ಶ್ರೀಮದರ್ಹದ್ದಾಸನಾ ನಿತಂಬಿನಿಯರುಂ |
ಪ್ರೇಮದಿಂ ಪೇಳ್ದ ಕಥೆಯಂ ಕೇಳಿ ವೈರಾಗ್ಯ |
ವಾ ಮನದೊಳೊಗೆದು ಭೂಪಾಲನುದಿತೋದಯಂ ದೀಕ್ಷೆಯಂ ತಳೆದನಿಂತು || ಪಲ್ಲ ||

ಕಾದಲೆಯ ವಿರಹದಿಂ ಕಡು ಬೆಂದು ನೊಂದು ಬಂ |
ದಾದರಿದಿನಾ ಮರದ ಕಾವಳದೊಳಿರ್ದು ತಮ |
ಗಾದ ಸಮ್ಯಕ್ತ್ವದ ಮಹಾತ್ಮ್ಯೆಯಂ ತದ್ವೈಶ್ಯನಾ ಸ್ತ್ರೀಯರುಂ ಪೇಳಲು ||
ಚೋದಿಗಂಬಟ್ಟು ಕೇಳ್ದಾ ಮಹೀಪಾಲನುದಿ ||
ತೋದಯನ ಮಹಾಂಧಕಾರಮೇ ಹರೆವಂತಿ |
ರಾದುದಾ ಹರೆವ ಹಿಪ್ಪರಿಕೆಯಂದಿನ ದಿನದ ಬೆಳಗಪ್ಪ ಜಾವದಲ್ಲಿ || ೧ ||

ಮಾನವರ್ಕೇಳಿ ಮನಗೊಂಡು ಶ್ರುತದೃಷ್ಟಾನು |
ಮಾನದೊಳ್ ಪಿರಿದುಂ ವಿಚಾರಮಂ ಶ್ರುತದೃಷ್ಟಾನು |
ಮಾನಿತಂಬಡೆದ ಜಿನಧರ್ಮಮೇ ಧರ್ಮಮಲ್ಲದೆ ಉಳಿದ ಧರ್ಮಂಗಳು ||
ತಾನಿವೆಲ್ಲಂ ಮಿಥ್ಯೆಯೆಂದು ಭೂಲೋಕಕ್ಕೆ |
ಸಾನಂದದಿಂ ಸಾರುವಂತೆ ಕೂಕೂ ಎಂದು |
ದಾ ನಳಿನಸಖನುದಯದೊಳ್ತಾಮ್ರಚೂಡಸಂತಾನಮಾ ಪುರವರದೊಳು || ೨ ||

ಭೂಕಾಂತನುದಿತೋದಯನ ಶುದ್ಧಚಿತ್ತದೊಳ |
ಗಾ ಕಾಲಲಬ್ಧಿಯುದಯಂಗೆಯ್ಯಲದರೊಡನೆ |
ನಾಕಾಧಿಪತಿಯ ದಿಙ್ಮುಖದಲ್ಲಿಯರುಣೋದಯಂ ಮನೋಹರಮಾದುದು ||
ಆ ಕೋವಿದನ ಹೃದಯಕಮಲವಿಕಸದೊಡನೆ |
ಯಾ ಕನತ್ಕಂಜನಪ್ರತಾನವಲರೇರಿದುವು |
ಲೋಕೈಕಚಕ್ಷುವುದಯಂಗೆಯ್ವ ಸಮಯದೊಳಗತ್ಯಂತ ಶೋಭೆವಡೆದು || ೩ ||

ಗಿಳಿಗಳೊಳ್ನುಡಿ ವೇದಗಳನೋದುವಾ ದ್ವಿಜಾ |
ವಳಿಯುಲುಹು ಚೈತ್ಯಗೃಹದೊಳ್ದೇವತಾಸ್ತೋತ್ರ |
ಗಳನುಸಿರ್ವ ಯತಿನಿಕಾಯದ ಮಂತ್ರಘೊಷವೆಲ್ಲೆಡೆಯ ದೇಗುಲಗಳೊಳಗೆ ||
ಮೊಳಗುವ ಸಮಸ್ತ ವಾದ್ಯಧ್ನಿಯಕಾರಮಂ |
ಗಳಪುವ ಸುಗೀತಕಾರರ ಬಣ್ಣಸರಗಳಾ |
ಪೊಳಲೊಳೆಡೆವಿಡದೆ ಘೋರ್ಣಿಸಿದುವಾ ಮುನ್ನೇಸರುದನಿಸುವಸಮಯದಲ್ಲಿ || ೪ ||

ಒಡಲು ಹಿಡಿಯದ ತೆರದಿನುಂಡಖಲ್ತಲೆಯನೆಡೆ |
ವಿಡದೆ ಕಾರುವ ತೆರದಿ ಕಜ್ಜಳಮನುಗುಳಿದವು |
ಉಡುಗಿದುದು ರಾತ್ರೆ ನಮಗಿನ್ನು ಬದುಕಿಲ್ಲೆಂದು ನೆನೆದು ನಡುನಡುಗುವಂತೆ ||
ನಡುಗಿದುವು ದುಷ್ಟಜನಮೀ ತೆರದಿ ಮರಣಮಂ |
ಹಡೆವರೆಂಬುದನರಿಪುವಂದದಿಂದುರಿದುರಿದು |
ಕೆಡುತಿರ್ದುವಾ ಕಟ್ಟಕಡೆಯಿರುಳಿನಲ್ಲಿ ಸೊಡರೋಳಿ ಮನೆಮನೆದಪ್ಪಣೆ || ೫ ||

