ನೇಮಿಜಿನೇಶ ಸಂಗತಿ:
“ಹರಿಕುಲತಿಲಕ ಮಹಾಮಂಡಳಿಕ ಭೂ | ತರುಣೀಶ ಚಂಗಾಳ್ವ ನೃಪನ
ವರಸಚಿವಾನ್ವಯಾಂಬರಭಾನು ಜಿನಪದ | ಸರಸಿಜ ಮಧುಮಧುಕರನು ೧ – ೩೮

ಜನನುತ ಕಲ್ಲಹಳ್ಳಿಯ ನಾಡಿನ ಪ್ರಭು | ವಿನಯವನಧಿಚಂದ್ರಮನು
ಮನುನಿಭಚರಿತ ಮಾಧವಸುತ ಮಾಧವ | ತನುಜ ಸದೃಶ ವಿಜಯೇಂದ್ರ ೧ – ೩೯

ವಿತರಣದೊಳಗೆ ವಿಬುಧ ಮಹೀಜಾತವ | ನುತವಿಭವದೊಳಿಂದ್ರನನು
ವಿತತ ವಿವೇಕದೊಳಾ ವಿಧಿಯನು ಗೆಲ್ದು | ನುತನಾದನಾ ವಿಜಯೇಂದ್ರ ೧ – ೪೦

ಆ ಪ್ರಭುವಿನ ತನುಜಾತನು ಸಕಲಕಲಾ | ಸುಪ್ರವೀಣನುತ್ತಮನು
ಅಪ್ರತಿಮನು ಗುಣಾನ್ವಿತ ಕಾಮಧೇನುಸ | ಮಪ್ರದನೆನೆ ರಂಜಿಸುವನು ೧ – ೪೧

ಜಿನಪದಭಕ್ತ ಮಂಗರಸನಾನೀ ಮುಕ್ತಿ | ವನಿತೇಶ ನೇಮಿತೀರ್ಥಕರ
ವಿನುತಮಪ್ಪಾ ಕಥನವ ಪಾಡುಗಬ್ಬದೊ | ಳನುಗೆಯ್ದೆ ತಾನದೆಂತೆನಲು ೧ – ೪೨

ಸಮ್ಯಕ್ತ್ವ ಕೌಮುದಿ:
“ಕಲ್ಲಹಳ್ಳಿಯ ಮಹಾಪ್ರಭು ವಿಜಯಭೂವದೂ
ವಲ್ಲಭನ ತನುಜಾತ ಜಿನಪದಾಂಬುಜ ಭೃಂಗ
ನೆಲ್ಲ ಕಲೆಯಲ್ಲಿ ಬಲ್ಲಿದನು ಮಂಗರಸ ನಾನೀ ಕೌಮುದೀಕಥೆಯನು
ಸಲ್ಲಲಿತಮಪ್ಪ ಸಕ್ಕದದಿ ಪೂರ್ವಾಚಾರ್ಯ
ರುಲ್ಲಸದಿ ಪೇಳ್ದುದಂ ಕರ್ಣಾಟಕೃತಿಬಂಧ
ದಲ್ಲಿ ಉದ್ದಂಡಷಟ್ಪದಮಾಗಿಯೊರೆದೆನಿಂತಿದನು ಭೃತ್ಯರು ಕೇಳ್ವುದು” ೧ – ೯
ಇದು ವಿಬುಧಜಗವಿನುತಮಿದು ವಿಬುಧಜನವಿನತ
ವಿದು ವಿದಿತ ಜಿನಸಮಯಶರಧಿಸಂಪೂರ್ಣೇಂದು
ಸದಮಲ ಚರಿತ್ರ ಚೆಂಗಾಳ್ವಭೂವರನ ಸಚಿವಾನ್ವಯಾಂಬರಹಂಸನು
ಮದನಸಮರೂಪನುತ್ತಮಗುಣಕರಂಡಕಂ
ಚದುರ ಮಂಗರಸನುಸುರಿದ ಕೌಮುದಿಕಥೆಯೊ
ಳೊದವಿದುದು ಸಚಿವಕುಲತಿಲಕನುತ್ತಮನೀತಿವಚನ ತಾನೊಂದು ಸಂಧಿ ೧ – ೫೨
(ಈ ರೀತಿಯ ಪದ್ಯ ಪ್ರತಿಸಂಧಿಯ ಅಂತ್ಯದಲ್ಲಿ ಇದೆ)

