ಎಳೆಯ ಹಲಸಿನಕಾಯ ಕುದಿಸಿ ಮತ್ತೊಮ್ಮೆ ಹಾ |
ಲೊಳಗುಪ್ಪನಿಕ್ಕಿಯದ ಬತ್ತುವಂದದಿಯಟ್ಟು |
ಯಿಳುಹಿ ಸಣ್ಣನ ಮಾಡಿಯದಕೆ ತೆಂಗಿನ ತುರುವಲುಳ್ಳಿ ಶುಂಠಿಗಳನಿಕ್ಕಿ ||
ಬಳಿಕ ಮೊಸರೊಳಗೆ ಹುಳಿ ಮೆಣಸು ಜೀರಿಗೆಯುಳ್ಳಿ |
ಗಳ ರಸವನೆಱೆದು ಕೊತ್ತುಂಬರಿಯನರೆದಿಕ್ಕಿ |
ತಿಳಿದುಪ್ಪವನ್ನೆಱೆವುತಾ ದ್ರವವನಿಂಗುವಂತೆ ಕೊಡದೊಳು ತಿಳಿಹಿ ಕಾಸಿ || ೪೬ ||

ಮೊದಲು ಬೇಯಿಸಿದ ಬಾಳೆಯ ಹೂವ ಹುಡಿಮಾಡಿ |
ಯದಱೊಳಿಟ್ಟು ಮೇಗರೆಯಟ್ಟ ಹಲಸಿನಕಾಯ |
ಹುದುಗಿ ಚೆನ್ನಾಗಿ ಒಗ್ಗರಿಸಿ ಕೇದಗೆಯ ಹೂವಿಕ್ಕಿ ನವಕಪೂರ್ವರದ ||
ಉದುರೆಯಂ ಹಾಕಿ ಬಾಡಿದ ಬಾಳೆಲೆಯೊಳಿಕ್ಕಿ |
ಯದನು ನಾರಂ ಸುತ್ತಿಯತ್ತರದ ಮೇಲೆಯೆಳೆ |
ವದನಾಗಿ ಸೆಕೆಗೊಳಿಸಲದು ಕದಂಬರಂಭಾಕುಸುಮವೆಸರಂ ಪಡೆದುದು || ೪೭ ||

ಚಳಿಸಿ ಹದನಾದ ಗೋಧುವೆಯ ಹವಣಾದ ಹಾ |
ಲೊಳಗಿಕ್ಕಿಯಾ ಹಾಲು ಬತ್ತುವಂದದಿಯಟ್ಟು |
ಯೆಳೆಯಲ್ಲ ಮೆಣಸು ತವರಾಜ ತುಪ್ಪದಿ ಹುರಿದ ತೆಂಗಾಯಿ ಕರ್ಪೂರವನು ||
ತಳಿದು ಕಲಸಿದ ಕೂಳನಟ್ಟು ಬಾಳೆಯ ಹೂವಿ |
ನೊಳಗೆ ಹಸನಾಗಿ ಪೂರೈಸಿ ಪೊಡಣಿಗೆಗೊಟ್ಟು |
ಬಳಿಕತ್ತರದೊಳು ಬಿಸಿಮಾಡಿ ಗೊದೂಮರಂಭಾಕುಸುಮವೆಸರಿಡುವುದು || ೪೮ ||

ಮೆತ್ತನಾದಾಹೂವನತಿ ಸಣ್ಣನಂ ಮಾಡಿ |
ಕತ್ತರಿಸಿ ಹಾಲೊಳಗೆ ಶುಂಠಿ ಸಕ್ಕರೆ ಮೆಣಸ |
ನೊತ್ತಿ ಬಲಿದ ಹಾಲಂ ತೊವರಿಯಂದದಿ ಕಡಿದು ಕಲಸಿ ಕೊಂಡಿಂಗುಳ್ಳಿಯ ||
ಇತ್ತು ಒಗ್ಗರಿಸಿಯದನಾಹೂವಿನಂದದೊಳು |
ಮೆತ್ತಿಯರೆದುದ್ದಿನ ಸರಿಯನಿಕ್ಕಿ ತುಪ್ಪವಂ |
ಮತ್ತದಕೆ ಬಿಟ್ಟು ಕೆಂಪಾಗುವಂದದಿ ಹಸನ ಮಾಡಿ ಪಾಕವ ಮಾಳ್ಪುದು || ೪೯ ||

ಬಳಿಕದಂ ಬೆಸಳಿಗೆಯಳಿರಿಸಿ ಮೆಣಸಿನ ಹುಡಿಯ |
ತಳಿದು ಹುರಿಯೆಳ್ಳು ಜೀರಿಗೆ ಮೆಂತೆಯವನಿಕ್ಕಿ |
ಯೆಳೆಯಲ್ಲಮಂ ಚಿತ್ತಳಿಸಿ ಹಾಕಿ ತುಪ್ಪದೊಳು ಹುರಿದ ತೆಂಗಾಯ ಹುಡಿಯ ||
ತಳಿದದಕೆ ಕೆಂಡಧೂಪವನಿಕ್ಕಿ ಕರ್ಪುರದ |
ಹಳುಕು ಮೊದಲಾಗಿ ಹಸನಾದ ಪರಿಮಳವಿಕ್ಕಿ |
ಕೊಳುತದಂ ಮಾಷಕಲ್ಪಿತ ನವ್ಯಕದಳೀಕುಸುಮಪಾಕವೆಸರಿಡುವುದು || ೫೦ ||

ಹಿರಿದು ಮೆತ್ತನೆ ಮಾಡಿದಾಹೂವ ಕತ್ತರಿಸಿ |
ಹುರಿದ ಕಡಲೆಯ ಚೂರ್ಣ ಮೊದಲಾದ ಸಂಭಾರ |
ವೆರಸಿ ತುಪ್ಪದೊಳು ತಾಳಿಸಿ ಹಸಿಯ ಬೇಳೆ ಕಡಲೆಯನರೆದು ಕಲಸಿಯದನು ||
ಬಿರಿಯದಂದದೊಳು ಹೂವಿನ ಚಂದವಂ ಮಾಡಿ |
ಉರಿಗೆಂಡದೊಳವಳಿಗಟ್ಟಿಗೆಯ ಕಟ್ಟಿ ನಡು |
ವಿರಿಸಿ ಬೇಯಿಸಿ ಪರಿಮಳವನಿಕ್ಕೆ ಚಣಕರಂಭಾಕುಸುಮಪಾಕಮಾಯ್ತು || ೫೧ ||

