ಶ್ರೀಮದರ್ಹದ್ದಾಸವೈಶ್ಯವಿಭು ಕೇಳಲಾ |
ತಾಮರಸಮುಖಿ ಕನಕಲತೆ ಮೃದುಕರಂಗಳಂ |
ಪ್ರೇಮದಿಂ ಮುಗಿದು ತನಗಾದ ಸಮ್ಯಕ್ತ್ವಮಂ ಬಿನ್ನಪಂಗೆಯ್ದಳಿಂತು || ಪಲ್ಲ ||

ಪೆಸರ್ವಡೆದ ಪಾರದ ಜನಾಂತದೊಳ್ಪಿರಿದು ರಂ |
ಜಿಸುತಿರ್ಪ ಸುಬ್ಬಕೌಶಂಬಿನಗರಿಯಲಿಯಸ |
ದೃಶಪರಾಕ್ರಮಿ ಸುದಂಡನೆಂಬವಂ ವಿಜಯೆಯೆಂದೆಂಬ ರಮಣಿಗೂಡಿ ||
ವಸುಧೆಯಂ ಸುದ್ಭುದ್ಧಿಯೆಂಬ ಸಚಿವಂಗೂಡಿ |
ಎಸಕದಿಂದಾಳುತಿರಲಲ್ಲಿ ವೈಶ್ಯೋತ್ತಮಂ |
ರಸಿಕಸುರದೇವನೆಂಬಂ ಗುಣಶ್ರೀಯೆಂಬ ಸತಿಗೂಡಿ ಸುಖದಿನಿರ್ದು || ೧ ||

ಭಂಗುರಜನಾಂತಕ್ಕೆ ಪೋಗಿ ರವಿಯಶ್ವಮಂ |
ಭಂಗಿಸುವುದೊಂದು ಜಾತ್ಯಶ್ವಮಂ ತಂದು ನೃಪ |
ತುಂಗಂಗೆ ಕಾಣ್ಕೆಯಂ ಕೊಟ್ಟು ಬಹುವಿತ್ತಮಂ ಹಡೆದು ಸಿರಿವಂತನಾಗಿ ||
ಹಿಂಗದರ್ಹತ್ಪೂಜೆದಾನಶೀಲೋಪವಾ |
ಸಂಗಳಂ ದಿನಬಂಜೆವಡೆಯದೇ ಪಿರಿದು ಮನ |
ಸಂಗೊಂಡು ಮಾಡುತಿರ್ದಂ ಮಹೀತಳಮೆಲ್ಲಮುಲಿದುಕೊಂಡಾಡುವಂತೆ || ೨ ||

ಅಂದವಡೆದೀ ತೆರದಿ ಸುಖದಿನಿರುತಿರ್ದು ಬಳಿ |
ಕೊಂದು ದಿನದುದಯದೊಳ್ ಜಿನಪೂಜೆ ಮುನಿಚರಣ |
ವಂದನ ಸ್ವಾಧ್ಯಾಯಸಂಯಮೋತ್ತಮಪಗಳೆಂಬ ಕರ್ಮವನೆ ಮಾಡಿ ||
ಮುಂದಣ ಸದನ್ನದಾನಂ ಮಾಳ್ಪೆನೆಂದು ಮನ |
ಸಂದು ಭಿಕ್ಷುಕರ ಬರವಂ ಪಾರಿ ಬೀದಿಗೆ |
ಯ್ತಂದಿರಲ್ತನ್ನ ಮುನ್ನಿನ ಪುಣ್ಯಮೇ ಪುರುಷರೂಪುಗೊಂಡೆಯ್ದುವಂತೆ || ೩ ||

ಚಂದ್ರಕೀರ್ತಿಗಳೆಂಬ ಮುನಿಕುಲಾಂಬರಪೂರ್ಣ |
ಚಂದ್ರನೈನೂರ್ವರ್ತಪೋನಿಧಿಗಳೊಡನೆಯ್ದೆ |
ಚಂದ್ರಗತಿಯಿಂ ಮೆತ್ತಮೆತ್ತನಡಿಯಂ ನೆಲಕಿಕ್ಕಿ ಭಗಣಂಗಳೊಡನೆ ||
ಚಂದ್ರನೆಯ್ತರ್ಪಂತೆ ತಪದ ವೃದ್ದಿಗೆಸಲಂ |
ಚಾಂದ್ರಾಯಣದ ನೋಂಪಿಯಂ ಮಾಡಿ ಬರ್ಪುದಂ |
ಚಂದ್ರನಂ ಕಂಡ ಕಡಲಂತೆ ಮನದೊಳು ಹೆಚ್ಚಿ ಸದ್ಭಕ್ತಿಪೂರ್ವಕದೊಳು || ೪ ||

