ಶ್ರೀಮದರ್ಹದ್ದಾಸವೈಶ್ಯವಿಭುವಿನ ಗೃಹ |
ಕ್ಕಾ ಮಂತ್ರಿಯಾ ಚೋರನುಂ ಬೆರಸಿ ವಿರಹದಿಂ |
ಭೂಮೀಶನುದಿತೋದಯಂ ಪುರದ ಶೋಭೆಯಂ ನೋಡುತ್ತೆ ನಡೆತಂದನು || ಪಲ್ಲ ||

ಆಮೋದದಿಂದಮರಪತಿ ಸೊಗಸುಗಡಲ ದಿ |
ವ್ಯಾಮೃತಮನಬ್ಜಮಂಡಲವೆಂಬ ಕೊಡದಿನು |
ದ್ದಾಮಭಕ್ತಿಯೊಳು ಮೊಗೆದೊಸೆದು ಮಾಡಿದ ಸುರುಚಿರಾಭಿಷೇಕಂ ನಿಲ್ಲದೆ ||
ಶ್ರೀಮನ್ಮಹಾವ್ಯೂಮಕೇಶೋತ್ತಮಾಂಗದಿಂ |
ಭೂಮಂಡಲಕ್ಕೆಸುರಿತಂದುದೋ ಎಂಬಂತೆ |
ರಾಮಣೀಯಕಮಾದ ಜೊನ್ನದೊಳ್ ಪುರವೀಥಿವಿಡಿದು ನಡೆದಂ ಭೂಪನು || ೧ ||

ಅವನೀಶನಾಜ್ಞೆಯಿಂದಾ ನಂದನಕೆ ಪೋದ |
ಯುವತಿಯರ ವಿರಹದಿಂದಾ ಜನಂ ತಂತಮ್ಮ |
ಭವನದಂಗಣದಗ್ರಶಾಲೆಯೊಳ್ತೆಟ್ಟೆತೆಟ್ಟೆಯೊಳು ನಿಂದವರ ರೂಪು ||
ಅವರ ರಸಿಕತೆಯವರ ನೋಟಬೇಟಂ ಕೂಟ |
ವವರೊಲುಮೆಗಲಹದ ವಿಲಾಸದೊಂದೊದವು ಮ |
ತ್ತವರ ನೆನವವರ ಮುನಿಸವರ ಮಮತೆಯನಿಂತು ನುಡಿಯುತ್ತಮಿರ್ದುದಾಗ || ೨ ||

ಕಾಣ್ಬೆನಾನೆಂದಿಂಗೆ ತಣ್ಪಿಡುವ ಮಾಳ್ಕೆಯೊಳು |
ತಣ್ಬುಳಿಲ ತಾಣದಂದದ ನಿತಂಬದ ತೊಂಡೆ |
ವಣ್ಬಾಯದೆರೆಯ ಬಲ್ಜವ್ವನದ ಬಟ್ಟವೆರೆಮೊಗದ ವೀಣಾಲಾಪದ ||
ಜಾಣ್ಬಡೆದ ನುಡಿಯ ಜಂಬೀರೋಪಮಸ್ತನದ |
ನುಣ್ಬೋಗರ ಚಂಚರೀಕಾಳಕದ ಪೊಸವಾಳೆ |
ಗಣ್ಬೊಣರ ನಿಂಬಪತ್ರೋಪಮಭ್ರೂಲತೆಯ ಲಲನಾಮಣಿಯ ಮುಖವನು || ೩ ||

ಸಾರಂಗಶಾಬಲೋಚನದ ನವಕಾಂಚನಸ |
ರೋರುಹಾನನದ ಭಾಳ ಪ್ರವಾಳಾಂಘ್ರಿಯ ಮ |
ಯೂರಸನ್ನಿಭಕೇಶಬಂಧನದ ಕಲ್ಪಲತಿಕಾಹಸ್ತದರನೇರಿಲಾ ||
ದೋರೆದುಟಿಯುಗಲದಮಳ್ವಕ್ಕಿಯಂದದ ಕುಚದ |
ಚಾರುಚಂಪಕದ ಬಿರಿಮುಗುಳುನಾಸಿಕದ ಮದ |
ವಾರಣೋಪಮಗತಿಯ ಗರುವೆಯಂ ಬಿಟ್ಟು ಜೀವಿಪರಾರಿಳಾತಳದೊಳು || ೪ ||

ನಿಡುದೋಳನೀರೆ ನೀಲಾಳಕಂಗಳಸುಭಗೆ |
ಕುಡಿತೆಗಣ್ಗಳಕುಶಲೆ ಕುಂದಕುಟ್ಮಳರದನ |
ಕಡುಚದುರೆ ಚಂದ್ರವದನದ ಚೆಲ್ವಕಾರ್ತಿ ಮಾಧುರಿಯ ವಚನಗಳ ಮಾನಿನಿ ||
ಬಡನಡುವಿನಬಲೆ ಬಣ್ಣಿಗೆದುಟಿಯ ಚೆನ್ನೆ ಪೊಂ |
ಗೊಡಮೊಲೆಯಮುಗ್ಧೆ ಪೊಂಗುವಜವ್ವನದ ಜಾಣೆ |
ಬಿಡುಮುಡಿಯ ಬಿಂಕಗಾರ್ತಿಯರ ಸುರತಸೌಖ್ಯಮದು ಸುರಲೋಕಸುಖಮಲ್ಲವೇ || ೫ ||

