ಬಿನ್ನಪ ಮಹೀಪಾಲ ನಾನೀ ನಗರಿಯೊಳಗೆ |
ಕನ್ನಗಳ್ಳರನರಸಿ ಕೇರಿಕೇರಿಯೊಳೆಯ್ದು |
ವನ್ನೆವರಮೊಂದಂಗಡಿಯ ಮುಂದೆ ನೆರೆದ ಪುರಜನವೆಲ್ಲ ಕೇಳುವಂತೆ ||
ಬಿನ್ನಣದಿನೊರ್ವನೊಂದಾನೊಂದು ಕಥೆವೇಳೆ |
ಚೆನ್ನಾಗಿ ಕೇಳುತಿರಲದುಕಾರಣದಿ ಕಳ್ಳ |
ರನ್ನಾನು ತರ್ಪುದುಂ ಮರೆದೆನೆನಲಾ ಕಥೆಯನುಸಿರೆನಲ್ಪೇಳ್ದನಿಂತು || ೭೧ ||

ಮಾನಿತಂಬಡೆದವಂತೀವಿಷಯದಲ್ಲಿ ಉ |
ಜ್ಜೈನಿಯೆಂದೆಂಬ ಪೊಳಲೊಳ್ ಯಶೋಭದ್ರನೆಂ |
ಬಾ ನಾಮವಡೆದ ವೈಶ್ಯಂ ಸುಖದಿನಿರ್ದೊಂದು ದಿನ ಪರದುಗೆಯ್ವೆನೆಂದು ||
ಸಾನಂದದಿಂ ತನ್ನ ತಾಯ ಕರೆದೆಲೆ ಜನನಿ |
ಈ ನಿನ್ನ ಸೊಸೆಯರಂ ನೆರೆ ರಕ್ಷಿಸೆಂದೆನುತ |
ನೂನಶುಭಲಗ್ನದೊಳ್ ಪೊರಮಟ್ಟು ಪೊರವೊಳಲ ಬನದಲ್ಲಿ ಬಿಟ್ಟು ಬಳಿಕ || ೭೨ ||

ಮನೆಯೊಳ್ಮೊದಲ್ಮರೆದು ಬಂದುಂಗುರವನಿರುಳು |
ನೆನೆದೊರ್ವನೇ ಬಿಟ್ಟ ಬೀಡಿನಿಂ ಪುರಕೆಯ್ದಿ |
ಮನೆಯ ಬಾಗಿಲ್ಗೆ ಬಂದಾದ್ವಾರಬಂಧುಮಿಕ್ಕಿರ್ದುದನೆ ಕಂಡು ಬಳಿಕ ||
ಜನನಿ ಜನನೀ ಕದವ ತೆಗೆಯೆಂದು ಕೂಗಿ ಕರೆ |
ವನಿತರೊಳಗವಳೊರ್ವ ಪಾಣ್ಬನೊಡಗೂಡಿಯಾ |
ಮನೆಯಂಗಣದೊಳು ಬೆಳೆದವುಡಲದ ಕಾಪಿನೊಳ್ ತಾಂ ಕ್ರೀಡಿಸುತ್ತಮಿರ್ದು || ೭೩ ||

ಮುಗಿಲ ದನಿಯಂ ಕೇಳ್ದ ಮುದಿಹಂಸೆಯಂತೆಯಾ |
ಮಗನ ದನಿಯಂ ಕೇಳಿ ಕೈಯ ನೆಟ್ಟಿಯ ಮುರಿದು |
ಮಿಗೆ ಬೆದರುತೇವೆನೆಂದೆನುತ ಪಾಣ್ಬನನೊಂದು ಗೊಂದಿಯೊಳಗಿರಿಸಿ ಬಳಿಕ ||
ತೆಗೆಯಲಾ ಕದವನೊಳಹೊಕ್ಕು ಬೆದರುವ ತಾಯ |
ಮೊಗ ನೋಡಿ ಸಂದೇಹಮಂ ಮಾಡಿಯಂಗಣವ |
ಹೊಗುವಾಗಲಾ ಮರದ ಮೇಲಿರ್ದ ಹಚ್ಚಡವನೀಕ್ಷಿಸುತ್ತಿಂತೆಂದನು || ೭೪ ||

