ಎಂದು ನಾನಾ ತೆರದಿ ನುತಿಯಿಸಲ್ಕಾ ವೈಶ್ಯ |
ವೃಂದಾರಕಂ ಮರುಕದಿಂದಮಾ ಚೋರಗಿಂ |
ತೆಂದನೆಲೆ ಮಗನೆ ನಾನೆರಡಾರುವರ್ಷದಿಂ ನಿಜಗುರು ಸಮೀಪದಲ್ಲಿ ||
ಇಂದುವರ ದತ್ತಾವಧಾನದೊಳಗತಿಭಕ್ತಿ |
ಯಿಂದಿರ್ದು ಸೇವೆಯಂ ಚೆನ್ನಾಗಿ ಮಾಡಿದುದ |
ರಿಂದಾ ಗುರು ಪ್ರಸನ್ನತೆವಡೆದು ನನಗೊದು ದಿವ್ಯಮಂತ್ರವನಿತ್ತನು || ೩೬ ||

ಅದನಾವಗಂ ಪಠಯಿಸುತ್ತಿರ್ಪೆನದು ನಿನಗೆ ನಾ |
ನುದಕಮಂ ತರಪೋದೊಡೆನಗೆ ವಿಸ್ಮೃತಿಯಪ್ಪು |
ದದುಕಾರಣಂ ಪೋಪುದಾಗದೆಂದೆಂಬ ನುಡಿಯಂ ಕೇಳುತಾ ಚೋರನು ||
ಅದರಿಂದಮಾವಕಾರ್ಯಂ ಸಾಧ್ಯಮೆಂದೆನಲ್ |
ಚೆದುರನಾ ಜಿನದತ್ತನಿಂತೆಂದನಿದು ಪಂಚ |
ಪದಮಂತ್ರಮಿದರಿಂದ ಸರ್ವಕಾರ್ಯಂ ಸಿದ್ಧಿ ಕೇಳ್ ಸಕಲಸುಖಮಪ್ಪುದು || ೩೭ ||

ಎಂದದರ ಮಹಿಮೆಯಂ ಪೇಳಲಾ ಚೋರನಿಂ |
ತೆಂದನಾ ಮಂತ್ರಮಂ ನೀನುದಕಮಂ ನನಗೆ |
ತಂದುಕೊಡುವಲ್ಲಿ ಪರಿಯಂತರಂ ಮರೆಯದೇ ಸ್ಮರಿಯಿಸುತಿರ್ದು ಬಳಿಕ ||
ಒಂದಕ್ಷರಮನದರೊಳುಳುಹದೇ ನೀನುಸಿರಿ |
ದಂದದಿಂ ನಿನಗೊಪ್ಪಿಸುವೆನದರಿನೆನಗೆ ಕೃಪೆ |
ಯಿಂದಮುಪದೇಶಮಂ ಮಾಳ್ಪಿದೆನಲಾ ಮಾತುಗೇಳಿ ಲೇಸಾಯಿತೆಂದು || ೩೮ ||

ಆದರದಿ ಕಲಿಯೆನವಗಾ ಪಂಚಪದವ ಸಂ |
ಬೋಧೆಯಂ ಮಾಡಿ ನೀರಿಂಗೆಯ್ದಲಿತ್ತದಂ |
ಸಾಧಕಂ ಮಾಡುವಾ ಸಾಮರ್ಥ್ಯದಿಂದ ಮುನ್ನಂ ಮಾಡಿದಾ ಪಾಪದಾ ||
ಬಾಧೆಯೆಲ್ಲಂ ನಿಮಿಷದೊಳ್ನೀಗಿಯುತ್ತಮಸ |
ಮಾಧಿಯಂ ಪಡೆದಧಿಕಸುಖಸಂಪದವನೀವ |
ಸೌಧರ್ಮವೆಂದೆಂಬ ಮೊತ್ತಮೊದಲಮರಲೋಕದೊಳು ಸಂಜನಿಯಿಸಿದನು || ೩೯ ||

