ಶ್ರೀಮದರ್ಹದ್ದಾಸವೈಶ್ಯವಿಭು ಕೇಳಲಾ |
ತಾಮರಸವದನೆ ನಾಗಶ್ರೀ ಕರಂಗಳಂ |
ಪ್ರೇಮದಿಂ ಮುದಿಗು ತನಗಾದ ಸಮ್ಯಕ್ತ್ವಮಂ ಬಿನ್ನಪಂಗೆಯ್ದಳಿಂತು || ಪಲ್ಲ ||

ಧಾರುಣೀಸತಿಯ ದರಹಸಿತಮುಖದಂತೆ ಕಾ |
ಶ್ಮೀರಜನಪದದ ಮಧ್ಯದೊಳು ಕಡು ಸೊಗಯಿಸುವ |
ವಾರಣಾಸಿಯೆಂಬ ರಾಜಧಾನಿಯೊಳು ಶೋಭಿತ ಸೋಮಕುಲದೀಪನು ||
ಚಾರುಗುಣಮಣಿಗಣಾಭರಣನಾಶ್ರಿತಜನಾ |
ಧಾರ ಜಿತಶತ್ರುವೆಂದೆಂಬ ಭೂಪಾಲಕಂ |
ನಾರಿ ಕಾಂಚನಚಿತ್ರೆಯೆಂಬಳೊಡಗೂಡಿ ಸುಖದಿಂದರಸುಗೆಯ್ಯುತಿಹನು || ೧ ||

ಉತ್ತಮಗುಣಾನ್ವಿತರ ವರಗರ್ಭದಲ್ಲಿಯು |
ತ್ಪತ್ತಿಯಂ ಪಡೆದು ಮುಂಡಿಕೆಯೆಂಬ ನಾಮಮಂ |
ಪೆತ್ತು ಬೆಳೆಯುತ್ತ ಕಿರುಗೊಸಿನೊಳ್ಮುನ್ನಮಾಡಿದ ಪಾಪದೆಸಕದಿಂದ ||
ಮೃತ್ತಿಕೆಯನನುದಿನಂ ತಿಂದು ಮೈಯೊಳು ರೋಗ |
ಹತ್ತಿ ವಿದ್ರೂಪವಾಗಲಂತದಂ ಕಂಡು ಭೂ |
ಪೊತ್ತಂಸನತ್ಯುದಾಸೀನಮಂ ಮಾಡೆ ಪೆರತೊಂದು ತಾಣದೊಳು ಬೆಳೆದು || ೨ ||

ಒಂದು ದಿನದಲ್ಲಿಯಾವೂರ ಮಧ್ಯದ ಚೈತ್ಯ |
ಮಂದಿರದೊಳೋರ್ವ ಕಂತಿಯರಬಲೆಯೆರ್ಗೆ ಮನ |
ಸಂದು ಧರ್ಮೋಪದೇಶಂಗೆಯ್ದು ಸುವ್ರತಂಗಳನೆ ಕೊಡುವುದನು ಕಂಡು ||
ಬಂದು ತಾನವರ ಪಾದಾಂಬುರಹಕತಿಭಕ್ತಿ |
ಯಿಂದ ವಂದನೆ ಮಾಡಿ ಧರ್ಮವಂ ಕೇಳಿಯವ |
ರಂದದಿಂ ನನಗೊಂದು ಸುವ್ರತಮನೀಯಬೇಕೆಂಬ ಬಿನ್ನವಿಸಲಾಗ || ೩ ||

ಕರುಣದಿಂದಾ ಕಂತಿಕೆಯರೆಂದರೆಲೆ ಮಗಳೆ |
ಕರವೊಳ್ಳಿತಾಯ್ತು ನೀನೆಣಿಸಿದುದು ಭವಭವಾಂ |
ತರದೊಳೊದವಿದ ಪಾಪದಂಡಲೆಯಿನಿಂತಾಯ್ತು ನೀನೀಗ ಮೃತ್ತಿಕೆಯನು ||
ಪಿರಿದಾಗಿ ಸೇವಿಸಲ್ಮೆಯ್ಗೆದದನು ನೀಂ |
ಪರಿಹರಿಸಬೇಕೆನುತ್ತಾ ವ್ರತಮನೀಯಲದ |
ಕೈಕೊಂಡು ಪರಿಪಾಲಿಸುತ್ತಿರಲು ತದ್ರೋಗಮೆಲ್ಲಂ ಕೆಟ್ಟುದು || ೪ ||

