ಈತೆರದೊಳಾಚರಿಸುತಿರ್ದೊಂದುದಿನ ವಿಶ್ವ |
ಭೂತಿಪಾರ್ವಂ ಪೋಗಿ ಮುಷ್ಟಿಯಂ ಬೇಡಿ ತಂ |
ದಾ ತಂಡುಲವನು ನಿಚ್ಚಳಿಸಲ್ವಡೆಯದೆ ಜಲಮಿಶ್ರದಿಂ ಪಿಟ್ಟುಗುಟ್ಟಿ ||
ಪ್ರೀತಿಯಿಂದಗ್ನಿಹೋತ್ರಕ್ಕೆಯತಿಥಿಗೆ ತನಗ |
ಮಾ ತನ್ನ ಸತಿಗಮೊಂದೊಂದಾಗಿ ಪಿಂಡವ ವಿ |
ನೂತನಗುಣಿ ನಾಲ್ಕನನುಗೆಯ್ದು ಭೋಜನದ ಪೊತ್ತಂ ಪಾರುತಿರಲಲ್ಲಿಗೆ || ೩೧ ||

ಅನಶನಮನೊಂದು ಮಾಸಂ ಮಾಡಿ ಬಳಿಕ ಜನ |
ವಿನೂತ ಪಿಹಿತಾಸ್ತವಾಖ್ಯವ್ರತೀಂದ್ರಂ ನಗರ |
ಜನಮೆಲ್ಲ ಕಂಡು ಕೈಮುಗಿದು ಕೊಂಡಾಡುತ್ತಮಿರಲು ನಡೆತರೆ ಚರಿಗೆಗೆ ||
ಅನುರಾಗವಂತರಂಗದೊಳಂಕರಿಸೆ ಭಕ್ತಿ |
ಕೊನೆವರಿಯೆ ಚಿತ್ತದೊಳಂದು ಪದಪಂಕಜಕೆ |
ವಿನಯವಿನಮಿತನಾಗಿ ನಿಲಿಸಿ ಮನೆಗೊಡಗೊಂಡು ಪೋಗಿ ಸತ್ಕರ್ಮದಿಂದ || ೩೨ ||

ವೀತರಾಗಾಸನಮನಿತ್ತು ವಿಧಿಪೂರ್ವಕಂ |
ಜಾತರುಪನ ಜಲರುಹೋಪಮಾಂಘ್ರಿಯನು ಮನ |
ವೋತದರ್ಚನೆಗೆಯ್ದು ಸಿದ್ಧಭಕ್ತಿಯ ಹೇಳಿ ತತ್ಪಾಣಿಪಾತ್ರೆಯಲಿ ||
ಪ್ರೀತಿಯಿಂದಾ ಮೂರುಪಿಮಡವಿತ್ತಾ ವಿಶ್ವ |
ಭೂತಿ ತನ್ನಂಗನೆಯ ಮೊಗನೋಡಲಾ ಜನವಿ |
ನೂತೆ ತನಗೆಂದಿರ್ದ ಪಿಂಡಮಂ ಕೊಡಲು ಕೊಂಡಕ್ಷಯಂದಾನಮೆನಲು || ೩೩ ||

ಮರಕತದ ಮಳೆಗರೆಯ ಮಾಣಿಕದ ಹನಿಹನಿಯೆ |
ಸುರಿಯೆ ಕುಲಿಶದ ಸೋನೆ ಪುಷ್ಯರಾಗದ ತಂದ |
ಲಿರದೆ ಗೋಮೇದಿಕದ ಕುಟ್ಟುವನಿ ಬೀಳೆ ಹರಿನೀಲರತ್ನಂಗಳಾ ||
ಸರಿಕುಟ್ಟಿ ವೈಡೂರ್ಯಮಣಿಯ ಬೆಳ್ಸರಿ ಹುಯ್ಯೆ |
ವರ ಮೌಕ್ತಿಕಪ್ರತತಿಯಾಲಿಕಲ್ಗಳ್ ಸೂಸು |
ತಿರೆ ಹಳವದಿಂದ್ರಗೋಪಂ ಬಿಳ್ದುದಾ ವಿಶ್ವಭೂತಿಯಾಲಯದ ಮುಂದೆ || ೩೪ ||

ಈ ರತ್ನಮೊದಲಾಗಿಯಾಶ್ಚರ್ಯಪಂಚಕಂ |
ಮಾರುತಪಥದಿನಾಗಲಾ ಪಾರ್ವನಂಗನೆ ಮ |
ನೋರಾಗದಿಂದೆತ್ತಿಕೊಂಡೊಯ್ವುದಂ ಕಂಡು ಯಜ್ಷಮಂಟಪದೊಳಿರ್ದಾ ||
ಧಾರಿಣೀಸುರರೆಲ್ಲ ನೆರೆದು ರಾಜಪ್ರಭಮ |
ಹಾರಾಜನೆಸಗುವ ದಾನಫಲಮೀಗ ಕ |
ಯ್ಯಾರೆಕಾಣಿಸಿದ ಚಿತ್ರಮ ನೋಡಿಮೆಂದು ಮತ್ತಿಂತೆಂದುಲಿಯುತಿರ್ದರು || ೩೫ ||

