ಶ್ರೀಮದರ್ಹದ್ದಾಸ ವೈಶ್ಯವಿಭು ಪೇಳ್ದನಾ |
ತಾಮರಸವದನೆಯರ್ಕೈಗಳಂ ಮುಗಿದು ಸು |
ಪ್ರೇಮದಿಂ ಕೇಳಲಾ ತನಗಾದ ವಿಮಲಸಮ್ಯಕ್ವ್ತದ ಮಹಾಕಥೆಯನು || ಪಲ್ಲ ||

ಈ ಮಧುರೆಯರಸು ನಮ್ಮುದಿತೋದಯನ ತಂದೆ |
ಕಾಮನಿಭರೂಪನಾ ಪದ್ಮೋದಯಂ ಹೇಮ |
ತಾಮರಸವದನೆ ಜಂಭಾವತಿವೆಸರ ಸುದತಿ ಕೂಡಿ ಸುಖಮಿರ್ಪರಲ್ಲಿ ||
ಈ ಮಂತ್ರಿಮುಖ್ಯನ ಸುಬುದ್ಧಿಯ ಪಿತಂ ಗುಣೋ |
ದ್ದಾಮ ಸಂಭಿನ್ನಮತಿಮಂತ್ರಿ ಸುಪ್ರಭೆಯೆಂಬ |
ನಾಮದಂಗನೆಗೂಡಿಯರಸಗತಿಹಿತಕಾರ್ಯನಾಗಿ ಸುಖಮಿರ್ಪನಲ್ಲಿ || ೧ ||

ಧಾರುಣಿಗತಿಪ್ರಸಿದ್ಧಂ ರೂಪ್ಯಖುರನಾಮ |
ಧಾರಿಯೀವರ್ತಿಪ ಸುವರ್ಣಖುರನೆಂದೆಂಬ |
ಚೋರನ ಜನಕನಂಜನದಿ ವಿದ್ಯಾನಿಪುಣನಾರೂಪ್ಯಖುರೆಯೆಂಬಳು ||
ನಾರಿ ತನಗಾಗೆ ಸಪ್ತವ್ಯಸನದಲ್ಲಿ ಮನ |
ವಾರೆಯಾಚರಿಸುತಿರ್ದೊಂದು ದಿನದಲ್ಲಿ ಈ |
ಊರಂಗಡಿಯೊಳು ಜೂಜಾಡಿ ಸೋಲ್ತತಿವಿತ್ತಮಂ ಕ್ಷುಧಾಪೀಡನಾಗಿ || ೨ ||

ಭರದಿ ಮನೆಗೆಯ್ದಿ ಉಣಬೇಕೆಂದು ನಡೆದು ಬರು |
ತರಮನೆಯ ಬಾಗಿಲೊಳ್ಪಂಚವಿಧಪಾಕಬಂ |
ಧುರಸುರಭಿವಾಯು ತೀಡುತ್ತಿರಲದಂ ವಾಸಿಸುತ್ತಮೀ ಪೊಸತೆನಿಸುವ ||
ಪರಿಮಳವನೆಂದು ಕಂಡಿಯೆ ನಾನಿಂತಿದರ |
ಪರಿಯನರಿವುದಕಾವ ಗಹನಮಿದು ನನಗೆಂದು |
ದುರುಳನಾ ಗಾಳಿವಟ್ಟೆಯೊಳು ನೃಪಗೃಹಕದೃಶ್ಯಂಬಡೆಯುತೊಳಹೊಕ್ಕನು || ೩ ||

ತುಂಬಿದ ತಟಾಕಕಿಕ್ಕಿದ ತುಂಬನುರ್ಚಲಾ |
ಅಂಬು ಘುಳಘುಳನೆ ಪೊರಮಡುವಂತೆ ಭೂಪಾಲ |
ನಿಂಬುವೆತ್ತೋಲಗದಿನೆಳ್ವವಸರದೊಳು ರಣಮಂಡಲದ ಮಣಿವಾಗಿಲು ||
ತುಂಬಿ ಪೊರಮಾಡುವ ಪುರವಟಿಗರಡಪವಳರ ಯ |
ಳಂಬಾಯತರ ನಚ್ಚಣಿಗರ ಪಡಿಯರರ ನಿಕು |
ರುಂಬದೆಡೆಯತಿ ಚತುರತನದಿಂದ ಹೊಕ್ಕನಾ ಅರಮನೆಯನಾ ಚೋರನು || ೪ ||

ಸಾಲುವಿಡಿದೆಸೆವ ವಾರಣಶಾಲೆ ನವವಾಜಿ |
ಶಾಲೆ ಬಹುವಿಧಶಸ್ತ್ರಶಾಲೆ ರಂಜಿಪ ಕರಣ |
ಶಾಲೆ ನಾಟಕಶಾಲೆ ನಾನಾತೆರದ ಶಾಸ್ತ್ರಶಾಲೆ ಸನ್ಮಂತ್ರಶಾಲೆ ||
ಓಲಗದಶಾಲೆ ಮಜ್ಜನಶಾಲೆ ಭೋಜನದ |
ಶಾಲೆಗಳ ಮುಂದೆ ಪಜ್ಜಳಿಪ ರನ್ನದ ಪಟ್ಟ |
ಶಾಲೆಗಳ ನೆಳಲುವಿಡಿದಾ ದುಷ್ಟನೆಯ್ತಂದನಾರ ಮೈಸೋಂಕದಂತೆ || ೫ ||

ಮಜ್ಜನದ ಭೋಜನದ ಬೊಕ್ಕಸದ ನರ್ತನದ |
ಸಜ್ಜನದ ಸರ್ವವಿಧದೊಳಿಗಂ ಮೊದಲಾದ |
ಕಜ್ಜಳಾಕ್ಷಿಯರ ಸೌಂದರ್ಯ ಲಾವಣ್ಯ ಕಣ್ಗೊಳಿಸುವೇರುಂಜವ್ವನ ||
ಪಜ್ಜಳಿಪ ತೊಡವನಾ ಮುಂಡಿಯಾದಿಯಾಗಿ ಕೆಂ |
ಬಜ್ಜೆವರ ನಡೆನೋಡುತಂ ನಡೆದನಾಗ ನಿ |
ರ್ಲಜ್ಜಾಹೃದಯನಾರುಮರಿಯದಂದದಿ ಮಹೀಪಾಲಕನ ಮಂದಿರದೊಳು || ೬ ||

ಮುಡಿಗೆ ಮುಗುಳಂ ಮುಡಿವ ಮುಗ್ಧಾಕ್ಷಿಗಂಜನಮ |
ನಿಡುವ ಮೂಗಿಂಗೆ ಮೂಗುತಿಯನಿಕ್ಕುವ ಕುಚಕೆ |
ಬಿಡುಮುತ್ತಿನೇಕಾವಳಿಯನು ಕಟ್ಟುವ ಕೈಗೆ ಕಂಕಣಂಗಳ ತುಡಿಸುವಾ ||
ನಿಡುವೆರಲ್ಗುಂಗುರಮನನುಗೊಳಿಸುವುಡಿಗೊಪ್ಪು |
ವುಡೆಯನುಡುವುತ್ತಮದಕಾಂಚಿಯಂ ಕಟಿತಟಕೆ |
ತೊಡಚುವಡಿಗಲತಿಗೆಯನೂಡುವಬಲೆಯರ ನೋಡುತ್ತಲವನೆಯ್ತಂದನು || ೭ ||

ಚಂದ್ರಲೋಕವನೆಯ್ದುವಂತೆ ನಗೆಮೊಗವ ನಾ |
ಗೇಂದ್ರಲೋಕಮನೆಯ್ದುವಂತೆ ಫಣಿವೇಣಿಯ ಮೃ |
ಗೇಂದ್ರಲೋಕಮನೆಯ್ದುವಂತೆ ಬಂಧುರತೆಯಂಬಡೆದ ಕಡು ಬಡನಡುವಿನ ||
ಇಂದ್ರಲೋಕಮನೆಯ್ದುವಂತೆ ಬಂಧುರತೆಯಂಬಡೆದ ಕಡು ಬಡನಡುವಿನ ||
ಇಂದ್ರಲೋಕಮನೆಯ್ದುವಂತೆ ಊರ್ವಸಿರಂಭೆ |
ಇಂದ್ರಾಣಿಗೆಣೆಯೆನಿಸಿ ಕಣ್ಮನಂಗೊಳಿಪ ಮನು |
ಜೇಂದ್ರನಂತಃಪುರದ ಸತಿಯರ ಸಮೂಹದೊಳಹೊಕ್ಕವಂ ನಡೆತಂದನು || ೮ ||