ಮನೆಯ ಬಾಗಿಲು ಬೀಯಗದ ಕಾಪನೆಲ್ಲಮಂ |
ಜನನಿ ಜನತನಂಮಾಡಿಕೊಂಡಿರಲ್ವೇಳಿ ನಾಂ |
ಮನನಿರ್ಮಳದಿ ಪರದುಗೆಯ್ಯೆ ಪರದೇಶಕ್ಕೆ ಪೋಪುದಿದು ಹಸನಾದುದು ||
ಜನಪನಾರಡಿಯನಾನೆಯದೊಂದು ತೊಂಡ ಗುರು |
ವಿನದುರಾಚಾರಮಂ ಮಾಣಿಸಲ್ಬಲ್ಲರೇ |
ಮನೆಯೊಡತಿ ಕಳುವ ಕಳವ ಮಾಣಿಸಲ್ಬರ್ಪುದೇ ಎಂದೆಣಿಸುತಿರ್ಪಾಗಳು || ೭೫ ||

ಮುಂದೊಂದು ಮುದಿಸೊಣಗನಾ ಮುಗ್ಗಿದೊಡೆ ಬದುಕ |
ದಂದದ ಬಡವು ಹುಳಿತ ಹುಣ್ಣಾವರಿಸಿದಂಗ |
ವೊಂದು ಕಣ್ಣೊಂದು ಕಾಲ್ಕುಂಟು ಹರಿಗಿವಿ ಮೊಂಡುಬಾಲ ಕೊರಲೊ ಸಿಕ್ಕಿದ ||
ಒಂದು ಬಾಯೊಡೆದುದಂ ನೋಡದೇ ತನ್ನ ಮುಂ |
ದೊಂದು ಸುನಿಸುಳಿಯೆ ಕಾಮಾತುರದಿ ತಾನದರ |
ಪಿಂದೆ ಪೋಗಲ್ಕಂಡು ಮನಸಿಜನ ಗೊಡ್ಡವಲ್ಲಾ ಎನುತ ಪೋದನಾಗ || ೭೬ ||

ಎಂದುಸಿರ್ವ ಕಥೆಯ ಕೇಳುತ ಕಳ್ಳರಂ ತಹುದ |
ನಿಂದು ನಾ ಮರೆದೆನೆನಲಾ ನಾಳಿನುದಯಕ್ಕೆ ನೀಂ |
ತಂದೀವುದೆಂದು ಬೀಳ್ಕೊಟ್ಟು ಮನೆಗೆಯ್ದುಯಾರಾತ್ರೆಯಂ ಕಳಿದು ಬಳಿಕಾ ||
ಬಂದು ಮರುವಗಲುದಯದಲ್ಲಿ ಯಮದಂಡನಂ |
ಮುಂದೇತರಕ್ರೋಧದಿಂ ಕರಸಿ ಕಳ್ಳರಂ |
ತಂದೆಯಾ ಎಂದು ಕೇಳಲ್ಕವಂ ಕರಯುಗಳವಂ ಮುಗಿಯುತಿಂತೆಂದನು || ೭೭ ||

ಅರಸ ಕೇಳೆಂದಿನಂದದಿನೊಂದು ಕಥೆಯನಾ |
ದರದಿನೀ ನಗರಿಯೊಳ್ಕೇಳ್ವ ಕಾರಣದಿ ತ |
ಸ್ಕರನರಸುವುದುಳಿಯಿತೆನಲು ನೀಂ ಕೇಳ್ದ ಕಥೆಯಂ ಪೇಳೆನಲ್ಕೆಂದನು ||
ಪಿರಿದು ರಂಜನೆವಡೆದ ಪಾಟಲೀಪುತ್ರಪುರ |
ವರದೊಳ್ ಸುಭದ್ರನೆಂದೆಂಬ ಭೂಪಾಲಕಂ |
ಹರಿಸದಿಂದೊಂದುದಿನದುದಯದೊಳು ತತ್ಪುರದ ನಂದನಜೆ ಪೋಗಲಾಗ || ೭೮ ||

