ಶ್ರೀಮದರ್ಹದ್ದಾಸವೈಶ್ಯವಿಭು ಕೇಳಲಾ |
ತಾಮರಸಮುಖಿ ಕನಕಲತೆ ಮೃದುಕರಂಗಳಂ |
ಪ್ರೇಮದಿಂ ಮುಗಿದು ತನಗಾದ ಸಮ್ಯಕ್ತ್ವಮಂ ಬಿನ್ನಪಂಗೆಯ್ದಳಿಂತು || ಪಲ್ಲ ||

ತುಂಬಿ ಸೊಗಯಿಸುವವಂತೀವಿಷಯದುಜ್ಜಯಿನಿ |
ಯೆಂಬ ನಗರಿಯೊಳು ನರಪಾಲಕನೃಪಂ ನಿಜನಿ |
ತಂಬಿನಿ ಮದನಶಕ್ತಿ ಮದನದೇವಂ ಮಂತ್ರಿವೆರಸಿ ವಸುಧಾತಳವನು ||

ಇಂಬಾಗಿ ಪಾಲಿಸುತ್ತಿರಲು ಸಾಗರದತ್ತನೆಂ |
ದೆಂಬ ವೈಶ್ಯಂಗೆ ಸಾಗರದೆತ್ತಗು ಮಯನೆಂ |
ದೆಂಬವಂ ಜಿನದತ್ತೆಯೆಂಬವಳ್ ಶಶಿ ಲಕ್ಷ್ಮಿಯಬುಧಿಗೊಗೆವಂತೊಗೆದರು || ೧ ||

ಗರುವೆ ಜಿನದತ್ತೆಯಂ ಕೌಶಂಬಿವೆಸರ ಪುರ |
ವರದ ಜಿನದತ್ತನೆಂದೆಂಬ ವೈಶ್ಯೋತ್ತಮಗೆ |
ಉರುಮುದದಿ ಕುಡಲಿತ್ತಲು ಮಯನತಿ ಧೂರ್ತಮಾನಸನಾಗಿ ಹರೆಯವಡೆದು ||
ದುರುಳರೊಡನಾಡಿ ದುರ್ಬುದ್ಧಿಯಿಂ ಪುರದೊಳಗೆ |
ಪಿರಿದೆನಿಸುವಾ ದುರ್ವ್ಯಸನದಲ್ಲಿಯಾಚರಿಸು |
ತಿರೆ ಕಂಡು ಮಲಮಲನೆ ಮರುಗಿ ಮಾತಾಪಿತೃಗಳಿಂತು ಬುದ್ಧಿಯನುಸಿರ್ದರು || ೨ ||

ತಂದೆತಾಯಿಗಳರಸಿಗತಿಸಲಿಗೆವಂತರೆಂ |
ಬೊದು ದಲ್ಲಾಳಿತನದಿಂದ ಲಂಡಪುಂಡರೊಳ್ |
ಮುಂದೆ ನೋಡದೆಯಾಡಿ ಕೊಟ್ಟಕೊಂಡವರು ನೆರೆಹೊರೆಯವರು ನಗುವ ತೆರದಿ ||
ನಿಂದೆಗೊಳಗಾಗಿ ಇಂತಪ್ಪವರ ಮಕ್ಕಳಿಂ |
ತೆಂದೆಮ್ಮ ತಲೆಗೆ ಹರಲೆಯ ತರ್ಪುದುಚಿತವೇ |
ಕಂದ ಕೇಳೆಂಬ ಮಾತಿಗೆ ಕಿವುಡುಗೇಳಲವರಿಂತೆಂದೆಣಿಸುತಿರ್ದರು || ೩ ||

ಪೂರ್ವಕೃತಪುಣ್ಯಪಾಪದಿನಾದ ಫಲವನೀ |
ಉರ್ವೀತಳದೊಳಂಗಮಂ ಹೊತ್ತಜೀವಿಗಳ್ |
ಸರ್ವಥಾ ಮೀರಲಾರ್ಪರೇ ಲೋಕಜನನಿಯೆ ಪ್ರತ್ಯಕ್ಷಹೆತ್ತಜನನಿ ||
ಸರ್ವಲೋಕಪ್ರರಕ್ಷಣದಕ್ಷನೆಂದೆನಿಪ |
ದರ್ವೀಕರಾರಿವಾಹನನೆ ಪಿತನಾಗಿಯುಂ |
ಕರ್ವುವಿಲ್ಲಂ ಕಪರ್ದಿಯ ಕಣ್ಗಳಿಂದುರಿದುದಿಲ್ಲವೇ ದುರುಳತನದಿ || ೪ ||

ಎಂದು ಚಿಂತಿಸುತ್ತಿರಲ್ಕಾ ಉಮಯನಾ ಊರೊ |
ಳೊಂದಂಗಡಿಯೊಳು ಕಳ್ದೊಂದಂಗಡಿಯೊಳಿರಿಸಿ |
ಒಂದು ಮನೆಯಲ್ಲಿ ಕನ್ನಮನಿಕ್ಕಿಯೊಂದು ಮನೆಯೊಳಗಿರಿಸಿ ಜೂದವಾಡಿ ||
ತಂದ ವಿತ್ತವನು ಸೂಳೆಯರ್ಗಿತ್ತು ಮೇಲುತಾ |
ಗೆಂದರಿಯದೇ ತನ್ನ ಮೆಯ್ಮರೆದು ನಡೆಯುತಿ |
ರ್ಪಂದಮಂ ಕಾಣುತವನಂ ತಳಾರಂ ಕಾಲದಂಡನೆಂಬವನು ತರಿಸಿ || ೫ ||

ಆ ವೈಶ್ಯವಲ್ಲಭಸಮುದ್ರದತ್ತನೊಳು ತನ |
ಗಾವಗಂ ಸ್ನೇಹಮಾದುದರಿಂದ ದಾಕ್ಷಿಣ್ಯ |
ಭಾವಯುತನವಗೊಂದು ಲಾವೂಕೋವಂ ಮಾಡಲಿಸದಿಂತೆನುತುಸಿರ್ದನು ||
ಆವೊಡನೆ ಉದಯಿಸಿದ ಜಿನದತ್ತೆಯತಿಸಾಧ್ವಿ |
ಯೀಚುಮಯನತಿದುಷ್ಟನೊಂದು ಬೀಜಾಂಕುರದಿ |
ನಾ ವೃಕ್ಷವೊರ್ಧ್ವಗತಿಗಾ ಬೇರಧೋಗತಿಗೆ ನಿಜದಿಂದ ನಡೆವ ತೆರದಿ || ೬ ||

ವರುಷವೈದರೊಳೋದ ಕುಳ್ಳಿರಿಸಿಯೋದಿಸದೆ |
ಎರಡಾರು ಸಂವತ್ಸರದ ಮೇಲೆ ನಮಗುಳ್ಳ |
ಹರದಿಕೆಯ ವ್ಯವಹಾರದುದ್ಯೋಗಕಿಕ್ಕದೇ ಒಂದೆರಳ್ಮೂರುನಾಲ್ಕು ||
ವರುಷದೆಳವಿಯ ಬಾಲಕರ ಮೇಲೆ ಮಮತೆಯಂ |
ಪಿರಿದಾಗಿ ಮಾಳ್ಪಂದವನೆ ಬಗೆದು ಹದಿನಾರು |
ವರಿಸಪರಿಯಂತರಾ ನಿಜ ಜನನಿಜಕರೋವುತ್ತಿರ್ದರೀ ಪಾಪಿಯಂ || ೭ ||

