆನುತ ಬಳಿಕಿಂತೆಂದು ನುಡಿದರಾಗ || ೧೪ ||

ರಾಜಿಸುವ ವೇಣಾತಟಾಕ ವೆಸರಂ ಬಡೆದ |
ರಾಜಧಾನಿಯೊಳಗಧಿರಾಜರಾಜಪ್ರಭಂ |
ರಾಜಪ್ರಭಾನಾಮದಂಗನಾಮಣಿಗೂಡಿಯರಸುಗೆಯ್ಯುತ್ತುಮಿರ್ದು ||
ಭಾಜನಂ ಮಾಡಿ ಸತ್ಕೀರ್ತಿಗೆಯಜಾಂಡವಂ |
ತೇಜಾಧಿಕನುಮಾಗಿ ಬ್ರಾಹ್ಮಣರ ಪೂಜೆಯುಮ |
ನೋಜೆಯಿಂ ಮಾಡುತ್ತಮಿರ್ದೊಂದು ದಿವಸದೊಳಗಿಂತೆಂದು ಚಿಂತಿಸಿದನು || ೧೫ ||

ಶತಯಾಗಮಂ ಮಾಡಿದವರಿಂದ್ರಪದವನು |
ನ್ನತಮಾಗಿ ಪಡೆದವರೆಂಬಾ ಶಾಸ್ತ್ರವಚನಮೀ |
ಕ್ಷಿತಿಯರಿಕೆಯೊಳಗುಂಟು ನಾನದಂ ತಿಳಿದಿರ್ದು ತದ್ವಿಧಿಯನಿರದೆ ಮಾಡಿ ||
ಅತಿ ಸೌಖ್ಯಮೀ ಇಂದ್ರಪದಮಂ ಹಡೆವುದನುಳಿದು |
ಮತಿವಿಕಳನಾಗಿರ್ದೆನಿಂದುವರಮೆನುತ ಭೂ |
ಪತಿ ನೆನೆದು ಶಾಸ್ತ್ರವಿದರಂ ಕರೆಸಿ ಬಳಿಕವರೊಳಿಂತೆಂದು ನುಡಿದನಾಗ || ೧೬ ||

ಯಾಗಮಂ ಮಾಡಿಲಿಂದ್ರತ್ವವಹುದೆಯೆನ |
ಲ್ಭೂಗಧಿಪ ಕೇಳೊಳ್ಳಿತಪ್ಪ ಕಾರ್ಯವ ಸಾನು |
ರಾಗದಿಂದೆಣಿಸಿದೆಯಲಾ ಅದರ ಫಲದಿ ಹರಿದಾಳಿಯೊಳ್ಸುರಪುರವನು ||
ಬೇಗದಿಂ ದೂಳಿಗೋಂಟೆಯಗೊಂಡು ಸುರಪತಿಯ |
ನಾಗ ನಾಳ್ದಲೆವಿಡಿದು ಬಳಿಕಿಂದ್ರಪುರಕೆಯರ |
ಸಾಗಿ ಶಚಿರಂಭೆಯೂರ್ವಶಿಯಾದಿಯಾದ ಸುದತಿಯರ ವರಿಯಿಸಲುಬಹುದು || ೧೭ ||

ಎಂಬ ನುಡಿಗೇಳಿ ಬೇಗದೊಳು ಸದ್‌ಬ್ರಾಹ್ಮಣಕ |
ದಂಬಮೆಲ್ಲಂ ಬರಲ್ಬೇಕೆನುತ ಡಂಗು |
ರಂಬೊಯಿಸಲಾ ಗೋಸಣೆಯಂ ಕೇಳಿಯತ್ಯಂತ ಹರ್ಷದಿಂದಾ ನಗರಿಗೆ ||
ಅಂಬಿಕಾಪತಿಯ ಮತ್ಸರದಿ ದಕ್ಷಬ್ರಹ್ಮ |
ನೆಂಬವಂ ರಚಿಸುವಾ ಯಾಗಕ್ಕೆ ದೇವನಿಕು |
ರುಂಬಮೆಲ್ಲಂ ಬರ್ಪ ತೆರದಿ ಪೃಥ್ವೀಸುರನಿಕಾಯಮೆಲ್ಲಂ ಬಂದುದು || ೧೮ ||

