ಶ್ರೀಮದರ್ಹದ್ದಾಸವೈಶ್ಯವಿಭುಕೇಳಲಾ |
ತಾಮರಸಮುಖಿ ಪದ್ಮಲತೆ ಕರಯುಗಂಗಳಂ |
ಪ್ರೇಮದಿಂ ಮುಗಿದು ತನಗಾದ ಸಮ್ಯಕ್ತ್ವಮಂ ಬಿನ್ನಪಂಗೆಯ್ದಳಿಂತು || ಪಲ್ಲ ||

ಇಂಬುವಡೆದಂಗದೇಶದ ಮಧ್ಯದೊಳು ಚಂಪೆ |
ಯೆಂಬ ಪುರದೊಳ್ ದಾಡಿವಾಹನವೆಸರ ನೃಪತಿ |
ಯಂಬುರುಹವದನೆ ಪದ್ಮಾವತಿವೆಸರ ಸುದತಿಗೂಡಿ ಸುಖಮಿರ್ಪನಲ್ಲಿ ||
ಶಂಬರರಿಪುದಧ್ವಂಸಭಕ್ತಂ ವಿಮಲದಾಸ |
ನೆಂಬವಂಗವನ ಸತಿ ಪದ್ಮೆಗಂ ಜನಿಸಿ ಶಶಿ |
ಬಿಂಬನಿಭವದನೆ ಪದ್ಮಶ್ರೀವೆಸರನಾಂತು ಬೆಳೆದು ಜವ್ವನವಡೆದಳು || ೧ ||

ತಳಿರ್ವಜ್ಜೆ ತಾರಾಳಿನಖಿ ಕೂರ್ಮಪಾದ ಪೊಳೆ |
ವೆಳೆವಾಳೆದೊಡೆ ತೋರಪೊರವಾರು ತನುಮಧ್ಯ |
ಸುಳಿನಾಭಿ ಸೊಗಯಿಸುವ ತಿವಳಿ ಬಡಬಾಸೆ ಬಲ್ಮೊಲೆ ಕಂಬುನಿಭಕಂದರ ||
ನಳಿತೋಳ್ಗಳಬ್ಜಮುಖಬಿಂಬ ಬಿಂಬಾಧರಂ |
ತಿಲಕುಸುಮನಾಸಿಕ ವಿಶಾಲಾಕ್ಷಿ ಕುಡುವುರ್ವು |
ತೆಳುಗದಪು ಹೆರೆನೊಸಲ್ತುಂಬಿಗುರುಳ ಲಘುತರಕಬರಿ ಕಣ್ಗೆಸೆಯಿತವಳಾ || ೨ ||

ಪದ್ಮನೇತ್ರಂ ಪದ್ಮಕರ್ನಿಕಾನಾಸಿಕಂ |
ಪದ್ಮರಾಗಾಧರಂ ಪದ್ಮವದನಂ ಕನಕ |
ಪದ್ಮಕೋರಕಕುಚಂ ಪದ್ಮಲತಿಕಾಬಾಹು ಪದ್ಮಾಂಘ್ರಿ ಪದ್ಮಹಸ್ತಂ ||
ಪದ್ಮಪ್ರಸೂನೋತ್ತಮಾಮೋದಮುಲ್ಲಸಿತ |
ಪದ್ಮಿನೀಜಾತಕಂ ತನಗಾಗೆ ಸಿರಿಯಿಂದೆ |
ಪದ್ಮೆಗೆಣೆಯಾಗಿ ಪದ್ಮಶ್ರೀವೆಸರನೆ ತಾಂ ಪಡೆದಳನ್ವರ್ಥದಿಂದ || ೩ ||

ಆ ವನಿತೆಯೊಂದುದಿನ ಮುಖದೊಳ್ಪ್ರಮೋದದಿಂ |
ದಾವೂರ ಮಧ್ಯದೊಳ್ ಕಡುಶೋಭೆಯಂ ಪಡೆದ |
ಶ್ರೀವಾಸುಪೂಜ್ಯತೀರ್ಥಂಕರರ ಹೊಚ್ಚಹೊಸ ಹೊನ್ನಕಲಶದ ಬಸದಿಗೆ ||
ಭಾವಜನಸತ್ಕೀರ್ತಿವಧು ನಡೆದು ಬರ್ಪಂತೆ |
ಭಾವಶುದ್ಧಿಯೊಳು ಬಂದೊಳಹೊಕ್ಕು ಪೂಜೆಯಂ |
ಸಾವಧಾನದೊಳು ಸದ್ವಿಧಿಪೂರ್ವಕಂ ಮಾಡುತಿರಲು ಮತ್ತಾಪುರದೊಳು || ೪ ||

ಬುದ್ಧ ದರ್ಶನದಲ್ಲಿ ಬದ್ಧಹೃದಯಂ ವೈಶ್ಯ |
ಬುದ್ಧದಾಸಂಗೆ ಮತ್ತಾತನ ಮನೋರಮಣಿ |
ಬುದ್ಧದಾಸಿಗೆ ಜನಿಸಿ ಸರ್ವವಿದ್ಯಾಕಲಾಸಂಪನ್ನನಾಗಿ ಬೆಳೆದು ||
ಬುದ್ಧಸಂಘಂ ಮನೋಹರರೂಪಲಾವಣ್ಯ |
ವೃದ್ಧಿಯಂ ತಳೆದು ಯೌವನನಾಗಿ ಜಗದೊಳ್ಪ್ರ |
ಸಿದ್ಧತ್ವಮಂ ಪಡೆದು ಬಳಿಕ ಮಾದಿನ ತಜ್ಜಿನಾಲಯಕೆ ಬಂದು ನಿಲಲು || ೫ ||

ಶಚಿಮಹಾದೇವಿ ಸದ್ವಿಧಿಯಿಂದ ಪೂಜೆಯಂ |
ರಚಿಯಿಸುವ ತೆರದಿನತ್ಯಂತ ಮುದದಿಂ ಮನೋ |
ವಚನಕಾಯವಿಶುದ್ಧಿಯಲ್ಲಿ ವಿರವದ್ಯಮಪ್ಪರ್ಚನಾದ್ರವ್ಯದಿಂದ ||
ಶುಚಿಶುದ್ಧಸಮ್ಯಕ್ತ್ವಗುಣಮಣಿಗಣಾಭರಣೆ |
ಸಚರಾಚರೋರ್ವೀಶವೀತರಾಗಾಂಘ್ರಿಯಂ |
ಪ್ರಚುರತರವೈಭವದಿ ನೀಕ್ಷಿಸುವರಕ್ಷಿ ದಣಿವಂತೆ ಮಾಡುತ್ತಿರ್ದಳು || ೬ ||

ಸುರಭಿಸಮ್ಮಿಶ್ರನಿರ್ಮಲತೀರ್ಥವಾರಿಯಿಂ |
ವರಮಧುರರಸಭರಿತ ಫಲಪಾನಕಂಗಳಿಂ |
ನಿರವದ್ಯ ರಸರೂಪಗಂಧಪ್ರಯುಕ್ತ ಸಲ್ಲಲಿತ ಗೋಘೃತಧಾರೆಯಿಂ ||
ಸುರುಚಿರ ಸುಧೋಪಮಾನಕ್ಷೀರದಿಂ ಮನೋ |
ಹರತರಶರದ್ಘನಸಮಾನದಧಿಯಿಂ ಕರಂ |
ನಿರುಪಮವಿಲಾಸಯುತೆ ನಿತ್ಯತೃಪ್ತಂಗೆಯಭಿಷೇಕಮಂಗೆಯ್ದಳಾಗ || ೭ ||