ಎಣಿಕೆಮನದೊಳಗಿಲ್ಲದೆದೆಹೊಯ್ಲತನದಿನೊ |
ಳ್ಳುಣಿಸಿನಡುಗೆಯ ಬೋನಮಂ ಪಿಡಿದು ಸಂ |
ದಣಿಸಿದುತ್ತಮರೂಪವತಿಯರೊಂದಾಗಿ ಭೋಜನಶಾಲೆಗೆಯ್ದಿಬಳಿಕ ||
ಮಣೀದೀಪವಿಕ್ಕೆಲದೊಳುರಿಯೆ ನವರತ್ನದ |
ಡ್ಡಣಿಗೆಯೊಳ್ತಟ್ಟೆಬಟ್ಟಲನಿಟ್ಟು ಹೊನ್ನಹರಿ |
ಉಣಮುಂದೆ ಧಗಧಗಿಸುತಿರಲಲ್ಲಿ ಕುಳ್ಳಿರ್ದ ಭೂಪಾಲನಂ ಕಂಡನು || ೯ ||

ಹೊಸಹೊನ್ನಪಾತ್ರೆಯೊಳಗಾ ಭೂಪನರಸಿಯರು |
ದೆಸೆದೆಸೆಗೆ ಕಂಪಿಸುವ ಕಲಸಿದ್ದುಪ್ಪಿನಕಾಯಿ |
ಬಿಸಿಯಸನ ತೊಯೆತುಪ್ಪಂ ತಾಳಿಲಪಳಿದ್ಯ ಕಜ್ಜಾಯ ಸಕ್ಕರೆ ಪಾಯಸ ||
ರಸರಸಾಯನಕಟ್ಟುಗೊಳು ಚಿಲುಪಾಲು ಕೆನೆ |
ಮೊಸರೆಂಬಿವಂ ಬಡಿಸುವುದ ಕಂಡು ಬಾಯಿನೀ |
ರೂಸರಿಯಿದರಿಂದ ಬಂದುದ ಕಾಣ್ಬೆನೆಂದು ಮತ್ತಾಯೆಡೆಯ ಮುಂದಕೆಯ್ದಿ || ೧೦ ||

ಅರಸನಾರೋಗಿಸುವ ಕೈ ಕರಂ ಸೋಂಕದಂ |
ತುರುಮುದದಿನುಣಬಡಿಸುವುತ್ಪಲವಿಲೋಚನೆಯ |
ರರುಣಪಲ್ಲವಪಾಣಿತಳದ ಮಿಸುನಿಯಪಾತ್ರೆಯೊಂದಿನಿಸು ಮುಟ್ಟದಂತೆ ||
ತರಹರಂಗೊಂಡುದತ್ತಾವಧಾನದೊಳೊಂದು |
ಹೊರೆಯಲ್ಲಿ ಕುಕ್ಕರಿಸಿ ಕುಳ್ಳಿರ್ದವಂ ತನ್ನ |
ಹಿರಿದಾಗಿ ಹಸಿದ ಬಸಿರೊಡೆವಲ್ಲಿಪರಿಯಂತವತಿಚತುರತನದೊಳುಂಡು || ೧೧ ||

ಮಂದಿರಕೆ ಬಂದು ಕುರಿ ಬಾಳೆವಣ್ಣಂ ಮೆಚ್ಚಿ |
ದಂದದೊಳು ದಿನಬಂಜೆವಡೆಯದೆದೆದುಡುಕಿಲ್ಲ |
ದೊಂದಾಗಿ ದಣಿಯುಣುತ್ತಾಖಳಂ ಪೋಗುತಿರಲಿದರಿಂದ ಭೂಪಾಲನು ||
ಎಂದಿನಂದದೊಳು ಸಂಪೂರ್ಣಭೋಜನವಡೆಯ |
ದಂದಮಂ ಸುವ್ವಾರರೊಳ್ಪೇಳ್ವುದಂ ನಾಣ್ಚಿ |
ಯೊಂದೊಂದು ದಿನದಿನಕ್ಕೊಂದೊಂದು ಹೊರೆಯಡಗಿ ಮೈ ಕರಂ ಬಡವಾದುದು || ೧೨ ||

ಇಂತಾದುದಂ ಕಂಡು ಸಂಭಿನ್ನಮತಿಮಂತ್ರಿ |
ಚಿಂತೆಯಿಂ ಕರಯುಗಲಮಂ ಮುಗಿದು ಎಲೆ ಮಹೀ |
ಕಾಂತ ನಿನ್ನಂಗವೇಂ ಕಾರಣದಿ ದಿನದಿನಕೆ ಕೃಷ್ಣಪಕ್ಷದ ಚಂದ್ರನಾ ||
ಕಾಂತಿಯಂತಾಗುವುದನುಸಿರಬೇಕೆನಲಾತ |
ಗಿಂತೆಂದನಾ ನೃಪತಿ ಕಿರಿದು ಪಗಲಿಂದ ತಣಿ |
ವಂತೂಟಮಂ ಮಾಳ್ಪುದಕ್ಕಶನಮಿಲ್ಲವದರಿಂದ ತನು ಬಡವಾದುದು || ೧೩ ||