ಅಕ್ಕರಮನೋದಕುಳ್ಳಿರಿಸಲೊಲ್ಲದೊಡಂತ |
ದಕ್ಕೆ ಶಿಕ್ಷೆಯನಿನಿಸು ಮಾಡದೆ ನೆರೆಹೊರೆಯ |
ಮಕ್ಕಳಂ ಬಯ್ದು ಹೊಯ್ದೊಡೆ ಬೇಡವೆಂದೆನ್ನದಾ ಮಾತೃವಾ ಪಿತೃಗಳು ||
ಅಕ್ಕರಿಂದಂ ಸಾಕಲಾಗಿ ಪಿರಿದುಂ ಗಂಡು |
ಮಿಕ್ಕು ಮೆಯ್ಯರಿಯದೇ ಮೇಲುತಾಗಂ ನೋಡ |
ದುಕ್ಕುಸೊಕ್ಕಿಂ ಬೆಳೆದು ಜವ್ವನಂಬಡೆದು ಜೂದುಂಗಾರನಾದೆಯಲ್ಲ || ೮ ||

ತಂಡತಂಡದೊಳು ನಿನ್ನೋರಗೆಯೊಳೇ ಬೆಳೆದ |
ಗಂಡುಮಕ್ಕಳನು ಮನೆಯಂ ಹಾರದೇ ಕೂಡಿ |
ಕೊಂಡು ನಿಜಜನಿಜನಕರು ಬೇಡವೆಂದೆಂಬ ಮಾತನಿನಿಸಂ ಕೇಳದೆ ||
ಗಂಡುಮಿಕ್ಕಾಗದುಗುಹಿಡಿಗವಡೆ ಸಡುಗುಡಂ |
ಸೆಂಡು ಜಿಗಿಹಲ್ಲೆ ಬೊಹರಿಗಳಾಟದಲ್ಲಿ ಮನ |
ಗೊಂಡಾಡಿ ಬೆಳೆದು ಜವ್ವನನಾಗಿ ಬಾಳ್ತೆಯಿಲ್ಲದೆ ಕೆಟ್ಟುಹೋದೆಯಲ್ಲಾ || ೯ ||

ಕಾಲಮೊದಲಾಗಿಯುಂ ತಮಗೆ ನೀನೊರ್ವನೇ |
ಬಾಲನೆಂದಡಕದೊಳ್ನಿಲಿಸಿಕೊಳ್ಳದೆ ಪಿರಿದು |
ಲಾಲನದಿನಾ ತಂದೆತಾಯಿಗಳ್ ಸಲಹಿದುದರಿಂದುಬ್ಬಿಕೊಬ್ಬಿಬೆಳೆದು ||
ಕೂಲಿಗರ ಕೊನಬರೊಡನನವರತ ಬಿಡದಾಡಿ |
ದೀಲಂಡತನವ ಬಿಡದಾದೆಯಲ್ಲಾಯೆಂದು |
ಕಾಲದಂಡಂ ಕರುಣದಿಂದ ಬುದ್ಧಿಯನುಸಿರಿ ಪೋಗೆಂದು ಬೀಳ್ಕೊಟ್ಟನು || ೧೦ ||

ಪಿಂತೆ ನಾನೇಸೇಸುಪರಿ ನಡೆದ ದುಷ್ಟತನ |
ಮಂ ತಳಾರಂ ಕಂಡು ಬಿಟ್ಟನೆಂದೆಂಬೊಂದು |
ಸಂತಸದಿ ಮೆಯ್ಮರೆದು ನನಗಿನ್ನದಾರಭೀತಿಯೆನುತ್ತ ಗಂಡುಮಿಕ್ಕು ||
ಅಂತರಂ ಮಾಡದೇ ಕನ್ನಮಂ ತದ್ಧರಾ |
ಕಾಂತಗೃಹಕಿಕ್ಕೆ ಪಡಕಣದಪಹರಿಯ ಸುಭಟ |
ರಂತದಂ ಕಂಡು ಹೆಡಗಯ್ಗಟ್ಟಿಯಾ ಕಾಲದಂಡನಿದ್ದೆಡೆಗೊಯ್ದರು || ೧೧ ||

ನಳಿಗೆಯೊಳ್ ನಾಯಬಾಲವನು ಕಟ್ಟಲ್ತನ್ನ |
ನಳುಹಬಿಡದಂತೆ ನಾನೇಸೇಸು ತೆರದಿಂದ |
ತಿಳಿವಂತೆ ಬುದ್ಧಿಯಂ ಪೇಳಿ ಪಲಸೊಳ್ಬಡಲ್ಕೇಳದೇ ಮನದೊಳಿನಿಸು ||
ತಿಳಿಯದಾದೆಯಲಾ ಎನುತ್ತ ಪಿರಿದುಂ ನೊಂದು |
ಬೆಳಗಾಗಲೊಡನೆಯಾಸ್ಥಾನಮಂಟಪಕೆಯ್ದಿ |
ಯಿಳೆಯಾಧಿಪತಿಗೆ ಸಾಗರದತ್ತಸೆಟ್ಟಿಯ ತನೂಜನೆಂದೊಪ್ಪಿಸಿದನು || ೧೨ ||

ಉಣಲುಡಲು ತೊಡುವುದಕ್ಕೆನ್ನಿಂದ ಮೂರುಮಡಿ |
ಯೆಣಿಸಿದೊಡೆ ನಿನ್ನ ತಂದೆಯ ಭಾಷೆಯಾಧನದ |
ಗೆಣೆ ವಿಚಾರಿಸೆ ನೀನೆ ಯಜಮಾನ ಮಗ ನಿಮ್ಮ ಮನೆಗೆ ಇಂತಿದನೊಡದೆ ||
ತೃಣದಿಂದ ಲಘುವಾಗಿ ತುಂಟಭಂಟರಕೂಡಿ |
ಬಣಗಾಗಿಹೋದೆಯಲ್ಲಾ ಇದೆಲ್ಲಂ ನಿನ್ನ |
ಹಣೆಯಲ್ಲಿ ನೀನುದಯಮಪ್ಪಾಗ ಬಿದಿ ಬರೆದುದಲ್ಲದೇ ಅನ್ಯಮಲ್ಲಾ || ೧೩ ||

ಲಂಡರೊಡನಾಟಕೂಟಂ ಪಿರಿದು ಲವಲವಿಕೆ |
ಭಂಡರೊಳ್ಗೋಷ್ಠಿ ಜೂದುಂಗಾರರೊಳ್ಮಮತೆ |
ಪುಂಡರೊಳಗಾಳಮೇಳಂ ಖಳರ ಸಂಗಮಾರಡಿಕಾರರೊಡನೆ ಬಿನದಂ ||
ಕೊಂಡೆಯರೊಳಿರುಳು ಹಗಲೆನ್ನದೇ ಮಾಳ್ಪದು |
ದ್ದಂಡಿಕೆಯೆ ನಿನಗೆ ಮನಹೇಸದೇ ಮಿಗೆ ಮನಂ |
ಗೊಂಡು ನೆಲೆಯಾಯಿತಲ್ಲಾ ನಿನ್ನ ಪೂರ್ವಾರ್ಜಿತದ ಪಾಪದೆಸಕದಿಂದ || ೧೪ ||

ಎಂದು ಸಾಗರದತ್ತನಂ ಬರಿಸಿ ಭೂಪಾಲ |
ವೃಂದಚೂಡಾರತ್ನನರಪತಿಮಹೀಶನಿಂ |
ತೆಂದನುಪಶಮಭಾವನಾಗಿಯೀ ದುಷ್ಟನಂ ನಿನ್ನ ನಿಜಮಂದಿರದೊಳು ||
ನಂದನಂ ನಮಗಿರ್ವನೇ ಎಂಬ ಮಮತೆಯಿಂ |
ದೊಂದು ದಿನಮಿರಿಸಿಕೊಂಡೊಡೆ ಕೇಡು ಸಂಭವಿಸಿ |
ಮುಂದಕ್ಕೆಯಭಿಮಾನಹಾನಿಯಹುದಿಂತಿದಕೆ ಸಂಶಯಂ ಮಾಡಬೇಡಾ || ೧೫ ||