ನೋಡಲೆಳಸುವ ಕಣ್ಗೆ ಜನ್ಮಸಾಫಲ್ಯಮಂ |
ಮಾಡುವ ವಿಲಾಸವಲರ್ಗಣೆಯನಂ ಶಲ್ಯಮಂ |
ಮಾಡುವ ಕಟಾಕ್ಷಮುನ್ನತಮಪ್ಪ ಜಾಣ್ಮೆಯಿಂ ಗಂಡರಂ ಗಂಡುದೊಳ್ತು ||
ಮಾಡುವಗುಣಂ ಕೂಡುವಲ್ಲಿ ಪರವಶತೆಯಂ |
ಮಾಡುವೆಸಕಂ ಬಡೆದು ಸಮಸುಖವನಿರದೀವ |
ಆಡಿಕಾರ್ತಿಯರನಗಲಿ ಜೀವಿಸುವ ಜನ್ಮ ತಿರ್ಯಗ್ಜನ್ಮ ತಾನಲ್ಲವೇ || ೬ ||

ಬಚ್ಚಬಯಲಂತೆ ಬಗೆಗೊಳಿಪ ಬಡನಡುವಿನ ಪ |
ಳಚ್ಚನೊಪ್ಪುವ ಪೂರ್ಣವಂದ್ರಮಂಡಲಕೆ ಪಡಿ |
ಯಚ್ಚಾದ ಮುಖದ ಮುಗ್ಧಾಕ್ಷಿಗಳ ಮುಗುಳ್ವಡೆದ ಮಿಸುನಿದಾಮರೆ ಮೊಲೆಗಳಾ
ಹೊಚ್ಚಹೊಸಪೊನ್ನ ಹೊಗರಂಗೆಲ್ವ ತನುರುಚಿಯ |
ಮಚ್ಚರಮನತಿರೂಪಿನಿಂದ ರತಿಯೊಳ್ಮಾಳ್ಪ |
ಮೆಚ್ಚುವೆಂಗಳ ಮೋಹವೇ ಮುಕ್ತಿಯಲ್ಲವೇ ಭಾವಿಸಲ್ ಬಲ್ಲವರಿಗೆ || ೭ ||

ನೆವವನೊಂದಿನಿಸು ನೆನೆಯಲ್ಬಲ್ಲಳೇ ಮುನಿಸು |
ವಿವರಿಸಿದೊಡೊಂದಿನಿಸು ನೆನಹುಮಾತ್ರದೊಳುಂಟೆ |
ಸವಿಗೆ ಸವಿಯಂ ಪಿರಿದನೀವಗುಣಮಲ್ಲದೇ ಮತ್ತೊಂದು ಭಾವಮುಂಟೇ ||
ತವಕಮಲ್ಲದೆ ತನುವಿನಲ್ಲಿಯಲಸಿಕೆಯುಂಟೆ |
ನವರತಿಯ ಸೌಖ್ಯಮಲ್ಲದೆ ಮತ್ತೆ ಪೆರತುಂಟೆ |
ಯವಿರತಂ ಸೋಲಮಲ್ಲದೆ ಗೆಲವು ತಾನುಂಟೆಯಾಮಾನಿನೀರತ್ನಕೆ || ೮ ||

ಅಲಘುಕುಚವೆದೆಯೊಳಂಕುರಿಸುವಂದಿಂದ ಮೊದ |
ಲಳಿಕುಲನಿಭಾಳಕಂ ನಿಮಿರದಂದಿಂ ಮೊದ |
ಲ್ಗೆಲವೆಂಬ ಹೊಲೆಹೊದ್ದದೊಂದಸುವಿಗೆರಡಂಗವಡೆದಂತಿರಿರ್ದೆನ್ನೊಳು ||
ಒಲವಿಗೊಳಗಾಗಿಯರೆಘಳಿಗೆಯಗಲದೆ ಸಕಲ |
ಕಲೆಗಳಂ ಧರಿಸಿ ಏರುಂಜವ್ವನಂದಳೆದ |
ಲಲನಾಕುಲಕ್ಕೆ ಚೂಡಾಮಣಿಯ ಮೋಹನದ ಕಣಿಯನಾನೆಂತಗಲ್ವೆನು || ೯ ||

ಆ ತನೂದರಿಯ ಕಡುಚೆಲ್ವಿಕೆಯ ಲಚ್ಚಣಂ |
ಕಾತರಿಪ ಕಣ್ಗೆ ಕರ್ಣದ್ವಯಕ್ಕಾ ಸೊಗಸು |
ವಾತಿನ ಸುಮುದ್ರೆ ವಾಸಿಸುವುಸಿರ್ಗೆ ಮಗಮಗಿಪ ಮೈಗಂಪಿನೊಂದು ಕುರುಹು ||
ಪ್ರೀತಿಯಿಂ ತಳ್ಕೆಗಿಚ್ಚೈಸುವೀ ಭುಜಯುಗ |
ಕ್ಕಾತನುವಿನೊಪ್ಪುವುಂಡೆಗೆ ನಾಲಗೆಗೆ ಚಿತ್ತ |
ವೋತೀವ ಚೆಲ್ವ ಚೆಂದುಟಿಯಾಣತಿಯಿನಿಂದು ಮನಮನುರೆ ಸೆರೆವಿಡಿದಿರೆ || ೧೦ ||

ಅತ್ತತ್ತ ತೊಲಗಿತ್ತ ಬರಬೇಡಬೇಡೆಂಬ |
ಹತ್ತಿರಕೆ ಬರೆ ಮೊಗಂದಿರಿಗಿ ಕೆಕ್ಕಣ್ಣಿಡುವ |
ವೃತ್ತಸ್ತನದ ಮೇಲುದಂ ಸೆಳೆಯ ಲಜ್ಜೆ ನಿನಗಿಲ್ಲವೇ ಬಿಡುಬಿಡೆಂಬ ||
ಒತ್ತಿ ಬಿಡಿಯಪ್ಪಲಿನ್ನೇಕೆನುತ ಮೈಗೊಡುವ |
ಮತ್ತೆ ಮೊಗವೆತ್ತಿ ಚುಂಬನಂಗಯ್ಯಲುಹುಹೆಂದೆ |
ನುತ್ತ ಸವಿದುಟಿಯೀವ ಸೋಲಗಾರ್ತಿಯ ನೇಹಗಲಹಮತಿಸುಖಮಲ್ಲವೇ || ೧೧ ||

