ಶ್ರೀಮದರ್ಹದ್ದಾಸವೈಶ್ಯವಿಭು ಕೇಳಲಾ |
ತಾಮರಸಮುಖಿ ಚಂದನಶ್ರೀ ಕರಂಗಳಂ |
ಪ್ರೇಮದಿಂ ಮುಗಿದು ತನಗಾದ ಸಮ್ಯಕ್ತ್ವಮಂ ಬಿನ್ನಪಂಗೆಯ್ದಳಿಂತ || ಪಲ್ಲ ||

ಕುರುಜಾಂಗಣಾಖ್ಯವಿಷಯದ ಹಸ್ತಿನಾಗಪುರ |
ವರದ ಮಹೀಪಾಲಕಂ ಭೂಭೋಗನಾ ಪಟ್ಟ |
ದರಸಿ ಭೋಗಾವತೀವೆಸರ ಸುದತಿಗೂಡಿಯರಸುಗೆಯ್ಯುತಿಹನದರೊಳು ||
ಭರಣ ಗುಣಪಾಲನೆಂದೆಂಬ ವೈಶ್ಯೋತ್ತಮಂ |
ಗರುವೆ ಗುಣವಂತೆಯೆಂಬಬಲೆಯಂ ಕೂಡಿಯತ್ಯಂತ ಸುಖದಿಂದಿರ್ಪರು || ೧ ||

ಆ ರಾಜಧಾನಿಯೊಳಗತಿ ವೇದವೇದಾಂಗ |
ಪಾರಗಂ ಬ್ರಾಹ್ಮಣಕುಲೋತ್ತಮಂ ಭೂಮಿಗತಿ |
ದಾರಿದ್ರ ಸೋಮದತ್ತದ್ವಿಜಂ ಸೋವಿಲೆವೆಸರ ಸತಿಯುಮಿರ್ಪರವರ್ಗೆ ||
ಚಾರುಮಣಿಪುತ್ರಿಕೆಯವೊಲು ಸೋಮೆಯೆಂಬ ಸುಕು |
ಮಾರಿ ಸಂಜನಿಸಿ ನಂದನವನದೊಳಮರಲತೆ |
ರಾರಾಜಿಸುತ್ತುಮುದಯಂಗೆಯ್ದು ಬೆಳೆವಂತೆ ಬಾಲ್ಯದೊಳ್ ಬೆಳೆಯುತಿರಲು || ೨ ||

ಇಂತೆಸೆವ ಸೋಮೆಯ ಜನನಿ ಸೋವಿಲೆಗೆ ಪಿರಿದು |
ಸಂತಾಪಸಹಿತಜ್ವರಂ ಸಂಜನಿತಮಾಗ |
ಲಂತಕನಿವಾಸಮಂ ಸಾರಲಾ ಸೋಮದತ್ತದ್ವಿಜಂ ದುಃಖದಿಂದ ||
ಚಿಂತಿಸುತ್ತಿರಲದಂ ಕಂಡೊರ್ವ ಜೈನಮುನಿ |
ಕಾಂತನಿರದೆಯ್ತಂದು ತದ್ವಿಜೋತ್ತಂಸನೊಳ |
ಗಿಂತೆಂದನೆಲೆ ಮಗನೆ ದೇಹಿಗಳಿಗುಂಟಾದ ಸಾವಿಂಗೆ ದುಃಖಿಸುವರೇ || ೩ ||