ನಗೆಮೊಗದ ನಾರಿ ನವವಿಧತೀರ್ಥಜಲಮನಾ |
ಮಗಮಗಿಪ ಮೈಗಂಪಿನಬಲೆ ಗಂಧವನು |
ಧಗಧಗಿಪದಶನದ್ಯುತಿಯ ನೀರೆ ಧವಲಾಕ್ಷತೆಯ ಫುಲ್ಲಾಕ್ಷಿಪುಪ್ಷಗಳನು ||
ಸೊಗಸುವಾತಿನ ಸುಭಗೆ ಸವಿವಡೆದ ಭಕ್ಷ್ಯಮಂ |
ಸುಗುಣಮಣಿ ಮಣಿದೀಪಮಂ ಸಣ್ಣಸುಯ್ಲ ಸತಿ |
ಪೊಗೆಗಂಪನಾ ಬಿಂಬಫಲನಿಭಾಧರೆ ಫಲಮನಭಗವಗರ್ಚನೆಗೆಯ್ದಳು || ೮ ||

ಆಕ್ಷೇಪದಿಂದ ಮುಂದರಿಯದೆ ನಿನಗೆ ಸಮ |
ರಕ್ಷೋಣಿಯಲ್ಲಿ ಇದಿರಾದೆನ್ನ ಪತಿಗುತ್ತ |
ಮ ಕ್ಷಮಾಭಾವವನೆ ಮೆರೆದು ನೀಂ ಪ್ರಾಣಪ್ರತಿಷ್ಠೆಯಂ ಮಾಳ್ಪುದೆಂದು ||
ಸಾಕ್ಷಾತ್ಪ್ರಸೂನಾಯುಧನ ಮಡದಿ ಮೂಲೋಕ |
ರಕ್ಷಾಮಣಿಯ ಪದಕ್ಕೆರಗುವಂದದಿ ಪಂಕ |
ಜಾಕ್ಷಿ ಪದ್ಮಶ್ರೀ ಮನೋರಾಗದಿಂದ ಸಾಷ್ಟಾಂಗವಿನಮಿತೆಯಾದಳು || ೯ ||

ಆಕೆಯನನಂಗಚಕ್ರೇಶನ ಪರಾಕ್ರಮ ಪ |
ತಾಕೆಯಂ ಪ್ರದ್ಯುಮ್ನಶರಸದೃಶ ವಿಲಸಿತ ವಿ |
ಲೋಕೆಯಂ ವಿಶ್ರುತ ವಿಲಾಸವತಿಯಂ ಮನೋಭವನಿಧಾನದ ಬಯ್ಕೆಯಂ ||
ಈಕೆಯಿನ್ನೇಕೆಂದು ರಚಿಯನಂಗಜನಿಂದ |
ಸಾಕೆಂದೆನಿಸಿ ತಿರಸ್ಕಾರಮಂ ಮಾಡಿಸುವ |
ಲೋಕೈಕರೂಪೆಯಂ ಬುದ್ಧಸಂಘಂ ನೋಡಿ ನನೆಯಶರಕೊಳಗಾದನು || ೧೦ ||

ಲಲನಾಮಣಿಯ ಲಲಿತ ಲಾವಣ್ಯಸರಸಿಯೊಳ |
ಗೆಳವಾಳೆಯಂತೆ ತೊಳತೊಳಪ ನಗೆಮೊಗಮೆಂಬ |
ವಿಲಸದ್ವಿಮಲಸುಧಾಸೂತಿಮಂಡಲದೊಳುನ್ಮದಚಕೋರಂಗಳಂತೆ ||
ಥಳಥಳಿಪ ಬೊಗಸೆಗಣ್ಣೆಂಬ ನವತಾಮರಸ |
ದಳಗಳೊಳಗಳಿಕಳಭದಂತೆ ನೆರೆ ನಲಿದುವಾ ||
ಅಲಸದೆವೆಯಿಡದೆ ನಡೆನೋಡುತಿರ್ಪಾ ಬುದ್ಧಸಂಘನ ವಿಲೋಚನಗಳು || ೧೧ ||

ಸಾತಿಶಯಮಪ್ಪ ಸೌಭಾಗ್ಯವಂತೆಯನತಿ |
ಪ್ರೀತಿಯಂ ಮಿಗೆನೋಡುವಾ ವೈಶ್ಯನಂದನನ |
ಕಾತರಿಪ ಚಿತ್ತ ಕರಗುವ ಲಜ್ಜೆಯೊಸರಿಸುವರಿವು ತಡಬಡಗುಟ್ಟುವಾ ||
ಮಾತು ಮೈವಿಡದ ಬೆರಗಂ ಕಾಣುತಾ ಚಿತ್ತ |
ಜಾತನಲರಂಬುಗಳನಿಟ್ಟು ಕರ್ವಿನಬಿಲ್ಗೆ |
ಭೂತಳದೊಳಂಬುಗೂಡಾಗಿಬಿಳ್ವಂತೆ ಕೆಡೆಕೆಡೆಯೆನುತ್ತೆಚ್ಚನಾಗಾ || ೧೨ ||

ಅಲರಂಬ ಹೊತ್ತು ಹೊಮ್ಮಿರಿದು ಬಿಳ್ದೆಳ್ದು ನಿಜ |
ನಿಲಯಕ್ಕೆ ಬಂದಶೋಕೆಯ ತಳಿರತಲ್ಪದೊಳ್ |
ಮಲಗಿ ಮಲಯಜದ ಚರ್ಚೆಯನಿಕ್ಕಿ ಪೊಚ್ಚಪೊಸಪನಿನೀರಧಾರೆಯೆರೆದು ||
ಲಲಿತಪ್ರಸೂನವೀಜನದೆಲರ್ಗಂಗಮಂ |
ಸಲಿಸಿ ಸಿರಪಚ್ಚೆವುಡಿಯ ತಳಿದುಕೊಂಡು ಸ |
ಲ್ಲಿಲಿತೆ ಪದ್ಮಶ್ರೀಯ ವಿರಹದಿಂದಾದವಸ್ಥೆಯೊಳೆ ಪೊರಳುತುಮಿರ್ದನು || ೧೩ ||

ಕರಿಯಕಬ್ಬಿನ ಬೆಲ್ಲೊ ಕುಡುವುರ್ವೊ ನಗೆಗಣ್ಣೊ |
ಸುರಭಿಸರವೋ ಪಿಡಿದ ಪಳಯಿಗೆಯೊ ಮುಡಿಯೊ ಕೆಂ |
ಬರಲ ಕಯ್ಗೊರಡೊ ಚೆಲ್ಲಂದಳೆದ ಚೆಂದುಡಿಯೊ ಎಂಬ ಶಂಕಾಭಾವದಿ ||
ಸ್ಮರಶಸ್ತ್ರಶಾಲೆಯಾದಂಗದಂಗನೆಯ ಬಂ |
ಧುರಮೂರ್ತಿಕಣ್ಮನಂ ಬಿಡಿಯೆ ಜನಿಯಿಸಿದವಸ್ಥೆ |
ಯುರಿವೊಳಗುವರಿದು ಸುಡುವುದಿದೇನು ಚಿತ್ರವೋ ಭಾವಿಸಲ್ಕಾವಿರಹಿಯಾ || ೧೪ ||

