ತುತ್ತುರಂ ಬಾಗಿಯಗಳಿಗೆ ಬಿಳ್ದು ಕೋಟೆಯಂ |
ಹತ್ತಲೆಂದಂಗವಿಸುವಾ ಹರಿಗೆಯಾಳ್ಗಳೊಂ |
ದೊತ್ತಂಬರವನು ಕಂಡಾಳ್ದನೊಳ್ ನೋಡುನೋಡೆಂದು ಬಲು ಪಂಥವಾಡಿ ||
ಮತ್ತಲ್ಲಿ ಕೊರೆದ ನೆಲದಿಡ್ಡಯಂ ತೆಗೆತೆಗೆಯೆ |
ನುತ್ತ ಪೊರಮಟ್ಟಾರುತೋಸಳಿಕುಮಾಡದೆ ಕ |
ರುತ್ತು ಕೆದರಿಸಿ ತೋಳಹೊಯ್ಯುತೊಳಹೊಗುವೆಕ್ಕಟಿಗರೋಳಿ ಕಣ್ಗೊಪ್ಪಿತು || ೩೬ ||

ನಡೆಚಪ್ಪರವನು ನಡೆಯಿಸಿಲಗ್ಗೆವರೆಗಳಂ |
ಜಡಿದು ಹೊಯಿಸುವ ಭರವಸಕ್ಕೆ ಬದ್ದರಗಳೊಳ |
ಗಡಗಿ ಗುದ್ಧಲಿ ಹಾರೆಯಿಂದಗೆವ ರಭಸಕ್ಕೆ ಬಲುಪೆಟಲು ಗುಂಡಿನಿಂದ ||
ಇಡುವ ನಿಬ್ಬರಕೆ ಬೀಳ್ವಾ ಕೋಂಟೆಯಂ ಕಂಡು |
ಕಡುವೇಗದಿಂದ ತಳಿಯಂ ನೆಡುತ್ತೊಳಮುರಿದು |
ಬಿಡದೆ ಕೋಂಟೆಯನಿಕ್ಕುವವಸರಂ ಕರಮೆಸೆದುದಾ ಕೊಂಟೆಗಾಳೆಗದೊಳು || ೩೭ ||

ತಲೆಸಳಿತು ಕೈಮರೆದರಂತೆಯೆ ಸುವಾಳುಗಳ್ |
ನಿಲೆಕಂಡು ಕೋಂಟೆ ಯೋಯ್ತೇಳೇಳಿಯೆನುತಿರದೆ |
ಕುಲಿಲಿಯೆಂದಾರಿ ಕೊಬ್ಬಿರಿದು ಹುಲಿಮೊಗದೊಳಗೆ ಹೊಗಲೊಡನೆ ಸೂತ್ರವಿಡಿದು ||
ಬಲೆಯ ಬಲಿದೆತ್ತಲಾಗಸಕೇಳುವಾ ಭಟಾ |
ವಳಿಯುಮಂ ಕಾಣುತಾ ಕದನಮಂ ನೋಳ್ಪಮರ |
ಲಲನೆಯರಿವಂ ನನಗಿವಂ ನನಗೆನುತ್ತ ಪಸುಗೆಯ ಮಾಡಿಕೊಳುತಿರ್ದರು || ೩೮ ||

ಇಡುವ ಡೆಂಕಣಿಗಯ್ಯ ಮುರಿವ ಹೊಡೆಯಗಳಂ |
ಹುಡಿಹುಡಿಯ ಮಾಳ್ಪ ಹುಲಿ ಮೊಗದಂಕಮಂ ನುಗ್ಗು |
ವಡೆವಂತೆ ತಾಗುವೂರೊಳಗಡ್ಡವಾಯ್ವರಿಲ್ಲೆಂಬಂತೆ ತಾಗಲಿಡುವಾ ||
ಕಡೆಯಕಾಲದ ಸಿಡಿಲದಂಡು ನಡೆತಂದು ಪೊರ |
ಗಡೆ ಪಾಳೆಯಂ ಬಿಟ್ಟಿತೋ ಎಂಬ ತೆರದಿ ಘುಡು |
ಘುಡಿಸುತೆಡವಿಡವಿಲ್ಲದೇ ಬಿಡುವ ಲೋಹಯಂತ್ರದ ರವಂ ಪೂಣಿಸಿದುದು || ೩೯ ||