ಅನಿಲಸಖಮುಖದಿನಾಯುಧಮನಿರದಾಶ್ರಯಿಸಿ |
ದಿನಿಸು ಜಲಮುನ್ಮತ್ತಗಜಘಟಾಳಿಯ ಶಿರಮ |
ನನುವೇಗದಿಂದ ಖಂಡಿಸುವಂತೆ ತನ್ನ ನಿಜಗುರು ಪಾಲಿಸಿದ ಸುವ್ರತಂ ||
ಮನದೊಳೊಂದಿನಿಸು ಹೊರೆಯಿಲ್ಲದೇ ತಳೆದ ಸ |
ಜ್ಜನೆಯ ಮುಂಡಿಕೆಯ ಸದ್ಗುಣಗಣಾಲಂಕೃತೆಯ |
ತನುವಿನಾ ವ್ಯಾಧಿಯಿಂದಾದ ವಿದ್ರೂಪೆಲ್ಲ ಕೆಟ್ಟಿತಿನ್ನೇನೆಂಬೆನು || ೫ ||

ಸಿದ್ಧರಸಮಂ ಸೋಂಕಿದವಲೊಹಮೆಲ್ಲಮತಿ |
ಶುದ್ಧಸ್ವರೂಪ ಕಾಂಚನಮಪ್ಪ ತೆರದಿನಾ |
ಉದ್ಧತವ್ಯಾಧಿ ಹೊದ್ದಿದ ಮುಂಡಿಕೆಯ ದೇಹಮಾವ್ರತಂ ಸೋಂಕಲೊಡನೆ ||
ನಿರ್ಧರದಿನತ್ಯಂತ ರೂಪು ಲಾವಣ್ಯರಸ |
ವೃದ್ಧಿಯಂ ಪಡೆದು ಜವ್ವನವಾಂತು ಜಗದೊಳ್ಪ್ರ |
ಸಿದ್ಧತ್ವಮಂ ಪಡೆದು ಬಳಿಕೊಂಡುದಿವಸಮಾ ಗುರುವಿಂಗೆ ನಮಿಸಿ ಬಳಿಕ || ೬ ||

ಎಲೆ ಗುರುವೆ ನಿನ್ನ ಕರಣದಿನೆನ್ನ ರೋಗ ಹರಿ |
ದಿಳೆಯೆಲ್ಲ ಪೊಗಳ್ವ ರೂಪಾಯಿತೆನ್ನಂಗಮೆನೆ |
ಸುಲಲಿತಚರಿತ್ರನಿಧಿ ಕೇಳ್ಸುವ್ರತದ ಫಲದಿನುರಗನರನಾಕಮೆಂಬಾ ||
ನೆಲಕೊಡೆಯರಾಗುವರ್ಕೈವಲ್ಯಕಾಂತೆಯೊಳ |
ಗಲಸದೇ ಕೂಡುವರಿದೇನದೊಡ್ಡಿತ್ತೆನೆ |
ಲಲನೆ ಹರ್ಷೋತ್ಕರ್ಷೆಯಾಗಿ ಸದ್ಧರ್ಮಮಂ ನಂಬಿ ನಡೆಯಿಸುತಮಿರಲು || ೭ ||

ತಳತಳಿಸಿ ತರಳತ್ವಮಂ ಪಡೆದುವಕ್ಷಿಗಳ್ |
ತುಳುಕಿದುದು ಲಾವಣ್ಯಮಂ ಕೋಮಲಾಂಗದು |
ಚ್ಚಳಿಸಿದುದು ತನಿಗಂಪನಾ ತೋಳಮೊದಲಳಕತತಿ ಕುಟಿಲಮಾಯ್ತುರದೊಳು ||
ದಳೆದುವಂಕರಿಸಿದುದು ಲಜ್ಜೆ ಚಿತ್ತದೊಳು ಮುಡಿ |
ಯಲಘುತರಮಂ ಪಡೆದುದಾ ರಾಜನಂದನೆಗೆ ಬಂದ ಪೊಸಜವ್ವನದೊಳು || ೮ ||

ರತಿಯ ಬಾಳಂ ಕೆಡಿಸುವತ್ಯಂತರೂಪು ಭಾ |
ರತಿಯ ಬದುಕಂ ಬಯಲುಮಾಳ್ಪ ಕಡುಜಾಣ್ಮೆ ಪಾ |
ರ್ವತಿಯೇಳ್ಗೆಯಂ ಗಾರುಗತಮಾಳ್ಪ ಗಾಡಿ ಪಂಕರುಹನಾಭನ ಪಟ್ಟದಾ ||
ಸತಿಯಿರವ ಹರಿಹಂಚುಮಾಡುವ ವಿಲಾಸದು |
ನ್ನತಿಕೆಯಮರೇಶನಂಗನೆಯ ತೇಜಂಗೆಡಿಸು |
ವತಿವಿಭವಮುಂಟೀಕೆಗೆಂದು ಕೊಂಡಾಡುತ್ತುಮಿರ್ಪರಾ ಮುಂಡಿಕೆಯನು || ೯ ||