ಆ ತಪಸ್ವಿಗಳು ಸಹಿತವರನೊಡಗೊಂಡೊಯ್ದು |
ವೀತರಾಗಾಸನಮನಿಕ್ಕಿ ವಿಧಿಪೂರ್ವಕಂ |
ನೀತಿನಿಪುಣಂ ಮುದದಿನತ್ಯುತ್ತಮಾಮೃತಾನ್ನವನು ಸದ್ಭಾವವೆರಸಿ ||
ಪ್ರೀತಿಯಿಂದಿತ್ತು ಭಿಕ್ಷೆಯನು ಮಾಡಿಸಲೊಡನೆ |
ಸಾತಿಶಯಮೆನಿಸುವಾಶ್ಚರ್ಯರ್ಪನ |
ತ್ಯಂತ ನಿರ್ಧನಿಕ ವಾರುಧಿದತ್ತನಾ ವೈಶ್ಯ |
ಕಾಂತೆ ಲಕ್ಷ್ಮೀಮತಿಗೆ ಜನಿಸಿದ ಸಮುದ್ರದತ್ತಾಖ್ಯನುತ್ತಮಶೀಲನು ||
ಇಂತಪ್ಪ ಸಿಯನಾಂಗ ಪಡೆದೊಸೆದು ಸತ್ಪಾತ್ರ |
ಸಂತತಿಗೆ ದಾನಮಂ ಕೊಡುವೆನೆಂದೆಂಬ ಹುರು |
ಡಂತರಂಗದೊಳು ಸಂಜನಿಯಿಸಲ್ ತನ್ನೊಳಗೆ ತಾನಿಂತೆಂದೆಣಿಸುತಿರ್ದನು || ೬ ||

ಅವಳಿಲ್ಲದಷ್ಟಪುತ್ರರನರಸುವಜ್ಞನುಂ |
ಬವರದೊಳ್ ಕೈದಿಲ್ಲದಿರಿವೆನೆಂಬೆಗ್ಗನುಂ |
ಲವಲೇಶ ಮೌಲ್ಯವಿಲ್ಲದೆಯರ್ಥಮಂ ಪಡೆವೆನೆಂದೆಂಬ ಕಡು ಹೆಬಗನುಂ ||
ವಿವರಿಸಲ್ಬಾಯೊಳೊಂದಕ್ಕರಂಬಡೆಯದೇ |
ಕವಿತೆಯಂ ಮಾಡಬೇಕೆಂದೊರಲುವಾತನುಂ |
ಸುವಿಚಾರಮಂ ಮಾಡದೇ ಅಜಂ ಸೃಜಿಸಿದವರೆಂದು ಕೋವಿದರರಿವುದು || ೭ ||

ಎಂದಾ ಸಮುದ್ರದತ್ತಂ ತನ್ನ ಬಡತನಕೆ |
ನೊಂದು ತನ್ನೊಳಗೆ ತಾನೆ ಕಚ್ಚುಕಡಿಗೊಂಡು |
ಹಿಂದಕ್ಕೆ ನಾನು ದೊಡ್ಡವರ ಮಗನಿದನೆಸಗೆ ಕುಂದಪ್ಪುದೆಮ್ಮ ಕುಲಕೆ ||
ಎಂದೆಂಬುದೊಂದು ಬಯಲವಿಡಾಯಮಂ ಬಿಟ್ಟು |
ಮುಂದಕ್ಕೆ ಕೂಲಿಕಂಬಳಸೇವಕಾವೃತ್ತಿ |
ಯಿಂದಾದೊಡಲ ಪರದುಗೆಯ್ವುದಕೆ ಮೌಲ್ಯಮಂ ಹಡೆಯದಡೆ ಕಾರ್ಯಮಹುದೇ || ೮ ||

ಅಡುಗೆಯಂ ಮಾಡದಾರೋಗಿಸುವೆನೆಂದೆಂಬ |
ಕಡು ಹೆಬಗರಂತೆ ಪದರಂಗೆಯ್ಯಲೊಲ್ಲದೇ |
ಒಡವೆಯಂ ಗಳಿಯಿಸುವೆನೆಂದೆಂಬರಿರವೆಂದು ಬಗೆದು ಪೊರಮಟ್ಟು ಪೊಳಲಂ ||
ಬಿಡದರ್ದವರ್ಸಹಾಯಿಗಳೊಡನೆ ನಡೆತರಲ್ |
ಕಡಲತಡಿಗೆಯ್ದಿ ಹಡಗಿನ ಸೆಟ್ಟಿಗಳ ಕೈಯ್ಯ |
ಹಿಡಿದು ಜೀವಿತಮನಾಳಾಗಿ ಬಡಗಣ ಕಡೆಯ ಭಗದತ್ತವಿಷಯಕೆಯ್ದಿ || ೯ ||

ಅಲ್ಲಿಯ ಪಳಾಶವೆಂಬೊಂದು ಬಲುಗ್ರಾಮಕ್ಕೆ |
ನಿಲ್ಲದೆಯ್ತಂದು ಮೂರನೆಯ ವರುಷಕ್ಕೆ ನಾ |
ವಿಲ್ಲಿಗೆ ಬರಲ್ಬೇಕೆನುತ್ತ ಸಂಕೇತಮಂ ವರುಷಕ್ಕೆ ನಾ |
ವಿಲ್ಲಿಗೆ ಬರಲ್ಬೇಕೆನುತ್ತ ಸಂಕೇತಮಂ ಮಾಡಿ ತನ್ನೊಡನೆ ಬಂದಾ ||
ಎಲ್ಲರುಂ ದೆಸೆದೆಸೆ ಪೋಗೆ ತಾನಾ ದಿವಸ |
ದಲ್ಲಿ ತಡಗೆಯ್ದಿರಲಶೋಕನೆಂಬೊರ್ವ ಕಡು |
ಬಲ್ಲಿದ ಕುಟುಂಬಿ ನಿಜಸತಿ ವೀತಶೋಕೆಯೆಂಬಳ್ವೆರಸಿ ಸುಖದಿನಿರ್ದು || ೧೦ ||