ಬಿಸಿಲೊಳಗೆ ಬಿಸುಟ ಬಿರಿಮುಗುಳಂತೆ ತೀವ್ರಮ |
ಪ್ಪಸಮಶರಶಿಖಿಮುಖದಿ ಸಿಲುಕಿ ಗುಂಗುದಿಬಿಟ್ಟು |
ನಸುಬಲಂಬಡೆಯಲಾ ಮಗನ ಮೊಗಮಂ ನೋಡಿ ಕೆಟ್ಟೆನಿನ್ನೇವೆನೆಂದು ||
ಅಸವಳಿದು ಎಲೆ ಮಗನೆ ನಿನಗೆ ಬಂದನುವರಮ |
ನುಸಿರು ಮರೆ ಬೇಡೆಂದು ಕಟ್ಟುಮ್ಮಳಂಗೊಂಡು |
ಬೆಸಗೊಂಡ ತಾಯೊಡನವಂ ಲಜ್ಜೆದೊರೆದು ಬಳಿಕಿಂತೆಂದು ನುಡಿದನಾಗ || ೧೫ ||

ಎಲೆ ತಾಯೆ ಕೇಳು ನಿನ್ನೊಳಗೆ ತೆರೆಮರೆಯೇಕೆ |
ಯಲರಶರನಧಿದೇವತೆಯ ತೆರದಿನೊಪ್ಪುವಾ |
ಲಲಿತಾಂಗಿ ವಿಮಲದಾಸನ ತನೂಜಾತೆ ಪದ್ಮಶ್ರೀಯ ರೂಪುಗಂಡು ||
ಸಲೆಸೋಲ್ತೆನದರಿಂದ ಮೆಯ್ಕರಂ ಬಡವಾಯಿ |
ತಲವರಿಕೆಯಂ ಮಾಡದವಳನೇ ನನಗೆ ನೀ |
ವೊಲಿದು ಮದುವೆಯ ಮಾಡದಿರ್ದೊಡೆ ದಶಾವಸ್ಥೆಯಿಂದೆನಗೆ ಸಾವಪ್ಪುದು || ೧೬ ||

ಎಂಬ ನುಡಿಯಂ ಕೇಳಿ ಎದೆಹಳಿರೆಂದು ಮಿಗೆ ಹಮ್ಮ |
ದಂಬೋಗಿ ಎಲೆ ಮಗನೆ ಹೆಳವ ಮಾವಿನ ಹಣ್ಗೆ |
ಹಂಬಲಿಸುವಂತಾಯ್ತು ನಿನ್ನೆಣಿಕೆಯೆಂದದಂ ತನ್ನ ಗಂಡನೊಳುಸಿರಲು ||
ತಿಂಬುಂಬ ಸಮಯಮೆಮ್ಮದು ನಮ್ಮ ನಡೆಯವ |
ರ್ಗಿಂಬಾಗದಾ ಮೂಲಸಂಘದವರತಿನೀಚ |
ರೆಂಬರದರಿಂದವರ ಹೆಣ್ಣ ಬೇಡವುದು ನಮಗುಚಿತಮಲ್ಲೆನಲು ಕೇಳಿ || ೧೭ ||

ಪಿರಿದನಾಡಲದೇಕೆ ಪೀವರಸ್ತನೆಯನತಿ |
ಭರದಿಂದ ಮದುವೆ ಮಾಡದೊಡೆ ನನಗುಳಿವಿಲ್ಲ |
ನಿರುತಮೆಂಬಾ ನುಡಿಯ ಕೇಳಿ ನಿಜನಂದನಂಗೆಂದನಾ ಬುದ್ಧವಾಸಂ ||
ತರಹರದಿನತಿಶೈತ್ಯವತಿಮೃದುವನುಳ್ಳನೀ |
ರಿರದೆ ಪಾತಾಳಮಂ ಭೇದಿಸುವುದದರಿಂದ |
ತರುಣ ಕೇಳ್ಸಾಮಮಂ ಮಾಡಿದೊಡೆ ತಾ ನೆನೆದ ಕಾರ್ಯಮಪ್ಪುದು ತಪ್ಪದೆ || ೧೮ ||

ಎಂದು ಮಗನಂ ಸಂತಸವಡಿಸಿ ಜಿನಮಂದಿರಕೆ |
ಬಂದು ಕಪಟದಿ ಯಶೋಧರಮುನಿಯ ಪಾದಾರ |
ವಿಂದಕ್ಕೆ ನಮಿಸಿ ಎಲೆ ಮುನಿನಾಥ ನಾನಿನಿತು ಕಾಲವಲ್ಲದ ಸಮಯವಾ ||
ಮುಂದರಿಯದೇ ಪೊದ್ದಿ ಗತಿಗೆಟ್ಟುಪೋದೆನದ |
ರಿಂದ ಲೋಕೋತ್ತರಮೆನಿಪ್ಪ ನಿನ್ನೀ ಸಮಯ |
ದೊಂದು ಸುವ್ರತಮನೀಯಲ್ಬೇಕೆನುತ್ತದಂ ಕೈಕೊಂಡು ಮನೆಗೆ ಬಂದು || ೧೯ ||

ಗರಳಮಂ ಬಿಡದೆ ಹೆರೆಯಂ ಬಿಸುಡುವಹಿಯಂತೆ |
ದುರುಳನವನಂತರರಂಗದ ದೋಷಮಂ ಬಿಡದೆ |
ಪಿರಿದು ಕಪಟದಿ ತನ್ನ ಮೊದಲ ವೇಷವ ಬಿಟ್ಟು ಸದ್ಧರ್ಶನವ್ರತವನು ||
ಧರಿಸಿ ನಡೆಯುತ್ತಿರಲ್ಕಾ ವಿಮಲದಾಸನುರು |
ತರಮುದದಿನಿವನಂತೆ ಪರಮಧಾರ್ಮಿಕನಾರು |
ಧರಣಿಯೊಳಗೆಂದವನ ಕೊಡೆ ಮೈತ್ರೀಭಾವಮಂ ಮಾಡಿ ಸುಖದಿನಿರಲು || ೨೦ ||

ಅಂದವಡೆದೀ ತೆರದಿ ಸದ್ಧರ್ಮವಾತ್ಸಲ್ಯ |
ದಿಂದವಗತಿಸ್ನೇಹಮಂ ಮಾಡಿಕೊಂಡಿರಲ್ |
ನಂದೀಶ್ವರನೋಂಪಿ ಬರಲವನಕೂಡಿ ನೋಂಪಿಯನೆಂಟು ಪಗಲು ಮಾಡಿ ||
ಅಂದಿನುಪವಾಸಾಂತರದ ಪಾರಣೆಯನು ಮನ |
ಸಂದೆಮ್ಮ ಮನೆಯಲ್ಲಿ ಮಾಡಬೇಕೆಂದು ಮುದ |
ದಿಂದ ತದ್ವಿಮಲರಾಜಶ್ರೇಷ್ಠಿಯಾ ಬುದ್ಧದಾಸನಂ ಸನ್ಮಾನಿಸಿ || ೨೧ ||

