ಜಯನೃಪಕಾವ್ಯಂ :
‘‘ತಕ್ಕರ ಗೋಷ್ಠಿ ತನೂದರಿಯರ ಪೊಸ
ತಕ್ಕೆ ತೊಡಂಬೆಯಲರ್‌ ಪೊಸ ಜೇನೆಯ್‌
ಸಕ್ಕೆ ತೀವಿದ ತನಿವಾಲೂಡುವ ತೆಂಕಣ ತೆಳ್ಳೆಲರು
ಮಕ್ಕಳ ಮುದ್ದುವೆರೆದ ನುಡಿ ಮದುರಿತು
ಚೊಕ್ಕಳಿಕೆಯ ನವ ಚಂದ್ರಿಕೆಯೆನೆ ಹೃದ
ಯಕ್ಕೆ ವಿಲಾಸಮುನೀವುದು ಸತ್ಪ್ರಭುರಾಜನ ಸವಿಮಾತು ೧ – ೨೪
“ಅನುರಾಗದಿ ಲಿಖಿಸುವೆನೆಂಬರ ಕ
ಯ್ಗನಿಮಿಷನೇತ್ರೆಯ ಘನಕುಚಯುಗದೊ
ತ್ತೆನಲಾದುದು ಸತ್ಪ್ರಭುರಾಜನ ಸತ್ಕವಿತೆಯ ಸವಿವಾತು” ೧ – ೨೫
“ಪ್ರಭುಕುಲದೀಪಂ ಪ್ರಮದಾಜನ ಚಿತ್ತಭವಂ” ೧ – ೧೪
“ಸದಮಲಚರಿತಂ ಪ್ರಭುರಾಜಂ ೧ – ೯೬, ೧೬ – ೪೩
“ವಿಷ್ಣುವಿನಂದದೊಳಾ ಪ್ರಭುಕುಲ ಮಣಿದೀಪಂ” ೧ – ೬೮
“ಆಶಾಧಿಪರಂತೆಸೆದಂ ಪ್ರಭುಕುಲಮಣಿದೀಪಂ” ೭ – ೫೩

ಸಮ್ಯಕ್ತ್ವಕೌಮುದಿ :
“ಕೋಗಿಲೆಯೆಯ ನವಪಂಚಮಂಬೊರೆದ ನುಣ್ಚರಂ ಪ್ರಭುರಾಜ ಮಂಗರಸನೊರೆದ
ಕೌಮುದಿಯ ಮಾತು” ೧ – ೧೦
“ಚದುರ ಮಂಗರಸನುಸುರಿದ ಕೌಮುದೀಕಥೆಯೊಳೊದವಿದುದು” ೧ – ೫೨ ಎಂದೂ

ಸೂಪಶಾಸ್ತ್ರ:
“ಅತಿರಸಿಕನತಿನಿಪುಣ ಸತ್ಪ್ರಭುರಾಜನೊರೆದ ಪಾಕದ ಕವಿತೆ
ಯೆಸೆವ ಮಾತು” ೧ – ೭

ನೇಮಿಜೀನೇಶಸಂಗತಿ:
‘‘ಚದುರ ಮಂಗರಸ ರಚಿಸಿದ ಮದನಾರಿ ನೇಮಿಜಿನೇಶಸಂಗತಿಯೊಳ್” ೧ – ೮೬ (ಹೀಗೆ ಪ್ರತಿಸಂಧಿಯ ಕೊನೆಯಲ್ಲಿ ಹೇಳಿಕೊಂಡಿದ್ದಾನೆ ) ಎಂದೂ ತನ್ನನ್ನು ಪ್ರಭುರಾಜ, ಸತ್ಪ್ರಭುರಾಜ, ಪ್ರಭುಕುಲಮಣಿದೀಪ, ಚದುರ ಮಂಗರಸ ಎಂದೂ ವಿಶೇಷಿಸಿ ಕೊಂಡಿದ್ದಾನೆ. ಇವು ಈತನ ಬಿರುದುಗಳಾಗಿಯೂ ಇದ್ದಿರಬಹುದು. ಅಲ್ಲದೆ ಈತನು ತನ್ನ ಗುಣಾವಳಿಗಳನ್ನು ಕುರಿತು ಈ ರೀತಿ ಹೇಳಿಕೊಂಡಿದ್ದಾನೆ :

ಜಯನೃಪಕಾವ್ಯ
“ಇದು ಸುರ ನರ ಫಣಿ ಪರಿವೃಢ ವಿನಮಿತ
ವಿದಿತ ವಿನಯಗುಣಗಣಯುತ ಜಿನಪತಿ
ಪದ ಸರಸಿಜ ಮದ ಮಧುಕರನತಿಚತುರ ಕಲಾಪರಿಪೂರ್ಣಂ
ಸದಮಲ ಚರಿತಂ ಪ್ರಭುರಾಜಂ’’
(ಪ್ರತಿ ಆಶ್ವಾಸಾಂತ್ಯದಲ್ಲಿ ಈ ರೀತಿಯ ಪದ್ಯವಿದೆ.)

ನೇಮಿಜಿನೇಶಸಂಗತಿ :
“ಆ ಪ್ರಭುವಿನ ತನುಜಾತನು ಸಕಲನ
ಲಾಸುಪ್ರವೀಣನುತ್ತಮನು
ಅಪ್ರತಿಮನು ಗುಣಾನ್ವಿತಕಾಮಧೇನು ಸ
ಮಪ್ರದನೆನೆ ರಂಜಿಸುವನು ೧ – ೪೧
“ಜನಪದ ಭಕ್ತ ಮಂಗರಸ” ೧ – ೪೨

ಸಮ್ಯಕ್ತ್ವಕೌಮುದಿ :
“ಸದಮಲಚರಿತ್ರ ಚಂಗಾಳ್ವಭೂವರನ ಸಚಿವಾನ್ವಯಾಂಬರಹಂಸನು”
“ಮದನಸಮರೂಪನುತ್ತಮಗುಣಕರಂಡಕರಂ”

ಪ್ರಭಂಜನಚರಿತ್ರೆ :
“ಯದುಕುಲವಂಶನೃಪನ ಸಚಿವಾನ್ವಯಾಂಬರಭಾನು ಸದಮಲ
ಗುಣಭೂಷಣನು | ಮದನಸ್ವರೂಪ” ೧ – ೧೪

ಶ್ರೀಪಾಲಚರಿತೆ :
“ಆತನ ನಿಜನಂದನನಭಿನವ ಚಿತ್ತಜಾತುನುಜ್ಜ್ವಲ ಕೀರ್ತಿಯುತನು ಭೂತಳಪತಿ
ಜಿನಭಕ್ತ ಮಂಗರಸ”

ಇದರಿಂದ ಮಂಗರಸನು ಸದಮಲಚರಿತ್ರನೂ, ಉತ್ತಮಗುಣಯುತನೂ, ವಿನಯಶೀಲನೂ, ಅಭಿನವಮನ್ಮಥನೂ, ಉಜ್ಜ್ವಲಕೀರ್ತಿಯುತನೂ, ಅತಿ ಚತೂರನೂ, ಕಲಾಪರಿಪೂರ್ಣನೂ, ಅರ್ಥಿಗಳಿಗೆ ಕಾಮಧೇನುವೂ, ಜಿನಭಕ್ತನೂ ಆಗಿದ್ದನೆಂಬುದು ಸ್ಪಷ್ಟಪಡುತ್ತದೆ.