ನಯಹೀನನಾದ ನರನಾಥನಾಳುವ ನಾಡು |
ದಯಯಿಲ್ಲದಾ ತಪಸಿ ಮಾಡುವ ತಪಂ ಜಲಾ |
ಶ್ರಯದ ಹವಣಿಲ್ಲದಾ ಬೆಳಸು ನೆರೆ ಜೀವಿತಂಬಡೆಯದಾ ಭಟಸಂತತಿ ||
ಲಯಮಾಗದೇ ಸುಮ್ಮನಿರ್ಪುದಿಲ್ಲದರಂತೆ |
ನಿಯತದಿಂದುಂಬುಣಿಸು ಕಡಿಮೆಯಾದೊಡಲು ನಿ |
ಶ್ಚಯದಿಂದ ಜಯಮಪ್ಪುದೋ ಜಯಂಬಡೆಯದೋ ಎಂದು ತಿಳಿವುದು ಚತುರರು || ೧೪ ||

ಎನೆ ಕೇಳಿ ಸುವ್ವಾರರಂ ಕರಸಿ ನೃಪಗೆ ತ |
ಕ್ಕನಿತಶನಮಂ ಮಾಳ್ಪುದಿಲ್ಲವೇ ಪೇಳಿಮೆಂ |
ದೆನಲಿಂತು ನುಡಿದರವರೆಂದಿನದಿನಲ್ಲದೇ ಕಿರಿದುಮಾಳ್ಪುದಿಲ್ಲ ||
ಜನಪತಿಗೆ ತೃಪ್ತಿವಡೆಯದುದೆಮ್ಮ ಪಾಪಫಲ |
ವೆನೆ ಮಂತ್ರಿಯರಸಂಗೆ ಭಸ್ಮಕವ್ಯಾಧಿ ಸಂ |
ಜನಿಸಿತೋ ಎಂದು ಕಟ್ಟೇಕಾಂತದೊಳ್ಕೇಳಲಿಂತೆಂದು ನುಡಿದನಾಗ || ೧೫ ||

ಏನೆಂದರಿಯೆ ಮಂತ್ರಿ ಪರಿಯಣಕೆ ಬಂದಶನ |
ಮಾನಾಲ್ಕರೊಳಗೊಂದು ಭಾಗೆಯಲ್ಲದ ಬಳಿ |
ಕ್ಕಾನಲ್ಲಿ ಕೆಯ್ಯನಿಡುವನಿತರೊಳಗುಳಿದುದೆಲ್ಲಂ ಮಾಯಮಪ್ಪುದೆನಲು ||
ಆ ನುಡಿಗೆ ಭೂತವೊಡನುಂಬುದೆಂಬೆವೇ |
ಭೂನಾಥ ಕೇಳ್ನೋಡಿದ ಮಾತ್ರದೊಳ್ ತೃಪ್ತಿ |
ತಾನವಕ್ಕಲ್ಲದೇ ಉಣಿಸೆಂಬುದಿನಿಸಿಲ್ಲಮೆಂದು ಬಳಿಕಿಂತೆಂದನು || ೧೬ ||

ಇದು ಮನುಷ್ಯರ ಕಪಟಮಲ್ಲದೇ ಪೆರತಿಲ್ಲ |
ವಿದಕೆಣಿಸುವುದಕೆ ಸಾಮರ್ಥ್ಯರಾರಂ ಕಾಣೆ |
ನಿದನದೃಶ್ಯಂಬಡೆವರಲ್ಲದೆ ಮಾಡರಾ ವಿದ್ಯೆಯೀ ಊರೊಳಿರ್ಪ ||
ಮದಯುತಂ ರೂಪ್ಯಖುರನಲ್ಲದುಳಿದವರ್ಗಿಲ್ಲ |
ಮಿದನುಜ್ಜುಗಿಸುವೊಡಿಂತಿನಿಸು ಹೇಸುವನಲ್ಲ |
ವದರಿನವನೇ ತಪ್ಪದೆಂದು ಭಾವಿಸಿ ಮಂತ್ರಿಯರಸಿನೂಟದ ಮನೆಯೊಳು || ೧೭ ||

