ಹಸುಳೆಗಳಿರಾ ಕೇಳಿ ನೀವೀ ಬಲೆಯೊಳು ಬಿ |
ಳ್ದುಸುಹೋದ ತೆರದಿನಿರದೊಡೆ ಕಂಡು ಧೀವರಂ |
ಮಸಕದಿಂ ನಿಮ್ಮೆಲ್ಲ ವರ ಗೋಣ ಮುರಿದು ವಸುಧಾತಳಕ್ಕೀಡಾಡುವಂ ||
ಅಸುವಿಲ್ಲದಂತಿರ್ದೊಡಿವು ಸತ್ತುವೆಂಬ ಭಾ |
ವಿಸಿ ಬರಿದೆ ನೆಲಕೆ ಹಾಕದೆ ಮಾಣನಾಗಳಸ |
ವಸದಿಂದ ದೆಸೆದೆಸೆಗೆ ಪಾರಿ ನೀವೆಂದೆಂಬ ಬುದ್ಧಿಗೆ ಒಡಂಬಟ್ಟುವು || ೩೬ ||

ವರವೃದ್ಧನೊರೆದ ಬುದ್ಧಿಯ ಕೇಳಿ ಹಂಸಾಳಿ |
ಮರಣವಡೆದಂತಿರಲ್ಕೆಯ್ದಂದ ಧೀವರಂ |
ಮರುದಿನದ ಹಿಪ್ಪಲಿಕೆ ಹರಿಯದ ಮುನ್ನಮಾಮರಕೆ ಬಳ್ಳಿವಿಡಿದು ||
ಹರಿಸದಿಂ ಹತ್ತಿ ಬಲೆಯೊಳು ಬಿದ್ದ ಹಕ್ಕಿಗಳು |
ಮರಣವಂ ದಿಟಮಾಗಿ ಹಡೆದವೆಂದೇ ಬಗೆದು |
ಪಿರಿದಾಗಿ ಮನನೊಂದು ತಾನೊಂದನೆಣಿಸಿದೊಡೆ ದೈವ ತಾನೊಂದೆಣಿಸಿತು || ೩೭ ||

ಈಯಂಚೆಗಳನು ಹಿಡಿದೊಂದೊಂದನೊಬ್ಬೊಬ್ಬ |
ರಾಯರಿಗೆ ಕೈಗಾಣಿಕೆಯನಿತ್ತು ವಿತ್ತದಾ |
ದಾಯಮಂ ಪಡೆವೆನೆಂದನುದಿನಂ ನಚ್ಚಿರ್ದ ಸಾಯಕವೆ ಕೈಗೂಡಿತು ||
ಆಯಿತಿಲ್ಲಾ ಎನ್ನ ಕಾರ್ಯಮೆಂದಂಚೆಯ ನಿ |
ಕಾಯವೆಲ್ಲವನು ಬಿಟ್ಟೀಡಾಡಲವು ತಮಗೆ |
ದಾಯಮಾಯ್ತೆಂದವಾ ನೆಲಕೆ ಬೀಳದ ಮುನ್ನ ದೆಸೆದೆಸೆಗೆ ಪೋದುವಾಗ || ೩೮ ||

ಈ ತೆರೆದ ಕಥೆಯನಂಗಡಿಬೀದಿಯೊಳು ಜನವಿ |
ನೂತನೊರ್ವಂ ಪೇಳೆ ಕೇಳುತ್ತಮಿರ್ದದರಿ |
ನಾ ತಸ್ಕರರನರಸಿತರ್ಪುದಂ ಮರೆದೆನಾನಿಂದಿನೀ ಪಗಲೊಳೆಂಬ ||
ಆ ತಳಾರನ ನುಡಿಯ ಕೇಳಿ ತಾನಿಂತೆಂದ |
ನೀತಂ ಮೊದಲ್ ನಷ್ಟಕಾರ್ಯಾಭಿವಚನಮಂ |
ಮಾತೇನು ಸೂಚಿಸಿದನೆಂದು ಬಗೆದಾತನಂ ಬೀಳ್ಕೊಟ್ಟು ಮನಗೆ ಬಂದು || ೩೯ ||

