ಶ್ರೀಮದರ್ಹದ್ದಾಸವೈಶ್ಯವಿಭು ಕೇಳಲಾ |
ತಾಮರಸವದನೆ ಮಿತ್ರಶ್ರೀ ಕರಂಗಳಂ |
ಪ್ರೇಮದಿಂ ಮುಗಿದು ತನಗಾದ ಸಮ್ಯಕ್ತ್ವಮಂ ಬಿನ್ನಪಂಗೆಯ್ದಳಿಂತು || ಪಲ್ಲ ||

ಕಟ್ಟಕಡೆ ಸೊಬಗಿಗೆನಿಸುವ ರಾಜಗೃಹಮೆಂಬ |
ಪಟ್ಟಣಂ ಮಗಧದೇಶದೊಳೊಪ್ಪುತಿಹುದಲ್ಲಿ |
ಕಟ್ಟರಸು ಸಂಗ್ರಾಮಶೂರನೆಂದೆಂಬವಂ ಕನಕಮಾಲಾನಾಮದಾ ||
ಪಟ್ಟದಂಗನೆಗೂಡಿ ಸುಖಮಿರ್ಪನಂತಲ್ಲಿ |
ಸೆಟ್ಟಿಯೊರ್ವಂ ವೃಷಭದಾಸನೆಂದೆಂಬವಂ |
ಬಟ್ಟವೆರೆಮೊಗದ ಜಿನದತ್ತೆಯೆಂಬಳುಗೂಡಿ ಸುಖದಿಂದಮಿರುತಿರ್ಪರು || ೧ ||

ದೀನತ್ವದಿಂ ಬಂದ ವೈಶ್ರವಣನೈಶ್ವರ್ಯ |
ಮೇನಾದೊಡೇನೊ ಸುರಭೂರುಹದ ನೆಮ್ಮುಗೆಯಿ |
ನಾ ನಾಕಪತಿಮಾಳ್ವ ತೀರ್ಥಂಕರರ ಪಾದಪೂಜೆ ಏನಾದೊಡೇನೊ ||
ಭೂನಾಥನಾಗಿಯುಂ ಬರಿಯಿಕ್ಷುರಸವನೇ |
ತಾನೊಸೆದು ಕೊಟ್ಟ ಶ್ರೇಯಾಂಸ ಮಾಡಿದುದೊಂದು |
ದಾನದ ಮಹಾತ್ಮೆಯೇನಾದೊಡೇನೆಂದು ಹಳಿಯುತಿರ್ಪರವರವರನು || ೨ ||

ಇಂತು ಸಲೆ ಸುಖವಾಳುತಾ ವೈಶ್ಯದಂಪತಿಗ |
ಳಂತವಿಲ್ಲದ ದಾನಪೂಜೆಯುಪವಾಸಮ |
ತ್ಯಂತಶೀಲದೊಳೀ ಪುರಕ್ಕವರೆ ಕಡೆಯಾಣಿಯೆಂದು ತೋರಿಸಿಕೊಳ್ಳುತ್ತಾ ||
ಸಂತತಮಿರುತ್ತೊಂದು ಪಗಲು ಮಧ್ಯಾಹ್ನದೊಳ್ |
ಸಂತೋಷದಿಂದತಿಥಿಗಳ ಬರವ ಕಾಣುತಾ |
ಕಾಂತೆ ಪೂಜಾದ್ರವ್ಯಮಂ ಪಡಲಿಗೆಯೊಳಿಟ್ಟು ಬಾಗಿಲೊಳ್ಬಂದು ನಿಲಲು || ೩ ||