ಇತ್ತ ನಸುತಡೆದು ನೀರಂ ತಂದು ಮುಗುಳ್ದು ಜಿನ |
ದತ್ತನಾ ಖಳನ ವದನಂ ಪ್ರಸನ್ನತೆವೆತ್ತು |
ಸತ್ತುದಂ ಕಂಡು ಬಳಿಕಿಂತೆಂದನಾ ಪಂಚಪದದ ಸಾಮರ್ಥ್ಯದಿಂದ ||
ಉತ್ತಮಸಮಾಧಿಯಂ ಪಡೆದು ಸುರಲೋಕಸಂ |
ಪತ್ತಿಯಂ ಪಡೆದನಲ್ಲಾ ವ್ಯಸನಸಪ್ತಕೋ |
ನ್ಮತ್ತಮಾನಸ ರೂಪ್ಯಖುರನದರಿಸುತ್ತಮರ ಸಂಗವೇನಂ ಮಾಡದು || ೪೦ ||

ಸಜ್ಜನರ ಸಂಗವೆಂಬುದು ಭವಭವಗಳೊಳ |
ಗುಜ್ಜಗಂ ಮಾಡಲುದಯಂಗೆಯ್ದು ನೋಯಿಸುವ |
ಬಜ್ಜಡಮನೆಲ್ಲವೊಂದಿನಿಸಿಲ್ಲದಂದದಿಂದರೆಗಳಿಗೆ ಮಾತ್ರದಲ್ಲಿ ||
ನಿರ್ಝಾಡಿಸುವುದು ಮುಂದಕೆ ಪೋಪ ದುರ್ಗತಿಗೆ |
ಹೆಜ್ಜೆಯಿಡಬಿಡದು ಲೋಕದೊಳು ಸತ್ಕೀರ್ತಿಯಂ |
ಪಜ್ಜಳಿಯಿಸುವುದುತ್ತರೊತ್ತರಗತಿಗೆ ಸಾಧನವನೆ ಮಾಡುತಿರ್ಪುದು || ೪೧ ||

ಎನುತ ಸದ್ಗುಣಮಾಣಿಕರಂಡಕಂ ವೈಶ್ಯವಿಭು |
ಜಿನದತ್ತನಾ ಪುರದ ಬನದ ಸಾಸಿರಕೂಟ |
ಜಿನಗೇಹಕನುರಾಗದಿಂದೆಯ್ದಿ ಜಿನಪತಿಗೆ ನಮಿಸಿ ಜಿನಚಂದ್ರಮುನಿಗೆ ||
ವಿನಯವಿನಮಿತನಾಗಿ ತತ್ಕಥನಮಂ ಕೇಳಿ |
ಯನಶನಮನಾ ದಿನಕೆ ಕೈಕೊಂಡು ಬಳಿಕ |
ಜನವಿನುತ ಸದ್ಧರ್ಮಸ್ವರೂಪಮನವರ್ನಿರೂಪಿಸೆ ಕೇಳುತಿರ್ದನಿತ್ತ || ೪೨ ||

ಶೂಲಮಂ ಕಾದಿರ್ದ ಭಟರು ಪರಿತಂದು ಭೂ |
ಪಾಲಕೇಳ್ ಜಿನದತ್ತ ಮಾಡಿದುದನಿನ್ನೇನ |
ಹೇಳುವೆವು ಮುಂದೆಣಿಸದಾ ರೂಪ್ಯಖುರನಲ್ಲಿಗೆಯ್ದಿ ಗುರುಮಂತ್ರಗೊಂಡು ||
ಬಾಳುಗೆಡುವುದನರಿಯದೇ ಹೋದನೆಂಬ ನುಡಿ |
ಗೇಳಿ ಕೆಕ್ಕಳಗೆರಳ್ದಾ ದ್ರೋಹಿಯಂ ತಂದು |
ಸೀಳಿ ತೋರಣಗಟ್ಟಿಮೆನುತಟ್ಟಿದಂ ತನ್ನ ಮೃಗಾಪಿನಾಳುಗಳನು || ೪೩ ||