ವನಪಾಲಕಂ ಕಂಡು ಕರಯುಗಳಮಂ ಮುಗಿದು |
ಮನುಜೇಶ ಕೇಳು ನಿನ್ನೀ ನಂದನದೊಳು ಬೆಳೆ |
ದಿನಿಮಾವುನೇರಿಲೆಳನೀರ್ನಿಂಬೆಖರ್ಜೂರಕದಳಿದಾಡಿಮಮಾದಲಾ ||
ಪಲಸಫಲಗಳನೆಲ್ಲವಂ ತಾಳಭೂರುಹದ |
ಕೊನೆಯ ಕಳ್ಳಂ ಕುಡಿದು ಕಡುಸೊಕ್ಕಿನಿಂ ಬಾಲ |
ವನಚರವಿತನಾಮೆಲ್ಲಂ ತಿಂದು ಕೆಡಿಸುತಿವೆಯೆಂಬ ಮಾತಂ ಕೇಳ್ದನು || ೭೯ ||

ಮನೆಯೊಳಗೆ ಕಟ್ಟಿರ್ದುದೊಂದು ಮುದಿಗೋಡಗನಂ |
ಬನಕೆ ಹಿಡಿತರಿಸಿ ಎಲವೋ ವೃದ್ಧ ಬಲಿಮುಖಾ |
ಬನವನರೆಮಾಡುವೀ ದುಷ್ಟಮರ್ಕಟತತಿಗೆ ಬುದ್ಧಿಯಂ ಹೇಳಿಕೊಂಡು |
ಬನಕೊಡೆಯನಾಗಿ ರಕ್ಷಿಸಿಕೊಂಡಿರೆಂದದಂ |
ಬನದೊಳಗೆ ಬಿಡಲವೆಲ್ಲವು ಕೂಡಿಕೊಂಡು ತ |
ದ್ವನಮನೆಲ್ಲವನು ಲಯಮಾಡಲಾ ವನಪಾಲಕನಿಂತೆಂದು ನುಡಿದನಾಗ || ೮೦ ||

ಅವಿವೇಕಮನೃತಮತ್ಯಂತಾಗ್ರಹಂ ಕುಹಕ |
ಮವಿಚಾರಮಪ್ರಬುದ್ಧಿಕೆಯನ್ನೆಯಂ |
ಕುಟಿಲಮವಿನೀತಮತಿಮೂರ್ಖತನಮೆಂಬಿವುರ್ವೀಶ್ವರರ್ಗೆ ಸಂಜನಿತಮಾಗೆ ||
ಅವನಿಯೊಳಗರ್ಬರ್ದುಂಕುವರೆಂದು ಚಿಂತಿಸು |
ತ್ತವನು ಪೋಗುತ್ತಿರ್ದನೆಂಬ ಕಥೆಯಂ ಕೇಳಿ |
ಯವನಿಪತಿಯಾ ಕಳ್ಳರಂ ತಹುದ ಮರೆದೆನೆನೆ ಮನೆಗೆ ಬೀಳ್ಕೊಟ್ಟನಾಗ || ೮೧ ||

ಬಳಿಕುದಯಮಾಗಲೊಡನೋಲಗಕ್ಕೆಯ್ತಂದು |
ತಳುವದವನಂ ಕರಸಿ ಎಲವೊ ಯಮದಂಡ ನೀ |
ಕಳವುಸಹಿತಾ ಕಳ್ಳರಂ ತಂದುಕೊಡುವೆನೆಂದೆಮ್ಮೊಳಗೆ ಹುಸಿಮಾತನು ||
ಗಳಪಿದೆಯಲಾ ಎನಲ್ಕೆಂದನೆಲೆ ದೇವ ನಿ |
ನ್ನೊಳಗೆ ಹುಸಿವೊಡೆ ನನಗೆ ತಲೆಯೆರಡೆ ನಾಂ ನಮ್ಮ |
ಪೊಳಲಂಗಡಿಯೊಳೊಂದು ಕಥೆಯನೊರ್ವಂ ಪೇಳುತಿರ್ದನದು ಕಾರಣದೊಳು || ೮೨ ||

ಅರಸ ಕೇಳ್ತಂದುದಿಲ್ಲೆನೆ ತತ್ಕಥೆಯನು ಬಿ |
ತ್ತರಿಸಿ ಪೇಳೆನಲೆಂದನಾ ತಳಾರಂ ಮಹೀ |
ವರನೆ ಚಿತ್ತೈಸು ಪಾಟಲಿಯೆಂಬ ನಗರಿಯೊಳು ವಸುಪಾಲನೆಂಬ ನೃಪತಿ ||
ವರಸಚಿವ ಭಾರತೀಭೂಷಣಂ ಕೂಡಿ ಸು |
ಸ್ಥಿರನಾಗಿಯರಸುಗೆಯ್ಯುತ್ತಿರ್ದುಮೊಂದು ಪಗ |
ಲುರುಮುದದಿ ತಾಮಿರ್ವರುಂ ಕವಿಗಳಾದಕಾರಣದಿನಾ ಭೂಪಾಲನು || ೮೩ ||

