ಅನಿತರಿಂ ನಿನ್ನ ಮನಸಿನಭೀಷ್ಪಮಂ ಪೇಳು |
ನನಗೆ ಬಾರದ ವಿದ್ಯೆಯೀ ಭೂತಳದೊಳಿಲ್ಲ |
ನಿನಗದರಿನೊಳ್ಳಿತಂ ಮಾಳ್ಪೆನೆನೆ ಬಡವಂ ನಿದಾನಮಂ ಕಂಡ ತೆರದಿ ||
ಅನುರಾಗದಿಂದೆನ್ನ ಮಗಳನಲೆಪಡಿಸುವೀ |
ಬಿನಗು ಜಿನತ್ತೆಯಂ ಕೊಲ್ಲಬೇಕೆಂದೆನಲ್ |
ಜನನಿ ಕೇಳೆನಗಿಂತಿದಾವಗಹನಂ ನಾನು ಬಲ್ಲ ವಿದ್ಯಂಗಳೊಡನೆ || ೩೧ ||

ನಾಳಿನೀ ಕೃಷ್ಣಪಕ್ಷದ ಚತುರ್ದಶಿವರಂ |
ತಾಳಿಕೊಂಡಿರು ಮನಸಿನೊಳು ಚಿಂತೆಬೇಡ ನೀಂ |
ಪೇಳಿದಂದದಿ ನಿನ್ನ ತನುಜೆ ಕನಕಶ್ರೀಗೆಯೆಡರಿಲ್ಲವೆಂಬ ತೆರದಿ ||
ಬಾಳಮಾಡುವೆನು ಮಾಡದೊಡೆ ತಪ್ಪಿದೊಡೆ ಕಾ |
ಪಾಲಿಕಾಸಿದ್ಧನಲ್ಲಂ ನಾನನಾಮಿಕಂ ನಂಬೆನ್ನ ಮಾತನೆಂದು || ೩೨ ||

ಪಿರಿದು ಪಂಥವನಾಡಿ ತಾ ಮೊದಲು ಕುರಿತ ದಿನ |
ದಿರುಳಿನೊಳದಕ್ಕೆ ತಕ್ಕರ್ಚನಾದ್ರವ್ಯಸಹಿ |
ತುರುಮುದದಿ ಪೊಳಲ ಪೊರಗಣ ರುದ್ರಭೂಮಿಗೆ ಶುಚಿರ್ಭೂತನಾಗಿ ಬಂದು ||
ಭರದೊಳೊಂದಾನೊಂದು ಪೆಣನ ಕಯ್ಯೊಳಗೊಂದು |
ಕರವಾಳ ಕೊಟ್ಟು ಕುಳ್ಳಿರಿಸಿ ಪೂಜೆಯ ಮಾಡಿ |
ವರಮಂತ್ರತಂತ್ರದಿಂದದರ ಮೇಲಾಹ್ವಾನಿಸಲ್ಕೊಂದು ಭೇತಾಳನು || ೩೩ ||

ಪಿಡಿದು ಖಡ್ಗವ ಜಡಿದು ಕೊಡು ಬೆಸನ ಕೊಡು ಬೆಸನ |
ತಡಮಾಡಬೇಡೆಂಬುದಂ ಕೇಳಿದನಿಂತು |
ನುಡಿದನೀ ಊರ ಬಸದಿಯೊಳು ಕನಕಶ್ರೀಯ ಸಾಪತ್ನಿ ಜಿನದತ್ತೆಯಂ ||
ಕಡಿಖಂಡಮಂ ಮಾಡಿ ಬಿಡುಸೆಂಬ ನುಡಿಗೇಳಿ |
ಪೊಡವಿಯಾಗಸವೆಂಟುದೆಸೆಯಂಬುರಾಶಿಗ |
ಳ್ನಡನಡುಗುವಂತೆ ಹೊಂಕರಿಸುತಾಳುತ್ತೇಳ್ದು ಘುಡಿಘುಡಿಸುತಿಂತೆಂದುದು || ೩೪ ||

ಉರುಹು ಜವಹುರವ ಮಿಳ್ತುವಿನಗಂಟಲ ಮೆಟ್ಟು |
ಸಿರವ ಸೆಂಡಾಡು ಮಾರಿಯ ಕಾಲಭೈರವನ |
ಭರದಿ ಬಾಳ್ದಲೆಗೊಂಡು ಬಾಯೆಂಬ ಬೆಸನ ಹೇಳದೆ ಎನಗೆ ಎಲೆ ಕಪಾಲಿ ||
ನರಕೀಟಕವನು ಬಡಬಣಜಿಗಿತ್ತಿಯ ಕೊಂದು |
ಬರಹೇಳ್ವುದೆನ್ನ ಹಣೆಯೊಳು ಮುನ್ನ ಬಿದಿ ಬರೆದ |
ಬರೆಹವಲ್ಲದೆ ಕಟಕಟಾ ಎನುತ ಬಿಸುಸುಯ್ಯತಿರದೆ ಬಳಿಕಿಂತೆಂದುದು || ೩೫ ||