ಸಡಗರದಿ ಮಂದಿರಕ್ಕೊಡಗೊಂಡುಬಂದು ಸಂ |
ಗಡದಿನೊಂದೇ ಪಂಕ್ತಿಯಲ್ಲಿ ಕುಳ್ಳಿರಿಸಿ ಸವಿ |
ವಡೆದ ನಾನಾತೆರದ ಭಕ್ಷ್ಯಮಂ ಹೊಸಹೊನ್ನಹರಿಯಣದೊಳೆಡೆಮಾಡಿಸಿ ||
ಕಡುಬಳಲ್ದಿರಿ ಭೋಜನಂ ಮಾಡಿಯೆಂದೆಂಬ |
ನುಡಿಗೇಳಿ ಎಡೆಯಲ್ಲಿ ಬುದ್ಧದಾಸಂ ಕಯ್ಯ |
ನಿಡದಿರಲ್ಸಂಶಯಂ ಬಟ್ಟಿದೇಕೆಂಬ ಸಜ್ಜನಬಂಧುಗಿಂತೆಂದನು || ೨೨ ||

ಎಲೆ ವೈಶ್ಯಕುಲತಿಲಕ ನಿನ್ನ ಸುಕುಮಾರಿ ಸ |
ಲ್ಲಲಿತೆ ಪದ್ಮಶ್ರೀಯನೆನ್ನ ನಿಜತನುಜಾತ |
ಗೊಲಿದು ಕೊಟ್ಟೊಡೆ ಭೋಜನಂ ಮಾಳ್ಪೆನಲ್ಲದೊಡೆ ನಿನ್ನ ಮನೆಯೊಳಗುಣಿಸಲು ||
ನೆಲೆಯಾಗಿಮಾಳ್ಪುದಿಲ್ಲೆಂಬ ನುಡಿಗೇಳಿ ನಿ |
ರ್ಮಲಹೃದಯನಾ ವಿಮಲದಾಸನಿಂತೆಂದನಾ |
ಖಳನೊಡನೆ ಶುದ್ಧಸಮ್ಯಗ್ಧೃಷ್ಟಿ ನಿನಗೆ ಮಗಳಂ ಕುಡುವುದಕ್ಕೆಣಿಕೆಯೇ || ೨೩ ||

ಎಂದು ನುಡಿದೊಂದು ಪಂಕ್ತಿಯೊಳೂಟಮಂ ಮಾಡಿ |
ಸಂದಹರ್ಷದಿ ಮನೆಗೆ ಬೀಳ್ಕೊಟ್ಟು ಬಳಿಕ ಭರ |
ದಿಂದೊಂದು ಶುಭಮುಹೂರ್ತದೊಳು ಪದ್ಮಶ್ರೀಯನಾ ಬುದ್ಧಸಂಘಗೊಲಿದು ||
ಮುಂದೇತರಪ್ರಿಯದಿ ಮದುವೆಯಂ ಮಾಡಿ ಪಲ |
ವಂದದುಡುವಲಿಗೊಟ್ಟು ನಿಜಸುತೆಯನಾ ಅಳಿಯ |
ನೊಂದಾಗಿ ಕಳುಹಿ ನಿಶ್ಚಿಂತದಿಂದಾ ವೈಶ್ಯವಿಭು ವಿಮನದಾಸನಿರಲು || ೨೪ ||

ಅತ್ತ ಕಾಪಟ್ಯಹೃದಯಂ ಬುದ್ಧದಾಸನಾ |
ವತ್ತಮವ್ರತವ ಕೆಲದಿವಸದಿಂದಂ ಮೇಲೆ |
ಪತ್ತುವಿಟ್ಟಾ ತನ್ನ ಬುದ್ಧ ಸಮಯದ ದುಶ್ಚರಿತ್ರಮಂ ಹೊದ್ದೆ ಕಂಡು ||
ಎತ್ತಣಿಂದೆತ್ತಬಂದಿತ್ತು ಎನಗಜ್ಞತೆಯೆ |
ನುತ್ತ ಒತ್ತರಮೊತ್ತಿದಂತೆ ಬಾಳ್ದವನಲ್ಲ |
ಸತ್ತವನುಮಲ್ಲದಾ ವಿಮಲದಾಸಂ ಮಗಳ ಪಾಪಮೀತೆರನಾದುದು || ೨೫ ||

ಎನುತ ತನ್ನಜ್ಞತೆಗೆ ಯವನಸಿಕ್ಕುಸುಯ್ಗಂಟು |
ತನಕೆ ತಾನೇ ನಾಣ್ಚಿ ವಿಮಲದಾಸಂ ತನ್ನ |
ಮನದೊಳೆಣಿಸುತ್ತಿರಲ್ಕತ್ತಲಾ ಖಳನ ನಿಜಗುರು ಪದ್ಮಸಂಘನೆಂಬಾ ||
ಅನುಮಾನಶಾಸ್ತ್ರಯುತನಾ ಮನೆಗೆ ಬಂದು ಜನ |
ವಿನುತೆ ಪದ್ಮಶ್ರೀಯೊಳಿಂತೆಂದನವನಿಯೊಳ್ |
ಘನತರಂಬಡೆದುದೆಮ್ಮೀಸಮಯಮಲ್ಲದೆ ಮತ್ತೊಂದು ಸಮಯವಿಲ್ಲ || ೨೬ ||

ಅದನರಿದು ನಮ್ಮ ಸಮಯಮನಾಚರಿಸು ಮುದದಿ |
ನಿದರಿಂದ ಕೈವಲ್ಯವಹುದೆಂದೆನಲ್ಕೇಳಿ |
ಸದಮಲಚರಿತ್ರನಿಧಿ ಸುಭಗೆ ಪದ್ಮಶ್ರೀಯವನೊಳಿಂತೆಂದು ನುಡಿದಳಾಗ ||
ಅದುಲೇಸು ಮದ್ಯಮಾಂಸವನು ತಿಂಬುಂಬ ಸಮ |
ಯದೊಳುಂಟೆ ಮುಕ್ತಿಮಾರ್ಗಂ ದಯಾಮೂಲಧ |
ರ್ಮದೊಳಲ್ಲದೇ ಅದಂ ಬಿಡುವುದಮೃತವಬಿಟ್ಟು ನಂಜುಂಬರಂತಪ್ಪುದು || ೨೭ ||

ಎನಲವಳ ನುಡಿಗುತ್ತರಂಗುಡುವುದಾಗದೇ |
ಮನೆಗವಂ ಪೋಗೆ ಪದ್ಮಶ್ರೀಗುಣಾಬ್ಧಿಯಾ |
ಮನೆಯಲ್ಲಿ ಕೂಳುನೀರಂ ಕೊಳ್ಳದಿರೆ ಕಂಡು ತತ್ಕಾಂತಬುದ್ಧಸಂಘಂ ||
ಮನವಾರೆಯವಳೊಳತಿಸೋಲ್ತಕಾರಣದಿಂದ |
ವನಿತೆ ನಿನ್ನಾಚರಣೆಯಲ್ಲದೇ ಬೇರೊಂದು |
ಕನಸುಮನಸಿನೊಳಿಲ್ಲವೆಂದವಳ ಸಂತಯಿಸಿಯಾ ಮನೆಯ ಸೀಮೆಯಲ್ಲಿ || ೨೮ ||