ಪರ್ವಿದ ಪರಿಗ್ರಹದ ಪಾಪಮಂ ಪರಿಯಿಸುವ |
ಸರ್ವದರ್ಶನಜ್ಞಾನಚಾರಿತ್ರಮಂ ಪಡೆದು |
ನಿರ್ವಾಣಪದದಲ್ಲಿ ನಿಂದ ದೇವಾಧೀಶರಲ್ಲದೇ ಭಾವಿಸಿದೊಡೆ ||
ಗೀರ್ವಾಣ ಲೋಕನಾಯಕರಿಳಾಪತಿಗಳುಂ |
ದುರ್ವೀಕರೇಶ್ವರರ್ಮೊದಲಾದವರದೊಂದು |
ಗರ್ವಿಸುವ ರೂಪುಯೌವನಲಕ್ಷ್ಮಿ ಯಾಯುಷ್ಯಮೆಲ್ಲವಸ್ಥಿರಮಲ್ಲವೇ || ೪ ||

ಈ ವಿಧದ ದರ್ಣೋಪದೇಶಮಂ ಮಾಡಲಾ |
ಭೂವಿನುತಮಪ್ಪ ಮುನಿವಚನಮಂ ಕೇಳ್ದು ಸ |
ದ್ಭಾವದಿಂ ದುಃಖಮಂ ಬಿಟ್ಟು ಬಳಿಕವರ ಕಯ್ಯಿಂದ ಭಕ್ತಿಭರದಿ ||
ಶ್ರಾವಕವ್ರತವನವಧರಿಸಿ ಶಕ್ತಿಯ ಮೀರಿ |
ದೇವತಾಪೂಜೆ ಶೀಲೋಪವಾಸಂಗಳ |
ಸಾವಧಾನದಿ ಮಾಡುವುಜ್ಜುಗವೆ ತನಗೆ ಒಡಲಾಗಿ ಜೀವಿಸುತಿರ್ದನು || ೫ ||

ಮುಷ್ಟಿಯಂ ಬೇಡಿ ತಂದಾ ದ್ರವ್ಯದೊಳಗೆ ತ |
ನ್ನಿಷ್ಟ ಗುರುವಿಂಗೆ ನಿರ್ಭರಭಕ್ತಿಯಿಂದ ಸಂ |
ತುಷ್ಟಿಯಂದದಿಂ ನಿತ್ಯದಾನಂ ಮಾಡಿ ನಿಜತನೂಭವೆ ಸೋಮೆಯುಂ ||
ಶಿಷ್ಟ ಪುರುಷಂ ಸೋಮದತ್ತನಿರ್ಪುದನು ಸ |
ದುಷ್ಟಿಗುಣಪಾಲರಾಜಶ್ರೇಷ್ಠಿ ಕಂಡಜ |
ಸೃಷ್ಟಿಯೊಳಗಿಂತಪ್ಪ ಬಡವರೆಸಗುವ ದಾನಮಂ ಕಂಡುದಿಲ್ಲವೆಂದು || ೬ ||

ಮಲಮಲನೆ ಮರುಗಿಯವನೆಡೆಗೆಯ್ದಿ ತನ್ನ ನಿಜ |
ನಿಲಯಕ್ಕೆ ಕೊಂಡೊಯ್ಯುತರ್ಘ್ಯಪಾದ್ಯವನಿತ್ತು |
ಎಲೆ ಸೋಮದತ್ತ ನೀನೆರಡು ಮೂರುಪವಾಸಮಿರ್ದು ಮಾಡುವ ದಾನಕೆ ||
ಸಲೆ ಮೆಚ್ಚಿದೆಂ ನಾನು ನೀನು ಬಾಳ್ವನ್ನೆವರ |
ಮಲವತಿಕೆಯಿಲ್ಲದೇ ಉಣ್ಬನಿತನೀವೆನೆನೆ |
ಸುಲಲಿತಗುಣಾಭರಣನಾ ಸೋಮದತ್ತನವನೊಳಗಿಂತು ನಡಿದನಾಗ || ೭ ||