ಆ ವೇಳೆಯಲ್ಲಿ ತನಗುಳ್ಳಶ್ವಸಮಿತಿಯಂ |
ಕಾವವರನರಸಿ ಬರುತಿರಲವನ ಕಂಡು ಬಳಿ |
ಕಾ ವೈಶ್ಯನಂದನ ಸಮುದ್ರದತ್ತಂ ನುಡಿದನಿಂತೆಂದು ತಾನವನೊಳು ||
ಆ ವಾಜಿಗಳನೋವಿಕಾವೆನಾನೆನಲದಕೆ |
ಜೀವಿತಮನುಸುರೆನಲ್ನಿಮ್ಮ ಮನಸಿಗೆ ಬಂದು |
ದಾವುದದೆ ನನಗೆ ಸಂಪೂರ್ಣವೆಂದೆಂಬ ಸದ್ವಚನಮನವಂ ಕೇಳುತ || ೧೧ ||

ವರಿಸ ಮೂರಂ ನಮ್ಮ ಕುದುರೆಗಳನನುವಾಗಿ ||
ಪರಿರಕ್ಷಣಂಗೆಯ್ದು ಬಳಿಕವರ ಹಿಂಡಿನೊಳ |
ಗೆರಡು ಜಾತ್ಯಶ್ವಮಂ ನಿನ್ನ ಮನಸಿಗೆ ಬಂದವಂ ಕೊಂಡು ಪೋಗೆನುತ್ತ ||
ಪಿರಿದು ಸಾದರದಿಂದೊಡಂಬಡಿಸಲಾ ನುಡಿಗೆ |
ಹರಿಸಮಂ ಹಡೆದು ತದ್ವೈಶ್ಯತನುಜಾತನನ |
ಹರಿಸಮಂ ಹಡೆದು ತದ್ವೈಶ್ಯತನುಜಾತನನ |
ಚರತಮಿರ್ದಲ್ಲಿ ಜತನದೊಳು ಕಾಯುತ್ತಿರ್ದನಾ ತುರಗಸಂತತಿಯನು || ೧೨ ||

ಮನೆಯೊಡೆಯರಂತೆ ಮನಗೊಂಡು ರಕ್ಷಿಪದ ಕಂ |
ಡನುರಾಗದಿಂದ ನಿಜತನುಜರ್ಗೆ ಮಾಡುವಂ |
ತನುವಾಗಿಯೂಟಮೀಹಂ ವಸ್ತ್ರತಾಂಬೂಲಮಾದಿಯಾದ್ಯುಪಚರವನು ||
ವಿನಯಪೂರ್ವಕದಿ ಮಾಡಿಸುವಶೋಕನ ಮಗ |
ಶ್ಮನಸಿಜನ ಮಾನಿನಿಯ ರೂಪುಲಾವಣ್ಯಮುಮ |
ನಿನಿಸುಳಿಯದೇ ಹರಿದು ಹತ್ತಿಸಿದ ಮಾಳ್ಕೆಯೊಳ್‌ಸದ್ವಿಲಾಸವನೆ ಹಡೆದಾ || ೧೩ ||

ಕಮಲೆಯೆಂದೆಂಬ ಕೋಮಲೆಯಾ ವಣಿಗ್ವರನ |
ರಮಣೀಯವಡೆದ ಸೌಂದರ್ಯಲಾವಣ್ಯಮು |
ತ್ತಮಮಪ್ಪ ಸತ್ಕಲಾಪ್ರೌಢಿವಾಕ್ಚಾತುರ್ಯದೇಳ್ಗೆಯಂ ನೆರೆ ಭಾವಿಸಿ ||
ಮಮತೆ ಪಿರಿದಾಗಿ ತನ್ನಂತಸ್ಥದೊಳ್ಕರಂ |
ಭ್ರಮಿಸಿಯತ್ಯಂತ ಸದ್ವಿನಯೋಪಚರಮನು |
ಭ್ರಮೆತನದಿ ಮೆಯ್ಮರೆದು ದಿನಬಂಜೆವಡೆಯದೇ ಮನವಾರೆ ಮಾಡುತಿಹಳು || ೧೪ ||

ಅಂತದಂ ಕಂಡು ಹರ್ಷೋತ್ಕರ್ಷನಾಗಿಯ |
ತ್ಯಂತ ಕೂರ್ಮೆಯನವಳೊಳಂತಸ್ಥದಿಂ ಮಾಡಿ |
ಸಂತತಂ ತನ್ನೊಳಿಗದ ತುರಂಗಪ್ರತಾನಮನೊಸೆದು ಕಾಯುತಿರಲು ||
ಪಿಂತಣವಧಿಯ ಮೂರುವರುಷಮಿರದೆಯ್ದಲೇ |
ಕಾಂತದೊಳ್ಕಮಲೆಯೊಡನಿಂತೆಂದು ನುಡಿದನಾ |
ನಂತರಿಸದೆಮ್ಮ ನಾಡಿಗೆ ಪೋಪ ದಿನಮಾಯಿತೆನಲಿಂತು ನುಡಿದಳಾಗ || ೧೫ ||