ಆರುಹೊದ್ದದ ತೆರದಿ ಬೇರೊಂದು ಮನೆಗಟ್ಟಿ |
ಚಾರಿತ್ರವಂತೆಯೊಳ್ಸುಖವಾಳುತಿರಲತ್ತ |
ಕಾರುಣ್ಯನಿಧಿ ವಿಮಲದಾಸಂಗೆ ರೋಗದಿಂದುತ್ತಮಸಮಾಧಿಯಾಗೆ ||
ವಾರಿರುಹವದನೆ ಪದ್ಮಶ್ರೀ ಕರಂ ದುಃಖ |
ವಾರಾಶಿಯೊಳ್ಮೂಡಿಮುಳುಗುತಿರಲದನು ಕೇ |
ಳ್ದಾರಯ್ಯದವಳನುಪಚರಿಪೆನೆಂದವಳೆಡೆಗೆ ಗುರುಬುದ್ಧಸಂಘ ಬಂದು || ೨೯ ||

ತಾತನಳಿದುದಕೆ ತರಳಾಕ್ಷಿ ಚಿಂತಿಸಲೇಕೆ |
ಭೂತಳದೊಳಾರ್ತಂದೆತಾಯಿತನುಜಾತ |
ರೀತೆರನನರಿಯಬೇಡವೆ ನಿನ್ನ ಜನಕನಳಿದೀ ಊರ ಕಾನನದೊಳು ||
ಮಾತೇನು ಮೃಗಮಾಗಿ ಜನಿಯಿಸಿದನವನೊಳಗೆ |
ಪ್ರೀತಿಯಂ ಮಾಡಿ ಕರೆಕರೆಗೊಂಬರೇ ಜನವಿ |
ನೂತೆ ಕೇಳೆಂದೆಂಬ ಬುದ್ಧಗುರುವಿನೊಳಾ ಚರಿತ್ರನಿಧಿ ನುಡಿದಳಿಂತು || ೩೦ ||

ಹರಿಣಿಬಸಿರೊಳಗೆನ್ನ ಜನಕನುದಿಸಿದನೆಂಬ |
ಪರಿಯನೀವೆಂತರಿವಿರೆನಲೆಂದನಾ ಬೌದ್ಧ |
ಗುರು ತರುಣಿ ಕೇಳ್ನಮಗೆ ಕಾಲತ್ರಯಮನರಿವ ಬೋಧವುಂಟದು ಕಾರಣಾ ||
ನಿರುತಮೀ ತೆರನೆಂಬ ಕಾಲತ್ರಯಮನರಿವ ಬೋಧವುಂಟದು ಕಾರಣಾ ||
ನಿರುತಮೀ ತೆರನೆಂಬ ನುಡಿಗೇಳಿ ನಸುನಕ್ಕು |
ಗರುವೆ ತನ್ನೊಳಗೆ ತಾನಿಂತೆಂದಳಾ ತಮ್ಮ |
ದರುಶನದ ಕುರುಹ ನಾನರಿಯೆನೇ ಬೇರಬಲ್ಲವರೆಲೆಯ ಕುರುಹರಿಯರೇ || ೩೧ ||

ಎಂದೆಣಿಸಿ ಬಹಿರಂಗದೊಳಗೊಳ್ಳಿತಂ ನುಡಿದು |
ಮುಂದಿರಕೆ ಕಳುಹಿ ಪತ್ತೆಂಟು ದಿನಗಳ ಮೇಲೆ |
ಯಿಂದೀವರಾಕ್ಷಿ ಪದ್ಮಶ್ರೀ ನಿಜಾಲಯಕ್ಕಾ ಬೌದ್ಧಗುರುವಾತನಾ ||
ಒಂದಾಗಿಯವನ ಶಿಷ್ಯರುಗಳಂ ಕರಿಸಿ ನೀ |
ವಿಂದು ನನ್ನಾಲಯದೊಳೂಟಮಂ ಮಾಡಬೇ |
ಕೆಂದು ಸಮ್ಮನಿಸಲವರತ್ಯಂತಹರ್ಷದಿಂ ಕುಳ್ಳಿರಲ್ಕಾ ಕೋಮಲೆ || ೩೨ ||

ಅವರೆಡದ ಕಾಲಕೆರಹುಗಳನೊರ್ವಳ ಕಯ್ಯೊ |
ಳವರರಿಯದಂದದಿಂ ತರಿಸಿ ಸಂಬಳಿಸಿ ಬಳಿ |
ಕವರ ವಿವರಮನಾರರಿಯದಂತೆ ಸಂಭಾರಮಂ ಹಾಕಿ ಪಾಕಗಳನು ||
ಸವಿಯಪ್ಪ ತೆರದಿ ಹಸನಾಗಿ ಮಾಡಿಸಿ ಕರಂ |
ಸವಿನಯದಿನೆಡೆಯ ಮಾಡಿಸಿ ತಂದುಕುಳ್ಳಿರಿಸಿ |
ನವಭಕ್ಷ್ಯಗಳ ಮಧ್ಯದಲ್ಲಿ ಬಡಿಸಿದೊಡೆ ಸವಿಸವಿದುಂಡರತಿಹರ್ಷದಿ || ೩೩ ||

ಉಂಡು ಕಯ್ದೊಳೆದು ಕರ್ಪೂರತಾಂಬೂಲಮಂ |
ಕೊಂದು ಕಸ್ತೂರಿ ಕಾಶ್ಮೀರಿ ಪನಿನೀರು ಸಿರಿ |
ಖಂಡಾದಿಯಾದ ಸೌರಭ್ಯಲೇಪನಮುಮಂ ಧರಿಸಿ ಪದ್ಮಶ್ರೀಯನು ||
ಕೊಂಡಾಡಿ ಪಲವು ಸೂಳೆಲೆಮಗಳೆ ನೀ ಮನಸು |
ಗೊಂಡೆಮ್ಮ ಸದ್ಗತಿಯನೀವ ಧರ್ಮವನು ಕೈ |
ಕೊಂಡೊಡುತ್ತಮಮಪ್ಪುದೆಂದೊಡಂತೆಗೆಯ್ವೆನೆನೆ ಮನೋರಾಗದಿಂದ || ೩೪ ||

ವರಗೃಹತೆ ಪೋಪೆವಾವೆಂದುಜ್ಜಗಿಸಿ ತಮ್ಮ |
ಚರಣರಕ್ಷೆಗಳೊಳೊಂದೊಂದು ತಾಮಾಮುನ್ನ |
ಮಿರಿಸಿದೆಡೆಯೊಳಗಿಲ್ಲದಿರೆ ಮರುಗಿಯಲ್ಲಿರ್ದಳೋರ್ವ ಚೇಟಿಯನು ಕೇಳೆ |
ಸರಸವೇ ನಿಮ್ಮೊಡನೆ ನಾನೆಂತು ಬಲ್ಲೆನೆನೆ |
ತಿರುಗಿ ಮತ್ತಾ ಸತ್ಯವಂತೆಯಲ್ಲಿಗೆ ಬಂದು |
ತರುಣಿ ನೀನರಿದುದಿಲ್ಲವೆ ನಮ್ಮ ಪದರಕ್ಷೆಗಳ ಹೋದ ಹೊಲಬನೆನಲು || ೩೫ ||

