ಶ್ರೀಮುದುತೋದನೃಪಂ ವೈಶ್ಯವಿಭುವವನ |
ಭಾಮಿನಿಯರೊರೆದ ಕಥೆಯಂ ಕೇಳಿ ಸಮ್ಯಕ್ತ್ವ |
ವಾಮನದೊಳೊಗೆದು ದೀಕ್ಷೆಯನು ಕೈಕೊಂಡಮರಲೋಕದೊಳು ಸಂಜನಿಸಿದಂ || ಪಲ್ಲ ||

ಶ್ರೀಮನ್ನತಾಮರೋರಗನರಾಧೀಶ್ವರ |
ಸ್ತೋಮೋತ್ತಮಾಂಗಭೂಷಣಖಚಿತಮಣಿಗಣೋ – |
ದ್ಧಾಮದಾಮಾರ್ಚಿತೋಲ್ಲಸಿತಮೃದುಪಾದನವರತ್ನರಾಜೀವಯುಗಲ |
ಸಾಮಜವಿರೋಧಿವಿಷ್ಟರವಿಭವಸಮುಪೇತ |
ಸೋಮಾರ್ಕಕೋಟಿಲಲಿತಪ್ರಕಾಶಂ ಮುಕ್ತಿ |
ಭಾಮಿನೀವಲ್ಲಭಂ ವೀರಜಿನನೀಗೆಮಗೆ ಸಮ್ಯಕ್ತ್ವಸಂಪದವನು || ೧ ||

ಪುರಜಿನಾಜಿತಸಂಭವಾಭಿನಂದನಸುಮತಿ |
ನಿರಘಪದ್ಮಪ್ರಭಸುಪಾರ್ಶ್ವಚಂದ್ರಪ್ರಭ |
ಸ್ಮರಮಥನಸುವಿಧಿಶೀತಲಪತಿ ಶ್ರೇಯಾಂಸವಿಭು ವಾಸುಪೂಜ್ಯ ವಿಮಲ |
ನಿರುಪಮಾನಂತಧರ್ಮ ಸುಶಾಂತಿ ಕುಂಥುಗುರು |
ವರಮಲ್ಲಿ ಮುನಿಸುವ್ರತಾಧೀಶ ನಮಿನೇಮಿ |
ವರವಿಜಯ ಪಾರ್ಶ್ವಸನ್ಮತಿಜಿನೇಶ್ವರರೀಗೆಮಗೆ ಶಿವಸುಖಪದವನು || ೨ ||

ತುಂಟ ಭಂಟಿಕೆಯ ಮಾಳ್ಪೆಂಟುಕರ್ಮಂಗಳಂ |
ಬಂಟವಿಡಿತದಿ ಹೇಳಹೆಸರಿಲ್ಲದಂತೆ ಬಡಿ |
ದೆಂಟನೆಯ ನೆಲೆದುರ್ಗಕಂತವಿಲ್ಲದ ಚತುಸ್ಪಯಬಲಂ ಬೆರಸಿ ಪೋಗಿ ||
ಕೋಂಟೆಯಂ ಹರಿದಾಳಿಯೊಳ್ ಕೊಂಡು ಬಳಿಕ ಹಿಡಿ |
ದೆಂಟುಗುಣಮಂ ಮುಕ್ತಿಯೆಂಬಬಲೆಯೊಡೆನೆ ನಿ |
ಷ್ಕಂಟಕದಿ ಚಿರಪಟ್ಟದೊಳ್ ನಿಂದ ಸಿದ್ಧರ ನೆನೆದು ನಾಂ ಸುಖಿಯಪ್ಪೆನು || ೩ ||

ಬದ್ಧಕೃತಕರ್ಮಾಂಧಕಾರದಾರಣದೊಂ |
ದುದ್ಧತೆಯನೆಲ್ಲಮಂ ನೀಗಬೇಕೆಂದೆನುತ |
ಶುದ್ಧದರ್ಶನಬೋಧಚಾರಿತ್ರಮೆಂಬ ರತ್ನತ್ರಯದ ದೀಪಿಕೆಯನು |
ಉದ್ಧರಿಸಿಕೊಂಡು ಸಂಸಾರದ ಬಳಲ್ಕೆಯ ಸ |
ಮೃದ್ಧಿಯಂ ಸಂಹರಿಸಬೇಕೆಂಬ ಬಗೆಯೊಳ್ ಪ್ರ |
ಸಿದ್ಧವಹಕರುಣಾಂಬುವಂ ತಳೆದ ಸೂರಿಗಳ ಪದಕೆ ವಂದನೆ ಮಾಳ್ವೆನು || ೪ ||

ಅಟಮಟದಿನಾಚರಿಪಧರ್ಮವನೆ ಪರಿಪಡಿಸು |
ದಿಟವನೆ ನುಡಿವ ಧರ್ಮವನೆಯಾಚರಿಸು ಸಂ |
ಕಟವ ಮಾಡುವ ಸಂಸ್ಕೃತಿಗೆ ಪೇಸು ದಯೆಯೆಂಬ ಜಲಧಿಯೊಳ್ ಮೂಡಿಮುಳುಗು ||
ಪಟುವಾಗಿ ಕರ್ಮಭಟನಂ ಜಯಿಸು ಬಯಲ ತಟ |
ಹೊಟದ ಕಾಂಕ್ಷೆಯನೆ ಪರಿಹರಿಸೆಂದು ಪೇಳ್ದ ನಿಃ |
ಕುಟಿಲಮನದುಪದೇಶಕರ ಪದಕೆ ಪಲವು ಸೂಳೆರಗಿ ಪಡೆವೆಂ ಸುಖವನು || ೫ ||

ಏಳು ಭಯಗಳನು ಗೆಲ್ದೇಳು ಋದ್ಧಿಯನು ತಳೆ |
ದೇಳು ತತ್ವಂಗಳಂ ಬಗೆಯೊಳಗೆ ಭಾವಿಸು |
ತ್ತೇಳನೆಯ ನೆಲೆಯಿಂದ ಮೇಲಣ ನೆಲಕ್ಕೆ ಪೋಪುಜ್ಜುಗವನುಜ್ಜುಗಿಸುತ ||
ಏಳು ದಾರುಣಪರಾವರ್ತನಾಬ್ಧಿಯೊಳಾಳು |
ತೇಳಿಸುವ ಘೋರಕರ್ಮಂಗಳಂ ನೆರೆ ಕೆಡಿಸು |
ವೇಳಿಗೆಯ ಪಥದೊಳಾಚರಿಪ ಸಾಧುಗಳ ಪದವೀಗೆ ನಿವೃತ್ತಿಸುಖಪದವನು || ೬ ||