ಎಕ್ಕದ ಮುಗುಳ್ಗಳಂ ಹರಹಿ ಜಗಜೆಟ್ಟಿಗಳ |
ನೆಕ್ಕತುಳದಾಳ್ಗಳಂ ಮರೆಯೊಳಡಂಗಿಸಿ ಬ |
ಳಿಕ್ಕ ಘಟದಲ್ಲಿ ಕೆಂಡವನಿರಿಸಿಯರಸನಂ ಕುಳ್ಳಿರಸಲಾ ಕಳ್ಳನು ||
ಹೊಕ್ಕು ಕಾಲಿಡುವಾಗಲವು ಛಣಿಲ್ಫಟಿಲೆನಲ್ |
ಸಿಕ್ಕಿದೆಯಲಾ ಎಂದು ಬಲಿದು ಕದವಂ ಕೆಂಡ |
ಕಿಕ್ಕೆ ಧೂಪವನು ತದ್ದೂಪದಿಂದವನ ಕಣ್ಣಂಜನಂ ಕರಗಲಾಗ || ೧೮ ||

ಕಂಡವನ ರೂಪನೆಲವೋ ಪಾತಕಾ ಧರಾ |
ಮಂಡಲದೊಳಾರೆಣಿಕೆ ಮಾಡದುದನೀ ಮನಂ |
ಗೊಂಡು ಮಾಡಿದೆಯೆಲಾ ಎಂದು ಮೂದಲಿಸುತಾ ಮಲ್ಲರಿರದೆಯ್ದಿ ಹಿಡಿದು ||
ದಿಂಡುಗೆಡೆವಂತೆ ಒಳಗುದ್ದು ಹೊರಗುದ್ದಿಕ್ಕಿ |
ದಂಡಿಸಿ ಬಳಿಕ್ಕ ಬಲುಹೊನಿ ಪೆಡಗೈಗಟ್ಟಿ |
ಕೊಂದು ಬರ್ಪಾಗಳುದ್ದಂಡನಾ ರೂಪ್ಯಖುರನಿಂತು ಚಿಂತಿಸಿದನಾಗ || ೧೯ ||

ಉರಿವ ಬೇಸಗೆಯ ಮಧ್ಯಾಹ್ನದೊಳ್ಮದಧಾರೆ |
ಸುರಿಯುತಾ ಸೊಕ್ಕಿಂದ ಬಾಯಾರಿ ಬಂದೊಂದು |
ಸರಸಿಜಾಕರಮನೀಕ್ಷಿಸುತಲ್ಲಿ ಚೆನ್ನಾಗಿ ತುಂಬಿದಾ ಕೆಸರಮೇಲೆ ||
ಪರಿಕಲಿಸಿಕೊಂಡಿರ್ದ ಸೆಳೆನೀರನೇ ಕಂಡು |
ಪರಿಪೂರ್ಣ ಜಲಮೆಂದು ಹೊಕ್ಕು ತಾನದರೊಳಗೆ |
ಪಿರಿದು ಜಿಹ್ವಾಲಂಪಟತ್ವದಿಂ ಬೀಳ್ದ ಕರಿಯವೊಲಾದುದೆನ್ನ ಕಾರ್ಯ || ೨೦ ||

ಎಂದು ತಾನೆಸಗಿದಾ ಕಾರ್ಯಕ್ಕೆ ತಾನೆ ಮನ |
ನೊಂದು ಚಿಂತಿಸುತ ಬರ್ಪಾಗಳಾ ರೂಪ್ಯಖುರ |
ನಂದಮಂ ನೋಡಬೇಕೆಂದೆನುತ್ತಾ ಊರಕೇರಿಯ ಜನಂಗಳೆಲ್ಲ ||
ಬಂದು ಕೈವೊಯ್ದಟ್ಟಹಾಸದಿಂದ ನುಡಿದರಿಂ |
ತೆಂದು ಕೋಳಿಯತತ್ತಿಯುರುಳಿಗೊಳಗಾಗಿ ನಿಂ |
ದಂದಮಾಯ್ತೀ ಲಂಡನಿರವೆಂದು ತಾವೊಂದು ಕಥೆಯನಿಂತೆಂದರಾಗ || ೨೧ ||

ಒಂದು ನಗರಿಯೊಳೋರ್ವ ನರಪತಿಯ ಮಗಳು ರೂ |
ಪಿಂದ ಮನಸಿಜನ ಮಾನಿನಿಗೆ ವೆಗ್ಗಳಮಾಗಿ |
ವೊಂದು ವಿದ್ಯಾಮಂಟಪದೊಳೋದುತಿರಲಲ್ಲಿಗೋರ್ವ ಭಿಕ್ಷುಕಪಾರ್ವನು ||
ಬಂದು ಕಂಡಾಸಕ್ತನಾಗಿ ನನ್ನೀ ಜಾಣ್ಮೆ |
ಯಿಂದವಳ ಕೊಂಡುಪೋಗುವೆನೆಂದು ನೃಪನೆಡೆಗೆ |
ಬಂದು ಹಸನಾಗಿಯಾಶೀರ್ವಾದಮಂ ಮಾಡಲಿಂತೆಂದನಾ ಭೂಪನು || ೨೨ ||