ಕಾಲತ್ರಯಜ್ಞಾನಿಗಳ್ನಾಮೆನುತ್ತೆಂದು |
ಕಾಲಗಂಡಯ್ಯನಾಮೃಗವಾದನೆಂಬುದಂ |
ಹೇಳುವೆಡೆಯಲ್ಲಿ ಸಾಮರ್ಥ್ಯರಾದವರೀಗ ನಿಮ್ಮೊಡವೆ ಹೋದಹದನಾ ||
ಹೇಳಲಿಲ್ಲವೆಯೆನಲ್ಕವರು ಸುಮ್ಮನೆಯಿರಲ್ |
ಬಾಲೆಯಿಂತೆಂದಳಾ ನಿಮ್ಮೊಡಲೊಳಿರ್ದವಂ |
ಹೇಳಲರಿಯದರಿದಿರನೆಂತರಿವಿರೆನಲವರ್ನೀನೆಂತು ಬಲ್ಲೆಯೆನಲು || ೨೬ ||

ಗರುವೆ ಪದ್ಮಶ್ರೀ ನುಡಿದವಳರೊಳಿಂತೆಂದು |
ಪರಮ ಜಿನಧರ್ಮಮಂ ಪೊರ್ದಿದಾ ಶ್ರಾವಕರು |
ನಿರುಪಮಜ್ಞಾನವಿದರೆನಲದಂ ಪುಸಿಯೆನಲ್ನನ್ನ ನುಡಿ ತೊದಲಾದೊಡೆ ||
ಮರಳಿಸಿಯದಂ ನೋಡಿಮೆನಲವರ್ಬಾಯೊಳಗೆ |
ಬೆರಲಿಕ್ಕಿವಾಂತಿಯಂ ಮಾಡಿಯೊಡಲಿಂ ಸುರಿದ |
ಕೆರಹಿನಟ್ಟೆಗಳ ತುಂಡಂ ಕಂಡು ಪಿರಿದಾಗಿ ಕೊಕ್ಕರಿಸಿ ಚಿಃ ಎನುತವೆ || ೩೭ ||

ಕೌಟಿಲ್ಯದಿಂ ಸ್ನೇಹಮಂ ಮಾಡಿ ತನ್ನ ಮನೆ |
ಯೂಟಕ್ಕೆ ಕರಿಸಿ ನಮ್ಮಾ ವ್ರತಂಗೆಡಿಸಿದೀ |
ತಾಟಿಗಿತ್ತಿಗೆ ತಕ್ಕುದಂ ಮಾಡಿಸದೊಡೆ ನಾವೇತರವರೆಂದು ಬಂದು ||
ಕೂಟದರಸುಗಳೋಲಗದೊಳಿರ್ದ ನೃಪಗವಳ್ |
ಚಾಟುತನದಿಂ ಮಾಡಿದಟಮಟವನುಸಿರೆ ಕೋ |
ಪಾಟೋಪದಿಂದ ಮೀಲಂಡೆಯಂ ಪೊರಮಡಿಸಿ ನಮ್ಮ ಪೊಳಲಿಂದಮೆನಲು || ೩೮ ||

ತ್ವರಿತದಿ ತಳಾರರೆಯ್ತೆಂದು ಪದ್ಮಶ್ರೀಯ |
ನಿರಬೇಡವೆಂದೆನಲ್ಬುದ್ಧಸಂಘಂ ತನ್ನ |
ವರಸತಿಯಕೊಡೆ ಪೊರಮಡುವುದಂ ಕಂಡು ತತ್ಪಿತೃ ಕೆಲವು ವಿತ್ತಮಿತ್ತು ||
ಪುರದಿಂದ ಕಳುಹಿ ಪೊರಮಟ್ಟು ಬರುತಿರಲಲ್ಲಿ |
ಪರದೇಶದಿಂ ಬಂದು ಪರದುಗೆಯ್ಯಲ್ಕೆನುತ |
ಪರದರಿಭದತ್ತನೀಶ್ವರದತ್ತನೆಂಬವರ್ಬಿಟ್ಟ ಬೀಡಿಂಗೆ ಬರಲು || ೩೯ ||

ಆ ವಣಿಗ್ವರೊಳಿಭದತ್ತನೆಂಬವನವರ |
ನಾವಾಸಕೊಡಗೊಂಡು ಪೋಗಿಯಾ ಸತ್ಯನಿಧಿ |
ಲಾವಣ್ಯವಂತೆ ಪದ್ಮಶ್ರೀಯನಾ ತನ್ನ ಪೆಂಡಿರಿರ್ದೆಡೆಯೊಳಿರಿಸಿ ||
ಆವಾಗಮಾ ಬುದ್ಧಸಂಘಂಗೆ ತನ್ನಂತೆ |
ಭಾವಶುದ್ಧಿಯೊಳೂಟಮೀಹಮಂ ಮಾಡಿಸು |
ತ್ತೋವದೊಡಹುಟ್ಟಿದರ ಕಂಡಂತೆ ಕಂಡು ಬಂಧುತ್ವಮಂ ಬಲಿಯುತಿರಲು || ೪೦ ||

ಮತ್ತವರೊಳಿಭದತ್ತನಂ ಕೊಲಲ್ಬೇಕೆಂದೆ |
ನುತ್ತುಮಿಶ್ವರದತ್ತನತಿಕಪಟದಿಂದ ಬಗೆ |
ಯುತ್ತವನ ಬೋಜನಕೆ ಪಾಕಮಾಡುವಳೊರ್ವಳಂ ಕರೆದುಕೊಂಡು ಬಹಳ ||
ವಿತ್ತಮಂ ಕೊಟ್ಟವಳನೊಡಬಡಿಸಿಕೊಂಡು ಬಳಿ |
ಕೊತ್ತಂಬದಿಂ ಕೊಲಲ್ಗರಳಮಂ ಕೊಟ್ಬೂಡವ |
ಳುತ್ತಮದ ಕಜ್ಜಾಯದೊಡವೆರಸಿಯಡುಗೆಯಂ ಮಾಡಿಯೆಡೆಮಾಡಲಾಗ || ೪೧ ||

ಜನವಿನುತನಿಭದತ್ತನಾ ಬುದ್ಧಸಂಘನಂ |
ವಿನಯದಿಂದರ್ಧವರ್ಸಿಹವಾಸಿಗಳ್ವೆರಸಿ |
ಯನುರಾಗದಿಂದೆಡೆಯ ಮುಂದೆ ಕುಳ್ಳಿರಲವಳ್ಕರೆದು ಪದ್ಮಶ್ರೀಯನು ||
ನನುವಾಗಿ ನೀನೆ ಎಡೆಮಾಡೆಂದು ಹೇಳಿಯಾ |
ವಿನುತಗುಣಮಣಿನಿಧಾನೆಯ ಕಯ್ಯೊಳುಣಬಡಿಸುತಿರ್ದು ತನ್ಮಧ್ಯದಲ್ಲಿ || ೪೨ ||

ಗರಳಮಂ ಕೂಡಿಮಾಡಿದ ಹಿಟ್ಟ ಬೇರೆ ತೆಗೆ |
ದಿರಿಸಿಯವನೆಮ್ಮ ಸೆಟ್ಟಿಯರ್ಗಲ್ಲದೇ ನಿನ್ನ |
ಪುರುಷ ಮೊದಲಾದವರ್ಗಿಕ್ಕಬೇಡಾಯೆಂದು ಕೊಡಲವಳ್ಕೊಂಡು ಬಂದು ||
ಗರುವೆಯರ್ದಾಕ್ಷಿಣ್ಯಮಂ ಮಾಡಿ ಪಂಕ್ತಿಯೊಳ್ |
ಪರಪಂಚಮಂ ಮಾಡೆ ದೋಷಮೆಂದೆಲ್ಲರ್ಗೆ |
ಸರಿಯಾಗಿ ಬಡಿಸಲವರುಂಡುಕಯ್ದೊಳೆವ ಸಮಯದೊಳು ಮೈಮರೆದುರುಳ್ದರು || ೪೩ ||