ಕಡುಮುನಿಸಿಂದ ಕುಲಧರಣೀಧರಪ್ರತತಿ |
ನಡೆತರ್ಪ್ಪ ತೆರದಿ ನಡೆಯಿಪ ಸೇತುಸಮಿತಿಯಿಂ |
ನಡೆಚಪ್ಪರಗಳೆಂಬ ಬಿಲದಿಂದ ಪೊರಮಟ್ಟು ಪೊಳಲೆಂಬ ಭಾಸ್ಕರನನು ||
ತುಡುಕಲೆಂದೆನುತ ಮಾಮಸಕದಿಂ ಬಹುರೂಪು |
ವಡೆದು ತಾಗುವ ರಾಹುಕೇತುವೋ ಎಂಬಂತೆ |
ಗಡಿಯಿಲ್ಲದಲ್ಲಲ್ಲಿ ಹಾಯಿಸುವಡೆಗ್ಗೆವರನತಿಭೀಕರಂ ಬಡೆದುವು || ೪೦ ||

ಸತ್ತವರ್ಗುಡಿಯಿಲ್ಲ ಸಾವವರ್ಗಡಿಯಿಲ್ಲ |
ಹೊತ್ತಗಾಯದೊಳುರುಳ ಬೀಳುವರ್ಗಡಿಯಿಲ್ಲ |
ತತ್ತರಂದರಿಯಿಸಿಕೊಳ್ಳುತ್ತ ಹೊಯ್ದಾಡುವರ್ಗಡಿಯಿಲ್ಲ ತೆನೆಯಹಿಡಿದು ||
ಹುತ್ತುವರ್ಗಡಿಯಿಲ್ಲ ನಿಚ್ಚಣಿಗೆಯಂ ಹಾಕಿ |
ಹತ್ತ ಸಾರುವರಿಗಡಿಯಿಲ್ಲವದರಿಂ ಕೋಂಟೆ |
ಮುತ್ತಿಗೆಯ ಸುತ್ತುವೊತ್ತಂಬರವನೇನಂತುಟಿಂತುಟೆಂದೆನಲುಬಹುದೆ || ೪೧ ||

ಆ ಸಮಯದಲ್ಲಿ ಜಿತಶತ್ರುಭುವರಗೆ ವಿ |
ಶ್ವಾಸಿ ಸಂಭಿನ್ನಮತಿಯೆಂಬ ಮಂತ್ರೀಶನಂ |
ದೋಸರಿಸದೇ ಕರಗಳಂ ಮುಗಿದೆಲೇ ದೇವ ಚಿತ್ತೈಸು ಪೊರಗೆ ಕೊಟ್ಟಾ ||
ಕೂಸು ಕುಲಕಿಲ್ಲವೆಂದೆಂಬ ನಾಣ್ನುಡಿಯುಂಟು |
ದಾಸೀನಮಂ ಮಾಡದೆನ್ನ ಬಿನ್ನಪಮನಾ |
ಆ ಸಖಂಗಿತ್ತು ಮನೆಯಂ ಕಾಯ್ದುಕೊಳ್ಳಬೇಕೆಂದು ಬಿನ್ನಪಗೆಯ್ಯಲು || ೪೨ ||

ಕೇಣಕ್ಕೆ ಬದುಕಬೇಕಲ್ಲದೇ ಸಂಗರ |
ಕ್ಷೋಣಿಯೊಳಗಾ ವೈರಿಯತ್ಯಂತವೀರ್ಯ್ಯನ |
ಕ್ಷೂಣಬಲನವನೊಳಗೆ ಕಾದಿ ಜಯಿಸುವುದೆನಗೆ ತೀರದೆನ್ನೀ ಬಲಕ್ಕೆ ||
ತ್ರಾಣವಿಲ್ಲೆಂದು ಕುಲಹೀನಂಗೆ ಕೂಸ ಕೂಡ |
ಲೂಣೆಯಂ ನಮ್ಮ ಸದ್ವಂಶಕ್ಕೆ ಬಾರದೇ |
ಪ್ರಾಣವೇಂ ಪಲವು ಪಗಲೀದೇಹದೊಳ್ ನಿಲ್ಲದೆಂಬುದನರಿಯಬೇಡವೇ || ೪೩ ||

ಎಂದು ಸನ್ನಾಹಭೇರಿಯ ಹೊಯ್ಸಿಯಾಪ್ತರೆ |
ಯ್ತಂದಲ್ಪಬಲವೆರಸಿ ಪೊರಮಡುವುದೊಳ್ಳಿತ |
ಲ್ಲೆಂದಡ್ಡನಿಲಲವರಮಾತುಮಂ ಮೀರಿ ಕೆಂಗಣ್ಮಸಗಿ ತನ್ನೊಳುಳ್ಳಾ ||
ಮಂದಿ ಮದದಾನೆ ರಥ ವಾಜಿಯೊಳ್ ಬೆನ್ನಬಿಡ |
ದೊಂದಾಗಿ ಬರ್ಪ ಕಗ್ಗಲಿಗಳಿತ್ತಂ ಬನ್ನಿ |
ಮೆಂದಾಯ್ದುಕೊಂಡು ಕಡುವೇಗದಿಂದಾ ಪೊಳಲ ಪೊರಮಟ್ಟು ಜವನಂದದಿ || ೪೪ ||

