ಶ್ರೀಯೊಳಚ್ಯುತಗೆ ಸಮನೆನಿಸುವ ಸುಯೋಧನಂ |
ನ್ಯಾಯಮಂ ಮೀರಿ ತಾನೆಣಿಸಿದ ಕುಮಂತ್ರದಿಂ |
ದಾಯಿಳಾಧೀಶತ್ವಮೆಲ್ಲವೊಂದೇ ಕ್ಷಣದೊಳಿಂತುಟಧ್ರುವಮಾದುದು || ಪಲ್ಲ ||

ಕುರುಜಾಂಗಣಾಖ್ಯವಿಷಯದ ಹಸ್ತಿನಾಗಪುರ |
ವರದೊಳ್ ಸುಯೋಧನಮಹೀಪಾಲಕನ ಪಟ್ಟ |
ದರಸಿಯತಿ ರೂಪವತಿ ಕಮಲೆಯೆಂಬಳು ಕೂಡಿ ಗುಣಪಾಲನೆಂಬ ಹೆಸರಾ ||
ವರಕುಮಾರಂಬೆರಸು ಮಾರಾಂತಮನ್ನೆಯರ |
ಶಿರವ ಸೆಂಡಾಡಿ ಮರೆವೊಕ್ಕೆ ಮಂಡಳಿಕರಂ |
ಪರಿಪಾಲಿಸುತ್ತ ಧರಣೀತಳಮನೆಲ್ಲಮುಮನಾಳುತ್ತ ಸುಖದಿನಿಹನು || ೧ ||

ಆ ದುಷ್ಟನಿಗ್ರಹ ಶಿಷ್ಟಪಾಲಗೆ ಸಾಮ |
ಭೇದ ಪತಿಹಿತಕಾರ್ಯಧುರಧೀರಮಂತ್ರಿಯುತ |
ನಾದಿಗೂರ್ಜಿತನು ಪುರುಷೋತ್ತಮವೆಸರ ಮಂತ್ರಿಯುಂ ಸತ್ಯಶೌಚಯುತನು ||
ವೇದವೇದಾಂಗತತ್ವಜ್ಞನಾಶೀರ್ವಾದ |
ನಾದ ಗುಣಯುತ ಪುರೋಹಿತ ಕಪಿಲನುಂ ಪುರಮ |
ನಾದರದಿ ರಕ್ಷಿಪಂ ಯಮದಂಡನೆಂಬ ನಾಮದ ತಳಾರನುಮಿರ್ಪರು || ೨ ||

ಆ ಇಳಾಧೀಶನೊಂದಾನೊಂದು ದಿವಸದೊಳು |
ರಾಯರಾವುತರ ಜೋದರರ ರಥಿಕರ ಕಾಲ |
ಪಾಯಕರ ಪಡಿಯರರ ಸಂಧಿವಿಗ್ರಹಿಗಳ ಪುರೋಹಿತರ ಸಾಮಂತರಾ ||
ರಾಯಭಾರಿಗಳ ರಾಯಸದವರ ಕರಣಿಕರ |
ಜೋಯಿಸರ ಜಗಜಟ್ಟಿಗಳ ಪಂಡಿತರ ಗಡಿಯ |
ನಾಯಕರ ಗಾಯಕರ ನಡುವೆ ವೊಡ್ಡೋಲಗಂಗೊಟ್ಟು ರಂಜಿಸುತ್ತಿರ್ದನು || ೩ ||

ಮಂಡಳಿಕಮಂಡಲದ ಮಂತ್ರಿಗಳ ಸಂದಣಿಯ |
ದಂಡಾಧಿನಾಥರ ಕದಂಬದ ನಿಯೋಗಿಗಳ |
ಮಂಡಳಿಯ ಮಕುಟವರ್ಧನರ ತಿಂಥಿಣಿಯ ರಾಜಾಧಿರಾಜರ ಸಮಿತಿಯಾ ||
ಮಂಡನದ ಮಿಸುಪ ನವವಿಧಮಪ್ಪ ಮಾಣಿಕದ |
ಹಿಂಡುವೆಳಗಾವೆರಿಸಲಾ ಸಭಾಮಂಟಪಂ |
ಕಂಡರಣೆಯಂಗೆಯ್ದ ರೋಹಣಾಚಲದಂತೆ ಕಣ್ಗೆ ರಂಜಿಸುತಿರ್ದುದು || ೪ ||