ಎನ್ನೀ ಭವಕ್ಕೆ ನೀನೇ ಕಾಂತನದರಿಂದ |
ನಿನ್ನೊಡನೆ ಬರ್ಪೆನೆಂದೆಂಬ ನುಡಿಯಂ ಕೇಳಿ |
ಕನ್ನೆ ಕೇಳ್ದೇಸಿಗಂ ನಾನೆಮ್ಮ ನಾಡಿಲ್ಲಿಗತಿದೂರವದುಕಾರಣಾ ||
ನಿನ್ನ ಬರವಘಟಿತಮೆನಲ್ಕೇಳುತವಳೆಂದ |
ಳೆನ್ನ ಜನಕಂ ಮೊದಲ್ನಿನ್ನ ಮನಸಿಗೆ ಬಂದ |
ತನ್ನ ಕುದುರೆಯೊಳೆರಡನಾಯ್ದುಕೊಳ್ಳೆಂದು ಭಾಷೆಯನುಸಿರ್ದನದು ನಿಮಿತ್ತಾ || ೧೬ ||

ಆ ಕುದುರೆವಿಂಡಿನೊಳಗೊಂದು ಜಲಗಾಮಿವೊಂ |
ದಾಕಾಶಗಾಮಿಯಿರ್ದಪುವಾಯೆರಡರೊಳ್ ಬ |
ಳಾಕವರ್ಣಂ ಬಡವು ಮಯ್ಯೊಳಡಸಿಹುದದುತ್ತಮಮಪ್ಪ ಗಗನಗಾಮಿ ||
ಆಕಾರಪೂಜ್ಯನುತ್ತಮ ಶುಕಾಕ್ಷಿಕವರ್ಣ |
ದಾ ಕುದುರೆ ಜಲಗಾಮಿಯೆಂದದರ ಮೈಯ್ಯೊಳಿ |
ರ್ದಾ ಕೂನುಕುರುಹೆಲ್ಲಮಂ ತಿಳಿವ ಮಾಳ್ಕೆಯೊಳ್ಪೇಳಿ ಮತ್ತಿಂತೆಂದಳು || ೧೭ ||

ಅವರ ಮೇಲಾವಿಬ್ಬರುಂ ಪೋಗಬಹುದು ನೀ |
ನವನೆ ಕಯ್ಕೊಳ್ಳೆಂದು ಪೇಳೆ ಕೇಳ್ದಾ ಮಾತ |
ನವಧರಿಸಿ ಬಂದು ಬಳಿಕಾ ಕುದುರೆಗಳ ವಿವರಮೆಲ್ಲಮಂ ತಿಳಿದುನೋಡಿ ||
ಅವರ ಗತಿಭೇದಗಳನರಿದವಂ ಕಾಯ್ದುಕೊಂ |
ಡವನಿರಲ್ಕವನೊಡನೆ ಬಂದ ವೈಶ್ಯಪ್ರತತಿ |
ತವತವಗೆ ಪೋದ ಬೆವಾರಮೆಲ್ಲಂ ಸಾಗಲಾ ಕುರಿತ ಮೂರಬ್ದಕೆ || ೧೮ ||

ಆ ಪಳಾಶಗ್ರಾಮಕೆಯ್ದಲವರಂ ಕಾಣು |
ತಾ ಪರದನಾ ಅಶೋಕನ ಬಳಿಗೆ ಬಂದೆನ್ನ |
ಕಾಪಿನ ದಿನಂ ಮುಗಿಯಿತೆನಲೊಳ್ಳಿತಾಯ್ತೆನುತ್ತಾ ಹಿಂಡಿನೆಡೆಗೆ ಬಂದು ||
ಈ ಪಲವು ಕುದುರೆಯೊಳ್ನಿನ್ನ ಮನಸಿಗೆ ಬಂದ |
ರೂಪುಳ್ಳ ಕುದುರೆಗಳನಾಯ್ದುಕೊಳ್ಳೆಂದೆನ |
ಲ್ಕಾ ಪೆಣ್ಮೂದಲ್ತನಗೆ ಪೇಳ್ದ ಕುರುಹಿನ ತೇಜಿಗಳನಾಯ್ದು ಬೇರ್ಪಡಿಸಲು || ೧೯ ||

ಎಲೆ ಹುಚ್ಚ ಸೂರ್ಯನ ರಥಕ್ಕೆ ಯೋಗ್ಯಂಬಡೆದ |
ಸಲೆ ಕಾಲುಮನರೂಪುರೇಖೆಸುಳಿಶುದ್ಧದಿಂ |
ದಿಳೆಯೊಳಗಿವಕ್ಕೆ ಬೆಲೆಯಿಡುವರಾರೆಂಬಗ್ಗಳಿಕೆಯಶ್ವಗಳನು ಬಿಟ್ಟು ||
ಕೆಲವು ದಿನದಿಂ ಮೇಲೆ ಗತಜೀವವಡೆವ ದು |
ರ್ಬಲದ ಕುದುರೆಗಳನಾಯ್ದುಂಕೊಂಬರೇಯೆನ |
ಲ್ನೆಲೆ ನಿಮ್ಮ ಮಾತು ನಾನತಿಸುಕೃತಿಯಾದ ಕಾರಣದಿನೆನಗಿವು ಸಾರ್ದುವು || ೨೦ ||