ಧರಿಸಿ ಹೆಗಲಲ್ಲಿ ದಕ್ಷಿಣಹಸ್ತಮಂ ವಾಮ |
ಕರದೊಳ್ಕಮಂಡಲ ಮಯೂರಪಿಂಛಂಬಿಡಿದು |
ಕರುಣದಿಂ ಭೂತದಯೆಯೇ ನಿಮಿತ್ತಂ ಮಾರುವರಮವನಿಯಂ ನೋಡುತ ||
ವರತಪೋವೃದ್ಧಿಗೀ ತನುವಿರಲ್ಬೇಕೆನುತ |
ಪುರದ ವೀಥಿಯೊಳೊರ್ವ ಜಾತರೂಪಂ ಮೆಲ್ಲ |
ನುರುಹಿದೊಡೆ ಬಿಳ್ಪಂತೆ ಮೆತ್ತಮೆತ್ತನೆ ಚಂದ್ರಗತಿಯಿಂದ ನಡೆತಂದನು || ೪ ||

ಅಪವರ್ಗಸತಿಗೆ ಮನಮಿಟ್ಟು ಕರಕರೆಯೆ ತಾ |
ನಪಹರಿಸಿತೋ ಶರೀರದ ವೀರ್ಯವರ್ಧನಮ |
ನಪರಿಮಿತ ಸೂಕ್ಷ್ಮತ್ರಸಂಗಳೀ ಬಲುಭಾರವೆರಸಿ ಪಾದಮನಿಕ್ಕಲು ||
ಅಪಗತಪ್ರಾಣಮಂ ಪೃಥ್ವಿಯೊಳ್ಪಡೆವುವೆಂ |
ದಪಘನಂ ಲಘುತರವನೇಂ ಪಡೆದುದೋ ಎನಲ್ |
ತಪಸಿ ಚಿದ್ರೂಪಕ್ಕೆ ಪಕ್ಕಾದ ತನುತನುವನಿರದಾಂತು ನಡೆತಂದನು || ೫ ||

ಆ ತಪಸಿಯಂ ಬಡವನೊಡವೆಗಂಡಂತಾ ವಿ |
ನೂತೆ ಜಿನದತ್ತೆ ಕಂಡಿದಿರ್ವಂದು ನಿಧಿಯಿರ್ದ |
ಭೂತಳಕೆ ನವದೀಪಕಳಿಕೆಯೆರಗುವ ತೆರದಿನೆರಗಿ ಪೂಜಿಸಿ ಬಳಿಕ್ಕ |
ಪ್ರೀತಿಯಿಂ ಬಲವಂದು ತಿಷ್ಠತಿಷ್ಠಾಯೆಂಬ |
ಮಾತುಗೇಳುತ್ತ ಭಾವರಿ ಮುರಿದು ಪೊರವೊಳಲ |
ವೀತರಾಗಾಲಯಕೆ ಜಾತರೂಪಂ ನಿಲ್ಲದೆಯ್ದಲದಕಾಣುತವಳು || ೬ ||

ಮಲಮಲನೆ ಮರುಗಿ ಹೊಟ್ಟೆಯ ಹೊಸೆದುಕೊಳುತ ಮುನಿ |
ಕುಲಲಾಮಂ ನನ್ನೊಳೇನು ಕೊರತೆಯ ಕಾಣು |
ತಲಸಿ ತಿರುಗಿದನಿದಂ ಕೇಳ್ವೆನೆನುತಾ ಬಸದಿಗಾ ವೈಶ್ಯಕಾಂತೆ ಬಂದು ||
ಕಲಿನವಿಜಯಂಗೆರಗಿ ಬಳಿಕ ಯತಿಪತಿಯ ನವ |
ನಳಿನೋಪಮಾಂಘ್ರಿದ್ವಯಕ್ಕೆ ಫಣೆಯಂ ಚಾಚಿ |
ಯೆಲೆ ಗುರುವೆ ನಿಮಗೆ ಭಾವರಿಮುರಿದ ಕಾರಣವನುಸಿರೆನಲ್ಕೆಂದರಿಂತು || ೭ ||

