ಶ್ರೀಮನ್ನತಾಮರೋರಗನರಾಧೀಶ್ವರ |
ಸ್ತೋಮೋತ್ತಮಾಂಗಸ್ಫುರನ್ಮಕುಟಮಣಿಗಣೋ |
ದ್ದಾಮ ರುಚಿರಪ್ರಭಾಲೀಢ ಚಂಚಚ್ಚರಣ ಶೋಣ ಸರಸಿರುಹಯುಗಳ ||
ಚಾಮರಚ್ಛತ್ರ ಸುರಪಟಹ ದಿವ್ಯನಿನಾದ |
ಭಾವಮಂಡಲಾಶೋಕ ಸುರಭಿ ಸುಮನೋವೃಷ್ಟಿ |
ಸಾಮಜಾರಾತಿಪೀಠಾಧೀಶನೇಮಗೀಗೆ ಮುದದಿಂದ ಶಿವಸುಖವನು || ೧ ||

ನವಕವೀಶ್ವರ ವಿಕಸಿತಾನನ ಘಟಂಗಳೊಳು |
ನವರಸವನಿಟ್ಟು ಪರಿಣತೆ ಪ್ರೇಕ್ಷೆ ಮೊದಲಾದ |
ವಿವಿಧ ಪರಿಕರಮನೊಡಗಲೆಸಿ ಬಳಿಕವರ ನಾಲಗೆಯೆಂಬ ದರ್ವಿವಿಡಿದು ||
ತವೆ ಪಾಕಮಂ ಮಾಡಿ ರಸಿಕಜನಸಂತತಿಯ |
ಕಿವಿಗೆ ತೀವುವ ಭಾರತೀಯದೇವಿಯಂ ನೆನೆದು |
ಸವಿವಡೆದ ಷಡ್ರಸವಿಪಾಕಭೇದಮನೆನ್ನ ಬಲ್ಲಂದದಿಂ ಪೇಳ್ವೆನು || ೨ ||

ಶ್ರೀಮನ್ಮಹಾಮಂಡಲೇಶ್ವರಂ ಚೆಂಗಾಳ್ವ |
ಭೂಮಿಪಾಲಕ ದಂಡನಾಥಕುಲತಿಲಕನು |
ದ್ದಾಮರತ್ನತ್ರಯಾರಾಧಕಂ ಜಿನಪದಾಂಭೋಜಾತನವಮಧುಕರಂ ||
ರಮಣೀಯಕಗುಣಾಲಂಕೃತಂ ನತಜನ |
ಸ್ತೋಮಕಲ್ಪಾಂಘ್ರಿಪಂ ಭಾಮಿನೀಜನಹೃದಯ |
ಕಾಮನುರುಭೋಗಯುತ ಕಲ್ಲಹಳ್ಳಿಯ ಮಹಾಪ್ರಭು ವಿಜಯಭೂಮೀಶ್ವರ || ೩ ||

ಆತನಣುಗಿನ ತನೂಭವ ಮಂಗರಸನತಿ |
ಖ್ಯಾತಿಯಂ ಪಡೆದ ಸಂಸ್ಕೃತಸೂಪಶಾಸ್ತ್ರದೊಳ್‌ |
ಪ್ರೀತಿಯಿಂದಱಿವನಿತ ತೆಗೆದು ಕನ್ನಡದಿ ವಾರ್ಧಕಮೆಂಬ ಷಟ್ಪದದೊಳು ||
ಜಾತಿ ಪ್ರಮದೆಯರಱಿಲಾಲಿಸುವ ಮಾಳ್ಕೆಯೊಳು |
ಚಾತುರ್ಯವಿದರು ನೆಱೆಲಾಲಿಸುವ ಮಾಳ್ಕೆಯೊಳ |
ಗೋತು ಪೇಳ್ದೆಂ ಮತ್ತಮಿಲ್ಲಿ ತಪ್ಪಂ ಕಂಡೊಡೊಸೆದು ತಿದ್ದುವುದು ಬುಧರು || ೪ ||