ಎಂದು ಬಳಿಕೆಂತೆಂದನಾವಪ್ರಕಾರದಿಂ |
ಮುಂದರಿಯದೇ ಮೊದಲ್ನುಡಿದು ಕೈಕೊಂಡುದಂ |
ಹಿಂದುಗಳೆಯಿಪುದು ಸಜ್ಜನಿಕೆಗತಿದೂರವದರಿಂದಿವೆ ನನಗೆ ಸಾಕು ||
ಎಂದುದಂ ಕೇಳಿ ಮಂದಸ್ಮಿತಾಸ್ಯನಶೋಕ |
ಪಿಂದಕ್ಕೆ ತಿರುಗೆ ಪರಿಚಾರಕರೊಳೊರ್ವನಿಂ |
ತೆಂದನಿದನರಿದಿರೇ ಅಂಜಡೀ ಧೂರ್ತನಾಡಿದ ಕಟಾಕ್ಷದ ಬಗೆಯನು || ೨೧ ||

ಈ ನಮ್ಮ ದೇಶಕಿವನಿರ್ಪ ನಾಡತಿದೂರ |
ಮೀ ನಮ್ಮ ರಾಜ್ಯಕೊಂದಿನಿಸು ಬಂದವನಲ್ಲ |
ಮೀ ನಮ್ಮ ಬೀಡಿಗೀ ಹೆಸರು ಕುರುಹಂ ಕೇಳಿ ಕಂಡಾಂತನೀತನಲ್ಲ ||
ಈ ನಮ್ಮ ಮನೆಗೆ ಬಂದಂದಿಂದ ಮೊದಲಾಗಿ |
ಈ ನಾಡು ಭಾಷೆಯೊಂದುಮನರಿವನಲ್ಲದೇ |
ತಾನರಿವನೇ ಮುನ್ನ ನಾವು ಮೊದಲಾಗಿಯಿನಿಸರಿಯದೀ ಹಯರತ್ನದ || ೨೨ ||

ಇದರೊಳಗು ಹೊರಗನೀ ಪೊಸಬನೇನಂ ಬಲ್ಲ |
ನಿದು ನಿಮ್ಮ ಮಗಳು ಕಮಲೆಯ ತೇರುತೆಕ್ಕೆಯಿಂ |
ತಿದ ನೀವು ಬಲ್ಲಿರೋ ಅರಿಯಿರೋ ಎಂದೆಂಬ ನುಡಿಗಿಂತು ನುಡಿದನವನು ||
ಮೊದಲಿದರ ಕಾಲುಕೀಲಂ ಬಲ್ಲನಾದೊಡಿಂ |
ತಿದಣಿಸದೇ ಭಾಷೆಮಾಳ್ಪೆನೇ ಕಟಕಟಾ |
ಸುದತಿಯರ ನಂಬುವಂ ಲೋಕದೊಳ್ಕಡು ಹೆಡ್ಡನಲ್ಲವೇ ಭಾವಿಸಿದೊಡೇ || ೨೩ ||

ಮುಂಬರಿದ ನೋಟವೊಂದೆಡೆ ಮುಸುಂಕಿದ ಬೇಟ |
ಮೆಂಬುದೊಂದೆಡೆ ರತಿಕ್ರೀಡೆಯೊಂದೆಡೆ ಪಿರಿದು |
ಪಂಬಲಿಪುದೊಂದೆಡೆ ನೆವಂ ಮೊದವೊಂದೆಡೆಯಗಲ್ಕೆ ಭಾವಿಸೆಯೊಂದೆಡೆ ||
ನಂಬಿಸುವುದೊಂದೆಡೆ ವಿಡಂಬಮೊಂದೆಡೆಯಾ ನಿ |
ತಂಬಿನೀಜನಕೆ ನಿಜಮಾಗಿರ್ಪರಂತವರ |
ನಂಬುವುದರಿಂದ ಮಾಡಿಲೊಳ್ಕಟ್ಟಿದಾ ಹಾವ ನಂಬುವುದು ಕರಮೊಳ್ಳಿತು || ೨೪ ||

ಹೆತ್ತ ಮಾತಾಪಿತೃಗಳೆಂದು ಭಾವಿಸುವರೇ |
ತುತ್ತಿಕ್ಕಿ ಸಲಹಿದವರೆಂದು ಮನಮಿಕ್ಕುವರೇ |
ಉತ್ತಮದ ಪುರುಷಾರ್ಥಮಂ ಮಾಡಿದವರೆಂದು ಬಗೆಗೀವುದಂ ಬಲ್ಲರೇ |
ಚಿತ್ತವಲ್ಲಭನೆಂದು ಚಿಂತಿಸಲ್ಬಲ್ಲರೇ |
ಅತ್ತಲೊಂದೆಡೆಗೆ ಮನಮಿಕ್ಕಿದ ಸತೀಜನಂ |
ಮತ್ತವರನಿನಿಸು ನಂಬುವನವಂ ಲೋಕಕ್ಕೆ ಕಡುಹೆಡ್ಡ ತಾನಲ್ಲವೇ || ೨೫ ||