ತರಳಾಕ್ಷಿ ಕೇಳು ಗಂಡವಿಮುಕ್ತರಂ ಮನೆಯ |
ಪುರುಷರೆ ನಿಲಿಸಬೇಕಾ ಪುರುಷನಿಲ್ಲದೊಡೆ |
ವರಸುತಂ ಸಹಿತ ಸತಿಯರ್ನ್ನಿಲಿಸಬೇಕು ಬರಿಯಬಲೆಯರ್ಬಂದು ನಿಲಿಸೆ ||
ನಿರುತದಿಂ ನಿಲ್ವುದನುಚಿತವೆಂದೆಲೆ ಬಾಲೆ |
ತಿರುಗಿದೆವು ನಾವೆಂಬ ಮುನಿವಚನಮಂ ಕೇಳಿ |
ತರುಣಿ ಕಣ್ಣೀರಿಟ್ಟು ಮನೆಗೆಯ್ದಿ ಸುತದೋಹಳದಿ ಪತಿಯೊಳಿಂತೆಂದಳು || ೮ ||

ಉಣಲುಡಲು ತೊಡಲು ಬೇಡಲ್ಕೊಡುವುದಕ್ಕೆಮಗೆ |
ಹಣಮೆಂಬುದೇ ನಮ್ಮ ಮನೆಯಲ್ಲಿ ಕಾಲಕಸ |
ವೆಣಿಕೆಬೇಡಿಂತಿದರಿನೇನಾದೊಡೇನೊ ಮಕ್ಕಳ ಹಡೆಯದವರ ಬಾಳ್ವೆ ||
ಹೆಣಕೆ ಸರಿ ಫಲವನಿನಿಸಂ ಪಡೆಯದಾ ಮರ |
ಕ್ಕೆಣೆಯವರ ಮನೆ ಗೆದಲುಮಾಡಿದಾ ಹುತ್ತವದು |
ಗಣನೆಯಿಲ್ಲದೆ ಘಳಿಸಿದರ್ಥವೆಲ್ಲಂ ವ್ಯರ್ಥಮವನೀಶ್ವರರ್ಗಪ್ಪುದು || ೯ ||

ಇಂತು ನುಡಿದಿಂದುಮಂಡಲವದನೆಗಾ ವೈಶ್ಯ |
ಕಾಂತನುತ್ತರಗೊಟ್ಟನೆಲೆ ಮಾನಿನೀ ಪುತ್ರ |
ಸಂತತಿಯಿನಾವಫಲಮವರಂದು ನಾಮೆಸಗಿದಾ ಪುಣ್ಯಪಾಪಫಲದ ||
ಎಂತಾನು ಪಚ್ಚುಗೊಂಬರೆಯದರಿನಾ ಭ್ರಾಂತು |
ಕಾಂತೆ ನಿನಗೇಕೆನಲ್ಕೇಳ್ವಲ್ಲಬಾ ಪುತ್ರ |
ಸಂತಾನಮೇ ಗೃಹಸ್ಥಿಕೆಗೆ ಮುಖ್ಯಂ ಸರ್ವದುಃಖಾಪಹರಣಮಹುದು || ೧೦ ||

ಈ ಸಂಸೃತಿಶ್ರಾಂತವಿಶ್ರಾಂತಿಯಂ ಮಾಡು |
ವಾ ಸುಜನಸಂತಾನಸಂಗಪ್ರಸಂಗಮುಂ |
ಭಾಸುರಗುಣಾಭರಣರೆನಿಪ ಉತ್ತಮರ ಚರಿತೆಯನುಸಿರ್ವ ಸತ್ಕವಿತೆಯಂ ||
ಶ್ರೀಸುತಂಗೆಣೆಯೆನಿಪ ಬಳವಿಗೆಯವರ ಹರೆಯದ ವಿ |
ಲಾಸಮಂ ನೋಡಲಿವು ಮೂರು ಮುನ್ನಂ ನೋನದವರ್ಗೆಂತು ಸಂಭವಿಪುದು || ೧೧ ||