ಅವರವನ ಮನೆಯ ಬಾಗಿಲ್ಗೆಯ್ದುವನಿತರೊ |
ಳ್ದಿವಿಜಲೋಕದ ರತ್ನಮಯವಿಮಾನದೊಳು ಸರಿ |
ಭವಿಸಿದಂಜನಚೋರಚರದೇವನಾ ನಾಲ್ಕುಗಳಿಗೆಯೊಳ್ಪ್ರಾಯಮಾಗಿ ||
ಯುವತೀಜನಂಗಳಾರತಿಯನೆತ್ತುತ್ತಿರಲ್ |
ನವಪುಷ್ಪವೃಷ್ಟಿಕರೆಯಲ್ಮಂಗಲಾನಕದ |
ರವಮುಣ್ಮೆ ಪರಿವಾರದೇವರ್ಕಳೆಲ್ಲ ಬೆಸನಂ ಬೇಡಿ ನಿಂದಿರ್ದರು || ೪೪ ||

ಸುರಕುಜಾವಳಿ ಕೊಟ್ಟ ಸುರಭಿಲೇಪನಪುಷ್ಟ |
ಸುರುಚಿರದುಕೂಲ ಸುಲಲಿತ ಭೂಷಣವನು ಕ |
ಪ್ಪುರವಳಿಕಿನಂತಿಪ್ಪ ತನುವಿನೊಳಲಂಕರಿಸಿ ಸಿತಚಾಮರಂ ಬೀಸುವಾ ||
ವರಗೀತವಾದ್ಯ ನಟನ ಕ್ರೀಡೆಯಂ ತೋರ್ಪ |
ತರುಣೀಜನಂಗಳ ಸಮೂಹಮಂ ನೋಡಿಯ |
ಚ್ಚರಿವಟ್ಟು ನಾನಾರಿದಾವ ನೆಲನಿಲ್ಲಿಗೇ ಕಾರಣದಿನೆಯ್ತಂದೆನು || ೪೫ ||

ಎನುತ ಚಿಂತಿಸುವಾ ನಿಳಿಂಪಗವಧಿಜ್ಞಾನ |
ಜನಿಸಿ ಸಪ್ತವ್ಯಸನದಲ್ಲಿಯಾಚರಿಸಿಯನಿ |
ತಿನಿತೆಂಬ ಗಣನೆಗೆಯ್ದದ ದುಃಖವೀವ ದುರ್ಗತಿಗೆ ಪೋಪುದನೆ ಬಿಡಿಸಿ ||
ಇನಿತು ಸುಖಮಂ ಮಾಡಿಕೊಟ್ಟ ಜಿನದತ್ತನೇ |
ಜನಕನಾ ಪುಣ್ಯವಂತಗೆ ನನ್ನ ದೆಸೆಯಿಂದ |
ಜನಪನುಪಸರ್ಗಮಾಗಿರ್ದುದಲ್ಲಾ ಎನುತ ಭೂತಳಕ್ಕಿಳಿದು ಬಂದು || ೪೬ ||

ಮನುಜಮಂದಾರ ಜಿನದತ್ತವೈಶ್ಯೋತ್ತಮನ |
ಮನೆಯ ಬಾಗಿಲಮುಂದೆ ವೃದ್ಧ ಮಾನಸರೂಪ |
ನನುಕರಿಸಿಕೊಂಡೊಂದು ದಂಡಮಂ ಕಂಪಿಸುವ ಕೆಯ್ಯೊಳಗೆ ಹಿಡಿದುನಿಂದು ||
ಜನಪನಟ್ಟಿದ ದೂತರೆಯ್ತಪ್ಪುದಂ ಕಂಡು |
ಕನಲಿ ನಮ್ಮೊಡೆಯಗವಸರಮಿಲ್ಲ ನೀವೆಮ್ಮ |
ಮನೆಯ ಹೊಗಬೇಡ ಹೊಕ್ಕೊಡೆ ಹಿಡಿದ ಡಾಣೆಯಿಂ ನಿಮ್ಮೆಲ್ಲರಂ ಬಡಿವೆನು || ೪೭ ||

ಎಂದು ನುಡಿಗೇಳಿ ಉರುಬಿದೊಡೆ ತಾನೊಣಗಿದೆಲೆ |
ಯಂದದಿಂ ಬಿಳ್ವ ಶಕ್ತಿಯನು ನೋಡದೆ ಡಾಣೆ |
ಯಿಂದ ನಮ್ಮೆಲ್ಲರಂ ಬಡಿವೆನೆಂಬುದು ಚೋದ್ಯಮೆಂದು ಕೈವೊಯ್ದು ನಕ್ಕು ||
ಮುಂದಕೆಯ್ತಪ್ಪ ಭಟರಂ ಕಂಡು ಕಳ್ತಲೆಯ |
ಗೊಂದಣಕೆ ಸೊಡರು ಗಿರಿವರಕೆ ವಜ್ರಂ ಸ್ವಲ್ಪ |
ವೆಂದೆನಲ್ಬಹುದೆ ಸಿಂಗದ ದನಿಗೆ ಗಜಘಟೆಗಳೋಡುವಂತಾಗಬೇಕು || ೪೮ ||