ನೆಲಹೊರದ ತೆರದಿ ನೆರೆದಾ ಸೇನೆಯಂ ಕೊಂಡು |
ಬಲವೆನಗೆ ಬಲ್ಲಿತಿಲ್ಲೀ ಬವರಮಂ ಪೊಕ್ಕು |
ಗೆಲವ ಹಡೆವುದಕಾಗದೆಂಬುದಂ ಭಾವಿಸದೆ ಸೆರಗು ಬೆರಗಂ ಪಾರದೆ ||
ತಲೆಹೋಕತನದಿಂದ ಬಂದು ಪವುಜಿಕ್ಕಿಯಿನಿ |
ಸಲವರಿಕೆಯಿಲ್ಲದೇ ಹೊಕ್ಕೇರಿಯಿರಿದನಾ |
ಛಲದಂಕನೇಕಾಂಗಧೀರನದಟರದೇವ ಜಿತಶತ್ರುಭೂಪಾಲನು || ೪೫ ||

ಅತ್ತ ಕೋಂಟೆಗೆ ಲಗ್ಗೆ ಮಾಡುವವರಿಳಿದುದಿಲ್ಲ |
ಯಿತ್ತ ಮೈಗಾಪಿನಾಳ್ಗಳನು ಕಳುಹಿದುದಿಲ್ಲ |
ವತ್ತಿತ್ತ ಬಿರ್ದ ಪವುಜೇ ತಮ್ಮತಮ್ಮಿಚ್ಛೆಯೊಳಗೆ ನೃಪನಂ ಕೇಳದೇ ||
ಒತ್ತಂಬದಿಂದ ರಿಪುಭೂವರನ ಪಡೆ ನಿಂದು |
ನಿತ್ತರಿಸಬಾರದೆಂಬಂತಿರೋಡಿದುದು ಭಗ |
ದತ್ತಭೂಪಾಲಕನ ತಳತಂತ್ರಮಾರ್ವಲದ ಬಹಳತೆಯನೇನೆಂಬೆನೊ || ೪೬ ||

ಇಂತು ಬಂದಾ ಬಲವ ಕಂಡು ಜಿತಶತ್ರುಕಾ |
ಲಾಂತಕಂ ಮರ್ತ್ಯಲೋಕಕ್ಕೆಯ್ದಿ ಮನುಜರೂ |
ಪಂ ತಳೆದನೋ ಎಂಬ ತೆರದಿ ಕೆಕ್ಕಳಗೆರಳಿ ತನ್ನ ನಿಜಸೇನೆವೆರೆಸಿ ||
ಅಂತರಂ ಮಾಡದೇ ಹೊಕ್ಕಿರಿದನರಿಬಲವ |
ತಿಂತಿಣಿಯನೇನನೆಂದೆಂಬೆನಾ ನೆಲ ಹೇಸು |
ವಂತೆ ಖಾಡಾಖಾಡಿಯಲಿ ಮೇಲಣಸುರರ್ ಬಿಸವಂದವಡುವಂದದಿ || ೪೭ ||

ವೀರಭಟವಿತತಿಯೊಳ್ವೀರಭಟವಿತತಿ ಮದ |
ವಾರಣಪ್ರತತಿಯೊಳ್ವಾರಣಪ್ರತತಿ ಬಲು |
ತೇರತಿಂಥಿಣಿಯೊಳಾತೇರತಿಂಥಿಣಿ ವಾಜಿಯೊಡ್ಡಿನೊಳ್ವಾಜಿಯೊಡ್ಡು ||
ಆರಯ್ಯದಧಿಕರೌದ್ರಾವೇಶದಿಂ ಹಿಂದ |
ಹಾರೈಸದೇ ನಿಂದು ಕೈ ಹೇಸ ಮೈ ಹೇಸ |
ದಾರಭಟೆಯಿಂದ ಕಾದುತ್ತಿರ್ದುದಾಯಿರ್ವರವನಿಪಾಲಕರ ಸೇನೆ || ೪೮ ||