ವಾಣಿ ವೀಣಾಪಾಣಿ ಸಂಸಾರಸಾಗರ |
ದ್ರೋಣಿ ಪರಭೃತವಾಣಿ ಘನದುರಿತವಲ್ಲೀಕೃ |
ಪಾಣಿ ನಿಃಶ್ರೇಯೋದ್ಧಮಾರ್ಗನಿಃಶ್ರೇಣಿಯಂಗಜದಂದಶೂಕವೇಣಿ ||
ಏಣಿಲೋಲವಿಲೋಚನೆಯ ಪೇಣ್ಕುಲಕ್ಕೆ ಕ |
ಟ್ಟಾಣಿ ಕಲ್ಯಾಣಿ ವಾಕ್‌ಶ್ರೇಣಿ ಜಿನಿಮುಖಜನಿತ |
ವಾಣಿ ಶಾಸ್ತ್ರಕ್ಷೋಣಿ ಮಾಣದೆನ್ನೆದೆಯಲ್ಲಿ ನೆಲಸಿ ಸನ್ಮತಿಯೀವುದು || ೭ ||

ವಂದಿಸುವೆ ನಾನು ಮುದದಿಂದ ಗೌತಮ ದೇವ |
ನಂದಿ ಗುಣಭದ್ರ ಜಿನಸೇನರಾವುಳ ಕೊಂಡ |
ಕುಂದ ಭುಜಬಲಿ ಹೇಮದೇವ ಮುನಿಚಂದ್ರ ಪದ್ಮಪ್ರಭ ಮಯೂರಪಿಂಛ ||
ನಂದಿಮಿತ್ರ ಸಮಂತಭದ್ರ ಕೇಶವ ಮಾಘ |
ಣಂದಿಯಕಳಂಕ ವಿಕಳಂಕ ಭದ್ರಬಾಹು ಕುಮು |
ದೇಂದು ಪ್ರಭೇಂದು ಮೊದಲಾದ ಸೂರಿಗಳ ಪದಮಂ ನೆನೆದು ಸುಖಿಯಪ್ಪೆನು || ೮ ||

ಕಲ್ಲಹಳ್ಳಿಯ ಮಹಾಪ್ರಭು ವಿಜಯಭೂವಧೂ |
ವಲ್ಲಭನ ತನುಜಾತ ಜಿನಪದಾಂಬುಜಭೃಂಗ |
ನೆಲ್ಲಕಲೆಯಲ್ಲಿ ಬಲ್ಲಿದನು ಮಂಗರಸ ನಾನೀ ಕೌಮುದೀಕಥೆಯನು ||
ಸಲ್ಲಲಿತಮಪ್ಪ ಸಕ್ಕದದಿ ಪೂರ್ವಾಚಾರ್ಯ |
ರುಲ್ಲಸದಿ ಪೇಳ್ದುದಂ ಕರ್ಣಾಟಕೃತಿಬಂಧ |
ದಲ್ಲಿಯದ್ದಂಡಷಟ್ಪದಮಾಗಿ ವರೆದೆನಿಂತಿದನು ಭವ್ಯರು ಕೇಳ್ವದು || ೯ ||

ತಂಬೆಲರ ಸೋಂಕು ತಕ್ಕರ ಮಾತು ತರುಣಿಯರ |
ಬಿಂಬಾಧರಂಬೀರುವೊಂದುರುಚಿ ಪೂವಿನ ತೊ |
ಡಂಬೆ ಪೀಯೂಚಪಿಂಡಂ ಜೇನಸೋನೆ ಪೊಸಸುಗ್ಗಿ ರಂಜನೆಯ ಹಡೆದಾ ||
ಕೆಂಬಲರ ತೊಡವು ಚಂದನದಣ್ಪು ಸಿರಪಚ್ಚೆ |
ಯೆಂಬಂಬುಜಾಕಾರ ಕೋಗಿಲೆಯ ನವಪಂಚ |
ಮಂಬೊರೆದ ನುಣ್ಚರಂ ಪ್ರಭುರಾಜ ಮಂಗರಸನೊರೆದ ಕೌಮುದಿಯ ಮಾತು || ೧೦ ||

ರಸದಾಳಿಯಂತೆ ರಮಣಿಯರ ಚೆಂದುಟಿಯಂತೆ |
ಪೊಸಜೇನಕೊಡದಂತೆ ಪೊಣ್ಮುವೆಳಜವ್ವನೆಯ |
ರೊಸೆದೀವ ತಾಂಬೂಲದಂತೆ ಕಾದಿಳಿಪಿಯಾರಿದ ಬಟ್ಟವಾಲಿನಂತೆ ||
ಅಸಿಯಳೊಡನಾಟದಂತೆ ಮಾವಿನ ತನಿವಣ್ಣ |
ರಸದಂತೆಯಮೃತದಂತಿತಿರುಚಿಯ ಪಡೆದುದತಿ |
ರಸಿಕನತಿನಿಪುಣ ಮಂಗರಸನೊಪ್ಪುವ ವಾಕ್ಪ್ರಗುಂಫನಂ ಭಾವಿಸಿದೊಡೆ || ೧೧ ||

ಮಗಧದೇಶದ ಮಧ್ಯದೊಳು ರಾಜಗೃಹಮೆಂಬ |
ನಗರಿಯೊಳ್ ಶ್ರೇಣಿಕಮಹಾಮಂಡಲೇಶ್ವರನ |
ನಗೆಗಣ್ಣನೀರೆ ಚೇಳಿನಿಮಹಾಸತಿಗೂಡಿಯರಸುಗೆಯ್ಯುತ್ತಮಿರ್ದು ||
ಅಗಣಿತ ಮಹೀಪಾಲಕರ ಮಧ್ಯದೊಳಗೊಂದು |
ಪಗಲು ಸರ್ವಾವಸರಮೆಂಬೋಲಗಂಗೊಟ್ಟು |
ಸೊಗಯಿಸುತ್ತಿರಲಲ್ಲಿಗೋರ್ವ ವನಪಾಲಕಂ ಬಂದು ಸಾಷ್ಟಾಂಗವೆರಗಿ || ೧೨ ||

ಅರಸ ಚಿತ್ತೈಸು ನಮ್ಮೂರ ಮುಂದಣ ವಿಪುಲ |
ಗಿರಿಯ ಶಿಖರದ ಸಸಿನಕಾಮಹಾವೀರಜಿನ |
ವರನ ರಂಜಿಪ ಸಮವಸರಣಮಾನಾಲ್ದೆರದ ಸುರಸಮಿತಿಯೋಲೈಸುತಾ ||
ಬರಲೊಡನೆ ಕಾಲವಲ್ಲದಕಾಲದಲ್ಲಿ ವನ |
ತರುಗಳೆಲ್ಲಂ ತಳಿರ್ನನೆದೋರೆ ತನಿವಣ್ಣ |
ಧರಿಸಿದುವು ತೆಂಗಾಳಿ ತೀಡಿದುದು ತಾಮರೆಗೊಳಂಗಳೆಲ್ಲಂ ತಿಳಿದುವು || ೧೩ ||