ನೋಡಿಕೊಂಡೆನ್ನ ಹತ್ತಿರಕೆಯ್ದಿಬನ್ನಿಯೆಂ |
ದಾ ಡಾಣೆಯಿಂದೆಲ್ಲರಂ ಬಡಿದು ಕೊಲಲದ |
ಕ್ಕೋಡಿ ಕೆಲಬರ್ನೃಪತಿಯರಡೆಗೆಯ್ದಿ ತದ್ವಾರ್ತೆಯಂ ಪೇಳೆ ಕೇಳಿ ಕನಲಿ ||
ರೂಡಿಸಿದ ಲಕ್ಷಭಟಕೋಟಿಭಟಸಂತತಿಯ |
ಕೂಡಿ ಕಳುಹಿದೊಡವರನೆಲ್ಲರಂ ಕಡುಮಸಗಿ |
ಬೀಡು ಬೆದರ್ವಂದದಿಂ ಕೊಲಲದಂ ಕೇಳಿ ಕೆಂಗಣ್ಮಸಗಿ ಭೂಪಾಲನು || ೪೯ ||

ಚತುರಂಗಬಲಸಮನ್ವಿತನಾಗಿ ಬರಲು ಕಂ |
ಡತಿಕುಪಿತನಾಗಿ ಜವನೇ ದಂಡಮಂ ಪಿಡಿದು |
ಹತಮಾಳ್ಪುದಂ ಕಂಡು ಕಡು ಬೆದರಿ ಕಂಗೆಟ್ಟು ಓಡುವರಸನ ಕಾಣುತ ||
ಮತಿವಂತ ಜಿನದತ್ತನೀ ಪುರದ ಬನದ ಸ |
ನ್ನುತ ಜಿನಾವಾಸದೊಳಗಿರ್ದಪನವನ ನೀಂ |
ಪ್ರತಿಪಾಲಿಸೆಂದು ಮರೆವುಗೆ ಬಿಡುವೆನಲ್ಲದೊಡೆ ಪಿಡಿದು ದೆಸೆಗೀಡಾಡುವೆಂ || ೫೦ ||

ಹೇಳಹೆಸರಿಲ್ಲದಂದದಿ ಮನೆಯನೆಲ್ಲಮಂ |
ಹಾಳೆಂದೆನಿಸದೆ ಬಿಡೆನೆನುತ ರಕ್ಕಸರೂಪು |
ದಾಳಿ ನೆರೆ ಬೆಳೆದು ಸಿಡಿಲಂತೆ ಗರ್ಜಿಸಿ ಡಾಣೆವಿಡಿದು ಬೆನ್ನಟ್ಟಿಬರಲು ||
ತಾಳಬಾರದ ಹೇಡಿಗೊಂಡೋಡಿ ಬನದ ಚೈ |
ತ್ಯಾಲಯಕೆ ಶರಣಜನರಕ್ಷಾಮಣಿಯೆ ನನ್ನ |
ಪಾಲಿಸಿ ಪುನಃ ಪ್ರತಿಷ್ಠೆಯ ಮಾಡೆನುತ ರಾಜಶ್ರೇಷ್ಠಿ ಎಡೆಹೊಕ್ಕನು || ೫೧ ||

ಒಡೆದ ಕೆರೆಯಂ ಕಟ್ಟಿಸಿದೊಡೆ ವಂಶಭ್ರಷ್ಟ |
ವಡೆವುದಂ ನಿರಿಸಿದೊಡೆ ಗೋಬ್ರಾಹ್ಮಣರದೊಂಡು |
ಬಡತನಮುಮಂ ಬಯಲ್ಮಾಡಿದೊಡೆ ಹಾಳುದೇಗುಲಮನನು ಮಾಡಿಸಿದೊಡೆ ||
ಕೆಡುವಬೆಳೆಯಂ ನೀರನಿಕ್ಕಿ ಸಲಹಿದೊಡೆ ಮನೆ |
ಗಡೆಗೆ ಬಂದವರ ಜೀವವನು ಕಾಯ್ದೊಡೆ ಮುನ್ನ |
ಪಡೆದರ್ಗಿಮ್ಮಡಿಯ ಫಲಮಪ್ಪುದೆಂದು ಪೃಥ್ವೀತಳಂ ಪೊಗಳುತಿಹುದು || ೫೨ ||