ಒಳಸುತ್ತನೊತ್ತಿ ಬಿಗಿವನಿತರೊಳ್ಬಾಗಿಲಿಂ |
ದೊಳಹೊಗುವುದಂ ಕಂಡುಹಿಡಿವ ನಿರಿಯಂ ಮರೆದು |
ತಳುವದಂಗಣಕೆಯ್ದಿ ನಿಲುಕುಗಾಲೊಳ್ನಿಂದುನಿಗುರಿ ನಗೆಮೊಗವನೆತ್ತಿ ||
ಪುಳಕತತಿ ಝಮ್ಮೆನಲ್ ಬಿಗಿಯಪ್ಪ ಕರ್ಪೂರ |
ವಳಿಕುದಂಬುಲಗೊಂಡು ಮದುರಾಧರವನು ಮನ |
ವೆಳಸಿ ಚುಂಬಿಸಲೆಂದು ನೀಡಿ ಪರವಸಗೆಯ್ವ ಸತಿಯಂ ಸೌಖ್ಯಂ ಸಾಲದೇ || ೧೨ ||

ವರವಜ್ರಮಣಿಭೂಷಣಮನಿಟ್ಟು ನಿಡಿದೋಳ |
ನೆರಡನುಪರಿಮಕೆತ್ತಿ ಬೆಳಗಾಗುವನ್ನೆವರ |
ಮುರುಮುದದಿ ರತಿಕೇಳಿಯೊಳಿಗಿರ್ದು ನಸುನಿದ್ರೆಗೆಯ್ದು ಕಣ್ಗಳನು ತೆರೆದು ||
ತರುಣಹರಿಣವಿಲೋಲನೇತ್ರೆ ಕುಳ್ಳಿರ್ದು ಮೈ |
ಮುರಿಯಲಾ ನಿಜವದನಮಂಡಲಂ ಸೊಗಯಿಸಿತು |
ಪರಿವೇಷಮಧ್ಯದೊಳ್ ಪರಿರಂಜಿಸುತ್ತಿರ್ಪ ಪರಿಪೂರ್ಣಚಂದ್ರನಂತೆ || ೧೩ ||

ಬೆಳಗುಜಾವದೊಳೆರ್ದು ಬೇರೂರ್ಗೆ ಪೋಗಿ ಪಗ |
ಲಳಿವುದಕೆ ಮುನ್ನಮೆಯ್ದುವೆನೆಂದು ಪೊರಮಡಲ್ |
ಬಳಿವಳಿಯೊಳೆಯ್ದಿ ಬೀಳ್ಕೊಡುತ ಪಶ್ಚಿಮದಿಶಾವಲ್ಲಭೆಯ ವದನದಂತೆ ||
ತೊಳಗುವ ಶಶಾಂಕಮಂಡಲದೊಡಲಕರೆ ಮನಂ |
ಗೊಳಿಪುದಂ ನೋಡೆಂದು ಪಯಣಮಂ ನಿಲಿಸಿ ನಿಜ |
ನಿಳಯಕ್ಕೆ ನಿಡುದೋಳೊಳಮರ್ದಪ್ಪಿಕೊಂಡೊಯ್ದು ಬಂದಿವಿಡಿದಳ್ ಬಗೆಯನು || ೧೪ ||

ಅಣಕಮೇ ಎನ್ನೊಳಗೆನುತ್ತ ನಾನೆಯ್ದುವಂ |
ಗಣಕೆಯ್ದುತಿನ್ನೊಮ್ಮೆ ಮಾತಾಡಿನೋಡೆಂದು |
ಕೆಣಕಿ ಕಲಹಂಗೆಯ್ದು ಮಣಿಕರ್ಣಿಕೆಯ ನವೋತ್ಪಲನಾಳದಿಂದ ಪೊಯ್ದು ||
ಹೆಣಗುತೆಳೆದೊಯ್ದು ಮಣಿಕರ್ಣಿಕೆಯ ನವೋತ್ಪಲನಾಳದಿಂದ ಪೊಯ್ದು ||
ಹೆಣಗುತೆಳೆದೊಯ್ದು ಬಾಗಿಲ್ಗೆ ಬಗ್ಗಿಸಿಕೊಂಡು |
ಮಣಿ ಮಂಚಕೆಯ್ದಿಸುವ ಲಲನೆಯರ ಕುಲಕೆ ನವ |
ಮಣಿಯ ಮೋಹದ ಕಣಿಯ ಮುನಿಸೆಂಬುದದು ಮುನಿಸೆ ಭಾವಿಸಲ್ ಬಲ್ಲವರಿಗೆ || ೧೫ ||

ಕಾಣುತಿದಿರೆಳ್ದು ಕಳಶಸ್ತನದೊಳೆಸೆವ ಕ |
ಟ್ಟಾಣಿಮೌಕ್ತಿಕದ ಮಣಿಹಾರಮಂ ಪೊರನೂಂಕಿ |
ಮಾಣದೆಯ್ತಂದು ಮೇಲ್ವಾಯ್ದು ಚುಂಬಿಸಿಕೊಂಡು ಕೊಟ್ಟರಸದಂಬುಲವನು ||
ಪ್ರಾಣೇಶಯೆಂದು ಪರವಶಗೆಯ್ವ ಫಣಿಸದೃಶ |
ವೇಣಿ ಪಲ್ಲವಪಾಣಿ ಮಧುರಕೋಕಿಲರುಚಿರ |
ವಾಣಿ ಮೋಹನಮುಕ್ತಿಗಿಟ್ಟ ನಿಶ್ರೇಣಿಯಂ ತೊಲಗಿಯಸುವಿಡಿಯಲುಂಟೇ || ೧೬ ||