ಮೇವವೇದಾಂಗಪಾರಗರ ಮೊತ್ತಂ ತತ್ವ |
ವಾದಿಗಳ ತಂಡ ದೀಕ್ಷಿತರ ಸಂದಣಿ ಮಾಯ |
ವಾದಿಗಳ ನೆರವಿ ಸನ್ಯಾಸಿಗಳ ಸಂಗಡಮುಪಾಧ್ಯಾಯರುಗಳ ಕೂಟಾ ||
ವಾದಿಗಳ ತಂಡ ವಟುಜನದೊಗ್ಗು ಬಹುಶಾಸ್ತ್ರ ||
ವೇದಿಗಳ ಜಂಗುಳಿ ಪುರಾಣಿಕರ ಗೊಂದಣಂ |
ಮೇದಿನೀಸತಿ ಬೆಸಲೆಯಾದಂತೆ ನೆರೆಯೆ ಕಂಡತಿ ಮುದದಿ ಭೂಪಾಲನು || ೧೯ ||

ಎಲ್ಲಿನೋಡಿದೊಡಲ್ಲಿ ಪಾನೀಯಶಾಲೆ ಮ |
ತ್ತೆಲ್ಲಿನೋಡಿದೊಡಲ್ಲಿ ಭೂರಿಭೋಜನಶಾಲೆ |
ಎಲ್ಲಿ ನೋಡಿದೊಡಲ್ಲಿ ಪಿರಿದು ಸೊಗಸಂಬಡೆದ ಮೃಷ್ಟಾನ್ನಭುಕ್ತಶಾಲೆ ||
ಎಲ್ಲಿನೋಡಿದೊಡಮಿಚ್ಛಾಭೋಜನದ ಶಾಲೆ |
ಎಲ್ಲಿ ನೋಡಿದೊಡಲ್ಲಿ ಬಹುದಾನಶಾಲೆ ಮ |
ತ್ತೆಲ್ಲಿನೋಡಿದೊಡಲ್ಲಿ ಯಾಗಶಾಲೆಗಳನನುಗೆಯ್ಸಿದಂ ಸಮ್ಮುದದೊಳು || ೨೦ ||

ಇಂತು ನಾನಾಛತ್ರಶಾಲೆಗಳನನುಗೆಯ್ಸಿ |
ಸಂತೋಷದಿಂದ ನೆರೆತಂದ ವಸುಧಾಸುರರ |
ಸಂತಾನಕಿದಿರ್ವಂದು ಸಾಷ್ಟಾಂಗವೆರಗಿಯವರಿಡುವಕ್ಷತೆಯ ಪುಂಜಕೆ ||
ಅಂತರಿಸದುತ್ತಮಾಂಗವನಿತ್ತು ಹರಕೆಗಳ |
ನಾಂತು ರಾಜಪ್ರಭಮಹೀಮಾನಿನೀನಾಥ |
ನಂತಿಂತುಟೆಂದೂಹಿಸಲ್ಬಾರದತಿಭಕ್ತಿಯಿಂದ ಸನ್ಮಾನಮಾಡಿ || ೨೧ ||

ಸಾನಂದಹೃದಯದೃಕ್ಷದವರಂ ಕರಿಸಿ |
ಈ ನೆರೆದ ಸದ್‌ಬ್ರಾಹ್ಮಣರ ತಂಡದಲ್ಲಿಯಿವ |
ರೇನನಿಚ್ಚೈಸಲಾ ಇಚ್ಛೆಯನಿನಿಸು ತಡಂ ಮಾಡಲೇ ಸಲಿಸಿಯೆಂಬ ||
ಆ ನುಡಿಯ ಕೇಳಿಯವರವರ್ಗೆ ತಕ್ಕಂದದಿಂ |
ಸ್ನಾನಮಂ ಮಾಡಿಸಿ ಬಳಿಕ್ಕ ಭೋಜನಶಾಲೆ |
ಗಾನಂದದಿಂ ಬರಿಸಿ ಕುಳ್ಳಿರಿಸಲಾರೋಗಣೆಯ ಮಾಡುತಿರ್ದರಿಂತು || ೨೨ ||