ಎಂಬ ಪದ್ಮೋದಯ ದೈನ್ಯವಚನಕ್ಕೆ ಕರು |
ಣಾಂಬುನಿಧಿ ಬಿರುಮಳೆ ಹತ್ತಿದಂದದಿ ಬೆಕ್ಕ |
ಸಂಬಟ್ಟವಂ ದನುಜನಲ್ಲ ಕಾರಣಪುರುಷನಾಗಲೆವೆಳ್ಕುಮೆಂದು ||
ಪಂಬಲಿಸುವರಸನಂ ನೋಡಿ ನಿನಗೀ ಸಂಕ |
ಟಂಬಡಿಸಿ ಪಿರಿದು ಕೋಪಾಟೋಪದಿಂ ನಿನ್ನ |
ಬೆಂಬಳಿಯನೀ ಮಹಾತ್ಮ ರೌದ್ರರೂಪುವಡೆದೆಯ್ದುವುದಿದೇನು ಕಾರ್ಯ || ೫೩ ||

ಈ ತೆರದಿ ನುಡಿದ ಜಿನದತ್ತವೈಶ್ಯೋತ್ತಮನ |
ಮಾತುಗೇಳುತವೆ ತತ್ಕೃತಕರೂಪಂ ಬಿಟ್ಟು |
ಸಾತಿಶಯಮಪ್ಪ ನಿಜದೇವರೂಪಂ ತೋರಿ ತದ್ವೈಶ್ಯಕುಲತಿಲಕನಾ ||
ಪ್ರೀತಿಯಿಂ ಬಲವಂದು ಬಂದಿಸಿ ಬಳಿಕ್ಕೆ ತ |
ದ್ವೀತರಾಗಂಗೆ ಸದ್ವಿನಯವಿನಮಿತನಾಗಿ |
ಯಾ ತಪಸ್ವಿಸಮೂಹಕ್ಕೆರಗೆ ಕಂಡಾ ನೃಪತಿ ನುಡಿದನಿಂತೆಂದಮರಗೆ || ೫೪ ||

ದೇವ ಕೇಳ್ಸಗ್ಗದವರೆಲ್ಲಮವಿಚಾರಿಗ |
ಳ್ದೇವಾಧಿದೇವ ಪರಮೇಶರನಿರ್ದಂದದಿಂ |
ಭೂವಿನೂತಮೀ ಮುನಿನಿಕಾಯಮಿರ್ದಂದದಿಂದ ವಿವೇಕತನದೆ ಬಂದು ||
ಶ್ರಾವಕಜನಕ್ಕೆ ಇಚ್ಛಾಕಾರಮಂ ಮಾಡ |
ದೋವದೇ ಬಂದು ಬಲವಂದೊಸೆದು ಬಳಿಕ ನಾ |
ನಾವಿಧವಿ ಕೊಂಡಾಡಿ ಸಾಷ್ಟಾಂಗವೆರಗಿದೊಡೆ ಲೋಕಮಿರದೆಯ್ದೆ ನಗದೇ || ೫೫ ||

ಎನಲೆಂದನಾ ದೇವನಾ ಪ್ರಥಮವಯಸಿನೊಳ |
ಗಿನಿಸು ಕದಡದ ನೀರನೆರೆದು ರಕ್ಷಿಸಿದವರ್ಗೆ |
ಯನವರತಮಾನಾಳಿಕೇರಮತಿರುಚಿಯಪ್ಪ ಸುಧೆಯನೋವದೆ ಕೊಡುವುದು ||
ಅನುನಯದಿ ಸನ್ಮಂತ್ರವೆಂಬ ವಚನಾಮೃತಮ |
ನೆನಗೆನ್ನ ಕಿವಿಯೊಳೆರೆದೀ ಪದವನಿತ್ತವಗೆ |
ಜನನಾಥ ಕೇಳು ನಾನೇನ ಮಾಡುವೆನದರಿನೀತನೇ ನಿಜದೈವವು || ೫೬ ||