ಸಾರಗದ ಕವಲುಗೊಂಬೇರಿದವು ಸರ್ಪನಾ |
ಸಾರಗದ ಮರಿಗೆ ಮೊಲೆಯೀವ ಪೆಣ್ಬುಲಿವಿಂಡು |
ವಾರಣದ ಮರಿಗೆ ಮೇಹಂ ಕೊಡುವ ಸಿಂಹವೆಳಹುಲ್ಲೆಗಳ ಕೂಡಾಡುವಾ ||
ಸಾರಮೆ ಲುಲಾಯಗಳಿಗುರುಮುದದಿ ಕುಡುಕೀವ |
ವೀರಸಾಳುವ ಪಕ್ಕಿಗಳ್ ಕ್ರೂರತೆಯನು ಬಿ |
ಟ್ಟೋರಣದಿನಿರ್ಪ ಬಿಸವಂದಮಂ ಬಿನ್ನವಿಸೆಬಂದೆ ನಾನವನಿಪಾಲಾ || ೧೪ ||

ಎನೆ ಕೇಳುತೆಳ್ದು ಸಿಂಹಾಸನದಿನೇಳಡಿಯ |
ನನುಮುದದಿ ನಡೆದುದಾದೆಸೆಗೆ ವಂದನೆಯ ಮಾಡಿ |
ವನಪಾಲಕಂಗೆ ವೊಲಿದಂಗಚಿತ್ತವನು ಕೊಟ್ಟಾನಂದಭೇರಿವೊಯ್ಸಿ ||
ವನಿತೇಚೇಳಿನಿಗೂಡಿ ಸಮವಸರಣಕ್ಕೆಯ್ದಿ |
ಜಿನಪತಿಗೆ ಮಣಿದು ಗೌತಮಗಣಧರರ್ಗೆರಗಿ |
ಮನುಜಕೋಷ್ಠದೊಳು ಕುಳ್ಳಿರ್ದು ಕೈಮುಗಿದಿಂತು ಬಿನ್ನಪಂಗೆಯ್ದನಾಗ || ೧೫ ||

ಗುರುಕುಲಲಲಾಮ ಸಮ್ಯಕ್ತ್ವಮುದಯಿಪತೆರದಿ |
ವರಕಥನಮೊಂದಂ ನಿರೂಪಿಸೆಂದೆನಲು ಗಣ |
ಧರರೆಂದರಿಂತು ವಾಯುತ್ರಯಾಧಾರದಿಂ ಕರಯುಗಮನಾಕಟಿಯೊಳು ||
ಧರಿಸಿ ಪಾದಪ್ರಸರದಿಂ ನಿಂದ ನರ್ತಕನ |
ದೊರೆಯೆನಲಕೃತ್ರಿಮದೆ ಲೋಕತ್ರಯಂ ವಿಲಯ |
ವಿರಹಿತಮುಮಾಗಿರ್ಪುದಲ್ಲಿ ಪಲವಬುಧಿಯಿಂ ನಿಡುಪೊಡವಿಯೊಪ್ಪುತಿಹುದು || ೧೬ ||

ಅಂದಿನಿಂದದಿನಸುರಬಾಧೆಯಿಂ ಭೂತಳಕೆ |
ಮುಂದಕೆಯ್ತರಬಾರದೆಂದಾ ವರಾಹನೆ |
ಯ್ತಂದು ಹಸಗೆಯ್ದ ಜಲಖಾತಿಯನೆ ಜಲರಾಶಿಯೆಸೆಯಲಾ ನೆಲದ ನಡುವೆ ||
ಅಂದವಡೆದಾಕಾಶವೆಂದೆಂಬ ಗೂಡಾರ |
ದೊಂದು ಮಿಸುನಿಯ ಕಂಭಮೆಂಬಂತೆ ಕಣ್ಬಗೆಗೆ |
ಬಂದ ಮೇರುವಿನ ಬಲಗಡೆಯಲ್ಲಿ ಭರತಾರ್ಯಖಂಡಮೊಪ್ಪುತ್ತಿರ್ಪುದು || ೧೭ ||

ಅದರೊಳಭಿನವನಾಕದಂತೆಸೆವ ಪೌರಜನ |
ಪದದ ಮಧ್ಯದೊಳು ಮಿಸುಪಮರಾವತಿಯನು ಸಂ |
ಪದದಿಂದ ಗೆಲ್ವ ಮಧುರಾನಗರಿಯಲ್ಲಿಯಮರೇಂದ್ರಸನ್ನಿಭವಿಭವನು ||
ಉದಿನೊಪ್ಪುವುದಿತಾ ಮಹಾದೇವಿಗೂಡಿ ಸಂ |
ಮುದದಿಂ ಸುಬುದ್ಧಿಯೆಂದೆಂಬ ಸಚಿವೋತ್ತಮಂ ಬೆರಸರಸುಗೆಯ್ಯುತಿರಲು || ೧೮ ||

ಹಳಹಳಚನಾದುದಾಶಾವಲಯ ನಭವೆಂಬ |
ಲಲನೆ ಸುರಧನುವೆಂಬ ಬೆಸಕೋಲತುದಿಗೆ |
ತಳತಳಿಪ ವಿದ್ಯುಲ್ಲತೆಯ ತಿರುವನಿಟ್ಟೆಕ್ಕಿದರಲೆಯ ಪುಂಜವೆಂಬ ತೆರದಿ ||
ಹಳಿಹಳಿಯೊಳೇಶ್ವ ಘನತತಿ ಚುಮ್ಮುಚುಮ್ಮೆನು |
ತ್ತಳುರ್ವ ಬಿಸಿಲತಿನಿರ್ಮಲತ್ವಮಂ ತಳೆದು ತೊಳ |
ತೊಳಗುವ ಸುಧಾಂಶುಬಿಂಬಂ ವಿರಾಜಿಸಿದುದಾ ಬಂದ ಶರದಾಗಮದೊಳು || ೧೯ ||