ಬರಿಸಿ ಮಂತ್ರಿಯನಾ ತಳಾರನುಸಿರಿದ ಕಥೆಯ |
ನೊರೆಯಲಿಂತೆಂದು ಬಿನ್ನವಿಸಿದಂ ಮೊಳೆಯಲ್ಲಿ |
ಮುರುಟುವುದನದು ಬೆಳೆದ ಬಳಿಕ ಮುರುಟಲ್ ಬಹುದೆ ಏಕಾಕಿಯಲ್ಲ ನಾನು ||
ಪುರಮೆಲ್ಲ ನನ್ನ ಕೊಲೆಗೊಡಬಡದು ನಿನಗಿನ್ನು |
ಪುರಿದು ಕರ್ಕಶಮೆಂದು ನುಡಿದ ಕಟಕಿಯ ಮಾತ |
ನರಸ ಕೇಳೆಂದು ಬಿನ್ನವಿಸಿ ಬೀಳ್ಕೊಂಡು ತನ್ನಾಲಯಕವಂ ಪೋಗಲು || ೪೦ ||

ಮರುದಿನದ ಹರೆಯಹೊತ್ತರೊಳಗೋಲಗಕೆಯ್ದಿ |
ಯರಗುಲಿನೃಪಾಲನಾ ಯಮದಂಡನಂ ಬರಿಸಿ |
ಮರೆದೆಯಾ ಕಳ್ಳರಂ ತಹುದನೆನೆ ಬರಸಿಡಿಲ ದನಿಗೇಳ್ದ ಹಂಸೆಯಂತೆ ||
ನೆರೆ ಬೆದರಿ ತಾನೆಸಗಿದಾ ಸ್ವಾಮಿಕಾರ್ಯಮದು |
ಬರಿಯ ಬೂದಿಯ ಹೋಮಮಾದುದೆನುತ್ತ ಹಿರಿದಾಗಿ |
ಮರುಗುತ್ತ ಮನದೊಳಗೆ ಎಲೆ ದೇವ ಎಂದಿಂತು ಮಾಡಿದಂ ಬಿನ್ನಪವನು || ೪೧ ||

ಕರಯುಗದೊಳೆರಡು ಕೈಮಣಿವಿಡಿದುಕೊಂಡು ಪುರ |
ವರದ ಬೀದಿಯೊಳೊರ್ವ ಕುಂಭಕಾರಂ ತೆಮಳಿ |
ಬರುತಿರಲ್ಕವನನಾ ಪುರಜನಂ ನೆರೆದರೆಲೆ ಕುಂಬಾರ ಮುನ್ನ ನೀನು ||
ಸಿರಿವಂತನಾಗಿ ಬಲಯುತನಾಗಿ ಬಹುಜನದೊ |
ಳುರುಕೀರ್ತಿಯುತನಾಗಿ ಬಾಳುತಿರ್ದೀಗಳೀ |
ಪರಿಯೊಳಗೆ ಬರ್ಪ ಕಾರಣವನುಸಿರೆಂದೆನಲ್ ನುಡಿದನವನವರೊಳಿಂತು || ೪೨ ||

ಪಲಕಾಲದಿಂದ ನಾನಗೆವುದಕ್ಕೊಳಗಾಗಿ |
ಯಲಸದತಿವಿನ್ನಾಣದಿಂ ಗೆಯ್ಯೆ ಘಟವಾಗಿ |
ಬೆಲೆವಡೆದು ಬಹಳವಸ್ತುವ ಗಳಿಸಿಕೊಟ್ಟು ಸಿರಿವಂತನಂ ಮಾಡಿ ಬಳಿಕಾ ||
ಸಲಹುತ್ತಮಿರ್ದೊಂದು ದಿವಸದೊಳು ತಾನಿರ್ಪ |
ನೆಲದ ಡೊಗರೊಳಗೆ ಹೊಕ್ಕಗೆಯುತ್ತಮಿರೆ ಜರಿದು |
ಬಲುಹೆಂಟೆಯಾಗಿ ಮೇಲಿಪ್ಪೆರೆಯ ಮಣ್ಣೆನ್ನ ಬೆನ್ನನೋವದೆ ಮುರಿದುದು || ೪೩ ||

ಮೊಲೆವಾಲೆ ನಂಜಾಗೆ ತಾಯೆ ರಕ್ಕಸಿಯಾಗೆ |
ಸಲೆ ಕಾವ ಬೇಲಿಯೆದ್ದೆಳೆವೆಳೆಗಳಂ ಮೇಯೆ |
ಸಲಹುವೊಡೆಯನೆಯಾಳ ತಲೆಗೊಳ್ವಡದನಾರು ಬಾರಿಪನಾರಿಳಾತಳದೊಳು ||
ಎಲೆ ಜನಮೆ ಅದರಂತೆ ನನ್ನನೀ ವಿಧಿಗೆಯ್ದ |
ನೆಲದೆರೆಯ ಮಣ್ಣಿಂದಮುದ್ಯೋಗಮಿಲ್ಲದೀ |
ನೆಲದೆರೆಯ ಮಣ್ಣಿಂದಮುದ್ಯೋಗಮಿಲ್ಲದೀ |
ಬಲುಬಡತನಂ ಬಂದಿತೆಂದೆಂಬ ಕುಂಬರನ ನುಡಿಗೇಳುತಿರ್ದೆನರಸಾ || ೪೪ ||