ಚಿಕ್ಕಂದು ಮೊದಲಾಗಿ ಕಾಲಕಾಲಕೆ ತಕ್ಕ |
ತಕ್ಕ ಲಾಲನೆಯಕ್ಷರಾಭ್ಯಾಸ ತಮ್ಮ ವಂ |
ಶಕ್ಕೆ ಬೇಕಾದುಜ್ಜುಗದೊಳು ನೆರನಡೆಯಿಸಿ ಬಳಿಕ್ಕ ಬಿದ್ದಿನರ ಕಾಳ್ಬಾ ||
ಲೆಕ್ಕದೊಳ್ನಡೆಯಿಸುವ ನಿಜ ಜನನಿಜನಕರಾ |
ಮಕ್ಕಳಿಗೆ ಗುರುದೈವಮಂತಲ್ಲದೊಡೆ ತಾಮೆ |
ಕಕ್ಕಸದ ವೈರಿಗಳ್ ತಮ್ಮ ಬದುಕಿಗೆ ತಾಮೆ ಕೇಡ ಕಡೆಗೆಣಿಸಿದವರು || ೧೬ ||

ಎನಲು ಸಾಗರದತ್ತವೈಶ್ಯಕುಲತಿಲಕನಾ |
ಮನುಜೇಶಗಿಂತೆಂದನೆಲೆ ಮಹಾರಾಜ ನೀ |
ವೆನಗಿನಿತು ಬುದ್ಧಿಯಂ ನುಡಿವುದಿದು ನನ್ನ ಭಾಗ್ಯಮೆನುತ್ತ ಹರಿಸದಿಂದ ||
ವಿನಯವಿನಮಿತನಾಗಿ ಬೀಳ್ಕೊಂಡು ಮನೆಗೆಯ್ದಿ |
ತನುಜ ಕೇಳ್ ದುಃಪುತ್ರ ಕುಲನಾಶ ಎನುತ ಸಖ |
ಜನದರಿಕೆಯಾಗಿ ನಿನ್ನಂದದೊಳ್ನೀ ಬದುಕೆನುತ್ತಂದು ಪೊರಮಡಿಸಿದಂ || ೧೭ ||

ನಗರಿಯಂ ಪೊರಮಟ್ಟು ನಾಡಗಡಿಯಂ ಕಡೆಯು |
ತಗಲದೊಡವರೆ ಸಾರ್ಥವಾಸಿಯೆಂದೆಂಬವಂ |
ಸೊಗಯಿಸುತಿರ್ಪ ಕೌಶಂಬಿಪುರಕ್ಕೆ ನಾಣ್ಚದೆ ನಡೆದು ಬಂದು ತನ್ನಾ ||
ಭಗಿನಿಬಂಧುರಮೂರ್ತಿ ಜಿನದತ್ತೆಯಾಲಯಕೆ |
ಪುಗಲವಳ್ಕಂಡೆಲೇ ಕಡುಪಾಪಿ ಪೋಗೆಂದು |
ತಗುಳಿದಳ್ಗೇರಸವಿವಣ್ ನಿಷ್ಠುರಂಬಡೆದ ಬೀಜಮಂ ನೂಂಕುವಂತೆ || ೧೮ ||

ಆ ತಂಗಿ ತನ್ನ ದುಶ್ಚಾರಿತ್ರಮಂ ಕಂಡು |
ಪ್ರೀತಿಯಂ ಮಾಡದೇ ಪೊರಮಡಿಸಿದುದಕೆ ಚಿಂ |
ತಾತುರನುಮಾಗಿ ಮತ್ತಾ ಉಮಯನಂತರಂಗದೊಲಿಂತೆಣಿಸುತಿರ್ದನು ||
ಆ ತಂದೆತಾಯ್ಗಳಾ ಭಾಷೆಯಾಭೋಗಗಳ |
ನೇ ತಿರಸ್ಕರಿಸಿ ಸಪ್ತವ್ಯಸನಮಂ ಪಿಡಿದ |
ಪಾತಕಂಗೀಯಮಾನ್ಯಂ ಬರ್ಪುದಾದ ಗಹನಂ ತಿಳಿದು ಭಾವಿಸಿದೊಡೆ || ೧೬ ||

ಎಂದು ತನ್ನಂ ತಾನೇ ಪಿರಿದು ನಿಂದಿಸಿಕೊಂಡು |
ಬಂದು ತತ್ಪುರವರದ ಚೈತ್ಯಮಂದಿರಕೆ ಮನ |
ಸಂದು ಶ್ರುತಸಾಗರಮುನೀಂದ್ರರ್ಗೆ ನಮಿಸಿ ಜೈನವ್ರತಮನೀವುದೆನಲು ||
ಮುಂದೇತರಪ್ರಮೋದದಿನುತ್ತಮವ್ರತಮ |
ನಂದು ಕೊಟ್ಟೆಲೆ ಮಗನೆ ಹೆಸರನರಿಯದ ವೃಕ್ಷ |
ದೊಂದು ಫಲಮಂ ಮೆಲ್ಲಬೇಡೆಂದು ಕೊಟ್ಟ ಪಿರಿದುಂ ಪೊಗಳ್ದರಾ ಉಮಯನಾ || ೨೦ ||

ಕೀಸೆ ಕಿಲುಂಬಂ ಕಾಂತಿವಡೆದ ಕನ್ನಡಿಯಂತೆ |
ಮಾಸಲಂ ತೊಳೆಯೆ ಮಡಿಯಾದ ದುವ್ವಟದಂತೆ |
ಬಾಸಣಿಸಿದಸಿತಾಂಬುದಂ ತೊಲಗೆ ತಳತಳಿಪ ಸಂಪೂರ್ಣಚಂದ್ರನಂತೆ ||
ಕಾಸೆಯವಲೋಹಮಂ ಕಳೆದ ಕಾಂಚನದಂತೆ |
ವೋಸರಿಸದೊಪ್ಪವಿಕ್ಕಿದ ರತ್ನದಂತೆ ನೆಲ |
ಹೇಸುವಂದದ ನಡೆಯನುಳಿದು ಸಚ್ಚರಿತಮಂ ತಳೆದುಮಯನೊಪ್ಪಿರ್ದನು || ೨೧ ||

ಮತ್ತಮಾನಸನುಮಯನಾ ದುಶ್ಚರಿತ್ರಮಂ |
ಪತ್ತುವಿಟ್ಟಾ ಜೈನಗುರು ಸಮೀಪದೊಳು ಸ |
ದ್ವೃತ್ತನಾದುವ ಕೇಳಿ ಮನೆಗೆ ಕರೆಯಿಸಿ ಮಜ್ಜನಾದಿ ಉಪಚಾರಗಳನು ||
ಚಿತ್ತಶುದ್ಧಿಯೊಳು ಮಾಡಿಸಿ ಹರಿಸದಿಂ ಹಲವು |
ವಿತ್ತಮಂ ಹರದುಗೆಯ್ಯೆಂದೆನುತ್ತೊಸೆದು ಜಿನ |
ದತ್ತೆ ಕೊಟ್ಟಳ್ಗುಣಂಗಂಡರಂತದಕೆ ರತ್ನವನು ಪೊಹಣಿಸುವಂತೆ || ೨೨ ||

ಪೊಳಲೆಲ್ಲ ತನ್ನ ಪೊಗಳುತ್ತಿರಲ್ ವ್ರತಮನುರೆ |
ತಳದುದಕ್ಕಲ್ಲಿ ಕೆಲದಿವಸಮಿರ್ದು ವಿತ್ತಮಂ |
ಘಳಿಸುವೆನೆನುತ್ತ ನವರತ್ನಮಂ ಬೆಲೆಗೊಂಡು ತತ್ಪುರದ ಪರದರೊಡನೆ ||
ಬಳಿಕ ಪೊರಮಟ್ಟು ಉಜ್ಜಯಿನಿಗೆಯ್ದುವೆನೆಂದು |
ತಳುಮಾಡದೇ ಬರುತ ದಾರಿಯಂ ತಪ್ಪಿ ನಳ |
ನಳಿಸಿ ಬೆಳೆದೊಂದು ಭೀಮಾರಣ್ಯಮಂ ಪುಗುವ ಸಮದೊಳ್ಪಗಲಿಳಿದುದು || ೨೩ ||