ಪಡಿಯರರ್ ತಂದು ಕಾಣಿಸಲು ಪರವೃಪರೆಯ್ದಿ |
ಕೊಡುವ ಕಪ್ಪದ ಕರಿತುರಂಗರತ್ನಾಳಿಯಂ |
ಬಿಡದೆ ನೋಡುತ ಚತುರ ಕವಿಗಮಕಿವಾದಿವಾಗ್ನಿಗಳ ಪಿರಿದುಂ ಸೊಗಯಿಪಾ ||
ನುಡಿಗೆ ಕಿವಿಗೊಡುತೆಡಬಲಂ ಬಿಡದೆ ನೀರೆಯರ್ |
ನಿಡುಗಯ್ಯೊಳಿಟ್ಟ ಕಂಕಣ ಝಣಂ ಝಣರೆನಲ್ |
ಪಿಡಿದು ಬೀಸುವ ಚಮರದೆಲರ್ಗೆ ಮೈಗೊಟ್ಟು ಮನುಜೇಶನೊಪ್ಪುತ್ತಿರ್ದನು || ೫ ||

ಅಸಮ ಸೌಭಾಗ್ಯಸಮುಪೇತನೀ ತೆರದಿ ಮನ |
ಮೊಸೆದು ಸರ್ವಾವಸರಮೆಂಬೋಲಗದೊಳು ಕ |
ಣ್ಗೆಸೆವ ಸಿಂಹಾಸನಾರೂಢನಾಗಿರಲೊರ್ವನುಬ್ಬಸದಿ ಪೊರಿದುಬಂದು ||
ಅಸವಸದಿ ಸಾಷ್ಟಾಂಗವೆರಗಿ ಕೈಮುಗಿದನೆಲೆ |
ವಸುಧೀಶ ಕೇಳೆಮ್ಮ ಗಡಿವಾಡಗಳನು ಮಾ |
ಮಸಕದಿಂ ಪರಭೂಪರಿರಿಯುತಿರ್ದಪರೆಂಬ ಸುದ್ದಿಯಂ ಕೇಳ್ದನಾಗ || ೬ ||

ನಿಡುನಿದ್ದೆಯಲ್ಲಿ ಗುಹೆಯೊಳಗೆ ಮೆಯ್ಮರೆದಿರ್ದ |
ಕಡುಗಲಿ ಮೃಗಾಧೀಶನಾಡುವೊಲನಂ ಮಿಗಗ |
ಳೊಡಗೂಡಿಯುಲುಹು ಮಾಡುವ ತೆರದಿನೆನ್ನ ಮರವೆಯೊಳೆನಗೆಯಾಳ್ವೆಸನನು ||
ಬಿಡದೆ ಮಾಡುವರೀಗ ಬಂದೆನ್ನ ಸೀಮೆಯಂ |
ತುಡುಗಣಿತನದಿ ಹೊಕ್ಕ ತುಂಟಭಂಟಿಕೆಯುಮಂ |
ಬಿಡಿಸದೊಡೆಯಾಲಸ್ಯದಿಂದಮೃತ ವಿಷಮಪ್ಪ ತೆರದೊಳಹುದೆನ್ನ ಕಾರ್ಯ || ೭ ||

ಎನಲೊದರಿ ಕೆಕ್ಕಳಂಗೆದರಿ ಗದ್ದುಗೆವೊಯ್ದು |
ಕೊನೆಮೀಸೆಗಡಿದು ನಿಸ್ಸಾಣಮಂ ಹೊಯ್ಸಿ ಅನಿ |
ತಿನಿತೆಂಬ ಗಣನೆಗೆಯ್ದದ ತೇಜಿ ಕೂರಾನೆ ತೇರಾಳುಗಳನೆ ಕೂಡಿ ||
ಇನಿಸು ತಡೆಯದೆ ಪೊಳಲಪೊರಮಟ್ಟು ಪೊರವೊಳಲ |
ವನದಲ್ಲಿ ಬಿಟ್ಟಾ ತಳಾರ ಯಮದಂಡನಂ |
ಮನಮೊಸೆದು ಬರಿಸಿ ನಗರಿಯ ರಕ್ಷಿಸಲ್ವೇಳಿ ತೆರಳ್ದನವನೀಶನಿತ್ತ || ೮ ||