ಸಗ್ಗಕ್ಕೆ ಹರಿದಾಳಿಮಾಡಿ ಹರಿಸೊರೆಗೊಳು |
ದಿಗ್ಗಜಂಗಳನು ಧಿಕ್ಕರಿಸಿ ತಲೆಮುರಿಯ ಹುಯಿ |
ನುಗ್ಗುನುರಿ ಮಾಡು ಕುಲಭೂಧರವನಲ್ಲಕಲ್ಲೋಲಮಾಡಂಬುಧಿಯನು ||
ಒಗ್ಗರಿಸು ಸಚರಾಚರೋರ್ವಿಯ ಪದಾಥಮಂ |
ನಿಗ್ಗರಿಸು ಸಚರಾಚರೋರ್ವಿಯ ಪದಾರ್ಥಮಂ |
ನಿಗ್ಗರಿಸು ನಿಟಿಲಲೋಚನನನೆಂದೆನ್ನದೇ |
ಎಗ್ಗತನಮಲ್ಲವೇ ಎನಗೆಯೀ ಹುಲ್ವೆಸನ ನೀಂ ಪೇಳ್ವುದೆಂದೆಂಬುದು || ೩೬ ||

ಬಸದಿಯೊಳಗಿರ್ದ ಬತ್ತಲೆಯ ದೈವಕೆ ಸವಣ |
ರೊಸೆದರ್ಚಿಸಿದ ಹಿಟ್ಟು ಕಡುಬಿನಾಸೆಗೆ ಬಂದ |
ದೆಸೆಯಾಳ್ವರಾ ಕ್ಷೇತ್ರಪಾಲನಾ ಬ್ರಹ್ಮನಾ ಧರಣೀಂದ್ರರಾದಿಯಾದಾ ||
ಅಸಮಸಾಹಸದ ಯಕ್ಷರುಗಿಕ್ಷರೆಂಬವರು |
ಪುಸಿಯ ಪಂಥಮದೇಕೆ ಕಾಪಾಲಿ ಕೇಳೆನ್ನ |
ದೆಸೆಯನಿನಿಸಂ ಕೇಳಲೊಡನೆ ಕಣ್ಗೆಟ್ಟು ಕಮ್ಮರಿಯ ಬಿದ್ದೋಡಬೇಕು || ೩೭ ||

ನೋಡುನೋಡೊಮ್ಮೆ ನಿಮಿಷದೊಳವಳ ತಲೆಯ ಸೆಂ |
ಡಾಡುವೆಂ ಬಸಿರಬಗಿದಾ ಬಸಿಯ ನೆತ್ತರಂ |
ತೋಡುವೆಂ ಕಡಿಕಡಿದು ಖಂಡಮಂ ಬಿಸುಡುವೆಂ ನಾರೆತ್ತುವೆಂ ನರವನು ||
ಆಡಿ ಕೆಡಿಸಲದೇಕೆ ನಿನ್ನ ಮನಕಳ್ತಿಯಂ |
ಮಾಡುವೆನೆನುತ ರೌದ್ರಾವೇಶಮಂ ಪಡೆದು
ಕೊಡೆ ಕುಬುಬೆಂದು ಬೊಬ್ಬಿರಿದು ಕೂರಸಿಯ ಜಡಿಯುತ್ತ ನಡೆತರುತಿರ್ದುದು || ೩೮ ||

ಬೆದರ್ವ ಬೇತಾಳ ಬೆಚ್ಚುವ ಬ್ರಹ್ಮರಾಕ್ಷಸಗ |
ಳದುರ್ವ ಭೂತಂಗಳೋಡುವ ಪಿಶಾಚಂ ಪಿಂಡು |
ಗೆದರ್ವ ಮರುಳಿನ್ನೇವೆವೆಂದು ಕೈನೆಟ್ಟಿಯಂ ಮುರಿವ ಶಾಕಿನಿ ಡಾಕಿನಿ ||
ಗದಾಗಾಪುಗೊಂಬಾ ಗ್ರಹಂ ನಡುಗುವೊತ್ತರಗ |
ಳದಟುಗೆಡುವಾ ವ್ಯಂತರಗಳೆಸೆದುವಂತಲ್ಲಿ |
ಯದುಭುತಂಬಡೆದು ಕೆಕ್ಕಲಗೆಲೆದು ಬೊಬ್ಬಿರಿವ ಭೇತಾಳಿಯಂ ಕಾಣುತ || ೩೯ ||