ನುಡಿಯಲಿನ್ನೇತಕ್ಕನಾಥಬಂಧುವೆ ಕೇಳು |
ಕಡೆಗಾಲಮಾಗಿ ಹೆಣ್ಣೆಲೆಯಂದದಿಂ ಬೀಳು |
ವೊಡಲಹೊರುವುದರಿಂದಲೇನು ಫಲವದು ನಿಮಿತ್ತಂ ನನ್ನ ಸುತೆ ಸೋಮೆಯಾ ||
ಕಡುಗೊರ್ಮೆಯಿಂದ ರಕ್ಷಿಸಿ ಉತ್ತಮಗೆ ಮದುವೆ |
ಗೊಡುವುದೆನುತವನ ಕೈಲೆಡೆಗೊಟ್ಟು ಸಂಯಮವ |
ಹಡೆದು ಸನ್ಯಸನದಿಂ ಸೋಮದತ್ತಂ ಸತ್ತು ಸಗ್ಗಕ್ಕೆ ಸಂದನಂದು || ೮ ||

ಇತ್ತಲಾ ಗುಣಪಾಲವೈಶ್ಯೋತ್ತಮಂ ಮಮತೆ |
ವೆತ್ತು ನಿಜತನುಜೆಯಂ ಸಲಹುವಂದದೊಳು ಸಲ |
ಹುತ್ತಿರಲ್ಸಕಲಚಂದ್ರಂ ದಿನದಿನಕ್ಕೆ ಷೋಡಶಕಲೆಗಳಂ ಸೊಗಯಿಸಿ ||
ಹೊತ್ತುಬೆಳೆವಂತೆ ಸಂಗೀತಸಾಹಿತ್ಯ ಸ |
ದ್ವೃತ್ತತೆಯ ಪಡೆದು ನವಯೌವನೋತ್ಮತ್ತ |
ಸಂಪತ್ತಿಯಂ ಪಡೆದು ಕೋರಿಸಿಕೊಂಡಳಾ ಸೋಮೆ ಸದ್ಗುಣಗಣಾಭಿರಾಮೆ || ೯ ||

ಸಿರಿಯಿಂದ ಸಿರಿಯೊಳೆಕ್ಕೆಕ್ಕೆ ರೂಪಿಂ ರತಿಯೊ |
ಳೊರಸೊರಸು ಜಾಣಿಂದ ವಾಣಿಯೊಳ್ ವೈಷ್ಯಮ್ಯ |
ವರಭೋಗದಿಂದ ಶಚಿಯಲ್ಲಿ ಮಾಸಂಕ ಗರಗರಿಕೆಯಿಂದ ಗಿರಿಸುತೆಯೊಳು ||
ಪಿರಿದು ಕಕ್ಕಸ ರೋಹಿಣೀದೇವಿಯಲ್ಲಿ ಸುರು |
ಚಿರಕಾಂತಿಯಿಂದಿಕ್ಕುತೆಕ್ಕೆಯಾಗಿರ್ಪಳಾ |
ಪುರುಚರಿತ್ರೋದ್ಧಾಮೆ ಸತ್ಯಶೌಚಾರಾಮೆ ಸೋಮೆ ಸುವ್ರತದ ಸೀಮೆ || ೧೦ ||

ನಿಡುಗಣ್ಣನೋಟ ನವರಸಿಕರ ಗೆಲವಿನೋಟ |
ಕಡುತೆಳ್ಪುವಡೆದ ಹಣೆ ಕಾವನಲರ್ಗಣೆಗೆ ಹಣೆ |
ಬಿಡುಮುಡಿ ವಿರಕ್ತನಿಕುರುಂಬದುತ್ತಮಮಪ್ಪ ಸುರ್ವತಂಗಳ ಬಿಡುಮುಡಿ ||
ತೊಡೆ ವಿರಹಿವಿತತಿಯಳಿಕಾಕ್ಷರವ ತೊಡೆವ ಗುಣ |
ಬಡನಡು ಕರಂ ನೋಡಿ ತೊಲಗಿದವರಂಗಮಂ |
ಬಡವು ಮಾಡುತಿರ್ಪುವಾ ದ್ವಿಜತನೊಜೆಯ ವಿಲಾಸಮನದೇನೆಂಬೆನು || ೧೧ ||