ಚಂಡಿಕಾಪತಿಯ ಚಕ್ಷುವಿನುರಿಯ ನಂದಿಪಾ ಪ್ರ |
ಚಂಡಿಕೆಯ ಪಡೆದ ಪಂಚೇಷುವಿನ ಖಡ್ಗದೆಡೆ |
ಗೆಂಡಿಕೆಯ ಸಮೆದ ನಡುವಿನ ವಿರಕ್ತರ ಮನದ ಶಾಂತರಸದೊಬ್ಬುಳಿಯನು ||
ಹಿಂಡಿ ಕೆಡಿಸುವ ಜಾಣ್ಮೆಯಿಂ ರಸಿಕಜನತತಿಯ |
ಚೆಂಡಿಕೆಯನೆರಗಿಸುವ ಮೃದುಪದಂಗಳನಾಂತ |
ಮುಂಡಿಕೆಯ ರೂಪುಯೌವನವಿಲಾಸವನು ಬಣ್ಣಿಪರಾರಿಳಾತಳದೊಳು || ೧೦ ||

ಸುಲಲಿತ ಸುಧಾಸೂತಿಸನ್ನಿಭ ನಿಜಾನನದ |
ಜಲಜಾಕ್ಷಿಯಾ ನೃಪಾತ್ಮಜೆಯೊಂದುದಿವಸದೊ |
ಳ್ಕಲಿನವಿಜಯಂಗೆ ಸದ್ಭಕ್ತಿಪೂರ್ವಕದಿನುತ್ತಮಮಪ್ಪ ವಸ್ತುವಿಂದಾ ||
ಅಲವರಿಕೆಯಿಲ್ಲದಭಿಷೇಕಪೂಜೆಯನು ಮನ |
ದೊಲವಿನಿಂ ಮಾಡಿ ಗುರುವಿಂಗೆ ವಂದಿಸಿ ಬಳಿ |
ಕ್ಕಲರ್ವಿಲ್ಲನರಸಿಯಂದದಿ ಸಿದ್ಧಶೇಷೆಯಂ ಕೊಂಡು ನಡೆತರುತಿರ್ದಳು || ೧೧ ||

ಥಳಥಳಿಸೆ ಹಸ್ತಶಾಖಾನಖಪ್ರತತಿ ಪೊರ |
ವಳಯದೊಳ್ಕರಯುಗಮನೆತ್ತಿ ನೀಲೋತ್ಪಲದ |
ಲಲಿತಪ್ರಸೂನದುತ್ತಮ ಸಿದ್ಧಶೇಷೆಯಂ ಮಡಗಿ ನವಮಾಣಿಕ್ಯದಾ ||
ಲಲಿತಪಾತ್ರಂಬಿಡಿದು ನಡೆವ ನೃಪತನುಜೆ ಕ |
ಣ್ಗೊಳಿಸಿದಳ್ಪತ್ತೆಂಟುತಾರೆಸಹಿತಂ ಮೂಡಿ |
ಪೊಳೆವ ಪೂರ್ಣೇಂದುಬಿಂಬಂ ಬೆರಸಿ ಬರ್ಪಿಂದ್ರದಿಗ್ವನಿತೆಯೆಂಬಂದದಿಂ || ೧೨ ||

ಸಾಕ್ಷಾದ್ವಚೋವನಿತೆ ಸಾನುರಾಗದೊಳು ಪ್ರ |
ತ್ಯಕ್ಷಮುತ್ತಮ ಕುಸುಮದಿಂಡೆಯಂ ತನ್ನ ನಿಜ |
ದಕ್ಷಿಣಕರಾಗ್ರದಿಂ ಕೊಡುವಂತೆ ಮಣಿಮಯ ಕಿರೀಟೋತ್ತಮಾಂಗದೊಳಗೆ ||
ಇಕ್ಷುಕೊಂದಂಡಮದಮರ್ದನನ ಮೂಲೋಕ |
ರಕ್ಷಾಮಣಿಯ ಸೇಸೆಯಂ ತಳೆದ ತರುಣ ಹರಿ |
ಣಾಕ್ಷಿಯ ವಿಲಾಸದೇಳ್ಗೆಯನೀಕ್ಷಿಸುತ್ತ ತಲೆಯಂ ತೂಗಿ ತಜ್ಜನಕನು || ೧೩ ||