ನೆಲ ಹೇಸುವಂತೆ ಸಪ್ತವ್ಯಸನದೊಳ್ನಡೆದು |
ಕುಲಹೀನನಾನೆನ್ನದೆನ್ನೆಂಜಲಂ ನೃಪತಿ |
ಗಲಸದೇ ಕೊಟ್ಟು ಶೂಲಪ್ರಾಪ್ತಿಯಾಗಿ ನರಕಕ್ಕೆ ಬೀಳುವನೆನ್ನನು ||
ಸಲೆಸುಖವನೀವ ಸದ್ಗತಿಗೆ ಪಿಡಿದೆತ್ತಿ ನಿ |
ರ್ಮಲಿನ ಮಾಡಿದನಿವಂ ತಾನೆ ನಿಜಗುರುದೈವ |
ನೆಲೆಯಿದೆಂದಾನೀ ಮಹಾತ್ಮಂಗೆ ಮೊದಲೆರಗಿ ಕಡೆಯೊಳಭವಂಗೆರಗಿದೆಂ || ೫೭ ||

ಎಂದಾ ನಿಳಿಂಪನಾ ಜಿನದತ್ತನಂ ಪಲವು |
ಚಂದದಾಭರಣವಸ್ತ್ರಾನುಲೇಪನ ಕುಸುಮ |
ದಿಂದ ಪೂಜಿಸಿಯಲರಮಳೆಯಾದಿಯಾಶ್ಚರ್ಯಪಂಚಕವನೊಸೆದು ಮಾಡಿ ||
ಅಂದು ತಾಂ ಕೆಡಹಿದರಸನ ಚತುರ್ವಿಧ ಬಲದ |
ಗೊಂದಣಮನೇಳಿಸಿ ಮಹೀಶನೊಳಗನುಮೋದ |
ದಿಂದೀ ಮಹಾತ್ಮನೆನಗೆಸಗಿದುಪಕಾರಮಂ ನೆನೆವೆನಾನಾವ ಭವಕೆ || ೫೮ ||

ಇಂತು ನುಡಿದಾದೇವನಾ ದಿವಿಜಲೋಕಕ್ಕೆ |
ಸಂತಸದಿನೆಯ್ದಲೊಡನದನು ಕಂಡಾ ಮಹೀ |
ಕಾಂತನಾ ಸದ್ಧರ್ಮದೊಂದು ಮಹಿಮೆಯನು ಕೊಂಡಾಡಿ ತಲೆದೂಗುತಿರಲು ||
ಕಂತುಮದಮರ್ದನನ ಸಮಯಮೇ ಕೈವಲ್ಯ |
ಕಾಂತೆಯೊಡಗೂಡಿಸುವುದದು ಭಾವಿಸಲು ಪುಣ್ಯ |
ವಂತರ್ಗೆ ಘಟಿಯಿಸುವ ತೆರದಿನನ್ಯರ್ಗಹುದೇ ಎಂದನಾ ಜಿನದತ್ತನು || ೫೯ ||

ಎನಲದಂ ಕೇಳಿ ಹರ್ಷೋತ್ಕರ್ಷನಾಗಿ ಸ |
ಜ್ಜನವಿನುತ ಪಂಚಪದದೊಂದು ಸಾಮರ್ಥ್ಯಮಂ |
ಜಿನಸಮಯದಲ್ಲಿ ನಂಬುಗೆವಡೆದವರ್ಗೆ ಮುಂದಪ್ಪ ಸಲೆಸುಕೃತದೊದವಂ ||
ಮನವಾರೆ ಕಂಡು ಮತ್ತಾ ಸ್ವರ್ಗಮುಕ್ತಿಯಂ |
ಘನಗುಣಾಲಂಕೃತರ್ಸ್ಸಾಧ್ಯಮಂ ಮಾಳ್ಪುದನೆ |
ನೆನೆಯಬೇಕೆಂದು ನಿಶ್ಚಯಮಪ್ಪ ಬುದ್ಧಿಯಂ ಬಗೆದು ತದ್ಭೂಪಾಲನು || ೬೦ ||