ಕೋರಕಿತಕರ್ಣಿಕಾರಸ್ತನದ ಕಾಂಚನ ಸ |
ರೋರುಹಸಮಾನನವಲಾವಣ್ಯಯುತಮುಖದ |
ಚಾರುಚಂಪಕದ ಬಿರಿಮುಗುಳ ನಾಸಿಕದ ಪೊಸಮಿಸುನಿಗೇದಗೆಯೆಸಳ್ಗಳಾ ||
ಕೂರುಗುರ್ಗಳ ಕುಸುಮದಾಮ ಕೋಮಲದ ಸುಕು |
ಮಾರಿಯಂಗಜನ ಜನನಸ್ಥಾನ ತಾನಾದ |
ಕಾರಣದಿನಾಲೋಕಜನನಿಯೆನೆ ಮೈಯೊಳ್ಸುವರ್ಣತ್ವಮಂ ತಳೆದಳು || ೧೨ ||

ಉರುಕೇಶಬಂಧನಂ ವಿಟಜನಕೆ ಬಂಧನಂ |
ಕರದಲುಳಿ ಕಾಮನಾಟಕಕೆ ಲಳಿಲುಳಿ ಮನೋ |
ಹರವೆನಿಸುವಗ್ರಹಾರಂ ದ್ವಿಜನಾಗಿ ಮನೆಗಟ್ಟಿದಗ್ರಹಾರಂ ||
ಸರಸಕಾಂಚೀಧಾಮ ಸಲೆ ವಿರಕ್ತರ ಮನಮ |
ನಿರದೆ ಕಟ್ಟುವ ಧಾಮವದು ಕಾರಣದಿನದ |
ಳ್ವಿರಚನಂಗೆಯ್ದ ವಿವಿಧಾಭರಣ ವಿರಹಿಗಳ ಹರಣಕ್ಕೆ ಹರಣಭರಣ || ೧೩ ||

ಅನುದಿನಂ ಸದೃಷ್ಟಿಗಳದೊಂದು ಮೇಳವೇ |
ಅನವರತ ದೇವಪೂಜೆಯ ಮಾಡುವಳ್ತಿಯೇ |
ಮನಗೊಂಡನುಶ್ರುತಂ ಜಿನಕಥಾರ್ಥಂಗಳಂ ಪೇಳ್ವ ಕೇಳ್ವ ವಿಲಾಸಮೇ ||
ದಿನದಿಂ ಸತ್ಪಾತ್ರದಾನಾನುಮೋದಮೇ |
ತನಗೆ ನೆಲೆಯಾಗಲೊಪ್ಪಂಬಡೆದಳಾ ಸೋಮೆ |
ಜನವಿನೂತಶ್ಯಾಮೆ ನವಹೇಮನಿಭದಾಮೆ ಕಾಮಿನೀಕುಲಲಲಾಮೆ || ೧೪ ||

ಮತ್ತಮಾ ಮಧುರ ಕೋಕಿಲವಾಣಿಯತಿ ಮಮತೆ |
ವೆತ್ತು ನಂದೀಶ್ವರದ ನೋಂಪಿಯಂ ಮಾಡುವೆನೆ |
ನುತ್ತ ತನ್ನೋರಗೆಯ ಸಖಿಯರೊಡವರಲರ್ಚನಾದ್ರವ್ಯಧಾರಿಯಾಗಿ ||
ಉತ್ತಮಾಭರಣಭೂಷಿತೆಯುದ್ಗಮಾಯುಧನ |
ಚಿತ್ತವಲ್ಲಭೆಯೊಸೆದು ಪೂಜಿಸುವ ಪೊಸಪೊನ್ನ |
ಪುತ್ತಳಿಯ ತೆರದಿ ನಡೆತರ್ಪ ನಟನೆಯನು ಕಂಡಾ ಪುರಜನಾನೀಕವು || ೧೫ ||