ಈ ತೆರದಿನಾಸ್ಫೋಟಿಸುತ್ತ ಬಂದಾ ರುದ್ರ |
ಭೂತಳವ ಪೊರಮಟ್ಟು ಪುರವರವ ಪೊಕ್ಕು ಪೃ |
ಥ್ವೀತಳಂ ನಡನಡುಗೆ ನಡೆವ ರಭಸಕ್ಕದಂ ಕಾಣುತಾ ಪೌರರಾಗ ||
ಏತರಿಂದೀ ನೆಲಂ ಕಂಪಿಸಿತ್ತೆನುತ ಸಮು |
ಪೇತವಿಸ್ಮಯಹೃದಯರಾಗಲಾ ಭೇತಾಳಿ |
ವೀತರಾಗಾಲಯದ ತಲೆವಾಗಿಲಂ ಮುಟ್ಟಿ ನಡೆತಂದು ನಿಂದುದಾಗ || ೪೦ ||

ಅದರೊಳಾ ಪರ್ವತಿಥಿಯುಪವಾಸಮಂ ಮಾಡಿ |
ಹೃದಯಶುದ್ಧಿಯೊಳು ಜಾಗರಮಿರ್ದು ಪೂಜೆಯಂ |
ಮದನಾರಿಗತಿವಿಭವದಿಂದ ಮಾಳ್ಪ ಜಿನದತ್ತೆ ವೃಷಭದಾಸರ ಮೆಯ್ಯೊಳು ||
ಪುದಿದ ಸಮ್ಯಕ್ತ್ವದ ಮಹಾತ್ಮೆಯುಮನಾಚೈತ್ಯ |
ಸದನದೊಳ್ನಿಂದ ಯಕ್ಷರ ಮಹಿಮೆಯಂ ಕಾಣು |
ತೆದೆಹಾರಿ ಕೆಂಡಮಂ ಕಂಡಿರುಪೆಯಂತೆ ದೂರಾಂತರದೊಳೇ ನಿಂದುದು || ೪೧ ||

ಸಿಂಗಮಂ ಕಂಡ ಸಿಂಧುರದಂತೆ ನೀರ ಕಂ |
ಡಂಗಾರದಂತೆ ಶಾರ್ದೂಲಮಂ ಕಂಡ ಸಾ |
ರಂಗದಂತುರಗನಂ ಕಂಡದರ್ದುರನಂತೆ ಹೊತ್ತಕಂಡಿರುಳಿನಂತೆ ||
ಮಂಗಲಗುಣಾಭರಣೆ ಜಿನದತ್ತೆ ಪೂಜೆಗೆ |
ಯ್ವಂಗಜಾರಿಯ ಭವನಮಂ ಕಂಡು ಭೇತಾಳಿ |
ಯಂಗಯಿಸಲಮ್ಮದೇ ತಲೆವಾಗಿಲೊಳ್ನಿಂದು ತಲೆದೂಗುತಿರ್ದುದಾಗ || ೪೨ ||

ಅರಸನಂ ಕಂಡನಾಮಿಕನಂತೆ ದೂರದೊ |
ಳ್ಕರಯುಗಲಮಂ ಮುಗಿದು ಮೊಮೆಬಲವಂದು ಬಂ |
ಧುರಗುಣಾಲಂಕೃತೆಯನೊಸೆದು ಕೊಂಡಾಡಿ ಬಳಿಕಾ ರುದ್ರಭುತಳಕ್ಕೆ ||
ಮರಳಲಾ ಕಾಪಾಲಿ ಕಂಡೆಲೇ ಭೇತಾಳಿ |
ಪಿರಿದು ಪಂಥವನಾಡಿ ಪೆಣ್ಗೂಸ ಕೊಲಲಂಜಿ |
ತಿರುಗಿದುದು ಹಿರಿದು ಹಸನಾಯ್ತೆಂದು ತಲೆದೂಗುತಿಂತೆಂದು ನುಡಿದನಾಗ || ೪೩ ||

ಮಾತನಾಡದೆ ಕಾರ್ಯಮಂ ಮಾಡುವಾತನೇ |
ಖ್ಯಾತಿವಿದನಾ ಮಾತನಾಡಿದಂದದಿ ಮಾಡು |
ವಾತನೇ ಮಧ್ಯಮಂ ಮಾತ ಹಿರಿದುಂ ನುಡಿದು ಮಾಡದವನೇ ಕನಿಷ್ಠ ||
ಭೂತಳದೊಳಂತವರ್ಪನಸುಮಾವೆಲವದಕು |
ಜಾತದ ಸಮಾನವೆಂದೆಂಬ ಸುಜನರದೊಂದು |
ನೀತಿಯಂ ನೆನೆಯದೇ ಪೆಣ್ಗೂಸಕೊಲಲಂಜಿ ಬಂದುದೊಳ್ಳಿತ್ತಾಯಿತು || ೪೪ ||