ಒಡಲುವಿಡಿದೀ ಬಾಳು ಬಾಳ್ವರ್ಗೆ ಮಕ್ಕಳಂ |
ಹಡೆಯೆ ಸಗ್ಗಂಬಡೆದ ತೆರನದೆಂತೆನೆ ನಾವು |
ಪಡೆದ ವಸ್ತುವನು ಮನೆಯಾರಭಾರವನು ನಂದನರ ಕೈವಶವ ಮಾಡಿ ||
ಕಡೆಯಲ್ಲಿ ಭೋಗೋಪಭೋಗಮಂ ಕೊಳೆವುಲ್ಲ |
ಬಿಡುವಂತೆ ಬಿಸುಟು ದೀಕ್ಷೆಯನಾಂತು ಮುಕ್ತಿಯಂ |
ಪಡೆಯಬಹುದದರಿಂದಪುತ್ರಸ್ಯ ಸದ್ಗತಿರ್ನಾಸ್ತಿಯೆಂಬುದು ಭೂತಳ || ೧೨ ||

ಎಂದಬಲೆಗಿಂತೆಂದನೆಲೆ ಮಾನಿನೀ ನಾವು |
ಹಿಂದೆ ಮಾಡಿದ ಪಾತಕದ ಫಲದಿ ನಂದನರ |
ನಿಂದು ಪಡೆಯಿತ್ತಿಲ್ಲದರಿಂದ ಬಾರದುದ ಬಯಸಿ ಬಾಯಾರಬಹುದೆ ||
ಎಂದೆನಲ್ಬಂಜೆ ನಾಂ ನಿನಗೊರ್ವ ಸುದತಿಯಂ |
ತಂದೊಡಾಗುವುದು ಸಂತಾನಮೆನಲತಿರೋಗ |
ದಿಂದ ನವೆವವರಂಗಭೂಷಣವ ಬಡವರುತ್ತಮ ಗೃಹವ ಬಯಸುವಂತೆ || ೧೩ ||

ವನಿತೆಯರನತಿವೃದ್ಧಬಯಸೆ ಲೋಕಂ ನಗದೆ |
ಎನೆ ಭೋಗಕಾಂಕ್ಷೆಯಿಂ ತಂದೊಡಪಹಾಸ್ಯ ಸ |
ಜ್ಜನಪುತ್ರಸಂತಾನವೃಧ್ಯರ್ಥಮಾಗಿ ತಂದೊಡೆ ದೋಷಮಿಲ್ಲವೆಂದು ||
ವಿನುತಗುಣಮಣಿವಿಭೂಷಣೆ ನೀತಿವಾತನುಸಿ |
ರ್ದಿನಿಯನನೊಡಂಬಡಿಸಿ ಹರಿಸದಿಂ ತನ್ನ ನಿಜ |
ಜನಕ ಗುಣಭದ್ರಸೆಟ್ಟಿಯ ಕಿರಿಯಮಡದಿ ಬಂಧುಶ್ರೀಯ ಬಳಿಗೆ ಬಂದು || ೧೪ ||

ಚಿಕ್ಕಮ್ಮ ಕೇಳು ಹಿಂದಣ ಜನ್ಮದೊಳು ನಾನು |
ಮಕ್ಕಳು ಬಯಸಿ ದೈವದ ಮುಂದೆ ನೋಂಪಿಯಂ |
ಚೊಕ್ಕಟದಿ ಮಾಡಿತಿಲ್ಲದರಿಂದಮೀ ನನ್ನ ಬಸಿರು ಪಾಳ್ವಸಿರಾದುದು ||
ಮಕ್ಕಳಾಸೆಗೆ ನಿನ್ನ ಪಿರಿಯಳಿಯಗನ್ನಿಗರ |
ಮಕ್ಕಳಂ ತಂದುಕೊಡಲವರು ನನಗೆರವಿಂತಿ |
ದಕ್ಕೆ ಸಂಶಯ ಬೇಡ ನಿನ್ನ ಮಗೆನ್ನ ಕಿರುದಂಗಿ ಕನಕ ಶ್ರೀಯನು || ೧೫ ||