ಎಳೆಯ ಬಾಳೆಯ ಹೊಡೆಯ ಕುದಿಸಿಯೆರಡಾಗಿ ಸಂ |
ಬಳಿಸಿ ಕದುಕಿಱಿದು ಮೆಣಸುಪ್ಪುಳ್ಳಿ ಹಸಿಯಲ್ಲ |
ಕಳಲು ಹುಣಿಸೆಯ ಹಣ್ಣ ಕಲ್ಕವಂ ಮಾಡಿಯದನಿಕ್ಕಿ ಪಾಕವನೆ ಮಾಡಿ ||
ಬಳಿಕ ಒಗ್ಗರಿಸಿ ಸಂಭಾರದ ರಸವ ಹಿಂಡಿ |
ಬಳಿಯುಳ್ಳಿ ಕೊತ್ತುಂಬರಿಯ ಚೂರ್ಣಮಿಕ್ಕಿ ಪರಿ |
ಮಳಿಸಿಯತ್ತರದಿ ಬಿಸಿಮಾಡಿದೊಡಮದು ಖಂಡರಂಭಾಕುಸುಮಮಾದುದು || ೫೨ ||

ಹೆಸರ ದೋಸೆಯ ಹೂವಿನೆಸಳಂತೆ ಸಂಬಳಿಸಿ |
ಹಸನಾಗಿಯುಪ್ಪು ಮೆಣಸಿಕ್ಕಿ ಕುದಿಸಿದ ಹೂವಿ |
ನೆಸಳ ಪದರೊಳು ತುಂಬಿ ಮೇಲೆ ನಾರಂ ಸುತ್ತಿ ತುಪ್ಪದೊಳು ಪಾಕಮಾಡಿ ||
ಹಸಿಯ ಕರಿಬೇವು ಕೊತ್ತುಂಬರಿಯನಿಕ್ಕಿ ತಾ |
ಳಿಸಿ ನರೆಯಕೊಟ್ಟು ಮಂಡಗೆ ಹಪ್ಪಳದ ಹುಡಿಯ |
ನೊಸೆದಿಕ್ಕಿ ಮುದ್ಗರಂಭಾಕುಸುಮಪಾಕಮೆಂದೆಂಬ ಹೆಸರಂ ಕರೆವುದು || ೫೩ ||

ಹಾಲಕೆನೆ ಮೊಸರಕೆನೆ ತನಿವಾಲು ಸೊಜ್ಜಿಗೆಯ |
ಹಾಲು ತೆಂಗಿನ ಹಾಲು ಮೆಣಸುಪ್ಪು ತುಪ್ಪದೊಳ |
ಗಾಲೋಡಿಸಿದ ಬಳಿಕ ಕಲ್ಕವಂ ಮಾಡಿ ಮೃದುವಾದ ಬಾಳೆಯ ಹೂವಿನ ||
ಮೇಲೆ ಕದುಕಿಱಿದವಂ ತುಂಬಿ ಹಸಿವಿದಿರ ಕವೆ |
ಗೋಲೊಳಗೆ ಕಟ್ಟಿ ಹಗ್ಗಿನೊಳು ಪಾಕವ ಮಾಡಿ |
ಏಲಕ್ಕಿಯಿಕ್ಕಿ ತುಪ್ಪವನು ಬಿಡಲಂತದು ಕದಂಬರಂಭಾಶೂಲ್ಯಕಂ || ೫೪ ||

ಬಿಳಿಯ ಮಂಡಗೆಯ ಚೂರ್ಣಂ ಮಾಡಿಕೊಂಡು ಹ |
ಪ್ಪಳದ ಹುಡಿ ಹುರಿದ ಮೆಣಸಿನ ಚೂರ್ಣಮಿಂತಿವಂ |
ಕಳಿವದಂ ಮಾಡಿ ಬೇಯಿಸಿ ತೆಗೆದು ಕದುಕಿಱಿದುಕೊಂಡ ಬಾಳೆಯ ಹೂವಿನ ||
ಒಳಗೆ ಪೂರೈಸಿ ಮತ್ತದಕೆ ನಾರಂ ಸುತ್ತಿ |
ತಿಳಿದುಪ್ಪದಿಂದ ಒಗ್ಗರಿಸಿ ಏಲಕ್ಕಿಯಂ |
ತಳಿದು ತ್ವರಿತದೊಳು ಬಿಸಿಮಾಡೆ ಮಂಡಕಮಿಶ್ರರಂಭಾಕುಸುಮಮಾಯಿತು || ೫೫ ||

ನುಱುಗಿಸಿದ ಸಕಲ ಸಂಭಾರಮಂ ಹಸನಾದ |
ತಱೆ ಸೇವೆಗೆಯೊಳು ಸರಿಗೂಡಿಯಕ್ಕಿರಿಸಿ ಕದು |
ಕಿಱಿದ ಬಾಳೆಯ ಹೂವಿನೊಳಗೆ ಚೆನ್ನಾಗಿ ಪೂರೈಸಿ ಮತ್ತಾ ಹೂವಿನ ||
ಹೊಱಗೆ ನಾರಂ ಸುತ್ತಿ ತುಪ್ಪದಿಂ ಒಗ್ಗರಿಸಿ |
ನಱೆಗೊಟ್ಟು ಕರ್ಪೂರ ಪನಿನೀರು ಮೊದಲಾದ |
ನಱುಗಂಪನಿಕ್ಕಿ ಮಡಗಿದಡದುವೆ ಚೂರ್ಣರಂಭಾಕುಸುಮಪಾಕಮಾಯ್ತು || ೫೬ ||

ಎಳೆವಾಳೆ ಹೂವ ಬಿಱಿಸಾದೆಸಳ ಬಿಸೆಯ ಸಂ |
ಬಳಿಸಿ ಸುಣ್ಣದ ನೀರಿನಿಂ ಕುದಿಸಿ ಮತ್ತೊಮ್ಮೆ |
ಕಳಸಿಗೆಯೊಳುಕ್ಕರಿಸಿ ಮೆತ್ತನಾದುದ ತೆಗೆದು ಬಸಿದೊಗರ ಹಿಂಡಿಕೊಂಡು ||
ಎಳೆಯೆಲ್ಲ ಮೆಣಸು ಜೀರಿಗೆಯುಪ್ಪ ಹುಡಿಮಾಡಿ |
ತಳಿದುಕೊಂಡಕೆ ನಱೆಯಂ ಕೊಟ್ಟು ಮುಚ್ಚಿ ಹೊಸ |
ತಿಳಿದುಪ್ಪದಲ್ಲಿ ಕೆಂಪಾಗುವಂದದಿ ಹುರಿದುಕೊಂಡೆರಡು ಭಾಗೆ ಮಾಡಿ || ೫೭ ||