ಮುದದಿಂದ ತಾನೊಂದು ಕೃತಿಬಂಧಮಂ ಮಾಡ |
ಲದನು ತದ್ಭಾರತೀಭೂಷಣಂ ದೇವ ಕೇ |
ಳಿದರೊಳಗೆ ತಪ್ಪುಂಟೆನುತ್ತದಂ ತೋರಲಂತದಂ ಕೇಳಿ ಭೂಪಾಲನು ||
ಒದವಿದ ದುರಾಗ್ರಹದಿನೀ ಸಚಿವನೆನ್ನಿಂದ |
ಚದುರನಾದನಲಾ ಎನುತ್ತ ಕಡುಮಚ್ಚರದಿ |
ನಿದರೊಳಗೆ ತಪ್ಪುಂಟೆನಲ್ಬಹುದೆಯೆಂದವನ ಕೈಕಾಲು ಬಿಗಿದು ಕಟ್ಟಿ || ೮೪ ||

ಹರಿವ ಹೊಳೆಯೊಳ್ ಬಿಡಿಸಲಾ ದೈವವಶದಿನವ |
ನುರುಳ್ದೊಂದು ಮಳಲ ತಿಟ್ಟೆಗೆ ಸೇರಲದನು ಕಂ |
ಡಿರದೆ ಪುರಜನವೆಯ್ದಿ ನಿರ್ದೋಷಿಯಪ್ಪ ಮಂತ್ರಿಯನಿಂತು ಮಾಡಬಹುದೇ ||
ಧರಣಿಪಾಲಕರುಕ್ತಿಹೀನರಲ್ಲಾ ಎಂದು |
ಪಿರಿದು ಚಿಂತಿಸುವುದಂ ಕೇಳೆ ತದ್ಭೂಮಿಪತಿ |
ಕರುಣದಿಂದಾ ತೊರೆಯ ತೀರಕ್ಕೆ ಬಂದವನ ನುಡಿಸಲಿಂತೆಂದನಾಗ || ೮೫ ||

ವಾರಿನಿಧಿಯುಗ್ರಮೆಂದೆನಿಪಗಾಧಂಬೊಗಲೀ |
ಕ್ರೂರತರಮಪ್ಪ ಮೃಗಸಂಕುಲಂ ತೀವಿದಾ |
ಘೋರವಿಪಿನಂಬೊಗಲೀಯತಿ ಕಠೋರಂಬಡೆದ ಸಂಗ್ರಾಮದೊಳ್ ಸಿಲುಕಲಿ ||
ಧಾರುಣೀಶರ್ಮುನಿಯೆಲೆಲೆ ರಾಯ ಕೇಳು ಮೊದ |
ಲಾರೈದು ಸಂಜನಿಸುವಲ್ಲಿ ಈ ನಿಟಿಲದೊಳ್ |
ನೀರಜೋದ್ಭವನಂಕಿಸಿದ ಬರೆಪಮಂ ಮೀರಲೀಸದಾ ಪುಣ್ಯದೊದವು || ೮೬ ||

ಎಂಬ ನೀತಿಯನೆ ಭಾವಿಸಿ ನೃಪತಿ ಕರುಣಾವ |
ಲಂಬಮಾನಸನಾಗಿಯಾ ಮಂತ್ರಿಮುಖ್ಯನಂ |
ತುಂಬುಹೊಳೆಯಿಂದ ತೆಗೆಯಿಸಿ ಬಿಡಿಸಿ ಬಂಧನವನವನ ಮನದುಮ್ಮಳಿಕೆಯ |
ಹಂಬಲಂ ಬಿಡಿಸಿ ಮುನ್ನಿನ ಪದವನವನ ಮನ |
ಕಿಂಬಾಗುವಂದದಿಂ ಕೊಟ್ಟನುತ್ತಮರ ಮುನಿ |
ಸೆಂಬುದದು ಮಳಲೊಳುದಿಸಿದ ಬೀಟೆ ಮುಗಿಲೊಡ್ಡು ಮುಂಬಿಸಿಲೊಳಿಟ್ಟರಿಸಿನಾ || ೮೭ ||