ಅತಿಹರುಷದಿಂದೀವುದೆನಲೆಂದಳವಳಿಂತು |
ರತಿರೂಪ ಹರಿದು ಹತ್ತಿಸಿದಂತುಟೆಸೆವ ನಿ |
ನ್ನತಿಶಯದ ರೂಪುಗಂಡಿವಳನಾಳುವುದಿಲ್ಲವದರಿಂದ ಕೊಡುವುದೆನಗೆ ||
ಹಿತವಲ್ಲವೆಂದೆನಲ್ಕಾನೀಭವಕ್ಕೆ ಸ |
ನ್ನುತಿವಡೆದ ಬ್ರಹ್ಮಚರ್ಯವ್ರತದ ದಿಟದಿ ಜಿನ |
ಪತಿ ಸಾಕ್ಷಿಯಲ್ಲಿ ಕೈಕೊಂಬೆನೆಂದಾ ತಾಯನೊಡಬಡಿಸಿ ತತ್ಕಾಮಿನಿ || ೧೬ ||

ಅನುಜೆ ಕನಕಶ್ರೀಯನಾ ನಿಜೇಶಗೆ ಬಂಧು |
ಜನದರಿಕೆಯಲ್ಲಿ ಮದುವೆಯನೊಸೆದು ಮಾಡಿಯಾ |
ಮನೆಯಾರಭಾರವೆಲ್ಲವನವಳ ಕೈವಶಂ ಮಾಡಿ ಸಂಶಯಮಿಲ್ಲದೆ ||
ಅನುದಿನಂ ಭೋಜನದ ಹೊತ್ತಲ್ಲದುಳಿದ ಹೊ |
ತ್ತಿನಿಸು ಮನೆಯೊಳ್ತಡಂಗೆಯ್ಯದೆ ಬಸದಿಯೊಳು |
ಜಿನಪೂಜೆ ಜಿನಪುರಾಣಕ್ಕೆ ಮನಮಿತ್ತು ಕಾಲವನು ಕಳೆಯುತ್ತಮಿರಲು || ೧೭ ||

ವನಿತೆ ಜಿದತ್ತೆ ಮನೆಮನೆವಾರ್ತೆಯಿರವಿಗೊಂ |
ದಿನಿಸು ಮನಗೊಡದೆ ಬಸದಿಯೊಳು ಬಹುಪೂಜೆಯಿಂ |
ದಿನವ ನೋಂಕುವುದನರಿದಾ ನಿಜೇಶಂ ವೃಷಭದಾಸವೈಶ್ಯಂ ಹರುಷದಿ ||
ತನಗವಳ ಸದ್ವಿಧಿಯೆ ವಿಧಿಯಾಗಿಯವಳೊಡನೆ |
ಜಿನಕಥಾರ್ತ್ಥೋದ್ಭೂತನಾಗಿರಲ್ಬಳಿಕೊಂದು |
ದಿನದೊಳಾ ಕಾಂಚನಶ್ರೀ ತನ್ನ ತಾಯಿ ಬಂಧುಶ್ರೀಯ ಬಳಿಗೆ ಬರಲು || ೧೮ ||

ಎಲೆ ಮಗಳೇ ನಿನ್ನ ವಲ್ಲಭನು ನಿನ್ನೊಳು ಲೇಸ |
ನೆಲೆಮಾಡಿಕೊಂಡಿರ್ಪನೇ ಎಂದು ಕೇಳಲಾ |
ಲಲನೆ ಕೂರುಗುರಿಂದ ಕಣ್ಣನೀರಂ ಮಿಡಿಯುತೀ ತೆರದಿ ನುಡಿದಳಾಗ ||
ಪಲವ ಗಳಪಲದೇಕೆ ನಾನವನ ಮನೆಯುಮಂ |
ಬಲಗಾಲು ಮುಂತಾಗಿ ಹೊಕ್ಕದಿನದಿಂದ ಬಲು |
ಗೆಲಸವಲ್ಲದೆ ಇನಿಸು ತಲೆಯ ತುರಿಸುವೊಡೆ ಹೊತ್ತಂ ಕನಸಿನಲ್ಲಿ ಕಾಣೆ || ೧೯ ||