ಎನೆ ನಾಳಿನುದಯಕ್ಕೆ ಕಾಲಾತ್ರಿಕಂ ಮಾಡ |
ದಿನಿಸು ಬೇಗದಿ ಕಳ್ಳರಂ ತಂದು ಕೊಡುವುದೆನೆ |
ಮನದೆಗೊಂಡಾ ನುಡಿಗೆ ನೃಪತಿಯಂ ಬೀಳ್ಕೊಂಡು ಮನೆಗೆ ಚಿಂತಿಸುತೆಯ್ದಲು ||
ಅನಿತರೊಳಗಾ ದಿನಂ ಕಳೆಯಲುದಯದೊಳೆದ್ದು |
ಘನಕುಪಿತಹೃದಯನಾಸ್ಥಾನಮಂಡಪಕೆಯ್ದಿ |
ಜನವಿನುತ ಯಮದಂಡನಂ ಕರಸಿಯವನೊಳಿಂತೆಂದು ನಿರವಿಸಿದನಾಗ || ೪೫ ||

ತಂದೆಯಾ ತಸ್ಕರನೆನೆ ಕೇಳುತೆದೆಹಾರು |
ತಂದು ವಿಜ್ಞಾಪನಂಗೆಯ್ದ ನಾನಾವ ತೆರ |
ದಿಂದವರನರಸಿ ತರಲೆಂದು ಪುರಮಂ ಬಳಸಿ ಬರ್ಪಾಗಲೊಂದೆಡೆಯೊಳು ||
ಗೊಂದಣಂಗೊಂಡು ಜನಗಳು ಕೇಳುವಂತೆ ಮನ |
ಸಂದೋರ್ವನೊಂದು ಕತೆಯಂ ಪೇಳ್ದುದನು ಕೇಳಿ |
ತಂದುದಿಲ್ಲೆನಲಾ ಕಥೆಯನೆಮಗೆ ಪೇಳೆನಲ್ವೇಳ್ದನವನಿಂತುಟೆಂದು || ೪೬ ||

ಒಂದಡವಿಯೊಳಗೊಂದು ಹರಿಣಿ ತನ್ನಯ ಪರಿ |
ಸ್ಪಂದಸಹಿತೆಯ್ದುತಿರೆ ಪರಿವರಿಪ ಕಾಳ್ಕಿಚ್ಚು |
ಮುಂದುಗಡೆ ಕಾಲ್ಕರಿಣಿ ಕಪ್ಪು ಬಲಗಡೆ ಬಿಟ್ಟ ಬೆಳ್ಳಾರ ಬಲೆಯೆಡಗಡೆ ||
ಸಂದಣಿಸಿ ಬಿಲ್ಕೋಲ್ವಿಡಿದು ಬರ್ಪ ವನಚರರ್‌ |
ಪಿಂದುಗಡೆ ಈ ಅನುವರವನು ಮಾಣಿಪರಿಲ್ಲ |
ಹಿಂದಣಘವಶದ ಫಲವೈಸೆಯೆಂದೆಂಬ ಹುಲ್ಲೆಯ ಕಥೆಯ ಪೇಳ್ದನಾಗಾ || ೪೭ ||

ನೀತಿಯಂ ತನಗೆ ಹುಲ್ಲೆಯ ಕಥೆಯ ನೆವದಿ ಮ |
ತ್ತಾ ತಳಾರಂ ತಿಳಿಯಬೇಕೆಂದು ಮಿಗೆ ಪೇಳ್ದ |
ಮಾತು ಮನಮಂ ಪೊಕ್ಕುದಿಲ್ಲ ಕೃತಕೋದ್ರೇಕಮಾ ಮನದೊಳಾವರಿಸಲು ||
ಓತೆರಡು ಕೂರಸಿಗಳೊಂದೊರೆಯ ಹೊಗದಂತೆ |
ಭೂತಳಾಧೀಶನಿಂತೆದನಾ ಕಳ್ಳರಂ |
ಮಾತೇನೊ ನಾಳೆ ತಂದೊಪ್ಪಿಸೆನಲಂತೆ ಮಾಡುವೆನೆಂದು ಬೀಳ್ಕೊಂಡನು || ೪೮ ||

