ಸೂಚನೆ: ಸದಮಲಂಬಡೆದ ಗೋದುವೆ ಕಳವೆಯಕ್ಕಿ ಬಹು
ವಿದಳ ಸಕ್ಕರೆಯಿಂದ ಮಾಳ್ಪ ಕಜ್ಜಾಯಮಂ
ವಿದಲಿತಾಂಬುರುಹಸಲ್ಲಲಿತವದನೆಯರಱಿವ ಮಾಳ್ಕೆಯೊಳೊಸೆದು ಪೇಳ್ವೆನು ||

ಗಟ್ಟಿ ಗೋದುವೆಯ ನಾಲ್ಬಳ್ಳವ ನನೆಹಿ ಕುಮ್ಮಿ |
ಹೊಟ್ಟು ಹಾಱುವ ತೆಱಿದಿ ಕೇಱಿ ಬಿಸಿಲೊಳಗೊಣಗ |
ಲಿಟ್ಟೊಂದು ಬಳ್ಳಮಪ್ಪನ್ನೆವರ ಚೆನ್ನಾಗಿಯೇಱಿಕ್ಕಿ ಗಟ್ಟಿಗೆಯ್ದು ||
ಪಿಟ್ಟೆಯಂ ತೆಗೆದು ತಱಿಮಳಲು ರವೆಯದ ವಜ್ರ |
ಬಟ್ಟಮುತ್ತಿನ ಹರಳು ನುಚ್ಚಕ್ಕಿಯಂದದಿಂ |
ಕಟ್ಟಾಣಿಯಪ್ಪ ತರುಣಿಯರು ಸೊಜ್ಜಿಗೆದೆಗೆದು ಕಜ್ಜಾಯಮಂ ಮಾಳ್ಪುದು || ೯ ||

ಕುಟ್ಟಿ ಕಣಿಕದೊಳು ಸರಿಬೆಣ್ಣೆಯಾಱರೊಳೊಂದು |
ಬಟ್ಟವಾಲನೆಯಿಕ್ಕಿ ಮಿದಿದು ಬಟ್ಟಂ ಮಾಡಿ |
ದಟ್ಟಿತಂದೆನಿಸಿ ಲತೆಯಿಱಿದು ಹಂಚಿನೊಳಿಟ್ಟು ಸುಟ್ಟು ಪರಿಯಣಕೆ ತೆಗೆದು ||
ಇಟ್ಟಣಿಸಿ ಸಲಗೆಯಿಂ ಚುಚ್ಚಿ ತಿಳಿದುಪ್ಪಮಂ |
ಬಿಟ್ಟು ಸಕ್ಕರೆಯುಮಂ ತಳಿದು ತೆಗೆದೊಡೆ ಚುಚ್ಚು |
ರೊಟ್ಟಿಯೆಂಬೊಳ್ವೆಸರವಡೆದು ಸಗ್ಗಿಗರೂಟಕೆಣೆಯಾಗಿ ಸವಿದೋರ್ಪುದು || ೧೦ ||

ಉತ್ತಮದ ಸೊಜ್ಜಿಗೆಯ ಬಟ್ಟವಾಲೊಳು ನನೆಹಿ |
ಮೆತ್ತನಾದಾಗ ತೆಗೆದದನು ಪಿಟ್ಟೆಯ ಹಿಟ್ಟ |
ನೊತ್ತಿ ಲತೆಯಿಱಿದೆರಡು ಬಟ್ಟಲ ನಡುವೆಯಿರಿಸಿಯೆರಡರಂಚುಗಳ ಮುರಿದು ||
ಹೊತ್ತದಂದದೊಳು ಕೆಂಡದೊಳಿರಿಸಿ ಮೊಱದಿಂದ |
ಮತ್ತದಂ ಬೀಸಿ ಬೇಯಿಸಿ ತೆಗೆದುಕೊಂಡಾಱಿ |
ಸುತ್ತ ತಿಳಿದುಪ್ಪ ಸಕ್ಕರೆಯ ಕಲಸೆ ಮುಚ್ಚುಳರೊಟ್ಟಿವಸರಂ ಪಡೆದುದು || ೧೧ ||