ವಸುಧಾವಲಯ ಜೀವಿಗಳ ತನೂರಕ್ಷಣೆಗೆ |
ರಸ ರೂಪ ಗಂಧ ಶಬ್ದ ಸ್ಪರ್ಶ ಭೋಗಂಗ |
ಳೆಸಕವೇ ಮುಖ್ಯಮಾಪಂಚವಿಧ ವಿಷಯಭೋಗೋಪಭೋಗಂಗಳೊಳಗೆ ||
ರಸನೇಂದ್ರಿಯಂ ತೃಪ್ತಿ ವಡೆಯಲಿಹಪರಸೌಖ್ಯ |
ಮುಸುಕುವುದು ನಿಜಮದಱಿನಾಭೋಜ್ಯವಸ್ತುವಂ |
ಹಸನಾಗಿ ಪಾಕಮಂ ಮಾಳ್ಪ ವಿವರದ ಶಾಸ್ತ್ರಮಂ ಮನಂಗೊಂಡು ಪೇಳ್ವೆಂ || ೫ ||

ಸವಿವಡೆದ ಮಧುರಾಮ್ಲಕಟುಕತಿಕ್ತಕಷಾಯ |
ಲವಣರಸಮಂ ಪಡೆದ ತರುಗುಲ್ಮತೃಣಲತೆಯ |
ನವಕಂದನಾಳದಳಕುಸುಮಫಲಗಳನು ನಳ ಭೀಮ ಗೌರೀಮತದೊಳು ||
ತ್ರಿವಿಧ ಪ್ರಕಾರದೊಳಗರ್ಧಮಂ ಪಾಲೊಳ |
ರ್ಧವನಾಜ್ಯದೊಳಗರ್ಧಮಂಬಿಲದೊಳರ್ಧಮಂ |
ಹವಿಮುಖದೊಳರ್ಧಮಂ ಗುಡದಿಂದ ಭಕ್ಷ್ಯಮಂ ಮಾಳ್ಪ ವಿವರಮನುಸಿರ್ವೆಂ || ೬ ||

ರಸದಾಳಿಯಂತೆ ರಮಣಿಯರ ಚೆಂದುಟಿಯಂತೆ |
ಪೊಸಜೇನಕೊಡದಂತೆ ಪೊಣ್ಮುವೆಳಜವ್ವನೆಯ |
ರೊಸೆದೀವ ತಾಂಬೂಲದಂತೆ ಕಾದಿಳಿಪಿಯಾಱಿದ ಬಟ್ಟವಾಲಿನಂತೆ ||
ಅಸಿಯಳೊಡನಾಟದಂತರಮಾವಿನಿನಿವಣ್ಣ |
ರಸದಂತೆಯಮೃತದಂತತಿರುಚಿಯ ಪಡೆದುದತಿ |
ರಸಿಕನತಿನಿಪುಣಸತ್ಪ್ರಭುರಾಜನೊರೆದ ಪಾಕದ ಕವಿತೆಯೆಸೆವ ಮಾತು || ೭ ||

ತೆಂಬೆಲರ ಸೋಂಕು ತಕ್ಕರ ಮಾತು ತರುಣಿಯರ |
ಬಿಂಬಾಂಧರಂ ಬೀಱುವಿಂದುರುಚಿ ಪೂವಿನ ತೊ |
ಡಂಬೆ ಪೀಯೂಷಪಿಂಡಂ ಜೇನ ಸೋನೆ ಪೊಸಸುಗ್ಗಿ ರಂಜನೆಯವಡೆದ ||
ಕೆಂಬರಲ ತೊಡವು ಚಂದನದಣ್ಪು ಸಿರಿಪಚ್ಚೆ |
ಯಂಬುಜಾಕರವೆಳೆಯ ಕೋಗಿಲೆಯ ನವಪಂಚ |
ಮಂಬೊರೆದ ದನಿಯಂತೆ ಸೊಗಯಿಸಿತು ಸೂಪಶಾಸ್ತ್ರದ ಕವಿತೆಯನೊಳ್ನುಡಿಗಳು || ೮ ||