ಕಂಡಿರೇ ದೀಕ್ಷಿತರೆ ವಿಶ್ವಭೂತಿಯದೊಂದು |
ಲಂಡತನವನು ತನ್ನ ಮನೆಗೋರ್ವನಾ ಬೋಳ |
ಮಂಡೆಯ ಸವಣನೀಗ ದಡದಡಿಸುತೆಯ್ತಂದು ಬರಿಯಕ್ಕಿಯಿಂದ ಕಲಸಿದಾ ||
ಪಿಂಡಗಳನುಂಡ ಕಂಡಾ ಅದರಿನಾ ನಭೋ |
ಮಂಡಲದಿನಮರರೊಪ್ಪುವ ರತ್ನವೃಷ್ಟಿಯಂ |
ತಂಡತಂಡದಿ ಸುರಿದರೆಂದರಸಗಿನಿಸಂಜದೇ ಕೊಂಡು ಹೋದ ಪರಿಯಾ || ೩೬ ||

ಎಂದು ಕೈಹೊಯ್ದಟ್ಟಹಾಸದಿಂದರಮನೆಗೆ |
ಬಂದು ತದ್ವಾರ್ತೆಯಂ ಪೇಳಲಾ ಭೂಸುರ |
ರ್ಮಂದೇತರಕ್ರೋಧದಿಂದ ರಾಜಪ್ರಭಂ ಕರಸಲಾ ವಿಶ್ವಭೂತಿ ||
ಚಂದಚಂದದಿನೊಪ್ಪುವಾ ರತ್ನರಾಶಿಯಂ |
ತಂದು ಮುಂದಿರಿಸಲವು ತತ್ಸಭಿಕರಂ ಬೆದರು |
ವಂದದಿಂ ತನಿಗೆಂಡವಾದುವಾ ವಿಸ್ಮಯವನೇನೆಂದು ಬಣ್ಣಿಸುವೆನು || ೩೭ ||

ಸಂದಣಿಸಿ ನೋಡುವಾ ಸಭೆಯುಮಾ ನೃಪತಿಯುಂ |
ಪಿಂದೆ ಮಾಡಿದ ಕರ್ಮವಶದಿಂದ ಹೊಕ್ಕ ಭವ |
ವೆಂದೆಂಬ ವನಮನಳುರ್ವಗ್ನಿ ಮತ್ತವರರಿವ ಪರಿಪಾಕಮಂ ಮಾಡಲು ||
ತಂದಿಟ್ಟ ಕಿಚ್ಚು ಮತ್ತವರ ಮನದಾವರಣ |
ದೊಂದು ದೋಷಾಂಧಕಾರವನು ಹರಯಿಸಲು ಬೇ |
ಕೆಂದು ಸುರುಹಿದ ಶಿಖಿಯ ಮಾಳ್ಕೆಯಿಂದೊಪ್ಪಿತಾ ರತ್ನದಿಂದಾದ ಕಿಚ್ಚು || ೩೮ ||

ಅಂತದಂ ಕಂಡು ತತ್ಸಭೆಯೊಳಿರ್ದವರರಸ |
ಗಿಂತೆಂದರೆಲೆ ನೃಪತಿಯೀ ವಿಶ್ವಭೂತಿ ನಿ |
ಶ್ಚಿಂತಮಾನಸನು ಮುನಿಗಾಹಾರದಾನಮಂ ಮಾಡಿದ ಮಹಾತ್ಮೆಯಿಂದ ||
ಅಂತೊಪ್ಪುವಾ ರತ್ನಸಮಿತಿಯಿಲ್ಲಿಗೆ ತರ |
ಲ್ಲಿಂತುರಿವ ಕೆಂಡವಾಯ್ತೆನಲವಂ ಕುಡೆ ಮುನ್ನಿ |
ನಂತವನ ಸೋವಿಲೊಳು ದೇದೀಪ್ಯಮಾನಮಂ ಪಡೆದ ರತ್ನಗಳಾದುವು || ೩೯ ||