ಬಳಿಕ ಬಲ್ಲಾಳಿಟ್ಟಿಗೊಂಡಂತೆ ಯಮದಂಡ |
ನುಳಿವು ತನಗಿನಿಲ್ಲ ಕಟ್ಟೊಡೆಯನೇ ಪಿರಿದು |
ಮುಳಿದನೆನುತಿರಲು ಮರುದಿನದೊಳವನಂ ಕರಸಿ ಕಳ್ಳರಂ ತರ್ಪುದರ್ಕೆ ||
ಅಳುಗುಜ್ಜುಗಂ ಮಾಡಿಕೊಂಡೆಯಲ್ಲಾ ಎನಲ್ |
ಪೊಳಲ ಮಧ್ಯದೊಳೊರ್ವನೊಂದು ಕಥೆಯಂ ಪೇಳ |
ಲೆಳಸಿ ಕೇಳುತಿರ್ದೆನೆನಲದಂ ಪೇಳೆನಲ್ ಪೇಳ್ದನವನೀಶಗಿಂತು || ೪೯ ||

ಪರಿರಂಜಿಸುತಿರ್ಪ ಪಾಂಚಾಳದೇಶದೊಳ್ |
ವರಶಕ್ತಿನಗರವೆಂದೆಂಬುದುಂಟದನಾಳ್ವ |
ಪರಮಧಾರ್ಮಿಕನು ಜೈನಮತಾನುಸಾರಿ ಸದ್ಗುಣಯುತ ಸುಧರ್ಮನೆಂಬ ||
ಅರಸು ಜಿನದತ್ತೆಯೆಂದೆಂಬ ಸತಿಗೂಡಿ ಸು |
ಸ್ಥಿರನಾಗಿ ಭೂಭಾರಮಂ ನಿಜಭುಜದೊಳಾಂತು |
ಸುರಪತಿಸಮಾನವೈಭವದಿಂದ ಸುಖಸಂಕಥಾವಿನೋದದೊಳಿರ್ಪನು || ೫೦ ||

ಪರಮಂಡಲವನು ಸಾಧಿಸುವೆನೆಂಬೊಂದಿಚ್ಛೆ |
ಪಿರಿದಾಗಿ ಪುಟ್ಟಲುತ್ತಮಲಗ್ನದೊಳ್ಪುರಮ |
ನಿರದೆ ಪೊರಮಟ್ಟು ದಂಡೆತ್ತಿ ನಡೆದಂಗ ಕಾಶ್ಮೀರಘೋರ್ಜರಕೇರಳ ||
ವರಕೋಸಲಾದಿ ಛಪ್ಪನ್ನದೇಶದ ಮಹೀ |
ವರರನೆಲ್ಲರನು ಕಾಣಿಸಿ ಕಪ್ಪಮಂ ಕೊಂಡು |
ಹರಿಸದಿಂ ಮಗುಳ್ದು ಮಹದೈಶ್ವರ್ಯಯುತನಾಗಿ ನಗರಿಯಂ ಪುಗುವಾಗಳು || ೫೧ ||

ಘೋಳಿಡುತ ಬೆಟ್ಟು ಬೀಳ್ವಂತೆ ನಗರಿಯ ಕೋಂಟೆ |
ಬೀಳಲದ ಕಂಡು ಶಕುನಿಗರೆಂದರೆಲೆ ಮಹೀ |
ಪಾಲಕಾ ಅದ್ಭುತದ ಶಕುನಮಂ ನೋಡಿ ನಿಜನಗರಿಯಂ ಪುಗಲು ಬೇಡಾ ||
ನಾಳಿನುದಯಕ್ಕೆ ಕೋಂಟೆಯನಿಕ್ಕಿಸಿದ ಬಳಿಕ | ಪಾಳೆಯಂ ಸಹಿತ ಬಿಜಯಂಗೆಯ್ವುದೆಂಬ ನುಡಿ |
ಗೇಳಿಯಂತೆ ಗೆಯ್ವೆನೆಂದು ತಡಗೆಯ್ದು ಮರುದಿನದೊಳತಿರಚನೆಯಿಂದ || ೫೨ ||