ಗೊಡಿಂಗೆ ಸಾರಿ ಗುಜುಗುಜುಗುಟ್ಟಿದವು ಹಕ್ಕಿ |
ಯಾಡಿದುದು ಮೇಹಿಗಹಿತತಿ ಕಾಡಕೊಳದೊಳಗೆ |
ಜೋಡಗಲ್ದುವು ಜಕ್ಕವಕ್ಕಿ ಜಲಜಲಿಸಿ ಡಾಳಂಬಡೆದುದಡವಿಗಿಚ್ಚು ||
ಕೋಡತೊಡಗಿತು ಚಂದ್ರಕಾಂತಶಿಲೆ ಮುಚ್ಚಿದುವು |
ಕಾಡಗಸೆ ಹಕ್ಕೆಗೆಯ್ದಿದವು ಹಲಮಿಗಗಳೊಸೆ |
ದೂಡಿದುವು ಮರಿಗೆ ಮೊಲೆಯಂ ಹುಲ್ಲೆಯಾನೇಸರಸ್ತಮಿಪಕಾಲದಲ್ಲಿ || ೨೪ ||

ಗುಹೆವುಗುವ ಸಿಂಗ ಗೂಡಿಂಗೆ ಸಾರುವ ಕರಡಿ |
ವಿಹಗಂಗಳಂ ಹೊಯ್ದು ತಿಂದವರ ಗುಟುಕುಗಳ್ |
ಸಹಿತ ಸಲೆ ಹಸಿದು ಬಾಯಂ ಬಿಡುವ ಹಿಳ್ಳೆಗಳ ಬಳಿಗೆ ಹಾರುವ ಸಾಳುವ ||
ಬಹುಮೃಗಗಳಂ ಕೊಂಡು ಹೆಡಹಿ ಕೊಬ್ಬಿರಿದು ಕಡು |
ಲಹರಿಯಿಂದಡಲನೆಯ್ದುವ ಹುಲಿಗಳಾ ಪಂಕ |
ರುಹಮಿತ್ರನಪರವಾರಾಶಿಯಂ ಪುಗೆ ತದ್ವನಾಂತದೊಳ್ ಸೊಗಯಿಸಿದುವು || ೨೫ ||

ದಿಕ್ಕುದಿಕ್ಕಿಗೆ ಹೋಗಿ ಹಲವು ಮಿಗಗಳನೊಕ್ಕ |
ಲಿಕ್ಕುವಂದದಿ ಕೊಂದು ಮುಗುಳ್ದವರಡಂಗುಗಳ |
ತುಕ್ಕಡಿಸಿ ಬಗೆಯರಿದು ಭಾಗೆಯಂ ಮಾಳ್ಪ ದೀವಂ ಖಗಮೃಗಾವಳಿಯನು ||
ಹಕ್ಕೆಗೆಯ್ದಿಸುವ ಘಂಟೆಯ ಬೇಂಟೆಯೊಂದುಜ್ಜ |
ಗಕ್ಕೆ ಸಂದಣಿಗೊಂಬ ಜೇನೆಯ್ಗಳಂ ತರ್ಪು |
ದಕ್ಕೆ ಪೊಗೆಗೊಂಡು ಪೊರಮಡುವ ಬೇಡರ ಬಿಂದಮೊಪ್ಪಿತಾ ಪೆಕ್ಕಣದೊಳು || ೨೬ ||

ಸಿಂಗಗಳ ಶಿಶುವ ಹಿಡಿತಂದವಕೆ ಮತ್ತಮಾ |
ತುಂಗೋತ್ತಮಾಂಗದಡಗುಗಳನೂಡಿಸುವ ಶರ |
ಭಂಗಗಳ ಹಸುಳೆಗಳ್ಗೆ ತತ್ಸಿಂಹದೊಡಲ ಖಂಡವ ತೆಗೆದು ಗುಡುಕಗೊಡುವ ||
ಹಿಂಗದೇ ಭೇರುಂಡಗಳ ಸಾಕುಮರಿಗೆ ಶರ |
ಭಂಗಳೆರ್ದೆಯಂ ಕೊರೆದುಕೊಡುವ ತದ್ವನಚರರ |
ಜಂಗುಳಿ ಕರಂ ವಿರಾಜಿಸುತಿರ್ದುದಾಭೀಳಮಪ್ಪ ಶಬರಾಲಯದೊಳು || ೨೭ ||

ಕಡುಪಿಂದ ಕಾಡೆಮ್ಮೆಗಳನು ಮರಿಗಳ್ಸಹಿತ |
ಹಿಡಿತಂದು ಕಟ್ಟಿ ಕಾಳೋರಗನ ಪೆಡೆವಣಿಯ |
ಸೊಡರ್ವೆಳಗುವಿಡಿದು ಕರೆಯಿಸುವ ಹೆಬ್ಬುಲಿಯ ತಿವಿದಾ ಬಾಯಿಮಿಗವ ಸೆಳೆದು ||
ಕಡಿಕಂಡಮಂ ಮಾಡಿ ಸುಡು ಬಾಡಸುಡಲೆನು |
ತ್ತಡಿಗಡಿಗೆ ಹೊಸ ಕಿಚ್ಚ ಹೊಸೆವ ಬಿಯದರದೊಂದು |
ಕಡುರಯ್ಯಮಾದ ಬಲು ಸಂದಣಿಯನೀಕ್ಷಿಸುತ ನಡೆತಂದನಾ ಉಮಯನು || ೨೮ ||

ಗಿರಿಯನಡರ್ದಾ ಮುಗಿಲ ಮುತ್ತುಮಂ ಬೇಂಟೆಯೊಳ್ |
ಪರೊದು ಫಣಿಪಂದಿಮದಸಿಂಧುರದ ಮುತ್ತುಮಂ |
ಸರಸಿಯಂ ಹೊಕ್ಕು ಸಂಕದ ಮೀನಮುತ್ತಮಂ ಬಿದಿರನೊಡೆದಾ ಮುತ್ತುಮಂ ||
ಭರದಿಂದ ಬಟ್ಟೆಯಂ ಬಡಿದು ಹರದರಕೆಯ್ಯ |
ಶರನಿಧಿಯ ಮುತ್ತುವಂ ತಂದು ತಂತಮ್ಮ ನಿಜ |
ತರುಣಿಮಣಿಯರ ಕೊರಲೊಳಿಕ್ಕುತ್ತಿರ್ದರಾ ಕಾಡಬೇಡರತಿಹರ್ಷದಿಂದ || ೨೯ ||

ಕರಿಯ ಕರ್ಬಿನ ಕಂಡಿಕೆಗಳೊ ಕರಶಾಖೆಗಳೂ |
ವರತಮಾಲದ ಬಿಳಿಲೋ ಬಾಹುಯುಗಲವೋ |
ಕರಿಕರವೋ ಕಡುನುಣ್ಪುವಡೆದ ತೊಡೆಯೋ ಕಳ್ತಲೆಯ ಬಿತ್ತೊ ಕಣ್ಣಾಲಿಯೋ ||
ಹರಿನೀಲಮಾಣಿಕಮುಕುರವೋ ನಿಜಮುಖವೋ |
ಸರಸಕಸ್ತೂರಿಯ ಕರಂಡಕವೊ ಕುಚಯುಗವೊ |
ಕರಮೆಸವ ಕಾಳಾಗರುವಿನ ಕರುವೋ ಕಾಡಬೇಡಿತಿಯರೋ ಭಾವಿಸೆ || ೩೦ ||