ಸವತಿಯ ಮಗಳ್ಗೆನ್ನ ಸವತಿಯಾಗೆಂದು ಮೊದ |
ಲವಿಚಾರದಿಂದ ಕೊಟ್ಟು ಬಳಿಕೀಗ ನಿನಗೆ ನಿ |
ನ್ನ ವಲ್ಲಭನೊಳ್ಳಿತಾರ್ಗಿಪನೇ ಎಂಬ ನುಡಿಯೊಳ್ಳಿತಾಯ್ತಾನಂದಿನಾ ||
ಭವದಲ್ಲಿ ಹಸೆದಾನಮಂ ಮಾಡಲೊಲ್ಲದೇ |
ಇವಳೆನ್ನ ಬದುಕ ಬಿಡಳೆಂದೆಂಬ ಮುಂಡಮೊರೆ |
ಯ ವಿವೇಕತನಮಲ್ಲವೇ ಎಂದು ಬೇಸರಂ ನುಡಿದು ಬಳಿಕಿಂತೆಂದಳು || ೨೦ ||

ಹಸಿದಹೊತ್ತಿಗೆ ಬಂದು ಮಿಂದುಂಡು ಬಳಿಕ ಮೇ |
ಲೊಸೆದು ನೋಂಪಿಯ ನೋನಬೇಕೆಂಬ ನೆವದಿಂದ |
ಪೊಸುತುಪ್ಪ ಕಜ್ಜಾಯ ಮುಡಿಹೂವು ಕರ್ಪುರ ವೀಳೆಯಂಗಳನೆ ಕೊಂಡು ||
ಬಸದಿಯೊಳಗಾಡಾಳೆಯಂ ಕೂಡಿಕೊಂಡು ಸಂ |
ತಸದಿನೊಂದಿನಿಸಗಲದಿರ್ಪನಲ್ಲದೆ ನನ್ನ |
ದೆಸೆಯೆಂಬುದಂ ನೋಡಲರಿಯದವನೊಳ್ಬಾಳು ನನಗೆಂತು ಸಂಭವಿಪುದು || ೨೧ ||

ಮಿಂದುಟ್ಟ ಸೀರೆ ಹೊಲೆಗಂಡು ನೀರಂ ಕಾಣು |
ವಂದಿಗಲ್ಲದೆ ಉಳಿದದಿನ ಸಡಿಲಿಸುವುದನೇ |
ನೆಂದರಿಯೆನಾಂ ಹೊತ್ತು ಮೂಡಿಮುಳುಗುವನ್ನೆವರ ತೊತ್ತುಗೆಲಸವನೆ ತುಬ್ಬಿ ||
ಬೆಂದೊಡಲಬೇಗೆಯನೇತರದಿ ತಂಬಿಸುವೆ |
ನೆಂದು ಸುಖ ಬೇಸರಂ ನುಡಿವೊಡೊಬ್ಬರ ಕಾಣೆ |
ನೊಂದು ಹೊರಸಿನೊಳೊಬ್ಬಳೇ ಡೊಗ್ಗಿರಿದು ಕೆಡೆವೆನೆಂಬವಳೊಳಿಂತೆಂದಳು || ೨೨ ||