ತತ್ತಿಗಳನೊಡೆದು ಮುರಿಯಂ ಸಾಕಿದುವು ಗಿಳಿಗ |
ಳುತ್ತಮದ ಮೌಕ್ತಿಕದ ಬೀಜಮಂ ಬಿಸಡಿಯೊಳ್ |
ಬಿತ್ತಿದುವು ಮುಗಿಲು ನಳನಳಿಸಿ ನೆರೆ ಬೆಳೆದು ತನಿವಾಲು ತುಂಬಿದ ತೆನೆಯನು ||
ಹೊತ್ತ ಕಳವೆಯ ಹೊಲನ ತಿನಲೆಂದು ವಿಹಗಗಳ |
ಮೊತ್ತಮೆಲ್ಲಂ ಮುಸುಂಕುತ್ತಿರಲ್ ಪಿರಿದು ಸಂ |
ಪತ್ತುವಡೆದುದು ಮೃಗಂಗಳ ಮೈಗಳಾ ಬಂದು ಕಣ್ಗೊಳಿಪ ಕಾರ್ತಿಕದೊಳು || ೨೦ ||

ಮಿಗಿಲಾಗಿ ಕರೆಱವುಗಳ ಮೊಲೆಯೊಳು ಹಾಲು |
ಹಗಲಿರುಳು ಹೆಚ್ಚು ಕುಂದಿಲ್ಲವೆಂಬಂತಾಗೆ |
ಧಗಧಗಿಸಿ ದೇಗುಲಂಗಳೊಳು ದೀಪಾವಳಿ ವಸುಂಧರಾಸತಿಯ ಮೆಯ್ಯಾ ||
ಮಗಿಲು ಹೋಹಂತೆ ಮುಗಿಲೆಂಬ ಕೊಡನಂ ಹಿಡಿದು |
ಗಗನವಧು ಮೀಯಲೆರೆವವೊಲು ಹನಿಹನಿಯೆ ಭೂ |
ಜಗದ ಜನಜಾಲಮೆಲ್ಲಂ ಹರಿಸವಡೆಯೆ ಬಂದಾ ಶರತ್ಕಾಲದಲ್ಲಿ || ೨೧ ||

ಅಲ್ಲಲ್ಲಿ ಗೆಣ್ಣಿಕ್ಕುವಲ್ಲಲ್ಲಿ ಕುರುವನಿಡು |
ವಲ್ಲಲ್ಲಿ ಕದಿರುಗಡೆವಲ್ಲಲ್ಲಿ ಪೂದುಂಬು |
ವಲ್ಲಲ್ಲಿ ಪಾಲ್ದೀವುವಲ್ಲಲ್ಲಿ ಕಾಯಾಗುವಲ್ಲಲ್ಲಿ ಪಣ್ಣಾಗುವ ||
ಅಲ್ಲಲ್ಲಿಯಕ್ಕಿಮುರಿವಲ್ಲಲ್ಲಿ ಕೆಂಪಾಗು |
ವಲ್ಲಲ್ಲಿ ಕುಯ್ಯಲಾಗುವ ಪಲವು ಪೆಸರ್ವಡೆದ |
ನೆಲ್ಲಗದ್ದೆಗಳತಿಮುದಂ ಬಡಿಸಿದುವು ತಮ್ಮನೋವಿದ ಕುಟುಂಬಿಗಳಿಗೆ || ೨೨ ||

ಎಲ್ಲೆಡೆಯೊಳಂ ಬೆಳೆದ ಕಮ್ಮಗಳಮೆಯ ಗದ್ದೆ |
ಯಲ್ಲಿ ಹಣ್ಣಾದ ತೆನೆಯಿಂ ಮತ್ತಮಾಶಾಲಿ |
ಯುಲ್ಲಸಿತಮಪ್ಪ ಕಂಪಿಂಗೆ ತನ್ಮೂಲದೊಳ್ ಕುಳ್ಳಿರ್ದ ಮಧುಕರಾಳಿ ||
ಸಲ್ಲಲಿತವಡೆದುದಾ ಉರ್ವೀಸುದತಿ ಹರ್ಷ |
ದಲ್ಲಿ ಹರಿನೀಲರತ್ನದ ವಿಭೂಷಣವಿಟ್ಟು |
ನಿಲ್ಲದೇ ಪೀತಾಂಬರವನುಟ್ಟಳೋ ಎಂಬ ಪರಿಯನಂಗೀಕರಿಸುತ || ೨೩ ||

ನಳನಳಿಸಿ ಬೆಳೆದ ನವಗಂಧಶಾಲಿವನಕ್ಕೆ |
ತಳಿಗಳಂ ಹೆಣೆವ ಕಪ್ಪಂ ಕೊಡುವೆಸಳಿಕದ |
ಟ್ಟಿಳಿಯನಿಕ್ಕುವ ಬೆಚ್ಚುಗಳನಿರದೆ ನೆಡುವ ಗುಡಿಲಂ ಹೊದಿಸಿ ಹಸಮಾಡುವ |
ಕಳನ ಕೆತ್ತುವ ಮೇಟೆಯಂ ನೆಡುವ ಕುಡುಗೋಲ |
ನುಳಿಯದೇ ಮಸಯಿಸುವ ಗೊಂದಣಂ ಕುಡಿಯರುಗ |
ಳೊಳಗೊಪ್ಪಮಂ ಪಡೆದುದಾ ಬಂದುಬಂಧುರತೆಯಂ ಪಡೆದ ಕಾರ್ತಿಕದೊಳು || ೨೪ ||

ಕಡೆಗಣ್ಣ ಕಾಂತಿ ಮುಂಬರಿದು ನಡೆಮಡಿಯಾಗೆ |
ಕಡುಬೆಳೆದ ಕಳಮೆವೊಲನಂ ನೋಡಲೆಂದೆನುತ |
ಸಡಗರದಿನೆಯ್ದಂದ ಸಿರಿಯನಿದಿರ್ಗೊಂಬೆವೆಂದಾ ಕಳಸಗನ್ನಡಿಯನು ||
ಪಿಡಿದು ನಡೆವಂತೆ ಬೆಳೆಯಂ ಕಾಯಲೆಂದು ಮನ |
ವಿಡಿದು ನೆಲೆಮೊಲೆಯ ನಗೆಮೊಗದ ಪಾಮರಿಯರೊಸೆ |
ದಡಿಯಿಟ್ಟರಂದು ಪಥಿಕಪ್ರತಾನಂ ಪ್ರಮೋದಮನಾಂತು ನೋಡುತಿರಲು || ೨೫ ||

ಅಟ್ಟಳೆಯನಡರಿಯತಿಭರದಿ ಕವಣೆಗೆ ಕಲ್ಲ |
ನಿಟ್ಟು ಕೈವಳೆ ಘಳಿಲ್ಘಳಿಲೆನಲ್ಕಾಗಾಳಿ |
ವಟ್ಟೆಯಿಂ ಗದ್ದೆಗಳ ಸಾಲಿಗೆರಗುವ ರಾಜಕೀರಾರಾವತವನು ||
ಇಟ್ಟು ಪಾರಿಸುವ ನಿಡುದೊಳ ನೀಲಾಳಕದ |
ನಿಟ್ಟೆಸಳಕಣ್ಣ ನಿಬಿಡಸ್ತನದ ನಗೆಮೊಗದ |
ಬಟ್ಟಜವ್ವನದ ಪಾಮರಿಯರಾ ಗದ್ದೆಯೊಳು ಕಣ್ಗೆ ರಂಜಿಸುತಿರ್ದರು || ೨೬ ||