ಉತ್ತಮಗುಣಾಭರಣನಾ ತಳಾರಂ ಮಮತೆ |
ವೆತ್ತು ಪುರವರದೊಳುಳ್ಳಷ್ಟಾದಶಪ್ರಜೆಯ |
ಮೊತ್ತಮಂ ಪರಿರಕ್ಷಿಸುತ್ತಿರಲ್ಕತ್ತ ಸಾಹಸಿ ಸುಯೋಧನ ಭೂಪತಿ ||
ದುತ್ತಂಡಿಕೆಯೊಳು ತನಗಿದಿರಾದ ಮನ್ನೆಯರ |
ತೊತ್ತಳಂದುಳಿದು ನಿರ್ವಂಶಮಂ ಮಾಡುವೆನೆ |
ನುತ್ತ ಕೋಪಾರೂಢನಾಗಿ ನೆಲಹೊರದ ಚಾತುರ್ದಂತಸೇನೆವೆರಸಿ || ೯ ||

ಬಿಟ್ಟ ಪಯಣದೊಳು ಬಿಡುವಯಣಮಿಲ್ಲದೆ ದಾಳಿ |
ಯಿಟ್ಟು ಮಾರ್ಮಲೆತು ಕೆಲಬರು ಬಲಿದುಕೊಂಡಿರ್ದ |
ಪಟ್ಟಣಂಗಳನು ಧೂಳೀಪಟ್ಟಮಂ ಮಾಡಿ ನಿರ್ದಾಮಧೂಮಮಾಗಿ ||
ಸುಟ್ಟು ಸೂರೆಯುಂ ಹೊಯ್ದು ಹುಲಿ ಕರಡಿಗಳಿಗೆ ಮನೆ |
ಗಟ್ಟಿಸಿ ಬಳಿಕ್ಕ ಕಂಡರಸುಗಳಿಗಭಯಮಂ |
ಕೊಟ್ಟೋಡಿದವರೂರ್ಗೆ ಠಾಣೆಯಮಿಕ್ಕಿ ಮಗುಳ್ದನಾ ಮಹಿಪಾಲನು || ೧೦ ||

ಅರಿನೃಪರ ಜಯಿಸಿ ಅರಸೆಯ್ದುವುದನರಿದು ಪುರ |
ವರದೊಳೆಸೆವಷ್ಟಶೋಭೆಯನು ವಿರಚಿಸಿ ಹಿರಿದು |
ಹರುಷದಿಂದಿರ್ವಂದು ಕಂಡ ಯಮದಂಡನೊಡನೆಯ್ದಿ ಬಳಿಕಾ ಪುರಜನಂ ||
ಉರುಮುದದಿನೆರಗಲೊಡನೆಲೆ ಪುರಜನಂಗಳಿರ |
ಪರಿಣಾಮವೇ ನಿಮ್ಮ ಮಕ್ಕಳೆಂದು ಭೂ |
ವರನು ಬೆಸಗೊಳಲವರ್ ಕರಕಮಲಮಂ ಮುಗಿಯುತಿಂತು ಬಿನ್ನಪಗೆಯ್ದರು || ೧೧ ||

ವಸುಧೀಶ ನಿಮ್ಮ ಬೆಸದಿಂದ ನೀಮೆ ನಮಗೆ |
ಹುಸಿ ತಾನೆ ದಿಟಮಾಗಿ ಯಮದಂಡನೆಮ್ಮ ರ |
ಕ್ಷಿಸಿದನದರಿಂದೆಮಗೆ ಹಿರಿದು ಸಂತಸಮೆಂಬ ನುಡಿ ತನಗೆ ವಿಷಮವಾಗಿ ||
ಹಸನಾಯ್ತು ಕಾರ್ಯಮೆನ್ನರಸುತನಮಿವನ ಕೈ |
ವಸಮಾಯ್ತು ನನಗಾಗದಿನ್ನೆಂದು ಪಿರಿದು ಚಿಂ |
ತಿಸುತ ಹೊಳಲಂ ಹೊಕ್ಕು ನಿಜ ನಿವಾಸಕ್ಕೆಯ್ದುತಾ ಇರುಳೊಳಿಂತೆಣಿಸಿದಂ || ೧೨ ||

ಜಾಯಾಜನದ ಜಂಗುಳಿಯನು ಜವ್ವನಿಗನಂ |
ಪಾಯಸದ ಕೊಡದ ಮುದ್ರೆಯನಾ ಬಿಡಾಲಮಂ |
ಕಾಯಿ ನೀಮೆಂದು ಕೈವರ್ತಿಸಿ ವಿಚಾರಮಂ ಮಾಡಲೊಲ್ಲದ ಮೂಢನಾ ||
ಆಯಿರವಿನಂತಾದುದು ವಿವೇಕತನದಿ ಮ |
ತ್ತೀಯೆನ್ನ ಸಿರಿಯಂ ನಿಯೋಗಿ ಹಸ್ತಾರ್ಪಿತಮ |
ನೋಯರಂಗೆಟ್ಟು ಮಾಡಿದುದೆಂದು ಬಗೆದು ಬಳಿಕಾ ಇರುಳ ಕಳೆದುಬಂದು || ೧೩ ||