ತಿಳಿಗುದುಪಲಕ್ಕಿಗರೆಮೊಗೆ ಹಾಲುಮಂ ಹೊಯ್ದು |
ಬಳಿಕಮೊಂದಿನಿಸು ತೆಂಗಿನಕಾಯ ಹೂದಿಕ್ಕಿ |
ತಳಿದು ಬೇಯದ ತೆಱದಿನಡುವಾಗಲದಱೆಸರು ಹೆಚ್ಚಿದರೆ ತೆಗೆದು ಹಾಕಿ ||
ಒಳಗುಳ್ಳ ಚಟ್ಟಿಯೊಳು ಹೊಸತುಪ್ಪವೆಱೆದದಂ |
ತಳಮೇಲು ಮಾಡಿ ಬೇಯಿಸಿಕೊಂಡದಕ್ಕೆ ಕುಂ |
ಬಳದ ಸಂಡಗೆ ಹಪ್ಪಳದ ಚೂರ್ಣಮಂ ತುಪ್ಪದೊಳಗಿಕ್ಕಿ ಹುರಿದುಕೊಂಡು || ೫೮ ||

ಒಡೆಯನೊಂದೆರಡ ರವೆಯವ ಮಾಡಿ ಮತ್ತದಱೊ |
ಳೊಡವೆರಸಿಯರೆಮಾನ ತುಪ್ಪದೊಳು ಹುಯ್ದಟ್ಟು |
ಹುಡಿಮಾಡಿಕೊಂಡು ಮತ್ತೆರಡು ಭಾಗೆಯೊಳೊಂದು ಹುಡಿಯ ಸೆಖೆಯಳಗೆಯೊಳಗೆ ||
ಮಡಗಿ ನಸುಸೆಖೆಗೊಳಿಸಿ ಇರಿಸುವುದು ಮತ್ತೊಂದು |
ಪುಡೆಯಕ್ಕೆ ಸಕ್ಕರೆಯುಮಂ ತ್ರಿಜಾತಕಮುಮಂ |
ಜಡಿದು ಕರ್ಪೂರಮಿಕ್ಕಲು ಕಹರಿಯೆಂಬ ಕದಳೀಕುಸುಮಪಾಕಮಾಯ್ತು || ೫೯ ||

ಮುಗುಳುವಾಳೆಯ ಹೊಡೆಯ ನುಚ್ಚಾಗಿ ಕತ್ತರಿಸಿ |
ಒಗರು ಹೋಹಂತೆ ಸುಣ್ಣದ ನೀರಿನಿಂ ಕುದಿಸಿ |
ತೆಗೆದು ನೀರಂ ಹಿಂಡಿಯುಪ್ಪು ಜೀರಿಗೆ ಮೆಂತೆಯವನಿಕ್ಕಿಯೊಳೆಯೊಳೆತ್ತಿ ||
ಮಘಮಘಿಪ ತುಪ್ಪದೊಳು ಹುರಿದು ಕೆಂಪಂ ಮಾಡಿ |
ಮಿಗಿಲಾಗಿ ಬೇಯದ ಹೆಸರ ಬೇಳೆಯುಳ್ಳಿ ಶುಂ |
ಠಿಗಳರವೆ ತುಪ್ಪದೊಳಗಟ್ಟ ಹಪ್ಪಳದ ಹುಡಿ ಹುರಿಗಡಲೆಯೊಡೆದ ಹಿಟ್ಟು || ೬೦ ||

ತುರಿದ ತೆಂಗಿನಕಾಯ ಸಣ್ಣನಂ ತುಪ್ಪದೊಳು |
ಹುರಿದು ಒಡಗಲಸಿ ಹಲ್ಲೆಯ ಮಾಳ್ಕೆಯೊಳು ಕೆಲವ |
ನುರುಳೆಯಂ ಕೆಲವನಸಿದಾಗಿ ಕೆಲವಂ ಮಾಡಿ ಸಕ್ಕರೆಯ ತಳಿದುದ್ದನು ||
ಅರೆದದಱೊಳಿನಿಸಕ್ಕಿವಿಟ್ಟಿಕ್ಕಿಕೊಂಡವಂ |
ಹೊರಳಿಸಿ ಬಳಿಕ್ಕ ತಿಳಿದುಪ್ಪದೊಳು ಕೆಂಪಾಗಿ |
ಹುರಿದು ಪರಿಮಳಿಸೆ ಕದಳೀಕುಸುಮನವಪೂರ್ಣವಟ್ಟಿವೆಸರಂ ಪಡೆದವು || ೬೧ ||

ಮತ್ತಮಾ ಪೂರ್ಣವಟ್ಟಿಯೊಳು ಕೆಲವಂ ತೆಗೆದು |
ಹತ್ತೆಂಟು ಬಗೆಯ ಸವಿಯಾಗಿ ಮಾಡಿದ ಕೊಣಬಿ |
ಗಿತ್ತು ತುಪ್ಪದೊಳು ವೊಗ್ಗರಿಸಿ ಹೂವಿಂ ಭಾವಿಸಿದ ಚಟ್ಟಿಯೊಳಗಿಡುವುದು ||
ಹತ್ತರಸಮಾದ ಹುರುಳಿಯ ಕಟ್ಟಿನೊಳು ಕೆಲವ |
ನೊತ್ತರಿಸಿ ಚೆನ್ನಾಗಿ ಪೊಡ್ಡಣಿಗೆಯಂ ಕೊಟ್ಟು |
ಉತ್ತಮದ ಕರ್ಪೂರ ಕಸ್ತೂರಿ ಮೊದಲಾದ ಪರಿಮಳದ ಪೊರೆಯಿಡುವುದು || ೬೨ ||