ಎಂದೆಂಬ ಕಥನಮಂ ಪುಜನದ ಕೂಡೆ ಮನ |
ಸಂದು ಲಾಲಿಸಿ ಕೇಳ್ವ ಕಾರಣದಿ ಕಳ್ಳರಂ |
ತಂದೊಪ್ಪಿಸಿದುದಿಲ್ಲವೆನೆ ಕೇಳಿ ನಾಳೆ ತಂದೀವುದೆಂದವನ ಕಳುಹಿ ||
ಮಂದಿರಕ್ಕೆಯ್ದಿ ಮರುವಗಲೊಳೋಲಗಕೆಯ್ದಿ |
ದಂದಹ್ಯ ಮಾನಮಾದತಿಕುಪಿತಶಿಖಿಮನದೊ |
ಳೊಂದಿ ತಡವಂ ಮಾಡದೇ ನಿರಪರಾಧಿಯಂ ನಿಷ್ಟುರದಿ ಕರಸಲಾಗ || ೮೮ ||

ಜಡಧಿಯೊಳ್ ಜನಿಸಿ ಬೆಳೆದಾ ಮೌಕ್ತಿಕಂ ಹೊಳಹ |
ಹಡೆದಾವ ಯತ್ನದಿಂ ಹತ್ತಿಯುತ್ತಮಗುಣ |
ಕ್ಕೆಡೆಯಾಗದಂತೆ ನಾನಾವಾವ ತೆರೆದ ದೃಷ್ಟಾಂತಮಂ ಪೇಳಿಪೇಳಿ ||
ನುಡಿದೊಡಂ ಭೂಮಿಪತಿ ನನ್ನೊಳಗೆ ಮುನ್ನಾತ |
ನೊಡೆದ ಮನಮಂ ಮೆಚ್ಚುದಿಲ್ಲವದರಿಂದ ಕೇ |
ಡಡಸುವುದು ತನ್ನರಸುತನಕೆಂದು ಚಿಂತಿಸುವ ಯಮದಂಡನೆಯ್ತಂದನು || ೮೯ ||

ಇಂದಿಗೆಂಟನೆಯದಿನದಲ್ಲಿಯಾ ಕಳ್ಳರಂ |
ತಂದೀವೆನೆಂದೆಮ್ಮೊಳುಸಿರಿದಂಕೆಯ ದಿನಂ |
ಬಂದಿತ್ತಿದೇಕೆಯಟಮಟವನೆಮ್ಮೊಳಗಾಡಿಯಶುಭಸ್ಯಕಾಲಹರಣ ||
ಎಂದು ದಿನಮಂ ನೂಂಕುವಂದವೈಸೆ ನಿನ್ನ |
ದೊಂದು ಪರಿಯೆಂಬವನ ಬೆಟ್ಟತಟ್ಟೆಯ ಮಾತಿ |
ಗೆಂದನೆಲೆ ನೃಪತಿ ನಾನಾವ ತೆರದಿಂ ವಿಚಾರಿಸಲವರ್ಸಿಕ್ಕಿತಿಲ್ಲಾ || ೯೦ ||

ಎನೆ ಭೂವರಂ ಬಾಹತ್ತರನಿಯೋಗವನು ಪುರ |
ಜನವೆಲ್ಲವಂ ಬರಿಸಿ ಇಂತೆಂದನಲೆ ಮಹಾ |
ಜನವೆ ಕಳ್ಳರನು ಹಿಡಿತಹೆನೆಂಬ ಟಂಕೋತ್ತರವನು ತಾ ಮಾಡಿಕೊಂಡು ||
ದಿನವೆಂಟುಬಂದಿತಿದನಿನ್ನು ಸೈರಿಸುವುದೆಮ |
ಗನುಚಿತಂ ನಮ್ಮ ಭಂಡಾರದೊಳು ಬಹಳ |
ಧನಹಾನಿಯಾಯಿತದರಿಂದವನೆ ನಮಗೆ ಪರಮದ್ರೋಹಿಯದುಕಾರಣ || ೯೧ ||

