ಮಂಗರಸನ ವಿಚಾರವಾಗಿ ದೊರೆಯುವ ನಾಲ್ಕು ಲಿಖಿತಗಳಲ್ಲಿ ಶಾಂತರಾಜ ಶಾಸ್ತ್ರಿಗಳವರು ನೇಮಿಜೀನೇಶಸಂಗತಿಯಲ್ಲಿ ಉದ್ಧರಿಸಿ ಕೊಟ್ಟಿರುವುದು ಮೊದಲನೆಯದು. ಅದು ಹೀಗೆ :
(ಭಾರದ್ವಾಜಗೋತ್ರ, ತ್ರಿಭುವನಸೂತ್ರ, ಪದ್ಮಾಕರಪ್ರವರ, ಸೂರಿಕಾನುಯೋಗ ಶಾಖೆ, ಕುರುವಂಶ)

ನಮಸ್ಸಿದ್ಧೇಭ್ಯಃ
ಕಂ || ಶ್ರೀಕರಭಾಸುರಗುಣರ | ತ್ನಾಕರಲೋಕೈಕಮಥನಮಂಜುಳ….. ||
………………….. | ………………………………….. ಗದಾಪಹಾರಿಜಿನೇಶಾ || ೧ ||

ವ || ಅಥ ಚಂಗಳದೇಶಾಧಿಪಂ ಮಾಧವರಾಜೇಂದ್ರಂ, ಅವಗೆ ಹೆಂಡತಿ ಕುಸುಮಾಜಮ್ಮಣ್ಣಿ. ಅವರ್ಗೆ ಕುಮಾರನುಂ ವಿಜಯರಾಜಂ. ಅವಂ (ಮಾಧವರಾಜ) ಪಿರಿರಾಜಪಟ್ಟಣವನಾಳ್ವಂ ಎಂಬತ್ತುಲಕ್ಷಸೀಮೆಗೆ ದೊರೆಯು. ಆತಗೆ ಕುದುರೆ ಕಾಲಾಳು ೧ ಲಕ್ಷ, ಗಜ ೫೦, ಖಜಾನಿ ೪೦ ಸಾವಿರ. ಅವಂ ರಣದಲ್ಲಿ ಪರಾಕ್ರಮವುಳ್ಳವಂ. ಅವಗೆ ಜೈನಗುರುಗಳೇ ಗುರುಗಳು. ಜೈನ ಆಚಾರವೇ ಆಚಾರ. ಜೈನಾಗಮವೇ ಆಗಮ. ಅವಂ ಘನಶೀಲೋಪವಾಸಮನುಳ್ಳವಂ. ಯುವಕುಮಾರಕ ವಿಜಯರಾಜನುದಯಕಾಲದಲ್ಲಿ ಮಾಧವರಾಜೇಂದ್ರಂ ಪರರಾಯರಲ್ಲಿ ಯುದ್ಧಮಾಡಿ ಜಯಿಸಿದ ಕಾರಣದಿಂ ಈ ನಾಮ ಸಲ್ವುದು. ಆತನುಂ (ವಿಜಯರಾಜ) ಸಮ್ಯಕ್ತ್ವಮನುಳ್ಳವಂ, ಸದಾಭಕ್ತಿಯುಳ್ಳವಂ, ಜೈನಾಗಮ ವಿಚಾರಮುಳ್ಳವಂ, ಅವಗೆ ಹೆಂಡತಿ ಪದ್ಮಜಮಣ್ಣಿಯವರು, ಅತಿರೂಪವುಳ್ಳವರು, ಜಿನಭಕ್ತಿಯುಳ್ಳವರು, ಜೈನಾಗಮಪ್ರೌಢಕಲಾಪಮುಳ್ಳವರು, ಅವರ್ಗೆ ಕುಮಾರಂ ಮಂಗರಾಜ ಅರಸಂ, ಅವಂ ವೀರವಿಕ್ರಮನುದಾರಗಂಭೀರ ಶೌರ್ಯಮನುಳ್ಳವಂ. ಅರುಹನ ಸನ್ನಿಧಿಭವ್ಯಾತ್ಮನುಂ, ಚೌಸಟ್ಟಿವಿದ್ಯೆಯುಳ್ಳವಂ, ಅವಗೆ ಕುಟುಂಬವಾದಂಥವರು ಕಮಲಾಜಮ್ಮಣ್ಣಿಯವರು ; ಜಿನಧರ್ಮಾಗಮಜಿನಭಕ್ತಿಪರಾಯಣರು. ಈ ಮಂಗರಾಜ ಅರಸನೆಸಗಿದ ಪುಸ್ತಕಂ ರಾಮನ ಸಂಗೀತಂ, ಹರಿವಂಶ ಪುರಾಣ (ನೇಮಿಜಿನೇಶಂಗತಿ), ಪ್ರಭಂಜನಚರಿತಂ, ಜಯನೃಪಕಾವ್ಯಂ, ಸಮ್ಯಕ್ತ್ವಕೌಮುದಿಯುಂ. ಇವಂ ೮ ಲಕ್ಷ ಸೀಮೆಗೆ ಅಧಿಪತಿಯಾಗಿರುತಿರ್ದಂ. ಆತಂಗೆ ಹೆಣ್ಣುಗಳಂ ತರುವಮನೆ ಕೊಡುವಮನೆ – ಚಾಮುಂಡಿರಾಯರ ಮನೆ. ಚಂಗಾಳರಾಯರ ಮನೆ. ಇವಂ ಕೋಟೆ ಕಲ್ಲಹಳ್ಳಿ, ಚಿಲುಕುಂದ, ಮಲ್ಲರಾಜಪಟ್ಟಣ, ಕಟ್ಟೆಮಳಲುವಾಡಿ, ದೊಡ್ಡ ಹುಣುಸೂರು, ಹನಗೂಡು, ಹೆಬ್ಬಿನಗುಪ್ಪೆ, ತಮ್ಮಡಿಹಳ್ಳಿ, ಪಾಲುಪಾರೆ ಈ ಮುಂತಾದ ಸ್ಥಳಗಳಲ್ಲಿ ಹೂಡ್ಯಗಳಂ ಕಟ್ಟಿಸಿದನು. ಕಿಲ್ಲ ಇಟ್ಟಿದ್ದನು. ಜಿನಚೈತ್ಯಾಲಯಗಳಂ ಕಟ್ಟಿಸಿ ಜೀನದೇವರ ಪ್ರತಿಷ್ಠೆಯಂ ಮಾಡಿಸಿ ಕೆರೆಗಳಂ ಕಟ್ಟಿಸಿ ಪೂಜೋತ್ಸವ ನಡಿಸುವ ಬಗ್ಗೆ ಸ್ವಾಸ್ತ್ಯ ಪುದುವಟ್ಟು ಸಹ ಬಿಟ್ಟು ಯಂಬಗುಂಬವೆನ್ನುವಲ್ಲಿ ೨೨ ಅಂಕಣದ ದೇವಸ್ಥಾನಮಂ ಕಟ್ಟಿಸಿ ಪಾರ್ಶ್ವನಾಥಸ್ವಾಮಿಯವರಂ ಪದ್ಮಾವತಿಯಮ್ಮನವರಂ ಚೆನ್ನಿಗಬ್ರಹ್ಮರಾಯರಂ ಸ್ಥಾಪಿಸಿ ಪೂಜೋತ್ಸವಕ್ಕೆ ಬೇಕಾದ ಸಾಮಾನು ಮುಂತಾದುವಂ ಕೊಡಿಸಿಕೊಟ್ಟು ತಸ್ತೀಕಂ ಬೆದ್ದಲು ತೋಟ ಭೂಮಿಯನ್ನು ಬಿಟ್ಟು ಇದೆ ಎನ್ನುವ ಶಾಸನ.”