ಇಂತೊಪ್ಪುವರುಣೋದಯದ ಸಮಯದಲ್ಲಿ ಭೂ |
ಕಾಂತನಾ ಮಂತ್ರಿಯುಂ ತಚ್ಚೋರನುಂ ಪಿರಿದು |
ಸಂತೋಷದಿಂದಮಾ ವೈಶ್ಯವಿಭುವಾ ಸರಿಯರುಸಿರ್ದ ಕಥೆಗಳನು ಕೇಳಿ ||
ಅಂತರಂಗದೊಳಾವರಿಸಿದ ನಿರ್ವೇಗದಿಂ |
ತಂತಮ್ಮ ಬೀಡಿಗಾತುರದಿಂದ ಬಂದು ನಿ |
ಶ್ಚಿಂತದಿಂ ನಸುನಿದ್ರೆಗೆಯ್ಯುತಿರಲಸ್ತಾದ್ರಿಯೇರಿದಂ ಹರಿಣಾಂಕನು || ೬ ||

ವಿದಿತ ಸದ್ಗತಿಚರಿತನಿರತರತಿಸುಖದುಃಖ |
ವೊದಗುವ ಸಮಯದಲ್ಲಿ ಒಂದೇಸಮಾನದುರು |
ಮುದವನೆಯ್ದುವರೆಂಬುದಂ ಮಹೀಮಂಡಲಕ್ಕರಿಕೆಯಂ ಮಾಳ್ಪ ತೆರದಿ ||
ವಿದಿತಸದ್ಗತಿಚರಿತನಿರತನಾ ಪೂರ್ಣೇಂದು |
ಉದಧಿಯೊಳಗಸ್ತಮಯಾನಾದನಾ ಉದಯದೊಳ |
ಗೊದಗುವಾ ರಾಗಮಾ ಕಾಂತಿಯಾವೃತ್ತತೆಯನಿನಿಸಿರದೆ ಕೈಕೊಳುತ್ತ || ೭ ||

ಅಂಬರವಲಯಮೆಂಬ ಗೂಡಾರದಲ್ಲಿ ನೆರೆ |
ತುಂಬಿದ ಮಹಾಂಧಕಾರಂ ಕಡೆಲ್ಬೇಕೆನು |
ತ್ತಂಬುಜಭವಂ ಧರಾತಳವೆಂಬ ಪಾತ್ರೆಒಳ್ನೇತೆತೀವಿದಂಬುರಾಶಿ ||
ಎಂಬ ತೈಲವನುದಯಗಿರಿಯೆಂಬ ವರ್ತಿಯುಮ |
ನಿಂಬಾಗಿ ಮಡಗಿ ಹೊತ್ತಿಸಿದ ಹೆಜ್ಜೋಡರೋ ಇ |
ದೆಂಬಂದದಿಂ ತಳತ್ತಳಿಸುತ್ತುದಯಮಾದುದುಷ್ಣಾಂಶುಬಿಂಬಮಾಗ || ೮ ||

ಉಪ್ಪುನೀರಂ ದಿನಂಪ್ರತಿ ಪಾಕತನದಿಂದ |
ತಪ್ಪದೇ ಹೀರಿದಾ ತಲೆಬಿಗುಡು ಗಗನದೊಳ |
ಗೊಪ್ಪದಿಂಪರಿವ ದೇವಾಪಗೆಯ ಮಧುರತರ ವಾರಿಯ ಹೀರಿಹೀರಿ ||
ಚಪ್ಪರಿಸಿದಲ್ಲದೇ ಹೋಗದೆಂದೆನುತುಮಾ |
ನೆಪ್ಪಿಂಗೆ ತದ್ವನಧಿಯಿಂದ ವಡಬಾಗ್ನಿಯೇ |
ಉಪ್ಪರಿಸಿ ನೆಗೆವಂತೆ ಉಷ್ಣಕಿರಣಂ ಮೂಡಿನೆಗೆದುದಂಬರತಳಕ್ಕೆ || ೯ ||

ಉದಯರಾಗಂಬೆರಸಿಯುದದಧಿಯ ಮಹಾಗಾಧ |
ದುದರಮೆಂದೆಂಬ ಶಯ್ಯಸದನದಿಂದೀಗ |
ಳುದಯಗೆಯ್ದುದಯಗಿರಿಶಿಖರ ಕಬ್ಜಾತಬಾಂಧವನೊಸೆದು ಬಂದೇರಿದಂ ||
ಉದಿತೋದಯಾವನೀಪತಿ ನಿನ್ನ ನಿಜಹೃದಯ |
ದುದಯರಾಗಂಬೆರಸಿಯುಪ್ಪವಡಿಸಾ ಎನುತು |
ಮುದಯರಾಗದೊಳೊಪ್ಪಮಂ ಪಡೆದು ಪಾಡ ಪಾಡುವರ ಪಾಡೊಪ್ಪಿತಾಗ || ೧೦ ||

ಆ ಉದಯದೊಳಗೆದ್ದು ಮುಖಮಜ್ಜನಂ ಮಾಡಿ |
ದೇವಾಧಿದೇವಂಗೆಯಭಿವಂದನಂಗೆಯ್ದು |
ಭಾವಭವನಂತೆ ಸಿಂಗರಿಸಿಯೋಲಗಕೆಯ್ದಿಯಾ ಮಂತ್ರಿಯಾ ಚೋರನಂ ||
ಭೂವರಂ ಕರಿಸಿಯೀ ತೆರದಿಂದ ನುಡಿದನಂ |
ದಾ ವೈಶ್ಯಸತಿಯರುಸಿರ್ದೀ ಕಥನಮಂ ಕೇಳಿ |
ಭಾವಿಸದುದಾಸೀನಮಂ ಮಾಡಿದಾ ಲಂಡೆ ಕುಂದಲತೆಯಂ ಕರೆಯಿಸಿ || ೧೧ ||

ನುಡಿದ ಬಾಯಿಗೆ ತಕ್ಕ ಶಿಕ್ಷೆಯಂ ನಾವಿನಿಸು |
ತಡೆಯದೇ ಮಾಡಿಸಲ್ಬೇಕೆಂದು ಕೋಪಿಸುವ |
ನುಡಿಗೇಳಿಯಾಮಂತ್ರಿಯಿಂತೆಂದು ಕೈಮುಗಿದು ಬಿನ್ನಪಂಗೆಯ್ದನಾಗ ||
ಪೊಡವಿಯಧಿಪತಿ ಕೇಳು ನಿನಗೆಯರ್ಹದ್ದಾಸ |
ಕಡುಸಲುಗೆವಂತನದರಿಂದವಳನಿಂತು ಮೊಗ |
ಗೆಡಿಸುವುದು ಮತವಲ್ಲ ನಾವಾತನಾಲಯಕೆ ಪೋಗಿ ತತ್ಕುಂದಲತೆಯ || ೧೨ ||