ನಿನಗಾವ ಶಾಸ್ತ್ರ ಬಹುದೇನುಕಾರಣ ಬಂದೆ |
ಎನಲೆಂದನಾಂ ನಷ್ಟಮುಷ್ಟಿಚಿಂತನೆಯುಮಂ |
ವಿನುತ ಸಾಮುದ್ರಿಕಂ ಮೊದಲಾದ ಸರ್ವಶಾಸ್ತ್ರವನರಿವೆನದುಕಾರಣ ||
ಮನುಜೇಶ ನಿನ್ನ ಮಕ್ಕಳನೆಲ್ಲರಂ ಕರೆಯಿ ||
ಸೆನುತವರನೆಲ್ಲರಂ ಕರಸಿಯವರಂ ನೋಡಿ |
ತನಗಲ್ಲದವರನೊಳ್ಳಿತ್ತೆಂದು ತನಗೆ ಬೇಕಾದವಳಿಗಿಂತೆಂದನು || ೨೩ ||

ಇವಳ ಮೈಯೊಳಗೆಯವಲಕ್ಷಣವೆ ಸಂಪೂರ್ಣ |
ಮಿವಳುದಯಿಸಿದ ಮನೆಯುಮಿವಳ ತಂದಾ ಮನೆಯು |
ಮಿವಳು ಮೈನೆರೆವ ಸಮಯದೊಳೆ ಹಾಳಾಗುವುದು ಸತ್ಯಮೆಂದದಕ್ಕೆ ತಕ್ಕ ||
ಹವಣಾಗಿ ಶಾಸ್ತ್ರಮಂ ಕಪಟದಿಂ ಹೊಸೆದು ಬುಧ |
ನಿವಹಮೆಲ್ಲಂ ಮೆಚ್ಚುವಂದದಿಂದೋದಲಾ |
ಅವನೀಶನಂತದಕೆ ಬೆದರಿಯಾ ಪಾರ್ವನೊಳಗಿಂತೆಂದು ನುಡಿದನಾಗ || ೨೪ ||

ಪರಿಹರಮಿದಕ್ಕಾವುದೆನಲಿಂತು ನುಡಿದನಾ |
ಪರಿಹರಮಿದಕ್ಕುಂಟು ಪೇಳಲಂಜುವೆನೆನ |
ಲ್ಪಿರಿಯರೈ ನಿಮಗೇಕೆ ಭೀತಿಯಿದನೊರಯಿಮೆನಲೊಂದು ಮಂದಸಿನೊಳಿವಳಾ ||
ಇರಿಸಿ ಈ ಮುಂದಣಮವಾಸೆಯೊಳಗೀ ನಗರಿ |
ಯರುಗೆಹರಿವೀ ಗಂಗೆಯೊಳಗೆ ಬಿಟ್ಟೊಡೆ ದೋಷ |
ಬರದು ನಿಮಗೆನಲದಕೊಡಂಬಟ್ಟು ಕಳುಹಲಾ ಪುರವ ಪೊರಮಟ್ಟು ಬಂದು || ೨೫ ||

ತಳುವದಾ ಭಿಕ್ಷುಕಂ ತಾ ಮೊದಲು ಕುರಿತ ದಿನ |
ದೊಳಗೆಯಾ ಪುರಕೆ ಇರ್ಗಾವುದಂ ಪೋಗಿಯಾ |
ಪೊಳೆಯೊಳಾ ಮಂದಾಸು ಬರ್ಪ ದಾರಿಯೊಳೆಳಸಿ ಕಾದುಕೊಂಡಿರ್ಪಾಗಳು ||
ಇಳೆಗೀಶನಿತ್ತಲವನೊರೆದಂತೆ ಮಂದಾಸಿ |
ನೊಳಗೆ ಸುಕುಮಾರಿಯಂ ಕೂಡಿ ಬಳಿಕಾ ಹರಿವ |
ಹೊಳೆಯಲ್ಲಿ ಬಿಡಿಸಲೆಡೆವಳೆಯಲ್ಲಿಯೊರ್ವ ಭೂಪಾಲಕಂ ಬೇಂಟೆವಂದು || ೨೬ ||