ಇಂಬುವಡೆದಾ ಮಗಳ ಚೆಲ್ವಿಕೆಗೆ ಹರ್ಷಾವ |
ಲಂಬಿ ಜಿತಶತ್ರುಧರಣಿನಾಥನೊಸೆದಾ ಸ್ವ |
ಯಂಬರದೊಳಲ್ಲದೇ ಮತ್ತಾರು ಬೇಡಿದೊಡೆ ಮನಸಂದು ಕೊಡುವುದಿಲ್ಲ ||
ಎಂಬುದೊಂದಾ ವಾರ್ತೆಯಂ ಕೇಳಿ ಭಗದತ್ತ |
ನೆಂಬರಸು ಚಕ್ರಕೋಟಾಪುರೀನಾಥನಲ |
ರಂಬಸಮರೂಪನಪ್ರತಿಮಪ್ರತಾಪ ಮಹದೈಶ್ವರ್ಯಸಂಪನ್ನನು || ೧೪ ||

ಆ ಸುಗಣಮಣಿ ಮುಂಡಿಕೆಯ ಬೇಡಿ ತನ್ನ ವಿ |
ಶ್ವಾಸಿಗಳ ಕಳುಹಲವರೆಯ್ದಿ ಜಿತಶತ್ರುಧರ |
ಣೀಸತೀವಲ್ಲಭನ ಕಂಡು ಪಾದಾಕ್ರಾಂತರಾಗಿ ವಸುಧಾವಲ್ಲಭಾ ||
ಓಸರಿಸದೇ ನಿಮ್ಮ ನಿಜತನೂಭವೆ ಸದ್ವಿ |
ವಾಸವತಿಯಂ ನಮ್ಮ ನರನಾಥಗೀವುದೆನೆ |
ಭಾಸುರಗುಣಾಭರಣನಾ ನಿಯೋಗಿಗಳ ಕೂಡಿಂತೆಂದು ನುಡಿದನಾಗ || ೧೫ ||

ನಮ್ಮೊಳಗೆ ನಿಮ್ಮೊಳಗೆ ಕೊಳ್ಳುಕೊಡೆಯೇ ಬಯಲ |
ಹಮ್ಮನಾಡಲದೇತಕೀ ಲೋಕದರಿಕೆಯೊಳು ||
ನಿಮ್ಮೊಡೆಯನೀಗ ವಿವರಿಸಿ ನೋಡಿದೊಡೆ ನಮ್ಮ ರವಿಕುಲದ ಸೋಮಕುಲದಾ ||
ಸೊಮ್ಮಿನವನಲ್ಲ ತನಗೀಗ ಬಂದೈಸಿರಿಯ |
ಸುಮ್ಮಾನದಿಂದ ಬೇಡುವುದೀಗ ಬಲ್ಲವರ |
ಸಮ್ಮತವೆಯೆಂಬ ಭೂವರನ ನುಡಿಗುತ್ತರಂಗೊಟ್ಟಿರಿಂತಾ ಸಚಿವರು || ೧೬ ||

ಮುತ್ತುಮಾಂಸದೊಳು ಜನಿಯಿಸಿ ಉಳಿದ ರತ್ನಕ್ಕೆ |
ಮೊತ್ತಮೊದಲಾಯಿತಿಲ್ಲವೆ ಕಾಡಮಿಗದೊಳು |
ತ್ಪತ್ತಿಯಂ ಪಡೆದು ಕಸ್ತೂರಿ ಕರ್ಪುರಕಾಶ್ಮೀರಕೆಣೆಯಾಯ್ತಿಲ್ಲವೇ ||
ಉತ್ತಮದ ರೂಪುರಸಿಕತೆ ಸದ್ವಿಲಾಸಸಂ |
ಪತ್ತುಸಾಹಸವಿತರಣಂಬಡೆದ ಭೂಮಿಪಾ |
ಲೋತ್ತಂಸರೊಳಗೆ ಹಿಂದಂ ಹಿಸಿಕಿನೋಳ್ಪರೇ ಬಲ್ಲವರ್ಧ್ಧರಣಿಪಾಲಾ || ೧೭ ||

ಈ ತೆರದಿ ನುಡಿದವರ್ಗಿಂತೆಂದನಾ ನೃಪತಿ |
ನೀತಿಯೆಂಬುದು ನೀರಮೇಲೆ ತೇಲುವಂತಪ್ಪ |
ಮಾತ ಬಲ್ಲವರೆತ್ತ ತೆಗೆದಂತೆ ಬಹುದದಂ ಕೇಳಿದೊಡೆ ಹುರುಳಾಗದು ||
ಏತರದು ಮಾತದಂತಿರಲಿ ಸದ್ವಂಶಪ್ರ |
ಸೂತಸಲ್ಲದವರ್ಗೆ ಕೂಸಕೊಟ್ಟೊಡೆ ನಗದೆ |
ಭೂತಳಮದಕ್ಕೆ ಸಂದೇಹಮೇ ಅದುನಿಮಿತ್ತಂ ನಿಮ್ಮ ಭಗದತ್ತಗೆ || ೧೮ ||