ಎಳೆಯ ಪೇಯನ ನನೆಯನುಕ್ಕರಿಸಿಯಾವೊಗರ |
ಕಳೆದು ಕೈಯೊಳು ಹಿಸಿದು ಮತ್ತೊಮ್ಮೆ ತನಿವಾಲಿ |
ನೊಳಗೆ ಬೇಯಿಸಿ ತೆಗೆದು ಕಿವುಚಿ ನಾರಂ ಬಿಸುಟು ಮೊಸರ ಕಳಲಂತೆ ಮಾಡಿ ||
ಬಳಿಕ ಸಂಭಾರಮನರೆದು ಕೂಡಿ ಮತ್ತೆ ಕುದಿ |
ಗೊಳಿಸಿ ಹಾಲೆಱೆದು ಚೆನ್ನಾಗಿ ಪೊಡ್ಡಣಿಗೆಯಂ |
ಕೊಳುತ ಪರಿಮಳವಿಕ್ಕಲದು ದುಗ್ಧಪಾಕಕದಳೀಕುಸುಮವೆಸರಾದುದು || ೬೩ ||

ಎಳೆಯ ಬಾಳೆಯ ಹೂವಿನೆಸಳ ಕಾಯ್ಗಳನು ಸಂ |
ಬಳಿಸಿದಾ ಹುಡಿಗೆ ನೆಲ್ಲೆಣ್ಣೆ ಸುಣ್ಣವನಿಕ್ಕಿ |
ತಿಳಿಯಕ್ಕಿಗಚ್ಚಿನಿಂದುಕ್ಕರಿಸಿ ಚೆನ್ನಾಗಿ ತೊಳೆದೊಗರ ಹಿಂಡಿಕೊಂಡು ||
ಬಳಿಕ ತುಪ್ಪದೊಳು ಹಾಲೆಱೆದು ಮತ್ತೊಮ್ಮೆ ಕುದಿ |
ಗೊಳಿಸಿಯಾ ದ್ರವವನಿಂಗಿಸಿ ತೆಗೆದು ಹೊಸ ತುಪ್ಪ |
ದೊಳು ಹುರಿದು ನಾಲ್ಕೈದು ಬಗೆ ಮಾಡಿಯಲ್ಲಮಂ ಕಟ್ಟಿ ಹಸನಂ ಮಾಳ್ಪುದು || ೬೪ ||

ಕೆಲವು ಪೇಯನ ಹೂವಿನೆಸಳು ಕಾಯೊಗರುಮಂ |
ಸಲೆ ತೆಗೆದು ತುಪ್ಪ ನೀರಿಂದುಕ್ಕರಿಸಿಕೊಂಡು |
ಪಲಭಾಗೆಯಂ ಮಾಡಿ ಕೆಲವ ತಾಳಿಸಿ ಕೆಲವ ದಧಿಸಾರಿಕೆಯನು ಮಾಡಿ ||
ಕೆಲವ ಹುಳಿಸಕ್ಕರೆಯೊಳೊಡವೆರಸಿಯೊಗ್ಗರಿಸಿ |
ಕೆಲವ ಪಲಸವಿಯಾಗಿ ಕಾಸಿದ ಕೊಣಬಿನೊಳಗೆ |
ನೆಲೆಗೊಳಿಸಿ ಚೆನ್ನಾಗಿಯೊಗ್ಗರಿಸಿ ಭಿನ್ನಪರಿಮಳವನುಂ ಪೊರೆಯಿಡುವುದು || ೬೫ ||

ಪೊಳೆವ ಪೇಯನದಿಂದ ಕಡುಸಣ್ಣನಾಗಿ ಸಂ |
ಬಳಿಸಿ ಕಟ್ಟಿಗೆಯಿಕ್ಕಿಯದಱ ನಾರಂ ತೆಗೆದು |
ತಿಳಿಯಕ್ಕಿ ಗಚ್ಚಿಂದಲುಕ್ಕರಿಸಿಯಾನೀರ ಹಿಂಡಿ ತುಪ್ಪದೊಳು ಹುರಿದು ||
ಬಳಿಕ ಪಲಭಾಗೆಯಂ ಮಾಡಿಯೊಂದೊಂದಕ್ಕೆ |
ಹುಳಿ ಬೆಲ್ಲ ಬಲಿಯಿಸಿದ ಹಾಲು ಮೊದಲಾದ ರುಚಿ |
ಗಳನಿಕ್ಕಿ ಸಂಭಾರಮಂ ತಳಿದು ಒಗ್ಗರಿಸಿ ಪುಡೆಯಮಂ ಹಸಮಾಳ್ಪುದು || ೬೬ ||

ಉಕ್ಕರಿಸಿ ಬಸಿದ ಬಾಳೆಯದಿಂದ ಹಾಲುಪ್ಪ |
ನಿಕ್ಕಿಯಾ ದ್ರವವಿಂಗುವಂತೆ ಬೇಯಿಸಿ ತೆಗೆದು |
ಸಕ್ಕರೆಯ ಹುರಿದ ಹುಣಿಸೆಯ ಹುಡಿಯೊಳೊಡವೆರಸಿ ಮೆಣಸುಪ್ಪ ತಳಿದುಕೊಂಡು ||
ಮಿಕ್ಕ ಸಂಭಾರಗಳ ವಾಸನೆಯ ಮಾತ್ರದೊಳ |
ಗಿಕ್ಕುವುದು ಮತ್ತವೊಂದಕ್ಕೆ ಸಾಸುವೆ ಬೆಲ್ಲ |
ಮಿಕ್ಕಿ ನಿಂಬೆಯಹಣ್ಣನೊಡಗೂಡಿ ಪೊಡ್ಡಣಿಗೆಗೊಟ್ಟು ಪರಿಮಳವಿಡುವುದು || ೬೭ ||

ಮತ್ತವಂ ಬಾಳೆಯಳೆದಿಂಡ ಕಡಲೆಯ ತೆಱದಿ |
ಕತ್ತರಿಸಿ ಬಟ್ಟವಾಲೆಱೆದದಿಂಗುವ ತೆಱದಿ |
ಯೊತ್ತಿ ಬೇಯಿಸಿ ಮತ್ತೆ ಘಟ್ಟಿ ಹಾಲೊಳಗಿಕ್ಕಿ ಮೆಣಸುಪ್ಪನಿಳಿಹಿಕೊಂಡು ||
ಕೊತ್ತುಂಬರಿಯ ಹಾಕಿಯೊಗ್ಗರಿಪುದೊಂದು ತೆಱ |
ನುತ್ತಮದ ಸಕ್ಕರೆಯುಮಂ ತಳಿವುದೊಂದು ತೆಱ |
ಚಿತ್ತಳಿಸಿದಲ್ಲ ನೀರುಳ್ಳಿಯಂ ಹಾಕಿ ಮಾಡುವುದೊಂದು ತೆಱನಾದುದು || ೬೮ ||