ಇಂದಿವನ ಸುಗಿದು ತೋರಣಗಟ್ಟಿಸದೆ ಮಾಣೆ |
ನೆಂದು ಶಪಥವನೆ ಮಾಡಿದ ನೇಪದ ನುಡಿಗೇಳಿ |
ಮಂದಸ್ಮಿತಾನನಂ ಯಮದಂಡನೆಳ್ದು ಕೈಮುಗಿದು ಸಭೆಗಿಂತೆಂದನು ||
ಸಂದಣಿಸಿದೀ ಓಲಗದ ನಡುವೆ ಕಳ್ಳರಂ |
ತಂದೊಡಾಜ್ಞೆಯನರಸು ಮಾಡದೊಡೆ ನೀವೆ ಬಲು |
ಹಿಂದಮಾಡಿಸಬೇಕೆನುತ್ತವರ ಕೈಯಿಂದ ತಪ್ಪದೆಂದೆನಿಸಿಕೊಂಡು || ೯೨ ||

ತನ್ನ ಮಡಿಲೊಳ್ ಮರಸಿಕೊಂಡಿರ್ದ ಪಾವುಗೆಯ |
ರನ್ನದೊರ್ಮಿಕೆಯ ಯಜ್ಞೋಪವೀತಮನಿರಿಸಿ |
ಕನ್ನಗಳ್ಳರನಿವರ ಮೊಗದಿ ಪೈಸರವಮಾಡದೆ ವಿಚಾರಿಸುವುದೆಂದು ||
ಬಿನ್ನಪಂಗೆಯ್ದ ಯಮದಂಡನ ನುಡಿಯ ಕೇಳಿ |
ಚೆನ್ನಾಯ್ತು ಕಾರ್ಯಮೆನುತವರು ಬೆಕ್ಕಸಬಡುವು |
ತಿನ್ನೇಕೆ ಸಂದೇಹಮೀ ಕುಟಿಲಬುದ್ಧಿಯಿಂ ನೃಪನ ಪುಣ್ಯಂ ಪಾರಿತು || ೯೩ ||

ಎನುತವರು ನಿಶ್ಚಯಿಸುತೀ ರತ್ನಪಾದುಕದಿ |
ಜನನಾಥನೇ ಚೋರನೀ ಹೊನ್ನಮುದ್ರಿಕೆಯ |
ನನುಮಾನವೇಕೆ ಮಂತ್ರಿಯೆ ಚೋರನೀ ಎಸೆವ ಯಜ್ಞಫಪವೀತದಿಂದಾ ||
ಜನದರಿಕೆಯೊಳ್ ಪುರೋಹಿತನು ತಾನೇ ಚೋರ |
ನಿನಿತು ಕುಟಿಲತೆಯನಿವರೆಸಗಬಹುದೇ ಎಂದು |
ತನತನಗೆ ಸಭೆಯಲ್ಲ ಗಜಬಜಿಸಿ ವಿಸ್ಮಯಂಬುಟ್ಟು ಮತ್ತಿಂತೆಂದುದು || ೯೪ ||

ಬಲ್ಲಿದಂ ಯಮದಂಡ ಕಂಡ ನಮ್ಮಂ ಕೂಡೆ |
ಹೊಲ್ಲದುದನೆಣಿಸಿದಂ ತಮಗೆನುತ ಬಗೆದಯ ತಾ |
ನಿಲ್ಲದ ನೆವವನಿಕ್ಕಿ ದುರದುಂಬಿತನದಿನಿವನಂ ಕೊಲಿಸಿ ಬಳಿಕ ತಮ್ಮ |
ಎಲ್ಲರಂ ದಂಡಿಸುವೆನೆಂದೀ ನೃಪಂ ಬಗೆದು |
ದಲ್ಲದೇ ಮತ್ತೊಂದು ತೆರನಲ್ಲವೆನುತ ಸಭೆ |
ಯಲ್ಲಲ್ಲಿ ಗುಜ್ಜುಗುರುಕಲ್ಲಲ್ಲಿ ಗುಡ್ಡೆಣಿಕೆಯಂ ಮಾಡುತಿರ್ದರಾಗ || ೯೫ ||