ಉತ್ತಮ ಹೃದಯವಿಶ್ವಭೂತಿ ರತ್ನತ್ರಯದ |
ಬಿತ್ತಂ ಮನೋವಚನಕಾಯಶುದ್ಧಿಯೊಳಿರದೆ |
ಬಿತ್ತಲವು ಬೆಳೆದು ಸತ್ಫಲವಾದುದೋ ಎಂಬ ಎರದಿನಾ ರತ್ನಂಗಳಾ ||
ಮೊತ್ತವಾತನ ಮಡಿಲೊಳೊಪ್ಪುತಿರೆ ಕಂಡು ಭೂ |
ಪೋತ್ತಂಸರಾಜಪ್ರಭಂ ಪಿರಿದು ವಿಸ್ಮಯಂ |
ಬೆತ್ತು ಮಾಣಿಕ್ಯಮಯಮಕುಟಮಂ ತೂಗಿ ಪಿರಿದುಂ ಪೊಗಳುತಿರ್ದನಾಗ || ೪೦ ||

ಈ ತೆರದ ಧರ್ಮದ ಮಹಾತ್ಮೆಯಂ ಕಂಡು ಸ |
ತ್ಪ್ರೀತಿಯಿಂ ಕರಕಮಲಯುಗವ ಮುಗಿದಾ ವಿಶ್ವ |
ಭೂತಿಗಿಂತೆಂದ ನೀನೀಗ ಮಾಡಿದ ದಾನಫಲದೊಳರ್ಧವನಿತ್ತೊಡೆ ||
ಸಾತಿಶಯಮಪ್ಪೆನ್ನ ಯಜ್ಞಫಲದೊಳಗೆ ಮನ |
ವೋತರ್ಧಮಂ ನನ್ನ ರಾಜ್ಯದೊಳಗರ್ಧಮಂ |
ಮಾತೇನೊ ಕೊಡುವೆನೆಂದೆಂಬ ನುಡಿಯಂ ಕೇಳಿಯುತ್ತರಂಗೊಟ್ಟುನಿಂತು || ೪೧ ||

ಕಾಮಧೇನುವನು ಕಳ್ತೆಗೆ ಸಮಂಗೊಡುವ ಚಿಂ |
ತಾಮಣಿಯನಾ ಕಾಚಶಿಲೆಗೆ ಬೆಲೆಮಾಳ್ಪ ದಿ |
ವ್ಯಾಮೃತಮನಂಬುಕಣಕಿರದೆ ಮಾರುಂಗೊಡವ ಕಡುಹೆಡ್ಡರಂತಲ್ಲವೇ ||
ಶ್ರೀಮನ್ಮಹಾಮುಕ್ತಿಸುಖಸಂಪದವನು ಕೊಡು |
ವೀ ಮಹಾಸತ್ಪಾತ್ರದಾನದುತ್ತಮಫಲಕೆ |
ಭೂಮೀಶ ಕೇಳಧಮವಸ್ತುವಂ ಕೊಂಬುದೇ ಎಂಬ ನುಡಿಯಂ ಕೇಳುತ || ೪೨ ||

ಆ ಸಂಯಮೀಂದ್ರತಿಹಿತಾಶ್ರವರ ಬಳಿಗೆಯ್ದಿ |
ವೋಸರಂ ಮಾಡದೇ ಸಾಷ್ಟಾಂಗವೆರಗಿ ಬಳಿ |
ಕಾ ಸರಸಿಜೋಪಮಕರಂಗಳಂ ಮುಗಿದೆಲೆ ಮುನಿಕುಲಾಂಬರಭಾನುವೇ ||
ಭೂಸುರಂ ನಿಮಗಿತ್ತ ದಾಲಭಲದೊಳ್ಸರಿಯ |
ನೇಸೇಸುಪರಿ ಬೇಡಿಬೇಡಿಕೊಂಡೊಡೆ ನನಗು |
ದಾಸೀನಮಂ ಮಾಡಿಕೊಂಡ ಕಾರಣಮನನುನಯದಿಂದ ನಿರವಿಸೆನಲು || ೪೩ ||

ಸದಮಲಜ್ಞಾನಿಯಿಂತೆಂದನಾ ನೃಪಗೆ ಭೂ |
ಸುದತೀಶ ಕೇಳ್ದರ್ಮಮಂ ನಂಬಿ ನಡೆಯಿಸುವ |
ಚದುರರ್ಗೆ ದಾನಜಿನಪೂಜೆಶೀಲೋಪವಾಸಂಗಳೆಂದೆಂಬ ನಾಲ್ಕು ||
ವಿದಿತವಿಧವೇ ಮುಖ್ಯಮಾನಾಲ್ಕರೊಳ್ಮೊತ್ತ |
ದದು ಭಾವಕರ್ಕ್ಕರಂ ಭಾವಿಸಿ ವಿಚಾರಿಸಲ್ನಾಲ್ಕುವಿಧಮಾಗಿರ್ಪುದು || ೪೪ ||