ನವನೀತಮಂ ಕೆನೆಯುಮಂ ಬೆರಸಿ ಕಣಿಕಮಂ |
ಸವೆವಂತೆ ಕುಟ್ಟಿ ಬಟ್ಟಲ ಮಾಡಿ ಹಪ್ಪಳವ |
ಸವನಾಗಿವೊತ್ತಿಯಿಮ್ಮೆಯ್ಗೆ ಬೆಣ್ಣೆಯ ತೊಡೆದು ನಾಲ್ಕೈದ ನಡುಕಲಿಕ್ಕಿ ||
ಅವಱೆರಡು ಮೆಯ್ಗ ಪಿಟ್ಟೆಯ ಬಟ್ಟಲಂ ಕವಿಸಿ |
ಹವಣಱಿದು ಹಂಚಿನೊಳು ಸುಟ್ಟು ಪಿಟ್ಟೆಯನು ತೆಗೆ |
ದವಕೆ ಸಕ್ಕರೆದುಪ್ಪಮಿಕ್ಕಲವು ತಾಂ ಸವಡುರೊಟ್ಟಿವೆಸರಂ ಪಡೆದವು || ೧೨ ||

ನನೆದ ಸೊಜ್ಜಿಗೆಯೊಳಗೆ ಪೊಸಬೆಣ್ಣೆ ಸಿಹಿಮೊಸರ |
ಕೆನೆ ಹಾಲಕೆನೆಯುಪ್ಪನಿಕ್ಕಿ ಕಣಿಕವ ಕುಟ್ಟಿ |
ಯನುವಾಗಿ ರೊಟ್ಟಿಯಂ ಮಾಡಿ ಪಿಟ್ಟೆಯ ಹಲ್ಲೆಗಳ ನಡುವೆಯಿರಿಸಿ ಹುದುಗಿ |
ಇನಿಸು ಹೊತ್ತದ ತೆಱದಿ ತಱಿಗೆಂಡದೊಳು ಪಾಕ |
ವನೆ ಮಾಡಿ ಮುಚ್ಚುಳಂ ತೆಗೆದು ಸಕ್ಕರೆದುಪ್ಪ |
ವನೆ ತಳಿದು ಬಳಿಕಮೃತಪಿಂಡವೆಸರಂ ಕೊಟ್ಟು ಚತುರಜನಕುಣಲೀವುದು || ೧೩ ||

ಕೆನೆ ಕಮ್ಮೆನಿಪ್ಪ ತಿಳಿದುಪ್ಪ ತೆಂಗಿನಕಾಯ |
ತನಿವಾಲು ನಾಲ್ಕೊಂದೆನಿಸಿ ಕಾಯ್ದಿಳಿಪಿದೆಮ್ಮೆ |
ಯಿನಿವಾಲು ಹಿರಿದು ಸಿಹಿವಡೆದ ಮಾವಿನಹಣ್ಣ ರಸವಿಕ್ಕಿ ಮಂಡಿಗೆಯನು ||
ಅನುಗೆಯ್ದು ರೊಟ್ಟಿಯೊಲು ಪಿಟ್ಟೆಯೆರಡುಂ ಬಟ್ಟ |
ಲನು ಹುದುಗಿ ಹಂಚಿನೊಳು ಸುಟ್ಟು ಬಟ್ಟಲ ತೆಗೆದು |
ನನೆಹಿ ತುಪ್ಪದೊಳು ಸಕ್ಕರೆಯಿಕ್ಕೆ ಭೋಜನಾಧಿಕರೊಟ್ಟಿವೆಸರಾದುದು || ೧೪ ||

ಬಿಳಿಯ ಸೊಜ್ಜಿಗೆಯೊಳಂಗರವಳಿಗೆಯಂ ಮಾಡಿ |
ಬಳಿಕ ಬೇಯಿಸಿ ನುಗ್ಗುಗೆಯ್ದು ಕರ್ಪುರವುಡಿಯ |
ತಳಿದು ದೀಪದ್ರಾಕ್ಷಿ ಖರ್ಜೂರವಣ್ಣು ಕೆನೆದುಪ್ಪ ಸಕ್ಕರೆಯನಿಕ್ಕಿ ||
ತುಳಿದು ರೊಟ್ಟಿಯ ಮಾಡಿಯೆರಡು ಪಿಟ್ಟೆಯ ಬಟ್ಟ |
ಲೊಳಗಿಕ್ಕಿ ಹಂಚಿನೊಳು ಸುಟ್ಟು ಬಟ್ಟಲ ತೆಗೆದು |
ತಿಳಿದುಪ್ಪ ಸಕ್ಕರೆಯನಿಟ್ಟ ರೊಟ್ಟಿಯ ಹೆಸರು ಸೊಗಯಿಸುವ ಜಿಹ್ವಾಮೃತಂ || ೧೫ ||