ಪಜ್ಜಳಿಸುವೀ ಹರೆಯದವಳು ನೀನಿರ್ದಂತೆ |
ಲಜ್ಜೆಗೆಡುವುದನು ಭಾವಿಸದೆ ನರೆತೆರೆಯಿಂದ |
ಜರ್ಝರಿತವಾದ ಮುದುಪಾರಿಯೊಳು ದೈವ ಗುರುವಿನ ಮುಂದೆ ಈಯಲ್ಲದ ||
ಉಜ್ಜುಗದೊಳಿರಲು ನರಕದೊಳು ಹುಟ್ಟಿಸಿ ಹಿರಿದು |
ನಿರ್ಜಾಡಿಸುವುದು ಕರ್ಮಂ ಭವಭವಕ್ಕೆಂಬ |
ಬೆಜ್ಜರಮುಮಂ ನೋಡದಂತಿರ್ಪುದವಗಂಗಜನ ಗೊಡ್ಡವೈಸಲ್ಲದೆ || ೨೩ ||

ಉತ್ತಮದ ರೂಪುವಡೆದಾ ರಂಭೆಯೂರ್ವಶಿ ತಿ |
ಲೋತ್ತಮೆ ಸುಕೇಶಿ ಮೇನಕಿ ಮಂಜುಘೋಷೆಯರ |
ಮೊತ್ತದೊಳ್ ಮನವ ನೆಲೆಗೊಳಲೀಯದೆ ತಿರಿಕ ತಾಪಸನ ಪೆಂಡತಿಯೊಳು ||
ಚಿತ್ತಮಂ ಚೆನ್ನಾಗಿ ಬಂಧಿಸಿ ಬಳಿಕ್ಕ ದೇ |
ವೊತ್ತಂಸನಂಗಮಂ ನೆರೆ ಕೆಡಿಸಿತಿಲ್ಲವೇ |
ಚಿತ್ತಭವನುಳಿದ ನಾಡಾಡಿಗರನೇನ ಮಾಡುವನೆಂದು ಕಂಡರಾರು || ೨೪ ||

ಎನುತೆಲೇ ಮಗಳೆ ಕೇಳೀ ದೊಡ್ಡ ಕಾರ್ಯಕ್ಕೆ |
ನಿನಗಿನಿತು ಗುಜ್ಜುಗುರುಕೇನು ಕಾರಣ ಹೇಳು |
ತನಗೆ ತನುಜಾತರಿಲ್ಲೆಂದು ತನ್ನಾ ಹಾಳುಮನೆಯ ಕಯ್ಗೆಲಸಕಾಗಿ ||
ನನಗೆ ಭೋಸರಿಗತನಮಂ ನುಡಿದು ಬದುಕುಳ್ಳ |
ಮನೆಗೆ ಕೊಡುವುದ ಬಿಡಿಸಿ ತನಗೆ ತೊಳ್ತಂ ಮಾಡಿ |
ನಿನಗೆ ದೇಹಾರಮಂ ಮಾಡಿದವಳಿಗೆ ತಕ್ಕುಪಾಯಮಂ ಬಲ್ಲೆ ನಾನು || ೨೫ ||

ನೋಡೊಮ್ಮೆ ಬಣಜಿಗಿತ್ತಿಯ ಕಾಲುಕೀಲನಿ |
ನ್ನಾಡಿಕೆಡಿಸಲದೇಕೆ ನಿನಗೀಯವಸ್ಥೆಯಂ |
ಮಾಡಿದವಳಂ ಕೊಂದು ನಿನ್ನ ಗಂಡನೊಳು ನೀನೊಲವಿನಿಂ ಬಾಳುವಂತೆ ||
ಮಾಡದೊಡೆ ನಾನು ಹೊತ್ತವು ಮೊಲೆಗಳೇಯೆಂದು ||
ಮಾಡಿ ಶಪಥವನು ಮಗಳಂ ಸಂತೈಸಿ ಚಿಂತೆ ಬೇಡೆಂದು |
ಕಳುಹಿಯವಳಂ ಕಾಲ್ವುಪಾಯಮಿನ್ನಾವುದೆಂದೆಣಿಸುತಿರಲು || ೨೬ ||