ಚೆನ್ನಾಗಿ ಕೋಂಟೆಯಂ ಹಸಗೆಯ್ಸಿ ಪುಗುವಾಗ |
ಮುನ್ನಿನಂದದಿ ಮೂರು ದಿನ ಬೀಳೆ ಕಾಣುತತಿ |
ಖಿನ್ನಮಾನಸನಾಗಿ ಬಿರುಮಳೆಯ ಹತ್ತಿದಂದದೊಳಾಮಹೀಪಾಲನು ||
ತನ್ನ ಜಯದೇವನೆಂದೆಂಬ ಮಂತ್ರಿಯ ಕರಸಿ |
ಇನ್ನಿದಕ್ಕಾವುದೊ ಉಪಾಯಮೆನೆ ಚಾರ್ವಾಕ |
ಮನ್ನೆಮ್ಮಿದವನಾಗಿಯರಸನೊಡನವನಿಂತು ಬಿನ್ನಪಂಗೆಯ್ದನಾಗ || ೫೩ ||

ನರಬಲಿಯನಿತ್ತ ಬಳಿಕಾ ಬಿಸಿಯ ನೆತ್ತರಿಂ |
ಪೊರೆದ ಮಣ್ಣಿಂದಲ್ಲದೀ ಕೋಂಟೆ ನಿಲ್ಲದೆನೆ |
ಕರುಣಾರ್ದ್ರಹೃದಯನಾ ನುಡಿಗೇಳಿ ಕಿವಿಮುಚ್ಚಿಯಿಂತಪ್ಪ ಹಿಂಸೆಯಿಂದ ||
ಸಿರಿಹಾರಿಯಾಯುಷ್ಯವಡಗಿ ಸದ್ಗತಿ ಕೆಟ್ಟು |
ನರಕದೊಳ್ ಜನಿಸಿ ಕೋಟಲೆಬಡುವುದದರಿಂದ |
ವರಮಂತ್ರಿ ಕೇಳಿದಕ್ಕನೊಡಂಬರುವುದಿಲ್ಲೆನಲು ಜಯದೇವಮಂತ್ರಿ || ೫೪ ||

ಎಲ್ಲಿಯದು ಪಾಲಮೆಲ್ಲಿಯದು ಪುಣ್ಯಂ ಸ್ವರ್ಗ |
ಮೆಲ್ಲಿಯದು ನರಕಮೆಲ್ಲಿಯದು ಜೀವನವು ತಾ |
ನೆಲ್ಲಿಯದು ನೋಡೆ ಭೌತಿಕಯೋಗದಿಂದಾದ ದೇಹಕ್ಕೆ ಮರುಜನ್ಮವು ||
ಎಲ್ಲಿಯದಿದೆಂದು ಬಗೆಯೊಳಗೆ ಬಗೆಯದೆ ಬರಿದೆ |
ಗೊಲ್ಲಸಂಗೊಂಡು ದೇಹವನು ದಂಡಿಪುದು ಜಗ |
ಮೆಲ್ಲಮೆನಲಾ ನುಡಿಯ ಕೇಳಿ ಮತ್ತಾ ನೃಪತಿಯಿಂತೆಂದು ನುಡಿದನಾಗ || ೫೫ ||

ಪಾಪಮುಂ ಪುಣ್ಯಮಿಲ್ಲದೊಡೆ ಭೃತ್ಯರ್ಕೆಲರ್ |
ಭೂಪತಿಗಳುಂ ಕೆಲಬಲರಾಗಿ ಪುಟ್ಟಲದೇಕೆ |
ಆಪತ್ತು ಸುಖಮದೇತಕ್ಕೆ ಮರುಜನ್ಮಮಿಲ್ಲದೊಡೆ ಸತ್ತಾಗ್ರಹಗಳಾ ||
ರೂಪಾಗಿ ಮುನ್ನೆನ್ನ ಕೊಂದೆಯಲ್ಲಾ ಎನುತ |
ಕೋಪದಿಂ ಬಂದು ಪಗೆವರ ಕಾಡುತಿರಲೇಕೆ |
ಈ ಪರಿಯನರಿದಿರ್ದು ಚಾರ್ವಾಕಮಂ ನಂಬಿ ಹಿಂಸೆಯಂ ಮಾಡಬಹುದೇ || ೫೬ ||

ವರಸುಜನರೆಂಬ ನುಡಿಗುತ್ತರಮನರಿಯದೇ |
ಪುರಜನವ ಬರಿಸಿಯವರುಂ ತಾನುಮಿಂತೆಂದ |
ರರಸ ನೀವೆಸಗಿಸಲ್ವೇಡ ನಾವೇ ಮಾಳ್ಪೆವೆನೆ ಕೇಳುತಿಂತೆಂದನು ||
ನಿರುತದಿಂ ಪ್ರಜೆ ಮಾಡಿದಾ ಪುಣ್ಯಪಾಪಫಲ |
ನಿರದಹುದು ಷದ್ಭಾಗೆಯೊಳಗೊಂದು ಭಾಗೆಯದು |
ನರಪಾಲಕರ್ಗೆಂಬ ನಾಣ್ಣುಡಿಯನರಿದಿರ್ದುಮೊಡಬಡುವುದಿಲ್ಲವೆನಲು || ೫೭ ||