ಅಣಿಯ ಬಾಯೊಳು ಕೋಳಹೊಯ್ದು ತಂದೊಪ್ಪಿಸುವ |
ರಣರಸಿಕರೊಡ್ಡುವೊಡ್ಡಣವ ಕಂಡೊಲ್ಲಯಿಸು |
ವಣಿಯರಕೆ ಹಿಂದಾಗಿ ನಡೆದುಬರ್ಪೆಕ್ಕಟಿಗರೇರಿ ಹಿಡುಗುದುರೆಗಳನು ||
ಎಣಿಕೆ ಮಾಡದೆ ಹಿಡಿವ ರಾಯರಾವುತರು ಟೆಂ |
ಟೆಣಿಸಿ ಮಾರ್ಮಲೆತು ಕಾದುವ ಮಾವತಿಗರು ಬಿ |
ನ್ನಣದಿ ನಸುಹೋಹ ಹೊತ್ತರಿಯದೆಚ್ಚಾಡುವ ಮಹಾರಥಿಕರೆಸೆದರಲ್ಲಿ || ೪೯ ||

ದಬ್ಬುದಲೆಗೊಂಡು ನರಲ್ವರೆವೆಣಂಗಳ ತಂಡ |
ವುಬ್ಬಸಂಗೊಂಡೇಳ್ವಬಿಳ್ವ ಹಯವೇತಂಡ |
ನಿಬ್ಬರಿದಿ ನಡೆದು ಪಿಡಿದಸಿಗಳಂ ಝಳಪಿಸುವ ಮುಂದೆ ಮುಗ್ಗಿರಿವ ಮುಂಡಾ ||
ಬೊಬ್ಬಿರಿದು ನಗೆದುನೆಲಕುರುಳೆ ಬೀಳುವ ರುಂಡ |
ಕೆಬ್ಬೆವಣ್ಣಂ ಕೆದರಿದಂತೆಸೆವ ಕಡಿಕಂಡ |
ದೊಬ್ಬುಳಿಯಿನೆಸೆವ ಬಿಸಿಯರುಣಜಲಗಳ ಕೊಂಡವೆಸೆದುವಾ ಧುರಧರೆಯೊಳು || ೫೦ ||

ಬಲ್ಲಿದಂ ಭಗದತ್ತಭೂಮಿಪಾಲಕನ ಬಲ |
ದಲ್ಲಿ ಕೆಲಪೌಜುನಿತ್ತರಿಸಲಾರದೆ ಚೆಲ್ಲಿ |
ಪಿಲ್ಲಿಯಾದುದು ಕೆಲವು ಕೆದರಿಬೆದರಿತು ಕೆಲವು ಪಿಂದಕೋಡಿದುದು ಕೆಲವು ||
ತಲ್ಲಣಂಗೊಂಡು ತಕ್ಕಳಿದು ನಿಂದೆಡೆಯಲ್ಲಿ |
ನಿಲ್ಲದಾಯಿತು ಕೆಲವು ಪಿಂಡುಗೆದರಿತು ಕೆಲವು |
ವೊಲ್ಲಯಿಸಿದತ್ತು ಕೆಲವು ದುಪುಗೆಟ್ಟಿತು ಕೆಲವು ಜಿತಶತ್ರುವಿರಿವಿರತಕೆ || ೫೧ ||

ಅದನು ಕಂಡಾ ನೃಪತಿ ತನ್ನನಿರದೋಲೈಸು |
ವದಟರೆನಿಪತಿರಥಮಹಾರಥರ್ಸ್ಸಮರಥ |
ರ್ಮೊದಲಾದ ರಥಿಕರುಂ ದಶಲಕ್ಷಶತಕೋಟಿಗೊಬ್ಬೊಬ್ಬ ವೀರಭಟರೂ ||
ಕದನಕರ್ಕ್ಕಶ ಕರಿತುರಂಗವಾಹಕರೊಡನೆ |
ಹುದುಗಿಬರೆ ನೆಲನೀದ ತೆರದಿ ಮೂವಳಸಲಾ |
ಉದಧಿಯೊಳ್ಬೆರಣಿಯಂ ಹಾಕಿದಂತಾಯ್ತು ಜಿನಶತ್ರುಭೂಪನ ವಾಹಿನಿ || ೫೨ ||

ಇತ್ತ ಪುರಜನಮೆಲ್ಲ ಕೆಟ್ಟೆವಿನ್ನೇಕೆ ಯಿ |
ನೆತ್ತಣದು ನಮ್ಮ ಜಿನಶತ್ರುಭೂಪತಿಗೆ |
ಬದುಕೆತ್ತ ಓಡುವೆವು ನಮ್ಮಂ ಕಾವರಾರು ನಮ್ಮೀ ಪೊಳಲನೊತ್ತರಿಸಿದಾ ||
ಮುತ್ತಿಗೆಯೊಳೀ ಹೆಂಡಿರೀ ಮಕ್ಕಳೆಲ್ಲರುಂ |
ಸತ್ತುಹೋಹಂತಾಯಿತೆಂದೆನುತ ಬಾಯಂ ಬಿ |
ಡುತ್ತ ಮದ್ದಳೆಯ ಹೊಕ್ಕಿಲಿಯಂತಿರತ್ತಿತ್ತ ಹಾಡುಹಾವುತಿರ್ದರಾಗ || ೫೩ ||