ಆ ನಾಲ್ಕುದಾನಂಗಳಾವುದೆಂದೊಡೆ ಮಹೀ |
ಮಾನಿನೀಪತಿ ಕೇಳು ಸತ್ಪಾತ್ರಕನುದಿನಂ |
ಸಾನುರಾಗದೊಳೆಸಗುವನ್ನದಾನಂ ಪ್ರಸಿದ್ಧವನೆಪಡೆದಭಯದಾನಂ ||
ಜ್ಮಾನಮಂ ನೆರೆಮಾಡಿಕೊಡುವ ಬಹುವಿಧಶಾಸ್ತ್ರ |
ದಾನಮೊದವಿದರೋಗಮಂ ಕೆಡಿಪ ಭೈಷಜ್ಯ |
ದಾನಮೆಂದದರ ಸಾಮರ್ಥ್ಯಮಂ ಪಿರಿದುಮನುರಾಗದಿಂ ಪೆಳ್ದರಿಂತು || ೪೫ ||

ಅರಸ ಕೇಳಾಹಾರಮಂ ಕೊಂಡೊಡಲ್ಲದೆ |
ಸ್ಥಿರಮಾಗದೀ ದೇಹಮೀದೇಹದಿಂದಲ್ಲ |
ದುರುತರಕ್ಞಾನಮುದ್ಭವಿಸದಾ ಜ್ಞಾನದಿಂದಲ್ಲದೇ ಕರ್ಮದೊದವು ||
ಪರಿಹರಿಸದಾ ಕರ್ಮನಾಶದಿಂದಲ್ಲದೆ |
ಸುರುಚಿರಸ್ವಾರ್ಗಾಪವರ್ಗಪದಮಾಗದಿದು |
ನಿರುತಮದರಿಂದಮಾಹಾರಮೇ ದೇಹಿಗಳಿಗತಿ ಮುಖ್ಯಮಾಗಿರ್ಪುದು || ೪೬ ||

ಜೀವನಕ್ಕಾಶ್ರಯಂ ದೇಹಮಾ ದೇಹಕ್ಕೆ |
ಜೀವದಾಶ್ರಯ ದೇಹಮಂ ತನ್ನದೆಂಬುದಾ |
ಜೀವನಾಜೀವಮಂ ತನ್ನದೆಂದೇ ನಿಶ್ಚಯದಿನಿರ್ಪುದಾ ದೇಹವು ||
ಜೀವಕ್ಕೆ ದೇಹವಳಿದಪುದೆಂಬ ಭೀತಿಯಾ |
ಜೀವವಳಿದಪುದೆಂಬ ಭೀತಿಯಾ ದೇಹಕ್ಕೆ |
ಯಾವರಿಸಿಕೊಂಡಿರ್ಪುದಾಗಿಯಭಯವೆ ಮುಖ್ಯಮೀ ದೇಹಕೀ ಜೀವಕೆ || ೪೭ ||

ಶ್ರುತದಿಂದ ಪಂಚಾಸ್ತಿಕಾಯುಷಡ್ದ್ರವ್ಯ ಸ |
ನ್ನುತ ಸಪ್ತತತ್ವ ನವವಿಧ ಪದಾರ್ಥಂಗಳಂ |
ಮತಿಯಿತ್ತು ತಿಳಿಯೆ ರತ್ನತ್ರಯಂ ಸಂಜನಿಪುದಾ ರತ್ನಮೂರರಿಂದ ||
ಹತಿಪಿಯುದು ಕರ್ಮಮಾ ಕರ್ಮದ ವಿನಾಶದಿಂ |
ಸತತಸುಖಸಂಪದವನಿರದೆ ಕೊಡುವಾ ಮಹೋ |
ನ್ನತಮಪ್ಪ ಮೋಕ್ಷಮಹುದದುಕಾರಣಂ ಶಾಸ್ತ್ರಮುಖ್ಯಮೀ ದೇಹಿಗಳಿಗೆ || ೪೮ ||

ಔಷಧಮನೊಸೆದುಕೊಂಡೊಡೆ ಸಕಲರೋಗನಿ |
ಶ್ಶೇಷವಪ್ಪುದದುಕಾರಣಂ ದೇಹಕ್ಕೆ ಪರಿ |
ತೋಷಮಾ ಪರಿತೋಷದಿಂದ ತಪಸಿಗೆ ಜಯಂ ತತ್ತಪೋವೃದ್ಧಿಯಿಂದ ||
ದೋಷಂಗಳೆಲ್ಲ ಕೆಡುವುದು ಕೆಟ್ಟದೋಷದಿ ವಿ |
ಶೇಷವೆನಿಸುವ ಸೌಖ್ಯಮಂ ಕೊಡುವ ತ್ರೈಲೋಕ್ಯ |
ಭೂಷಣಮೆನಿಪ್ಪ ಪದವಹುದದರಿನೌಷಧವೆ ಮುಖ್ಯಮೀ ದೇಹಿಗಳಿಗೆ || ೪೯ ||