ಅಂತದಂ ಕಂಡು ಪದ್ಮಶ್ರೀ ಕರಂ ನೋವು |
ತಿಂತೆಂದಳಕಟಕಟ ನಾನವಳ ನುಡಿಗೇಳಿ |
ಸಂತಸದಿನುಣಬಡಿಸಲೊಡನೆ ನನ್ನೋಪನುಂ ಮೊದಲಾದ ಬಂಧುಜನವು ||
ಅಂತಕನಿವಾಸಕೆಯ್ದಿದರಿದೆಲ್ಲಂ ನನ್ನ |
ಪಿಂತಣಘವೈಸೆ ಇನ್ನೆನಗೆ ಜಿನದಿಕ್ಷೆಯೇ |
ಮುಂತಣುಜ್ಜುಗಮೆಂದು ನಿಶ್ಚಿಂತದಿಂ ಜಿನಸ್ಮರಣೆಯಂ ಮಾಡುತಿರಲು || ೪೪ ||

ನೋಡಿರೆ ವಿಮಲದಾಸನ ಮಗಳ್ಗರಳಮಂ |
ಕೂಡಿ ಮಾಡಿದ ಹಿಟ್ಟನಾ ತನ್ನ ಪತಿಯುಮಂ}
ಕೂಡಣಿರ್ದವರುಮಂ ತಿನಿಸಿ ತಾನಿನೊಬ್ಬನೊಡನೋಡಿಹೋಹೆನೆಂದು ||
ಮಾಡಿದರುಗುಲಿಯನೆನುತಾ ಹರದರುಂ ಬಿಟ್ಟ |
ಬೀಡಿನೊಳ್ ಮೊದಲು ಕಾಪಟ್ಯಮಂ ಮಾಡಿದವ |
ಳಾಡಲದು ಜನಜನಿತಮಾದುದತಿ ದೋಷಿಗಳ ಸಂಗವೇನಂ ಮಾಡುದು || ೪೫ ||

ಆ ವಾರ್ತೆಯಂ ಕೇಳಿ ಬುದ್ಧದಾಸಂ ಬಂದು |
ಸಾವಡೆದು ಬೀಳ್ದಿರ್ದ ನಿಜಸುತನುಮಂ ಕಂಡು |
ಭೂವಳಯದೊಳಗುರುಳಿಬಿಳ್ದು ಹಾಹಾಕ್ರಂದನಂಗೆಯ್ದು ನನ್ನ ಸುತಗೆ ||
ಈ ವಿಷಯನಿಕ್ಕಿದಳ್ನೀನೇಯೆಂದೆನುತ ಕೋ |
ಪಾವೇಶದಿಂದ ಮುಂದಲೆವಿಡಿದು ತಂದು ಮ |
ತ್ತಾ ವಸುಧೆಯಲ್ಲಿ ಬಿಳ್ದಾ ಮಗನ ಕಾಲದೆಸೆಯಲ್ಲಿ ಕುಳ್ಳಿರಿಸಿ ಬಳಿಕ || ೪೬ ||

ಜನನಿಜನಕರು ಬಂಧುಬಳಗವೆಲ್ಲವ ಬಿಟ್ಟು |
ವಿನುತಮಪ್ಪೀ ಬುದ್ಧಸಮಯಮಂ ಪರಿಪಡಿಸಿ |
ಮನಗೊಂಡು ನಿನ್ನ ಬೆಂಬಳಿಯಲ್ಲಿ ಬಂದು ದೇಸಿಗನಾದನೀಗಲೆನ್ನಾ ||
ಮನದಾಣ್ಮನೆಂದು ಮರುಕಂಬಡೆಯದೇ ನನ್ನ |
ತನುಜನಂ ಕೊಂದೆಯಲ್ಲಾ ಎಂದು ಕೂರಸಿಯ |
ನನುಪಮ ಚರಿತ್ರವಂತೆಯ ಕೊರಲ್ಗಿಟ್ಟು ಜೀವಂಗೊಳ್ವೆನೆಂದೆನುತಿರೆ || ೪೭ ||

ಭೂಜನವಿನೂತೆ ತನ್ನಂತರಂಗದೊಳು ನನ |
ಗೀಜನ್ಮಕೀ ಬುದ್ಧಸಂಘನೇ ವಲ್ಲಭಂ |
ಶ್ರೀಜೈನಮಾರ್ಗಮೇ ಮಾರ್ಗಮುಳಿದುವು ತಿರಸ್ಕಾರಮೆಂದಾ ಮನದೊಳು ||
ತ್ರೈಜಗತ್ಪೂಜ್ಯಮಪ್ಪಾ ಪಂಚಗುರುಪದಸ |
ರೋಜಮಂ ನಿಜಮನೋವಾಕ್ಕಾಯಶುದ್ಧಿಯೊಳ್ |
ಗೋಜೆ ಮಿಗೆ ಭಾವಿಸುವ ಸಮಯದೊಳಗಾ ನಗರದೇವತೆಗಳೆಲ್ಲಾ ನೆರೆದು || ೪೮ ||

ದುರುಳನಾಕೆಯ ಕೊರಲ್ಗಿಟ್ಟ ಕೂರಸಿಯನಿರ |
ದರಲಮಾಲೆಯ ಮಾಡಿಯಾ ಬುದ್ಧಸಂಘನಂ |
ವರವೈಶ್ಯಸಮಿತಿಯಂಗದೊಳಸುವ ಪೂರೈಸಿ ಮಣಿಮಂಟಪವನು ಮಾಡಿ ||
ತರುಣಿಯಂ ಕುಳ್ಳಿರಿಸಿ ಪದಿನಾಲ್ಕು ನದಿಯ ಬಂ |
ಧುರ ಜಲದಿನಭಿಷೇಕಮಂ ಮಾಡಿ ನವವಸ್ತ್ರ |
ಸುರುಚೆರಾಭರಣಾನುಲೇಪನಪ್ರಸವದಿಂ ಪೂಜಿಸಿದರಳ್ತಿಯಿಂದ || ೪೯ ||

ಆ ವೇಳೆಯಲ್ಲಿಯಾಶ್ಚರ್ಯಪಂಚಕಮಾಗೆ |
ಭೂವರಂ ದಾಡಿವಾಹನನೆಯ್ದಿ ಬಳಿಕಾ ನಾ |
ನಾವಿಧದಿ ಕೊಂಡಾಡಿ ಜಿನದರ್ಶನದ ಮಹಾತ್ಮೆಗೆ ಮಹಾಮೋದವೆತ್ತು ||
ಭೂವಲಯದೊಳಗಿದಲ್ಲದೆ ಧರ್ಮಮಿಲ್ಲೆಂದು |
ಭಾವಶುದ್ಧಿಯೊಳು ತುತಿಯಿಸಿ ಬಳಿಕ ನಿರ್ವೇಗ |
ಮಾವರಿಸೆ ಹೃದಯದೊಳು ಸಂಸ್ಕೃತಿಯ ದಂದುಗಮನಿರದೆ ಪರಿಪಡಿಪೆನೆಂದು || ೫೦ ||