ಬರಿಸಿ ನೀನನುಪಮಚರಿತ್ರವಂತರ ಕಥೆಗೆ |
ಉರುಹರ್ಷಮಂ ಮಾಡಿ ನಂಬುದುಮಂ ಬಿಟ್ಟು |
ದುರುಳತನದಿಂದಿವೆಲ್ಲಂ ಮಿಥ್ಯೆಯೆಂಬುದಕ್ಕೇನ ಸಲವೆಂದು ಕೇಳಿ ||
ನೆರೆಯ ಮೆಚ್ಚಿಸಿಯಾಜ್ಞೆಯಂ ಮಾಡಿಸಲ್ಬೇಕು |
ತರಹರದಿನೆಂಬ ನುಡಿಗೇಳಿಯದನನುಕರಿಸಿ |
ಧರಣೀಶನರಮನೆಯ ಪೊರಮಟ್ಟು ತದ್ವೈಶ್ಯನಾಲಯಕೆ ನಡೆತಂದನು || ೧೩ ||

ಪರಿವೃತಂಗೊಂಡು ಪರಿಮಿತಪರಿವೃಢರ್ಬರ |
ಲ್ಪರಿತೋಷದಿಂದ ತನ್ನೊಡನೆ ಎಡಬಲವಿಡಿದು |
ಪರಿಶುದ್ಧನಾ ಪ್ರಧಾನೋತ್ತಮನುಮಾ ಚೋರನುಂ ಬರಲ್ಕಾಸದನದಾ ||
ಪರಿರಂಜಿಸುವ ಪರಮನಾಲಯಕ್ಕಿರದೆಯ್ದೆ |
ಪರಿಪರಿಯ ನುತಿಗಳಂ ನುತಿಯಿಸಿ ಬಳಿಕ್ಕ ತ |
ತ್ಪರಿಣಾಮಹೃದಯನರ್ಹದ್ದಾಸವೈಶ್ಯನೊಳಗಿಂತುಸಿರ್ದನಾ ಭೂಪನು || ೧೪ ||

ಇರುಳು ನೀನಾ ಸತೀಜನಕೆ ಬಳಿಕಾ ಸತಿಯ |
ರುರುಮುದದಿ ನಿನಗೆ ಪೇಳ್ದಾ ಕಥನಮಂ ಕೇಳಿ |
ಭರಭಕ್ತಿಯಿಂದ ನೀನುಂ ನಿನ್ನುಳಿದ ಸತಿಯರೆಲ್ಲರಿಚ್ಛಾಮಿಯೆಂದು ||
ಪರಿಣಮಿಸುವುದ ಕಂಡು ತಾನಿನಿಸು ಮನಗೊಡದೆ |
ದುರುಳೆ ನಿನ್ನಾ ಕಿರಿಯಸುದತಿ ನಾನಿಂತಿದಂ |
ಪರಿಭಾವಿಸುವೆನೆ ನೀವುಸಿರ್ದುದೆಲ್ಲಂ ಮಿಥ್ಯೆಯೆಂದಳಂತದು ನಿಮಿತ್ತ || ೧೫ ||

ಕರೆಸವಳನೆನುತ ಮತ್ತಾ ಕುಂದಲತೆಯುಮಂ |
ಕರೆಸಿ ಚೋರನ ಪಿತಂ ರೂಪ್ಯಖುರನಂದೆಮ್ಮ |
ವರಜನಕನೊಡನೆ ದುರುದುಂಬಿತನಿಂದುಣುತ್ತೀ ಮಂತ್ರಿವರನ ಪಿತನಾ ||
ಉರುತಂತ್ರದಿಂ ಸಿಲ್ಕಿ ಶೂಲದೇರಿಂ ಸತ್ತು |
ನರಕಕ್ಕೆ ಪೋಪವಂ ಜಿನದತ್ತನೊಸೆದಿತ್ತ |
ಪರಮಪಾವನ ಪಂಚದದುಚ್ಚರಣೆಯಿಂದ ಸಗ್ಗದೊಳ್ಜನಿಸಿಬಂದು || ೧೬ ||

ಅತಿವೃದ್ಧರೂಪನವಧರಿಸಿ ದಂಡಂಬಿಡಿದು |
ಚತುರಂಗಸೇನೆಯಂ ಬಡಿದು ತದ್ಭೂವರನ |
ನತಿರೌದ್ರರೂಪಿನಿಂ ಬೆನ್ನಟ್ಟಿಬಂದು ಜಿನದತ್ತಸೆಟ್ಟಿಯ ಮರೆಯನು ||
ಅತಿಭೀತಿಯಿಂದ ಪುಗಲಂತದಂ ಕಂಡು ತ |
ನ್ನತಿಶಯಾಕಾರಮಂ ತೋರಿ ತತ್ಕಥನದು |
ನ್ನತಿಕೆಯಂ ಪೇಳ್ದ ಪ್ರತ್ಯಕ್ಷಮಂ ಕಂಡು ನಾನಂಬೆನೆಂದೆನ್ನಬಹುದೇ || ೧೭ ||

ಪಾವನಚರಿತ್ರೆ ಜಿನದತ್ತೆಯ ಮಹಾತ್ಮೆಯಂ |
ಭೂವಿನುತೆ ಸೋಮೆಯ ಚರಿತ್ರಮಂ ಮಂತ್ರಿಗಳ |
ದೇವನಾ ಸೋಮಶರ್ಮನ ಸತ್ಯಮಂ ಮುಂಡಿಕೆಯದೊಂದು ಸಮ್ಯಕ್ವ್ತಮಂ ||
ಭಾವೆ ಪದ್ಮಶ್ರೀಯ ಸತ್ಕಥನಮಂ ಮತ್ತ |
ಮಾ ಉಮಯನೆಸೆವ ಸುವ್ರತಮನರ್ಹದ್ದಾಸ |
ನಾ ವಿಮಲರತ್ನತ್ರಯದ ಕಥೆಯುಮಂ ನಚ್ಚೆನಂಬೆನಾನೆನಲುಬಹುದೇ || ೧೮ ||