ರಂಗುರಂಜಿಸುವ ರಾಜೀವಕರತಳದ ಕೂ |
ರ್ಮಂಗಳಂ ಗೆಲ್ದ ಪದಯುಗಲದಾವರ್ತದ ಬೆ |
ಡಂಗನಾವರಿಪ ನಾಭಿಯ ತೆರೆಗಳಂ ತೆಗಳ್ವ ವಳಿಯ ನಿರ್ಮಲ ಜಲವನು ||
ಅಂಗೀಕರಿಸಿದ ಲಾವಣ್ಯದರಗಿಳಿಗಳಂ |
ಪಿಂಗದೇ ಸೋವ ಪಾಮರಿಯರಾನನದ ನೇ |
ತ್ರಂಗಗಳಂ ಯಮುನೆಯೆಳೆವಾಳೆಯೆಂದೆರಗಿದುವು ಮೀಂಗುಲಿಯ ಖಗಶಿಶುಗಳು || ೨೭ ||

ಕರಶಾಖೆಯೊಳಗಿಟ್ಟು ಮಿಡಿವ ಮಿಡಿವಿಲ್ಲ ಹೆದೆ |
ಗಿರಿಸಿ ಯೆಸುವಸಿತಮೃತ್ತಿಕೆಯ ಗೋಳಕಂಗಳುರು |
ಭರದಿ ಕಳಮೆಯ ಕಣಿಸಗಳ್ಗೆರಗುವರಗಿಳಿಯ ಕಡೆಗೆ ಕಡುಪಿಂದ ಪಾರಿ ||
ಕರಿಮೆ ಕಣ್ಗೆಸೆದುವಾ ಪಾಮರೀಜನದರುಣ |
ಕರಮೆಂಬ ಕೆಂದಾವರೆಯ ಮಧುವನಿರದುಂಡು |
ಪಿರಿದು ಸೊಕ್ಕೇರಿ ಗಗನಕ್ಕೆ ಪಾರುವ ಮಧುವ್ರತಕಳಭಮೆಂಬ ತೆರದಿ || ೨೮ ||

ಅಂಬರವಧೂಟಿಗಾ ಪಾಮರಿಯಲರ್ಗಣ್ಣ |
ಬೊಣಬೆಗಳ್ ಮನಮೊಸೆದು ಪಾಗುಡವನಟ್ಟಿದಸಿ |
ತಾಂಬರವದೆಂಬಂತೆ ತತ್ಕಳಮೆಗಳ ತೆನೆಯ ಪಾಲುಣಲ್ಕೆಂದೆರಗುವಾ ||
ಕೆಂಬಲ್ಲಪಕ್ಕಿಗಳುಮಂ ಸೋವುತಾ ಕಡೆಯೊ |
ಳಿಂಬಾಗಿ ನಡೆನೋಡಲಂತದರ ಧವಲಾಯ |
ತಾಂಬಕದ ಕಟ್ಟುಕಡೆದಿಳೆಗಿರದೆ ಹರಿದು ಬಾಸಣಿಸಿ ಬಂಧುರಮಾದುವು || ೨೯ ||

ಚೆಂದುಟಿಯ ಕೆಂಪ ತೊಂಡೆಯ ಪಕ್ವಳಪವೆಂದು |
ಬಂದೆರಗಿದಾ ಮುಗ್ಧಶುಕನನೊರ್ವಳ್ ತರುಣಿ |
ಕೆಂದಳದಿ ಪಿಡಿಯೆ ಮಾಣಿಕದ ಗಿಣಿಯಾಗಲದನೀಕ್ಷಿಸಲ್ಕಾ ಕರಾಂಶು ||
ಮಂದೈಸೆ ಮೌಕ್ತಿಕದ ಗಿಳಿ ಮರಿಯಾಗಲಾ |
ಅಂದಮಂ ನಡೆನೋಡೆ ನಟ್ಟನಡುಗಣ್ಣ ಕ |
ಪ್ಪಿಂದೆ ಹರಿನೀಲಮಣಿ ಗಿಳಿಯಾಗೆ ಮಾಯದರಗಿಳಿಯೆಂದು ಬಿಟ್ಟಳಾಗ || ೩೦ ||

ಈ ತೆರದಿ ಬೆಳೆಗಾಯಲಾ ಪಾಮರೀಜನಂ |
ಬೀತು ಬರೆ ಮಳೆಗಾಲವುಡುಗೆ ನೀರೆರಕೆಗಳ |
ನಾ ತಟಾಕಾಳಿ ವನಚರವಿತತಿ ಮಿಗವೇಂಟೆಗೆಂದು ಸಂಭ್ರಮಗೊಳುತಿರೆ ||
ಆ ತಪಸ್ವಿಗಳಲ್ಲಿ ಸೂಸುತಿರೆ ಕೈಯಿಕ್ಕಿ |
ಭೂತಳದೊಳನುಮಾತ್ರ ಶೀತ ಋತುವಂಕುರಿಸೆ |
ಕಾತರದಿ ವಿಟವಿಟೀಜನವೆಲ್ಲವಾಲಿಂಗನಕ್ಕೆ ಮನವಿಕ್ಕುತಿರಲು || ೩೧ ||

ಕಾರ್ತಿಕದ ಪುಣ್ಣಮಿಯೊಳಾ ವರ್ಷವರ್ಷಕ್ಕೆ |
ವರ್ತಿಸುವ ಕೌಮುದೀಪರ್ವ ಬರಲಾಯಿಳಾ |
ಭರ್ತಾರಕಂ ತಳಾರರ ಮುಖದಿ ತನ್ನ ರಾಣೀವಾಸಮೆಲ್ಲ ಸಹಿತ ||
ಅರ್ತಿಯಿಂ ಬೆಲೆವೆಣ್ಣ ಬಿಡುವೆಣ್ಣ ಮನೆವೆಣ್ಣ |
ತೊಳ್ತುವೆಣ್ಗಳೊಳೊರ್ವರುಳಿಯದಂತಾ ಹಗಲ |
ಹೊತ್ತುಹೋಗದ ಮುನ್ನಮಾ ನಗರಿಯಿಂದ ನಂದನವನಕೆ ಕಳುಹಿಸಿದನು || ೩೨ ||