ಪರಮಸಮ್ಯಗ್ದೃಷ್ಟಿ ಪರಿರಂಜಿತಜ್ಞಾನಿ |
ನಿರುಪಮಚರಿತ್ರೆ ರತ್ನತ್ರಯದ ಮೂರ್ತಿಯಂ |
ಸುರುಚಿರ ಸುವರ್ಣಸಂತಾನಕ್ಕೆಯಲ್ಲದೆ ಸೇರಿಸುವುದು ಚಿತಮಲ್ಲ ||
ನಿರುತದಿಂದೆಂದವರನಾ ಅರಸು ಬೀಳ್ಕೊಡ |
ಲ್ತಿರಿಗಿಬಂದಾ ತಮ್ಮಪುರವರಕ್ಕಾ ನುಡಿಯ |
ನೊರೆಯಲಾ ಭಗದತ್ತಭೂಪಾಲ ಸಿಡಿಲದನಿಗೇಳ್ದ ಹರಿಯಂತೆ ಕೆರಳಿ || ೧೯ ||

ಇರ್ದಿರವಿನಲ್ಲಿ ಹರಿದಾಳಿಯಂ ಮಾಡಿ ತಾ |
ನಿರ್ದೂರನಿನಿಸರೊಳ್ದೂಳಿಗೋಂಟೆಯ ಕೊಂಡು |
ಬಾಳ್ದಲೆಯ ಹಿಡಿದು ತನ್ನಂ ಮೊದಲ್ಕೊಡೆನೆಂಬ ಕೂಸನಾ ಮಂದಿರದೊಳು ||
ಇರ್ದ ವಸ್ತುಗಳನೆಲ್ಲವಂ ಬಾಚಿಕೊಂಡು ಬರ |
ದಿರ್ದೊಡಿವು ಮೀಸೆಯೇ ಎಂದು ಗದ್ಗುಗೆಯ ಹೊ |
ಯ್ದೆರ್ದು ಕೋಪಿಸುವಾಗ ಸದ್ಭುದ್ಧಿಯೆಂಬ ಮಂತ್ರೀಶನಿಂತೆಂದನಾಗ || ೨೦ ||

ಒಚ್ಚಯಕೆ ಬದುಕಬೇಕೆಂಬ ನೀತಿಯ ಬಿಟ್ಟು |
ತುಚ್ಚತನಕೀಡಾಗಿ ಬದುಕುವರೆ ದೊಡ್ಡವ |
ರ್ಮಚ್ಚರಂ ಮಾಡಿದವನತಿಪರಾಕ್ರಾಮಿ ನನ್ನ ಸೇನೆಯಿಂದವನ ಸೇನೆ ||
ಹೆಚ್ಚೆಂದು ಹೇಡಿವಟ್ಟಾರು ಕಾರ್ಯಂಗಳನು |
ವೊಚ್ಚತಂ ಪ್ರಾಣವಳಿದಲ್ಲದೇ ಕೊಡುವರೆ |
ಹುಚ್ಚರಲ್ಲಾ ಇಂತಿದಂ ತಿಳಿಯದವರು ವಿಶ್ವಂಭರಾಮಂಡಲದೊಳು || ೨೧ ||

ಏಣಾಕ್ಷಿಯರನೆಣಿಸಿ ಎದೆಗೆಟ್ಟ ಮೋಹಿಗ |
ಳ್ಕೇಣಕ್ಕೆ ಬದುಕಬೇಕೆಂಬುದೆ ಭಾವಿಸರು |
ನಾಣಳಿವುದಿಂತಿದರಿನೆಂದೆಂಬುದಂ ಕನಸುಮನಸಿನೊಳಗಿನಿಸರಿಯರು ||
ಊಣೆಯಮನೆಣಿಸರು ರ್ವೀತಳದೊಳಪಕೀರ್ತಿ |
ಹೂಣೆಹಬ್ಬುವುದೆಂಬುದಂ ನೆನೆಯರಾ ತಮ್ಮ |
ಪ್ರಾಣವಳಿವಲ್ಲಿಪರಿಯಂತರಮುಮೆಂಬುದಿದು ಭೂಲೋಕದೊಳ್ಪ್ರಸಿದ್ಧ || ೨೨ ||