ಉತ್ತಮದ ಸೇವಗೆಯ ತೆಱದಿ ಬಾಳೆಯ ದಿಂಡ |
ನುತ್ತರಿಸಿ ನೀರೊಳೊಂದಿನಿಸು ನಿಂಬೆಯ ಹುಳಿಯ |
ನಿತ್ತದಱೊಳಿಕ್ಕಿ ಒಂದಿನಿಸು ಹೊತ್ತಿನ ಮೇಲೆ ತೆಗೆದದಕೆ ತಿಳಿನೀರನು ||
ಮತ್ತೆಱೆದು ನಾಲ್ಕೈದು ಸೂಳು ತೊಳೆದವನು ಒಲೆ |
ಗೆತ್ತಿ ಬಿಳಿದಾದ ಸಂಭಾರಮಂ ತುಪ್ಪ ಸಹಿ |
ತಿತ್ತು ಬಱಬಱನಾಗಿ ಹುರಿದು ಪರಿಮಳವನಿಕ್ಕಲದು ಕಡುರುಚಿಯಪ್ಪುದು || ೬೯ ||

ಹಸಿಯ ಬಾಳೆಯಕಾಯ ಸಿಪ್ಪೆಯಂ ತೆಗದದಕೆ |
ಹೊಸತುಪ್ಪ ನೀರುಳ್ಳಿಯರಿಸಿನವನಿಕ್ಕಿ ಕಡು |
ಹಸನಾಗಿ ನೀರಿಂಗಿ ತುಪ್ಪದೇಗುವ ತೆಱದಿಯುಕ್ಕರಿಸಿ ತೆಗೆದುಕೊಂಡು ||
ಹಸಿಯಲ್ಲ ಮೆಣಸುಳ್ಳಿಯುಪ್ಪು ತೆಂಗಿನಕಾಯ |
ಕುಸುರೆ ಮೊದಲಾದ ಸಂಭಾರಗಳಂ ಭಿನ್ನ |
ರಸ ಮಾಡಿ ಬೇಱೆ ಬೇಱ ಕ್ಕಿಯೊಗ್ಗರಿಸಿ ಪರಿಮಳಗಳಂ ಪೊರೆಯಿಡುವುದು || ೭೦ ||

ಅಕ್ಕಿಗಚ್ಚಿನೊಳಗೊಂದಿನಿಸು ಸುಣ್ಣದ ನೀರ |
ನಿಕ್ಕಿಯುಕ್ಕರಿಸಿ ಬಾಳೆಯಕಾಯ ಕಹಿದೆಗೆದ |
ದಕ್ಕೆ ಪೊಸತುಪ್ಪ ನೀರುಳ್ಳಿ ಕೊತ್ತುಂಬರಿಯನಿಕ್ಕಿ ಕೆಂಪಾಗಿ ಹುರಿದು ||
ಚೊಕ್ಕಟಂಬಡೆದ ಸಂಭಾರಗಳ ವಲಪರಿಯೊ |
ಳಿಕ್ಕಿ ನಿಂಬೆಯ ಹಣ್ಣ ಹಿಂಡಿ ಹುಳಿಗೊಣಬಿನೊಳು |
ಮಿಕ್ಕವಂ ಬಿಟ್ಟು ಒಗ್ಗರಿಸಿ ನರೆಯಂ ಕೊಟ್ಟು ಪರಿಮಳಂಗಳನಿಡುವುದು || ೭೧ ||

ಎರಡು ಹೋಳಾಗಿ ಬಾಳೆಯಕಾಯ ಸಂಬಳಿಸಿ |
ಪಿರಿದಾಗಿಯುವಱೊಳಿರ್ದೊಗರು ಹೋಹಂತೆಯು |
ಕ್ಕರಿಸಿ ಮುಳ್ಳಿಱಿದು ಸಂಭಾರಮಂ ತುಂಬಿ ತುಪ್ಪದೊಳು ಪಾಕವನೆ ಮಾಡಿ ||
ಪರಿಮಳವ ಕಟ್ಟುವುದು ಮತ್ತೆ ಕಲಹೋಳಿನೊಳ |
ಗರೆದ ತೆಂಗಾಯ ಸವಿಹಾಲು ಸಕ್ಕರೆ ಬೆಣ್ಣೆ |
ವೆರಸಿ ಪಾಕಂ ಮಾಡಿ ಪೂವಿನೊಗ್ಗರಣೆಯಂ ಕೊಟ್ಟು ಪರಿಮಳವಿಡುವುದು || ೭೨ ||

ಪಿರಿದಾಗಿ ಬಲಿದ ಬಾಳೆಯ ಕಾಯಿಗಳನು ತಂ |
ದೆರಡಾಗಿ ಸೀಳಿ ಮೇಲಣ ಸಿಪ್ಪೆ ತೆಗೆಯದು |
ಕ್ಕರಿಸಿಯಾ ಸಿಪ್ಪೆಯೊಡೆಯದ ತೆಱದಿನಾಕಾಯ ತಿರುಳುಮಂ ತೆಗೆದುಕೊಂಡು ||
ತುರಿಯುಮಂ ಮಾಡಿ ಹದನಱೆದುಪ್ಪು ಮೆಣಸನೊ |
ತ್ತರಿಸಿ ನಾಲ್ಕೈದು ಬಗೆಯಂ ಮಾಡಿಯುವಕೆ ಸ |
ಕ್ಕರೆಯಲ್ಲ ಹುರಿದ ತೆಂಗಿನಕಾಯ ಹೂವೆಳ್ಳ ಸೂಸಲುಗಳಾದಿಯಾದ || ೭೩ ||

ಒಂದೊಂದಕೊಂದು ಸವಿವಡೆದ ಸಂಭಾರಗಳ |
ವೊಂದಿಸಿಯವಂ ಕಲಸಿ ದಾಸಣರದವೆಯುಮಂ |
ಚಂದದಿಂದೊಗ್ಗರಿಸಿಯಾವಾಟೆಯೊಳಗೆಯುಪ್ಪಿನ ಹುಡಿಯ ತಡಹಿಕೊಂಡು ||
ಗೊಂದಣದ ಸಂಭಾರಮಂ ಮೆತ್ತಿ ತಿಳಿದುಪ್ಪ |
ದಿಂದೋಟೆಯಡಿಯಾಗಿ ಒಗ್ಗರಣೆ ಮಾಡಿ ಹೂ |
ವಿಂದ ಪೊರೆಯಿಟ್ಟು ಮಡಕೆಯೊಳಿರಿಸಲದು ತುಂಬುವಾಳೆಯಗಾಯ್ವೆಸರಾದವು || ೭೪ ||