ಅರಸನೊಬ್ಬನಲ್ಲದಾ ಊರೊಳಿರ್ಪವರೆಲ್ಲ |
ನೆರೆದಿಂತು ತಮ್ಮೊಳಾಳೊಚನೆಯ ಮಾಡಿದರ್ |
ಪುರದ ಕೋಂಟೆಗೆ ಬಲಿಯ ಕೊಡದೊಡರಸಗೆ ವಿಷ್ಣ ಮುಂದಕ್ಕೆ ತಪ್ಪದಹುದು ||
ಅರಸು ಕೆಟ್ಟೊಡೆ ಕೇಡು ನಮಗೆಯದರಿಂದಮೀ |
ಯರಸನಂ ಮೀರೆ ರಾಜದ್ರೋಹಮಿಲ್ಲೆಂದು |
ಪಿರಿಯಾಗಿ ನಿಶ್ಚಯಿಸಿ ತತ್ಪುರದೊಳಾ ನೃಪತಿಯಲ್ಲಿಗಾರ್ಪೋಗದಂತೆ || ೫೮ ||

ಮೊರೆದೆದ್ದು ಸಕಲ ರಾಣುವೆಯೊಂದು ಹುರಿಗೂಡಿ |
ಪುರವರದೊಳೆತ್ತಿ ಹದಿಕೆಯನು ತದ್ವಿತ್ತದಿಂ |
ನರರೂಪನೊಂದನನುಗೆಯ್ಸಿ ಮಣಿದೊಡವನಿಟ್ಟದನೊಂದು ರಥದ ಮೇಲೆ ||
ಇರಿಸಿ ಕೆಲದೊಳಗೊಂದು ಲಕ್ಕ ಪೊನ್ನಂ ಸುರಿದು |
ಪುರದ ಬೀದಿಯೊಳದಂ ನಡೆಯಿಸುತ್ತಿಂತೆಂದು |
ಪರಿದು ಸಾಋಱೆಸಿದರೀ ಪೊನ್ನ ಪುತ್ತಳಿಯನೀ ಪೊನ್ನ ರಾಸಿಯನೆ ಕೊಂಡು || ೫೯ ||

ಹಡೆದ ಮಗನಂ ಕೊಟ್ಟು ವಿಷಮನಾತನ ಜನನಿ |
ಕುಡಿಯೆಂದು ಕೂರಸಿಯನಾ ತಂದೆ ಹಿಡಿದವನ |
ಹರಿದು ನರಬಲಿಯನೀ ಕೋಂಟೆಗೆ ಕೊಡುವರುಂಟೆ ಎಂದು ಡಂಗುರವ ಹೊಯ್ಸಿ ||
ಪೊಡವಿಯೊಳಗಿಂತಪ್ಪ ಘಾತಮಂ ಮಾಡುವುದ |
ಕೊಡಬಡುವ ಪಾತಕಿಗಳುಂಟೆ ಎನುತೆಲ್ಲರೆಡೆ |
ವಿಡದೆ ಕಿವಿಯಂ ಮುಚ್ಚುತಿರಲದಂ ಕೇಳಿ ಬಳಿಕದರೊಳತಿದಾರಿದ್ರನು || ೬೦ ||

ವರದತ್ತನೆಂಬ ಪಾರ್ವಂ ತನ್ನ ನಿಜಸುದತಿ |
ವರದತ್ತೆಯೆಂಬಳೊಳಗಿಂತೆಂದು ನುಡಿದನೀ |
ಪುರದೊಳುಳ್ಳಷ್ಟಾದಶಪ್ರಜೆಯ ಬಡವರೊಳ್ನಾಡೆ ನಾನೇ ಬಡವನು ||
ತಿರಿದಾವ ತೆರದಿ ಹೊಟ್ಟೆಯ ಹೊರೆವುದಕ್ಕೆ ನಾ |
ವೆರಡೆಯೊಡಲಲ್ಲ ಕಿರುಮಕ್ಕಳಿವರೆಣ್ಬರೀ |
ಪರಿಯಾದ ಬಹುಕುಟುಂಬವ ಪೊರೆವುದಕ್ಕಾವ ತೆರನೆಂದು ನುಡಿದನಾಗ || ೬೧ ||