ಇನಿಸಗಲಿಕೊಡಲದು ಸೊಗಸಪ್ಪುದೆನುತ ನ |
ಮ್ಮಿನಿಯರೊಳ್ ನಾವಗಲ್ದ ಸುಸಂಧಿಯಂ ಕಂಡು |
ನೆನೆಗಣೆಯಗಾಳಾಗಿ ನಮಗನುವರದ ಮಾಡದೇ ಮಾಣವಿಂತಿವೆನುತ ||
ಬನದ ಶುಕಪಿಕಶಿಳೀಮುಖ ಸಂತತಿಯ ಮೇಲೆ |
ಮುನಿದು ದಂಡೆತ್ತಿ ನಡೆವಂದದಿಂದಾ ನಗರ |
ವನಿತೆಯರ ಬಲಗೂಡಿ ನರನಾಥನರಸಿ ನಂದನವನಕೆ ನಡೆತಂದಳು || ೩೩ ||

ಪೀಲಿದುರುಬಿನ ಪಿಂಡು ತುಂಬಿಗುರುಳೋಳಿಯ ವಿ |
ಶಾಲ ವಿಷರುಹ ವಿಲೋಚನದ ದಾಡಿಮದಂತ |
ದಾಲವಣ್ದುಟಿಯ ಪಲ್ಲವಗಂಡಮಂಡಲದ ಮಲ್ಲಿಕಾನಿಭಗಂಧದಾ ||
ನಾಳಿಕೇರೋಪಮಸ್ತನಯುಗದ ಮದಕೋಕಿ |
ಲಾಲಾಪದೆಳವಾಳೆದೊಡೆಯ ಸರಸಿರುಹಾಂಘ್ರಿ |
ಯಾಲತಾಂಗಿಯರಾ ಬನಂಬನಕೆ ಬಿರ್ದು ನಡೆವಂದದಿಂ ನಡೆಯಲಾಗ || ೩೪ ||

ನಾನಾದಿಯಾಗಿ ಈ ಜಾತ್ರ ಮುಗಿವನ್ನೆವರ |
ಮೀ ನಗರಿಯಂಗನಾಜನಮಿರ್ದ ನಂದನಕೆ |
ನಾನೇ ಸಲುಗೆವಂತನೆಂದಾವನೊರ್ವನೆಯ್ದಿದೊಡವಂ ದ್ರೋಹಿಯೆಂದು ||
ಆ ನಗರಿಯಲ್ಲಿ ಎಡೆವಿಡದೆ ನೆರೆ ತೀವಿದ ಜ |
ನಾನೀಕಮೆಲ್ಲವುಂ ಕೇಳ್ವಮಾಳ್ಕೆಯೊಳಾ ಮ |
ಹೀನಾಥನಾಪುರದ ಕೇರಿಕೇರಿಯೊಳು ಡಂಗುರವೊಯ್ಸಿ ಸಾರಿಸಿದನು || ೩೫ ||

ಅರಸುತನಕತಿ ಹಾನಿಯಾವುದಾಜ್ಞಾಭಂಗ |
ನಿರುತಮೆಂದಾ ಜನಂ ಬನದತ್ತ ಪೋಗಲಂ |
ಜಿರಲತ್ತ ವನಲಕ್ಷ್ಮಿ ಬಹುರೂಪವಡೆದಂತೆ ಪುರಪುರಂಧ್ರಿಯರು ಕೂಡಿ ||
ವರಗೀತವಾದ್ಯನರ್ತನಮಾದಿಯಾದ ಬಂ |
ಧುರಗೋಷ್ಠಿಯೊಳ್ ಕೌಮುದೀಪರ್ವ ಮುಗಿವನ್ನೆ |
ವರ ಸುಖದಿನಿರಲಪರದಿಗ್ವಧುವ ಕುಂಕುಮಲಲಾಮಮಾಯ್ತಿನಬಿಂಬವು || ೩೬ ||

ಪಜ್ಜಳಿಸೆ ಪಡುಗೆಂಪು ಪಕ್ಕಿ ಪಕ್ಕೆಗೆ ಸಾರೆ |
ಜಜ್ಜರಿಯೆ ಜಕ್ಕವಕ್ಕಿಯ ಜೋಡು ಸರಸಿಜಂ |
ಸಜ್ಜುಕಗಳಾಗೆ ಉರ್ವೀತಳದೊಳುರಿಯಾರೆ ಬಂಧಕೀಜನದೊಡಲೊಳು ||
ಒಜ್ಜರಿಸೆ ರಾಗರಸ ಸಂಜೆವರೆಗಳ್ ಸಾರೆ |
ಕಜ್ಜಳಂ ತೊಡೆದ ತೆರನಾಗೆ ನಭಮಾಪಗಲ |
ಪಜ್ಜೆಪಱೆಪಡೆ ಪಶ್ಚಿಮಾಂಬುಧಿಯ ನಡುಮಡುವ ಹೊಕ್ಕನಾಪಗಲೊಡೆಯನು || ೩೭ ||

ಅಮರಲೋಕಾಧೀಶನಾರೋಗಿಸುವುದಕೆನು |
ತಮೃತಶರನಿಧಿಯಲ್ಲಿ ಮೊಗೆದಮರದಿಗ್ವನಿತೆ |
ಯಮರಲೋಕಕ್ಕೆ ಕೊಂಡೊಯ್ವೆನೆಂದೊಸೆದು ತನ್ನುತ್ತಮಾಂಗದೊಳು ಹೊತ್ತಾ ||
ಅಮೃತಘಟಮೋ ಅನನ್ಯಜನಲ್ಲಿ ಮೂಡುವುದು |
ಸಮಿತಿಯೆಂದೆಳೆಮುತ್ತಿನಕ್ಷತೆಯನಿಟ್ಟು ಸಂ |
ಭ್ರಮದಿ ಪೂಜಿಪ ಮಲ್ಲಿಕಾಲಿಂಗಮೋ ಎನಲ್ ಚಂದ್ರನುದಯಂಗೆಯ್ದನು || ೩೮ ||

ವಿರಹಿಜನದೆರ್ದೆಯ ಲಗ್ಗೆಯನಿಡುವ ಮನಸಿಜನ |
ಕರದ ಮೌಕ್ತಿಕದ ಸೆಂಡೊ ವಿಯೋಗಿಗಳ ಶಿರವ |
ಹರಿಯಿಡುವ ಕಾವನಾಕಯ್ಯಚಕ್ರವೊ ಓಪರನಗಲ್ದ ನಾರಿಯರನು ||
ಭರದಿನೆಸುವಂಗಜನ ಕುಂಡಲಿತ ಕಾರ್ಮುಕವೊ |
ಹರನೊಡನೆ ಸೂಡಕಾದುವೆನೆಂದು ಪಲ್ಲಟಿಸು |
ವರಲಸರನೆಡಗಯ್ಯ ವಜ್ರಖೇಟಕವೊ ಥಳಥಳಿಪ ಸಂಪೂರ್ಣಶಶಿಯೋ || ೩೯ ||