ಆ ಲಲನೆಯಾಲಯಕ್ಕೊಂದುದಿನದೊಳ್ಪಿಡಿದ |
ಶೂಶೂಲಡಮರುಗ ಉಟ್ಟ ಪುಲಿದೊಗಲ್ ಶಂಖಮಣಿ |
ಮಾಲೆ ಕಿರುಜೆಡೆ ತೊಡೆದ ಭಸ್ಮ ಪಲವುಂ ತೆರದ ಮದ್ದುಮರವಡಿಯ ಚೀಲ ||
ಸ್ಥೂಲಾಂಗನತಿರೌದ್ರರೂಪಸಮುಪೇತ ಕಾ |
ಪಾಲಿಕಾನಾಮದವಧೂತವೇಷಂ ಭುಕ್ತ |
ಕಾಲೋಚಿತಂ ಯೋಗಿ ಭವತಿಭಿಕ್ಞಾಂದೇಹಿಯೆನುತೊರ್ವನೆಯ್ತಂದನು || ೨೭ ||

ಇಂತು ಬಂದಂಗಣದೊಳಗಿರ್ದಾ ಸಿದ್ಧನಂ |
ಕಾಂತೆ ಕಂಡೀ ಮಹಾತ್ಮಂ ನಮ್ಮ ದೇಶಕ್ಕೆ |
ಪಿಂತೆ ಬಂದವರಂತುಟಿಲ್ಲಮಿವ? ಕಾರ್ಯಮಂ ಕಾಣಬಹುದೆನುತ್ತ ||
ಸಂತೋಷದಿಂದಾತನೊಡಲು ದಣಿವಂತೆ ಪಲ |
ವುಂ ತೆರದ ರುಚಿವಡೆದ ಹಸನಾದ ನವಭಕ್ಷ್ಯ |
ಮಂ ತಂದು ಸದ್ವಿನಯಭಕ್ತಿಯಿಂ ಕಯ್ಯಪಾತ್ರೆಯೊಳಗಿತ್ತಳಾಗ || ೨೮ ||

ಕರುವಿಂಗೆ ಕಾರ್ಯ್ಯಾರ್ಥಮಾಗಿ ಹುಲ್ಲಂ ಕೊಟ್ಟು |
ಕರವನೆಲ್ಲವನು ಕರಿವಿಂ ಕರೆದುಕೊಂಬಂತೆ |
ಎರಕದಿಂದಾ ವೈಶ್ಯಸತಿ ದಿನಂಪ್ರತಿಯವಗೆ ಒಳ್ಳುಣಿಸನುಣಿಸುತಿರಲು ||
ನೆರೆ ಸವಿಯುತವನವಳೊಳಿಂತೆಂದು ನುಡಿದನೀ
ತೆರದಿ ಮಾಡುವಳು ನೀನೆನಗೆ ತಾಯಲ್ಲದೇ |
ಪೆರತೊಬ್ಬಳಲ್ಲವದರಿಂ ನಿನಗೆ ನಾನೊಂದು ಪುರುಷಾರ್ಥಮಂ ಮಾಳ್ಪೆನು || ೨೯ ||

ಹೆತ್ತವರು ಶಾಸ್ತ್ರದಾನವನೊಸೆದು ಮಾಡಿದವ |
ರುತ್ತಮ ವ್ರತವನುಪದೇಶಗೆಯ್ದವರು ಸವಿ |
ದುತ್ತನೊಲಿದಿತ್ತು ರಕ್ಷಿಸಿದವರ್ ಪ್ರಾಣಪ್ರತಿಷ್ಠೆಯಂ ಮಾಡಿದವರು ||
ಚಿತ್ತೈಸು ತಾಯೆ ಈ ಐವರು ಗುರುಸ್ಥಾನ |
ಮೆತ್ತಾನುಮಿವರ ಮರೆದೊಡೆ ಮೆಯ್ಕರಂ ಹುಳಿತು |
ಸತ್ತು ನರಕದ ಹೇಕುಳಿಯೊಳಾಳುತಿಹರಿದಕ್ಕೆ ಸಂದೇಹ ಬೇಡ || ೩೦ ||