ಸನ್ನುತಂಬಡೆದ ಸಮ್ಯಕ್ತ್ವದ ಮಹಾತ್ಮ್ಯೆಯಂ |
ಚೆನ್ನಾಗಿ ಕಂಡು ಪೇಳ್ದಾ ಕಥನಮಂ ಕೇಳಿ ನನ್ನ |
ಮನಸೊಡಬಡುವುದಿಲ್ಲೆಂಬುದಿದು ಕಲಿಯುಗದ ಮಹಿಮೆ ಕಂಡಾ ||
ನಿನ್ನ ಗುಣವಲ್ಲವೆಂದೆಂಬ ನುಡಿಯ ಕೇಳಿ |
ತನ್ನ ಕರಯುಗಲಮಂ ಮುಗಿದೆಲೇ ದೇವ ಕೇಳಿ |
ಳೆನ್ನ ಬಿನ್ನಪವನೆಂದು ಕುಂದಲತೆಯಿಂತು ಬಿನ್ನಪಂಗೆಯ್ದಳಾಗ || ೧೯ ||

ಇಂತೆಸೆವ ಜಿನದರ್ಶನದ ಮಹಿಮೆಯ ಕಂಡು |
ಪಿಂತಣಘವಶದ ಸಂಸಾರಕ್ಕೆ ಹೆಡ್ಡಯಿಸಿ |
ಸಂತತಂ ಸುಖಮೀವ ಮುಕ್ತಿಪದಕೆಯ್ದಿಸುವ ತಪಸಿನೊಂದುದ್ಯೋಗಕೆ ||
ಚಿಂತೆಯಂ ಮಾಳ್ಪುದೆ ಸಮ್ಯಕ್ತ್ವಮೆಲೆ ಮಹೀ |
ಕಾಂತ ಕೇಳುಳಿದುವೆಲ್ಲಂ ಮಿಥ್ಯೆ ಭಾವಿಸಿದೊ |
ಡಂತದುನಿಮಿತ್ತಮಿವರುಸಿರ್ದ ಕಥನಕ್ಕೆ ನಚ್ಚುವುದಿಲ್ಲವೆಂದು ನುಡಿದೆಂ || ೨೦ ||

ಹರಿಗೋಲ ಬಿಸುಟು ಹೊಳೆಯಂ ಕಡೆವೆನೆಂದೆಂಬ |
ತೆರನಲ್ಲವೇ ಭವಾಂಬುಧಿಯನೀ ತಪದಿಂದ |
ನೆರೆಲಂಘನಂ ಮಾಳ್ಪೆನೆಂಬವರ ಪಿಡಿದು ಹಗ್ಗವನು ಬೆಟ್ಟವನೇರದೆ ||
ಬರಿನೂಲಹಿಡಿದು ಮೇಲಕೆ ಹೋಗಬೇಕೆಂಬ |
ನೆರೆ ಹೆಡ್ಡರಂತಲ್ಲವೇ ಊರ್ದ್ವಲೋಕಕ್ಕ |
ಡರುವ ಸಂಯಮವಿಲ್ಲದೇ ಪೋಪೆನೆಂಬರ್ಭೂಪಾಲಚೂಡಾಮಣಿ || ೨೧ ||

ಪಾಲುಂಬುವರ್ಪಳಸುಗೊಳಿಗಿಚ್ಛೈಸುವರೆ |
ಕಾಲೊಳಗೆ ನಡೆವುದಕ್ಕೆಣಿಕೆಮಾಡುವರೆ ಯಾಂ |
ದೋಳನಂಗೆಯ್ದವರ್ಪಾಳ್ಮನೆಗೆ ಮನಗೊಡುವರೇ ರತ್ನಮಯಹರ್ಮ್ಯದಾ | \
ಮೇಲಣೈಸಿರಿವಂತರಧಿಕ ಸೌಖ್ಯಮನೀವ |
ಮೂಲೋಕಕಗ್ಗಳವೆನಿಪ್ಪ ತಪಮಂ ಬಿಟ್ಟು |
ಲೋಲುಪ್ತರಾಗುವರೆ ಸಂಸಾರಬಂಧನಕೆ ಬಲ್ಲವರ್ಧರಣಿಪಾಲಾ || ೨೨ ||

ಅಟುಳಿಕತನದಿನ ನ್ಯಾಯದಿಂದಾ ಪಲವು ||
ಕೋಟಿಕಾಲಂ ಮೊದಲ್ನಡೆದ ಫಲದಿಂದ ಬಹು |
ಕೀಟಕಂ ಮೊದಲಾದ ಗತಿಗಳೊಳ್ಜನಿಸಿ ನಾನಾರೂಪಿನಿಂ ತೊಳಲ್ವಾ ||
ಅಟಕೋಟಲೆಯ ಹಿಂಗಿಸಿ ಕರ್ಮಗಳನು ನಿ |
ರ್ದಾಟಿಸುವ ಜಿನದೀಕ್ಷೆಯಂ ಬಿಟ್ಟು ಭೂಮಿಪತಿ |
ಪಾಟಿಗೆಟ್ಟೀ ಗೃಹಸ್ಥಿತಿಗೆ ಸಿಕ್ಕಿದರ ಮಾತಿಗೆ ನಚ್ಚೆನೆಂದೆ ನಾನು || ೨೩ ||