ಅಸಿಯವೆರಡುಂ ಕಲ್ಲನೆರಡು ಕಡೆಯೊಳಗಿರಿಸಿ |
ಮಿಸುಪ ತಱಿಗೆಂಡಮಂ ನಡುವಿಕ್ಕಿಯೆಳೆವಿದಿರ |
ಹಸಿಯ ಹಗಱಂ ಹರಹಿಕೊಂಡದಱ ಮೇಲೆ ಕೆನೆ ಬೆಣ್ಣೆಯಂ ಕೂಡಿ ಸಮೆದ ||
ಹಸನಾದ ರೊಟ್ಟಿಯಂ ಮಡದಿ ಹದನಾಗಿ ಬೇ |
ಯಿಸಿ ತೆಗೆದು ಮತ್ತದಕ್ಕಂಗಾರಸಿತಕಮೆಂ |
ದೊಸೆದು ಹೆಸರಂ ಕೊಟ್ಟು ತುಪ್ಪ ಸಕ್ಕರೆಯಿಕ್ಕಿ ನೃಪರೂಟಕೊಲಿದೀವುದು || ೧೬ ||

ತಱುಪಿನೆಮ್ಮೆಯ ಹಾಲ ನಾಲ್ಕೊಂದೆನಿಸಿ ಕಾಸಿ |
ಕಿಱಿಯ ಸೊಜ್ಜಿಗೆಯನುಪ್ಪಿಕ್ಕಿಯದಱೊಳು ಕಲಸಿ |
ಯಱುವೆಯಂ ಕಾಯ್ದ ನೀರಳಗೆಯೊಳು ಕಟ್ಟಿಯದನಿರಿಸಿ ಪಾಕಮಂ ಮಾಡಿ ||
ಹಱಲೆಯಂ ಮಾಡಿ ಕೆನೆಮೊಸರು ಸಿಹಿಬೆಣ್ಣೆಯಂ |
ನೆಱೆ ತಡಹಿ ಎರಡು ಪಿಟ್ಟೆಯ ಬಟ್ಟಲಂ ಕವಿಸಿ |
ತಱೆಗೆಂಡಕಿಟ್ಟ ಹಂಚಿನೊಳು ಬೇಯಿಸೆ ಸಿತಕರೊಟ್ಟಿವೆಸರಂ ಪಡೆದುದು || ೧೭ ||

ತನಿವಾಲಿನೊಳಗೆ ಭಾವನೆಗೆಯ್ದ ಸೊಜ್ಜಿಗೆಯ |
ನಿನಿಸು ಕೆನೆವೆರಸಿ ಬೆಣ್ಣೆಯನಿಕ್ಕಿ ಮತ್ತೆ ಕಿವು |
ಚನುಗೆಯ್ದು ಹಂಚಿನೊಳು ನಸು ತುಪ್ಪವೆಱೆದು ಬೇಯಿಸಲದುವೆ ಕಿವುಚುರೊಟ್ಟಿ ||
ನನೆದ ಸೊಜ್ಜಿಗೆಯ ಸಲೆ ಕುಟ್ಟಿ ಮತ್ತದಱ ಸರಿ |
ಕೆನೆಯನಿಕ್ಕಿನಿಸು ಬೆಣ್ಣೆಯನಿಕ್ಕಿದಾ ರೊಟ್ಟಿ |
ಯನು ಮುಚ್ಚುಳೊಳಗಿಕ್ಕಿ ಬೇಯಿಸಲು ತಾನುದುರುರೊಟ್ಟಿವೆಸರಂ ಪಡೆದುದು || ೧೮ ||

ಕುಟ್ಟಿ ಕಣಿಕವನು ಹಪ್ಪಳದಂತೆ ಲತೆಯಿಱೆದು |
ಬಟ್ಟವಾಲ್‌ ಕಾದ ಸಮಯದೊಳದಂ ತಂದಿಳಿಯ |
ಬಿಟ್ಟು ಬೇಯಿಸಿ ತೆಗೆದು ಮಡಿಸಿದುದು ಹಾಲಂಗರವಳಿಗೆಯೆನಿಸಿಕೊಂಬುದು ||
ಬಟ್ಟಗಳಸಿಗೆಗೆ ನೀರ್ವೊಯಿದು ಪಾವಡೆಯುಮಂ |
ಕಟ್ಟಿವೊಲೆಗೆತ್ತಿ ಲತೆಯಿಱೆದು ಹೊಸ ಹೋಳಿಗೆಯ |
ನಿಟ್ಟು ಬೇಯಿಸಲು ನೀರ್ವತ್ತಿಗೆಯ ಪೆಸರನಾಂತು ಸುಖತರಮಾಗಿರ್ಪುದು || ೧೯ ||