ಕ್ಷಿತಿಪನತಿರೇಕ ಮಂತ್ರಿಯ ದುರಾಗತ ಪುರೋ |
ಹಿತನನ್ನೆಯಂ ಮಾಡಿ ಭಸ್ಮೀಕೃತವನು ಜನ |
ತತಿಗೆ ಮಾಡದೆ ಸುಮ್ಮನಿರದೆನುತ್ತವರ ತನುಜರ್ಗವರ ಸಂಪದವನು ||
ಅತಿಹರ್ಷದಿಂದಿತ್ತು ತತ್ಪ್ರಹೆಗಖೆಕ್ಕ ಸ |
ಮ್ಮತಮಾಗಿ ನಾಡುಬೀಡಿನೊಳಗಿರದಂತೆ ಭೂ |
ಪತಿ ಮಂತ್ರಿಯಾ ಪುರೋಹಿತರ ಪೊರಮಡಿಸಿ ಇಂತೆಂದುಲಿಯುತಿರ್ದರಾಗ || ೯೬ ||

ಇಂತೆಂಬ ಕಥೆಯನಾ ಸಚಿವೋತ್ತಮಂ ಧರಾ |
ಕಾಂತನುದಿತೋದಯಂಗತಿಹಿತದಿನುಸಿರ್ದು ಮ |
ತ್ತಿಂತೆಂದನೆಲೆ ದೇವ ಮುನ್ನೊಂದು ಟಿಟ್ಟಿಭ ವಿಹಂಗನಂ ಭೋರಾಸಿಗೆ ||
ಚಿಂತೆಯಂ ಮಾಡಿದಂತಹುದು ಲೋಕದೊಳು ಬಲ |
ವಂತ ನಾನೆಂದು ಸಾಮಾನ್ಯರೊಳ್ ಕಕ್ಕಸವ |
ನೆಂತಾನುಮಾಡಿದೊಡೆನಲ್ ಮಹೀಪಾಲಕಂ ಮನದೆಗೊಂಡಿಂತೆಂದನು || ೯೭ ||

ಆ ಸುಯೋಧನವಸುಮತೀಶನು ಕುಮಂತ್ರದಿಂ |
ವಾಸವಂಗೆಣೆಯೆನಿಪ ತನ್ನ ಮಹದೈಶ್ಚರ್ಯ |
ವೋಸರಿತೆನಲೆಂದನೆಲೆ ದೇವ ಪಂಚಾಗಮಂತ್ರಯುತನಲ್ಲದವನಾ ||
ಆ ಸೇನೆಯಾ ರಾಜ್ಯಮಾ ನಗರಿಯಾ ಕೀರ್ತಿ |
ಯಾಸತ್ವಮಾ ಪರಾಕ್ರಮಮೆಲ್ಲಮಳಲೇರಿ |
ಯಾ ಸಂಜೆಗೆಂಪು ಮುಗಿಲೊಡ್ಡು ಕಾಮನಬಿಲ್ಲು ಶಬದೊಡಿಗೆ ಹುಲ್ಲಕಿಚ್ಚು || ೯೮ ||

ಎಂದೆನಲನರ್ಥಕಾರ್ಯಮದಾವನಾನೊರ್ವ |
ನಿಂದುರೆ ನಿವಾರಿಸುವುದವನೇ ಪ್ರಧಾನಿಯದ |
ರಿಂದವನ ಮಂತ್ರಮಂ ಮೀಡದ ಮಹೀಶ್ವರನ ಸರ್ವಕಾರ್ಯಗಳು ಸಿದ್ಧಿ ||
ಮುಂದಕ್ಕೆ ಕೀರ್ತಿ ಪುಣ್ಯಂ ಸಮನಿಸದೆ ಮಾಣ |
ದೆಂದು ನೀನೀ ನೀತಿಗನುಗುಣಂಬಡದೆ ಗುಣ |
ವೃಂದಾರಕಾ ನನ್ನ ನಲ್ಲಳನಗಲ್ದ ಬೇಸರನೆಂತು ಕಳೆವೆನೆನಲು || ೯೯ ||

ಎಲೆ ದೇವ ದೇವಾದಿದೇವನಮರಾವತಿಗೆ |
ಸಲೆ ಸೊಬಗಿನಿಂದ ಸಾಸಿರತೂಕಮಾಗಿ ಸ |
ಲ್ಲಲಿತವಡೆದೀ ನಮ್ಮ ರಾಜಧಾನಿಯ ಕೇರಿಕೇರಿಯೊಳಿರುಳೊಳು ||
ಅಲವರಿಕೆಯಿಲ್ಲದೊಂದೆರಡು ಜಾವಂ ಜನಗ |
ಳುಲುಹಡಗುವಲ್ಲಿಪರಿಯಂತರಂ ನಾಮಿರ್ವ |
ರೊಲಿದು ವಿಹರಣೆಗೆಯ್ಯಲೇನಾನುಮೊಂದು ಬಿಸವಂದಮಂ ಕಾಣಬಹುದು || ೧೦೦ ||