ಸಾತ್ವಿಕಸಂಜಾತಮಲ್ಲದೆ ಬಾವಮ |
ನ್ಯತ್ವಮುಂಟೇ ನಿರೀಕ್ಷಣಮಾತ್ರದಲ್ಲಿ ಭಿ |
ನ್ನತ್ವಮುಂಟೇ ಅಭಿನ್ನತ್ವ ಮಲ್ಲದೆ ಮನಸಿನಲ್ಲಿ ನಿಡ್ಡಳಮಲ್ಲದೆ ||
ಸತ್ವಮಿನಿಸುಂಟೆಯೆಡೆಯಲ್ಲಿ ಮಾತಿನೊಳು ದೀ |
ನತ್ವಮಲ್ಲದೆಯುಂಟೆ ನಿಷ್ಠುರಂ ನೋಡೆ ನಿಜಪರವ |
ಶತ್ವಮಲ್ಲದೆ ರತಿಯೊಳೆಚ್ಚರುಂಟೇ ಮನ್ಮನೋವಲ್ಲಭೆಗೆ ಭಾವಿಸೆ || ೧೭ ||

ಕರುಣವೆದೆಯಲ್ಲಿ ಕೋಪಂ ಕಪಟದಲ್ಲಿ ಪರ |
ಪುರುಷರೀಕ್ಷಣದಲ್ಲಿ ಭೀಭತ್ಸಮಪಹಾಸ್ಯ |
ದಿರವು ಸರಿಸೋಲವಿಲ್ಲದರಲ್ಲಿ ಭೀತಿಯಲರ್ಗಣೆಯಲ್ಲಿ ಬೀರದೇಳ್ಗೆ ||
ವಿರಹದಿಂ ಸರಿಸೋಲವಿಲ್ಲದರಲ್ಲಿ ಭೀತಿಯಲರ್ಗಣೆಯಲ್ಲಿ ಬೀರದೇಳ್ಗೆ ||
ವಿರಹದಿಂ ಬಾಳ್ದುದಿಲ್ಲೆಂಬಲ್ಲಿ ಸಿಂಗರಂ |
ವರತನುವಿನಲ್ಲಿ ಶಾಂತಂ ವದನದಲ್ಲಿಯ |
ಚ್ಚರಿ ಸುರತಬಂಧದೊಳಗದರಿಂದ ನವರಸದ ಕರುವಿನಂತೆಸೆದಳವಳು || ೧೮ ||

ಇಂತು ತಂತಮ್ಮಿನಿಯರಂ ನೆನೆದು ಪುರಜನಂ |
ಮಂತಣಂಗೊಂಡು ಮರುಗುತ್ತಿರಲ್ಕಾಣುತಾ |
ಕಂತುಮಾಡುವ ತೇರುತೆಕ್ಕೆಯಿಂದಾ ಮಲಯಮಂದಮಾರುತನ ದಾಳಿ ||
ಅಂತರಿಸದವನೀತಳಂ ಹೊರದವೊಲ್ ನಿಶಾ |
ಕಾಂತಪ್ರಭೆಯದಂಡು ಶುಕಪಿಕಮಧುವ್ರತದ |
ತಿಂತಿಣಿಯ ಪಾಳೆಯಂ ಬಿಡೆ ಕಂಡು ಕೆಟ್ಟೆವಿನ್ನೇವೆವೆನುತಿರ್ದರಾಗ || ೧೯ ||

ನಂದನಕೆ ನಲ್ಲಳಿರ್ದೆಡೆಗೆಯ್ದಲೆಳಸುವೆವೆ |
ಇಂದಿಳಾಧೀಶನಿಂ ತಳ್ಳುಬಳ್ಳಿಯದಹುದ |
ರಿಂದಿಲ್ಲಿ ಜೀವಿಸುವೆವೆಂಬೆವೀ ಕಾವನಬ್ಬರಂ ಪಿರಿದಾಗಿರ್ಪುದು ||
ಮುಂದು ಮಡು ಹಿಂದೆ ತಗರಾಯೆರಡರೆಡೆಯಲ್ಲಿ |
ನಿಂದು ನಿತ್ತರಿಸಬಹುದೇ ಅದು ನಿಮಿತ್ತವೆಮ |
ಗಿಂದು ಹುಟ್ಟಿದ ದಿನಂ ಬಂದಿತೆಂದಾ ಜನಂ ತಳ್ಳಂಕಗೊಂಡುದಾಗ || ೨೦ ||

ಕಟಕಟಾ ನಸುತೊಲಗಿ ಕೊಡೆ ಕಡವಿಯೆಂದು |
ಸಟೆಗೆ ನಮ್ಮೊಳು ಮುನಿಯೆ ತಾವಿರ್ಪ ಬನದಿನಾ |
ರ್ಭಟೆಯಿಂದ ಕೂಗಿಯಬ್ಬರಿಪನ್ಯಭೃತಭೃಂಗಕೀರಪಾರಾವತಗಳು ||
ದಿಟಮಾಗಿ ಮತ್ತಮೀರ್ಪಗಲಿಂದ ತಾವಿರ್ಪ |
ಕಟಕಕ್ಕೆ ನಮ್ಮ ಬಿಟ್ಟೆಯ್ದಿದಬಲೆಯರ ಸಂ |
ಕಟಬಡಿಸದೆ ಬಿಡುವುದಿಲ್ಲೆಂದು ಬಿಸುಸುಯ್ಯುತಿರ್ದರಲ್ಲಲ್ಲಿ ಕೆಲರು || ೨೧ ||