ತರಿಯಾದ ಸೊಜ್ಜಿಗೆಯ ಹಿಟ್ಟಿನೊಳು ಬೆಣ್ಣೆ ಸ |
ಕ್ಕರೆಯಿಕ್ಕಿ ಬಟ್ಟವಾಲೊಳಗಂಬಲಿಯ ತೆಱದಿ |
ಬೆರಸಿಯೊಲೆಯೊಳಗೆ ಗಾರಿಗೆಯ ಹದದೊಳು ತೊಳಸಿ ಬಡಸಂಡಿಗೆಯ ತೆಱದಿ ||
ಹರಿಯಣಕೆ ತುಪ್ಪಮಂ ತಡಹಿಯಂತವ ತಟ್ಟಿ |
ಪರಿಮಳಿಸಿ ಕಾಯ್ದ ತುಪ್ಪದೊಳಿಳಿಯಬಿಟ್ಟು ತೆಗೆ
ದಿರಿಸಲದು ಪಿಂಡಘೃತಪೂರವೆಂದೆಂಬ ಹೆಸರಾಂತು ಸೊಗಸಂಪಡೆದುದು || ೨೦ ||

ಮಂಡಗೆಗೆ ತುಪ್ಪ ಸಕ್ಕರೆ ಬಟ್ಟವಾಲಿಕ್ಕಿ |
ಕೊಂಡು ಪಿಂಡ ಮಾಡಿ ಹೊಸ ಮಡಕೆಯೊಳಗೆ ನೆ |
ಯ್ಯುಂಡದೊಡವಿಕ್ಕಿ ಅದನಿರಿಸಿ ಮುಚ್ಚಳನಿಟ್ಟು ಸೀಱುಮಣ್ಣಿಕ್ಕಿ ಬಳಿಕ ||
ಕೆಂಡಮಂ ಕೀಳ್ಮೇಲೊಳಿರಿಸಿ ಪುಟಮಂ ಮಾಡಿ |
ಕೊಂಡಿಳಿಪಿ ತೆಗೆದಾಱಿಸುತವೆ ಮುಚ್ಚುಳ ತೆಗೆದು |
ಖಂಡಘೃತಪೂರವೆಂದೆಂಬ ಹೆಸರಂ ಕೊಟ್ಟು ಭೋಗಿಜನಕೊಲಿದೀವುದು || ೨೧ ||

ಉತ್ತಮದ ಸೊಜ್ಜಿಗೆಯ ನನೆಹಿ ನೀರಂ ಹಿಂಡಿ |
ಮತ್ತದಕೆ ಬಟ್ಟವಾಲ್‌ ತಿಳಿದುಪ್ಪಮಂ ತಳಿದು |
ಮೆತ್ತನಪ್ಪಂತು ಮಿದಿದಿರಿಸಿಯದಱರ್ಧ ಹಾಲೊಳಗುಕ್ಕರಿಸಿದಕ್ಕಿಯ ||
ಒತ್ತಿ ಹಾಲಿಂದೆಱೆದು ಸವೆದ ಕಣಿಕದೊಳು ಬೆರ |
ಸುತ್ತ ಸಕ್ಕರೆಯ ಪಾಕದೊಳಿಕ್ಕಿ ಪರಿಮಳವ
ನೊತ್ತರಿಸಿ ತುಪ್ಪದೊಳು ಬೇಯಿಸಿದ ಹಾಲುಗಾರಿಗೆ ಪಿರಿದು ಸವಿದೋಱದೆ || ೨೨ ||

ಅಣ್ಣೆವಾಲೊಳು ಸೊಜ್ಜಿಗೆಯಂ ನನೆಹಿಕ್ಕಿ ಬಳಿಕ |
ಸಣ್ಣನಪ್ಪಂತೆ ಕಣಿಕವ ಮಾಡಿಯದಱ ಸರಿ
ಬೆಣ್ಣೆ ನಸುಗೆನೆಯಿಕ್ಕಿ ಗಾರಿಗೆಯ ಮಾಡಿ ಹೊಸತುಪ್ಪದೊಳು ಬೇಯಿಸಿದೊಡೆ ||
ಬೆಣ್ಣೆಗಾರಿಗೆಯೆಂಬ ಹೆಸರನುಱೆಪಡೆದುದಾ |
ನುಣ್ಣನೆಯ ಹಿಟ್ಟನಂಗಯ್ಯ ಸರಿದಟ್ಟದೊಳು |
ತಣ್ಣಿಱದು ಮಡಗಿಯೆಮ್ಮೆಯ ಬೆಣ್ಣೆಯಂ ಕಾಸಿ ಬೇಯಿಸೆ ಸಮುದ್ರಫೇನ || ೨೩ ||