ಕಾಡಿಯನನುಗೆಯ್ದು ಬೊಂಬೆ ಕಾರಿರುಳಿಂದ |
ಮಾಡಿದಾ ಪರಿಜೆಸೆವ ಮಿಗ ಸೊಕ್ಕಿನಿಂದ ಹದ |
ಗೂಡಿ ತಿರ್ದಿದ ಚಿತ್ರಕರ್ಬೊನ್ನಿನಿಂದ ಕಂಡರಿಸಿದಾ ಪಾಂಚಾಳಿಕೆ ||
ಕಾಡಾನೆಗಳ ಮದದಿ ಕರುವಿಟ್ಟಮೂರ್ತಿ ಕಡು |
ಗಾಡಿಯಿಂ ಕಡೆದ ನೀಲದ ನೀರೆ ಕಾರ್ಮುಗಿಲ |
ನೋಡಿ ಚಿಲ್ಲಣಗೈಯ್ದ ಪುತ್ತಳಿಯ ತೆರದಿಂ ಪುಳಿಂದಿಯರ್ಸೊಗಯಿಸಿದರು || ೩೧ ||

ನಾಯಿರಂ ಕೀಸಿ ನರಮಂ ಸೀಳಿ ಹೆದೆಗಟ್ಟು |
ವೊರೆಯಂತಿರ್ದ ಒಳ್ಳಿತುಮಾಡಿ ಬಿಲ್ಲನೊರೆ |
ಕೊರಂಬಮಸೆ ಕೊಂಕನನುಮಾಡಿ ಗಣೆಗೆ ಗರಿಗಳನು ಹಸನಾಗಿ ಕಟ್ಟು ||
ಸೇರಣಿಯ ಮಾಡಿ ಹಿಳಿಕಂ ಪಿಳಿತಗಳನಿಕ್ಕು |
ಬಾರುಬಾರಂ ಹದಂಗೂಡಿ ಕೈವೊಡೆಗೆಂಬ |
ಭೂರಿಭಿಲ್ಲಂ ಕಲಕಲಂ ಮನಂಗೊಳಿಸಿತಾ ವಿಪಿನಚರರಾಲಯದೊಳು || ೩೨ ||

ಕರಿಕಳಭಗಳನು ಕಂಠೀರವದ ಶಿಶುಗಳನು |
ವರಚಕ್ರಗಳನು ಶುಕಶಾಬಂಗಳನು ತರುಣ |
ಹರಿಣಂಗಳನು ಮಂದಗತಿ ಮಧ್ಯಕುಚ ವಾಗ್ವಿಲೋಕನದಿ ತಮ್ಮೊಲವಿನಾ ||
ತರುಣೀಜನಗಳಂಗಸಂಬಂಧವಾದುದರಿ |
ನುರುಕರುಣದಿಂದವಂ ಬೇಂಟೆಯೊಳ್ಕೊಲ್ಲದೇ |
ಹರಿಷದಿಂ ಹಿಡಿದು ತಂದಿತ್ತರಾ ಸತಿಯರ್ಗೆ ಕಡುಮೋಹಿ ಶಬರರಂದು || ೩೩ ||

ಎಕ್ಕಲನಾದೆಡೆಯೆಲರುಣಿಯ ಮಸ್ತಕದ ಬಲು |
ಸೊಕ್ಕಾನೆದಲೆಯ ಮಣಿಯಂ ತಂದು ಕುಪ್ಪಿಗೆಯೊ |
ಳಿಕ್ಕಿ ವೆಜ್ಜಂಗೆಯ್ದು ನರದ ನೇಣಿಂದ ಪೋಹಣಿಗೆಯಂ ಹಸಮಾಡಿದಾ ||
ಎಕ್ಕಾವಳಿಗಳನನುರಾಗದಿಂದ ತಂದು ಕಡು |
ಕಕ್ಕಸಂಬಡೆದ ಕಾಂತೆಯರ ನೆಲೆಮೊಳೆಗಳೊಳ |
ಗಿಕ್ಕಿದರ್ಬೇಂಟೆಯಿಂ ತಂದು ಕಾಳ್ಬೇಡರಿನನಸ್ತಮಯಕಾಲದಲ್ಲಿ || ೩೪ ||

ಕತ್ತುರಿಯ ಕರಡಿಗೆಗೆ ಕಾಡಿಗೆಯ ಹುಡಿಯ ತಂ |
ದಿತ್ತರೋ ಇಂದ್ರನೀಲದ ಭರಣಿಯಲ್ಲಿಯ |
ತ್ಯುತ್ತಮದ ಸಾದನಿಕ್ಕಿದರೊ ಕೃಷ್ಣಾಗರುವಿನಿಂದ ಕಡೆದ ಕುಪ್ಪಿಗೆಯೊಳು ||
ಒತ್ತಂಬರಿಸಿದರೊ ಕಾಳಕೂಟಮನೆನಲ್ |
ಮೊತ್ತಮೊದಲಿನರುಚಿಗೆ ತೆರಪುಗುಡದೆ ಕರ್ಪು |
ವೆತ್ತ ಕಾನನಕೆ ಕಳ್ತಲೆ ಬಂದು ಕವಿಯೆ ಕಣ್ಗತಿ ಭೀಕರಂಬಡೆದುದು || ೨೫ ||

ಎಲ್ಲಿ ನೋಡಿದೊಡಲ್ಲಿ ಹುಲಿಯ ಕಣ್ಗಳ ಡಾಳ |
ವೆಲ್ಲಿ ನೋಡಿದೊಡಲ್ಲಿ ಮಿಂಚುಬುಳುವಿನ ರಸುಮೆ |
ಎಲ್ಲಿ ನೋಡಿದೊಡಲ್ಲಿ ಫಣಿಪತಿಯ ತಲೆಯೊಳೊಪ್ಪುವ ಕೆಂಪುಗಲ್ಲಹೊಳಹು ||
ಉಲ್ಲಸಂಬಡೆದುವಾ ಅಡವಿಯೊಳಗಿಡಿದ ತಮ |
ದಲ್ಲಿ ಕಾಳೋದಧಿಯ ನಟ್ಟನಡುಮಡುವಿನೆಡೆ |
ಯಲ್ಲಿ ವಡಬಾನಳನ ಬೆಳೆಯಬೀಜಂಗಳಂ ಬಿತ್ತಿದಂದಮನೆ ಹಡೆದು || ೨೬ ||

ಕಾಳೋರಗನ ಹುತ್ತನೊಳಹೊಕ್ಕ ಮಾಳ್ಕೆಯೊ |
ಳ್ಕಾಳಗತ್ತಲೆ ತುತ್ತುರುಂಬಾಗಿ ತುಂಬಿದಾ |
ಭೀಳಮಪ್ಪಾರಣ್ಯಮಧ್ಯದೊಳ್ದಬ್ಬುದಲೆಗೊಡು ದಾರಿಯ ತಪ್ಪಿದಾ ||
ಮೇಳದ ವಣಿಗ್ಹಾಲಸಹಿತ ಬಂದಾ ಸತ್ಯ |
ಶಾಲಿಯುಮಯನದೊಂದು ತಾಣದೊಳಗಿನನುದಯ |
ಕಾಲಮಪ್ಪಲ್ಲಿಪರಿಯಂತರಂ ಕಳವಳಂಗೊಂಡ ನಿದ್ರೆಯೊಳಗಿರಲು || ೩೭ ||

ಹಳಹಳಚನಾದುದಾಶಾವಲಯ ತೀಡಿದುದು |
ತೆಳುಗಾಳಿ ತಂಪು ತಲೆದೋರಿದತ್ತಾ ಖಗಾ |
ವಳಿಯ ಗೂಡುಗಳಲ್ಲಿ ಗಲಗು ಪಿರಿದಾಯ್ತು ಹಾಲಕ್ಕಿ ಹರಿದವು ಪಕ್ಕೆಗೆ ||
ಎಳಗರುವಿಗೆಳುಲ್ದು ಮೊಲೆಯಂ ಕೊಟ್ಟುಮೇಂ ಬೊಲಕೆ |
ತಳರಿದುವು ಬಹುವಿಧಂಬಡೆದ ಮೃಗನಿಕುರುಂಬ |
ತಳತಳನೆ ನೇಸರುದಯಿಸುವ ಕಾಲಕೆ ಮುನ್ನಮಾ ಮಹಾಕಾನನದೊಳು || ೩೮ ||