ಅರುಣಚಂದನದಿನುರಿಗಣ್ಣಂತೆ ತಿಲಕಮಂ |
ಬರೆದು ಭಾಳದೊಳು ಹೆಡೆಯಂತೆ ಕೇತಳಿಯೆಸಳ |
ನೆರಡನಾ ಜೆಡೆಗಿಕ್ಕಿ ಹೊನ್ನಹೂವಿನ ಬಣ್ಣದಂಬರದ ನಿರಿಯನುಡಿಸಿ ||
ದರಭಸ್ಮದಂತೆ ಬಾವನ್ನವುಡಿಯಂ ಪೂಸಿ |
ಕರದಲ್ಲಿ ಫಣಿಯಕಂಕಣಮಿಕ್ಕಿ ಕಳಿಪಿದೆಂ |
ಸ್ಮರಬಾಧೆಯಾಜೀವಿತೇಶ್ವರಿಗೆ ಬರ್ಪುದೇ ಎನುತಿರ್ದನೊರ್ವ ವಿರಹಿ || ೨೨ ||

ಹಡೆಯಲೊಡನಾ ಹೆತ್ತ ಜನನಿಯಾ ಪೆಣ್ಮಣಿಯ |
ಸಡಗರದಿ ವಟಫಲಾಧರೆ ಬಾಲಮೃಗನೇತ್ರೆ |
ಕಡುಸೊಗಸುವಡೆದಮೃತವಾಣಿ ಹೆರೆನೊಸಲಬಲೆ ಚಂದ್ರಮುಖಿಯೆಂದು ಹೆಸರಾ |
ಇಡುತ ಸಲಹಿದಳದರೊಳೆನಗೆನ್ನನಗಲಿದಾ |
ಮಡದಿಯಂ ನಿನ್ನ ನಿಷ್ಠುರಮಪ್ಪ ಕಿರಣದಿಂ |
ಸುಡಬೇಡವೆಂದೊರ್ವನಾ ಸುಧಾಸೂತಿಯಂ ಬೇಡಿಕೊಳುತಿರ್ದನಾಗ || ೨೩ ||

ಕೊರಲಮೇಗಣ ಸರದ ಮೌಕ್ತಿಕದ ಹರಲ ಹರಿ |
ದರಗಿಳಿಯ ಮಣಿಪಂಜರದ ಕೀಲಿನೊಳ್ನಿಂದು |
ಭರದಿಂದ ಸೂಸಿಯಕ್ಷತೆಯಪುಂಜಮನಿಂದು ಬೇರೂರ್ಗೆನುತ್ತೆ ಪೋದಾ ||
ಹರಣದೆರೆಯನ ಬರವು ಹಗಲಳಿವುದಕೆ ಮುನ್ನ |
ದೊರಕುವುದೊ ದೊರಕದೋ ಎಂದು ತಳ್ಳಂಕದಿಂ |
ದಿರದೋಸರಂಗೇಳ್ವ ಪೆಣ್ಮಾಣಿಕಂ ತಾನಗಲ್ದೆಂತುಟಸುವಿಡಿವಳೋ || ೨೪ ||

ಅಳಿಮೋಹಿಜನದಂಗಣವನಿನಿಸು ಮೆಟ್ಟುವಳೇ |
ಬಳಿಕವರ್ಬರಲು ತಲೆವಾಗಿಲಂ ತೆರೆವಳೇ |
ಎಳಸಿಯವರೇನನಿತ್ತೊಡಮದಕ್ಕಾಸೆಯಂ ಮಾಳ್ಪಳೇ ಅವರ ಹೆಸರಾ ||
ತಿಳಿದು ಭಾವಿಸಿ ಕನಸುಮನಸಿನೊಳ್ಪಿಡಿವಳೇ |
ಎಳೆವರೆಯದಿಂದ ಮೊದಲೇಣಾಂಕನಿಭವದನೆ |
ಕಳಭನಿಭಯಾನೆ ಕಣ್ಮನಮನುರೆ ನನೆಯಿಸುವ ಸುಖರಸಂ ಸುರಿವ ಸೋನೆ || ೨೫ ||

ಸುರತಸಮಯದೊಳುದ್ಭವಂಗೆಯ್ದ ಸಮಸುಖದ |
ಪರವಶತೆಯಿಂದ ನಸುಸಡಿಲಿದಾ ನಳಿದೋಳಾ |
ಪರಿರಂಭಣಂಗಂಡು ಕಣ್ಗಳಂ ತೆರೆದಿನಿಯನಗಲಿದನಲಾ ಎನುತ್ತ ||
ವಿರಹದಿಂ ಹಿರಿದುಸಂಕಟಬಟ್ಟು ಕಡುನೋವ |
ತರಳಲೋಚನೆ ನಿಶ್ಚಯದಿನೆನ್ನನಿಂದಗಲಿ ||
ತರಹರಂಗೊಂಡು ಹರಣವನಿನಿಸು ಹಿಡಿವುದಿಲ್ಲೆಂದು ಸುಯ್ದನದೊರ್ವನು || ೨೬ ||

ಅರಲಂಬನಟ್ಟುಳಿಯನಂಗನಾತಂಕ ರತಿ |
ವರನ ಹಾವಳಿಯನನ್ಯಜನಬ್ಬರಂ ನನೆಯ |
ಸರಲನುಪಟಳಮಿಕ್ಷುಪಾಪನಿಟ್ಟೆಡೆ ಪುಷ್ಪಕೋದಂಡನತ್ಯಾಗೃಹಂ ||
ಸ್ಮರನುಪದ್ರಂ ಮನೋಜಾತನ ಮಹಾಬಾಧೆ |
ಸುರಭಿಸುಮನೋಬಾಣನುಬ್ಬಸಂ ಜೀವಿತೇ |
ಶ್ವರಿಯರ್ತೊಲಂಗಲಾ ವಿರಹಿವ್ರಜಕ್ಕೆ ಸಂಭವಿಸಿತಾ ಪುರವರದೊಳು || ೨೭ ||