ದೊನ್ನೆಗಳ ಹರಹಿ ಬಾಳೆಲೆ ಹಾಳೆಯಂ ಹಾಕಿ |
ಬಿನ್ನಣದಿ ಮಾಡಿದಾ ಚವುಕದೆಡೆಗಳ ಮುಂದೆ |
ಜನ್ನಿವಾರಮಂ ಮೇಲೆತ್ತಿ ತಲೆಸುತ್ತುಮಂ ತೆಗೆದು ಸಡಿಲಿಸಿ ಧೋತ್ರಮಂ ||
ಚೆನ್ನಾಗಿಪೋಷಣಮನೆತ್ತಿ ಕುಳ್ಳಿರ್ದು |
ಭಿನ್ನರುಚಿ ಮಾಡಿ ಹರುಷದಿ ಗಡ್ಡಮೀಸೆಗಳು |
ಮಂ ನೀವಿಕೊಳತ ತದ್ಭೋಜನಮನಿಂತು ಮಾಡುತ್ತಿರ್ದರಾ ಪಾರ್ವರು || ೨೩ ||

ಸಣ್ಣಕ್ಕಿಯೋಗರಂ ಹೆಸರತೋವೆ ಹೊಚ್ಚಹೊಸ |
ಬೆಣ್ಣೆ ಕಾಸಿದತುಪ್ಪ ಹಪ್ಪಳಂ ನಸುನಿಂಬೆ |
ವಣ್ಣನಿಕ್ಕಿದ ಹಲವುಪರಿಯ ಹೋರಕಂ ಶಾಕಬಾಳು ಕಾವಳೆಯ ಪಳಿದ್ಯ ||
ಬಣ್ಣಿಸಿ ಸುಪಾಕಮಾಡಿದ ಪಿಟ್ಟು ಪಾಯಸಂ |
ತಣ್ಣನೆಯ ಕಳಲು ಹಸಿಯಲ್ಲಮಂ ಬಡ್ಡಿಸ |
ಲ್ಪಣ್ಣೆಪಣ್ಣೆಯೊಳು ಕುಳ್ಳಿರ್ದು ಪಂಕ್ತಿಯ ಕೊಳ್ಳುತಿರ್ದುದಾ ಭೂಸುರಾಳಿ || ೨೪ ||

ವಡೆಯೊಟ್ಟಿಲುಂಡಲಿಗೆಗಳರಾಶಿ ಹೊರಿಗೆಗ |
ಳಿಡುಗುಡ್ಡೆ ಸಣ್ಣಸೇವಗೆಯ ಮೆದೆ ಯೆರೆಯಪ್ಪ
ದಡಕಿಲಿಡ್ಡಲಿಗೆಗಳ ಬೋನ ದೋಸೆಯ ಲಗ್ಗೆ ಬೆಲ್ಲಗಾರಿಗೆಯ ಬಣಬೆ ||
ತಡೆತಡೆಯೆ ಪಾಯಸದ ಕಟ್ಟೆಯನೊಡೆವ ತುಪ್ಪ |
ವೆಡೆಮಾಡಿದೆಡೆಯ ಮುಂದೊಪ್ಪದಿಂ ಕುಳ್ಳಿರ್ದು |
ಸಡಗರಂಗೊಂಡು ಗಂಡಲ್ಮುಟ್ಟುವಲ್ಲಿ ಪರಿಯಂತವುಣುತಿರ್ದರಾಗ || ೨೫ ||

ಓಗರವ ತಾ ತೋಯೆಯನಿಕ್ಕು ಹಸನಾಯ್ತು ಮೇ |
ಲೋಗರದ ಬಡಿಸು ದೊನ್ನೆಗಳ ಹಿಡಿವಂತೆ ವುಂ |
ಟಾಗಿ ಹೆರೆದುಪ್ಪವೆರೆಯಾ ಪಳಿದ್ಯಮನಟ್ಟು ಕಲಸುವೋಗರವ ತೋರು ||
ಬೇಗದಿಂದೆಡೆಮಾಡಿದಿಡ್ಡಲಿಗೆ ದೋಸೆಗಳ |
ಮೇಗೆ ಸಕ್ಕರೆ ಬಟ್ಟವಾಲಹೊಯ್ಯೆನುತುಮಾ |
ರೋಗಣೆಯನಾ ಹೊಟ್ಟೆಯೊಡೆವ ಮರ್ಯಾದೆಯೊಳಗುಂಡು ತೇಂಕುತ್ತಿರ್ದುರು || ೨೬ ||