ಈ ನಾಡು ಬೀಡಿನೊಳು ನಾವು ಹುಟ್ಟಿದ ದಿನಂ |
ತಾನಂದು ಮೊದಲಾಗಿಯಿಂದು ಪರಿಯಂತಮೀ |
ಮಾನಿನೀಮಣಿಗೆ ಸಮನಾದ ಸೌಂದರ್ಯಸಂಪದಸದ್ವಿಲಾಸದೇಳ್ಗೆ ||
ಈ ನಟನೆ ಈ ಲಲಿತಲಾವಣ್ಯಮಂ ಪಡೆದ |
ಮಾನಿನಿಯರಂ ಕಂಡುದಿಲ್ಲ ಕನಸಿನೊಳಮೆಂ |
ದಾನಂದಿಸುತ್ತ ಜಂಗಮಾಜಾತ್ರೆಯಂದದಿಂದಾ ಸತಿಯ ಸುತ್ತುವರಿದು || ೧೬ ||

ಮುತ್ತಿ ನೋಡುತ್ತಮಿರಲಾ ನೆರವಿಯೊಳು ರುದ್ರ |
ದತ್ತನೆಂದೆಂಬ ಜೂದುಂಗಾರ ಪಾರ್ವನು |
ನ್ಮತ್ತಮಾನಸನಿವಳದಾರಮಗಳಿವಳ ಹೆಸರೇನೆಂದು ಕೇಳಲಾಗ ||
ಹತ್ತಿರಿರ್ದವರಿಂತು ನುಡಿದರಿವಳಾ ಸೋಮ |
ದತ್ತನ ಮಗಳ್ಸೋಮೆಯೆಂದಿವಳನಾ ಭೂಸು |
ರೋತ್ತಮಂ ಸಾವಂದು ವೈಶ್ಯವಿಭು ಗುಣಪಾಲಕಂಗೆ ಕೈಲೆಡೆಗೊಟ್ಟನು || ೧೭ ||

ಅದರಿನಾತಂ ನಿಜತನೂಜೆಯಂ ರಕ್ಷಿಸುವ |
ಪದದಿ ರಕ್ಷಿಸುತಿರ್ಪನೆಂಬ ನುಡಿಯಂ ಕೇಳಿ |
ಮಹದೃದಯನಿವಳನಾಂ ಮುದುವೆಯಾಗುವೆನೆಂಬ ನುಡಿಗೆಂದರೆಲವೊ ಭ್ರಷ್ಟಾ ||
ವಿದಿತ ಗುಣಮಣಿಯುತ್ತಮದ ಬ್ರಹ್ಮಚಾರಿಗುರು |
ಮುದದಿ ಕೊಡುವೀ ಸಚ್ಚರಿತ್ರವಂತೆಯನು ನೀ |
ಮದುವೆಯಾಗುವೆನೆಂಬುದಾ ಮರದ ಹಣ್ಣ ಬಯಸುವ ಹೆಳವನಂತಪ್ಪುದು || ೧೮ ||

ಎನೆ ಕೇಳಿ ನಗುತಿವಳನಾವ ಪ್ರಕಾರದಿಂ |
ಜನಜನಿತಮಾಗಿ ಮದುವೆಯನಿಲ್ವೆನಲ್ಲದೊಡೆ |
ನನಗೇತರೀ ಜಾಣ್ಮೆಯಿದನಿ ನೀವರಿದಿರಿ ಎನುತ್ತ ಭಾಷೆಯನು ಮಾಡಿ ||
ಇನಿಸುಳಿಯದೇ ಪೋಗಿ ದೇಶಾಂತರದೊಳೊರ್ವ |
ಜಿನಮುನಿಯ ಕಯ್ಯೊಳಾ ಬ್ರಹ್ಮಚಾರಿತ್ವಮುಮ |
ನನುಕರಿಸಿ ಕಪಟದಿಂದ ದೇವತಾವಂದನಾದಿಯ ಸದ್ವಿಧಿಯನೆಲ್ಲವಂ || ೧೯ ||