ಅಲ್ಲಲ್ಲಿಯಲರಸುಪ್ಪತ್ತಿಗೆಯ ಮೇಲೊರಗು |
ವಲ್ಲಲ್ಲಿ ಬಿರಿಮುಗುಳ ಬಿಜ್ಜಣಿಗೆಯಂ ಬೀಸು |
ವಲ್ಲಲ್ಲಿ ಚಂದ್ರಕಾಮತದ ಕೊಡದೊಳಿಟ್ಟ ಪನ್ನೀರ ಮಜ್ಜನಮಾಡುವ ||
ಅಲ್ಲಲ್ಲಿ ಸಿರಿಪಚ್ಚೆವುಡಿಯನುರದೊಳ್ಚೆಲ್ಲು |
ವಲ್ಲಲ್ಲಿ ಸಿರಿಗಣ್ಪಿನಣ್ಪಿನಿಕ್ಕುವ ಜನಗ |
ಳಲ್ಲದೇ ಸುಮ್ಮನಿರ್ಪವರ ಕಾಣೆಂ ಮನೋಭವನಿಡುವ ಕಿಚ್ಚಿನಿಂದ || ೨೮ ||

ಅಂಗನಾಜನವಗಲ್ದನುಸಂಧಿಯಂ ಕಾಣು |
ತಂಗಭೂತಂ ತನ್ನ ಬಲವಂ ಕೂಡಿ ತತ್ಪುರಜ |
ನಂಗಳೆರ್ದೆಯೆಂಬ ದುರ್ಗಕ್ಕೆ ಹರಿದಾಳಿಯಂ ಮಾಡಿ ಮೂವಳಸಿ ಮುತ್ತೆ |
ಮುಂಗುಡಿಯೊಳೇ ಲಗ್ಗೆಯಂ ಮಾಡಿ ಹತ್ತಿ ಕೋ |
ಳುಂಗೊಂಡು ಧೈರ್ಯಮಂ ಸೆರೆವಿಡಿದು ನಾಣಪಾ |
ಡಂಗೆಡಿಸಿಯೊಳಗರಿದು ದಂದಹ್ಯಮಾನಮಪ್ಪಂದದಿಂ ಸುಟ್ಟನಾಗ || ೨೯ ||

ಈಯಂದದಿಂದ ಪುರವರದೊಳೆಡೆವಿಡಲಿಲ್ಲ |
ದಾಯಿಕ್ಷುಕೋದಂಡನಲರ್ಗಣೆಯನಿಟ್ಟು ಮ |
ತ್ತಾಯಗಾಣಿಸಿ ಪುರಜನಂಗಳೆರ್ದೆಯಂ ಲಾಳವಟ್ಟೆಯಪ್ಪಂತಿರೆಸುವಾ ||
ಕಾಯಜನ ಕೋಳಾಹಳವನು ಕಂಡಾ ಮಹಾ |
ರಾಯನುದಿತೋದಯಂ ಭಯದ ಬಟ್ಟೆಯೊಳತಿ |
ಪ್ರಾಯಾಸದಿಂದ ನಡೆವ ಕಡುಹೇಡಿಯಂತೆ ಸಚಿವಂಗೂಡಿ ನಡೆಯುತಿರಲು || ೩೦ ||

ಛಾಯಾಪುರುಷನೊರ್ವ ಮುಂದೆ ನಡೆದೆಯ್ದುತಿರ |
ಲೀಯಚ್ಚರಿಯವನಾನೆಂದುಮೀಕ್ಷಿಸಿಯರಿಯೆ |
ನೀಯಿಳೆಯೊಳೆಂದರಸಗಿಂತೆಂದು ಬಿನ್ನಪಂಗೆಯ್ದನಾ ಮಂತ್ರೀಶನು ||
ರಾಯ ಕೇಳಿವನದೃಶ್ಯಾಕರಣಮಂ ಕಲಿತ |
ಮಾಯದ ಸುವರ್ಣಖುರನಾಮದಂಜನಚೋರ |
ನೀಯೆಮ್ಮ ನಗರಿಯೊಳಗಾವದಿನದಿಂದಿರ್ಪನೆಂದರಿಪಿ ತಾಮಿರ್ವರು || ೩೧ ||

ತಳುವಲಾಬರುನೆಳಲ್ನಡೆಯಲದರೊಡನೆಯ್ದ |
ಲಳುಕಿಯವನತಿವೇಗದಿಂ ನಡೆದಿಭ್ಯಕುಲ |
ತಿಲಕನರ್ಹದ್ದಾಸನೆಂಬವನ ಮನೆಯ ಬಾಗಿಲೊಳಿರ್ಪ ವಟತರುವಿನ ||
ನೆಳಲೊಳಗಡಂಗೆ ತಾಮಿರ್ವರವನೇಕಡೆಗೆ |
ತಳರ್ದನೆಂಬುದನರಿವೆನೆಂದಲ್ಲಿ ನಿಲುವನಿತ |
ರೊಳಗೆಯಾರಂಜಿಸುವ ಕಾಂಚನಪ್ರಾಕಾರದೊಳಮೆಯ್ಯ ಜಗಲಿಯೊಳಗೆ || ೩೨ ||

ಆಶಾನಿತಂಬಿನಿಯರಂತೆ ಮಿತ್ರಶ್ರೀವಿ |
ಲಾಸವತಿ ಚಂದನಶ್ರೀ ಮನೋಹರೆ ಶೀಲ |
ವಾಸೆ ವಿಷ್ಣುಶ್ರೀ ಗುಣಾಬ್ದಿ ನಾಗಶ್ರೀ ಸುಭಗೆ ಪದ್ಮಲತೆ ಪದ್ಮಿನಿ ||
ಭಾಸುರಚರಿತ್ರನಿಧಿ ಕನಕಲತೆ ಕರುಣಾಂಬು |
ರಾಸಿ ವಿದ್ಯುಲ್ಲತೆ ಸುಶೀಲನಿಧಿ ನವಮಂದ |
ಹಾಸಮುಖಿ ಕುಂದಲತೆಯೆಂಬ ಪೆಸರ್ವಡೆದ ಸಜ್ಜನವೆಂಡಿರಾಯಣ್ಬರು || ೩೩ ||