ಈ ತೆರದ ನಾಲ್ಕು ದಾನವನು ಸತ್ಪಾತ್ರಕ್ಕೆ |
ದಾತೃಗಳ್ಕುಡಬೇಕು ಕೊಟ್ಟೊಡುತ್ತಮ ಫಲಂ |
ಮಾತೇನೊ ತಪ್ಪದಪ್ಪುದು ಪಶುಗೆ ಪುಲ್ನೀರನೀಯೆ ಪಾಲ್ಗೊಡುವ ತೆರದಿ ||
ಖ್ಯಾತಿಗೆ ನಿಮಿತ್ತಂ ಕುಪಾತ್ರಕ್ಕೆ ದಾನಮಂ |
ಪ್ರೀತಿಯಿಂ ಮಾಡೆ ಫಣಿಪತಿಯ ಬಾಯೊಳ್ಪಾಲ |
ನೋತು ಕರೆದೊಡೆ ವಿಷಯಮನದು ಕೊಡುವ ತೆರನಪ್ಪುದದರ ಫಲವವನಿಪಾಲಾ || ೫೦ ||

ಸತ್ಪುರುಷರಾದವರ್ಸಕಲಕಲೆಯಲ್ಲಿ ಕಡು |
ವಿತ್ಪನ್ನರಾದವರ್ಯಾಯಾಚದಿಂದ ತ್ರಿಜ |
ಗತ್ಪತಿತ್ವಮನಿರದೆ ಕೊಡುವ ಕೇಡಿಲ್ಲದತಿಸುಖವೀವ ಮುಕ್ತಿಯಲ್ಲಿ ||
ಉತ್ಪತ್ತಿಯಂ ಮಾಡಿಕೊಂಬ ಸಾಮರ್ಥ್ಯದಾ |
ಸತ್ಪಾತ್ರದಾನಫಲಮಂ ಕುಡುವರೇ ಭೂಜ |
ಗತ್ಪಾಲಕಾ ಎಡಹಿ ಕಂಡ ನಿಧಿಯಂ ಕಾಲೊಳೊದೆವ ಕಡುಹೆಡ್ಡರಂತೆ || ೫೧ ||

ಈ ತೆರನನುರೆ ತಿಳಿದ ಕಾರಣದಿನಾ ವಿಶ್ವ |
ಭೂತಿ ನಿನಗಾ ಫಲವನಿತ್ತುದಿಲ್ಲಾ ಎಂಬ |
ಮಾತಿಂಗೆ ಮೆಚ್ಚಿ ಕೈಮುಗಿದೆಲೇ ಮುನಿನಾಥ ಸತ್ಪಾತ್ರದಾನಫಲವು ||
ಭೂತಳದೊಳಿಂದು ಚೆನ್ನಾಗಿ ದೃಷ್ಟಸ್ಯಾನು |
ಭೂತಮಾಯ್ತೆನಗದರಿನತಿ ನಂಬಿದೆಂ ಜನವಿ |
ನೂತ ನಿನ್ನೀ ದರ್ಶನದ ಸುವ್ರತಮನೆನಗೆ ಮನಮೊಸೆದು ಕೊಡುವುದೆನಲು || ೫೨ ||

ಅತಿಕರುಣಹೃದಯನಾ ವ್ರತಿಕುಲಲಲಾಮನಾ |
ವ್ರತಮನೊಸೆದೀಯೆ ಕೈಕೊಂಡು ರಾಜಪ್ರಭಂ |
ಕ್ಷಿತಿಪೊಗಳೆ ನಡಸೆ ಕೆಲದಿವಸಮರಸುಂಗೆಯ್ದು ಕಡೆಯಲ್ಲಿ ದೀಕ್ಷೆಗೊಂಡು ||
ಹತಕರ್ಮಿಯಾಗಿ ಲೋಕೋತ್ತಮಮೆನಿಪ್ಪ ಸ |
ನ್ನುತಿಕೆವಡೆದುದ್ದತ ಪದವ ಪಡೆದನೆನೆ ಕೇಳಿ |
ಮತಿವಂತ ಸೋಮಶರ್ಮಂ ತತ್ಸಮಾಧಿಗುಪ್ತರ್ಗೆ ಕರಯುಗಲ ಮುಗಿದು || ೫೩ ||