ಮನವಾರೆ ಕಲಿತು ಮುಗುಳ್ದಾ ಪುರವರಕೆ ಬಂದು |
ಮನುಚರಿತ ಗುಣಪಾಲ ಮಾಡಿಸಿದ ಚೈತ್ಯಗೃಹ |
ಕನುನಯದಿ ಬರಲದಂ ಕೇಳ್ದಿಲ್ಲಿಗಾ ವೈಶ್ಯಕುಲತಿಲಕನೊಸೆದು ಬಂದು ||
ಅನಘಂಗೆ ಮಣಿದು ಬಳಿಕಾ ಬ್ರಹ್ಮಚಾರಿಗತಿ |
ವಿನಯದಿಂ ಮಾಡಲಿಚ್ಛಾಕಾರಮಂ ನಿಮಗೆ |
ವಿನುತ ದರ್ಶನಶುದ್ಧಿರಸ್ತು ಎನುತಾಗಲಾಶೀರ್ವಾದಮಂ ಮಾಡಿದಂ || ೨೦ ||

ಆ ಮಾನನಿಧಿ ಕೇಳ್ದನೆಲೆ ದೀಕ್ಷಿತರೆ ಜನ್ಮ |
ಭೂಮಿಯಾವುದು ನಿಮಗೆ ನೀಮಾರ ಶಿಷ್ಯರೆನ |
ಲಾ ಮಾತಿಗಿಂತೆಂದನೆಮ್ಮ ಜನ್ಮಸ್ಥಾನಮೀ ಹಸ್ತಿನಾನಗರಿ ||
ಸೋಮಶರ್ಮದ್ವಿಜಂಗಾ ಸೋಮಶರ್ಮೆಗಂ |
ಪ್ರೇಮದಣುಗಂ ರುದ್ರದತ್ತವೆಸರವನು ತ |
ನ್ನಾ ಮಾತೃಪಿತೃಗಳೆಲ್ಲಂ ಸತ್ತರದರಿಂದ ದೇಶಾಂತರಕ್ಕೆಯ್ದಿದೆಂ || ೨೧ ||

ವಾರಣಾಸೀನಗರಿಯಲ್ಲಿ ಜಿನಚಂದ್ರಭ |
ಟ್ಟಾರಕರ್ಮಾಸೋಪವಾಸಿಗಳ್ನನಗೊಲಿದು |
ಸಾರತರಮಪ್ಪ ಸದ್ಧರ್ಮಮಂ ನಿರವಿಸಲ್ಕದನು ಮನಮೊಸೆದು ಕೇಳಿ ||
ವೈರಾಗ್ಯ ಮನದೊಳಾವರಿಸಲಾನೀ ವೇಷ |
ಧಾರಿಯಾದೆಂ ಬಳಿಕ್ಕವರ ಬೀಳ್ಕೊಂಡು ನಾಂ |
ಭೂರಿಜನಪದಗಳೊಳಗುಳ್ಳ ಜಿನಭವನಮೆಲ್ಲಕ್ಕೆ ವಂದನೆಮಾಡುತ || ೨೨ ||

ಬಂದು ಪುರುಜಿನರಾದಿಯಾದ ತೀರ್ಥಂಕರರ ||
ದೊಂದು ಜನ್ಮಸ್ಥಾನಮಂ ಭಕ್ತಿಪೂರ್ವಕಂ |
ವಂದನಂಗೆಯ್ಯುತಿಲ್ಲಿ ಶಾಂತಿ ಕುಂಥು ಅರ ತೀರ್ಥಕರ ದೇವರುಗಳಾ ||
ವಂದನೆ ನಿಮಿತ್ತ ನಿನ್ನಂ ನೋಡುವಭಿಲಾಷೆ |
ಯಿಂದ ಭರದಿಂ ಬಂದೆ ನಿನ್ನ ದರ್ಶನಮಾತ್ರ |
ದಿಂದ ನಾನತಿ ಧನ್ಯನಾದೆನೀ ಇಳೆಗೊಳ್ಳಿತಾವುದುತ್ತಮರ ಸಂಗಾ || ೨೩ ||