ಆಡುವುದು ಕಡು ದೊಡ್ಡಮಾತು ಕಂಡಾ ಅಂಜಿ |
ಯೋಡುವುದು ತಾಂ ಚೋರಕಂಡಿಯೆಂಬಂದಮಂ |
ಮಾಡಿದೆಯಲಾ ಎನುತ ಗಹಗಹಿಸಿ ನಕ್ಕು ತಲೆಯಂ ತೂಗಿ ಕಾಪಾಲಿಕಂ ||
ನೋಡುತಿರೆ ಭೂತಕೋಟಿಗಳು ಮರುಪೂಜೆಯಂ |
ಮಾಡಿಯಾ ಭೇತಾಳಿಯಾಹ್ವಾನಮಂ ತಡಂ |
ಮಾಡದೇ ವಿಸರ್ಜಿಸಿ ಬಳಿಕ ತನ್ನಾಶ್ರಮಕ್ಕಾ ಇರುಳೊಳೆಯ್ತಂದನು || ೪೫ ||

ಮತ್ತೆರಡು ರಾತ್ರಿಯೊಳಗೀತೆರದಿ ಕಳುಹಲಾ |
ಉತ್ತಮೆಯ ಬಳಿಗೆಯ್ದಿ ಮುನ್ನಿನಂದದಿ ಭೀತಿ |
ವೆತ್ತು ಮಗುಳಲ್ಕದಂ ಕಂಡು ನಾಲ್ಕನೆಯ ರಾತ್ರಿಯೊಳಗಾಹ್ವಾನೆಯಂ ಮಾಡಲು ||
ಕತ್ತಿಯಂ ಜಡಿಯುತೆಳ್ದೆಲವೊ ಕಾಪಾಲಿಯು |
ನ್ಮತ್ತಫಲಮಂ ತಿಂದರಂತೆ ತತ್ಪುಣ್ಯಾದಿ |
ಕೀರ್ತಿ ನಿರ್ದೋಷಿಯಂ ಕೊಲಹೇಳಿದೊಡೆ ಕೊಲುವುದೆನಗೆಯಘಟಿತಮೆನುತ್ತ || ೪೬ ||

ಕೊಡುಕೊಡೆನಗಾಹುತಿಯನತಿ ದೋಷಿಯಾದವರ |
ಕೊಡದಿರ್ದೊಡೆಲವೊ ನಿನ್ನೀ ತಲೆಯ ನಿಮಿಷದೊ |
ಳ್ಕಡಿಖಂಡಮಂ ಮಾಳ್ಪೆನೆಂದು ಘುಡುಘುಡಿಸಿಯಾರುತ್ತೆಳ್ದು ನಡೆದುಬಂದು ||
ಬಿಡದೊದರ್ವ ಭೇತಾಳಿಯೊಳಗಿಂತು ಕಾಪಾಲಿ |
ನುಡಿದನಾ ಜಿನದತ್ತೆಯಾ ಕನಕಲತೆಯರೊಳು |
ಕಡುದೋಷಿಯಾದವರ ಕೊಲ್ಲೆಂಬ ನುಡಿಗೇಳಿ ಲೇಸಾಯಿತೆಂದು ಬಂದು || ೪೭ ||

ಕರೆಗಣ್ಮೆ ಕೋಪಾಗ್ನಿ ಕಡುಮಸಗುತೆಯ್ತಂದು |
ನಿರಪರಾಧಿಯಮೇಲೆ ದೋಷಮಂ ಹೊರಿಸಿದಾ |
ದುರುಳೆಯಲ್ಲಾ ನೀನೆನುತ್ತ ಕನಕಶ್ರೀಯನೊತ್ತಿ ಮೊದಲಿಸಿ ಕೊಂದು ||
ಅರಿದೊಡಲಬಗಿದು ಸೀಳ್ದಾ ಸ್ಮಶಾನಕೆ ಬಂದು |
ಭರದಿ ತಾನೆಸಗಿದುದನಾ ಸಿದ್ಧಕಪಾಲಿ |
ಗೊರೆಯಲೆತ್ತಂ ಮೆಟ್ಟಲೆತ್ತಂ ಚಪ್ಪಟೆಯಾಯಿತೆಂದದಂ ಬೀಳ್ಕೊಟ್ಟನು || ೪೮ ||