ಬೆಳತಿಗಕ್ಕಿಯ ಸಣ್ಣ ಹಿಟ್ಟ ಸೋದಿಸಿ ಹುರಿದು |
ಕೊಳುತ ಬೆಲ್ಲದ ಪಾಕದೊಳು ಹಾಕಿ ಕಲಸಿಯದ |
ಱೊಳಗೆನಾಲ್ಕಱೊಳೊಂದು ಭಾಗೆ ಹಸಿಯಕ್ಕಿಹಿಟ್ಟಂ ಬೆರೆಸಿಯೊತ್ತಿ ಕುಟ್ಟಿ ||
ಬಳಿಕೊಮ್ಮೆ ಗುಡಪಾಕವಿಕ್ಕಿಯಿರುಳೊಳಗಿರಿಸಿ |
ಬಿಳಿಯೆಳ್ಳು ಸಣ್ಣಿಸಿದ ತೆಂಗಾಯಿ ತನಿವಾಲು |
ಗಳ ಬೆರಸಿಯುದಯದೊಳು ಗಱಗಳಕ ಮಾಡಿ ತುಪ್ಪದೊಳು ಗಾರಿಗೆಯಡುವುದು || ೨೪ ||

ಮತ್ತಮಾಯಿರುಳು ಕಲಸಿದ ಗಾರಿಗೆಯ ಹಿಟ್ಟಿ |
ಗುತ್ತಮದ ಕಿಱುಸೊಜ್ಜಿಗೆಯನು ಬರಬರನಟ್ಟು |
ಚಿತ್ತಣಿಸಿ ಕತ್ತರಿಸಿದಲ್ಲ ನೀರುಳ್ಳಿ ಸಹಿತಂ ಕಲಸಿ ಯಾಲಕ್ಕಿ ಸಿರಿಪಚ್ಚೆಯ ||
ಒತ್ತರಿಸಿಯದನು ತೆಳ್ಳನೆ ಮಾಡಿ ಕಡುಗಂಪು |
ವೆತ್ತ ತಿಳಿದುಪ್ಪದೊಳು ಉದುರುವಂದದಿ ಹಾಕಿ |
ಹೊತ್ತದಂದೊಳು ಬೇಯಿಸಿ ತೆಗೆಯೆ ಸೊಜ್ಜಿಗೆಯ ಹೂರಿಗೆಯೆನಿಸಿಕೊಂಬುದು || ೨೫ ||

ನಾರುವದನಾದ ಕಣಿಕವನು ನಿಂಬೆಯಹಣ್ಣ |
ತೋರದುಂಡೆಯ ಮಾಡಿ ಮೆಯ್ಯಿಕ್ಕುವನ್ನೆವರ |
ಸೀಱಱುವೆಯಂ ಕವಿಸಿ ಬೆಂದ ಕಡಲೆಯ ಬೇಳೆಯಂ ಬೆಲ್ಲಗೂಡಿಯರೆದು ||
ಹೂರಣವ ಮಾಡಿಯಾವುಂಡೆಯೆರಡರ ನಡುವೆ |
ಪೂರಯಿಸಿ ಹಱಯದಂತೆ ಗೇಣಗಲಂ ಮಾಡಿ |
ಮಾಱುಗವುಚಿದ ಹಂಚನೊಲೆಗೆತ್ತಿ ತುಪ್ಪಮಂ ತೊಡೆದು ಹೂರಿಗೆಯಡುವುದು || ೨೬ ||

ಅರೆದ ತೆಂಗಾಯ ಪಿಂಡದೊಳು ಚಿಲುಪಾಲಿನೊಳು |
ಹುರಿದೆಳ್ಳಿನೊಳು ನವದ್ರಾಕ್ಷೆಹಣ್ಣಿನೊಳು ಖ |
ರ್ಜುರದ ಹಣ್ಣಿನೊಳು ಹಲಸಿನ ಹಣ್ಣ ತೈಲದೊಳು ಸಲೆ ಬೆಂದ ಸೊಜ್ಜಿಗೆಯೊಳು ||
ಹಿರಿದು ಸಿಹಿವಡೆದ ಮಾವಿನಹಣ್ಣ ರಸಗಳೊಳು |
ಹೆಱೆದುಪ್ಪ ಸಕ್ಕರೆಯ ಬೆರಸಿದಾ ಹೂರಣವ |
ನಿರದಿಕ್ಕಿ ಹೂರಿಗೆಯ ಮಾಡಿಕೊಂಡವಱವಱ ಹೆಸರ ಹೂರಿಗೆಯೆಂಬುದು || ೨೭ ||

ನಸುಬಿಸಿಯ ಹೂರಿಗೆಯ ಕಣ್ಣವಟ್ಟಿಗೆದೆಗೆದು |
ಹಸನಾಗಿ ಬಿಚ್ಚಲದು ಬಿಚ್ಚುಹೂರಿಗೆಯಾಯ್ತು |
ಹೊಸತುಪ್ಪದಿಂದೆ ಕಲಸಿದ ಸಕ್ಕರೆಯನಿಕ್ಕಿಯಟ್ಟಹೂರಿಗೆಯ ಬಿಚ್ಚಿ ||
ಬಿಸಿಯೋಡಿನೊಳಗಿಕ್ಕೆ ಖಂಡಮಂಡಕವೆಂಬ |
ಹೆಸರಾಯ್ತು ತುಪ್ಪಸಕ್ಕರೆ ಮಂಡಗೆಯ ಕಲಸಿ |
ಯೆಸೆವ ಹೂರಣವಿಕ್ಕಿ ಚೆನ್ನಾಗಿ ಪಾಕಮಾಡಿದುದು ಮಂಡಗೆಹೂರಿಗೆ || ೨೮ ||