ಸಿರಿಗಂಪಿನೊತ್ತಿಳ್ಬೆಳೆದಿರ್ದ ಮರದಂತೆ |
ವರಸಿದ್ಧರಸಮನಮರಿದ ಲೋಹದಂತೆ ನವ |
ಪರಿಮಳಂಬೊರೆದ ಕರಡಿಗೆಯಂತೆ ಮಾಣಿಕದ ವರ್ತಿಯಿಂ ಸಲೆಸೋಂಕಿದಾ ||
ಸುರುಚಿರ ಸ್ಫಟಿಕದಂತಾ ಶುಕ್ತಿಯುದರಮಂ |
ಪೊರೆದ ಹನಿಯಂತೆ ಪಜ್ಜಳಿಪ ಮಣಿಮಾಲೆಯೊಡ |
ವರಿದ ನೂಲಂತೆ ಯತಿ ಸೇವ್ಯವಹುದುತ್ತಮರ ಸಂಗಮೆಂದುಸಿರ್ದನಾಗ || ೨೪ ||

ಆ ವೈಶ್ಯನಿಂತೆಂದನಾ ಬ್ರಹ್ಮಚಾರಿಯೊ |
ಳ್ಭೂವಿನುತವೆನಿಸುವೀ ಬ್ರಹ್ಮಚರ್ಯವ್ರತಂ |
ಸಾವಧಿಕಮೋ ನಿರವಧಿಕಮೋ ಎನಲಿಂತೆಂದನಾ ಬ್ರಹ್ಮಚಾರಿಯವಗೆ ||
ಸಾವಧಿಕಮೇ ತಪ್ಪದೀ ವ್ರತಂ ನನಗೆ ಮ |
ತ್ತಾ ವಿವಾಹದಕಾಂಕ್ಷೆಯೆಂಬುದೊಂದಿನಿಸಿಲ್ಲ |
ವಾ ವನಿತೆಯರ್ವಿಚಾರಿಸಿ ನೋಡೆ ವಿಷಯಮತರವಿಷವಾದ ಕಾರಣದೊಳು || ೨೫ ||

ಖರಕಿರಣನಿಂ ಕಿಡಿದ ತಮವಲಗು ತಾಗದೆ |
ಪಿರಿದು ನೋಯಿಸುವೇರು ಯಮಪುರಕ್ಕೇಯ್ದಿಸದ |
ಮರಣಮಾ ಮದ್ಯಪಾನಂ ಮಾಡದೇ ಸೊಕ್ಕಿಸುವ ಸೊಕ್ಕು ಕಿಚ್ಚಿಲ್ಲದೆ ||
ಉರಿವಶಿಖಿಯುರಗನುಣ್ಣದೆ ಮುಸುಂಕುವ ನಂಜು |
ಚರಣಯುಗಮಂ ಸೋಂಕದಾಶೃಂಖಲಾಬಂಧ |
ದಿರವಲ್ಲವೇ ಮಾನಿನೀಜನಕೆ ಮನಮಿಕ್ಕಿ ಸಿಕ್ಕಿದಾ ನರರ ಬಾಳ್ವೆ || ೨೬ ||