ಕಡು ಬಲಿದ ಹಸಿರು ಬಾಳೆಯಕಾಯನುಕ್ಕರಿಸಿ |
ಕಡಿಯಕ್ಕಿಯಂದದೊಳು ಹೆಸರಂದದೊಳು ಬಟ್ಟ |
ಗಡಲೆಯಂದದೊಳು ಕತ್ತರಿಸಿ ನೀರುಳ್ಳಿ ತಿಳಿದುಪ್ಪದಿಂ ಹುರಿದುಕೊಂಡು ||
ಪುಡೆಯುಮಂ ಪಲಬಗೆಯ ಮಾಡಿ ಮೆಣಸುಪ್ಪನವ |
ಱೊಡವೆರಸಿಯೊಂದೊಂದಕೊಂದೊಂದು ಭಿನ್ನರುಚಿ |
ವಡೆದ ಸಂಭಾರಮಂ ಕಲಸಿಯೊಗ್ಗರಿಸಿ ಬಾಳೆಯ ತಱಗಿನೊಳಗಿಡುವುದು || ೭೫ ||

ಹಸಿರು ಬಾಳೆಯ ಕಾಯನತ್ತರದ ಮೇಲೆ ಬೇ |
ಯಿಸಿಯದಱ ತಿರುಳುಮಂ ಸಿಪ್ಪೆಯುಮನೀಡಾಡಿ |
ಹಸನಾಗಿ ಎರಡುವಳ್ಳಿಯಲ್ಲ ಮೆಣಸರಿಸಿನವ ಕಲಸಿಯುಂಡೆಯನು ಮಾಡಿ ||
ಹೊಸ ತುಪ್ಪದೊಳಗಟ್ಟು ಗೌರಾದ ಬಳಿಕವಂ |
ಮೊಸರ ಕೊಣಬಿನೊಳಿಕ್ಕಿ ಒಗ್ಗರಿಸಿ ತೆಂಗಾಯ |
ಕುಸುರಿಯಂ ಹಾಕಿ ಪರಿಮಳವಿಕ್ಕಿ ಮೋಚಫಲದೊಡೆಯೆಂದು ಹೆಸರಿಡುವುದು || ೭೬ ||

ಸುಟ್ಟ ಬಾಳೆಯ ಕಾಯನರೆದ ಸಂಪಳೆಗೆ ಸರಿ |
ಗಟ್ಟಿ ತೆಂಗಾಯನರೆದಿಕ್ಕಿ ಕಡಲೆಯ ಬೀಸು |
ವಿಟ್ಟನಲ್ಪವನಿಕ್ಕಿ ಕಲಸಿ ದುಗ್ಗಾಣಿಯಂದದಿ ಮಾಡಿ ತುಪ್ಪದೊಳಗೆ ||
ಅಟ್ಟುಕೊಂಡದಕೆ ಹುಡಿಯಾದ ಸಂಭಾರಮುಮ |
ನಿಟ್ಟು ಬೆಲ್ಲದ ಪಾಕವಿಕ್ಕುವುದು ನಸುಹುಳಿಯ |
ಬಿಟ್ಟು ಕಾಸಿದ ಕೊಣಬಿನೊಳಗೆ ಮತ್ತೊಂದನಿಕ್ಕುವುದು ಸಮತಳಗೊಡುವುದು || ೭೭ ||

ಹಸಿಯಕ್ಕಿಯುದ್ದು ಜೀರಿಗೆ ಮೆಣಸು ತೆಂಗಾಯ |
ಕುಸುಬಿ ಬಿಳಿಯುಳ್ಳಿ ಸಾಸುವೆಯಳ್ಳುಗಳನು ಸ |
ಣ್ಣಿಸಿಯರೆದು ನೀರೊಳಗೆ ಕದಡಿ ಸೋದಿಸಿಕೊಂಡು ಬಲಿದ ಬಾಳೆಯ ಕಾಯನು ||
ಹಸಿರುದೆಗೆಯದೆ ಹಱಿಯದಂತೊಂದೆರಡು ಬಳಿಯ |
ನಸು ಹಱೆವವೊಲು ಕೊಯಿದು ಹಸಿಯ ಕೊಣಬಿನೊಳಿಕ್ಕಿ |
ಹಸನಾಗಿಯಿಡಲು ಹಸಿರಡಗದಿಹುದದಕೆ ತುಪ್ಪವ ಬಿಟ್ಟು ನೇಱೆಗೊಡುವುದು || ೭೮ ||

ಬೆಂದ ಬಾಳೆಯ ಕಾಯ್ಗೆ ಬರಿಯುಪ್ಪು ಹುರಿಮೆಣಸ |
ನೊಂದಿಸುವುದೊಂದು ತೆಱ ಮತ್ತೆ ಕೆಲಹೋಳುಗಳ |
ಚಂದಗೆಡಿಸದೆ ಶುಂಠಿಯುಳ್ಳಿಗಳನಿಕ್ಕಿ ಏಲಕ್ಕಿಯಂ ತಳಿದುಕೊಂಡು ||
ಮಂದನಪ್ಪಂತಕ್ಕಿಯರೆದು ಕಾಯಂ ಹೊದಟಿ |
ಯೊಂದಿನಿಸು ಕೆಂಪಾಗುವಂತಟ್ಟು ಹುರಿಮೆಣಸಿ |
ನಿಂದ ಸಕ್ಕರೆಯಿಂದ ರುಚಿಗೊಳಿಸಿ ಪೊಡ್ಡಣಿಗೆಯಂ ಕೊಡುವುದೊಂದು ತೆಱನು || ೭೯ ||