ದುರುದುಂಬಿತನದಿ ಧುರಮಂ ಮಾಳ್ಪೆನೆಂದೂರ |
ಪೊರಮಟ್ಟು ತನ್ನ ಸೇನೆಯನು ಪರಬಲಕೆ ಕು |
ಯ್ಗುರಿಮಾಡಿ ನಾಡು ಬೀಡಂ ಕೆಡಿಸಿಕೊಂಡನಲ್ಲಾ ನಮ್ಮ ನೃಪತಿಯೆಂದು ||
ಗುರುಮಂತ್ರಗೊಂಡು ಗುಡ್ಡೆಣಿಕೆಯಂ ಮಾಡಿ ಕೈ |
ಮರೆದು ನಿಂದಾ ಕೋಂಟೆಯೊಳ್ಗಳಂ ಕಂಡು ಕೊ |
ಬ್ಬಿರಿದು ಕೋಂಟೆಯನು ತಡವಿನ್ನೇತಕೆಂದು ಹಬ್ಬುತ್ತಿರ್ದುದರಿವಾಹಿನಿ || ೫೪ ||

ಈ ತೆರದಿನಾದ ಪುರದೊತ್ತಂಬರವ ಕಂಡು |
ನೀತಿವಿದೆ ನಿರ್ಮಲಚರಿತ್ರನಿಧಿ ಸಜ್ಜನವಿ |
ನೂತೆ ಮುಂಡಿಕೆ ತನ್ನೊಳಿಂತೆಂದಳೆನ್ನಕತದಿಂದೆಮ್ಮ ಮನೆಗೆ ಕೇಡು ||
ಭೂತಳಂ ತಿಳಿವ ತೆರನಾಯ್ತು ಮುಂದಕ್ಕೆ ನನ |
ಗೇತರದು ಬದುಕೆಂದು ಪೊಳಲನೊತ್ತರಿಸಿ ಪರಿ |
ವಾ ತರಂಗಿಣಿಯ ಮಡುವಂ ಹೊಕ್ಕಳಬುಧಿಯಂ ಪುಗುವ ರೋಹಿಣಿಯ ತೆರದಿ || ೫೫ ||

ಜಂಬಾಲಜಾತನಿಭಮುಖದ ಜನಚರಸನ್ನಿ |
ಭಾಂಬಕದ ಚಕ್ರಸ್ತನದ ಪುಳಿನತಳನಿಭನಿ |
ತಂಬದಾವರ್ತನಾಭಿಯ ನವಮೃಣಾಳ ಹಸ್ತದ ಕೈರವಾಮೋದದಾ ||
ಕಂಬುಕಂಧರದ ಕೂರ್ಮೋಪಮಾಂಘ್ರಿಗಳ ಕಾ |
ದಂಬಸಮಗತಿಯ ಲಾವಣ್ಯರಸವಾರಿಯ ನಿ |
ತಂಬಿನೀಮಣಿ ನಿಮ್ನಗಾನಾರಿ ನದಿಗೆ ನಂಟೆಯ್ದಿದವೊಲೊಳಹೊಕ್ಕಳು || ೫೬ ||

ಸರಸವಟಪಕ್ಷಫಲಸನ್ನಿಭಾಧರೆ ತರುಣ |
ಹರಿಣೀವಿಶಾಲವಿಲಸದ್ವಿಲೋಚನೆ ಮನೋ |
ಹರತರಾಮೃತವಾಣಿ ಭವ್ಯಕುವಲಯಮೈತ್ರಿ ವಿಮಲವೃತ್ತಾಭಿರಾಮೆ ||
ನಿರತಿಶಯಕಾಂತಿಯುಂತೆ ಸೌಮ್ಯಜನ್ಮಸ್ಥಾನೆ |
ಪರಮಹಿಮಕರಭಾಸಿದೋಷಾಪಹಾರಿ ತ |
ತ್ತರುಣಿ ಮುಂಡಿಕೆ ಶರಧಿಯಂ ಪುರುವ ಶಶಿಯಂತೆ ಮಡುವಂ ಹೊಕ್ಕಳು || ೫೭ ||

ಎನಗೀ ಮಹೋಪಸರ್ಗಂ ಪಿಂಗುವನ್ನೆವರ |
ಮನಘನರ್ಹತ್ಪತಿಯ ಸಾಕ್ಷಿಯೊಳ್ಸನ್ಯಸನ |
ಮೆನುತ ಕಯ್ಯಿಕ್ಕಿ ಕುಳ್ಳಿರ್ದ ಮುಂಡಿಕೆಯ ಸಮ್ಯಕ್ತ್ವದ ಮಹಾತ್ಮೆಯಿಂದಾ ||
ಎನಿತೆನಿತಗಾಧಮಪ್ಪಾ ನದಿಯ ನೀರಿಂಗ |
ಲನಿತರೊಳ್ಜಲದೇವತೆಯರೆಯ್ದಿ ಹರಿಸದಿಂ |
ಕನಕಮಯಮಪ್ಪ ಕರುಮಾಡವೊಂದಂ ರಚನೆಗೆಯ್ದದರ ಮೇಲ್ನೆಲೆಯೊಳು || ೫೮ ||