ಬರಿಸಿ ಸಂಶಯಹೃದಯನಂದು ಮಂತ್ರಾಲಯಕೆ |
ಭರದಿಂದಮಾ ಸಚಿವನಂ ಪುರೋಹಿತನುಮಂ |
ಧರಣಿಪಾಲಕನತಿ ಕುಮಂತ್ರದಿಂದಿತೆಂದನಾನನ್ಯ ಭೂಮಿಪರೊಳು ||
ಧುರಮುಖದೊಳಳಿವೆನೆಂದೇ ಬಗೆದು ನಮ್ಮ ಪುರ |
ವರವನೆಲ್ಲವ ತನ್ನ ಕೈವಶಂ ಮಾಡಿ ತಾ |
ನರಸಪ್ಪೆನೆಂದಿರ್ದನೀ ದ್ರೋಹಿ ಯಮದಂಡನಿದಕೇನುಪಾಯವೆಮಗೆ || ೧೪ ||

ಎಂದೊಡಾ ಯಮದಂಡನೀ ದ್ರೋಹಮಂ ಮಾಡು |
ವಂದಮಿದು ಸಂದೇಹಮೆಂದವರು ನುಡಿಯಲಿಂ |
ತೆಂದನಾ ನೃಪತಿ ಸತ್ಯಂಧರಮಹಾರಾಜನಂದು ಕಾಷ್ಟಾಂಗಾರಗೆ ||
ಮ?ದೆ ನೋಡದೆ ಮಂತ್ರಿಪದವನಿತ್ತೊಡೆಯವನ |
ಕೊಂದುದಿಲ್ಲವೆಯೆಂದು ನಾನಾ ಕುದೃಷ್ಟಿಯಿಂದ |
ಮಂದಭಾಗ್ಯಂ ಮತ್ತಮವರನೊಡಬಡಿಸಿ ಈ ಕಾರ್ಯಕಿನ್ನಾವುದೆಣಿಕೆ || ೧೫ ||

ಎನಲಿಂತು ಬಿನ್ನಪಂಗೆಯ್ದರವರರಸಂಗೆ |
ಜನತಾಧಿನಾಥ ನೀವೇಣಿಸಿದುದು ತಪ್ಪದಿದ |
ಕನುಮಾನವೇತಕೀ ಕಾರ್ಯ ಹುರಿಗೂಡಿದೊಡೆ ಮುಂದಕೆ ನಮಗಶಕ್ಯ ||
ಅನಿತರಿಂದಿನಜಾಪ್ಯಮಂ ಮಾಡದಿವಗಾಜ್ಞೆ |
ಯನು ಮಾಳ್ಪುಪಾಯಂ ಸ್ವಾಮಿ ನೀವೇ ಅರಿವಿ |
ರೆನೆಯವನ ಮೇಲೊಂದು ನೆವವಿಲ್ಲದಾಜ್ಞೆಯಂ ಮಾಡೆ ಬಹುಜನವಿರೋಧ || ೧೬ ||

ಅದರಿಂದ ನಾನವನ ಮೇಲೆಯಪರಾಧಮಂ |
ಚದುರತನದಿಂ ಹೊರಿಸಿ ಸಕಲರಾಣುವೆಯಮನ |
ಕಿದು ಕಾರ್ಯವೆನಿಸಿ ಇವಗಾಜ್ಞೆಯಿಕ್ಕುವ ತೆರನ ತೋರ್ಪೆ ನಾನಿಂದಿರುಳೊಳು ||
ಪದೆದು ಮತ್ತಾ ಈರ್ವರುಂ ಬೆರಸು ತನ್ನ ನಿಜ |
ಸದನದೊಳ್ ಕನ್ನಮಂ ಸಮೆದು ಭಂಡಾರದೊಳ |
ಗೊದವಿದ ಸುವಸ್ತುವಂ ಕಳ್ದು ಬೇರೊಂದೆಡೆಯೊಳಿರಿಸಿಯಾಸ್ಥಾನಕೆಯ್ದಿ || ೧೭ ||