ವೈರಾಗ್ಯವೆದೆಯೊಳಂಕುರಿಸಲೊಡನಾ ನಿಜಕು |
ಮಾರನುದಿತೋದಯಗೆ ಭೂಭಾರಮಂ ಹೊರಿಸಿ |
ಭೂರಿಭೂಭುಜರೊಡನೆ ನಡೆತರಲ್ ಸಂಭಿನ್ನಮತಿಯಾ ಸುಬುದ್ಧಿಸುತಗೆ ||
ಆ ರಾಜಮಂತ್ರಿಪದವಿತ್ತುಬರೆ ಮನುಜಮಂ |
ದಾರ ಜಿನದತ್ತಸಹಿತಾಗಿ ದೀಕ್ಷೆಯನಾಂತ |
ದಾರ ಜಿನದತ್ತಸಹಿತಾಗಿ ದೀಕ್ಷೆಯನಾಂತ |
ನಾ ರುಷಿಲಲಾಮ ಜಿನಚಂದ್ರಭಟ್ಟಾರಕರಿನಾ ನೃಪತಿಪದ್ಮೋದಯಂ || ೬೧ ||

ನರನಾಥನರಸಿ ಜಂಭಾವತಿಮಹಾದೇವಿ |
ವರಸಚಿವನಬಲೆ ಸುಪ್ರಭೆ ಮತ್ತಮಾರೂಪ್ಯ |
ಖುರನ ಸತಿ ರೂಪ್ಯಖುರೆ ನಮ್ಮ ನಿಜಜನನಿ ಸಹಿತಾ ದೀಕ್ಷೆಯಂ ಧರಿಸಲು ||
ಪುರವರದೊಳರ್ಧಜನ ಶ್ರಾವಕವ್ರತಮನನು |
ಕರಿಸಿಯೊಪ್ಪಿದರರ್ಧಲೋಕಕಿದುವೆ ಸುರು |
ಚಿರಧರ್ಮವೆಂದು ಪಿರಿದುಂ ಭದ್ರಪರಿಣಾಮಮಂ ಪಡೆದರರ್ತಿಯಿಂದ || ೬೨ ||

ಈ ತೆರೆದ ಪ್ರತ್ಯಕ್ಷಮಂ ಕಂಡು ನನಗೆ ಸಂ |
ಜಾತಮಾದುದು ಶುದ್ಧಸಮ್ಯಕ್ತ್ವಮೆಂದಾ ವಿ |
ನೂತನರ್ಹದ್ದಾಸನೊರೆಯಲದ ಕೇಳಿ ಇಚ್ಛಾಮಿಯೆನಲಾ ಸತಿಯರು ||
ಆತನ್ವಿ ಕಿರಿಯ ಸತಿ ಕುಂದಲತೆಯೆಂಬಳೀ |
ಮಾತಿಗಿಚ್ಛಾಮಿಯೆಂದೆಂಬೆನೇ ನಾನಿದಂ |
ಪ್ರೀತಿಯಿಂ ಲಾಲಿಸುವೆನೆಂಬೆನೇ ಇಂತಿದೆಲ್ಲಂ ಮಿಥ್ಯೆಯಲ್ಲವೇ ಭಾವಿಸಿದೊಡೆ || ೬೩ ||

ಸತ್ಯಮಲ್ಲಿಂತಿದೆಂಬಾ ಕುಂದಲತೆಯ ನುಡಿ |
ಗತ್ಯಂತ ಕುಪಿತಮಾನಸರಾ ಮಹೀಶನಾ |
ಮಾತ್ಯರಿಂತೆಂದೆಣಿಕೆ ಮಾಡಿದರ್ಜನಜನಿತಮಾಗಿ ನಮ್ಮೀ ಪುರದೊಳು ||
ಪ್ರತ್ಯಕ್ಷದಿಂದ ಚೋರನಿರವನೀಕ್ಷಿಸಿಯಾಧಿ |
ಪತ್ಯಮಂ ನಮಗಿತ್ತು ಬಹಿರಂಗ ಸೌಖ್ಯಮನ |
ನಿತ್ಯಮೆಂದಾ ದೀಕ್ಷೆಯಂ ಕೊಂಡುದನಿವಳ್ಪುಸಿಯೆಂದು ನುಡಿಯಬಹುದೇ || ೬೪ ||