ಇತ್ತ ಮುದದಿಂದ ಬಂಧುಶ್ರೀಕಂ ಹರೆಯ |
ಹೊತ್ತರೊಳಗೆಳ್ದು ಕಾಪಾಲಿಕತಂತ್ರದಿಂ |
ಸತ್ತಳೋ ಜಿನದತ್ತೆಯೆಂಬುದಂ ನೋಡಬೇಕೆಂದವಳ ಮನೆಗೆ ಪೋಗಿ ||
ತತ್ತರಂದರಿದು ತಲೆ ಬೇರಾಗಿ ಕಡಿಕಂಡ |
ವೆತ್ತು ಬಿಳ್ದಿರ್ದ ಮಗಳಂ ಕಂಡು ಪಾಪಿ ಜಿನ |
ದತ್ತೆ ಮುಗುದೆಯ ರೂಪಮಂ ಕಾಣಲಾರದೇ ಕೊಲಿಸಿದಳೆನುತ್ತ ಬಗೆದು || ೪೯ ||

ಹಣ್ಣನಿಟ್ಟೊಡೆ ಕಾಯಿ ಬಿದ್ದ ತೆರದಿಂ ನಾನು |
ಹಣ್ಣಿದಾ ಕಾರ್ಯಮಂ ಪೈಸರಂಗೊಳಿಸಿ ಮಸಿ |
ವಣ್ಣಮಂ ಮಾಡಿದೆಯಲಾ ಪಾಪಿದೈವನೇ ಎಂದು ಬಸಿರಂ ಹೊಸೆಯುತ ||
ಹೆಣ್ಣಹೆರುವುದರಿಂದ ಮಣ್ಣ ಹೊರುವುದು ಲೇಸು |
ಕಣ್ಣುಳ್ಳವರು ಕಾಣಬೇಡವಲಾ ಎಂದು |
ಸುಣ್ಣಗಲ್ಕುದಿವಂತೆ ಕುದಿದು ಬಂಧುಶ್ರೀ ನೃಪಾಲಯಕೆ ನಡೆದುಬಂದು || ೫೦ ||

ಮೊರೆಯೊ ಮೊರೆಯೋ ಧರ್ಮರಾಯ ಮಾನಿಯನೆನ್ನ |
ಕಿರುಗೂಸ ಕಾಣಲಾರದೆ ಪಾಪಿ ಜಿನದತ್ತೆ |
ಬರಿದೆ ಗೊಡ್ಡೇರಿನಿಂದಿರಿಯಿಸಿದಳೆಂದು ತೊವಲಂ ಪಿಡಿದು ಗೋಳಿಡುತ್ತ ||
ಮೊರೆಯುಡಲ್ಸಂಗ್ರಾಮಶೂರಭೂಪಂ ಕೇಳಿ |
ಮರುಗಿ ಉರಿಯಿಂ ಹಿರಿಯನಾಗಿ ದೂತರನು ಕರೆ |
ದರಗುಲಿಯ ಮಾಡಿದವರ್ಗಾಜ್ಞೆಯಂ ಮಾಡಿಮೆನಲತಿ ಭರದಿನವರು ಬಂದು || ೫೧ ||

ಆ ವೃಷಭದತ್ತಸೆಟ್ಟಿಯ ಮನೆಯ ಕವರಲೆಂ |
ದೋವದೇ ಬಾಗಿಲ್ಗೆ ಬರಲವರ ಕೃತಪುಣ್ಯ |
ದೇವತೆಗಳಾ ತಳಾರನಂ ಮರವಿಟ್ಟಂತೆ ಕಯ್ಕಾಲ್ಗಳಂ ತಂಬಿಸೆ ||
ಭೂವರನ ಸಿಂಹಪೀಠಂ ಕಂಪಿಸುತ್ತಿರ |
ಲ್ಕಾವಸದಿಯೊಳಗಿರ್ದ ಪುಣ್ಯದಂಪತಿಗಳೆಮ |
ಗೀ ವಿವಿಧಮೆನಿಸುವುಪಸರ್ಗಮಳಿವನ್ನೆವರ ಸನ್ಯಸನಮೆಂದು ನಿಲಲು || ೫೨ ||

ಸಂದ ಸಮ್ಯಕ್ತ್ವಗುಣಮಣಿಗಣಾಭರಣರ್ಗೆ |
ಬಂದಿತಲ್ಲಾ ನಿರಪರಾಧದಿಂದುಪಸರ್ಗ |
ಮೆಂದು ಮಲಮಲನೆ ಮರುಗಿ ನಗರದೇವತೆಯರಿಂತಿದನು ಪರಿಹರಿಪೆವೆಂದು ||
ಬಂದು ಸಂದಣಿಸಿ ಎಲೆ ಪುರಜನವೆ ಜಿನದತ್ತೆ |
ಯಿಂದ ದೋಷಮನೆಳ್ಳನಿತು ಕಂಡುದಿಲ್ಲಮೀ |
ಯಂದಮಾ ಪಾಪಿ ಬಂಧುಶ್ರೀಯ ಕೌಟಿಲ್ಯದಿಂದಾದುದೆಂದುಲಿಯುತಾ || ೫೩ ||