ಎಸಳ್ಗೆದರ್ದುತ್ಪಲಾವಳಿ ಚಂದ್ರಕಾಂತ ಶಿಲೆ |
ಯೊಸರ್ದುವಂಭೋರುಹ ದಳಂಗಳುಡುಗಿದುವು ಸಂ |
ತಸವಡೆದುವಾ ಚಕೋರಪ್ರತತಿ ತಾರಗೆಯ ಬೆಳಗು ನಸುಬಲವಾದುದು ||
ಉಸಿರಿಗುಬ್ಬಸವಾದುದಾ ವಿಯೋಗಿಜನಕ್ಕೆ |
ದೆಸೆದೆಸೆಗಳೆಲ್ಲ ಚಂದನಚರ್ಚೆಯಿಂದ ಸಾ |
ರಿಸಿದಂತುಟಾಯ್ತು ನಲವೇರಿದುದು ಸಸ್ಯಾಳಿಯಾ ಶಶಾಂಕೋದಯದೊಳು || ೪೦ ||

ಆ ತುಂಬುವೆರೆಯ ತಿಳಿವೆಳಗು ವಿರಹಿವ್ರಜಕೆ |
ಮಾತೇನವಸ್ಥೆಯಂ ಮಾಡುತಿರಲಾಗಿ ತ |
ದ್ಭೂತಳಾಧೀಶನರ್ಧಾಂಗಿ ತನ್ನಂ ತೊಲಗಿ ಪೊರವೊಳಲ ಬನದೊಳಿರಲು ||
ಕಾತರಂ ತನಗೆ ಪಿರಿದಾಗಿ ಸಂಜನಿಸಲ |
ತ್ಯಾತುರದಿನಲ್ಲಿಗೆಯ್ದುವೆನೆಂದು ಪೊರಮಡಲ್ |
ನೀತಿವಿದನುತಮಗುಣಾನ್ವಿತ ಸುಬುದ್ಧಿಮಂತ್ರೀಶನಿಂತೆಂದನಾಗ || ೪೧ ||

ಓಜೆಯಲ್ಲಿದು ನಿನಗೆ ನಿನ್ನನುಜ್ಞೆಯೊಳಗೀ |
ರಾಜಧಾನಿಯೊಳುಳ್ಳ ಮಂಡಳಿಕಸಾಮಂತ |
ರಾಜಾಧಿರಾಜದುರ್ಗಾಧೀಶದಂಡನಾಥಾದಿ ರಾಜಕುಮಾರರ ||
ತೇಜಿಷ್ಟರತಿರಥಮಹಾರಥರ ಸಭಟರ ಸ |
ತೀಜನರ ನೆರೆದಿರ್ದ ನೆಲೆಗೆ ನೀನೊರ್ವನೇ |
ರಾಜನೀತಿಯ ಮೀರಿ ಪೋಗಲಪಕೀರ್ತಿಯಹುದದರಿಂದ ಭೂಮಿಪಾಲಾ || ೪೨ ||

ರತಿರೂಪನಚ್ಚೊತ್ತಿದಂತೆ ಸೊಗಯಿಸುವ ಪುರ |
ಸತಿಯರುಂಟವರ ನೋಡಿದರೆ ಮೇಲಿಕ್ಕುವುದು |
ಮತಿಯದರಿನತಿಪಾಪಮಪ್ಪುದಥವಾ ಮೀರಿ ಸಜ್ಜನಿಕೆಯಂ ಮೆರೆದೊಡೆ ||
ಕ್ಷಿತಿಪ ಕೇಳ್ ಪೊಲನ ಪೊಕ್ಕಾ ಸುರಭಿಯಾ ಪೊಲನ |
ನತಿಕೇಟು ಮಾಡದೆ ಇರದೆಂಬರದರಂತೆ |
ಸತಿಯೆಡೆಗೆ ಪೋದ ನರಪತಿಯನ್ಯಸತಿಯರಾಸೆಗೆ ಪೋದನೆಂದೆಂಬರು || ೪೩ ||

ಅದು ಕಾರಣದಿಯವನಿಪತಿ ನಿನ್ನ ಪುರಜನದ |
ಹೃದಯದೊಳಗತ್ಯಂತ ಸಂಶಯಂ ಸಂಜನಿಸಿ |
ಸುದತಿಯರ ಹರಿಬವೇ ಹರಿಬಮವನೀಮಂಡಲದೊಳು ಜೀವಿಪ ನರರಿಗೆ ||
ಅದುವೆ ನಿಶ್ಚಯವೆಂದು ತಮ್ಮ ಕೇಡಿಂಗೆ ತಾ |
ವೆದೆ ದುಡುಕುಗೊಳ್ಳದೆ ಕಟ್ಟೊಡೆಯನಿವನೆಂದು |
ಬೆದರದೆ ಬಂದುದಂ ಕಾಣ್ಬೆವಾವೆಂದು ಕೆಟ್ಟೆಣಿಸದಿರದಾ ಲೋಕವು || ೪೪ ||

ಹೆಚ್ಚಿದುದು ನಿನ್ನ ರಾಣುವೆಯದರಿನವರೊಳಗೆ |
ಮಚ್ಚರವ ಮಾಡಬೇಡೆಂಬುದನೆ ಬಿಟ್ಟು ನಿ |
ನ್ನಿಚ್ಚೆಗತನದಿ ಬಣ್ಣವಣ್ಣಿಗೆಯ ಮಾತನಾಡುವುದು ನನಗಾದುದಿಲ್ಲ ||
ಮುಚ್ಚುಮರೆಯೇಕೆ ನಿನ್ನ ದುರಾಗ್ರಹದಿಂದಲಿ |
ವೊಚ್ಚತಂ ನಿನ್ನರಸುತನಕೆ ಕೇಡಹುದು ಪಡಿ |
ಪುಚ್ಚವೇಕಿದಕೆಯದರಿಂದ ನೃಪನೀತಿಯಂ ಮೀರಬೇಡವನಿಪಾಲಾ || ೪೫ ||