ನೆರೆದ ನೃಪವರರ ಮಧ್ಯದೊಳೋಲಗದೊಳಿರ್ದು |
ಕರಸಿ ಯಮದಂಡನಂ ಭೂಪನವಗಿಂತೆಂದ |
ನರಮನೆಗೆ ಕನ್ನಮಂ ಸಮೆದು ಕಳ್ಳರು ಹೊಕ್ಕು ಭಂಡಾರದಲ್ಲಿ ಬಹಳ ||
ವರವಸ್ತುವಂ ಕಳ್ದುಕೊಂಡೊಯ್ದರವರನತಿ |
ಭರದಿಂದ ತಂದುಕೊಡು ತಂದುಕೊಡದೊಡೆ ನಿನಗೆ |
ಪಿರಿದೆನಿಸುವಾಜ್ಞೆಯಂ ಮಾಡಿಸುವೆನೆನೆ ಕೇಳಿ ಮನದೊಳಿಂತೆಂದನಾಗ || ೧೮ ||

ಕ್ಷಿತಿಪರವಿವೇಕತನದಿಂದೊಗೆದ ಮುನಿಸು ತಮ್ಮ |
ಗತಿಹಿತವರಂ ದ್ರೋಹಿಯೆಂಬುದು ಚಿರಾಯುವಂ |
ಗತಜೀವಿಯೆಂಬುದುದಿತಪ್ರತಾಪಿಗಳನತ್ಯಂತ ಭೀರುಗಳೆನಿಪುದು ||
ಅತಿಸಿದ್ಧಮಾಯ್ತು ನಮ್ಮೀ ನೃಪನೊಳೊಂದು ಕು |
ತ್ಸಿತವನಕುಠಾರ ಯಮದಂಡನೆಣಿಸುತ್ತಿರಲ್ |
ಕೃತಕಮಾನಸನಾ ಸುಯೋಧನನೃಪಂ ಕೋಪದಿಂದಿತು ನುಡಿದನಾಗ || ೧೯ ||

ನಾಡುಬೀಡೆಲ್ಲಮಂ ನಲ್ಮೆಯಿಂ ರಕ್ಷಣೆಯ |
ಮಾಡುವೆಡೆಯೊಳ್ ಧುರಂಧರಿಕೆ ನಿನ್ನೊಳಗೆ ಒಡ |
ಗೂಡಿರ್ದು ಬಳಿಕ ನಮ್ಮರಮನೆಯನಪಹರಿಸಿದಾಖಳರ್ ಕಾವಲನಿನಿಸನು ||
ನೋಡಿ ರಕ್ಷಿಸಲುಬೇಕೆಂದು ಮನದೊಳ್ ಸಡ್ಡೆ |
ಮಾಡದಾದೆ ಎಲಾ ಎನುತ ಪಿರಿದಾಗ್ರಹಂ |
ಮಾಡಿದ ಮಹೀಪತಿಗೆ ಮೆಯ್ನಡುಗುತಿಂತೆಂದು ಬಿನ್ನಪಂಗೆಯ್ದನಾಗ || ೨೦ ||

ನಾ ನಿನ್ನ ರಾಜಧಾನಿಯ ರಕ್ಷಿಪಂದಿಂದ |
ಹಾನಿಯಾಯ್ತಿಲ್ಲೆನ್ನ ಕಾವಲವಿಚಾರವೆಲೆ |
ಭೂನಾಥ ಕೇಳೆನ್ನ ಪಾಪದ ಫಲವಿದೈಸೆಯೆಂದು ಕಡು ಭೀರುವಾಗಿ ||
ಮಾನನಿಧಿ ಯಮದಂಡನಾ ಕಳ್ಳರಂ ನೋಳ್ಪೆ |
ನಾನತಿ ತ್ವರಿತದೊಳಗೆಂದು ನೃಪತಿಗೆ ನಮಿಸಿ |
ತಾನೊಬ್ಬನೇ ಕನ್ನಮಂ ಸಮೆದ ಬಟ್ಟೆಯೊಳು ಭಂಡಾರಕೆಯ್ತಂದನು || ೨೧ ||

ಬರುತ ಕಳ್ಳರ ಹೆಜ್ಜೆ ಹದನಮಂ ನೋಳ್ಪಾಗ |
ಲರಸು ಮೆಟ್ಟುವ ಪಂಚರತ್ನಮಯ ಪಾದುಕಂ |
ವರ ಸಚಿವನಿಕ್ಕುವುಂಗುರಮಾ ಪುರೋಹಿತನ ಹೊನ್ನಯಜ್ಞೋಪವೀತಂ ||
ಉರುಕೋಶಗೃಹದ ಕನ್ನದ ಬಾಯೊಳಿರೆ ಕಂಡು |
ಪಿರುದು ವಿಸ್ಮಯನಾಗಿ ನಿರಪರಾಧಿಯನೆನ್ನ |
ಕರುಣವಿಲ್ಲದೆ ಕೆಡಿಸಬೇಕೆಂದು ಮೂವರುಂ ಬಂದು ಭಂಡರವೊಕ್ಕು || ೨೨ ||