ಭೇತಾಳಿಯಂ ಪಿಡಿದು ತಂದು ನೀನಿವಳಂ ಕೊಂ |
ದಾ ತೆರನನೆಲ್ಲವಂ ತೆರೆದರಿಕೆ ಮಾಡೆಂದು |
ಭೀತಿವಡುವಂತೆ ತಾಡನಗೆಯ್ಯೆ ಶತವೃದ್ಧೆಯಾಗಿ ಪುರವೀಥಿಗೆಯ್ದಿ ||
ನೀತಿವಿದೆಯಿಂದೀಯಕೃತ್ಯಮಾಯ್ತಿಲ್ಲಮಾ |
ಪಾತಕಿ ಕುದೃಷ್ಟೆ ಬಂಧುಶ್ರೀಯದಂ ಮಾಡೆ |
ಮಾತೇನು ಮರ ಹುಳುವಾ ಮರನ ಕೊರೆವಂತೆಯವಳ ನಾನೇ ಕೊಂದೆನು || ೫೪ ||

ಎಂದೆಲ್ಲರರಿವಂತೆ ತನ್ನ ಹೆಸರಂ ಹೇಳಿ |
ಬಂದು ಬಂಧುಶ್ರೀಯನೆಲವೊ ಕಡುಪಾಪಿ ನಿ |
ನ್ನಿಂದೆನ್ನನೀ ನಗರದೇವತೆಗಳುಬ್ಬಸಂಗೊಳಿಸುತಿವೆಯವರದೊಂದು ||
ಸಂದೇಹಮಂ ಬಿಡಿಸಿ ಕಣ್ದೆರೆದು ನೀಯರಿಕೆ ಮಾ |
ಡೆಂದೆದೆಯ ಮೆಟ್ಟಿ ಸಂಕಟಗೊಳಿಸಲವಳು ಪರಿ |
ತಂದು ನೃಪಮಂದಿರಕೆ ಬಂದು ತಾನೆಸಗಿದುದನಿಂತೆಂದು ನುಡಿದಳಾಗ || ೫೫ ||

ಮುಚ್ಚುಮರೆಯೇಕೆ ಗುಣವಂತೆ ಜಿನದತ್ತೆಯೊಳು |
ಮಚ್ಚರದಿ ನಾನು ಮಾಡಿದ ಕಪಟವೇ ನನ್ನ |
ಹುಚ್ಚುಮಾಡಿದುದು ಹಳುವಿನ ಮಧ್ಯದೊಳು ಹುಟ್ಟಿಯಾ ಹಳುವನೇ ದಹಿಸುವಾ ||
ಕಿಚ್ಚಿನಂದದಿನೆನುತ ತಾನೆಸಗಿದನ್ನೆಯಮ |
ನೊಚ್ಚತಂ ಮರಸದೇ ನುಡಿವ ಸಮಯದೊಳೆಲ್ಲ |
ರಚ್ಚರಿವಡುವ ತೆರದೊಳಚ್ಚರರಗೊಂದಣಂ ನೆರೆದುದಂಬರತಳದೊಳು || ೫೬ ||

ಅರಲಮಳೆಯಮರದುಂದುಭಿಯಾದೈದು |
ಪರಿಯೊಳಾಶ್ಚರ್ಯವನು ಸಾದರದಿ ಮಾಡಲಾ |
ಹರುಷದಿಂದಾ ಪುರದ ಬಾಲಗೋಪಾಲರಾದಿಯ ಜನಗಳೆಲ್ಲ ಬಂದು ||
ನೆರೆದು ನೋಡುತ್ತಿರಲ್ಸಂಗ್ರಾಮಶೂರ ಭೂ |
ವರನದಂ ಕಂಡು ಬಂಧುಶ್ರೀಯನಾ ತನ್ನ |
ಪುರದಿಂದ ಪುಳಿತ ಕತ್ತೆಯ ಮೇಲೆ ಕುಳ್ಳಿರಿಸಿ ಮೆರಸಿ ಪೊರಮಡಿಸಲಾಗ || ೫೭ ||

ಮಾಂಸಕದಿಂದ ಬಂಧುಶ್ರೀ ಮನದೊಳಿನಿತು |
ಹೇಸದೇ ಮಾಡಿರ್ದ ವಂಶಘಾತಕದ ಫಲ |
ಮೀಸಮಯಮೊಂದರೊಳೆ ಕಾಣಿಸಿದುದತ್ಯುಗ್ರ ಪುಣ್ಯಪಾಪದ ಫಲಗಳು ||
ಓಸರಂ ಮಾಡದೇ ಮೂರು ಪಕ್ಷಂ ಮೂರು |
ಮಾಸಮಾ ಮೂರು ದಿನದೊಳಗೆ ಕಾಣಿಸುಗುಮೆಂ |
ಬಾ ಸುಜನರುಸಿರುವುತ್ತಮ ನೀತಿಯರ್ಥಮಂ ನೆಲೆಮಾಡಿ ತೋರುವಂತೆ || ೫೮ ||