ಇತರ ಜನಸಮುದಾಯಮೀ ಇಳಾತಳದಲ್ಲಿ |
ಮತಿವಿಕಳರಾಗಿ ಸಪ್ತವ್ಯಸನಕಲಹಕು |
ತ್ಸಿತವಾಕ್ಪ್ರಸಂಗಪತಿನಿದ್ರೆಯೊಳ್ ದಿನವನೂಂಕುವರ ತೆರನಾಗದೆ ||
ಮತಿವಂತರಾ ಧರ್ಮಶಾಸ್ತ್ರಪ್ರಸಂಗ ಸ |
ನ್ನುತಗೀತವಾದ್ಯನರ್ತನಸರಸಕವಿಜನ |
ಪ್ರತತಿಯ ಸುಗೋಷ್ಠಿಯೊಳ್ ಮನಮಿತ್ತು ಕಾಲಮಂ ಕಳೆಯಬೇಕವನಿಪಾಲಾ || ೧೦೧ ||

ತಳುವದದುಕಾರಣಂ ಚಂದ್ರಿಕಾವಿಹರಣಮ |
ನುಳಿಯದೇ ಮಾಡಬೇಕೆಂದು ಬಗೆದಾ ರಾಜ |
ನಿಳಯಮಂ ಪೊರಮಟ್ಟು ರಾಜವೀಥಿಗೆ ಬಂದು ಹಾಲಂತೆ ಹಳಹಳಚನೆ ||
ಹೊಳೆವ ಹುಣ್ಣಿಮೆಯ ತಿಂಗಳ ಬೆಳಗಿನೊಳ್ ತಮ್ಮ |
ಪೊಳಲ ಕೇರಿಯ ಕಣ್ಮನಂಗೊಳಿಪ ಸುಭಗತೆಯ |
ನೆಳಸಿ ನಡೆನೋಡುತಂ ನಡೆತಂದರಾ ಮಹೀವಲ್ಲಭನುಮಾ ಸಚಿವನು || ೧೦೨ ||

ಸತ್ಯನಿಧಿಸದ್ಗುಣಕರಂಡಕಂ ಸಜ್ಜನ |
ಸ್ತುತ್ಯಂತಶುದ್ಧನಭಿನವಮದನನುತ್ತಮಕುಲಾತ್ಮಕನುದಾರಮೂರ್ತಿ ||
ಪ್ರತ್ಯಕ್ಷಮನು ಮಾನಿನೀಜನಮನೋಹರಂ |
ಪ್ರತ್ಯಂತಭೂಪಾಲಹತಶೌರ್ಯಶಾಲಿಯಾ |
ಮಾತ್ಯಸಹಿತಂ ನಡೆದನಾನೃಪತಿ ಜಿನಸಮಯವಾರ್ಧಿವರ್ಧನಚಂದ್ರನು || ೧೦೩ ||

ಇದು ವಿಭುದಜನವಿನುತಮಿದು ವಿಭುದಜನವಿನತ |
ಮಿದು ವಿದಿತಜಿನಸಮಯಶರಧಿಸಂಪೂರ್ಣೇಂದು |
ಸದಮಲಚರಿತ್ರ ಯದುವಂಶಭೂವರರ ಸಚಿವಾನ್ವಯಾಂಬರಹಂಸನು ||
ಮದನಸಮರೂಪನುತ್ತಮಗುಣಕರಂಡಕಂ |
ಚದುರಮಂಗರಸನುಸಿರ್ದೀ ಕೌಮುದೀಕಥೆಯೊ |
ಳೊದವಿ ರಂಜನೆಯ ಪಡೆಯಿತ್ತು ಸಚಿವೋತ್ತಮನ ವಚನವೆರಡನೆಯ ಸಂಧಿ || ೧೦೪ ||

ಅಂತು ಸಂಧಿ ೨ಕ್ಕಂ ಪದನು ೧೫೬ಕ್ಕಂ ಮಂಗಳ ಮಹಾ