ಮುನಿಕುಲಲಾಮಕೇಳ್ನಿನ್ನ ಪದವೇ ಶರಣು |
ನನಗದರಿನೊಳ್ಳಿತಪ್ಪೀ ಜೈನಧರ್ಮಮಂ |
ಮನಮೊಸೆದು ಪಾಲಿಸುವುದೆನಲವನ ವಿಶ್ವಾಸಮಂ ಕಂಡು ಹರ್ಷದಿಂದ ||
ಜನವಿನುತಮಪ್ಪ ಸುವ್ರತಮನಿರದೀಯಲದ |
ನನುಕರಿಸಿ ಬಳಿಕ ನಾನೀ ಜನ್ಮವುಳ್ಳನ್ನ |
ಕನಸುಮನಸಿನೊಳಿನಿಸು ಹಿಂಸೆಯಂ ಮಾಳ್ಪುದಿಲ್ಲೆಂದು ಬಿನ್ನಪವ ಮಾಡಿ || ೪೫ ||

ಲೋಹದಿಂ ಸಮೆದ ಕೈದಂ ಹಿಡಿವುದಿಲ್ಲಮೀ |
ದೇಹಮುಳ್ಳಲ್ಲಿ ಪರಿಯಂತಮೆಂದಾ ವ್ರತಮ |
ನಾ ಹೃದಯಶುದ್ಧಿಯೊಳು ಕೈಕೊಂಡು ತನ್ಮುನಿಯ ಬೀಳ್ಕೊಟ್ಟು ವ್ರತಿಕನಾಗಿ ||
ಲೋಹದಸಿಯಂತೆ ಕಾಷ್ಠದ ಕೈದಿಗೊಂದೊರೆಯ |
ಮೋಹರಿಸಿ ಹಿಡಿದು ಭೂಭುಜನ ಸೇವೆಯೊಳತಿ |
ಗ್ರಾಹಕಂ ಸೋಮಶರ್ಮಪ್ರಧಾನಂ ಜಗತ್ಪ್ರಖ್ಯಾತನಾಗಿದ್ದನು || ೫೫ ||

ಅಂತದಂ ಕಂಡು ಕೊಂಡೆಯರಿಳಾಕಾಂತನೊಳ |
ಗಿಂತೆಂದರೆಲೆ ನೃಪತಿ ಕಾಷ್ಠದಿಂ ಸಮೆದಸಿಯ |
ಸಂತತಂ ಪಿಡಿದಿರ್ಪವಂಗೆ ಸೇನಾಧಿಪತ್ಯವನೀವುದೊಳ್ಳಿತಾಯ್ತು ||
ಎಂತು ಜಯಿಸುವೆ ವೈರಿಗಳನೆಂಬ ನುಡಿಗೇಳಿ |
ಯಿಂತಿದಂ ನೋಳ್ಪೆನೆಂದೊಂದು ದಿನದಲ್ಲಿ ನೃಪ |
ಸಂತತಿಯ ಮಧ್ಯದೊಳ್ಸರ್ವಾವಸರಮೆಂಬ ಮಿಸುಗುವೋಲಗದೊಳಿರಲು || ೫೬ ||

ಕೆಲದಲ್ಲಿ ಕುಳ್ಳಿರ್ದ ಖಡ್ಗಮಂ ಕಂಡು ತದ್ಧರಾ |
ಲಲನೇಶನನುಮತದಿನೊರ್ವ ನೃಪಸುತನದಂ ನೋಡಬೇಕೆಂದು ಬೇಡೆ ||
ಸಲೆ ಬೆದರಿ ಪಿಸುಣರಿಂದಿಂತಾಯಿತೆಂದು ನಿ |
ಷ್ಕಲಹೃದಯನೀ ಉಬ್ಬಸಂ ನನ್ನ ಮನದಲ್ಲಿ |
ನೆಲಸಿದರ್ಹದ್ಭಕ್ತಿಯುಂಟಾದೊಡನಿಲನಂ ಕಂಡ ಸೊಡದಂತೆ ಕೆಡವಿ || ೫೭ ||

ಇನ್ನೆನಗೆ ಬಂದೀ ಮಹೋಪಸರ್ಗಂ ಪಿಂಗು |
ವನ್ನೆವರ ಸನ್ಯಸಮಿಂತಿದಂ ಕಳಿಯಲ |
ತ್ಯುನ್ನತಿಕೆವಡೆದ ತಪದೆಸಕಮೇ ಶರಣೆಂದು ಮಿಗೆ ಭಾವಿಸುತ ಮನದೊಳು ||
ಚೆನ್ನಾಗಿಯಪರಾಜಿತೋಲ್ಲಸಿತ ಮಂತ್ರಮಂ |
ತಾಂ ನೆನೆಯುತುತ್ತಮಗಾಣಾಬ್ಧಿಚಂದ್ರಂ ಮಂತ್ರಿ |
ತನ್ನ ಕಾಷ್ಠದ ಖಡ್ಗಮಂ ಕೋಶದಿಂದುರ್ಚಿಯವನ ಕಯ್ಯೋಳಗೆ ಕೊಡಲು || ೫೮ ||