ಮೊದಲ ಹೂರಿಗೆಗೆ ಸಮೆದುಂಡೆಯೊಂದನೆ ತೆಗೆದು |
ಬಿದಿರನೇತ್ರದ ತೆಱದಿ ಗೇಣಗಲವಂ ಮಾಡಿ |
ಪದಪಿನಿಂ ಹಂಚಿನೊಳು ತುಪ್ಪವ ತಡಹಿ ಅಡಲು ಮಂಡಗೆಯೆನಿಸಿಕೊಂಡುದು ||
ಹದನನೊಂದಿನಿಸಿನಿಸು ಮೀಱೆ ಬೇಯಿಸಿ ತೆಗೆದ |
ಡದುವೆ ಉಷ್ಣಾವರ್ತಮಂಡಗೆಯೆನಿಸಿತು ಕಡು |
ಮೈದುವಪ್ಪ ಗಾಳಿಗಿದಿರಿಕ್ಕಿದುದು ವಾಯುಪುಟಮಂಡಗೆಯೆನಿಸಿಕೊಂಡುದು || ೨೯ ||

ಬಂದಿಸಿದ ಕಣಿಕದುಂಡೆಗಳನೊಂದೊಂದ ತೆಗ |
ದೊಂದಕ್ಕೆ ಬೆಂದ ಕಡಲೆಯ ಬೇಳೆಗಳನು ಮ |
ತ್ತೊಂದಕ್ಕೆ ಸೊಜ್ಜಿಗೆಯನೊಂದಕ್ಕೆ ತೆಂಗಾಯನೊಂದಕ್ಕೆ ಮಂಡಗೆಯನು ||
ಒಂದಕ್ಕೆ ಖರ್ಜೂರವೊಂದಕ್ಕೆ ದ್ರಾಕ್ಷೆಗಳ |
ನಂದಿಸಿದ ತುಪ್ಪ ಸಕ್ಕರೆಯ ಹೂರಣವಿಕ್ಕಿ |
ಒಂದು ಗೇಣಗಲವಂ ಮಾಡಿ ಹಂಚಿನೊಳಿಡಲು ಪೇಱಣೆಯಹೂರಿಗೆ ಕಣಾ || ೩೦ ||

ಕಳಿತ ಬಾಳೆಯಹಣ್ಣು ಖರ್ಜುರದ ತನಿವಣ್ಣು |
ಬಿಳಿಯ ಸಕ್ಕರೆ ಮಾವಿನಿನಿವಣ್ಣು ಪಲಸುವ |
ಣ್ತೊಳಪ ದೀಪದ್ರಾಕ್ಷೆಗಳ ಹಣ್ಣನೊಂದಾಗಿ ಕೂಡಿ ತುಪ್ಪದೊಳು ಕಲಸಿ ||
ಬಿಳಿಯ ಕಣಿಕದ ಬಟ್ಟಿನೊಂದಱೊಳು ಪೂರೈಸಿ |
ತಿಳಿದುಪ್ಪಮಂ ತೊಡೆದು ಹಂಚಿನೊಳಗಡೆ ಪಂಚ |
ಫಲಸುಧಾರಸದೆಣ್ಣೆಹೂರಿಗೆಯೆನಿಸಿಕೊಂಡು ಹಿರಿದೆನಿಸಿ ಸವಿವಡೆದುದು || ೩೧ ||

ಮತ್ತಮಾ ಕಣಿಕಮಂ ಗದುಗದಂದವ ಮಾಡಿ |
ಯೊತ್ತಿಯದಱೊಳಗೆ ಹಲಸವಿಯ ಹೂರಣಗಳನು |
ಒತ್ತರಿಸಿ ಹುದುಗಿ ತುಪ್ಪವನು ಬಾಳೆಲೆಯೊಳಗೆ ತೊಡೆದದಱ ಹದನನಱೆದು ||
ಹೊತ್ತದಂದದೊಳು ಪಾಕಂ ಮಾಡಿ ತೆಗೆದುಕೊಂ |
ಡುತ್ತಮದ ಸಿರಿಪಚ್ಚೆ ಮೊದಲಾದ ಕಂಪ ಪೊರೆ |
ಯೊತ್ತಿತೆಗೆದವು ಸುಧಾಪಿಂಡವೆಂದೆಂಬ ಹೆಸರಂ ಪಡೆದು ರುಚಿಯಾದವು || ೩೨ ||