ಪಾಯಸದ ಪರಿಮಳಂ ನೋಡಿ ಪಂಡಿತರೆ ಸವಿ |
ಯಾಯಿತೇ ಆಯ್ತುಪಾಧ್ಯಾಯರೇ ಕರಜಿಗೆಯ |
ಕಾಯಿ ದೋಸೆಗಳ ಹಸನಂ ಪುರೋಹಿತರೆ ಚೆನ್ನಾಗಿ ಸವಿಸವಿದು ನೋಡಿ ||
ಈ ಯೆಣ್ಣೆಹೂರಿಗೆಯ ಮೃದುತರಕೆ ಸರಿಯುಂಟೆ |
ಜೋಯಿಸರೆ ಕೇಳಿ ಸಕ್ಕರೆಬುರುಡೆಗಳ್ನಮ್ಮ |
ಬಾಯಬರನಂ ಬಿಡುತಿವೆ ದೀಕ್ಷಿತರೆಯೆಂದು ಕೊಂಡಾಡಿ ಉಣುತಿರ್ದರು || ೨೭ ||

ಸಜ್ಜಿಗೆಯ ಪಾಯಸವ ಸುರಿದು ಕಣಿಕದಿ ಸಮೆದ |
ಕಜ್ಜಾಯಮಂ ಮೆದ್ದು ಕಚರಿಬದನೆಯಕಾಯ |
ಬಜ್ಜಿಗಳ ಲೇಹ್ಯಮಂ ಮಾಡಿ ಮೂಲಂಗಿ ಮಾಗುಳಿಯೆಳೆಯ ಕಾರಣಗೆಣಸು ||
ಕಜ್ಜರಿಯ ಸಣ್ಣನಂ ಸವಿದು ಪನಸಿಮ್ಮಾವು |
ಕಜ್ಜಯರದ ಪಣ್ಗಳ ರಸಾಯನಮನೀಂಟಿತೆಳು |
ಮಜ್ಜಿಗೆಯ ಕೊಂಡು ನೀರ್ಗುಡಿದು ಹೊಟ್ಟೆಯ ತಡಹುತೆಳ್ದು ಕಯ್ದೊಳೆದರಾಗ || ೨೮ ||

ಈಪರಿಯೊಳಾರೋಗಣೆಯನು ಮಾಡಿಸುತ ಮ |
ತ್ತಾ ಪೃಥ್ವಿಪೊಗಳ್ವಂತೆ ಬಹುವಿಧದ ದಾನಮಂ |
ಭೂಪಾಲಕಂ ಮಾಡಿ ಮುಂಪೇಳ್ದ ಮಾಗಮಂ ವಿರಚಿಸುವ ಕಾಲದಲ್ಲಿ ||
ಆ ಪಟ್ಟಣದೊಳು ಬಳಿಕಾ ಯಜ್ಞಸಾಲೆಯಸ |
ಮೀಪದೊಳಗತಿದರಿದ್ರಂ ವಿಶ್ರಭೂತಿಯೆಂ |
ಬಾ ಪಾರ್ವನೋರ್ವ ಮನೆಯಂ ಕಟ್ಟಿ ಯಮನಿಯಮಸಂಯಮೋಪೇತವಾಗಿ || ೨೯ ||

ಒಂದುದಿನವೊಡಲುಹಿಡಿವಂತೆ ಬಾಯ್ಸವಿಯಾಗು |
ವಂದದಿಂ ಕನಸುಮನಸಿನೊಳುಂಬುದಂ ಕಾಣ |
ನೊಂದುದಿನಮಾಗಿಯುಂ ಮೆಯ್ದುಂಬ ಹೊದೆಪುಮಂ ಹೊದೆವುದಂ ಕಂಡರಿಯನು ||
ಕುಂದೇಂದುವಂತೆ ಕೃಶಮಂ ತನುವಿನೊಳಗಾಂತು |
ಹಿಂದಣಘವಶದಿನೋವಿದ ದರಿದ್ರದೊಳಾದ |
ದಂದುಗವೆ ಒಡಲಾಗಿಯುಂ ತನ್ನ ಸತ್ಕರ್ಮದೊಳಗಾಚರಿಸುತಿರ್ದನು || ೩೦ ||