ವಿಬುದಕಾರ್ಮುಕದಂತೆ ವಿದ್ಯುರ್ಲತಿಕೆಯಂತೆ |
ಶಬದೊಡಿಗೆಯಂತೆ ಸಂತೆಯ ನೆರವಿಯಂತೇಳು |
ವ ಬುದಬುದುರಾಶಿಯಂತೊಣಹುಲ್ಲಶಿಖಿಯಂತುಳ್ಕಿನಂತಾ ಮಾರಿಯಾ ||
ಕಬಳಕ್ಕೆ ತಂದು ಕುರಿಯಂತೆ ತನುಸಿರಿಹರೆಯ |
ವಬಲಾಜನಂ ಬಂಧುಜನ ನಿಜಸುತರ್ನ್ನಾಡು |
ಶಿಬಿರವೆಂದೆಂಬಿವೆಲ್ಲಂ ಭಾವಿಸಿದೊಡೆಯಸ್ಥಿರಮಲ್ಲವೇ ನೃಪಾಲಾ || ೨೪ ||

ಸಮ್ಯಕ್ತ್ವ ಸಂಜಾತಮಾದ ಸಮಯಂಬಿಡಿದು |
ಸಮ್ಯಕ್ತ್ವ ಸಮುಪೇತಮಪ್ಪ ಸುಜ್ಞಾನದಿಂ |
ಸಮ್ಯಕ್ತ್ವಯುತ ಸಂಯಮವನೆ ಕೈಕೊಂಡು ಸಲೆ ಸೌಖ್ಯಸಂಪದವಡೆಯದೆ ||
ಸೌಮ್ಯವಲ್ಲದ ಸೌಖ್ಯಮೀವ ಸಂಸಾರಮೇ |
ಸ್ವಾಮ್ಯಮೆಂದಾ ಸಕಲ ಭೋಗೋಪಭೋಗಕ್ಕೆ |
ಕಾಮ್ಯಾರ್ಥಿಯಾದ ವರಮಾತುಗೇಳ್ದಿಚ್ಛಾಮಿಯನಬಹುದೆ ಭೂಪಾಲಕಾ || ೨೫ ||

ಅನಿತರಿಂದಿವರ ಡಂಬಕದ ಭಕುತಿಗೆ ನಾನು |
ಮನಗೊಡದೆ ತತ್ಕಥನಮಂ ಕೇಳಿ ಇಚ್ಛಾಮಿ |
ಯೆನಲೊಲ್ಲದೇ ನಂಬೆನಚ್ಚೆನೊಡಬಡನೆಂದು ನಿಜಮಪ್ಪ ಮಾತಾಡಿದೆ ||
ಜನತಾಧಿನಾಥ ಕೇಳೆಂದು ಬಂದುಗೆವಾಯ |
ನನುರಾಗದಿಂ ತೆರೆದು ನುಡಿವ ಸಜ್ಜನೆಯ ಜನ |
ವಿನುತಗುಣಮಣಿವಿಭೂಷಣೆ ಕುಂದಲತೆಯ ಮಾತಿಗೆ ಮೆಚ್ಚಿ ಭೂಪಾಲನು || ೨೬ ||

ಚಿಕ್ಕಹರೆಯದೊಳು ಚಿನ್ನದ ಬೊಂಬೆಯಂತೆ ಕಡು |
ಚೊಕ್ಕಳಿಕೆವಡೆದ ಚೆಲ್ವಾಚೆಲ್ವಿನೆಸಕಕ್ಕೆ |
ತಕ್ಕ ಸಿರಿಯಂತಿವರ ಸೊಕ್ಕಿಂದ ಮೆಯ್ಮರೆದು ಭೋಗೋಪಭೋಗದಲ್ಲಿ ||
ಸಿಕ್ಕುವೀ ದಿನದಲ್ಲಿಯೇ ವಿರಕ್ತಿಗೆ ಮನಮ |
ಸಿಕ್ಕಿದ ಮಹಾವನಿತೆ ನೀನೊಬ್ಬಳಲ್ಲದೇ |
ಲೆಕ್ಕಿಸುವೆನೆಂದು ಬೊಟ್ಟೆತ್ತಲುಂಟೇ ಜಗತ್ತಿನ ಸತೀಜನಗಳೊಳಗೆ || ೨೭ ||

ದಂದಶೂಕನ ದಾಡೆಯಲ್ಲಿಯಮೃತಮಂ ಜನಿಸಿ |
ದಂದದಿ ಕಠೋರ ಕೇಸರಿಯ ಹೃದಯದೊಳು ದಯೆ |
ಯೊಂದಿದಂದದಿ ವಿಷಯವಿಷವೆನಿಸುವೀ ಕಾಮಿನಿಯರ ಚಿತ್ತಕೆ ವಿರಕ್ತಿ ||
ನಿಂದುದವನಿತಳಕ್ಕಾಶ್ಚರ್ಯಮೆಂದು ನೃಪ |
ವೃಂದಾರಕಂ ಪಿರಿದು ಕೊಂಡಾಡಿ ತಲೆದೂಗಿ |
ಕುಂದಲತೆಯಂ ಕುಸುಮವಸ್ತಾಂಗರಾಗಭೂಷಣದಿಂದ ಪೂಜಿಸಿದನು || ೨೮ ||

ಬಳಿಕ ಭವ್ಯೋತ್ತಮಾಂಬರಬಾಲಭಾನುಸ |
ಲ್ಲಿಲಿತಗುಣರತ್ನನರ್ಹದ್ದಾಸವೈಶ್ಯನಂ |
ವಿಲಸದ್ವಿನಯದಿಂದಮಿರಿಸಿಯಲ್ಲಿಂದ ಪೊರಮಟ್ಟು ನಿಜನಿಲಯಕೆಯ್ದಿ ||
ನೆಲೆಗೊಂಡ ನಿರ್ವೇಗವಾ ಮನದೊಳಾವರಿಸೆ |
ಛಲದಂಕನಾ ಸಂಸೃತಿಯದೊಂದು ಬಂಧನ |
ಕ್ಕಲಸಿಯಾಸ್ಥಾನಮಂಟಪದಲ್ಲಿ ಹರಿಸದಿಂದೀ ತೆರದಿ ಕುಳಿರ್ದನು || ೨೯ ||