ಬಳಿಕ ನಿಜತನುಜ ನಯವಿಕ್ರಮಗೆ ರಾಜ್ಯಮಂ |
ತಳುವದೇ ಕೊಟ್ಟು ಭೂಮಂಡಲೇಶರ್ಕೆಲರ್ |
ಬಳಿವಳಿಯೊಳೆಯ್ದೆ ಭರದಿಂ ಯಶೋಧರಮುನಿಯ ಪದಪದ್ಮಮೂಲದಲ್ಲಿ ||
ತಳೆಯೆ ಜಿನದೀಕ್ಷೆಯಂ ಶ್ರಾವಕವ್ರತಮನನು |
ಗೊಳಿಸಲಾ ಬುದ್ಧದಾಸಾದಿಗಳ್ಕೆಲರಿಳಾ |
ತಳದೊಳಿದುವೇ ಧರ್ಮಮೆಂದು ನಿಶ್ಚಯಮಪ್ಪ ಪರಿಣಾಮಮಂ ತಳೆದರು || ೫೧ ||

ಆ ವಸುಮತೀವಲ್ಲಭನ ಪಟ್ಟದರಸಿ ಪ |
ದ್ಮಾವತಿ ಪಲಂಬರಬಲೆಯರು ತನ್ನೊಡವರಲ್ |
ಭೂವಿನುತಮೂರ್ತಿ ಪದ್ಮಶ್ರೀಸಮನ್ವಿತಂ ಬಂದು ಭರಭಕ್ತಿಯಿಂದ ||
ಒದವೆ ಸರಸ್ವತಿಯರೆಂಬ ಕಂತಿಯರಿಂದ |
ಭಾವಶುದ್ಧಿಯೊಳು ದೀಕ್ಷೆಯನಾನಲಂದು ನನ |
ಗಾವರಿಸಿತಧಿಕ ಸಮ್ಯಕ್ತ್ವಮೆಂಬಾ ಪದ್ಮಲತೆಯ ನುಡಿಯಂ ಕೇಳುತ || ೫೨ ||

ಅನುರಾಗಮೊದವೆ ಅರ್ಹದ್ದಾಸನಾ ಉಳಿದ |
ವನಿತೆಯರದಕ್ಕೆ ಇಚ್ಛಾಕಾರಮಂ ಮಾಡೆ |
ಜನವಿನುತೆ ರತ್ನತ್ರಯಾಭರಣೆ ಕಿರಿಯ ಸತಿ ಕುಂದಲತೆಯಿಂತದಕ್ಕೆ ||
ಮನಗೊಡದೆ ನುಡಿದಳಿಂತೆಂದಿವೆಲ್ಲಂ ಮಿಥ್ಯೆ |
ಯನುಮಾನವಲ್ಲದೇ ನಿಜವಲ್ಲಮೆನೆ ಕೇಳಿ |
ಜನತಾಧಿನಾಯಕನುಮಾ ಮಂತ್ರಿಯುಂ ತಮ್ಮೊಳಿಂತೆಂದೆಣಿಸುತಿರ್ದರು || ೫೩ ||

ಸಾಕ್ಷಾತ್ಕರಿಸಿದ ಸಮ್ಯಕ್ತ್ವದ ಮಹಾತ್ಮೆಯಂ |
ಲಕ್ಷೀಕರಿಸದೆ ತಾನೊಡಬಡುವುದಿಲ್ಲವೆಂ |
ಬೀ ಕ್ಷುದ್ರಮಾನಸೆಯನೀವೂರಕೇರಿಯರಿವಂದದಿಂದುದಯಮಾದಾ ||
ಆಕ್ಷಣವೆ ಹಿಡಿತರಿಸಿ ನುಡಿದ ಬಾಯಿಗೆ ತಕ್ಕ |
ಶಿಕ್ಷೆಯಂ ಮಾಡಿಸುವೆವೆಂದು ನಿಜಹೃದಯದೊಳ |
ಗಾಕ್ಷೇಪಮಂ ಮಾಡುತಿರಲತ್ತಲಾ ಚೋರನಿಂತೆಂದೆಣಿಸುತಿರ್ದನು || ೫೪ ||

ಉದನಿಧಿಯನುಬ್ಬಿಸುವನುತ್ಪಲಮನಲರಿಸುವ |
ಸದಮಲತೆಯಂ ದಿಶಾವಳಿಗೆ ಮಾಡುವ ದಿವಿಜ |
ರುದರಮಂ ಪೋಷಿಸುವ ಹರನ ತಲೆಯೊಳ್ಮಿಸುಪನಂಗಜಗೆ ಬಲನಕೊಡುವಾ ||
ಪದೆದು ಸಸ್ಯಾದಿಗಳ ಸಲಹುವ ಗುಣಂಬಡೆದ |
ಸದಮಲ ಸುಧಾಂಶುವಂ ಕಂಡು ಕೌಲೇಯಕಗ |
ಳಿದಿರೆದ್ದು ಬುಗಳ್ವಂತೆ ಲೋಕೋತ್ತಮರ ಕಂಡು ದುರ್ಜನರ್ದೂರುತಿಹರು || ೫೫ ||

ಪಿತ್ತಜ್ವರಂಬಡೆದವರ್ಗೆ ಪಾಲೊಗರದ |
ತುತ್ತು ಕಹಿಯಾದಂತೆ ದುರ್ಜನರ ಕಿವಿಗೆ ಸುಜ |
ನೊತ್ತಂಸನುಸಿರ್ವ ನುಡಿಯೆಕ್ಕಸಿಕ್ಕಂ ತಪ್ಪದೆಂದು ಚಿಂತಿಸುತಮಿರಲು ||
ಇತ್ತಲರ್ಹದ್ದಾಸನಾ ಸತಿಯ ನುಡಿಗೆ ಮನ |
ಮಿತ್ತು ಕಣ್ಗೊಪ್ಪಿದಂ ಸುಗುಣಮಣಿ ವೈಶ್ಯವಂ |
ಶೋತ್ತಮಂ ವಿನುತಸಮ್ಯಗ್ದೃಷ್ಟಿ ಜಿನಸಮಯವಾರ್ಧಿವರ್ಧನಚಂದ್ರನು || ೫೬ ||

ಇದು ವಿಬುಧಜನವಿನುತಮಿದು ವಿಬುಧಜನವಿನತ |
ಮಿದು ವಿದಿತಜಿನಸಮಯಶರಧಿಸಂಪೂರ್ಣೆಂದು |
ಸದಮಲಚರಿತ್ರೆ ಚೆಂಗಾಳ್ವಭೂವರನ ಸಚಿವಾನ್ವಯಾಂಬರಹಂಸನು ||
ಮದನಸಮರೂಪನುತ್ತಮಗುಣಕರಂಡಕಂ |
ಚದುರಮಂಗರಸನುಸಿರ್ದೀ ಕೌಮುದೀಕಥೆಯೊ |
ಳೊದವಿದುದು ಸುಭಗೆ ಪದ್ಮಶ್ರೀಯ ಪಥನವೊಂಭತ್ತನೆಯ ಮಿಸುಪ ಸಂಧಿ || ೫೭ ||

ಅಂತು ಸಂಧಿ ೯ ಕ್ಕಂ ಪದನು ೫೯೧ಕ್ಕಂ ಮಂಗಳ ಮಹಾ