ಎಂದವಳ್ಮಾಡಿದ ಪಾತಕಕೆ ನಗರಜನ |
ವೃಂದಮೆಲ್ಲಮುಮೊಲ್ಲನುಲಿಯುತಿರಲರಸು ಜಿನ |
ಮಂದಿರಕ್ಕೆಯ್ದಿ ಲೋಕೈಕನಾಥಗೆ ಭಕ್ತಿಭರದಿ ವಂದಿಸಿ ಬಳಿಕ್ಕ ||
ವಂದನೆಗೆಯ್ದಾ ಸಮಾಧಿಗುಪ್ತರ್ಗೆ ಮನ |
ಸಂದಾ ಮಹಾತ್ಮರುಪಸರ್ಗಮಂ ಬಿಡಿಸುತಿಂ |
ತೆಂದನೆಲೆ ಗುರುವೆ ಸದ್ಧರ್ಮಸ್ವರೂಪಮಂ ಪೇಳಿಮೆನಲಿಂತೆಂದರು || ೫೯ ||

ಮೊದಲಿಂದನಾದಿಸಂಸಿದ್ಧಮಾದಾ ಧರ್ಮ |
ದೊದವನರಿಯದುದರಿಂದೀ ಜೀವಕೀ ಭವದ |
ಹೊದುಕುಳಿಯ ಮಾಡುವುದು ಕರ್ಮಮದರಿಂ ಧರ್ಮಮೇ ಮುಖ್ಯಮಾ ಧರ್ಮದಾ ||
ಒದವಿನಿಂದೀ ಬೋಧಮಂ ಪಡೆದ ಜನ್ಮದೊಳ |
ಗಿದು ನಿತ್ಯಮಿದನಿತ್ಯಮೆಂಬ ಸದ್ಭಾವನೆಯ |
ಹೃದಯಶುದ್ಧಿಯೊಳು ಭಾವಿಸಿದವರ ಬಾಳು ಬಿಸಿಲರಿಸಿನಂ ಭೂಮಿಪಾಲ || ೬೦ ||

ನರನಾಥ ಕೇಳು ಭೋಗೋಪಭೋಗಕ್ಕೆ ರುಜೆ |
ವರವಂಶಕ ಸತಿ ವಿತ್ತಕ್ಕೆ ಪಾವಕನಾಳಿ |
ಗರಸು ಮಾಂಗಲ್ಯಕ್ಕೆ ಯವಶಕುನ ಮಾನ್ಯರ್ಗೆ ತೇಜ ವಿಜಯಕ್ಕೆ ವೈರಿ ||
ಗುರುಜನಕೃತಿದುಷ್ಟರಿಂದ ಭಯಂ ಬರ್ಪಂತೆ |
ಭರದಿ ಸದ್ಗತಿಯ ಸಾಧಿಪೆನೆಂಬ ಬೋಧಕ್ಕೆ |
ನಿರುತದಿಂದೀ ಪರಿಗ್ರಹದ ತೊಡಕೆಂಬುದಂ ಸಜ್ಜನರ್ತಿಳಿಯಬೇಕು || ೬೧ ||

ಎಂದಿವಾದಿಯ ಶುದ್ಧ ಧರ್ಮೋಪದೇಶಮಂ |
ಕಂದರ್ಪಮದಮಥನನಾ ಮಹೀಪತಿಗೆ ಮನ |
ಸಂದು ಪೇಳಲ್ಕೇಳಿ ಮೊದಲಾದ ಸಮ್ಯಕ್ತ್ವದಾ ಮಹಾತ್ಮೆಯನು ಕಂಡು ||
ಮುಂದುಗೆಡಿಸುವ ಸಂಸೃತಿಗೆ ಪೇಸಿ ತನ್ನ ನಿಜ |
ನಂದನಂ ಶೂರಸೇನಂಗೆ ಪಟ್ಟಂಗಟ್ಟಿ |
ವೊಂದಾಗಿ ವೃಷಭದಾಸಂ ಬರಲ್ಸಾಸಿರ್ವರರಸುಮಕ್ಕಳ್ಸಮೇತ || ೬೨ ||