ನಾನಿಂತುಟೆನಿಸಲೆನ್ನನ್ವಯಕೆ ಲೋಕದೊಳು |
ಹೀನಮನಮೆಂಬುದಂ ಬಲ್ಲರೇ ಅಪಕೀರ್ತಿ |
ಈ ನೆಲದೊಳಂ ಪಸರಿಸುವುದೆಂಬುದರಿವರೇ ನನ್ನ ಮುಂದಣ ಬದುಕಿಗೆ ||
ಹಾನಿಯಹುದೆಂಬುದಂ ತಿಳಿವರೇ ಪಿರಿದಪ್ಪ |
ಮಾನಾಪಹರಣಮೆಂದೆಂಬುದಂ ಕಾಣ್ಬರೇ |
ಏನಾದೊಡೇನೊ ಕಣ್ಮನವೊಬ್ಬರಲ್ಲಿ ಮೇಲಿಕ್ಕಿದಾ ಕಾಮಿನಿಯರು || ೨೬ ||

ಎಂದಶೋಕಂ ನಿಜಸುತೆಯ ನಿರ್ಗುಣಕ್ಕೆ ಮನ |
ನೊಂದು ಕೊಕ್ಕರಿಸಿ ಏನಾದೊಡಾಗಲಿ ನಾನು |
ಮುಂದನೋಡದೆ ಕೊಡುವೆನೆಂದು ನುಡಿದಾ ಮಾತನೋಸರಂ ಮಾಡಲೆನಗೆ ||
ಸಂದೇಹಮಿಲ್ಲದೇ ಅಪಕೀರ್ತಿ ಸಂಜನಿಸಿ |
ಮುಂದಣುತ್ತಮಮಪ್ಪ ಗತಿ ಪೈಸರಿಸುವುದದ |
ರಿಂದ ನುಡಿದೆರಡನಾಡುವುದು ತಲೆಯಳಿದೊಡಂ ಕನಸುಮನಸಿನೊಳಾಗದು || ೨೭ ||

ನುಡಿದೆರಡನಾಡಿದೊಡೆ ನೊಂಕಿದೊಡೆ ಸಜ್ಜನರ |
ನಡಿಗೆ ಬಾಗಿದರ ನೋವದೊಡೆ ಗುರುಜನಸಮಿತಿ |
ಗೆಡರಮಾಡಿದೊಡೆ ಯೆರೆವರನೀಗಲಾಗ ಬಾಯೆಂದಾಸೆ ಕೊಟ್ಟೊಡೆ ||
ಕಡುಹರಿಸದಿಂ ಕಷ್ಟದುಷ್ಟರೊಡನಾಡಿದೊಡೆ |
ಕೊಡುವೆನೆಂಬೊಡವೆಯಂ ಮನೆಯಲ್ಲಿ ಮಡಗಿದೊಡೆ |
ಬಿಡುವುದೈಸರಿ ಬಿಡದು ದುರ್ಯಶಂ ಮುಂದಕ್ಕೆ ನರಕಗತಿ ತಪ್ಪದಹುದು || ೨೮ ||

ಕವಲಾದ ಜಿಂಹ್ವೆಯೊಡವರಿವುದೇ ಸದ್ಗುಣಂ |
ವಿವರಿಸಲ್ ಶಿಲ್ಪಿಗಾರನ ಸೂಜಿಯಂತೆಂದು |
ಸುವಿವೇಕಿಯಾಗಿ ಮನೆಗೆಯ್ತಂದು ಸತಿವೀತಶೋಕೆಯೊಂದನುಮತದೊಳು ||
ಸುವಿಧಾನದಿಂದ ಸುಮುಹೂರ್ತದೊಳ್‌ತನುಜೆಯಂ |
ತವಕದಿನವಂಗೆ ಕೊಟ್ಟಾ ತುರಗಮಂ ಕೊಟ್ಟ |
ನವನಿಯೆಲ್ಲಂ ಪೊಗಳ್ವ ತೆರದಿಂದಶೋಕನೆಂಬನ್ವರ್ಥನಾಮದಿಂದ || ೨೯ ||

ಕಡುಹರಿಸದಿಂದ ಹತ್ತಿಪ್ಪತ್ತು ದಿನಮಲ್ಲಿ |
ತಡಗೆಯ್ದು ತಮ್ಮ ನಾಡಿಗೆ ಹೋಗಬೇಕೆಂದು |
ನುಡಿದಶೋಕನ ಕೈಯ್ಯ ಬಿಳ್ಕೊಂಡು ಮೊದಲು ತನ್ನಡವಂದ ಸಖರಗೂಡಿ ||
ಮಡದಿ ಕಮಲಶ್ರೀಸಮನ್ವಿತಂ ಪೊರಮಟ್ಟು |
ಕಡಲತಡಿಗೆಯ್ದಿ ಹಡಗಂ ಹತ್ತಿ ಕೆಲದೂರ |
ನಡೆಯಲಾ ನಡುಸಮುದ್ರದೊಳು ನೌವಾಹಕನಶೋಕನೆಂದನುಮತದೊಳು || ೩೦ ||