ಸತ್ಯಸ್ವರೂಪೆಯರ್ಸದ್ಬುದ್ಧಿವಂತೆಯ |
ರ್ನಿತ್ಯನಿಯಮವ್ರತಾಚಾರಾನ್ವಿತೆಯರುಕೃತ |
ಕೃತ್ಯೆಯರ್ಕುವಲಯದೊಳುನ್ನತ ಪತಿವ್ರತಾಗುಣಮಣಿವಿಭೂಷಣೆಯರು ||
ಅತ್ಯಂತರೂಪರಸಿಕತೆ ಸದ್ವಿಲಾಸದೊಳ್ |
ಪ್ರತ್ಯೇಕಮಾಯೆಣ್ಬರುಂ ನೋಡಿ ಭಾವಿಸಲ್ |
ಪ್ರತ್ಯಕ್ಷ ರತಿ ಸರಸ್ವತಿ ಮಹಾಲಕ್ಷ್ಮಿಗೆಣೆಮಿಗಿಲೆನಿಸಿ ರಂಜಿಸುವರು || ೩೪ ||

ಆ ವೈಶ್ಯನವರೊಡನೆಯಷ್ಟೋಪವಾಸಮಂ |
ಭಾವಶುದ್ಧಿಯೊಳೊಸೆದು ಮಾಡಿ ಬಳಿಕಿಂತೆಂದ |
ನಾವಲ್ಲಭೆಯರೊಳೆಲೆ ಸತಿಯರಿರ ನಮ್ಮರಸಿನಾಜ್ಞೆಯಿಂದೀ ನಗರಿಯಾ ||
ಸ್ತ್ರೀವೃಂದಮೆಲ್ಲ ಪೊರವೊಳಲ ಬನಕೆಯ್ದಿತ್ತು |
ನೀವಿಲ್ಲಿ ತಡಮಾಡದೇ ಹೋದೊಡಾನೀ ಜಿ |
ನಾವಾಸದಲ್ಲಿ ಜಾಗರಮಿರ್ಪೆನಲ್ಲದೊಡೆಯಪರಾಧವೆಮಗಪ್ಪುದು || ೩೫ ||

ಎಂದ ನುಡಿಗಿಂತೆಂದರವರೆಲೇ ಸ್ವಾಮಿ ಈ |
ನಂದೀಶ್ವರದ ನೋಂಪಿಯಷ್ಟೋಪವಾಸಮಂ |
ಸಂದ ಭಕ್ತಿಯೊಳಿರ್ದು ಮತ್ತಮೀಪುಣ್ಯತಿಥಿಯೊಳಗೆ ಜಾಗರಮನಿರದೆ ||
ನಂದನಕೆ ನಡೆಯೆ ಪಾಪಂ ಸಂಭವಿಸದೆಯದ |
ರಿಂದರಸುಮಾಡಿದುದ ಮಾಡಲಿ ನಾವುನಿ |
ನ್ನೊಂದಾಗಿ ಜಾಗರವನಿರ್ಪೆವಲ್ಲದೆ ವನಕ್ಕೆಯ್ದುವುದು ನಮಗಾಗದು || ೩೬ ||

ಎಂದು ನುಡಿದಾಯೇಣನೇತ್ರೆಯರ ನುಡಿಗೆ ಮನ |
ದಂದು ಹರ್ಷೋತ್ಕರ್ಷನಾಗಿ ಬಳಿಕಾ ವೈಶ್ಯ |
ವೃಂದಾರಕಂ ನುಡಿದನಿಂತೆದು ಜನತಾಧಿಪತಿ ಮಾಡಿದಾಜ್ಞೆಯಿಂದ ||
ಬಂದ ವಿಘ್ಞಣ ಬರಲಿ ಹಿಂದೆ ಮಾಡಿದ ಪಾಪ |
ದಿಂದಾದ ದುಃಖದಾವರಣಮಂ ನೀಗಬೇ |
ಕೆಂದು ನೀವುಸಿರಿದುತ್ತಮಮಪ್ಪ ವಚನಮದು ಲೇಸಾಯಿತೆಂದೆನುತ್ತ || ೩೭ ||

ಮತ್ತಮಾ ವೈಶ್ಯವಂಶಾಂಬರಸುಧಾಂಶು ಸ |
ದ್ವೃತ್ತಸಂಪನ್ನಗುಣನಿಧಿಗಳೊಳಗಿಂತೆಂದ |
ನುತ್ತಮದ ಮಾತು ನೀವೆಂದುದರ್ಹನ್ಮಾರ್ಗಮಂ ನಿಶ್ಚಯದೊಳು ನಂಬಿ ||
ಅತ್ತಿತ್ತ ಚಿತ್ತಮಂ ಹರಿಯದಾಚರಿಸಿದವ |
ರ್ಗೆತ್ತಣದು ಪಾಪಮೆತ್ತಣದು ದುರ್ಗತಿ ತಾ |
ನೆತ್ತಣದು ಪರಬಾಧೆಯದರಿಂದ ಜಿನಮಾರ್ಗವೇ ಮುಖ್ಯಕಾಣಾ || ೩೮ ||