ಮಕುಟವರ್ಧನರ ಮನ್ನೆಯರ ಸಚಿವ ಮಂಡ |
ಳಿಕರ ದುರ್ಗಾಧಿನಾಥರ ಮಹಾದಂಡನಾ |
ಯಕರ ರಾಜಾಧಿರಾಜರ ಕುಮಾರರ ಬಂಧುಜನದ ದೇಶಾಧೀಶರಾ ||
ಪ್ರಕಟಿತಪ್ರಭುಜನರ ಪರ ಮಹೀಪಾಲಕ |
ಪ್ರಕರದ ನಿಯೋಗಿಗಳ ಸಾಮಂತಜನದ ಕರ |
ಣಿಕರ ದೊರೆದೊರೆಗಳ ವಿತಾನದೊಳಗೊಡ್ಡೋಲಗಂಗೊಟ್ಟು ಸೊಗಯಿಸಿದನು || ೩೦ ||

ಪಲವು ಪೃಥದ್ವೀಪಾಲಕಪ್ರತತಿ ಕೆಯ್ಗೆಯ್ದ |
ಪಲವು ಚಿತ್ರಾಂಬರದ ಪಲವು ಮಣಿಭೂಷಣದ |
ಪಲವು ರುಚಿಯೊಡಗಲಸಿದಾಸ್ಥಾನಮಂಟಪಂ ಕಣ್ಗೆಡ್ಡಮಾದುದಿಂತು ||
ನೆಲೆಯಾಗಿ ದೇಹದ ಸ್ಥಿರಮನುದಯಾಸ್ತಮಯ |
ದಲಸಿಕೆಯ ನರರಿಗರಿಪಲ್ಕವನಿಗಿಳಿತಂದ |
ಸುಲಲಿತ ಸುವರ್ಣಕೋದಂಡದ ನವಗ್ರಹದ ಬಳಗವೆಂದೆಂಬಂದದಿ || ೩೧ ||

ಕಂಬಿಯವರುಗ್ಘಡಣೆ ಕವಿಗಮಕಿವಾದಿನಿಕು |
ರುಂಬದ ಪೊಗಳ್ಕೆಯಕ್ಕರಿಗರುಲಿವೋದುವಾ |
ಡಂಬರಂ ಭೂಸುರವ್ರಾತದಾಶೀರ್ವಾದ ಪರಿಹಾಸಕರ ನಗೆನುಡಿ ||
ಇಂಬಾಗಿ ನುಡಿವ ನುಡಿಗಾರರಿಂ ಚರಮಾಮ |
ನಂಬುಗಲ್ಮಿಗೆ ಲಾಲಿಸುತ್ತಂ ಪೂರ್ಣಿಸುವ ದು |
ಗ್ಧಾಂಬುರಾಶಿಯ ನಡುವಣ ಪರದಿಕ್ಪತಿಯಂತಿರೊಪ್ಪಿರ್ದನಾ ಭೂಪನು || ೩೨ ||

ಈ ತೆರದಿನೋಲಗಂಗೊಟ್ಟು ತನ್ನಗ್ರತನು |
ಜಾತನಂಬರಿಸಿ ಎಲೆ ಮಗನೆ ನನಗಿನ್ನೀ ಮ |
ಹೀತಳಮನಾಳ್ವುದುಚಿತಮೆ ಇರಿವ ಮೆರೆವ ಹರೆಯದ ಮಗನ ಕಂಡು ಕಂಡು ||
ಭೂತಳಾಧಿಪತಿತ್ವಮಂ ಕುಡದೆ ಕೇಡ ಹಡೆ |
ವೀ ತನುವಿನೊಂದು ಭೋಗಕ್ಕೆ ಸಲವಾಗಿ ಬಲು |
ಭೂತಹೊಡೆದವರಂತೆ ಮೆಯ್ಮರೆದಿರಲ್ನರಕಗತಿಯಾಗದೆ ಬಿಡುವುದೆ || ೩೩ ||

ಪಿಂತೆ ನಮ್ಮೀ ಪೀಳಿಗೆಯ ಪಿತೃಪಿತಾಮಹರ |
ಸಂತಾನಮೆಲ್ಲ ತಂತಮ್ಮ ನಿಜತನುಜರ್ಗೆ |
ಸಂತೋಷದಿಂದ ರಾಜ್ಯಭಾರಮಂ ಹೊರಿಸಿ ದೀಕ್ಷೆಯನಾಂತು ತಪಸುಗೆಯ್ದು ||
ಸಂತತಂ ಸುಖಮನೀವಾ ಸ್ವರ್ಗಮುಕ್ತಿಪದ |
ಕಂತರಿಸದೇ ಪೋದರದುಕಾರಣಂ ತಮ್ಮ |
ಸಂತತಿಯ ಮೇರೆಯಂ ಸತ್ಪುತ್ರರಾದವರ್ಮೀರುವುದು ಮಾರ್ಗವಲ್ಲ || ೩೪ ||

ಈ ವಯಸ್ಸಿನೊಳಿನ್ನು ಕೆಲದಿವಸಮೀ ಸಿರಿಯ |
ನೋವದೇ ಅನುಭವಿಸಿ ಮುಪ್ಪು ಬಂದಂದಿಗಿರ |
ದಾ ವಿನುತಮಪ್ಪ ದೀಕ್ಷೆಯನಾಂಪೆನೆಂದೊಡೆ ಕಾಲನೆಂದೆಂಬ ಪಾಪಿ ||
ಈ ಮೊಡಲಶಿಶುವೀತನೀ ಜವ್ವನಿಗನೀತ |
ನೀ ವೃದ್ಧನಿತನಿವನೆಂದೆಂಬ ದಯೆಯುಂಟೆ |
ಯಾವಗಂ ಬಂದು ನುಂಗುವನೊ ಎಂಬುದನು ಭಾವಿಸಲುಬೇಕತಿ ಚತುರರು || ೩೫ ||