ಈ ಹಯದ್ವಯಂಮಂ ಕೂಲಿಯಂ ಕೊಟಲ್ಲ |
ದೀ ಹಡಗ ನಡೆಯಿಸುವುದಿಲ್ಲೆಂದು ನುಡಿದನೌ |
ವಾಹಕನ ನುಡಿಗಾ ಸಮುದ್ರದತ್ತಂ ಕೋಪದಿಂದಮಿಳಿದಾ ನಾವೆಯಂ |
ಮೋಹದಂಗನೆಗೂಡಿ ಜಲಗಾಮಿ ಹಯಮನಾ |
ರೋಹಣಂಗೆಯ್ದು ಬಳಿಕಾ ಗಗನಗಾಮಿಯಂ |
ಸಾಹಸಂಬಡೆಯದೇ ಪಿಡಿದು ನೀರ್ವಟ್ಟೆಯೊಳ್ ನಿಲ್ಲದೇ ನಡೆದುಬಂದು || ೩೧ ||

ಆ ಶರಧಿಯಂ ಸರಾಗದೊಳು ಪೊರಮಟ್ಟು ನಿಜ |
ದೇಶಮಂ ಹೊಕ್ಕು ನಡೆತಂದು ಜಲಗಾಮಿಯಾ |
ಕಾಶಗಾಮಿಗಳೆಡಬಲಂಬಿಡಿದು ಬರಲೆಲ್ಲರಾಶ್ಚರ್ಯವಡುವ ತೆರದಿ ||
ಕೌಶಂಬಿಯಂ ಹೊಕ್ಕು ಕಡುವಿಭವದಿಂದ ನಿಜನಿ |
ವೇಶಪ್ರವೇಶಾಂತರಂ ಮಾತೃಪಿತೃಪದ |
ಕ್ಕಾ ಶಶಾಂಕೋಪಮಾನನೆ ಸಹಿತ ವಂದನಂಗೆಯ್ದು ಹರಕೆಯನಾಂತನು || ೩೨ ||

ವಾಹಳಿಯ ನೆಲಕೆ ವಸುಧಾಧೀಶನುಂ ನೃಪ |
ವ್ಯೂಹಸಹಿತಂ ಬಂದು ಮೋಹರಂಗೊಂಡು ನಿಲ |
ಲಾ ಹಯಮನಾ ವೈಶ್ಯಕುಲತಿಲಕನತಿಹರ್ಷದಿಂದ ಕಾಣ್ಕೆಯನೀಯಲು ||
ಲೋಹಮಂ ಚೆನ್ನಾಗಿಯಳವಡಿಸಿ ಹಲ್ಲಣಿಸಿ |
ವಾಹಕನ ಬರಿಸಿ ನೆಲನಿನಿಸು ಮುಟ್ಟದ ತೆರದಿ |
ವಾಹಳಿಯ ಮಾಡಿಸಿದನಾ ಪುರಜನಂ ನೆರೆದುಬಂದು ನೋಡುತ್ತಮಿರಲು || ೩೩ ||

ಸರಿಸದೊಳ್ ನೊಂಕಲೊಂದೆ ಹವಣಿನೊಳ್ಬಿಟ್ಟ |
ಪರಿಜಿವೆಂಬಂತಾಯ್ತು ನೂಂಕಿ ಮಗಚಲ್ಕಲ್ಲ |
ನಿರದೆಚ್ಚಮೀಂಟೆ ಮುಗುಚಿದ ತೆರಂಬಡೆದುದಾಗಸದಲ್ಲಿ ತಿರ್ರೆನುತುವೆ ||
ಭರದಿಂದ ಹಿಡಿದು ಕೊಳ್ಳಿಯ ಬೀಸಿದಂತಾ |
ಯ್ತರವಣಿಸಿ ಗಜವೇಢೆಯಂ ಮಾಡಲಾ ಚೆಂಡ |
ನುರುಭರದಿ ಹೊಯ್ದ ತೆರನಾ ದೆಸೆಗೆಯವದೆಸಗೆ ನೂಂಕಲಾ ಗಗನಗಾಗಿ || ೩೪ ||

ಧರೆಯನೊಗ್ಗೈಯುದ್ಧ ಹೆಗಲುದ್ಧ ತಲೆಯುದ್ಧ |
ಮರದುದ್ದ ಮುಗಿಲುದ್ದಮಂ ಬಿಟ್ಟು ಬಿನ್ನಣಂ |
ಬೆರಸಿ ವಾಹಳಿ ಮಾಡುವಾ ತುರಂಗದ ರೂಪುರೇಖೆ ಕಾಲ್ಮನವ ಕಂಡು ||
ಪಿರಿದು ವಿಸ್ಮಯಮಾನಸಂ ನೃಪಾಲಂ ತನ್ನ |
ವರಸುತೆಯನಂಗಸೇನೆಯನು ಬಳಿಕಾ ತನ್ನ |
ಧರೆಯೊಳರ್ಧವನಿತ್ತನಾ ವೈಶ್ಯಕುಲತಿಲಕಗರಸೊಲಿದೊಡೇನಾಗದು || ೩೫ ||