ವಿತ್ತಮಂ ಕಳ್ದೊಯ್ವ ಸಂಭ್ರಮದೆ ಮರೆದರೆಂ |
ದೆತ್ತಿಕೊಂಡತಿ ಗುಪ್ತದಿಂ ತನ್ನ ಮನೆಗೆಯ್ದಿ |
ಮತ್ತಾರುಮರಿಯದಂತಿರಿಸಿ ಹಸನಾಯ್ತೀ ಕಾರ್ಯಮೆಂದಾ ನೃಪತಿಯಾ ||
ಹತ್ತಿರಕ್ಕೆಯ್ದುವಾಸಮಯದೊಳಗಾಹನೆಯ |
ಹೊತ್ತರೊಳಗಾ ಗಜಬಜೆಯ ಕೇಳಿ ಪುರಜನಂ |
ಮತ್ತಲ್ಲಿಗೆಯ್ದಲಾ ನೇಪತಿಯಾ ವೃತ್ತಾಂತವೆಲ್ಲವನವರೊಳುಸಿರ್ದನು || ೨೩ ||

ಅರಸು ನುಡಿದಾ ದುರಾಗ್ರಹದ ನುಡಿಯಂ ಕೇಳಿ |
ಪುರಜನಗಳಿಂತೆಂದರೆಲೆ ಮಹೀಪಾಲಕಾ |
ಅರಮನೆಯ ಕಾವಲಂ ಮಾಡದ ತಳಾರನೇ ದ್ರೋಹಿಯವಗಾಜ್ಞೆಬೇಕು ||
ಧರೆ ಮೆಚ್ಚುವಂತೆ ಕಳ್ಳರನರಸಿತಹುದಕ್ಕೆ |
ತರಹರದಿನೆಂಟುದಿನದವಧಿಯಂ ಕೊಡು ಮೇಲೆ |
ತರದಾದೊಡಾಜ್ಞೆಯಂ ನಾವಿವಗೆ ಮಾಳ್ಪೆವಿಂತಿದಕೆ ಸಂದೇಹ ಬೇಡ || ೨೪ ||

ಎನೆ ಕೇಳಿಯಾ ನುಡಿಗೊಂಡಂಬಟ್ಟು ಬಳಿಕ ಪುರ |
ಜನಮನಾದರದಿಂದ ಬೀಳ್ಕೊಡಲ್ಕವರೊಡನೆ |
ಜನವಿನುತ ಯಮದಂಡನೆಯ್ದಿಯರಸಿನ ದುರಾಗ್ರಹಕೆ ನಾನೇ ಗೆಯ್ವೆನು ||
ಎನೆ ಚಿಂತೆ ನಿನಗೇಕೆ ಸಾಧಕೆಗೆ ಬಾಧೆಯೇ |
ಜನಿಯಿಸುವುದದರಿಂದ ತರಹರಂ ಮಾಡು ನೀ |
ನೆನುತ ಕಳುಹಲು ತನ್ನ ಮನೆಗೆ ತಳ್ಳಂಕದಿಂ ಪೋಗಲಾ ಪಗಲಳಿದುದು || ೨೫ ||

ಆ ರಾಯನಾ ಉದಯದೊಳ್ ತಳಾರನ ಬರಿಸಿ |
ಚೋರನಂ ತಂದುದಿಲ್ಲವೆ ಎನಲ್ಕೆಂದನೀ |
ಊರಂ ಗಡಿಯೊಳೊರ್ವನೊಂದು ಕಥೆಯಂ ಪೇಳುತಿರ್ದ ನಾನಾ ಕಥೆಯನು ||
ಭೂರಿಜನಗಳ ಮುಂದೆ ಕೇಳುತ್ತಮಿರ್ದೆನದು |
ಕಾರಣದಿ ಕಳ್ಳರನು ತಪ್ಪುದಂ ಮರೆದೆನೆನ |
ಲಾರೈದು ನೀ ಕೇಳ್ದ ಕಥೆಯನುಸುರೆಂದೆನಲ್ ಬಿನ್ನಪಂಗೆಯ್ದನಿಂತು || ೨೬ ||