ಎನಲೆಂದನಾ ಶ್ರೇಷ್ಠಿಯೆಲೆ ದೀಕ್ಷಿತರೆ ನಮ್ಮ |
ಮನೆಯೊಳೋರ್ವಳು ಬ್ರಹ್ಮಚಾರಿ ಸದ್ಭ್ರಾಹ್ಮಣನ |
ತನುಜೆಯತಿರೂಪವತಿಯಿರ್ದಪಳವಳ ನಿನಗೆ ಕೊಡುವೆನೆನಲಿಂತೆಂದನು ||
ನನಗದರ ವಾಂಛೆ ಬೇಡದರಿಂದ ಸಂಸಾರ |
ದನುಬಂಧವಾ ವನಿತೆಯರ ಸಂಗದಿಂದ ಸ |
ಜ್ಜನಸಂಗ ಸರ್ವಶಾಸ್ತ್ರಪ್ರಸಂಗಂ ವಿಚಾರಿಸಿದೊಡಗ್ಗಳಮಲ್ಲವೇ || ೨೭ ||

ಇಂತೆಂದು ನುಡಿದ ಕೃತ್ರಿಮದೀಕ್ಷಿತಂಗೆ ಗುಣ |
ವಂತ ಗುಣಪಾಲನೀತೆರದಿನೊಡಬಡಿಸಿದ ನಿ |
ರಂತರಂ ದಾನಧರ್ಮವ ಮಾಡಿ ಕಡೆಗಾಲದಲ್ಲಿ ದೀಕ್ಷೆಯನು ತಳೆದು ||
ಪಿಂತಣ ಗೃಹಸ್ಥರೆಲ್ಲಂ ಸದ್ಗತಿಯ ಜೀವಿ |
ತಾಂತದೊಳ್ಪಡೆಯರೇ ಎಂದೊಡಂಬಡಿಸಿಯ |
ತ್ಯಂತಾಗ್ರಹದಿನುತ್ತಮೆಯನವಗೆ ಪೊಳಲರಿಕೆಯಲ್ಲಿ ಮದುವೆಯ ಮಾಡಿದಂ || ೨೮ ||

ಆ ಮದುವೆಯಾದ ಮರುದಿನದುದಯದಲ್ಲಿಯಾ |
ಕಾಮದಂ ಕಯ್ಯಕಂಕಣವೆರಸಿ ಪೋಗಿ ಮ |
ತ್ತಾ ಮಹಾದ್ಯೂತಶಾಲೆಯೊಳು ನೆರೆದಿರ್ದ ಜೂದಂಗಾರರನೆ ಕಾಣುತಾ ||
ಸೋಮೆಯನದಾವತೆರದಿಂ ಮದುವೆ ನಿಲ್ವೆನೆಂ |
ಬಾ ಮಾತು ದಕ್ಕಿತಲ್ಲಾ ಮೆಚ್ಚಬೇಡವೇ |
ನೀಮೆನ್ನ ಚದುರತನಕೆಂದವಂ ನುಡಿದ ನುಡಿಗಿಂತೆಂದರಲ್ಲಿ ಕೆಲರು || ೨೯ ||

ಉತ್ತಮದ ಮಾಣಿಕವ ತಂದು ಕೋಡಗನ ಕೆಯ್ಯೊ |
ಳಿತ್ತೊಡದನೊಲ್ಲದೇ ಬಿಸುಡುವದಂದದಿ ರುದ್ರ |
ದತ್ತ ನೀನಂದು ಮಾಡಿದ ಸುಕೃತದೊದವಿನಿಂ ಕೆಯ್ಸಾರ್ದ ಪೆಣ್ಮಣಿಯನು ||
ಒತ್ತರಿಸಬೇಡವೆಂಬಾ ನುಡಿಗೆ ಕಿವುಡುಗೇಳುತ್ತ |
ಮುನ್ನಿನ ಸೂಳೆ ವಸುಮಿತ್ರೆಯೆಂಬ ಪೆಸ |
ರ್ವೆತ್ತ ವೇಶ್ಯೆಯ ಮಗಳ್ಕಾಮಲತೆಯೆಂಬವಳ ಮನೆಗಿರದೆ ಪೋದನಂದು || ೩೦ ||