ಎಂದಿವಾದಿಯ ಪಲವು ತೆರದ ನೀತಿಯನುಸಿರ |
ಲೊಂದಿನಿಸು ಮನಕೆ ತಾರದೆ ಕಿವುಡಗೇಳ್ವರಸ |
ನಂದಮಂ ಕಂಡು ಕಡುನೊಂದಾ ವಿನಾಶಕಾಲಕ್ಕೆ ವಿಪರೀತಬುದ್ಧಿ ||
ಬಂದಲ್ಲದೇ ಮಾಣದಾ ಕೌರವಾಧೀಶ |
ಮುಂದರಿಯದೇ ದುರ್ಬುತನದಿಂದ ಕೆಟ್ಟುಹೋ |
ದಂದಮಾಯ್ತಲ್ಲಾ ಎನುತ್ತ ಬಿಸುಸುಯ್ದು ಬಳಿಕಿಂತು ಬಿನ್ನಪಗೆಯ್ದನು || ೨೩ ||

ಈ ಮಾತನುಲ್ಲಂಘನಂ ಮಾಳ್ಪೆನೆಂಬೆಯಾ |
ಸಾಮಮಂ ಮಾಡಿಯತಿಬಹಳವಲವೆರಸಿ ಪರ |
ಭೂಮೀಶರಂ ತಾಗೆ ಸೊಡರುರಿಯ ಮೇಲೆ ಬಿರುಗಾಳಿ ಬೀಸಿದವೊಲಹುದು ||
ವೈಮನಸಿನಿಂದ ಮುಂದಂ ನೋಡದೇ ಸಕಲ |
ಸಾಮಗ್ರಿಯಂ ಕೂಡಿಕೊಳ್ಳದೇ ನಡೆದು ಸಂ |
ಗ್ರಾಮಮಂ ಮಾಡಿದೊಡೆ ಸೊಡರುರಿಯ ಮೇಲೆ ಬೀಸಿದ ಪತಂಗನವೊಲಹುದು || ೨೪ ||

ಸಲ್ಲದೀ ಕೃತ್ಯವೆಂದೆಂಬ ಸಚಿವನ ಮಾತ |
ನುಲ್ಲಂಘನಂ ಮಾಡಿಯುನ್ಮತ್ತಯೌವನಂ |
ಪೊಲ್ಲಮುನಿಸಿಂದ ಪೊರಮಟ್ಟು ಪೊಳಲಂ ತನಗೆ ಮಾರ್ಮಲೆವರಿಲ್ಲವೆಂದು ||
ದಲ್ಲಾಳಿತನದಿಂದ ದಂಡುನಡೆದಂ ಧರಣಿ |
ಯೆಲ್ಲಮಾ ಬಲುಭಾರಕಲ್ಲಾಡುವಂದದಿಂ |
ಬಲ್ಲಿದಂ ಭಗದತ್ತಭೂಪಾಲಕಂ ದಂಡಧರದಂಡು ನಡೆವ ತೆರದಿ || ೨೫ ||

ತಂಡತಂಡದ ಪೌಜುವೆರಸಿ ವಿಶ್ವಂಭರಾ |
ಮಂಡಲಂ ತೆರಪಿಲ್ಲವೆಂದೆಂಬ ಮಾಳ್ಕೆಯೊಳ |
ಖಂಡಿತ ಬಲಂಬೆರಸು ಬಿಟ್ಟಸುಠಿಯಲ್ಲಿ ಬಿಡುದಾಣಮಂ ಬಿಡಲೊಲ್ಲದೆ ||
ಗಂಡುಗಲಿ ಗಡಿಯಂಕಭೀಮರೆನಿಪುದ್ದಂಡ |
ಮಂಡಳೇಶ್ವರಗೆಡಬಲಂಬಿಡಿದು ಬರಲಾಪ್ರ |
ಚಂಡಪ್ರತಾಪಿ ನಿಜವೈರಿಭೂಪಾಲಕನ ನಾಡಗಡಿವಾಡಕೆಯ್ದಿ || ೨೬ ||

ಆರವೆಯ ತರಿದು ಕೆರೆಗಳನೊಡೆದು ಸುಟ್ಟಗ್ರ |
ಹಾರ ಮೊದಲಾದೂರುಗಳನು ತುರುಸೆರೆಯ ಹಿಡಿ |
ದಾರಯ್ಯದಿದಿರಾದ ಬಲುದುರ್ಗಗಳನು ಧೂಳೀಪಟ್ಟಮಂ ಮಾಡುತ ||
ಆರುಭಟೆಯಿಂದ ದಾಳಿಯನಿಟ್ಟು ನಿಸ್ಸಾಳ |
ಭೇರಿದುಂದುಭಿಯ ರವ ಘೂರ್ಣಿಸಲ್ಮೂವಳಸಿ |
ವಾರಣಾಸೀಪುರವ ಮುತ್ತಿದಂ ಜೇನಹುಳು ಝೇಂಕರಿಸಿ ಮುತ್ತುವಂತೆ || ೨೭ ||