ಆಗಲಾಗಲಿಯೊಂದು ಬಾರಿ ರವಿಯುದಯ ತ |
ನ್ನಾಗ ಹಿಡಿತರಿಸಿ ಕತ್ತೆಯಮೇಲೆ ಕುಳ್ಳಿರಿಸಿ |
ಮೇಗೆ ಸುಣ್ಣದ ಬೊಟ್ಟನಿಟ್ಟು ಪೊರಮಡಿಸಬೇಕೆಂದವರು ನುಡಿಯುತಿರಲು ||
ಆಗಲೆಂದಂ ಚೋರನೆನ್ನಯ್ಯನರಸಿನೊಂ |
ದಾಗಿ ಸವಿದಾ ಶೂಲವೇರಿ ಜಿನದತ್ತನಿಂ |
ದಾಗ ಸಗ್ಗಂ ಬಡೆದುಬಂದ ಪ್ರತ್ಯಕ್ಷಮಿಲ್ಲೆನಬಹುದೆ ಈ ಡಾಳಕಿ || ೬೫ ||

ಕಾರಕಾಲದ ಕಂದರದನುಣ್ಚರವನು ಪಿರಿ |
ದಾರಯ್ದನರ್ಘ್ಯವಹ ವೈಡೂರ್ಯಮಣಿಯಂ ವಿ |
ಡೂರಧರಣೀತಳಂ ಹದೆವಂದದಿಂದಮಾ ಕರಲುನೆಲನೇಂ ಹಡೆವುದೆ ||
ಚಾರುಕೋವಿದರ ನುಡಿಗುತ್ತಮರ ತನುಲತಿಕೆ |
ವೋರಣದಿ ಪುಳಕಿಪಂದದಿ ದುರ್ಜನಾಳಿಯ ಕ |
ಠೋರಣಮಪ್ಪಂಗದೊಳಗೊಂದಿನಿಸು ಪುಳಕಪ್ರತಾನಸಂಜಾತಮಹುದೇ || ೬೬ ||

ಈ ಪರಿಯೊಳಾ ಚೋರನಾ ರಾಜಮಂತ್ರಿಯುಂ |
ಭೂಪಾಲಂ ತಮ್ಮೊಳಾಲೋಚಿಸುತ್ತಿರೆ ನಿ |
ರೂಪಿಸಿದನಾ ನಿತಂಬಿನಿಯರೊಳ್ತನಗೆ ಸಮ್ಯಕ್ತ್ವ ಸಂಜನಿಸಿದುದನು ||
ಆ ಪುಣ್ಯಮೂರ್ತಿಯಾಶ್ರಿತಜನಾಧಾರನತಿ |
ರೂಪನೂರ್ಜಿತಕಪಾಸಂಪನ್ನ ವೈಶ್ಯಕುಲ |
ದೀಪ ಸಮ್ಯಕ್ತ್ವಚಿಂತಾರತ್ನ ಜಿನಸಮಯವಾರ್ಧಿವರ್ಧನಚಂದ್ರನು || ೬೭ ||

ಇದು ವಿಬುಧಜನವಿನುತಮಿದು ವಿಬುಧಜನವಿನತ |
ಮಿದು ವಿದಿತಜಿನಸಮಯಶರಧಿಸಂಪೂರ್ಣೇಂದು |
ಸದಮಲಚರಿತ್ರ ಚೆಂಗಾಳ್ವಭೂವರನ ಸಚಿವಾನ್ವಯಾಂಬರಹಂಸನು ||
ಮದನಸಮರೂಪನುತ್ತಮಗುಣಕರಂಡಕಂ |
ಚೆದುರಮಂಗರಸ ರಚಿಸಿದ ಕೌಮುದೀಕಥೆಯೊ |
ಳೊದವಿದುದು ರೂಪ್ಯಖುರತಸ್ಕರನ ಕಥನ ನಾಲ್ಕನೆಯ ರಂಜಿಸುವ ಸಂಧಿ || ೬೮ ||

ಅಂತು ಸಂಧಿ ೮ಕ್ಕಂ ಪದನು ೨೬೮ ಕ್ಕಂ ಮಂಗಳ ಮಹಾ