ಮತ್ತೆ ಕೆಲ ಕಾಯ ಹೋಳಿಗೆ ಕಾರಗೆಣಸುಳ್ಳಿ |
ಕೊತ್ತುಂಬರಿಯ ಸಣ್ಣ ಕರಿಬೇವು ಮಾಗಾಯ |
ಚಿತ್ತಳಿಯ ಹಾಕಿ ಹುರಿದೆಳ್ಳು ಮೆಣಸಿನ ಚೂರ್ಣಮಂ ತಳಿದು ಸಕ್ಕರೆಯನು ||
ಇತ್ತು ತೆಂಗಾಯ ತುರುವಲನಿಕ್ಕಿ ತುಪ್ಪದೊಳು |
ಒತ್ತಿ ತಾಳಿಸಿ ಪರಿಮಳದ ಚೂರ್ಣಗಳನು ಪೊರೆ |
ಯೊತ್ತಿ ಮಡಗಿದೊಡಮದು ಕದಳೀಫಲಸ್ವಾದುತರ ಪಾಕವೆಸರಾದುದು || ೮೦ ||

ಹುರಿದ ಕಡಲೆಯ ಸಣ್ಣ ಹುರಿದ ಹುರುಳಿಯ ಚೂರ್ಣ |
ಹುರಿದ ಹಪ್ಪಳದ ಹುಡಿ ಹುರಿದ ಸಂಡಗೆಯ ಹೊಸ |
ತುರಿಯದೊಳು ಸರಿಗೂಡಿಯುಕ್ಕರಿಸಿ ಹದನಾಗಿ ಕಾಯ್ಗಳನು ಹೋಳು ಮಾಡಿ ||
ಎರಡು ಹೋಳುಗಳ ಕೆಲಬಲದೊಳಗೆ ಚೆನ್ನಾಗಿ |
ಯೊರೆಸಿ ಮೆಣಸುಪ್ಪಿಕ್ಕಿ ಹೊಸತುಪ್ಪದಿಂದವೊ |
ಗ್ಗರಿಸಿ ಪರಿಮಳವಿಕ್ಕಲಂತದು ಕದಂಬಕದಳೀಫಲಸುಪಾಕಮಾಯ್ತು || ೮೧ ||

ಸುಟ್ಟ ಬಾಳೆಯ ಕಾಯ ಸುಲಿದು ಸಿಪ್ಪೆಯ ಹಾಕಿ |
ಘಟ್ಟಿ ಮೊಸರೊಳು ಸೊಜ್ಜಿಗೆಯ ಹಾಲು ಮೆಣಸುಪ್ಪ |
ನಿಟ್ಟು ಜೀರಿಗೆ ಶುಂಠಿಯುಳ್ಳಿ ಕೊತ್ತುಂಬರಿಯನರೆದಿಕ್ಕಿ ತಿಳಿದುಪ್ಪವ ||
ಬಿಟ್ಟು ಮತ್ತಾ ಕಾಯ ಹೊರಳಿಸಿಯದಂ ಕೆಂಡ |
ವಿಟ್ಟೊಲೆಯ ಮೇಲೆ ಹಸಿರಾದ ಬಿದಿರ ಹಗಱವ |
ನಿಪ್ಪಣಿಸಿ ಹಸರಿಸಿದಬಳಿಕವಱ ಮೇಲೆ ಚೆನ್ನಾಗಿ ಪಸರಂ ಮಾಳ್ಪುದು || ೮೨ ||

ಅದಱೊಳಗೆ ಮೊಸರ ಸಂಭಾರಮಂ ಮಿಗೆ ತಳಿದು |
ಹದನಱೆದದಂ ತಿರಿಹಿ ತಿರಿಹಿ ಪಾಕವ ಮಾಡಿ |
ಮೊದಲು ಬಿಟ್ಟಾ ಮೊಸರ ಸಂಭಾರದಾ ದ್ರವಂ ಬತ್ತುವಂದದೊಳು ಕಾಸಿ ||
ಅದಕೆ ಹೊಸ ತುಪ್ಪವಂ ಬಿಟ್ಟು ಗೌರಾಗುವಂ |
ದದಿ ಕಾಸಿ ಏಲಕ್ಕಿ ಹೊಸತಾದ ಕರ್ಪೂರ |
ದುದುರೆಯಂ ಹಾಕಿದುದು ಭುಕ್ತಕದಳೀನವ್ಯಪಾಕವೆಸರಂ ಪಡೆದುದು || ೮೩ ||

ಹಿರಿದಾಗಿ ಬಲಿದ ಬಾಳೆಯ ಕಾಯ ಸುಟ್ಟದಱ |
ತಿರುಳುಮಂ ತೆಗೆದು ಚಿಕ್ಕಡೆಯಂದದೊಳು ಕ |
ತ್ತರಿಸಿ ಬಲಿಯಿಸಿದ ಹಾಲಂ ಮತ್ತದಱ ತೆಱದಿ ಕುಯ್ದು ಬಾಳೆಯಕಾಯನು ||
ಬೆರಸಿ ಸರಗೆಯ್ದು ತುಪ್ಪದೊಳದ್ದಿ ಮತ್ತದಂ |
ಬರಿಗೆಂಡದೊಳು ಹಿಡಿದು ಕಾಸಿ ಕೆಂಪಂ ಮಾಡಿ |
ಹುರಿದ ಮೆಣಸಿಕ್ಕಿ ನೆರೆಯಂ ಕೊಡಲು ಕ್ಷೀರರಂಭಾಪಾಕವೆಸರಾದುದು || ೮೪ ||

ಹಣ್ಣುವಾಳೆಯ ಕಾಯ ಸುಟ್ಟು ನಾರಂ ತೆಗೆದು |
ಸಣ್ಣ ಗದುಗದ ತೋರವಂ ಮಾಡಿ ಮತ್ತವಂ |
ಬಣ್ಣಸರದಂತೆ ಸರಗೆಯ್ದು ಕರ್ಬೋನ್ನೊಳಗೆ ಬಲಿದ ಹಾಲಿನ ಪುಡಿಯನು ||
ಅಣ್ಣೆವಾಲುಪ್ಪಿನಿಂ ಕಲಸಿಯದಱೊಳಗದ್ದಿ |
ಬೆಣ್ಣೆಗಾಸಿದ ತುಪ್ಪವೆಱೆದು ತೆಂಗಿನಕಾಯ |
ಸಣ್ಣಸಿಯದಂ ತಳಿದು ಕಾಸಿ ಸಿಹಿಯಿಕ್ಕಿ ಸಿತಮೋಚಫಲವೆಸರಿಡುವುದು || ೮೫ ||