ಒಡಲೊಳುದಯಿಸಿದ ರೋಗಮನಾವ ತೆರದಿ ಪೊರ |
ಮಡಿಸದಿರ್ದೊಡೆ ಕೇಡು ಸಂಭವಿಪುದೆಂಬ ನಾ |
ಣ್ನುಡಿಯುಮಂ ನೆನೆದು ತನ್ನೊಳ್ ಜನಿಸಿ ತನ್ನನೇ ಕಡುಬಡುವು ಮಾಳ್ಪಾ ||
ವಡಬವಹ್ನಿಯ ಮೂಲಮಂ ತನ್ನಗಾಧನೆಂ |
ಬೊಡಲಿಂದ ಪೊರಮಡಿಸಲದು ತಳತಳಿಸುವಂತೆ |
ಕಡು ಸೊಗಯಿಸಿತ್ತು ಮೂಡಣದಿಕ್ಕಿನಲ್ಲಿ ಮುನ್ನೇಸರುದಯವನೆ ಹಡೆದು || ೩೯ ||

ಆ ಉದಯದೊಳಗೆಳ್ದು ಮುಂದಕ್ಕೆ ನಡೆದೊಂದು |
ತೀವಿದ ಕೊಳಂಬೊಕ್ಕು ಕಯ್ಕಾಲ್ಗಳಂ ಕರ್ಚಿ |
ಸಾವಧಾನದೊಳು ಸಂಧ್ಯಾವಂದನಂಗೆಯ್ದು ನಿಜಪುರಕೆ ಪೋಪ ದಾರಿ ||
ಅವಕಡೆಯೆಂದು ಕಾಣದೆ ತಳಹಳಂಗೊಳು |
ತ್ತಾ ವನಾಂತರದೊಳು ಮದ್ದಳೆಯ ಹೊಕ್ಕಿಲಿಯಂತೆ |
ಆವುಮಯನಾ ವೈಶ್ಯನಿಕುರುಂಬಮೆಲ್ಲವುಂ ತಬ್ಬಿಬ್ಬುಗೊಂಡುದಾದ || ೪೦ ||

ಬೆಳ್ಮಿಗಂ ಬೆಳೆದಿನಲ್ಪೋಪದಾರಿಯೊಳೊರ್ಮೆ |
ಕೋಳ್ಮಿಗಂ ಬೆಳ್ಮಿಗವ ತಿನಹೋದ ಬಟ್ಟೆಯಿನ |
ದೊರ್ಮೆ ಕಾಡಾನೆಗಳ್ತದಿಕಿನಡವಿಯ ತೊವಲ ತಿನಹೋದ ಸರುಹುಗಳೊಳು ||
ಒರ್ಮೆ ಬೇಂಟೆಗೆ ವನಚರರ್ಪೋದ ತೋಲಿನೊಳ |
ಗೊರ್ಮೊರ್ಮೆ ನಡೆದು ನಿಜಪುರದ ಪಾಂಥದ ಹೊಲಬ |
ನೊರ್ಮೆಯುಂ ಕಾಣದೇ ಕಣ್ಗೆಟ್ಟು ತಿಳಿವಳಿದು ತೊಳಲಿಬಳುತ್ತಿರ್ದರು || ೪೧ ||

ಇಂತು ಹಳುವಿನೊಳು ಮಧ್ಯಾಹ್ನಮಪ್ಪಲ್ಲಿ ಪರಿ |
ಯಂತರಂ ಬಿಡದೆ ತಿರ್ರನೆ ತಿರಿಗಿ ತಿರಿಗಿಯ |
ತ್ತಯಂತ ಕ್ಷುಧಾಪೀಡರಾಗಿ ರಸರೂಪುಗಂಧಂಬಡೆದ ನವಫಲಗಳಾ ||
ತಿಂತಿಣಿ ಕರಂ ಜೋತೊರಗುವ ಕಿಂಪಾಕ ತರು |
ಸಂತಾನಮಂ ಕಂಡವಂ ಮೆಲಲ್ಬೇಕೆಂದು |
ಸಂತೋಷದಿಂದುಮಯನೊಡವಂದ ಪರದರೆಲ್ಲ ತಿರಿವ ಸಮಯದಲ್ಲಿ || ೪೨ ||

ನರೆನವಿರಹೊತ್ತು ನಡುಗುವ ಮಂಡೆಬಿಳ್ದ ಮೊಲೆ |
ತೆರೆ ಮುಸುಂಕಿದ ಮುಖಂ ಮುರಿದ ಬೆನ್ಜೋಲ್ವಾಯ |
ಪಿರಿದು ಕಂಪಿಸುವ ಪಲ್ಪಟಿಲುಗಟ್ಟಿದ ದಿಟ್ಟಿ ಕಡುಬೆಳೆದ ಪುರ್ವು ಬೀಟೆ ||
ಬಿರಿದ ಕಾಲ್ಜೋಲ್ವಗಲ್ಲಂ ಮಿಸುವ ವೃದ್ಧವನ |
ಚರಿಯೊರ್ವಳಾ ಪಣ್ಗಳಂ ಸವಿದು ತದ್ವೈಶ್ಯ |
ವರನುಮಯನಾ ಪರದರುಂ ಕಾಣ್ಬ ತೇರದಿನೇರುಂಜವ್ವನಂಬಡೆದಳು || ೪೩ ||

ತೊಂಡೆವಣ್ದುಟಿಯ ತೊಳಗುವ ತೋರಪೊರವಾರ |
ಬಂಡುಣಿಯ ಸುಳಿಗುರುಳ್ಗಳ ಬಟ್ಟಮುಡಿಯ ಶಶಿ |
ಮಂಡಲಾನನದ ಮದಿರಾಂಬಕದ ಕುಂದಕುಟ್ಮಳ ರದನ ಕುಡುವುರ್ವಿನಾ ||
ಪುಂಡರೀಕೋಪಮಾಮೊದದಪರಂಜಿಯ ಕ |
ರಂಡಕಸ್ತನದ ನಳಿತೋಳ ಚೆಂದಳಿರ್ಗಯ್ಯ |
ಗಂಡುಗೋಗಿಲೆಯ ನುಣ್ಚರದ ಜವ್ವನೆ ಕರಂ ಕಣ್ಗೆ ವಿಭ್ರಾಜಿಸಿದಳು || ೪೪ ||

ತಳಿರ್ವಜ್ಜೆ ತರುಣಿಮತಮಾಲದಂದದ ಬಾಸೆ |
ಯೆಳವಾಳೆತೊಡೆ ಲತಾಮಧ್ಯಚಂಪಕವರ್ಣಿ |
ಬೆಳಗಾಯನೇಳಿಸುವ ಮೊಲೆ ಬಿಂಬಫಲನಿಭಾಧರ ದಾಡಿಮೋಪಮ ರದಂ ||
ತೊಳಗುವ ಸುಪರ್ಣ ಗಂಡಸ್ಥಳಂ ನವನಿಂಬ |
ದಳಸಮಾನ ಭ್ರೂಯುಗಂ ಕರಂ ಕಣ್ಗೊಳಿಸೆ |
ಲಲನೆ ನಂದನವನಸ್ತ್ರೀಯಂತೆ ನೋಡುವರ ಬಗೆಯ ಬಂಧಿಸುತಿರ್ದಳು || ೪೫ ||