ಪಜ್ಜಳಿಪ ಹಲವು ರನ್ನದ ಪೀಠದೊಳಗಿರಿಸಿ |
ಮಜ್ಜನಂಬುಗಿಸಿ ಹದಿನಾಲ್ಕು ನದಿಯಂಬುವಿಂ |
ಸಜ್ಜುಕಂ ಮೊದಲಾದ ಷೋಡಶಾಭರಣಮಂ ಲಲಿತೋತ್ತಮಾಂಗದಿಂದ ||
ಪಜ್ಜೆವರಮನುಗೊಳಿಸಿ ನಿನ್ನಂದದಿಂದೀ ಜ |
ಗಜ್ಜಾಲದೊಳಗೆ ಸಮ್ಯಕ್ತ್ವಮಂ ನೆರೆತಳೆದ |
ಸಜ್ಜನೆಯರಾರೆಂದು ಕೊಂಡಾಡಿ ನಗರದೇವತೆಗಳಂ ಕೂಡಿಕೊಂಡು || ೫೯ ||

ಉತ್ತಮ ಜಿತಾರಿಭೂಪಾಲಕನ ಮೂವಳಿಸಿ |
ವೊತ್ತಂಬರಂ ಮಾಡುವಾ ನಗರಿಯಂ ಸುತ್ತ |
ಮುತ್ತಿಹತ್ತುವ ಸೇನೆಯೆಲ್ಲಮಂ ಭಿತ್ತಿಯೊಳಗೆತ್ತಿಸಿ ಹಸಂ ಮಾಡಿದಾ ||
ಪುತ್ತಳಿಗಳಂತೆ ಕೀಲಿಸಿ ಪಿಡಿದ ಕಯ್ದನಿನಿ |
ಸೆತ್ತದಂದಿ ಮಾಡಿ ಬಳಿಕ ಕೋಪದೊಳು ಭಗ |
ದತ್ತಭುಪಾಲಕನ ಕಣ್ಗೆಯದ್ಭುತಮಪ್ಪ ರೂಪಮಂ ಧರಿಸಿಕೊಂಡು || ೬೦ ||

ಕಾಲನಿಕ್ಕಲ್ಯದಕ್ಕದಿಸಿದುದು ಭೂಮಿಕ |
ಣ್ಣಾಲಿಯಂ ತೆರೆಯೆ ಕಾಸಿದ ಕಪ್ಪರದ ತೆರಂ |
ನಾಲಗೆಯ ನೀಡೆ ಕಡಲಂ ನೆಕ್ಕುವಂದದಾಸ್ಫೋಟನಂಗೆಯ್ಯಲಾಗ ||
ಕಾಲರುದ್ರನ ಕಯ್ಯ ಢಕ್ಕೆ ಕೈನೀಡಿ ದಿ |
ಗ್ಜಾಲಮಂ ಮುಟ್ಟುವುವು ಮಂಡೆಸುತ್ತಾದುದಾ |
ಮೇಲಣ ಮುಗಿಲ್ವಟ್ಟೆಯಿಂತಪ್ಪ ಭೀಕರಾಕಾರಮಂ ತಳೆದು ನಿಂದು || ೬೧ ||

ದಬ್ಬುದಲೆಗೊಂಬ ವಾರಣವಾಹಕಪ್ರತತಿ |
ತಬ್ಬಿಬ್ಬಗೊಂಬ ತುರುಗಾರೋಹಕಪ್ರತತಿ |
ಬೆಬ್ಬಳಿಸಿ ಬಿಳ್ದು ಬಿಲ್ಲುಂಬೆರಗುವಟ್ಟುನಿಂದಾ ಮಹಾರಥಸಂತತಿ ||
ತಿಬ್ಬಳಿಯಡಂಗಿ ಬಿಳ್ವಾ ವೀರಭಟವಿತತಿ |
ಸಿಬ್ಬದಿಗೊಳುತ್ತ ಸಿಡಿಮಿಡಿಗೊಂಬ ನೃಪಸಮಿತಿ |
ಯಬ್ಬರಂಗೊಡಿದೆಲ್ಲಿಯ ಮೀಳ್ತುವೆಮಗೆಂದು ಭಗದತ್ತಧರಣೀಪತಿ || ೬೩ ||