ಸಿರಿಯುಳ್ಳವನೆ ಶೀಲನಿಧಿ ಸುಗುಣಿ ಸುವಿವೇಕಿ |
ಯುರು ಪುಣ್ಯವಂತನಭಿಮಾನಿಯುತ್ತಮಗುಣಾ |
ಭರಣನತಿಬುದ್ಧಿವಂತಂ ಗುರುವನೇಕವಾಕ್ಯಪ್ರತಿಷ್ಠಾಚಾರ್ಯನು ||
ಸಿರಿಯಿಲ್ಲದವನು ಕುಲಹೀನನವಿವೇಕಿ ದು |
ಶ್ಚರಿತನಾರಡೆಕಾರ ಭೂಭಾರಕಂ ಪಿಸುಣ |
ನುರುತರದ್ರೋಹಿಯನ್ನೆಯಕಾರನೆಂದು ನೆಲನೆಲ್ಲ ನುಡಿಯುತ್ತಮಿಪ್ಪುದು || ೬೨ ||

ಹೊತ್ತುಗಳೆನ್ನೆವರಮೀ ಪುರದ ಕೇರಿಯೊಳ್ |
ಸುತ್ತಿ ಮುಷ್ಟಿಯ ಬೇಡಿ ತಂದಕ್ಕಿಯಶನೊಂ |
ಬತ್ತೊಡಲಿಗರ್ಧವರಿಗುಂಟರ್ಧವರಿಗಿಲ್ಲಮೊಡಲಾರಿ ನವೆದು ಬಳಿಕ ||
ಸತ್ತು ಸುಡುಸುಣ್ಣವಪ್ಪುದರಿಂದಮೀ ತಂದ |
ವಿತ್ತಮಂ ಕೊಂಡು ಮತ್ತೀ ಕಿರಿಯ ಮಗನಿಂದ್ರ |
ದತ್ತನಂ ಕೊಟ್ಟು ನಾವೆಲ್ಲರುಂ ಬದುಕುವುದುಪಾಯಮೆಂದಾ ಪಾರ್ವನು || ೬೩ ||

ಆ ಸತಿಯನೊಡಬಡಿಸಿ ಪರಿದು ಬೀದಿಗೆ ಬಂದು |
ಘೋಷಣೆಯ ನಿಲಿಸಿಯಾ ಬೊಂಬೆಯಾ ಹೊನ್ನ ಬಲು |
ರಾಶಿಯಂ ಕೊಂಡು ಕೊಕ್ಕರಿಸದೇ ತನುಜನಂ ಕೊಟ್ಟು ಶಕಟಮನೇರಿಸಿ ||
ಓಸರಿಸದಾ ತಾಯಿ ವಿಷಮನಾ ನಿಜಜನಕ |
ನಾ ಸುರಗಿವಿಡಿದು ಬಂಡಿಯ ಬಳಿಯೊಳೆಯ್ದುತಿರೆ |
ದೇಶಮೆಲ್ಲಾ ವಿಸ್ಮಯವನು ನೋಡುವೆವೆಂದು ಜನಜಾತ್ರೆಯಾದುದಾಗ || ೬೪ ||

ಹಡೆದ ಮಗನಂ ಪೆತ್ತ ತಂದೆತಾಯ್ಗಳು ಮರುಕ |
ವಡೆಯದರ್ಥವ ಬಯಸಿ ಕಯ್ಯಾರೆ ತಲೆಯ ಹರಿ |
ಗಡಿದು ಕೋಂಟೆಗೆ ಬಲಿಯ ಕೊಡುವರುಗುಲಿಯನು ಬಿಡಿಸುವೆನೆಂದು ಭೂಪಾಲನು ||
ನಡೆದು ಕೋಂಟೆಯ ಮುಂದೆ ಕುಳ್ಳಿರ್ದು ಕಡುಹರುಷ |
ವಡೆದು ಹೃದಯದೊಳಿನಿಸು ದಬ್ಬುದಲೆಯಿಲ್ಲದೇ |
ನುಡಿಯುತೊಳ್ನುಡಿಯ ನಸುನಗೆಯಿಡುವ ಮಾಣವಕನಂ ಕಂಡು ನುಡಿದನಿಂತು || ೬೫ ||