ಕರುವಿಟ್ಟ ಕರ್ಬೊನ್ನ ಕರುವನುರಿಯೊಳ್ಕಾಸಿ |
ವರಸಿದ್ಧರಸದ ನೀರೂಟಮಿಕ್ಕಲ್ಕರಂ |
ಸುರುಚಿರಂಬಡೆದ ಮಿಸುನಿಯ ಬೊಂಬೆಯೆಂಬಂತೆ ಶತವೃದ್ಧೆಯಾ ವನಚರಿ ||
ಭರದಿನಾ ಮರದ ತನಿವಣ್ಣ ಸೇವಿಸಲು ಬಂ |
ಧುರಮಪ್ಪ ಬಲ್ಜವ್ವನಂದಳೆದ ಲಾವಣ್ಯ |
ವರರೂಪುವಡೆದುದತಿಚಿತ್ರವೆಂದಾ ವುಮಯನವಳೊಳಿಂತೆಂದುಸಿರ್ದನು || ೪೬ ||

ತರುಣಿ ಕೇಳ್ ನಿನ್ನ ವೃದ್ಧತೆ ಹಿಂಗಿ ಹೊಚ್ಚಹೊಸ |
ಹರೆಯಮಾದುದಿದೇನುಕಾರಣಮೆನಲ್ಕೇಳಿ |
ಯೊರೆದಳಿಂತೆಂದು ಬಳಿಕೀ ಮರದ ಪಣ್ಣಮೃತವದರಿನಾನೀ ಚೆಲ್ವನು ||
ಧರಿಯಿಸಿದೆನಿದನು ನೀ ನಿನ್ನ ಹಸಿವಳಿವಂತೆ ||
ಹರಿಸದಿಂ ಮೆಲಲಿಷ್ಟಸಿದ್ಧ ನಿನಗಪ್ಪುದೆನೆ |
ಸುರುಚಿರಗುಣಾಭರಣನೀಯಮೃತಫಲವಡೆದ ಭೂರುಹದ ಹೆಸರಾವುದು || ೪೭ ||

ಎನಲಿದರ ಹೆಸರ ನಾನರಿಯೆನೀ ಫಲದ ರಸ |
ದಿನಿದರುತ್ತಮಗುಣವನರಿವೆ ನಾನೈಸೆಯೆಂ |
ದನಿಮಿಷಾಂಬಕಿಯೊಳಿಂತೆಂದನಾ ಸುಚರಿತ್ರನೆನಗಂದು ಮೊತ್ತಮೊದಲು ||
ಜಿನಮುನೀಶ್ವರರೊಸೆದು ಹೆಸರನರಿಯದ ಮರದ |
ತನಿವಣ್ಣನಾರೊಗಿಸಲ್ಬೇಡವೆಂದು ಸ |
ದ್ವಿನಯದಿಂ ವ್ರತವಿತ್ತರದರಿಂದಿವಂ ಮೆಲ್ವುದನಗಾದುದಿಲ್ಲವೆನಲು || ೪೮ ||

ಮರುಳೆ ಕೇಳ್ ನಿನ್ನೆ ಮೊದಲಾಗಿ ಕೂಳಿಲ್ಲದೇ |
ಹಿರಿದಾಗಿ ಹಸಿದಕಾರಣದಿ ಬೆಂಬತ್ತಿದೊಡ |
ಲಿರೆದೆ ತಳ ಮೇಲಕಿಕ್ಕುವದಿಟ್ಟಿ ಹೂಳಿದಂಗುಳು ಸಾರವರತ ಬಾಯಿ ||
ತೊರೆದ ಕಿರಿಬೆಮರು ಕುಪ್ಪಳಿಪ ಕಾಲ್ದಡದಡಿಪ |
ಹರಣ ಬಂಬಲುಬಾಡುವಂಗ ತಡಬಡಿಪ ನುಡಿ |
ಯಿರವಾಗಿಯುಂ ಸುಧಾರಸಪೂರಪಕ್ಷಫಲಮಂ ಮೆಲ್ಲದಿಹುದೊಳ್ಳಿತೆ || ೪೯ ||

ಸಿರಿಬರಲ್ಮೊಳಕಾಲನೊಡ್ಡಿಸಿದ ಕಡುಹೆಡ್ಡ |
ರಿರವಾಯ್ತು ನಿನ್ನ ತೆರನೀ ಇಷ್ಟಸಿದ್ಧಿಯಂ |
ಭರವಸದಿ ಮಾಡಿಕೊಡುವೀ ಫಲಕ್ಕೆಲೆ ಸೊಗಡುಮಾಳ್ಪುದೆನಲಿಂತೆಂದನು ||
ಸುರಚಿರಸ್ವರ್ಗಾಪವರ್ಗಮಂ ಕೊಡವು ನಿಜ |
ಗುರು ಕೊಟ್ಟ ಸವ್ರತಮನೀ ಪ್ರಾಣವಳಿದೊಡನು |
ಸರಣಿಯಂ ಮಾಡಿದೊಡೆ ನೀರೊಳಗೆ ಹೊನ್ನುಂಬನೆಚ್ಚನಿರವೆನಗಪ್ಪುದು || ೫೦ ||

ಎಂಬ ಸಮಯದೊಳು ತನ್ನೊಡವಂದ ವೈಶ್ಯನಿಕು |
ರುಂಬಮೆಲ್ಲಂ ತತ್ಪಲಂಗಳಂ ತಿಂದೊಡಲು |
ತುಂಬುವನಿತರೊಳಿಳಾತಳಕೆ ತಟಹೊಟನೆ ಬಿಳ್ದುರುಳ್ದುದಂ ಕಂಡುಮಯನು ||
ಅಂಬುಜಾನನೆ ಪೇಳಿದೇನುಕಾರಣಮೆನ |
ಲ್ಕೆಂಬಲ್ಗಳಂ ತೆರೆದು ನುಡಿದಳೀ ತೆರದಿ ಕ |
ಣ್ಗಿಂಬಾದ ಪಣ್ಗಳಿವು ವಿಷದ ಫಲಮೆನಲು ಮತ್ತಿಂತೆಂದು ನುಡಿದನಾಗ || ೫೧ ||
ಇವು ವಿಷಯ ಫಲಮಾಗೆ ನಿನ್ನ ಜರೆತನ ಹಿಂಗಿ |
ನವಯೌವನಂ ಬಡೆವುದೇನು ಕಾರಣಮೆನೆಲ್ |
ಭುವನವಿಖ್ಯಾತ ಕೇಳಾನೀ ವನವನು ರಕ್ಷಣೆಮಾಳ್ಪ ವನದೇವತೆ ||
ಸುವಿಚಾರದಿಂ ನಿನ್ನ ಮನವನೀಕ್ಷಿಪೆನೆನು |
ತ್ತವತರಿಸಿದೆಂ ತಳುವದೀ ವಿಧಿಯನೆಂದು ಸುರ |
ಯುವತಿಯತ್ಯಂತ ಹರ್ಷೋತ್ಕರ್ಷೆಯಾಗಿ ಪಲತೆರದಿನವನಂ ಸ್ತುತಿಯಿಸಿ || ೫೨ ||

ಬಳಿಕಿಂತು ನುಡಿದಳೆಲೆಯುಮಯ ನಿನ್ನಯದೊಂದು |
ಸುಲಲಿತವ್ರತಕೆ ಮೆಚ್ಚಿಕೆ ಬೇಟಿಕೊಳ್ಳೆನಲ್ |
ತಲುಮಾಡದೀ ಬಿಳ್ದ ಬಂಧುಗಳನೆಚ್ಚರಿಸಿ ನಮ್ಮ ನಿಜಪುರವರಕ್ಕೆ ||
ತಳರಿಸೆನಲಂತೆ ಮಾಡುವೆನೆಂದು ತದ್ವಿಷದ |
ಫಲವ ತಿಂದಿಳೆಯೊಳಗೆ ಬಿಳ್ದವರನೆಲ್ಲರಂ |
ಘಳಿಲನೇಳಿಸಿ ಪುಷ್ಪವೃಷ್ಟಿಯಂ ಕರೆದಮರರಿರದೆ ಪೊಗಳುತ್ತಿರ್ದರು || ೫೩ ||