ಸದ್ಧರ್ಮವಾಂಛೆಯಿಂ ತನ್ನ ಬಡತನದೊಂದು ||
ದುರ್ಧರಂ ಹಿಂಗಿ ತಾನುನ್ನಿಸಿದ ಕಾರ್ಯಮತಿ |
ಸಿದ್ಧಿಯಾಗಲ್ಕಾ ಸಮುದ್ರದತ್ತಂ ಕುಬೇರೋಪಮೈಶ್ವರ್ಯವಡೆದು ||
ಶುದ್ಧದರ್ಶನಬೋಧಚಾರಿತ್ರದಲ್ಲಿ ನೆರೆ |
ಬದ್ಧಮಾನಸನಾಗಿ ಭೂಲೋಕದೊಳ್ ಸು |
ಪ್ರಸಿದ್ಧನಾದಂ ಧರಾತಳದಲ್ಲಿ ಧರ್ಮದಿಂದಿನ್ನೊಂದು ಬಲ್ಲಿತುಂಟೇ || ೩೬ ||

ಚಕ್ರೇಶವಿಭವಂ ಚಮ್ಕ್ರತಿಯೊಳೊದಗುವುದು |
ಶಕ್ರಸಂಪದವೊಂದು ಸಮಯಕಪ್ಪುದು ಫಣಾ |
ಚಕ್ರೇಶ್ವರನ ಭೋಗಮಿನಿಸು ಹೊತ್ತಿಂಗಪ್ಪುದಹಮಿಂದ್ರನೈಶ್ವರ್ಯವು ||
ವಕ್ರಮಿಲ್ಲದೆ ನಿಮಿಷಕಪ್ಪುದಪವರ್ಗಮುಮ |
ನು ಕ್ರಮಂಮಾಡದೇ ದೊರೆಕೊಂಬುದದರಿಂದ |
ಸಕ್ರಮದಿ ಧರ್ಮಮಂ ಮಾಡಿದವರ್ಗುಳಿದ ಸಂಪದಮೆಂಬುದಾವಗಹನ || ೩೭ ||

ಇಂತಿಳಾತಳಮೆಲ್ಲ ಪೊಗಳುತಿರಲತ್ತ ಭೂ |
ಕಾಂತಚೂಡಾಮಣಿ ಸುದಂಡಮಂಡಳಿಕನ |
ತ್ಯಂತ ಗುಣಮಣಿ ವೃಷಭದಾಸನೆಂದೆಂಬ ರಾಜಶ್ರೇಷ್ಠಿಯಂ ಕರೆಯಿಸಿ |
ಅಂತರಂ ಮಾಡದೇ ಆಕಾಶಗಾಮಿಯಂ |
ಸಂತತಂ ಪರಿರಕ್ಷಣಂಗೆಯ್ವುದೆಂದು ಕಡು |
ಸಂತಸದಿನಿತ್ತನಾ ಸಜ್ಜನನೊಳತಿ ಮಮತೆ ತನಗಾದ ಕಾರಣದೊಳು || ೩೮ ||

ಆ ತುರಗರತ್ನಮಂ ತಂದು ಮನೆಯೊಳಗೆ ಕಡು |
ಭೀತಿಯಿಂ ನೆಲಮಾಳಿಗೆಯೊಳಿರಿಸಿಕೊಂಡು ಮನ |
ವೋತು ಪರಿರಕ್ಷಣಂಗೆಯ್ಯುತ್ತಮಿರ್ದು ಒಂದಾನೊಂದುದಿನ ಮುಖದೊಳು ||
ಖ್ಯಾತಿಯಂ ಪಡೆದ ವಿಜಯಾರ್ಧಪರ್ವತಕೆ ಮನ |
ವೋತದರ ಮೇಲೇರಿಯೆಲರ್ವಟ್ಟೆಯಿಂ ಬಂದು |
ಸಾತಿಶಯವಡೆದಕೃತ್ರಿಮಸಿದ್ಧಕೂಟಮಂ ಕಂಡನತಿಹರ್ಷದಿಂದ || ೩೯ ||

ಇಳಿದಶ್ವಮಂ ತುಳಿಲ್ಗೆಯ್ದು ಮುದದಿಂ ಚೈತ್ಯ |
ನಿಲಯಮಂ ಬಲವಂದು ಬಗೆಯರಿದು ಭಕ್ತಿಯಿಂ |
ದೊಳಹೊಕ್ಕು ವಂದನಂಗೆಯ್ಯುತಿರ್ಪಾ ವೃಷಭದಾಸರಾಜಶ್ರೇಷ್ಠಿಯಾ ||
ಬಳಿಯೊಳಾ ಬಸದಿಯಂ ಬಲವಂದು ಮುಂದುಗಡೆ |
ಯೊಳೆ ನಿಂದುನಿಲ್ಲದೆ ನಮಸ್ಕಾರಮಂ ಮನಂ |
ಗೊಳೆ ಮಾಡುತಿರ್ದುದಾ ಗಗನಗಾಮಿನನಿಯದೊಂದು ಸೈಪನಾನೇನೆಂಬೆನು || ೪೦ ||