ನೆಲಕೆ ಬಾಗಿಸಿದ ಪಲವರಿಯ ಡೆಂಕಣಿ ಕವಣೆ |
ತೊಲೆ ಸಬಳ ಹೇರಿಟ್ಟಿ ದಸಿಗುಂಡು ಕಾಸುವಂ |
ಬಲಿ ಸಾರಮಾರಿ ನೆಲಗುಮ್ಮ ಬಿಸಿಯೆಣ್ಣೆ ಹುರಿಮಳಲು ಹಾವಿನಹೇಳಿಗೆ ||
ಬಲುಹುಲ್ಲದೊಂಡೆ ಬಿಲ್ಲಂಬುಕತ್ತರಿಪಂದಿ |
ದಲೆ ಹಾರೆ ಬಿರಿಕೊರಡು ಪೆಟಲ ತಿರುಗಣಿಬೀಸು |
ವಲೆ ತಳಿಯ ಮರದ ಗೊಂದಣದ ಸಂವರಣೆಯಿಂದಾ ಕೋಂಟೆ ಕಣ್ಗೊಪ್ಪಿತು || ೨೮ ||

ಹೊತ್ತಿಸಿದ ಹುಲ್ಲದೊಂದೆಗಳ ಕೇಸರಿಗಳಿಂ |
ಸುತ್ತುವರೆದೆಸುವ ಶರಸಂತತಿಯ ಸಮಿತಿಯಿಂ |
ದುತ್ತಮದ ಬೀರರಬಿರುದನಿರದೊದರ್ವ ಕಲಕಲಮೆಂಬ ಮಂತ್ರದಿಂದ ||
ಬಿತ್ತರಂಬಡೆದು ನರಯಾಗಮಂ ಮಾಡುವೆನೆ |
ನುತ್ತ ಸಮವರ್ತಿಯೆಂದೆಂಬ ಮಾಡುವೆನೆ |
ನುತ್ತ ಸಮವರ್ತಿಯೆಂದೆಂಬ ದೀಕ್ಷಿತನು ಬಗೆ |
ವೆತ್ತು ರಚಿಸಿದ ಹೋಮಕುಂಡದಂತಾ ನಗರಿ ದಾರುಣತರಂಬಡೆದುದು || ೧೯ ||

ಹೂಳಿ ಯಗಳಂ ಹುಲ್ಲಹಾಕಿ ಡೆಂಕಣಿಗಳಂ |
ಮೇಳೈಸಿ ನಡೆಚಪ್ಪರವನು ನಡೆಯಿಸಿ ಕೋಂಟೆ |
ಯಾಳು ತಲೆಯೆತ್ತಲೊಡನಾ ಬದ್ದರದ ಮರೆಯೊಳಿದ್ದ ಬಿಲ್ಲಾಳ್ಗಳೆಲ್ಲ ||
ಬೀಳಲೆಸೆಲೆಗ್ಗೆಯಂ ನೊಂಕಿ ಸೇತುವನೊಟ್ಟಿ |
ಯಾಳೋಚನೆಯ ಮಾಡದಿಕ್ಕಿ ನಿಚ್ಚಣಿಗೆಯಂ |
ದೂಳಿಗೋಂಟೆಯ ಕೊಳ್ಳಬೇಕೆಂಬ ಪಡಿಯರರ ಕಲಕಲಂ ಕರಮೊಪ್ಪಿತು || ೩೦ ||

ದೊರೆದೊರೆಗಳೆಲ್ಲ ಹೊಗದ ಕೋಂಟೆಯಂ ಕಂಡು |
ಪಿರಿದು ಕೋಪಾಟೋಪದಿಂದ ತಂತಮ್ಮ ಕರಿ |
ತುರುಗರಥಸಂತತಿಯನಿಳಿದು ಸೀಸಕಜೋಡುಸವಗಮಂ ತೊಟ್ಟುಕೊಂಡು ||
ಭರದಿನಾಲಗಳ ತಿಟ್ಟಿಗೆ ಬಂದು ನಿಂದು ಬ |
ದ್ದರ ಮರೆಯೊಳ್ನೂಲಹರಿಗೆಯಂ ಹಿಡಿದು ತ |
ದ್ವರವೀರಭಟವಿತತಿಯಂ ಹತ್ತಿಹತ್ತಿಯೆಂದೊತ್ತಂಬರಿಸುತಿರ್ದ್ದರು || ೩೧ ||