ಜಯನೃಪಕಾವ್ಯ :
“ದ್ವಾರಾವತಿಯ ಪುರಾಧೀಶ್ವರ ಲ
ಕ್ಷ್ಮೀರಮಣಾನ್ವಯ ಚಂಗಾಳ್ವ ಮಹೀ
ನಾರೀಧವ ನಿಜಸಚಿವರುಚಿರಕುಲ ದುಗ್ಧಾಂಬೋನಿಧಿಗೆ
ತಾರಾತರುಣೀವಲ್ಲಭ ಜನಪದ
ವಾರಿಜಮಧುಕರ ಯಾಚಕಜನಚಿಂ
ತಾರತ್ನಂ ಚಿತ್ರಕಲಾಸದನಂ ಸುದತೀಜನ ಮದನಂ ೧ – ೧೨

ಮಿಲುಳಿತ ವಿಶ್ವಂಭರೆಯೆಂಬಬಲೆಯ
ಲಲಿತ ಸ್ರೀಮುಖಮೆಂಬಂಬಲೆಯ
ಣ್ಗೊಳಿಸುವ ಹೊಯ್ಸಳದೇಶದ ಮಧ್ಯದ ಹೊಸವೃತ್ತಿಯ ನಾಡಾ
ಅಲಘುಪ್ರಿಯದಿಂ ಪರಿಪಾಲಿಪನು
ಜ್ಜ್ವಲ ತೇಜಂ ಧಾತುಪುರಾಧೀಶಂ
ಲಲನಾ ಮಾಧವಸುತಸದೃಶಂ ಮಾಧವಸುತ ವಿಜಯೇಂದ್ರಂ ೧ – ೧೩

ಪ್ರಭುಕುಲದೀಪಂ ಪ್ರಮುದಾಜನಚಿತ್ತ
ಭವಂ ಪ್ರಜ್ವ್ವಲ್ವ ತೇಜೋಪೇತಂ
ಶುಭತರಕೀರ್ತಿಯುತಂ ಸುರಭುಜೋಪಮ ವಿತರಣಶೀಲಂ
ತ್ರಿಭಉವನಪತಿ ಜಿನಭಕ್ತಂ ವಾಸವ
ವಿಭವಂ ವಿನಯಾಂಬುಧಿಚಂದ್ರಂ ರಣ
ಕಭಿನವ ವಿಜಯಂ ವಿಜಯಾಙ್ಗನೆಗಧಿರಾಜಂ ವಿಜಯೇಂದ್ರ ೧ – ೧೪

ಆತನ ಸುತ ಮಂಗರಸನೆ ನಾಂ ಸ
ತ್ಪ್ರೀತಿಯಿನೀ ಜಯನೃಪಚಾರಿತ್‌ಯಮ
ನೋತುಸುರ್ದೆಂ ಪರಿವಧಿನಿಯಿಂ ನೂತನ ರಸವರ್ಧಿನಿಯಿಂ” ೧ – ೧೩

ಶ್ರೀಪಾಲಚರಿತ್ರೆ :
“ವಿನುತಮಪ್ಪುದ್ಧವಕುಲಚೂಡಾಮಣಿ | ಘನತರ ಶಾರ್ದೂಲಾಂಕಾ
ಯೆನಿಸಿ ರಂಜಿಪ ಹೊಸವೃತ್ತಿಯ ಪ್ರಭು ನವ | ಮನಸಿಜ ರವಿನಿಭತೇಜಾ ೧ – ೧೫

ಸುರಭಿಸದೃಶ ದಾನಿ ಸುರುಚಿರಗುಣನಿಧಿ ಯುರುತರ ಭೋಗಸಂಯುತನು
ಸುರಪುರಕ್ಕೆಣೆಯೆನಿಸುವ ಕಲ್ಲಹಳ್ಳಿಯ | ಗರುವ ವಿಜಯಭೂವರನ ೧ – ೧೬