ಜನವಿನುತ ನಿನ್ನಂತು ಲೋಕದೊಳಗಧಿಕ ಸ |
ಜ್ಜನರಾರೆನುತ್ತಿರಲ್ಕಾ ಪುರದ ದಾರಿಯೊಳ್ |
ಬನದೊಡತಿಯಲರೊಂದೆಂದನಿಗಳಂ ಕರೆಯುತ್ತ ಮಣಿಗೊಡೆವಿಡಿದು ನಡೆಸಲು ||
ಅನುರಾಗದಿಂ ನಗರದೇವತೆಗಳಿದಿರ್ವಂದು |
ಮಿನುಗುವ ಸುರತ್ನಮಂಡಪದಲ್ಲಿ ಕುಳ್ಳಿರಿಸಿ |
ಜನಜಾತ್ರೆಯಾಗಿ ತತ್ಪುರಮೆಲ್ಲ ನೋಳ್ಪಂದದಿಂ ಪೂಜೆಗೆಯ್ದರಾಗ || ೫೪ ||

ಅದನರಿದು ನರಪಾಲ ನರನಾಥನಿದಿರ್ವಂದು |
ಮುದದಿಂದ ಕೊಂಡಾಡಿ ಪೂಜಿಸಿ ಬಳಿಕ್ಕ ನಿಜ |
ಸದನಮಂ ಹೋಗಿಸಿ ಮನವಾರೆ ಜಿನಸಮಯಮಂ ಚೆನ್ನಾಗಿ ನಂಬಿಹಿಡಿದಾ ||
ಚದುರರ್ಗೆ ಮುಂದಕ್ಕೆ ಕೇಡಿಲ್ಲಧಿಕ ಸಂ |
ಪದವೀವ ಮುಕ್ತಿಯಲ್ಲದೆ ಭವದ ಸಂಕಟದ |
ಹೊದಕುಳಿಯುಮಿಲ್ಲೆಂಬದಕ್ಕಿದೇ ಸಾಕ್ಷಿಯಾಯ್ತೀ ಸುಜನನುಮಯನಿಂದಾ || ೫೫ ||

ಎಂದು ಕೊಂಡಾಡಿ ನಿರ್ವೇಗಮಾನಸನಾಗಿ |
ನಂದನಂಗಧಿರಾಜಪದವಿತ್ತು ಭರದಿ ತ |
ನ್ನೊಂದಾಗಿ ಬರೆ ಮದನದೇವ ಮಂತ್ರೀಶ ಸಾಗರದತ್ತನಾ ವುಮಯನು ||
ಗೊಂದಣಗೊಂಡು ಕೆಲರರಸುಮಕ್ಕಳ್ಬರಲ್ |
ಮಂದೇತರಪ್ರಮೋದದೊಳ್ ಸಾಸೀರಕೀರ್ತಿ |
ಯೆಂದೆಂಬ ಮುನಿಗಳಿಂ ದೀಕ್ಷೆಯಂ ಧರಿಸಿದನಿಳಾತಳಂ ಪೊಗಳುವಂತೆ || ೫೬ ||

ತದನಂತರದೊಳು ತದ್ಭೂಪಾಲಕನ ಮಡದಿ |
ಮದನಶಕ್ತಿಗೆ ಸಮಂಬಡೆದಾ ಮದನಶಕ್ತಿ |
ಮುದದಿ ಸಾಗರದತ್ತ ವೈಶ್ಯನಂಗನೆ ಮತ್ತೆ ಕೆಲಬರವನೀಪತಿಗಳಾ ||
ಸುದತಿಯರ್ಸಹಿತ ಸುಪ್ರಭೆಯೆಂಬ ಕಂತಿಯರ |
ಪದಮೂಲದಲ್ಲಿ ವೈರಾಗ್ಯಪರೆಯಾಗಿ ನಿಜ |
ಹೃದಯಶುದ್ಧಿಯೊಳುತ್ತರೋತ್ತರ ಸುಖಮನೀವ ದೀಕ್ಷೆಯಂ ಧರಿಯಿಸಿದಳು || ೫೭ ||

ಬಳಿಕ ತತ್ಪುರದಲ್ಲಿ ಶ್ರಾವಕವ್ರತಂಗಳಂ |
ತಳೆದರರ್ದ್ಧವರಿದೇ ಲೋಕದೊಳ್ ಧರ್ಮಮೆಂ |
ದಲಘುತರಮಪ್ಪ ಪರಿಣಾಮಮಂ ತಾಳಿದರಿದಂ ಕಂಡು ನನ್ನ ಮನಕೆ ||
ಸುಲಲಿತ ಶ್ರದ್ಧೆಯೀ ದರ್ಶನದೊಳಾಯಿತೆಂ |
ದಳಿನಿಭಾಳಕಿ ಕನಕಲತೆ ಪೇಳಲಾ ಮಾತಿ |
ಗೆಳಸಿ ಅರ್ಹದ್ದಾಸನಾ ಸತಿಯರೆಲ್ಲರಿಚ್ಛಾಮಿಯೆಂದೆನುತಿರ್ದರು || ೫೮ ||

ಆ ನುಡಿಯ ಕೇಳುತಿಂತೆಂದಳಾ ಕುಂದಲತೆ |
ನಾನಿದಕ್ಕೊಡಬಡುವೆನೇ ನಿಮ್ಮ ಕಟ್ಟುಕ |
ಕ್ಕಾನಂದಿಪೆನೆಯೆಂದು ನುಡಿದ ನುಡಿಯಂ ಕೇಳಿಯಾರಾಜನಾಸಚಿವನು ||
ಈ ನುಡಿಗಿವಳ್ನಂಬಬೇಡವೇ ಇವಳನನು |
ಮಾನಿಸದೆ ಪನಿಹೊತ್ತಿನೊಳ್ತರಿಸಿ ಇವಳು ನುಡಿ |
ದಾ ನಾಲಗೆಯನುತ್ತರಿಸಬೇಕೆನುತ್ತಿರಲ್ಕಾ ಚೋರನಿಂತೆಂದನು || ೫೯ ||

ಸ್ಫುರಗಂಶುಮಾಲಿಯುದಯಂಗೆಯ್ಯೆ ಸಂತಸಂ |
ಸರಸಿರುಹಕ್ಕಾಗುವಂತಾವುಳೂಕಕ್ಕೆ ಕಡು |
ಹರಿಸಮಾದಪುದೆ ಸಜ್ಜನರ ನಡೆ ದುರ್ಜನರ್ಗಾಗದೆಂದೆಣಿಸುತಿರಲು ||
ಸುರುಚಿರಗುಣಾಲಂಕೃತಂ ವೈಶ್ಯಕುಲತಿಲಕ |
ನರವಿಂದಮುಖಿ ಕನಕಲತೆಯ ನುಡಿಯಂ ಕೇಳಿ |
ಉರುಮುದಂದಳೆದನರ್ಹದ್ದಾಸಜಿನಸಮಯವಾರ್ಧಿವರ್ಧನಚಂದ್ರನು || ೬೦ ||

ಇದು ವಿಬುಧಜನವಿನುತಮಿದು ವಿಬುಧಜನವಿನತ |
ಮಿದು ವಿದಿತಜಿನಸಮಯಶರಧಿಸಂಪೂರ್ಣೇಂದು |
ಸದಮಲಚರಿತ್ರ ಚೆಂಗಾಳ್ವಭೂವರನ ಸಚಿವಾನ್ವಯಾಂಬರಹಂಸನು ||
ಮದನಸಮರೂಪನುತ್ತಮಗುಣಕರಂಡಕಂ |
ಚದುರಮಂಗರಸನುಸಿರ್ದೀ ಕೌಮುದೀಕಥೆಯೊ |
ಳೊದವಿದುತ್ತಮಹೃದಯನು ಮಯನಚರಿತ್ರ ಪತ್ತನೆಯ ಸೊಗಯಿಸುವ ಸಂಧಿ || ೬೧ ||

ಅಂತು ಸಂಧಿ ೧೦ ಕ್ಕಂ ಪದನು ೬೧೬ಕ್ಕಂ ಮಂಗಳ ಮಹಾ