ಬೇವ ಮನೆಯೊಳಗೆ ಕೆಯ್ಗಾವುದುಂ ಸಿಕ್ಕಲದ |
ನೋವದೇ ಕೊಮಡು ಬೇಗದಿ ಪೊರಮಡುವರಂತೆ |
ಯಾವಾಗ ಕೆಡುವುದೋ ಎಂಬೀ ಪರಿಗ್ರಹದೊಳಿರ್ದು ವ್ರತಮಂ ಧರಿಯಿಸಿ ||
ಕೈವಲ್ಯಪದಕೆ ಪೊರಮಡುವುದರಿವಂ ಪಡೆದ |
ಜೀವಕ್ಕೌಚಿತ್ಯಮೆನುತ ನಿಜಸುತನ ನಾ |
ನಾವಿಧದೊಡಂಬಡಿಕೆಯಿಂದೊಡಂಬಡಿಸಿ ತದ್ಭೂಪಾಲಚೂಡಾಮಣಿ || ೩೬ ||

ಮತ್ತಮಾ ಮರುವಗಲಿನುತ್ತಮಾ ಮುಹೂರ್ತದೊಳ್ |
ಚಿತ್ತಶುದ್ಧಿಯೊಳು ತತ್ಸುತ ವಿಕ್ರಮೋದಯಂ |
ಗಿತ್ತು ರಾಜ್ಯಶ್ರೀಯನಾ ಸುಬುದ್ಧಿ ಪ್ರಧಾನಿಯುಮಾ ಸುವರ್ಣಖುರನುಂ ||
ತತ್ತನೂಜರ್ಗೆ ತಂತಮ್ಮ ಮನೆವಾರ್ತೆಗಳ |
ನಿತ್ತು ನಿರ್ವೇಗಮಾನಸರಾಗಿಯೊಡನೆ ಬರ |
ಲುತ್ತಮಗುಣಾಭರಣನಾ ವೈಶ್ಯಕುಲತಿಲಕನನುರಾಗದಿಂದೆಯ್ಯಲು || ೩೭ ||

ಅರಿಕೆಯರ ಮಕ್ಕಳೈನೂರ್ವರಿರದೊಡನೆಯ್ದೆ |
ತೊರೆದೆರಡು ತೆರದ ತೀವ್ರಪರಿಗ್ರಹಂಗಳಂ |
ಕರಿಗೊಂಡು ಭಕ್ತಿಯಿಂ ಗುಣಧರಾಖ್ಯ ನಮೋಸ್ತುಗಳ ಪಾದಪಂಕರುಹಕೆ ||
ಎರಗಿಯುನ್ಮತ್ತಮಧುಕರನಂತೆ ತನ್ನ ಮನ |
ದೆರಕದಿಂದೆಸೆವ ಜಿನದೀಕ್ಷೆಯಂ ಕೊಂಡು ನಾ |
ಡೆರೆಯನುದಿತೋದಯಂ ಭೂಲೋಕದೊಳ್ಕೀರ್ತಿವಡೆದನದನೇವೊಗಳ್ವೆನು || ೩೮ ||

ಆತನ ಮನೋರಮಣಿ ಉದಿತಾಮಹಾದೇವಿ |
ಭೂತಳವಿನೂತನಾ ಸಚಿವೋತ್ತಮ ವನಿತೆ |
ಯಾ ತಸ್ಕರನ ನಿಜಾಂಗನೆ ವೃಷಭದಾಸಸೆಟ್ಟಿಯ ಸತಿಯರಾಯೆಣ್ಬರು ||
ಪ್ರೀತಿಯಿಂ ಮತ್ತೆ ಕೆಲ ಸತಿಯರೊಡನೆಯ್ತರ |
ಲ್ಸಾತಿಶಯಮಪ್ಪ ಜಿನದೀಕ್ಷೆಯಂ ಧರಿಸಿದಳ್ |
ನೀತಿಮತಿಯೆಂಬ ಕಂತಿಕೆಯರಿಂ ಧರೆಯೆಲ್ಲಮೊಸೆದು ಕೊಂಡಾಡುವಂತೆ || ೩೯ ||

ಆ ದೀಕ್ಷೆಯಂ ಕೊಂಡು ಕಡೆಗಾಲದಲ್ಲಿಯುದಿ |
ತೋದಯನುಮಾ ಸಚಿವನಾ ವೈಶ್ಯಕುಲತಿಲಕ |
ನಾ ದಯಾನಿಧೀ ಕುಂದಲತೆಯಾದಿಯಾದ ವೈಶ್ಯಸ್ತ್ರೀಯರಾ ಅರಸಿಯುಂ ||
ಚೋದಿಗಮೆನಿಪ್ಪ ಸಲೆಸೌಖ್ಯಸಂಪದವ ಸಂ |
ಪಾದಿಸುವ ಪದಿನಾರನೆಯ ಸಗ್ಗದೊಳ್ದೇವ |
ರಾದರುಳಿದವರು ತಂತಮ್ಮ ತಪಸಿಗೆ ತಕ್ಕ ಸುರಲೋಕಮಂ ಸಾರ್ದರು || ೪೦ ||

ಈ ತೆರದಿ ವೀರೇಶ್ವರ ಸಮವಸರಣದೊಳ್ |
ಗೌತಮಮಗಣಾಗ್ರಗಣ್ಯಂ ಸಕಲವಿಶ್ವಂಭ |
ರಾತಳಾಧೀಶನಾ ಶ್ರೇಣಿಕನೃಪಾಲಂಗೆ ಕಾರುಣ್ಯಮೊದವೆ ಪೇಳ್ದಾ ||
ಸಾತಿಶಯಮಪ್ಪ ಸಮ್ಯಕ್ತ್ವದ ಚರಿತ್ರಮಂ |
ಪ್ರೀತಿಯಿಂ ಶ್ರೀವಿಜಯಭೂಮಿಪಾಲಕನ ತನು ||
ಜಾತ ಮಂಗರಸನಾನೆನ್ನ ದುಃಕೃತ ಕೇಡಿಂಗೆಂದು ವಿರಚಿಸಿದೆನು || ೪೧ ||