ಈಗಳೊಂದಿನಿಸು ಹೊತ್ತಿಗೆ ಹರಕೆದೆಗೆದ ಕುರಿ |
ಯಾರಿ ಕೊರಲು ಕೊಯ್ಸಿಕೊಂಡು ಭೂತಕ್ಕೆ ಬಲಿ |
ಯಾಗುತಿದೆಯೆನ್ನ ಮೆಯ್ಯೆಂಬುದೊಂದೆದೆಹಾರುತನದ ಸಂಕಟವ ಮರೆತು ||
ಬೇಗೆಯಿಂ ಕಾದುಕ್ಕುವುದಕದೊಳ್ಕಮಲವಲ |
ರಾಗುವಂದದೊಳು ನಗೆಮೊದವೇಕೆನಲ್ ಸಾನು |
ರಾಗದಿಂದಾ ಮಹೀಪಾಲಕನ ಕೊಡೆಯವನಿಂತೆಂದು ನುಡಿದನಾಗ || ೬೬ ||

ಜನಪ ಕೇಳ್ ಜನನಿ ಮುನಿದೊಡೆ ಜನಕನೇ ಶರಣು |
ಜನಕ ಮುನಿದೊಡೆ ಜನನಿಯೇ ಶರಣು ಪರಿಜನಂ |
ಮುನಿಯೆ ಜನಪಾಲಕನೆ ಶರಣು ಜನನಾಥ ಮುನಿಯಲ್ಕೆ ಪರಿವಾರ ಶರಣು ||
ಜನನಿ ಜನಕಂ ಪರಿಜನಂ ಭೂಮಿಪಾಲಕರು |
ಮುನಿಯೆ ದೈವವೆ ಶರಣು ತದ್ದೈವಮುಂ ಮುನಿಯೆ |
ನನಗಿನ್ನದಾರು ಶರಣೆಂಬ ಬಿಸವಂದಮಂ ಕಂಡಿತು ಚಿಂತಿಸುವೆನು || ೬೭ ||

ಎಂದು ಪರಮಾರ್ಥವನೆ ನುಡಿವ ಭೂಸುರಸುತನ |
ದೊಂದು ಧೈರ್ಯವ ಕಂಡು ನಗರದೇವತೆಗಳೆ |
ಯ್ತಂದು ಕಡುಮೆಚ್ಚಿಯಾ ಕೋಂಟೆಯಂ ನಿರ್ಮಿಸಿ ಬಳಿಕ್ಕೆ ಪೂಮಳೆಯ ಕರೆದು ||
ಅಂದವನನೊಸೆದು ನವರತ್ನಭೂಷಣವಸ್ತ್ರ |
ದಿಂದ ಪೂಜಿಸಿ ಲೋಕದೊಳಗೆ ನೀನಲ್ಲದೇ |
ಸಂದ ಸಾಹಸಿಗರಾರೆಂದು ಬಾಯೆತ್ತಿ ಜಗವರಿವಂತೆ ಪೊಗಳ್ದರಾಗ || ೬೮ ||

ಎಂದೆಂಬ ಕಥೆಗೇಳುತಿರ್ದೆನದು ಕಾರಣದಿ |
ತಂದುದಿಲ್ಲಾ ಚೋರರಂ ನೃಪತಿ ಕೇಳೆನಲ್ |
ಮಂದಮತಿಯಾ ಸುಯೋಧನನೃಪಂ ಕಗ್ಗಲ್ಲಬೀಟೆಯಂದದಿ ಮುನಿಸನು ||
ಒಂದಿನಿಸು ಮೆಚ್ಚದಾ ಕಳ್ಳರಂ ನಾಳೆ ನೀಂ |
ತಂದೊಪ್ಪಿಸೆಂದು ಯಮದಂಡನಂ ತನ್ನ ನಿಜ |
ಮಂದಿರಕೆ ಕಳುಹಿ ಬಳಿಕಾ ರಾತ್ರಿಯಂ ಕಳೆದು ಮರುದಿನದೊಳವನ ಕರೆಸಿ || ೬೯ ||

ಕಳವು ಸಹಿತಾ ಕಳ್ಳರಂ ಬೇಗ ತರ್ಪೆನೆಂ |
ದಳುಕದೇ ಸಾಮಮಂ ಮಾಡಿದೆಯಲಾ ನಮಗೆ |
ಇಳೆಯಾದಿನಾಥತ್ವಮಿಲ್ಲೆಂದು ಮಿಗೆ ಕೀರಿ ನುಡಿದ ಜನತಾಧಿಪತಿಗೆ ||
ತುಳಿಲಾಳು ಯಮದಂಡನಿಂತೆಂದನಾ ತುಂಬು |
ವೊಳೆಗೆ ಇದಿರಾಗಿ ಈಸುವರುಂಟೆ ನಿನ್ನಾಜ್ಞೆ |
ಗಳುಕದೆ ಮನಮಾಡಿ ಇನ್ನಾರ ಮರೆಹೋಗುವೆನೆಂದು ಮತ್ತಿಂತೆಂದನು || ೭೦ ||