ಇದರಂತೆ ಚೆಂಗಾಳ್ವದೇಶಕ್ಕೆ ರಾಜನಾದ ಮಾಧವನು ಭಾರದ್ವಾಜಗೋತ್ರ ತ್ರಿಭುವನಸೂತ್ರ ಪದ್ಮಾಕರಪ್ರವರ ಸೂರಿಕಾನುಯೋಗಶಾಖೆಗೆ ಸೇರಿದ ಕುರುವಂಶಕ್ಕೆ ಸೇರಿದವನು. ಇವನ ಹೆಂಡತಿ ಕುಸುಮಾಜಮ್ಮಣ್ಣಿ. ಪಿರಿಯಾಪಟ್ಣವೂ ಈತನ ಆಳ್ವಿಕೆಗೆ ಒಳಪಟ್ಟಿತ್ತು. ಇವನ ಪರಾಕ್ರಮಶಾಲಿ. ಯುದ್ಧದಲ್ಲಿ ಪರರಾಯರನ್ನು ಜಯಿಸಿದ ಕಾಲದಲ್ಲಿ ಪುತ್ರನು ಹುಟ್ಟಿದ ಕಾರಣ ಮಗನಿಗೆ ಈತನು ‘ವಿಜಯ’ ಎಂದೇ ಹೆಸರಿಟ್ಟಿದ್ದನು. ಮಾಧವನು ಜೈನ ಮತಾವಲಂಬಿ ಅಂತೆಯೇ ಇವನ ಮಗ ವಿಜಯನೂ ಜೈನಧರ್ಮವನ್ನೇ ಆಶ್ರಯಿಸಿದ್ದನು. ವಿಜಯನ ಹೆಂಡತಿ ಪದ್ಮಾಜಮ್ಮಣ್ಣಿ. ಅತಿರೂಪವಂತನೂ ಜಿನಭಕ್ತನೂ ಆದ ಇವರ ಕುಮಾರನೇ ಮಂಗರಸ. ಈತನು ವಿಕ್ರಮಶಾಲಿಯೂ ಉದಾರಿಯೂ ಶೂರನೂ ಜಿನಭಕ್ತಿಪರಾಯಣನೂ ಚತುಃಷಷ್ಟಿ ವಿದ್ಯೆಯುಳ್ಳವನೂ ಆಗಿದ್ದನು. ಈತನ ಹೆಂಡತಿ ಕಮಲಾಜಮ್ಮಣ್ಣಿ.

ಈ ಲಿಖಿತದಂತೆ ಮಂಗರಸನ ತಾಯಿಯ ಹೆಸರು ಪದ್ಮಾಜಮ್ಮಣ್ಣಿ. ಆದರೆ ಪ್ರಭಂಜನ ಚರಿತ್ರಯಲ್ಲಿ –

“ಚದುರ ವಿಜಯ ಭೂವರನು
“ಆ ಸುಜನೋತ್ತಂಸಗೆ ಸುರುಚಿರ ಸದ್ವಿಲಾಸಾನ್ವಿತೆ ಪುಣ್ಯವಂತೆ
ಭಾಸುರ ಗುಣಭೂಷಿತೆ ದೇವಿಲೆಯೆಂ
ಬಾ ಸುದತೀಮಣಿಯಿಹಳು”
(ಸಂಧಿ ೧ ಪ ೧೧ – ೧೨)

ಎಂದಿರುವುದರಿಂದ ವಿಜಯನ ಹೆಂಡತಿ ಹೆಸರು ದೇವಿಲೆ ಎಂದು ತಿಳಿದುಬರುತ್ತದೆ. ಮಂಗರಸನೆ ತನ್ನ ತಾಯಿಯ ಹೆಸರನ್ನು ದೇವಿಲೆ ಎಂದು ಹೇಳಿರುವುದರಿಂದ ‘ಪದ್ಮಾಜಮ್ಮಣ್ಣಿ’ ಎಂದು ಲಿಖಿತದಲ್ಲಿ ಕಂಡು ಬರುವುದು ಆಕೆಯ ಮತ್ತೊಂದು ಹೆಸರಾಗಿರಬಹುದು.

ಒಟ್ಟಿನಲ್ಲಿ ಮಂಗರಸನು ಚಂದ್ರವಂಶದ ಯದುಕುಲ ಪರಂಪರೆಗೆ ಸೇರಿದ ಚೆಂಗಾಳ್ವರಾಜನ ಸಚಿವಾನ್ವಯದಲ್ಲಿ ಹುಟ್ಟಿದವನು. ಈತನ ತಂದೆ ಮಾಧವ ಸುತನಾದ ವಿಜಯೇಂದ್ರ. ತಾಯಿ ದೇವಿಲೆ. ಇವರಿಗೆ ಈತನೇ ಹಿರಿಯ ಮಗ. ಇವನು ಹೊಯ್ಸಳದೇಶದ ಹೊಸವೃತ್ತಿಯ ನಾಡಿನ ಮಧ್ಯದಲ್ಲಿರುವ ಧಾತುಪುರಿ (ಕಲ್ಲಹಳ್ಳಿ) ಗೆ ಅಧಿಪತಿಯಾಗಿದ್ದನು.