ಚಿತ್ತೈಸು ನೃಪತಿಯೊಂದಾನೊಂದು ಕೊಳದ ತಡಿ |
ಯೊತ್ತಿನೊಳ್ ಮುಗಿಲನೀರಂ ಬಯಸಿ ಪೋದಂತೆ |
ತುತ್ತತುದಿಯೊಳಗೆ ಪಲ್ಲವಶಾಖೆವಡೆದು ಸತ್ತಿಗೆಯಂತಿರೊಂದು ಮರನು ||
ಹತ್ತಲಾರ್ಗಳವಲ್ಲದಿರಲಲ್ಲಿ ಮನೆಗಟ್ಟಿ |
ಮುತ್ತಹಂಸನುಮೊಂದು ತನ್ನ ಸಂತಾನದು |
ನ್ಮತ್ತಹಂಸಗಳು ಹಲವುಂ ಸಹಿತಮಿರಲೊರ್ವ ಧೀವರಂ ಕಂಡನದನು || ೨೭ ||

ಆವುದ್ದವೇರಿ ಹಂಚೆಯ ಹಿಡಿದ ತೆರನನಾ |
ಧೀವರಂ ಹಡೆಯದಾ ಬಳಿಕವಾ ತರುಮೂಲ |
ದಾ ವಸುಧೆಯೊಳ್ ಬಲ್ಲಿತಪ್ಪಬಳ್ಳಿಯನರಸಿಯದರ ಬೀಜವನೆ ಬಿತ್ತಿ ||
ಓವುತಿರಲದು ಬೆಳೆದು ಕುಡಿನಡೆವುದಂ ಕಾಣು |
ತಾ ವೃದ್ಧಹಂಸನಿದರಿಂ ಕೇಡು ನಮಗೆಂದು |
ಭಾವಿಸಿ ಬಳಿಕ್ಕ ತನ್ನಾ ಪುತ್ರಪೌತ್ರಾದಿ ಹಂಸಗಳೊಳೊಂತುಸಿರ್ದುದು || ೨೮ ||

ಇದು ಬೆಳೆದು ಬಲಿದೀ ಮರದ ತುದಿಗೆ ಬಂದೊಡವ |
ನಿದನೊತ್ತಿ ಹಿಡಿದು ನಾವಿರ್ಪೀ ನೆಲೆಗೆ ಬಂದು |
ಮುದದಿ ಬಲೆಯಂ ಬೀಸಿ ನಮ್ಮೆಲ್ಲರಂ ಪಿಡಿದು ಕೊಲ್ಲದೇ ಬಿಡುವನಲ್ಲಾ ||
ಅದರಿಂದ ಪೋಗಿ ನೀಮೀಲತಿಕೆ ಎಳೆಗುಡಿಯ |
ತುದಿಮೊದಲನೆಲ್ಲವಂ ಕಡಿಕಡಿದು ಬಿಸುಡಿ ಎನು |
ತದು ಬುದ್ಧಿವೇಳೆ ಕೇಳುತ್ತುಳಿದ ಬಾಲಹಂಸಗಳು ನಗುತಿಂತೆಂದವು || ೨೯ ||

ಎಂದಿಗೀ ಲತೆ ಬೆಳೆವುದೆಂದಿಗಿವನಿದನಡರಿ |
ಯೆಂದಿಗೆಮ್ಮಂ ಪಿಡಿದನೆಂದೆಂಬ ಗುಡ್ಡೆಣಿಕೆ |
ಯಿಂದ ಶತವೃದ್ಧನಾಗಿಯುಮಿನ್ನು ಬದುಕಬೇಕೆಂಬ ಬಯಲಾಸೆ ನಿನಗೆ ||
ಬಂದುದಲ್ಲಾ ಎನುತ ಗಹಗಹಿಸಿ ನಗುವ ಖಗ |
ವೃಂದದಜ್ಞತೆಯ ಬುದ್ಧಿಯ ಮಾತು ಕಂಡು ಕಡು |
ನೊಂದು ಮತ್ತಾ ವೃದ್ಧಹಂಸನವರೊಳಗಿಂತು ನೀತಿಯಂ ನುಡಿದುದಾಗ || ೩೦ ||

ಕೇಳದ ಕುದೃಷ್ಟರ್ಗೆ ಸಜ್ಜನರ್ ಬುದ್ಧಿಯಂ |
ಪೇಳಲಾಗದು ಪೇಳೆ ನುಡಿಗೊಣೆಯಂ ಮೀರಿ |
ಪೇಳೆ ಮುನಿವರು ಮೀರಿ ಪೇಳೆ ಬಯ್ವರು ಮೀರಿ ಪೇಳೆ ದಂಡಿಸುವರೆಂದು ||
ಆಳೋಚನೆಯನಿರದೆ ಮಾಡೆಯಾ ಬಾಲಹಂ |
ಸಾಳಿಯೊಳ್ ನುಡಿಯಲೊಲ್ಲದೆ ಮೌನಗೊಂಡಿರ |
ಲ್ಕಾ ಲತಿಕೆ ಬೆಳೆದು ದಿನದನಕೆ ಮತ್ತಾ ಮರದ ತುತ್ತತುಡಿಯಂ ಹಬ್ಬಿತು || ೩೧ ||