ಮಿಗಿಲಾಗಿ ಬಲಿದ ಬಾಳೆಯಕಾಯ ಸಿಪ್ಪೆಯಂ |
ತೆಗೆದು ಮುಳ್ಳಿಱೆದು ಮೆಣಸುಪ್ಪುಳ್ಳಿ ಶುಂಠಿ ಜೀ |
ರಿಗೆ ಹಸಿಯ ಕರಿಬೇವು ಕೊತ್ತುಂಬರಿಯನರೆದ ಕಲ್ಕದೊಳಗಾ ಕಾಯನು ||
ಅಗುಳಿಸಿದ ಬಳಿಕ ಕರ್ಬೊನ್ನಸಲಗೆಯೊಳು ಕೆಂ |
ಪೊಗೆವಂತೆ ಕೆಂಡದೊಳು ತಿರಿತಿರಿಹಿ ಕಾಸಿ ಮಗ |
ಮಗಿಪ ತುಪ್ಪವನೆಱೆದು ಹುಡಿಮೆಣಸನಿಕ್ಕಲವು ತಾನೆ ರಂಭಾಶೂಲ್ಯಕಂ || ೮೬ ||

ಮುತ್ತ ಬಾಳೆಯ ಕಾಯನುಕ್ಕರಿಸಿ ಕದುಕಿಱಿದು |
ಮತ್ತದಂ ಮುಪ್ಪೋಳು ಮಾಡಿ ತಿಳಿದುಪ್ಪದೊಳ |
ಗಿತ್ತು ತಾಳಿಸಿ ಹಾಲೊಳೆಳ್ಳು ತೆಂಗಾಯ ಹಾಲುಪ್ಪಿಕ್ಕಿಯರೆದುಕೊಂಡು ||
ಒತ್ತಿ ಹವಣಾಗಿ ಪಾಕಂ ಮಾಡಿ ಸಟ್ಟುಗವ |
ಹತ್ತುವಂದಂ ಮಾಡಿಯದಱೊಳಗವಂ ಹಾಕಿ |
ಕೊತ್ತುಂಬರಿಯನಿಕ್ಕಿ ನರೆಗೊಟ್ಟು ಪರಿಮಳವನಿಕ್ಕಿ ಹಸನಂ ಮಾಳ್ಪುದು || ೮೭ ||

ಉಕ್ಕರಿಸಿಕೊಂಡ ಬಾಳೆಯ ಕಾಯ ತುಂಡಿನೊಳು |
ಸಕ್ಕರೆ ಹುರಿದ ಮೆಣಸು ಹುರಿದೆಳ್ಳು ತುಪ್ಪದೊಳ |
ಗಿಕ್ಕಿ ಬೇಯಿಸಿದ ತೆಂಗಾಯಿಕ್ಕಿ ಒಗ್ಗರಿಸಿ ಸಿತಮೋಚಪಾಕವೆಸರ ||
ಇಕ್ಕುವುದು ಕೆಲಹೋಳುಗಳ ತುಪ್ಪದೊಳಗಟ್ಟು |
ತಕ್ಕನಿತು ನಿಂಬೆಹುಳಿಯುಳ್ಳಿ ಸಾಸುವೆಯು ಏ |
ಲಕ್ಕಿ ಸಹಿತಿಕ್ಕಿ ಬೇಯಿಸಿ ಬಿಸಿಯನಾರಿಯವಂ ಹಾಕಿ ಹಸಮಾಳ್ಪುದು || ೮೮ ||

ಹದನಾಗಿ ಕೆಂಡದೊಳು ಬೆಂದ ಬಾಳೆಯ ಕಾಯ |
ಪುದಿದ ಸಿಪ್ಪೆಯ ತೆಗೆದು ಕುಯ್ದ ಚಿತ್ತಳಿಗಳುಮ |
ನುದಕದೊಳು ತವರಾಜನಂ ಕದಡಿ ಲೇಹ್ಯಪಾಕಂ ಮಾಡಿ ಬಿಸಿಯಾರಿಸಿ ||
ಅದಱೊಳಗೆ ಬಿಳಿಯ ಮೆಣಸಿನ ಚೂರ್ಣ ಏಲಕ್ಕಿ |
ಯುದುರೆಯಂ ಹಾಕಿ ಕರ್ಪೂರಮಂ ತಳಿದು ಮೃಗ |
ಮದದ ಕಂಪಂ ಪೊರೆಯಲೊತ್ತಿಸಿದ ಯೋಗಕದಳೀಪಾಕವೆಸರಿಡುವುದು || ೮೯ ||

ಕಳಿತ ಬಾಳೆಯ ಹಣ್ಣ ಸಕ್ಕರೆಯ ಪೊಸ ಪಾಕ |
ದೊಳಗೆ ಕೆಲವಂ ಸಾಸವೆಯೊಳು ಕೆಲವಂ ಮೊಸರಿ |
ನೊಳಗೆ ಕೆಲವಂ ಹುಣಿಸೆವಣ್ಣೊಳಗೆ ಕೆಲವ ಜೇನೆಯೊಳಗೆ ಮತ್ತೆ ಕೆಲವ ||
ಇಳುಹುವುದು ಕೆಲವ ತೆಂಗಾಯಲ್ಲಿ ಸೂಸಲಂ |
ತಳಿದು ಸಕ್ಕರೆಯೊಳಗೆ ಚಲಿಪಾಲಿನೊಳ್‌ ಕೆಲವ |
ನಿಳುಹಿಕೊಂಡಿಂತು ನಾನಾಪರಿಯ ಸೀಕರಣೆಗಳನು ಹಸನಂ ಮಾಳ್ಪುದು || ೯೦ ||

ಇದು ಹರುಷದಿಂದ ಲಾಲಿಸಿ ಕೇಳ್ವೆನೆಂದೆಂಬ |
ಸುದತಿಯರ ಕಿವಿಗೆ ನವಮಾಣಿಕದ ಮಿಂಚೋಲೆ |
ಇದು ಕಲಿವೆನೆಂದೋದುವಬಲೆಯರ ಬಾಯ್ದೆರೆಗೆ ನವಸುಧಾರಸದ ಪಿಂಡ ||
ಇದು ಪಾಕಮಂ ಮಾಳ್ಪೆನೆಂದುಜ್ಜುಗಂ ಮಾಳ್ಪ |
ಚದುರೆಯರ ಕೈಗೆ ನವರತ್ನಮುದ್ರಿಕೆಯೆನಿಸಿ |
ತಿದಱೊಳಗೆ ವೃಂತಾಕಮೋಚಫಲ ಮುಂತಾಗಿ ಶಾಕಪಾಕಾಧ್ಯಾಯಮುಂ ಸಮಾಪ್ತಂ || ೯೧ ||