ಹಾವಡರ್ದ ಹಂದೆಯಂದದಿ ಹಮ್ಮದಂ ಬೋಗಿ |
ಜೀವಪ್ರತಿಷ್ಠೆಯಂ ಮಾಡೆಂದು ಜಿತಶತ್ರು |
ಭೂವರನ ಪದಪದ್ಮಕೆರಗಿಯಾತಂಬೆರಸಿ ನೀರುಪ್ಪರಿಗೆಯ ಮೇಲೆ ||
ತಾವರೆಯ ಕರ್ಣಿಕೆಯ ಸಿರಿಯಂದದವೊಲಿರ್ಪ |
ಭಾವೆಯ ಪದಕ್ಕೆರಗಿ ನೀನೆನ್ನ ದೋಷಮಂ |
ಭಾವಿಸದೆ ತಲೆಗಾವುದೆಲೆ ಮಾತೆ ಎಂದು ಕರಯುಗಲಮಂ ಮುಗಿದು ನಿಲಲು || ೬೪ ||

ಪಾಪಿ ನಾನೊಂದು ಜೀವಕ್ಕಾಗಿ ಎಲೆ ಮೇದಿ |
ನೀಪಾಲಕರಿರಾ ನಿಮ್ಮೀರ್ವರ್ಗಮೀತೆರದಿ |
ನಾಪತ್ತುಬಂದಿತಲ್ಲಾ ಇದಂ ಕ್ಷಮಿಯಿಸಿಮೆನ್ನುತ್ತವರ ಸಂತವಡಿಸಿ ||
ಆ ಪುಣ್ಯವಂತೆ ಮುಂಡಿಕೆ ಮುನ್ನಕೀಲಿಸಿ |
ರ್ದಾ ಪಡೆಯನಾ ನಗರದೇವತೆಗಳಿಂ ಬಿಡಿಸ |
ಲಾ ಪವನಪಥದಲ್ಲಿ ಪಂಚಾಶ್ವರ್ಯಮಾದುದೆಲ್ಲರಾಶ್ವರ್ಯವಡಲು || ೬೫ ||

ಅಂತದಂ ಕಂಡು ನಿರ್ವೇಗಪರನಾ ಮಹೀ |
ಕಾಂತ ಭಗದತ್ತನಾಜಿತಶತ್ರುಭೂಪಾಲ |
ಗಿಂತೆಂದನತ್ತ್ಯುತ್ತಮಂಬಡೆದ ಧರ್ಮದಿಂದಗ್ಗಳಮದಾವುದೆನಲು ||
ಸಂತಸಂಬಟ್ಟು ಬಳಿಕಾ ನುಡಿಯ ಕೇಳಿ ತಾ |
ನಿಂತೆಂದನಾ ವಿಮಲಧರ್ಮದ ಮಹಾತ್ಮೆಯುಮು |
ನಂತಿಂತುಟೆಂದೂಹಿಸಲ್ಬಲ್ಲನಿರನವನಾರು ಧರಣೀತಳದೊಳು || ೬೬ ||

ಎಂದು ಸದ್ಧರ್ಮದ ಮಹಾತ್ಮೆಯಂ ಪೊಗಳಲಾ |
ನಂದದಿಂ ಭಗದತ್ತಭೂಪಾಲಕಂ ತನ್ನ |
ನಂದನಂಗರಸುಪಟ್ಟಂಗಟ್ಟಿ ಬೆನ್ನಬಿಡದೆಯ್ದೆಯರಿಕೆಯ ಭೂಪರಾ ||
ಗೊಂದಣಂ ಶ್ರೀಮತಿವೆಸರ ಪಟ್ಟದರಸಿ ತ |
ನ್ನೊಂದಾಗಿ ಬರಲಾಶ್ರುತಾಬ್ಧಿಯೆಂದೆಂಬ ಮುನಿ |
ವೃಂದಾರಕರ ಪಾದೋಪಾಂತದೊಳ್ ಪ್ರಾವ್ರಾಜ್ಯಮಂ ತಳೆದನಿಳೆಪೊಗಳಲು || ೬೭ ||

ಧಾತ್ರೀಪತಿಗಳು ಪಲಬರ್ನಿಜಸ್ತ್ರೀಕನಕ |
ಚಿತ್ರಾಮಹಾದೇವಿ ಸಜ್ಜನಸ್ತುತೆ ಸತ್ಪ |
ವಿತ್ರೆ ಮುಂಡಿಕೆಯೊಡನೆ ವೈರಾಗ್ಯಪರರಾಗಿ ಬೆಂಬತ್ತಿರಲು ತನ್ನಾ ||
ಪುತ್ರಂಗೆ ರಾಜ್ಯಮಂ ಕೊಟ್ಟು ತನ್ಮುನಿಯ ಶತ |
ಪತ್ರಪಾದೋಪಾಂತದಲ್ಲಿ ದೀಕ್ಷೆಯನು ಜಿತ |
ಶತ್ರುಭೂಪಾಲಕಂ ಕೈಕೊಂಡನೀ ಲೋಕಮಾಲೋಕಮರಿವ ತೆರದಿ || ೬೮ ||