ಆತನ ನಿಜನಂದನನಭಿನವ ಚಿತ್ತಜಾತನುಜ್ಜ್ವಲ ಕೀರ್ತಿಯುತನು
ಭೂತಳಪತಿ ಜಿನಭಕ್ತ ಮಂಗರಸ ನಾ | ಸೋತು ಪೇಳಿದೇನೀ ಕೃತಿಯ” ೧ – ೧೭

ಪ್ರಭಂಜನ ಚರಿತ್ರೆ:
“ವೈಷಮ್ಯದಿಂದ ವಾಸವನ ಜನಾಂತದೋಂ | ದೈಸಿರಿಯುನ್ನತಿಕೆಯನು
ಕೈಸೆರೆ ವಿಡಿದಂದದಿನೊಪ್ಪಿಹುದಾ | ಹೊಯ್ಸಳವೆಂದೆಂಬ ವಿಷಯ ೧ – ೧೦

ಅದರಱೊಳು ಹೊಸವೃತ್ತಿಯೆಂಬ ಹೆಸರ ಜನ | ಪದವನೊಪ್ಪದಿ ಪಾಲಿಸುವನು
ವಿದಿತ ವಿನೋದಿ ವಿಕ್ರಮ ಕಲ್ಲಹಳ್ಳಿಯ | ಚದುರ ವಿಜಯ ಭೂವರನು ೧ – ೧೧

ಆ ಸುಜನೋತ್ತಂಸಗೆ ಸುರುಚಿರ ಸದ್ವಿ | ಲಾಸಾನ್ವಿತೆ ಪುಣ್ಯವಂತೆ
ಭಾಸುರ ಗುಣ ಭೂಷಿತೆ ದೇವಿಲೆಯೆಂ | ಬಾ ಸುದತೀಮಣಿಯಿಹಳು ೧ – ೧೨

ಸುಕೃತಿಗಳವರುದರದೊಳುದಯಂಗೆಯ್ದು | ಸಕಲಕಲಾನ್ವಿತನಾಗಿ
ಪ್ರಕಟಿಸಿದನು ಪಾಲ್ಗಡಲೊಳಗದುದಯಿಸಿ | ದಕಲಂಕಚಂದ್ರನಂದದೊಳು ೧ – ೧೩
ಯದುಕುಲವಂಶ ನೃಪನ ಸಚಿವಾನ್ವಯಾಂಬರಭಾನು | ಸದಮಲಗುಣ ಭೂಷಣನು
ಮದನಸ್ವರೂಪ ಮಂಗರಸ ನಾನತಿ ಸಮ್ಮದದಿ | ನೊರೆದೆನೀ ಕೃತಿಯಾ” ೧ – ೧೪

ಸೂಪಶಾಸ್ತ್ರ:
“ಶ್ರೀಮನ್ಮಹಾಮಂಡಲೇಶ್ವರಂ ಚೆಂಗಾಳ್ವ
ಭೂಮಿಪಾಲಕ ದಂಡನಾಥಕುಲತಿಲಕನು
ದ್ದಾಮ ರತ್ನತ್ರಯಾರಾಧಕಂ ಜಿನಪದಾಂಭೋಜಾತ ನವಮಧುಕರಂ
ರಮಣೀಯಕ ಗುಣಾಲಂಕೃತಂ ಶ್ರೀನತಜನ
ಸ್ತೋಮಕಲ್ಪಾಂಘ್ರಿಪಂ ಭಾಮಿನೀಜನಹೃದಯ
ಕಾಮನುರುಭೋಗಯುತ ಕಲ್ಲಹಳ್ಳಿಯ ಮಹಾಪ್ರಭು ವಿಜಯಭೂಮೀಶ್ವರಂ ೧ – ೩
ಆತನಣುಗಿನ ತನೂಭವ ಮಂಗರಸನತಿ
ಖ್ಯಾತಿಯಂ ಪಡೆದ ಸಂಸ್ಕೃತ ಸೂಪಶಾಸ್ತ್ರದೊಳ್‌
ಪ್ರೀತಿಯಿಂದಱಿವನಿತ ತೆಗೆದು ಕನ್ನಡದಿ ವಾರ್ಧಕವೆಂಬ ಷಟ್ಪದದೊಳು
ಜಾತಿಪ್ರಮದೆಯರಱೆದನುಗೆಯ್ವ ಮಾಳ್ಕೆಯೊಳು
ಚಾತುರ್ಯವಿದರು ನೆಱಿ ಲಾಲಿಸುವ ಮಾಳ್ಕೆಯೊಳ
ಗೋತು ಪೇಳ್ದಂ ಮತ್ತಮಿಲ್ಲಿ ತಪ್ಪಂ ಕಂಡೊಡೊಸೆದು ತಿದ್ದುವುದು ಬುಧರು” ೧ – ೪