ಎಂದು ನಿಡಿದಾ ಬಳಿಯೊಳಿರ್ಪ ಜಿನಗೃಹತೆ ಮನ |
ಸಂದು ನಡೆದರ್ಹತ್ಪದಾಂಬುರುಹಕತಿ ಭಕ್ತಿ |
ಯಿಂದ ಸತಿಯರುಸಹಿತ ಸಾಷ್ಟಾಂಗವೆರಗಿ ಕಳಶಸ್ಥಾಪನೆಯನು ಮಾಡಿ ||
ಮಂದೇತರಪ್ರಮೋದದಿ ರುಚಿರಮಪ್ಪ ಜನ |
ದಿಂದ ತನಿರಸದಿಂದ ಘೃತದಿಂದ ಘಟ್ಟಿವಾ |
ಲಿಂದ ಕೆನೆಮೊಸರಿಂದ ಮನದಣಿವತೆರದಿನಭಿಷೇಕಮಂ ಮಾಡಿ ಬಳಿಕ || ೩೯ ||

ಉತ್ತಮೋದಕದಿನುತ್ತಮಮಪ್ಪ ಗಂಧದಿಂ |
ದುತ್ತಮಾಕ್ಷತೆಯಿನುತ್ತಮ ಸುರಭಿಕುಸುಮದಿಂ |
ದುತ್ತಮರಸಂ ಬಡೆದ ಪಂಚವಿಧಭಕ್ಷ್ಯದಿಂದುತ್ತಮದ ಮಣಿದೀಪದಿಂ ||
ಉತ್ತಮದಶಾಂಗಧೂಪದಿ ಸುಧಾರಸಪೂರಿ |
ತೋತ್ತಮ ಫಲಾವಳಿಯಿನುತ್ತಮಾರ್ಘ್ಯದಿ |
ಚಿತ್ತವಿತ್ತು ಮೃತ್ಯುಂಜಯನ ಪಾದಪಂಕೇರುಹಕ್ಕರ್ಚನಂಗೆಯ್ದು ಬಳಿಕ || ೪೦ ||

ವರಗಂಧಜಲಸಿದ್ಧಶೇಷೆಯಂ ಸಿರಿದಲೆಯೊ |
ಳಿರಿಸಿ ಮತ್ತಾ ವೈಶ್ಯಕುಲಲಲಾಮಂ ತನ್ನ |
ತರುಣಿಯರೊಳಿಂತೆಂದನೀ ಧರ್ಮದೊಳ್ನಿಮಗೆ ಸಮ್ಯಕ್ತ್ವಮುದಯಮಾದಾ ||
ಪರಿಯನೆನುಗುಸಿರಿಮೆನಲಾ ಶೀಲನಿಧಿಗಳುರು |
ತರಹರ್ಷದಿಂದ ಕರಕಮಲಂಗಳಂ ಮುಗಿದು |
ಪರಭೃತಾಲಾಪದಿಂದಾ ಪ್ರಾಣವಲ್ಲಭನೊಳಿಂತು ಬಿನ್ನಪಂಗೆಯ್ದರು || ೪೧ ||

ನಮಗೆ ಸದ್ಧರ್ಮದೊಳ್ ಸಮ್ಯಕ್ತ್ವಮಾದ ಸತ್ಕ್ರ |
ಮಮನುಸಿರುವೆವು ಕಡೆಯಲ್ಲಿ ನೀವೆಮಗೆ |
ನಿಮಗೆ ಸಮ್ಯಕ್ವ್ತ ಸಂಭವಿಸಿದ ನಿಮಿತ್ತಮಂ ನಿರವಿಸಲ್ಬೇಕೆಂದೆನೆ ||
ಮಮತೆಯಿಂದಿಂತೆಂದು ಪೇಳುತ್ತಮಿರ್ದನಾ |
ರಮಣೀಜನಂ ಮರದ ನೆಳಲಡಿಯೊಳಿರ್ದ ಭೂ |
ರಮಣೀಶನಾ ಮಂತ್ರಿಯಾ ಕಳ್ಳನುಂ ತೆರದಿನರ್ಹದ್ದಾಸನು || ೪೨ ||

ಚಕಿತಮೃಗಶಾಬಲೋಚನದ ಚಂದ್ರಾನನದ |
ಮುಕುಳಿತ ಸರೋರುಹಸ್ತನದ ಭೃಂಗಾಳಕದ |
ಶುಕಶಿಶುಸಮಾನವಚನದ ವನಿತೆಯರ್ಕೇಳಲಾ ಕಥೆಯನುಸಿರ್ದನಿಂತು ||
ಅಕಲಂಕಚರಿತನಗಣಿತಗುಣಕರಂಡಕಂ |
ಪ್ರಕಟಿತ ಯಶೋವಿಶದನನುಪಮ ಕಲಾನ್ವಿತಂ |
ಸುಕವಿಜನವಿನುತನರ್ಹದ್ದಾಸಜಿನಸಮಯವಾರ್ಧಿವರ್ಧನಚಂದ್ರನು || ೪೩ ||

ಇದು ವಿಬುಧಜನವಿನುತಮಿದು ವಿಬುಧಜನವಿನತ |
ಮಿದು ವಿದಿತಜಿನಸಮಯಶರಧಿಸಂಪೂರ್ಣೇಂದು |
ಸದಮಲಚರಿತ್ರ ಚೆಂಗಾಳ್ವಭೂವರನ ಸಚಿವಾನ್ವಯಾಂಬರಹಂಸನು ||
ಮದನಸಮರೂಪನುತ್ತಮಗುಣಕರಂಡಕಂ |
ಚದುರಮಂಗರಸನುಸಿರ್ದೀ ಕೌಮುದೀಕಥೆಯೊ |
ಳೊದವಿದುದು ಚಂದ್ರಿಕಾವಿಹರಣದ ವರ್ಣನಂ ಮೂರನೆಯ ಮಿಸುಪ ಸಂಧಿ || ೪೪ ||

ಅಂತು ಸಂಧಿ ೩ ಕ್ಕಂಪದನು ೨೦೦ಕ್ಕಂ ಮಂಗಳ ಮಹಾ