ಒಂದು ಹುಲಿಯಂ ಹಿಡಿದುಕೊಂಡು ಕಡುಬಾಯಾರಿ |
ಮುಂದೆ ಪರಿವಾ ಹೊಳೆಯಲ್ಲಿ ಕಂಡಲ್ಲಿಗೆಯ್ದಲಾ |
ಮಂದಾಸು ನಳನಳಿಸಿ ಬರುತಿರಲದಂ ತರಿಸಿಯಲಿರ್ದ ಸುಕುಮಾರಿಯಾ ||
ಸೌಂದರ್ಯಮಂ ನೋಡಿ ಕೆಲದೊಳಿರ್ದಕ್ಷರಗ |
ಳಿಂದರಸುಮಗಳೆಂಬುದಂ ತಿಳಿದು ಮುದದಿಂದ |
ಮಂದಾಸಿನೊಳಗಾ ಹುಲಿಯಂ ಕೂಡಿ ಹೊಳೆಯೊಳು ಬಿಡಿಸಿ ಪೋದನಿತ್ತ || ೨೭ ||

ತಾನಿರ್ಪ ಹೊಳೆಯ ತಡಿಗೆಯ್ದಲಾ ಮಂದಾಸು |
ನಾನಂದ ಮಾಡಿದುತ್ತಮಸುಕೃತಫಲದಿಂದ |
ಮೀ ನಾರಿ ಕೈಸಾರ್ದಳೆಂದದಂ ಪಿಡಿದು ಭರದಿಂದ ಮುಚ್ಚಳವ ತೆಗೆದು ||
ಸಾನಂದದಿಂ ನೋಡುವಾಗ ಮೇಲ್ವಾಯೆ ಕಂ |
ಡೇನಬಲೆಯುಗುರನಿಕ್ಕುವೊಡಿದೇ ವೇಳೆ ನಿನ |
ಗೇನಿತಿದೇಕೆ ತವಕಿಪೆಯೆಂಬ ಪಾರ್ವನಂ ಪುಲಿ ಮುರಿದು ತಿಂದುದಾಗ || ೨೮ ||

ಎಂದೆಂಬ ತೆರನಾಯಿತೀ ರೂಪ್ಯಖುರಚೋರ |
ನಂದಮೆಂದಾ ಪುರಜನಂ ನುಡಿಯುತಿರಲು ಮುನಿ |
ಸಿಂದ ಭೂಪತಿಯವನ ಶೂಲದೊಳಗಿಕ್ಕಿಸಿ ಬಳಿಕ್ಕವನ ಬಳಿಗಾವವಂ ||
ಬಂದು ನುಡಿಸಿದೊಡವನೆ ಆ ರೂಪ್ಯಖುರಚೋರ |
ನಿಂದ ವೆಗ್ಗಳದ ರಾಜದ್ರೋಹಿಯಾ ಖಳನ |
ಕೊಂದು ಮನೆಯಂ ಸೂರೆಗೊಳಬೇಕೆನುತ ಕಾವಲನಿಕ್ಕಿದಂ ಭಟರನು || ೨೯ ||

ಅನಿತರೊಳು ನಮ್ಮ ನಿಜಜನಕ ರಾಜಶ್ರೇಷ್ಠಿ |
ಜಿನದತ್ತನೀ ಪುರದ ಬದನ ಸಾಸಿರಕೂಟ |
ಜಿನಗೃಹಕೆ ಪೋಗಿಯಭವಂಗೆ ಅಭಿಷೇಕ ಪೂಜೆಯನೊಸೆದು ಮಾಡಿ ಬಳಿಕ ||
ಜಿನಚಂದ್ರಭಟ್ಟಾರಕರನು ವಿನಯದೊಳು ವಂ |
ದನಗೆಯ್ದು ನಿಜನಿವಾಸಕ್ಕೆ ಬರ್ಪಾಗ ನಾ |
ನನುರಾಗದಿಂದೊಡನೆ ಬರುತ ಕಟ್ಟಿದಿರೊಳಿರ್ದಾ ಚೋರನಂ ಕಂಡೆನು || ೩೦ ||