ಎನಲೆಂದನಾ ಪ್ರಧಾನಿಯ ಕೂಡಿ ಭೂಮಿಪತಿ |
ವನಗಜಂಗಳನಲ್ಲಕಲ್ಲೋಲಮಂ ಮಾಡಿ |
ತನಗೆ ತಾನೇ ಮೃಗಾಧಿಪ ಪಟ್ಟವಂ ಕಟ್ಟಿಕೊಂಡ ಪಂಚಾಸ್ಯದೊಡನೆ ||
ಮುನಿದು ಬಹು ಮೃಗವೇನಮಾಡುವುವೆನಲ್ ಮಹೀ |
ವನಿತೇಶನಿಂತೆಂದನಾ ಸಚಿವನತಿಸೂಕ್ಷ್ಮ |
ವೆನಿಸಿದಿರುಪೆಗಳು ಪಲವುಂ ಕೂಡಿ ಸುತ್ತಿ ಫಳಿಪತಿಯ ಜೀವಂಗೊಳ್ಳವೇ || ೪೬ ||

ಅರಸ ಕೇಳದರಿಂದ ಬಹುಜನ ವಿರೋಧಮಂ |
ಪರಿಹರಿಸಲಾರ್ಗಮಳವಲ್ಲವೆನಲಿಂತೆಂದ |
ವರಮಂತ್ರಿ ಕೇಳೊರ್ವ ವಂದ್ರಮನ ಕಾಂತಿ ಹಲವುಂ ತಾರಗೆಯ ಬೆಳಗನು ||
ಹರಿಯಿಸುವ ತೆರದಿ ತಮ್ಮಾ ಬೆಳಗಿನಿಂದ ಶಶಿ |
ಕಿರಣಮಂ ಪರಿಪಡಿಸಬಲ್ಲವೇ ಆದುದರಿಂದ |
ಪುರದ ಪುಲ್ಮಾನಿಸರ್ ಮುನಿದು ನನ್ನಂ ಕೆಡಿಸಲಾರ್ಪರೇ ಎನಲೆಂದನು || ೪೭ ||

ಅರಸ ಕೇಳ್ ನಿನ್ನಂದುದಹುದು ಹಲವುಂ ಹುಲ್ಲ |
ಹುರಿಗೂಡಿ ಹಗ್ಗಮಂ ಮಾಡಲದು ಗಿರಿವರಕೆ |
ಸರಿಯೆನಿಪ ಮದಗಜೇಂದ್ರನ ಕಾಲ ಬಂಧನಂ ಮಾಡದೇ ಸುಮ್ಮನಿಹುದೆ ||
ಪುರಜನಗಳೆಲ್ಲ ಮುನಿದೊಡೆ ಮಹೀಶಗೆ ಶಕ್ತಿ |
ಯಿರದದನು ಬಲ್ಲೆ ನೀನೇ ಎನಲ್ ಕಿರುಕುಚ್ಚು |
ಹರಿವರಿಯ ಬಿಂಜದಡವಿಯ ನಿಮಿಸದೊಳ್ ದಾಮದೂಮಮಂ ಮಾಡದಿಹುದೆ || ೪೮ ||

ಎಂದು ನರಪತಿ ತನ್ನ ಭುಜಬಲವನೇ ನುಡಿಯು |
ತೊಂದಿನಿಸು ನೃಪನೀತಿಯಂ ಕೇಳದಿರಲು ಮನ |
ನೊಂದು ಮಂತ್ರೀಶನಿಂತೆಂದನು ವಿನಾಶಕಾಲಕ್ಕೆ ವಿಪರೀತ ಬುದ್ಧಿ ||
ಮುಂದುವಿಡಿದಿಹುದದೆಂತೆನೆ ಹೊಮ್ಮಿಗಂ ಕಪಟ |
ಮೆಂದದಂ ಬಾವಿಸದೆ ಬೆನ್ನಟ್ಟಿ ಪೋಗಿ ರಘು |
ನಂದನಂ ಹಾನಿವಡೆಯಿತ್ತಿಲ್ಲವೇ ಎಂದು ಮತ್ತಮಿಂತೆಂದನಾಗ || ೪೯ ||

ಇದರಿಂದ ತಪ್ಪದಹುದರಸುತನಕತಿ ಹಾನಿ |
ಇದನು ನೀನೇ ಬಲ್ಲೆ ಇದಿರಿಟ್ಟು ಮಾತಾಡಿ |
ಬೆದರಿಸುವೆ ನನ್ನನೆನಬೇಡ ಮುನ್ನೊಬ್ಬರಸು ಬಹುಜನ ವಿರೋಧದಿಂದ ||
ಒದವಿದೈಸಿರಿಯ ನೀಗಾಡಿ ದೇಸಿಗನಾದ |
ಹದನುಮೀನಾಡೊಳಗೆ ಜನಜನಿತಮೆನೆ ಕೇಳಿ |
ಯದರ ಕಥನವನು ಪೇಳೆನೆ ಪೇಳ್ದನಾ ಸಚಿವನಾ ಮಹೀಪತಿಯೊಳಿಂತು || ೫೦ ||

ಶುದ್ಧಚಿತ್ತಂ ಸುಜನವಿನುತಪ್ರದಾನವಂ |
ಶೋದ್ಧಾರಕಂ ಪ್ರಚುರಗುಣಭೋಷಕಂ ಬುದ್ಧಿ |
ವೃದ್ಧಂ ಸುಬುದ್ಧಿ ಸಚಿವೋತ್ತಮಂ ನುಡಿದ ನುಡಿಗೇಳಿಯಾಲಿಸುತಿರ್ದನು ||
ಉದ್ಧತನಿರೋಧಿನಿಕುರುಂಬಕೋಳಾಹಳ ಸ |
ಮೃದ್ಧಪ್ರತಾಪಿ ಪರಿವೃಢಕುಲಲಲಾಮಂ ಪ್ರ |
ಸಿದ್ಧನುದಿತೋದಯಮಹೀಶ್ವರಂ ಜಿನಸಮಯವಾರ್ಧಿವರ್ಧನಚಂದ್ರನು || ೫೧ ||

ಇದು ವಿಭುಧಜನವಿನುತಮಿದು ವಿಭುಧಜನವಿನತ |
ಮಿದು ವಿದಿತ ಜಿವಸಮಯಶರಧಿಸಂಪೂಣೇಂದು |
ಸದಮಲಚರಿತ್ರ ಚೆಂಗಾಳ್ವಭೂವರನ ಸಚಿವಾನ್ವಯಾಂಬರಹಂಸನು ||
ಮದನಸಮರೂಪನುತ್ತಮಗುಣಕರಂಡಕಂ |
ಚದುರ ಮಂಗರಸನುಸುರಿದ ಕೌಮುದೀಕಥೆಯೊ |
ಳೊದವಿದುದು ಸಚಿವಕುಲತಿಲಕನುತ್ತಮನೀತಿವಚನ ತಾನೊಂದು ಸಂಧಿ || ೫೨ ||

ಅಂತು ಸಂಧಿ ೧ ಕ್ಕಂ ಪದನು ೫೨ ಕ್ಕಂ ಮಂಗಳ ಮಹಾ