ಈ ಗ್ರಂಥಭಾಗಗಳಿಂದ “ಮಾಧವನು[1] ಚಿಂಗಾಳ್ವನೃಪನ ಸಚಿವಾನ್ವಯಾಂಬರಕ್ಕೆ ಭಾನುವೂ ದುಗ್ಧಾಂಭೋನಿಧಿಗೆ ತಾರಾಮಣಿವಲ್ಲಭನೂ ಜನಪದಸರಸಿಜಕ್ಕೆ ಮಧುಕರನೂ ಯಾಚಕ ಜನಕ್ಕೆ ಚಿಂತಾರತ್ನನೂ ಚಿತ್ರಕಲಾಸದನನೂ ಸುದತೀಜನಮದನನೂ ಮತ್ತು ಹೊಯ್ಸಳ[2]ದೇಶದ ಮಧ್ಯದ ಹೊಸವೃತ್ತಿಯ[3] ನಾಡಿನ ಪ್ರಭುವೂ ಆಗಿದ್ದನು. ಕಲ್ಲಹಳ್ಳಿಗೆ ಒಡೆಯನಾದ ವಿಜಯೇಂದ್ರ ಆತನ ಪುತ್ರ. ಈ ವಿಜಯೇಂದ್ರನ ಮಗನೆ ಮಂಗರಸ” ಎಂದು ಸ್ಪಷ್ಟಪಡುತ್ತದೆ. ಜಯನೃಪ ಕಾವ್ಯದಲ್ಲಿ ಕಲ್ಲಹಳ್ಳಿಯ ಹೆಸರಿಗೆ ಪ್ರತಿಯಾಗಿ ‘ಧಾತುಪುರ’ ಎಂಬ ಹೆಸರಿರುವುದರಿಂದ ಕಲ್ಲಹಳ್ಳಿಗೆ ಧಾತುಪುರವೆಂಬ ಹೆಸರು ಇತ್ತು ಎಂದು ತಿಳಿದು ಬರುತ್ತದೆ.

 

[1] ಸಮ್ಯಕ್ಜಕೌಮುದಿ, ಶ್ರೀಪಾಲಚರಿತ್ರೆ, ಪ್ರಭಂಜನಚರಿತ್ರೆಮತ್ತುಸೂಪಶಾಸ್ತ್ರಗಳಲ್ಲಿಮಾಧವನವಿಚಾರವಿಲ್ಲ.

[2] ನೇಮಿಜಿನೇಶಸಂಗತಿ, ಸಮ್ಯುಕ್ತ್ವಕೌಮುದಿ, ಶ್ರೀಪಾಲನಚರಿತ್ರೆಮತ್ತುಸೂಪಶಾಸ್ತ್ರಗಳಲ್ಲಿಹೊಯ್ಸಳದೇಶದಹೆಸರಿಲ್ಲ.

[3] ನೇಮಿಜಿನೇಶಸಂಗತಿ, ಸಮ್ಯಕ್ತ್ವಕೌಮುದಿ, ಮತ್ತುಸೂಪಶಾಸ್ತ್ರಗಳಲ್ಲಿ‘ಹೊಸವೃತ್ತಿಯ’ಪ್ರಸ್ತಾಪವಿಲ್ಲ.