ಪಿಸುಣರಸುವಂ ಪೀರ್ವೆನೆಂದು ಹೆಮ್ಮಾರಿ ಮಾ |
ಮಸಕದಿಂದ ನೀಡಿದಾ ನಾಲಿಗೆಯೊ ಕಡೆಗಾಲ |
ದಸಿತಾಭ್ರದಿಂದ ಪೊರಮಟ್ಟ ಕುಡುಮಿಂಚೊ ಮುಸುಕಿದ ತನ್ನ ಮೆಯ್ಯಹೆರೆಯಂ ||
ಬಿಸುಟು ಥಳಥಳಿಪ ನಾಗರೊ ಎಂಬ ಮಾಳ್ಕೆಯಿಂ |
ಮಿಸುಗುವೊರೆಯಿಂದ ನುಸುಳ್ದುಬಂದವಂ ಕೊಟ್ಟ ಕೂ |
ರಸಿಯೊಪ್ಪಿತಾ ನೆರೆದ ಸಭೆಯೆಲ್ಲ ವಿಸ್ಮಯಂಬಟ್ಟ ನಡೆನೋಡುತಿರಲು || ೫೯ ||

ಮಾಸಂಕದಿಂದ ಮಹಿಮರ ಮೇಲೆ ಕೊಂಡೆಯಮ |
ನೋಸರಿಸದೇ ನುಡಿಯಬಹುದೆ ಎಂದರಸನಾ |
ದೂಸಕರ ಬರಿಸಿಯೀ ಹುಸಿದ ನಾಲಿಗೆಗಳಂ ಕುಯ್ದಿಕ್ಕಿಮೆಮದು ನುಡಿದ ||
ಆ ಸಮಯದಲ್ಲಿ ಕರಕಮಲಯುಗಲವನು ಮುಗಿ |
ದಾ ಸೋಮಶರ್ಮನಿದು ಹುಸಿಯಲ್ಲ ನೀಮಿವರ |
ಘಾಸಿಮಾಡಿಸಬೇಡವೆನುತ ಬಳಿಕಿಂತೆಂದು ಬಿನ್ನಪಂಗೆಯ್ದನಾಗ || ೬೦ ||

ಗುರುಸಾಕ್ಷಿಯಾಗಿ ನಾನೆನ್ನ ಜನ್ಮಾಂತರಂ |
ನಿರುತದಿ ಮನೋವಚನಕಾಯಶುದ್ಧಿಯೊಳು ನಿ |
ಷ್ಠುರಮಪ್ಪ ಲೋಹದಸಿಯಂ ಪಿಡಿವುದಿಲ್ಲೆಂದು ಸುಲಲಿತವ್ರತಮನೊಸೆದು ||
ಧರಿಸಿದೆನು ಇವರುಕ್ತಿ ಹುಸಿಯಲ್ಲವೆನ್ನ ಬಂ |
ಧುರುಮಪ್ಪ ಸುವ್ರತದ ಮಹಿಮೆಯಿಂದೀ ಮರದ |
ಕರವಾಳು ತೀಕ್ಷ್ಣತರವಾರಿಯಾಯ್ತೆಂದದರ ನಿಜರೂಪದೋರಿಸಿದನು || ೬೧ ||

ಅದನು ಕಂಡಾ ನೆರದ ಸಭೆಯುಕ್ಕಜಂಬಡುವ |
ಪದದಲ್ಲಿಯಾಶ್ಚರ್ಯಪಂಚಕಂ ಸಗ್ಗಿಗರಿ |
ನೊದವೆ ತದ್ಭೂವರನುಮಾಜನಮುಮಾ ಸೋಮಶರ್ಮನಂ ನೆರೆ ಪೂಜಿಸಿ ||
ಸದಮಲಮೆನಿಪ್ಪ ಸದ್ಧರ್ಮವೇ ಲೋಕಕ್ಕೆ |
ಚದುರರ್ವಿಚಾರಿಸಿದೊಡಗ್ಗಳಮೆನುತ್ತ ಸಂ |
ಮದದಿನಜಿತಂಜಯಮಹೀಪಾಲ ವೈರಾಗ್ಯವಿದನಾಗಿಯುರುಭರದೊಳು || ೬೨ ||

ಪಟ್ಟದರಸಿಯ ಚೊಚ್ಚಿಲಣುಗಿನ ಕುಮಾರಕಂ |
ದಿಟ್ಟ ಶತ್ರುಂಜಯಗೆ ರಾಜ್ಯಭಾರಮನಿತ್ತು |
ಕಟ್ಟರಸುಗಳ್ಪಲಂಬರು ಸೋಮಶರ್ಮನುಂ ಬರಲಾ ಸಮಾಧಿಗುಪ್ತ ||
ಭಟ್ಟಾರಕರ ಕೆಯ್ಯ ದೀಕ್ಷೆಯಂ ಧರಿಸಲಾ |
ಪಟ್ಟಣದೊಳರ್ಧವರ್ಶ್ರಾವಕವ್ರತವ ಮನ |
ಮುಟ್ಟಿಕೊಂಡರ್ಕ್ಕೆಲರ್ಭದ್ರಪರಿಣಾಮದೊಳಗೊಲಿದೊಂದಿ ಸುಖಮಿರ್ದರು || ೬೩ ||