ಆವೂರೊಳರ್ದ್ಧವರ್ಸ್ಸಮ್ಯಕ್ತ್ವಪೂರ್ವಕಂ |
ಶ್ರಾವಕವ್ರತಮನನುಕರಿಸಿದರ್ಕ್ಕೆಲರು ಸ |
ದ್ಭಾವದೊಳ್ ಲೋಕಕಿದುವೇ ಧರ್ಮಮೆಂದು ಪರಿಣಮಿಸಿದರದುಕಾರಣ ||
ಆವರಿಸಿತೆನ್ನ ಮನದಲ್ಲಿ ಸಮ್ಯಕ್ತ್ವಮೆಂ |
ದಾ ವನಜವದನೆ ನಾಗಶ್ರೀಯ ನುಡಿಗೇಳಿ |
ಯಾ ವೈಶ್ಯತಿಲಕನರ್ಹದ್ದಾಸನಾ ಸತಿಯರೆಲ್ಲರಿಚ್ಛಾಮಿಯೆನಲು || ೬೯ ||

ಆ ಕಿರಿಯ ಸತಿ ಕುಂದಲತೆಯಿಂತು ನುಡಿದಳಿದು |
ಲೌಕಿಕಮಿದಕ್ಕೆ ನಾನೊಡಬಡುವುದಿಲ್ಲೆನ |
ಲ್ಭೂಕಾಂತನಾ ಸಚಿವರಿಂತೆಂದರಿದಕೆ ಇಚ್ಛಾಕಾರಮಂ ಮಾಡದಾ ||
ಈ ಕುದೃಷ್ಟೆಯನುದಯದಲ್ಲಿ ಊರರಿಕೆಯೊ |
ಳ್ಕಾಕುಮಾಡಿಸಿ ನಮ್ಮ ನಗರಿಯಂ ಪೊರಮಾಡಿಸ |
ಬೇಕೆನುತ್ತಿರಲು ಮತ್ತಾ ಚೋರನಿಂತೆಂದ ತನ್ನ ಸದ್ಭಾವದೊಳಗೆ || ೭೦ ||

ಸೊಗಯಿಸುವ ತನಿವಾಲ ಬಿಟ್ಟು ನೆಲೆಮೂಲೆಯಲ್ಲಿ |
ಮೊಗವಟ್ಟಿಲ್ಲದರುಣಾಂಬುವಂ ಸೇವಿಸುವ |
ಜಿಗುಳೆಗಾ ಗುಣಮೇ ಸ್ವಾಭಾವಮುತ್ತಮಗುಣಕ್ಕೆಳಸದೆ ನಿಕೃಷ್ಟಜನವು ||
ಮಿಗೆಮನಂ ಗೊಡುವರೆನುತಿರಲಿಭ್ಯುಕುಲತಿಲಕ |
ನಗಣಿತಗುಣಾಭರಣನನುಪಮಚರಿತ್ರ ಭೂ |
ಜಗವಿನುತನೆಸೆದನರ್ಹದ್ದಾಸ ಜಿನಸಮಯವಾರ್ದ್ಧಿವರ್ಧನಚಂದ್ರನು || ೭೧ ||

ಇದು ವಿಭುಧಜನವಿನುತಮಿದು ವಿಬುಧಜನವಿನತ |
ಮಿದು ವಿದಿತಜಿನಸಮಯಶರಧಿಸಂಪೂರ್ಣೆಂದು |
ಸದಮಲ ಯಶಸ್ಕಾಂತ ಯದುವಂಶನೃಪರ ಸಚಿವಾನ್ವಯಾಂಬರಹಂಸನು ||
ಮದನಸಮರೂಪನುತ್ತಮಗುಣಕರಂಡಕಂ |
ಚದುರಮಂಗರಸನುಸಿರ್ದೀ ಕೌಮುದೀಕಥೆಯೊ |
ಳೊದವಿರಂಜಿಸಿದುದಭಿನವ ಚಂಡಿಕೆಯ ಮುಂಡಿಕೆಯ ಕಥನಮೆಂಟನೆಯ ಸಂಧಿ || ೭೨ ||

ಅಂತು ಸಂಧಿ ೮ಕ್ಕಂ ಪದನು ೫೩೪ಕ್ಕಂ ಮಂಗಳ ಮಹಾ