ಅದನು ಕಂಡಾ ಧೀವರಂ ನಲಿಯುತೊಂದು ದಿನ |
ದುದಯದೊಳಗಾ ಹಕ್ಕಿ ದೆಸೆದೆಸೆಗೆ ಮೇಂಬೊಲಕೆ |
ಹದವು ಮಿಗೆ ಹಾರಿಹೋದುದನರಿತು ಬಳಿಕಾ ಲತೆಯನು ಹಿಡಿದಾ ತರುವಿನಾ ||
ತುದಿಯೇರುತಲ್ಲಿ ಬಲೆಯಂ ಬೀಸುತಿಳಿಯಲಾ |
ಮದಹಂಸನಿಕುರುಂಬಮೆಲ್ಲ ಮೇಹಂಕೊಂಡು |
ವೊದವಿದ ಸರಾಗದಿಂದಾ ನೆಲೆಗೆ ಬಂದು ಬೀಸಿದ ಜಾಲಕೊಳಗಾದುವು || ೩೨ ||

ಅನಿತರೊಳಗಾ ವೃದ್ಧಹಂಸ ಶಂಕಾಹೃದಯ |
ನಿನಿಸು ತಡೆದೆಯ್ತಂದು ಬೇರೊಂದು ಭೂರುಹದ |
ಕೊನೆಯಲ್ಲಿ ಕುಳ್ಳಿರ್ದು ವೃದ್ಧವಾಕ್ಯೋಲ್ಲಂಘನದಿ ಕೇಡು ಬಂದಿತೆಂದು ||
ಘನದುಃಖವಡುವ ತರುಮದ ಹಂಸೆಯಂ ಕಂಡು |
ಮನದೊಳಗೆ ಮಲಮಲನೆ ಮರುಗಿ ದುಃಖಿಸುತಿರಲ್ |
ಜನಕ ನಮ್ಮಪರಾಧಮಂ ಮನದೆ ಕೊಳ್ಳದಿನ್ನೊಂದುಪಾಯವನುಸಿರ್ವುದು || ೩೩ ||

ಅತಿಕರುಣದಿಂದೆಂಬ ದೈನ್ಯವಚನಕ್ಕೆ ನಗು |
ತತಿಗಳೆಯಮಾದ ಕಾರ್ಯಂ ಹದಕೆ ಬರ್ಪುದೇ |
ಗತಜೀವನೇನ ಖಲು ಸೇತುಬಂಧವೆಂಬ ನೀತಿಯಿಂ ಬಾಲಕರಿರಾ ||
ಮತಿಗೆಟ್ಟು ಮೊದಲೆನ್ನ ಸಡ್ಡೆಗೊಳ್ಳದೆ ವಂಶ |
ಹತಮಪ್ಪುದಂ ಮಾಡಿಕೊಂಡಿರಲ್ಲಾ ಎನಲ್ |
ಸುತಸಮಿತಿಯೆಲ್ಲವಾ ವೃದ್ಧಹಂಸನೊಳಿಂತು ಬಿನ್ನಪಂಗೆಯ್ದುವಾಗ || ೩೪ ||

ಅರೆದರೆದು ಸುಡೆ ಕರ್ವು ಕಡುಸೊಗಸುವಡೆದ ಸ |
ಕ್ಕರೆಯಪ್ಪ ತೆರದಿ ದುರ್ಜನರೇಸು ಬಾಧೆಯಂ |
ವರಸಜ್ಜನರ್ಗೆ ಮಾಡಿದೊಡವರ್ಲೋಕಹಿತಕಾರ್ಯಮನೆ ಮೆರೆವರೈಸೆ ||
ಗುರುವೆಯೆಂದೆಂಬ ಹಿಳ್ಳೆಗಳ ಮಾತಂ ಕೇಳಿ |
ಕರುಣಾರ್ದ್ರಹೃದಯನಾ ಸುತಸಮಿತಿಗಹ ಕೇಡ |
ಪರಿಹರಿಪ ತೆರದಿನಿಂತೆಂದವರು ಕೂಡೆ ಸದ್ಭುದ್ಧಿಯಂ ಪೇಳ್ದುವಾಗ || ೩೫ ||