ಆ ಮಹಿಪನುರಸಿ ಸುಪ್ರಭೆ ಮಂತ್ರಿಕುಲತಿಲಕ |
ಸೋಮಶರ್ಮನ ಸುದತಿ ಸೋಮೆಯುಂ ಮತ್ತೆ ಕೆಲ |
ಭಾಮಿನಿಯರೊಡವರಲಭಯಮತಿಗಳೆಂಬಜ್ಜಿಕೆಯರಿಂದ ದೀಕ್ಷೆಗೊಳಲು ||
ಆ ಮಹಾಶ್ರಾವಕವ್ರತಮಂ ಕೆಲ ಸುದತಿಯ |
ರ್ಪ್ರೇಮದಿಂ ಧರಿಸಿದರ್ಕ್ಕೆಲರಂತದಕ್ಕೆ ಪತಿ |
ಣಾಮಿಸಿದರದರಿಂದಮೆನೆಗೆ ರತ್ನತ್ರಯ ಸಂಜಾತಮಾದುದಂದು || ೬೪ ||

ಪ್ರತ್ಯಕ್ಷಮಾಗಿ ಕಂಡುದನುಸಿರ್ವ ಮಾತುಮಂ |
ತಥ್ಯಮಲ್ಲೆಂದು ಬಂದುದನು ಬಾಯ್ಗರೆವೀಯ |
ಘಾತ್ಯೆಯಂ ಬೆಳಗಾಗಲೊಡನೆ ಹಿಡಿತರಿಸಿ ಊರೆಲ್ಲರುಂ ನೋಡುವಂತೆ ||
ಅತ್ಯಂತ ಬಾಧೆಯಂ ಮಾಡಿಸುವ ಕೃತ್ಯಮೇ |
ಕೃತ್ಯಮಲ್ಲದೆ ಮತ್ತೆ ಪೆರತಿಲ್ಲವೆಂದು ಸಲೆ |
ಸತ್ಯಮಂ ಚಿಂತಿಸುತ್ತಿರ್ಪಾಗಳಾ ಚೋರನಿಂತೆಂದು ಭಾವಿಸಿದನು || ೬೬ ||

ಚಂದನವ ಬಿಟ್ಟು ದುರ್ಗಂಧಕ್ಕೆ ನಡೆವ ನೊಣ |
ದಂದದಿಂದೊಳ್ಳಿತಪ್ಪಾ ಕಜ್ಜದೊಳ್ಮನಸ |
ನೊಂದಿಸದೆ ನೀಚವೃತ್ತಿಗೆ ಮನಂಗೊಡುವುದಿದು ಪಾಪಿಷ್ಠಜನಕೆ ಸಹಜ |
ಎಂದೆನುತ್ತಿರಲತ್ತಲಾ ಸುಗುಣಮಣಿ ಮನುಜ |
ಮಂದಾರನಿಭ್ಯಕುಲತಿಲಕನರ್ಹದ್ದಾಸ |
ನಿಂದುನಿಭಕಾಂತಿಯುತನೊಪ್ಪಿದಂ ಜಿನಸಮಯವಾರ್ಧಿವರ್ಧನಚಂದ್ರನು || ೬೭ ||

ಇದು ವಿಬುಧಜನವಿನುತಮಿದು ವಿಬುಧಜನವಿನತ |
ಮಿದು ವಿದಿತಜಿನಸಮಯಶರಧಿಸಂಪೂರ್ಣೇಂದು |
ಸದಮಲ ಚರಿತ್ರಚಂಗಾಳ್ವಭೂವರನ ಸಚಿವಾನ್ವಯಾಂಬರಹಂಸನು ||
ಮದನಸಮರೂಪನುತ್ತಮಗುಣಕರಂಡಕಂ |
ಚದುರಮಂಗರಸ ರಚಿಸಿದ ಕೌಮುದೀಕಥೆಯೊ |
ಳೊದವಿದುದು ಸೋಮಶರ್ಮನದೊಂದು ಕಥನವೇಳನೆಯ ರಂಜಿಸುವ ಸಂಧಿ || ೬೮ ||

ಅಂತು ಸಂಧಿ ೭ಕ್ಕಂ ಪದನು ೪೬೩ಕ್ಕಂ ಮಂಗಳ ಮಹಾ