ಅನುರಾಗದಿಂದ ತನ್ಮುನಿಕುಲಲಲಾಮನಿಂ |
ಜಿನದೀಕ್ಷೆಯಂ ಧರಿಸಲಾ ನೃಪನ ನಿಜವನಿತೆ |
ಕನಕಮಾಲಾದೇವಿ ಜಿನದತ್ತೆಸಹಿತ ಸಾಸಿರ್ವರರಸಿಯರುವೆರಸಿ ||
ಜಿನಮತಿಯರೆಂಬ ಕಂತಿಕೆಯರಿಂ ಸಂಯಮವ |
ನನುಕರಿಸಲಾ ಶ್ರಾವಕವ್ರತವ ಕೆಲವು ಪುರ |
ಜನ ಕೆಲವು ಪರಿಜನಂ ಭದ್ರಪರಿಣಾಮಮಂ ಪಡೆದರಂತದನೆ ಕಂಡು || ೬೩ ||

ಪಿರಿದಾಗಿ ಸಮ್ಯಕ್ತ್ವದುದಯಮೆನಗಾಯಿತೆ |
ನುತೊರೆದ ಮಿತ್ರಶ್ರೀಯಂ ಮಾತಿಗರ್ಹದ್ದಾಸ |
ನರವಿಂದಲೋಚನೆಯರಿಚ್ಛಾಮಿ ಇಚ್ಛಾಮಿಯೆಂದು ಕೈಮುಗಿಯಲಾಗಾ ||
ಪರಭೃತಾಲಾಎ ಪಾವನಮೂರ್ತಿ ಕುಂದಲತೆ |
ಯೊರೆದಳಿಂತೆಂದುಮೀ ನಿಮ್ಮ ಬಚ್ಚಣಿಮಾತಿ |
ಗಿರದೆ ನಾನೊಡಬಡುವುದಿಲ್ಲಿದೆಲ್ಲಂ ಮಿಥ್ಯೆಯೆಂಬ ನುಡಿಯಂ ಕೇಳುತ || ೬೪ ||

ಮರದ ನೆಳಲೊಳಗಿರ್ದ ಮಹಿಪಾಲನಾ ಮಂತ್ರಿ |
ವರರಿಂತುಂಟೆಂದರಿದ ದೃಷ್ಟಾಂತಮಂ ಕಂಡು |
ದುರುಳೆ ನಾ ನಚ್ಚೆನಿದನೆನಬಹುದೆ ಬೆಳಗಾಗಲೊಡನೆ ಬೇಗದೊಳು ತರಿಸಿ ||
ಅರಮನೆಯೊಳಿರ್ದ ತೊಳ್ತಿರಿಗೆ ತೊಳ್ತಂ ಮಾಡಿ |
ಪಿರಿದು ಮೊಗಗೆಡಿಸಬೇಕೆಂದು ಭಾಷೆಯ ಮಾಡು |
ತಿರಲು ಮತ್ತಾ ಚೋರನಿಂತೆಂದು ತನ್ನೊಳಗೆ ತಾಂ ನುಡಿಯುತಿರ್ದನಾಗ || ೬೫ ||

ನಾರಿಯರ ನರ್ಮವಚನಕ್ಕೆ ನಂದನದ ಮಂ |
ದಾರದಂದದಿ ಕಾಡಬೇವು ಹೂವಪ್ಪುದೇ |
ಚಾರುಕೋವಿದರ ನುಡಿಗುತ್ತಮರ ತೆರದಿ ಖಳರಾಲಯಿಸಿ ಪರಿಣಮಿಪರೇ ||
ಧಾರಿಣೀತಳದೊಳೆಂದೆಣಿಕೆ ಮಾಡುತ್ತಿರ |
ಲ್ಕಾ ರಮಣಿ ನುಡಿದ ನುಡಿಗೇಳಿ ಸಂತಸವಡೆದ |
ನಾ ರಾಜವೈಶ್ಯನರ್ಹದ್ದಾಸ ಜಿನಸಮಯವಾರ್ಧಿವರ್ಧನಚಂದ್ರನು || ೬೬ ||

ಇದು ವಿಬುಧಜನವಿನುತಮಿದು ವಿಬುಧಜನವಿನತ |
ಮಿದು ವಿದಿತ ಜಿನಸಮಯಶರಧಿಸಂಪೂರ್ಣೇಂದು |
ಸದಮಲಚರಿತ್ರ ಚೆಂಗಾಳ್ವಭೂವರನ ಸಚಿವಾನ್ವಯಾಂಬರಹಂಸನು ||
ಮದನಸಮರೂಪನುತ್ತಮಗುಣಕರಂಡಕಂ |
ಚದುರಮಂಗರಸ ರಚಿಸಿದ ಕೌಮುದೀಕಥೆಯೊ |
ಳೊದವಿದುದು ಜಿನದತ್ತೆಯೆಸೆವ ಸತ್ಕಥಮೈದನೆಯ ರಂಜಿಸುವ ಸಂಧಿ || ೬೭ ||

ಅಂತು ಸಂದಿ ೫ ಕ್ಕಂ ಪದನು ೩೩ಕ್ಕಂ ಮಂಗಳ ಮಹಾ