ನೆಱೆ ಸಣ್ಣಗೋದುವೆಯ ಹಿಟ್ಟ ಸಿಹಿವಾಲೊಳಗೆ |
ನುಱುಗುವಂದದಿ ಕಲಸಿ ಹೆಬ್ಬೆಟ್ಟ ತೋರದೊಳು |
ಕೊಱೆದ ಕರಟಕೆ ತುಂಬಿವೊಡೆಯದೊಲು ತುಪ್ಪದೊಳಗಡಲು ಚಿಲುಮುರಿಯಾದುದು ||
ಎಱೆಯಪ್ಪದಂತೆ ಬೇಯಿಸಲು ಬಾಬರಮಾಯ್ತು |
ಬಱೆಯಪ್ಪದಂತೆ ಬೇಯಿಸಲು ಬಾಬರಮಾಯ್ತು |
ಬಱೆಮೊಸರು ಕೆನೆಯನದಱೊಳು ಕಲಸಿವುಂಡೆಯಂ |
ತೆಱೆಯೆ ಪಾವುಡಮಾಯ್ತು ದೋಸೆಯಂದದಿನಡಲು ತಾನೆ ಬಾಬರಮಾದುದು || ೩೩ ||

ಹುರಿದ ತೆಂಗಾಯ ನಸು ಬೆಂದ ಬೇಳೆಯ ಹೆಸರು |
ಹುರಿದು ಬೇಯಿಸಿದ ಸೊಜ್ಜಿಗೆಯಿವನು ಕೂಡಿ ಸ |
ಕ್ಕರೆಯಿಕ್ಕಿ ಕರ್ಪೂರವನು ತಳಿದು ಪಿಂಡಮಂ ಮಾಡಿಯೇ ಸಣ್ಣನಾಗಿ ||
ಅರೆದಕ್ಕಿಯೊಳಗದ್ದಿ ಹೊಚ್ಚಹೊಸ ತುಪ್ಪದೊಳು |
ಹಿರಿದು ಹಸಾಗಿ ಬೇಯಿಸಿ ತೆಗೆದು ತುಪ್ಪದೊಳು |
ಪುರಿವಿಳಂಗಾಯೆಂದು ಪೆಸರ್ವಡೆದು ನಾಲಗೆಯ ಕೊನೆಗೆ ಪೀಯೂಷವಾಯ್ತು || ೩೪ ||

ಕುಟ್ಟಿ ಕಣಿಕದಲಿ ಸರಿ ಬೆಣ್ಣೆ ಕೆನೆಯಿಕ್ಕಿ ಸದ |
ಗುಟ್ಟಿ ತುಪ್ಪದೊಳಡಲು ಕ್ಷೀರಾಬ್ಧಿಫೇನಮಾ |
ಘಟ್ಟಿ ಕಣಿಕಕ್ಕೆ ಪಾಲ್ಮೊಸರ ಕೆನೆ ಬೆಣ್ಣೆಯುಪ್ಪಿಕ್ಕಿವುರುಳಿಯನೆ ಮಾಡಿ ||
ಪಿಟ್ಟಿಗೆರಡುಂ ಬಟ್ಟಲುಮನಿಕ್ಕಿ ಕೆಂಡದೊಳು |
ಸುಟ್ಟು ತೆಗೆದಾಬಟ್ಟಲಂ ತುಪ್ಪ ಸಕ್ಕರೆಯ |
ನಿಟ್ಟಮೃತಫಲಸಾರಮೆಂದು ಹೆಸರಂ ಕರೆಯಲವು ರಾಜಯೋಗ್ಯವು ಕಣಾ || ೩೫ ||

ಬಿಸಿನೀರನೆಱೆದು ಕಿವಿಚಿದ ಪುಲ್ಲಸೊಜ್ಜಿಗೆಯ |
ರಸದೊಳಗೆ ಅರೆದಕ್ಕಿಯಂ ಸಮಂಗೂಡಿ ಸೋ |
ದಿಸಿಕೊಂಡು ಪಂಚಧಾರೆಯ ಸಕ್ಕರೆಯನಿಕ್ಕಿ ಪರಿಮಳವ ಪೊರೆಯಲೊತ್ತಿ ||
ಪೊಸಬೆಣ್ಣೆಯಂ ಬಾಳೆಲೆಯೊಳೊತ್ತಿ ಹದದಿ ಕರ |
ಗಿಸಿದ ತುಪ್ಪದೊಳಗೊಂದೊಂದು ಚೊಟ್ಟೆಯ ಬಿಡಲು |
ಮಿಸುಪ ಸುಪ್ಪಾಣಿವೆಸರಂ ತಾಳಿ ವಸುಧಾವರರ್ಗೆ ಪಾವನಮಾದುದು || ೩೬ ||