ಹಿಂದುಮುಂದಂ ನೋಡದಿಕ್ಕಿ ನಿಚ್ಚಣಿಗೆಯಂ |
ಗೊಂದಣಗೊಂಡಾಳ ತಲೆಗಳಂ ಹತ್ತಿ ಬ |
ಲ್ಪಿಂದ ಮೇಗಣ ಕಲ್ಲಬಿಲ್ಲದಸಿಗಳದೊಂದು ಖುರಪಾಟಕಿನಿಸಂಜದೆ ||
ಮುಂದೆ ಬಿಳ್ದಾಳಹೆಣನಂ ಮೆಟ್ಟಿಮೇಲಕೆ |
ಯ್ತಂದು ಕೋಂಟೆಯ ಹತ್ತಿ ತೆನೆಗಳೊಳ್ಕಾಲಿಟ್ಟು |
ನಿಂದುದಾ ವೀರಭಟವಿತತಿ ವೀರಸ್ವರ್ಗಕಿರದೆ ದಾಳಿಡುವ ತೆರದಿ || ೩೨ ||

ಕಡುಭರದಿ ಹತ್ತಿ ಕೋಂಟೆಯ ಮೇಲೆ ಕುದುರೆ ಕಾ |
ಲಿಡುವುದಂ ಕಂಡೆಕ್ಕಟಿಗಳೊಳಗಣಿಂ ಬಂದು |
ಕೆಡೆವಂತೆ ಹುಯ್ದು ಬಿಳ್ವಾಗಳಾ ಕಾಲ್ಗಳಂ ತೆನೆಗಳೊಳ್ಕಟ್ಟಿ ಬಿಗಿಯೆ ||
ಬಿಡದೆ ತಲೆಕೆಳಗಾಗಿ ಜೋಲುತ್ತಮಿರ್ದು ಕೆಳ |
ಗಡೆ ಹತ್ತುವರನಂಜದೇ ಹತ್ತಿಯೆನುತ ಕ |
ಯ್ಗೊಡುತ ಹತ್ತಿಸಿಕೊಂಬ ಭಟತತಿಯ ಬೀರಮನದೇನೆಂದು ಬಣ್ಣಿಸುವೆನು || ೩೩ ||

ಅರುಣಜಲವೆಡೆಬಿಡದೆ ಪೊರೆಯ ಮೊದಲಿಂದ ತುದಿ |
ವರಮಿನಿಸು ಬಿಡುವಿಲ್ಲದೇ ಹತ್ತುವಾಳ್ಗಳಿಂ |
ಪಿರಿದು ರಂಜಿಸಿದುದಾ ಪುರವರದ ಕೋಂಟೆಯಂತಕನೆಂಬ ಚಕ್ರೇಶನೂ ||
ನರಲೋಕಕೆಯ್ತಂದು ಬಿಟ್ಟ ದಂಡಿನೊಳು ತ |
ನ್ನರಮನೆಗೆ ಬಳಸಿ ಕೆಂಬಣ್ಣದಪರಸ್ಥಲದ |
ಪರಿರಂಜಿಸುವ ಚಿತ್ರಪಡದ ಸರವತಿಗೆಯಂ ಬಿಟ್ಟಂತಿರೊಪ್ಪಿತಾಗ || ೩೪ ||

ಹುರಿದ ಮಳಲಂ ಹುಯ್ದು ಹುಲ್ಲಕಿಚ್ಚಂ ಹಿಡಿದು |
ಹರಿವ ಹಾವಂ ಹಾಕಿ ಕಾಸಿದಂಬಲಿಯೆರೆದು |
ಪರಿಪರಿಯ ಡೆಂಕಣಿಗಳಿಂದ ತಲೆವೊರೆಯಿಂದ ಕೆಯ್ಯಿಂದ ಕವಣೆಯಿಂದ ||
ಸುರುಹಿ ಕಲ್ಲಂ ಪಂದಿದಲೆಯಂಬುಪೆಟಲುದಸ |
ಮರಸಾರಮಾರಿಯಿಂದಾ ಹತ್ತುವಾಳ್ಗಳಂ |
ಧರೆಗುರುಳ್ವ ತೆರದಿ ಕೊಂದಿಕ್ಕಿದರ್ಪೆಣದಿಂದಮಾ ಪರಿಖೆ ಪೂಳುವಂತೆ || ೩೫ ||