ದುರದುಂಬಿತನದಿಂದ ದುರ್ವಿಚಾರದೊಳು ನಡೆ |
ದರಗುಲಿಜವಂಗೆ ಕುಯ್ದುರಿಮಾಡಿ ದೇಹಮಂ |
ಮರುಹುಟ್ಟಹುಟ್ಟಿಯೆಂದಾನೆಗಾಲಂ ಮೊದಲ್ಬವವೆಂಬ ವಿಪಿನದಲ್ಲಿ ||
ಪರವಣಿಗೆ ಬರ್ಪುದಂ ನೀಗಬೇಕೆಂದು ಮನ |
ದೆರಕದಿಂ ಪೇಳ್ದೆನಲ್ಲದೆ ನನ್ನದೊಂದು ಬೇ |
ಸರಿಕೆಗೆಸಲಂ ಪೇಳ್ದುದಿಲ್ಲಮೀ ಶುದ್ಧಸಮ್ಯಕ್ತ್ವದ ಮಹಾಕಥೆಯನು || ೪೨ ||

ಜಾರಚೋರರ ಮೇಲೆ ವಾಕ್‌ಚಾತುರ್ಯಕಾಗಿ |
ಸೇರಿಸಿದ ಕಥೆಯಲ್ಲ ಕೈವಲ್ಯಸಂಪದವ |
ನಾರಯ್ಯದೀವ ಸಮ್ಯಕ್ತ್ವದ ಮಹಾಕಥನಮಿಂತಿದಂ ಪೇಳ್ದೆ ನಾನು ||
ಧಾರಿಣೀತಳದ ಭವ್ಯಾಳಿಯಿಂತಿದನು ಮನ |
ವಾರೆ ತಂತಮ್ಮ ಮಕ್ಕಳ ಮಾತುಗೇಳ್ವಂತೆ |
ಕಾರುಣ್ಯದಿಂದ ಲಾಲಿಸಿ ಕೇಳಿ ತಿರ್ದುವುದು ಮತ್ತಿದರ ತಪ್ಪುಗಳು || ೪೩ ||

ಇದನೊಸೆದು ಬರವೆನೆಂದೆಂಬವರ್ಗೆ ಶುಭಮಸ್ತು |
ಇದರ ತಪ್ಪಂ ತಿರ್ದುವರ್ಗೆ ಸುಖಪದಮಸ್ತು |
ಇದನನುಶ್ರುತಮೋದಬೇಕೆಂಬ ರಸಿಕರ್ಗೆ ಪುತ್ರಸಂತಾನಮಸ್ತು ||
ಇದನೊಲಿದು ಪೇಳ್ವರ್ಗೆಯಾರೋಗ್ಯಕರಮಸ್ತು |
ಇದನಿರದೆ ಕೇಳ್ವರ್ಗೆಯಾಯುಷ್ಯ ಘನಮಸ್ತು |
ಇದಕೇಳಿ ಪರಿಣಾಮಮಂ ಮಾಡುವುತ್ತಮರ್ಗೆ ಮಹದೈಶ್ವರ್ಯಮಸ್ತು || ೪೪ ||

ಎಂದ ನಾನೆನ್ನ ಬಲ್ಲಂದದಿಂ ಸದ್ಭವ್ಯ |
ವೃಂದಮೆಲ್ಲಂ ದಿನಂಪ್ರತಿ ಮನದೆಗೊಂಡು ಕೇ |
ಳ್ವಂದದಿಂದತಿ ಕಠಿಣಪಾಕಮಲ್ಲದೆ ಸುಭಗವೆಂದೆನಿಪ ಷಟ್ಪದಿಯೊಳು ||
ಸಂದ ಸಕ್ಕದಗನ್ನಡವನೆರಡನೊಡವೆರಸಿ |
ಮಂದೇತರಾಮೋದದಿಂದ ಮೃದುಪಾಕಮ |
ಪ್ಪಂದದಿಂ ವಿರಚಿಸಿದೆನಾನಿದಂ ಸಜ್ಜನರ್ ಸಂತೋಷದಿಂ ಕೇಳ್ವುದು || ೪೫ ||

ಇದು ವಿಭುಧಜನವಿನುತಮಿದು ವಿಬುಧಜನವಿನತ |
ಮಿದು ವಿದಿತಜಿನಸಮಯಶರಧಿಸಂಪೂರ್ಣೇಂದು |
ಸದಮಲಚರಿತ್ರ ಯದುವಂಶಭೂವರರ ಸಚೆವಾನ್ವಯಾಂಬರಹಂಸನು ||
ಮದನಸಮರೂಪನುತ್ತಮಗುಣಕರಂಡಕಂ |
ಚದುರಮಂಗರಸನುಸಿರ್ದಿ ಕವಮುದೀಕಥೆಯೊ |
ಳೊದವಿರಂಜಿಸಿದುದುದಿತೋದಯನ ಸಮ್ಯಕ್ವ್ತದೇಳ್ಗೆ ಪನ್ನೆರಡು ಸಂಧಿ || ೪೬ ||

ಸಾಸಿರದಮೇಲೆ ಮುನ್ನೂರಮೂವತ್ತೊಂದು |
ಭಾಸುರಂಬಡೆದ ಶಕವರುಷವೆಸೆವಾಶ್ವೀಜ |
ಮಾಸದಲಿ ಶುಕ್ಲಪಕ್ಷದ ಪಾಡ್ಯಮುಂ ಮಂದವಾರದೊಳಗೀ ಕೃತಿಯನು ||
ಈ ಸಂಸೃತಿಶ್ರಾಂತವಿಶ್ರಾಂತವಿಶ್ರಾಂತಮಂ ಮಾಡು |
ವಾಸೆಯಿಂದವೆ ಸಮಾಪ್ತಂಗೆಯ್ದೆನಿಂತಿದನು |
ದಾಸೀನಮಂ ಮಾಡದೇ ಭವ್ಯಸಮಿತಿ ಸಂತೋಷದಿಂ ಲಾಲಿಸುವುದು || ೪೭ ||

ಅಂತು ಸಂಧಿ ೧೨ಕ್ಕಂ ಪದನು ೭೮೫ಕ್ಕಂ ಸಮಾಪ್ತ ಮಂಗಳಮಹಾ ಶ್ರೀಶ್ರೀಶ್ರೀ