ಬಿಳಿಯ ಕಡಲೆಯಹಿಟ್ಟು ಸಣ್ಣ ಸೊಜ್ಜಿಗೆಯ ಹುಡಿ |
ಕಳವೆಯಕ್ಕಿಯ ಹಿಟ್ಟುಗಳನವಂ ಸರಿಗೂಡಿ |
ಕಳಿತ ಬಾಳೆಯಹಣ್ಣು ಕೆನೆಬೆಣ್ಣೆಯಂ ಕಿವುಚಿ ಬಿದಿರೊಳಗೆ ಬೆಣ್ಣೆದಡವಿ ||
ಬಳಿಕದಱ ಮೇಲದಂ ಮೆತ್ತಿ ಮೆಲ್ಲನೆ ತೆಗೆದು |
ಕೊಳವಿಯಂದದಿ ಮಾಡಿ ಅಲ್ಲಿ ಸಕ್ಕರೆಯಿಕ್ಕಿ |
ತಳಮೇಲಕಾ ಹಿಟ್ಟ ಮುಚ್ಚಿ ತುಪ್ಪದೊಳಡಲ್‌ ಮಧುನಾಳವೆಸರಾದುದು || ೩೭ ||

ಹರಿಯಾಣದ ಮೇಲೆ ಮಂಡಗೆಗಳನು ಹರಹಿ ಸ |
ಕ್ಕರೆ ಬಟ್ಟವಾಲುಮಂ ತೊಡೆದವಂ ಸುರಳಿಯಿ |
ಬ್ಬೆರಳುದ್ದದೊಳಗೆ ಕತ್ತರಿಸಲದುತಾನ ಮೃತಘುಟಿಕೆನಾಮವ ಪಡೆದುದು ||
ಧರಿಸಿತೀತೆಱದಿ ಪಲಸಿಮ್ಮಾವು ದ್ರಾಕ್ಷೆಕ |
ರ್ಜುರವಣ್ಣ ರಸಗಳಂ ಬೇಱೆ ಬೇಱೆಕ್ಕಿಯಿವ |
ಸುರುಳಿ ಕುಯಿದಿಕ್ಕಲವು ತಾನದಱ ಹೆಸರ ಮಂಡಗೆಯುರುಳಿ ಪೆಸರಾದುದು || ೩೮ ||

ಹಿರಿದು ಸಿಲುವಾಗಿ ಕಣಿಕವನೊತ್ತಿಕೊಂಡೆರಡು |
ಬೆರಳಗಲದಲ್ಲಿ ಹಲ್ಲೆಯ ಮಾಡಿ ಮತ್ತದಱ |
ಸರಿವಳಿಯ ಹೊವಿನೆಸಳಂದದೊಳು ಸೀಳಿ ಮತ್ತಷ್ಟ ಕಿಱಿದಾಗಿ ಹೊಸೆದು ||
ಪರಿಮಳಿಸಿ ಕಾಯ್ವ ತುಪ್ಪದೊಳಟ್ಟು ತೆಗೆದದಕೆ |
ಹೆಱೆದುಪ್ಪ ಸಕ್ಕರೆಯನವಱ ಸರಿಯೊಳು ತುಂಬಿ |
ಯರಲಮಂಜರಿಯೆಂಬ ಹೆಸರುಮಂ ಕೊಟ್ಟು ಭೋಗಿಗಳೂಟಕೊಲಿದೀವುದು || ೩೯ ||

ಒಂದು ಪಡಿಯುದಕದೊಳಗೊಂದು ಪಡಿ ಸಕ್ಕರೆಯ |
ನೊಂದಿಸಿದ ಬಳಿಕ ಸೋದಿಸಿ ಒಲೆಯೊಳೆತ್ತಿಕೊಂ |
ಡೊಂದು ಕುದಿ ಬಂದಾಗ ಒಮ್ಮಾನ ಹಾಲ ಹುಯಿದನು ಸಟ್ಟುಗದಿ ತೊಳಸಿ ||
ಮಂದಮಂದನೆ ಫಟ್ಟಿಯಾಗುತಿಹ ಸಮಯದೊಳ |
ಗೊಂದಿನಿಸ ತೆಗೆತೆಗೆದು ತಿಳಿಯಾಗುವ ಹದಂ |
ಬಂದಾಗಲಿಳುಹಿ ಕಣಿಕದ ಕಲ್ಲಮೇಲದಂ ತೆಗೆದು ಬಿಸಿಯಾಱಿಸುವುದು || ೪೦ ||