ಎಲೆ ತಂದೆಯೀ ಶೂಲವೇರಿಯರೆಮುಗುಳ್ದಕ್ಷಿ |
ಹಲವು ಕದುಕೇರಿನಿಂ ಸುರಿವರುಣಜಲದಬ್ಬು |
ದಲೆಯನಾಡುವ ಹಸ್ತಪಾದ ಕೆದರಿದ ಕೇಶ ಕಂಠಗತಮಾದ ಹರಣ ||
ಬಲುಹೀನನಾಗಿಯುಂ ಕುಬುಬೆಂದು ಕೂಗುವೀ |
ಬಲುಗೆಯ್ಯನಿವನಾರೆನಲ್ಕಿವಂ ಚೋರನೆನೆ |
ಮಲಮಲನೆ ಮರುಗಿ ನಾನಿವಗೇತರಿಂದ ಶೂಲಪ್ರಾಪ್ತಿಯಾಯಿತೆನಲು || ೩೧ ||

ಅಣುಗ ಕೇಳ್ಪೂರ್ವಜನ್ಮದೊಳುಪಾರ್ಜಿಸಿದ ಭೀ |
ಷಣಕರ್ಮದುದಯದಿಂದಿಂತಾಯಿತೆನಲು ಧಾ |
ರುಣಿಯೊಳಿವನಾರ್ಗಗೋಚರವಿದ್ಯೆಯೊಳ್ನಿಪುಣನೆಂಬರಿವನೀ ವಿಧಿಯೊಳು ||
ಸೊಣಗನುಣಿಸಾದನಲ್ಲಾ ಎನಲ್ಕೆಂದನಾ |
ಫಣಿಭೂಷಣನು ಶೂಲವೇರನೇ ಲೀಕರ |
ಕ್ಷಣದಕ್ಷ ಲಕ್ಷ್ಮೀಯಧಿಯಪತಿಯುಳಿದ ನಾಡುಗರ ಪಾಡೇನು ಕೇಳ್ನಂದನಾ || ೩೨ ||

ಎಂದುಸಿರ್ವ ವೈಶ್ಯಕುಲತಿಲಕಗಾ ಚೋರನಿಂ |
ತೆಂದನೆಲೆ ಜಿನದತ್ತ ನೀ ಕೃಪಾಸಾಗರಂ |
ಮಂದರಸಮಾನ ಧೀರೋದಾತ್ತಮನುಚರಿತ ಕೇಳಾನು ಬಾಯಾರಿದೆಂ ||
ತಂದುಕೊಡು ನೀರನೆನಲವನಿಪದ್ರೋಹಿಯದ |
ರಿಂದುದಕಮಂ ನಿನಗೆ ತಂದೀವುದುಚಿತಮ |
ಲ್ಲೆಂದೆಂಬ ನಮ್ಮಯ್ಯ ಜಿನಚಂದ್ರಗಾ ಚೋರನಿಂತು ನೀತಿಯನುಸಿರ್ದನು || ೩೩ ||

ಒಡಲಹೊಕ್ಕಾ ಒಡಲೊಳುದಯಿಸುವ ರೋಗಮಂ |
ಕೆಡಿಸಿ ದೇಹಿಗಳಿಗುಪಕಾರಮಂ ನೆರೆಮಾಡು |
ವೆಡೆಯಲ್ಲಿ ನಮಗೆ ಕೇಡಪ್ಪುದೆಂಬುದನು ಭಾವಿಸಿದುವೇ ಭೈಷಜಗಳು ||
ಕಡಲನೀರಂ ತಂದು ಕೆಡುವ ಬೆಳಸಂ ಸಲಹು |
ವೆಡೆಯಲ್ಲಿ ನಾವು ಕರುಗುವೆಂದುವೇ ಮುಗಿ |
ಲ್ಸಡಗರದಿ ಸಜ್ಜನರು ಲೋಕೋಪಕಾರದಿಂ ಕೇಡು ನಮಗಹುದೆಂಬರೇ || ೩೪ ||

ಅರಸಗಾರುಂ ದ್ರೋಹಿಗವನಿಗತಿದ್ರೋಹಿ |
ನಿರುತಮಾದೊಡಮೇನೊ ನೀನೆ ಲೋಕಕ್ಕೆ ಬಂ |
ಧುರದಯಾಮೂರ್ತಿಯದುಕಾರಣದಿ ನಿನ್ನ ಸದ್ಗುಣವನೇ ಮೆರೆಯಬೇಕು ||
ವರತೀಕ್ಷ್ಣವದನದಿಂ ಛಿದ್ರಮಂ ಸಲೆ ಪಡೆದು |
ಧರಣೀತಳಕ್ಕೆ ಯತಿಸೇವ್ಯಮಂ ಪಡೆದನವ |
ಕುರುವಿಂದಮಣಿಹಾರದಂತೆ ಕಂಚುಕದಂತೆ ಮಂದಾರಮಾಲೆಯಂತೆ || ೩೫ ||